The Lancet (Jun 12, 2021) ವಿಖ್ಯಾತ ವೈದ್ಯಕೀಯ ಪತ್ರಿಕೆ ನಿನ್ನೆಯಷ್ಟೇ ಭಾರತದಲ್ಲಿ ಕೊವಿಡ್-19ರ ಮರು ಸಂಭಾವನಿಯತೆ ಕುರಿತು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವರದಿಯನ್ನು ಪ್ರಕಟಿಸಿದೆ. ಪತ್ರಿಕೆಯ ನಾಗರಿಕ ಕಮಿಷನ್ (Lancet Citizens’ Commission) ಕಳೆದ ಮೇ, 2021 ರವರೆಗಿನ ವೈದ್ಯಕೀಯ ಪರಿಸ್ಥಿತಿಯನ್ನು ಈಗಾಗಲೆ ಮರುಕಳಿಸಿದ ಕೊವಿಡ್-19 ಅನ್ನೂ ಸೂಕ್ಷ್ಮವಾಗಿ ಗಮನಿಸಿ, ಪ್ರಸ್ತುತ ಲಭ್ಯವಿರುವ ಹಾಗೂ ಜಾರಿಯಲ್ಲಿರುವ ವೈದ್ಯಕೀಯ ಸ್ಥಿತಿಗತಿಗಳನ್ನೂ ಸಮೀಕರಿಸಿ ವರದಿಯನ್ನು ತಯಾರಿಸಿದೆ. ಕಳೆದ ಡಿಸೆಂಬರ್ 2020 ರಲ್ಲಿ ಈ ನಾಗರಿಕ ಸಮಿತಿಯು ಜಾರಿಗೆ ಬಂದಿತ್ತು. ಮೂಲತಃ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು (Universal Health Coverage-UHC) ಸಾಧ್ಯವಾಗಿಸುವ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ಆಯೋಜಿಸಲಾಗಿತ್ತು. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಟ್ಟಾಗಿ ಜವಾಬ್ದಾರಿ ವಹಿಸಲು ಸಮಿತಿಯು ಒಟ್ಟು 8 ಶಿಫಾರಸ್ಸುಗಳನ್ನು ಮಾಡಿದೆ. ಅದಕ್ಕಾಗಿ ದಕ್ಷಿಣ ಕರೊಲಿನಾ ವೈದ್ಯಕೀಯ ವಿಶ್ವವಿದ್ಯಾಲಯದ ಸಲಹೆಗಳ ಆಧಾರಿತವಾದ ಅಂತರರಾಷ್ಟ್ರೀಯ ಸಮುದಾಯದ ಕ್ರಮಗಳ ಅಗತ್ಯಗಳನ್ನೂ ಪೂರಕವಾಗಿ ವಿಶ್ಲೇಷಿಸಲಾಗಿದೆ. ತುರ್ತು ಕ್ರಮದ ಶಿಫಾರಸ್ಸುಗಳು ಈ ಮುಂದಿನಂತಿವೆ.
1. ಮೊದಲನೆಯದಾಗಿ ವೈದ್ಯಕೀಯ ಸೇವೆಗಳ ವಿಕೇಂದ್ರೀಕರಣ. ಜಿಲ್ಲೆಗಳಿಂದ ಜಿಲ್ಲೆಗೆ ವಿಪರೀತ ವ್ಯತ್ಯಯದ ಕೊವಿಡ್ ಶೋಷಿತರಿದ್ದು, ಅಗತ್ಯ ಸೇವೆಗಳಲ್ಲೂ ಗಮನಾರ್ಹವಾದ ವೈದ್ಯಕೀಯ ಸೇವೆಗಳ ಲಭ್ಯತೆಯಿದೆ. ಸ್ಥಳೀಯತೆಗೆ ಬೆಂಬಲವಿತ್ತು ಧನಸಹಾಯ ಮುಂತಾದ ಯಾವುದೇ ಅಗತ್ಯಗಳನ್ನೂ ವಿಕೇಂದ್ರೀಕೃತವಾಗಿ ನಿರ್ವಹಿಸುವಂತೆ ಮಾಡಬೇಕಿದೆ. ಅದಕ್ಕೆ ಅಗತ್ಯವಾದ ತಂತ್ರಜ್ಞಾನ, ಸಂಪನ್ಮೂಲಗಳನ್ನು ಆಯಾ ಜಿಲ್ಲೆಗಳೇ ತೀರ್ಮಾನಿಸಲು ಅನುಕೂಲ ಕಲ್ಪಸಬೇಕಿದೆ.
