ಚಳಿಯ ತಿಂಗಳಿನ ಈ ದಿನಗಳಲ್ಲಿ ದಟ್ಟ ಹಸಿರಾದ ಮರವೊಂದು ಸಾಕಷ್ಟು ಅಚ್ಚ-ಕಿತ್ತಳೆ ಬಣ್ಣದ ಹೂವುಗಳನ್ನು ತನ್ನ ಚಾವಣೆಯಲ್ಲಿರಿಸಿ, ಹೆಚ್ಚೂ ಕಡಿಮೆ ತೇರು ನಿಂತ ಹಾಗೆ ನಿಂತಿರುವ ಮರವನ್ನು ನೀವು ನೋಡಿರಬಹುದು. ನಗರ ಪ್ರದೇಶಗಳಲ್ಲಿ-ಪಟ್ಟಣಗಳ ರಸ್ತೆಗಳಲ್ಲೂ ಅಲಂಕಾರಕ್ಕೆಂದು ಬೆಳೆಸಲಾದ ಈ ಮರ ಅಕ್ಷರಶಃ ತೇರಿನಂತೆಯೇ ನಿಂತಿರುವುದುಂಟು. ತೇರನ್ನೂ ಸಹಾ ಕಟ್ಟುವುದು ಎನ್ನುತ್ತೇವಲ್ಲವೇ? ಅಂದರೆ ಅದರ ಗಾಲಿಗಳ ಮೇಲಿನ ಪ್ಲಾಟ್ ಫಾರಂನ ಮೇಲೆ ಒಂದಷ್ಟು ಎತ್ತರಕ್ಕೆ ತೇರನ್ನು ಕಟ್ಟುತ್ತಾರೆ. ಪ್ಲಾಟ್ ಫಾರಮ್ಮಿನ ಮೇಲಿನ ತೇರು ಹೊರ ಮೈಮಾತ್ರವೇ ಸೊಗಸಾಗಿದ್ದು ಒಳಗಿನದನ್ನೆಲ್ಲಾ ಸಿಂಗರಿಸಿರುವುದಿಲ್ಲ. ಈ ಮರವೂ ಹಾಗೆಯೇ ಹೂವುಗಳನ್ನು ಚಾವಣೆಯ ಮೇಲೆ ಬಿಸಿಲಿಗೆ ತೆರೆದುಕೊಂಡಂತೆ ಬಿಟ್ಟಿರುತ್ತದೆ. ಮರದೊಳಗಿನ ನೆರಳಲ್ಲೂ ಹೂವರಳಿಸದ ಮರ ಎತ್ತರಕ್ಕೆ ಬೆಳೆಯುವುದರಿಂದ ತೇರಿನ ಹಾಗೆ ಸಿಂಗರಿಸಿಕೊಂಡಂತೆ ಕಾಣುವುದು. ಮರದ ಹೂವುಗಳು ಸೌಂದರ್ಯವೂ ಅಲ್ಲದೇ, ಇತರೆ ಮಹತ್ವದ ಸಂಗತಿಗಳಿಂದಲೂ ಆಕರ್ಷಕವಾಗಿವೆ. ಹೂವುಗಳ ಕಥಾನಕವು ಸಾಕಷ್ಟು ಹರವಾಗಿಯೇ ಇದೆ ಅವುಗಳನ್ನು ನಂತರದಲ್ಲಿ ನೋಡೋಣವಂತೆ.
