You are currently viewing ಜೋಗದ ಹಸಿರಿನ ನಿತ್ಯೋತ್ಸವಕ್ಕೆ ಮಹಾರಾಷ್ಟ್ರದ ಪ್ರೊ.ಶ್ರೀರಂಗಯಾದವ್ ಹುಡುಕಿಕೊಟ್ಟ ಹಬ್ಬರ್ಡ್ ಹುಲ್ಲು Hubbardia heptaneuron

ಜೋಗದ ಹಸಿರಿನ ನಿತ್ಯೋತ್ಸವಕ್ಕೆ ಮಹಾರಾಷ್ಟ್ರದ ಪ್ರೊ.ಶ್ರೀರಂಗಯಾದವ್ ಹುಡುಕಿಕೊಟ್ಟ ಹಬ್ಬರ್ಡ್ ಹುಲ್ಲು Hubbardia heptaneuron

ನವೆಂಬರ್‌ ತಿಂಗಳಿನಲ್ಲಿ ರಾಜ್ಯದ ನೆಲದ ಪ್ರೀತಿಯು ಉಕ್ಕಿ ಸುದ್ದಿಯಾಗುತ್ತದೆ. ಡಿಸೆಂಬರಿನ ಚಳಿಯಲ್ಲಿ ತಣ್ಣಗಾಗುತ್ತದೆ. ಮತ್ತೆದೇ ಪ್ರಖರತೆಯು ಬರುವಂತಾಗಲು ಬೇಸಿಗೆಯ ಬಿಸಿಲನ್ನು ಹಾದು ಮುಂದಿನ ವರ್ಷಕ್ಕೇ ಕಾಯಬೇಕು. ಆದರೆ ನಿಸರ್ಗ ಮಾತ್ರ ನಿತ್ಯವೂ ಆಚರಣೆಯಲ್ಲಿರುತ್ತದೆ. ಅದಕ್ಕೆ ದೇಶ-ಕಾಲದ ಗಡಿಗಳ ಮಿತಿಯಿಲ್ಲ. “ಜೋಗದ ಹಸಿರಿನ ಬೆಳಕು…” ನಿತ್ಯವೂ ಉತ್ಸವದಲ್ಲಿರಲು ಅಲ್ಲಿನ ಸಹಸ್ರಾರು ಸಸ್ಯಸಂಪನ್ಮೂಲದೊಳಗಿನ ಹುಲ್ಲಿನ ಸಂಕುಲವೊಂದು ಮರುಜೀವ ತಳೆದ ಬಗ್ಗೆ ಗಡಿನಾಡಿನ ಪ್ರೊಫೆಸರ್‌ ಎಸ್‌. ಆರ್‌. ಯಾದವ್‌ ಅವರು ಪತ್ತೆಹಚ್ಚಿದ್ದರು. ಅದನ್ನು ಸಂಗ್ರಹಿಸಿ ಮತ್ತದರ ನೆಲೆಯಲ್ಲೆಲ್ಲಾ ಬಿತ್ತಿ ಆ ಸಸ್ಯಸಂಕುಲದ ಪುನರ್‌ ಪ್ರತಿಷ್ಠಾಪನೆಗೆ ಅನುವು ಮಾಡಿದ್ದರು. ಸಸ್ಯವಿಜ್ಞಾನಿಯಾಗಿ ಅವರ ವಿಜ್ಞಾನದ ಪ್ರೀತಿಯು ಗಡಿಯ ಎಲ್ಲೆಗಳನ್ನು ಮೀರಿ ರಾಜ್ಯದ ನೆಲೆಯಲ್ಲಿ ಅರಸಿದ್ದನ್ನು ತಿಳಿಯಲು ರಾಜ್ಯೋತ್ಸವ ಮುಗಿದಿರುವ ನಂತರದ ಈ ತಿಂಗಳು ಸಕಾಲ.  ರಾಜ್ಯೋತ್ಸವದ ಸುದ್ದಿಗಳು ನಮ್ಮ ನೆಲವನ್ನಷ್ಟೇ ಅಲ್ಲದೆ ಗಡಿಗಳಲ್ಲಿ ಹತ್ತು ಹಲವು ಚಾರಿತ್ರಿಕವಾದ ಆತಂಕ, ಅನುಮಾನಗಳ ಅನುರಣನಗಳು ಹೊಸ ರೂಪ ಪಡೆದು ಮಾತುಗಳಾಗುತ್ತವೆ. ಆದರೆ ಇದು ಹೇಳಿ-ಕೇಳಿ “ತೃಣ”ಮಾತ್ರದ ಸಂಗತಿ!  ಅದರಲ್ಲೂ ಅದು ವಿಜ್ಞಾನಿಯೊಬ್ಬರ  ಪರಿಶ್ರಮ ಮತ್ತು ಬದ್ಧತೆಯ ಪ್ರೀತಿಯ ಸಂಗತಿ. ಹಾಗಾಗಿ ಸಾಮಾನ್ಯರ ಮಾತಿಗಿರಲಿ, ಶೈಕ್ಷಣಿಕವಾಗಿ ವಿಶ್ವವಿದ್ಯಾಲಯಗಳಲ್ಲೂ ಚರ್ಚೆಯಾಗಿರುವುದು ಅಪರೂಪ.

