You are currently viewing ನಾವೇನು…….., ವೈರಸ್ಸುಗಳ ಸಂಬಂಧಿಕರೇ?

ನಾವೇನು…….., ವೈರಸ್ಸುಗಳ ಸಂಬಂಧಿಕರೇ?

ಇದೇನಿದು ಈ ತರಹದ ಪ್ರಶ್ನೆಯನ್ನು ಕೇಳುತ್ತಾ, ದಂಗು ಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ. ಇದಕ್ಕಿರುವ ಸಮಾಧಾನವು ಹೌದು ಅಥವಾ ಅಲ್ಲ ಎಂಬದರಲ್ಲಿ ಮಾತ್ರ ಇಲ್ಲ. ಬದಲಾಗಿ ಸಮಾಧಾನ ಎನ್ನುವುದೇನಿದ್ದರೂ ಅದನ್ನು ನಮ್ಮ ತಿಳಿವಾಗಿಸುವಲ್ಲಿ ಖಂಡಿತಾ ಇದೆ. ವೈರಾಲಜಿ ಅಥವಾ ವೈರಸ್ಸು ಅಧ್ಯಯನದ ಪರಿಕರಗಳು ಈಗೀಗ ಹೊಸಲೋಕವನ್ನು ತೆರೆಯುವಷ್ಟು ಸಾಧ್ಯವಾಗಿಸಿದ್ದರಿಂದ ಅದೊಂದು ಎಳೆಯ ಆರೋಗ್ಯ ವಿಜ್ಞಾನದ ಭಾಗವಾಗಿಯೂ ಗೋಚರಿಸುತ್ತಿದೆ. ಹಿಂದೆಲ್ಲಾ, ವೈರಸ್ಸುಗಳ ಸೋಂಕಿಗೆ ಹೆಚ್ಚಿನ ಭಯವಿಲ್ಲದಿದ್ದರೂ, ಮುಂದೊಂದು ದಿನ ಇದೇ ವೈರಸ್ಸು ಸೋಂಕಿಗೆ ಎಚ್ಚರದಿಂದ ಇರಬೇಕಾದೀತು ಎನ್ನುವ ಮಾತುಗಳಿಗೀಗ ಭಿನ್ನವಾದ ವಾಗ್ವಾದಗಳು ಮೆರೆಯುತ್ತಿವೆ. ನಿಜವಾದ ಪರಿಹಾರಗಳ ಬಗೆಗೂ ಅರ್ಥಹೀನ ಹೀಗಳಿಕೆಗಳು ಹರಿದಾಡುತ್ತಿವೆ. ಇವನ್ನೆಲ್ಲಾ ಬಿಡಿಸಿ ನೋಡಲು ಕಾಣದ ಮಾಲೆಕ್ಯೂಲಾರ್‌ (ಆಣ್ವಿಕ) ಯಂತ್ರವಾಗಿರುವ ವೈರಸ್ಸನ್ನೇ ಹಿಡಿದು ನೋಡಬೇಕಿದೆ. ಮೊದಲು ಸಂಬಂಧದ ವಿಚಾರಗಳಿಂದ ಆರಂಭಿಸಿ ನಂತರದಲ್ಲಿ ಒಂದೊಂದೇ ಎಳೆಯನ್ನೂ ಹಿಂಜಿ-ಹಿಂಜಿ ನೋಡೋಣ.   

       ಹೌದು, ನಾವು ವೈರಸ್ಸುಗಳ ಸಂಬಂಧಿಕರೇ ನಿಜ. ಮಾನವರ ಒಟ್ಟು ಜೀನೋಮಿನಲ್ಲಿ ಪ್ರತಿಶತ 8 ರಷ್ಟು ಅಂತರ್ವರ್ಧಕ (ಎಂಡೊಜೀನಸ್‌) ರೆಟ್ರೊವೈರಸ್ಸುಗಳ (Endogenous Retroviruses -ERVs) ಜೀನ್‌ಗಳ ಅನುಕ್ರಮತೆಯನ್ನು(Gene Sequences) ಹೊಂದಿದೆ. ಎಂಡೊಜೀನಸ್‌ (Endogenous) ಅಂದರೆ ಅಂತರ್ವರ್ಧಕತೆ -ಒಳಗೇ ವರ್ಧಿಸುವ-ಜೀವಿಗಳೊಳಗೇ ವೃದ್ಧಿಯಾಗುವ- ಎಂದರ್ಥ. ಇನ್ನು ರೆಟ್ರೊ-ವೈರಸ್ ಎಂದರೆ ತನ್ನ ಜೀನೋಮಿನಲ್ಲಿ ಆರ್‌.ಎನ್‌.ಎ. (RNA) ಹೊಂದಿದ್ದು, ಅದನ್ನೇ ಜೀವಿಯೊಳಗೆ ಕಳುಹಿಸಿಯೂ ನೆಲೆಯನ್ನು ಕೊಟ್ಟ ಆ ಜೀವಿಯ ಡಿ.ಎನ್.ಎ.(DNA)ಯ ಮೇಲೆ ಆಕ್ರಮಣ ಮಾಡುವ ವೈರಸ್ಸು. ಅಂದಂತೆ ಈ ಹಿಂದೆಲ್ಲಾ – ಮಾನವನ ವಿಕಾಸದ ಉದ್ದಕ್ಕೂ ಆಕ್ರಮಣ ಮಾಡುತ್ತಾ ಬಂದು ನಮ್ಮೊಳಗೇ ಒಂದಾಗಿ ನಮ್ಮವೇ ಆಗಿರುವ ಭಾಗವೇ ಪ್ರತಿಶತ 8 ಭಾಗದ ಜೀನೊಮ್‌. ಆಕ್ರಮಣ ಮಾಡಿಯೂ ನಮ್ಮೊಳಗೆ ಉಳಿಕೆಗಳನ್ನು ಬಿಡುವ, ಹಾಗೇ ಬಿಟ್ಟೂ ಕೆಲವೊಂದು ಮಹತ್ವದ ಸಹಾಯವನ್ನೂ ಮಾಡುವ ನಿಸರ್ಗದ ವಿಚಿತ್ರದಿಂದಾಗಿಯೇ ನಾವೂ ವೈರಸ್ಸುಗಳ ಸಂಬಂಧಿಕರೇ ಹೌದು.

