ಮನುಕುಲದ ಎಲ್ಲಾ ಅಭಿವೃದ್ಧಿ ಚಿಂತನೆಗಳು, ಕಾರ್ಯಯೋಜನೆಗಳು ನಿರಂತರವಾದ ಹಾಗೂ ಕುತೂಹಲಕರವಾದ ಅಧ್ಯಯನಶೀಲ ಮನಸ್ಸಿನ ಫಲ. ಪ್ರತಿ ಮಗುವೂ ತನ್ನೊಳಗೆ ಒಬ್ಬ ಸಂಶೋಧಕನನ್ನು ಇಟ್ಟುಕೊಂಡೇ ದೊಡ್ಡದಾಗುತ್ತದೆ. ಇಲ್ಲವಾದಲ್ಲಿ ತನ್ನ ವಿಕಾಸದಿಂದ ತನಗೆ ಅವಶ್ಯಕವಾಗಿ ಬೇಕಾದ ಎಲ್ಲವನ್ನೂ ಪಡೆಯುವ ತಂತ್ರಗಳನ್ನು ಕಲಿಕೆಯೆಂಬ ಕಾರಣದಿಂದ ಸಾಧ್ಯವಾಗಿಸಿಕೊಳ್ಳುತ್ತಿರಲಿಲ್ಲ.
ಇಂದು ಕಾಣುತ್ತಿರುವ ಮನುಷ್ಯ-ಹೋಮೊ ಸೇಪಿಯನ್-ಎಂಬ ಜೀವಿಯಾಗಿ ಕೇವಲ ಎರಡು-ಎರಡೂವರೆ ಲಕ್ಷ ವರ್ಷಗಳಿಂದಷ್ಟೇ ಈ ಭೂಮಿಯಲ್ಲಿ ವಿಕಾಸಗೊಂಡಿದ್ದಾನೆ. ಅಲ್ಲಿಂದ ಇಂದಿನವರೆಗೂ ನಿರಂತರವಾಗಿ ತನ್ನ ಕುತೂಹಲಕ್ಕೆ ಉತ್ತರವಾಗಿ ಹಲವಾರು ಕಲಿಕೆಗಳನ್ನು ತನ್ನದನ್ನಾಗಿಸಿ ಇಷ್ಟೊಂದು ಬದಲಾವಣೆಗಳಿಗೆ ಕಾರಣನಾಗಿದ್ದಾನೆ. ಭೂಮಿಯ ಮೇಲೆ ಆತನ ನಡಿಗೆಯಿಂದ ಆರಂಭಗೊಂಡ ಸುತ್ತಾಟದ ಫಲವಾಗಿ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬೆಳೆದಿದ್ದಾನೆ. ಇವುಗಳ ಫಲವಾಗಿ ವೈವಿಧ್ಯಮಯ ಸಂಗತಿಗಳು ತಿಳಿವುಗಳಾಗಿವೆ. ಅವುಗಳೇ ಮತ್ತೆ ಚರ್ಚೆಗೆ ಒಳಪಟ್ಟು, ತಿದ್ದಿ ತೀಡಿ, ವಿಮರ್ಶೆಗೊಂಡು ಚುರುಕಾದ ತಂತ್ರಗಳಾಗಿವೆ. ಇವೇ ಉಪಾಯಗಳಾಗಿ, ಸಿದ್ಧಾಂತಗಳಾಗಿ ಹೀಗೆ ಮತ್ತೇನೋ ನಿರೂಪಗಳಾಗಿಯೂ ಅಗಾಧವಾದ ಜ್ಞಾನದ ಬೆಳಕು ಮನುಕುಲಕ್ಕೆ ದಕ್ಕಿದೆ.
