You are currently viewing ಭಾರತೀಯರ ಬದುಕನ್ನು ಕಟ್ಟಿಕೊಟ್ಟ ಬಾಳೆ

ಭಾರತೀಯರ ಬದುಕನ್ನು ಕಟ್ಟಿಕೊಟ್ಟ ಬಾಳೆ

“ಬಡವನಿಗೆ ಬಾಳೆ, ಬಲ್ಲಿದನಿಗೆ ಕಬ್ಬು” ಎನ್ನುವ ಗಾದೆಯ ಮಾತಿದೆ. ಬಾಳೆಯು ಬಡವರ ಬೆಳೆಯೇ ಆಗಿತ್ತು. ಈಗಲೂ ಹೆಚ್ಚೂ ಕಡಿಮೆ ಹಾಗೆಯೇ! ಭಾರತದಲ್ಲಿ ಜಗತ್ತಿನ ಪ್ರತಿಶತ 20ರಷ್ಟು ಉತ್ಪಾದನೆಯನ್ನು ಮಾಡಿದರೂ ಹೆಚ್ಚೂ ಕಡಿಮೆ ಎಲ್ಲವೂ ಇಲ್ಲಿಯೇ ಬಳಸಲಾಗುತ್ತಿದೆ. ನಾವಂತೂ ಬಾಳೆಯನ್ನು ಬೆಳೆಯುತ್ತಿರುವುದೇ ಇಲ್ಲಿಯೇ ತಿನ್ನಲು! ಹೊರದೇಶಗಳಿಗೆ ಮಾರಲು ಅಲ್ಲ! ಆದರೆ ಅಮೆರಿಕಾ ಹಾಗಲ್ಲ! ಅಲ್ಲಿ ಬಾಳೆಯನ್ನು ಬೆಳೆಯದೇ ಇದ್ದರೂ ಅತಿಹೆಚ್ಚು ತಿನ್ನುತ್ತಿರುವ ಹಣ್ಣಾಗಿದೆ. ಎಷ್ಟೆಂದರೆ, ಅವರು ತಿನ್ನುವ ಕಿತ್ತಳೆ ಮತ್ತು ಸೇಬನ್ನು ಎರಡೂ ಸೇರಿದ ಒಟ್ಟು ತೂಕಕ್ಕಿಂತಲೂ ಹೆಚ್ಚು ಬಾಳೆಯನ್ನು ತಿನ್ನುತ್ತಾರೆ. ಜೊತೆಗೆ ಅಷ್ಟೂ ಬಾಳೆಯನ್ನು ಇತರೇ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಹಿಂದಿನ ವಾರದ ಸಸ್ಯಯಾನದಲ್ಲಿ ಓದಿದ್ದು ನೆನಪಿರಬಹುದಲ್ಲ – “ಬನಾನಾ ರಿಪಬ್ಲಿಕ್‌”. ಇತರೆ ದೇಶದ ನೆಲವನ್ನು ಬಾಳೆಯ ಬೆಳೆಗೆ ಬಲಿಯಾಗಿಸಿ ತಾವು ಹಣ್ಣಿನ ಸ್ವಾದವನ್ನು ಆನಂದಿಸುತ್ತಾರೆ. ಅಲ್ಲಿಯೇ ನೆಲಸಿರುವ ನನ್ನ ವಿಜ್ಞಾನಿ ಮಿತ್ರರು ಬಾಳೆ ಹಣ್ಣನ್ನು ತಿನ್ನಲು ನಿಜಕ್ಕೂ ಅಮೆರಿಕಾದಲ್ಲಿ ಬೇಸರವಾಗುತ್ತದೆ ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಅದು ಅಲ್ಲಿ ಶೋಷಣೆಯ ರೂಪಕವಾಗಿದೆ. ಆದರೆ ಭಾರತೀಯರಿಗೆ ಬಾಳೆಯು “ಬದುಕಿನ ರೂಪಕ”ವಾಗಿದೆ. ನನ್ನ ಅಜ್ಜಿ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ. ಒಂದು ಬಾಳೆಹಣ್ಣು ತಿಂದು ನೀರು ಕುಡಿದರೆ ಒಂದು ಹೊತ್ತನ್ನು ಕಳೆಯಬಹುದು ಎನ್ನುತ್ತಿದ್ದರು. ಅದು ದಶಕಗಳ ಹಿಂದಿನ ಮಾತು ಅನ್ನಿಸಿದ್ದರೆ, ಕಳೆದ ಕೆಲವೇ ತಿಂಗಳಲ್ಲಿ ದೆಹಲಿಗೆ ಹೋದಾಗ, ಅಲ್ಲಿನ ಐಐಟಿಯ ಪ್ರೊಫೆಸರ್‌ ಬೆಳಗ್ಗೆ ಕೈಯಲ್ಲಿ ಬಾಳೆಯ ಹಣ್ಣನ್ನು ಹಿಡಿದು, ನನ್ನ ಜೊತೆ ಬೆಳಗಿನ ಉಪಾಹಾರ ಎಂದು ಹೇಳಿದ್ದೂ ಅಜ್ಜಿಯ ಮಾತನ್ನು ಬೆಂಬಲಿಸಿತ್ತು. ನಿಜ ಅಲ್ಲವೇ? ಒಂದು ಹಣ್ಣು ತಿಂದು ಸುಮ್ಮನಿರುವ ಹಾಗಿರುವಂತೆ, ಊಟ ಮಾಡಿಯೂ ಒಂದು ಹಣ್ಣನ್ನು ತಿನ್ನಬಹುದು! ಊಟ ಆಯಿತು ಬೇಡ ಎಂದು ಗೆಳೆಯರ ಮನೆಗೆ ಹೋದಾಗ ನೀವೇನಾದರೂ ಹೇಳಿದರೆ ಒಂದು ಬಾಳೆಯ ಹಣ್ಣು ಆದರೂ ತಿನ್ನಬಹುದು! ಎಂದಿರುವ ಸಾಕಷ್ಟು ಅನುಭವಗಳು ನಮ್ಮ-ನಿಮ್ಮೆಲ್ಲರಿಗೂ ಇರಲು ಸಾಧ್ಯವಿದೆ. ಹೀಗೆ ಬಾಳೆಯು ಅತ್ಯಂತ ಸರಳವಾದದ್ದು. ಹಾಗೇನೇ ಸುಲಭವಾಗಿ ಕೈಗೆಟಕುವ ಬೆಲೆಯ ಹಣ್ಣು ಕೂಡ. ಜೊತೆಗೆ ಸುಲಿದು ತಿನ್ನಲೂ ಅಷ್ಟೆ ಸುಲಭ. ನಿಜಕ್ಕೂ ಮೇಲಿನ ಸಿಪ್ಪೆಯು ಎಲ್ಲೆಂದರಲ್ಲಿ ತೆಗೆದು ತಿನ್ನಲೆಂದೇ ಗಿಡವು ಪ್ಯಾಕ್‌ ಮಾಡಿಕೊಟ್ಟಹಾಗಿರುತ್ತದೆ.