ಆಫ್ರಿಕನ್ ಟುಲಿಪ್ ಎಂದು ಕರೆಯಲಾಗುವ ಮೂಲತಃ ಆಫ್ರಿಕಾದ್ದೇ ಆಗಿರುವ ಈ ಮರವನ್ನು “ನೀರುಕಾಯಿ ಮರ”, “ಉಚ್ಚೆಕಾಯಿ ಮರ” ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ವಾಸ್ತವವಾಗಿ ನೀರುತುಂಬಿಕೊಂಡ ಮೊಗ್ಗುಗಳನ್ನು ನೋಡಿ ಹಾಗೆ ಕರೆಯುತ್ತೇವೆ. ಈ ಮೊಗ್ಗುಗಳನ್ನು ಹಿಸುಕಿದಾಗ ಅವುಗಳೊಳಗಿನಿಂದ ನೀರು ಕಾರಂಜಿಯ ಹಾಗೆ ಚಿಮ್ಮುತ್ತದೆ. ಅವೇನೂ ಕಾಯಿಗಳಲ್ಲ! ಹಾಗಾಗಿ ಇಂಗ್ಲೀಶಿನಲ್ಲೂ “ಫೌಂಟೆನ್ ಟ್ರೀ” ಎಂಬುದು ಅದರ ಹೆಸರು. ಜಗತ್ತಿನ ಬಹುತೇಕ ದೇಶಗಳಿಗೆ ಅಲಂಕಾರಕ್ಕೆಂದೇ ಪರಿಚಯಿಸಿ ಬೆಳೆಯಲಾಗುತ್ತಿರುವ ಈ ಮರದ ಇತರೇ ಸಾಮಾನ್ಯ ಉಪಯೋಗಗಳು ಕಡಿಮೆಯೇ! ಇದರ ವೈಜ್ಞಾನಿಕ ನಾಮಧೇಯ Spathodea campanulata.
ಆಫ್ರಿಕಾದಲ್ಲಿ ಚಿನ್ನ ಹಾಗೂ ಪೆಟ್ರೋಲಿಯಂನಿಂದ ಶ್ರೀಮಂತವಾಗಿರುವ ಪಶ್ಚಿಮ ಕರಾವಳಿಯ ತೀರ ಪ್ರದೇಶಗಳಲ್ಲಿ ಯೂರೋಪಿಯನ್ನರು ಮೊಟ್ಟ ಮೊದಲ ಬಾರಿಗೆ 1787ರಲ್ಲಿ ಈ ಮರವನ್ನು ಕಂಡಿದ್ದರು. ಅದರ ತುಂಬು ಸೌಂದರ್ಯಕ್ಕೆ ಮಾರು ಹೋದ ಅವರು ಅಲ್ಲಿಂದ ಯೂರೋಪಿಗೂ ತಂದರು. ನಂತರದಲ್ಲಿ ಎಲ್ಲೆಡೆ ಅಲಂಕಾರದ ಮರವಾಗಿ ಜನಜನಿತವಾಯಿತು. ತನ್ನ ಸೌಂದರ್ಯದಿಂದ ಉಬ್ಬಿಹೋಗಿರುವ ಮರ ನಿಜಕ್ಕೂ ಸಾಕಷ್ಟು ಜಂಭ ತೋರಿಸುತ್ತದೆ. ಅದನ್ನು ತನ್ನ ಬೆಳವಣಿಗೆಯ ವರ್ತನೆಗಳಿಂದ ತೋರಿಸುತ್ತದೆ. ಈ ನೀರುಕಾಯಿ ಅಥವಾ ಸ್ಪಾತೋಡಿಯಾದ ವಿವರಗಳು ಶ್ರೀಮಂತವಾಗಿರುವುದುದೇ ಅದರ ಹೂವುಗಳ ಸೌಂದರ್ಯದಲ್ಲಿ ಮತ್ತದರಿಂದ ಮರವು ವರ್ತಿಸುವ ಸಂಗತಿಗಳಲ್ಲಿ! ಅದರ ಹೆಸರು ಮತ್ತದರ ವರ್ಗೀಕರಣದ ಗುರುತಿನಿಂದಲೂ ಮರಕ್ಕೆ ಜಂಭಪಡುವ ಅವಕಾಶಗಳಿವೆ.
