ಬ್ಯಾಟ್ ಮನ್ (Batman) ಒಂದು ಕಾಲ್ಪನಿಕ ಪಾತ್ರವಾಗಿ ಸೃಷ್ಟಿಗೊಂಡು ಸುಮಾರು 80 ವರ್ಷಗಳು ಕಳೆದಿವೆ. ಬ್ಯಾಟ್-ಬಾವಲಿ-ಗಳಿಗೆ ಹೆದರುವ ವ್ಯಕ್ತಿ, ಅದರಿಂದ ಹೊರಬರಲು ತಾನೇ ಬಾವಲಿಯಾಗುವ ಕಲ್ಪನೆಯಿಂದ ಸೃಷ್ಟಿಸಿದ ಪಾತ್ರವು ವಿವಿಧತೆಗಳಿಂದ ರೂಪುಗೊಳ್ಳುತ್ತಾ ಸರಿ ಸುಮಾರು ಎಂಟು ದಶಕಗಳ ಕಾಲ ಕಾಮಿಕ್ ಪುಸ್ತಕ, ರೇಡಿಯೊ, ಟೆಲಿವಿಷನ್, ಚಲನಚಿತ್ರಗಳು ಮುಂತಾದ ಎಲ್ಲಾ ಮಾಧ್ಯಮಗಳನ್ನೂ ಆವರಿಸಿ ಜಾಗತಿಕ ದಾಖಲೆಯನ್ನು ಸೃಷ್ಟಿಸಿದೆ. ಕಾಲ್ಪನಿಕತೆಯ ಹಿಂದೆ ಮಾನವಕುಲದ ಬಯಕೆಯಲ್ಲಿ ಬಾವುಲಿಗಳಿಂದ ಪಡೆವ(ಕಲಿಯುವ) ತಿಳಿವು ಮುಂದೊಂದು ದಿನದ ವಾಸ್ತವದ ಹಿತವನ್ನೂ ಒಳಗೊಂಡಿದೆಯಾ ಎಂಬುದೀಗ ಕರೋನ ಕಾಲದಲ್ಲಿ ಚರ್ಚಿಸಬೇಕಾದ ವಿಚಾರವಾಗಿದೆ. ಏಕೆಂದರೆ ಬ್ಯಾಟ್‌ಗಳಲ್ಲಿ ನೆಲೆಯನ್ನು ಪಡೆದಿರುವ ಕೊರೊನ ವೈರಸ್ಸುಗಳಿಂದಾಗಿ ಅವುಗಳಿಗೆ ಇಡೀ ಜಗತ್ತೇ ಹೆದರಿದ ಸಂದರ್ಭದಲ್ಲಿ ಈಗ ಅಂತಹಾ ಮಾರಣಾಂತಿಕ ವೈರಸ್ಸುಗಳನ್ನು ತನ್ನೊಳಗೇ ಇಟ್ಟುಕೊಂಡೂ, ಸಹಜವಾಗಿ ಬದುಕು ನೀಗುತ್ತಿರುವ ಬಾವುಲಿಗಳಿಂದ ಅದು ಹೇಗೆ ಸಾಧ್ಯ? ಎಂಬುದರ ಪಾಠಗಳನ್ನು ಮಾನವ ಕುಲವು ಕಲಿತು ಅದರಂತೆಯೆ ಸಹಜವಾಗಿ ಬದುಕುವ ಬಯಕೆಯ ಕಾಲ ಬಂದಿದೆ. ಅಂತಹಾ ಪಾಠಗಳನ್ನು ಬಾವಲಿಗಳಿಂದ ಅರಿಯಬೇಕಿದೆ ಎನ್ನುವ ವಿಚಾರಗಳ ಸಂಶೋಧನಾ ಪರಾಮರ್ಶನ ಲೇಖನವೊಂದನ್ನು ಇದೇ ವರ್ಷ 2021ರ ಜನವರಿ 21ರಂದು ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” ಪ್ರಕಟಿಸಿದೆ.
ಬ್ಯಾಟ್‌ಮನ್ ಅನ್ನು ಸೂಪರ್‌ಮನ್ ಆಗಿಸಿ ಕಾಲ್ಪನಿಕವಾಗಿಯಾದರೂ ಸೃಷ್ಟಿಸಿದ್ದ ಕಥನವಲ್ಲದೆ, ಸಸ್ತನಿಗಳಲ್ಲೇ ವಿಶೇಷತೆಯೊಂದನ್ನು ಸಾಧಿಸಿ ಸೂಪರ್ ಸಸ್ತನಿಯಾದ ಬ್ಯಾಟ್ ಅಥವಾ ಬಾವಲಿಗಳ ಬದುಕಿನಿಂದ ಪಡೆದುಕೊಳ್ಳಬೇಕಾದ ವಿಚಾರಗಳ ಅನುಶೋಧ ಅಂತರರಾಷ್ಟ್ರೀಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಕಳೆದ 2020ರ ಕೊರೊನಾದಿಂದ ಜಗದ್ವ್ಯಾಪಿಯಾಗಿ ಮಾನವ ಸಂತತಿಯನ್ನು ಕಾಡಿದ ಕೊವಿಡ್-2019 ವೈರಸ್ಸನ್ನೂ ಅಲ್ಲದೆ ಇನ್ನೂ ನೂರಾರು ವೈರಸ್ಸುಗಳನ್ನು ತಮ್ಮೊಳಗೇ ಇಟ್ಟುಕೊಂಡೂ ಸುಖವಾಗಿರುವ ಬಾವಲಿಗಳು ಬದುಕಿನಲ್ಲಿ ವೈರಸ್ಸುಗಳೇ ಅಲ್ಲದೆ, ರೋಗ-ರುಜಿನಗಳಿಂದ ಮುಕ್ತವಾಗಲು ಪಡೆದ ಸ್ಪೂರ್ತಿಯ ವಿಷಯಗಳು ಇಲ್ಲಿವೆ. ಬಾವಲಿಗಳಲ್ಲಿ ಇಂತಹಾ ವೈಚಿತ್ರದ ಬದುಕಾದರೂ ಹೇಗೆ? ಮಾನವನ ದೇಹ ಮತ್ತು ಬಾವಲಿಗಳ ದೇಹದಲ್ಲಿ ವೈರಸ್ಸುಗಳ ಕಾರ್ಯವೈಖರಿಯ ತುಲಾನಾತ್ಮಕ ಶೋಧಗಳ ವಿವರಗಳನ್ನು ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” ಪ್ರಕಟಿಸಿದೆ. ಇದರ ವಿವರಗಳಿಗೆ ಹೋಗುವ ಮುನ್ನ, ಕಾಲ್ಪನಿಕವಾದರೂ, ಸರಿಯೇ ಬ್ಯಾಟ್‌ಮನ್‌ಗೆ ಸ್ಪೂರ್ತಿಯಾದ ಹಿನ್ನೆಲೆಯಾದರೂ ಏನು? ಎಂಬುದರಿಂದಲೇ ಆರಂಭಿಸೋಣ.
