ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಭಾರತದ ಸಂದರ್ಭವನ್ನು ಅವಲೋಕಿಸಿದಾಗ, ಕ್ರಿ.ಶ. 5ನೇ ಶತಮಾನದಿಂದ 12ನೇ ಶತಮಾನದ ತನಕ ಸುವರ್ಣಯುಗವೆನ್ನುವಂತೆ ಆರ್ಯಭಟನಿಂದ ಹಿಡಿದು ಭಾಸ್ಕರನ ತನಕ ವಿಜ್ಞಾನಕ್ಷೇತ್ರದಲ್ಲಿ ಉತ್ತುಂಗವನ್ನು ಮೆರೆದ ಭಾರತ ನಂತರ ಮಸುಕಾದದ್ದೇಕೆ? ಅದೇ ಸಮಯದಲ್ಲಿ ಅಂಧಯುಗದಲ್ಲಿದ್ದ ಯೂರೋಪ್, ನಂತರ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಅಭಿವೃದ್ಧಿಯನ್ನು ಹೊಂದಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ಈ ವಿಷಯವನ್ನು ಹೆಚ್ಚು ಸಮಂಜಸವಾಗಿ ಚರ್ಚಿಸಿದವರು ಭಾರತೀಯ ಖಗೋಳ ಭೌತವಿಜ್ಞಾನಿ ಪ್ರೊ. ಜಯಂತ್ ವಿಷ್ಣು ನಾರ್ಳಿಕರ್ ರವರು. ತಮ್ಮ ಸಮಗ್ರ ವಿಶ್ಲೇಷಣಾತ್ಮಕ ಚರ್ಚೆಯನ್ನು “The Scientific Edge: The Indian Scientist from Vedic to Modern Times” ಎಂಬ ಪುಸ್ತಕದ ಮೂಲಕ ಪ್ರಕಟಿಸಿದ್ದಾರೆ. ಇಂದು ನಮ್ಮ ಪುಸ್ತಕಯಾನದಲ್ಲಿ ಪರಿಚಯಿಸುತ್ತಿರುವ ಪುಸ್ತಕವೇ “ ದಿ ಸೈಂಟಿಫಿಕ್ ಎಜ್”.
ಜಯಂತ್ ವಿಷ್ಣು ನಾರ್ಳಿಕರ್ ಭಾರತೀಯ ಖಗೋಳ ಭೌತವಿಜ್ಞಾನಿ. ಇವರು ಪುಣೆಯ Inter-University Centre for Astronomy and Astrophysics -IUCAA (ಖಗೋಳವಿಜ್ಞಾನ ಮತ್ತು ಖಗೋಳ ಭೌತವಿಜ್ಞಾನದ ಅಂತರ-ವಿಶ್ವವಿದ್ಯಾಲಯ ಕೇಂದ್ರದ) ಸ್ಥಾಪಕ ನಿರ್ದೇಶಕರು. ಈಗ ಗೌರವ ಪ್ರಾಧ್ಯಾಪಕರಾಗಿದ್ದಾರೆ. ಜಯಂತ್ ವಿ. ನಾರ್ಳಿಕರ್ ಅವರು ಭಾರತದ ಕೊಲ್ಲಾಪುರದಲ್ಲಿ 19 ಜುಲೈ 1938 ರಂದು ವಿದ್ವಾಂಸರ ಕುಟುಂಬದಲ್ಲಿ ಜನಿಸಿದರು. ಅಪ್ಪ ವಿಷ್ಣು ವಾಸುದೇವ್ ನಾರ್ಳಿಕರ್ ಗಣಿತವಿಜ್ಞಾನಿ ಮತ್ತು ಸೈದ್ಧಾಂತಿಕ ಭೌತವಿಜ್ಞಾನಿಯಾಗಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಮತ್ತು ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅಮ್ಮ ಸುಮತಿ ನಾರ್ಳಿಕರ್ ಸಂಸ್ಕೃತ ವಿದ್ವಾಂಸರಾಗಿದ್ದರು. ಜಯಂತ್ ನಾರ್ಳಿಕರ್ ಅವರ ಪತ್ನಿ ಮಂಗಳಾ ನಾರ್ಳಿಕರ್ ಸಹ ಗಣಿತ ವಿಜ್ಞಾನಿ. 1963ರಲ್ಲಿ ಜಯಂತ್ ನಾರ್ಳಿಕರ್ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದರು. ಅವರ ಸಂಶೋಧನಾ ಕಾರ್ಯವು ಅರ್ನೆಸ್ಟ್ ಮ್ಯಾಕ್‌ನ ತತ್ವ, ಕ್ವಾಂಟಮ್ ವಿಶ್ವವಿಜ್ಞಾನ ಮತ್ತು ಖಗೋಳ ಭೌತವಿಜ್ಞಾನವನ್ನು ಒಳಗೊಂಡಿದೆ. 1964 ರಲ್ಲಿ ತಮ್ಮ ಪಿ.ಎಚ್.ಡಿ ಮಾರ್ಗದರ್ಶಕರಾದ ಹೆಸರಾಂತ ಖಗೋಳ ಭೌತವಿಜ್ಞಾನಿ ಸರ್ ಫ್ರೆಡ್ ಹಾಯ್ಲ್(Fred Hoyle) ಅವರೊಂದಿಗೆ ಹಾಯ್ಲ್-ನಾರ್ಳಿಕರ್ ಸಿದ್ಧಾಂತ ಎಂದು ಕರೆಯಲ್ಪಡುವ ಅನುರೂಪ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು. ಇದು ಆಲ್ಬರ್ಟ್ ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತ ಮತ್ತು ಅರ್ನೆಸ್ಟ್ ಮ್ಯಾಕ್‌ನ ತತ್ವವನ್ನು ಸಂಯೋಜಿಸುತ್ತದೆ. ಈ ಸಿದ್ಧಾಂತದಿಂದ ವಿಶ್ವಪ್ರಖ್ಯಾತಿ ಪಡೆದ ನಾರ್ಳಿಕರ್ ತಮ್ಮ 26ನೇ ವಯಸ್ಸಿನಲ್ಲಿಯೇ ಭಾರತದ ಪ್ರತಿಷ್ಠಿತ “ಪದ್ಮಭೂಷಣ” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಂದಿಗೂ ಸಹ ಪದ್ಮಭೂಷಣ ಪ್ರಶಸ್ತಿ ಪಡೆದ ಅತ್ಯಂತ ಕಿರಿಯರು ಇವರೇ ಆಗಿದ್ದಾರೆ.
ಮತ್ತೋರ್ವ ಪ್ರಖ್ಯಾತ ಸೈದ್ಧಾಂತಿಕ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್ ತನ್ನ ಪಿ.ಎಚ್.ಡಿ ಸಂಶೋಧನೆಯನ್ನು ಹಾಯ್ಲ್-ನಾರ್ಳಿಕರ್ ಸಿದ್ಧಾಂತವನ್ನು ಮೂಲವಾಗಿಟ್ಟುಕೊಂಡು ಮುಂದುವರೆಸಿದ್ದಾರೆ. ಇದನ್ನು ಹಾಕಿಂಗ್ ತಮ್ಮ ಸಂಶೋಧನಾ ಪ್ರಬಂಧದ ಮೊದಲನೆಯ ಅಧ್ಯಾಯದಲ್ಲಿಯೇ ತಿಳಿಸಿದ್ದಾರೆ.
