You are currently viewing ಬೇರಿನಲ್ಲಿ ಬಣ್ಣ ತುಂಬಿಕೊಂಡು ತಟ್ಟೆಗೆ ಬಂದ “ಕ್ಯಾರಟ್‌” – Daucus carota

ಬೇರಿನಲ್ಲಿ ಬಣ್ಣ ತುಂಬಿಕೊಂಡು ತಟ್ಟೆಗೆ ಬಂದ “ಕ್ಯಾರಟ್‌” – Daucus carota

ಕ್ಯಾರಟ್‌” ನಮ್ಮ ಆಹಾರದಲ್ಲಿ ತರಕಾರಿಯಾಗಿ ಬಳಕೆಯಲ್ಲಿದ್ದರೂ, ಟೊಮ್ಯಾಟೊ, ಬದನೆ, ಆಲೂಗಡ್ಡೆ ಮುಂತಾದವುಗಳಿಗೆ ಹೋಲಿಸಿದರೆ ಅಷ್ಟೇನೂ ಜನಪ್ರಿಯವಲ್ಲ. ಅಷ್ಟಕ್ಕೂ ನಾವೀಗ ತಿನ್ನುತ್ತಿರುವ “ಕಿತ್ತಳೆ” ಬಣ್ಣ ಅದರ ಮೂಲ ಬಣ್ಣವೂ ಅಲ್ಲ. ಮೊದಲು ಕೃಷಿಗೆ ಒಳಗಾದಾಗ ಅದರ ಬಣ್ಣ ನೇರಳೆ! ಈಗಲೂ ಬಿಳಿ, ಕಪ್ಪು, ಕೆಂಪು, ಹಳದಿ, ಮುಂತಾದ ಕ್ಯಾರಟ್‌ಗಳು ಇವೆ. ಮೂಲತಃ ಪರ್ಷಿಯಾದಲ್ಲಿ ವಿಕಾಸಗೊಂಡ ವನ್ಯ ತಳಿಯು ಕಪ್ಪು ಇಲ್ಲವೇ ನೇರಳೆ ಬಣ್ಣದ್ದೇ! ಇದರ ಸ್ಥಳೀಯತೆಯು ಶೀತವಲಯದ ಯೂರೋಪು ಮತ್ತು ನೈರುತ್ಯ ಏಷಿಯಾದ ನೆಲವನ್ನು ಅವಲಂಬಿಸಿದೆ. ಹಾಗಾಗಿ ಇಲ್ಲೆಲ್ಲಾ ವನ್ಯ ಸಂಬಂಧಿಗಳು ಕಾಣಬರುತ್ತವೆ.

         ಈಗ ಹೆಚ್ಚಾಗಿ ಬಳಸುತ್ತಿರುವ ಕಿತ್ತಳೆ ಬಣ್ಣದ ಕ್ಯಾರಟ್‌ದ್ದು ಒಂದು ಕಥೆಯಿದೆ. ಹಾಗೇನೇ ಬಳಕೆಗೆ ಬಂದ ಯಾವುದೇ ಕ್ಯಾರಟ್‌ನ ಸಸ್ಯಭಾಗದ್ದೂ ಕೂಡ. ಮೊದಲು ಕೃಷಿಗೆ ಒಳಗಾದಾಗ ಇದನ್ನೇನು ಈಗಿನಂತೆ ಬೇರಿನ ಭಾಗವನ್ನು ಬಳಸುತ್ತಿರಲಿಲ್ಲ. ಆರಂಭದಲ್ಲಿ ಇದನ್ನು ಬೆಳೆಸುತ್ತಿದ್ದುದೇ ಅದರ ಹಸಿರು-ಸೊಪ್ಪು ಮತ್ತು ಬೀಜದ ಬಳಕೆಗಾಗಿ! ಎರಡೂ ವಿಶಿಷ್ಟವಾದ ಪರಿಮಳವನ್ನು ಹೊಂದಿದ್ದು ಬಳಕೆ ಭಿನ್ನವಾದ ರುಚಿಯನ್ನು ಪರಿಮಳ ಬೆರೆಸಿ ಕೊಡುತ್ತವೆ. ಕ್ಯಾರಟ್‌, ಕೊತ್ತಂಬರಿ, ಅಜ್ವಾನ್‌, ಸಬ್ಬಸಿಗೆ ಮುಂತಾದ ಪರಿಮಳಭರಿತವಾದ ಸಸ್ಯಗಳ ಕುಟುಂಬವಾದ ಎಪಿಯೇಸಿಯೇ(Apiaceae or Umbelliferae)ಗೆ ಸೇರಿದೆ. ಈ ಕುಟುಂಬದ ಸಸ್ಯಗಳು ಸಾಮಾನ್ಯವಾಗಿ ಹಸಿರು ಸೊಪ್ಪು ಹಾಗೂ ಹೂವುಗಳಲ್ಲಿ ಪರಿಮಳವನ್ನು ಹೊಂದಿರುತ್ತವೆ. ಆ ಕಾರಣಕ್ಕಾಗಿಯೇ ಮೊದಲು ಇದು ಸುಮಾರು ಕ್ರಿಸ್ತಪೂರ್ವ 2000 – 3000 ವರ್ಷಗಳಷ್ಟು ಹಿಂದೆಯೆ ಸೊಪ್ಪು ಮತ್ತು ಬೀಜಕ್ಕೆಂದೇ ಕೃಷಿಗೆ ಒಳಗಾಗಿದೆ. ಮುಂದೆ ಸೊಪ್ಪಿನ ಪರಿಮಳದ ರುಚಿಯ ಜೊತೆಗೆ ಬೇರಿನ ವೈಶಿಷ್ಟತೆಯನ್ನೂ ಕಂಡುಕೊಂಡವರು ಮಧ್ಯ ಏಷಿಯಾದವರು ಹಾಗೂ ಐರೋಪ್ಯರು. ಕ್ಯಾರಟ್‌ Carrot ಪದವು Ker ಮತ್ತು Root ಎರಡು ಪದಗಳಿಂದ ವ್ಯುತ್ಪತ್ತಿಯಾಗಿದೆ. Ker ಪದದ ಅರ್ಥ “ಕೊಂಬು(Horn)” ಎಂದು! ಅಂದರೆ ಕೊಂಬಿನಂತಹಾ ಬೇರು. ನಾವೀಗ ಬಳಸುತ್ತಿರುವ ಕ್ಯಾರಟ್‌ ಕೊಂಬಿನಂತಿರುವ ಗಟ್ಟಿಯಾದ ಬೇರು! 

