You are currently viewing “ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ

“ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ

ವಿಜ್ಞಾನ ಎನ್ನುವ ಮಹಾ ಸಾಗರದಲ್ಲಿ, ತೇಲುವ, ಈಜುವ, ಎರಡನ್ನೂ ಒಟ್ಟಿಗೇ ಅನುಭವಿಸುವ ಅಥವಾ ಅದರ ಜೊತೆಗೇನೇ ಮುಳುಗುವ ಅನುಭವವನ್ನೂ, ಮುಳುಗಿದರೂ ಸಾವಿನ ದರ್ಶನವಾಗದ ವಿಚಿತ್ರವನ್ನೂ ನಿಮ್ಮದಾಗಿಸಿಕೊಳ್ಳಲು ಈ ವರ್ಷದ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರದ ವಿವರಗಳನ್ನು ತಿಳಿಯಲೇ ಬೇಕು. ಏಕೆಂದರೆ, ಆಲ್ಬರ್ಟ್‌ ಐನ್‌ಸ್ಟೈನ್‌, ಎರ್ವಿನ್‌ ಶ್ರೊಡಿಂಗರ್‌ (Erwin Schrödinger), ನೀಲ್ಸ್‌ ಬ್ಹೋರ್‌ (Niels Bohr), ಮುಂತಾದ ಘಟಾನುಘಟಿ ವಿಜ್ಞಾನಿಗಳ ಮನಸ್ಸಿನೊಳಗೆ ಏಳುತ್ತಿದ್ದ ಅರಿವೆಂಬ ಮಹಾನ್‌ ಸ್ಪೋಟದ ವಾಗ್ಯುದ್ಧಗಳನ್ನು ಮುಂದುವರೆಸಿ ಬೆಳೆಸಿದ ಆಧುನಿಕ ಭೌತವಿಜ್ಞಾನದ ಅನೇಕ ಪ್ರತಿಭಾನ್ವಿತರ ಸೈದ್ಧಾಂತಿಕ ನಿಲುವು ಅಥವಾ ವಿವರಗಳನ್ನು ತಾಂತ್ರಿಕ ಸಾಧ್ಯತೆಗಳಾಗಿಸುವ ಸಾಕ್ಷಾತ್ಕಾರದ ಪ್ರೀತಿಗೆ!

      ಭೌತಿಕ ಜಗತ್ತು, ಕಣ್ಣಿಗೆ ಕಾಣುವ ಅನುಭವಕ್ಕೆ ದಕ್ಕುವ ಸ್ಥಿತಿಯನ್ನು ಹೊಂದಿದ್ದು ಹೀಗಲ್ಲಾ, ಹೀಗೆ ಎಂದು ಮಾತಿನಲ್ಲಿ ಸಮಾಧಾನಿಸಬಹುದು. ಆದರೆ ಕಣ್ಣಿಗೂ ಕಾಣದ, ಅನುಭವಕ್ಕೂ ದಕ್ಕದ ಕ್ವಾಂಟಂ ಪ್ರಪಂಚದ ಕಣಗಳ ಅಲೆದಾಟದ ಗೋಜಲಿನ ಸ್ಥಿತಿ ಹಿಕ್ಕನ್ನು ಬಿಡಿಸುವ ಸೈದ್ಧಾಂತಿಕ ತಿಳಿವುಗಳನ್ನು ತಂತ್ರಜ್ಞಾನಗಳಾಗಿಸುವ ಶ್ರಮವನ್ನು ಮಾತುಗಳಾಗಿಸುವ ಕಷ್ಟ ಇದೆಯೆಲ್ಲಾ ಅದು ಅಷ್ಟು ಸುಲಭದ ಸಂಗತಿಯಲ್ಲ. ಈ ಬಾರಿಯ ನೊಬೆಲ್‌ ಪುರಸ್ಕಾರವನ್ನು ಪಡೆದ ಅಲೆನ್‌ ಆಸ್ಪೆ, ಜಾನ್‌ ಕ್ಲಾಸರ್‌ ಮತ್ತು ಆಂಟನ್‌ ಜೆಲಿಂಗರ್‌  (Alain Aspect, John Clauser and Anton Zeilinger) ಈ ಮೂವರು ಅಂತಹಾ ಕೌತುಕಮಯವಾದ ಪ್ರಯೋಗಗಳನ್ನು ನಡೆಸಿದವರು. ಅವರ ಪ್ರಯೋಗಗಳ ಫಲಿತಗಳು ಹೊಸತೊಂದು ತಾಂತ್ರಿಕ ಜಗತ್ತಿನ ನಿರ್ಮಿತಿಗೆ ರಹದಾರಿಯಾಗಲಿವೆ. ಎರಡು ಅಥವಾ ಅದಕ್ಕಿಂಕತಾ ಹೆಚ್ಚು ಸಂಖ್ಯೆಯ ಕ್ವಾಂಟಂ ಕಣಗಳ ಗೋಜಲಾದ ಸಿಕ್ಕುಗಳನ್ನೇ ಬಳಸಿ ಪ್ರಾಯೋಗಿಕ ಸಾಧ್ಯತೆಗಳಿಂದ ಕ್ವಾಂಟಂ ಮಾಹಿತಿಯು ತಂತ್ರಜ್ಞಾನಗಳಾಗುವ ಮಾರ್ಗವನ್ನು ಅವರು ಕಂಡುಹಿಡಿದಿದ್ದಾರೆ.

