You are currently viewing ಬ್ರುನೊ ಲಾಟುವ್‌ (Bruno Latour)  ಅವರ “ಲ್ಯಾಬೊರೇಟರಿ ಲೈಫ್‌ (Laboratory Life- The Construction of  Scientific Facts)”

ಬ್ರುನೊ ಲಾಟುವ್‌ (Bruno Latour) ಅವರ “ಲ್ಯಾಬೊರೇಟರಿ ಲೈಫ್‌ (Laboratory Life- The Construction of Scientific Facts)”

ವಿಜ್ಞಾನದಲ್ಲಿ ಪ್ರಯೋಗಗಳಿಗೆ ಅತ್ಯಂತ ಹೆಚ್ಚಿನ ಮಹತ್ವವಿರುತ್ತದೆ. ವಿಜ್ಞಾನದ ರಚನೆ, ಪ್ರಯೋಗಗಳು, ವಿಜ್ಞಾನಿಗಳ ಒಳಗೊಳ್ಳುವಿಕೆಯನ್ನೂ ಸಹಾ ಪ್ರಯೋಗಕ್ಕೆ ಒಳಪಡಿಸುವುದೆಂದರೆ, ಅದಕ್ಕಿನ್ನೂ ಹೆಚ್ಚಿನ ಮಹತ್ವ ಇರಲೇಬೇಕು. ಅದೇ ಈ “ಲ್ಯಾಬೊರೇಟರಿ ಲೈಫ್‌ – ಪ್ರಯೋಗಾಲಯದ ಜೀವನ” ಪುಸ್ತಕದ ಹೆಚ್ಚುಗಾರಿಕೆ ಹಾಗೂ ಅದರ ನಿರ್ಮಿತಿಯಲ್ಲಿ ತೊಡಗಿಸಿಕೊಂಡ ಬ್ರುನೊ ಲಾಟುವ್‌ ಅವರ ಹೆಚ್ಚುಗಾರಿಕೆಯೂ ಕೂಡ. ಜೊತೆಗೆ ಅಂತಹದ್ದನ್ನು ಸಾಧ್ಯಮಾಡಲು ಅನುವು ಮಾಡಿಕೊಟ್ಟು, ಪುಸ್ತಕಕ್ಕೆ ಅದ್ಭುತವಾದ ಪೀಠಿಕೆಯನ್ನೂ ಬರೆದ ಸಾಕ್‌ ಜೀವಿವಿಜ್ಞಾನ ಸಂಸ್ಥೆಯ “ಜೊನಾಸ್‌ ಸಾಕ್‌” (ಪೋಲಿಯೊ ಲಸಿಕೆಯನ್ನು ತಯಾರಿಸಿದವ ವೈದ್ಯ ವಿಜ್ಞಾನಿ) ಅವರ ಹೆಚ್ಚುಗಾರಿಕೆಯೂ ಸಹಾ! ಬ್ರುನೊ ಲಾಟುವ್‌ ಅವರು ಇದೇ ಅಕ್ಟೋಬರ್‌ 9 ರಂದು ವಿಜ್ಞಾನ ಲೋಕದಿಂದ ಶಾಶ್ವತವಾಗಿ ನಿರ್ಗಮಿಸಿದ ಬಳಿಕ ಅವರ ನೆನಪುಗಳಲ್ಲಿ (ಕಳೆದ ವಾರ ಬರೆದ ಲೇಖನ ನೋಡಿ ) ಅವರ ಈ ಪುಸ್ತಕವನ್ನು ಪರಿಚಯಿಸುವ ಕುರಿತು ಬರೆದಿದ್ದೆ.  

       ಸಮಾಜವಿಜ್ಞಾನ ಹಾಗೂ ತತ್ವಜ್ಞಾನದ ವಿದ್ಯಾರ್ಥಿಯಾದ ಬ್ರುನೊ ಅವರಿಗೆ 1975ರಲ್ಲಿ, ವಿಜ್ಞಾನ ಹಾಗೂ ತಂತ್ರಜ್ಞಾನ ಎರಡೂ ದೂರವೇ ಇದ್ದಂತಹಾ ವಿಷಯಗಳು. ಹಾಗೇನೇ ಭಾಷೆಯಾಗಿ ಇಂಗ್ಲೀಶೂ ಸಹಾ, ಏಕೆಂದರೆ ಅವರು ಮೂಲತಃ ಫ್ರೆಂಚ್‌ ಭಾಷೆಯ ನೆಲದವರು. ಅಂತಹವರು ತಮ್ಮ ವಿಶಿಷ್ಟತೆ ಹಾಗೂ ತಾತ್ವಿಕ ಜಿಜ್ಞಾಸೆಯಿಂದ ವಿಜ್ಞಾನ ಹಾಗೂ ಇಂಗ್ಲೀಶ್‌ ಜಗತ್ತು ಎರಡನ್ನೂ ಮುಂದೆ ಐದೇ ವರ್ಷಗಳಲ್ಲಿ ಅದೆಷ್ಟು ಪ್ರಭಾವಿಸಿದರು ಎಂದರೆ, ಆ ಸಮಯದ ಅವರ ಸಂಶೋಧನಾ ಅಧ್ಯಯನಗಳ ಫಲವಾದ “ಲ್ಯಾಬೊರೇಟರಿ ಲೈಫ್‌”   ಪುಸ್ತಕದ ವ್ಯಾಖ್ಯಾನವು ವಿಜ್ಞಾನಕ್ಕೂ ಒಂದು ವೈಜ್ಞಾನಿಕತೆಯನ್ನು ತಂದುಕೊಟ್ಟಿತು.