         ಪ್ರಸ್ತುತ ಕಿತ್ತಳೆ ಬಣ್ಣದ ಕ್ಯಾರಟ್‌ನ ಸೊಪ್ಪನ್ನು ಬಳಸುವುದು ಕಡಿಮೆ. ಇದನ್ನು ವನ್ಯ ಮೂಲದ ನೇರಳೆ ಬಣ್ಣದಿಂದ ಹಳದಿಯುತ ಕ್ಯಾರಟ್‌ ಮ್ಯುಟೇಷನ್‌-ರೂಪಾಂತರದಿಂದ ಪಡೆಯಲಾಗಿದ್ದು. ಮೊದಲು ಅಂತಹದ್ದನ್ನು ನಿಸರ್ಗದಲ್ಲಿಯೇ 16 ನೇ ಶತಮಾನದಲ್ಲಿ ಗುರುತಿಸಿ ಅಭಿವೃದ್ಧಿ ಪಡಿಸಿದವರು ಬಹುಶಃ ಡಚ್ಚರು. ಈ ಸಮಯದ ಕೃಷಿ ವಿಜ್ಞಾನದಲ್ಲಿ  ಹಾಲೆಂಡ್   ಪ್ರಮುಖ ರಾಷ್ಟ್ರವಾಗಿತ್ತು. ಅಲ್ಲಿ ಅದನ್ನು ಗುರುತಿಸಿಲು ಡಚ್ಚರ ರಾಜಮನೆತನದ ಅರಮನೆಯಾದ  ಹೌಸ್ ಆಫ್ ಆರೆಂಜ್ (House of Orange) ಕಾರಣ ಎನ್ನತ್ತಾರೆ. ರಾಜಮನೆತನವನ್ನು ಗೌರವಿಸಲು ಕಿತ್ತಳೆ ಬಣ್ಣದ ಕ್ಯಾರೆಟ್‌ಗಳನ್ನು “ಆವಿಷ್ಕರಿಸಿದ್ದಾರೆ” ಎಂದು ಅನೇಕ ಡಚ್ಚರು ನಂಬುತ್ತಾರೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯ ಹಾಗೂ ಪುರಾವೆಗಳಿಲ್ಲ.

         16ನೇ ಶತಮಾನದಲ್ಲಿನ ರಾಜ ಮನೆತನದ ವಿಲಿಯಂ ಅವರನ್ನು ಗೌರವದಿಂದ ವಿಲಿಯಂ ಆರೆಂಜ್‌ ಎಂದೂ ಕರೆಯಲಾಗುತ್ತದೆ. ಅದಕ್ಕೆಂದೇ ಕಿತ್ತಳೆ ಕ್ಯಾರೆಟ್ ಅನ್ನು ನೆದರ್‌ಲ್ಯಾಂಡ್‌ನಲ್ಲಿ ಬೆಳೆಸಲಾಯಿತು ಎಂಬುದರ ದಂತಕಥೆಯ ಭಾಗವದು! ಡಚ್ಚರು ಕಿತ್ತಳೆ ಬಣ್ಣದ ಕ್ಯಾರೆಟ್ ಅನ್ನು ಅಭಿವೃದ್ಧಿಪಡಿಸಿದರು ಮತ್ತು ಸ್ಥಿರಗೊಳಿಸಿದರು ಎಂಬುದಂತೂ ನಿಜ. ಆದರೆ ಅದು ರಾಜ ಮನೆತನವನ್ನು ಗೌರವಿಸುವುದಕ್ಕೇ ಎಂಬುದು ಅಲ್ಲಿನ ಬಹುಪಾಲು ಜನರ  ನಂಬಿಕೆಯಿಂದಲೋ ಏನೋ ಡಚ್ ಜನರು ಕಿತ್ತಳೆ ಕ್ಯಾರೆಟ್‌ ಗಳನ್ನು ತಮ್ಮ ರಾಷ್ಟ್ರೀಯ ತರಕಾರಿಯಾಗಿ ಅಳವಡಿಸಿಕೊಂಡಿದ್ದಾರೆ. ಇದು ಹಲವು ತಲೆಮಾರುಗಳ ಮೂಲಕ ಸಾಗಿ ಅದು ಶುದ್ಧ ಜನಪದವಾಗಿ ಉಳಿದಿದೆ.

