You are currently viewing ಬೀಜಗಳ ಬೇಡಿಕೆಯಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡ ತರಕಾರಿ  ಗೋರಿಕಾಯಿ/ಚವುಳಿಕಾಯಿ  (Cyamopsis tetragonoloba)

ಬೀಜಗಳ ಬೇಡಿಕೆಯಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡ ತರಕಾರಿ ಗೋರಿಕಾಯಿ/ಚವುಳಿಕಾಯಿ (Cyamopsis tetragonoloba)

ನಮ್ಮ ರಾಜ್ಯದ ದಕ್ಷಿಣ ಭಾಗದವರಿಗೆ ಗೋರಿಕಾಯಿ, ಉತ್ತರ ಭಾಗದವರಿಗೆ ಚವುಳಿಕಾಯಿ, ಮಧ್ಯೆ ಶಿವಮೊಗ್ಗ-ದಾವಣಗೆರೆಯ ಸುತ್ತ-ಮುತ್ತಲಿನವರಿಗೆ ಜವುಳಿಕಾಯಿ ಎಂದೇ ಪರಿಚಯವಾಗಿರುವ ಜನಪ್ರಿಯ ತರಕಾರಿಯನ್ನು ಭಾರತದಲ್ಲಿ ಕೆಲವು ಶತಮಾನಗಳಿಂದಲೂ ಬೆಳೆಯಲಾಗುತ್ತಿದೆ. ತರಕಾರಿಯಾಗಿ ಅದರ ವಿವಿಧ ಆಹಾರ ಪದಾರ್ಥಗಳ ಸವಿಯುತ್ತಿರುವ ನಮಗೆ, ಅದು ಕಳೆದೆರಡು-ಮೂರು ದಶಕಗಳಿಂದ ಬೀಜಗಳ ವಹಿವಾಟಿನಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡಿದ್ದು ಎಲ್ಲರಿಗೂ ವಿವರವಾಗಿ ಗೊತ್ತಿರದ ಸಂಗತಿ. ಕಾಯಿಗಳಿಗಾಗಿ ಶತಮಾನಗಳ ಆಸಕ್ತಿಯನ್ನು ಬೆಳೆಸಿದ್ದ ಗಿಡ, ಅದರ ಬೀಜಗಳಿಂದ ಒದಗುವ ಅಂಟಿನ ಆಸಕ್ತಿಗೆ ಬದಲಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಧಿಪತ್ಯ ಪಡೆದಿದೆ.

