You are currently viewing ನಮ್ಮದೇ ಆಗಿರುವ ಬಹುಪಯೋಗಿ ಮರ ಸೀಮೆ ಹುಣಸೆ: Pithecellobium dulce

ನಮ್ಮದೇ ಆಗಿರುವ ಬಹುಪಯೋಗಿ ಮರ ಸೀಮೆ ಹುಣಸೆ: Pithecellobium dulce

ಸೀಮೆ ಹುಣಸೆ, ಇದರ ಹೆಸರೇ ಹೇಳುವಂತೆ ಇದು ಸೀಮೆಯ ಹುಣಸೆ, ನಮ್ಮದಲ್ಲ! ಪರ ಊರಿನದು. ಇದರ ತವರೂರು ದಕ್ಷಿಣ ಅಮೆರಿಕ. ಐರೋಪ್ಯರು ಭಾರತಕ್ಕೆ ಬಂದಾಗ ಇದನ್ನು ತಂದರು, ಹಾಗಾಗಿ ಇದನ್ನು ವಿಲಾಯತಿ ಹುಣಸೆ ಅಥವಾ ಸೀಮೆ ಹುಣಸೆ ಎಂದು ಕರೆಯಲಾಗುತ್ತದೆ. ಆಡುಮಾತಿನಲ್ಲಿ ಇಲಾಚಿ ಹುಣಸೆಯಾಗಿದೆ. ಹುಣಸೆಯೇನೂ ಅಲ್ಲದ ಆದರೆ ಅದೇ ಕುಟುಂಬದ ಮರ ಇದು. ಭಾರತಕ್ಕೆ ಸರಿ ಸುಮಾರು 1795ರಲ್ಲಿ ಮೊದಲು ತಮಿಳುನಾಡಿನ ತೀರದಲ್ಲಿ ನೆಲೆಯಾಗಿತ್ತು. ಸ್ವಲ್ಪ ಮುಳ್ಳುಗಳಂತಹಾ ರೆಂಬೆಕೊಂಬೆಗಳಿರುವುದರಿಂದ ಇದನ್ನು ಮದ್ರಾಸ್‌ ಥಾರ್ನ್‌ (Madras thorn) ಎಂದು ಇಂಗ್ಲೀಶಿನಲ್ಲಿ ಕರೆಯಲಾಗುತ್ತದೆಯಾದರೂ ಮನಿಲಾ ಟ್ಯಾಮರಿಂಡ್‌ (Manila tamarind ) ಎಂಬ ಹೆಸರೇ ಹೆಚ್ಚು ಜನಪ್ರಿಯ! ಹುಣಸೆಯನ್ನು ಹೋಲುವ ಕಾಯಿಗಳಿರುವುದರಿಂದ ಹುಣಸೆಯಾಗಿದೆ.