ಈ ಕಾರಂಜಿ ಮರದ ವೈಜ್ಞಾನಿಕ ಹೆಸರು Spathodea campanulata ಅಲ್ಲವೇ? ಇದರ ವರ್ಗೀಕರಣವು Monotypic Genus ಅಂದರೆ ಅದರ ಜಾತಿ (Genus)ಅಥವಾ ಕುಲದಲ್ಲಿ ಕೇವಲ ಒಂದೇ ಒಂದು ಸಸ್ಯವಿರುವುದು. ಸ್ಪ್ಯಾತೋಡಿಯಾ ಕುಲದ ಒಂದೇ ಸಸ್ಯ ಈ ನೀರುಕಾಯಿಮರ! ಕುಲಕ್ಕೆ ತಾನೊಬ್ಬನೇ ಎಂಬ ಹೆಮ್ಮೆ ಬೇಡವೇ? ಮಾತಿಗೆ ಒಬ್ಬನೇ ಕುಲಪುರುಷ ಎನ್ನುತ್ತೇವಲ್ಲ ಹಾಗೆ! ಸ್ಪ್ಯಾತೋಡಿಯಾ (Spathodea) ಪದವು ಗ್ರೀಕ್ ಮೂಲದ spathe ಮತ್ತು oida (ಅಂದರೆ –spathe-Like Calyx) ದಿಂದ ಬಂದದ್ದು. ಅದರ ಅರ್ಥ ಹೂ-ಎಲೆಯಂತಹಾ ಪುಷ್ಪಪಾತ್ರೆಯನ್ನು ಹೊಂದಿರುವುದು. ಅಂದರೆ ಎಲೆಯು ರೂಪಾಂತರವಾಗಿ ಹೂ-ಎಲೆಯಾಗಿರುವುದೂ ಅಲ್ಲದೇ ಅದೇ ವಂಶಾಭಿವೃದ್ಧಿಯ ಅಂಗವಾದ ಹೂವಿಗೆ ತಳ ಒದಗಿಸುವ ಪಾತ್ರೆಯ ರೂಪವೂ ಆಗಿರುವುದು ಒಂದು ರೀತಿಯಲ್ಲಿ ನಿಜಕ್ಕೂ ವಿಶೇಷವೂ ಸಹಾ! ಹಾಗಾಗಿ ಈ ಬಗೆಯ ವಿಶೇಷಣಗಳನ್ನು ಜೊತೆಗೆ ಇತರರೆಲ್ಲೂ ಕಾಣದ ಸೌಂದರ್ಯವನ್ನು ಹೊತ್ತ ಮರ ಹೆಮ್ಮೆ ಪಡುಬಹುದಲ್ಲವೇ?
ಅಪ್ರತಿಮ ದಟ್ಟ ಬಣ್ಣದ ಹೂವುಗಳ ಈ ಮರವನ್ನು ಅದರ ಸೌಂದರ್ಯದಿಂದಲೇ ಅಲಂಕಾರಿಕ ಮರವಾಗಿ ಜಾಗತಿಕವಾಗಿ ಪ್ರಸರಿಸಲಾಯಿತು. ಹೆಮ್ಮೆಯಿಂದ ಬೀಗುವ ಈ ಮರಕ್ಕೆ ಸಾಕಷ್ಟು ಅಸೂಯೆ ಇದೆ. ತನ್ನ ಪಕ್ಕದ ಇತರೇ ಯಾವುದೇ ಗಿಡ-ಮರವನ್ನು ಪ್ರತಿಸ್ಪರ್ಧಿ ಎಂದೇ ಭಾವಿಸುತ್ತದೆ. ಅದಕ್ಕಿಂತಾ ಎತ್ತರಕ್ಕೆ ಬೆಳೆಯುತ್ತದೆ. ಸಹಜೀವಿ ಸಸ್ಯವನ್ನು ಬೆಳೆಯಗೊಡದೆಯೂ ಇರುವುದುಂಟು! ನಗರ ಪ್ರದೇಶಗಳಲ್ಲಿ ವಸತಿ ಪ್ರದೇಶಗಳಲ್ಲಿ ತನ್ನ ಪಕ್ಕದ ಬಿಲ್ಡಿಂಗ್ ಗಿಂತಲೂ ಎತ್ತರಕ್ಕೆ ಬೆಳೆದು ಕಟ್ಟಡಗಳೊಂದಿಗೆ ಪೈಪೋಟಿ ನಡೆಸುತ್ತದೆ. ನಾನಿರುವ ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹತ್ತಾರು ಮರಗಳು ಬಿಲ್ಡಿಂಗ್ ಜೊತೆ ಮೈಪೋಟಿ ನಡೆಸುತ್ತಿರುವುದನ್ನು ನೋಡಿದ್ದೇನೆ. ಹೀಗೆ ತುಂಬಾ ಬೆಳವಣಿಗೆಯನ್ನು ಹೊಂದಿರುವ ಮರ ಇತರೇ ಗಿಡ-ಮರ ಗಳ ಜೊತೆ ಪೈಪೋಟಿ ನಡೆಸುವುದರಿಂದಾಗುವ ಮರದ ತರಲೆಗಳ ಕುರಿತೂ ಅಧ್ಯಯನಗಳನ್ನೂ ನಡೆಸಲಾಗಿದೆ. ತೀರಾ ಇತ್ತೀಚೆಗೆ ಫ್ರಾನ್ಸ್ ನ ಕ್ಲಾರ್ ಮಾಂಟ್ ನ ಪಾಸ್ಕಲ್ ವಿಶ್ವವಿದ್ಯಾಲಯವು, ಹೊನಲುಲು ವಿಶ್ವವಿದ್ಯಾಲಯ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ದಕ್ಷಿಣ ಪೆಸಿಫಿಕ್ ಸಾಗದಲ್ಲಿರುವ ತಿಹತಿ ದ್ವೀಪದಲ್ಲಿ ಈ ನೀರುಕಾಯಿ ಮರದ ವಿಶೇಷ ಅಧ್ಯಯನಗಳನ್ನು ನಡೆಸಿತ್ತು. ಈ ಅಧ್ಯಯನವು ಈ ಮರದ ದ್ಯುತಿ ಸಂಶ್ಲೇಷಣೆಯ ವೇಗ ಹಾಗೂ ಇತರೇ ಗಿಡ-ಮರಗಳೊಂದಿಗೆ ಪೈಪೋಟಿ ನಡೆಸುವ ಬಗೆಗೂ ದಾಖಲಿಸಿದೆ. ಹಾಗಾಗಿ ಈ ಮರವನ್ನು ಅಕ್ರಮಣಕಾರಿ ಮರ (Invasive Tree)ಎಂದೇ ಕರೆಯಲಾಗುತ್ತದೆ. ಜಗತ್ತಿನ ನೂರು ಆಕ್ರಮಣಕಾರಿ ಸಸ್ಯಗಳಲ್ಲಿ ಇದೂ ಒಂದು!
ಇನ್ನೂ ಹೂವು ಚೆಲುವು ಮಾತ್ರವಲ್ಲ, ಸಾಕಷ್ಟು ವಿಶೇಷಗಳನ್ನೂ ಹೊತ್ತಿದೆ ಎಂದು ಈ ಮೊದಲು ಸೂಚಿಸಿದ್ದೆನಲ್ಲವೇ? ಹಾಗಾಗಿ ಇದರ ಹೂವಿನ ಕಥೆಯನ್ನು ಈಗ ನೋಡೋಣ. ತುಸು ಮುಂಚೆ ಹೆಸರಿನಲ್ಲಿರುವ ಹೂವಿನ ವಿವರ ನೋಡಿದ್ದೇವೆ. ಇದರಲ್ಲಿ ಹೂ-ಎಲೆಯು ಪುಷ್ಟಪಾತ್ರೆಯಾಗಿ ಹೂವಿನ ಚೆಲುವಿನಲ್ಲಿ ಭಾಗಿಯಾಗಿದೆ. ಇದರ ಬಣ್ಣ ಎಷ್ಟು ದಟ್ಟ ಹಾಗೂ ಹೆಚ್ಚು ಸಮಯ ಇರಬಲ್ಲದು ಎಂದರೆ ಬಹುಶಃ ಬಹಳ ಹೂಗಳಿಗಿಲ್ಲದ ವಿಶೇಷ ಗುಣವದು. ಹೂವಿನ ಸಮಯವೂ ತುಂಬಾ ಧೀರ್ಘವಾದದ್ದೇ. ಸರಿ ಸುಮಾರು ನಾಲ್ಕೈದು ತಿಂಗಳು ಹೂಬಿಡುವ ಮರ, ನಂತರವೇ ದೋಣಿಯಾಕಾರದ ಕಾಯಿಗಳನ್ನು ಅದರ ತುಂಬೆಲ್ಲಾ ಗಾಳಿಗೆ ಸುಲಭವಾಗಿ ಹಾರಿ ಹೋಗುವಂತಹಾ ಲಕ್ಷಾಂತರ ಬೀಜಗಳನ್ನು ತುಂಬಿಕೊಂಡಿರುತ್ತದೆ. ಅವುಗಳು ಸುತ್ತೆಲ್ಲಾ ಅದರಲ್ಲೂ ಕೃಷಿ-ನೆಲವಿದ್ದರೆ. ಸಾಕಷ್ಟು ಮೊಳೆತು ಕಳೆಯಾಗುವ ಸಂಭವವವೂ ಹೆಚ್ಚು. ಹೂವುಗಳ ಆಕರ್ಷಕ ಬಣ್ಣವು ಪರಾಗಸ್ಪ್ಪರ್ಶಕ್ಕೆ ಹಕ್ಕಿಗಳ, ಬಾವುಲಿಗಳ ನೆರವನ್ನು ಪಡೆಯುತ್ತದೆ. ಹಮ್ಮಿಂಗ್ ಬರ್ಡ್ ಗಳಿಗೆ ಈ ಆಫ್ರಿಕನ್ ಟುಲಿಪ್ಗಳು ಪಂಚ ಪ್ರಾಣ. ಇಷ್ಟಾಗಿ ಹೂಗಳ ಮಕರಂದಕ್ಕೆ ದಾಳಿ ಇಟ್ಟ ದುಂಬಿ-ಜೇನಿಗೆ ಸಾವೇ ಗತಿ! ಹೂವರಳಿದಾಗಲೇ ಮೊದಲ ಪರಗಾವು ಹೊಮ್ಮವ ಮೊದಲೇ ತನ್ನೊಳಗೆ ಮಕರಂದಕ್ಕೆ ಅಂಟುದ್ರವ ಬೆರೆಸಿ ಹೊಕ್ಕ ಕೀಟಗಳನ್ನು ಕೊಲ್ಲುವುದಕ್ಕೂ ಮರದ ಹೂಗಳು ಹಿಂದೆ ಮುಂದೆ ನೋಡುವುದಿಲ್ಲ. ಈ ಬಗೆಯ ಗುಣವನ್ನು ಅದರ ವಿಕಾಸದಿಂದ ಪಡೆದುಕೊಂಡುದ್ದನ್ನು ಅಧ್ಯಯನಕಾರರು ಗುರುತಿಸಿದ್ದಾರೆ. ಅರಳಿದ ಹೂವುಗಳು ಕಪ್ ಆಕಾರದಲ್ಲಿದ್ದು ಅದರಲ್ಲಿ ತೇವವನ್ನು ಹಿಡಿದಿಟ್ಟುಕೊಂಡು ಹಕ್ಕಿಗಳನ್ನು ಆಕರ್ಷಿಸುತ್ತದೆ. ನೀರಹನಿಗಳಿಗೆ ಹಾರಿ ಬಂದ ಹಕ್ಕಿಗಳಿಂದ ಪರಾಗಸ್ಪರ್ಶಕ್ಕೂ ನೆರವು ಸಿಗುತ್ತದೆ. ಅದಕ್ಕೇ ಮಕರಂದವನ್ನು ಆರಸಿ ಬಂದ ಕೀಟಗಳನ್ನು ಒಳಗೆ ಸೇರಿಸುವುದಿಲ್ಲ.