ಕೇವಲ ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರವೇ ಹೆಚ್ಚಾಗಿ ಕೃಷಿಗೆ ಒಳಗಾಗಿ ಕಾಣಬರುತ್ತಿರುವ ಇದು, ತೀರಾ ಇತ್ತೀಚೆಗೆ ಅದರ ಅಂಟಿನ ಬೇಡಿಕೆಯ ಹಿನ್ನೆಲೆಯಲ್ಲಿ ಇತರೆಡೆಗಳಲ್ಲಿಯೂ ಪರಿಚಯಗೊಂಡಿದೆ. ಈ ಗಿಡ ಮಾನವಕುಲದ ಸಖ್ಯವನ್ನು ಅದೆಷ್ಟು ನೆಚ್ಚಿಕೊಂಡಿದೆ ಎಂದರೆ, ಇದರ ವನ್ಯ ಸಂಬಂಧಿಗಳು ಇಲ್ಲವೇ ಇಲ್ಲ ಎನ್ನುವಷ್ಟು! ಈ ಪ್ರಭೇದವಂತೂ ವನ್ಯದಲ್ಲಿ ಕಾಣಬರದು. ಹಾಗಾಗಿ ಇದು ಕೇವಲ ಕೃಷಿಯಲ್ಲಿ ಮಾತ್ರ ಕಂಡು ಬರುವ ಪ್ರಭೇದ. ಸಾಕಷ್ಟು ನೀರು ಅಥವಾ ತೇವಾಂಶವನ್ನು ಕೊಡಬಲ್ಲ ಮಣ್ಣಿನ ಸುಖವಾದ ವಾತಾವರಣವಿತ್ತು ಎಂದರೆ, ಜೀವಿಯ ಅತ್ಯಂತ ಪ್ರಮುಖ ಕಾರ್ಯವಾದ ಸಂತಾನೋತ್ಪತ್ತಿಯನ್ನೂ ಮರೆತು ಬಿಡುವ ಗಿಡ. ಬಹುಶಃ ತರಕಾರಿಯಾಗಿ ಮನೆಗೆ ತಂದ ಕಾಯಿಗಳು ಬಲಿತಿದ್ದರೂ ಬೀಜಗಳು ಬಲಿತಿರದೆ, ಬರೀ ಸಿಪ್ಪೆಯಷ್ಟೇ ಒರಟಾಗಿರುವುದನ್ನು ಕಂಡಿರುತ್ತೀರಿ. ಬೀಜಗಳು ಬಲಿತು ಮೊಳೆಯುವಂತಾಗಲು ನೆಲವು ಒಂದಷ್ಟು ಶಾಕ್‌ ಕೊಡಬೇಕು. ಆಗಷ್ಟೇ ಗಿಡದಲ್ಲಿ ಬಿಟ್ಟ ಬೀಜಗಳು ಮೊಳೆಯುವಂತೆ ಬಿಡುವ ವಿಚಿತ್ರ ಸಸ್ಯ. ಬೀಜ ತುಂಬಿದ ಕಾಯಿಯಾಗಲು ಅದು ಅನಿವಾರ್ಯ. ಹೆಚ್ಚಾಗಿ ತರಕಾರಿಗಾಗಿ ಮಾತ್ರವೇ ಬೆಳೆಯುತ್ತಿದ್ದ ಕಾರಣ ಅದರ ಈ ಅರಿವು ಹೊಸತು. ಇದೇ ಈ ಗಿಡದ ಆಧುನಿಕ ಶೋಧ, ತಿಳಿವು ಮತ್ತು ಆಸಕ್ತಿಯನ್ನೂ ಬದಲಿಸಿದ್ದು ಒಂದು ವಿಶೇಷವಾಗಿದೆ. ಹಿಂದೆಲ್ಲಾ ಅದು ಹೇಗೆ ಕಾಪಾಡಿಕೊಂಡು ಬಂದಿದ್ದಾರೆ, ಎನ್ನುವ ಪ್ರಶ್ನೆಗೆ, ಕಾಯಿಗಳಲ್ಲಿ ರುವ ಒಂದೋ ಎರಡೋ ಬೀಜಗಳು ಮೊಳಕೆಯೊಡೆದು ಸಂತತಿಯು ಉಳಿದಿದೆ. ಬಹು ಪಾಲು ಬೀಜಗಳು ಅದರಿಂದ ವಂಚಿತರಾಗಿರುತ್ತವೆ.

ಗೋರಿಕಾಯಿ ಅಥವಾ ಚವುಳಿಕಾಯಿಯನ್ನು ಸಯಮಾಪ್ಸಿಸ್‌ ಟೆಟ್ರಗಾನಲೊಬ(Cyamopsis tetragonoloba) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇದೊಂದು ಲೆಗ್ಯೂಮ್‌ ಸಸ್ಯ, ಜೊತೆಗೆ ಹೆಚ್ಚು ಉಷ್ಣತೆಯನ್ನೂ, ಒಣವಾತಾರಣವನ್ನೂ ಸಹಿಸಿಕೊಂಡು ಬೆಳೆಯುತ್ತದೆ. ಇದೇ ಕಾರಣದಿಂದ ರಾಜಸ್ತಾನದಲ್ಲಿ ಇದು ಅತಿ ಹೆಚ್ಚು ಬೆಳೆಯಲಾಗುತ್ತಿದೆ. ನೀರಾವರಿಯ ಕೃಷಿಯು ಮಾತ್ರ ಕೇವಲ ತುಂಬು ಬೀಜವಿರದ ತರಕಾರಿ ಕಾಯಿಗಳನ್ನಷ್ಟೇ ಪಡೆಯಲು ಯೋಗ್ಯವಾಗಿದೆ. ಆದಾಗ್ಯೂ ಬೇಸಿಗೆಯಲ್ಲಿ ಬೆಳೆಯುವ ಬೀಜದ ಕೊಯಿಲಿನಲ್ಲೂ ಗೊತ್ತಾದ ಸಮಯದಲ್ಲಿ ಬೀಜಗಟ್ಟುವಂತೆ ನೆಲವನ್ನು ಒಣ ನೆಲವಾಗಿಸಿ ಬೆಳೆಯಲಾಗುತ್ತದೆ.

ಗೋರಿಕಾಯಿ ತರಕಾರಿಯಾಗಿಯೇ ಶತಮಾನಗಳಿಂದಲೂ ಪರಿಚಯದಲ್ಲಿದೆ. ಆದರೆ ಎರಡನೆಯ ಮಹಾಯುದ್ದದ ನಂತರದ ದಿನಗಳಲ್ಲಿ ಲೊಕಸ್ಟ್‌ ಬೀನ್‌ (Locust Bean, Carob) ನ ಬೀಜಗಳಿಂದ ಪಡೆಯಲಾಗುತ್ತಿದ್ದ ಅಂಟಿನ ಕೊರತೆಯಾಗತೊಡಗಿತು. ಈ ಸೆರಟೊನಿಯ ಸಿಲಿಕ್ವ (Ceratonia siliqua) ಎಂದು ವೈಜ್ಞಾನಿಕವಾಗಿ ಕರೆಯಲಾಗುವ ಲೊಕಸ್ಟ್‌ ಬೀನ್‌ ಕೂಡ ಲೆಗ್ಯೂಮ್‌ ಕುಟುಂಬವಾದ ಫ್ಯಾಬೇಸಿಯೆಗೆ ಸೇರಿದೆ. ಇದರ ಬೀಜದಿಂದ ತಿನ್ನಬಹುದಾದ ಅಂಟನ್ನು ಪಡೆಯಲು ಬಳಸಲಾಗುತ್ತಿತ್ತು. ಕಾರಣಾಂತರದಿಂದ ಇದರ ಉತ್ಪಾದನೆ ಕಡಿಮೆಯಾಗಿ, ಇದರ ಬದಲಾಗಿ ಗೋರಿಕಾಯಿ ಅಥವಾ ಚವುಳಿಕಾಯಿಯ ಬೀಜವನ್ನು ಬಳಸಲು ಸಾಧ್ಯವಾಯಿತು. ಎರಡೂ ಬೀಜಗಳಲ್ಲೂ ಸಾಮ್ಯತೆ ಇದ್ದು ಅಂಟು ಕೂಡ ಒಂದೆ ಬಗೆಯದು. ಇದನ್ನು ಗ್ಯಲಾಕ್ಟೊಮನನ್ ‌(Galactomannan) ಎಂಬ ಒಂದು ಬಗೆಯ ಸಕ್ಕರೆಯ ರಾಸಾಯನಿಕ. ಇದು ಆಹಾರದ, ಬಣ್ಣ ಹಾಗೂ ತೈಲಸಂಸ್ಕರಣೆಯ ಉದ್ಯಮದಲ್ಲಿ ಬಹಳ ಬೇಡಿಕೆಯಿರುವ ರಾಸಾಯನಿಕ. ಹಾಗಾಗಿ 1953ರ ಸುಮಾರಿಗೆ ಗೋರಿಕಾಯಿಯ ಅಂಟನ್ನು ಪಡೆಯುವ ಸಂಗತಿಯು ಅಂತರರಾಷ್ಟ್ರೀವಾಗಿ ಜನಪ್ರಿಯತೆಯನ್ನು ಪಡೆಯಿತು. ಇದಾದ ಸುಮಾರು ಒಂದು ಒಂದೂವರೆ ದಶಕದ ತರುವಾಯು, ಅಂದರೆ 60ರದಶಕದಲ್ಲಿ ಜಗತ್ತಿನಲ್ಲಿ ಹೆಚ್ಚು ಬೆಳೆಯುತ್ತಿರುವ ಭಾರತಕ್ಕೆ ಇದು ಹೊಸ ಸಂಗತಿಯಾಗಿ ಈ ಬೆಳೆಯ ಭವಿಷ್ಯವನ್ನೇ ಬದಲಿಸಿತು. ಅದರಲ್ಲೂ 90ರದಶಕದ ನಂತರ ಅದು ಬೇರೆಯದೇ ದಿಕ್ಕನ್ನು ಪಡೆಯಿತು.

ಅಚ್ಚರಿಯ ಸಂಗತಿ ಎಂದರೆ, ಈ ಸಸ್ಯದಲ್ಲಿ ಬೀಜಗಳ ಉತ್ಪಾದನೆಯಲ್ಲಿ ಕೆಲವು ಅಡ್ಡಿ-ಆತಂಕಗಳಿವೆ. ಬಹುಶಃ ಇದು ತನ್ನ ವನ್ಯ ಸಂಬಂಧವನ್ನೇ ಕಳೆದುಕೊಂಡು ವಿಕಾಸವಾದ ಕಾರಣವೂ ಇದ್ದೀತು. ಏಕೆಂದರೆ ಶತ-ಶತಮಾನಗಳ ಕಾಲ ಕೇವಲ ತರಕಾರಿಯ ಕಾಯಿಯಾಗಿ ಬಳಸುವ ಗಿಡವಾಗಿತ್ತು. ಇದರಿಂದಾಗಿ ಹಳೆಯ ತಲೆಮಾರಿನ ವನ್ಯ ಸಂಬಂಧದಿಂದ ದೂರವಾಗುತ್ತಾ ಕೇವಲ ಮಾನವ ಸಖ್ಯದ ಕೃಷಿಯನ್ನೇ ನಂಬಿ ಉಳಿದುಕೊಂಡಿದೆ. ಹಾಗಾಗಿ ಇದರ ಹುಟ್ಟೂರಿನ ಗುಟ್ಟನ್ನೂ ಬಿಟ್ಟು ಕೊಟ್ಟಿಲ್ಲ. ಒಂದು ಅಂದಾಜಿಂತೆ ಮೊದಲು ಕೃಷಿಗೆ ಒಳಗಾಗಿರಬಹುದಾದ ನೆಲವೆಂದು ನಂಬಲಾಗಿರುವ ಆಫ್ಘಾನಿಸ್ತಾನದ ಆಸು-ಪಾಸು ಅಥವಾ ಮಧ್ಯ ಏಶಿಯಾ ಇದರ ತವರೂರು ಎಂಬ ಚರ್ಚೆಗಳಿದ್ದರೂ, ಅದನ್ನೇ ಹೌದು ಎನ್ನುವ ದಾಖಲೆಗಳಂತೂ ಇಲ್ಲ. ಆದರೂ ಸ್ಥಳಿಯತೆ ಮತ್ತು ತವರುಗಳ ವಿಶೇಷವಾಗಿ ಅಧ್ಯಯನ ಮಾಡಿರುವ ಖ್ಯಾತ ವಿಜ್ಞಾನಿ ವ್ಯಾವಿಲೊವ್‌ ಭಾರತದಲ್ಲಿ ಇದು ಹೆಚ್ಚು ಹಂಚಿಕೆಯಾಗಿರುವುದನ್ನೇ ಗಮನಿಸಿದರೆ ಭಾರತದ ವಾಯುವ್ಯ (ಪಾಕಿಸ್ತಾನವೂ ಸೇರಿ) ಭಾಗವು ಇದರ ತವರಿನ ಸಾಧ್ಯತೆಯಾಗಿರುವ ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ.

ಇದಕ್ಕೆ ಉತ್ತರಭಾರತದಲ್ಲಿ ಕರೆಯಲು “ಗ್ವಾರ್ ‌” ಎಂಬ ಸಂಸ್ಕೃತ ಪದದಿಂದ ಹುಟ್ಟಿದ ಪದವು ಇದರ ಹೆಸರಾಗಿ ಚಾಲ್ತಿಯಲ್ಲಿದೆ. ಅದನ್ನೇ ನಮ್ಮಲ್ಲಿ ಗೋರಿಕಾಯಿ ಎನ್ನಲು ಕಾರಣವಾಗಿಬೇಕು. ಗ್ವಾರ್ ‌ಕೂಡ ಗೌರಾ ಅಂದರೆ ಹಸು ಎಂಬ ಅರ್ಥದ ಹಿನ್ನೆಲೆಯನ್ನು ಹೊಂದಿದೆ. ಇದು ಹಸುವಿನ ಆಹಾರವಾಗಿಯೂ ಬಳಕೆಯಲ್ಲಿದ್ದ ಕಾರಣ ಈ ಹೆಸರನ್ನು ಪಡೆದಿತ್ತು. ಇಂದಿಗೂ ಮೂಲತಃ ಕಾಯಿಗಳು ತರಕಾರಿಯಾಗಿ, ಬೀಜಗಳು ಅಂಟಿನ ತಯರಿಕೆಯಲ್ಲೂ, ಇತರೆ ಭಾಗವೆಲ್ಲಾ ದನಕರುಗಳ ಮೇವಾಗಿ ಬಳಕೆಯಲ್ಲಿದೆ. ಸಾಮಾನ್ಯವಾಗಿ ಬಲಿತ ಕಾಯಿಗಳು ಬಿಟ್ಟ ಬೀಜವು ಮೂರು ಮುಖ್ಯ ಭಾಗಗಳನ್ನು ಹೊಂದಿರುತ್ತದೆ. ಬೀಜ ಕವಚ(14-17%), ಪ್ರೊಟೀನ್‌ಯುಕ್ತವಾದ ಜರ್ಮ್‌ (42-47%) ಮತ್ತು ಎಂಡೊಸ್ಪರ್ಮ್‌ ಅಥವಾ ಬೀಜಪೋಷಕ (35-42%). ಬೀಜ ಪೋಷಕವು ಸಕ್ಕರೆಯುತವಾದ ಕಾರ್ಬೊಹೈಡ್ರೇಟು. ಇದನ್ನು ಅಂಟಿನ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು ವಿಶೇಷವಾದ ಕೈಗಾರಿಕಾ ಮಹತ್ವವನ್ನು ಪಡೆದಿದೆ. ಇವುಗಳ ವಿವರವನ್ನು ಮುಂದೆ ನೋಡೋಣ.