1972 ರಲ್ಲಿ, ನಾರ್ಳಿಕರ್ ಅವರು ಭಾರತದ ಮುಂಬೈನಲ್ಲಿರುವ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಅಲಂಕರಿಸಿ ಸೈದ್ಧಾಂತಿಕ ಆಸ್ಟ್ರೋಫಿಸಿಕ್ಸ್ ಗ್ರೂಪ್‌ನ ಉಸ್ತುವಾರಿ ವಹಿಸಿದ್ದರು. 1988 ರಲ್ಲಿ, ಭಾರತೀಯ ವಿಶ್ವವಿದ್ಯಾನಿಲಯ ಅನುದಾನ ಆಯೋಗವು(ಯುಜಿಸಿ – UGC- University Grant Commission) ಪುಣೆಯಲ್ಲಿ ಖಗೋಳವಿಜ್ಞಾನ ಮತ್ತು ಖಗೋಳ ಭೌತವಿಜ್ಞಾನದ ಅಂತರ-ವಿಶ್ವವಿದ್ಯಾಲಯ ಕೇಂದ್ರವನ್ನು (IUCAA) ಸ್ಥಾಪಿಸಲು ನಿರ್ಧರಿಸಿತು. ಅಂದಿನ ಯುಜಿಸಿ ಮುಖ್ಯಸ್ಥರಾಗಿದ್ದ ಪ್ರೊ. ಯಶಪಾಲ್ ರವರ ಕೋರಿಕೆಯಂತೆ ಜಯಂತ್ ನಾರ್ಳಿಕರ್ IUCAA ಯ ಸಂಸ್ಥಾಪಕ-ನಿರ್ದೇಶಕರಾದರು. 1981 ರಲ್ಲಿ, ನಾರ್ಳಿಕರ್ ವಿಶ್ವ ಸಾಂಸ್ಕೃತಿಕ ಮಂಡಳಿಯ ಸ್ಥಾಪಕ ಸದಸ್ಯರಾದರು. ಅವರು ವಿಶ್ವವಿಜ್ಞಾನದಲ್ಲಿ ಜನಪ್ರಿಯ ಬಿಗ್ ಬ್ಯಾಂಗ್ ಮಾದರಿಗೆ ಪರ್ಯಾಯವಾದ ಮಾದರಿಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಇಷ್ಟಲ್ಲದೆ, ಮುಖ್ಯವಾಗಿ ಮಹಾರಾಷ್ಟ್ರದ ಹೆಸರಾಂತ ಬಹುಮುಖ ಪ್ರತಿಭೆ ಪು.ಲ.ದೇಶಪಾಂಡೆಯವರ ಪತ್ನಿ ಸುನಿತ ದೇಶಪಾಂಡೆ ರವರ ದೇಣಿಗೆಯಿಂದ “ ಪುಲಸ್ತ್ಯ” ಕೇಂದ್ರವು ಈ IUCAA ನಲ್ಲಿ ಸ್ಥಾಪಿತವಾಗಿದ್ದು ನಾರ್ಳಿಕರ್ ರವರ ನಾಯಕತ್ವದಲ್ಲಿ. ಅದು ಶಾಲಾವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸಮರ್ಥರೀತಿಯಲ್ಲಿ ತಲುಪಿಸುವ ಉದ್ದೇಶವನ್ನು ಹೊಂದಿದೆ. ಇದು ನಮ್ಮ CPUS ಆಶಯದಂತೆ ವಿಜ್ಞಾನವನ್ನು ಸಮಾಜೀಕರಣಗೊಳಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಮಗೆ ಹೆಮ್ಮೆಯ ಮಾರ್ಗದರ್ಶಕ ವಿಷಯವಾಗಿದೆ.
ಜಯಂತ್ ನಾರ್ಳಿಕರ್ ರವರ ಬಗ್ಗೆ ಮತ್ತಷ್ಟು ತಿಳಿಯಲು ಈ ಲಿಂಕ್ ಗಳನ್ನು ಬಳಸಿ: https://www.youtube.com/watch?v=8BLUm2t82z0
IUCAAಬಗ್ಗೆ ತಿಳಿಯಲು ಈ ಕೆಳಗಿನ ಯೂಟ್ಯೂಬ್ ವಿಡಿಯೋ ನೋಡಬಹುದು:https://www.youtube.com/watch?v=lbpdNa2pVhA
“ದಿ ಸೈಂಟಿಫಿಕ್ ಎಜ್” ಮೂರು ವಿಭಾಗಗಳನ್ನು ಹೊಂದಿದ್ದು ಒಟ್ಟು 16 ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ವಿಭಾಗ “ India’s Science in a Historical Context”. “Things to be proud of..” ಎಂಬ ಅಧ್ಯಾಯದೊಂದಿಗೆ ಪ್ರಾರಂಭಿಸುವ ನಾರ್ಳಿಕರ್, ಭಾರತೀಯರು ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರಾಚೀನದ ವಿಜ್ಞಾನ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಮುಖ್ಯವಾಗಿ ವೇದಕಾಲದಲ್ಲಿ ಉಪಯೋಗಿಸುತ್ತಿದ್ದ ಯಜ್ಞಕುಂಡಗಳ ವೇದಿಕೆಯ ಗಾತ್ರವನ್ನು ನಿಖರವಾಗಿ ಅಳೆಯಲು ಶುಲ್ವಸೂತ್ರ (ಹಗ್ಗದ ಅಳತೆ)ವನ್ನು ಬಳಸುತ್ತಿದ್ದುದನ್ನು ಪ್ರಸ್ತಾಪಿಸುತ್ತಾರೆ. ಕ್ರಿ ಪೂ 200 ರ ಕುಶಾನರ ಕಾಲದ 70 ತಾಳೆಗರಿಗಳಲ್ಲಿ ಬರೆದಿರುವ ಬಕ್ಷಾಲಿ(ಅಲ್ಲಿ ಸಿಕ್ಕಿದ) ಹಸ್ತಪ್ರತಿಯಲ್ಲಿರುವ ಪ್ರಬುದ್ಧ ಅಂಕಗಣಿತ ಮತ್ತು ಬೀಜಗಣಿತದ ಉಲ್ಲೇಖಮಾಡುತ್ತಾರೆ. ವೇದಾಂಗ ಜ್ಯೋತಿಷದಲ್ಲಿ ಪ್ರಪ್ರಥಮ ಬಾರಿಗೆ ಖಗೋಳವಿಜ್ಞಾನದ ಉಲ್ಲೇಖವಿರುವುದನ್ನು ದಾಖಲಿಸುತ್ತಾರೆ. ಅಲ್ಲದೆ ಆರ್ಯಭಟನ ಅರ್ಯಭಟೀಯವನ್ನು, ಭಾಸ್ಕರನ ಚಕ್ರವಾಲ, ಸಿದ್ಧಾಂತ ಶಿರೋಮಣಿ ಮತ್ತು ಲೀಲಾವತಿಯನ್ನು ಪ್ರಸ್ತಾಪಿಸುತ್ತಾರೆ. ಆಯುರ್ವೇದದ ಚರಕ ಸಂಹಿತ, ಸುಶೃತ ಸಂಹಿತ, ಅಷ್ಟಾಂಗ ಹೃದಯ ಮತ್ತು ಅಷ್ಟಾಂಗ ಸಂಗ್ರಹ ಕೃತಿಗಳನ್ನು ಪ್ರಸ್ತಾಪಿಸಿ ನಮ್ಮ ಪ್ರಾಚೀನ ವಿಜ್ಞಾನದ ಪ್ರಗತಿಯನ್ನು ಹೆಮ್ಮೆಯಿಂದ ಹೇಳುತ್ತಾರೆ. ಆದರೆ, ಶುಲ್ವಸೂತ್ರದಲ್ಲಿ ಪೈತಾಗರಸ್ ಪ್ರಮೇಯ ಅಡಕವಾಗಿರುವುದನ್ನು ತಿಳಿಸಿದರೂ ಆ ಪ್ರಮೇಯವನ್ನು ನಿರೂಪಿಸುವ ಯಾವುದೇ ಪುರಾವೆ ಇಲ್ಲವೆನ್ನುತ್ತಾರೆ ನಾರ್ಳಿಕರ್.
