You are currently viewing ಪರಿಮಳ ತುಂಬಿದ ಕಾಫಿಯ ಆನಂದಕ್ಕೆ ಯಾವುದು ಸಾಟಿ?

ಪರಿಮಳ ತುಂಬಿದ ಕಾಫಿಯ ಆನಂದಕ್ಕೆ ಯಾವುದು ಸಾಟಿ?

ಮುಂಜಾನೆಯಲ್ಲಿನ ಒಂದು ಒಳ್ಳೆಯ ಕಾಫಿಗೆ ಯಾವುದೂ ಸಮವಲ್ಲ. ಕಾಫಿಯೇನೂ ಚಹಾದಷ್ಟು ಸರ್ವಾಂತರ್ಯಾಮಿಯಲ್ಲ! ದೇಶದಲ್ಲಿ ಎಲ್ಲಾದರೂ ಚಹಾ ಕುಡಿಯಬಹುದು, ಆದರೆ ಹಲವು ಭಾಗಗಳಲ್ಲಿ ಕಾಫಿಯನ್ನು ಕುಡಿಯಲು ಸಾಧ್ಯವೇ ಇಲ್ಲ. ಆದರೆ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗಾ ಅಥವಾ ಹಾಸನದ ಭಾಗಗಳಲ್ಲಿ ಕಾಫಿ ಕುಡಿಯದೇ ಬರುವುದೂ ಆಗುವುದಿಲ್ಲ. ಕರ್ನಾಟಕದಲ್ಲಿ, ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಕಾಫಿಯ ಬಯಕೆಯು ಪ್ರತಿ ಮುಂಜಾವನ್ನಷ್ಟೇ ಅಲ್ಲ, ಕೆಲಸಗಳ ಮಧ್ಯೆ ಅನಿವಾರ್ಯದ ಬಿಡುವುಗಳನ್ನೂ ಆವರಿಸಿಕೊಂಡಿರುತ್ತದೆ. ಬೆಳಗಿನ ಹೊತ್ತು ಕೈಯಲ್ಲಿ ಒಂದು ಕಪ್ಪು ಕಾಫಿ ಹಿಡಿದು ಹೀರುತ್ತಿರುವಾಗ, ಅದರ ಪರಿಮಳದ ಆನಂದ ಅದೆಷ್ಟು ಆವರಿಸಿರುತ್ತೆಂದರೆ, ಆ ಪರಿಮಳ ಬಂದುದಾದರೂ ಹೇಗೆ? ಕಾಫಿಯಾದರೂ ಎಲ್ಲಿಂದ ಬಂತು? ಅದರ ತಯಾರಿಯನ್ನು ಕಂಡುಹಿಡಿದವರ್ಯಾರು? ಇತ್ಯಾದಿ ಯಾವ ಪ್ರಶ್ನೆಗಳೂ ನೆನಪಾವುದಿಲ್ಲ. ಅಷ್ಟು ಪರಿಮಳವು ಆವರಿಸಿದ್ದರೆ ಆಶ್ಚರ್ಯವಿಲ್ಲ. ನನ್ನ ಗೆಳೆಯನೊಬ್ಬ ಸರಿ ಸುಮಾರು ಮಧ್ಯವಯಸ್ಕನಾಗುವವರೆಗೂ ಕಾಫಿ, ಚಹಾ ಏನನ್ನೂ ಕುಡಿಯದವ, ಮೂರ್ನಾಲ್ಕು ದಶಕಗಳಾದ ಮೇಲೆ ಕಾಫಿಯ ಪರಿಮಳಕ್ಕೆ ಮನಸೋತಿದ್ದಾನೆ. “Nothing Like a Good Coffee” ಎಂದೆಲ್ಲಾ ಕೊಂಡಾಡುತ್ತಾನೆ. “ಅದೇನು ಫ್ಲೇವರ್ರೂ…. ಇಷ್ಟು ದಿನ ಅದ್ಯಾಕೆ ಬಿಟ್ಟೆ” ಅಂತೆಲ್ಲಾ ಹಲುಬುತ್ತಾನೆ.