ವಿಜ್ಞಾನಕ್ಕೇ ವೈಜ್ಞಾನಿಕತೆ ಎನ್ನುವ ಈ ಮಾತು ನಮ್ಮ ಸಾಂಪ್ರದಾಯಿಕ ವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನಿಗಳಿಗೆ ಇದೆಂತಹದು ಅನ್ನಿಸಬಹುದು. ಆದರೆ, ಇದು ಸಂಪೂರ್ಣ ನಿಜ. ನನ್ನ ಅನುಭವಗಳನ್ನೂ ಸೇರಿಸಿಕೊಂಡರೆ ನಮ್ಮ ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳಿಗಂತೂ ಹೀಗೆ ಎನ್ನಿಸುವುದು ಹೌದು. ಕಾರಣ ಇಷ್ಟೇ ನಮ್ಮಲ್ಲಿ ಬಹುಪಾಲು ವಿಜ್ಞಾನಿಗಳು ಮ್ಯಾನ್ಯುಯೆಲ್‌ (ವಿಜ್ಞಾನದ ಪ್ರಯೋಗಿಕ ಕೆಲಸಗಳ ಅನುಕ್ರಮಣಿಕೆಗಳ ವಿವರಣಾ ಪುಸ್ತಕ) ನೋಡಿ ಪ್ರಯೋಗಕ್ಕೆ ಒಡ್ಡಿಕೊಂಡವರು. ಅದರೊಳ ಹೊಕ್ಕು ಪರಿಕಲ್ಪನೆಗಳಿಂದ ಎಲ್ಲರೊಳಗೊಂದಾಗುವಂತೆ ಸಮಾಜೀಕರಿಸುವ ಹಿನ್ನೆಲೆಯಿಂದ ವಿಜ್ಞಾನವನ್ನು ರಚಿಸುವುದನ್ನು ಕಲಿತಿಲ್ಲ. ಆ ಕಾರಣಕ್ಕೇ ಇಂತಹದನ್ನು ಮೊಟ್ಟ ಮೊದಲು ಬಾರಿಗೆ ಅನುವು ಮಾಡಿಕೊಟ್ಟ ಜೊನಾಸ್‌ ಸಾಕ್‌ ಹಾಗೂ ಅಂತಹದ್ದನ್ನು ಸಂರಚನೆಗಳ ಪರಿಕಲ್ಪನೆಯಿಂದ ವಿವರಣಾತ್ಮಕವಾಗಿ ಕಟ್ಟಿಕೊಟ್ಟ ಬ್ರುನೊ ಲಾಟುವ್‌ ವಿಜ್ಞಾನ ಜಗತ್ತಿನಲ್ಲಿ ವಿಶಿಷ್ಟರಾಗಿದ್ದು. ಅದರಲ್ಲೂ ಬ್ರುನೊ ಲಾಟುವ್‌ ತಮ್ಮ ವಿಶಿಷ್ಟ ವ್ಯಾಖ್ಯಾನಗಳಿಂದ ವಿಜ್ಞಾನಕ್ಕೇ ವೈಜ್ಞಾನಿಕತೆಯನ್ನು ಕಲ್ಪಿಸಿಕೊಟ್ಟದ್ದು. ಮುಂದಿನ ದಿನಗಳಲ್ಲಿ ಹಾಗೂ ಇಂದಿಗೂ ಮುಂದುವರೆದಂತೆ ವಿಶಿಷ್ಟವಾದ ಪರಿಭಾಷೆಯಿಂದ ವಿಜ್ಞಾನವನ್ನು ಸಮಾಜೀಕರಣದ ಚರ್ಚೆಗೆ ತಂದರು.

       ಪುಸ್ತಕವು ಓದಿಗೆ ತೆರೆದುಕೊಳ್ಳುವ ಮುನ್ನವೇ ಡೇವಿಡ್‌ ಬ್ಲೂರ್‌ (David Bloor)  ಅವರ ಮಾತೂ ಇದನ್ನೇ ಪ್ರಸ್ತಾಪಿಸಿ ಓದುಗರನ್ನು ವಿಜ್ಞಾನದ ವಿಶಿಷ್ಟ ಲೋಕಕ್ಕೆ ಆಹ್ವಾನಿಸುತ್ತದೆ. ವಿಜ್ಞಾನವನ್ನು ಸಮಾಜಿಕ ಹಿತದಿಂದ ಅಧ್ಯಯನಕ್ಕೆ ಒಳಪಡಿಸಿದ ಸಮಾಜ ವಿಜ್ಞಾನಿಗಳಲ್ಲಿ ಪ್ರವರ್ತಕರಾದ ಡೇವಿಡ್‌ ಬ್ಲೂರ್‌ “ಸಮಾಜಶಾಸ್ತ್ರವನ್ನು ವೈಜ್ಞಾನಿಕ ಜ್ಞಾನಕ್ಕೆ ಸಂಪೂರ್ಣವಾಗಿ ಅನ್ವಯಿಸಲು ಸಾಧ್ಯವಾಗದಿದ್ದರೆ, ವಿಜ್ಞಾನವು ಸ್ವತಃ ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಥ –(If sociology could not be applied in a thorough going way to scientific knowledge, it would mean that science could not scientifically know itself)” ಎಂದೇ ಪ್ರಸ್ತಾಪಿಸುತ್ತಾರೆ.