       ಏನು ವಿಚಿತ್ರ ನೋಡಿ, ನಮ್ಮ ದೇಹವನ್ನೇ ಆಕ್ರಮಣ ಮಾಡಿ, ನಮ್ಮೊಳಗೇ ಉಳಿದು, ನಮ್ಮದಾಗುವ ನಿಸರ್ಗದ ವಿಕಾಸದ ಹಾದಿಯ ಉದ್ದೇಶಗಳ ವಿವರಗಳಿನ್ನೂ ಪರಿಪೂರ್ಣ ಅರ್ಥವಾಗಿಲ್ಲ. ಆಗಿರುವಷ್ಟೂ ಮಾತ್ರ ಅತ್ಯಂತ ಹಿತವಾದ, ಅಚ್ಚರಿಯ ವಿಷಯಗಳನ್ನೇ ಹೊರಗೆಡಹಿವೆ. ಅಚ್ಚರಿ ಏನೋ ನಿಜ! ಹಿತ ಎಲ್ಲಿಂದ ಅಂದರೆ ಮುಂದಿನ ವಿವರಗಳಲ್ಲಿ ನೋಡೋಣ.   

ವೈರಸ್‌ಗಳು ಅತ್ಯದ್ಭುತವಾದ ಮಾಲೆಕ್ಯುಲಾರ್‌ (ಆಣ್ವಿಕ) ಯಂತ್ರಗಳಾಗಿವೆ, ಅವು ಸಣ್ಣ ಜೀವಿ ಕೋಶಗಳಿಗಿಂತಲೂ ಹೆಚ್ಚು ತೆಳುವಾಗಿದ್ದು ಸುಲಭವಾಗಿ ಕೋಶವನ್ನೂ ಸೇರಿ ವೃದ್ಧಿಯಾಗುತ್ತವೆ. ಜ್ವರ, ಚಿಕನ್‌ ಪಾಕ್ಸ್ ಅಥವಾ ಹರ್ಪಿಸ್‌ ನಂತಹ ವೈರಸ್‌ಗಳನ್ನು ನಾವು “ಬಾಹ್ಯ” ಆಕ್ರಮಣಕಾರರು ಎಂದು ಭಾವಿಸುತ್ತೇವೆ. ವೈರಸ್‌ಗಳು ನಾವು ಸಾಮಾನ್ಯವಾಗಿ ಅರಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ಮಾನವ ಜೀವನದೊಂದಿಗೆ ಹೆಚ್ಚು ಅಂತರ್ಗತವಾದ ಸಂಬಂಧವನ್ನು ಹೊಂದಿವೆ. ಸೋಂಕಿನಿಂದ ಚೇತರಿಸಿಕೊಂಡ ನಂತರವೂ ನಿಮ್ಮ ಡಿಎನ್‌ಎ ಒಳಗೆ ಎನ್‌ಕೋಡ್ ಮಾಡಲಾದ ವೈರಸ್‌ನ ಒಂದು ತುಣುಕು ಯಾವಾಗಲೂ ಇರುತ್ತದೆ (ವೈರಸ್‌ನ ಪ್ರಕಾರವನ್ನು ಅವಲಂಬಿಸಿ). ಆದಿಯಿಂದಲೂ ಪ್ರಾಚೀನ ಪೂರ್ವಜರಿಗೆ ಸೋಂಕು ತಗುಲಿದ ನಂತರವೂ ಹೀಗೆ ಉಳಿದುಕೊಂಡು ಬಂದ ತುಣುಕುಗಳು, ಸೇರುತ್ತಲೇ  ಮಾನವ ಜೀನೋಮ್‌ನ ಸರಿಸುಮಾರು 8% ಭಾಗಗಳಿಂದ ಕೂಡಿದೆ, ಅವು ನಮ್ಮ ಮಾನವ ವಂಶಾವಳಿಯ ಶಾಶ್ವತ ಭಾಗವಾಗಿ ಮಾರ್ಪಟ್ಟಿವೆ. ಆದರೆ ಈ ಅಂತರ್ವರ್ಧಕ ರೆಟ್ರೊವೈರಸ್‌ಗಳು ಕೇವಲ ಜೀನೋಮ್‌ನಲ್ಲಿ ಮೌನವಾಗಿ ಕುಳಿತುಕೊಳ್ಳುವುದಿಲ್ಲ – ಸ್ವಯಂ ನಿರೋಧಕ (ಆಟೋ ಇಮ್ಯೂನ್‌) ಅಸ್ವಸ್ಥತೆ ಮತ್ತು ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳಲ್ಲಿ ಕಾರಣವಾಗಬಲ್ಲವು.