       ಇದೆಲ್ಲಾ ತುಂಬಾ ಒಗಟಿನಂತೆ ಅನ್ನಿಸಿದರೆ ಕ್ಷಮಿಸಿ, ಹಾಗೇನಿಲ್ಲ. ವಿಜ್ಞಾನವು ಸದಾ ತೆರೆದುಕೊಳ್ಳುವ ಹಂಬಲದ್ದು, ಸಂಪೂರ್ಣ ಅರಿವಿನ ಭಾಗವಾಗಲು ಎಲ್ಲಾ ಪ್ರಜಾತಾಂತ್ರಿಕ ನಡೆಗಳನ್ನೂ ತನ್ನೊಳಗೇ ಅಳವಡಿಸಿಕೊಂಡಿದೆ. ನಮ್ಮ ನೆರೆಯ ನಾಡು ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನದ ಪ್ರೊಫೆಸರ್‌ ಜೋಗದಲ್ಲಿ ಮಾತ್ರವೇ ನೆಲೆಯಾಗಿದ್ದು ಸಂಪೂರ್ಣ ನಶಿಸಿಯೇ ಹೋಗಿದೆ ಎಂಬ ಸಂಕುಲದ ಪ್ರಭೇದವನ್ನು ಮತ್ತದೇ ಜೋಗದ ಜಲಪಾತದ ಪಾಚಿ ಕಲ್ಲಿನ ಪರಿಸರದಲ್ಲಿ ಮರುಜೀವ ತಳೆದ ಸಂಗತಿಯನ್ನು ಹುಡುಕಿಕೊಟ್ಟಿದ್ದಾರೆ. ಹುಲ್ಲಿನ ಜಾತಿಯದೇ ಆದ ಈ ಹುಲ್ಲನ್ನು ಜೋಗದ ಪರಿಸರದಲ್ಲಿ ಮೊಟ್ಟ ಮೊದಲಬಾರಿಗೆ 1919 ರಷ್ಟು ಹಿಂದೆಯೇ ಪತ್ತೆ ಹಚ್ಚಲಾಗಿತ್ತು. ಅದನ್ನು ನಂತರದ 1951 ರಲ್ಲಿ ವಿವರಿಸಿದ ಐರಿಷ್‌ ಸಸ್ಯವಿಜ್ಞಾನಿ ನಾರ್‌ಮನ್‌ ಬೋರ್‌(Dr Norman Bor) ಅವರು ತಮ್ಮ ಗೆಳೆಯ ಚಾರ್ಲ್ಸ್‌ ಹಬ್ಬರ್ಡ್‌(Charles  Hubbard) ಎಂಬುವರ ಜ್ಞಾಪಕಾರ್ಥ ಆ ಹುಲ್ಲಿಗೆ “ಹಬ್ಬರ್ಡ್‌ ಹುಲ್ಲು ಎಂದು ನಾಮಕರಣ ಮಾಡಿ ಅದರ ಸಂಕುಲಕ್ಕೆ ಹಬ್ಬರ್ಡಿಯಾ ಎಂದು ಕರೆದಿದ್ದರು. ಚಾರ್ಲ್ಸ್‌ ಹಬ್ಬರ್ಡ್‌ ಕೂಡ ಹುಲ್ಲಿನ ಸಂಕುಲಗಳ ಜಗತ್ಪ್ರಸಿದ್ಧ ಸಸ್ಯವಿಜ್ಞಾನಿ.    ಈ ಹಬ್ಬರ್ಡಿಯಾ ಹೆಪ್ಟಾನ್ಯೂರಾನ್‌   (Hubbardia heptaneuron)  ಹುಲ್ಲು ಸಂಕುಲದ ಏಕಮಾತ್ರ ಪ್ರಭೇದ. ಅಲ್ಲದೆ ಅದಕ್ಕೆ ಜೋಗದ ಶರಾವತಿ ಕೊಳ್ಳದ ವಾತಾವರಣ ಮಾತ್ರವೇ ಒಗ್ಗಿತ್ತು. ಶರಾವತಿ ವಿದ್ಯುತ್‌ ಯೋಜನೆಗಾಗಿ ಅಡ್ಡಗಟ್ಟೆ ಕಟ್ಟಲು ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಾಣವಾದಾಗ ಅದು ನಿರ್ನಾಮವಾಗಿತ್ತು. ಅಪಾರ ಜಲರಾಶಿಯು ಸೃಷ್ಟಿಯಾಗಿ ಮತ್ತು ನದಿ ಹರಹಿನ ವ್ಯತ್ಯಯಗಳಿಂದ ಆ ಹುಲ್ಲು ಶಾಶ್ವತವಾಗಿ ಕೊನೆಯನ್ನು ಕಂಡಿದೆ ಎಂದೇ ಜೀವಿವೈವಿಧ್ಯದ ಪ್ರಿಯರು ಆತಂಕಗೊಂಡಿದ್ದರು. ಆದರೆ ನಿಸರ್ಗದ ನಿತ್ಯೋತ್ಸವಕ್ಕೆ ಕೊನೆಯು ಇರಲಾರದೇನೋ? ಅಥವಾ ಹೊಸತೊಂದು ಬಗೆಯ ನಿತ್ಯೋತ್ಸವವು ಅಣಿಯಾಗಿಸಿಕೊಳ್ಳುವುದೂ ನಿಸರ್ಗಕ್ಕೆ ಕಷ್ಟವಾಗಲಾರದೇನೋ? ಇವೆಲ್ಲವನ್ನೂ ವಿಜ್ಞಾನದ ಪಾಠಗಳಾಗಿಸಿ, -ನಮ್ಮ ಮನೆಯ ಬೆಳಕು, ಅದರ ಸಂಕಟ ಮತ್ತು ಅದರ ಪ್ರೀತಿಯ ಮರುಹುಟ್ಟು  – ಎಲ್ಲವನ್ನೂ ನಮಗೇ ಹೇಳಲು ಗಡಿಯ ಪರಿಧಿಯನ್ನು ದಾಟಿದ ಸಸ್ಯವಿಜ್ಞಾನಿಯೊಬ್ಬರ ವಿಜ್ಞಾನದ ಪ್ರೀತಿಯು ಇಲ್ಲಿದೆ.