         ಕ್ಯಾರಟ್‌ನ ಬಣ್ಣಗಳಿಗೆ ಕಾರಣ, ಕ್ಯಾರೊಟಿನ್‌ ಎಂಬ ಗುಂಪಿನ ರಸಾಯನಿಕ ವಸ್ತು. ಇದೊಂದು ಮೂಲತಃ ಇಂಗಾಲ ಹಾಗೂ ಜಲಜನಕವನ್ನು ಹೊಂದಿದ ರಸಾಯನಿಕ ಸಂಯುಕ್ತ (ಹೈಡ್ರೊ-ಕಾರ್ಬನ್‌). ಕ್ಯಾರಟ್‌ನಲ್ಲಿರುವ ಕ್ಯಾರೊಟಿನ್‌ ವಸ್ತುವಿನಲ್ಲಿ ಇಂಗಾಲದ 40 ಪರಮಾಣುಗಳು ಹಾಗೂ  ಅಸ್ಥಿರ (ವೇರಿಯಬಲ್‌) ಸಂಖ್ಯೆಯ ಜಲಜನಕದ ಪರಮಾಣುಗಳು ಇರುತ್ತವೆ. ಇದರ ಜೊತೆಗೆ ಕೆಲವೊಮ್ಮೆ ಆಮ್ಲಜನಕ ಮುಂತಾದವು ಬೆರೆತು ಬಗೆ ಬಗೆಯ ಬಣ್ಣಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ಹೈಡ್ರೊ-ಕಾರ್ಬನ್‌ ಕ್ಯಾರಟ್‌ಗಳಲ್ಲಿ ವಿವಿಧ ಬಣ್ಣಗಳಿಗೆ ಕಾರಣವಾಗಿದೆ.  ಮೊಟ್ಟ ಮೊದಲು ಕ್ಯಾರಟ್‌ ರಸದಲ್ಲಿ ಈ ರಸಾಯನಿಕವನ್ನು ಪತ್ತೆ ಹಚ್ಚಿದ್ದು ಹೆನ್ರಿಚ್‌ ವಿಲ್‌ಹೆಲ್ಮ್‌ ಫರ್ಡಿನಾಂಡ್‌ ವಾಕೆನ್‌ರೊಡರ್‌ ( Heinrich Wilhelm Ferdinand Wackenroder) ಎಂಬ ಜರ್ಮನಿಯ ರಸಾಯನಿಕ ವಿಜ್ಞಾನಿ. ಆತ 1831 ರಷ್ಟು ಹಿಂದೆಯೇ ದುಂಡು ಹುಳು ಪ್ರತಿರೋಧಿಸುವ ರಸಾಯನಿಕ ವಸ್ತುವಿನ ಹುಡುಕಾಟದಲ್ಲಿ ಈ ರಸಾಯನಿಕವನ್ನು ಪತ್ತೆ ಮಾಡಿದ್ದನು. ಈ ಕ್ಯಾರೊಟಿನ್‌ಗಳು ಸಂತ್ರುಪ್ತವಲ್ಲದ ಹೈಡ್ರೊಕಾರ್ಬನ್‌ಗಳು (Carotenes are Polyunsaturated Hydrocarbons ).