ಈ ಮಹಾನ್ ಜ್ಞಾನಪರಂಪರೆಯು ವೈವಿಧ್ಯಮಯವಾಗಿ ಬೆಳೆಯುತ್ತಲೇ ಇದೆ. ಇದರ ಸಾಧ್ಯತೆಗೆ ಅನೇಕ ದಾರ್ಶನಿಕರ ಚಿಂತನೆಗಳು, ಆಲೋಚನೆಗಳು ಹಿನ್ನೆಲೆಯಲ್ಲಿ ದುಡಿದಿವೆ. ಈ ಅನಂತ ಜಗತ್ತಿನ ಒಳಹೊರಗುಗಳ ಒಂದಷ್ಟು ಸ್ವಾರಸ್ಯಗಳು ಕೆಲವೇ ನೂರು ವರ್ಷಗಳ ಆಸಕ್ತಿಯ ಅಧ್ಯಯನದ ಫಲವಾಗಿ ಸ್ವಲ್ಪ ಸ್ವಲ್ಪವೇ ದಕ್ಕುತ್ತಾ ಬಂದಿವೆ. ಮೂಲಭೂತವಾಗಿ ಹಗಲು-ರಾತ್ರಿಗಳಾಗುವ ಬೆರಗಿನಿಂದ ಆಗಸದೆಡೆಗೆ ತೆರೆದುಕೊಂಡ ಕುತೂಹಲವು ಅದರ ಅಗಾಧತೆಗೆ, ಜತೆಗೆ ಈ ವಿಶ್ವದ ಅಸ್ತಿತ್ವದ ಹುಡುಕಾಟದಲ್ಲಿ ವಸ್ತುಗಳ ಹುಟ್ಟು, ರಚನೆ, ವರ್ತನೆಗಳ ತಿಳಿವಳಿಕೆಯಿಂದ ಅವುಗಳ ವಿಸ್ಮಯಕ್ಕೆ ಒಳಗಾಗಿದೆ. ನಿಸರ್ಗದ ಜಾಣತನಕ್ಕೆ ಮತ್ತದರ ಶಿಸ್ತುಬದ್ಧ ನಡವಳಿಕೆಗೆ ಮನುಕುಲವು ತನ್ನ ಒಳನೋಟಗಳನ್ನು ಬೆಳೆಸಿಕೊಳ್ಳುತ್ತಲೇ ಇದೆ. ಇದೆ ಕಾರಣವಾಗಿ, ವಿಷಯಗಳ ಅಗಾಧತೆಯಿಂದಾಗಿ ಹಾಗೂ ಅವುಗಳ ವೈವಿಧ್ಯತೆಯಿಂದಾಗಿ ಹಲವಾರು ಜ್ಞಾನಶಾಖೆಗಳಾಗಿ ವಿಕಾಸಗೊಂಡಿವೆ.
ವಿಶ್ವದ ಅರಿವಿನ ಭಾಗವಾಗಿ ವಸ್ತುಗಳ ಅಸ್ತಿತ್ವದ ಕುರಿತಂತೆ ಭೌತವಿಜ್ಞಾನವು, ಅವುಗಳ ವರ್ತನೆಯ ತಿಳಿವಿಗಾಗಿ ರಸಾಯನವಿಜ್ಞಾನವು, ಇವೆಲ್ಲವನ್ನು ತಿಳಿದೂ ಭಿನ್ನವಾಗಿ ಕಾಡುವ ಜೀವಿಗಳ ಸಂಗತಿಗಳ ವಿಸ್ಮಯವು -ಜೀವಿವಿಜ್ಞಾನವಾಗಿ ಇಂದು ಅಪಾರ ಸಾಧ್ಯತೆಯ ಸ್ವಾಭಾವಿಕ ಜ್ಞಾನ ಮೂಲಗಳಾಗಿವೆ. ನೈಸರ್ಗಿಕ ತಿಳಿವಿನಲ್ಲಿ ಈ ವಿಜ್ಞಾನಗಳ ತಿಳಿವಳಿಕೆಯು ಸಹಸ್ರಾರು ವಿಜ್ಞಾನಿಗಳ ಜೀವಮಾನದ ಶ್ರಮದ ಫಲವಾಗಿ ಇಂದು ಸಿಗುತ್ತಿದೆ. ಮುಖ್ಯವಾಗಿ ಈ ವಿಜ್ಞಾನವು ಸಂಚಿತವಾದ ಜ್ಞಾನ. ಸದಾ ಮುಂದೆ ನೋಡುವ ಜಾಯಮಾನದ್ದು. ಅದಕ್ಕೆ ಹಿಂದಾಗಿದ್ದರ ತಿಳಿವು, ಅಡಿಪಾಯವಾಗಿ ಮುಂದಿನ ಬೆಳವಣಿಗೆಗೆ ಕಾರಣವಾಗುತ್ತದೆ. ಅದರಿಂದಾಗಿ ವಿಜ್ಞಾನದ ಜ್ಞಾನವು ದೊಡ್ಡ ಶಕ್ತಿಯಾಗಿ ಬೆಳೆಯುತ್ತಲೇ ಇದೆ.