ಅಚ್ಚ-ಕಿತ್ತಳೆಯ ದಟ್ಟ-ಬಣ್ಣವು ಬಿಸಿಲಿಗೆ ಬಾಡದನ್ನು ಕಂಡು ಮೂಲನಿವಾಸಿಗಳು-ಬುಡಕಟ್ಟುಗಳು ಹೂಗಳಿಗಿರಬಹುದಾದ ಬಿಸಿಲು ತಡೆವ ಗುಣವನ್ನು ಕಂಡುಕೊಂಡಿದ್ದಾರೆ. ಇದನ್ನು ಆಧುನಿಕ ವೈಜ್ಞಾನಿಕ ಅಧ್ಯಯನಗಳೂ ಸಾಬೀತು ಪಡಿಸಿವೆ. ಈ ಹೂವುಗಳನ್ನು ಅತಿ ನೇರಳೆ ಕಿರಣಗಳಿಗೆ ಒಡ್ಡಿ, ಅವು ತಡೆದುಕೊಳ್ಳುವ ಗುಣವನ್ನು ಪತ್ತೆ ಹಚ್ಚಲಾಗಿದೆ. ಇಂತಹ ಕಾರಣದಿಂದಲೇ ಹೂಗಳ ಕಷಾಯವನ್ನು ಚರ್ಮದ ಅಂದ ಹೆಚ್ಚಿಸಲು, ಬಿಸಿಲು ತಡೆದುಕೊಳ್ಳಲು ಬಳಸುವ ಪರಿಪಾಠವು ಬಂದಿದೆ. ಹೂವಿನ ಕಾರಣದಿಂದ ಮರವೊಂದು ಜಗತ್ತಿನ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದುದು ಮಾತ್ರವಲ್ಲದೇ, ಹೆಮ್ಮೆಯಿಂದ ಬೀಗುತ್ತಾ ಚೆಲುವನ್ನು ಸಾರುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಈಗ ಈ ಮರದ ಹೂವಾಡುವ ಕಾಲ. ಇನ್ನೂ ಒಂದೆರಡು ತಿಂಗಳು ದಟ್ಟ ಹೂಗಳ ಮೆರವಣಿಗೆಯನ್ನು ಮರ ನಡೆಸುತ್ತಿರುತ್ತದೆ. ಮರದ ತೊಗಟೆ, ಎಲೆಗಳಿಂದಲೂ ಕೆಲವೊಂದು ಸಂಸ್ಕೃತಿಯಲ್ಲಿ ಔಷಧಿಯ ಗುಣಗಳನ್ನು ಕಂಡುಕೊಂಡಿದ್ದಾರೆ. “ಹೂವು ಚೆಲುವೆಲ್ಲಾ ನಂದೆಂದಿದ್ದರೆ, ಮರವು ಮಾತ್ರ ತನ್ನ ತುಂಬೆಲ್ಲಾ ಹೂವನ್ನೇ ಮುಡಿದುಕೊಂಡು ಚೆಲುವೆಯೇ ತಾನೆಂದಿರುವ ನೀರುಕಾಯಿ-ಉಚ್ಚೆಕಾಯಿ-ಆಫ್ರಿಕನ್ ಟುಲಿಪ್ ನ ಚೆಲುವನ್ನು ಕಂಡಲ್ಲಿ ಕಣ್ಣು-ತುಂಬಿಕೊಳ್ಳುತ್ತಾ ಅಡ್ಡಾಡುವುದನ್ನು ಮರೆಯಬೇಡಿ. ಬಿಗ್ನೋನಿಏಸಿಯೇ (Bignoniaceae) ಕುಟುಂಬದ ಸ್ಪಾತೋಡಿಯಾ ಕುಲದ ಏಕ ಮಾತ್ರ ಪ್ರಭೇದದ ಹೆಮ್ಮೆಯ ಮರ ಇದು.
ನಮಸ್ಕಾರ
– ಚನ್ನೇಶ್