You are currently viewing ಜೀನ್‌ ಎಡಿಟಿಂಗ್‌- ಜೀನ್‌ಗಳ ತೇಪೆ ಹಾಕುವ- ವಿಧಾನ

ಜೀನ್‌ ಎಡಿಟಿಂಗ್‌- ಜೀನ್‌ಗಳ ತೇಪೆ ಹಾಕುವ- ವಿಧಾನ

ಜೆನೆಟಿಕ್‌ ಕತ್ತರಿ: ಜೀವನಕ್ಕೊಂದು ಹೊಸ ಭಾಷ್ಯವನ್ನು ಬರೆಯುವ ತಂತ್ರ

ಇಬ್ಬರು ಹೆಣ್ಣುಮಕ್ಕಳು ಒಂದು ಕಡೆ ಸೇರಿದ್ದಾರೆಂದರೆ, ಬರೀ ಮಾತು ಇಲ್ಲವೇ ಜಗಳ! ಎರಡೇ ತಾನೇ? ಎನ್ನುವ ಮಾನವಕುಲದ ಇತಿಹಾಸದ ಉದ್ದಕ್ಕೂ ಆಡುತ್ತಿದ್ದ ಮಾತಿಗೆ ಇನ್ನು ಮುಂದೆ ಕತ್ತರಿ. ಹೌದು, ನಿಜಕ್ಕೂ (ಜೆನೆಟಿಕ್‌) ಕತ್ತರಿಯನ್ನೇ ಅನ್ವೇಷಿಸಿ ವಿಜ್ಞಾನದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನೇ ನಿರ್ಮಿಸಿ -ಇಬ್ಬರು ಹೆಣ್ಣುಮಕ್ಕಳು, ವಿಜ್ಞಾನದ ಶಿಖರ ಪ್ರಾಯವಾದ ನೊಬೆಲ್‌ ಬಹುಮಾನವನ್ನೇ ಜೊತೆಯಾಗಿಯೇ ಪಡೆದಿದ್ದಾರೆ.

ಸುಂದರವಾದ ಬದುಕಿನಲ್ಲಿ ಹೆಣ್ಣನ್ನು ಗುರುತಿಸುವ ಸಂಸ್ಕೃತಿ ಹೊಸತೇನಲ್ಲ! ಆದರೆ ಬದುಕಿಗೊಂದು ಹೊಸ ಸೌಂದರ್ಯವನ್ನೇ ತಂದುಕೊಡಲು ಹೆಣ್ಣುಮಕ್ಕಳನ್ನು ಗುರುತಿಸುವುದು ಖಂಡಿತಾ ಹೊಸತು. ಬದುಕಿನ ಸಂಕೇತವನ್ನೇ ಬದಲಿಸಿ ಹೊಸ ಮೌಲ್ಯ ತಂದುಕೊಟ್ಟ ಅನ್ವೇ಼ಷಣೆಯ ಕಥೆಯಿದು. ಇದು ಈ ವರ್ಷ 2020ರ ರಸಾಯನ ವಿಜ್ಞಾನ ನೊಬೆಲ್‌ ಬಹುಮಾನವನ್ನು ಮಡಿಲಿಗಿಳಿಸಿಕೊಂಡ ಇಬ್ಬರು ಹೆಣ್ಣುಮಕ್ಕಳ ಕಥೆ. ಒಬ್ಬರನ್ನೊಬ್ಬರು ಹುಡುಕಿಕೊಂಡು ಭೇಟಿಯಾಗಿ ಮುಂದೆ ದಶಕದ ಕಾಲ ಹೊತ್ತು-ಗೊತ್ತಿಲ್ಲದಂತೆ ಮಾತು-ಕತೆಯಾಡಿ ಜಗತ್ತಿನ ಜೀವರಾಶಿಯ ಜೀವನವನ್ನು ತಿದ್ದಬಲ್ಲ ತಂತ್ರವನ್ನು ಅನ್ವೇಷಿಸಿದ ಸಂಗತಿ.