ಗಡಿಗಳ ಪರಿಧಿಯನ್ನು ದಾಟುವ ವಿಜ್ಞಾನದ ಪ್ರೀತಿ

ಲೇಖನದ ಆರಂಭದಲ್ಲೇ ಪ್ರಸ್ತಾಪಿಸಿದ ಹಾಗೆ ಹಬ್ಬರ್ಡಿಯಾ ಹುಲ್ಲನ್ನು ಮೊದಲು ಪತ್ತೆ ಹಚ್ಚಿ ವಿವರಿಸಿ ನಾಮಕರಣ ಮಾಡಿ ಸಸ್ಯಸಂಕುಲಗಳ ಪಟ್ಟಿಯಲ್ಲಿ ಪ್ರತಿಷ್ಠಾಪಿಸಿದವರೂ ನಮ್ಮ ನೆಲೆಯವರೇನಲ್ಲದ ದೂರದ ಪಶ್ಚಿಮದ ಐರಿಷ್‌ ಸಸ್ಯವಿಜ್ಞಾನಿ ಡಾ. ನಾರ್‌ಮನ್‌ ಬೋರ್‌. ಹುಲ್ಲುಗಳ ವಿವಿಧತೆ ಮತ್ತು ಅವುಗಳ ಸಂಕುಲಗಳ ಜೀವಿಇತಿಹಾಸಗಳಲ್ಲಿ ಅಪಾರ ಆಸಕ್ತರಾಗಿದ್ದವರು. ಭಾರತೀಯ ಸಸ್ಯವಿಜ್ಞಾನಕ್ಕೆ ಸಾಕಷ್ಟು ಕೊಡುಗೆಯನ್ನೂ ನೀಡಿದ್ದಾರೆ. ಅದರಲ್ಲೂ ಅಸ್ಸಾಂ ರಾಜ್ಯದ ಸಸ್ಯಸಂಪತ್ತನ್ನು ಆಳವಾಗಿ ಅಧ್ಯಯನ ಮಾಡಿದ್ದಲ್ಲದೆ, ಭಾರತೀಯ ಸಸ್ಯಗಳ ಅಧ್ಯಯನಕ್ಕೂ ಕೈಪಿಡಿಯೊಂದನ್ನು ರಚಿಸಿದ್ದವರು. ಬ್ರಿಟೀಷರ ಅಲೆಮಾರಿ ಹುಡುಕಾಟಗಳಲ್ಲಿ ಇಂತಹಾ ಸಾವಿರಾರು ಸಂಗತಿಗಳಿವೆ. ಭಾರತೀಯ ಸಸ್ಯಸಂಕುಲಗಳ ವ್ಯವಸ್ಥಿತ ವಿವರಣೆಗಳಲ್ಲಿಯೂ ಸಹಾ ಅವರ ದಾಖಲೆಗಳು ಅಳಿಸಲಾದಷ್ಟು ಉಳಿದಿವೆ. ಕಳೆದ ಶತಮಾನದ ಆದಿಯಲ್ಲಿ ಶರಾವತಿಯ ಕೊಳ್ಳದ ದುರ್ಗಮ ಪ್ರದೇಶದ ಅಲೆದಾಟವನ್ನು ನಡೆಸಿ ಹೊಸತೊಂದು ಜೀವವನ್ನು “ತೃಣ”ಮಾತ್ರದಲಿ ಕಂಡು ಹೆಸರಿಸಿದ್ದು ಗಡಿಯ ಮಿತಿಯನ್ನು ಮೀರಿದ ವಿಜ್ಞಾನದ ಪ್ರೀತಿಯೇ! ನಂತರದ ನಮ್ಮದೇ ಅಭಿವೃದ್ಧಿಯ ಬೆಳವಣಿಗೆಗಳಲ್ಲಿ ದೇಶಾದ್ಯಂತ ಅಣೆಕಟ್ಟುಗಳ ಕಟ್ಟುತ್ತಾ ಶರಾವತಿಯಂತಹ ದುರ್ಗಮ ಕೊಳ್ಳವನ್ನೂ ಬಾಚಿಕೊಂಡಿದ್ದು ಇತಿಹಾಸ. ಆಗ ಲಿಂಗನಮಕ್ಕಿ ಜಲಾಶಯದಿಂದ ಆವೃತವಾದ ಅಪಾರ ಜಲರಾಶಿ ಹಲವಾರು ಜೀವಿಗಳನ್ನು ನಿರ್ಣಾಮ ಮಾಡಿದ್ದು ನಿಜ. ಅದರಲ್ಲೊಂದು “ಹಬ್ಬರ್ಡ್‌ ಹುಲ್ಲು”! ಹೆಚ್ಚೂ ಕಡಿಮೆ ಶಾಶ್ವತವಾಗಿಯೇ ಕೊನೆಯಾಗಿತ್ತು! ಇದನ್ನು ಅಂತಹದೇ ಪರಿಸರವೊಂದರಲ್ಲಿ ಪತ್ತೆ ಹಚ್ಚಿ, ಮತ್ತೆ ಅಂತಹಾ ಹಲವು ಪರಿಸರಗಳಿಗೆ ಪರಿಚಯಿಸಿ, ಮರುಹುಟ್ಟಿಗೆ ಕಾರಣರಾದವರು ಮಹಾರಾಷ್ಟ್ರದ ಗಡಿನಾಡಿನ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಪ್ರೊಫೆಸರ್‌ ಶ್ರೀರಂಗಯಾದವ್‌(Prof. Shrirang Ramachandra Yadav of Shivaji University, Kolhapur). ಎಸ್‌. ಆರ್‌. ಯಾದವ್‌ ಎಂದೇ ಭಾರತೀಯ ಸಸ್ಯಲೋಕದಲ್ಲಿ ಪರಿಚಿತರಾದ ಶ್ರೀರಂಗರು, ನಮ್ಮ ಜೋಗದ ಹುಲ್ಲಿನ ನಿತ್ಯೋತ್ಸವ ಮರುಹುಟ್ಟಿಗೆ ವರ್ಷಾನುಗಟ್ಟಲೆ ಸಂಶೋಧನೆ ಕೈಗೊಂಡು ಆಗಾಗ್ಗೆ ಗಡಿ ದಾಟಿ, ವಿದ್ಯಾರ್ಥಿಗಳೊಂದಿಗೆ ನಮ್ಮ ನೆಲದ ದುರ್ಗಮ ಕಾಡುಗಳಲ್ಲಿ ಅಲೆದಾಡಿ ಕಾರಣರಾಗಿದ್ದಾರೆ. ಹಸಿರ ಹುಲ್ಲಿನ ನಿತ್ಯೋತ್ಸವಕ್ಕೆ ಹೊಸತೊಂದು ಮೆರುಗನ್ನು ಕಟ್ಟಿಕೊಟ್ಟಿದ್ದಾರೆ.

