ಆಫ್ರಿಕಾದ ನೆಲದಲ್ಲಿ ವಿಕಾಸವಾದ ಸಸ್ಯ ಕುಟುಂಬವೊಂದು ವಿಕಾಸ ಕಾಲದ ವಲಸೆಯಿಂದಾಗಿ ಅದರ ಸಂಕುಲಗಳು ಅಮೆರಿಕದ ನೆಲದಲ್ಲಿ ಅರಳಿದ ಕಥನವೊಂದು ಸಸ್ಯಲೊಕದಲ್ಲಿದೆ. ಬರಿ ಅರಳಿದ್ದೇ ಅಲ್ಲದೆ ಅದೊಂದು “ಸೂಪರ್ ಫ್ರೂಟ್” ಎಂದೇ ವಿಖ್ಯಾತವಾದ ಹಣ್ಣಾಗಿದ್ದು, ಆಹಾರ ಮತ್ತು ಔಷಧಗಳ ಕೊಂಡಿಯಾಗಿ ವಿಶೇಷತೆಯನ್ನು ಪಡೆದಿದೆ. ಇದೊಂದು ಬಗೆಯಲ್ಲಿ ಆಫ್ರಿಕನ್ ಮೂಲದ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾದದ್ದನ್ನು ನೆನಪಿಸಿದರೆ ಅಚ್ಚರಿಯೇನಲ್ಲ! ಏಕೆಂದರೆ ಹಣ್ಣುಗಳಲ್ಲಿ ಔಷಧಿಯ ಮಹತ್ವದಲ್ಲಿ ಪಪಾಯ ಒಂದು ವಿಶೇಷವೇ ಸರಿ! ಆಫ್ರಿಕದಿಂದ ಬಂದ ಕುಟುಂಬದ ಹಣ್ಣು ಅಮೆರಿಕದಲ್ಲಿ ವಿಕಾಸವಾಗಿ ವಿಟಮಿನ್ “ಎ” ಮತ್ತು “ಸಿ” ಜೊತೆಗೆ ಪೊಟ್ಯಾಸಿಯಂ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಫೊಲೇಟ್, ನಿಯಾಸಿನ್, ಥಯಾಮೀನ್ ರೈಬೊಫ್ಲೇವಿನ್ ಜೊತೆಗೆ ನಾರಿನಂಶದ ಜೊತೆಗೂಡಿ ಸಮೃದ್ಧವಾಗಿ, ಅಮೆರಿಕವೂ ಸೇರಿ ಪಶ್ಚಿಮದ, ಅಷ್ಟೇಕೆ ಜಗತ್ತಿನೆಲ್ಲೆಡೆ ಜನಪ್ರಿಯವಾಗಿದೆ. ಅದಕ್ಕೆಂದೇ ಒಬಾಮ ಅಧ್ಯಕ್ಷರಾದ ಹಾಗೆ ಎಂದದ್ದು.

ಪಪಾಯದ ಕುಟುಂಬವಾದ ಕ್ಯಾರಿಕೇಸಿಯೇ (Caricaceae) ಆಫ್ರಿಕಾದ ನೆಲದಲ್ಲಿ ವಿಕಾಸವಾದ ಬಗ್ಗೆ ಮಾಲೆಕ್ಯುಲಾರ್ ವಿಶ್ಲೇಷಣೆಗಳು ದೃಢ ಪಡಿಸಿವೆ. ಅಟ್ಲಾಂಟಿಕ್ ಸಾಗರದಲ್ಲಿ ತೇಲುತ್ತಾ ಪ್ರವಾಹಗಳ ಮೂಲಕ ಅಲೆಯಲ್ಲಿ ಅಮೆರಿಕವನ್ನು ತಲುಪಿವೆ. ಆ ಕುಟುಂಬದ 6 ಸಂಕುಲಗಳಲ್ಲಿ ಒಂದನ್ನುಳಿದು ಉಳಿದ ಐದೂ ಅಮೆರಿಕದ ನೆಲದಲ್ಲಿ ವಿಕಾಸವಾಗಿವೆ. ನಿಜಕ್ಕೂ ಹಣ್ಣುಗಳಲ್ಲಿ ಆರೋಗ್ಯದ ಹಿತದಿಂದ ಪಪಾಯಕ್ಕೆ ದೊರಕಿರುವ ರಾಜ ಮರ್ಯಾದೆ ಎಂದರೆ ಔಷಧೀಯ ಪರಂಪರೆಯನ್ನು ಆಹಾರಕ್ಕೆ ಸಮೀಕರಿಸುವ ಆಶಯಕ್ಕೆ ಬಹು ದೊಡ್ಡ ಉದಾಹರಣೆಯಾಗಿದೆ.
ದಿನ ದಿನದ ಹಣ್ಣಿನ ಸೇವನೆಗೆ ಪಪಾಯಕ್ಕೆ ಖಾಯಂ ಸ್ಥಾನ. ಸೇಬು, ದಾಳಿಂಬೆಗಳಂತೆ ತೀರಾ ದುಬಾರಿಯೂ ಅಲ್ಲದ, ಬಾಳೆ ಹಣ್ಣಿನಂತೆ ಧಾರ್ಮಿಕ/ಆಧ್ಯಾತ್ಮಿಕ ಸವಲತ್ತೇನೂ ಇಲ್ಲದೆಯೂ, ಹೌದಪ್ಪ ಹೆಲ್ತೀ.. ಅಂತಾ ಕರೆಯಿಸಿಕೊಂಡ ಹಣ್ಣು. ಮಾಗದಿದ್ದರೆ ಸಪ್ಪೆಯಾಗಿರುವಾಗಲೂ ಬಳಸಲಾಗುವ, ಮಾಗಿದರೆ ಅಷ್ಟೇ ಸಿಹಿಯಿಂದಲೂ ಆಕರ್ಷಕವಾದ ಹಣ್ಣು. ಮಾಗದ ಕಾಯಿಗಳ ಸಿಪ್ಪೆಯನ್ನು ಗೀರಿದರೆ ಹೊರಸೂಸುವ ಹಾಲಿನಿಂದ ಪೆಪೈನ್ ಎನ್ಜೈಮನ್ನೂ ಮಾಗಿದ ಸಿಹಿಯಲ್ಲಿ ದಿನದ ಅಗತ್ಯಕ್ಕೆ ಪೂರ್ಣವಾದ ವಿಟಮಿನ್ “ಸಿ” ಜೊತೆಗೆ ಹತ್ತಾರು ಆಹಾರಾಂಶಗಳನ್ನೂ ತನ್ನೊಳಗಿಟ್ಟುಕೊಂಡಿದೆ. ಇದರ ಜೊತೆಗೆ ಗಂಡು ಮರ, ಹೆಣ್ಣು ಮರ ಹಾಗೂ ಗಂಡು-ಹೆಣ್ಣು ಎರಡನ್ನೂ ತನ್ನೊಳಗಿಟ್ಟ ಮರ ಹೀಗೆ ಮೂರು ಬಗೆಯಲ್ಲಿ ವಿಕಾಸಗೊಂಡು ಸೂಪರ್ ಹಣ್ಣಾಗಿರುವ ವಿಶೇಷತೆಗಳ ಕಥನವೂ ಇಲ್ಲಿವೆ.

ಪಪಾಯವು ಕ್ಯಾರಿಕೇಸಿಯೇ(Caricacea) ಕುಟುಂಬದ ಸಸ್ಯವಾಗಿದ್ದು, ವೈಜ್ಞಾನಿಕವಾಗಿ ಕ್ಯಾರಿಕಾ ಪಪಾಯ (Carica papaya) ಎಂದು ಕರೆಯಲಾಗುತ್ತದೆ. ಒಂದು ಸಸ್ಯವಾಗಿ ಬೆಳೆಯುವ ಪಪಾಯ, ಅಲ್ಪಾವಧಿಯ, ಉಷ್ಣವಲಯದ ಮರ! ಮರ ಎಂದರೂ ಗಟ್ಟಿಯಾದ ಕಾಂಡವನ್ನೇನೂ ಹೊಂದಿಲ್ಲದ, ರೆಂಬೆ-ಕೊಂಬೆಗಳೂ ಇಲ್ಲದ, ನೀಳವಾಗಿ ಎತ್ತರಕ್ಕೆ ಬೆಳೆವ ಮರ ಹೆಚ್ಚೆಂದರೆ 20 ವರ್ಷಗಳು ಬದುಕುತ್ತದೆ. ನಾಟಿ ಮಾಡಿದ ಮೊದಲ ವರ್ಷದಲ್ಲೇ ಫಲ ಬಿಡಲು ಆರಂಭಿಸುತ್ತದೆ. ಕಾಂಡ, ಎಲೆ, ಹೂವು ಹಾಗೂ ಹಣ್ಣು ಎಲ್ಲದರಲ್ಲೂ ಭಿನ್ನತೆಯಿಂದ ಇತರೇ ಸಸ್ಯಗಳಿಂದ ವಿಶೇಷತೆಯನ್ನು ಪಡೆದಿದೆ.
ಬಲಿತ ಸಸ್ಯವನ್ನು ಮರ ಎಂದೇ ಕರೆಯುತ್ತೇವೆ. ಮರ ಎಂದರೂ ಹತ್ತಬಹುದಾದ ಕಾಂಡವನ್ನೇ ಹೊಂದಿರದ ಸಸ್ಯವಿದು. ಸಾಮಾನ್ಯವಾಗಿ ಮರಗಳ ಗಟ್ಟಿಯಾದ ಬುಡದಿಂದ ಮೇಲೆಕ್ಕೆದ್ದಂತೆ, ರೆಂಬೆ-ಕೊಂಬೆಗಳಾಗಿ ಹರಡುವುದು ಸಹಜ. ಪಪಾಯಿಯಲ್ಲಿ ಕಾಂಡ ಒಂದು ರೀತಿಯ ಟೊಳ್ಳಾದ ಮೃದು ಕವಚದ ನೀಳವಾದ ಕಂಬದಂತಹದು. ಎಲ್ಲೋ ಅಪರೂಪಕ್ಕೆ ಟಿಸಿಲುಗಳಾಗಿ ತುಸುವೇ ಕೊಂಬೆಗಳನ್ನು ಹೊಂದಿರುವುದನ್ನು ಬಿಟ್ಟರೆ, ಸಾಮಾನ್ಯವಾದ ಒಂದೇ ನೇರದ ನೀಳ ಕಾಂಡವನ್ನು ಹೊಂದಿರುವ ಮರ.