ಕಳೆದ ಮೂರ್ನಾಲ್ಕು ದಶಕಗಳವರೆವಿಗೂ ಬಾಳೆಯು ಹೆಚ್ಚು ನೆಲವನ್ನು ಆವರಿಸಿಕೊಂಡಿರಲಿಲ್ಲ. ಎಷ್ಟೋ ರೈತರು, ಮತ್ತೆ ಕೆಲವರು ಮನೆಗಳ ಹಿತ್ತಿಲಲ್ಲಿ ಒಂದೆರಡು ಗಿಡಗಳನ್ನು ಬೆಳಸಿರುತ್ತಿದ್ದುದೇ ಹೆಚ್ಚು! ಈಗಲೂ ಇಂತಹ ಹಿತ್ತಿಲ ಬಾಳೆಯ ಸಾಹಚರ್ಯ ಅನೇಕ ಕಡೆಗಳಲ್ಲಿ ಇರುವುದನ್ನು ಕಾಣಬಹುದು. ಅದರಲ್ಲೂ ಬಾಳೆಯ ಹಣ್ಣನ್ನು ತೆಂಗಿನಕಾಯಿಯ ಜೊತೆಗಾರನನ್ನಾಗಿಸಿ ದೇವರ ಪೂಜೆಗೆ ನೈವೇದ್ಯಕ್ಕೆ ಖಾಯಮ್ಮಾಗಿಸಿರುವುದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆ. ಇತರೇ ಯಾವುದೇ ಹಣ್ಣಿಗೂ ಆ ಸ್ಥಾನವಿಲ್ಲ ಅದು ಸೇಬು ಇರಲಿ, ಕಿತ್ತಳೆ-ಮೂಸಂಬಿಯಾಗಲಿ ಕಡೆಗೂ ದ್ರಾಕ್ಷಿಗೂ ಇಲ್ಲದ ಹೆಚ್ಚುಗಾರಿಕೆಯಿಂದ ದೈವ ಸನ್ನಿದಾನಕ್ಕೆ ಸೇರಿಸಿ ಕೊಂಡಾಡಿದ್ದೇವೆ. ಅದರಲ್ಲೂ ಇತ್ತೀಚೆಗೆ “ದೇವ ಬಾಳೆ” ಎಂದೇ ವಿಶೇಷವಾದ ಹಣ್ಣೂ ಹತ್ತಾರು ದೇವಾಲಯಗಳ ಆಸುಪಾಸಿನಲ್ಲಿ ಮಾರಾಟದಲ್ಲಿ ಇರುತ್ತದೆ. ಅದಕ್ಕೊಂದು ವಿಶೇಷವಾದ ಬಂಗಾರದ ಮೆರುಗು ಇದ್ದು, ಪರಿಮಳವೂ ಇರುತ್ತದೆ. ಪಚ್ಚ ಬಾಳೆ ಅಥವಾ ಕ್ಯಾವೆಂಡಿಶ್‌ ಅನೇಕರು ದೇವರ ನೈವೇದ್ಯಕ್ಕೆ ಒಪ್ಪಲಾರದಂತೆ ಅದನ್ನು ಪರಂಗಿಯಾಗಿಸಿದ್ದಾರೆ. ಕಳೆದ ವಾರ ಬಾಳೆಯನ್ನು ಬರೆದಾಗಲೇ, ಅನೇಕ ಗೆಳೆಯ-ಗೆಳತಿಯರು ಬಾಳೆಯ ವೈವಿಧ್ಯಮಯ ಖಾದ್ಯಗಳನ್ನು ನೆನಪಿಸಿ ಪೋನು ಮೆಸೇಜುಗಳಲ್ಲಿ ಹಂಚಿಕೊಂಡಿದ್ದರು. ಎಲ್ಲರ ಆಸೆ-ಅನಿಸಿಕೆಗಳಲ್ಲೂ ಭಿನ್ನ ಭಿನ್ನವಾದ ರುಚಿಯ ರಹಸ್ಯದ ಕುರಿತೋ ಇಲ್ಲವೆ ಅದರ ಅಗತ್ಯದ ತಳಿಗಳ ಕುರಿತೋ ಸಮಜಾಯಿಷಿಗಳನ್ನು ವಿನಿಮಯಗೊಳಿಸಿಕೊಂಡದ್ದು ಹೌದು. ಬಾಳೆಯ “ವರ್ಜಿನ್‌” ಹುಟ್ಟಿನ ಕಥನ ಓದಿ ಅದಕ್ಕೆ ಅದರ ಶ್ರೇಷ್ಠತೆ ಎಂದೂ ತೀರ್ಪುಗಳನ್ನೂ ಕೊಟ್ಟಿದ್ದರು. ಪಾರ್ಥೆನೋಕಾರ್ಪಿ ಜನನವು ತಾಯಿಯಿಂದ ಮಾತ್ರವೇ ಮುಂದುವರೆಯುವ ಬಗ್ಗೆ ಕೆಲವು ಗೆಳತಿಯರು ಹೆಮ್ಮೆಯಿಂದ ಬೀಗಿದ್ದೂ ಇದೆ. ಒಬ್ಬಾಕೆಯಂತೂ ಬಾಳೆಯ ಹೂಗೊಂಚಲಿನ ಮುಂದಿನ ಗಂಡು ಹೂವನ್ನು ಕೊಯ್ದು ಪಲ್ಯ ಮಾಡುವ ತಯಾರಿಯ ಖುಷಿಯನ್ನೂ ಸ್ವಲ್ಪ ಜೋರಾಗಿಯೇ ಹೇಳಿದ್ದಳು. ಹೀಗೆ ಬಾಳೆಯು ಬದುಕನ್ನು ಆವರಿಸಿದ್ದರ ಹಿಂದೆ ನೂರಾರು ಸಂಗತಿಗಳಿವೆ. ಅದಕ್ಕೆ ತಕ್ಕಂತೆ ಹೊಂದಿಕೊಂಡ ಒಂದಲ್ಲ, ಎರಡಲ್ಲ, ನೂರಲ್ಲ! ಹೆಚ್ಚೂ ಕಡಿಮೆ ಸಾವಿರ ಬಾಳೆಯ ತಳಿಗಳು ಜಗತ್ತನ್ನು ಆವರಿಸಿಕೊಂಡಿವೆ. ಅವುಗಳಲ್ಲಿ ಅರ್ಧದಷ್ಟಾದರೂ ಹೆಚ್ಚೂ ಕಡಿಮೆ ಇನ್ನೂ ಜಗತ್ತಿನ ತೋಟಗಳನ್ನು ಅಲಂಕರಿಸುವ ಬಗ್ಗೆ ಬಾಳೆಯ ವೈವಿಧ್ಯತೆಯ ಅಧ್ಯಯನಕಾರರು ಸಂತೃಪ್ತಿಯನ್ನು ಪಟ್ಟಿದ್ದಾರೆ.