       ಹಬ್ಬರ್ಡಿಯಾ ಹುಲ್ಲು ನಾಮಕರಣಗೊಂಡು, ವಿವರಣೆಯಾದ ನಂತರದ ದಿನಗಳಲ್ಲಿ ಜಲಾಶಯದಿಂದಾಗಿ ಸುಮಾರು ಆರೆಂಟು ದಶಕಗಳ ಕಾಲ ಶರಾವತಿ ಕೊಳ್ಳದಿಂದ ಕಾಣೆಯಾಗಿತ್ತು. ಅಲ್ಲಿಗೆ ಮಾತ್ರವೇ ಸೀಮಿತವಾಗಿದ್ದ  ಹುಲ್ಲು ಮತ್ತೆಲ್ಲಿಯೂ, ಅಂದರೆ ಅಂತಹದೇ ಪಾಚಿಕಲ್ಲಿನ ವಾತಾವರಣವನ್ನುಳ್ಳ ಪಶ್ಚಿಮ ಘಟ್ಟಗಳ ನೆಲದಲ್ಲಿ ಎಲ್ಲೂ ಪತ್ತೆಯಾಗಿರಲಿಲ್ಲ. ಅದರ ನಿರಂತರ ಹುಡುಕಾಟದಲ್ಲಿ ಮಂಚೂಣಿಯಲ್ಲಿದ್ದ ಆಸಕ್ತರಲ್ಲಿ ಪ್ರೊ. ಶ್ರೀರಂಗರು ಅಗ್ರಗಣ್ಯರು. ಶಿವಾಜಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗವನ್ನು ಬೆಳೆಸಿದವರಲ್ಲಿ ಶ್ರೀರಂಗರದು ದೊಡ್ಡ ಹೆಸರು. ಸಸ್ಯವಿಜ್ಞಾನದಲ್ಲಿ  ಸಸ್ಯವರ್ಗೀಕರಣವಿಜ್ಞಾನ (Taxonomy- ತಮಾಷೆಗೆ ಮತ್ತು ಕಷ್ಟವನ್ನು ಸೇರಿಸಿ ಹೇಳುವ Tax-On-Me) ತೀರಾ ಕಷ್ಟವಾದ ಮತ್ತು ಕಡಿಮೆ ಆಸಕ್ತರನ್ನು ಆಕರ್ಷಿಸಿಸುವ ವಿಭಾಗ. ಅಂತಹದರಲ್ಲಿ ಆಸಕ್ತರಾದವರು ಪ್ರೊ.ಶ್ರೀರಂಗ ಯಾದವ್‌.