ಆದರೆ ಈ ವೈರಸ್‌ ಗಳು ಕೇವಲ ನಮ್ಮ ಆರೋಗ್ಯಕ್ಕೆ ಮಾತ್ರ ಹಾನಿ ಮಾಡುವುದಿಲ್ಲ. ಅವು ಮಾನವ ಉಳಿವಿಗಾಗಿ ಕೂಡ ಅತ್ಯಂತ ಉಪಯುಕ್ತವಾಗಿವೆ. ಉದಾಹರಣೆಗೆ, ತಾಯಿ-ಮಗುವಿನ ನಡುವಿನ ಹೊಕ್ಕಳಬಳ್ಳಿಯ ಬೆಳವಣಿಗೆ ಮತ್ತು ಕಾರ್ಯವನ್ನು ನಿಯಂತ್ರಿಸುವ ಮೂಲಕ ಗರ್ಭಿಣಿ ತಾಯಿ ಮತ್ತು ಅವಳ ಭ್ರೂಣದ ನಡುವಿನ ಸಂಪರ್ಕದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.  ಹೀಗೆ ಹೊಕ್ಕಳಬಳ್ಳಿಯನ್ನುಳ್ಳ ಸಸ್ತನಿಗಳಲ್ಲಿ ಮಾತ್ರವೇ ಈ ವೈರಸ್‌ಗಳು ಸಹಾಯ ಮಾಡುವುದಿಲ್ಲ, ಒಟ್ಟಾರೆಯ ಜೀವರಾಶಿಯ ಅಸ್ತಿತ್ವದಲ್ಲೂ ಅವುಗಳ ಪಾತ್ರವು ಅಗತ್ಯವೆಂದು ತಿಳಿಯಲಾಗಿದೆ. ಇದನ್ನೇ ಒಂದು ರೀತಿಯಲ್ಲಿ “ವೈರಸ್ಸಿನಿಂದಲೇ ಎಲ್ಲ ಜೀವಿಯೂ” ಎಂಬ ಅರ್ಥದಲ್ಲಿ ಈ ಮುಂದಿನಂತೆ ವೈರಸ್ಸುಗಳನ್ನು ವ್ಯಾಖ್ಯಾನಿಸಲಾಗಿದೆ.  “ವೈರಸ್‌ಗಳು ಪ್ರಾಚೀನವಾಗಿದ್ದು, ಶಕ್ತಿಯುತವಾಗಿವೆ. ಅವುಗಳ ಪಾತ್ರವು ಎಲ್ಲ ಜೀವಿಗಳಲ್ಲೂ ಇದೆ”

ವೈರಸ್‌ ಗಳು ಅತ್ಯಂತ ಸರಳವಾದ ನಿರ್ಮಿತಿಗಳು. ಪ್ರೊಟೀನಿನ ಹೊದಿಕೆಯನ್ನು ಉಳ್ಳ ಕೇವಲ ನ್ಯುಕ್ಲಿಯಕ್‌ ಆಮ್ಲದ ತುಣುಕು ಅಷ್ಟೇ. ನಮ್ಮ ಜೀನೋಮಿನೊಳಗೂ ಇರುವ ಸರಪಳಿ ನ್ಯುಕ್ಲಿಯಕ್‌ ಆಮ್ಲಕ್ಕಿಂತಾ ಇದು ಭಿನ್ನ ಹೇಗೆ ಅಂದರೆ, ಇಡೀ ವೈರಸ್‌ ಎಂದರೆ ಒಂದೇ ಅಣು. ಅದರ ಮೇಲಿನ ಹೊದಿಕೆಯಾದ ಪ್ರೊಟೀನ್ ಅದಕ್ಕೊಂದು ಸರಳ ಮತ್ತು ರಕ್ಷಣಾತ್ಮಕ ಗೋಡೆಯಷ್ಟೇ. ಒಳಗಿನ ಡಿ.ಎನ್‌.ಎ. ಅಥವಾ ಆರ್‌.ಎನ್‌.ಎ ಗಳು ತಮ್ಮನ್ನು ತಾವೇ ಪ್ರತಿಗಳನ್ನಾಗಿ ಮಾಡುವಷ್ಟು ಮಾಹಿತಿಯನ್ನು ಹೊಂದಿರುತ್ತವೆ.  ವೈರಸ್‌ಗಳ ಸರಳತೆ ಮತ್ತು ಸ್ವಯಂ ಅಭಿವೃದ್ಧಿಯ ಸ್ವಭಾವವು ಅವುಗಳನ್ನು ಜೈವಿಕ ಇಂಜಿನಿಯರಿಂಗ್ ಮತ್ತು ಔಷಧಗಳ ವರ್ತನೆಗಳಲ್ಲಿ ಅದ್ಭುತ ಸಾಧನಗಳಾಗುವಂತೆ ಮಾಡಿದೆ. 