ಅನಂತದ ಅರಿವಿನ ವಿಕಾಸದಲ್ಲಿ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಪಾತ್ರ ದೊಡ್ಡದು. ಆರಂಭದಲ್ಲಿ ಕೇವಲ ತರ್ಕದಿಂದ ವಿಮರ್ಶೆಗಳನ್ನು ನಿರ್ಮಿಸಿ ಜ್ಞಾನ ಪರಂಪರೆಯನ್ನು ಕಟ್ಟುತ್ತಿದ್ದ ಸಂದರ್ಭವು ಮುಂದೆ ಪ್ರಾಯೋಗಿಕ ಹಾಗೂ ಗಣಿತೀಯ ಸೈದ್ಧಾಂತಿಕ ವಿವರಗಳಿಂದ ಸತ್ಯದ ದರ್ಶನ ಬಲವಾಗತೊಡಗಿತು. ಇದೇ ಮುಂದೆ ವಿಜ್ಞಾನದ ಮೂಲ ಸದಾಶಯವಾಗಿ, ಜ್ಞಾನದ ಹುಡುಕಾಟದಲ್ಲಿ ಬಹಳ ದೊಡ್ಡ ವಿಧಾನವನ್ನು ಸಾಧ್ಯಮಾಡಿತು. ಇದರಿಂದಾಗಿ ವೈಜ್ಞಾನಿಕ ಎನ್ನುವ ಗುಣವಾಚಕವು ಸತ್ಯವನ್ನು ಮತ್ತಷ್ಟು ಮೊನಚುಮಾಡುವ ಸಾಧನವೂ ಆಯಿತು. ಅದರ ಜೊತೆಗೆ ವೈಜ್ಞಾನಿಕ ಎನ್ನುವುದು ಒಪ್ಪಿಗೆಯಾಗಬಲ್ಲ ಅಥವಾ ಅಪ್ಯಾಯಮಾನವಾದ ಎಂಬ ಬಳಕೆಯ ವಿವರಕ್ಕೂ ಕಾರಣವಾಗಿದೆ.
ಇಂತಹ ಅಪಾರ ಜ್ಞಾನದ ತಿಳಿವಿಗೆ ಹೊಸತನ್ನು ಸೇರಿಸುತ್ತಲೇ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವ, ಆ ಮೂಲಕ ಇಡೀ ಮನುಕುಲದ ಕುತೂಹಲ, ವಿಶ್ವದ ತಿಳಿವಿನ ಜಿಜ್ಞಾಸೆ ಮುಂತಾದವುಗಳು ಹೆಚ್ಚುತ್ತಿರುವ ಫಲವಾಗಿ ಜ್ಞಾನದ ಪರಂಪರೆಯು ಬೆಳೆಯುತ್ತಿದೆ. ಇವೆಲ್ಲವೂ ವೈವಿಧ್ಯಮಯ ಜ್ಞಾನ ಶಿಸ್ತುಗಳಾಗಿ ಮಾನವನ ತಿಳಿವಳಿಕೆಯ ಭಾಗವಾಗಿ ಪ್ರತಿನಿತ್ಯವೂ ಬೆರಗಿನ ಜಗತ್ತು ತೆರೆದುಕೊಳ್ಳುತ್ತಲೇ ಇದೆ. ಇಂತಹ ಮಹತ್ತರ ಶೋಧವನ್ನು ಮುಖ್ಯವಾಗಿ ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ ಅಥವಾ ಶರೀರಕ್ರಿಯಾ ವಿಜ್ಞಾನ, ಅರ್ಥವಿಜ್ಞಾನ, ಸಾಹಿತ್ಯ ಮುಂತಾದ ಜ್ಞಾನ ಶಿಸ್ತುಗಳಲ್ಲಿ ಜಾಗತಿಕವಾಗಿ ಜತೆಗೆ ಇಡೀ ಮನುಕುಲದ ಸದಾಶಯಗಳ ಮೇಲೆ ಪ್ರಭಾವಿಸುವ ಹಿನ್ನೆಲೆಯಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಶಾಂತಿಗಾಗಿ ಕೊಡುಗೆ ನೀಡಿದವರಿಗೂ ನೊಬೆಲ್ ಪಾರಿತೋಷಕವನ್ನು ಕಳೆದ ಶತಮಾನದ ಆದಿಯಿಂದ (1901) ಪ್ರತೀ ವರ್ಷವೂ ನೊಬೆಲ್ ಸಮಿತಿಯು ಕೊಡುತ್ತಿದೆ. ನೊಬೆಲ್ ಆಸ್ತಿಯಿಂದ ಬಂದ ಹಣವನ್ನು ನಿಭಾಯಿಸುತ್ತಿರುವ ಸ್ವೀಡಿಶ್ ಕೇಂದ್ರೀಯ ಬ್ಯಾಂಕ್ ನೊಬೆಲ್ ಅವರ ನೆನಪಿನಲ್ಲಿ ಅರ್ಥವಿಜ್ಞಾನದಲ್ಲಿ ಬಹುಮಾನವನ್ನು 1969ರಿಂದ ಆರಂಭಿಸಿದೆ. ಎವೆಲ್ಲವೂ ಒದೊಂದು ಬಗೆಯಲ್ಲಿ ಬೌದ್ಧಿಕ ಜಗತ್ತಿನ ಅತ್ಯಂತ ಹೆಮ್ಮೆಯ ಅನಾವರಣ.