ಪಪಾಯ ಸಸ್ಯವು ಮಧ್ಯ ಅಮೆರಿಕದ (Mesoamerica) ನೆಲದಲ್ಲಿ ವಿಕಾಸವಾದ ಸಸ್ಯ. ಇದು ದಕ್ಷಿಣ ಮೆಕ್ಸಿಕೋದಿಂದ ಕೆಂದ್ರ ಅಮೆರಿಕವನ್ನು ಒಳಗೊಂಡ ಸುಮಾರು 12 ದೇಶಗಳ ತವರನ್ನು ಹೊಂದಿದೆ. ಅಲ್ಲಿಂದ ದಕ್ಷಿಣ ಅಮೆರಿಕೆಯಲ್ಲಿ ಹರಡಿ ಮುಂದೆ, 1550 ರಲ್ಲಿ ಸ್ಪಾನಿಷರ ಮೂಲಕ ಯೂರೋಪನ್ನು ತಲುಪಿತು. ಜೊತೆಗೆ ಇಂಡೋನೇಶಿಯಾ ತಲುಪಿ ಅಲ್ಲಿಂದ ಏಶಿಯಾದಲ್ಲಿ ಪಸರಿಸಿ, ಉಷ್ಣ ವಲಯದ ಎಲ್ಲಾ ನೆಲವನ್ನೂ ಸಾಕಷ್ಟೇ ಆವರಿಸಿಕೊಂಡಿರುವ ಪಪಾಯ ಬಹುತೇಕ ಎಲ್ಲಾ ರಾಷ್ಟ್ರಗಳ ನೆಲದಲ್ಲೂ ಕಾಲೂರಿ, ಹಣ್ಣು, ಪಪೈನ್, ಪೆಕ್ಟಿನ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ವಸ್ತುಗಳ ಔಷಧಿಗಳಿಗಾಗಿ ಬೆಳೆಸಲಾಗುತ್ತದೆ. ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಪಪಾಯವನ್ನು ಉತ್ಪಾದಿಸುವ ದೇಶ. ಸುಮಾರು ಜಗತ್ತಿನ ಮೂರನೆಯ ಒಂದರಷ್ಟು ಉತ್ಪಾದನೆಯನ್ನು ಭಾರತ ಒಂದೇ ಮಾಡುತ್ತದೆ. ಬ್ರೆಜಿಲ್ ನಂತರದ ಸ್ಥಾನವಾದರೂ, ಅತಿ ಹೆಚ್ಚು ರಫ್ತು ಮಾಡುವ ದೇಶ ಮೆಕ್ಸಿಕೊ. ಹೀಗೆ ಆಫ್ರಿಕದ ಮೂಲ ಕೌಟುಂಬಿಕ ನೆಲಯನ್ನು ಹೊಂದಿದ ಹಣ್ಣೊಂದು ಅಮೆರಿಕದಲ್ಲಿ ವಿಕಾಸವಾಗಿ ಜಗತ್ತಿನ ಬಹು ಪಾಲು ಉಷ್ಣವಲಯ ಹಾಗೂ ಸಮಶೀತೋಷ್ಣವಲಯವನ್ನು ಆವರಿಸಿ ನೆಲೆಯಾಗಿದೆ.
ಪಪಾಯವು ಲೈಂಗಿಕವಾಗಿ ಮೂರು ಬಗೆಯ ಸಸ್ಯಗಳೆಂದು ವಿಕಾಸವಾಗಿದೆ. ಗಂಡು ಮರ, ಹೆಣ್ಣು ಮರ ಹಾಗೂ ಗಂಡು ಮತ್ತು ಹೆಣ್ಣು ಹೂಗಳೆರಡೂ ಹೊಂದಿರುವ ಮರ. ಹೀಗೆ ವಿಕಾಸದ ಹಾದಿಯಲ್ಲಿ ಈ ವೈಚಿತ್ರ್ಯವನ್ನು ಇಡೀ ಕುಟುಂಬದ ಅನೇಕ ಸಸ್ಯಗಳಲ್ಲಿ ಕಾಣಬಹುದು. ವಿವಿಧತೆಯನ್ನು ಹೆಚ್ಚಿಸಿಕೊಳ್ಳಲೆಂದೇ ಹೀಗೆ ಲೈಂಗಿಕವಾಗಿ ವಿವಿಧತೆಯ ವಿಕಾಸ ಹಾದಿಯನ್ನು ಗಟ್ಟಿಗೊಳಿಸಿಕೊಂಡ ಜಾತಿಯದು ಈ ಕುಟುಂಬ. ಇಡೀ ಕುಟುಂಬದಲ್ಲಿ ಸುಮಾರು 6 ಸಂಕುಲಗಳಿದ್ದು, ಸುಮಾರು 35 ಪ್ರಭೇದಗಳಿವೆ. ಈ ಎಲ್ಲಾ ಪ್ರಬೇಧಗಳಲ್ಲೂ ಈ ಮೂರೂ ಬಗೆಯ ಸಸ್ಯಗಳಿವೆ. ಗಂಡು ಮರಗಳು ಹೂಬಿಟ್ಟರೂ ಕಾಯಾಗಲಾರವು. ಕೆಲವೊಮ್ಮೆ ಅಪರೂಪಕ್ಕೆ ಗಂಡು ಮರದ ಹೂಗಳೂ ಕಾಯಿಯನ್ನು ಹೋಲುವ ಆದರೆ ಚಿಕ್ಕದಾದ ಕಾಯಿಗಳನ್ನು ಬಿಡುತ್ತವೆ. ಅದನ್ನೇ ಗಂಡು ಮರಗಳು ಹೆಣ್ಣಾಗಿ ಬದಲಾಗಿದೆ ಎಂದು ಹಲವು ಸಮುದಾಯಗಳ ನಂಬಿಕೆಗಳು ಹುಟ್ಟಿಕೊಂಡಿವೆ. ಹೀಗೆ ಗಂಡು ಮರಗಳು ಕಾಯಿ ಬಿಡುವುದು, ಸಾಮಾನ್ಯವಾಗಿ ಆ ಮರಕ್ಕೆ ಏನಾದರೂ ಅನಗತ್ಯವಾದ ಆಘಾತ ಅಥವಾ ಒತ್ತಡ ಉಂಟಾದಾಗ ಹೀಗಾಗುತ್ತದೆ. ಅದನ್ನು ಹಲವು ಸಮುದಾಯಗಳು, ಗಂಡು ಮರ ಎಂದು ಗೊತ್ತಾದಾಗ, ಉದ್ದೇಶ ಪೂರ್ವಕವಾಗಿ ಮರಕ್ಕೆ ಘಾಸಿಗೊಳಿಸಿ, ಕಾಯಿಗಳು ಬಿಡುವಂತೆ ಪ್ರೇರೇಪಿಸಿದ ದಾಖಲೆಗಳು ಸಿಗುತ್ತವೆ.