      ಈವರೆಗಿನ ಕ್ವಾಂಟಂ ಜಗತ್ತಿನ ಪ್ರಾಮಾಣಿತ ವಿಷಯಗಳು ಮಾಯಾಜಾಲದ ಕಥನಗಳಂತೆಯೋ ಅಥವಾ ನಮ್ಮದಲ್ಲದ ಸಂಗತಿಗಳೆಂದು ದೂರವೇ ಉಳಿದ ಜನಸಾಮಾನ್ಯರು ಇನ್ನು ಮುಂದೆ ಹೀಗೂ ಉಂಟೇ ಎನ್ನುವ ಕಾಲ ಬರಲಿದೆ! ಕ್ವಾಂಟಂ ಮೆಕಾನಿಕ್ಸ್‌ ಇನ್ನು ಮುಂದೆ ಬಗೆ-ಬಗೆಯ ಆನ್ವಯಿಕ ಸಾಧ್ಯತೆಗಳಲ್ಲಿ ತೆರೆದುಕೊಳ್ಳಲಿದೆ. ಇದರ ಫಲವಾಗಿ ಕ್ವಾಂಟಂ ಕಂಪ್ಯೂಟರ್‌ಗಳು, ಕ್ವಾಂಟಂ ನೆಟ್‌ವರ್ಕ್‌ಗಳು, ಸುರಕ್ಷಿತವಾದ ಕ್ವಾಂಟಂ ಎನ್‌ಕ್ರಿಪ್ಟೆಡ್‌ (ಮಾಹಿತಿಯನ್ನು ಸಂಕೇತಗಳಾಗಿಸುವಿಕೆ) ಸಂವಹನ (Secure Quantum Encrypted Communication) ಇವೇ ಮುಂತಾದ ತಂತ್ರಜ್ಞಾನಗಳಾಗಿ ಜನಸಾಮಾನ್ಯರನ್ನೂ ತಲುಪಲಿವೆ.