ಭಾರತೀಯರ ಬದುಕನ್ನು ಅರಳಿಸಿರುವಲ್ಲಿ ಬಾಳೆಯು ತನ್ನ ಯಾವ ಭಾಗವನ್ನೂ ಉಳಿಸಿಕೊಂಡಿಲ್ಲ. ಬಾಳೆಯ ಗಿಡದ ಗೊನೆಯ ಹಿಡಿ ಅಥವಾ ತೊಟ್ಟು (ಗಿಡದ ನಿಜವಾದ ಕಾಂಡ)ವನ್ನು ಹೊರತು ಪಡಿಸಿ ಇಡೀ ಗಿಡವೆಲ್ಲವೂ ನಮ್ಮ ಬದುಕನ್ನು ಹಿಗ್ಗಿಸುವಲ್ಲಿ ನೆರವಾಗಿದೆ. ಬಾಳೆಯ ಎಲೆಯ ಊಟವು ಇಂದಿಗೂ ವಿಶೇಷತೆಯನ್ನು ಉಳಿಸಿಕೊಂಡಿದೆ. ಈಗಿಗ ಹೊಸ ಹೋಟೆಲ್ಲುಗಳು ಬಾಳೆ ಎಲೆಯ ಊಟದ ಖ್ಯಾತಿಯನ್ನು ಪಡೆಯುತ್ತಿವೆ. ಮದುವೆ ಮತ್ತಿತರ ವಿಶೇಷ ಸಮಾರಂಭಗಳಲ್ಲಿ ಬಾಳೆಯ ಎಲೆಯ ಊಟಕ್ಕೆ ಎಲ್ಲಿಲ್ಲದ ಮಹತ್ವ. ಕಾಯಿಯನ್ನು ಹೂವನ್ನೂ ವಿವಿಧ ಖಾದ್ಯಗಳಲ್ಲಿ ಬಳಸುವ ಸಂಗತಿಯೇನೂ ಹೊಸದಲ್ಲ. ಬಾಳೆಯಕಾಯಿಯ ಬಜ್ಜಿಯಂತೂ ಹೆಚ್ಚು ಹೆಸರು ಮಾಡಿ ನಾಲಿಗೆಯ ರುಚಿಯಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಹಣ್ಣು ಸಿಹಿಖಾದ್ಯಗಳಲ್ಲಿಯಾದರೆ ಮತ್ತು ಹುಸಿ ಕಾಂಡ, ಗಂಡು ಹೂವು, ಮೊಗ್ಗು, ಖಾರದ ಖಾದ್ಯಗಳಲ್ಲಿ ಬಳಕೆಯಾಗುತ್ತವೆ. ಬಾಳೆಯ ನಾರನ್ನು ವಿಶೇಷವಾಗಿ ಹೂವನ್ನು ಕಟ್ಟುವುದಕ್ಕೂ ಜೊತೆಗೆ ಅದರಿಂದ ಕಾಗದದ ತಯಾರಿಯಲ್ಲೂ ಬಳಕೆಯಾಗುತ್ತದೆ. ಹೀಗೆ ಇಡೀ ಗಿಡದ ಎಲ್ಲಾ ಭಾಗಗಳೂ ನಮ್ಮ ಬದುಕಿಗೆ ಬಗೆ ಬಗೆಯ ಉಪಯೋಗಗಳನ್ನು ಕೊಟ್ಟಿವೆ.