2 ಎರಡನೆಯದಾಗಿ, ವೈದ್ಯಕೀಯ ಅಗತ್ಯ ಸೇವೆಗಳನ್ನು ಪಾರದರ್ಶಕವಾದ ರಾಷ್ಟ್ರೀಯ ಬೆಲೆಯ ನೀತಿಯನ್ನೂ ರೂಪಿಸಬೇಕಿದೆ. ಆಂಬ್ಯುಲೆನ್ಸ್, ಆಮ್ಲಜನಕ, ಔಷಧಗಳು, ಆಸ್ಪತ್ರೆಗಳ ಸೇವೆ ಮುಂತಾದ ಜನಹಿತವಾದ ಅಗತ್ಯಗಳನ್ನು ನೀತಿಯಡಿ ತರಬೇಕು. ಎಲ್ಲಾ ವೆಚ್ಚಗಳನ್ನೂ ಸಾಧ್ಯವಿರುವ ಆರೋಗ್ಯ ವಿಮೆಯಲ್ಲೇ ನಿರ್ವಹಿಸುವಂತೆಯೂ ಮಾಡಬೇಕು.
3. ಮೂರನೆಯದಾಗಿ, ಕೊವಿಡ್-19ರ ಕುರಿತಂತೆ ಆಧಾರ ಸಹಿತವಾದ ಮಾಹಿತಿಗಳನ್ನು ಮಾತ್ರವೇ ಪ್ರಚಾರ ಪಡಿಸತಕ್ಕದ್ದು. ಈ ಮಾಹಿತಿ ನಿರ್ವಹಣೆಯು ಅಂತರರಾಷ್ಟ್ರೀಯ ಮಾನದಂಡಗಳನ್ನು ಒಳಗೊಂಡಿರತಕ್ಕದ್ದು. ಇದೆಲ್ಲವೂ ಸ್ಥಳಿಯತೆಯನ್ನೂ ಹೊಂದಿರಬೇಕು. ಇವೆಲ್ಲವೂ ಕೊವಿಡ್ ನಿಂದಾಗುವ ನಂತರದ ವೈದ್ಯಕೀಯ ತಿಳಿವನ್ನೂ ಒಳಗೊಂಡಿರತಕ್ಕದ್ದು. ಜೊತೆಗೆ ಕೊವಿಡ್ ಅಲ್ಲದ ಆರೋಗ್ಯ ಸೇವೆಗಳನ್ನೂ ಸಂಪೂರ್ಣವಾಗಿ ದೊರಕುವಂತೆ ಇರುವ ಮಾಹಿತಿಗಳನ್ನೂ ಹೊಂದಿರುವುದು ಅನಿವಾರ್ಯ.
4. ನಾಲ್ಕನೆಯದಾಗಿ, ಎಲ್ಲಾ ವೈದ್ಯಕೀಯ ಮಾನವ ಸಂಪನ್ಮೂಲವನ್ನೂ ಕ್ರೋಢೀಕರಿಸಿ (ಖಾಸಗಿ, ಅರೆಸರ್ಕಾರಿ, ಸರ್ಕಾರಿ, ಇತ್ಯಾದಿ) ಅವರಿಗೆ ಅಗತ್ಯವಾದ ರಕ್ಷಣೆಯನ್ನೂ ಒದಗಿಸಿ ಕೊವಿಡ್-19 ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸತಕ್ಕದ್ದು. ಅದಕ್ಕಾಗಿ ಅಂತಿಮ ವರ್ಷದ ಎಲ್ಲಾ ಪ್ರಕಾರದ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಲು ಅನುಮತಿಸಿದೆ. ನೀತಿಯು ನರ್ಸಿಂಗ್ ಹಾಗೂ ಪ್ಯಾರಾವೈದ್ಯಕೀಯ ವಿದ್ಯಾರ್ಥಿಗಳನ್ನೂ ಒಳಗೊಳ್ಳುವಂತೆ ಇರತಕ್ಕದ್ದು.
