ಮಣ್ಣುವಿಜ್ಞಾನದ ವಿದ್ಯಾರ್ಥಿಯಾದ ನನಗೆ ಕೇವಲ ನೆಲದ ಮೇಲಿನ ಗಿಡ-ಮರಗಳಷ್ಟೇ ಕಾಣುತ್ತವೆಯೇ? ಎಂದು ರೇಗಿಸಿ ನೀರೊಳಗಿನ ತಾವರೆಯ ನೆನಪಿಸಿದ್ದು ಸಸ್ಯಯಾನದ ಪಯಣಿಗಳಾದ ಒಬ್ಬ ಗೆಳತಿ. ತಾವರೆಯೂ ಕಾಣುತ್ತಿದೆ ಎಂಬುದಕ್ಕೆ, ಅದು ನೀರೊಳಗಿದ್ದೂ ಒದ್ದೆಯಾಗದು, ಅದು ರೂಪಕವಷ್ಟೇ ಅಲ್ಲ! ಅದ್ಭುತ ವೈಜ್ಞಾನಿಕ ಶೋಧ ಎಂದೆ. ಅದಕ್ಕವಳು ತನ್ನ ಕಮಲದಂತಹಾ ಕಣ್ಣೆರಡನ್ನೂ ಮತ್ತಷ್ಟು ಅರಳಿಸಿ, “ಹೌದೇ.. ಮತ್ತೆ ಆದಷ್ಟು ಬೇಗ ಬರೆಯಬಾರದೇ” ಎಂಬ ಒತ್ತಾಸೆಗೆ ನೀರೊಳಗಿನ ಸಸ್ಯವನ್ನು ಪರಿಚಯಿಸುತ್ತಿದ್ದೇನೆ. ಸಾಂಸ್ಕೃತಿಕವಾಗಿ ಪೂರ್ವದ ಜಗತ್ತನ್ನು ಅನನ್ಯವಾಗಿ ಹಿಡಿದಿಟ್ಟ ತಾವರೆಯು, ಭಾರತೀಯ ನೆಲದಲ್ಲಿ ಹುಟ್ಟಿದ ಹಿಂದೂ, ಬೌದ್ಧ, ಜೈನ ಹಾಗೂ ಸಿಕ್ ಧರ್ಮಗಳೆಲ್ಲದರಲ್ಲೂ ಪವಿತ್ರ ಸ್ಥಾನವನ್ನು ಅಲಂಕರಿಸಿದೆ.
ತಾವರೆ ಅಥವಾ ಕಮಲವು ಇಡೀ ಏಶಿಯಾದಲ್ಲೆಲ್ಲಾ ಜಲವಾಸಿ ಸಸ್ಯಗಳಲ್ಲಿ ಅತ್ಯಂತ ಜನಪ್ರಿಯವಾದದ್ದು. ಭಾರತದ ರಾಷ್ಟ್ರೀಯ ಪುಷ್ಪ, ಹಾಗೆಯೇ ವಿಯಟ್ನಾಮಿನದೂ ಕೂಡ. ಭಾರತೀಯ ಸಂದರ್ಭದಲ್ಲಂತೂ ಪರಿಶುದ್ಧತೆಗೆ ಪರಿಪೂರ್ಣವಾದ ರೂಪಕ, ತಾವರೆ. ಈ ಹೂವು ಪವಿತ್ರವಾದ್ದೆಂದೂ ಕೆಸರಲ್ಲಿ ಬೆಳೆದೂ ಕೊಳೆಯನ್ನೇನೂ ಹಚ್ಚಿಕೊಳ್ಳದೆ, ಸ್ವಚ್ಛತೆಯನ್ನೇ ತನ್ನ ಮೂಲಗುಣವಾಗಿ ಇರಿಸಿಕೊಂಡ ವಿಶಿಷ್ಟವಾದ ಸಸ್ಯ. ವಾಟರ್ ಲಿಲ್ಲಿಗಳೂ ಸಹಾ ಇದರ ಸಂಬಂಧಿಗಳೇ! ಇವೆಲ್ಲವುಗಳೂ ನೆಲುಂಬೊನೇಸಿಯೆ (Nelumbonaceae) ಎಂಬ ಸಸ್ಯ ಕುಟುಂಬದವು. ನೆಲುಂಬೊ ನ್ಯುಸಿಫೆರಾ (Nelumbo nucifera) ಎಂಬ ಸಸ್ಯವೈಜ್ಞಾನಿಕ ಹೆಸರುಳ್ಳ ತಾವರೆಯನ್ನು ವಿವಿಧ ಸಂಸ್ಕೃತಿಗಳು ಪವಿತ್ರತೆಯ ಸ್ಥಾನವನ್ನು ಕೊಟ್ಟು ಅದರ ಗೌರವವನ್ನು ಹೆಚ್ಚಿಸಿವೆ. ಹಿಂದೂ ಧರ್ಮದ ದೇವತೆಗಳನ್ನು ತಾವರೆಯಲ್ಲಿ ಕುಳ್ಳಿರಿಸಿ, ಅದಕ್ಕಿರುವ ಪಾವಿತ್ರತೆಯನ್ನು ಕೊಂಡಾಡಿವೆ. ಹಾಗೆಯೇ ಬೌದ್ಧ ಧರ್ಮವೂ ಕೂಡ ತಾವರೆಯನ್ನು ಅಪ್ಪಿಕೊಂಡಿದೆ. ಜೈನ ಪರಂಪರೆಯೂ ತಮ್ಮ ತೀರ್ಥಂಕರರಿಗೆ ಕಮಲದ ಪೀಠದಲ್ಲಿ ಧ್ಯಾನಸ್ಥರಾಗಿಸಿವೆ. ಸಿಖ್ ಪರಂಪರೆಯಲ್ಲಿ ತಾವರೆಯ ಪಾವಿತ್ರತೆಯ ಕುರುಹಾಗಿದ್ದು, ಅವರ ಪವಿತ್ರ ಗ್ರಂಥ “ಗ್ರಂಥ ಸಾಹೀಬ್”ನಲ್ಲಿ ಸುಮಾರು 410ಕ್ಕೂ ಹೆಚ್ಚು ಬಾರಿ ತಾವರೆ ಪದವನ್ನು ಬಳಸಿ ಅದರ ಮೌಲ್ಯಗಳನ್ನು ಎತ್ತಿಹಿಡಿದಿದೆ.