ನಮ್ಮ ದೇಶದಲ್ಲಿ ದೇವಸ್ಥಾನದ ಬಾಳೆಯಿಂದ ಚಿಪ್ಸ್‌ ಮಾಡುವ ಬಗೆಯವರೆಗೂ ಹತ್ತಾರು ತಳಿಗಳು ಹೆಚ್ಚೂ ಕಡಿಮೆ ಎಲ್ಲರಿಗೂ ತಿಳಿದಿದೆ. ನಂಜನಗೂಡಿನ ರಸಬಾಳೆಯು ಕಳೆದುಹೋಗುತ್ತಿರುವ ಮಧ್ಯೆಯೂ ಅಳಿದುಳಿದು ತನ್ನ ವಿಶೇಷತೆಯನ್ನು ಹೆಮ್ಮೆಯಿಂದ ಪ್ರತಿಷ್ಠಾಪಿಸಿದೆ. ಕೆಲವು ದಶಕಗಳ ಹಿಂದೆ ಅದಕ್ಕಿದ್ದ ತೆಳುವಾದ ಸಿಪ್ಪೆಯಾಗಲಿ, ಸ್ವಲ್ಪವೇ ಹುಳಿಯೊಳಗಿನ ಸಿಹಿಯಾಗಲಿ ಹೆಚ್ಚೂ ಕಡಿಮೆಯಾಗಿಯೂ ಇನ್ನೂ ರುಚಿಯಲ್ಲಿ ಆಹ್ಲಾದಕ ಸಂಗತಿಯನ್ನು ತುಂಬಿಕೊಂಡಿದೆ. ಇದಕ್ಕೆ ಭೌಗೋಳಿಕ ಗುರುತು ಪಟ್ಟಿಯಲ್ಲೂ ಸ್ಥಾನ ಸಿಕ್ಕಿದೆ. ಜೊತೆಗೆ ಮೈಸೂರು-ಚಾಮರಾಜನಗರ ಜಿಲ್ಲೆಯ ಬಾಳೆಯ ಉತ್ಪನ್ನಗಳಿಗೂ ಟ್ರೇಡ್‌ ಮಾರ್ಕ್‌ ಗುರುತೂ ಸಿಕ್ಕಿದೆ. ಇದೇ ರೀತಿಯಲ್ಲಿ ಭೌಗೋಳಿಕ ಕುರುಹಿನ ಗುರುತು ಪಡೆದ ಮತ್ತೊಂದು ಬಾಳೆಯ ತಳಿ ನಮ್ಮ ರಾಜ್ಯದ ಗುಲ್ಬರ್ಗಾ ಜಿಲ್ಲೆಯ ಕಂಪಲಾಪುರದ್ದು. ಕಂಪಲಾಪುರದ ಕೆಂಪು ಬಾಳೆಯೂ ತನ್ನ ಹೊರ ಮೈ ಬಣ್ಣ, ಜೊತೆಗೆ ಒಳ ಭಾಗದ ಕೆನೆಯ ಬಣ್ಣದ ಹಣ್ಣಿನ ಜೊತೆಗೆ ವಿಶೇಷ ರುಚಿಯಿಂದ ಖ್ಯಾತವಾದದ್ದು. ಏಲಕ್ಕಿ ಬಾಳೆಯಂತೂ ಅದರ ಹಣ್ಣಾದರೂ ಕೆಡದಂತಿರುವ ಗುಣದಿಂದ, ಜೊತೆಗೆ ವಿಶಿಷ್ಟವಾದ ಸ್ವಾದದಿಂದ ಪರಿಚಯ. ಇದೇ ಬಗೆಯ ಪುಟ್ಟ ಬಾಳೆ, ಕರಿಬಾಳೆ ಮುಂತಾದವು ಮಲೆನಾಡಿನಲ್ಲಿ ಜನಪ್ರಿಯ.