5. ಐದನೆಯದಾಗಿ, ಕೇಂದ್ರವು ವ್ಯಾಕ್ಸೀನ್ ಅನ್ನು ಕೊಂಡು ಉಚಿತವಾಗಿ ಹಂಚತಕ್ಕದ್ದು. ಅದಕ್ಕಾಗಿ ರಾಜ್ಯಗಳಿಗೆ ವಿಕೇಂದ್ರೀಕೃತ ಅಧಿಕಾರವನ್ನೂ ಕೊಡಬೇಕು. ಏಕೆಂದರೆ ಇದೆ 2021 ರ ಮೇ 19ರ ವರೆಗೂ ದೇಶದಲ್ಲಿ ಕೇವಲ ಪ್ರತಿಶತ ೩ರಷ್ಟು ಮಾತ್ರವೇ ವ್ಯಾಕ್ಸೀನು ಹಾಕಲಾಗಿದೆ. ಪ್ರತೀ ತಿಂಗಳ ವ್ಯಾಕ್ಸೀನ್ ಡೋಸುಗಳ ಅವಶ್ಯಕತೆಯು ಸುಮಾರು 250 ದಶಲಕ್ಷವಿದ್ದು, ಸಿಗುತ್ತಿರುವುದು ಕೇವಲ 70-80 ದಶಲಕ್ಷ ಡೋಸುಗಳು ಮಾತ್ರ! ವ್ಯಾಕ್ಸೀನ್ ಕೊಡುವುದು ಸಾರ್ವಜನಿಕ ಹಿತವಾಗಬೇಕೆ ಹೊರತು, ಅದೊಂದು ವ್ಯಾವಹಾರಿಕ ದಂದೆಯಾಗಬಾರದು ಎಂಬ ಎಚ್ಚರಿಕೆಯೂ ಇದೆ.
6. ಆರನೆಯದಾಗಿ, ಸಾಮುದಾಯಿಕ ಒಳಗೊಳ್ಳುವಿಕೆಯು ಕೊವಿಡ್ ನಿರ್ವಹಣೆಯಲ್ಲಿ ಹೃದಯ ಸ್ಥಾನದಲ್ಲಿರಬೇಕು. ನಾಗರಿಕ ಸಂಸ್ಥೆಗಳು ಸ್ಥಳೀಯ ಆರೋಗ್ಯದಲ್ಲಿ ಹಿಂದಿನಿಂದಲೂ ಪೂರಕ ಪಾತ್ರವಹಿಸಿದ್ದನ್ನು ಗಮನವಿಟ್ಟು ಬಳಸಿಕೊಳ್ಳತಕ್ಕದ್ದು. ಅದಕ್ಕಾಗಿ ನಾಗರಿಕ ಸೇವಾ ಸಂಸ್ಥೆಗಳು ಹಾಗೂ ಸರ್ಕಾರದ ಸಂಸ್ಥೆಗಳ ನಡುವಣ ಉತ್ತಮ ಬಾಂಧವ್ಯವನ್ನೂ ರೂಪಿಸತಕ್ಕದ್ದು. ಹಾಗೇಯೇ ನಾಗರಿಕ ಸಂಸ್ಥೆಗಳ ಮೇಲಿನ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಸವಲತ್ತು ಪಡೆಯುವ ನಿಷೇಧವನ್ನೂ ಹಿಂಪಡೆಯಬೇಕಿದೆ.
7. ಏಳನೆಯದಾಗಿ, ಪಾರ್ದರ್ಶಕವಾದ ಹಾಗೂ ನಿಖರವಾದ ಮಾಹಿತಿ ನಿರ್ವಹಣೆಯನ್ನು ಮಾಡಿ ಅವುಗಳನ್ನು ಜಿಲ್ಲಾವಾರು ಮಾದರಿ ತಯಾರಿಯಲ್ಲಿ ಬಳಸಿ ಮುಂದಿನ ದಿನಗಳನ್ನು ಅರ್ಥೈಸಬೇಕು. ಆರೋಗ್ಯ ನಿರ್ವಹಣೆಯ ಅಗತ್ಯ ಮಾಹಿತಿಗಳಾದ ವಯಸ್ಸು ಮತ್ತು ಲಿಂಗ, ಆಸ್ಪತ್ರೆಗಳ ಚಿಕಿತ್ಸೆಗೆ ಒಳಪಟ್ಟವರು, ವ್ಯಾಕ್ಸೀನ್ ಹಾಕಿಸಿಕೊಂಡವರು, ಚಿಕಿತ್ಸೆಯ ಶಿಷ್ಟಾಚಾರಗಳು ಹಾಗೂ ದೂರ ದೃಷ್ಟಿಯ ಲಾಭ-ನಷ್ಟಗಳು ಇವೇ ಮುಂತಾದವನ್ನು ವ್ಯವಸ್ಥಿತ ತರಬೇತುದಾರರನ್ನು ನೇಮಿಸಿ ಪಡೆಯುವಂತೆ ಮಾಡಬೇಕು. ಸಾಂಕ್ರಾಮಿಕತೆಯ ಸರ್ವೇಕ್ಷಣೆ, ವೈರಸ್ಸುಗಳ ವಿವಿಧತೆ, ಸೂಕ್ಷ್ಮ ಪ್ರದೇಶಗಳು, ಇದ್ದಕ್ಕಿದ್ದಂತೆ ಉಂಟಾದ ಸೋಂಕು ಇವೇ ಮುಂತಾದ ಸಂಗತಿಗಳು ಒಳಗೊಳ್ಳಬೇಕು.