     ಪ್ರಯೋಗಾಲಯದ ಜೀವನವನ್ನು ವೈಜ್ಞಾನಿಕ ವಿಚಾರಗಳನ್ನು ಕಟ್ಟುವ ರಚಿಸುವ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವ ಬ್ರುನೊ, ತಮ್ಮ ಎರಡು ವರ್ಷದ ಅಧ್ಯಯನವನ್ನು ಸಾಕ್‌ ಸಂಸ್ಥೆಯಲ್ಲಿ ನಡೆಸಿದರು. ಓರ್ವ ಸಮಾಜವಿಜ್ಞಾನದ ವಿದ್ಯಾರ್ಥಿಯಾಗಿ ವಿಜ್ಞಾನವನ್ನು ಕಟ್ಟುವ ಪ್ರಯೋಗಾಲಯದ ದಿನಚರಿಯನ್ನು ಕಥಾನಕವಾಗಿ, ವಿಮರ್ಶೆಯಾಗಿ, ರಚನೆಯ ವಿವಿಧ ಆಯಾಮಗಳ ಬಿಡಿ-ಬಿಡಿ ವರ್ಣನೆಗಳಾಗಿ ಮಾಡಿದ್ದಾರೆ. ಫ್ರೆಂಚ್‌ ಮೂಲದ ಅವರು ಈ ಪುಸ್ತಕವನ್ನು ಇಂಗ್ಲೀಶಿನಲ್ಲೇ ತಯಾರು ಮಾಡಲು ಇಂಗ್ಲೀಶ್‌ ಸಮಾಜವಿಜ್ಞಾನಿ ಸ್ಟೀವ್‌ ಊಗ್ಲರ್‌ (Steeve Woogler) ಅವರ ನೆರವನ್ನು ಪಡೆದಿದ್ದಾರೆ. ಹಾಗಾಗಿ, ಊಗ್ಲರ್‌ ಈ ಪುಸ್ತಕದ ಸಹ ಲೇಖಕ. ವೈಚಾರಿಕವಾಗಿ ಇದರ ವ್ಯಾಖ್ಯಾನಗಳೆಲ್ಲಾ ಬ್ರುನೊ ಅವರ ಪ್ರಾಯೋಗಿಕ ಅಧ್ಯಯನಗಳ ನಿರ್ಮಿತಿ. ಈ ಹಿನ್ನೆಲೆಯಲ್ಲಿಯೇ ಬ್ರುನೊ ಅವರ ಈ ಮಾದರಿಯು ಅಕಾಡೆಮಿಕ್‌ ಆಗಿ ವಿಜ್ಞಾನದ ರಚನೆ, ಚಲನಾಶೀಲತೆ, ಇತಿಹಾಸ ಮುಂತಾದವುಗಳ ಜೊತೆ ತಾತ್ವಿಕ ದರ್ಶನಕ್ಕೆ ಪ್ರಭಾವಿಸಿತು.

