You are currently viewing ನೊಬೆಲ್‌ ಶಾಂತಿ ಪುರಸ್ಕಾರ 2020

ನೊಬೆಲ್‌ ಶಾಂತಿ ಪುರಸ್ಕಾರ 2020

ನೊಬೆಲ್‌ ಬಹುಮಾನಗಳ ಘೋಷಣೆಗಳಿಂದ ಇಡೀ ವಾರವು ಸುದ್ಧಿಯಲ್ಲಿತ್ತು. ವಾರಾಂತ್ಯಕ್ಕೆ ಸಮಿತಿಯು “ಶಾಂತಿ”ಪುರಸ್ಕಾರವನ್ನು ಘೋಷಿಸಿದೆ. ಆಲ್ಫ್ರೆಡ್‌ ನೊಬೆಲ್‌ ಅವರ ಉಯಿಲಿನಂತೆ 1901ರಿಂದ ಆರಂಭವಾದ ಶಾಂತಿ ಪುರಸ್ಕಾರ ಜಗತ್ತಿನ ಯಾವುದೇ ವ್ಯಕ್ತಿ, ಸಂಸ್ಥೆಯು ನಡೆಸಿದ ಲೋಕ ಕಲ್ಯಾಣದ ಸೇವೆಯನ್ನು ನೊಬೆಲ್‌ ಶಾಂತಿ ಪುರಸ್ಕಾರವು ಗುರುತಿಸಿ ಗೌರವಿಸುತ್ತದೆ. ಕಳೆದ ಶತಮಾನದ ಆರಂಭದ 1901 ರಿಂದ ೨೦೨೦ವರೆಗೆ ಸುಮಾರು 101 ನೊಬೆಲ್‌ ಶಾಂತಿ ಪ್ರಶಸ್ತಿಗಳನ್ನು ನೀಡಲಾಗಿದ್ದು, ಅವುಗಳಲ್ಲಿ 17 ಜನ ಮಹಿಳೆಯರೂ ಸೇರಿದ್ದು, ಅಲ್ಲದೆ 25 ಸಂಸ್ಥೆಗಳನ್ನೂ ಒಳಗೊಂಡಿದೆ.  ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ 2020 ಅನ್ನು ಹಸಿವನ್ನು ಯುದ್ಧ ಮತ್ತು ಸಂಘರ್ಷದ ಆಯುಧವಾಗಿ ಬಳಸುವುದರ ವಿರುದ್ಧ ಹೋರಾಡುವ “ವಿಶ್ವ ಆಹಾರ ಕಾರ್ಯಕ್ರಮ -World Food Programme (WFP) –  ಕ್ಕೆ ನೀಡಲಾಗಿದೆ.   

ವಿಶ್ವ ಆಹಾರ ಕಾರ್ಯಕ್ರಮ(World Food Programme)ವು ವಿಶ್ವದ ಆಹಾರ ಕುರಿತಂತಹಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಶ್ವಸಂಸ್ಥೆಯ ಅಂಗ ಸಂಸ್ಥೆ. ಇದು ವಿಶ್ವದ ಅತಿದೊಡ್ಡ ಮಾನವೀಯ ಸಂಘಟನೆಯಾಗಿದ್ದು ಹಸಿವನ್ನು ನೀಗಿಸುವ ಯೋಜನೆಗಳ ಮೂಲಕ ಆಹಾರ ಸುರಕ್ಷತೆಯನ್ನು ಉತ್ತೇಜಿಸುತ್ತದೆ. ಪ್ರತಿ ವರ್ಷ ಸುಮಾರು 88 ದೇಶಗಳಲ್ಲಿ ಸುಮಾರು 91.4 ದಶಲಕ್ಷ ಜನರ ಹಸಿವನ್ನು ನಿವಾರಿಸುವ ಕಾರ್ಯಯೋಜನೆಗಳನ್ನು ನಡೆಸುತ್ತಿದೆ. ಇದು ಇಟಲಿಯ ರೋಮ್‌  ನಗರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದ್ದು, ವಿಶ್ವದಾದ್ಯಂತ 80 ಕ್ಕೂ ಹೆಚ್ಚು ದೇಶದ ಕಚೇರಿಗಳಿಂದ, ಅಲ್ಲಿನ ನಿವಾಸಿಗಳ ಕುಟುಂಬಗಳಿಗೆ ಸಾಕಷ್ಟು ಆಹಾರವನ್ನು ಉತ್ಪಾದಿಸಲು ಅಥವಾ ಪಡೆಯಲು ಸಾಧ್ಯವಾಗದ ಜನರಿಗೆ ಸಹಾಯ ಮಾಡಲು ಕೆಲಸ ಮಾಡುತ್ತದೆ.