ಭೂಮಿಯನ್ನು ಆವರಿಸಿರುವ 6400 ಒಟ್ಟು ಸಸ್ತನಿಗಳಲ್ಲಿ, ಬ್ಯಾಟ್-ಬಾವಲಿಗಳ ಸಂಖ್ಯೆಯೇ 1423ರಷ್ಟಿದೆ. ಅಂದಂತೆ ಪ್ರತಿಶತ 22ಕ್ಕೂ ಹೆಚ್ಚು ಸಸ್ತನಿಗಳು ಬಾವಲಿಗಳೇ! ಜೀವಿವಿಕಾಸದ ಶಿಖರದಲ್ಲಿರುವ ಅತ್ಯಂತ ಸಂಕೀರ್ಣವಾದ ಕೋಶ-ವ್ಯವಸ್ಥೆಯ ಮಾನವ ಸಂತತಿಯನ್ನು ಮಾರಣಾಂತಿಕವಾಗಿ ಕಾಡುವ ವೈರಸ್ಸುಗಳಲ್ಲದೆ ವಿವಿಧ ವೈರಸ್ಸುಗಳ ಸಂಗ್ರಹಾರವಾಗಿರುವ ಈ ಬಾವಲಿಗಳ ಪ್ರತಿರೋಧ ವ್ಯವಸ್ಥೆಯು ಎಂತಹದು? ಅವುಗಳಿಂದ ಕಲಿಯಬಹುದಾದ ಪಾಠವೇನು? ಎಂದೇ ಅನುಶೋಧವನ್ನು ಪ್ರಕಟಿಸಿರುವ ವಿಖ್ಯಾತ ಪತ್ರಿಕೆ ಬಹುದೊಡ್ಡ ಪಾಠವನ್ನೆ ತೆರೆದಿಟ್ಟಿದೆ. ಸದ್ಯಕ್ಕಂತೂ ಅಂದರೆ 2019ರ ಸಣ್ಣ ಕೆಮ್ಮು ಶೀತದಂತಹಾ ಕಾಯಿಲೆಯಿಂದ ಲಕ್ಷಾಂತರ ಮರಣವನ್ನು ಅನುಭವಿಸಿದ ಮಾನವಕುಲವು ಈ ಬಾವಲಿಗಳಲ್ಲಿರುವ ವೈರಸ್ಸುಗಳಿಂದ ಭಯಮುಕ್ತವಾಗಲು, ಕಾಲ್ಪನಿಕವಾಗಿ ವಿಶೇಷತೆಯನ್ನು ತುಸು ಭಿನ್ನವಾಗಿಸಿ ಸೃಷ್ಟಿಸಿದ್ದ “ಬ್ಯಾಟ್ ಮನ್-ಎಂಬ- ಸೂಪರ್ ಹೀರೋ” ಆಗಿ ಸಂಭ್ರಮಿಸಿದ್ದು 1939ರಷ್ಟು ಹಿಂದೆ!
ಈ ಬ್ಯಾಟ್‌ಮನ್‌ನ ಕಾಲ್ಪನಿಕ ಪಾತ್ರದ ಸೃಷ್ಟಿಯ ಕಲಾವಿದರು ಬಾಬ್ ಕೇನ್(Bob Kane) ಮತ್ತು ಬಿಲ್ ಫಿಂಜರ್(Bill Finger) ಎಂದೇ ಖ್ಯಾತರಾದ ರಾಬರ್ಟ್ ಕೇನ್ (Robert Kane) ಮತ್ತು ಮಿಲ್ಟನ್ ಫಿಂಜರ್ (Milton Finger). ಡಿಟೆಕ್ಟಿವ್ ಕಾಮಿಕ್ಸ್ (Detective Comics) ಎಂಬ ಪತ್ರಿಕೆಯ 1939ನೆಯ ಮೇ ತಿಂಗಳ ಸಂಚಿಕೆಯ ಮುಖಪುಟದಲ್ಲಿ “ಬ್ಯಾಟ್ ಮನ್” ಪ್ರಕಟವಾಗುವ ಮೂಲಕ ಮೊಟ್ಟ ಮೊದಲ ಸೂಪರ್ ಹೀರೋ-ಬ್ಯಾಟ್‌ಮನ್ ಅನಾವರಣವಾಯಿತು. ಬಾವಲಿಗಳಿಗೆ ಹೆದರುವ ಹುಡುಗನೊಬ್ಬ, ಭಯದಿಂದ ಮುಕ್ತನಾಗಲು ತಾನೇ ಬಾವಲಿಯಂತಾಗಿ, ತನ್ನ ಶತ್ರುಗಳನ್ನು ಹೆದರಿಸಲು ಬಯಸುವ ಕಲ್ಪನೆಯಾಗಿತ್ತು. ಮುಂದೆ ವಿವಿಧ ಬಗೆಗಳಲ್ಲಿ ಬ್ಯಾಟ್‌ಮನ್ ವಿಸ್ತಾರಗೊಂಡು ಮುಂದಿನ ವರ್ಷಗಳಲ್ಲಿ 1943ರಿಂದ 2021ರನಡುವೆ ಸುಮಾರು 17 ಚಲನಚಿತ್ರಗಳು ಹಾಗೂ 60ರದಶಕದಿಂದ ಇಲ್ಲಿಯವರೆಗೂ 16 ಟಿವಿ ಸೀರಿಯಲ್ಲುಗಳಾಗಿ ಈಗ ಬದುಕು ಸಾಗಿಸುತ್ತಿರುವವರ ಬಹುಪಾಲು ಜನರ ಮನಸ್ಸಿನಲ್ಲಿ ಉಳಿದಿದ್ದಾನೆ. ಕ್ರಿಸ್ಟೋಫರ್ ನೊಲಾನ್ ಅವರಂತಹಾ ಹೆಸರಾಂತ ಚಲನಚಿತ್ರ ನಿರ್ದೇಶಕರೂ ಬ್ಯಾಟ್‌ಮನ್‌ಗೆ ಮನಸೋತವರೇ!
ಬ್ಯಾಟ್‌ಮನ್ ಕಥನವು ಜಗತ್ತಿನ ಅನೇಕರಲ್ಲಿ ಮತ್ತು ಬಹುಪಾಲು ಮಕ್ಕಳಲ್ಲಿ ಬ್ಯಾಟ್‌ಮನ್ ಆಗುವ ಕಲ್ಪನೆಯನ್ನೂ ಬಿತ್ತಿದೆ. ಈ ಸೂಪರ್ ಹೀರೋ ಬ್ಯಾಟ್‌ಮನ್ ಕೇವಲ ಕಲ್ಪನೆಯಷ್ಟೇ ಅಲ್ಲದೆ ಇದೀಗ ವಾಸ್ತವವಾಗಿ ನೈಜತೆಯ ಆಚೀಚೆ ವಿಹರಿಸುವಂತೆ ಕೊರೊನಾ ಮುಕ್ತರಾಗಿ ಹೀರೋ ಆಗಲು ಬ್ಯಾಟ್-ಬಾವಲಿಗಳಿಂದ ಪಾಠವನ್ನು ಪಡೆದು ವಿಜಯಿಸಬೇಕಿದೆಯೇನೋ? ಹಾಗಾದರೆ ಆ ಪಾಠಗಳಲ್ಲಿ ಅಂತಹಾದ್ದೇನಿದೆ ಎಂಬುದನ್ನೇ “ನೇಚರ್” ಪತ್ರಿಕೆಯ ಸಂಶೋಧನಾ ಲೇಖನದ ತಿಳಿವಿನಿಂದಲೇ ನೋಡೋಣ.