ಆರಂಭದಲ್ಲಿ ಹೇಳಿದಂತೆ ಸಾಕಷ್ಟು ಸುಖವಾದ ವಾತಾವರಣದಲ್ಲಿ ಈ ಸಸ್ಯವು ಮೊಳೆಕೆಯಾಗುವಂತಹಾ ಬೀಜಗಳನ್ನೇ ಉತ್ಪಾದಿಸುವುದಿಲ್ಲ. ಹಾಗಾಗಿ ಸಹಜವಾಗಿ ನಮಗೆಲ್ಲಾ ಪರಿಚಯದ ತರಕಾರಿಯು ಹೆಚ್ಚಿನ ನೀರಾವರಿಯಲ್ಲಿ ಬೆಳೆದ ಕಾರಣ ಎಳೆಯ ಬೀಜ ಬಲಿಯದ ಕಾಯಿಗಳೇ ಇರುತ್ತವೆ. ಗಿಡವು ಮಣ್ಣಿನ ತೇವಾಂಶದ ಕೊರತೆಯ ಸುಳಿವನ್ನು ಕಂಡಾಗ ಮಾತ್ರವೇ ಬೀಜಗಳು ಬಲಿಯುವುದಷ್ಟೇ ಅಲ್ಲದೆ, ಅವು ಮೊಳೆಕೆಯಾಗಲು ಅಣಿಯಾಗುತ್ತವೆ. ಇಲ್ಲವಾದರೆ ಬೀಜವಿದ್ದರೂ ಅವು ಮೊಳಕೆಯೊಡೆಯುವುದಿಲ್ಲ. ಬಹುಶಃ ಇದು ಹೆಚ್ಚು ಕೃಷಿಗೆ ಒಳಗಾಗಿ ಕೇವಲ ಮಾನವ ಸಖ್ಯದಲ್ಲೇ ಬೆಳೆದ ಕಾರಣವಿದ್ದಿರಬಹುದು. ಹಾಗೆನ್ನುವುದು ತೀರ್ಮಾನವೇನಲ್ಲ. ಒಟ್ಟಿನಲ್ಲಿ ಸಸ್ಯ ಶರೀರದ ಈ ಬಗೆಯ ಕ್ರಿಯೆಯನ್ನು ಗುರುತಿಸಿ ಅದನ್ನೇ ಜಾಗರೂಕವಾಗಿ ಬಳಸಿ ಬೀಜಗಳ ಉತ್ಪಾದನೆಗೆ ಮಹತ್ವವನ್ನು ಕೊಡಲಾಗಿದೆ. ಅದರಲ್ಲೂ ಇದರ ಬಲಿತ ಬೀಜಗಳೂ ವಿಶೇಷವಾದ ಬಳಕೆಯನ್ನು ಹೊಂದಿರುವುದರಿಂದ ಈ ಶರೀರಕ್ರಿಯಾ ಸಂಗತಿಯು ಇದರ ವೈಜ್ಞಾನಿಕ ಅಧ್ಯಯನಗಳಲ್ಲಿ ಮಹತ್ವ ಪಡೆದಿದೆ.