ಎರಡನೆಯ ಅಧ್ಯಾಯ “…And the Herrings That Had Best Be Forgotten” ದಲ್ಲಿ ನಮ್ಮ ವಿಜ್ಞಾನ ಪ್ರಗತಿಗೆ ಕುಂಠಿತವಾಗಿದ್ದ ’ಮೂಲಕಾರಣಗಳನ್ನು ಬದಿಗೊತ್ತಿ ದಾರಿತಪ್ಪಿಸುತ್ತಿರುವ ವಿಷಯಗಳನ್ನು’ ಪ್ರಸ್ತಾಪಿಸುತ್ತಾರೆ. ಜೊತೆಗೆ ಆಧುನಿಕ ವಿಜ್ಞಾನದ ಪ್ರಗತಿ ಹೇಗಿರಬೇಕೆಂಬುದನ್ನು ಚರ್ಚಿಸುತ್ತಾ ಪ್ರಮುಖ ಐದು ಹಂತಗಳನ್ನು ಉದಾಹರಣೆಗಳೊಂದಿಗೆ ಪ್ರಸ್ತಾಪಿಸುತ್ತಾರೆ. ಪ್ರಾಚೀನ ಭಾರತದಲ್ಲಿ ವಿಜ್ಞಾನ ತಂತ್ರಜ್ಞಾನವು ಈಗಿರುವಂತೆಯೇ ಆಧುನಿಕವಾಗಿತ್ತು ಎಂದುಕೊಳ್ಳಲು ಸಾಕ್ಷ್ಯಾಧಾರಗಳು ಬೇಕು. ಈ ಸಾಕ್ಷ್ಯಾಧಾರಗಳು ಒಂದು, ಕಾಲದ ಹೊಡೆತಕ್ಕೆ ಸಿಕ್ಕಿ ಉಳಿದ ಕಲಾಕೃತಿಗಳಾಗಿರಬೇಕು ಅಥವಾ ಹಸ್ತಪ್ರತಿಗಳ ರೂಪದಲ್ಲಿರಬೇಕು ಎನ್ನುತ್ತಾರೆ. ಇದಕ್ಕೆ ಪೂರಕವಾಗಿ ಹರಪ್ಪಾದಲ್ಲಿ ಸಿಕ್ಕ ಪಳೆಯುಳಿಕೆಗಳು ಆಧುನಿಕ ತಂತ್ರಜ್ಞಾನವನ್ನು ತಿಳಿಸದಿದ್ದರೂ ಸುಧಾರಿತ ಸಾಮಾಜಿಕ ಜೀವನವನ್ನು ಪ್ರತಿಪಾದಿಸುತ್ತದೆ. ಜೊತೆಗೆ ನಳಂದ ವಿಶ್ವವಿದ್ಯಾಲಯದ ಪಳೆಯುಳಿಕೆಗಳು ಸಹ ಉತ್ತಮ ಮೂಲಸೌಕರ್ಯಗಳನ್ನು ತಿಳಿಸುತ್ತದೆ. ಆದರೆ ಆಧುನಿಕ ವಿಜ್ಞಾನದ ಉಲ್ಲೇಖವಿರುವ ಯಾವ ಹಸ್ತಪ್ರತಿಗಳು ಸಿಕ್ಕಿಲ್ಲ ಎನ್ನುತ್ತಾರೆ ನಾರ್ಳಿಕರ್. ವೇದಗಳಲ್ಲಿತ್ತು ಎನ್ನುವ ವಿಜ್ಞಾನವನ್ನು ಕಾಲಾಂತರದಲ್ಲಿ ಸೇರಿಸಿ ಕೃತಿಚೌರ್ಯ ಮಾಡಲಾಗಿದೆ ಎಂಬುದನ್ನು ಸಾಕ್ಷ್ಯಸಮೇತವಾಗಿ ನಿರೂಪಿಸುತ್ತಾರೆ. ಜೊತೆಗೆ ವೇದ ಗಣಿತವೆಂಬುದು (vedic mathematics) ಸಹ ಇತ್ತೀಚೆಗೆ ನಡೆದಿರುವ ಕೃತಿಚೌರ್ಯ(Plagiarism in reverse) ಎನ್ನುವುದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಅದಲ್ಲದೆ ಈ ವೇದಗಣಿತದ್ದು ಎನ್ನುವ ಶ್ಲೋಕಗಳಲ್ಲಿ ತಿಳಿಸಿರುವ ಅಂಕಗಣಿತದ ಕೂಡಿಸು, ಕಳಿ, ಗುಣಿಸು, ಭಾಗಿಸು ಮತ್ತು ವರ್ಗಮೂಲಗಳನ್ನು ಸುಲಭ ರೀತಿಯಲ್ಲಿ ಕಂಡುಹಿಡಿಯಲು ಬಳಸುವ ಸೂತ್ರಗಳು ಪ್ರಬುದ್ಧ ಗಣಿತವಿಜ್ಞಾನದ ಪುರಾವೆ ಅಲ್ಲ. ಗಣಿತವೆಂಬುದು ಅಂಕಗಣಿತವನ್ನು ಮೀರಿದ ತಾರ್ಕಿಕ ಚಿಂತನೆಯನ್ನು ಒಳಗೊಂಡ ಪ್ರಕ್ರಿಯೆ ಎಂಬುದನ್ನು ಮನಗಾಣಿಸುತ್ತಾರೆ. ಮುಂದುವರೆದ ಅಧ್ಯಾಯದಲ್ಲಿ ತಕ್ಷಶಿಲ, ವಾರಣಾಸಿ, ನಳಂದ, ವಿಕ್ರಮಶೀಲ ವಿಶ್ವವಿದ್ಯಾಲಯಗಳ ಆಗಿನ ವೈಭವವನ್ನು ಚಿತ್ರೀಕರಿಸುತ್ತಾ , ಹೂಣರ, ಖಿಲ್ಜಿಗಳ ಮತ್ತು ಕಾಲದ ದಾಳಿಗೆ ಸಿಲುಕಿದ ಅವುಗಳ ಅವಶೇಷಗಳನ್ನು ಕಾಪಾಡುವಲ್ಲಿ ನಾವು ಸೋತಿರುವುದನ್ನು ತಮ್ಮ ಅನುಭವದ ಮಾತುಗಳಲ್ಲಿ ಹೀಗೆ ವಿವರಿಸುತ್ತಾರೆ: “Indeed it is ironical that we speak with great pride and satisfaction of our glorious past, yet we do so little to preserve and publicize it’. ಇದೂ ಸಹ ನಮ್ಮ ಪ್ರಾಚೀನ ಕಾಲದ ವಿಜ್ಞಾನ ಪ್ರಗತಿಯ ಸಾಕ್ಷ್ಯಗಳ ಹುಡುಕಾಟದಲ್ಲಿ ಸಿಗುವ ನಿರಾಶಾದಾಯಕ ಫಲಿತಾಂಶ.
