“ವಿಜ್ಞಾನವೇ, ವಿಜ್ಞಾನಿಗಳು ಮಾಡಿದ ಅತ್ಯಂತ ಗಮನಾರ್ಹ ಆವಿಷ್ಕಾರ! ಈ ಆವಿಷ್ಕಾರವನ್ನು ಗುಹೆ-ಚಿತ್ರಕಲೆ ಮತ್ತು ಬರವಣಿಗೆಯಂತಹಾ ಆವಿಷ್ಕಾರಗಳ ಪ್ರಾಮುಖ್ಯತೆಯೊಂದಿಗೆ ಹೋಲಿಸಬೇಕು. ಈ ಹಿಂದಿನ ಮಾನವ ಸೃಷ್ಟಿಗಳಂತೆ, ವಿಜ್ಞಾನವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವೇಶಿಸುವ ಮೂಲಕ ಮತ್ತು ಅವುಗಳನ್ನು ಒಳಗಿನಿಂದ ಅರ್ಥಮಾಡಿಕೊಳ್ಳುವ ಮೂಲಕ ನಿಯಂತ್ರಿಸುವ ಪ್ರಯತ್ನವಾಗಿದೆ. ಮತ್ತು ಅವರಂತೆ, ವಿಜ್ಞಾನವು ಖಂಡಿತವಾಗಿಯೂ ಮಾನವ ಅಭಿವೃದ್ಧಿಯಲ್ಲಿ ನಿರ್ಣಾಯಕ ಹೆಜ್ಜೆಯನ್ನು ಮಾಡಿದೆ ಮತ್ತು ಅದನ್ನು ಹಿಮ್ಮುಖವಾಗಿ ತಿರುಗಿಸಿ ನಡೆಸಲು ಸಾಧ್ಯವಿಲ್ಲ” – ಜಾಕೋಬ್ ಬ್ರೋನೋವ್‌ಸ್ಕಿ (Jacob Bronowski)
ವಿಜ್ಞಾನದ ಸಮಾಜೀಕರಣದ ಮಾತುಗಳು ಬಂದಾಗ ಸಹಜವಾಗಿ ಅನೇಕರು, ಜನ ಸಾಮಾನ್ಯರ ಆಡು ಭಾಷೆಗೆ ಒಂದಷ್ಟು ಅನುವಾದಗಳ ಕುರಿತು ಮಾತನಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಹೋಗಿ ಸ್ಥಳೀಯತೆಯನ್ನು ಸಮೀಕರಿಸಿಯಾರು. ಜೊತೆಗೆ ಬಹುಪಾಲು ವಿಜ್ಞಾನದ ಬರಹಗಾರರು ಕೂಡ ಹೈಸ್ಕೂಲಿನ ಮಕ್ಕಳಿಗೆ, ಅಥವಾ ಹೈಸ್ಕೂಲ್ ಓದಿನ ಹಿನ್ನೆಲೆಯ ಅಗತ್ಯಕ್ಕೆ ಬರೆಯುವ ಸಾಧ್ಯತೆಗಳ ಬಗ್ಗೆಯೂ ಹೇಳುವುದುಂಟು. ಖಂಡಿತವಾಗಿಯೂ ಇದಷ್ಟೇ ಅಲ್ಲ!
ಇನ್ನು ವಿಜ್ಞಾನಿಗಳಾದರೂ, ತಾವು ಕೆಲಸ ಮಾಡುವ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಒಪ್ಪಿಸಿದರೆ ಸಾಕು ಎಂದು ಕೊಂಡಿದ್ದಾರೆ. ವಿಜ್ಞಾನ ಸಂಸ್ಥೆಗಳು ತಮ್ಮ ಸಾರ್ವಜನಿಕ ಸಂಪರ್ಕದ ನೆರವಿಗೆ ಬೇಕಾದ ಹಸ್ತಪತ್ರಿಕೆಗಳನ್ನು ಹೊರತಂದು ಹಂಚುವುದನ್ನು ಬಿಟ್ಟರೆ, ಒಂದಷ್ಟು ಆಗಾಗ್ಗೆ ಕೇಳುವ ಪ್ರಶ್ನೋತ್ತರಗಳ ಮಾದರಿಗಳನ್ನು ಸಿದ್ಧಪಡಿಸಿ ಅಣಿಯಾಗಿಸಿಕೊಂಡಿರುವುದೂ ಉಂಟು.
ಇಷ್ಟೆಲ್ಲದರ ನಡುವೆ ಸಾರ್ವಜನಿಕರೋ ವಿಜ್ಞಾನದ ತಿಳಿವಳಿಕೆಗಿಂತಲೂ ವಿಜ್ಞಾನಿಗಳಲ್ಲಿ ವೈಯಕ್ತಿಕ ಅನುಮಾನಗಳಿದ್ದರೆ ಅವರ ಖರ್ಚು ವೆಚ್ಚಗಳ, ಪ್ರಾಜೆಕ್ಟ್ ನಿರ್ವಹಣೆಯ ಬಗೆಗೆ ಮಾಹಿತಿ ಹಕ್ಕಿನಲ್ಲಿ (ಆರ್.ಟಿ.ಐ) ಕೇಳುವ ಕುರಿತು ಮಾತನಾಡಿಯಾರು! ಒಟ್ಟಾರೆ ವಿಜ್ಞಾನವೂ ಸೃಜಿಸುವ ಸತ್ಯ ಹಾಗೂ ಸೌಂದರ್ಯದ, ಜೊತೆಗೆ ಅದರ ನಿರ್ಮಿತಿ ಮತ್ತು ವಿಕಾಸದ ಬೆರಗಿನ ಕುರಿತಂತೆ ಭಾರತೀಯ ಸಂದರ್ಭದಲ್ಲಿಯಂತೂ ಚರ್ಚೆಗಳು ಕಡಿಮೆಯೆ. ಇದಕ್ಕಿಂತಲೂ ಹೆಚ್ಚಿನ ಸಂಗತಿಗಳೆಂದರೆ ವಿಜ್ಞಾನವನ್ನು ಸುಲಭ ಭಾಷೆಗೆ ಒಗ್ಗಿಸುವ ಸಾಹಸ ಹಾಗೂ ಕಷ್ಟಗಳ ಬಗೆಗೆ ಬೇಕಾದಷ್ಟು ಸರಕುಗಳನ್ನು ಒದಗಿಸುವ ಜಾಣತನ ಸಿಗಬಹುದು.