ಕಾಫಿಯ ಗಿಡಗಳು ಅರಾಬಿಕ್ ರಾಷ್ಟ್ರಗಳಿಂದ ಹೊರ ಬಂದು ಮೊಟ್ಟ ಮೊದಲ ಬಾರಿಗೆ ನೆಲೆಕಂಡದ್ದೇ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ. ಬಾಬಾ ಬುಡನ್ ಎಂಬ ಸೂಫಿ ಸಂತರು 1670ರಲ್ಲಿಯೆ ತಂದು ನೆಟ್ಟ ನೆಲ ಇಂದಿನ ಬಾಬಾಬುಡನ್‍ ಗಿರಿ. ಏಮನ್‍ ನಿಂದ ಕಾಫಿ ಬೀಜಗಳನ್ನು ಕಳ್ಳತನದಲ್ಲೇ ತಂದರೂ ಕೂಡ, ಅವರೇನು ಯಾವುದೇ ಲಾಭಕ್ಕಾಗಿ ತಂದಿರಲಿಲ್ಲ. ಕಾಫಿ ಕುಡಿಯುವುದನ್ನು ಕಂಡುಕೊಂಡದ್ದೇ ಸೂಫಿಗಳು. ಒಂದು ದಂತಕಥೆಯಂತೆ ಆಡುಕಾಯುವ ಹುಡುಗನೊಬ್ಬ ಮೊದಲಬಾರಿಗೆ ಕಾಫಿಯ ಕೆಂಪುಬಣ್ಣದ ಹಣ್ಣುಗಳನ್ನು ತಿಂದ ಕೆಲವು ಆಡುಗಳು ಉತ್ತೇಜಿತವಾಗಿ ಕುಣಿದಾಡುವುದನ್ನು ಗಮನಿಸಿದ್ದೇ ಮೂಲ ಕಾರಣವಾಯಿತು. ಆತನ ಗುರುಗಳಲ್ಲಿ ಒಬ್ಬರಾದ ಸೂಫಿಸಂತರೊಬ್ಬರು ಆತನಿಂದ ಕಂಡುಕೊಂಡು, ಗಿಡದ ಹಣ್ಣುಗಳ ತಿಂದರು. ಅಷ್ಟೇ ಅಲ್ಲ ಅದರ ಬೀಜಗಳನ್ನು ಬಳಸಿ ಕಷಾಯ ಮಾಡಿ ಕುಡಿದು ಆನಂದಿಸಿದರು. ಇದರಿಂದಾಗಿ ತುಂಬಾ ಹೊತ್ತು ಎಚ್ಚರವಾಗಿದ್ದು, ತಮ್ಮ ಅಧ್ಯಯನ, ಹಾಗೂ ಆಧ್ಯಾತ್ಮ ಚಿಂತನೆಗಳಲ್ಲಿ ಕಳೆಯಲು ಸಾಧ್ಯವಾಗುವುದನ್ನೂ ಕಂಡುಕೊಂಡರು. ಇದನ್ನೇ ಕೆಲವು ಸೂಫಿಗಳು ಬಳಸಿಕೊಂಡು ಹೆಚ್ಚು ಸಮಯ ಎಚ್ಚರವಾಗಿದ್ದು ಸಮಯವನ್ನು ತಮ್ಮ ಆಸಕ್ತಿಗೆ ವಿಸ್ತರಿಸಿಕೊಳ್ಳಲು ಬಳಸಿಕೊಂಡದ್ದೇ ಕಾಫಿಯು ಬಳಕೆಗೆ ಬರಲು ಕಾರಣವಾಯಿತು.

ಇದೇ ಬಗೆಯ ಮತ್ತೊಂದು ಕಥೆಯಂತೆ ಮೊದಲು ಕೆಲವು ಹಕ್ಕಿಗಳು ಕಾಫಿಯ ಹಣ್ಣುಗಳನ್ನು ತಿಂದು ಉಲ್ಲಾಸಿತರಾಗಿರುವುದನ್ನು ಕಂಡ ಸೂಫಿ ಸಂತರೊಬ್ಬರು, ತಾವೂ ತಿಂದು ನೋಡಿ ಕಲಿತುಕೊಂಡರು. ಅದನ್ನೇ ಬೀಜಗಳ ಕಷಾಯವನ್ನೂ ಮಾಡಿ ಕುಡಿದು ಆನಂದಿಸಿದ ಕಾರಣವನ್ನೂ ಹೇಳಲಾಗುತ್ತದೆ. ಅಂತೂ ಅನಾಮಧೇಯ ಸೂಫಿ ಸಂತರೊಬ್ಬರಿಂದ, ಮುಂದೆ ಸೂಫಿಗಳ ಮೂಲಕವೇ ಜಗತ್ತಿಗೆ ಕಾಫಿಯ ತಯಾರಿಕೆ ಕಲೆಯು ಒಲಿದು, ಸಾಕಷ್ಟು ಜನರಿಗೆ ಚಟವಾಗಿದ್ದು ಸುಳ್ಳಲ್ಲ.