     ಪುಸ್ತಕದ ಮಾದರಿಯೇ ವಿಶಿಷ್ಟವಾದದ್ದು. ಬಹುಪಾಲು ಓದುಗರಿಗೆ, ವಿವಿಧ ಜೀವನ ಮಾದರಿಗಳ ದರ್ಶನವಿದ್ದೇ ಇರುತ್ತದೆ. ಆದರೆ ಪ್ರಯೋಗಾಲಯದ ಜೀವನ ಖಂಡಿತಾ ಹೊಸತು. ಈ ಪುಸ್ತಕದ ರಚನೆಯೂ ಸಹಾ ವಿಜ್ಞಾನದ ಓದಿನ ಮಾರ್ಗದವರಲ್ಲದವರನ್ನು ತಲುಪುವ ವಿಜ್ಞಾನದ ರಚನೆಯನ್ನು ತಿಳಿಸುವ ಉದ್ದೇಶವೆಂದು ಮೂಲದಲ್ಲಿ ಹೇಳಿದರೂ, ಜೊನಾಸ್‌ ಸಾಕ್‌ ಅವರು ಹಿನ್ನೆಲೆಯಲ್ಲಿ ಪ್ರಸ್ತಾಪಿಸುವಂತೆ ವಿಜ್ಞಾನಿಗಳಿಗೇ ಒಂದು ವಿಮರ್ಶೆಯ ಒಳನೋಟವನ್ನೂ ಕೊಡುವ ಉದ್ದೇಶವನ್ನು ಗಾಢವಾಗಿಯೇ ಹೊಂದಿದೆ. ಇದು ಸಾಂಪ್ರದಾಯಿಕ ವಿಜ್ಞಾನಿಗಳಿಗೆ ರುಚಿಸುವುದು ಕಷ್ಟ. ವಿಜ್ಞಾನಿಗಳಿಗೆ ಪ್ರಾಯೋಗಿಕ ಫಲಿತಗಳನ್ನು ಒರೆಹಚ್ಚಿ ತೀರ್ಪು ಕೊಡುವ ಸಂಪ್ರದಾಯದವರಿಗೆ, ಇದೇನಿದು ವಿಜ್ಞಾನದ ವಿಮರ್ಶೆ ಎನ್ನಿಸಬಹುದು. ಆದರೆ ಅಚ್ಚರಿ ಎಂದರೆ, ವಿಜ್ಞಾನದ ರಾಚನಿಕ ವಿನ್ಯಾಸಗಳ ಪರಿಭಾಷೆಯನ್ನು ವ್ಯಾಖ್ಯಾನಿಸುವ ಪುಸ್ತಕವು ಅಪ್ಪಟ ವಿಜ್ಞಾನಿಗಳಿಗೂ ಧಾರಾಳವಾದ ಕಲಿಕೆಯ ಮಾರ್ಗಗಳನ್ನು ತಿಳಿಸುತ್ತದೆ. ಈ ಮಾದರಿಯೇ ವಿಜ್ಞಾನದ ವೈಜ್ಞಾನಿಕತೆಯನ್ನು ತಿಳಿಸುವ ಮಾದರಿ ಆಗಿದೆ.

     ಪುಸ್ತಕವು ಓದಿಗೆ ತೆರೆದುಕೊಳ್ಳುವುದೇ ಒಂದು ಪ್ರಯೋಗಾಲಯದಲ್ಲಿ ಒಳಹೊಕ್ಕವರ ಸಾಮಾನ್ಯ ನೋಟಗಳ ವಿವರಗಳಿಂದ. ಪ್ರಯೋಗಾಲಯಗಳೂ ಕೂಡ ಒಂದು ರೀತಿಯ ಕಛೇರಿಗಳ ಹಾಗೆ ಮುಂಜಾನೆ ತೆರೆದುಕೊಳ್ಳುತ್ತವೆಯಲ್ಲವೆ? ಒಳಗೆ ಬರುವವರೂ ತಮ್ಮ ಮಧ್ಯಾಹ್ನದ ಊಟವನ್ನೋ ಅಥವಾ ಜೊತೆಯಲ್ಲೇ ಕೊಂಡ್ಯೊಯ್ದ ಮತ್ತೇನನ್ನೋ ಹೊತ್ತು ಒಯ್ದ ಚೀಲವನ್ನು ಮೊದಲು ಸರಿಯಾದ ಜಾಗದಲ್ಲಿ ಇಡಬೇಕು ತಾನೆ? ಅಥವಾ ನಿನ್ನೆಯ ಅರ್ಧಕ್ಕೇ ಬಿಟ್ಟ ಕೆಲಸವೊಂದನ್ನು ಮುಂದುವರೆಸಲು ಅದನ್ನು ನಿಲ್ಲಿಸಿಟ್ಟ ಜಾಗಕ್ಕೇ ದಾವಿಸಬೇಕಲ್ಲವೇ?  ಅಥವಾ ಮುಂದುವರೆದು ಸಹವರ್ತಿ ವಿಜ್ಞಾನಿಗಳನ್ನು ಅಥವಾ ಸಹಾಯಕರನ್ನು ಚರ್ಚೆಗೆ ಕರೆದೂ ಅಥವಾ ಅವರ ಬಳಿಯೇ ದಾವಿಸಿಯೋ ಮಾತುಕತೆಗಳನ್ನು ನಡೆಸಿ ಕೆಲಸವನ್ನು ಮುಂದುವರೆಸುವ ಬಗೆಯು ಸಹಜವಾದ್ದೇ, ತಾನೇ? ಇದೇ ಬರೆಯ ವಿವರಗಳಿಂದಲೇ ಪುಸ್ತಕವು ಓದಿಗೆ ತೆರೆದುಕೊಳ್ಳುತ್ತದೆ. ಇದನ್ನೆಲ್ಲವನ್ನೂ ವ್ಯವಸ್ಥೆಯಿಂದ ಅವ್ಯವಸ್ಥೆಯ ಕಡೆಗೆ (From Order To Disorder) ಎನ್ನುವ ಮೊದಲ ಅಧ್ಯಾಯವು ಆರಂಭಿಸುತ್ತಲೇ ವಿಜ್ಞಾನದ ನಿರ್ಮಿತಿಯ ವಿವಿಧ ವೈಧಾನಿಕತೆಗಳ ಕಡೆಗೆ ತೆರೆಯತೊಡಗುತ್ತದೆ.