 ನೊಬೆಲ್‌ ಸಮಿತಿಯು ಬಹುಮಾನ ಪ್ರೇರಣೆಯ ಘೋಷವಾಕ್ಯವಾಗಿ ಹೀಗೆ ಹೇಳಿದೆ:

“ಹಸಿವನ್ನು ಎದುರಿಸುವ ಪ್ರಯತ್ನಗಳಿಗಾಗಿ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಗಾಗಿ ಉತ್ತಮ ಪರಿಸ್ಥಿತಿಗಳಿಗೆ ನೀಡಿದ ಕೊಡುಗೆಗಾಗಿ ಮತ್ತು ಯುದ್ಧ ಮತ್ತು ಸಂಘರ್ಷದ ಅಸ್ತ್ರವಾಗಿ ಹಸಿವನ್ನು ಬಳಸುವುದನ್ನು ತಡೆಯುವ ಪ್ರಯತ್ನಗಳಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವುದಕ್ಕಾಗಿ.”

          WFP ಸಂಸ್ಥೆಯು 1963ರಲ್ಲಿ ಆರಂಭವಾಗಿದ್ದು ಕಳೆದ 2019ರ ವೇಳೆಗೆ 88 ದೇಶಗಳಲ್ಲಿ 100 ದಶಲಕ್ಷ ಜನರ ಹಸಿವಿನ ನಿವಾರಣೋಪಾಯಗಳಲ್ಲಿ ತೊಡಗಿಕೊಂಡು ಆಹಾರ ಭದ್ರತೆಯಲ್ಲಿ ಸಹಕಾರಿಯಾಗಿದೆ. ಅಂತರರಾಷ್ಟ್ರೀಯ ಒಗ್ಗಟ್ಟಿನ ಮತ್ತು ಬಹುಪಕ್ಷೀಯ ಸಹಕಾರದ ಅಗತ್ಯವು ಎಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿದೆ. ಹಸಿವನ್ನು ಎದುರಿಸುವ ಪ್ರಯತ್ನಗಳಿಗಾಗಿ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಗಾಗಿ ಉತ್ತಮ ಪರಿಸ್ಥಿತಿಗಳನ್ನು ಒದಗಿಸಲು ಮತ್ತು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು 2020 ರ ವಿಶ್ವ ಆಹಾರ ಕಾರ್ಯಕ್ರಮಕ್ಕೆ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಿದೆ. ಇದರಿಂದ ಪ್ರಸ್ತುತ ಜಗತ್ತು ಅನುಭವಿಸುತ್ತಿರುವ ಸಾಂಕ್ರಾಮಿಕತೆಯ ಭಯವನ್ನೂ ಸಹಾ ಜನ ಸಮುದಾಯವು ಸ್ವಯಂ ಪ್ರೇರಣೆಯಿಂದ ಆಹಾರದ ಬಳಕೆ ಮತ್ತು ತಿಳಿವಿನಲ್ಲಿ ನಿವಾರಿಸಿಕೊಳ್ಳಬಹುದಾದ ಸುಳಿವನ್ನೂ ಪರಿಭಾವಿಸಬಹುದಾಗಿದೆ. ಅದಕ್ಕೆಂದೆ ತಮ್ಮ ಆಯ್ಕೆಯನ್ನು ವಿಮರ್ಶಿಸಿಕೊಳ್ಳುವಾಗ ಸಮಿತಿಯು ಆಹಾರವು ವ್ಯಾಕ್ಸೀನಿಗಿಂತಲೂ ದೃಢವಾದುದೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದೆ. ಆಹಾರ ವಿಜ್ಞಾನದ ಜಗತ್ತಿನ್ನೂ ಸಾರ್ವತ್ರಿಕವಾದ ತಿಳಿವಿನಲ್ಲಿ ಹೊರಬರಬೇಕಿದ್ದು, ಅದಕ್ಕಿರುವ ಶಕ್ತಿಯನ್ನೂ ಪ್ರಶಂಸಿದೆ.