ವೈರಸ್‌ಗಳು ಸರಳತೆಯು ಎಷ್ಟೆಂದರೆ, ಅವುಗಳಿಗೆ ಬದುಕಲು ತಮ್ಮದೇ ಆದ ದೇಹದ ಅಗತ್ಯವೂ ಇಲ್ಲ.  ಆದಾಗ್ಯೂ ಅವುಗಳು ಇತರೇ ಎಲ್ಲಾ ಜೀವಿಗಳಂತೆ ಜಾಗೃತಾವಸ್ಥೆ ಮತ್ತು ಸುಪ್ತಾವಸ್ಥೆಯಂತಹಾ ಲಯಬದ್ಧವಾದ ವರ್ತನೆಗಳನ್ನೂ ಹೊಂದಿವೆ. ನಾವು ಹೇಗೆ ನಿದ್ರೆಯ ಚಕ್ರ ಮತ್ತು ಎಚ್ಚರಗೊಳ್ಳುವಿಕೆಯ ಮೂಲಕ ವರ್ತನೆಗಳ ಲಯಗಳನ್ನು ಅನುಭವಿಸುತ್ತೇವೆಯೋ, ಹಾಗೆಯೇ ವೈರಲ್ ಲಯಗಳು ಸೋಂಕುಗಳ ಸುತ್ತುಗಳ ನಡುವಿನಲ್ಲಿ ಆವರ್ತವಾದ ಸುಪ್ತತೆಯನ್ನು ಹೊಂದಿರುತ್ತವೆ. ಅವುಗಳ ನಿದ್ದೆಯಲ್ಲಿ ಅವುಗಳು ದೇಹವೇ ಆಗಿರುವುದಿಲ್ಲ. ಕೇವಲ ಮಾಹಿತಿಯ ಸಂಗ್ರಾಹಕವಷ್ಟೇ! ನಿದ್ದೆಯ ಸಂದರ್ಭದಲ್ಲಿ ಯಾವುದೇ ಬೇರೊಂದು ವೈರಸ್‌ ಹೊಕ್ಕು ತೊಂದರೆಯಾದರೆ ತಕ್ಷಣವೇ ನಿದ್ದೆಯಿಂದೆದ್ದು ತಮ್ಮ ಕೋಟೆಯನ್ನು ನಿರ್ಮಿಸಬಲ್ಲವು. ನಿದ್ದೆಯು ತೊಂದರೆಯಾದಲ್ಲಿ ಅಥವಾ ಒತ್ತಡಕ್ಕೊಳಗಾದಲ್ಲಿ ಮ್ಯುಟೇಷನ್‌ಗಳಿಂದ ಬದಲಿಸಿಕೊಳ್ಳಬಲ್ಲವೂ ಕೂಡ!