ಚಹಾ ಭಾರತಕ್ಕೆ ಬರುವುದರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಲಾಭದಾಯಕ ಹುನ್ನಾರಗಳಿದ್ದವು. ಕಾಫಿ ಭಾರತದ ನೆಲಕ್ಕೆ ಕರ್ನಾಟಕದಲ್ಲಿ ಆಧ್ಯಾತ್ಮದ ಹಿನ್ನೆಲೆಯಲ್ಲಿ ಬಂದಿತೆನ್ನಬಹುದು. ಏಕೆಂದರೆ ಸೂಫಿ ಸಂತ ಬಾಬಾ ಬುಡನ್ ಕೇವಲ ತಮ್ಮ ಬಳಕೆಯ ಆಸಕ್ತಿಯಿಂದ ಮಾತ್ರವೇ ತಂದವರು. ಕಾಫಿ ಸಸ್ಯವು ಸಣ್ಣ ಮರ ಅಥವಾ ದೊಡ್ಡ ಗಿಡ. ಅದರ ತವರೂರು ಆಫ್ರಿಕಾದ ಇಥಿಯೋಪಿಯಾ ಮತ್ತು ಸುಡಾನ್. ಇದು ರುಬಿಯೇಸಿಯೆ ಸಸ್ಯ ಕುಟುಂಬದ ಕಾಫಿಯಾ ಸಂಕುಲಕ್ಕೆ ಸೇರಿದೆ. ಸಸ್ಯಕುಟುಂಬಗಳಲ್ಲಿ ನಾಲ್ಕನೆಯ ದೊಡ್ಡ ಕುಟುಂಬವಾದ ರುಬಿಯೇಸಿಯೆ ಸುಮಾರು 650 ಸಂಕುಲಗಳನ್ನು ಹೊಂದಿದೆ. 13,000ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಕಾಫಿಯಾ ಸಂಕುಲದಲ್ಲಿ 120ರಷ್ಟು ಪ್ರಭೇದಗಳಿದ್ದು, ಅವುಗಳಲ್ಲಿ ಎರಡು ಮುಖ್ಯವಾದ ಪ್ರಭೇದಗಳನ್ನು ಕಾಫಿ ಪೇಯದ ತಯಾರಿಯಲ್ಲಿ ಬಳಸಲಾಗುತ್ತಿದೆ. ಆ ಎರಡು ಪ್ರಭೇದಗಳು ಕಾಫಿಯಾ ಅರಾಬಿಕಾ ((Coffea arabica ) ಮತ್ತು ಮತ್ತೊಂದು ಕಾಫಿಯಾ ಕಾನಾಫೊರಾ ಅಥವಾ ರೊಬಸ್ಟಾ (Coffea canephora or Coffea Robusta). ಇವುಗಳಿಂದ ತಯಾರಾಗುವ ಕಾಫಿ ಪೇಯವನ್ನೂ ಅರಾಬಿಕಾ ಕಾಫಿ ಮತ್ತು ರೊಬಸ್ಟಾ ಕಾಫಿ ಎಂದೇ ಕರೆದರೂ ಕುಡಿಯುವಾಗ ಏನೂ ಗುರುತಿಸಲಾಗದು. ಅರಾಬಿಕಾ ಹೆಚ್ಚು ಸ್ಟ್ರಾಂಗ್ ಹಾಗೂ ಕಡು ಕಪ್ಪು, ರೊಬಸ್ಟಾ ಅಷ್ಟೊಂದು ಕಡುವಾಗಿರದು. ಕರ್ನಾಟಕದ ಕಾಫಿಯ ಕುರಿತು ನಂತರ ನೋಡೋಣ. ಏಕೆಂದರೆ ಇಲ್ಲಿಗೆ ಮೊದಲೇ ಬಂದರೂ ಬ್ರೆಜಿಲ್ ಕಾಫಿಯಲ್ಲಿ ಮೊದಲ ಸ್ಥಾನ ಪಡೆದದ್ದು ಹೇಗೆ, ಎಂಬ ಕುತೂಹಲ ಅಲ್ಲವೇ? ಅದಕ್ಕೆ ಈಗಲೆ ನೋಡೋಣ ಬನ್ನಿ.

ಕಾಫಿಯ ತಯಾರಿಯು ಹೆಚ್ಚೂ ಕಡಿಮೆ 15ನೆಯ ಶತಮಾನದಿಂದ ಆರಂಭವಾಗಿರುವುದೆಂದು ನಂಬಲಾಗಿದೆ. ಮುಂದೆ 17ನೆಯ ಶತಮಾನದ ಆದಿಯಲ್ಲೇ “ಅರೆಬ್ಬಿಯನ್ ನೈಟ್ಸ್” ಅನ್ನು ಫ್ರೆಂಚ್ ಭಾಷೆಗೆ ಅನುವಾದಿಸಿದ ಫ್ರ್ರೆಂಚ್ ಬರಹಗಾರ ಆಂಟೊನಿ ಗಲ್ಲಾಂಡ್ ಎಂಬವರ ಬರಹಗಳ ಮೂಲಕ ಕಾಫಿಯು ಯೂರೋಪ್‍ ಗೆ ಪರಿಚಯವಾಯಿತು. ಫ್ರಾನ್ಸಿನ ಪ್ರಾಚ್ಛ ಅಧ್ಯಯನಗಳ ವಿಜ್ಞಾನಿಯೂ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಆಸಕ್ತರೂ ಆಗಿದ್ದ ಆಂಟೊನಿಯು ಅರಾಬಿಕ್ ಹಾಗೂ ಪರ್ಷಿಯನ್ ಭಾಷೆಯಲ್ಲಿ ನಿಷ್ಣಾತರು. “ಅರೆಬ್ಬಿಯನ್ ನೈಟ್ಸ್” ಎಂದೇ ಖ್ಯಾತವಾದ One Thousand and One Night ಅನ್ನು ಅರಾಬಿಕ್ ನಿಂದ ಯೂರೋಪಿಗೆ ಪರಿಚಯಿಸಿದ್ದೇ ಈತ. ಈತನ ಬರಹಗಳ ಮೂಲಕ ಕಾಫಿ ಪರಿಚಯವಾಯಿತು. (One Thousand and One Nightಪುಸ್ತಕವನ್ನು ಸಾವಿರದ ಒಂದು ರಾತ್ರಿಎಂದು ಪ್ರೊ. ಸಿ.ಕೆ. ವೆಂಕಟರಾಮಯ್ಯನವರು ಕನ್ನಡಕ್ಕೂ ಅನುವಾದಿಸಿದ್ದಾರೆ) ಹಾಗೆ ಪರಿಚಯದ ನಂತರ ಮುಂದೆ ಫ್ರೆಂಚರಲ್ಲಿ ಸೆರೆಯಾಳುಗಳಾಗಿದ್ದ ಮುಸಲ್ಮಾನ ಗುಲಾಮರ ಮೂಲಕ ಕಾಫಿ ಗಿಡಗಳು ಮಾಲ್ತಾ ದ್ವೀಪದಲ್ಲಿ ಮೊದಲು ಯೂರೋಪನ್ನು ಸೇರಿದವು.