ನೊಬೆಲ್ ಪುರಸ್ಕೃತರು ಜಗತ್ತಿನ ಹೀರೋಗಳಾಗಿ ಮರುದಿನವೇ ಸುದ್ದಿಯಾಗುವುದು ಕಳೆದ ಒಂದು ಶತಮಾನದಿಂದ ನಡೆದು ಬಂದ ಸಂಗತಿ. ಪ್ರತಿ ಶಾಖೆಯಲ್ಲೂ ಆಯಾ ವರ್ಷದ ಬಹುಮಾನ ಪಡೆವ ವ್ಯಕ್ತಿಯ ಅಥವಾ ವ್ಯಕ್ತಿಗಳನ್ನು ಅವರ ವೈಯಕ್ತಿಯ ಕೊಡುಗೆಯಿಂದ ಗುರುತಿಸುವುದು ಸಾಮಾನ್ಯ ಸಂಗತಿಯಲ್ಲ. ಜಾಗತಿಕವಾಗಿಯೂ ಮನುಕುಲಕ್ಕೆ ನೆರವಾಗಬಲ್ಲ ಅಂತಹ ಶೋಧವನ್ನು ಗುರುತಿಸುವ ಪ್ರಕ್ರಿಯೆ ಕೂಡ ಅದ್ಭುತ ಕಥಾನಕವೇ. ಬೌದ್ಧಿಕ ಹಿರಿಮೆಯ ಶಿಖರಗಳನ್ನು ಗುರುತಿಸುವುದೂ ಕೂಡ ಅದ್ಭುತವಾದ ಬೌದ್ಧಿಕ ಪ್ರಕ್ರಿಯೆ!

ನೊಬೆಲ್ ಬಹುಮಾನಗಳನ್ನು ಸ್ಥಾಪಿಸಿದ ರೂವಾರಿ ಸ್ವೀಡನ್ನಿನ ಅನ್ವೇಷಕ ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್. ತಂದೆ ಇಮ್ಮಾನ್ಯುಯಲ್ ನೊಬೆಲ್, ಓರ್ವ ಅನ್ವೇಷಕ, ಇಂಜಿನಿಯರ್ ಹಾಗೂ ಸಾಹಸೀ ಉದ್ಯಮಿ. ಆಲ್ಫ್ರೆಡ್, ಇಮ್ಮಾನ್ಯುಲ್ಗೆ ಮೂರನೆಯ ಮಗ. ಈತ ಮೂಲತಃ ರಸಾಯನವಿಜ್ಞಾನಿ, ತಂತ್ರಜ್ಞಾನ ಸಾಹಸಿ, ಅನ್ವೇಷಕ. ತನ್ನ ಡೈನಮೈಟ್ ಶೋಧದಿಂದ ಅಪಾರ ಹಣ ಆಸ್ತಿಯನ್ನು ಸಂಪಾದಿಸಿದ್ದಾತ. ತುಂಬಾ ಜಾಣರಾಗಿದ್ದ ನೊಬೆಲ್ ಸುಮಾರು 17ನೆಯ ವಯಸ್ಸಿಗಾಗಲೇ 5 ಭಾಷೆಗಳನ್ನು ಅತ್ಯಂತ ಸುಲಲಿತವಾಗಿ ಮಾತನಾಡಬಲ್ಲವನಾಗಿದ್ದರು. ಮೂಲತಃ ರಸಾಯನ ವಿಜ್ಞಾನಿ, ಅನ್ವೇಷಕ, ಇಂಜಿನಿಯರ್ ಉದ್ಯಮಿ, ಜೊತೆಗೆ ಲೇಖಕ ಕೂಡ. ತನ್ನೆಲ್ಲಾ ಗಳಿಕೆಯನ್ನು ಕೇವಲ ಬಹುಮಾನವಾಗಿ ಕೊಡಲು ಮೂಲ ನಿಧಿಯಾಗಿ ಬಿಟ್ಟು ಹೋಗಿದ್ದು ಇವತ್ತಿನ ಲೆಕ್ಕದಲ್ಲಿ ಸುಮಾರು 300 ದಶಲಕ್ಷ ಡಾಲರ್. ಇಂತಹ ಮಹತ್ವದ ನಿರ್ಧಾರದ ರೂವಾರಿ ಆಲ್ಫ್ರೆಡ್ ನೊಬೆಲ್ ಹುಟ್ಟಿದ್ದು ಅಕ್ಟೋಬರ್ 21ರಂದು ಸ್ವೀಡನ್ನಿನ ಸ್ಟಾಕ್ಹೋಮ್ನಲ್ಲಿ. ಬೆಳೆದಿದ್ದು ರಷಿಯಾದಲ್ಲಿ, ರಸಾಯನ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಓದಿದ್ದು ಫ್ರಾನ್ಸ್ ಹಾಗೂ ಅಮೆರಿಕಾದಲ್ಲಿ.