ಗೋರಿಕಾಯಿ ಅಥವಾ ಚವುಳಿಕಾಯಿ (ಸಯಮಾಪ್ಸಿಸ್‌ ಟೆಟ್ರಗಾನಲೊಬCyamopsis tetragonoloba) ವು ನೀಳವಾಗಿ ಸುಮಾರು 2-3 ಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಕೆಲವು ಗಿಡ್ಡ ತಳಿಗಳೂ ಇದ್ದು ಒಂದು-ಒಂದೂವರೆ ಮೀಟರ್‌ ಎತ್ತರವಷ್ಟೇ ಬೆಳೆಯುತ್ತವೆ. ಈ ಗಿಡದಲ್ಲಿ ಒಂದೇ ಮುಖ್ಯ ಕಾಂಡವು ನೇರವಾಗಿ ಬೆಳೆದು, ಮಧ್ಯೆ ಟಿಸಿಲುಗಳು ಕೊಂಬೆಗಳು ಅದರಿಂದ ಹೊಮ್ಮಿರುತ್ತವೆ. ಗಿಡದ ಆಳಕ್ಕಿಳಿಯುವ ಬೇರುಗಳು ಮಣ್ಣಿನ ಆಳದಿಂದ ತೇವಾಂಶವನ್ನು ಹೀರಬಲ್ಲವು. ಹಾಗಾಗಿ ಸಾಕಷ್ಟು ಬರವನ್ನು ಸಹಿಸುವ ಗುಣವನ್ನು ಹೊಂದಿದೆ. ಎಲೆಗಳೂ ಸಹಾ ನೀಳವಾದ ರೂಪದಿಂದ 5 ರಿಂದ 10 ಸೆಂ.ಮೀ ಉದ್ದವಾಗಿರುತ್ತವೆ. ಗಿಡದಲ್ಲಿ ಬಿಡುವ ಹೂವುಗಳು ಬಿಳಿ ಅಥವಾ ನೀಲಿ ಮಿಶ್ರಿತ ಬಿಳಿಯ ಬಣ್ಣದವಾಗಿರುತ್ತವೆ. ಕಾಯಿಗಳು ಗುಂಪು -ಗುಂಪಾಗಿ (Cluster) ಬಿಡುವುದರಿಂದ ಇವುಗಳಿಗೆ ಇಂಗ್ಲೀಶಿನಲ್ಲಿ ಕ್ಲಸ್ಟರ್‌ ಬೀನ್‌ (Cluster Bean) ಎಂದು ಕರೆಯುತ್ತಾರೆ. ಈ ಹಿಂದೆಯೆ ಹೇಳಿದಂತೆ ಬೀಜಗಳು ಸಾಕಷ್ಟು ಪ್ರೊಟೀನನ್ನು (ಸುಮಾರು 40%) ಹೊಂದಿದ್ದು ಜೊತೆಗೆ ಹೆಚ್ಚೂ ಕಡಿಮೆ ಅಷ್ಟೇ ಪ್ರಮಾಣದ ಅಂಟಾಗುವ ಸಕ್ಕರೆಯನ್ನು ಹೊಂದಿರುತ್ತದೆ.

ಕಾಯಿಗಳು ನಮಗೆಲ್ಲಾ ತಿಳಿದಿರುವಂತೆ ಉತ್ತಮವಾದ ತರಕಾರಿಯಾಗಿದ್ದು, ಬಗೆ ಬಗೆಯ ತಿನಿಸುಗಳಲ್ಲಿ ಬಳಕೆಯಾಗುತ್ತವೆ. ಬೀಜದಲ್ಲಿರುವ ಅಂಟಿನ ಗುಣದ ಸಕ್ಕರೆಯು ಮಾನೋಸ್‌ ಮತ್ತು ಗಾಲಾಕ್ಟೋಸ್‌ಗಳನ್ನು ಅನುಕ್ರಮವಾಗಿ 2:1 ರ ಪ್ರಮಾಣದಲ್ಲಿ ಹೊಂದಿರುತ್ತದೆ. ಇವುಗಳಿಗೆ ಹೆಚ್ಚಿನ ಜಲಜನಕದ ಬಂಧವನ್ನು (ಹೈಡ್ರೊಜನ್‌ ಬಾಂಡಿಂಗ್‌) ಉಂಟು ಮಾಡುವ ರಸಾಯನಿಕ ಗುಣವಿದ್ದು ಇದೇ ಕೈಗಾರಿಕೋಧ್ಯಮಕ್ಕೆ ಪರಿಚಯಗೊಂಡು ಗಿಡದ ಭವಿಷ್ಯವೇ ಬದಲಾಗಿದೆ. ಸುಲಭವಾಗಿ ನೀರಿನಲ್ಲಿ ಕರಗುವ ಈ ಅಂಟು, ನೀರನ್ನು ಮತ್ತು ಅದರ ಜೊತೆಗೆ ಬೆರೆವ ವಸ್ತುಗಳನ್ನೂ ಒಂದು ಮಾಡಿ ಅದರ ಜಿಗುಟು ಅಥವಾ ಅಂಟುಗುಣ (ವಿಸ್ಕಾಸಿಟಿ-Viscosity)ಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣವಾದ ಗ್ಯಲಾಕ್ಟೊಮನನ್ ‌(Galactomannan) ನಲ್ಲಿರುವ ಎರಡೂ ಸಕ್ಕರೆಯ ಬಗೆಗಳೂ ನೀರಿನೊಂದಿಗೆ ಹದವಾಗಿ ಮಿಳಿತವಾಗಿ ಜಿಗುಟನ್ನು ಒದಗಿಸುತ್ತವೆ. ಅಂಟಿನ ಪುಡಿಯ ಕಣಗಳ ಗಾತ್ರ, ಅದರಲ್ಲಿನ ತೇವಾಂಶ ಮತ್ತು ಈ ಸಕ್ಕರೆಯ ಅಂಶಗಳು ಸೇರಿಕೊಂಡು ಜಿಗುಟುತನವನ್ನು ನಿರ್ಧರಿಸುತ್ತವೆ. ಇದು ಅದರ ವಿವಿಧ ಬಳಕೆಯನ್ನು ನಿರ್ಧರಿಸುತ್ತದೆ.