8. ಎಂಟನೆಯ ಹಾಗೂ ಕಡೆಯ ಶಿಫಾರಸ್ಸು. ಜೀವನೋಪಾಯದ ನಷ್ಟದಿಂದ ಉಂಟಾದ ತೀವ್ರವಾದ ಸಂಕಟ ಮತ್ತು ಆರೋಗ್ಯಕ್ಕೆ ಆದ ಅಪಾಯಗಳನ್ನು ಕಡಿಮೆ ಮಾಡಬೇಕು. ಉದ್ಯೋಗ ಕಳೆದುಕೊಂಡ ಅನೇಕರಿಗೆ ನಗದು ವರ್ಗಾವಣೆಯ ಅವಕಾಶವನ್ನು ಸರ್ಕಾಗಳು ಕಲ್ಪಸುವ ಮೂಲಕ ಸಹಕರಿಸಬೇಕು. ಉದ್ಯೋಗದಾತ ಎಲ್ಲಾ ಸಂಸ್ಥೆಗಳೂ ತಮ್ಮ ನೌಕರರನ್ನು ಹೊರಹಾಕದಂತೆ ಅವಕಾಶ ಕಲ್ಪಸುವಂತೆ ಆಯಾ ಸಂಸ್ಥೆಗಳಿಗೆ ನೆರವು ನೀಡಬೇಕು.
ಕೊವಿಡ್-19 ರಂತಹಾ ಸಾಂಕ್ರಾಮಿಕತೆಯಿಂದ ಉಂಟಾದ/ಉಂಟಾಗುವ ಸಂಕಟದ ಜೀವನ ರಕ್ತಸ್ರಾವವನ್ನು ತಡೆಯಲು ಇನ್ನೂ ಸಮಯವಿದೆ. ಇದು ಸ್ವಾತಂತ್ರ್ಯದ ನಂತರ ದೇಶ ಎದುರಿಸುತ್ತಿರುವ ದೊಡ್ಡ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಮತ್ತು ಒಂದಾಗಿ ಕಾರ್ಯನಿರ್ವಹಿಸುವುದು ಒಂದೇ ಮಾರ್ಗ ಎಂಬುದಾಗಿ ಸಮಿತಿಯು ಕರೆ ಮಾಡಿದೆ.
ಸಮಿತಿಯ ಮುಖ್ಯ ರೂವಾರಿ Harvard Medical School ನ ವಿಕ್ರಮ್ ಪಟೇಲ್ ಇದನ್ನು ನಿರ್ವಹಿಸಿ ಹೀಗೆ ಕರೆಕೊಟ್ಟಿದ್ದಾರೆ.
(Harvard Medical School USA, Centre for Policy Research, New Delhi, Indian Institute of Science, Bangalore, The Wharton School, University of Pennsylvania, Philadelphia, USA, Christian Medical College, Vellur ಅಲ್ಲದೆ Narayana Hrudayalaya ವೂ ಸೇರಿದಂತೆ ಇನ್ನೂ ಹತ್ತಾರು ಸಂಸ್ಥೆಗಳ ವಿಜ್ಞಾನಿಗಳು ವೈದ್ಯರೂ ಸಮಿತಿಯ ಭಾಗವಾಗಿದ್ದಾರೆ)
ನಮಸ್ಕಾರ ಡಾ. ಟಿ.ಎಸ್. ಚನ್ನೇಶ್
Based on : The Lancet Citizens’ Commission on Reimagining India’s Health System Report
(www.citizenshealth.in) https://doi.org/10.1016/S0140-6736(21)01202-2 The Lancet Vol 397 June 12, 2021
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅಗತ್ಯವಾಗಿ ಮಾಡಬೇಕಾಗಿರುವ ಕ್ರಮ ಕುರಿತು ಮಾನವೀಯ ನೆಲೆಯಲ್ಲಿ ವಿವರವಾಗಿ ಬರೆದಿದ್ದೀರಿ ಧನ್ಯವಾದಗಳು