ಇದೇನಿದು, ಇಬ್ಬರು ಸೇರಿ ಇಡೀ ಜೀವರಾಶಿಯ ಬದುಕನ್ನೇ ತಿದ್ದುವುದೆಂದರೇನು? ಎಲ್ಲಾದರೂ ಉಂಟೇ? ಎಂದು ಹುಬ್ಬೇರಿಸುವ ಅವಶ್ಯಕತೆಯಿಲ್ಲ. ಅದನ್ನೇ ಹೀಗೆ ಹೇಳಿದರೆ, ಹಾಗಾದರೆ ಆಗಲಿ, ಎನ್ನುವ ನಿಟ್ಟುಸಿರು ಬಿಡುವ ವಿಚಾರವಿದು. ಏನೆಂದರೆ, “ಅಯ್ಯೋ ಈ ಕಾಯಿಲೆಗೆ ಏನೂ ಮಾಡೊಕ್ಕಾಗೊಲ್ಲ, ಇದೆಲ್ಲಾ ಜೆನೆಟಿಕ್ಕೂ! ಇಂತಹದ್ದಕ್ಕೆ ಔಷಧಿಯೇ ಇಲ್ಲ. ಇದ್ದೊಷ್ಟು ದಿನ ಸುಖವಾಗಿ ನೋಡಿಕೊಳ್ಳಿ, ಆಮೇಲೆ ಹಣೆಬರಹವಿದ್ದಂಗೆ ಆಗುತ್ತೆ”, ಎನ್ನುವ ಮಾತಿಗೆ ಬದಲಾಗಿ “ಇಲ್ಲ, ಇದೂ ಸಾಧ್ಯ! ಇದನ್ನೂ ಜೀನುಗಳಲ್ಲೇ ತಿದ್ದಿಯೂ ಸರಿಪಡಿಸಬಹುದು” ಎಂಬ ಭಿನ್ನವಾದ ವರಸೆಯ ಮಾತಾಡಲೂ ಆಗುವಂತಹಾ ಅನ್ವೇಷಣೆ. ಕಣ್ಣಿಗೆ ಕಾಣುವ ಈ ದಡೂತಿ ದೇಹವನ್ನು ಕಣ್ಣಿಗೆ ಕಾಣದ ಅತೀ ಸಂಕೀರ್ಣವೂ, ಸೂಕ್ಷ್ಮವೂ ಆದ ಪುಟ್ಟ ಪುಟ್ಟ ಕೋಶಗಳ ಒಳಗೆ ಇನ್ನೂ ಚಿಕ್ಕದಾಗ ವಸ್ತುಗಳ ಮತ್ತಷ್ಟು ಸಂಕಿರ್ಣವಾದ ರಾಚನಿಕ ವಿನ್ಯಾಸದಲ್ಲೇ ತಿದ್ದಿ, ಸರಿಪಡಿಸಬಹುದಾದ ಸಂಗತಿಯ ವಿವರಗಳ ಕಥೆಯಿದು. ನಿಮ್ಮೊಳಗೇ ನೀವು ಊಹಿಸಿಕೊಂಡು ಸೂಕ್ಷ್ಮಾತಿಸೂಕ್ಷ್ಮ ಸಂಗತಿಯನ್ನು ಪರಿಭಾವಿಸುವ ಅಪಾರ ಬೆರಗಿನ ಜೀವತಂತ್ರಜ್ಞಾನದ ಮಹತ್ವವಿದು. ಸಿಂಪಲ್ಲಾಗಿ, ಜೀವಿಕೋಶದ ಒಳಗಿನ ಡಿ.ಎನ್‌.ಎಯನ್ನೇ ಅವುಗಳ ಸಂಕೇತಗಳನ್ನು ಬದಲಿಸಿ, ಆ ಮೂಲಕ ಜೀವಿ ವರ್ತನೆಯನ್ನೇ ತಿದ್ದುವುದು ಎಂದು ಹೇಳಬಹುದು. ಆದರೂ, ಅವೆಲ್ಲವುಗಳ ವಿವರಗಳಿಗೆ ಅಪಾರವಾದ ಕಲ್ಪನೆ ಹಾಗೂ ಅವು ಸಾಧುವಾಗುವುದರ ಬೌದ್ಧಿಕ ತಿಳಿವಳಿಕೆಯು ಬೇಕು. ಹಾಗಂತ ಅರ್ಥವೇ ಆಗುವುದಿಲ್ಲ, ಹೇಳುವುದನ್ನಾದರೂ ಏನು? ಎಂದು ಕೈಚೆಲ್ಲುವುದೂ ಅಲ್ಲ. ಕೆಲವೊಂದು ವಿವರಣೆಗಳಿಂದ, ರೂಪಕಗಳಿಂದ ಹೀಗೆ ಮುಂದುವರೆಯಬಹುದು.