       ವೈರಸ್ಸುಗಳು ಇಂತಹಾ ಲಯಬದ್ಧ ಚಕ್ರಗಳನ್ನು ಒಳಗೊಂಡಿರುವುದಲ್ಲದೆ, ಕೆಲವು ರೀತಿಯ ವೈರಸ್‌ಗಳಿಗೆ ಭೌತಿಕ ಸ್ವರೂಪವೇ ಅಗತ್ಯವಿರುವುದಿಲ್ಲ. ಈ ವಿಘಟಿತ ವೈರಸ್‌ಗಳನ್ನು ಪಾರದರ್ಶಕ ಘಟಕಗಳು/ಅಂಶಗಳು(Transposable Elements) ಅಥವಾ ಟ್ರಾನ್ಸ್‌ಪೋಸನ್‌ಗಳು (Transposons) ಎಂದು ಕರೆಯಲಾಗುತ್ತದೆ. ಸಹಜವಾದ ವೈರಸ್‌ಗಳು ಪ್ರೊಟೀನ್‌ಗಳಿಂದ ತಯಾರಿಸಿದ ಕವಚವನ್ನು ಹೊಂದಿದ್ದರೆ, ಟ್ರಾನ್ಸ್‌ಪೋಸನ್‌ಗಳು ಕೇವಲ ಮೊಬೈಲ್ ಆನುವಂಶಿಕ ಘಟಕ/ಅಂಶಗಳಾಗಿರುತ್ತವೆ. ಅಂದರೆ ಕೇವಲ – ಡಿಎನ್‌ಎಯು ಭೌತಿಕವಾಗಿ ಜೀನೋಮ್‌ಗಳಿಂದ ಹೊರಗೆ ಚಲ್ಲುತ್ತದೆ. ಈ ಕಾರಣಕ್ಕಾಗಿ, ಅವುಗಳನ್ನು ಹೆಚ್ಚಾಗಿ “ಜಂಪಿಂಗ್ ಜೀನ್‌ಗಳು” ಎಂದು ಕರೆಯಲಾಗುತ್ತದೆ. ಈ ಟ್ರಾನ್ಸ್‌ಪೋಸನ್‌ಗಳು ಸಹಾ ನಿಜವಾದ ವೈರಸ್‌ಗಳಂತೆಯೇ ಮಾಡುತ್ತವೆ, ಅಂದರೆ ಅವು ಜೀನೋಮ್‌ಗಳಾದ್ಯಂತ ತಮ್ಮನ್ನು ನಕಲಿಸಿ ಅಂಟಿಸುತ್ತವೆ. ಇವು ನಿಜವಾದ ವೈರಸ್‌ಗಳನ್ನೇ ಹೋಲುತ್ತವೆ. ಕೆಲವು ಅಂತರ್ವರ್ಧಕ ರೆಟ್ರೊವೈರಸ್‌ಗಳು (ಇಆರ್‌ವಿಗಳು) ಇಂತಹಾ ಟ್ರಾನ್ಸ್‌ಪೋಸನ್‌ಗಳಾಗಿವೆ. ಈ ಹಿಂದೆ ಹೇಳಿದಂತೆ, ಸುಮಾರು 8% ಮಾನವ ಜೀನೋಮ್ ಇಂತಹಾ ಇಆರ್‌ವಿಗಳಿಂದ ಕೂಡಿದೆ. ಆದರೆ ಮಾನವ ಜೀನೋಮ್‌ನ ಸುಮಾರು 50% ಟ್ರಾನ್ಸ್‌ಪೋಸನ್‌ಗಳಿಂದ ಮಾಡಲ್ಪಟ್ಟಿದೆ! ಅಂದರೆ ಪಾರದರ್ಶಕ ಅಂಶಗಳ ಸಮೂಹವಾಗಿದೆ.  ಈ ಹಿನ್ನೆಲೆಯಲ್ಲಿ ಮಾನವರು ಮೂಲತಃ ವೈರಲ್ ತರಹದ ಮಾದರಿಗಳ ರಾಶಿಗಳೇ ಆಗಿದ್ದಾರೆ.