ಕಳೆದ ಡಿಸೆಂಬರ್ 21, 2020ರಲ್ಲಿದ್ದಂತೆ ಕರೋನಾ ವೈರಸ್ಸಿನ ಸೋಂಕಿಗೆ ಒಳಗಾದವರ ಒಟ್ಟು ಜನಸಂಖ್ಯೆ 75,704,857 ಅವರಲ್ಲಿ ಉಸಿರಾಟದ ಸಮಸ್ಯೆಗೆ ಒಳಗಾಗಿ ಮರಣಹೊಂದಿದವರ ಸಂಖ್ಯೆ 1,690,061 ಇದಕ್ಕೆ ಕಾರಣವಾದ SARS-CoV-2 ವೈರಸ್ಸು ಬಾವಲಿಯ ಕೊರೊನಾ ವೈರಸ್ಸನ್ನೇ ಹೋಲುತ್ತದೆ. ಹೀಗೆ ಬಾವಲಿಯಿಂದ ಮಾನವರಿಗೆ ಬರಬಹುದಾದ ಈ ಸೋಂಕು ಮುಂಚಿತವಾಗಿಯೇ ಊಹಿಸಿದ್ದು ಮಾತ್ರವಲ್ಲದೆ, ಬಂದೇ ಬರುತ್ತದೆ ಎಂಬ ಸುಳಿವೂ ಇತ್ತು. ಅದರ ಕುರಿತ ಚರ್ಚೆಗಳೀಗ ಮುಖ್ಯವೇನಲ್ಲ. ಏಕೆಂದರೆ, ಮಾನವರ ಅವಿವೇಕದಿಂದಾಗಿ ನೈಸರ್ಗಿಕ ಜೀವಿಸಮುದಾಯಗಳ ಒಳಹೊಕ್ಕು ಆವಾಸಸ್ಥಳಗಳ ಆಕ್ರಮಿಸಿ ವಿನಾಃ ಕಾರಣ ತೊಂದರೆಯನ್ನು ಮೈಮೇಲೆ ಎಳೆದುಕೊಂಡದ್ದು ಎಂಬುದೀಗ ಹೊಸ ಸಂಗತಿಯಲ್ಲ. ಈ ಹಿಂದಿನ SARS-CoV ವೈರಸ್ಸು (2003) ಮತ್ತು MERS-CoV-2ವೈರಸ್ಸು (2012), ಅಲ್ಲದೆ ಎಬೊಲಾ ವೈರಸ್ಸು ಕೂಡ ಬಾವಲಿಗಳಲ್ಲಿ ಆಶ್ರಯ ಪಡೆದಿದೆ. ಇಷ್ಟೆಲ್ಲಾ ಅಲ್ಲದೆ ಇನ್ನೂ ನೂರಾರು ವೈರಸ್ಸುಗಳ ಸಂಗ್ರಾಹಕವಾಗಿರುವ ಬಾವಲಿಯು ಇವುಗಳಿಂದ ತೊಂದರೆಗೆ ಒಳಗಾಗದೆ ಬದುಕಿರುವುದಾದರೂ ಹೇಗೆ? ಇವುಗಳನ್ನು ಪ್ರತಿರೋಧಿಸಿ ರೋಗದಿಂದ ತಡೆದುಕೊಳ್ಳಲು ಬಾವಲಿಗಳ ರಕ್ಷಣಾವ್ಯವಸ್ಥೆ ಎಂತಹದಿದ್ದೀತು? ಅವುಗಳಿಂದ ಕಲಿತು ನಾವು- ಮಾನವರು ಕರೋನಾದಂತಹಾ ಅಥವಾ ಮತ್ತೂ ಕಾಡಬಹುದಾದ ಮತ್ತಿತರೇ ಕಾಯಿಲೆಗಳಿಂದ ಗೆಲ್ಲಲಾದೀತೇ? ಇವೆಲ್ಲವೂ ನಾವೂ ಬಾವಲಿಗಳಂತೆ “ವೈರಸ್ಸುಗಳನ್ನು ಗೆಲ್ಲುವ “ಬ್ಯಾಟ್”ಮನ್‌ಗಳಾಗುವ ವಾಸ್ತವಿಕ ಬಯಕೆಯ ಇಂದಿನ ವಿಚಾರ.
ಪ್ರಸ್ತುತ ಲೇಖನದ ಸ್ಪೂರ್ತಿಯಾದ “ನೇಚರ್” ಪತ್ರಿಕೆಯ ವೈಜ್ಞಾನಿಕ ಸಂಶೋಧನೆಗಳ ಪರಾಮರ್ಶನ ಲೇಖನವು ಸುಮಾರು 160 ಸಂಶೋಧನಾ ಬರಹಗಳ ಸಾರವನ್ನು ಒಳಗೊಂಡಿದೆ. ಅಷ್ಟೊಂದು ಅಖಂಡವಾದ ಇಡೀ ಲೇಖನವು ಬಾವಲಿಗಳಿಂದ ಕಲಿಯಬಹುದಾದ ಪಾಠಗಳನ್ನು ಪಡೆಯಲೆಂದೇ ಎಲ್ಲಾ ಲೇಖನಗಳನ್ನೂ ವಿಶ್ಲೇಷಿಸಿದೆ. ಮಾನವ ದೇಹವನ್ನು ಬಾವಲಿಗಳ ದೇಹದ ಚಟುವಟಿಕೆಗೆಳಿಗೆ ಸಮೀಕರಿಸಿ ಅರ್ಥೈಸಿಕೊಳ್ಳುವುದರ ಮೂಲಕ ಇವುಗಳನ್ನು ತಿಳಿಯಲು ಯತ್ನಿಸಿದೆ. ಬಾವುಲಿಗಳ ಜೈವಿಕ ವಿಶೇಷಗಳಿಂದಲೇ ಆರಂಭಿಸೋಣ.