ಭಾರತೀಯ ಪರಂಪರೆಯ ಬಹುಮುಖ್ಯ ದೇವತೆಗಳಾದ ಲಕ್ಷ್ಮಿ-ಸರಸ್ವತಿಯರಿಬ್ಬರನ್ನೂ ಕಮಲದಲ್ಲರಳಿಸಿ ವಿದ್ಯೆ-ಹಣ ಎರಡರ ಜೊತೆಗೂ ಸಮೀಕರಿಸಿ ತಾವರೆಯನ್ನು ಎತ್ತಿಹಿಡಿಯಲಾಗಿದೆ. ಪದ್ಮನಾಭ, ಪದ್ಮಾಸನ, ಕಮಲನಯನೆ, ಕಮಲಾಕ್ಷಿ ಮುಂತಾದವುಗಳಿಂದ ತಾವರೆಯು ಭಾರತೀಯ ಸಂಸ್ಕೃತಿಯ ಮಾತಾಗಿದೆ. ಪದ್ಮಾಸನವು ಭಾರತೀಯ ಪರಂಪರೆಯ ಯೋಗ-ಧ್ಯಾನದಲ್ಲಿ ಬಳಸಲಾಗುವ ಒಂದು ಭಂಗಿ. ಶಿವ, ಬುದ್ಧ ಹಾಗೂ ತೀರ್ಥಂಕರರು ಪದ್ಮಾಸನದಲ್ಲಿ ಕುಳಿತು ಧ್ಯಾನಿಸುವುದರ ಮೂಲಕ ತಾವರೆಯ ಸ್ಥಿತಿಯನ್ನು ಗುರುತಿಸಲಾಗಿದೆ. ಅದೊಂದು ಪರಿಶುದ್ಧತೆಯ ಸ್ಥಿತಿಯೆಂದೂ ಆ ಮೂಲಕ ಜ್ಞಾನೋದಯವನ್ನು ತಲುಪುವ ಮಾರ್ಗವೆಂದೂ ಬಣ್ಣಿಸಲಾಗಿದೆ. ಯೋಗ ಪರಂಪರೆಯಲ್ಲಿ ಈ ಸ್ಥಿತಿಯನ್ನು ಅನೇಕ ತಾಂತ್ರಿಕ್ ರೂಪಕವಾಗಿ ಬಳಸಲಾಗುತ್ತದೆ. ಪದ್ಮಾಸನ ಎನ್ನುವುದೇ ತಾವರೆಯ ಸ್ಥಿತಿ (Lotus Position) ಪರಿಶುದ್ಧತೆಯ ಕಡೆಗೆ ಸಾಗುವ ಮಾರ್ಗದ ಮೊದಲ ಸ್ಥಿತಿ. ಆ ಸ್ಥಿತಿಯಿಂದ ನಮ್ಮೊಳಗಿನ ಕಹಿಯನ್ನು ಕಳೆದುಕೊಳ್ಳುವುದು ಸುಲಭ ಎನ್ನಲಾಗಿದೆ. ತಾವರೆಯು ಪರಿಶುದ್ಧತೆಯನ್ನು ಕಾಪಾಡಿಕೊಂಡಿರುವ ಬಗೆಯನ್ನೇ ಈ ಧ್ಯಾನಸ್ಥಿತಿಯಲ್ಲೂ ರೂಪಕವಾಗಿಸಿದೆ.