ಟ್ರಾನ್ಸ್‌ಪೋಸನ್‌ಗಳು ತಮ್ಮನ್ನು ಡಿಎನ್‌ಎಗಳಲ್ಲಿ ಸೇರಿಸುವ ಮೂಲಕ ಪ್ರಮುಖ ಜೀನ್‌ಗಳನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಇವೆಲ್ಲವನ್ನು ಒಂದು ಪುಸ್ತಕದ ಪುಟಗಳಲ್ಲಿನ ಅಕ್ಷರಗಳ ಮುದ್ರಣಕ್ಕೆ ಹೋಲಿಸಬಹುದು. ಆಗ ಅಲ್ಲಿನ ಕೆಲವು ಪದಗಳು ಆಚೀಚೆ ಬೇಕಾ ಬಿಟ್ಟಿಯಾಗಿ ಪುಟದಿಂದ ಪುಟಕ್ಕೆ ನೆಗೆದು ಯಾವುದೋ ವಾಕ್ಯದಲ್ಲಿ ಸೇರಿದಾಗ ಆ ವಾಕ್ಯದಲ್ಲಿ ಅಸಂಬದ್ದತೆಯು ಉಂಟಾಗುವಂತೆ ಆಗಬಹುದು. ಆಶ್ಚರ್ಯಕರವಾದದ್ದೆಂದರೆ ಈ ಟ್ರಾನ್ಸ್‌ಪೋಸನ್‌ಗಳು ಅನೇಕ ಬಾರಿ ತಮ್ಮನ್ನು ತಾವು ಪ್ರಮುಖ ಮತ್ತು ಕ್ರಿಯಾತ್ಮಕ ಜೀನ್‌ಗಳಲ್ಲಿ ಸೇರಿಸಿಕೊಳ್ಳುತ್ತವೆ. ಇದೆಲ್ಲವೂ ಜೀವಿಗಳ ಪ್ರಬಲವಾದ ವಿಕಾಸದ ಕಾರ್ಯತಂತ್ರವಾಗಿದೆ, ಏಕೆಂದರೆ ಟ್ರಾನ್ಸ್‌ಪೋಸನ್‌ಗಳು ಒಂದು ಪ್ರಮುಖ ಜೀನ್‌ನ ಮಧ್ಯಕ್ಕೆ ಹಾರಿದರೂ ಕೂಡ ಆಯಾ ಕೋಶದ ತಿಳಿವಳಿಕೆಯ ಭಾಗವಾಗಿರುತ್ತವೆ. ಅದೂ ಅಲ್ಲದೆ ಹಾಗೆಲ್ಲಾ ಹಾರಿ ತೊಂದರೆಯನ್ನು ಉಂಟುಮಾಡುವುದನ್ನೂ ತಡೆಯುವ ಉಪಾಯಗಳನ್ನೂ ಜೀವಿವಿಕಾಸವು ಪಡೆದಿದ್ದು ಅವೆಲ್ಲವೂ ಸೈದ್ಧಾಂತಿಕ ನೆಲೆಯನ್ನೂ ಪಡೆದಿವೆ. ಕೆಲವೊಂದು ಅನಿವಾರ್ಯದ ಒತ್ತಡಗಳಲ್ಲಿ ಈ ಟ್ರಾನ್ಸ್‌ಪೋಸನ್‌ಗಳು ತುಂಬಾ ಸಕ್ರಿಯವಾಗಿ ಆನುವಂಶಿಯತೆಯನ್ನು ಬದಲಿಸುತ್ತದೆ. ಆ ಒತ್ತಡಗಳು ಸಹಜ ಸಾಮಾನ್ಯವಾದವೇನಲ್ಲ. ಜೀವನ್ಮರಣದ ಸಂದರ್ಭದಲ್ಲಿ ಅಥವಾ ಬದುಕಿನ ಒಳಿತನ ಹುಡುಕಾಟದಲ್ಲೂ ಆದೀತು. ಉದಾಹರಣೆಗೆ ತೋಳದಿಂದ ನಾಯಿಯಾಗಿ ವಿಕಾಸವಾಗಿರುವಲ್ಲಿ ಅಂತಹಾ ಟ್ರಾನ್ಸ್‌ಪೋಸನ್‌ಗಳು ಸಕ್ರಿಯವಾಗಿ ಕೆಲಸಮಾಡಿವೆ. ಆದರೆ ಅವುಗಳ ವಿವರಗಳು ಇನ್ನೂ ತಿಳಿಯಬೇಕಿದೆ. ಆದರೆ ತ್ವರಿತವಾದ ಆನುವಂಶಿಕ ಬದಲಾವಣೆಯಲ್ಲಿ ವೈರಸ್‌ಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂಬುದು ಅಂತೂ ಸ್ಪಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದ ವಿಪರೀತ ಒತ್ತಡದ ಬದುಕು, ಸೋಂಕಿನ ಭಯ ಇತ್ಯಾದಿಗಳು ಒಟ್ಟಾಗಿ ದೇಹದೊಳಗಿನ ಈ ವ್ಯವಸ್ಥೆಯ ಮೇಲೂ ಪ್ರಭಾವ ಬೀರುತ್ತದೆ ಎಂದು ಅಂದಾಜಿಸಬಹುದು. ನಿಜವಾದ ವಿಚಾರವನ್ನು ತಿಳಿಯೋಣ. ಆದರೆ ಇಂತಹಾ ಸಾಂಕ್ರಾಮಿಕ ಸನ್ನಿವೇಶದಲ್ಲಿ ಮನಸ್ಸು ಸುಮ್ಮನಿರುವುದಿಲ್ಲ ಬೇಕೋ ಬೇಡವೋ ಹುಟ್ಟಿಸುವ, ಹಂಚುವ, ವ್ಯಾಕುಲಗೊಳ್ಳುವ, ವಿಲಕ್ಷಣ ಆನಂದ ಪಡೆಯುವ, ಮುಂತಾದ ಕೆಲಸಗಳಿಗೂ ಆಸ್ಪದ ಕೊಡುತ್ತದೆ. ಅದಕ್ಕೆ ತಕ್ಕಂತಹಾ ತಂತ್ರಜ್ಞಾನಗಳೂ ಲಭ್ಯವಾಗಿದ್ದು ಅದರಿಂದಾಗಿ ನೇರವಾಗಿ ತಂತ್ರಜ್ಞಾನವನ್ನು ಹಳಿಯುವ ಕೆಲಸ ನಡೆಯುತ್ತದೆ. ವಾಸ್ತವವಾಗಿ ಈಗ ಅವಶ್ಯಕವಿರುವ ತುರ್ತು ಕೆಲಸಗಳಿಗೂ ಅದೇ ತಂತ್ರಜ್ಞಾನ ಸಹಾಯವಾಗುತ್ತಿದೆ ಎಂಬುದನ್ನೂ ಆ ಬಗೆಯ ಚರ್ಚೆಯ ಹಿಂದಿರುವವರು ಆಲೋಚಿಸಲಾರರು.   