          ನಮಗೇನೋ ತುಂಬಾ ಪರಿಚಯವಿರುವ ಕಿತ್ತಳೆ ಬಣ್ಣದ ಕ್ಯಾರಟ್‌ ಸರಿಯೇ! ಆದರೆ ಹೆಚ್ಚು ಕಡಿಮೆ ಮಳೆ ಬಿಲ್ಲಿನ ಬಣ್ಣಗಳೆಲ್ಲವನ್ನೂ ತುಂಬಿಸಿಕೊಂಡ ಕ್ಯಾರಟ್‌ಗಳಿವೆ. ಇವುಗಳ ನೇರಳೆಯಾಗಲಿ, ಕೆಂಪು, ಬಿಳಿ, ಹಳದಿ ಹಾಗೂ ಕಪ್ಪೂ ಸಹಾ ಈ ಹೈಡ್ರೋಕಾರ್ಬನ್‌ಗಳ ಬಗೆ ಬಗೆಯ ರೂಪಗಳನ್ನು ಹೊಂದಿರುತ್ತವೆ. ಕ್ಯಾರಟ್‌ನ ಬೇರು ಈ ಬಗೆಯ ರೂಪಾಂತರವನ್ನು ತನ್ನೊಳಗೆ ವಿಕಾಸಗೊಳಿಸಿಕೊಂಡು ಕಿತ್ತಳೆಯ ಬಣ್ಣವನ್ನು ಡಚ್ಚರ ಪ್ರೀತಿಯ ಕಾರಣಕ್ಕಾಗಿ ಜಗತ್ತಿಗೆಲ್ಲಾ ಪರಿಚಯಿಸಿದೆ. ಸಾಲದಕ್ಕೆ ಹೌದೇನೋ ಇದೊಂದೆ ಕ್ಯಾರಟ್‌ ಎಂಬ ಅಚ್ಚರಿಯನ್ನೂ ಹಬ್ಬಿಸಿದೆ. ಈ ಬಗೆಯ ಸಂಗತಿಯಂತೂ ಇತ್ತೀಚೆಗಿನ ಕೇವಲ ಒಂದೆರಡು ನೂರು ವರ್ಷಗಳ ಪ್ರತಿಫಲವಷ್ಟೇ! ಅದಕ್ಕೂ ಹಿಂದೆ ನೇರಳೆಯ ಬೇರಿನ ಕ್ಯಾರಟ್ಟೇ ಇದ್ದದ್ದು!

       ಮೂಲದಲ್ಲಿ ಈಗ ಬಳಸುತ್ತಿರುವಂತಹಾ ಬೇರಿನ ಭಾಗದ ಕೊಯಿಲಿಗಾಗಿ ಈಜಿಪ್ಟರು ಅಥವಾ ಗ್ರೀಕರು ಅಥವಾ ಮಧ್ಯ ಪ್ರಾಚ್ಯ ನೆಲೆಯವರು ಬೆಳೆಯದಿದ್ದರೂ ಅದರ ಬೀಜದ ಎಣ್ಣೆಗಾಗಿ ಬೆಳೆದಿದ್ದ ಬಗ್ಗೆ ದಾಖಲೆಗಳು ಸಿಕ್ಕಿವೆ. ಹಾಗಾಗಿ ಒಂದು ತರಕಾರಿಯಾಗಿ ಪರಿಚಯವಾಗುವ ಮುನ್ನ ಇದೊಂದು ಶೃಂಗಾರದ ಆಸೆಯನ್ನು ತನ್ನೊಳಗಿಟ್ಟುಕೊಂಡ ಸಸ್ಯ. ಕ್ಯಾರಟ್‌ ಬೀಜದ ಎಣ್ಣೆಯಲ್ಲಿ ಇರುವ ಬೀಟಾ ಕ್ಯಾರೊಟಿನ್‌, ಪ್ರೊ-ವಿಟಮಿನ್‌ ಎ, ವಿಟಮಿನ್‌ ಈ ಮತ್ತು ಟಿಕೊಪಾಲ್‌ ಎಂಬ ರಸಾಯನಿಕಗಳಿಗಾಗಿ ಕ್ಯಾರಟ್‌ ಜನಪ್ರಿಯತೆಯನ್ನು ಪಡೆದಿತ್ತು. ಆ ನಂತರದ ದಿನಗಳಲ್ಲಷ್ಟೇ ತರಕಾರಿಯಾಗಿ ತಟ್ಟೆಗೆ ಬಂದು ತರಕಾರಿಯಾಗಿ ನೆಲೆಗೊಂಡಿದೆ.

       ಕ್ಯಾರಟ್‌, ಸಸ್ಯವನ್ನು ವೈಜ್ಞಾನಿಕವಾಗಿ ಡ್ಯುಕಸ್‌ ಕ್ಯಾರಟಾ (Daucus carota) ಎಂದು ಹೆಸರಿಸಲಾಗಿದೆ. ಕ್ಯಾರಟ್‌ ನ ವಿವಿಧ ಬಣ್ಣಗಳ ಕುರಿತು ಅಧ್ಯಯನಕಾರರು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಕ್ಯಾರಟ್‌ ಶೀತವಲಯದ ಜನಪ್ರಿಯ ತರಕಾರಿ. ಅದರ ಬೇರಿನ ಬಣ್ಣದ ಹುಡುಕಾಟ ಮತ್ತು ಆರಿಸಿ ಪೋಷಿಸಿದ್ದು ವಿವಿಧ ನೆಲದ ಆಸಕ್ತರು, ವಿವಿಧ ಕಾಲದಲ್ಲಿ ಮಾಡಿದ್ದಾರೆ. ಮುಂದೆ ಬಳಕೆಯ ಹಿತದಲ್ಲಿ ಮುಖ್ಯವಾದ್ದನ್ನು ಉಳಿಸಿಕೊಂಡಿದ್ದಾರೆ. ಗ್ರೀಕ್‌ ಮತ್ತು ರೋಮನ್ನರ ಆಸಕ್ತಿಯಲ್ಲಿ ಔಷಧಿಯ ಬಳಕೆಯ ಉತ್ಸಹವನ್ನು ಹೊಂದಿದ್ದು ವಿಷಕ್ಕೆ ಪ್ರತಿರೋಧವಾಗಿ ಬಳಸುವ ಪರಿಪಾಠವಿತ್ತು. ಸುಮಾರು 13 ನೆಯ ಶತಮಾನದಲ್ಲಿಯೆ ಕೆಂಪು ಮತ್ತು ಹಳದಿ ಕ್ಯಾರಟ್‌ಗಳು ಬಳಕೆಯಲ್ಲಿದ್ದು ಮುಂದೆ ಈ ತಳಿಗಳೇ ಪ್ರಸ್ತುತ ಬಳಕೆಯಲ್ಲಿರುವ ಕಿತ್ತಳೆ ಬಣ್ಣದ ಕ್ಯಾರಟ್‌ನ ವಿಕಾಸಕ್ಕೆ ಕಾರಣವಾಗಿವೆ ಎಂದು ನಂಬಲಾಗಿದೆ.