       ಪ್ರೊ. S.R. ಯಾದವ್‌, 2006ರಲ್ಲಿ ಭಾರತ ಸರ್ಕಾರದ ನೆರವಿನೊಂದಿಗೆ ಇಂತಹಾ ಅಳಿವಾದ ಆದರೂ ಇರಬಹುದಾದ ಸಸ್ಯಪ್ರಭೇದಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. ಆಗ ಆಕಸ್ಮಿಕವಾಗಿ ಕೊಲ್ಹಾಪುರದ ಸಮೀಪದ “ತಿಲ್ಲರಿ ಘಟ್ಟ” ಪ್ರದೇಶದಲ್ಲಿ ಹಬ್ಬರ್ಡ್‌ಹುಲ್ಲು ಪತ್ತೆಯಾಗಿತ್ತು. ಅದೂ ಒಂದು ತಂಪಾದ ನೆರಳನ್ನಾಶ್ರಯಿಸಿದ ಕೇವಲ ಒಂದು ಚದರ ಮೀಟರ್‌ ವಿಸ್ತೀರ್ಣದ ಕಲ್ಲುಹಾಸಿನ ಪ್ರದೇಶವಾಗಿತ್ತು. ಸುತ್ತ-ಮುತ್ತಲಿನ ಅಂಹತದೇ ಪ್ರದೇಶದ ಎಲ್ಲಿಯೂ ಅದರ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಮೊದಲ ನೋಟಕ್ಕೆ ಇದು ಅದೇ ಎಂಬಂತೆ ಕಂಡರೂ ವಿಜ್ಞಾನ ಜಗತ್ತು ಅಳಿದೇ ಹೋಗಿದೆ ಎಂದು ಶಾಶ್ವತವಾಗಿ ನಂಬಿಕೊಂಡ ಸತ್ಯವನ್ನು ಬಿಡಿಸಿ ಹೇಳುವ ಕಷ್ಟ ಪ್ರೊ. ಯಾದವ್‌ ಅವರಿಗಿತ್ತು. ಅದಕ್ಕಾಗಿ ಅವರು ಸರಿ ಸುಮಾರು ಒಂದೂವರೆ ವರ್ಷ ಕಾಲ ಆ ಹುಲ್ಲಿನ ಪುಟ್ಟ-ಪುಟ್ಟ ವಿವರಣೆಗಳನ್ನೆಲ್ಲಾ ಒರೆಹಚ್ಚಿ ನೋಡಿದ್ದರು. ಅದರ ಆವಾಸ ಮತ್ತಿತರ ಸಸ್ಯವಿವರಣೆಯ ಎಲ್ಲ ಸಂಗತಿಗಳನ್ನೂ ಮೊರೆ ಹೋದರು. ಬೀಜಗಳ ಮೊಳಕೆಯ ವಿಧಾನ, ಕುಡಿಯೊಡೆವ ಬಗೆ ಹೀಗೆ! ಅಂತಿಮವಾಗಿ ಅದು ಅಳಿದುಹೋದದ್ದೆಂದು ನಂಬಿದ ಹುಲ್ಲು ಎಂದು ಪತ್ತೆಯಾದ ಮೇಲೆ ಅದರ ಬೀಜಗಳನ್ನು ಜೋಪಾನವಾಗಿ ಸಂಗ್ರಹಿಸಿ ಹೆಚ್ಚಿಸಿ ಶಿವಮೊಗ್ಗಾ ಜಿಲ್ಲೆಯ ಸಹ್ಯಾದ್ರಿಯ ಬೆಟ್ಟಗುಡ್ಡಗಳಿಂದ ಆರಂಭಿಸಿ ಕೊಲ್ಹಾಪುರ ದಾಟಿ, ಪುಣೆ ಹಾಯ್ದು ಮುಂಬಯಿಯವರೆಗೂ ೧೦೮ ಸ್ಥಳಗಳಲ್ಲಿ ಹಬ್ಬರ್ಡ್‌ ಹುಲ್ಲಿನ ಬೀಜವನ್ನು ಬಿತ್ತಿದ್ದರು. ಜೋಗದಿಂದ ಮುಂಬಯಿಯ ಕಡೆಗೆ ಪಶ್ಚಿಮ ಘಟ್ಟಗಳಲ್ಲಿ ಸುಮಾರು 677 ಕಿ.ಮೀ ಉದ್ದಕ್ಕೂ ಒಂದು ನೂರಾ ಎಂಟು ಕಡೆ ಬಿತ್ತಿ ಸುಮಾರು 5000 ಹುಲ್ಲಿನ ಗಿಡಗಳನ್ನು ನೆಲೆಗೊಳಿಸಿದ್ದರು.