ಅನೇಕರಿಗೆ ಇದರ ಕಾಯಿಯ ರುಚಿಯ ಪರಿಚಯವಿರಬಹುದು. ಹುಣಸೆ ಕಾಯಿಯನ್ನೇ ಹೋಲುತ್ತಿದ್ದರೂ, ಅದರಂತೆ ಮೇಲು ಹೊದಿಕೆಯನ್ನು ಹೊಂದಿರದೆ ಭಿನ್ನವಾಗಿರುತ್ತದೆ. ಅದನ್ನು ಸಿಪ್ಪೆಯ ಹಾಗೆ ಸುಲಿದು ಒಳಗಿನ ತಿರುಳು ಒಂದು ಬಗೆಯಲ್ಲಿ ಕೊಬ್ಬರಿಯಂತೆ ಆದರೆ ತೆಳು, ರಸಭರಿತವಲ್ಲದ -ತುಸು ಒಗರು, ಸಿಹಿಮಿಶ್ರಿತ-ಸಪ್ಪೆ ಎರಡರ ಹದವಾದ ಮಿಶ್ರಣವನ್ನು ರುಚಿಯಲ್ಲಿಟ್ಟು ತನ್ನದೆ ಪರಿಮಳವನ್ನೂ ಹೊಂದಿರುತ್ತದೆ. ಬಾಲ್ಯದಲ್ಲಿ ಶಾಲೆಯ ಆವರಣದಲ್ಲೊಂದು ಮರವಿತ್ತು. ಹೆಚ್ಚು ಎತ್ತರವಲ್ಲದ ಆ ಮರಕ್ಕೆ ಕಲ್ಲುಹೊಡೆದೋ ಮರ ಹತ್ತಿಯೋ ಕಿತ್ತು ತಿನ್ನುವ ಆನಂದವು ಈ ಇಲಾಚಿ ಹಣ್ಣಿನ ನೆನಪನ್ನು ಸಸ್ಯಯಾನಕ್ಕೆ ಜೊತೆ ಮಾಡಿದೆ. ಇದರ ಕಾಯಿಗಳು ಕಿವಿಯ ಆಭರಣವನ್ನು ಹೋಲುವುದರಿಂದ ಇದರ ಕುಲದ ಹೆಸರಾದ ಪಿತೆಸೆಲೊಬಿಯಂ(Pithecellobium) ಅರ್ಥ ಇಯರ್‌ ರಿಂಗ್‌ (Earring). ಸಿಹಿಯಾದ ಎಂಬರ್ಥದ ಪ್ರಭೇದದ ಹೆಸರು, ಡಲ್ಸ್‌-Dulce. ಇದರಲ್ಲೂ ಸಾಕಷ್ಟು ಅಗತ್ಯವಾದ ಆಹಾರಾಂಶಗಳೂ, ಔಷಧಿಯ ಗುಣಗಳೂ ಇದ್ದು ಅವನ್ನೆಲ್ಲಾ ನಂತರದಲ್ಲಿ ತಿಳಿಯೋಣ. ನಿತ್ಯ ಹರಿದ್ವರ್ಣದ ಈ ಸಸ್ಯ ಒಣನೆಲಕ್ಕೆ ಹಚ್ಚಡವಾಗಲಂತೂ ಹೇಳಿ ಮಾಡಿಸಿದ್ದು. .

ಇದೊಂದು ಅಕ್ರಮಣಕಾರಿ ಸಸ್ಯವೆಂದು, ಕೃಷಿ ಮತ್ತು ವಾತಾವರಣದ ಸಂಗತಿಗಳ ಸಮೀಕರಣದ ಗುರಿಯುಳ್ಳ ಇಂಗ್ಲಂಡಿನ ಅಂತರರಾಷ್ಟ್ರೀಯ ಕೃಷಿ ಮತ್ತು ಜೈವಿಕ ವಿಜ್ಞಾನ ಕೇಂದ್ರ (Centre for Agriculture and Bioscience International )ವು ವರ್ಗೀಕರಿಸಿದೆ. ಕಾರಣ ಇದು ಬಹಳ ಸುಲಭವಾಗಿ ಎಲ್ಲೆಡೆಯಲ್ಲಿಯೂ ಹಬ್ಬಬಲ್ಲ ಸಸ್ಯ. ಧಾರಳವಾದ ಬೆಳಕು, ಸ್ವಲ್ಪವೇ ಮಳೆ ಇದ್ದರೂ ಸಾಕು. ದಟ್ಟವಾಗಿ ಹಬ್ಬುತ್ತದೆ. ಸುಮಾರು 250 ಮಿ.ಮೀ ನಿಂದ 1650 ಮಿ.ಮೀ ಮಳೆ ಬೀಳುವ ಪ್ರದೇಶಕ್ಕೂ ಹೆಂದಿಕೊಂಡು, ಸಾಕಷ್ಟು ಬೀಜಗಳನ್ನೂ ಉತ್ಪಾದಿಸಿ ಸುತ್ತಲೂ ಸಸಿಗಳು ಬೆಳೆಯುವಂತೆ ಪ್ರೋತ್ಸಾಹಿಸುತ್ತದೆ. ಸಮತಟ್ಟಾದ ನೆಲ ಹಾಗೂ ಬಿಸಿಲು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅದ್ಭುತವಾಗಿ ಬೆಳೆಯುತ್ತದೆ. ಮಳೆ ಕಡಿಮೆ ಇದ್ದೂ, ಹಸಿರು ಚಾವಣೆಗಾಗಿ ಹಾತೊರೆಯುವ ನೆಲಕ್ಕೆ ಹೇಳಿ ಮಾಡಿಸಿದ ಸಸ್ಯ. ಲೆಗ್ಯೂಮ್‌ ಸಸ್ಯವೂ ಆದ್ದರಿಂದ ವಾತಾವರಣದ ಸಾರಜನಕವನ್ನೂ ನೆಲಕ್ಕೆ ಸೇರಿಸಿ ಫಲವತ್ತತೆಯನ್ನೂ ಕಾಪಾಡುತ್ತದೆ. ಭಾರತದ ಪಾಲಿಗಂತೂ ಇದು ಅಕ್ರಮಣಕಾರಿಯಾದ ಮರವಾಗಿಲ್ಲ. ಬೆಳೆಯದ ನೆಲದಲ್ಲಿ ಸುಖವಾಗಿ ಬೆಳೆಯುವ ಸಸ್ಯವಾಗಿ, ಕಡಿಮೆ ಮಳೆಯ ಹಾಗೂ ಸಾಧಾರಣ ಮಣ್ಣಿನ ನೆಲಕ್ಕೂ ಹೊಂದಿಕೊಂಡು ಹಸಿರನ್ನೂ, ಒಣಗಿದಾಗ ಉರುವಲನ್ನೂ, ಜೊತೆಗೆ ಸಾಕಷ್ಟು ಗೊಬ್ಬರವನ್ನೂ ನೀಡುವ ಸಸ್ಯವಾಗಿದೆ. ಹೆಚ್ಚು ಉಷ್ಣತೆಯನ್ನೂ ತಾಳಿಕೊಳ್ಳುವ ಸಸ್ಯವಾಗಿದ್ದು ಸುಮಾರು 48 ಡಿಗ್ರಿ ಸೆಂಟಿಗ್ರೇಡ್‌ ವರೆಗೂ ಹೊಂದಿಕೊಳ್ಳುತ್ತದೆ.