ಒಂದು ಜೈವಿಕವಾದ ಅಥವಾ ಬಯೋಲಾಜಿಕಲ್ ವೈರಸ್ (ಇದು ನಿಜವಾದ ವೈರಸ್ ಆಗಿರಲಿ, ಎಂಡೋಜೆನಸ್ ರೆಟ್ರೊವೈರಸ್ ಆಗಿರಲಿ ಅಥವಾ ಟ್ರಾನ್ಸ್‌ಪೋಸೊನ್ ಆಗಿರಲಿ) ಅಕ್ಷರಶಃ ಅದೊಂದು ಸ್ವತಂತ್ರವಾದ ಸಂಕೇತ. ಹಾಗಾಗಿ ಸುಪ್ತವಾಗಿದ್ದರೂ ಅದೊಂದು ಸಾಂಕೇತಿಕ ಆಲೋಚನೆಯಂತೆ, ಒಂದು ಮಾಹಿತಿ ಸಂಗ್ರಹದಂತೆ. ಒಂದು ಅತಿಥಿಯನ್ನು ಸಿಕ್ಕ ಮೇಲೆಯೆ ಅದರ ಪೌರುಷ! ಅಲ್ಲಿ ವೃದ್ಧಿಯಾಗುತ್ತದೆ. ಇಂತಹಾ ಜೀವನವಿದ್ದೂ ಸಹಾ ಮಾನವರ ಜೀವನದಲ್ಲಿ ವೈರಸ್ಸುಗಳು ಅತ್ಯಂತ ಪ್ರಮುಖವಾಗಿವೆ. ಏಕೆಂದರೆ ಹೆಚ್ಚೂ ಕಡಿಮೆ ನಮ್ಮ ಅರ್ಧದಷ್ಟು ಜೀನೋಮನ್ನು ವೈರಲ್‌ ಜೀನೋಮ್‌ ರಚಿಸಿ ವಿಕಸಿಸಿದೆ. ಹಾಗಾಗಿ ಇಡೀ ಮಾನವ ಕುಲದ ದೀರ್ಘಕಾಲಿಕ ವಿಕಾಸದಲ್ಲಿ ಅವುಗಳ ಪಾತ್ರವಂತೂ ಇದ್ದೇ ಇದೆ.

ಅನೇಕ ವಿಧಗಳಲ್ಲಿ, ವೈರಸ್‌ಗಳು ಒಂದು ಬಗೆಯ ಅರ್ಥವಾಗದ ಪುಸ್ತಕವೊಂದರ ಪದಗಳಂತೆ ಪ್ರಾಚೀನ ಮಾಂತ್ರಿಕ ಕಲ್ಪನೆಯನ್ನು ನೆನಪಿಸುತ್ತವೆ. ಯಾರಾದರೂ ಆ ಪದ ಪುಂಜಗಳ ಒಳಗಿರುವ ಮ್ಯಾಜಿಕ್ ಅನ್ನು ಬಿಚ್ಚುವಂತೆ ಅಥವಾ ಅತೀಂದ್ರಿಯ(Mystic) ಊಹೆಗಳಿಂದ ಉಚ್ಚರಿಸುವಂತೆ ಕಾಣಿಸಿಕೊಂಡರೂ ಅಚ್ಚರಿಯೇನಲ್ಲ. ಬಹುಶಃ ಈ ಪರಿಕಲ್ಪನೆಯ ಅತೀಂದ್ರಿಯತೆಯಿಂದಾಗಿ, ಅನೇಕ ವಿಜ್ಞಾನಿಗಳು ಮತ್ತು ದಾರ್ಶನಿಕರು ವೈರಸ್‌ಗಳನ್ನು ಜೀವಿಗಳಾಗಿ ಸ್ವೀಕರಿಸಲು ಕಷ್ಟಪಡುತ್ತಾರೆ. ಆದರೇನಂತೆ ವೈರಸ್‌ಗಳನ್ನು ಜೀವಂತ ಘಟಕಗಳೆಂದು ವರ್ಗೀಕರಿಸುತ್ತೀವೋ ಇಲ್ಲವೋ, ಅವುಗಳಲ್ಲಿರುವ  -ಜೀವಿಗಳು ಮತ್ತು ಶುದ್ಧ ಮಾಹಿತಿಯ ನಡುವಿನ ರೇಖೆಯು- ಮಾತ್ರ ನಾವು ಆಗಾಗ್ಗೆ ಯೋಚಿಸುವುದಕ್ಕಿಂತ ಹೆಚ್ಚು-ಹೆಚ್ಚು ಸಾಕಷ್ಟು ಸ್ಪಷ್ಟವಾಗಲಿದೆ, ಎಂದು ಅವು ಖಂಡಿತವಾಗಿಯೂ ನಮಗೆ ತೋರಿಸುತ್ತವೆ.