ಗೋರಿಕಾಯಿಯ ಅಂಟನ್ನು ಗೌರ್‌ ಗಮ್‌ (Guar Gum) ಎಂದೆ ಕರೆಯುತ್ತಾರೆ. ಇದರ ತಯಾರಿಯು ಹೇಗೆಂದರೆ ಸರಳ. ಮೊದಲು ಗೋರಿಕಾಯಿಯ ಬೀಜಗಳನ್ನು ಮಿಲ್‌ ಮಾಡಿ ಬೇಳೆಮಾಡಲಾಗುತ್ತದೆ. ಬೀಜ ಕವಚ ಅಥವಾ ಹೊಟ್ಟನ್ನು ತೆಗೆದು, ಬೇಳೆಯನ್ನು ನೀರಿನಲ್ಲಿ ನೆನೆಯಿಸಿ ಮತ್ತೆ ಪುಡಿಮಾಡಲಾಗುತ್ತದೆ. ಬೀಜ ಪೋಷಕದ ಜೊತೆಯ ಪ್ರೊಟೀನನ್ನೂ ಬೇರೆ ಮಾಡಿಯೂ ಅಥವಾ ಹಾಗೆಯೇ ಪುಡಿಯನ್ನೂ ಅಂಟಿನ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಂಟಿನ ಶುದ್ಧತೆಯನ್ನು ಪಡೆಯಲು ಇದರ ಜೊತೆಗೆ ಮಿಶ್ರವಾಗಿರುವ ಪ್ರೊಟೀನಿನ ಬೇರ್ಪಡಿಸಿವಿಕೆ ಮುಂತಾದ ವಿಧಾನಗಳು ಸಹಾಯವಾಗುತ್ತವೆ. ಮುಖ್ಯವಾಗಿ ಈ ಅಂಟು ಸಿಹಿ ತಿನಿಸುಗಳಲ್ಲದೆ, ಬೇಕರಿಯ ಉತ್ಪನ್ನಗಳು, ಕಾಗದ, ಬಟ್ಟೆಯ ತಯಾರಿ, ಬಣ್ಣ, ಗಣಿಗಾರಿಕೆ ಅಲ್ಲದೆ ತೈಲೋದ್ಯಮಗಳಲ್ಲಿ ಬಳಕೆಯಾಗುತ್ತದೆ. ಭಾರತದಲ್ಲಿ ಒಟ್ಟು ಬೀಜಗಳ ಉತ್ಪಾದನೆಯೇ 8-10 ಲಕ್ಷ ಟನ್ನುಗಳಿದ್ದು ಭಾರಿ ಬೇಡಿಕೆಯ ಕೃಷಿ ಕೈಗಾರಿಕೆಯನ್ನು ಕಳೆದೆರಡು ಮೂರು ದಶಕಗಳಲ್ಲಿ ಸೃಷ್ಟಿಸಿದೆ.

ಕಳೆದ 90 ರದಶಕದಲ್ಲಿ 200- 300 ಕೋಟಿ ವಹಿವಾಟು ನಡೆಸುತ್ತಿದ್ದ ಈ ಬೆಳೆಯು ಮುಂದೆ 2-3 ದಶಕದಲ್ಲಿ 10ರಿಂದ 15ಪಟ್ಟು ಹೆಚ್ಚಿದೆ. ಇದೀಗ ಸುಮಾರು 4000ಕೋಟಿ ರುಪಾಯಿಯ ಅಂತರರಾಷ್ಟ್ರೀಯ ವಹಿವಾಟಿಗೆ ಅವಕಾಶವನ್ನು ಒದಗಿಸಿದೆ. ರಾಜಸ್ತಾನ ಮತ್ತು ಹರಿಯಾನ ಎರಡೇ ರಾಜ್ಯಗಳು ಪ್ರತಿಶತ 95ರಷ್ಟು ಗೋರಿಕಾಯಿ ಉತ್ಪಾದನೆ ಮಾಡುತ್ತವೆ. ಅದರಲ್ಲಿ ರಾಜಸ್ತಾನ ಒಂದೇ 75-80% ಉತ್ಪಾದನೆಯನ್ನು ನಿರ್ವಹಿಸುತ್ತಿದೆ.