ಇದೊಂದು ವಿಶೇಷವಾದ ಸಂದರ್ಭ ಕಾರಣ ಜೀವಿಗಳ ಮೂಲ ಆನುವಂಶಿಕ ವರ್ತನೆಯನ್ನೇ ತಿದ್ದುವ, ಸರಿಪಡಿಸಿ ಹೊಂದಿಸಿಕೊಳ್ಳುವ ಅತ್ಯದ್ಭುತವಾದ ಅನ್ವೇಷಣೆ. ರಸಾಯನಿಕ ವಿಜ್ಞಾನದ ಮಹತ್ವವೇ ಅದು. ವಸ್ತುಗಳ ವರ್ತನೆಯನ್ನು -ಜೀವಿಯಿರಲಿ, ನಿರ್ಜೀವಿಯಿರಲಿ- ನಿರ್ಮಿತಿಯನ್ನು ತಿಳಿಸುವುದೇ ಅದು. ರಸಾಯನಿಕತೆಯ ಸಂಗತಿಗಳೇ ಹಾಗೆ. ಇದನ್ನು ತುಸುವಾದರೂ ತಿಳಿಯಲು, ನಮಗೆಲ್ಲಾ ಗೋಚರವಾಗುವ ದೊಡ್ಡ ದೊಡ್ಡ ವಸ್ತುಗಳಿಂದ, ಕಣ್ಣಿಗೇ ಕಾಣದ ಪುಟ್ಟ-ಪುಟ್ಟ ಕೋಶಗಳ ಕಲ್ಪನಾಲೋಕದ ಒಳಗೆ ಹೋಗಬೇಕು. ಇಡೀ  ಮಾನವಕುಲ -ನಾನೂ, ನೀವೆಲ್ಲರೂ-  ಪುಟ್ಟ ಪುಟ್ಟ ಕಾಣದ ಕೋಟ್ಯಾಂತರ ಜೀವಿಕೋಶಗಳಿಂದ ಮಾಡಲ್ಪಟ್ಟಿದ್ದೇವೆ. ಈ ಜೀವಿಕೋಶದೊಳಗಡೆ ಜೆನೆಟಿಕ್‌ (ಆನುವಂಶಿಕ)ವಸ್ತು ಡಿ.ಎನ್‌.ಎ.ಯು ಇದೆ. ಈ ಡಿ.ಎನ್‌.ಎ.ಯು ಉದ್ದವಾದ ಹಾಗೂ ತೆಳುವಾದ ದಾರದಂತಹದು. ಈ ಡಿ.ಎನ್‌.ಎ.ಯ ಸಂರಚನೆಯು “ಬೇಸ್‌ ಪೇರ್‌”ಗಳಿಂದ ಉಂಟಾಗಿದೆ ಹಾಗೂ ಈ ಬೇಸ್‌ಗಳನ್ನು ಜೀವಿಯ ಸಂಕೇತಗಳು ಎಂದೇ ಕರೆಯಲಾಗುತ್ತದೆ. ಈ ಸಂಕೇತಗಳಿಂದ ನಮ್ಮ ದೇಹದಲ್ಲಿ ಸಹಸ್ರಾರು ಪ್ರೊಟೀನುಗಳು ಉತ್ಪತ್ತಿಯಾಗುತ್ತಿದ್ದು, ಅವುಗಳೇ ನಮ್ಮ ದೇಹವನ್ನು ಸಂಪೂರ್ಣವಾಗಿ ನಿರ್ದೇಶಿಸುತ್ತವೆ. ಈ ಬೇಸ್‌ಗಳು ದಾರದಂತಹಾ ಡಿ.ಎನ್‌.ಎ.ಯಲ್ಲಿ ಗೊತ್ತಾದ ಹೊಂದಿಕೆಯಲ್ಲಿ ಜೋಡಿಸಲ್ಪಟ್ಟಿದ್ದು, ಆ ಮೂಲಕ ಉಂಟಾಗುವ ಸಂಯೋಜನೆಗಳ ಮಿತಿಯಲ್ಲಿ ರಚನೆಯನ್ನೂ ವರ್ತನೆಯನ್ನೂ ನಿರ್ದೇಶಿಸುತ್ತವೆ. ಹಾಗಾಗಿ ಜೀವಿಯ ಬದುಕೂ ನಿರ್ದೇಶಿಸುತ್ತದೆ. 

ಈ ವರ್ಷದ ಪುರಸ್ಕೃತರಾದ ಪ್ರೊ. ಎಮಾನ್ಯುಎಲ್‌ ಶೆಪೆಂತೆರ್‌ (Emmanuelle Charpentier) ಮತ್ತು ಪ್ರೊ. ಜೆನ್ನಿಫೆರ್‌ ಡೌಡ್ನ (Jennifer Doudna) ಎಂಬ ಇಬ್ಬರೂ ಮಹಿಳಾ ವಿಜ್ಞಾನಿಗಳು ಜೊತೆಯಾಗಿ ಸಂಶೋಧಿಸಿ ಈ ಸಂಯೋಜನೆಯನ್ನು ತಿದ್ದುವ CRISPR-Cas9 ಎಂಬ ಅತ್ಯದ್ಭುತವಾದ ತಂತ್ರವೊಂದನ್ನು ಅನ್ವೇಷಿಸಿದ್ದಾರೆ. ಅದನ್ನು ಸರಳವಾಗಿ “ಜೆನೆಟಿಕ್‌ ಕತ್ತರಿ” ಎನ್ನಬಹುದು. ಈ ಕತ್ತರಿಯನ್ನು ಬಳಸಿ ತೊಂದರೆಕೊಡುವ ಡಿ.ಎನ್.ಎ. ದ ಭಾಗವನ್ನು ಗೊತ್ತಾದ ಕಡೆ ಅಗತ್ಯಕ್ಕೆ ಕತ್ತರಿಸಿ, ಸರಿಯಾದ ವರ್ತನೆಯನ್ನು (ಅಂದರೆ ಕಾಯಿಲೆ ಇದ್ದರೆ, ನಿವಾರಣೆಯಾಗುವ) ತಿದ್ದುವಂತೆ ಮಾಡಬಹುದಾಗಿದೆ. ಇದನ್ನೇ “ಜೀನ್‌ ಎಡಿಟಿಂಗ್‌” ಎಂದು ಜೀವಿರಸಾಯನಿಕ ವಿಜ್ಞಾನದಲ್ಲಿ ಕರೆಯಲಾಗುತ್ತದೆ.  ಈ ಅತ್ಯದ್ಭುತ ತಂತ್ರದಿಂದ (ಕತ್ತರಿಯಿಂದ) ಕೋಟ್ಯಾಂತರ ಬೇಸ್‌ ಪೇರ್‌ ಗಳಲ್ಲಿ ಹುಡುಕಿ ಗೊತ್ತಾದ ಜಾಗದಲ್ಲಿ ತಿದ್ದಬಹುದಾಗಿದೆ. ತೇಪೆ ಹಾಕಿ ರಿಪೇರಿ ಮಾಡಬಹುದಾಗಿದೆ. ಇದೊಂದು ಕ್ರಾಂತಿಕಾರಕ ತಂತ್ರವಾಗಿದ್ದು ಕೃಷಿಯಲ್ಲಿ, ವೈದ್ಯಕೀಯ ಸೇವೆಯಲ್ಲಿ ಅಚ್ಚರಿ ಎನಿಸುವ ಬದಲಾವಣೆಯನ್ನು ತರಬಲ್ಲ ಶಕ್ತಿಯನ್ನು ಹೊಂದಿದೆ.

ಈ ಜೆನೆಟಿಕ್‌ ಕತ್ತರಿಯು ಅನ್ವೇಷಣೆಗೊಂಡು ಕೇವಲ 8 ವರ್ಷಗಳಾಗಿವೆ. ಆದರೆ ಈಗಾಗಲೆ ಜಗತ್ತಿನ ಬಹುಪಾಲು ಜೀವಿರಸಾಯನಿಕ ಪ್ರಯೋಗಾಲಯವನ್ನು CRISPR-Cas9 ಎಂಬ ಹೆಸರಿನಲ್ಲಿ ಹೊಕ್ಕು ತೀರಾ ಆಗುವುದೇ ಇಲ್ಲ ಎಂಬಂತಹಾ ಸಮಸ್ಯೆಗಳಿಗೂ ಪರಿಹಾರವನ್ನು ಕೊಡಬಲ್ಲ ಸಾಧನವಾಗಿ ಬಳಕೆಯಾಗುತ್ತಿವೆ. ಇದರ ಮಹತ್ವದ ಬಳಕೆಗಳಿನ್ನೂ ವಿಕಾಸವಾಗಬೇಕಿದ್ದು ಅವುಗಳಿಗಿರುವ ನೈತಿಕ, ಸಾಮಾಜಿಕ ಕಾರಣಗಳಿಂದ ಕೆಲವು ತೀರ್ಮಾನಗಳಾಗಬೇಕಿದ್ದು, ಇನ್ನೇನು ಪರಿಹಾರವೂ ರೆಡಿ ಎನ್ನುವ ಹಂತದಲ್ಲಿವೆ. ಇದೊಂದು ಕಲ್ಪನಾತೀತ ತಂತ್ರವಾಗಿದ್ದು ಮುಂದೆ ಆನುವಂಶಿಕ ಕಾರಣದ ಕಾಯಿಲೆಗಳೂ ವಾಸಿಯಾಗುವ ಚಿಕಿತ್ಸೆಗಳನ್ನು ಸಾಧ್ಯಮಾಡಲಿವೆ. ಮುಂದೊಂದು ದಿನ ಕ್ರಾಂತಿಕಾರಕ ಚಿಕಿತ್ಸೆಗಳು ವೈದ್ಯಕೀಯ ಜಗತ್ತನ್ನು ಬದಲಿಸಲಿವೆ.