“ What arrested the Growth of Indian Science in the Second Millennium AD?” ಎನ್ನುವ ಅಧ್ಯಾಯದಲ್ಲಿ, ನಮ್ಮ ಪ್ರಾಚೀನ ವಿದ್ಯೆ ಗುರುಕುಲ ಪದ್ದತಿಯಲ್ಲಿದ್ದು, ಜ್ಞಾನವು ಮೌಖಿಕವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸಾಗುತ್ತಿದ್ದು ಎಲ್ಲೂ ದಾಖಲಾಗದ ಕಾರಣ ಪ್ರಾಚೀನ ವಿಜ್ಞಾನ ಆಕರಗಳು ಸಿಗದೆ ಮುಂದುವರೆಯಲು ಸಾಧ್ಯವಾಗದಿರುವುದು ಒಂದು ಅಂಶವಾದರೆ, ಸಾಹಿತ್ಯ, ಕಲೆ , ಸಂಗೀತಗಳಿಗಿದ್ದ ರಾಜಾಶ್ರಯ, ಪ್ರೋತ್ಸಾಹ ವಿಜ್ಞಾನಕ್ಕೆ ಇಲ್ಲದಿದ್ದದ್ದು ಮತ್ತೊಂದು ಕಾರಣ. ಕಾಳಿದಾಸನಿಗೆ ಭೋಜರಾಜನ ಆಶ್ರಯ, ತಾನ್ ಸೇನನಿಗೆ ಅಕ್ಬರ್ ಆಶ್ರಯವಿದ್ದಂತೆ ಯಾವುದೇ ವಿಜ್ಞಾನಿಗೆ ಈ ರೀತಿಯ ಆಶ್ರಯ ಭಾರತದಲ್ಲಿರಲ್ಲಿಲ್ಲ. ಪ್ರೋತ್ಸಾಹವಿಲ್ಲದೆ ಅದು ಪ್ರಗತಿ ಸಾಧಿಸಿಲ್ಲ. ಆದರೆ ಅರಬ್ ಮತ್ತು ಯೂರೋಪ್ ಗಳಲ್ಲಿ ಈ ರೀತಿ ಇರಲಿಲ್ಲ. ಅರಬ್ ನಲ್ಲಿ ಸುಮಾರು 1200 ವರ್ಷಗಳ ಹಿಂದೆ ಎರಡನೇ ಅಬ್ಬಸಿದ್ ಕಲೀಫ ಅಬ್ದುಲ್ಲ ಅಲ್ ಮನ್ಸೂರ್ ಹೊಸ ರಾಜಧಾನಿ ಬಾಗ್ದಾದ್ ನಗರದ ನಿರ್ಮಾಣ ಸಂಭ್ರಮವನ್ನು, ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಆಚರಿಸಿದನು. ಈ ಸಮ್ಮೇಳನಕ್ಕೆ ಗ್ರೀಕ್, ನೆಸ್ಟೋರಿಯನ್, ಬೈಜಂಟೈನ್, ಯಹೂದಿ(Jewish) ಮತ್ತು ಹಿಂದೂ ವಿದ್ವಾಂಸರಿಗೆ ಆಹ್ವಾನವಿತ್ತು. ಇದು ಅರಬ್ ನಲ್ಲಿ ಮೊತ್ತಮೊದಲ ವ್ಯವಸ್ಥಿತವಾದ ಅಂತರರಾಷ್ಟೀಯ ವೈಜ್ಞಾನಿಕ ಸಮ್ಮೇಳನವಾಗಿ ಇಸ್ಲಾಂ ಗೆ ಸಂಬಂಧಿಸಿದಂತೆ ವಿಜ್ಞಾನದ ನವೋದಯವಾಗಿ ದಾಖಲೆಯಾಯಿತು. ಇದರಲ್ಲಿ ಹಿಂದೂ ಖಗೋಳ ವಿಜ್ಞಾನಿ ಕಂಕನು ಆಗಿನ ಕಾಲದಲ್ಲಿ ಜಗತ್ತಿನ ಇತರರು ಅರಿಯದ ಹಿಂದೂ ಅಂಕಿಗಳ ಬಗ್ಗೆ ಪ್ರಬಂಧ ಮಂಡಿಸಿದನು ಎಂಬುದನ್ನು ಉಲ್ಲೇಖಿಸಿದ್ದಾರೆ.
ಹದಿನೈದರಿಂದ ಹದಿನೇಳನೆಯ ಶತಮಾನಗಳಲ್ಲಿ ಯೂರೋಪಿನಲ್ಲಿ ಕೆಲವು ಗಣ್ಯರು ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಆಶ್ರಯವಿತ್ತು ಪ್ರೋತ್ಸಾಹಿಸಿದರು. ಉದಯೋನ್ಮುಖ ವಿಜ್ಜಾನಿಗಳಿಗೆ ಪ್ರಯೋಗಾಲಯಗಳನ್ನು, ವೀಕ್ಷಣಾಲಯಗಳನ್ನು ನಿರ್ಮಿಸಲು ಸಹಾಯ ನೀಡಿದರು. ಈ ರೀತಿಯ ಪ್ರೋತ್ಸಾಹ ನಮ್ಮಲ್ಲಿಲ್ಲದ್ದು ವಿಜ್ಞಾನದ ಪ್ರಗತಿ ಕುಂಠಿತವಾಗಲು ಕಾರಣವೆನ್ನುತ್ತಾರೆ ನಾರ್ಳಿಕರ್. ಜೊತೆಗೆ ಯೂರೋಪ್ ನಲ್ಲಿನ ಹವಾಮಾನ ವೈಪರೀತ್ಯ ( ಒಮ್ಮೆ ಗರಿಷ್ಟ ಉಷ್ಣಾಂಶ ಮತ್ತೊಮ್ಮೆ ವಿಪರೀತ ಚಳಿ) ದಿಂದ ಜನರು ಅಲ್ಲಿನ ದೈನಂದಿನ ಬದುಕನ್ನು ಸುಲಭಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಹಾಗಾಗಿ ಅಲ್ಲಿ ವಿಜ್ಞಾನದ ಪ್ರಗತಿಯಾಗಿದೆ. ನಮ್ಮ ಉಪಖಂಡದಲ್ಲಿ ಹೆಚ್ಚಿನ ಹವಾಮಾನ ವೈಪರೀತ್ಯವಿಲ್ಲದಿರುವುದರಿಂದ ದೈನಂದಿನ ಜೀವನ ಸುಗಮವಿದ್ದು ವಿಜ್ಞಾನದ ಪ್ರಗತಿಯ ಕಡೆಗೆ ಹೆಚ್ಚಿನ ಗಮನ ಹರಿಸಿಲ್ಲ ಎನ್ನುತ್ತಾರೆ. ಯೂರೋಪಿನವರು ಜಗತ್ತಿನಾದ್ಯಂತ ವಸಾಹತುಗಳನ್ನು ಮಾಡಿದ್ದು ಸಹ ಈ ಹವಾಮಾನ ವೈಪರೀತ್ಯಗಳಿಂದ ತಪ್ಪಿಸಿಕೊಂಡು ಸುಗಮ ಜೀವನ ಸಾಗಿಸಲು ಹುಡುಕಿದ ತಾಣಗಳಾಗಿವೆ. ಈ ವಸಾಹತುಗಳನ್ನು ಹುಡುಕಲು/ಸ್ಥಾಪಿಸಲು ನೌಕಾಯಾನದ ಮೂಲಕ ಹೊರಟ ಅವರಿಗೆ ಸಹಾಯವಾಗಿದ್ದು ಮುಖ್ಯವಾಗಿ ಎರಡು ವಿಜ್ಞಾನ-ತಂತ್ರಜ್ಞಾನದ ಅಂಶಗಳು. ಒಂದು ಅಗಾಧವಾದ ಸಮುದ್ರದ ಮಧ್ಯೆ ಹವಾಮಾನ ವೈಪರೀತ್ಯದಿಂದ ಕಳೆದು ಹೋಗುವ ಸಂದರ್ಭ ಬಂದಾಗ ನೆರವಾಗಿದ್ದು ಅಯಸ್ಕಾಂತೀಯ ದಿಕ್ಸೂಚಿ, ಎರಡನೆಯದು ಗನ್ ಪೌಡರ್. ಗನ್ ಪೌಡರು ಬಳಸಿದ ಬಂದೂಕು, ಆಗ ಭಾರತದಲ್ಲಿದ್ದ ಬಿಲ್ಲು ಬಾಣಗಳ ಆಯುಧಗಳಿಗಿಂತ ಆಧುನಿಕವಾಗಿದ್ದು ಅವರಿಗೆ ಯುದ್ಧದಲ್ಲಿ ಜಯಿಸಲು