       ವಿಜ್ಞಾನದ ಬಹು ದೊಡ್ಡ ಕೊಡುಗೆಯೇ ವಿಧಾನಗಳನ್ನು ಕಟ್ಟಿ ಕೊಡುವುದು. (ಹಾಗಾಗಿಯೇ ಈ ಹಿಂದೆಯೇ ಪ್ರಸ್ತಾಪಿಸಿದ್ದ ಮ್ಯಾನುಯಲ್‌ಗಳ ಮಾದರಿಗೆ ಒಗ್ಗಿಕೊಂಡವರು ಎಂದು ತುಸು ವ್ಯಂಗ್ಯವಾಗಿಯೇ ಹೇಳಿದ್ದು).  ಪುನರ್‌ ನಿರ್ಮಿಸಬಲ್ಲ ಸಾಧ್ಯತೆಯನ್ನು ಪ್ರಾಮಾಣಿಕವಾಗಿ ಕೊಡುವು ವಿಜ್ಞಾನವು ವಿಧಾನ ಅಥವಾ ಮೆಥೆಡ್‌ ಅನ್ನು ಅತ್ಯಂತ ಜವಾಬ್ದಾರಿಯುತವಾಗಿ ತೆಗೆದುಕೊಳ್ಳಬೇಕು. ಇಂತಹದ್ದನ್ನೂ ಸಮಾಜವಿಜ್ಞಾನದ ವಿದ್ಯಾರ್ಥಿಯಾಗಿಯೂ ಪರಿಭಾವಿಸಿಕೊಂಡ ಬ್ರುನೊ ವಿಜ್ಞಾನದ ಲ್ಯಾಬೊರೇಟರಿಯಲ್ಲಿ ತಾವೊಬ್ಬ ವೀಕ್ಷಕರಾಗಿ ವಿಜ್ಞಾನಿಗಳನ್ನೂ, ವಿಜ್ಞಾನವನ್ನೂ ಪರಿಭಾವಿಸಿದ ವಿವಿಧ ಬಗೆಗಳನ್ನೂ “ವೀಕ್ಷಕ ಮತ್ತು ವಿಜ್ಞಾನಿ (The Observer and the Scientist)”  ಎಂಬ ಶೀರ್ಷಿಕೆಯಾಗಿಸಿದ್ದಾರೆ. ಇದರಲ್ಲಿ ತಮ್ಮ ಇಡೀ ಎರಡು ವರ್ಷಗಳ ಅಲ್ಲಿನ ಸಮಾಜವಿಜ್ಞಾನದ ವಿದ್ಯಾರ್ಥಿಯ ವೀಕ್ಷಣೆಯ ಮಾದರಿಗಳನ್ನು ವಿಧಾನಗಳಾಗಿಸಿದ ಬಗೆಯನ್ನು ವಿವರಿಸಿದ್ದಾರೆ. ಏಕೆಂದರೆ ಇದೇ ಮುಂದೆ ಸಾಮಾಜಿಕ ಹಾಗೂ ವೈಜ್ಞಾನಿಕತೆಯ ನಡುವಣದ ಸಂಬಂಧಗಳಿಗೆ ಸಂಪನ್ಮೂಲವಾಗಿಸಲು ನೆರವಾಗಿದೆ. ವೀಕ್ಷಕನಿಗೆ ಅದರಲ್ಲೂ ಸಂಬಂಧವಿರದ ಸಂಗತಿಗಳ ದರ್ಶನಕ್ಕೆ ತೆರೆದುಕೊಳ್ಳವ ದ್ವಂದ್ವಗಳನ್ನೂ ಅವುಗಳ ಮಿತಿಗಳಿಂದ ಗೆಲ್ಲುವ ವಿವರಗಳೂ ಇಲ್ಲಿವೆ. ಆದ್ದರಿಂದಲೇ ಇಲ್ಲಿ “ವಿಜ್ಞಾನದ ಮಾನವಶಾಸ್ತ್ರ (The “Anthropology” of Science)ವು ಸಾಧ್ಯವಾಗಿದೆ,