ಇದರ ಸರಳ ವೈಜ್ಞಾನಿಕ ವಿವರಗಳ ಒಳನೋಟ ಹೀಗಿದೆ. ಈಗಾಗಲೇ ಅನೇಕ ಜೀವಿ ಪ್ರಭೇದಗಳ ಜೀನೊಮುಗಳ ಮಾಹಿತಿಯು ಲಭ್ಯವಿದೆ. ಅವುಗಳನ್ನು ಓದುವ ಕಷ್ಟವಿರಲು ಉದ್ದವಾಗಿರುವುದರ ಜೊತೆಗೆ ಕೆಲವೊಮ್ಮೆ ಅವುಗಳಲ್ಲಿ ಸಣ್ಣ-ಪುಟ್ಟ  ಅಗತ್ಯವಾದ ಸಂಗತಿಗಳ ಬದಲಾವಣೆಯನ್ನು ನಿರೀಕ್ಷಿಸುತ್ತವೆ. ಆಗ ಈ ಜೆನೆಟಿಕ್‌ ಕತ್ತರಿಯು ಬಳಕೆಗೆ ಬರುವ ತಂತ್ರವಾಗಲಿದೆ. ಇದನ್ನು ಸಂಶೋಧಕರು ಕಂಡುಕೊಂಡದ್ದು ಬ್ಯಾಕ್ಟೀರಿಯಾಗಳ ಅಧ್ಯಯನದಿಂದ! ಅವುಗಳು ವೈರಸ್ಸುಗಳಿಂದ ಕಾಯಿಲೆಗೆ ಒಳಗಾದಾಗ ನಿವಾರಿಸಿಕೊಳ್ಳಲು ಬಳಸಿದ ನೆನಪನ್ನು ಮುಂದೆ ಸಮಸ್ಯೆಯು ಬರದಂತಿರಲು ಬಳಸುವ ಮಾಹಿತಿಯ ಸ್ಥಳವನ್ನು CRISPR ಎಂದು ಗುರುತಿಸಿ ಅದನ್ನು ಡಿ.ಎನ್.ಎ. ಯ ಅವಳಿ ಎನ್ನಬಹುದಾದ ಆರ್‌.ಎನ್‌.ಎ. ಮೂಲಕ ತಿದ್ದುವುದನ್ನು ಪ್ರತಿಷ್ಠಾಪಿಸಲಾಗಿದೆ. ಈ ಆರ್‌.ಎನ್‌.ಎ. ದ ಅವಶ್ಯಕತೆಯು ಮುಂದೆ ಉಂಟಾಗಬಹುದಾದ ಕಾಯಿಲೆಯನ್ನು ತಡೆದುಕೊಳ್ಳಲು ಬೇಕಾಗುತ್ತದೆ.

ಹೀಗೆ ಅವಶ್ಯಕವಾಗಿ ತಿದ್ದುವಿಕೆಯನ್ನು ನಿರ್ವಹಿಸಲು CRISPR ಜೊತೆಗೆ Cas9 ಎಂಬ ಪ್ರೊಟೀನ್‌ ಬೇಕಿದ್ದು ಅದನ್ನು ಆರ್‌.ಎನ್‌.ಎ. ದ ಜೊತೆಗೆ ಸಮಾಗಮಗೊಳಿಸಿ, ಅಗತ್ಯವಾದ ಸ್ಥಳದಲ್ಲಿ ಜೋಡಿಸುವ ತಂತ್ರವನ್ನು ಇಬ್ಬರೂ ಮಹಿಳಾ ವಿಜ್ಞಾನಿಗಳು ನಿರ್ಮಿಸಿದ್ದಾರೆ. ಇದೊಂದು ಕಲ್ಪನಾತೀತ ಸೂಕ್ಷ್ಮಾತಿ ಸೂಕ್ಷ್ಮವಾದ ಸ್ಥಳದಲ್ಲಿ ನಡೆಯುವ ಬೆರಗು. ಆದರೆ ಇದನ್ನು ಸಾಧ್ಯಗೊಳಿಸಿದ್ದು ಮಾತ್ರ ಇಬ್ಬರ ಜಾಣತನ. ಅದನ್ನೆಲ್ಲಾ ಸುಮ್ಮನೆ ಚಿತ್ರಗಳಲ್ಲಿ ಪ್ರದರ್ಶಿಸುವ ಸಂಗತಿಯಲ್ಲ. ನಮ್ಮ ಸಾಮಾನ್ಯ ತಿಳಿವಿಗೆ ಅನುಕೂಲವಾಗುವ ರೂಪಕವಷ್ಟೇ!

ಇದನ್ನು ಸಾಧ್ಯಮಾಡಿದ ಸಂಶೋಧನೆಯ ಜೋಡಿಗಳ ಕೆಲಸ ಮಾತ್ರ ಅತ್ಯದ್ಭುತ. ಮಹಿಳೆಯರಿಬ್ಬರು ಹೀಗೆ ಇತಿಹಾಸವನ್ನು ನಿರ್ಮಿಸುವಂತಹಾ ಸಂಶೋಧನೆಯನ್ನು ಮಾಡಿರುವುದು ಜಗತ್ತು ನಂಬಲೇಬೇಕಿದೆ. ಅದೂ ಸಾವಿರಾರು ಕಿಲೋಮೀಟರ್‌ಗಳ ಅಂತರದ ದೇಶಗಳ ಮಹಿಳೆಯರು, ಬೌದ್ಧಿಕವಾಗಿ ಸಮೀಕರಣಗೊಂಡದ್ದು ವಿಶೇಷ. ಹೀಗೆ ಒಮ್ಮೆ 2011ರಲ್ಲಿ ಒಂದು ವಿಜ್ಞಾನ ಸಮ್ಮೇಳನಕ್ಕೆ ಜೆನಿಫರ್‌ ಅವರನ್ನು ನೋಡಬಹುದೆಂಬ ಉದ್ದೇಶದಿಂದ ಎಮಾನ್ಯುಎಲ್‌ ಅವರು ಪೆರ್ಟೊ ರಿಕೊ (Puerto Rico) ಎಂಬ ಅಮೆರಿಕದ ಸ್ಪಾನಿಶ್‌ ದ್ವೀಪದ ಸಮ್ಮೇಳನಕ್ಕೆ ಬಂದು ಭೇಟಿಯಾದುದೇ ಈ ಮಹತ್ವದ ಶೋಧಕ್ಕೆ ಕಾರಣ. ಅಲ್ಲಿ ಇಬ್ಬರೂ ಸಮ್ಮೇಳನದ ಎರಡನೆಯ ದಿನ ಕಾಫಿಯ ಜೊತೆಗಿನ ಭೇಟಿಯಲ್ಲಿ ಎಮಾನ್ಯುಎಲ್‌ ಶೆಪೆಂತರ್‌ ಅವರು  ಜೆನಿಫರ್‌ ಅವರ ಜೊತೆಯನ್ನು ಆಹ್ವಾನಿಸುತ್ತಾರೆ. ಎಮಾನ್ಯುಎಲ್‌ ಮೂಲತಃ ಫ್ರಾನ್ಸ್‌ ದೇಶದವರು. ಆಗ ಅವರು ಲೂಯಿ ಪಾಶ್ಚರ್‌ ಅವರಿಂದ ಪ್ರಭಾವಿತರಾಗಿ ಸಮಸ್ಯೆಗಳ ತಂದೊಡ್ಡುವ ಸೂಕ್ಷ್ಮಜೀವಿಗಳಿಗೆ ಪ್ರತಿರೋಧದ ಅರಿವಿನ ಹುಡುಕಾಟದಲ್ಲಿ ಇದ್ದವರು. ಅದರ ಹಿಂದೆ ಹೋಗಿ ಜೆನ್ನಿಫೆರ್‌ ಡೌನಾ ಎಂಬ ಜೀವಿರಸಾಯನಿಕ ತಜ್ಞರ ಜೊತೆಯಾಗಿದ್ದೇ ಈ ಅಚ್ಚರಿಯ ಫಲಿತಕ್ಕೆ ಕಾರಣವಾಯಿತು.