ಕರೋನ ವೈರಸ್ ಸಾಂಕ್ರಾಮಿಕವು ವಿಶ್ವದ ಹಸಿವಿನಿಂದ ಬಲಿಯಾದವರ ಸಂಖ್ಯೆಯಲ್ಲಿ ಬಲವಾದ ಏರಿಕೆಗೆ ಕಾರಣವಾಗಿದೆ. ಯೆಮೆನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ನೈಜೀರಿಯಾ, ದಕ್ಷಿಣ ಸುಡಾನ್ ಮತ್ತು ಬುರ್ಕಿನಾ ಫಾಸೊ ಮುಂತಾದ ದೇಶಗಳಲ್ಲಿ, ಹಿಂಸಾತ್ಮಕ ಸಂಘರ್ಷ ಮತ್ತು ಸಾಂಕ್ರಾಮಿಕ ರೋಗಗಳ ಸಂಯೋಜನೆಯು ಹಸಿವಿನ ಅಂಚಿನಲ್ಲಿ ವಾಸಿಸುವ ಜನರ ಸಂಖ್ಯೆಯಲ್ಲಿ ನಾಟಕೀಯ ಏರಿಕೆಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಅಲ್ಲೆಲ್ಲಾ ವಿಶ್ವ ಆಹಾರ ಕಾರ್ಯಕ್ರಮವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುವ ಪ್ರಭಾವಶಾಲಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಸಂಘಟನೆಯೇ ಹೇಳಿರುವಂತೆ, “ನಮಗೆ ವೈದ್ಯಕೀಯ ಲಸಿಕೆ ಬರುವವರೆಗೂ, ಆಹಾರವು ಅತ್ಯುತ್ತಮ ಲಸಿಕೆ.” ಎಂಬ ಮಾತು ನಿಜಕ್ಕೂ ಸತ್ವಯುತವಾಗಿದೆ.

ಹಸಿವು ಮತ್ತು ಸಶಸ್ತ್ರ ಸಂಘರ್ಷದ ನಡುವಿನ ಸಂಪರ್ಕವು ಒಂದು ಕೆಟ್ಟ ಸಂದರ್ಭವಾಗಿದೆ. ಹಾಗಾಗಿ ಯುದ್ಧ ಮತ್ತು ಸಂಘರ್ಷಗಳು ಆಹಾರ ಅಭದ್ರತೆ ಮತ್ತು ಹಸಿವನ್ನು ಉಂಟುಮಾಡುತ್ತವೆ. ಹಸಿವು ಮತ್ತು ಆಹಾರ ಅಭದ್ರತೆಯಿಂದ ಸುಪ್ತ ಘರ್ಷಣೆಗಳು ಭುಗಿಲೆದ್ದು ಹಿಂಸಾಚಾರದ ಬಳಕೆಯನ್ನು ಪ್ರಚೋದಿಸುತ್ತದೆ. ಆದ್ದರಿಂದ ಯುದ್ಧ ಮತ್ತು ಸಂಘರ್ಷವನ್ನು ಕೊನೆಗೊಳಿಸದ ಹೊರತು ನಾವು ಎಂದಿಗೂ ಶೂನ್ಯ ಹಸಿವಿನ ಗುರಿಯನ್ನು ಸಾಧಿಸುವುದಿಲ್ಲ. ಎಂಬುದಾಗಿ ನೊಬೆಲ್ ಸಮಿತಿಯು ಪ್ರಸ್ತುತ ಸಂದರ್ಭವನ್ನು ವಿಮರ್ಶಿಸಿದೆ. ಆದ್ದರಿಂದಲೇ ಆಹಾರ ಭದ್ರತೆಯನ್ನು ಹೆಚ್ಚಿಸಲು ನೆರವು ನೀಡುವುದು ಹಸಿವನ್ನು ತಡೆಯುವುದಲ್ಲದೆ, ಸ್ಥಿರತೆ ಮತ್ತು ಶಾಂತಿಯ ಭವಿಷ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದೆ.   ಈ ವರ್ಷದ ಪ್ರಶಸ್ತಿಯೊಂದಿಗೆ, ನಾರ್ವೇಜಿಯನ್ ನೊಬೆಲ್ ಸಮಿತಿಯು ಹಸಿವಿನಿಂದ ಬಳಲುತ್ತಿರುವ ಅಥವಾ ಎದುರಿಸುತ್ತಿರುವ ಲಕ್ಷಾಂತರ ಜನರ ಕಡೆಗೆ ವಿಶ್ವದ ಕಣ್ಣುಗಳನ್ನು ತಿರುಗಿಸಲು ಬಯಸಿದೆ. ವಿಶ್ವ ಭದ್ರತಾ ಯೋಜನೆಗಳಲ್ಲಿ ಆಹಾರ ಸುರಕ್ಷತೆಯನ್ನು ಶಾಂತಿಯ ಸಾಧನವನ್ನಾಗಿ ಮಾಡುವಲ್ಲಿ ಬಹುಪಕ್ಷೀಯ ಸಹಕಾರದಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರೇರೇಪಿಸಿದೆ.

ಅಮೆರಿಕದ ಕರೊಲಿನಾ ರಾಜ್ಯದ ರಾಜಕಾರಣಿ ಡೇವಿಡ್‌ ಬೇಸ್ಲೀ(David Beasley) ಅವರು ಈ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಜಗತ್ತಿನಾದ್ಯಂತ ಈ ಸಂಸ್ಥೆಯಲ್ಲಿ 18000 ಕ್ಕೂ ಹೆಚ್ಚು ಜನ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯು ಆರಂಭವಾದ 1963ನೆಯ ವರ್ಷದಿಂದಲೂ ಭಾರತದಲ್ಲಿ ಇದರ ಶಾಖೆಯು ಇದ್ದು ಸಕ್ರಿಯಾಗಿ ತೊಡಗಿಕೊಂಡಿದೆ. ಭಾರತದ ಆಹಾರ ಮತ್ತು ನ್ಯುನ ಪೋಷಣೆಯ ಕಾರ್ಯಕ್ರಮಗಳಲ್ಲಿ ತಾಂತ್ರಿಕ ನೆರವಲ್ಲದೆ, ತಾತ್ವಿಕವಾಗಿ ತಿಳಿವನ್ನು ಸಾರ್ವತ್ರಿಕಗೊಳಿಸುವ ಜವಾಬ್ಧಾರಿ ಯೋಜನೆಗಳಲ್ಲಿ ನೇರ ಭಾಗವಹಿಸುವಿಕೆಯನ್ನು ಹೊಂದಿದೆ. ಆಸಕ್ತಿಯುಳ್ಳವರು ಭಾರತದ ಇದರ ಚಟುವಟಿಕೆಗಳನ್ನೂ ಮತ್ತಿತರ ವಿವರಗಳನ್ನೂ https://www.wfp.org/countries/india ವೆಬ್‌ ಪುಟದಲ್ಲಿ ನೋಡಬಹುದು.  

ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರವು ಈ ಕ್ಷಣದ ಜಾಗತಿಕ ಪಿಡುಗಿಗೂ ರೂಪಕವೆಂಬಂತಹಾ ಅರ್ಥವನ್ನು ಕೊಟ್ಟಿದೆ. 2020ರ ವರ್ಷ ಪೂರ್ತಿ ಕರಾಳ ದಿನಗಳೆನೋ ಎನ್ನುವಂತಿರುವ   ಈ ಹೊತ್ತಿನಲ್ಲಿ ಅನುಭವಿಸುತ್ತಿರುವ ಸಾಂಕ್ರಮಿಕತೆಗೂ ಕೊನೆಯೊಂದರ ಸುಳಿವನ್ನು ಕೊಟ್ಟಿದೆ. ಇದೇನು ಕರೋನಾಗೂ ಪರಿಹಾರವೇ ಎನ್ನುವ ತಕ್ಷಣದ ಪ್ರತಿಕ್ರಿಯೆಗೆ ಅದರೊಳಗೊಂದು ಗೂಢಾರ್ಥವನ್ನಿಟ್ಟ ಅನುಮಾನವೆನಿಸಿದೆ.  “ಲಸಿಕೆಗಿಂತಾ ಮೊದಲೇ ಆಹಾರವೇ ಪ್ರಧಾನ” ಪಾತ್ರದಾರಿಯಾಗಿದ್ದ ಇಂಗಿತದಲ್ಲಿ ಇದನ್ನು ಹುಡುಕಬಹುದೇ ಅನ್ನಿಸುತ್ತದೆ. ಹಾಗೇನಾಗಿದ್ದರೂ ಆಹಾರವನ್ನು ಉತ್ಪಾದಿಸುವ ಹಾಗೂ ತಯಾರು ಮಾಡುವ ಎಲ್ಲಾ ಕೈಗಳಿಗೂ ಗೌರವ ಸಿಕ್ಕಂತಾಗಿದೆ. (CPUS ವೆಬ್‌ ಪುಟದಲ್ಲಿ ವಾರ ವಾರವೂ ನಾನು ಬರೆಯುತ್ತಿರುವ ಸಸ್ಯಯಾನದಲ್ಲಿ ಒಂದು ವಾರ “ಪಾರ್ಥೇನಿಯಂ” ಕುರಿತು ಅದು ಪಿಡುಗಾದ ಹಾಗೂ ಅದಕ್ಕಾಗಿ ದಶಕಗಟ್ಟಲೇ ನಡೆಸಿದ ಪರಿಹಾರ ಕಾರ್ಯಕ್ರಮಗಳಲ್ಲಿ ಅವೈಜ್ಞಾನಿಕ ದಾಖಲೆಗಳನ್ನು ಪ್ರಸ್ತಾಪಿಸಿದ್ದೆ. ಇಂದಿಗೂ ಪಾರ್ಥೇನಿಯಂ ನಿಯಂತ್ರಣಾ ಸಪ್ತಾಹಗಳೂ, ಮಾಸಗಳೂ ನಡೆಯುತ್ತಿದ್ದು, ಪಾರ್ಥೇನಿಯಂ ಮಾತ್ರ ತನ್ನ ಪಾಡಿಗೆ ಬೆಳೆಯುತ್ತಲೇ ಇದೆ. ಜನರೂ ಅದಕ್ಕೆ ಹೊಂದಿಕೊಂಡು ಹೇಗೋ ಇದ್ದಾರೆ. ಇದಕ್ಕೆ ಸಮಾನಾಂತರವಾಗಿ ಕರೋನದ ನಿಯಂತ್ರಣಗಳಲ್ಲೂ ಭಯವೇ ಪ್ರಧಾನವಾಗಿದ್ದು, ಉಪಾಯಗಳಲ್ಲಿ ಆಸೆ ತೋರುವ “ವಾಕ್ಸೀನ್‌”ಗಿಂತಾ ಆಹಾರವೇ ಪ್ರಧಾನ ಎಂಬುದರಲ್ಲಿ ಕಡೆಗೂ ಜನಸಮುದಾಯವೇ ನಿಭಾಯಿಸುವಲ್ಲಿ ಕಡೆಯಾಗುವ ಸೂಕ್ಷ್ಮಗಳಿವೆ. ಇದು ವೈಯಕ್ತಿಕವಾಗಿ, ವಿಜ್ಞಾನದ ವಿದ್ಯಾರ್ಥಿಯಾದ ನನ್ನ ತಿಳಿವೂ ಹೌದು).