ನಾಟಿ ಮಾಡಿದ ಸಸ್ಯಗಳ ಆರಂಭದಲ್ಲಿ ಗಂಡೋ-ಹೆಣ್ಣೋ ಅಥವಾ ಎರಡೂ ಇರುವ ಸಸ್ಯವೋ ಎಂದೂ ತಿಳಿಯಲಾಗದು. ಆದ್ದರಿಂದ ಮೊದಲೆಲ್ಲಾ ಎರಡು ಅಥವಾ ಮೂರು ಗಿಡಗಳನ್ನು ನಾಟಿ ಮಾಡಿ, ಹೆಣ್ಣು ಮರವೆಂದು ಗೊತ್ತಾದ ಮೇಲೆ, ಆ ಒಂದು ಸಸಿಯನ್ನು ಉಳಿಸಿಕೊಂಡು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಈ ತೊಂದರೆಯನ್ನು ನಿವಾರಿಸುವಂತೆ, ಗಂಡು ಮತ್ತು ಹೆಣ್ಣು, ಎರಡೂ ಹೂವುಗಳನ್ನು ಬಿಡುವ ಮರಗಳನ್ನೇ ಹೆಚ್ಚಾಗಿ ಅಭಿವೃದ್ಧಿಗೊಳಿಸಲಾಗಿದೆ. ಹಾಗಾಗಿ ವಾಣಿಜ್ಯದ ಹಿತದಲ್ಲಿ ಬೆಳೆಯುವ ಬಹುಪಾಲು ಸಸ್ಯಗಳನ್ನು ದ್ವಿಲಿಂಗೀಯಾಗಿಯೇ ಇರುವಂತೆ ನೋಡಿಕೊಳ್ಳಲಾಗಿದೆ. ಇದರಿಂದಾಗಿ ಉತ್ಪಾದನೆಯ ತೊಡಕನ್ನು ನಿವಾರಿಸಲಾಗಿದೆ.
ಪಪಾಯ ಗಿಡವು ಮೂರು ಬಗೆಯಲ್ಲಿ ಹೂವುಗಳನ್ನು ಬಿಡುವ ಸಸ್ಯವಾಗಿದೆ. ಬರೀ ಪುಂಕೇಸರಗಳುಳ್ಳ ಗಂಡು ಹೂವುಗಳು, ಸ್ತ್ರೀಕೇಸರ ಅಥವಾ ಶಲಾಕಗಳುಳ್ಳ ಹೆಣ್ಣು ಹೂವುಗಳು, ಗಂಡು-ಹೆಣ್ಣು ಎರಡೂ ಬಗೆಯನ್ನೊಳಗೊಂಡ ದ್ವಿಲಿಂಗೀ ಪುಷ್ಪಗಳು. ಕೆಲವೊಮ್ಮೆ ಒಂದೇ ಮರದಲ್ಲಿ ಇಂದಕ್ಕಿಂತಾ ಹೆಚ್ಚು ಬಗೆಯ ಹೂವುಗಳನ್ನು ಬಿಟ್ಟು, ಮರವು ಗಂಡೋ-ಹಣ್ಣೋ ಎಂದು ಅನುಮಾನಕ್ಕೆ ಬರುವಂತೆಯೂ ಇದ್ದೀತು. ಆಗ ನಿರ್ಧರಿಸುವುದಾದರೂ ಹೇಗೆ? ಏಕೆಂದರೆ, ಕೇವಲ ಹೆಣ್ಣು ಮತ್ತು ಎರಡೂ ಬಗೆಯನ್ನು ಒಳಗೊಂಡ ಮರಗಳು ಮಾತ್ರವೇ ಕಾಯಿಗಳನ್ನು ಬಿಡುತ್ತವೆ. ಮತ್ತು ಅಂತಹಾ ಕಾಯಿಗಳ ಬೀಜಗಳೂ ಸಹಾ ಕಾಯಿ ಬಿಡುವಂತಹಾ ಗುಣವನ್ನು ಹೊಂದಿರುತ್ತವೆ. ಆದರೆ ಗಂಡು ಮರಗಳಲ್ಲಿ ಕಾಯಿಗಳು ಬಿಟ್ಟರೂ ಅವುಗಳೊಳಗಿನ ಬೀಜಗಳು ಮತ್ತೇ ಕೇವಲ ಗಂಡು ಹೂಗಳನ್ನು ಮಾತ್ರವೇ ಬಿಡುವ ಸಸಿಗಳನ್ನು ಕೊಡುತ್ತವೆ. ಅವುಗಳಿಂದ ಕಾಯಿಗಳನ್ನು ಪಡೆಯಲು ಸಾಧ್ಯವೇ ಆಗದಿರಬಹುದು.