ಫ್ರಾನ್ಸಿನ ಗೆಬ್ರಿಯಲ್ ಡಿ ಕ್ಲೀವ್ ಎಂಬ ನೌಕಾಧಿಕಾರಿಯೊಬ್ಬರು ಹೊಸ ಜಗತ್ತಿನ ಅಮೆರಿಕಾದ ದ್ವೀಪಗಳ ಫ್ರೆಂಚ್ ವಸಾಹತುಗಳಿಗೆ ಕೊಂಡೊಯ್ದರು. ಗೆಬ್ರಿಯಲ್ 1720ರ ಸುಮಾರಿಗೆ ಕೆರಾಬಿಯನ್ ದ್ವೀಪಗಳ ಫ್ರೆಂಚ್ ವಸಾಹತುಗಳಲ್ಲಿ ಇದನ್ನು ಪರಿಚಯಿಸಿದರು. ಕೇವಲ ಎರಡೇ ಗಿಡಗಳನ್ನು ಗೆಬ್ರಿಯಲ್ ಅಮೆರಿಕಾ ನೆಲಕ್ಕೆ ತೆಗೆದುಕೊಂಡು ಹೋಗಿದ್ದರಂತೆ. ಹಾಗೆ ತೆಗೆದುಕೊಂಡು ಹೋದ ಗೆಬ್ರಿಯಲ್ ಕೆರಾಬಿಯನ್ ದ್ವೀಪಗಳ ಮಾರ್ಟಿನಿಕ್ ದ್ವೀಪದಲ್ಲಿ ಮೊದಲು ನೆಟ್ಟರು. ಆ ಎರಡು ಗಿಡಗಳು ಮುಂದಿನ 50 ವರ್ಷಗಳಲ್ಲಿ 20,000 ಗಿಡಗಳಾದವು. ಹೀಗೆ ಫ್ರೆಂಚ್ ವಸಾಹತುಗಳಿಂದ ಹೊಸ ಪ್ರಪಂಚಕ್ಕೆ ಕಾಲಿಟ್ಟ ಕಾಫಿ ಗಿಡಗಳು ಮುಂದೆ ದಕ್ಷಿಣ ಅಮೆರಿಕಾವನ್ನು ತಲುಪಿ ಬ್ರೆಜಿಲ್ ಸೇರಿದವು. ಬ್ರೆಜಿಲ್ ಗೆ 1727ರಲ್ಲೇ ಹೊಕ್ಕರೂ ಮುಂದೆ 1822ರ ವರೆವಿಗೂ ಜನಪ್ರಿಯವಾಗಿರಲಿಲ್ಲ. ಆ ನಡುವೆ 1773ರ “ಬೊಸ್ಟನ್ ಟೀ ಪಾರ್ಟಿ” ಚಳುವಳಿಯು ಚಹಾ ಬಳಕೆಗೆ ದೊಡ್ಡ ಪ್ರತಿರೋಧವನ್ನು ತಂದ ಕಾರಣವು ಕಾಫಿಗೆ ಹೊಂದಿಕೊಳ್ಳುವ ಅವಕಾಶವನ್ನು ಕೊಟ್ಟವು. ಹಾಗಾಗಿ 1850ರ ಸುಮಾರಿಗೆ ಬ್ರೆಜಿಲ್ ಅನ್ನು ಕಾಫಿಯ ಸಾಮ್ರಾಜ್ಯವನ್ನಾಗಿಸಿದವು. ಸಾಲದಕ್ಕೆ ಮುಂದೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಬ್ರೆಜಿಲ್ ಮೊದಲ ಸ್ಥಾನಪಡೆದ್ದೇ ಅಲ್ಲದೆ ರಪ್ತು ಮಾಡುವಲ್ಲಿ ಇತರೇ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಮಾಡುವ ಕಾಫಿಯನ್ನೂ ಮೀರಿ ರಫ್ತು ಮಾಡುವ ರಾಷ್ಟ್ರವಾಯಿತು.