ಇದರ ಜೊತೆಗೆ “ತಾವರೆಕೆರೆ” ಹೆಸರಿನ ಊರುಗಳಂತೂ ಕನಿಷ್ಠ ಪ್ರತೀ ಜಿಲ್ಲೆಯಲ್ಲೂ ಅದರಲ್ಲೂ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಪ್ರತೀ ತಾಲ್ಲೂಕಿನಲ್ಲೂ ಇದ್ದರೆ ಅಚ್ಚರಿಯೇನಿಲ್ಲ. ಬೆಂಗಳೂರಿನ ಸುತ್ತ -ಮುತ್ತ ನಾಲ್ಕಾರು ತಾವರೆಕೆರೆ ಹೆಸರಿನ ಊರುಗಳಿವೆ. ಮಲೆನಾಡಿನಲ್ಲಿ ಹಲವೆಡೆ ತಾವರೆಕೊಪ್ಪಗಳು ಇವೆ. ಉತ್ತರದ ಕೊಪ್ಪಳ ಜಿಲ್ಲೆಯಲ್ಲೂ “ತಾವರೆ ಕೆರೆ” ಇದೆ. ಊರು-ಕೇರಿಗಳಲ್ಲದೆ ತಾವರೆಯ ಚೆಲುವು ಕವಿಗಳನ್ನು ಆಕರ್ಷಿಸಿ ಮಾನವತೆಯ ಬದುಕನ್ನು ಸುಂದರವಾಗಿಸಲು ಹಲವಾರು ಕಾವ್ಯಗಳ ಸೃಷ್ಟಿಯಾಗಿದೆ. ಬಹುಪಾಲು ಭಾರತೀಯ ಭಾಷೆಗಳ ಸಾಹಿತ್ಯದಲ್ಲಿ ತಾವರೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಚಿತ್ರಗೀತೆಗಳಲ್ಲಂತೂ ತಾವರೆಯು ಅನನ್ಯ ಸ್ಥಾನವನ್ನು ಪಡೆದಿದೆ.
ಕೇವಲ ರೂಪಕವಾಗಿ ಅಲ್ಲದೆ, ತಾವರೆಯ ಸಸ್ಯಜೀವನವೂ ಹಲವಾರು ಅತ್ಯಂತ ಕುತೂಹಲಕಾರಿಯಾದ ಅಂಶಗಳಿಂದ ಕೂಡಿದೆ. ಈ ಕುತೂಹಲ ಅಂಶಗಳೇ ಕಾರಣಗಳಾಗಿ ನಮ್ಮ ಸಾಂಸ್ಕೃತಿಕ ಬದುಕನ್ನು ಮೆರುಗುಗೊಳಿಸಿದೆ. ಅದರಿಂದಾಗಿಯೇ ವಿವಿಧ ಸಂಸ್ಕೃತಿಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿವೆ. ಈ ಕುತೂಹಲಗಳ ಹುಡುಕಾಟದಿಂದ ಕೆಲವು ಪ್ರಮುಖ ವಿವರಗಳನ್ನು ವಿಜ್ಞಾನವು ಅರಿತು ಮತ್ತಷ್ಟು ವೈವಿಧ್ಯಮಯ ಆನ್ವಯಕ್ಕೆ ಬಳಸಿಕೊಂಡಿದೆ. ಅದರಿಂದ ತಾವರೆಯ ಚೆಲುವು ಮತ್ತಷ್ಟು ಹೆಚ್ಚಿದೆ. ಸಾಂಸ್ಕೃತಿಕ ರೂಪಕವಾಗಿ, ಸ್ವಚ್ಛತೆಯ ಪ್ರತಿನಿಧಿಯಾಗಿ ಜತೆಗೆ ಅದರ ಎಲೆಗಳ ಮೇಲಿನ ನೀರಿನ ಹನಿಗಳ ವರ್ತನೆಯಿಂದ ಮಾನವತೆಯ ತಿಳಿವಿಗೆ ಬಂದ ಅತ್ಯಂತ ಹಳೆಯ ದಾಖಲೆಯಾಗಿರುವುದು “ಭಗವದ್ಗೀತೆ”ಯಲ್ಲಿ. ಆದರೆ ನಿಜಕ್ಕೂ ಅದರ ಕಾರಣಗಳನ್ನು ವಿವರಿಸಿದ್ದು 20ನೆಯ ಶತಮಾನದಲ್ಲಿ. ಇದನ್ನು 1964ರಲ್ಲಿ ಅಲ್ಟ್ರಾಹೈಡ್ರೋಫೋಬಿಸಿಟಿ (Ultrahydrophobicity) ಅತ್ಯುಗ್ರವಾದ ಜಲವಿರೋಧಿ ವರ್ತನೆ ಎಂಬುದಾಗಿ ತಾವರೆಯ ಎಲೆಗಳ ಮೇಲ್ಮೈಯನ್ನು ಅಧ್ಯಯನ ಮಾಡಿ ವಿವರಿಸಿದವರು ರಾವರ್ಟ್ ಡಿಟೆರ್ ಮತ್ತು ರುಲಾನ್ ಜಾನ್‌ಸನ್ (Robert Dettre and Rulon Johnson). ಅನಂತರ ಅದನ್ನು ಮುಂದುವರೆಸಿ ಮೇಲ್ಮೈಯ ರಾಚನಿಕ ವಿವರಗಳನ್ನು ಕಂಡುಹಿಡಿದು ವಿಸ್ತರಿಸಿದವರು ಜರ್ಮನಿಯ ವಿಲ್‌ಹೆಲ್ಮ್ ಬಾರ್ತ್ಲಾಟ್ (Wilhelm Barthlott ) ಅವರು.