ಸೀಮೆ ಹುಣಸೆ ಮರವು ಸಾಮಾನ್ಯವಾಗಿ 5ರಿಂದ 15 ಮೀಟರ್‌ವರೆಗೂ ಬೆಳೆಯುತ್ತದೆ. ಎತ್ತರದ ರೆಂಬೆ-ಕೊಂಬೆಗಳು ಹತ್ತಿಪ್ಪತ್ತು ಮೀಟರ್‌ ಅಗಲಕ್ಕೂ ಹಬ್ಬಬಲ್ಲವು. ಹಾಗಾಗಿ ಸಾಕಷ್ಟು ಎಲೆ, ಹೂಗಳು ಉದುರಿ ಗೊಬ್ಬರವಾಗಲು ಸಹಾಯವಾಗುತ್ತದೆ. ಮರವು ಎತ್ತರಕ್ಕೆ ಹೋದಂತೆ ಹರಡುವಿಕೆಯು ಕ್ರಮಬದ್ಧವಾಗಿರದ ಆಕಾರವಾಗಿದ್ದು, ಸರಿಯಾಗಿ ಕತ್ತರಿಸುತ್ತಾ ಬೇಕಾದ ಆಕಾರಕ್ಕೆ ಬೆಳೆಸುವುದರಿಂದ ತೋಟಗಳ, ಹೊಲ-ಗದ್ದೆಗಳ ಜೈವಿಕ-ಬೇಲಿಯಾಗಲು ಬಹಳ ಯೋಗ್ಯವಾಗಿದೆ. ಎಲೆಗಳ ಬುಡದಲ್ಲಿ ಮುಳ್ಳಿನಂತಹಾ ಭಾಗವಿದ್ದು ಬೇಲಿಯಾಗಿ ಬೆಳೆಸಿ, ಆಕಾರಕ್ಕೆ ಕತ್ತರಿಸುತ್ತಾ ಜಮೀನಿಗೆ, ಉದ್ಯಾನಗಳಿಗೆ ಕಾಂಪೌಂಡಿನಂತೆ ರೂಪಿಸಲು ಅನುಕೂಲ. ಕತ್ತರಿಸಿದ ಎಲೆ-ಟೊಂಗೆಗಳನ್ನು ಹಾಗೆಯೇ ನೆಲಕ್ಕೆ ಸೇರಿಸಿ ಗೊಬ್ಬರವಾಗಿಸಬಹುದು. ಇದರ ಎಲೆಗಳು ಉದುರುತ್ತಲೇ, ಮತ್ತೆ-ಮತ್ತೆ ಹುಟ್ಟುತ್ತಲೇ ಇಡೀ ಮರವು ನಿತ್ಯ ಹಸಿರಾಗಿರುತ್ತದೆ.