      ಹೌದು, ಇದೆಲ್ಲವೂ ಸಾಧ್ಯವಾಗಬೇಕಾದರೆ ಒಂದು ಬಹು ಮುಖ್ಯವಾದ ಅಂಶವೆಂದರೆ ಕ್ವಾಂಟಂ ಮೆಕಾನಿಕ್ಸ್‌ ತನ್ನ ಎರಡು ಅಥವಾ ಹೆಚ್ಚಿನ ಕಣಗಳನ್ನು ಗೋಜಲಾದ ಸಿಕ್ಕುಸಿಕ್ಕಾದ ಸ್ಥಿತಿಯಲ್ಲಿ ಹೇಗೆ ಇರಿಸುತ್ತದೆ ಎಂಬ ತಿಳಿವಳಿಕೆಯ ಅಗತ್ಯವಿತ್ತು. ಹಾಗೆನೇ ಗೋಜಲಾಗಿಸಿಕೊಂಡು ಸಿಕ್ಕಾದ ಕಣಗಳಲ್ಲಿ ಒಂದಕ್ಕೆ ಏನಾಗುತ್ತದೆಯೋ ಮತ್ತೊಂದು ದೂರವಿದ್ದರೂ ಸಹಾ ಅದಕ್ಕೂ ಏನಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಆದರೆ ಅದು ಹೇಗೇ? ಬಹಳ ಕಾಲ, ಇದರ ಸಾಧ್ಯತೆಯು ಯಕ್ಷ ಪ್ರಶ್ನೆಯಾಗಿತ್ತು. ಏಕೆಂದರೆ ಗೋಜಲಾಗಿ ಸಿಕ್ಕಿಕೊಂಡು ಜೊತೆಯಾದ ಕಣಗಳ ನಡುವೆ ಇರುವ ಸಾಮರಸ್ಯದಲ್ಲಿ ಏನಾದರೂ ಕಾಣದ ಕೈವಾಡ (Hidden Variables) ಇದೆಯಾ ಎಂದುಕೊಳ್ಳಲಾಗಿತ್ತು. ಆ ಕಾಣದ ತಿಳಿವಿಗೆ ಪ್ರಾಯೋಗಿಕ ನಿದರ್ಶನ ಅನಿವಾರ್ಯವಾಗಿತ್ತು. ಅದಕ್ಕೆ ಉತ್ತರವಾಗಿ 1960ರ ದಶಕದಲ್ಲಿಯೇ ಜಾನ್‌ ಸ್ಟಿವರ್ಟ್‌ ಬೆಲ್‌ ಎಂಬಾತ ಒಂದು ಗಣಿತೀಯ ಅಸಮಾನತೆಯನ್ನು ಕೊಟ್ಟಿದ್ದರು. ಆ ಗಣಿತೀಯ ಅಸಮಾನತೆಯನ್ನು ಅವರ ಹೆಸರಲ್ಲಿಯೇ “ಬೆಲ್‌ ಅಸಮಾನತೆ – (Bell Inequality)“ ಎಂದೇ ಕರೆಯಲಾಗುತ್ತದೆ. ಇದು ಹೇಳುವುದೇನಂದರೆ, ಅಂತಹಾ ಸಾಮರಸ್ಯದಲ್ಲಿ ಕಾಣದ ಕೈವಾಡವೇನಾದರೂ ಇದ್ದರೆ, ಅನೇಕ ಪ್ರಾಯೋಗಿಕ ಉದಾಹರಣೆಗಳ ಉತ್ತರಗಳಾಗಿ ದೊರೆತ ಸಾಮರಸ್ಯದ ಅಳತೆಗಳ ಸಂಖ್ಯೆಯು ನಿರ್ದಿಷ್ಟ ಮೌಲ್ಯವನ್ನು ಮೀರುವುದಿಲ್ಲ. ಆದಾಗ್ಯೂ ಕ್ವಾಂಟಂ ಮೆಕಾನಿಕ್ಸ್‌ ಊಹಿಸುವುದೇನೆಂದರೆ ಕೆಲವೊಂದು ಪ್ರಯೋಗಗಳು ಬೆಲ್‌ ಅಸಮಾನತೆಯನ್ನು ಉಲ್ಲಂಘಿಸುತ್ತವೆ. ಆದ್ದರಿಂದ ಉಂಟಾದ ಸಾಮರಸ್ಯವು ಇರಬಹುದಾದದ್ದಕಿಂತಾ ಹೆಚ್ಚು ಬಲವಾಗಿರುತ್ತದೆ.

      ಜಾನ್‌ ಕ್ಲಾಸರ್‌ (John Clauser) ಜಾನ್‌ ಸ್ಟಿವರ್ಟ್‌ ಬೆಲ್‌ ಅವರ ಸೈದ್ಧಾಂತಿಕ ಆಲೋಚನೆಗಳನ್ನು ಆಧರಿಸಿ ಕೆಲವೊಂದು ಪ್ರಯೋಗಗಳನ್ನು ನಡೆಸಿದರು. ಅವುಗಳಲ್ಲಿ ತೆಗೆದುಕೊಂಡ ಅಳತೆಗಳು ಬೆಲ್‌ ಅಸಮಾನತೆಯ ಅಳತೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕ್ವಾಂಟಂ ಮೆಕಾನಿಕ್ಸ್‌ ಅನ್ನು ಬೆಂಬಲಿಸಿದ್ದವು. ಇದರ ಅರ್ಥವೇನೆಂದರೆ ಕ್ವಾಂಟಂ ಮೆಕಾನಿಕ್ಸ್‌ ಕಾಣದ ಕೈವಾಡ (Hidden Variables)ಗಳ ಬೆಂಬಲದ ಸೈದ್ಧಾಂತಿಕ ನಿಲುವಿನಿಂದ ತೆಗೆದು ಹಾಕಲು ಸಾಧ್ಯವಿಲ್ಲವಾಗಿತ್ತು.