ಹಾಗಾಗಿ ಆಕಸ್ಮಿಕವಾಗಿ ನಾವು ನಮ್ಮ ಮನೆಯ ಹಿತ್ತಿಲಲ್ಲೋ ಅಥವಾ ಕೈತೋಟದಲ್ಲೋ ನೆಟ್ಟ ಒಂದೇ ಸಸಿಯು ಗಂಡೋ ಹೆಣ್ಣೋ ಎಂಬುದನ್ನು ಮೊದಲ ಹೂವು ಬಿಟ್ಟಾಗಲೇ ಗುರುತಿಸಬಹುದು. ಬಿಟ್ಟ ಹೂವು ನೇರವಾಗಿ ಕಾಂಡಕ್ಕೆ ಅಂಟಿಕೊಂಡಂತೆ, ಅದರ ಹೂತೊಟ್ಟು ಇದ್ದರೆ, ಹೂತೊಟ್ಟು ತೀರಾ ಉದ್ದವಾಗಿಯೂ ಇದ್ದರೆ, ಜೊತೆಗೆ ಹೂವುನ ಪಕಳೆಗಳು ಮುರುಟಿಕೊಂಡಂತೆ ಇದ್ದರೆ ಅದು ಖಂಡಿತಾ ಗಂಡು ಮರ! ಆಗ ಒಂದೇ ಇದ್ದರೆ ಉಳಿಸಿಕೊಳ್ಳುವುದರ ಅಗತ್ಯವೇ ಬರದು. ಅಂತಹವೇನಾದರೂ ತೋಟದಲ್ಲಿ ಹತ್ತಾರು/ನೂರಾರು ಪಪಾಯ ಮರಗಳ ಜೊತೆಗೆ ಇದ್ದರೆ, ಪರಕೀಯ ಪರಾಗಸ್ಪರ್ಶಕ್ಕೆ ಅನುಕೂಲವಾದೀತು.
ಗಂಡು ಹೂವುಗಳು ಒಂದು ರೀತಿಯಲ್ಲಿ ಇಳಿಬಿದ್ದ ಹಾಗೆ ಮರಕ್ಕೆ ಅಂಟಿಕೊಂಡಿರುತ್ತವೆ. ಆದರೆ ಹೆಣ್ಣು ಹೂವುಗಳು ಎಲೆ ಮತ್ತು ಕಾಂಡವು ಕೂಡಿಕೊಂಡಿರುವ ಕಂಕುಳಲ್ಲಿ ಬಿಟ್ಟಿರುತ್ತವೆ. ಕೆಲವೊಮ್ಮೆ ಹೀಚು ಕಾಯಿಯಂತಹ ಚಿಕ್ಕ ಕಾಯಿಯ ಸುತ್ತಲೂ ಇದ್ದಿರಬಹುದು. ಸಾಮಾಣ್ಯವಾಗಿ ಹೂ ಪಕಳೆಗಳು ಅಥವಾ ದಳಗಳು ಬಿಡಿ-ಬಿಡಿಯಾಗಿರುತ್ತವೆ. ಇಂತಹಾ ಹೂವುಗಳು ಪರಾಗಸ್ಪರ್ಶವಾಗಲು ಗಂಡು ಮರದ ನೆರವು ಬೇಕೇಬೇಕು. ಅಥವಾ ಹೂ ಪಕಳೆಗಳು ಒಂದಕ್ಕೊಂದು ಅಂಟಿಕೊಂಡಂತಿದ್ದರೆ ಅವುಗಳಲ್ಲಿ ಕೆಲವು ಗಂಡು ಮತ್ತು ಹೆಣ್ಣು ಎರಡೂ ಬಗೆಯ ಹೂಗಳಿರುತ್ತವೆ. ಅವುಗಳಲ್ಲಿ ಸಹಜವಾಗಿ ಕಾಯಿ ಕಟ್ಟುತ್ತವೆ. ಇಂತಹಾ ದ್ವಿಲಿಂಗೀ ಹೂವುಗಳೂ ಸಹಾ ಕಂಕುಳಲ್ಲಿಯೇ ಬಿಡುತ್ತವೆ, ಆದರೆ ಒಂದಕ್ಕೊಂದು ಅಂಟಿಕೊಂಡಂತೆ ಕಾಣುತ್ತವೆ.

ಹಿಂದೆಲ್ಲಾ ಈ ಬಗೆಯ ಸಸ್ಯಗಳ ನಿರ್ವಹಣೆಯೇ ಕಷ್ಟವಾಗುತ್ತಿತ್ತು. ಅದಕ್ಕಾಗಿ ಒಂದಕ್ಕಿಂತಾ ಹೆಚ್ಚು ಸಸ್ಯಗಳನ್ನು ನಾಟಿ ಮಾಡಿ ನಿಭಾಯಿಸಬೇಕಿತ್ತು. ಇತ್ತೀಚೆಗೆ ಸಾಮಾನ್ಯವಾಗಿ ವಾಣಿಜ್ಯ ಬೆಳೆಯಾಗಿ ನಿರ್ವಹಿಸುವ ಕಡೆಗಳಲ್ಲಿ ದ್ವಿಲಿಂಗೀ ಸಸ್ಯಗಳನ್ನೇ ನಾಟಿಮಾಡಲಾಗುತ್ತದೆ. ಪಪಾಯಿಯ ವಂಶಾಭಿವೃದ್ಧಿ ವಿಧಾನಗಳಲ್ಲಿ ಕ್ಯಾರಿಕೇಸಿಯೇ ಸಸ್ಯ ಕುಟುಂಬ ಕ್ಯಾರಿಕಾ ಸಂಕುಲವಲ್ಲದೆ ಇತರೇ ಸಂಕುಲದ ಪ್ರಭೇದಗಳನ್ನೂ ಬಳಸಲಾಗುತ್ತದೆ. ಅಮೆರಿಕಾ, ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕದ ಕೆಲವೆಡೆಗಳ ವನ್ಯತಳಿಗಳು ಈ ತರಹದ ಪ್ರಭೇದಗಳಾಗಿದ್ದೂ ಅವು ಸಹಾ ತಿನ್ನಲೂ ಯೋಗ್ಯವಾಗಿರುತ್ತವೆ. ಕೆಲವೊಂದು ಪಪಾಯಗಳಲ್ಲಿ ನಕ್ಷತ್ರಾಕಾರಾದ ಕಾಯಿಗಳ ರಚನೆಗಳು ಈ ಬಗೆಯ ವನ್ಯ ಪ್ರಭೇದಗಳಿಂದ ಪಡೆದ ಗುಣವಾಗಿರುತ್ತದೆ. ಈಗೀಗ ಬಹು ಪಾಲು ದೇಶಗಳಲ್ಲಿ, ಭಾರತದಲ್ಲೂ ಸಹಾ ದ್ವಿಲಿಂಗೀ ತಳಿಗಳನ್ನೇ ಹೆಚ್ಚಾಗಿ ವಾಣಿಜ್ಯ ಬೆಳೆಗಳ ತೋಟಗಳಲ್ಲಿ ಬೆಳಸಲಾಗುತ್ತದೆ.