ಆಹಾರವಾಗಿ ಮರದ ಬಹು ಮುಖ್ಯ ಉಪಯೋಗವೆಂದರೆ ಇದರ ಕಾಯಿಯ ತಿರುಳನ್ನು ಬಳಸಿ ಪಾನಿಯವನ್ನು ತಯಾರಿಸಬಹುದು, ಹಾಗೆಯೂ ತಿನ್ನಬಹುದು. ಸ್ವಲ್ಪವೇ ಹುರಿದು ತಿನ್ನಲೂ ಇನ್ನೂ ರುಚಿ. ತಿರುಳನ್ನು ಬಗೆ ಬಗೆಯ ತಿನಿಸುಗಳಲ್ಲಿ ಕೊಬ್ಬರಿಯನ್ನು ಬಳಸಿದಂತೆ ಬಳಸಬಹುದು. ಬೀಜಗಳನ್ನು ಬಳಸಿ ಚಟ್ನಿಯನ್ನೂ ಮಾಡಬಹುದು. ಬೀಜಗಳಿಂದ ಎಣ್ಣೆಯನ್ನೂ ತೆಗೆಯಬಹುದು. ಆದರೆ ಅಷ್ಟಾಗಿ ಎಣ್ಣೆಗಳಿಗೆ ಬಳಕೆಯಾಗುತ್ತಿಲ್ಲ. ಇದರ ಹಸಿರೆಲೆಯು ಉತ್ತಮವಾದ ಮೇವು. ಇದರ ಹೂವುಗಳೂ ಆಕರ್ಷಕವಾಗಿದ್ದು ಜೇನುಗಳಿಗೆ ಮಕರಂದವನ್ನೂ ಎಥೇಚ್ಛವಾಗಿ ಕೊಡಬಲ್ಲವು. ಇದರಿಂದ ಸಂಗ್ರಹವಾದ ಜೇನುತುಪ್ಪವೂ ಉತ್ತಮವಾದ ರುಚಿಯನ್ನು ಹೊಂದಿರುತ್ತದೆ. ಬಂಜರು ಭೂಮಿಯಲ್ಲಿ, ಬೀಳು ಭೂಮಿಯಲ್ಲಿ, ಕೃಷಿ ಭೂಮಿಯ ಅಂಚು-ಬದುಗಳಲ್ಲಿ, ಬೇಲಿಗಾಗಿ ಬೆಳೆದು ಇದರ ಕಾಂಡದಿಂದ ಗಟ್ಟಿಯಾದ ಚೌಬೀನೆಯನ್ನೂ ಪಡೆಯಬಹುದು. ಇದು ಕೃಷಿ ಉಪಕರಣಗಳಿಗೆ ತುಂಬಾ ಅನುಕೂಲ, ಏಕೆಂದರೆ ಇದರ ಬಾಳಿಕೆಯು ಅಧಿಕ. ಉರುವಲಿಗಂತೂ ಸುಲಭ ಸೌದೆ, ಅದರೆ ಸ್ವಲ್ಪ ಹೆಚ್ಚು ಹೊಗೆಯನ್ನು ಉಂಟುಮಾಡುತ್ತದೆ. ಅಡುಗೆ ಉರುವಲಿಗಿಂತಲೂ ಇಟ್ಟಿಗೆ, ಸಣ್ಣದ ಭಟ್ಟಿಗಳ ಉರುವಲಿನಲ್ಲಿ ಹೆಚ್ಚು ಉಪಕಾರಿ.