ಅದಿರಲಿ ನಾವೆಲ್ಲಾ ಕುಡಿಯುವ ಮತ್ತು ಹೆಸರಿಸಿರುವ “ಕಾಫಿ” ಪದವು ಬಂದದ್ದೂ ಹೇಗೆಂದು ನೋಡೋಣ. ಕಾಫಿ (Coffee) ಎನ್ನುವ ಪದವು ಇಂಗ್ಲೀಶ್ ಭಾಷೆಯನ್ನು ಹೊಕ್ಕಿದ್ದೇ 1582ರಲ್ಲಿ. ಟರ್ಕಿಯ ಒಂದು ಪ್ರಾದೇಶಿಕ ಭಾಷೆಯ ಪದ “ಕಾಹ್ವೆ” ಎಂಬುದು ಮುಂದೆ “ಅರಾಬಿಕ್” ನಲ್ಲಿ “ಕ್ವಾಹ್ವಾ” ವನ್ನು ಸಮೀಕರಿತ್ತು. ಕ್ವಾಹ್ವಾ ಪದವನ್ನು ವೈನ್-ಅನ್ನು ಹೆಸರಿಸಲು ಬಳಸಲಾಗುತ್ತಿಲ್ಲದೆ, ಇದು ಕ್ವಾಹಾ ಅಂದರೆ ಹಸಿವನ್ನು ಮುಂದೂಡುವ ಎಂಬ ಅರ್ಥದಿಂದಲೂ ಹುಟ್ಟಿದ್ದಾಗಿತ್ತು. ಇದೇ ಪದವನ್ನೇ “ಶಕ್ತಿದಾಯಕ” ಎಂಬರ್ಥದಲ್ಲೂ ಬಳಸುವುದರಿಂದ ಕಾಫಿಗೆ ಅದೂ ಸೇರಿಕೊಂಡಿತ್ತು. ಇತಿಯೋಪಿಯಾದಿಂದ ಅರೇಬಿಯಾಕ್ಕೆ ಕಾಫಿಯು ರಫ್ತಾದಾಗ ಈ ಮೂಲ ಹುಡುಕಾಟಗಳನ್ನೆಲ್ಲಾ ಅಲ್ಲಗಳೆದದ್ದೂ ಇದೆ. ಜೊತೆಗೆ ಈಗ ಇತಿಯೋಪಿಯಾದಲ್ಲೇ ಇರುವ ಹಿಂದೆ “ಕಾಫಾ” ಎಂದು ಕರೆಯಲಾಗುತ್ತಿದ್ದ ಪುಟ್ಟ ರಾಜ್ಯಕ್ಕೆ ಮೊದಲು ಕಳಿಸಲಾದ ಕಾರಣವನ್ನೂ ಸೇರಿಸಲಾಗುತ್ತದೆ. ಆದರೂ ಅದೇ ಕ್ವಾಹಾ ಪದದ ಮತ್ತೊಂದು ಮೂಲಾರ್ಥವಾದ “ಕಪ್ಪು ಬಣ್ಣ”ದ ಎಂಬ ಆಧಾರದಿಂದಲೂ ಕಾಫಿಗೆ ಹೆಸರು ಬರಲು ಕಾರಣವಾಗಿದೆ, ಎಂಬ ವಾದಗಳೂ ಇವೆ. ಹೀಗೆಲ್ಲಾ ತನ್ನ ಬಣ್ಣ, ರಫ್ತುಗೊಂಡ ನೆಲ, ಬಳಸಿದ್ದರ ಪರಿಣಾಮ, ಮುಂತಾದವೆಲ್ಲಾ ಸೇರಿ “ಕಾಫಿ” ಹೆಸರನ್ನು ಪಡೆದುಕೊಂಡಿದೆ. ಇದು ಇಂಗ್ಲೀಶಿನ ಕಾಫಿಯಾಗಲು ಕ್ವಾಹಾ ಮೂಲದಿಂದ ಬಂದ ಡಚ್ ಪದ Koffie ಯ ಮೂಲಕ ಕಾರಣವಾಗಿದೆ.