ಕ್ಯಾರಟ್‌ ಗಳು ಮುಖ್ಯವಾಗಿ ಐದು ಬಣ್ಣಗಳಲ್ಲಿ ಜನಪ್ರಿಯವಾಗಿವೆ. ಕಿತ್ತಳೆ, ಕೆಂಪು, ನೇರಳೆ, ಬಿಳಿ ಮತ್ತು ಹಳದಿ. ಪ್ರತಿಯೊಂದು ಬಣ್ಣವೂ ಒಂದೊಂದು ಬಗೆಯಲ್ಲಿ ಆರೋಗ್ಯದ ಹಿತವನ್ನು ಒದಗಿಸುವ ಬಗ್ಗೆ ವಿವಿಧ ಸಂಸ್ಕೃತಿಗಳು ಕಂಡುಕೊಂಡಿವೆ.

ಕಿತ್ತಳೆ ಬಣ್ಣದ ಕ್ಯಾರಟ್‌: ಈ ಬಣ್ಣದವು ತಮ್ಮೊಳಗೆ ಬೀಟಾಕ್ಯಾರೊಟಿನ್‌ ಮತ್ತು ಆಲ್ಫಾ ಕ್ಯಾರೊಟಿನ್‌ ಗಳನ್ನು ಹೊಂದಿವೆ. ನಮ್ಮ ದೇಹವು ಈ ಬೀಟಾಕ್ಯಾರೊಟಿನ್‌ ಅನ್ನು “ವಿಟಮಿನ್‌ ಎ” ತಯಾರಿಸಲು ಬಳಸುತ್ತದೆ. ಇದು ನಮ್ಮ ದೇಹದಲ್ಲಿ ಇಮ್ಯೂನಿಟಿಯಲ್ಲಿ ಸಹಾಯ ಮಾಡಿ ದೇಹದ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. 

ಹಳದಿ ಬಣ್ಣದ ಕ್ಯಾರಟ್‌: ಹಳದಿ ಬಣ್ಣದ ಕ್ಯಾರಟ್‌ಗಳು ಗ್ಜಾಂತೊಫಿಲ್‌ (Xanthophylls) ಗಳೆಂಬ ಬಣ್ಣದ ರಸಾಯನಿಕವನ್ನು ಹೊಂದಿರುತ್ತವೆ. ಇದೂ ಕೂಡ ಒಂದು ರೀತಿಯಲ್ಲಿ ಬೀಟಾ ಕ್ಯಾರೊಟಿನ್‌ ನಂತೆಯೆ ಇದ್ದು ಕಣ್ಣಿನ ಆರೊಗ್ಯವನ್ನು ಕಾಪಾಡಲು ಸಹಾ ಮಾಡುತ್ತದೆ. ಇವು ಮೂಲತಃ ಮಧ್ಯ ಪ್ರಾಚ್ಯದೇಶದವು.  

ಕೆಂಪು ಬಣ್ಣದ ಕ್ಯಾರಟ್‌ : ಕೆಂಪು ಬಣ್ಣದ ಕ್ಯಾರಟ್‌ಗಳಲ್ಲಿ ಲೈಕೊಪಿನ್‌ (Lycopene) ಎಂಬ ಕ್ಯಾರೊಟಿನ್‌ ಇದೆ. ಇದು ಕಲ್ಲಂಗಡಿ ಹಾಗೂ ಟೊಮ್ಯಾಟೊಗಳಲ್ಲಿಯೂ ಇರುವ ಬಣ್ಣವೇ! ಈ ಲೈಕೊಪಿನ್‌ ಹೃದಯದ ಆರೋಗ್ಯಕ್ಕೆ ಹಾಗೂ ಕ್ಯಾನ್ಸರ್‌ ವಿರುದ್ಧ ದೇಹಕ್ಕೆ ಇಮ್ಯುನಿಟಿಕೊಡಲು ಸಹಾಯ ಮಾಡುತ್ತದೆ. ಇವು ಹೆಚ್ಚಾಗಿ ಭಾರತ ಹಾಗೂ ಚೀನಾದಲ್ಲಿ ಮಾತ್ರ ಕಾಣಬರುತ್ತವೆ.