       ಇಪ್ಪತ್ತನೆಯ ಶತಮಾನದಲ್ಲಿ ವಿಜ್ಞಾನವು ಒಂದು ವೃತ್ತಿಯಾಗಿ ವಿಕಾಸವಾಯಿತು ಎಂಬುದಾಗಿ ವಿಜ್ಞಾನದ ಇತಿಹಾಸ ಮತ್ತು ಚಲನಶೀಲತೆಯ ಅಧ್ಯಯನಕಾರರು ವ್ಯಾಖ್ಯಾನಿಸುತ್ತಾರೆ. ಇದರಿಂದಾಗಿ ಅನೇಕರಿಗೆ ಅದರಲ್ಲೂ ಬಹುಪಾಲು ಎರವಲನ್ನೇ ಅಥವಾ ನಕಲಿಸುವುದನ್ನೇ ವಿದ್ವತ್ತೂ ಎಂದೂ ತಮ್ಮ ಮುಗ್ಧತೆ/ಅಜ್ಞಾನ (Innocence/Ignorance) ಎರಡರಿಂದಲೂ ಒಗ್ಗಿಹೋಗಿ ವಿಜ್ಞಾನಿ ಎಂಬುದೊಂದು ವೃತ್ತಿಯಷ್ಟೇ! ಪ್ರವೃತ್ತಿಯಾಗಲು ಬೇಕಾದ ತಯಾರಿಗೂ ಅವರಿಲ್ಲ. ಹಾಗಾಗಿ ಅಂತಹವರಿಗೆ ಈ ಪುಸ್ತಕವನ್ನು ಓದಲೂ ಸಾಧ್ಯವಿಲ್ಲವೇನೋ! ಏಕೆಂದರೆ ವಿಜ್ಞಾನದೊಳಗಣ ತಾತ್ವಿಕತೆಯ ದರ್ಶನಕ್ಕೆ ಬೇಕಾದ ತಯಾರಿಯೇ ಅವರಲ್ಲಿ ಇಲ್ಲ. ಆದರೆ ಅಂತಹವರಿಗೂ ಸಹಾ ಇದೊಂದು ವಿಶಿಷ್ಟ ಪ್ರಕಾರದ ಸಿದ್ಧತೆಯನ್ನೂ ನೀಡುತ್ತದೆ. ಅದಕ್ಕೆ ಅವರು ಪರಕಾಯ ಪ್ರವೇಶದಿಂದ ಎಳೆ-ಎಳೆಯಾಗಿ ಗಮನಿಸಬೇಕಾದೀತು. ಸಾರ್ವಜನಿಕರೂ ಸಹಾ ವಿಜ್ಞಾನವನ್ನು ಪರಿಭಾವಿಸುವ ಕ್ರಮವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಕುತೂಹಲಗಳಿಂದ, ಪರಿಕಲ್ಪನೆಗಳಾಚೆಯ ಫಲಿತಗಳು ಅಥವಾ ಪರಿಹಾರದ ಮಾತ್ರಿಕ ಚಿಕಿತ್ಸೆಯಂತೆ ನೋಡುವ ಕ್ರಮದ ವಿಕಾಸವಾಗಿದೆ. ಈ ಎರಡೂ ಮಾದರಿಗಳ ನಡುವೆಯ ಅಗತ್ಯದ ಪರಿಕಲ್ಪನೆಗೆ ಪೀಠಿಕಯಲ್ಲೇ ಪ್ರಸ್ತಾಪಿಸಿ ಜೊನಾಸ್‌ ಸಾಕ್‌ ಅವರು  ಓದುಗರಿಗೆ ತಯಾರು ಮಾಡಿದ್ದಾರೆ. (ಇದೇ ಕಾರಣದಿಂದಲೇ ಕೆಳಗಿರುವ ಅವರ ಈ ಪ್ರಸ್ತಾವನೆಯನ್ನು ಸಿಪಿಯುಸ್‌(CPUS)ನ ವೆಬ್‌ಸೈಟ್‌ ಅನಾವರಣದ ಸಂದರ್ಭದಲ್ಲಿ ಓದಿ ಸಭೆಯನ್ನು ಪ್ರಾರಂಭಿಸಲಾಯಿತು)