ಬಾವಲಿಗಳ ಜೀವಿವಿಜ್ಞಾನ ಸಂಗತಿಗಳು
ಸಸ್ತನಿಗಳ ಲೋಕದ ಒಟ್ಟು ಪ್ರಭೇದಗಳಲ್ಲಿ ಬಾವಲಿಗಳ ಸಂಖ್ಯೆಯೇ ದೊಡ್ಡದು. ಹಾಗಾಗಿ ಅವುಗಳ ವಿವಿಧತೆಯೇ ಅಪಾರ. ಪ್ರತಿಶತ 22ಕ್ಕಿಂತಲೂ ಹೆಚ್ಚಿರುವ ಬಾವಲಿಗಳು ಆವಾಸ ವೈವಿಧ್ಯದಲ್ಲೂ ಹೆಚ್ಚಿನ ಹರಹನ್ನು ಹೊಂದಿವೆ. ಧ್ರುವ ಪ್ರದೇಶಗಳಲ್ಲೂ, ಮರಭೂಮಿಯಲ್ಲೂ, ಎಲ್ಲೋ ಕೆಲವು ಸಾಗರಗಳ ಮಧ್ಯದ ದ್ವೀಪಗಳನ್ನು ಹೊರತುಪಡಿಸಿ ಎಲ್ಲಾ ಖಂಡಗಳಲ್ಲೂ ಜೀವಿಸಿವೆ. ಅವುಗಳ ಗಾತ್ರಗಳಲ್ಲೂ ಸಾಕಷ್ಟು ವಿವಿಧತೆಯಿದೆ. ಅವುಗಳ ದೇಹದ ಉದ್ದವು ಕೇವಲ 30ಮಿ.ಮೀಗಳಿಂದ ಒಂದೂಮುಕ್ಕಾಲು ಅಡಿಗಳವರೆಗೂ ಇರುತ್ತವೆ. ತೂಕದಲ್ಲೂ 2ಗ್ರಾಂನಿಂದ ಒಂದೂವರೆ ಕಿಲೋ ಭಾರವಿರುವ 6-8 ಅಡಿ ರೆಕ್ಕೆಗಳ ಅಗಲಿಸಬಲ್ಲ ಬಾವಲಿಗಳಿವೆ. ಬಾವಲಿಗಳನ್ನು ನಂಬಿಕೊಂಡು ಅನೇಕ ಸಸ್ಯವರ್ಗ ಹಾಗೂ ಪ್ರಾಣಿವರ್ಗವು ನೆಲೆಗಳನ್ನು ಕಂಡುಕೊಂಡಿವೆ. ವಿವಿಧ ಸಸ್ಯಗಳು ಪರಾಗಸ್ಪರ್ಶ ಹಾಗೂ ಬೀಜ ಪ್ರಸಾರಗೊಳ್ಳುವ ಕ್ರಿಯೆಗಳಿಗೆ ಬಾವುಲಿಗಳನ್ನೇ ನೆಚ್ಚಿಕೊಂಡಿವೆ. ಅನೇಕ ಉಪದ್ರವಿ ಕೀಟಗಳನ್ನೂ ತಿನ್ನುವ ಬಾವುಲಿಗಳು ಅವುಗಳಿಂದಲೂ ಸಸ್ಯಗಳಿಗೆ ರಕ್ಷಣೆಯನ್ನು ಒದಗಿಸಿವೆ. ಒಂದು ಎಲೆಯಲ್ಲಿ ಬದುಕುವುದರಿಂದ ಆರಂಭಿಸಿ, ಗುಹೆಗಳಲ್ಲಿ, ಮರದ ಪೊಟರೆಗಳಲ್ಲಿ, ಸೇತುವೆಗಳಲ್ಲಿ ಹೀಗೆ ಬಗೆಯ ಬಗೆಯ ನೆಲೆಯನ್ನು ಆಶ್ರಯಿಸಿ ಬದುಕುತ್ತವೆ. ಅಷ್ಟೇ ಅಲ್ಲ! ಅವುಗಳ ಸಂತಾನೋತ್ಪತ್ತಿಯ ವಿಧಾನಗಳಲ್ಲೂ ವಿವಿಧತೆಯನ್ನು ಸಾಧಿಸಿವೆ. ವೀರ್ಯವನ್ನು ಸಂಗ್ರಿಹಿಸಿಟ್ಟುಕೊಳ್ಳುವ, ಗರ್ಭವನ್ನು ದೀರ್ಘಕಾಲ ಉಳಿಸಿಕೊಳ್ಳುವ ಬಾವುಲಿಗಳೂ ಇವೆ. ಆಹಾರವೂ ಅಷ್ಟೇ ವೈವಿಧ್ಯ. ಮಕರಂದ, ಹೂವು, ಪರಾಗ, ಕೀಟಗಳು, ಹಣ್ಣು, ಮೀನು ತಿನ್ನುವುದಲ್ಲದೇ ರಕ್ತವನ್ನೂ ಹೀರುವ ಬಾವಲಿಗಳಿವೆ. ಉತ್ತರ-ದಕ್ಷಿಣ ಧ್ರುವಗಳನ್ನೂ ಗುರುತಿಸಬಲ್ಲ ತಿಳಿವೂ ಬಾವಲಿಗಳಿಗಿವೆ. ಅವುಗಳ ಇಕಾಲಜಿ, ದೇಹ ರಚನೆ, ಶರೀರ ಕ್ರಿಯೆ ಎಲ್ಲವೂ ವಿವಿಧತೆ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿವೆ.
ಬಾವಲಿಗಳು ಹಾರಾಟವು ವಿಶೇಷವಾದದ್ದು. ವಿಪರೀತ ಶಕ್ತಿಯನ್ನು ಬಯಸುವ ಕಾರ್ಯ. ಹಾಗೆಂದೇ ಬಾವಲಿಗಳ ವಿಶೇಷವಾದ ಚಯಾಪಚಯಗಳ ಕ್ರಿಯೆಯು ಸಾಕಷ್ಟು ಜೈವಿಕ ವಿವರಗಳನ್ನು ಒಳಗೊಂಡಿವೆ. ಇವೆಲ್ಲವುಗಳ ವಿವರಗಳೇನೂ ಇಲ್ಲದೆಯೂ ಕೇವಲ ಕಲ್ಪನೆಯಲ್ಲಿ ಅರಳಿದ “ಬ್ಯಾಟ್‌ಮನ್” ಪಾತ್ರದಲ್ಲೂ ಆತನ ಹಾರಾಟವು ಪ್ರಾಮುಖ್ಯತೆಯನ್ನು ಪಡೆದದ್ದು ನಿಜಕ್ಕೂ ವಿಶೇಷ! ಹಾರಾಟದ ವೈಚಿತ್ರ್ಯವು ರೂಪಕವಾಗಿ ಬ್ಯಾಟ್‌ಮನ್ ಅನ್ನು ಸೂಪರ್‌ಹೀರೋ ಆಗಿಸಿದೆ. ಸಾಮಾನ್ಯ ನೋಟದಲ್ಲೂ ವಾಸ್ತವವಾಗಿ ಬಾವಲಿಗಳ ಶರೀರಕ್ರಿಯೆಯು ಹಾರಾಟಕ್ಕೆಂತಲೇ ವಿಶೇಷವಾಗಿ ವಿಕಾಸಗೊಂಡಿದೆ. ಬಾವಲಿಗಳು ಹಾರುವಾಗ ತಮ್ಮದೇ ಗಾತ್ರದ ನೆಲದ ಆವಾಸಿ ಸಸ್ತನಿಗಿಂತಾ ಸುಮಾರು 3ಪಟ್ಟು ಹೆಚ್ಚಿನ ಶರೀರಕ್ರಿಯೆಯ ಒತ್ತಡದಲ್ಲಿರುತ್ತದೆ. ಅವುಗಳ ಹಾರಾಟ ವಿಪರೀತ ಶಕ್ತಿಯನ್ನು ಬಯಸುತ್ತವೆ. ಹಾಗಾಗಿ ಮಕರಂದವನ್ನು ಹೀರುವ ಬಾವಲಿಗಳು ಕೇವಲ 8ನಿಮಿಷಗಳಲ್ಲಿ ತಾವು ಸೇವಿಸಿದ ಸಕ್ಕರೆಯನ್ನು ಜೀರ್ಣಿಸಬಲ್ಲವು. ಹಾರುವ ಬಾವಲಿಗಳು ಪ್ರತಿ ಗಂಟೆಗೆ 1200 ಕ್ಯಾಲೊರಿಗಳಷ್ಟು ಶಕ್ತಿಯನ್ನು ವ್ಯಯಿಸಬಲ್ಲವು. ಇಷ್ಟೊಂದು ಅಗಾಧ ಶಕ್ತಿಯ ಗಳಿಕೆ ಮತ್ತು ವ್ಯಯ ಎರಡನ್ನೂ ನಿಭಾಯಿಸಲು ಹೃದಯದ ಕಾರ್ಯಗಳಿಂದ ಕೆಲವು ಮಾರ್ಪಾಡುಗಳು ಬಾವಲಿಗಳಲ್ಲಿ ವಿಕಾಸವಾಗಿವೆ. ಹಾರಾಡುವಾಗ ತಮ್ಮದೇ ಗಾತ್ರದ ನೆಲದ ಸಸ್ತನಿಗೆ ಹೋಲಿಸಿದಂತೆ ಸುಮಾರು 3-5 ಪಟ್ಟು ಹೆಚ್ಚಿನ ಹೃದಯ ಬಡಿತವನ್ನು ನಡೆಸುತ್ತವೆ. ಪ್ರತಿನಿಮಿಷಕ್ಕೆ 1,066 ಬಾರಿ ಹೃದಯದ ಬಡಿತವನ್ನು ಹೊಂದಿರುವುದುಂಟು. ಇಷ್ಟೆಲ್ಲಾ ಹೆಚ್ಚಿನ ಶರೀರ ಕ್ರಿಯೆಯನ್ನೂ ವಿಶ್ರಾಂತಿಯಲ್ಲಿ ನಿಧಾನವಾಗಿಸಿ ಸರಿದೂಗಿಸಬಲ್ಲ ವ್ಯವಧಾನವನ್ನೂ ಬಾವಲಿಗಳು ನಿಭಾಯಿಸುತ್ತವೆ. ಇಷ್ಟೆಲ್ಲದರ ಜೊತೆಗೆ ಬಾವಲಿಗಳು ದೀರ್ಘಾಯುಷಿಗಳಾಗಿವೆ. ಒಟ್ಟಾರೆ ಪ್ರಭೇದದ ಸಂತತಿಗಳನ್ನು ಗಾತ್ರಗಳಿಂದ ಮಾನವ ಗಾತ್ರಕ್ಕೆ ಸಮೀಕರಿಸಿ ಜೀವನದ ಕಾಲವನ್ನು ನೋಡಿದರೆ ಸುಮಾರು 19 ಸಸ್ತನಿಗಳ ಪ್ರಭೇದಗಳು ಮಾನವನಿಗಿಂತಾ ಹೆಚ್ಚು ಆಯುಷ್ಯನ್ನು ಹೊಂದಿದ್ದರೆ, ಅವುಗಳಲ್ಲಿ 18 ಬಾವಲಿಗಳೇ ಆಗಿವೆ. ಹೀಗೆ ದೀರ್ಘಾಯುಷ್ಯದ ಗುಟ್ಟನ್ನು ಸಸ್ತನಿಗಳಲ್ಲಿ ಬಾವಲಿಗಳು ವಿಶೇಷವಾಗಿ ಹೊಂದಿರುವುದು ಮಾನವ ಕುಲಕ್ಕೆ ಅವುಗಳಿಂದ ಸಿಗಬಲ್ಲ ವಿಶಿಷ್ಟ ಸಂಗತಿಯಾಗಿದೆ. ಇದಕ್ಕಿರುವ ಬಹುಮುಖ್ಯ ಕುತೂಹಲ ಮಾರಣಾಂತಿಕವಾದ ಸಾವಿರಾರು ವೈರಸ್ಸುಗಳನ್ನು ತಮ್ಮೊಳಗಿಟ್ಟಿಕೊಂಡೇ ಅವುಗಳ ತೊಂದರೆಗಳನ್ನು ಪ್ರತಿರೋಧಿಸುತ್ತಿರುವ ವಿಚಾರವಾಗಿದೆ.
ವೈರಸ್ಸುಗಳ ಸಂಗ್ರಹಾಗಾರವಾಗಿರುವ ಬಾವಲಿಗಳ ಗುಟ್ಟೇನು?
ಬಾವಲಿಗಳು ಸಾಂಕ್ರಾಮಿಕ ರೋಗಕಾರಕಗಳನ್ನು ಹೊತ್ತು ಹಾರಾಡುತ್ತಿರುವುದು ಹೊಸತೇನಲ್ಲ. ಶತಮಾನದ ಇತಿಹಾಸವಿರುವ ಬಾವಲಿ ಮತ್ತು ವೈರಸ್ಸಿನ ಸಹಯೋಗ, ಮೊಟ್ಟ ಮೊದಲು ತಿಳಿದದ್ದು 1909ರಷ್ಟು ಹಿಂದೆ. ಹುಚ್ಚುನಾಯಿ ಅಥವಾ ರೇಬೀಸ್ ರೋಗದ ವೈರಸ್ಸುಗಳು ಬಾವಲಿಗಳಲ್ಲಿ ಇರುವುದನ್ನು ಆಗಲೇ ತಿಳಿಯಲಾಗಿತ್ತು. ಇತ್ತೀಚೆಗೆ ವೈರಸ್ಸುಗಳು ಮಾನವ ಕುಲದ ಮೇಲೆ ಆಗಾಗ್ಗೆ ಮಾಡುವ ದಾಳಿಗಳನ್ನು ಗಮನಿಸುತ್ತಾ ಬಾವಲಿ-ವೈರಸ್ಸುಗಳ ಸಹಯೋಗದ ಬಗೆಗಿನ ತಿಳಿವು ಹೆಚ್ಚಾಗುತ್ತಾ ಬಂತು. ಅದರಲ್ಲೂ ಹೊಚ್ಚ ಹೊಸ ತಿಳಿವಳಿಕೆಯಾದ ಕರೋನ ವೈರಸ್ಸಿನ (RNA corona viruses) ನೈಸರ್ಗಿಕ ಹರಹಿನಲ್ಲಿ ಪ್ರತಿಶತ 54ರಷ್ಟು ಹರಡಿರುವುದು ಬಾವಲಿಗಳಲ್ಲೇ ಎಂಬುದಾಗಿದೆ. ಇವು ಮಾನವರಲ್ಲಿ ಸಾಮಾನ್ಯವಾದ ತೀರಾ ಜಾಳಾದ ಕುರುಹುಗಳನ್ನು ತಂದೊಡ್ಡುತ್ತಾ, ಉಸಿರಾಟದ ಮೂಲ ಕ್ರಿಯೆಯನ್ನೇ ಅಡ್ಡಿಪಡಿಸುವ ಬಗೆಗಿನ ತಿಳಿವನ್ನೂ ಗುರುತಿಸಲಾಗಿದೆ. ಮುಂದುವರಿದಂತೆ ಈ ವೈರಸ್ಸುಗಳ ಜೀನೊಮ್ ವಿವರಗಳು ಜಾಗತಿಕವಾಗಿ ಹಬ್ಬಿದ ಕರೋನವನ್ನೂ ಸಮೀಕರಿಸುವುದರಲ್ಲೂ ಕಂಡುಕೊಳ್ಳಲಾಗಿದೆ. ಹೀಗೆ ಬಾವಲಿಗಳಲ್ಲಿ ಸಹಜವಾಗಿದ್ದು ಏನೂ ಆರೋಗ್ಯ ಸಮಸ್ಯೆಯನ್ನೇ ತಂದೊಡ್ಡದ ಈ ವೈರಸ್ಸುಗಳು, ಮಾನವ ದೇಹಕ್ಕೆ ಕೆಲವು ಸೋರಿಕೆಗಳಿಂದ ಸೇರುತ್ತಿದೆ. ಇದಕ್ಕೆ ಬಲವಾದ ಕಾರಣ ಹವಾಮಾನ ಬದಲಾವಣೆಯಂತಹ ಜಾಗತಿಕ ಪರಿಣಾಮಗಳ ಅವುಗಳ ವಸತಿಯ ಸ್ಥಳಗಳಲ್ಲಿ ಮಾನವರ ಹಸ್ತಕ್ಷೇಪವನ್ನು ಅಲ್ಲಗಳೆಯಲಾಗದು. ಇದರಿಂದ ಒಂದೆರಡು ಘಟನೆಗಳ ಅರಿವಿನಿಂದ ವೈರಸ್ಸುಗಳ ದಾಳಿಯನ್ನು ಹಿಂದೆಯೇ ಗುರುತಿಸಿ, ಪರಿಹಾರದ ಹುಡುಕಾಟ ಆರಂಭವಾಗಿತ್ತು. ಹೀಗಾಗಿ ಅವುಗಳಲ್ಲಿ ಸಮೃದ್ಧವಾಗಿದ್ದೂ ಅವುಗಳಿಗೇನೂ ಮಾಡಲಾಗದ ವೈರಸ್ಸುಗಳನ್ನು ಬಾವಲಿಗಳು ನಿಭಾಯಿಸುತ್ತಾ ಇರುವುದಾದರೂ ಹೇಗೆ ಎಂಬ ಕುತೂಹಲಕ್ಕೆ ಹಚ್ಚಿದೆ. ಮಾನವ ಸಂಕುಲವನ್ನು ತೀರಾ ಅವ್ಯವಸ್ಥೆಗೆ ತಳ್ಳುವ ಈ ವೈರಸ್ಸುಗಳು, ಹಂದಿ ಹಾಗೂ ಕುದುರೆಗಳನ್ನೂ ಕೂಡ ಕಾಡುತ್ತವೆ. ಅಲ್ಲದೆ ಇನ್ನಿತರ ಮಾನವ ಸಂಬಂಧದ ಸಂಕುಲಗಳಲ್ಲೂ ಹರಡಿರುವುದು ಸಾಬೀತಾಗಿದೆ. ಆದರೆ, ಇವುಗಳೆಲ್ಲವುಗಳಿಗಿಂತಾ ಬಾವಲಿಗಳಲ್ಲಿ ಮಾತ್ರ ಯಾವುದೇ ರೋಗ ಚಿನ್ಹೆಯನ್ನೂ ತೋರದಿರುವ ಅಚ್ಚರಿಯು ಈಗ ಅವುಗಳಿಂದ ನಾವು ಕಲಿಯಬಹುದಾದ ಪಾಠ ಎಂತಹದ್ದು ಎಂದು ಕುತೂಹಲಕ್ಕೆ ಹಚ್ಚಿದೆ.