ನೆರವಾಯಿತು. ವಿಪರ್ಯಾಸವೆಂದರೆ ಅವರಿಂದ ಆ ಆಯುಧಗಳನ್ನು ಬಳುವಳಿಯಾಗಿ ಪಡೆದ ನಮ್ಮ ಯಾವ ರಾಜರೂ ಸಹ ಅದನ್ನು ನಮ್ಮದಾಗಿಸಿಕೊಳ್ಳುವ ಅಭಿವೃದ್ಧಿಯ ಸಂಶೋಧನೆಯನ್ನು ಪೋಷಿಸಿಲ್ಲವೆನ್ನುವುದನ್ನು ನಾರ್ಳಿಕರ್ ತಿಳಿಸುತ್ತಾರೆ. ವಿಜ್ಞಾನ ತಂತ್ರಜ್ಞಾನದ ಪ್ರಗತಿ ಸಾಧಿಸುವಲ್ಲಿ ನಾವು ಎಡವಲು ಮತ್ತೊಂದು ಮುಖ್ಯವಾದ ಅಂಶ ವೃತ್ತಿಪರತೆಯ ಕೊರತೆ. ಪ್ರಕೃತಿಯ ರಹಸ್ಯಗಳನ್ನು ಅರಿಯಲು ಸುಲಭಮಾರ್ಗಗಳಿಲ್ಲ ಅದಕ್ಕೆ ವೃತ್ತಿಪರತೆ ಬೇಕು. ಐಸಾಕ್ ನ್ಯೂಟನ್ ಗೆಲುವು ಕಂಡಿದ್ದೇ ತನ್ನ ವೃತ್ತಿಪರತೆಯ ಮೂಲಕ ಎಂದು ಉದಾಹರಣೆಯ ಮೂಲಕ ನಿರೂಪಿಸುತ್ತಾರೆ. ಜ್ಞಾಪಕ ಶಕ್ತಿಯಿಂದ ಕಲಿಯುವ/ಕಲಿಸುವ ಪದ್ದತಿಯು(Rote Learning) ಸಹ ನಮ್ಮ ಪ್ರಗತಿಗೆ ಹಿನ್ನಡೆ ಎನ್ನುವುದನ್ನು ಈ ರೀತಿ ವಿವರಿಸುತ್ತಾರೆ , “ The Stress on rote learning and repeating what is already known in preference to discovering or thinking originally also led to a rather weak tradition of written manuscripts”. ಇದನ್ನು ಮುಂದಿನ ಅಧ್ಯಾಯದಲ್ಲಿ ಭಾರತದ ವಿದ್ವಾಂಸರು ಅಂತರಿಕ್ಷದಲ್ಲಿ “Crab Supernova” ಹುಡುಕಿದ ದಾಖಲೆಯ ಪುರಾವೆಗಳನ್ನು ಪ್ರಸ್ತಾಪಿಸುತ್ತ ಈ ರೀತಿ ವ್ಯಾಖ್ಯಾನಿಸುತ್ತಾರೆ, “ At first sight these slim findings seem a disappointing end to a quest in the history of science. One may try to rationalize the lack of any specific evidence with the oral tradition of transmission of knowledge on the subcontinent. Thus the practice of writing down some fact or idea and preserving it for posterity, common to Europe, China and the Middle East, was not so much common in India”.
ಮುಂದುವರೆಯುತ್ತಾ, ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷರ ವಸಾಹತುಗಳಿಂದ ಭಾರತದಲ್ಲಿ ವಿಜ್ಞಾನ ಪ್ರಗತಿಯನ್ನು ಸಾಧಿಸಿದ್ದನ್ನು ವಿವರಿಸಿಸುತ್ತಾ, ಸಮಾಜ ಸುಧಾರಕ ರಾಜಾರಾಮ್ ಮೋಹನರಾಯರ ಪ್ರಸ್ತುತೆಯನ್ನು ಪ್ರತಿಪಾದಿಸುತ್ತಾರೆ. ರಾಜಾರಾಂ ಮೋಹನರಾಯರ ಸಮಾಜ ಸುಧಾರಣೆ, ಸತಿಪದ್ದತಿ ನಿರ್ಮೂಲನೆ, ಇಂಗ್ಲಿಷ್ ಶಾಲಾಕಾಲೇಜುಗಳ ಸ್ಥಾಪನೆಯ ಪ್ರತಿಪಾದನೆ ಹೇಗೆ ಹೊರ ಜಗತ್ತಿನ ಜ್ಞಾನ, ವಿಜ್ಞಾನ ತಂತ್ರಜ್ಞಾನಗಳಿಗೆ ನಾವು ತೆರೆದುಕೊಂಡು ಪ್ರಗತಿಯನ್ನು ಸಾಧಿಸಬಹುದಾದದ್ದನ್ನು, ನಂತರ ಸಾಧಿಸಿದ್ದನ್ನು ಮನಗಾಣಿಸುತ್ತಾರೆ.
ಇನ್ನು ಎರಡನೆಯ ವಿಭಾಗ “ Learning to Live in the age of Science” ನಲ್ಲಿ ಮೊದಲಿಗೆ ವಿಜ್ಞಾನ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ, ಯೂರೋಪ್ ಮತ್ತು ಭಾರತ ಉಪಖಂಡದಲ್ಲಿ ವಿಜ್ಞಾನವು ವಿಕಾಸ ಹೊಂದಿದ ರೀತಿಯನ್ನು ವಿಶ್ಲೇಷಿಸುತ್ತಾರೆ. ಅವರು ಡಿ.ಪಿ.ಚಟ್ಟೋಪಧ್ಯಾಯರ “ Civilization is what we possess or have, and culture is what we are” ಹೇಳಿಕೆಯನ್ನು ಮುಂದುವರೆಸುತ್ತಾ, “ technological achievement is a content of civilization and the spirit that drives science is part of culture” ಎಂದು, “One must take stock of these aspects before considering India’s present difficulties in adjusting to the age of Science” ಎನ್ನುತ್ತಾರೆ.