ಸತ್ಯ, ವಿಚಾರ, ಮಾಹಿತಿ, ಪ್ರಮಾಣಿತ ಸಂಗತಿ ಹೀಗೆಲ್ಲಾ ಪದಗಳನ್ನು ಬಳಸಿಯೇ ವಿವರಿಸಬೇಕಿರುವ ವಿಜ್ಞಾನದ “ಫ್ಯಾಕ್ಟ್‌” ಎನ್ನುವ ಪದದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಕಾರಣ ಪ್ರಸ್ತುತ ಪುಸ್ತಕದ ಉದ್ದೇಶವೇ ವೈಜ್ಞಾನಿಕ ಫ್ಯಾಕ್ಟ್‌ ಗಳ ರಚನೆ (Construction of Scientific Facts)ಯನ್ನು ಕುರಿತದ್ದಾಗಿದೆ. ಹಾಗಾದರೆ ಇಲ್ಲಿ ಇದರ ಮಹತ್ವ ಏನು? ಹಾಗೂ ಯಾವುದನ್ನಾದರೂ ಮಾದರಿಯಾಗಿಟ್ಟು ಫ್ಯಾಕ್ಟ್‌ ರಚನೆ ಅಥವಾ ಅದರ ವ್ಯಾಖ್ಯಾನದ ಚರ್ಚೆ ಏನು ಎಂಬ ಕುತೂಹಲ ಸಹಜ. ಬ್ರುನೊ ಈ ಪುಸ್ತಕದ ರಚನೆಯ ಹಿಂದೆ ಎರಡು ವರ್ಷಗಳ ಅಧ್ಯಯನವನ್ನು ಸಾಕ್‌ ಜೀವಿ ವಿಜ್ಞಾನ ಸಂಸ್ಥೆಯಲ್ಲಿ ನಡೆಸಿದ್ದರಾದ್ದರಿಂದ ಜೈವಿಕ ವಿಜ್ಞಾನದ ಪ್ರಮುಖ ಫ್ಯಾಕ್ಟ್‌ ಒಂದನ್ನು ಅದರ ಎಲ್ಲಾ ಆಯಾಮಗಳಿಂದಲೂ ವಿವರಿಸಿದ್ದಾರೆ. ಅದಕ್ಕಾಗಿ Thyrotropin Releasing Factor (Hormone) -TRF(H)  ವಿಚಾರವನ್ನು ಬಳಸಿಕೊಂಡಿದ್ದಾರೆ. ಇದೊಂದು ಹಾರ್ಮೋನು ಇದು ನ್ಯೂರಾನ್‌ಗಳಲ್ಲಿ ಉತ್ಪತ್ತಿಯಾಗಿ ಥೈರಾಯ್ಡ್‌ ಅನ್ನು ಪ್ರಚೋಧಿಸುವ ಹಾರ್ಮೋನನ್ನು ಪ್ರಭಾವಿಸುತ್ತದೆ. ಜೊತೆಗೆ ಇದನ್ನು ಚಿಕಿತ್ಸೆಯಲ್ಲಿ ಮಾನವರ ಪ್ರಜ್ಞೆಯ ಸ್ಥಿತಿಯನ್ನು ಉತ್ತಮ ಪಡಿಸಲೂ ಬಳಸುತ್ತಾರೆ. ಇದನ್ನು ಒಂದು ಪ್ರಮಾಣಿತ ಫ್ಯಾಕ್ಟ್‌ ಆಗಿ ಜಾರಿಗೆ ಬರುವಂತಾಗುವ ಐತಿಹಾಸಿಕ ವಿವರಗಳಿಂದ ಮೊದಲಗೊಂಡು, ಅದರ ವಿವಿಧ ಸ್ಟ್ರಾಟೆಜಿಕ್‌ ಚರ್ಚೆಗಳನ್ನೂ ಬಳಸಿ ರಚನೆಯಾಗುವ ವ್ಯಾಖ್ಯಾನವನ್ನು ಬ್ರುನೊ ಕೊಟ್ಟಿದ್ದಾರೆ. ಅಂದರೆ ವಿಜ್ಞಾನದ ಒಂದು ಮಾಹಿತಿಯ/ಸತ್ಯದ ಪರಿಪೂರ್ಣತೆಯು ರಚನೆಯಾಗುವ ಮುಂದೆ ಅದೊಂದು ಮಹತ್ವದ ತಿಳಿವಳಿಕೆಯಾಗುವ ವಿಧಾನವನ್ನು ಅದರ ಸಮಾಜಿಕ ವಿವರಗಳೊಂದಿಗೆ ನೀಡಿದ್ದಾರೆ. ಇದು ತಾತ್ವಿಕ ಸತ್ಯವನ್ನು ಹುಡುಕುವ ದರ್ಶನವು ವಿಜ್ಞಾನಿಗೂ ಮನವರಿಕೆಯಾಗಬೇಕು ಜೊತೆಗೆ ವಿಜ್ಞಾನದ ವಿದ್ಯಾರ್ಥಿಗಳಲ್ಲದವರಿಗೂ ಅಥವಾ ಅದನ್ನು ಕೇವಲ ಪರಿಹಾರವೆಂದು ಆಶಿಸುವ ಸಾಮಾನ್ಯರಿಗೂ ಆದರ ಪೂರ್ವಾಪರಗಳು ತಿಳಿಯಬೇಕು. ಹೀಗೆ ಫ್ಯಾಕ್ಟ್‌ ಮತ್ತು ಮೌಲ್ಯ (ವ್ಯಾಲ್ಯೂ)ಗಳನ್ನು ಪ್ರತ್ಯೇಕಿಸದಂತಹಾ ತಾತ್ವಿಕ ಜಿಜ್ಞಾಸೆಯನ್ನು ಸಾಂಸ್ಕೃತಿಕ ಚಿಂತನೆಯಲ್ಲಿ ಪರಿಭಾವಿಸಿದವರು ಬ್ರುನೊ ಲಾಟುವ್‌.