ಮಾನವರಿಲ್ಲದೆಯೂ ವೈರಸ್ಸುಗಳು ಇರಬಹುದು. ಆದರೆ ಅವುಗಳಿಲ್ಲದೆ ನಾವಂತೂ ಇರುವುದಿಲ್ಲ, ಎಂಬುದು ಸೋಜಿಗದ ಸಂಗತಿ. ಏಕೆಂದರೆ ರೋಗ ತರಬಲ್ಲ ತುಣುಕೊಂದು ದೇಹದ ಭಾಗವಾಗಿ ತಾಯಿ-ಮಗುವಿನ ಹೊಕ್ಕುಳ ಬಳ್ಳಿಯ ಸಂಬಂಧವನ್ನು ಕಾಯುವ ಮಾಹಿತಿಯನ್ನೂ ಒಳಗೊಂಡಿದೆ. ಹೊರಗುಳಿದರೆ ನಿರ್ಜೀವ ವಸ್ತು ಮತ್ತು ಜೀವಿಯ ಒಳಗೆ ಜೀವಿಯಾಗುವ ವೈರಸ್ಸು ಮಾತೃಹೃದಯವನ್ನೂ ಇಟ್ಟುಕೊಂಡಿದ್ದು ಜೀವಾಳವಾದ ಉಸಿರಾಟದ ನೆಲೆಗೂ ಲಗ್ಗೆ ಹಾಕುವ ಔಚಿತ್ಯವೇನಿತ್ತೋ. ಅದನ್ನೂ ಕಾಲವೇ ಹೇಳೀತು. ಸಮಾಧಾನ ನಮಗಿರಬೇಕು.  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌  

For Additional Reading :

  1. Adrian Bird 2007. Perceptions of epigenetics., Nature 2007 May 24;447(7143):396-8. doi: 10.1038/nature05913.
  2. Ben L. Callif., 2019.   Organumics: An Epigenetic Re-Framing of Consciousness, Life, and Evolution. S. Woodhouse Books,
  3. Silvia Costa and Peter Shaw. 2006.  ‘Open minded’ cells: how cells can change fate TRENDS in Cell Biology, Vol.17 No.3. doi:10.1016/j.tcb.2006.12.005

 

This Post Has 2 Comments

  1. Ramakrishna. R.

    ಲೇಖನ ಮಹತ್ವದ ಮಾಹಿತಿಗಳನ್ನು ಒಳಗೊಂಡಿದೆ. ಆದರೆ ಲೇಖನ ದೊಳಗೆ ಅತೀಂದ್ರಿಯ ಎಂಬ ಪದಬಳಕೆ ಸರಿಯಲ್ಲ ಎನಿಸುತ್ತದೆ.
    ಸದ್ಯಕ್ಕೆ ಇನ್ನೂ ತಿಳಿಯದ್ದು ಎಂದರೆ ಸಾಕಲ್ಲವೇ…??
    ಏಕೆಂದರೆ ಈ ಶಬ್ದವನ್ನು ಹಿಡಿದು ಕೆಲವರು ವಿಜ್ಞಾನ ವಿರೋಧಿ ಮೌಢ್ಯ ಹರಡಲು ಬಳಸುವ ಸಾಧ್ಯತೆ ಇದೆ. ಅಲ್ಲವೇ…?? +

    1. CPUS

      ನೀವು ಹೇಳುವುದೂ ನಿಜವೇ ಸರಿ. Mystic ಪದಕ್ಕೆ ಸಂವಾದಿಯಾಗಿ ಬಳಸಿದ್ದು. ಮಿಸ್ಟಿಕ್‌ ಎಂತಾದರೂ ಬಳಸಬಹುದಿತ್ತು ಆಗಲೂ ಹಾಗೆಯೇ ಆಗುವ ಸಂಭವವಂತೂ ಇದೆ. ಜೀವಿವೈಜ್ಞಾನಿಕ ದಾರ್ಶನಿಕ ಚಿಂತಕರು Mystic ಎಂದಿರುವುದಕ್ಕೆ ಇಂದ್ರಿಯಾತೀತ ಎಂಬುದನ್ನು “ಅತೀಂದ್ರಿಯ” ಎಂದು ಬಳಸಿದ್ದು. ಸದ್ಯಕ್ಕೆ ತಿಳಿಯದ್ದು ಮಾತ್ರವಲ್ಲದೆ, ಗ್ರಾಹ್ಯವಲ್ಲದ್ದು ಎಂದರೂ ಆದೀತು. ತಮ್ಮ Observation ಗೆ ಧನ್ಯವಾದಗಳು. ಹೀಗೆ ನೋಡುತ್ತಿರಿ. ನಮಸ್ಕಾರ

Leave a Reply