ಸೀಮೆ ಹುಣಸೆಯು ಸಾಂಪ್ರದಾಯಿಕ ಔಷಧೀಯ ಪದ್ದತಿಗಳಲ್ಲಿ ಅನೇಕ ಕಡೆ ವಿವಿಧ ಉಪಯೋಗಳಿಗಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಇದರ ತೊಗಟೆ ಕಷಾಯವನ್ನು ಜ್ವರಹಾರಿಯಾಗಿಯೂ ಹಾಗೂ ಉರಿಯೂತವನ್ನು ಕಡಿಮೆಮಾಡಲೂ ಬಳಸಲಾಗುತ್ತದೆ. ರಕ್ತ ಚಲನೆಯ ಮೇಲೆ ಇದರ ಪರಿಣಾಮವನ್ನೂ ಸಹಾ ಗುರುತಿಸಲಾಗಿದೆ. ದಕ್ಷಿಣ ಅಮೆರಿಕದ ವಿವಿಧ ದೇಶಗಳಲ್ಲಿ ಇದರ ಅಂಟನ್ನು ಹಲ್ಲು ನೋವಿನ ಉಪಶಮನದಲ್ಲಿ ಬಳಸುತ್ತಾರೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿಯೂ ಅದರ ಬಳಕೆಯ ಬಗ್ಗೆ ಅನೇಕ ಅಧ್ಯಯನಗಳೂ ನಡೆಯುತ್ತಿವೆ. ಇದರ ಎಲೆಗಳನ್ನು ಗಾಯವು ಮಾಯಲು ಬಳಸಬಹುದು. ಎಲೆಗಳನ್ನು ಸಾಂಪ್ರದಾಯಿಕವಾಗಿ ಸಂತಾನಹರಣ- ಅಬಾರ್ಶನ್‌-ನಲ್ಲಿ ಬಳಸುತ್ತಿರುವ ಬಗ್ಗೆ ದಾಖಲೆಗಳಿವೆ. ಈ ಸಸ್ಯದ ವಿವಿಧ ಭಾಗಗಳ ಬಳಕೆಯಿಂದ ರಕ್ತ ಪರಿಚಲನೆ ಹಾಗೂ ರಕ್ತ-ಸ್ರಾವದ ವಿವಿಧ ಆಯಾಮಗಳ ಸಂಗತಿಗಳ ಅಧ್ಯಯನಗಳು ಅನೇಕ ದೇಶಗಳಲ್ಲಿ ನಡೆಯುತ್ತಿವೆ.

ಗಿಡ-ಮರಗಳ ಭಾಗಗಳಲ್ಲಿ ಔಷಧಗಳ ಹುಡುಕಾಟ ನಡೆದೇ ಇದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪೋರ್ಚುಗೀಸರು ಇದನ್ನು ಪೂರ್ವದೇಶಗಳಿಗೆ ಏಕೆ ತಂದರು ಎಂಬುದು ಅಚ್ಚರಿಯ ವಿಷಯ. ಹೆಚ್ಚಿನ ಪಾಲು ಪೋರ್ಚುಗೀಸರು ತಮ್ಮ ನೆಲೆಗಳನ್ನು ತೀರಗಳಲ್ಲಿ ಅಥವಾ ತೀರಗಳ ಹತ್ತಿರವೇ ಮಾಡಿಕೊಂಡಿದ್ದರಿಂದ ಅಲ್ಲಿಗೆ ಒಗ್ಗುವ ಸಸ್ಯವಾಗಿದ್ದು ಗಾಳಿ-ತಡೆಯಾಗಿ ತುಂಬಾ ಅನುಕೂಲ ಹಾಗೂ ನೆಲಕ್ಕೆ ಹೊಂದುವ ಗುಣವಿದ್ದುದನ್ನು ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಸರಳವಾಗಿ ಒಣ ನೆಲಕ್ಕೂ ಒಗ್ಗಿಕೊಂಡು ಹೆಚ್ಚು ಜತನವನ್ನೇನೂ ಬೇಡದೆ ಬೆಳೆಯುತ್ತದೆ. ಇದನ್ನು ಬೊನ್ಸಾಯ್‌ -ಕುಬ್ಜ ಮರ-ವನ್ನಾಗಿಯೂ ಮಾಡಿ ಬೆಳೆಸಿರುವ ಉದಾಹರಣೆಗಳಿವೆ. ಹಾಗಾಗಿ ಅಲಂಕಾರಿಕವಾಗಿಯೂ ಜನಪ್ರಿಯತೆಯನ್ನು ಗಳಿಸಿದೆ. ಸದ್ಯಕ್ಕೆ ನಮಗೀಗ ಇಂತಹದೇ ಉಪಕಾರದ ಸಸ್ಯ ಒಣನೆಲಗಳಿಗೆ ಹೆಚ್ಚು ಅನುಕೂಲ. ಹೆಚ್ಚಾಗಿ ನಗರವಾಸಿಗಳಿಗೆ ಇದರ ಪರಿಚಯ ಅಪರೂಪ. ಹಾಗೂ ಅಲ್ಲಲ್ಲಿ ಆಗಾಗ್ಗೆ ಮಾರಾಟಕ್ಕೆ ಸಿಗುವುದುಂಟು. ರುಚಿಯನ್ನು ನೋಡದವರು ಹಣ್ಣಿನ ರುಚಿಯನ್ನು ಅನುಭವಿಸಲು ಮರೆಯಬೇಡಿ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.

Leave a Reply