ಇಲ್ಲಿ ಮುಖ್ಯವಾಗಿ ಪ್ರಸ್ತುತ ಪಡಿಸಿರುವುದು ಕ್ರಿಶ 1050 ರಿಂದ 1650 ರತನಕ ಯೂರೋಪಿನಲ್ಲಿ ಚರ್ಚ್ ಗಳ ಅಧೀನದಲ್ಲಿದ್ದ ವಿಜ್ಞಾನ ಹೇಗೆ ನ್ಯೂಟನ್ ನ ನಂತರ ಸ್ವತಂತ್ರವಾಗಿ ಪ್ರಗತಿ ಸಾಧಿಸಿತು ಎನ್ನುವುದರ ಜೊತೆಗೆ ಕ್ರಿಶ 450 ಕ್ರಿಶ 1150 ರ ಆರ್ಯಭಟನಿಂದ ಹಿಡಿದು ಎರಡನೆಯ ಭಾಸ್ಕರನ ಕಾಲದ ಭಾರತದಲ್ಲಿಯ ವಿಜ್ಞಾನದ ಸುವರ್ಣಯುಗವನ್ನು ಪ್ರಸ್ತಾಪಿಸುತ್ತಾರೆ. ಆರ್ಯಭಟೀಯದಲ್ಲಿ ಪ್ರಸ್ತುತ ಪಡಿಸಿದ, ’ದೂರದ ನಕ್ಷತ್ರಗಳ ಹಿನ್ನೆಲೆಯಲ್ಲಿ ಭೂಮಿ ತನ್ನ ಸುತ್ತ ಸುತ್ತುತ್ತದೆ’ ಎನ್ನುವುದಕ್ಕೆ ಆಗಿನ ಕಾಲದ ಖಗೋಳ ಶಾಸ್ತ್ರಜ್ಞರು ಪ್ರತಿಕ್ರಿಯಿಸಿದರೂ ಯಾರೂ ಅದರ ಪರವಾಗಿ ಬೆಂಬಲ ನೀಡಲಿಲ್ಲ. ಕೋಪರ್ನಿಕಸ್ ಮತ್ತು ಗೆಲಿಲಿಯೋ ರವರಿಗಿದ್ದ ವ್ಯಕ್ತಿಚಿತ್ರ ವಿವರಗಳು ಆರ್ಯಭಟನ ವಿಚಾರದಲ್ಲಿ ಸೋತಿವೆ ಎನ್ನುವುದನ್ನು ನಾರ್ಳಿಕರ್ ತಿಳಿಸುತ್ತಾರೆ. ಇಲ್ಲಿ ಬ್ರಿಟಿಷ್ ಖಗೋಳಶಾಸ್ತ್ರಜ್ಞ ಹೆರ್ಮನ್ ಬಾಂಡಿ(Hermann Bondi) ವೈಜ್ಞಾನಿಕ ಸಿದ್ಧಾಂತದ ಯಶಸ್ಸನ್ನು ವಿವರಿಸುವ “It is 100 percent successful if it is tested and accepted, 50 percent if it is violently resisted and rejected, and 0 percent if it is ignored” ಹೇಳಿಕೆಯನ್ನು ಪ್ರಸ್ತಾಪಿಸುವ ನಾರ್ಳಿಕರ್, “Much though one may condemn the treatment meted out to Galileo, he at least achieved a 50 percent success on Bondi’s scale, where as Aryabhata scored 0 percent. Unlike Galileo who stripped up a hornet’s nest with his ideas and experiments, Aryabhata does not seem to have created any impact, barring a few light ripples amongst a select few astronomers like Brahmagupta” ಎಂದು ಬರೆಯುತ್ತಾರೆ.
ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯ ಸಾಗುತ್ತಿರುವ ಹಾದಿಯನ್ನು ಪ್ರಸ್ತಾಪಿಸುವ ನಾರ್ಳಿಕರ್, ದೇಶವು ಕ್ರಿಯಾತ್ಮಕ ವೈಜ್ಞಾನಿಕ ಪ್ರಗತಿಯನ್ನು ಸಾಧಿಸಬೇಕಾದರೆ ಉನ್ನತ ಶಿಕ್ಷಣವು ಧೃಡವಾದ ಹೆಜ್ಜೆಯನ್ನಿರಿಸಬೇಕಾಗಿದೆ. ಯುವ ವಿಜ್ಞಾನಿಗಳ ಕೊರತೆ ಹಾಗೂ ನಮ್ಮ ನಾಡಿನ ವಿಜ್ಞಾನಿಗಳ ಕ್ರಿಯಾತ್ಮಕತೆ ಇತರ ದೇಶದ ವಿಜ್ಞಾನಿಗಳಿಗೆ ಹೋಲಿಸಿದರೆ ನಿಸ್ಸಾರವಾಗಿದೆ. ನಮ್ಮ ವಿಜ್ಞಾನಿಗಳ ಉತ್ಪಾದಕತೆಯಲ್ಲಿನ ನ್ಯೂನತೆಗಳಿಗೆ ಕಾರಣವನ್ನು ಹುಡುಕಿದಾಗ ಅವರು ಉತ್ತಮ ಮೂಲಸೌಕರ್ಯಗಳಲ್ಲಿ ಕೆಲಸಮಾಡದಿರುವುದು ಒಂದಂಶವಾದರೆ, ಅವರ ಸಂಶೋಧನೆ ಶಿಕ್ಷಣದ ಜೊತೆ ಸಹಕಾರಿಯಾಗಿಲ್ಲದಿರುವುದು ಇನ್ನೊಂದು ಅಂಶ. ಹಾಗಾಗಿ, ಅಮೆರಿಕ, ಯೂರೋಪ್ ವಿಶ್ವವಿದ್ಯಾಲಯಗಳಲ್ಲಿರುವಂತೆ ಭಾರತದಲ್ಲಿಯೂ ಸಹ ಸಂಶೋಧನಾ ವಿದ್ವಾಂಸರು ಶಾಲಾ, ಕಾಲೇಜು ಮಕ್ಕಳ ಜೊತೆ ವಿಜ್ಞಾನ ಸಂವಹನವನ್ನು ಸಾಧಿಸಬೇಕು ಎಂದು ಪ್ರತಿಪಾದಿಸುತ್ತಾರೆ.
ವಿಜ್ಞಾನದ ಮನೋಭಾವ/ ವಾತಾವರಣವನ್ನು ಸೃಷ್ಟಿಸಲು ಅಥವಾ ಉತ್ತಮಗೊಳಿಸಲು ಸ್ವಾತಂತ್ರ್ಯ ಬಂದ ಆಚೀಚೆ ತೆಗೆದುಕೊಂಡ ಕೆಲವು ಮಹತ್ವದ ನಿರ್ಧಾರಗಳಲ್ಲಿ ಸ್ವಾಯತ್ತ ಸಂಶೋಧನಾ ಸಂಸ್ಥೆಗಳನ್ನು (Autonomous Research Institutes- ARI, ಮುಖ್ಯವಾಗಿ TIFR, DRDO,DST,DOE, DOS) ಸ್ಥಾಪಿಸಿದ್ದು ಒಂದು. ಅದರೆ ಈ ಯಾವ ಸಂಸ್ಥೆಗಳು ಯಾವುದೇ ವಿಶ್ವವಿದ್ಯಾಲಯದ ಜೊತೆ ಸಂವಹನವನ್ನು ಸಾಧಿಸದಿದ್ದದ್ದು ವಿಪರ್ಯಾಸ. ಸಂಶೋಧನಾ ಕೇಂದ್ರಗಳಲ್ಲಿ ಏನಾಗುತ್ತಿದೆ ಅನ್ನುವುದು ವಿದ್ಯಾರ್ಥಿಗಳಿಗಾಗಲಿ, ವಿಶ್ವವಿದ್ಯಾನಿಲಯಗಳಲ್ಲಿ ಏನನ್ನು ಬೋಧಿಸಲಾಗುತ್ತಿದೆ ಅನ್ನುವುದು ವಿಜ್ಞಾನಿಗಳಿಗಾಗಲೀ ತಿಳಿಯದಿರುವುದು ವಿಪರ್ಯಾಸವಲ್ಲದೇ ಮತ್ತೇನು ಎನ್ನುತ್ತಾರೆ ನಾರ್ಳಿಕರ್. ಇದರಿಂದಲೇ ವಿದ್ಯಾರ್ಥಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಹೆಚ್ಚು ಆಕರ್ಷಿತರಾಗದೆ ಇಂಜಿನಿಯರಿಂಗ್, ಮೆಡಿಕಲ್, ಕಂಪ್ಯೂಟರ್ ಮತ್ತು ಚಾರ್ಟೆಡ್ ಅಕೌಂಟೆನ್ಸಿ ಕಡೆಗೆ ವಾಲಿದ್ದು ಎನ್ನುತ್ತಾರೆ. ಮುಂದುವರೆಯುತ್ತಾ, “ Very few choose the sciences because they know that if they opt for a Bachelor of Science stream, there is no excitement there, no motivating teachers anymore” ಎಂದು ನಮೂದಿಸುತ್ತಾರೆ.