ಏನೇ, ಇರಲಿ! ಆಹಾರದ ಕಾರ್ಯಕ್ರಮಗಳಿಗೆ ಜಾಗತಿಕ ಪುರಸ್ಕಾರವನ್ನಂತೂ ನೀಡಲಾಗಿದೆ. ಭಾರತೀಯ ನೆಲದ ಮಣ್ಣಿನ ಕಸುವು ಉತ್ಪಾದನೆಗೆ ಸಖ್ಯವೂ ಹೌದು. ಅಡುಗೆಯ ರುಚಿಗಳ ವಿಕಾಸದಲ್ಲಿ ಭಾರತೀಯ ವೈವಿಧ್ಯವನ್ನು ಮೀರಲಾಗದ ಜಗತ್ತು ಹೊರಗಿನದು. ನೆಪಕ್ಕಾದರೂ ದೇಸೀಯತೆಯ ಗುಂಗಿನಲ್ಲಿ ಸ್ಥಳೀಯ ಊಟೋಪಚಾರಗಳಲ್ಲಿ ಮೆರುಗು ತುಂಬುವ ಸಂಬಾರು ಪದಾರ್ಥಗಳ ಕಷಾಯಗಳು ನಮ್ಮವೇ ಎಂಬುದಲ್ಲದೆ ಮತ್ತೆ ಚಾಲ್ತಿಗೂ ಬಂದಿವೆ. ನಮಗೆಲ್ಲಾ ಇವೇ ಗಟ್ಟಿ…! ಎಂದಿದ್ದರೂ ಒಗ್ಗಿಕೊಳ್ಳಲು ಹೊಸ ಪ್ರಯೋಗಗಳು ನಡೆಸುವ ಅವಶ್ಯಕತೆಗಳಿಲ್ಲ. ನಮ್ಮ ಅಡುಗೆ ಮನೆಯ ಉತ್ತರಗಳು ಧಾರಾಳವಾಗಿವೆ. ಇಲ್ಲಿನ ನೆಲ-ಮತ್ತು ನಿಭಾಯಿಸುವ ಕೈಗಳು ಮತ್ತಷ್ಟು ಶಕ್ತಿ ಪಡೆಯಲಿ ಎಂಬ ಆಶಯದಿಂದ “ವಿಶ್ವ ಆಹಾರ ಕಾರ್ಯಕ್ರಮ”ವನ್ನು ಅಭಿನಂದಿಸೋಣ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

Leave a Reply