       ಹೀಗೆ ಹೊಸದಾಗಿ ನೆಲೆಗೊಂಡ ಹುಲ್ಲಿನ ಮರುಎಣಿಕೆ, ಅವುಗಳ ಪ್ರತಿಷ್ಠಾಪನೆಯ ಕಷ್ಟ-ನಷ್ಟಗಳ ಪನರ್‌ ಪರಿಶೀಲನೆಯ ಶೋಧದ ಅಲೆದಾಟದಲ್ಲಿ ಜೋಗ ಜಲಪಾತದ ಪ್ರಪಾತದ ಆಸುಪಾಸುನಲ್ಲಿ ಮತ್ತೊಂದು ಅಚ್ಚರಿಯು ಕಾಯ್ದಿತ್ತು. ಅವರ ತಂಡವು ಬೀಜಗಳನ್ನು ಬಿತ್ತಿದ ಸ್ಥಳಗಳಲ್ಲಿ ಹೊರತಾದ ಪ್ರದೇಶದಲ್ಲಿ ಸೊಂಪಾಗಿ ಬೆಳೆದ ಹಬ್ಬರ್ಡ್‌ಹುಲ್ಲು ಮತ್ತೆ ಸಿಕ್ಕಿತ್ತು. ಈ ಹುಲ್ಲು ನಿಜಕ್ಕೂ ಕಳೆದ ಒಂಭತ್ತು ದಶಕಗಳಿಂದ ಮರೆಯಾಗಿದ್ದ ಸಸ್ಯವಾಗಿತ್ತು. ಕೊಲ್ಹಾಪುರ ಜಿಲ್ಲೆಯ ತಿಲ್ಲರಿಯಲ್ಲಿ ಮರು ಪತ್ತೆಯಾಗಿ ನೂರೆಂಟು ಸ್ಥಳಗಳಿಗೆ ಶ್ರೀರಂಗರಿಂದಾಗಿಯೇ ನೆಲೆಕಂಡ ಸಸ್ಯಕ್ಕೂ ಈಗ ಹೊಸತಾಗಿ ಸಿಕ್ಕ “ಹಳೆಯ ಸಸ್ಯ“ಕ್ಕೂ ಕೆಲವು ವ್ಯತ್ಯಾಸಗಳಿದ್ದವು.  ಕೊಲ್ಹಾಪುರದ ಬಳಿಯ ಹಬ್ಬರ್ಡ್‌ಹುಲ್ಲು ರೋಮಗಳನ್ನೊಳಗೊಂಡ ಸಸ್ಯವಾಗಿತ್ತು. ಮತ್ತೆ ಸಿಕ್ಕ ಮೂಲ ಹಬ್ಬರ್ಡ್‌ಸಸ್ಯವು ರೋಮರಹಿತವಾಗಿತ್ತು. ಇವಿಷ್ಟನ್ನು ಹೊರತು ಪಡಿಸಿದರೆ ಉಳಿದಂತೆ ಒಂದೆ ಬಗೆಯ ಸಸ್ಯಗಾಳಗಿದ್ದವು. ಹೀಗೆ ಶತಮಾನದ ಹಿಂದಿನ ಸಸ್ಯದ ಹುಡುಕುತ್ತಾ, ಬಹುಷಃ ಅದರ ವಿಕಾಸದ ಫಲವೊಂದನ್ನು ಪತ್ತೆ ಹಚ್ಚಿ ಮತ್ತದೇ ಸಸ್ಯವನ್ನೂ ಮರುಪತ್ತೆ ಮಾಡಿದ್ದು ಪ್ರೊ. ಶ್ರೀರಂಗ ಯಾದವ್‌ ಅವರ ಗಡಿಯ ಪರಿಧಿಯನ್ನೂ ದಾಟಿದ ಸಸ್ಯವಿಜ್ಞಾನದ ಪ್ರೀತಿ.