ಎಲ್ಲಕ್ಕಿಂತಾ ಹೆಚ್ಚಾಗಿ ಅವುಗಳ ಹಾರಾಟದ ಶರೀರ ಕ್ರಿಯೆಯ ಬಗೆಗಿನ ಮತ್ತು ನಿಶಾಚರಿ ಜೀವನದ ಸಮೀಕರಣದ ಸಂಗತಿಗಳನ್ನು ಎಳೆ-ಎಳೆಯಾಗಿ ನೋಡಲಾಗುತ್ತಿದೆ. ಇದನ್ನೇ ಅದ್ಯಾವ ಸೃಜನಶೀಲತೆಯಿಂದ “ಬ್ಯಾಟ್‌ಮನ್” ಸೃಷ್ಟಿಕರ್ತರಾದ ಬಾಬ್ ಕೇನ್(Bob Kane) ಮತ್ತು ಬಿಲ್ ಫಿಂಜರ್(Bill Finger) ಊಹಿಸಿ ಕಲ್ಪನೆಯ ಮಾನವನ್ನು ಸೃಷ್ಟಿಸಿದ್ದರೋ ಎನ್ನಬಹುದು. ಬಾಬ್ ಮತ್ತು ಬಿಲ್ ಇಬ್ಬರೂ ಈಗಿಲ್ಲ, ಅವರು ಕಲ್ಪಸಿದ್ದ ಪಾತ್ರಗಳ ಹೀರೋ ಮಾತ್ರ ಸರ್ವವ್ಯಾಪಿ. ವಿಜ್ಞಾನಕ್ಕೂ ಬಾವುಲಿಗಳ ದೇಹದ ಚಟುವಟಿಕೆಗಳ ಬಗೆಗೀಗ ಇನ್ನಿಲ್ಲದ ಕುತೂಹಲ.
ಹಾರಾಡುವಾಗ ಬಾವಲಿಗಳು ತಮ್ಮ ದೇಹದ ಉಷ್ಣತೆಯನ್ನು ವಿಪರೀತ ಹೆಚ್ಚಿಸಿಕೊಂಡಿದ್ದು, ಒಂದು ಬಗೆಯಲ್ಲಿ ಜ್ವರ ಬಂದವರಂತೆ ಇರುತ್ತವೆ. ಹಾಗಾಗಿ ಅದೇ ರೋಗಕಾರಕತೆಯನ್ನು ವಿರೋಧಿಸಿವ ಮೂಲ ಎಂದುಕೊಳ್ಳಲಾಗಿತ್ತು. ಅಲ್ಲದೆ ಅವುಗಳ ಅವಿತುಕೊಳ್ಳುವ ಜೀವಿವಿಧಾನದಲ್ಲಿ ತಮ್ಮೊಳಗೊಂದು ವಿಶೇಷತೆಯನ್ನು ಹೊಂದಿವೆಯಾ ಎನ್ನಲೂ ಕಾರಣಗಳಿದ್ದವು. ಆದರೀಗ ಅವುಗಳ ಚಯಾಪಚಯ ಕ್ರಿಯೆಗಳ ಒಳತಿಳಿವುಗಳು ಮತ್ತು ಅವುಗಳು ಹೊಂದಿರಬಹುದಾದ ರೋಗ ಪ್ರತಿರೋಧದ ಸಹಯೋಗವು ಪರಿಚಯವಾಗುತ್ತಿವೆ. ಹಾಗಾಗಿ ಈಗ ಎದೆಯ ಮೇಲೆ ಕುಳಿತ ವೈರಿಯನ್ನೂ ತಾಳಿಕೊಳ್ಳುವ ಮತ್ತು ದೇಹದೊಳಗಿನ ಪ್ರತಿರೋಧದ ವ್ಯವಸ್ಥೆಯ ವಿಶೇಷತೆಯ ಸಮತೂಕದಲ್ಲಿ (Balancing relationship between Host Defence and Immune Tolerance) ವೈರಸ್ಸುಗಳ ವಿರೋಧವನ್ನು ತಡೆದುಕೊಳ್ಳಲು ಕಲಿಸಿವೆಯಾ ಎಂಬ ಸೈದ್ಧಾಂತಿಕ ಚರ್ಚೆಗಳನ್ನು ಹುಟ್ಟುಹಾಕಿದೆ.
ಅಂದಂತೆ ಹೀಗೆ ಜೀವಿಗಳಲ್ಲಿ ವೈರುಧ್ಯಗಳನ್ನು ತಡೆದುಕೊಂಡು ಶರೀರಕ್ರಿಯೆಗಳನ್ನು ನಿಭಾಯಿಸುವಿಕೆಯನ್ನು ಹೋಮೊಯೊಸ್ಟಾಸಿಸ್ (Homeostasis) ಎನ್ನಲಾಗುತ್ತದೆ. ಉದಾಹರಣೆಗೆ ಎಷ್ಟೇ ಕೊರೆಯುವ ಚಳಿಯಲ್ಲೂ ನಮ್ಮ ದೇಹದ ಉಷ್ಣತೆಯು ಒಂದೇ ಸಮನಾಗಿರುತ್ತದೆ. ಚಳಿ ಅಂದ್ರೆ, ನಡುಗುತ್ತೇವೆ ಆ ನಡುಕದಿಂದ ಒಂದಷ್ಟು ಉಷ್ಣತೆಯು ಹೆಚ್ಚಿ ದೇಹದ ಉಷ್ಣತೆಯನ್ನು ಸಮತೂಗಿಸುತ್ತದೆ. ಹೀಗೆಯೇ ವೈರಸ್ಸುಗಳನ್ನೂ ನಿಭಾಯಿಸುವ ಬಾವಲಿಯ ಶರೀರಕ್ರಿಯೆಗಳ ಬಗೆಗೆ ಜೀವಿವಿಜ್ಞಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಎಷ್ಟೆಂದರೂ ನಮ್ಮ ಜೀವದ ಪ್ರಶ್ನೆಯಲ್ಲವೇ?