ಆಲ್ಫ್ರೆಡ್ ನೊಬೆಲ್ ಸ್ವತಃ ಅನ್ವೇಷಕರಾಗಿದ್ದು ಸುಮಾರು 355 ಪೇಟೆಂಟುಗಳನ್ನು ಪಡೆದ ವ್ಯಕ್ತಿ. ಅತ್ಯುತ್ತಮ ಉದ್ಯಮಶೀಲನಾಗಿದ್ದು ಯೂರೋಪಿನಾದ್ಯಂತ 90 ಕಾರ್ಖಾನೆಗಳನ್ನು ಸ್ಥಾಪಿಸಿದ ಮಹಾನ್ ಸಾಹಸಿ. ನೊಬೆಲ್ ಇದೀಗ ನೊಬೆಲ್ ಬಹುಮಾನಗಳನ್ನು ಕೊಡುತ್ತಿರುವ ಸ್ವೀಡಿಶ್ ವಿಜ್ಞಾನ ಅಕಾಡೆಮಿಯ ಸದಸ್ಯ ವಿಜ್ಞಾನಿ. ಜೊತೆಗೆ ಉಪ್ಸಲಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಪಡೆದ ವಿಜ್ಞಾನಿಯೂ ಕೂಡ.
ಈತನ ಸಹೋದರರಲ್ಲೊಬ್ಬ ಮರಣ ಹೊಂದಿದಾಗ ಫ್ರೆಂಚ್ ಪತ್ರಿಕೆಯೊಂದು ಈತನೇ ತೀರಿಕೊಂಡನೆಂಬ ಮರಣವಾರ್ತೆಯನ್ನು ಪ್ರಕಟಿಸಿತ್ತು. ಅದರ ಒಕ್ಕಣೆ ಹೀಗಿತ್ತು. “ಮರಣದ ವ್ಯಾಪಾರಿಯ ಮರಣ(The Merchant of Death is Dead)”. ಡೈನಮೈಟ್ಗಳು ಬಾಂಬು ತಯಾರಿಕೆಯಲ್ಲೂ ಕೂಡ ಬಳಕೆಯಾಗುತ್ತಿದ್ದು ಅಂತಹದರಿಂದ ಜೊತೆಗೆ ಅದರ ಇತರೇ ಉಪಯೋಗಗಳಿಂದ ಅಪಾರ ಹಣ ಸಂಪಾದಿಸಿದ್ದರೂ ಆತನ ಬಗೆಗಿನ ಸಾಮಾಜಿಕ ತಿಳಿವು ಈ ಬಗೆಯದಾಗಿತ್ತು.