ಪಪಾಯದ ಕೃಷಿಯು ಮಧ್ಯೆ ಅಮೆರಿಕದಲ್ಲಿಯೇ ಸುಮಾರು 6200-6500 ವರ್ಷಗಳಷ್ಟು ಹಿಂದೆ ಮಾಯನ್ ನಾಗರಿಕತೆಯಲ್ಲಿ ಆರಂಭವಾಯಿತು. ಆದರೂ ದ್ವಿಲಿಂಗೀ ಸಸ್ಯಗಳನ್ನು ಬೆಳೆಯಲು ಆರಂಭಿಸಿ ಸುಮಾರು 4000 ವರ್ಷಗಳೆಂದು ಅಂದಾಜಿದೆ.

ಮಧ್ಯ ಅಮೆರಿಕದ ಜನರು ಆರಂಭದಲ್ಲಿ ಹಣ್ಣಿಗಾಗಿ ಕೃಷಿ ಮಾಡುತ್ತಿದ್ದರೂ, ಮಾಗದ ಕಾಯಿಗಳ ಹೊರ ಮೈಯಿಂದ ಒಸರುವ ಹಾಲಿನಂತಹಾ ದ್ರವ್ಯದಿಂದ ಮಾಂಸವನ್ನು ಮೃದುಗೊಳಿಸಲು ಬಳಸುತಿದ್ದರು. ಇದೇ ಮುಂದೆ ಆ ಹಾಲಿನಂತಹ ದ್ರವದಲ್ಲಿ ಪಪೈನ್ (Papain) ಎಂಜೈಮನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಮೊಟ್ಟ ಮೊದಲು 1873 ರಲ್ಲಿ ಪಪಾಯ ಕಾಯಿಯ ಹಾಲಿನ ದ್ರವದಿಂದ, ಸಾರಜನಕಯುತ (ಪ್ರೋಟಿನ್) ವಸ್ತುಗಳನ್ನು ವಿಭಜಿಸಲು ಸಾಧ್ಯ ಎಂಬುದಾಗಿ ಜಿ.ಸಿ. ರಾಯ್ (G.C. Roy) ಎಂಬುವರು ಕಂಡುಹಿಡಿದರು. ಅದನ್ನು ಅವರು ಕಲ್ಕತ್ತಾದ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ನಂತರಲ್ಲಿ ವರ್ಟ್ಜ್ ಮತ್ತು ಬಾಹಟ್ (Wurtz and Bouchut.) ಎಂಬ ವಿಜ್ಞಾನಿಗಳು 1879ರ ಸುಮಾರಿಗೆ ಆ ದ್ರವ (Latex) ದಲ್ಲಿ ರಸಾಯನಿಕವನ್ನು ಪ್ರತ್ಯೇಕಿಸಲು ನಾಂದಿ ಹಾಡಿ, ಅದಕ್ಕೆ ಪಪೈನ್ (Papain) ಎಂದು ಹೆಸರಿಸಿದರು. ನಂತರದ ರಸಾಯನಿಕ ಶೋಧಗಳಿಂದ ಅದರ ಶುದ್ಧ ಮಾದರಿಯನ್ನು ಪ್ರತ್ಯೇಕಿಸಲು ವಿಧಾನಗಳನ್ನು ಕಂಡುಹಿಡಿಯಲಾಯಿತು.
ಇದೊಂದು ಪ್ರೊಟಿಯೊಲೈಟಿಕ್ (Proteolytic) ಎಂಜೈಮ್ ಆಗಿದ್ದು, ಪ್ರೋಟಿನುಗಳ ನಾರಿನ ಗುಣವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಇದು ಪ್ರೋಟಿನನ್ನು ಸೀಳಿ ಅಮೈನೊ ಆಮ್ಲಗಳ ಪೆಪ್ಟೈಡ್ ಬಂಧಗಳನ್ನು ವಿಭಜಿಸಿ ಮೃದುವಾಗಿಸುತ್ತದೆ. ಹಾಗಾಗಿಯೇ ಮಾಯನ್ ಸಂಸ್ಕೃತಿಯ ಜನರೂ ಇದನ್ನು ತಿಳಿಯದೆಯೂ ಮಾಂಸವನ್ನು ಹದ ಮಾಡಲು ಬಳಸುತ್ತಿದ್ದರು. ಇದಲ್ಲದೆ ಜೀರ್ಣಕ್ರಿಯೆನ್ನು ಉತ್ತೇಜಿಸುವ ಅನೇಕ ವೈದ್ಯಕೀಯ ವಿಧಾನಗಳಲ್ಲಿ ಇದರ ಬಳಕೆಯನ್ನು ಕಂಡುಕೊಳ್ಳಲಾಗಿದೆ. ಜೊತೆಗೆ ಗಾಯವನ್ನು ವಾಸಿ ಮಾಡುವ ಹಾಗೂ ಅಲಂಕಾರಿಕ ಔಷಧಗಳಲ್ಲೂ ಇದನ್ನು ಬಳಸಲಾಗುತ್ತದೆ.