       ಪ್ರೊ. ಎಸ್..‌ ಆರ್‌. ಯಾದವ್‌ ಅವರು ಇನ್ಸಾ (Indian National Science Academy) ಫೆಲೊ ಮತ್ತು ಭಾರತ ಸರ್ಕಾರ ಪರಿಸರ ವಿಜ್ಞಾನ ಮತ್ತು ಅರಣ್ಯ ಇಲಾಖೆಯಿಂದ ಜಾನಕಿ ಅಮ್ಮಾಳ್‌ ಪ್ರಶಸ್ತಿಯನ್ನೂ ಅಲ್ಲದೆ ಇತರೇ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಸಸ್ಯಪ್ರಭೇದಗಳನ್ನು ಗುರುತಿಸಿ ಹೆಸರಿಸಿದ್ದಾರೆ. ಅವರ ಶಿಷ್ಯರು ಆರು ಸಸ್ಯಪ್ರಭೇದಗಳಿಗೆ ಅವರ ಹೆಸರಿಂದ ಕರೆದು ಗೌರವಿಸಿದ್ದಾರೆ. ಪ್ರೊ. ಯಾದವ್‌ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ಇಂದಿಗೂ ಜಗದೀಶ್‌ ದಳವಿ ಎಂಬವರ ವಿದ್ಯಾರ್ಥಿಯು ಬಾಗಿಲಕೋಟೆಯ ಜಿಲ್ಲೆಯ ಸಸ್ಯವೈವಿದ್ಯತೆಯ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹೀಗೆ ಕನ್ನಡದ ನೆಲದ ಪ್ರೀತಿಯಿಂದ ಸಸ್ಯಸಂಕುಲಗಳನ್ನು ಅರಸುತ್ತಾ ಗಡಿನಾಡಿನಲ್ಲಿ ಜೀವಪ್ರೀತಿಯ ಸೇತುವಾಗಿದ್ದಾರೆ. ಪ್ರೊ.ಯಾದವ್‌ ಅವರು ಗೋಕಾಕದ ಜಲಪಾತದ ಮರಳುಕಲ್ಲಿನ ಆವಾಸದಲ್ಲೂ ಮೃದುವಾದ ಕಳ್ಳಿ ಜಾತಿಯ ಸಸ್ಯವೊಂದನ್ನು ಕೆಲವೇ ವರ್ಷಗಳ ಹಿಂದೆಯೆ ಸಂಶೋಧಿಸಿದ್ದಾರೆ. ಗೋಕಾದದ ಹೆಸರನ್ನೇ ಹೊತ್ತಿರುವ ಕಳ್ಳಿಯನ್ನು ಈ ಕೆಳಗಿನ ಚಿತ್ರದಲ್ಲಿ ಗಮನಿಸಬಹುದು.

       ಪ್ರೊ. ಯಾದವ್‌ ಅವರು ಇಂಗ್ಲೇಂಡಿನ ಕ್ಯೂ ಗಾರ್ಡ್‌ನ್‌ ಸಂಶೋಧನಾ ಪತ್ರಿಕೆಯನ್ನೂ ಸೇರಿದಂತೆ ಅನೇಕ ಜಗದ್ವಿಖ್ಯಾತ ಸಸ್ಯ ವರ್ಗೀಕರಣ ಪತ್ರಿಕೆಗಳಲ್ಲಿ ತಾವು ಹೊಸತಾಗಿ ಸಂಶೋಧಿಸಿ ವಿವರಿಸಿದ ಸಸ್ಯಗಳನ್ನು ಕುರಿತು ಪ್ರಕಟಿಸಿದ್ದಾರೆ. ಕನ್ನಡದ ಓದಿಗೆ ಆಪ್ತವಾಗಬಹುದಾದ ಬಾಗಲಕೋಟೆಯ ಬಾದಾಮಿ ಬೆಟ್ಟ-ಗುಡ್ಡಗಳ ವಿವರವಾದ ಸಸ್ಯ ಸಂಪತ್ತಿನ ಅಧ್ಯಯನವನ್ನು ಮಾರ್ಗದರ್ಶನ ಮಾಡಿ ಅಲ್ಲಿ 550ಕ್ಕೂ ಹೆಚ್ಚು ಪ್ರಭೇದಗಳ ಸಸ್ಯಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಎರಡು ಸಸ್ಯಗಳು ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಅವುಗಳ ಬಗ್ಗೆ ಹಿಂದಿನ ಸಸ್ಯಯಾನದಲ್ಲಿ ಓದಿರುತ್ತೀರಿ. ಪೋರ್ಚುಲಾಕಾ ಬಾದಾಮಿಕ (Portulaca badamica)  ಮತ್ತು  ಪೋರ್ಚುಲಾಕಾ ಲಕ್ಷ್ಮಿನರಸಿಂಹನೈನಾ (Portulaca lakshminarasimhaniana)  ಆ ಎರಡು ಸಸ್ಯಗಳು. ಒಟ್ಟು ಬಾದಾಮಿಯ ಬೆಟ್ಟಗಳ ಸಸ್ಯಸಂಪನ್ಮೂಲವನ್ನು ಸರಿ ಸಮಾರು 99 ಸಸ್ಯಕುಟುಂಬದ 359 ಸಂಕುಲಗಳಾಗಿ ಗುರುತಿಸಿದ್ದಾರೆ. ಈ ಬೆಟ್ಟ-ಗುಡ್ಡಗಳ ಒಣಅರಣ್ಯ ಪ್ರದೇಶವು ನೂರಾರು ಉಪಯುಕ್ತ ಸಸ್ಯಗಳ ಆಗರವಾಗಿದೆ. ಆದರೆ ಸ್ಥಳೀಯರ ಅರೆ ತಿಳಿವಳಿಕೆಯಿಂದ, ಪ್ರವಾಸಿಗಳ ಒತ್ತಡದಿಂದ, ಬೇಕಾಬಿಟ್ಟಿಯಾಗಿ ದನ-ಕರುಗಳ ಮೇಯಿಸುವುದರಿಂದ ಮುಂತಾಗಿ ಆತಂಕದಲ್ಲಿದ್ದು ಸಂರಕ್ಷಣೆಯ ಜವಾಬ್ದಾರಿಯನ್ನು ಎಚ್ಚರಿಸಿದ್ದಾರೆ.