ಪಾರಂಪರಿಕ ಹಾಗೂ ಸಾಹಿತ್ಯಿಕ ವಿವರಗಳಲ್ಲಿ “ತಾವರೆಯ ಎಲೆಗಳ ಮೇಲಿನ ನೀರಿನಂತೆ…” ಎಂಬ ರೂಪಕವಾಗಿ ನೀರನ್ನು ಮುಟ್ಟಿಯೂ ಒದ್ದೆಯಾಗದಂತೆ ಎಂಬಷ್ಟೇ ಅರ್ಥಗಳಲ್ಲಿ ವಿವರಿಸಲಾಗಿತ್ತು. ಹಾಗೆ ನೀರನ್ನು ಮುಟ್ಟಿಯೂ ತೋಯಿಸಿಕೊಳ್ಳದ ಕಾರಣವೇನು? ಎಂಬುದರ ಪ್ರಶ್ನೆಗಳೇನೂ ಇರಲಿಲ್ಲ. (ಇಂತಹ ಹಲವಾರು ವಿಚಿತ್ರವಾದ ಸಂಗತಿಗಳು ಭಾರತೀಯತೆಯಲ್ಲಿ ಮಿಂಚಿವೆ! ಇಂದ್ರನನ್ನು ಸಹಸ್ರಾಕ್ಷ ಎಂದು ಕರೆದಿದ್ದೇವೆ, ಅದನ್ನು ನವಿಲಿನ ಗರಿಯಕಣ್ಣುಗಳಿಗೆ ಹೋಲಿಸಿದ್ದೇವೆ, ಹಾಗೆಯೇ ರುದ್ರಾಕ್ಷದ ಕಾಯಿಗಳ ನೀಲಿಬಣ್ಣವನ್ನು ಶಿವನ ಕೊರಳ ಮಾಲೆಯಲ್ಲಿ ಸುತ್ತಿ ಅವನನ್ನು ನೀಲಕಂಠನಾಗಿಸಿದ್ದೇವೆ! ಆದರೆ ಇವೆರಡರ ಅಂದರೆ, ನವಿಲಿನ ಗರಿಗಳ ಕಣ್ಣುಗಳನ್ನೂ, ರುದ್ರಾಕ್ಷದ ಕಾಯಿಗಳ ನೀಲಿ ವರ್ಣವನ್ನೂ ವೈಜ್ಞಾನಿಕವಾಗಿ ತಿಳಿವನ್ನಾಗಿಸಿದ್ದು ಮಾತ್ರ ಪಾಶ್ಚ್ಯಾತ್ಯ ವಿಜ್ಞಾನಿಗಳೇ) ತಾವರೆಯ ಎಲೆಗಳ ಮೇಲಿನ ನೀರಿನ ವರ್ತನೆಗೂ ಅಷ್ಟೇ ನಮ್ಮ ಪಾರಂಪರಿಕ ದಾಖಲೆಯ ಪ್ರಸ್ತಾವಗಳನ್ನು ವೈಜ್ಞಾನಿಕ ತಿಳಿವಾಗಿಸಿದ್ದು ಪಶ್ಚಿಮದ ವಿಜ್ಞಾನಿಗಳೇ!
ಅಲ್ಟ್ರಾಹೈಡ್ರೋಫೋಬಿಸಿಟಿ (Ultrahydrophobicity) ಅತ್ಯುಗ್ರವಾದ ಜಲವಿರೋಧಿ ವರ್ತನೆಯ ಸೂಕ್ಷ್ಮ ವಿವರಗಳು ಹೀಗಿವೆ. ತಾವರೆ ಎಲೆಯ ಮೇಲ್ಮೈಯನ್ನು ಹರವಾಗಿಸಿದಾಗ 180 ಡಿಗ್ರಿ ಕೋನದ ಹರಹು ನೀರಿನ ಹನಿಯ ತಳಕ್ಕೆ ತಾಕುವುದಲ್ಲವೇ? ಎಲೆಯ ಮೇಲ್ಮೈಯ ಸಮಾನಾಂತರವನ್ನು ಇಡೀ ಕೋನದಲ್ಲಿ ಊಹಿಸಿ ಅದು 180 ಡಿಗ್ರಿ. ಆದರೆ ಅಷ್ಟೂ ಹರಹಿನಲ್ಲಿ ಸುಮಾರು 150ಕ್ಕೂ ಹೆಚ್ಚು 160 ಡಿಗ್ರಿ ಕೋನದವರೆಗೂ ನೀರು ತಾಕದಂತೆ ಇರುವ ಮೇಲ್ಮೈ ತಾವರೆಯ ಎಲೆಯದು. ಅಂದರೆ ಸಹಜವಾಗಿ ನೀರಿನ ಹನಿಯು ತನ್ನ ಮೈಲ್ಮೈ ಒತ್ತಡದಿಂದ ವೃತ್ತಾಕಾರದ ಹನಿಯಾಗಿ ಕುಳಿತರೆ ಅದರ ತಳದಲ್ಲಿ ಕೇವಲ 20-30ಡಿಗ್ರಿಯಷ್ಟು ಮಾತ್ರವೇ ತಾಗಿರುತ್ತದೆ. ಉಳಿದಂತೆ ಎಲೆಯ ಮೇಲ್ಮೈಯಲ್ಲಿರುವ ಅತಿ ಸೂಕ್ಷ್ಮಮೊನೆಗಳು ನೀರನ್ನು ಒಂದು ರೀತಿಯಲ್ಲಿ ಹೊರದಬ್ಬುತ್ತಿರುತ್ತವೆ. ಇದನ್ನು ಇತ್ತೀಚೆಗಿನ ನ್ಯಾನೋಕಣಗಳ ವರ್ತನೆಯಲ್ಲಿ ವಿವರಿಸಬಹುದು. ಅಲ್ಲದೆ ಅಂತಹಾ ಮೇಲ್ಮೈಯ ವಸ್ತುಗಳ ಅಥವಾ ಹರಹುಗಳ ನಿರ್ಮಿತಿಯಲ್ಲಿ ಬಳಸಿಕೊಳ್ಳಲು ತಾವರೆಯ ಎಲೆಗಳ ವಿವರಗಳು ಸಹಾಯಕವಾಗಿವೆ. ಇದೇ ಗುಣವು ಮೂಲತಃ ತಾವರೆಯನ್ನು ಅತಿಶುಭ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿವೆ. ಇದರ ಆನ್ವಯತೆಯು ಇಂದಿನ ಮಟೆರಿಯಲ್ ಜಗತ್ತಿನ ಹುಡುಕಾಟದಲ್ಲಿ ಬಹಳ ಪ್ರಭಾವವನ್ನು ಬೀರಿದೆ.
ತಾವರೆಯ ಮತ್ತೆ ಕೆಲವು ಸಂಗತಿಗಳಲ್ಲಿ ಅದರ ಬೇರಿನ ಹಾಗೂ ಹೂವಿನ ಸಂಗತಿಗಳು. ನೀರಿನ ಮೇಲೆ ಹಾಸಿಕೊಂಡಂತೆ ಎಲೆಗಳಿದ್ದರೆ, ಅದರ ಕಾಂಡವು ನೀರೊಳಗಿಳಿದು ನೆಲಕ್ಕೆ ಆತುಕೊಂಡಿರುತ್ತದೆ. ಬೇರಿನಲ್ಲೂ ಆಹಾರ ಸಂಗ್ರಹಿಸಿಟ್ಟುಕೊಂಡು ಗಡ್ಡೆಗಳಾಗಿ ಒದಗಿಸುತ್ತದೆ. ಈ ಗಡ್ಡೆಗಳನ್ನೂ ಆಹಾರವಾಗಿ ಉಪಯೋಗಿಸಬಹುದು. ಹಾಗೆಯೇ ಅದರ ಬೀಜಗಳೂ ಸಹಾ. ಅವುಗಳು ಉಂಟಾಗುವಿಕೆಯೂ ಮತ್ತೊಂದು ವಿಶೇಷಣವೇ! ತಾವರೆಯು ಫಲವಂತವಾಗಲು ಪರಾಗಸ್ಪರ್ಶವಾಗಬೇಕು ಅಲ್ಲವೇ! ತಾವರೆಯು ಹೆಣ್ಣು ಮತ್ತು ಗಂಡು ಭಾಗಗಳನ್ನುಳ್ಳ ಹೂವು. ಆದರೆ ಗಂಡು-ಹೆಣ್ಣುಗಳು ಒಂದೇ ಕಾಲದಲ್ಲಿ ಪ್ರೌಢಾವಸ್ಥೆಗೆ ಬರುವುದಿಲ್ಲ. ಬೇರೆ ಬೇರೆ ಸಮಯದಲ್ಲಿ ಪ್ರೌಢವಾಗುತ್ತವೆ. ಹಾಗಾಗಿ ಒಂದು ಹೂವಿನ ಹೆಣ್ಣು ಭಾಗವು ಮತ್ತೊಂದು ಹೂವಿನ ಗಂಡು ಭಾಗವನ್ನು ನಂಬಿಕೊಂಡಿದೆ. ಹಾಗಾಗಿ ಪರಕೀಯ ಪರಾಗಸ್ಪರ್ಶದಿಂದ ಫಲವಂತವಾಗುತ್ತದೆ. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಇಲ್ಲೊಂದು ಮಹತ್ವದ ಸಂಗತಿಯಿದೆ. ಕಮಲವು ಪರಾಗಸ್ಪರ್ಶಕ್ಕೆ ಕೆಲವು ಬಗೆಯ ಜೀರುಂಡೆಗಳನ್ನು ನಂಬಿಕೊಂಡಿದೆ. ಈ ಜೀರುಂಡೆಗಳೋ ಮಕರಂದವನ್ನು ಹುಡುಕಿಕೊಂಡು ಸಂಜೆಯ ಹೊತ್ತಿಗೆ ತಾವರೆಯ ಹೂವಿಗೆ ಬರುತ್ತವೆ. ಸಂಜೆಗಾಗಲೆ ತಾವರೆಯ ಹೂವಿನ ದಿನದ ಕೊನೆಯ ಸಮಯ ಅದು ಮತ್ತೆ ಮುಚ್ಚಿಕೊಂಡು ನೀರೊಳಿಗಿಳಿಯುವ ಹೊತ್ತು. ಹಾಗಾಗಿ ಆ ದಿನದ ರಾತ್ರಿಯನ್ನು ಜೀರುಂಡೆಯು ಹೂವಿನೊಳಗೇ ಕಳೆಯುತ್ತದೆ. ಮರುದಿನ ಮತ್ತೊಂದು ಹೂವಿಗೆ ಪಯಣ. ಹೀಗೆ ಜೀರುಂಡೆಯು ವಸತಿ ಮಾಡುತ್ತಾ ತನ್ನಗೊಂದು ಉಳಿಯಲು ಜಾಗ ಮಾಡಿಕೊಂಡು ಪರಾಗಸ್ಪರ್ಶ ಮಾಡುತ್ತದೆ. ತಿರುಗಿ ಬೆಳಗಾದಾಗ ಹೂವು ನೀರಿಂದ ಹೊರ ಬಂದು ತೆರೆದಕೊಳ್ಳುತ್ತದೆ. ಜೀರುಂಡೆಯು ಹೊರ ಹೋಗುತ್ತದೆ.