ಆರಂಭದಲ್ಲಿ ಹೇಳಿದ್ದ  ವ್ಯವಸ್ಥೆಯಿಂದ ಅವ್ಯವಸ್ಥೆಯ ಕಡೆಗೆ (From Order To Disorder) ಪುಸ್ತಕದ ಮುಕ್ತಾಯದ ಸಮಯಕ್ಕೆ ಅವ್ಯಸ್ಥೆಯಿಂದ ವ್ಯವಸ್ಥಿತ ಸತ್ಯವನ್ನು ಸೃಜಿಸುವ ಮಾರ್ಗ (Creation of Order Out of Disorder)ದಲ್ಲಿ ಕೊನೆಯಾಗುತ್ತದೆ. ಅಂದರೆ ವಿಜ್ಞಾನದ ಜಾಗೃತ ಸ್ಥಿತಿಯು ಕೊಡಬೇಕಾದ ಅನಿವಾರ್ಯದ ಮಹತ್ವವನ್ನು ತಿಳಿವಾಗಿಸುತ್ತದೆ. ಇಲ್ಲಿಯೇ ಕೇವಲ ವೃತ್ತಿಯ ಸಮಜಾಯಿಸಿಯ ವಿಜ್ಞಾನಿಗಳು ಕಷ್ಟವನ್ನು ಅನುಭವಿಸುವುದು. ತಾತ್ವಿಕ ಜಿಜ್ಞಾಸೆಯ ಅರಿವು ಇಲ್ಲದೆಯೇ ವಿಜ್ಞಾನವನ್ನು ಜೀವನ ನಿಭಾಯಿಸುವ ಮಾರ್ಗೋಪಾಯವಾಗಿ ಉಳ್ಳವರು ಅಥವಾ ವಿಜ್ಞಾನಕ್ಕಿರುವ ತಾತ್ವಿಕ ಜಿಜ್ಞಾಸೆಯು ಕೊಡಬಹುದಾದ ಗರ್ವವನ್ನು ಮುಂದಿಟ್ಟುಕೊಂಡವರೂ ಹೆಚ್ಚಾಗಿದ್ದಾರೆ. ಆದ್ದರಿಂದ ಇವೆರಡರ ಅರಿವೂ ಅನುಭವದಲ್ಲಿ ಇಲ್ಲದವರಿಗೆ ವಿಜ್ಞಾನವು ಅಹಂಕಾರವಾಗಿಯೂ ಕಂಡೀತು.

ಅದಕ್ಕೇ ಪುಸ್ತಕಕ್ಕೆ ಪೀಠಿಕೆಯನ್ನು ಕೊಟ್ಟ ಜೊನಾಸ್‌ ಸಾಕ್‌ ಅವರೇ “ಪುಸ್ತಕದ ಎಲ್ಲಾ ವಿವರಗಳನ್ನೂ ಒಪ್ಪದಿದ್ದರೂ ಸಹಾ ಅಥವಾ ಕೆಲವೊಂದು ಭಾಗದಲ್ಲಿ ತುಸು ನೋವು/ಹೊಂದಿಕೆಯಾಗದ ವಿಚಾರಗಳನ್ನು ಅನುಭವಿಸಿದರೂ ಕೂಡ, ವಿಜ್ಞಾನದ ಕೆಲಸದ ಬಗ್ಗೆ ಇರುವ ರಹಸ್ಯವನ್ನು ಹೊರಹಾಕುವ ಸೂಕ್ತ ಮಾರ್ಗವನ್ನು ಈ ಪುಸ್ತಕವು ಕೊಟ್ಟಿದೆ (Even if we do not agree with the details of this book, or if we find it slightly uncomfortable or even painful in places, the present work seems to me to be a step in the right direction toward dissipating the mystery that is believed to surround our activity) ಎಂದು ಅಭಿಪ್ರಾಯ ಪಡುತ್ತಾರೆ. (ಅಕ್ಟೋಬರ್‌ 28 ರಂದು ಜೊನಾಸ್‌ ಸಾಕ್‌ ಅವರ ಜನ್ಮ ದಿನ, ಮುಂದಿನ ವಾರ  ಪೋಲಿಯೊ ವ್ಯಾಕ್ಸೀನ್‌ ಕಂಡುಹಿಡಿದು ಅದನ್ನು ಪೇಟೆಂಟ್‌ ಮಾಡದ ಅಪರೂಪದ ವಿಜ್ಞಾನಿಯಾದ ಅವರನ್ನು ಕುರಿತು ಇದೇ ಪುಟಗಳಲ್ಲಿ ಓದಬಹುದು)

       ವಿಜ್ಞಾನಿಗಳ ಹಾಗೂ ವಿಜ್ಞಾನದ ಸಂಸ್ಕೃತಿಗೆ ಮಾನವಿಕ ವಿಜ್ಞಾನದ ವಿಧಾನದಿಂದ ವಿಮರ್ಶಾತ್ಮಕವಾಗಿ ಅಲ್ಲಿನ ಕೆಲಸಗಳನ್ನು ಚಿತ್ರಿಸುತ್ತಾ ಲೇಖಕರು ಪ್ರಯೋಗಾಲಯದ ಸಾಮಾಜಿಕ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ. ಸಾರ್ವಜನಿಕ ತಿಳಿವಿಗೆ ವಿಜ್ಞಾನವು ನಿಗೂಢ ಎನ್ನಿಸುವ ಜನಸಾಮಾನ್ಯರಿಗೂ ಹಾಗೂ ತಾತ್ವಿಕ ಜಿಜ್ಞಾಸೆಯ ಅರಿವಿಲ್ಲದೆ ಕೇವಲ ವೃತ್ತಿಯ ಹಿತದಿಂದ ಅಷ್ಟೇ ವಿಜ್ಞಾನವನ್ನು ಅನುಭವಿಸುವ ವಿಜ್ಞಾನಿಗಳಿಗೂ  “ಲ್ಯಾಬೊರೇಟರಿ ಲೈಫ್‌” ಹೊಸತೊಂದು ಜಗತ್ತನ್ನು ತೆರೆದಿಡುತ್ತದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

Leave a Reply