ನೇರಳೆ (ಕೆನ್ನೀಲಿ) ಬಣ್ಣದ ಕ್ಯಾರಟ್‌ : ಹೊರನೋಟದಲ್ಲಿ ಕಾಣುವ ಕೆನ್ನೀಲಿ ಬಣ್ಣವು ಒಳಗೆ ಹೆಚ್ಚೂ ಕಡಿಮೆ ಕಿತ್ತಳೆ ಬಣ್ಣವನ್ನೇ ಹೊಂದಿರುತ್ತದೆ. ಇದರ ಬಣ್ಣಕ್ಕೆ ಕಾರಣ ಬೇರೊಂದು ಬಗೆಯ ರಸಾಯನಿಕ. ಅದನ್ನು ಅಂತೊಸಯನಿನ್‌ಗಳು (Anthocyanins) ಎಂದು ಕರೆಯುತ್ತಾರೆ. ಇದು ಅತ್ಯತ್ತಮವಾದ ಆಂಟಿ ಆಕ್ಸಿಡೆಂಟ್‌ಗಳು. ಆದ್ದರಿಂದ ದೇಹದಲ್ಲಿ ಸಂಗ್ರಹವಾಗುವ ಯಾವುದೇ ರಸಾಯನಿಕವನ್ನು ಉತ್ಕರ್ಷಿಸಿ ದೇಹಕ್ಕೆ ಅನುಕೂಲ ಕಲ್ಪಿಸಿಕೊಡುತ್ತವೆ. ಅಂತೊಸಯನಿನ್‌ಗಳು ರಕ್ತವು ಹೆಪ್ಪುಗಟ್ಟುವುದನ್ನು ತಡೆದು ಹೃದಯದ ಆರೋಗ್ಯಕ್ಕೆ ನೆರವಾಗುತ್ತವೆ.  ಇವು ಮೂಲತಃ ಟರ್ಕಿ ದೇಶದವು, ಮಧ್ಯ ಪ್ರಾಚ್ಯ ಹಾಗೂ ಮೆಡಿಟರೇನಿಯನ್‌ ಸುತ್ತ ಮುತ್ತ ಹೆಚ್ಚು ಜನಪ್ರಿಯವಾಗಿವೆ.

ಬಿಳಿಯ ಬಣ್ಣದ ಕ್ಯಾರಟ್‌ : ಬಣ್ಣರಹಿತವಾದ ಈ ಕ್ಯಾರಟ್‌ಗಳನ್ನು ಆರೋಗ್ಯಕ್ಕೆ ಸಹಕಾರಿಯಲ್ಲ ಎಂದು ತೆಗೆದುಹಾಕುವಂತಿಲ್ಲ. ಇವುಗಳಲ್ಲಿಯೂ ಕೆಲವು ಸಸ್ಯಜನ್ಯರಸಾಯನಿಕಗಳು ಇದ್ದು ಆರೋಗ್ಯವನ್ನು ಉತ್ತೇಜಿಸುತ್ತವೆ. ಇವು ಆಫ್ಘಾನಿಸ್ತಾನ, ಇರಾನ್‌ ಮತ್ತು ಪಾಕಿಸ್ತಾನ ಮೂಲದವು.

ಕ್ಯಾರಟ್‌ ಬೀಜ ಎಣ್ಣೆಯು ವಿಟಮಿನ್‌ ಎ ಮತ್ತು ಈ ಗಳಿಂದ ಸಮೃದ್ಧವಾಗಿದ್ದು, ಚರ್ಮದ ಆರೈಕೆಯಲ್ಲಿ ಹೆಚ್ಚು ಸಹಕಾರಿಯಾಗಿದೆ. ಇದರಲ್ಲಿಯೂ ಬೀಟಾ ಕ್ಯಾರೊಟಿನ್‌ ಇದ್ದು ಆರೋಗ್ಯಕ್ಕೆ ಹಿತಕಾರಿ. ಕೂದಲುಗಳ ಆರೈಕೆಯಲ್ಲೂ ಬಳಸಬಹುದಾಗಿದೆ.