ಹೂವಿನ ತಳದ ಪುಷ್ಪಪಾತ್ರೆಯಲ್ಲಿ ತಾವರೆಯು ಕಾಯಿ ಕಟ್ಟುತ್ತದೆ. ಕಾಯಿಗಳೊಳಗೆ ಬೀಜಗಳು ತುಂಬಿಕೊಳ್ಳುತ್ತವೆ. ಈ ಬೀಜಗಳನ್ನೂ ಆಹಾರವಾಗಿ ಉಪಯೋಗಿಸಬಹುದು. ಈ ಬೀಜಗಳಿಗೆ ವಿಶೇಷವಾದ ಗುಣವಿದೆ. ಅವುಗಳು ಮೊಳಕೆ ಒಡೆಯುವಿಕೆಯನ್ನು ಸಾವಿರಾರು ವರ್ಷ ಕಾಪಾಡಿಕೊಂಡಿರುತ್ತವೆ. ಹೀಗೆ 1300 ವರ್ಷಗಳಿಗೂ ಹಳೆಯ ಬೀಜಗಳು ಮೊಳಕೆ ಒಡೆದು ಗಿಡವಾದ ಉದಾಹರಣೆಗಳು 1994ರಲ್ಲಿ ಪತ್ತೆಯಾಗಿದ್ದವು. ಚೀನಾ ದೇಶವು ಕಮಲವನ್ನು ಆಹಾರವಾಗಿ ಬಳಸುವಲ್ಲಿ ಅತಿ ಪ್ರಮುಖವಾದ ದೇಶ. ಅಲ್ಲಿನ ಕೊಳವೊಂದರ ಹೂಳಿನಲ್ಲಿ ದೊರೆತ ಬೀಜಗಳನ್ನು ಮೊಳೆಕೆಯಾಗಿಸುವಲ್ಲಿ ದೊರೆತ ಸಂಗತಿಗಳಿವು. ತಾವರೆಯೂ ಸಹಾ ಒಂದು ಸಸ್ಯವಾಗಿ ಬಹುವಾರ್ಷಿಕವಾದುದು. ಸಾವಿರಾರು ವರ್ಷಗಳ ಬದುಕು ತಾವರೆಯದು. ಇವೆಲ್ಲವೂ ತಾವರೆಯನ್ನು ಪವಿತ್ರವಾಗಿಸಲು ಅನೇಕ ಸಂಸ್ಕೃತಿಗಳಿಗೆ ಕಾರಣಗಳಾಗಿವೆ. ಹೀಗೆ ಬಳಕೆಯ ಹಿತವಿಂದ ತಾವರೆಗಳಲ್ಲಿ ಮೂರು ಬಗೆಯ ತಳಿಗಳಿವೆ. ಬೀಜಗಳ ಕೊಯಿಲಿನವು, ಗಡ್ಡೆ(ರೈಜೋಮ್) ಕೊಯಿಲಿನವು ಮತ್ತು ಹೂವಿನ ಕೊಯಿಲಿನವು.