ಆ ಸಮಯದಲ್ಲಿ ಪ್ರಯಾಣದಲ್ಲಿದ್ದ ಆಲ್ಫ್ರೆಡ್ ತನ್ನ ಸಹೋದರನ ಮರಣ ವಾರ್ತೆಯನ್ನು ತಿಳಿಯುತ್ತಲೇ ಅದನ್ನು ತನ್ನದೇ ಮರಣ ವಾರ್ತೆಯಾಗಿಸಿದ ಜನತೆ ಈ ಬಗೆಯಲ್ಲಿ “ಮರಣದ ವ್ಯಾಪಾರಿಯಾಗಿ” ತನ್ನನ್ನು ನೆನಪಿಸಿಕೊಳ್ಳತ್ತಾರೆಯೇ ಎಂದು ಚಿಂತಿತರಾದರು. ಛೇ, ಹಾಗಾದರೆ ತಾನು ಬದುಕು ಮುಗಿಸಿದ ಮೇಲೆ ಮನುಕುಲ ನೆನಪಲ್ಲೇ ಇಟ್ಟುಕೊಳ್ಳುವಂತಹಾ ಉಪಾಯಕ್ಕೆ ಆಲೋಚಿಸಿದ. ಅದಕ್ಕಾಗಿ ಕಾರ್ಯಪ್ರವೃತ್ತನಾಗಿ, ತಾನು ಸಂಪಾದಿಸಿದ ಅಪಾರ ಹಣ ಆಸ್ತಿಯನ್ನೆಲ್ಲಾ ದಾನವಾಗಿ, ಜಾಗತಿಕ ಶೋಧವೊಂದು ಮನುಕುಲದ ಏಳಿಗೆಗೆ ಹಾಗೂ ಆಯಾ ಜ್ಞಾನ ಶಿಸ್ತುಗಳ ಪ್ರಮುಖ ಬೆಳವಣಿಗೆಗೆ ನಾಂದಿಯಾಗಲು ಕಾರಣರಾದ ವ್ಯಕ್ತಿಗಳಿಗೆ ಬಹುಮಾನ ಕೊಡಲು ಒಂದು ಪುಟದ ಕೈಬರಹದ ಉಯಿಲು ಬರೆದಿಟ್ಟರು. ಲಾಯರ್ಗಳಲ್ಲಿ ನಂಬಿಕೆ ಇರದ ಆಲ್ಫ್ರೆಡ್ ಅವರು ಸ್ವಂತ ಕೈಬರಹದಲ್ಲಿ 1895ರ ನವೆಂಬರ್ 27ರಂದು ಉಯಿಲು ಬರೆದು ಅದನ್ನು ಜಾರಿಗೊಳಿಸುವ ಹೊಣೆಯನ್ನು ತನ್ನ ಬಳಿ ಸಹಾಯಕನಾಗಿದ್ದ ಅತ್ಯಂತ ನಂಬಿಕಸ್ಥ ರ್ಯಾಗ್ನರ್ ಸಾಲ್ಮಾನ್ (Ragnar Sohlman) ಎಂಬ ಓರ್ವ ಕೆಮಿಕಲ್ ಇಂಜಿನಿಯರ್ ಅವರಿಗೆ ವಹಿಸಿದರು.

ಆಲ್ಫ್ರೆಡ್ ನೊಬೆಲ್ ಸ್ವೀಡಿಶ್, ರಷಿಯನ್, ಫ್ರೆಂಚ್, ಇಂಗ್ಲೀಷ್, ಜರ್ಮನ್ ಹಾಗೂ ಇಟಾಲಿಯನ್ ಭಾಷೆಗಳಲ್ಲಿ ಪ್ರಭುತ್ವವನ್ನು ಹೊಂದಿದ್ದ ವಿಜ್ಞಾನಿ ಉದ್ಯಮಿ. ಹಲವು ಕಡೆ ಉದ್ಯಮಗಳನ್ನು ಹೊಂದಿದ್ದ ನೊಬೆಲ್ ಸದಾ ಓಡಾಟದಲ್ಲಿದ್ದು ತುಂಬಾ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಸ್ವತಃ ಕವಿ ಮತ್ತು ಲೇಖಕರಾಗಿದ್ದ ನೊಬೆಲ್ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಜಾಗತಿಕವಾಗಿ ಅತ್ಯಂತ ಮಹತ್ವಾಕಾಂಕ್ಷಿ ಉದ್ಯಮಿಯಾಗಿದ್ದ ನೊಬೆಲ್ ಮೊಟ್ಟ ಮೊದಲ ಅಂತರರಾಷ್ಟ್ರೀಯ ಡೈನಮೈಟ್ ಟ್ರಸ್ಟ್ ಕಂಪನಿಯನ್ನು ಹುಟ್ಟು ಹಾಕಿದರು. ಜರ್ಮನಿಯಲ್ಲಿ ಮೊಟ್ಟ ಮೊದಲ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಆರಂಭವಾದ ಉದ್ಯಮದ ಆಸಕ್ತಿಯು ವಿವಿಧ ದೇಶಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಸಹಕಾರಿಯಾಯಿತು. ಇಡೀ ಯೂರೋಪ್ನಲ್ಲೆಲ್ಲಾ ತನ್ನ ಉದ್ಯಮವನ್ನು ವಿಸ್ತರಿಸಿ ಹೆಸರು ಮಾಡಿದ ಧನಿಕ ಆಲ್ಫ್ರೆಡ್ ನೊಬೆಲ್.