ಹಾಗಾದರೆ ಅವೆಲ್ಲವೂ ತಿಳಿದೂ ನಾವೆಲ್ಲರೂ -ಬ್ಯಾಟ್-ಮಾನವರಾದರೆ ಸೂಪರ್ ಹೀರೋ ಆಗಬಹುದೇ? ಅದೆಲ್ಲವೂ ಅಷ್ಟು ಸುಲಭದ್ದೇನಲ್ಲ. ಆದರೂ ಆಗಾಗ್ಗೆ ಬೀಸುವ ಅಥವಾ ಬೀಸಬಹುದಾದ ಮಾರಣಾಂತಿಕ ಕತ್ತಿಯನ್ನು ತಪ್ಪಿಸಿಕೊಳ್ಳುವ ಉಪಾಯವಾದರೂ ಸಿಕ್ಕೀತು. ಹೋಮೊಯೊಸ್ಟಾಸಿಸ್ (Homeostasis) ಕೆಲವೊಂದು ಸಂದರ್ಭಗಳಿಗೆ ನಿಸರ್ಗವೇ ವಿಕಸಿಸಿಕೊಟ್ಟಿರುವ ಮಹಾನ್ ಕೊಡುಗೆ. ಇದರಿಂದ ನಮ್ಮ ರಕ್ತದ ಒತ್ತಡ, ಹೃದಯದ ಕಾರ್ಯಪ್ರವೃತ್ತಿ, ಹಾರ್ಮೋನುಗಳ ಏರುಪೇರು, ಮಾಂಸಖಂಡಗಳ ನರವ್ಯೂಹ ವ್ಯವಸ್ಥೆಯ ನಿರ್ವಹಣೆ ಮುಂತಾದವುಗಳ ನಿಭಾಯಿಸುವಿಕೆಯು ಸಾಧ್ಯವಾಗಿರುವುದು. ಆದರೆ ಇವೆಲ್ಲವೂ ಹೊರಗಿನ ಅದರಲ್ಲೂ ಜೈವಿಕ ಸೋಂಕುಗಳಿಂದಾಗು ಏರುಪೇರುಗಳನ್ನು ನಿಭಾಯಿಸುವಲ್ಲಿ ಅಷ್ಟು ಸುಲಭವಾಗಿ ಅರ್ಥವಾಗಿಲ್ಲ. ಆದರೂ ಮಾನವರಲ್ಲಿ ಸಾವನ್ನೇ ತರಬಲ್ಲಂತಹವನ್ನು ಮತ್ತೊಂದು ಸಸ್ತನಿಯು ತಡೆದುಕೊಂಡು ಬಾಳುವ ವೈಚಿತ್ರ್ಯವಂತೂ ನಿಸರ್ಗದಲ್ಲೇ ಇದೆ. ಬಾವಲಿಗಳ ದೇಹದೊಳಗಿನ ಪ್ರತಿರೋಧದ ವ್ಯವಸ್ಥೆಯ ವಿಶೇಷತೆಯ ಸಮತೂಕದಲ್ಲಿ ಅನೇಕ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿದ್ದು ಅವೆಲ್ಲವನ್ನೂ ಸಾಮಾನ್ಯ ಮಾತಿನಲ್ಲಿ ವಿವರಿಸಲು ಉದ್ದವಾದ ವಿವರಗಳ ನೀಳ್ಗತೆಯಾಗುವುದೇನೋ! ಹಾಗಾಗಿ ಕೆಲವು ಸ್ಥೂಲವಾಗಿ ಮುಂದಿನ ಚಿತ್ರದಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.
ಹಾಗಾಗಿ ಕಡೆಯ ಪಕ್ಷ ಹಾರಾಟದಲ್ಲಂತೂ ಎಲ್ಲಾ ಬಾವಲಿಗಳೂ ತಮ್ಮ ಅಗತ್ಯದ ವಿಶೇಷಣಗಳನ್ನು ತಮ್ಮ ಜೀವಿಕೋಶದೊಳಗಿನ ಮೈಟೊಕಾಂಡ್ರಿಯಾ ಮತ್ತು ಕೋಶಕೇಂದ್ರದ ಉತ್ಕರ್ಷಣ ಕ್ರಿಯೆಯ ನಿಭಾಯಿಸುವ ಜೀನುಗಳಲ್ಲಿ ಇಟ್ಟುಕೊಂಡ ವಿವರಗಳು ತಿಳಿದಿವೆ. ಮುಂದುವರೆದಂತೆ ಇಂತಹದೇ ಮಾಹಿತಿಗಳು ಜೀವಿಕೋಶದೊಳಗೆ ನಿರ್ವಹಿಸಲ್ಪಟ್ಟು ಡಿ.ಎನ್.ಎ.ಗಳು ಹಾನಿಯಾಗುವುದನ್ನು ತಪ್ಪಿಸುತ್ತವೆ. ಇವುಗಳ ಅಗತ್ಯವಾದ ಸಿಗ್ನಲ್‌ಗಳ ಮೂಲಕ ನಿಭಾಯಿಸಿ ಅಂತಿಮವಾಗಿ ಸಮಸ್ಯೆಯನ್ನು ನಿಭಾಯಿಸುತ್ತವೆ. ಇವೇ ಕಾರಣಗಳು ಬಾವುಲಿಯಲ್ಲಿ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡಿವೆ. ಇವೆಲ್ಲವೂ ಪ್ರತಿರೋಧದ ನಿರ್ವಹಣೆಯ ಮಾಲೆಕ್ಯುಲಾರ್ ವಿವರಗಳನ್ನು ಬಯಸುತ್ತವೆ. ಮತ್ತವುಗಳೂ ಸಾಕಷ್ಟು ಅಗಾಧವಾದ ವಿವರಣಾ ಪೂರ್ವ ತಿಳಿವನ್ನೂ ಬಯಸುತ್ತವೆ. ಆದ್ದರಿಂದ ಸೂಕ್ಷ್ಮವಾಗಿ ಈ ಕೆಳಗಿನ ಚಿತ್ರ ಮೂಲಕ (ಮೂಲ ಸಂಶೋಧನಾ ಲೇಖನದಲ್ಲಿರುವಂತೆಯೇ) ಚಿಕ್ಕ ಪರಿಚಯದ ಮೂಲಕ ಕೊಟ್ಟು ಅಂತಿಮ ಸಾರದಿಂದ ಮುಗಿಸುತ್ತೇನೆ.