ಕ್ಯಾರಟ್‌ ಬಗ್ಗೆ ಮಧು ಮೇಹಿಗಳಿಗೆ ಬಳಸಬಹುದಾ ಬೇಡವ ಎನ್ನುವ ಗೊಂದಲವಿರುವುದುಂಟು. ಕಾರಣ ಕ್ಯಾರಟ್‌ಗಳು ತುಸು ಸಿಹಿಯಾಗಿರುತ್ತವೆ. ಈ ಅನುಮಾನವನ್ನು ಬೀಟ್‌ ರೂಟ್‌ ಗೂ ಅನ್ವಯಿಸುವುದುಂಟು. ಯಾವುದೇ ಆಹಾರವನ್ನು ತಿಂದ ನಂತರ ಅದು ಎಷ್ಟು ಸಕ್ಕರೆಯ ಅಂಶವನ್ನು ದೇಹಕ್ಕೆ ಸೇರಿಸುತ್ತದೆ ಎನ್ನುವದನ್ನು ಗೈಸೆಮಿಕ್‌ ಇಂಡೆಕ್ಸ್‌ (Glycemic Index) ಎಂದು ಅಳೆದು ಅದನ್ನು 1 – 100 ಎಂಬುದಾಗಿ ಗುರುತಿಸುತ್ತಾರೆ. ಉದಾಹರಣೆಗೆ ಗ್ಲೂಕೊಸ್‌ ಅನ್ನೇ ಅಂದರೆ ಸಕ್ಕರೆಯನ್ನೇ ನೇರವಾಗಿ ತಿಂದಾಗ ಅದಷ್ಟೂ ದೇಹಕ್ಕೆ ಸೇರುವುದರಿಂದ ಅದರ ಗ್ಲೈಸೆಮಿಕ್‌ ಇಂಡೆಕ್ಸ್‌ 100. ಇದೇ ಲೆಕ್ಕದಲ್ಲಿ 1-55 ಇರುವ ಪದಾರ್ಥಗಳನ್ನು ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಉಳ್ಳವೆಂದೂ, 56-69 ಮಧ್ಯಮ ಗ್ಲೈಸೆಮಿಕ್‌ ಇಂಡೆಕ್ಸ್‌ ಎಂದೂ 70-100 ಉಳ್ಳವನ್ನು ಹೆಚ್ಚಿನ ಗ್ಲೈಸೆಮಿಕ್‌ ಇಂಡೆಕ್ಸ್‌ ಉಳ್ಳವೆಂದೂ ವರ್ಗೀಕರಿಸುತ್ತಾರೆ. ಈ ಮಾಪನದಲ್ಲಿ ಹಸಿ ಕ್ಯಾರಟ್‌ 16 ಗ್ಲೈಸೆಮಿಕ್‌ ಇಂಡೆಕ್ಸ್‌ ಇದ್ದರೆ ಬೇಯಿಸಿದ ಕ್ಯಾರಟ್‌ 32-49 ಇರುವುದು. ಈ ಎರಡೂ ಅಂಕೆಗಳು ಮಾಪನದಲ್ಲಿ ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ನದೇ  ತಾನೇ! ಬೀಟ್‌ರೂಟ್‌ ನದು 61. ತುಸು ಹೆಚ್ಚೇ ಆದರೂ ಅಮೆರಿಕದ ಮಧುಮೇಹಿ ಸಂಸ್ಥೆಯು ಕ್ಯಾರಟ್‌ ಅನ್ನಾಗಲಿ, ಬೀಟ್‌ ರೂಟ್‌ ಅನ್ನಾಗಲಿ ಮಧುಮೇಹಿಗಳಿಗೆ ತೊಂದರೆಯಾಗುತ್ತದೆ ಎಂದು ದಾಖಲಿಸಿಲ್ಲ. ಹಾಗಾಗಿ ಆ ಬಗ್ಗೆ ಆಲೋಚಿಸುವ ಅಗತ್ಯವೇ ಇಲ್ಲ. ಆದರೆ ಕ್ಯಾರಟ್‌ ಬಳಕೆಯಲ್ಲಿ ಅದರಿಂದ ತಯಾರಾದ ಹಲ್ವಾಗೆ ಒಂದು ವಿಶೇಷತೆ ಇರುವುದರಿಂದ ಇದನ್ನು ತಿನ್ನಲು ಮಧುಮೇಹಿಗಳಿಗೆ ಸೂಚಿಸಿಲ್ಲ. ಹಸಿಯಾಗಿ ಬಳಸಲು ಕ್ಯಾರಟ್‌ ನಿಜಕ್ಕೂ ಎಕ್ಸಲೆಂಟ್‌! ಬೇಯಿಸಿದರೂ ಓಕೆ!

       ಕ್ಯಾರಟ್‌ಗೆ ಭಾರತದಲ್ಲಿ ಗಮನಾರ್ಹವಾದ ಉತ್ಪನ್ನವೇನೂ ಇಲ್ಲ. ಉತ್ಪಾದನೆ ಹಾಗೂ ಬಳಕೆಯಲ್ಲಿ ಚೀನಾ ಜಗತ್ತಿನ ನಂಬರ್‌ ಒನ್‌. ಜಗತ್ತಿನ ಸುಮಾರು 50 % ರಷ್ಟು  ಉತ್ಪಾದನೆಗೂ ಹೆಚ್ಚಾಗಿ ಅದೊಂದೇ ದೇಶ ಮಾಡುತ್ತದೆ. ಉಜೆಬೇಕಿಸ್ತಾನ (7%), ಅಮೆರಿಕಾ (5%) ರಷಿಯಾ (4%) ಮತ್ತು ಉಕ್ರೇನ್‌ (3%) ನಂತರದ ಸ್ಥಾನಗಳಲ್ಲಿವೆ. ಮೊದಲ 25ರ ಪಟ್ಟಿಯಲ್ಲಿ ಭಾರತವು ಇಲ್ಲ. ಭಾರತವು 0.75 % ಗೂ ಕಡಿಮೆ ಉತ್ಪಾದನೆಯನ್ನು ಭಾರತವು ಮಾಡುತ್ತಿದೆ.