ವೈಯಕ್ತಿಕವಾಗಿ ಆಲ್ಫ್ರೆಡ್ ನೊಬೆಲ್ ವಿಜ್ಞಾನದ ಅನ್ವಯದ ಲಾಭದ ಉದ್ದೇಶಗಳನ್ನು ಅರಿತಿದ್ದಾತ. ಆದ್ದರಿಂದ ಮೂಲ ವಿಜ್ಞಾನದ ಮಹತ್ವಗಳನ್ನು ತೀರಾ ಚೆನ್ನಾಗಿ ಬಲ್ಲವರಾಗಿದ್ದರು. ಈ ಉದ್ದೇಶದಿಂದಲೇ ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ವೈದ್ಯಕೀಯ ವಿಜ್ಞಾನದ ಮಹತ್ವದ ಶೋಧಗಳಿಗೆ ಹಾಗೂ ಅವುಗಳ ಮಾನವತೆಯ ಬೆಂಬಲವಾಗಿ ಬಹುಮಾನ ನೀಡಲು ಆಶಿಸಿದ್ದರು. ಅದರ ಜೊತೆಯಲ್ಲಿ ಸಾಹಿತ್ಯಿಕ ಆಸಕ್ತಿಯನ್ನು ಬೆಳೆಸಿಕೊಂಡಿದ ವ್ಯಕ್ತಿಯಾಗಿ ಸಾಹಿತ್ಯವು ಸೃಷ್ಟಿಸುವ ಸಾಮಾಜಿಕ ಸಾಧ್ಯತೆಯ ಮೂಲಕ ಅದರ ಮನೋಲ್ಲಾಸದ ಮಾನವೀಯ ಸಂಗತಿಗೆ ಪುರಸ್ಕಾರ ನೀಡುವ ಆಶಯ ಆತನಲ್ಲಿತ್ತು. ಇದರ ಜೊತೆಯಲ್ಲಿ ದೇಶ ದೇಶಗಳ ಮಧ್ಯೆ ಸಂಬಂಧಗಳ ಸೃಷ್ಟಿಯಿಂದ ಶಾಂತಿಯನ್ನು ಸಂವೇದನೆಯನ್ನು ಸ್ಥಾಪಿಸುವ ಹಿನ್ನೆಲೆಯ ಅರಿವಿನಿಂದ ಅದಕ್ಕಾಗಿ ಜನರು ಅಥವಾ ಸಂಘ ಸಂಸ್ಥೆಗಳು ಶ್ರಮಿಸುವ ಆಸಕ್ತಿಯನ್ನೂ ಆತ ಗಮನಿಸಿದ್ದರು.
ಅಷ್ಟಕ್ಕೂ ಉಯಿಲು ಸಾಧುವಾಗುವುದೇನೂ ಸುಲಭವಾಗಿರಲಿಲ್ಲ. ಎಲ್ಲವನ್ನೂ ಬಿಟ್ಟು ಹೋಗುವ ಕೊನೆಯ ದಿನಗಳಲ್ಲಿ ಆಲ್ಫ್ರೆಡ್ ನಿಜಕ್ಕೂ ಒಂಟಿಯಾಗಿದ್ದರು. ಆತನ ಮನಸ್ಸಿನೊಳಗೆ ಅಗಾಧ ಸಂಪತ್ತನ್ನು ಮನುಕುಲದ ಮಹತ್ವಾಕಾಂಕ್ಷೆಯ ಶೋಧಕ್ಕೆ ಕೊಡಬೇಕೆನ್ನುವ ನಿರ್ಧಾರವಿತ್ತು. ಆ ನಿರ್ಧಾರವನ್ನು ಜಾಗತಿಕವಾಗಿಸಿ, ದೇಶಗಳ ಗೊಡವೆ ಇಲ್ಲದಂತೆ ಬಳಕೆಯಾಗುವ ಬಯಕೆಯನ್ನು ಜಾರಿಗೊಳಿಸುವ ಕಷ್ಟವನ್ನು ತನ್ನ ಸಹಚರ ಸಾಲ್ಮನ್ಗೆ ಒಪ್ಪಿಸಿದ್ದರು. ರಾಗ್ನರ್ ಉಯಿಲನ್ನು ಜಾರಿಗೊಳಿಸಲು ಸಾಕಷ್ಟು ಕಷ್ಟಪಟ್ಟರು. ನೊಬೆಲ್ ಅವರ ಮರಣಾನಂತರ ಸ್ವತಃ ಆತನ ದೇಶ ಸ್ವೀಡನ್ ಸೇರಿದಂತೆ ಕೆಲವು ಬಂಧುಗಳೂ ಆಕ್ಷೇಪಿಸಿದ್ದರು. ತನ್ನದೇ ಆದ ಯಾವುದೇ ಕುಟುಂಬವನ್ನೇ ಹೊಂದಿರದ ನೊಬೆಲ್ ಸ್ವ್ವೀಡನ್ನಿನಲ್ಲಿ ಹುಟ್ಟಿ, ರಷಿಯಾದಲ್ಲಿ ಬೆಳೆದು, ರಷಿಯಾ, ಫ್ರಾನ್ಸ್, ಇಟಲಿಯಲ್ಲಿ ಹೆಚ್ಚಿನ ಕಾಲ ಕಳೆದು, ಕೊನೆಗೆ ಇಟಲಿಯಲ್ಲಿಯೇ ಕೊನೆಯುಸಿರೆಳೆದರು. ಬಾಲ್ಯದಲ್ಲಿಯೇ ದೇಶವನ್ನು ಬಿಟ್ಟ ನೊಬೆಲ್ ಇಡೀ ಜಗತ್ತಿಗೆ ತನ್ನ ಆಸ್ತಿಯನ್ನು ಹಂಚಿ ಸಂಪತ್ತಿನ ಪ್ರತಿಶತ 94ರಷ್ಟನ್ನು ಮೀಸಲಿಟ್ಟು ಅದರ ಬಡ್ಡಿಯಿಂದ ಬರುವ ಹಣವನ್ನು ಸಮನಾಗಿ ಐದು ಭಾಗವಾಗಿಸಿ ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿಗಾಗಿ ಕೊಡುವಂತೆ ಉಯಿಲನ್ನು ಯಾವುದೇ ವಕೀಲರ ನೆರವಿಲ್ಲದೇ ಸ್ವತಃ ತಾನೇ ಬರೆದಿಟ್ಟರು. ಈ ಐದು ವಿಭಾಗಗಳಲ್ಲಿ ಮನುಕುಲಕ್ಕೆ ಒಳಿತಾಗುವ ಶೋಧಕ್ಕೆ ತನ್ನೆಲ್ಲಾ ಸಂಪತ್ತನ್ನು ಮುಡುಪಾಗಿಟ್ಟ ಮಹಾನ್ ವ್ಯಕ್ತಿ.
ಉಯಿಲಿನ ಆಶಯದಂತೆ ರಾಗ್ನರ್ ಸಾಲ್ಮನ್ ಅವರ ನಿಷ್ಠೆಯಿಂದ ಆರಂಭವಾದ ನೊಬೆಲ್ ಪ್ರತಿಷ್ಠಾನವು 1901ರಿಂದ ಆರಂಭಿಸಿ ಇಲ್ಲಿಯವರೆಗೂ ಪ್ರತೀ ವರ್ಷ ನೊಬೆಲ್ ಬಹುಮಾನಗಳನ್ನು ಕೊಡುತ್ತಿದೆ. ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಕಟಗೊಳ್ಳುವ ಬಹುಮಾನಕ್ಕೆ ಅದಕ್ಕೂ ಮೊದಲು ಹಲವಾರು ತಿಂಗಳುಗಳ ಕಾಲ ವಿಜ್ಞಾನ, ಸಾಹಿತ್ಯ ಹಾಗೂ ಶಾಂತಿಗಾಗಿ ಬದುಕು ಸವೆಸಿದವರ ಹುಡುಕಾಟ ನಡೆದಿರುತ್ತದೆ.

ಈ ವರ್ಷ 2024ರ ಹುಡುಕಾಟದ ಫಲ ಈಗಾಗಲೇ ನೊಬೆಲ್ ಸಮಿತಿಯ ಮುಂದೆ ಇದ್ದು ಇದೇ ಅಕ್ಟೋಬರ್ 7 ರಿಂದ ಒಂದೊಂದಾಗಿ 13ರ ವರೆಗೂ ಸಾರ್ವಜನಿಕವಾಗಿ ಮುಕ್ತವಾಗುತ್ತವೆ. ಎಂದಿನಂತೆ ಪ್ರಕಟಣೆಯ ಕ್ಷಣದ ಹಿಂದೆಯೇ CPUS ನಿಮ್ಮ ಜೊತೆ ಹಂಚಿಕೊಳ್ಳಲು ಆರಂಭಿಸುತ್ತದೆ.
ಮತ್ತೆ ಸೋಮವಾರದಿಂದ 2024ರ ಪ್ರಶಸ್ತಿಗಳ ವಿವರಗಳೊಂದಿಗೆ…
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.