ಇಷ್ಟೊಂದು ಉದ್ದವಾದ ಕಥನವನ್ನು ಹೊಂದಿರುವ ಗಿಡಗಳ ಪ್ರಭಾವಗಳ ಕಥನ ಕೂಡ ದೊಡ್ಡದಿದೆ. ರುಬಿಯೇಸಿಯೆ ಕುಟುಂಬದಲ್ಲಿ ಅತ್ಯಂತ ಜನಪ್ರಿಯವಾದ ಸಸ್ಯ ಕಾಫಿ. ಕುಟುಂಬದ ಉಳಿದ ಸಸ್ಯಗಳಲ್ಲಿ ಹೆಚ್ಚಿನವು ಅಲಂಕಾರಿಕ ಹಾಗೂ ಔಷಧಿ ಸಸ್ಯಗಳು. ಮತ್ತೆ ಕೆಲವನ್ನು ಬಣ್ಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನೇರವಾಗಿ ಆಹಾರವನ್ನು ಹೊಕ್ಕ ಬೆಳೆಗಳು ಈ ಕುಟುಂಬದಲ್ಲಿ ಇಲ್ಲ. ಹಾಗಾಗಿ ಕಾಫಿ ಗಿಡಕ್ಕೆ ರಾಜ ಮರ್ಯಾದೆ! ಇದೆಲ್ಲದರ ಜತೆಗೆ ಕಾಫಿಯು ತುಂಬಾ ಸುಂದರವಾದ ಗಿಡವೇ! ಸುಮಾರು 30 ರಿಂದ 35 ಅಡಿವರೆಗೂ ಎತ್ತರವಾಗಿ ಬೆಳೆಯಬಲ್ಲ ಗಿಡ. ಆದರೂ 5-6 ಅಡಿ ಎತ್ತರದಲ್ಲಿ ಇರುವಂತೆ ನಿರ್ವಹಿಸಲಾಗುತ್ತದೆ. ಇದರಲ್ಲಿ ರೆಂಬೆ-ಕೊಂಬೆಗಳು ಹರಡಿಕೊಂಡಿದ್ದು, ಗಿಡವೆಲ್ಲಾ ತುಂಬಿಕೊಂಡಂತೆ ಕಾಣುತ್ತದೆ. ಮಳೆ ಬಂದು ನಿಂತ ಮೇಲೆ ಅಥವಾ ಸ್ಪಿಂಕ್ಲರಿನಿಂದ ನೀರು ಚಿಮ್ಮಿಸಿಕೊಂಡ ಗಿಡಗಳು, ಸ್ನಾನ ಮಾಡಿ ಶುಭ್ರವಾಗಿದ್ದಂತೆ ಹೊಳುಪಿನಿಂದ ಕಂಗೊಳಿಸುತ್ತವೆ. ಎಲೆಗಳು ಒಂದನ್ನೊಂದು ಎದುರು-ಬದುರಾಗಿ ಅಚ್ಚುಕಟ್ಟಾಗಿ ಜೋಡಿಸಿದಂತೆ ಕಾಣುತ್ತವೆ. ಕಾಫಿಯ ಎಲೆಗಳು ದಟ್ಟ ಹಸಿರಾಗಿದ್ದು ಹೊಳಪಾದ ಬಣ್ಣವನ್ನು ಹೊಂದಿವೆ. ಗಾಜಿನಂತಹಾ ಹಸಿರು ಬಣ್ಣದ ಎಲೆಗಳಿಂದ ಸೂರ್ಯಕಿರಣಗಳ ಪ್ರತಿಫಲನ ಅದ್ಭುತ ದೃಶ್ಯ.

ಹೂವು ಬಿಟ್ಟಾಗಲಂತೂ ನೋಡಲು ಎರಡು ಕಣ್ಣು ಸಾಲವು. ಇಡೀ ಕಾಫಿ ತೋಟದಲ್ಲಿ ಅಚ್ಚ ಬಿಳಿಯ ಹೂವುಗಳು ಹಸಿರಿನ ಮೇಲೆ ಮೊಸರು ಚೆಲ್ಲಿದಂತೆ ಕಾಣುತ್ತವೆ. ಹೂವಾಡಿದ ಮೇಲೆ ಕಾಯಿ ತುಂಬಿಕೊಂಡು ಅವುಗಳು ಹಣ್ಣಾಗುವಾಗುವವರೆಗೂ ಅಷ್ಟೇ ಸುಂದರವಾದ ದೃಶ್ಯ ಕಾಫಿ ತೋಟವನ್ನು ಆವರಿಸಿಕೊಂಡಿರುತ್ತದೆ. ಹಸಿರು ಕಾಯಿಗಳು ಬಲಿತಂತೆ ರಂಗು ತುಂಬಿಕೊಳ್ಳುತ್ತವೆ. ಅಪ್ಪಟ ಕೆಂಪು ಬಣ್ಣದ ಹಣ್ಣುಗಳು ಕಾಫಿ ಗಿಡದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಕಾಫಿಯ ಹೂಗಳು ಅರಾಬಿಕಾದಲ್ಲಿ ಸ್ವಕೀಯ ಪರಾಗಸ್ಪರ್ಶವಾಗಬಲ್ಲವು, ಆದರೂ ಜೇನುದುಂಬಿಗಳಿಂದಲೂ ಅರ್ಧಕ್ಕಿಂತ ಹೆಚ್ಚು ಪರಾಗಸ್ಪರ್ಶ ನಡೆಯುತ್ತದೆ. ರೊಬಸ್ಟಾದಲ್ಲಂತೂ ಜೇನುದುಂಬಿಗಳು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಕಾಫಿಯ ಹಣ್ಣುಗಳನ್ನು ಚೆರ್ರಿ ಎಂದು ಕರೆಯಲಾಗುತ್ತದೆ. ಹಾಗೇಯೇ ಬೀಜಗಳನ್ನೂ “ಬೀನ್ಸ್” ಎಂದು ಕರೆದರೂ ಅವೇನು ಬೀನ್ಸ್ಗಳಲ್ಲ. ಸಾಮಾನ್ಯವಾಗಿ ಎರಡು ಬೀಜಗಳಿರುತ್ತವೆ. ಸರಿ ಸುಮಾರು ಶೇ5ರಷ್ಟು ಕಾಯಿಗಳಲ್ಲಿ ಒಂದೇ ಬೀಜವಿದ್ದು ಅವುಗಳನ್ನು ಆರಿಸಿ ತೆಗೆಯಲಾಗುತ್ತದೆ.