      ಇಷ್ಟಾದರೂ ಜಾನ್‌ ಕ್ಲಾಸರ್‌ ಅವರ ಪ್ರಯೋಗಗಳಲ್ಲಿ ಕೆಲವೊಂದು ಲೋಪದೋಷಗಳಿದ್ದವು. ಆಲಿನ್‌ ಆಸ್ಪೆ (Alain Aspect) ಅವರು ಕ್ಲಾಸರ್‌ ಪ್ರಯೋಗಗಳ ಲೋಪದೋಷಗಳನ್ನು ನಿವಾರಿಸಲು ಅನುವಾಗುವ ಪ್ರಯೋಗವನ್ನು ಅಭಿವೃದ್ಧಿ ಪಡಿಸಿದರು. ಇದರಲ್ಲಿ ಗೋಜಲಾಗಿ ಸಿಕ್ಕಾದ ಕಣಗಳ ಜೋಡಿಯು ತನ್ನ ಮೂಲವನ್ನು ಬಿಟ್ಟ ನಂತರದ ಅಳತೆಗಳ ಮಾಪನವನ್ನು ಬದಲಿಸಲು ಸಾಧ್ಯವಾಯಿತು. ಇದರಿಂದ ಅವುಗಳು ಹೇಗಿದ್ದರೂ ಫಲಿತದಲ್ಲಿ ವ್ಯತ್ಯಯ ಉಂಟಾಗಲಿಲ್ಲ.   

      ಇದರಿಂದ ಪ್ರಭಾವಿತವಾದ ಸುಧಾರಿತ ತಂತ್ರಗಳಿಂದ ಕ್ವಾಂಟಂ ಸ್ಥಿತಿಯನ್ನೇ ಬಳಸಿ ಆಂಟನ್‌ ಜೆಲಿಂಗರ್‌ (Anton Zeilinger) ಅವರು ಹಲವಾರು ಪ್ರಯೋಗಗಳ ಸರಮಾಲೆಯನ್ನೇ ರೂಪಿಸಿದರು. ಇವರ ಸಂಶೋಧನಾ ತಂಡದವರು ಹೊಸತೊಂದು ಕ್ವಾಂಟಂ ಟೆಲಿಪೊರ್ಟೇಶನ್‌ (Phenomenon Quantum Teleportation) ಎನ್ನುವ ವಿದ್ಯಮಾನವನ್ನೇ ಪ್ರತಿಪಾದಿಸಿದರು. ಈ ಟೆಲಿಪೊರ್ಟೇಶನ್‌ ಇಂದಾಗಿ ಕ್ವಾಂಟಂ ಸ್ಥಿತಿಯು ಒಂದು ಕಣವನ್ನು ಎಷ್ಟೇ ದೂರದಲ್ಲಿದ್ದರೂ ಮತ್ತೊಂದಕ್ಕೆ ಸಾಗಲು ಸಾಧ್ಯವಾಗುತ್ತದೆ. ಹಾಗಾಗಿ ಕ್ವಾಂಟಂ ಕಣಗಳ ನಡುವಿನ ಪರಸ್ಪರ ಸಂಬಂಧಗಳ ಸಾಮರಸ್ಯ ಬಲಯುತವಾದುದು ಎಂದೇ ತಿಳಿದು ಬಂತು.

“ಹೊಸ ರೀತಿಯ ಕ್ವಾಂಟಮ್ ತಂತ್ರಜ್ಞಾನವು ಹೊರಹೊಮ್ಮುತ್ತಿದೆ ಎಂಬುದು ಈಗ ಹೆಚ್ಚು ಸ್ಪಷ್ಟವಾಗಿದೆ. ನೊಬೆಲ್‌  ಪುರಸ್ಕಾರದ ಈ ಕೆಲಸದಲ್ಲಿ ಗೋಜಲಾದ ಸ್ಥಿತಿಯ ಬಳಕೆಯ ಸಂಶೋಧನೆಯು ಕ್ವಾಂಟಮ್ ಮೆಕ್ಯಾನಿಕ್ಸ್‌ನ ವ್ಯಾಖ್ಯಾನದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನೂ ಮೀರಿ,  ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನಾವು ನೋಡಬಹುದು” ಎಂದು ಭೌತವಿಜ್ಞಾನದ ನೊಬೆಲ್‌ ಕಮಿಟಿಯ ಅಧ್ಯಕ್ಷರಾದ ಪ್ರೊ. ಆಂಡರ್ಸ್‌ ಇರ್ಬಾಕ್‌ ಅಭಿಪ್ರಾಯ ಪಟ್ಟಿದ್ದಾರೆ.       