       ಕ್ಯಾರಟ್‌ ಮೂಲತಃ ಶೀತವಲಯದ ಸಸ್ಯ. ಬಹಳ ಹಿಂದೆಯೇ ಬಹುಶಃ ಡೈನೋಸಾರ್‌ಗಳು ಅಳಿದು ಮುಂದೆ ಸಸ್ಯಲೋಕವು ವಿಕಾಸಗೊಳ್ಳುವಾಗಲೇ ವಿಕಾಸಗೊಂಡಿವೆ ಎಂದು ಸಸ್ಯವಿಜ್ಞಾನಿಗಳು ನಂಬುತ್ತಾರೆ. ಮುಂದೆ ಕೃಷಿಯ ಉಗಮದ ನಂತರ ಹತ್ತನೆಯ ಶತಮಾನದಿಂದೀಚೆಗೆ ಆಹಾರವಾಗಿ ಬಳಸಲು ಕೃಷಿಯಲ್ಲಿ ಒಂದಾಗಿವೆ.

       ಕ್ಯಾರಟ್‌ ಅನ್ನು ಮೊಲದೊಂದಿಗೆ ಚಿತ್ರಿಸುವುದು ಮಕ್ಕಳಿಗಂತೂ ಮೋಜಿನ ಸಂಗತಿ. ಮೊಲವನ್ನು ಸಸ್ಯಹಾರಿಯಾಗಿ ಗುರುತಿಸಲು ಜೊತೆಗೆ ಅದಕ್ಕೆ ಬಹು ಪ್ರಿಯವೆಂದು ಅದರ ಕೈಗೆ ಕ್ಯಾರಟ್‌ ಕೊಟ್ಟ ಚಿತ್ರಗಳು ತುಂಬಾ ಜನಪ್ರಿಯ. ಮೊಲಗಳಿಗೆ ಕ್ಯಾರಟ್‌ ಇಷ್ಟ ಎಂಬುದು ನಿಜವೇ! ಆದರೆ, ಬರೀ ಕ್ಯಾರಟ್‌ ತಿನ್ನಿಸಿ ಮೊಲಗಳನ್ನು ಸಾಕಲು ಆಗುವುದಿಲ್ಲ. ಕ್ಯಾರಟ್‌ ಅಲ್ಲಿರುವ ಹೆಚ್ಚಿನ ಸಕ್ಕರೆಯ ಅಂಶ, ಅದನ್ನು ಮಾತ್ರವೇ ಬಳಸುವ ಮೊಲದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಂಶಕಗಳಾದ ಮೊಲಗಳು ತುಸು ಗಟ್ಟಿಯಾದ ಕ್ಯಾರಟ್‌ ಅನ್ನು ಕಚ್ಚಿ ತಿನ್ನಲು ಇಷ್ಟ ಪಡುವುದಂತೂ ಹೌದು. ಅದನ್ನು ನೋಡಿ ಆನಂದಿಸಲು ಪುಟ್ಟ ಮಕ್ಕಳು ಕಾತರಿಸುವುದೂ ಹೌದು.     

       ಸಹಜವಾಗಿ ಬಣ್ಣ ರಹಿತವಾದ ಬೇರುಗಳು ಕ್ಯಾರಟ್‌ ಟರ್ನಿಪ್‌, ಬೀಟ್‌ರೂಟ್‌ಗಳಲ್ಲಿ ಬಣ್ಣ ತುಂಬಿಕೊಂಡು ಆಕರ್ಷಕವಾಗಿ ತಾಟಿಗೆ ಬಂದು ನಮ್ಮ ಆಹಾರದ ಭಾಗವಾಗಿವೆ. ಆಲೂ, ಗೆಣಸು, ಮರಗೆಣಸಿನಂತೆ ಅತೀ ಹೆಚ್ಚು ಸಕ್ಕರೆಯನ್ನೂ ಒಳಗೊಳ್ಳದೆ, ಜೊತೆಗೆ ಪ್ರೊಟೀನು, ವಿಟಮಿನ್‌ ಅನ್ನೂ ಸೇರಿಸಿಕೊಂಡು ಬಣ್ಣದ ಬೇರನ್ನು ತಾಟಿಗೆ ಬಂದು, ಹಸಿವಿಗೆ ಮೆರುಗನ್ನು ತಂದಿವೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 3 Comments

  1. Dr. R Parimala

    An excellent and elaborate article which includes origin, chemical composition and health benefits. Congratulations to the author

    1. CPUS

      Thank you madam
      Channesh

  2. Ramachandra's Vasanad

    Thank you madam

Leave a Reply