ಪಪಾಯ ಒಂದು “ಸೂಪರ್ ಫ್ರೂಟ್” – ಎಂದು ಕರೆಯಲು ಅದರ ಆಹಾರ ಮತ್ತು ಔಷಧೀಯ ಗುಣಗಳ ಹದವಾದ ಮಿಶ್ರಣವೇ ಕಾರಣ. ವಿಟಮಿನ್ A ಮತ್ತು C ಗಳಲ್ಲದೆ, ಲೈಕೊಪೀನ್ ಬೀಟಾ-ಕೆರೊಟೀನ್ ಮುಂತಾದ ಆಂಟಿ-ಆಕ್ಸಿಡೆಂಟುಗಳಿದ್ದು ನಮ್ಮ ದೇಹದಲ್ಲಿ ಸುಲಭವಾಗಿ ಸೇರಬಲ್ಲವಾಗಿವೆ. ಇದೇ ರಸಾಯನಿಕಗಳು ಟಮೇಟೊ, ಕ್ಯಾರಟ್ ಮುಂತಾದವುಗಳಲ್ಲಿ ಇದ್ದರೂ ಪಪಾಯದಿಂದ ಇನ್ನೂ ಸುಲಭವಾಗಿ ನಮ್ಮ ದೇಹಕ್ಕೆ ಹೊಂದುವಂತೆ ಇದ್ದು ಜೀರ್ಣವಾಗುತ್ತವೆ. ಇದರಿಂದಾಗಿ ವಿವಿಧ ಸಂಸ್ಕೃತಿಗಳು ಬಗೆ-ಬಗೆಯಲ್ಲಿ ಪಪಾಯವನ್ನು ಬಳಸಲು ವಿಧಾನಗಳನ್ನು ಕಂಡುಕೊಂಡಿವೆ. ಹಣ್ಣುಗಳನ್ನು ತಿನ್ನುವುದಷ್ಟೇ ಅಲ್ಲದೆ, ಜ್ಯೂಸ್, ಮಿಲ್ಕ್ ಶೇಕ್, ಜಾಮ್, ಜೆಲ್ಲಿಯ ಜೊತೆಗೆ ಕಾಯಿಗಳನ್ನು ವಿವಿಧ ಬಗೆಯಿಂದ ಬಳಸಲಾಗುತ್ತದೆ.


ಕಾಯಿಗಳನ್ನು ತರಕಾರಿಯಂತೆ ಅಲ್ಲದೆ, ಬ್ರೆಡ್ ಮತ್ತು ಕೇಕ್ಗಳ ಅಲಂಕಾರ ಮತ್ತು ಹದವಾದ ಮಿಶ್ರಣದಿಂದ ರುಚಿಗೊಳಿಸುವ ಟೂಟಿ-ಫ್ರುಟೀ ಯನ್ನು ತಯಾರಿಸಲಾಗುತ್ತದೆ. ಹಾಗೆಯೇ ತಿನ್ನುವ ಸಲಾಡ್ಗಳಿಂದ ಹಿಡಿದು, ಸಂಸ್ಕರಿಸಿ, ಖಾರ-ಉಪ್ಪುಗಳ ಬೆರಸಿ ರುಚಿಯನ್ನು ವೃದ್ಧಿಸಿ, ಸಿಹಿಗಳಲ್ಲೂ ಬಳಸುವ ಖಾದ್ಯಗಳನ್ನು ತಯಾರಿಸಲು ಪಪಾಯ ಬಳಕೆಯಾಗುತ್ತಿದೆ. ಅಲ್ಲದೆ ಪಪಾಯದ ಬೇರು, ಎಲೆ, ಹೂ-ಹಣ್ಣು, ಬೀಜಗಳು ಶತಮಾನಗಳಿಂದ ವಿವಿಧ ಸಂಸ್ಕೃತಿಯ ಪಾರಂಪರಿಕ ಔಷಧಿಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ಪಪಾಯದ ಎಲೆಗಳಿಂದ ಡೆಂಗ್ಯೂ ರೋಗಿಯ ರಕ್ತದಲ್ಲಿ ಕಡಿಮೆಯಾದ ಪ್ಲಾಟಿಲೆಟ್ಗಳ ಹೆಚ್ಚಿಸಲು ಆಧುನಿಕ ಪದ್ಧತಿಗಳಲ್ಲೂ ಕಂಡುಕೊಳ್ಳಲಾಗಿದೆ. ಹಣ್ಣುಗಳ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (Glycemic Index) ಕಾರಣದಿಂದ ಮಧುಮೇಹಿ ರೋಗಿಗಳ ಪ್ರಿಯವಾದ ಹಣ್ಣು ಎಂದೇ ಹೆಸರು ಪಡೆದಿದೆ.