ದಿನ-ದಿನದ ಅನುಭವದಿಂದ ದೂರವೇ ಉಳಿವ ಸಂಗತಿ 

ಹಾಗಾದರೆ ಕಾಣದ ಕೈವಾಡ ಎಂದು ಕರೆದ Hidden Variables ಅಂದರೇನು? ಒಂದು ಮುಚ್ಚಿದ ಯಂತ್ರದೊಳಗೆ ಎರಡು ಚೆಂಡುಗಳಿದ್ದು ಒಂದು ಬಿಳಿಯದು ಮತ್ತೊಂದು ಕಪ್ಪು. ಆ ಯಂತ್ರವು ಎರಡೂ ಬಣ್ಣಗಳನ್ನು ವಿರುದ್ಧ ದಿಕ್ಕಿನಲ್ಲಿ ಎಸೆಯುತ್ತದೆ ಎಂದಾದರೆ, ಕೈಗೆ ಒಂದು ಬಣ್ಣದ್ದು ಬಂದಾಗ ಮತ್ತೊಂದು ಇನ್ನೊಂದು ಎಂಬುದು ಸ್ಪಷ್ಟ ತಾನೆ? ಆದರೆ ಯಾರೂ ನೋಡದಿದ್ದಾಗ ಆ ಚೆಂಡುಗಳ ಬಣ್ಣವು ನೋಡುವಾಗ ಇದ್ದ ಹಾಗೇ ಇರುತ್ತವೆಯೇ? ಇದನ್ನೇ ಹಿಡನ್‌ ವೇರಿಯಬಲ್‌ ಎಂದು ಕ್ವಾಂಟಂ ಮೆಕಾನಿಕ್ಸ್‌ ಹೇಳುವುದು. ಆ ಚೆಂಡುಗಳು ಸದಾ ಒಂದು ಮುಚ್ಚಿಟ್ಟ ಬಣ್ಣದಲ್ಲಿದ್ದು, ನೋಡಿದಾಗ ಬೇರೆಯವೇ ಆಗಿರುತ್ತವೆ. ಇದು ಕ್ವಾಂಟಂ ಮೆಕಾನಿಕ್ಸ್‌ ಪ್ರಕಾರ ನೋಡದಿದ್ದಾಗ ಅವೆರಡೂ “ಗ್ರೇ” ಇದ್ದು ನೋಡಿದಾಗ ಮತ್ತೊಂದಕ್ಕೆ ಬದಲಾಯಿಸುತ್ತವೆ. ಹಾಗಾಗಿ ಆ “ಗ್ರೇ” ಎನ್ನುವ ಕ್ವಾಂಟಂ ವಿಜ್ಞಾನದ ವಿವರಗಳು ಬೇರೆಯದೇ ಜಗತ್ತನ್ನು ಪ್ರಾಯೋಗಿಕವಾಗಿ ಕೊಡಬಲ್ಲವೇ? ಅದೇ ವಿಶ್ವಾಸ ಈ ಸಂಶೋಧನೆಗಳದ್ದು.