ಹಾಗೆಯೇ ನಮ್ಮ ಆಡಳಿತ ವೈಖರಿಯನ್ನು ವಿವರಿಸುತ್ತಾ, “Simultaneously with the creation of the ARI’s the downgrading of our once excellent university system also began. As opposed to the ARIs which were divorced from teaching, the successive government acts ruling universities made them more into teaching factories where the workers’ hours are counted by bureaucrats each time a pay revision takes place. When merit as a criterion for selection goes out of the window, when research is no longer regarded as essential for an academic career, we have no reason or justification to demand that a university produce quality” ಎಂದು ವಿಷಾದಿಸುತ್ತಾರೆ. (ಇತ್ತೀಚಿನ ವರ್ಷಗಳಲ್ಲಿ ಈ ವಿಷಯವಾಗಿ ಕೆಲವು ಸುಧಾರಣೆಗಳು ಕಾಣಬಹುದಾದರೂ, ಅದು ಉತ್ತೇಜನಾತ್ಮಕವಾಗಿಯೇನು ಇಲ್ಲ ಎನ್ನಬಹುದು.)
Role of Science in shaping the country ಎಂಬ ವಿಷಯದ ಬಗ್ಗೆ ನಾರ್ಳಿಕರ್ ರವರ ಉಪನ್ಯಾಸವನ್ನು ಈ ಲಿಂಕ್ ನಲ್ಲಿ ನೋಡಬಹುದು https://www.youtube.com/watch?v=AzjhNBBChPs
ಮುಂದಿನ ಅಧ್ಯಾಯಗಳಲ್ಲಿ ವಿಜ್ಞಾನವನ್ನು ಮೀರುವ ಮತ್ತು ವೈಯಕ್ತಿಕ ಹಾಗೂ ಸಾಮೂಹಿಕ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ತುರ್ತುಅಗತ್ಯತೆಯನ್ನು ವಿವರಿಸುತ್ತಾರೆ. ಭಾರತದ ವಿಜ್ಞಾನ ಬೆಳೆಯುತ್ತಿರುವ ಗುರುತನ್ನು ಶ್ರೀನಿವಾಸ ರಾಮಾನುಜನ್, ಮೇಘನಾದ್ ಸಹ, ಸತ್ಯೇಂದ್ರನಾಥ್ ಬೋಸ್, ಸಿ.ವಿ ರಾಮನ್, ಜಿ. ಎನ್ ರಾಮಚಂದ್ರನ್ ರವರ ಕಾಣಿಕೆಗಳನ್ನು ಹೆಸರಿಸುತ್ತಾ, ಅಟಾಮಿಕ್ ಎನರ್ಜಿ ಕಮಿಷನ್, ಗ್ರೀನ್ ರೆವಲೂಷನ್, ಸ್ಪೇಸ್ ಪ್ರೋಗ್ರಾಂ, ಹೈ ಟೆಂಪರೇಚರ್ ಸೂಪರ್ ಕಂಡಕ್ಟಿವಿಟಿ ಮತ್ತು ಸಿ ಐ ಎಸ್ ಆರ್ ನಂತಹ ಸಂಶೋಧನಾ ಪ್ರಯೋಗಾಲಯದಿಂದ ಕೈಗಾರಿಕಾ ಮಾರುಕಟ್ಟೆತನಕ ಆದ ವೈಜ್ಞಾನಿಕ ಅಭಿವೃದ್ಧಿಯನ್ನು ಗುರುತಿಸುತ್ತಾ, ಜ್ಯೋತಿಷ್ಯ(Astrology)ದಂತ ಹುಸಿ ವಿಜ್ಞಾನದ ಅತಿಯಾದ ಅವಲಂಬನೆ ತುಂಬಾ ದುಃಖಕರವಾದ ಸಂಗತಿ ಎನ್ನುತ್ತಾರೆ. ಹಾಗೆಯೇ, ಖಗೋಳವಿಜ್ಞಾನ (Astronomy) ಒಂದು ವಿಜ್ಞಾನ ಆದರೆ ಜ್ಯೋತಿಷ್ಯ ಶಾಸ್ತ್ರ(Astrology) ವಿಜ್ಞಾನವಲ್ಲ ವೆಂದು ಪುರಾವೆ ಸಹಿತ ನಿರೂಪಿಸುತ್ತಾರೆ. ಅದಲ್ಲದೆ 2000 ರಲ್ಲಿ ಯು.ಜಿ.ಸಿ ಜ್ಯೋತಿಷ್ಯಶಾಸ್ತ್ರವನ್ನು ಒಂದು ವಿಷಯವಾಗಿ ಕಾಲೇಜು ಪಠ್ಯದಲ್ಲಿ ಸೇರಿಸಿರುವುದು ಒಂದು ವಿಷಾದದ ಸಂಗತಿ ಎನ್ನುತ್ತಾರೆ.