ಕೇರಳಿಗರಿಗೆ ನೇಂದ್ರನ್‌ ಬಾಳೆಯ ರುಚಿಯು ಹಿಡಿಸಿದಂತೆ ಬೇರಾವುದರಲ್ಲಿಯೂ ಹಿತವಿಲ್ಲ. ನೇಂದ್ರನ್‌ ಯೂರೋಪಿಗೂ ಪರಿಚಯಗೊಂಡು ಜನಪ್ರಿಯವಾಗಿದೆ. ಅದರ ಸಿಹಿಯಾದ ಸ್ವಾದ, ಜೊತೆಗೆ ಅದರ ಚಿಪ್ಸ್‌ ಮಾಡಲು ಇಷ್ಟ ಪಡುವ ತಳಿಯಾಗಿದೆ. ಇದಲ್ಲದೆ ಕೇರಳದಲ್ಲಿ ಅತ್ಯಂತ ಉದ್ದವಾದ ಹಾಗೂ ದೊಡ್ಡದಾದ ಬಾಳೆಯ ಹಣ್ಣುಗಳ ತಳಿಗಳೂ ಇವೆ. ಹಲವನ್ನು ಬೇಯಿಸಿ ತಿನ್ನುವ ಬಗೆಗಳಿಂದಲೂ ಜನಪ್ರಿಯ. ಮಲೆಯಾಳಿಗಳಿಗೆ ಬಾಳೆಯು ಸಹಾ ಹಲಸಿನಂತೆಯೆ ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದ ಹಣ್ಣು ಮತ್ತು ಗಿಡ. ಅವರ ಮದುವೆಗಳ ಮತ್ತು ದೇವಾಲಯಗಳ ತೋರಣಗಳಲ್ಲಿ ಬಾಳೆಯ ಅಲಂಕಾರ ಇದ್ದೇ ಇರುತ್ತದೆ. ಮಲೆಯಾಳಿ ಚಲನಚಿತ್ರಗೀತೆಯೊಂದು ಬಾಳೆಯ ಗೀತೆಯಾಗಿದ್ದು ಅದು 1974ರಲ್ಲಿ ಬಿಡುಗಡೆಯಾದ “ನೆಲ್ಲು” ಎಂಬ ಚಿತ್ರದ್ದು. ಈ ಹಾಡಿನ ವಿಶೇಷತೆ ಎಂದರೆ ನಮ್ಮ ದೇಶದ ಖ್ಯಾತ ಹಿನ್ನೆಲೆಗಾಯಕಿ ಲತಾ ಮಂಗೇಶ್ಕರ್ ಹಾಡಿರುವ ಏಕೈಕ ಮಲೆಯಾಳಿ ಚಿತ್ರಗೀತೆ. ಕದಳಿ, ಕಣ್‌ಕದಳಿ… ಎಂದು ಆರಂಭವಾಗುವ ಬಾಳೆಯ ಕುರಿತಾದ ಈ ಹಾಡನ್ನು ನೋಡಲು ಮುಂದಿನ ಲಿಂಕ್‌ ಬಳಸಬಹುದು https://www.youtube.com/watch?v=Hh_Ne01I_UA