ಸುಮಾರು ಎಂಭತ್ತು ವರ್ಷಗಳಷ್ಟು ಹಿಂದೆಯೆ ಬಾವಲಿಗಳಿಗೆ ಹೆದರಿದ ಹುಡುಗನೊಬ್ಬ ಬಾವುಲಿಯೇ ತಾನಾಗುವ ರೂಪಕವನ್ನು ಅವುಗಳಂತಾಗಲು ಅಂದರೆ –ಅವುಗಳಲ್ಲಿರುವ ಸಮಸ್ಯೆಯನ್ನೂ ತಡೆದುಕೊಂಡು ಸಹಜವಾಗಿ ಜೀವಿಸಬಲ್ಲ – ಸೂಪರ್ ಜೈವಿಕ ಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದೇನೂ ಅಷ್ಟು ಸುಲಭವಾಗಿಲ್ಲ. ಏಕೆಂದರೆ ಬಾವಲಿಗಳು ಸಂಶೋಧನೆಯ ಅಧ್ಯಯನಕ್ಕೆ ಇನ್ನೂ ಮಾದರಿಯ ಜೀವಿಗಳಾಗಿಲ್ಲ. ಜೊತೆಗೆ ಹಿಂದೊಮ್ಮೆ ಅಂತಹಾ ತಿಳಿವಳಿಕೆಗೆ ಬೆಂಬಲವಿದ್ದರೂ ಇತ್ತೀಚೆಗೆ ಕಡೆಗಣಿಸಲಾಗಿತ್ತು. ಮತ್ತೀಗ ಕರೋನ ಹಿನ್ನೆಲೆಯಿಂದ ಆಸಕ್ತಿಯು ಚಿಗುರಿದೆ. ಇಂತಹ ಸಂದರ್ಭವನ್ನೂ ಜೀವಿವಿಜ್ಞಾನವು ನಿರೀಕ್ಷಿಸಿರಲೇ ಇಲ್ಲ. ಆತಿಥೇಯ ಪ್ರತಿರೋಧದ ತಾಳಿಕೆಯ (The host defence–immune tolerance) ತಿಳಿವು ಬಾವುಲಿಗಳಲ್ಲಿನ ಆರೋಗ್ಯದ ಸಮಸ್ಥಿತಿಯ ಮಹತ್ವದ ಜೈವಿಕ ತಿಳಿವಳಿಕೆಯನ್ನು ನೀಡಿದೆ.
ಪೈರೊಪ್ಟಿಸಿಸ್ (Pyroptosis) ಅಂದರೆ ಜೀವಿಕೋಶದೊಳಗಿನ ಸೋಂಕಿನ ಕಾರಣದಿಂದ ಅತೀವ ಉರಿಯೂತ ಉಂಟಾಗಿ ಕಡೆಗೆ ಕೋಶವೇ ಸಾವನ್ನು ಅಪ್ಪುವ ಕ್ರಿಯೆ. ಇದು ಮಾನವ ದೇಹದೊಳಗೆ ವೈರಸ್ಸು ಒಳಹೊಕ್ಕ ಕೂಡಲೆ ಅದನ್ನು ಗ್ರಹಿಸಿದ ಸಿಗ್ನಲ್ ನಿಂದ ಮುಂದುವರೆದು ಕ್ರಿಯೆಗಳ ನಿಭಾಯಿಸುವಿಕೆಯ ಹಿನ್ನಡೆಯಿಂದ ಉಂಟಾಗುವ ಸ್ಥಿತಿ. ಇದು ನಡೆಯದಂತೆ ಬಾವಲಿಯು ರೂಪಿಸಿಕೊಂಡಿದ್ದರೆ, ಮಾನವ ದೇಹವು ಸಮಸ್ಯೆಯನ್ನು ಒಡ್ಡಿಕೊಂಡು ಕೋಶದ ಹಾನಿಯಲ್ಲಿ ಕೊನೆಯಾಗುತ್ತದೆ. ಕರೋನ ವೈರಸ್ಸು ಕ್ರಿಟಿಕಲ್ಲಾದ ಉಸಿರಾಟದ ವ್ಯವಸ್ಥೆಯಲ್ಲಿ ದಾಳಿ ಮಾಡಿ ಮಾರಣಾಂತಿಕ ಹಾನಿಯನ್ನು ತರುತ್ತದೆ.
ಜೀವಿಗಳಲ್ಲಿನ ಶರೀರಕ್ರಿಯಾ ವ್ಯವಸ್ಥೆಗಳಲ್ಲಿ ಹೋಮಿಯೋಸ್ಟಾಟಿಕ್ ಸಮತೋಲನವನ್ನು ಕಾಪಾಡಿಕೊಳ್ಳುವುದು ಅದನ್ನು ನಿರ್ವಹಿಸುವ ಪ್ರಮುಖ ನಿಯಂತ್ರಕರನ್ನು ಮತ್ತು ಅದಕ್ಕೆ ಅಗತ್ಯವಾದ ಸಲಕರಣೆಯ ವ್ಯವಸ್ಥೆಯ ಗುರುತಿಸುವಿಕೆಯನ್ನು ಒಳಗೊಂಡಿರುತ್ತದೆ. ಇದೀಗ ಈ ವೈರಸ್‌ಗಳನ್ನಾಗಲಿ ಅಥವಾ ಕ್ಯಾನ್ಸರ್ ಅನ್ನಾಗಲಿ ಬಾವಲಿಗಳು ಎದುರಿಸಿ ನಿಯಂತ್ರಿಸಲು ಬಳಸುವ ಮಾರ್ಗಗಳು ಗೊತ್ತಾದಲ್ಲಿ ಅವುಗಳು ಅಮೂಲ್ಯವಾದ ಪಾಠಗಳಾಗಲಿವೆ. ಇವು ವಯಸ್ಸಾಗಿವಿಕೆಯನ್ನೂ ಮತ್ತು ಮಾನವರಲ್ಲಿ ಹಲವಾರು ಉರಿಯೂತದ ಕಾಯಿಲೆಗಳನ್ನೂ, ವೈರಸ್ ಗಳೇ ಮುಂತಾದ ಸೋಂಕಿನ ನಿಭಾಯಿಸುವಿಕೆಯನ್ನೂ ತಿಳಿವಾಗಿಸಬಲ್ಲವಾಗಿವೆ. ಹೆಚ್ಚಿದ ಫಲಿತಾಂಶಗಳ ಅರಿವಿನೊಂದಿಗೆ ಬಾವುಲಿಗಳನ್ನು ಕುರಿತಂತೆ ಪ್ರಯೋಗಾಲಯ ಮತ್ತು ನಿಸರ್ಗ ಸಹಜ ವಾತಾವರಣದ ಆಧಾರಿತ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಒಗ್ಗಟ್ಟು ಮತ್ತು ಪ್ರಯತ್ನಗಳು ಅಗತ್ಯವಿದೆ. ಉದಯೋನ್ಮುಖ ವೈರಸ್‌ಗಳ ಮೂಲವನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಪ್ರಕೃತಿಯಿಂದ ಜ್ಞಾನವನ್ನು ಬಳಸುವುದರಿಂದ ನಾವು ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು. ಆಗ ಬ್ಯಾಟ್‌ಮನ್ ರೂಪಕದ ಸೃಜನಶೀಲತೆಯ ಮಹತ್ವದ ಅರಿವಾಗುವುದು ಖಂಡಿತ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಬಾವಲಿಗಳ ಬಗ್ಗೆ ಉತ್ತಮ ಮಾಹಿತಿಯುಳ್ಳ ಲೇಖನ.
ವೈರಸ್ ಹಾಗೂ ಬಾಲಿಗಳ ನಂಟು..ಆದರೂ ತಮ್ಮನ್ನು ತಾವು ಸುರಕ್ಷಿತ ಇಡುವ ಹಿಂದಿರುವ ಕಾರಣಗಳನ್ನು ಹೇಳಬೇಡಿ ಹುಡುಕಿದಲ್ಲಿ ಮಾನವ ಕಲ್ಯಾಣಕ್ಕೆ ಸಹಕಾರಿಯಾಗಬಹುದು ಅಂತಹ ಸಂಶೋಧನೆ ಎಂಬ ಸಾಮಾಜಿಕ ಕಳಕಳಿಯ ಲೇಖನ. ತುಂಬಾ ಚೆನ್ನಾಗಿದೆ. ಅಭಿನಂದನೆಗಳು 💐