ವಿಜ್ಞಾನದ ಪ್ರಗತಿಯಲ್ಲಿ ಮತ್ತೊಂದು ಮುಖ್ಯ ಹೆಜ್ಜೆಯೆಂದರೆ ವಿಜ್ಞಾನ ಪತ್ರಿಕೋದ್ಯಮ. ಇಂದು ಪತ್ರಿಕೋದ್ಯಮದಲ್ಲಿ ವಿಜ್ಞಾನಕ್ಕೆ ಮೀಸಲಿಟ್ಟಿರುವ ಜಾಗ ಕೇವಲ ಶೇ 2.10 ರಿಂದ ಶೇ 6.56 ಎಂಬುದು ವಿಷಾದಕರ ಸಂಗತಿ. ಒಂದು ವಿಜ್ಞಾನ ಸಂಕಿರಣದ ಅಥವಾ ಸಮ್ಮೇಳನದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ ನಾವೇ ಅದರ ಸಾರಾಂಶವನ್ನು ಬರೆದುಕೊಡಬೇಕಾದ ಅನಿವಾರ್ಯತೆಯನ್ನು, ವಿಪರ್ಯಾಸವನ್ನು ನಾರ್ಳಿಕರ್ ವಿವರಿಸುತ್ತಾರೆ. ಹಾಗೆಯೇ, “Science Journalism does not mean only simplifying science and explaining it to the layman. It is not supposed to be a pedagogical exercise……role of science journalism is to educate people about future prospects so that they are prepared for them and can take wise and far-reaching decisions now”. ಎನ್ನುವ ಅವರು ಪತ್ರಿಕೆಯವರ ಭಾದ್ಯತೆಯ ಜೊತೆಗೆ ವಿಜ್ಞಾನಿಗಳ ಭಾದ್ಯತೆಯನ್ನು ಈ ರೀತಿ ವಿವರಿಸುತ್ತಾರೆ, “I feel our scientists can contribute effectively in many ways – by writing articles on the latest developments, by giving interviews on their work and even by helping to answer readers’ queries”. ಇದರೊಂದಿಗೆ, ತಮ್ಮ ಸಂಶೋಧನಾ ಕಾರ್ಯಕ್ರಮಗಳಿಗೆ ಸಾರ್ವಜನಿಕ ಹಣವನ್ನು (Public Funds) ಉಪಯೋಗಿಸುವ ವಿಜ್ಞಾನಿಗಳು, ವಿಜ್ಞಾನವು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಅನಿಸಿಕೆಯ ಅಹಮ್ಮಿನ ದಂತಗೋಪುರಗಳಿಂದ ಹೊರಬಂದು ಸಂಶೋಧನಾ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಹಾಗೂ ಪತ್ರಿಕಾಬಳಗವೂ ಸಹ ಈ ನಿಟ್ಟಿನಲ್ಲಿ ವಿಜ್ಞಾನಿಗಳಿಗೆ ಸಹಾಯಮಾಡಬೇಕು ಎನ್ನುವುದನ್ನು ಎತ್ತಿಹಿಡಿಯುತ್ತಾರೆ.
ಪುಸ್ತಕದ ಕೊನೆಯ ವಿಭಾಗ “ The Future of Science in India” ದಲ್ಲಿ ಮೂಲವಿಜ್ಞಾನವನ್ನು ಅರಿಯಲು ಖಗೋಳವಿಜ್ಞಾನವನ್ನು ಓದಿ ಎನ್ನುತ್ತಾರೆ. ನಕ್ಷತ್ರ ಮಾಪನ(Star Gazing)ದಿಂದ ಖಗೋಳ ವಿದ್ಯಮಾನಗಳನ್ನು ಅರಿಯುವುದರ ಜೊತೆಗೆ ಮುಂದೆ ಮಾನವನ ಬದುಕುಳಿಯುವಿಕೆಗೂ ಸಹಾಯಕವಾಗಿರುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸುತ್ತಾರೆ. ನಾವು ಇಂದು ಅನುಭವಿಸುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನ, ದೂರಸಂವೇದನೆ, ದೂರದರ್ಶನ, ಅಂತರ್ಜಾಲ, ಮೊಬೈಲ್ ಮುಂತಾದ ಅನೂಕೂಲಗಳ ಹಿಂದೆ ನ್ಯೂಟನ್ನಿನ ಗುರುತ್ವಾಕರ್ಷಣ ತತ್ವವಿದೆಯೆಂದರೆ ಆಶ್ಚರ್ಯವಾಗುವುದಲ್ಲವೇ? ಇದರ ಹಿಂದೆ ಖಗೋಳ ವಿಜ್ಞಾನದ ದತ್ತಾಂಶವಿದೆ. ಆದ್ದರಿಂದ ಮೂಲ ವಿಜ್ಞಾನವನ್ನು ಅರಿಯಲು ಖಗೋಳ ವಿಜ್ಞಾನವನ್ನು ಓದಿ, ತಿಳಿಯಿರಿ ಅನ್ನುತ್ತಾರೆ. ಜೊತೆಗೆ ಸಾಮಾನ್ಯ ಜನರಿಗೆ ವಿಜ್ಞಾನವನ್ನು ತಲುಪಿಸಲು ವೈಜ್ಞಾನಿಕ ಕಟ್ಟುಕತೆ(Science Fiction)ಗಳು ಸಹ ಮುಖ್ಯ. ಅವು ವಿಜ್ಞಾನದ ವಿಷಯಗಳನ್ನು ಘಟನೆಗಳು, ಯಂತ್ರಗಳು ಮತ್ತು ಪಾತ್ರಗಳ ಮೂಲಕ ಸರಳವಾಗಿ ಸಾರ್ವಜನಿಕವಾಗಿ ತಲುಪಿಸಬಹುದು ಮತ್ತು ನಾಳಿನ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯ ಬದಲಾವಣೆಗಳಿಗೆ ಹೊಂದಿಕೊಳ್ಳಲು ಕಥೆಗಳ ಮುಖಾಂತರ ಜನರನ್ನು ಮಾನಸಿಕವಾಗಿ ತಯಾರುಮಾಡಬಹುದು ಎಂಬುದನ್ನು ವಿವರಿಸುತ್ತಾರೆ. ಕೊನೆಯ ಅಧ್ಯಾಯದಲ್ಲಿ ವಿಜ್ಞಾನ ಮತ್ತು ಧರ್ಮದ ಸಂಬಂಧವನ್ನು ಕೆಲವು ಪ್ರಶ್ನೋತ್ತರಗಳ ಮೂಲಕ ಸಂಶ್ಲೇಷಿಸುತ್ತಾ ಮತ್ತು ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ, “ In short, Science and Religion have much to gain by being pragmatic and learning from each other. In this context I am reminded of the oft-quoted line from the Ishavasyopanishad:
“Avidyaya mrutyum teertwa vidyayamrutamashnute”
I do not pretend to be a Vedic Scholar, when I interpret this line as saying that avidya (acts and deeds) can be used to transcend death and vidya(spiritual knowledge) can help to digest the nectar of supreme happiness. Science as part of the former has come to regulate our lives and how we act; it needs to be supplemented by the latter, which should come from our deeds.” ಎಂದು ಪುಸ್ತಕವನ್ನು ಮುಗಿಸುತ್ತಾರೆ.
ಈ ಪುಸ್ತಕದ online ಓದಿಗಾಗಿ ಈ ಕೆಳಗೆ ಕಾಣಿಸಿದ ಲಿಂಕ್ ಗಳನ್ನು ಬಳಸಿ: https://archive.org/details/TheScientificEdge/page/n5/mode/2up
ಈ ಪುಸ್ತಕದ PDF ಪ್ರತಿ ಗಾಗಿ ಈ ಕೆಳಗೆ ಕಾಣಿಸಿದ ಲಿಂಕ್ ಗಳನ್ನು ಬಳಸಿ: https://www.ebookmela.co.in/download/the-scientific-edge-j-v-narlikar
ಬೆಂಗಳೂರಿನ ICTS , ತನ್ನ out reach – Coffee with Curiosity ಕಾರ್ಯಕ್ರಮಕ್ಕೆ ಜಯಂತ್ ವಿ. ನಾರ್ಳಿಕರ್ ರವರನ್ನು ಆಹ್ವಾನಿಸಿದ್ದರು. ಅಂದು ಅವರು, “Culture of Science” ವಿಷಯದ ಬಗ್ಗೆ ಮಾತನಾಡಿದ ವಿಡಿಯೋ ನೋಡಲು ಈ ಲಿಂಕ್ ಬಳಸಿ: https://www.youtube.com/watch?v=5NcqC2hn6Kc
ನಮಸ್ಕಾರ
ಪ್ರೊ. ವೆಂಕಟೇಶ ಜಿ.
08.01.2022