ತಮಿಳುನಾಡಿಗರಿಗೂ ಬಾಳೆಗೂ ವಿಶೇಷವಾದ ನಂಟು. ಇಡೀ ದೇಶದ ಸರಿ ಸುಮಾರು ಮೂರನೆಯ ಒಂದರಷ್ಟು ಕೇವಲ ತಮಿಳುನಾಡಿನಿಂದ ಉತ್ಪಾದನೆಯಾಗುತ್ತಿದೆ. ಪ್ರತಿ ವರ್ಷ 9 ದಶಲಕ್ಷ ಟನ್ನುಗಳಷ್ಟು ಬಾಳೆ ತಮಿಳುನಾಡಿನಿಂದಲೇ ಬರುತ್ತಿದೆ. ಅಲ್ಲಿ ಏಲಕ್ಕಿ, ಪಚ್ಚ ಬಾಳೆ, ಕುರುಪ್ಪವಲ್ಲಿ, ನೇಂದ್ರನ್‌ ತಳಿಗಳು ಜನಪ್ರಿಯವಾಗಿವೆ. ತಮಿಳುನಾಡಿನ ಬಾಳೆ ಬೆಳೆಗಾರರು ಅತ್ಯಂತ ಅಚ್ಚುಕಟ್ಟಾದ ಸಹಕಾರಿ ಸಂಘಗಳನ್ನು ಮಾಡಿಕೊಂಡು ಬಾಳೆಯ ಅತ್ಯುತ್ತಮ ಸಪ್ಲೈ ಚೈನ್‌ ನಿರ್ವಹಣೆಯ ಹೊಂದಾಣಿಕೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇವುಗಳಲ್ಲದೆ ಬಾಳೆಯ ತಳಿಗಳಲ್ಲಿ ಅತ್ಯಂತ ಜನಪ್ರಿಯವಾದದ್ದೆಂದರೆ ಗ್ರಾಂಡ್‌ ನೈನ್‌ ಅಥವಾ ಜಿ-ನೈನ್‌. ಇದು ಪಚ್ಚ ಬಾಳೆಯ ತಳಿ. ಹೆಚ್ಚು ಇಳುವರಿ ಕೊಡುವ ತಳಿ. ಇದಲ್ಲದೆ “ಐಸ್‌ ಕ್ರೀಮ್‌ ಬಾಳೆ” ಎನ್ನುವ ತಳಿಯೊಂದು ತಂಪಾದ ನೀಲವರ್ಣದ ಸಿಪ್ಪೆಯನ್ನು ಹೊಂದಿರುತ್ತದೆ. ಇದು ನಮ್ಮ ಹೊರ ದೇಶಗಳಲ್ಲಿ ಅತ್ಯಂತ ಜನಪ್ರಿಯ. ಇದರಲ್ಲಿನ ತುಸು “ವೆನಿಲಾ” ಪರಿಮಳದ ರುಚಿ ಜೊತೆಗೆ ಸಿಹಿ ಎರಡೂ ಇದಕ್ಕೆ ಹೆಸರು ತಂದುಕೊಟ್ಟಿವೆ. ಈ ಬಾಳೆಯು ನಿಜಕ್ಕೂ ರೊಬಸ್ಟ್‌, 15 ಅಡಿ ಎತ್ತರಕ್ಕೆ ಬೆಳೆದರೂ ಗಿಡವು ಗಾಳಿಯ ದಾಳಿಗೆ ತುತ್ತಾಗದು. ಹೆಚ್ಚು ಶೀತವನ್ನೂ ತಡೆದುಕೊಳ್ಳುವ ಗುಣವನ್ನು ಹೊಂದಿ ಹೆಸರಿಗೆ ತಕ್ಕಂತೆ ಐಸ್‌ಕ್ರೀಮ್‌ ಬಾಳೆಯಾಗಿದೆ.