ವಿರೋಧಾಭಾಸಗಳ ಸೋಜಿಗಗಳು

ಅಯ್ಯೋ ಅದ್ಹೇಗೆ? ಎಲ್ಲಾದರೂ ಉಂಟೇ. ಕಾಣದ್ದನ್ನು ಹೀಗೇ ಎಂದು ಹೇಳುವುದುಂಟೇ? ಅದೇನಿದ್ದರೂ ವಿರೋಧಾಭಾಸಗಳ ಸಂಗತಿಗಳೇ ಬಿಡಿ, ಎಂದು ಕ್ವಾಂಟಂ ಜಗತ್ತಿನ ಆಗುಹೋಗುಗಳನ್ನು ತಳ್ಳುವಂತೆಯೇ ಇಲ್ಲ. ಅದೇ ಕ್ವಾಂಟಂ ಜಗತ್ತಿನ ಸ್ಪೇಷಾಲಿಟಿ. ಸ್ವತಃ ಆಲ್ಬರ್ಟ್‌ ಐನ್‌ಸ್ಟೈನ್‌ ಕೂಡ, ಅದೇನದು ಎಷ್ಟೇ ದೂರವಿದ್ದರೂ ಅವರೆಡರ ನಡುವೆ ಸಂಕೇತಗಳೂ ಇಲ್ಲದ ಸಂಭಾಷಣೆಯೇ ಎಂದು ಗೊಣಗಿದ್ದರು. ಆದರೆ ಎರ್ವಿನ್‌ ಶ್ರೊಡಿಂಗರ್‌ ಮಾತ್ರ ಹೌದು ಹೌದು ಅದೇ ಕ್ವಾಂಟಂ ಜಗತ್ತಿನ ವಿಶೇಷತೆ ಎಂದು ಸಮಜಾಯಿಸಿ ಕೊಟ್ಟಿದ್ದರು. ಸತ್ಯ ದರ್ಶನದಲ್ಲಿ ಕ್ವಾಂಟಂಗೆ ಜಾಗವಿಲ್ಲ ಎಂದೇ ಐನ್‌ಸ್ಟೈನ್‌ ಅವರ ದೃಢವಾದ ನಂಬಿಕೆಯಾಗಿತ್ತು. ಕಾಣದ ಜಗದ ಗ್ರಹಿಕೆಗಳನ್ನು ಮಾತಿನಲ್ಲಿ ವಿವರಿಸುವುದಾದರೂ ಹೇಗೆ ಎಂದು ಆರಂಭದಲ್ಲಿಯೇ ಪ್ರಸ್ತಾಪಿಸಿದ್ದೆನಲ್ಲವೇ? ಅದೇ ಇವೆಲ್ಲವೂ ಒಂದು ಬಗೆಯಲ್ಲಿ ಸಾಮಾನ್ಯ ಮಾತಿಗೆ ತಂದರೆ ತಲೆ ಚಿಟ್ಟು ಹಿಡಿಯುವ ಸಂಗತಿಗಳೇ ಎಂಬುದು ನಿಜ. ಕಾರಣ ನೈಜವಾದ ಜಗತ್ತಿನ ವಿವರಣೆಗಳೇನೂ ಇಲ್ಲಿನ ವಾಸ್ತವವನ್ನು ಕಟ್ಟಿ ಕೊಡಲಾರವು. ಕ್ವಾಂಟಂ ಜಗತ್ತಿನ ವಸ್ತುಗಳ ಸಂಬಂಧಗಳು ಅದೆಷ್ಟೇ ದೂರದವಾಗಿರಲಿ, ಯಾವುದೇ ಸಂಕೇತಗಳೂ ಇಲ್ಲದೆಯೂ ಅವುಗಳ ಸಂವಹನವು ಸಾಧ್ಯವಿದೆ. ನಿಜಕ್ಕೂ ಮಾಯಾಜಾಲವೋ ಇಂದ್ರಜಾಲವೋ ಅಥವಾ ಕಟ್ಟು ಕಥೆಯೋ ಅನ್ನಿಸಿದ್ದರೂ ಕ್ಷಮಿಸಿ. ಇದೆಲ್ಲವೂ ಕ್ವಾಂಟಂ ಜಗತ್ತಿನ ಮಾಹಿತಿನ ಸಂವಹನ ಸಾಧ್ಯತೆಗಳ ಸೋಜಿಗಗಳು.

       ಪ್ರಶ್ನೆ ಏನೆಂದರೆ, ಕ್ವಾಂಟಂ ಜಗತ್ತನ್ನು ಒಂದು ಭಾಗವಾಗಿ ಉಳ್ಳ ಈ ಪ್ರಪಂಚದ ವಿವರಣೆಯು ಇನ್ನೂ ಅಪೂರ್ಣ ತಿಳಿವಳಿಕೆಯೇ? ಹಾಗಿದ್ದಲ್ಲಿ ಈ ಕಣಗಳು ಸದಾ ಕಾಣದ ಸಂಗತಿಗಳನ್ನು ಅಡಗಿಸಿಟ್ಟುಕೊಂಡಿವೆಯಾ? ಇವೆಲ್ಲದರ ಆಚೆಯೂ ಒಂದು ಸತ್ಯ ದರ್ಶನದ ಸಾಧ್ಯತೆಗಳ ತಂತ್ರಜ್ಞಾನಗಳ ಫಲಿತಗಳಿವೆ, ಎಂಬುದನ್ನು ಈ ವರ್ಷದ ಮೂವರೂ ವಿಜ್ಞಾನಿಗಳ ಸಂಶೋಧನೆಗಳು ಸಾಬೀತು ಪಡಿಸಿವೆ.