ಈ ಬೆಳೆಯ ಅಭಿವೃದ್ಧಿ ಮತು ನಿರ್ವಹಣೆಯ ಅಧ್ಯಯನ ಮತ್ತು ಸಂಶೋಧನೆಯಲ್ಲಿ ರಾಜಸ್ತಾನದ ಜೋದಪುರದಲ್ಲಿ ಇರುವ ಕೇಂದ್ರೀಯ ಒಣ ಕೃಷಿವಲಯ ಸಂಶೋಧನಾ ಸಂಸ್ಥೆ (Central Arid Zone Research Institute)ಯು ಹೆಚ್ಚಿನ ಆಸಕ್ತಿ ಹಾಗೂ ಮುಂದಾಳತ್ವವನ್ನು ವಹಿಸಿದೆ. ದಕ್ಷಿಣದಲ್ಲಿ ತಮಿಳುನಾಡಿನಲ್ಲೂ ಇದರ ಬಗೆಗೆ ಹೆಚ್ಚಿನ ಆಸಕ್ತಿಯು ಕಂಡುಬರುತ್ತದೆ.

ಏನೇ ಬದಲಾಗಿರಲಿ, ತರಕಾರಿಯಾಗಿ ತಿನ್ನುವದನ್ನಂತೂ ಯಾರೂ ಬದಲಿಸಿಲ್ಲ. ಶತಮಾನಗಳಿಂದ ಅದು ಬೆಳೆದುಕೊಂಡೇ ಬರುತ್ತಿದೆ. ಈಗಂತೂ ಹಿಂದಿಗಿಂತಲೂ ಹೆಚ್ಚಾದ ಇಳುವರಿ, ಬೇರೆ, ಬೇರೆ ಕಾಲದ ಕೊಯಿಲೂ ಇರುವುದರಿಂದ ಸಾಕಷ್ಟು ಪ್ರೊಟೀನ್‌ ಇರುವ ತರಕಾರಿಯು ನಮ್ಮ ನಿಮ್ಮೆಲ್ಲರ ನಾಲಿಗೆಯ ರುಚಿಯನ್ನು ನಿರ್ವಹಿಸುತ್ತಲೇ ಇದೆ. ಜೊತೆಗೆ ಇತರೇ ಅನೇಕ ತರಕಾರಿಗಳಿಗೆ ಹೋಲಿಸಿದರೆ ಇದರ ರಕ್ಷಣೆಗೆ ಬಳಸುವ ರಾಸಾಯನಿಕ ಔಷಧಗಳು ಕಡಿಮೆಯೆ. ಹಾಗಾಗಿ ತಿನ್ನಲು ಸೊಗಸಾದ ತರಕಾರಿ. ಜೊತೆಗೆ ಲೆಗ್ಯೂಮ್‌ ಸಸ್ಯವಾದ್ದರಿಂದ ಬೆಳೆಯುವ ನೆಲಕ್ಕೂ ಸಾರಜನಕದ ಸ್ಥಿರೀಕರಣದ ಲಾಭ.

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್‌

This Post Has 2 Comments

  1. Sreepathi

    Good article with lots of unknown information.
    Thank you

  2. Ranganatha

    ಸರ್ ನಮಸ್ಕಾರ ನನ್ನ ಹೆಸರು ರಂಗನಾಥ್,
    ನೀವು ಕೊಟ್ಟ ಮಾಹಿತಿ ತುಂಬಾ ಉಪಯುಕ್ತವಾದದ್ದು,
    ನಮ್ಮ ಕರ್ನಾಟಕದಲ್ಲಿ ಇದರ ಮಾರ್ಕೆಟ್ ಎಲ್ಲಿ ಇದೆ ದಯವಿಟ್ಟು ತಿಳಿಸಿ ಮತ್ತು ಕಾಂಟಾಕ್ಟ್ ನಂಬರ್ ಕೊಡಿ.

Leave a Reply