ಹೀಗೆ ಬಗೆ ಬಗೆಯ ನೂರಾರು ಬಾಳೆಯ ತಳಿಗಳು ಜಾಗತಿಕವಾಗಿ ಹಬ್ಬಿವೆ. ಪ್ರಮುಖವಾಗಿ ಉಷ್ಣವಲಯದ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು ವರ್ಷವಿಡೀ ಮಕ್ಕಳಿಂದ – ಮುದುಕರವರೆಗೂ ಪ್ರೀತಿಯನ್ನು ಸಂಪಾದಿಸಿವೆ. ಜಗತ್ತಿನ ಒಟ್ಟು ಉತ್ಪಾದನೆ 148 ದಶಲಕ್ಷ ಟನ್‌. ಇಂಡಿಯಾದ ಉತ್ಪಾದನೆಯು 30 ದಶಲಕ್ಷ ಟನ್‌ ಇದ್ದು, ಚೀನಾ ದೇಶವು ಎರಡನೆಯ ಸ್ಥಾನದಲ್ಲಿದ್ದು ನಮಗಿಂತಾ ಅರ್ಧದಷ್ಟನ್ನು ಉತ್ಪಾದಿಸುತ್ತದೆ. ಇಂಡಿಯಾವು ರಫ್ತಿನಲ್ಲಿ ಮುಂದಿಲ್ಲ. ಹೆಚ್ಚು ಹಣ್ಣನ್ನು ಸ್ಥಳೀಯವಾಗಿಯೇ ಬಳಸುವ ದೇಶ. ಫಿಲಿಪೈನ್ಸ್‌ ಮತ್ತು ಈಕ್ವೆಡಾರ್‌ ಗಳು ಮಾತ್ರ ರಫ್ತು ಮಾಡುವಲ್ಲಿ ಮುಂದಿರುವ ದೇಶಗಳಾಗಿವೆ. ಮಧ್ಯೆ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾ ದೇಶಗಳು ಸಹಾ ಬಾಳೆಯ ರಫ್ತಿನಲ್ಲಿ ಆಸಕ್ತವಾಗಿವೆ.

ಬಾಳೆಯ ಪ್ರಾಮುಖ್ಯತೆ ಮತ್ತು ಜನಪ್ರಿಯತೆಯನ್ನು ಅದರ ಪೋಷಕಾಂಶಗಳಿಂದಲೂ ಗುರುತಿಸಬಹುದು. ಪ್ರತೀ ನೂರು ಗ್ರಾಂ ಹಣ್ಣು 80ರಿಂದ 90 ಕ್ಯಾಲೋರಿ ಶಕ್ತಿಯನ್ನು ಕೊಡುತ್ತದೆ. ಇದರ ಜೊತೆಗಿರುವ ಪ್ರತಿಶತ 1ರಷ್ಟು ಪ್ರೊಟೀನ್‌ ಮತ್ತು ಗಣನೀಯ ಪ್ರಮಾಣದ ವಿಟಮಿನ್‌ ಬಿ-6 ನಿಂದ ಇದು ಬಹಳ ಮುಖ್ಯವಾಗಿದೆ. ಅದರಲ್ಲೂ ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂಅನ್ನು ಒದಗಿಸುವ ಪ್ರಮುಖವಾದ ಹಣ್ಣು ಇದಾಗಿದೆ. ಎಲ್ಲಾ ಪೊಟ್ಯಾಸಿಯಂ ಒಳಗೊಂಡ ಪದಾರ್ಥಗಳಂತೆ ಬಾಳೆಯಲ್ಲೂ ಪೊಟ್ಯಾಸಿಯಂ-40 ಎನ್ನುವ ವಿಕಿರಣಕಾರಕ ಮೂಲವಸ್ತು ಇರುವುದು. ವಿಕಿರಣ ರಹಿತವಾದ ಪೊಟ್ಯಾಸಿಯಂ-39ರ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಇದ್ದೇ ಇರುವ ಪೊಟ್ಯಾಸಿಯಂ-40 ಬಾಳೆಯಲ್ಲೂ ಇರುತ್ತದೆ. ಒಂದು ನೂರು ಬಾಳೆಯ ಹಣ್ಣನ್ನು ತಿಂದರೆ ನ್ಯೂಕ್ಲಿಯಾರ್‌ ಶಕ್ತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುವವರ ಪ್ರತಿಶತ 1ರಷ್ಟು ವಿಕಿರಣಕ್ಕೆ ತೆರೆದುಕೊಂಡಂತಾಗುತ್ತದೆ. ಅಷ್ಟು ಕಡಿಮೆ ವಿಕಿರಣ ಬಾಳೆಯ ಹಣ್ಣಿನಿಂದ ಬರುತ್ತದೆ. ಸರಿ ಸುಮಾರು 10,000 ಹಣ್ಣುಗಳನ್ನು ಒಂದೇ ದಿನ ತಿನ್ನಲು ಸಾಧ್ಯವಾದರೆ ಅದು ನ್ಯೂಕ್ಲಿಯಾರ್‌ ಶಕ್ತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುವವರಷ್ಟು ವಿಕಿರಣಕ್ಕೆ ಒಡ್ಡಿಕೊಂಡಂತೆ. ಅಷ್ಟು ವಿಕಿರಣ ನಮ್ಮ ನಮ್ಮಲ್ಲೂ ಇದ್ದೇ ಇದೆ, ಬಿಡಿ.