       ಬೆಳಕಿನ ಪ್ರಪಂಚದಲ್ಲಿ ಜೀವನ ನಡೆಸುತ್ತಿರುವ ನಮಗೆ ಕಾಣುವುದು ಮಾತ್ರವೇ ಸತ್ಯ. ಆದರೇ ನಿಜ ಏನೆಂದರೆ ವಿಶ್ವವು ಒಂದು ಅಗಾಧವಾದ ದಟ್ಟ ಕತ್ತಲಿನಲ್ಲೇ ಹರಡಿಕೊಂಡಿದೆ. ಆ ಕತ್ತಲಿನ ತಿಳಿವಳಿಕೆಯ ಬೆಳಕನ್ನು ಅರಸುತ್ತಾ ವಿಶ್ವದ ತಿಳಿವಳಿಕೆಯಲ್ಲಿ ಕತ್ತಲನ್ನು ಅರಿಯುತ್ತಾ ಹೋಗುತ್ತಿದ್ದೇವೆ. ಹಾಗಾಗಿ ಕಾಣದ ತಿಳಿವೊಂದು ಇದ್ದೀತು ಎನ್ನುವುದರ ಸಾಕ್ಷಿಗಳನ್ನು ಪ್ರಮಾಣಿಕರಿಸುವುದು ಅಸಾಧ್ಯವಾದ ಸವಾಲು. ನಮ್ಮ ಮುಂದಿನ ಸಂತತಿಗಳಿಗೆ ಇದೇ ಕತ್ತಲೂ ಬೆಳಕಿನ ಸಾಕ್ಷಿಗಳಾಗಬಹುದು. ಕ್ವಾಂಟಂ ಮೆಕಾನಿಕ್ಸ್‌ ಮಾಡುವ ವಿಶೇಷ ಸಾಧ್ಯತೆಗಳಲ್ಲಿ ಈ ವರ್ಷದ ನೊಬೆಲ್‌ ಪುರಸ್ಕಾರದ ಸಂಶೋಧನೆಗಳು ಆರಂಭಿಕ ಮೆಟ್ಟಿಲನ್ನು ದಾಟಿವೆ. ಕಾಣದ ಕತ್ತಲಿನ ಬೆಳಕನ್ನು ಅರಿಯುವ ಮಾರ್ಗವೊಂದಿದೆ ಎನ್ನುವುದ ಬರೀ ದಾರ್ಶನಿಕವಾದ ಮಾತು ಅಷ್ಟೇ ಆಗಿರಲಾರದು. ಅದೊಂದು ಸಾಧ್ಯತೆಗಳ ತಂತ್ರಗಳನ್ನೂ ಕೊಟ್ಟೀತು.

       ಕನಿಷ್ಠವಾಗಿ ಮಾಹಿತಿಯ ನಿರ್ವಹಣೆಯಲ್ಲಿ ಕ್ವಾಂಟಂ ಸ್ಥಿತಿಯು ಮಾಹಿತಿಯ ಸಂಗ್ರಹದ, ವರ್ಗಾವಣೆಯ ಹಾಗೂ ಸಂಶ್ಲೇಷಣೆಯಲ್ಲಿ ಸಮರ್ಥವಾದ ವಿಶೇಷಗಳನ್ನು ಖಂಡಿತಾ ತರಲಿವೆ. ಟೆಲಿಪೊರ್ಟೇಶನ್‌ ಇದನ್ನೇ ವಿವರಿಸುವುದು. ಜೊತೆಯಾದ ಎರಡು ಕಣಗಳ ನಡುವೆ ಗೋಜಲಾದ ಸಿಕ್ಕಿನ ಸ್ಥಿತಿಯು ಇದ್ದು ಅದರಲ್ಲೊಂದು ಕಣವು ಬೇರೊಂದು ಜೋಡಿಯ ಕಣವನ್ನು ತಲುಪಿ ತನ್ನ ಒಳಗಿನ ಗುರುತನ್ನು ದಾಟಿಸುವಂತಾದರೆ, ಆ ಮೂರನೆಯದು ತನ್ನದೇ ಗುರತನ್ನೂ ಬಿಟ್ಟು ಪಡೆದ ಮಾಹಿತಿಯ ಗುರುತನ್ನು ಪಡೆಯುವ ಮಾರ್ಗವನ್ನೇ “ಕ್ವಾಂಟಂ ಟೆಲಿಪೊರ್ಟೇಶನ್‌” ಎಂಬುದಾಗಿ ಆಂಟನ್‌ ಜೆಲಿಂಗರ್‌ ವಿವರಿಸಿರುವುದು.     