ಪಪಾಯ ಸಸ್ಯದ ಜೀನೋಮ್ ಅನುಕ್ರಮಣಿಕೆ (Genome Sequencing) ಯನ್ನು 2007ರಲ್ಲಿ ಹವಾಯ್ ವಿಶ್ವ ವಿದ್ಯಾಲಯದ ಮುಂದಾಳತ್ವದಲ್ಲಿ ಸಂಪೂರ್ಣಗೊಳಿಸಿ ತಳಿ ನಕ್ಷೆಯನ್ನು ತಯಾರಿಸಲಾಗಿದೆ. ಈಗಾಗಲೇ ಪಪಾಯದಲ್ಲಿ ಜೆನೆಟಿಕಲಿ ಬದಲಾಯಿಸಿದ (GM) ತಳಿಗಳನ್ನೂ ಸಹಾ ರೂಪಿಸಲಾಗಿದೆ. ಇದನ್ನು ರೈನ್ಬೊ ಪಪಾಯ ಎಂದೇ ಕರೆಯಲಾಗುತ್ತಿದ್ದು, ಪಪಾಯಕ್ಕೆ ತಗುಲುವ ವೈರಸ್ ಅನ್ನು (Papaya Ringspot Virus) ನಿಯಂತ್ರಿಸಲು ರೂಪಿಸಲಾಗಿದೆ. ಇದು ಅಮೆರಿಕ ಮತ್ತು ಚೀನಾ ದೇಶಗಳಲ್ಲಿ ಮಾತ್ರವೇ ಬೆಳೆಯಲಾಗುತ್ತಿದೆ.
ಪಪಾಯ ಕಾಯಿಗಳನ್ನು ಹಣ್ಣಾಗಿ ಮಾಗುವಂತೆ ಮಾಡಲು ಕಾಗದಗಳ ಮಡಿಕೆಯಲ್ಲಿ ಸುತ್ತಿಡಲಾಗುತ್ತದೆ. ಇದರಿಂದ ಪಪಾಯ ಹಣ್ಣಾಗಲು ಬೇಕಾದ ಇಥಲೀನ್ ಹಣ್ಣನ್ನೆಲ್ಲಾ ಆವರಿಸುವಂತೆ ಸಹಾಯವಾಗುತ್ತದೆ. ಇಥಲೀನ್ ಒಂದು ಸಸ್ಯಜನ್ಯ ಹಾರ್ಮೋನು ಕಾಯಿಯು ಹಣ್ಣಾಗುವಾಗ ಕಾಯಿಗಳೇ ಉತ್ಪಾದಿಸುವ ರಸಾಯನಿಕ. ಇದು ಆವಿಯಾಗಿ, ಆರಿ ಹೋಗದಂತೆ ಜೊತೆಗೆ ಕಾಯಿಯ ಮೇಲಮೈಯನ್ನು ಆವರಿಸುವಂತೆ ಮಾಡಲು ಪೇಪರ್ ಸುತ್ತಿಡುವುವಿಕೆಯು ಸಹಾಯ ಮಾಡುತ್ತದೆ.

ಪಪಾಯವು ಕಾಯಿ, ಎಲೆಗಳು, ಹೂವು, ಹಣ್ಣು ಎಲ್ಲದರಲ್ಲೂ ಒಂದಲ್ಲಾ ಒಂದು ಬಗೆಯ ಉಪಯೋಗಗಳನ್ನು ಮಾನವ ಕುಲಕ್ಕೆ ಒದಗಿಸಿದೆ. ಇದರ ಈ ಬಗೆಯ ಆಹಾರ ಮತ್ತು ಔಷಧಗಳ ಸಮೀಕರಣದ ನೆರವಿನಿಂದಾಗಿಯೇ ಜನಪ್ರಿಯವಾದ ಹಣ್ಣಿನ ಸಸ್ಯವಾಗಿ, ಯಾವುದೇ ಪ್ರಾಚೀನ ಪಠ್ಯ ಅನುಮೋದನೆಗಿಂತ ಹೆಚ್ಚಾಗಿ ದೈನಂದಿನ ಬಳಕೆಯ ಪ್ರಕ್ರಿಯೆಗಳ ಮೂಲಕ ಸಾಂಸ್ಕೃತಿಕ ಮತ್ತು ತಾತ್ವಿಕ ಪ್ರಸ್ತುತತೆಯನ್ನು ಪಡೆದುಕೊಂಡಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ಹೆಚ್ಚಿನ ಓದಿಗೆ:
Chávez-Pesqueira M and Núñez-Farfán J (2017) Domestication and Genetics of Papaya: A Review. Front. Ecol. Evol. 5:155. doi: 10.3389/fevo.2017.00155
OECD 2005. Consensus Document on the Biology of Papaya (Carica papaya) Environment Directorate, Organisation for Economic Co-operation and Development. Paris ENV/JM/MONO(2005)16
Parmeshwar Lal Saran, 2019, Advances in papaya cultivation In Yahia, E. M. (ed.), Achieving sustainable cultivation of tropical fruits, BDS Publishing, Cambridge, UK, http://dx.doi.org/10.19103/AS.2019.0054.15

ಪಪ್ಪಾಯ ಕುರಿತ ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಐವತ್ತು ವರ್ಷ ಹಿಂದೆ ಬೆಂಗಳೂರು ಸಾರಕ್ಕಿಯಲ್ಲಿ ನನ್ನ ತಂದೆ ಖರೀದಿ ಮಾಡಿದ್ದ ಪುಟ್ಟ ಜಾಗದಲ್ಲಿ ಸಣ್ಣ ಹುಡುಗನಾಗಿದ್ದ ನಾನು ಮೊಟ್ಟ ಮೊದಲು ಬೆಳೆಸಿದ್ದು ಪಪ್ಪಾಯಿಯನ್ನು.
ಗರ್ಭಿಣಿಯರು ಇದನ್ನು ತಿನ್ನಲು ಹೆದರುತ್ತಾರೆ. ಕಾರಣ ಸರಿಯೋ ತಪ್ಪೋ ತಿಳಿಯದು.