ಕರ್ನಾಟಕದ ಕಾಫಿಗೆ ವಿಶೇಷತೆಯುಂಟು. ಇಲ್ಲಿನದು ಹೆಚ್ಚಾಗಿ ರೊಬಸ್ಟಾ. ಅರಾಬಿಕಾ ಇದ್ದರೂ ಸುಮಾರು ಶೇ 20 -30 ರಷ್ಟು ಮಾತ್ರ. ಆದರೆ ಇಲ್ಲಿನ ಕಾಫೀ ತೋಟಗಳು ನೆರಳಿನಲ್ಲಿ ಅಪ್ಪಟ ಜೈವಿಕ ಸಮೃದ್ಧತೆಯಿಂದ ಇರುವಂತಹಾ ತೋಟಗಳು. ಸಾಕಷ್ಟು ನಿತ್ಯಹರಿದ್ವರ್ಣದ, ಸಾರಜನವನ್ನು ಸ್ಥಿರೀಕರಿಸಬಲ್ಲ, ಜೊತೆಗೆ ವಿವಿಧ ಎತ್ತರಗಳ ಎಲೆ ತಾರಸಿಗಳನ್ನು ಹೊಂದಿರುವ ಸಾಕಷ್ಟು ಸಸ್ಯಗಳನ್ನು ತೋಟದಲ್ಲಿ ಕಾಣಬಹುದು. ಈ ದೃಶ್ಯವನ್ನು ಇತರೇ ದೇಶಗಳಲ್ಲಿ ಕಾಣಲಾಗದು. ಭಾರತದ ಮುಕ್ಕಾಲು ಪಾಲು ಕಾಫಿಯನ್ನು ರಾಜ್ಯದಲ್ಲೇ ಉತ್ಪಾದಿಸಲಾಗುತ್ತಿದೆ. ಕಾಫಿ ಉತ್ಪಾದನೆಯಲ್ಲಿ ನಮ್ಮ ದೇಶವು ಜಗತ್ತಿನಲ್ಲಿ 5ನೆಯ ರಾಷ್ಟ್ರವಾಗಿದೆ. ಅದರ ಮುಕ್ಕಾಲು ಪಾಲಿನ ಕೊಡುಗೆಯು ರಾಜ್ಯದ್ದೇ!

ಪೇಯವಾಗಿಸುವ ಕಾಫಿ ಪುಡಿಯ ತಯಾರಿಕೆಯಲ್ಲಿ ಚಹಾದಂತೆ ಹತ್ತು ಹಲವು ಹೆಸರಾಂತ ಕಂಪನಿಗಳಿಲ್ಲ. ಆ ದೃಷ್ಟಿಯಲ್ಲಿ ಕಾಫಿಯು ಮುಕ್ತವಾಗಿದೆ. ಯಾವುದೇ ಒಂದು ಕಂಪನಿಯು ಹೆಸರು ಮಾಡಿ ಜನಮಾನಸದಲ್ಲಿ ತುಂಬಿಕೊಂಡಿಲ್ಲ. ಮಲೆನಾಡಿನ ಊರುಗಳಲ್ಲಂತೂ ಊರಿಗೊಂದು ಕಾಫಿ ಪುಡಿ ಕುಟ್ಟುವ ಅಂಗಡಿಗಳಿವೆ. ಈಗೀಗ ಹಲವು ಕಂಪನಿಗಳು ಹುಟ್ಟಿದ್ದರೂ ತಾವೇ ಮನೆಯಲ್ಲಿ ಪುಡಿಕೊಳ್ಳುವವರೂ ಇದ್ದಾರೆ. ಹಣ್ಣಿನಿಂದ ಬೀಜ ಬೇರ್ಪಡುವಾಗ ಮೇಲಿನ ತಿರುಳನ್ನು ತೊಳೆದು ತೆಗೆಯಲಾಗುತ್ತದೆ. ಆಗ ಬೀಜಕ್ಕೆ ಅಂಟಿದ ಸಕ್ಕರೆ ಅಂಶವು ತೊಳೆದುಹೋಗುತ್ತದೆ. ನಂತರ ಒಣಗಿಸಿ, ಹುರಿದು ಪುಡಿಮಾಡಲಾಗುತ್ತದೆ. ಇದೆಲ್ಲವೂ ಅಚ್ಚುಕಟ್ಟಾಗಿ, ಮಾಡುವ ಕಲೆಗಾರಿಕೆಯಲ್ಲಿ ಕಾಫಿಯ ಮಾನದಂಡದ ಅಳತೆಗೋಲು ಇದೆ.