ತಾವರೆಯ ಅಪರೂಪದ ಗುಣಗಳಿಂದಾಗಿ ಬಗೆ ಬಗೆಯಾಗಿ ಅದರ ಔಷಧೀಯ ಗುಣಗಳ ನಂಬಿಕೆ ಮತ್ತು ವಾಸ್ತವಗಳ ಹಿನ್ನಲೆಯಲ್ಲಿ ಬಳಸಲಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎಷ್ಟೇ ಕೆಸರಿನ ವಾತಾವರಣದಲ್ಲೂ ತನ್ನನ್ನು ತಾನು ಪರಿಶುದ್ಧವಾಗಿಸಕೊಂಡ ಗುಣ. ಜತೆಗೆ ಬಹುಕಾಲ ಜೀವಂತವಾಗಿರುವ ವಿಶೇಷತೆ. ಹೂವುಗಳು ಹಗಲಿನ ಸೂರ್ಯನ ಉದಯದ ಜೊತೆಗೆ ಅರಳುವ ಮತ್ತು ಸೂರ್ಯಾಸ್ತವಾದಾಗ ಮುಚ್ಚಿಕೊಂಡು ನೀರೊಳಗೆ ಮುಳುಗುವ ವಿಶೇಷತೆಗಳು ತಾವರೆಗೊಂದು ವಿಶಿಷ್ಟ ಅಸ್ಮಿತೆಯನ್ನು ಕೊಟ್ಟಿವೆ. ತಾವರೆಯ ಹೂವಿನ ದಳಗಳು ಅರಳುವ ಮತ್ತು ಅವುಗಳು ಜೋಡಿಸಕೊಂಡಿರುವ ಕ್ರಮಗಳೇ ಕಟ್ಟಡಗಳ ವಾಸ್ತು ಸಂರಚನೆಗಳನ್ನು ಪ್ರಭಾವಸಿವೆ. ಹಂಪೆಯ “ಕಮಲ ಮಹಲ್” ಅಂತಹಾ ವಿಶಿಷ್ಟ ಕಟ್ಟಡಗಳಲ್ಲೊಂದು ಹಂಪೆಯ ಅರಸರು ರಾಣಿಯರಿಗೆಂದೇ ಕಟ್ಟಿಸಿದ ವಿಶಿಷ್ಟವಾದ ಮಹಲು ಅದು.
ಅದರಂತೆ ಮತ್ತೊಂದು ವಿಶಿಷ್ಟ ಕಟ್ಟಡ, ದೆಹಲಿಯ “ಬಹಾಯಿ ದೇವಾಲಯ”. ಬಹಾಯಿ ಪರಂಪರೆಯೂ ಸಹಾ ತಾವರೆಯ ಪರಿಶುದ್ಧತೆಗೆ ಹಾಗೂ ಅದರ ವಿನ್ಯಾಸಕ್ಕೆ ಮನಸೋತಿದೆ. ದೆಹಲಿಯ ಬಹಾಯಿ ದೇವಾಲಯ ನಿಜಕ್ಕೂ ಎಲ್ಲಾ ಮತ ಧರ್ಮದವರಿಗೂ ತೆರೆದ ದೇವಾಲಯ. ಧರ್ಮವೊಂದು ತಾವರೆಯಂತೆ ತೆರೆದ ಮನಸ್ಸಿನ ಹಾಗೂ ಪರಿಶುದ್ಧತೆಯ ರೂಪವಾಗಿರಬೇಕೆಂಬುದು ಇದರ ಒತ್ತಾಸೆ. ತಾವರೆಯ ಹೂವಿನ ರೂಪದ ಈ ದೇವಾಲಯದಲ್ಲಿ ಯಾವುದೇ ರೀತಿಯ ಆಚರಣೆಗಳಿಲ್ಲ. ಯಾರಾದರೂ ಯಾವುದೇ ಧಾರ್ಮಿಕ ಪ್ರಾರ್ಥನೆಯನ್ನು ತಮ್ಮಿಚ್ಛೆಯಂತೆ ಪಠಿಸಬಹುದು. ಹಾಗಾಗಿ 2001ರಲ್ಲಿ ಅತಿ ಹೆಚ್ಚು ಭೇಟಿಕೊಟ್ಟ ಕಟ್ಟಡವೆಂದು ಸಿ.ಎನ್.ಎನ್. ವರದಿ ಮಾಡಿತ್ತು. ಮುಂದೆ 2014ರಲ್ಲಿ ಭಾರತದ ದಾಖಲೆಗಳ ಪ್ರಕಾರ 100 ದಶಲಕ್ಷ ಜನರು ಭೇಟಿಯಿತ್ತಿದ್ದರಂತೆ. ತಾವರೆಯ ಹೂವಿನ ವಿನ್ಯಾಸ ಹಾಗೂ ಹೆಸರನ್ನು ಹೊಂದಿರುವ ಈ ದೇವಾಲಯದ ಕಟ್ಟಡವೂ ಸಹಾ ತಾವರೆಯ ಹೂವಿನಂತೆ ಸೂರ್ಯನ ಸಂಬಂಧವನ್ನು ಹೊಂದಿದೆ. ಇಲ್ಲಿ ಬಳಸುವ ವಿದ್ಯುತ್ ಬೆಳಕಿನಲ್ಲಿ ಗಮನಾರ್ಹವಾದ ಪ್ರಮಾಣವು ಸೌರಶಕ್ತಿಯಿಂದ ಪಡೆಯಲಾಗುತ್ತದೆ. ಇದು ಕಣ್ಣಿಗೆ ಕಾಣುವಂತೆ ತಾವರೆಯು ಮಾಡಿರುವ ಪವಾಡ!