ಕೆಲವರಲ್ಲಿ ಬಾಳೆಯ ಹಣ್ಣು ಅಲರ್ಜಿಯನ್ನುಂಟು ಮಾಡುತ್ತದೆ. ಅದನ್ನು ಲೇಟೆಕ್ಸ್‌ ಅಲರ್ಜಿ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಹೇಳುತ್ತಾರೆ. ಒಂದು ಬಗೆಯಲ್ಲಿ ಸ್ವಾಭಾವಿಕವಾದ ರಬ್ಬರಿನಲ್ಲಿರುವ ಪ್ರೊಟೀನ್‌ ನಿಂದ ಆಗುವ ಅಲರ್ಜಿಯಂತೆ ಎನ್ನುವ ವಿವರಣೆಯನ್ನು ವೈದ್ಯಕೀಯ ಸಂಗತಿಗಳು ವಿವರಿಸುತ್ತವೆ. ಇದರ ವಿಸ್ತಾರವು ಅನೇಕ ಪದಾರ್ಥಗಳನ್ನು ಒಳಗೊಂಡಿದ್ದು ಅದರಲ್ಲಿ ಬಾಳೆಯೂ ಒಂದು! ಅಂತಹಾ ಒಟ್ಟಾರೆಯ ಅಲರ್ಜಿ ಇರುವವರ ಸಂಖ್ಯೆಯು ಪ್ರತಿಶತ 1ಕ್ಕಿಂತಾ ಕಡಿಮೆ. ಬಾಳೆಯನ್ನೇ ಗುರಿಪಡಿಸಿಕೊಂಡರೆ ಮತ್ತೂ ಕಡಿಮೆ! ಹಾಗಾಗಿ ರುಚಿ, ಸ್ವಾದ ಹಿತವಾಗಿರುವವರೆಗೂ ತಿನ್ನಲು ಏನೂ ತೊಂದರೆಯಿಲ್ಲ. ಅಷ್ಟಾಗಿ ಎಲ್ಲೋ ಮಾತಿಗೆ ರಾತ್ರಿ ತಿಂದರೆ ಶೀತ ಅಂತಲೋ, ಮಲಗುವ ಮುನ್ನ ತಿನ್ನದಿರುವ ಬಗೆಗೋ ಈ ಮಾತುಗಳು ಕೇಳಿಯಾವು! ಬಾಳೆಯ ಹಣ್ಣನ್ನು ತಿನ್ನದೇ ಇರುವವರಾದರೂ ಇದ್ದಾರೆಯೇ! ಅಪರೂಪ ಅಲ್ಲವೇ? ಬಾಳೆಯು ಕೈಗೆ ಸಿಕ್ಕ ಮೇಲೆ ಸುಮ್ಮನೆ ಇರಲಾದೀತೇ? ಬಾಳೆಯ ತೋಟದ ಪಕ್ಕದ ಕಾಡಿನ ಮಂಗಗಳ ಪದ್ಯ ನೆನಪಿರಬೇಕಲ್ಲ! ಕೈಯೊಳಗೇತಕೆ ಬಾಯೊಳಗಿಟ್ಟರೂ ಸಾಕಲ್ಲ! ಎಂದು ತೀರ್ಮಾನಿಸಿದ ಮಂಗಗಳು ಬಾಳೆಯ ಆಪ್ತ ಸಂಬಂಧವನ್ನು ಶಾಶ್ವತಗೊಳಿಸಿವೆ.

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್

This Post Has 2 Comments

  1. ಡಾ ರುದ್ರೇಶ್ ಅದರಂಗಿ

    ನಂಜನಗೂಡು ಬಾಳೆ ಹಣ್ಣು ನಿಜಕ್ಕೂ ಶ್ಲಾಘನೀಯ ರುಚಿ ಸುವಾಸನೆ ಬಾಯಲ್ಲಿ ನೀರು ಹರಿಸುತ್ತದೆ.

  2. Balasubramanya

    Good article.

Leave a Reply