ನಾವು ಕುಡಿವ ಕಾಫಿಗೆ ಪ್ರತಿಶತ 30-40ರಷ್ಟು ಚಿಕೋರಿಯನ್ನು ಬೆರೆಸಲಾಗುತ್ತದೆ. ಚಿಕೋರಿ ಕೂಡ ಒಂದು ಸಸ್ಯವೇ! ಹೆಚ್ಚೂ ಕಡಿಮೆ ಕಾಫಿಯ ಬದಲಾಗಿ ಉಪಯೋಗಿಸಬಹುದಾದ ಗಿಡ. ಇದರಲ್ಲಿ ಬೇರನ್ನು ಒಣಗಿಸಿ ಪುಡಿ ಮಾಡಿ ಕಾಫಿಯಲ್ಲಿ ಸೇರಿಸಲಾಗುತ್ತದೆ. ಹಾಂ! ಚಿಕೋರಿ ಗಿಡದ ವೈಜ್ಞಾನಿಕ ಹೆಸರು Cichorium intybus ಇದು ಸೇವಂತಿಕೆ ಕುಟುಂಬದ ಗಿಡ. ಇದರ ಕಥೆ ಬೇರೆಯದೇ ಇದೆ. ಆದರೆ ಇದು ಸೇರಿಯೇ ನಮ್ಮ ದಿನನಿತ್ಯದ ಕಾಫಿ ತಯಾರಾಗುತ್ತದೆ. ಇದು ಬೇಡವೆಂದು, ಅಪ್ಪಟ ಕಾಫಿಯನ್ನೂ ಮಾಡಿ ಕುಡಿಯುವವರಿದ್ದಾರೆ.

ಇಷ್ಟಾದರೂ ನೀವು ಕುಡಿಯುತ್ತಿರುವ ಕಾಫಿಯು ಅರಾಬಿಕಾನೋ, ರೊಬಸ್ಟಾ ಎಂದು ಹೇಗೆ ಹೇಳುವುದು? ಒಂದಂತೂ ಸ್ಪಷ್ಟ. ನೀವೇನಾದರೂ ಇನ್ಸ್ಟಂಟ್ ಕಾಫಿ ಕುಡಿಯುತ್ತಿದ್ದರೆ, ಗ್ಯಾರಂಟಿ ರೊಬಸ್ಟಾ! ಫಿಲ್ಟರ್ ಆದರೆ ಸ್ವಲ್ಪ ಅನುಮಾನ ಆದರೂ 50% ರೊಬಸ್ಟಾನೇ ಆಗಿರಬಹುದು. ಏಕೆಂದರೆ ನಮ್ಮಲ್ಲಿ ಅತಿಹೆಚ್ಚು ಬೆಳೆಯುವ ಗಿಡ ರೊಬಸ್ಟಾ.. ಆದರೇನು ಜಗತ್ತಿನಲ್ಲಿ ಹೆಚ್ಚಾಗಿ ಬೆಳೆಯುವ ಗಿಡಗಳು ಅರಾಬಿಕಾ! ಪ್ರತಿಶತ 60-80ರಷ್ಟು ಅರಾಬಿಕಾ. ಉಳಿದ ಶೇ 20-40 ರೊಬಸ್ಟಾ!. ಅದೇನು ಗೊತ್ತಾಗುವುದೂ ಬೇಡ ಬಿಡಿ! ಅದರ ಪರಿಮಳವು ಮೂಗಿಗೆ, ಮನಸ್ಸಿಗೆ, ಹಿತವಾಗಿರುವ ತನಕ! ಜೊತೆಗೆ ಕುಡಿದಾಗ ಆನಂದವೂ ಸಿಗುವತನಕ.

ನಮಸ್ಕಾರ

ಚನ್ನೇಶ್ ಟಿ.ಎಸ್.

This Post Has 4 Comments

 1. Santhe Narayan Swamy

  Very good article.
  Coffee was ,in Bangalore, was cultivated in Lalbagh on trial basis by Benjamin Heyne during the period from 1800 to 1807.
  There is a cluster of Coffee plants in Lalbagh even now.
  An article on this was published in Oriental Herald in Bangalore.

 2. M.Parameshwarappa

  Good, interesting like coffee

 3. Dr. R. Parimala

  A very elaborate and interesting article

 4. Dr. Chandrashekar

  Informative

Leave a Reply