       ಇದ್ದಕ್ಕಿದ್ದಂತೆ ಬೇತಾಳನ ಕಥೆಯಲ್ಲಿ ಪ್ರಶ್ನೆಗಳಿಗೆ ಉತ್ತರವನ್ನು ಗೊತ್ತಿದ್ದೂ ಹೇಳದಿದ್ದರೆ ತಲೆಯು ಚೂರು ಚೂರಾಗುವ ಜಾಗ್ರತೆಯ ಮಾತು ಕ್ವಾಂಟಂ ಜಗತ್ತಿನ ಸೈದ್ಧಾಂತಿಕ ವಿಜ್ಞಾನಿಗಳಿಗೆ ವಿರುದ್ಧವಾಗಿ ಕೇಳಿಸಿದೆಯೇ ಅನ್ನಿಸಿದೆ. ಇಲ್ಲಿ ಉತ್ತರಗಳ ಗೋಜಲಿನ ಸಿಕ್ಕನ್ನು ಬಿಡಿಸಿ ಅರ್ಥೈಸಿಕೊಂಡಷ್ಟೂ ಬಿಡಿಸಿ ತಿಳಿದುಕೊಂಡವರ ತಲೆಯೇ ಚೂರು-ಚೂರಾಗುವ ಮಾತನ್ನು ಹೇಳುವಿರಿ ಎಂದು ನಾನೇ ಇಷ್ಟಕ್ಕೆ ನಿಲ್ಲಿಸಿ, ಶ್ರೊಡಿಂಗರ್‌ ಮುಂದುವರಿಕೆಯಾಗಿ ನೊಬೆಲ್‌ ಪಡೆದ ಮೂವರನ್ನೂ ಸೂಕ್ಷ್ಮವಾಗಿ ಪರಿಚಯಿಸಿ ಸದ್ಯಕ್ಕೆ ಮುಗಿಸುತ್ತೇನೆ.

 ಆಲನ್‌ ಆಸ್ಪೆ ಫ್ರೆಂಚ್‌ ಮೂಲದ ಭೌತ ವಿಜ್ಞಾನಿ. ಜೂನ್‌ 15, 1947ರಂದು ಫ್ರಾನ್ಸ್‌ ದೇಶದ ಆಗೆನ್‌ ಅಲ್ಲಿ ಜನಿಸಿದರು. ಕ್ವಾಂಟಂ ಮೆಕಾನಿಕ್ಸ್‌ನ ಪ್ರಾಯೋಗಿಕ ವಿವರಣೆಗಳಿಗೆ ಇವರು ಹೆಸರಾಂತರು.

ಜಾನ್‌ ಕ್ಲಾಸರ್‌ (John Francis Clauser) ಅಮೆರಿಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ, 1942ರ ಡಿಸೆಂಬರ್‌ 1ರಂದು ಜನಿಸಿದರು. ಕ್ಯಾಲಿಫೋರ್ನಿಯಾ ತಾಂತ್ರಿಕ ಸಂಸ್ಥೆಯಲ್ಲಿ ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಕ್ಯಾಲಿಫೊರ್ನಿಯಾದ ಲಾರೆನ್ಸ್‌ ಬರ್ಕೆಲಿಯ ನ್ಯಾಶನಲ್‌ ಲ್ಯಾಬೊರೇಟರಿಯಲ್ಲಿ ವಿಜ್ಞಾನಿಯಾಗಿದ್ದಾರೆ.

ಆಂಟನ್‌ ಜೆಲಿಂಗರ್‌ (Anton Zeilinger) ಆಸ್ಟ್ರಿಯ ದೇಶದವರು. 20ನೆಯ ಮೇ 1945ರಲ್ಲಿ ಜನಿಸಿದ ಆಂಟನ್‌ ವಿಯನ್ನಾ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದ ಎಮರೀಟಸ್‌ ಪ್ರಾಧ್ಯಾಪಕರಾಗಿದ್ದಾರೆ. ಕ್ವಾಂಟಂ ಟೆಲಿಪೊರ್ಟೇಶನ್‌ ಗೆ ಇವರು ವಿಖ್ಯಾತರು.

ಈ ಮೂವರೂ ವಿಜ್ಞಾನಿಗಳಿಗೆ ಹೊಸತೊಂದು ಕ್ವಾಂಟಂ ಜಗತ್ತಿನ ಬಾಗಿಲನ್ನು ತೆರೆಯುವ ಸಂಶೋಧನೆಗಳಿಗಾಗಿ ನೊಬೆಲ್‌ ಪಡೆದ ಈ ಸಂದರ್ಭದಲ್ಲಿ  CPUS ಮತ್ತು ಅದರ ಹಿತೈಷಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

Leave a Reply