ಎಮಾನ್ಯುಎಲ್‌ ಶೆಪೆಂತೆರ್‌ ಇನ್ನೂ 51ರ ಹರೆಯದ ಅತ್ಯಂತ ಸೂಕ್ಷ್ಮಮತಿಯ ಸೂಕ್ಷ್ಮಜೀವಿವಿಜ್ಞಾನಿ. ಸುಮಾರು 4-5 ದೇಶಗಳ ಹತ್ತಾರು ಪ್ರಯೋಗಾಲಯಗಳಲ್ಲಿ ಸೇವೆ ಸಲ್ಲಿಸಿದ ಶೆಪೆಂತೆರ್‌ ಇದೀಗ ಮಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫೆಕ್ಷನ್‌ ಬಯಾಲಜಿ ಎಂಬ ಸಂಸ್ಥೆಯ ಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಸುಮಾರು ಹತ್ತು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟೊರೇಟ್‌ ಪದವಿಗಳನ್ನೂ ಹತ್ತಾರು ಅಂತರಾಷ್ಟ್ರೀಯ ಮಾನ್ಯತೆಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಜೆನ್ನಿಫರ್‌ ಡೌಡ್ನ, ಅಮೆರಿಕದ ವಾಷಿಂಗ್‌ಟನ್‌ ಅಲ್ಲಿ ಜನಿಸಿದವರು. ಶೆಪೆಂತೆರ್‌ ಅವರಿಗಿಂತಾ ಐದು ವರ್ಷಗಳ ಹಿರಿಯರು. ತುಂಬಾ ಜಾಣೆ. ಎಳೆವೆಯಲ್ಲಿಯೇ ವಿಜ್ಞಾನ ಓದಿನ ಬೆರಗನ್ನು ಅಚ್ಚರಿಯಿಂದ ಅನುಭವಿಸಿ ಜಾಣತನವನ್ನು ಮೆರೆದವರು. ಇಂತಹಾ ಓರ್ವ ಜೀವಿರಾಸಾಯನಿಕ ವಿಜ್ಞಾನಿಯು ಅಗತ್ಯವೆಂದೇ ಶೆಪೆಂತರ್‌ ಅವರ ನೆರವಿಗೆ ನಿಂತವರು. ಜೊತೆಗೆ ವಿಜ್ಞಾನದ ಮಹತ್ವದ ಗೌರವವಾದ “ಬ್ರೆಕ್-‌ಥ್ರೂ” ಬಹುಮಾನಿತೆ. ಅವರ ವಿದ್ಯಾರ್ಥಿಗಳ ಅನಿಸಿಕೆಯಂತೆ ಓರ್ವ ಅದ್ಭುತ ಶಿಕ್ಷಕಿ, ಅತ್ಯದ್ಭುತ ವಿಜ್ಞಾನಿ.