       ಮತ್ತೆ ಜೋಗದ ಹಸಿರಿನ ಕಥನಕ್ಕೆ ಬರೋಣ. ಜೋಗದಲ್ಲಿ ಮಾತ್ರವೇ ಸೀಮಿತವಾಗಿದ್ದ ಹಬ್ಬರ್ಡ್‌ ಹುಲ್ಲು ಕಳೆದ 2015ರಲ್ಲಿ ಭಾರತೀಯ ಸಸ್ಯ ಸರ್ವೇಕ್ಷಣೆಯ ಅಧ್ಯಯನಕಾರರಿಗೆ ಉಡುಪಿ ಜಿಲ್ಲೆಯಲ್ಲಿ ಕಂಡುಬಂದಿದೆ. ಕೊಲ್ಲೂರಿನ ಮೂಕಾಂಬಿಕಾ ಘಟ್ಟ ಪ್ರದೇಶದಲ್ಲಿ ಅದನ್ನು ಕಂಡು ಅದರ ವರದಿಯನ್ನೂ ಪ್ರಕಟಿಸಿದ್ದಾರೆ. ಅದನ್ನೂ ಇಲ್ಲಿ ನೋಡಬಹುದಾಗಿದೆ. ನಿತ್ಯೋತ್ಸವ ಎಂದರೆ ಇದೇ ಅಲ್ಲವೇ? ನಿಸರ್ಗವು ತನ್ನನ್ನು ತಾನೇ ಮರು ಸೃಷ್ಟಿ ಮಾಡಿಕೊಂಡು ಹೊಸ ಹೊಸ ನೆಲೆಯನ್ನು ತನ್ನ ನೆಲೆಯ ಗಡಿಗಳಾಚೆಯೂ ವಿಸ್ತರಿಸುತ್ತಾ ಆಚರಿಸುತ್ತಲಿದೆ.

       ಈ ಹಬ್ಬರ್ಡ್‌ ಹುಲ್ಲನ್ನು ಮೊದಲಬಾರಿಗೆ(1919) ಗುರುತಿಸಿ ಈ ವರ್ಷಕ್ಕೆ (2019)ಒಂದು ನೂರು ವರ್ಷಗಳಾದವು. ಒಂದು ಶತಮಾನದಲ್ಲಿ ನಮ್ಮದೇ ನೆಲದ ಒಂದು ಪುಟ್ಟ ಹುಲ್ಲಿನ ಚರಿತೆಯು ಇಂತಹ ಆಗುಹೋಗುಗಳ ಕಂಡು ಮರು ಜೀವನ ಪಡೆಯಲು ಇಷ್ಟೆಲ್ಲಾ ನಡೆದಿರುವ ಸಂಗತಿಯನ್ನು ಅರಿಯಬೇಕಾಗಿದೆ. ಇದೇ ಕಾಲಾವಧಿಯಲ್ಲಿಯೇ ಇಡೀ ರಾಷ್ಟ್ರವೂ ಅದೆಷ್ಟು ಇಂತಹ ಜೀವಿಸಂಕಟಗಳನ್ನು ಕಂಡಿದೆಯೋ ಎಲ್ಲವನ್ನೂ ಅರಿಯುವ ಆತಂಕವನ್ನು ಊಹಿಸಿದರೆ ಇದೀಗ ಅನುಭವಕ್ಕೆ ಬರುತ್ತಿರುವ ಪರಿಸರದ ಬದಲಾವಣೆಯ ದಿನಗಳಲ್ಲಿ ಅದೊಂದು ಬೃಹತ್‌ ದರ್ಶನವಾದೀತು. ಕಡೆಯ ಪಕ್ಷ ಅದರ ಜವಾಬ್ದಾರಿಯ ಪ್ರೀತಿಯಂತೂ ಸಸ್ಯಯಾನದ ಪಯಣಿಗರೆಲ್ಲರಿಗೂ ಇರಲಿ ಎಂಬ ಆಶಯದೊಂದಿಗೆ ನನ್ನ ಓದಿಗೆ ಸಿಕ್ಕ ಪುಟ್ಟ ಹುಲ್ಲಿನ ಕಥೆಯನ್ನು ನಿಲ್ಲಿಸುತ್ತೇನೆ. (ಪ್ರೊ. ಎಸ್.‌ ಆರ್‌. ಯಾದವ್‌ ಅವರ ಕರುನಾಡಿನ ಸಸ್ಯಶೋಧನೆಯು ಈ ಪ್ರಬಂಧಕ್ಕೆ ದೊಡ್ಡ ಪ್ರೇರಣೆ – The biggest inspiration for this essay is Prof. S.R. Yadav’s affection to Botanical insights of Karnataka)

ನಮಸ್ಕಾರ

ಡಾ. ಟಿ.ಎಸ್. ಚನ್ನೇಶ್‌

This Post Has 2 Comments

  1. Ramesh Kumar

    Sir, P Thank you very much for sharing wealth of knowledge and information.
    This is one way of reaching unreached.

  2. Dr Rudresh Adarangi

    Congrtats to Pro S R Yadav. and also very thanks to Dr T S Channesh. This story is very interesting about the habbordia. we expect more more story from you sir.

Leave a Reply