ವಿವಿಧ ಸಂಸ್ಕೃತಿಗಳಲ್ಲಿ ತಾವರೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಲೇ ಬಂದಿದೆ. ಬೌದ್ಧ ಪರಂಪರೆಗಳಿಂದ ವಿಕಾಸಗೊಂಡ “ತಾವರೆ ನೃತ್ಯ –(Lotus Dance)” 1600ರಲ್ಲಿ ವಿಯಟ್ನಾಮ್‌ನ ಅರಸರ ಆಸಕ್ತಿಯದಾಗಿತ್ತು. ಇದೊಂದು ಬೌದ್ಧ ಪರಂಪರೆಯನ್ನು ತಾವರೆಯು ಅರಳುವ ನಿಸರ್ಗದ ಅಣುಕ ಆಗಿದ್ದು ಇದೀಗ ಜಗತ್ತಿನಾದ್ಯಂತ ಬುದ್ಧನ ಜನನವನ್ನು ಪ್ರತಿನಿಧಿಸುವಲ್ಲಿ ಪ್ರಸಿದ್ಧವಾಗಿದೆ. ಜಪಾನ್, ಚೀನಾ, ಮುಂತಾದ ಪೂರ್ವಾ ಏಶಿಯಾ ದೇಶಗಳಲ್ಲದೆ ಅನೇಕ ಕಡೆಗಳಲ್ಲಿ ಲೋಟಸ್ ಡ್ಯಾನ್ಸ್ ಜನಪ್ರಿಯವಾಗಿದೆ. ವಿಯಟ್ನಾಮಿನಲ್ಲಿ ಬುದ್ಧನನ್ನು ಕಮಲದಲ್ಲಿ ಅರಳಿಸುವ ರೂಪಕವಾಗಿ ಆತನ ಪರಿಶುದ್ಧತೆಯ ಹಿನ್ನೆಲೆಯನ್ನು ವರ್ಣಿಸಲಾಗುತ್ತದೆ. ಹಾಗೆಯೇ ಅಲ್ಲಿ ಆಹಾರ ಸಂಸ್ಕೃತಿಯಲ್ಲೂ ತಾವರೆಯು ಶಾಶ್ವತವಾಗಿದೆ.
ಜಪಾನಿಯರಲ್ಲೂ ತಾವರೆಯು ದೈವತ್ವದ ಸಂಕೇತವಾಗಿದೆ. ಮನೆಗಳ ಒಳಾಂಗಣದಿಂದ ಆರಂಭವಾಗಿ ದೇವಾಲಯಗಳ ಆವರಣವನ್ನೂ ಪರಿಶುದ್ಧತೆಯ ರೂಪಕವಾಗಿ ಕಾಣಲು ಜಪಾನಿನ ಸಂಸ್ಕೃತಿಯು ಅವಕಾಶಗಳನ್ನು ನೀಡಿದೆ. ಕಮಲದ ಹೂವಿಗೂ ಜಪಾನೀಯರ ಕಲೆಗೂ ವಿಶೇಷವಾದ ನಂಟು.
ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನ್ನನು ನೆಲದ ಗಿಡ-ಮರಗಳನ್ನು ಸುತ್ತಿಸುವುದನ್ನು ತಪ್ಪಿಸಿ ನೀರಿಗಿಳಿಸಿದ ಗೆಳತಿಯು ನನಗೇ ಪರಿಶುದ್ಧತೆಯ ಹುಡುಕಾಟ ಮಾಡಿಸಿದ್ದಾರೆ. ಇಂದು (ಸೆಪ್ಟೆಂಬರ್ 29) ನನ್ನ ಜನ್ಮದ ದಿನದಂದು ನನ್ನೊಳಗಿನ ಹುಡುಕಾಟಕ್ಕೆ -ನನಗೆ ನಾನೇ ಉಡುಗೊರೆ ಕೊಡುವಂತೆ- ನನ್ನೊಳಗಿನ ಪರಿಶುದ್ಧತೆಗೆ ತಾವರೆಯನ್ನು ರೂಪಕವಾಗಿಸಲು ಕಾರಣವಾಗಿದ್ದಾರೆ. ಪರಿಶುದ್ಧತೆ, ಚೆಲವಿನ ಜೊತೆಗೆ ತೀರಾ ಅಪರೂಪ ಎನಿಸುವಂತಹಾ ಜೈವಿಕ ಗುಣಗಳನ್ನು ಹೊಂದಿರುವ ತಾವರೆಯು ಇಂದು ಜೊತೆಯಾಗಿದೆ. ಜಗತ್ತು ಕರೋನದಿಂದ ತತ್ತರಿಸುವ ಈ ಹೊತ್ತಿನಲ್ಲಿ ಕೆಂದಾವರೆಯು ಜೀವ-ಪ್ರಿಯವಾದ ಪರಿಶುದ್ಧ ಹಾದಿಯೊಂದನ್ನು ತೆರೆದು… ಆದಷ್ಟು ಬೇಗ ಕೊಡಲಿ ಎಂಬ ಆಶಯಗಳೊಂದಿಗೆ… ಮುಗಿಸುತ್ತೇನೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
Very nice collection of information. Wonderful. I wasn’t aware of pollinator spending night inside lotus!
ಅದ್ಬುತ
ಇನ್ನು ಹೆಚ್ಚು ಈ ರೀತಿಯ ಮಾಹಿತಿ ಎಲ್ಲರಿಗೂ ದೊರಕಬೇಕು