ನಿನ್ನೆ ಮಧ್ಯಾಹ್ನ ಬಹುಮಾನದ ಪ್ರಕಟಣೆಯ ಸಂದರ್ಭದಲ್ಲಿ, ಶೆಪೆಂತೆರ್‌ ಅವರ ಟೆಲಿಫೋನ್‌ ಸಂಭಾಷಣೆಯನ್ನು ಕೇಳುತ್ತಿರುವಾಗ, ಉದ್ದವಾದ ಹಾಗೂ ಸಾವಧಾನವಾದ ವಿವರಣೆಗಳಲ್ಲಿ ಮಾತು ಹೆಚ್ಚೇ ಆಡುವ ಮಹಿಳೆ ಅನ್ನಿಸಿದರೂ, ಪ್ರತಿ ಮಾತಿನಲ್ಲೂ ವಿಜ್ಞಾನದ ಬೆರಗೂ ಹಾಗೂ ಮೌಲ್ಯಯುತವಾದ ಆತ್ಮವಿಶ್ವಾಸ ನನ್ನ ಅರಿವಿಗೂ ಬಂದುದಲ್ಲದೇ ನೆರೆದಿದ್ದ ವಿಜ್ಞಾನ ವರದಿಗಾರರನ್ನೂ ಹಾಗೂ ಅಲ್ಲಿದ್ದ ನೊಬೆಲ್‌ ಸಮಿತಿಯ ಸದಸ್ಯರನ್ನೂ ಸಮಾಧಾನಿಸಿತ್ತು. ಇಬ್ಬರೂ ವಿಜ್ಞಾನಿಗಳೂ ಬೇರೆ-ಬೇರೆ ಕಾಲದ ಹಗಲು-ರಾತ್ರಿಗಳ ಸಮಯದಲ್ಲಿ ಕೆಲಸ ಮಾಡಬೇಕಿದ್ದುದರಿಂದ ದಿನವಿಡೀ ಸಂಪರ್ಕದಲ್ಲೇ ಇರುವ ಸಂಗತಿಗಳೂ ಬೆಳಕಿಗೆ ಬಂದವು. ಮಹಿಳೆಯರಿಬ್ಬರೂ ಹೆಚ್ಚೇ ಮಾತನಾಡಿ ಅಂತೂ ಮಾತುಗಳಿಗೆ ಅತ್ಯದ್ಭುತ ಬಹುಮಾನವನ್ನೇ ಗಳಿಸಿ ಜಗತ್ತೇ ಬೆರಗಾಗುವಂತಹ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಅದರ ಫಲಿತವೆಲ್ಲವೂ ನೈತಿಕ-ಸಾಮಾಜಿಕ ಹೊಣೆಗಾರಿಕೆಯೊಳಗೆ ಇಡೀ ಮಾನವ ಕುಲವನ್ನು ಆನುವಂಶಿಕವಾಗಿ ಕಾಡುವ ಸಮಸ್ಯೆಗಳಿಂದ ಪರಿಹಾರವನ್ನೂ ತರಲಿದೆ. ಅಂತಹಾ ನೈತಿಕ ಒಳಿತುಗಳನ್ನೂ ಹೆಮ್ಮೆಯಿಂದ ಕೊಟ್ಟ ಮಹಿಳಾ ವಿಜ್ಞಾನಿಗಳ ಜೋಡಿಯನ್ನು ಅಭಿನಂದಿಸೋಣ.

ಹಾಂ.. ಹೀಗೆ ಕೇವಲ ಮಹಿಳೆಯರಿಬ್ಬರೇ ಜೊತೆಯಾಗಿ ನೊಬೆಲ್‌ ಪಡೆಯುತ್ತಿರುವುದು ಇದೇ ಮೊದಲು. ಹಾಗಾಗಿ ವಿಶೇಷವಾದ ಇತಿಹಾಸ ಹಾಗೂ ಲೋಕ ಕಲ್ಯಾಣದ ಕಾರಣಕರ್ತ ವಿಜ್ಞಾನಿಗಳಿಗೆ CPUS ತನ್ನೆಲ್ಲಾ ಹಿತೈಷಿ ಒದುಗ/ವಿಶ್ವಾಸಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ನಮಸ್ಕಾರ

ಡಾ. ಟಿ,ಎಸ್‌. ಚನ್ನೇಶ್ 

This Post Has 4 Comments

  1. Mrs Vijayalakshmi B

    Very informative writing.

  2. Kusum Ramesh Salian

    ರಾಸಾಯನಿಕ ವಿಜ್ಞಾನಿಗಳಿಬ್ಬಲ
    ರೂ ಅಭಿನಂದನಾರ್ಹರು. ಮಹಿಳೆಯರಿಬ್ಬರೂ ಎನ್ನುವ
    ಸಂತೋಷ ಬಲು ದೊಡ್ಡದು. ಇವರಿಬ್ಬರ ಸಂಶೋಧನೆ
    ಮಾನವೀಯತೆಗೆ ಬಲು ದೊಡ್ಡ ಕೊಡುಗೆ. CPUS ಸಂಸ್ಥೆಗೆ ಧನ್ಯವಾದಗಳು. ಉತ್ತಮ ಮಾಹಿತಿ ಹಾಗೂ ವಿವರಣೆ.

  3. ಡಾ ರುದ್ರೇಶ್ ಅದರಂಗಿ

    ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಪರಿಚಯ ಮತ್ತು ವಿವರಣಾತ್ಮಕ ಲೇಖನ ಬರೆದ ನಿಮಗೆ ಧನ್ಯವಾದಗಳು ಸರ್

  4. CHARANA KUMAR

    Nice article

Leave a Reply