ಇಷ್ಟೊಂದು ವಿಚಾರಗಳನ್ನು ಇಟ್ಟುಕೊಂಡು ವಿಜ್ಞಾನದ ಸಮಾಜೀಕರಣದ ಮಾತುಗಳನ್ನು ಅದರ ಸೌಂದರ್ಯವನ್ನು ಆಸ್ವಾದಿಸುವ ಹಿನ್ನೆಲೆಯಲ್ಲಿ ಆರಂಭಿಸುವ ಮೊದಲು, ವಿಜ್ಞಾನವನ್ನು ಅದರ ಸಂವಹನ ಭಾಷೆಯಾದ ಇನ್ನೂ ಭಿನ್ನವಾದ ಗ್ರಹಿಕೆಯನ್ನು ಕೊಟ್ಟಿರುವ ಗಣಿತದಿಂದ ನೋಡೋಣ. ಏಕೆಂದರೆ ತೀರಾ ಒಣ ವಿಚಾರಗಳು, ಸೈದ್ಧಾಂತಿಕ ಸಂಗತಿಗಳು, ಅರ್ಥವಾಗದ ಪ್ರಮೇಯಗಳು ಇರುವ ಗಣಿತದ ಬಗ್ಗೆ ಅದರೊಳಗಿನ ಸಮಾಜಿಕತೆಯನ್ನು ಹಂಗೇರಿಯ ಗಣಿತಜ್ಞ ಪ್ರೊ. ಪಾಲ್ ಎರ್ಡಾಸ್ ಅವರನ್ನು ಕುರಿತು ಅರಿತಾಗ ಅಚ್ಚರಿ ಎನಿಸಬಹುದು. 20ನೆಯ ಶತಮಾನ ಅದ್ವಿತೀಯ ಗಣಿತಜ್ಞರಲ್ಲಿ ಒಬ್ಬರಾದ ಎರ್ಡಾಸ್ ಅವರು ಗಣಿತವು ಒಂದು ಸಾಮಾಜಿಕ ಚಟುವಟಿಕೆ ಎಂದೇ ವಿವರಿಸುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ 511 ಜನ ವಿಜ್ಞಾನಿಗಳ ಸಹಯೋಗದೊಡನೆ ಸಂಶೋಧನೆ. ಅಧ್ಯಯನಗಳನ್ನು ನಡೆಸಿದ್ದವರು. ಗಣಿತದಲ್ಲಿ ಅವರ ಸಂಶೋಧನಾ ಬರಹಗಳು ಬರೋಬ್ಬರಿ 1525! ಅವರ ಈ ಸರ್ವಕಾಲಿಕ ದಾಖಲೆಯನ್ನು ಇನ್ನೂ ಯಾರಾದರೂ ದಾಟಬೇಕಿದೆ. ಅವರ ಹೆಸರನ್ನು ಹೊಂದಿರುವ, ಸಂಖ್ಯೆ, ಸಿದ್ಧಾಂತ ಇತ್ಯಾದಿಗಳ ಸಂಖ್ಯೆಯು 40ಕ್ಕೂ ಹೆಚ್ಚು. ಉದಾಹರಣೆಗಳೆಂದರೆ ಎರ್ಡಾಸ್ ನಂ. ಎರ್ಡಾಸ್ ಕಂಜಕ್ಚರ್, ಎರ್ಡಾಸ್ ಗ್ರಾಫ್, ಎರ್ಡಾಸ್ ಸೂಚ್ಯಾಂಕ, ಎರ್ಡಾಸ್ ಥಿಯರಿ, ಇತ್ಯಾದಿ… ಇತ್ಯಾದಿ.. ಅವರೇನೋ ಗಣಿತಜ್ಞರು ಸಂಖ್ಯೆಗಳೊಂದಿಗೆ ಆಡುವ ಮನಸ್ಸನ್ನು ಸಿದ್ಧವಾಗಿರಿಸಿಕೊಂಡವರು ಎನ್ನುವ ಸಮಾಧಾನವನ್ನು ಹೇಳುತ್ತೀವೇನೋ? ಅದೆಲ್ಲಾ ಬಿಡಿ ಅಕ್ಷರಶಃ ಸಾವಿನ ಸಮಯದವರೆಗೂ ಗಣಿತವನ್ನೇ, ಸಿದ್ಧಾಂತ-ಪ್ರಮೇಯಗಳ ಪರಿಹಾರಗಳನ್ನೇ ಉಸಿರಾಡಿದರು. ತಮ್ಮ ಸಾವಿನ ಕೆಲವೇ ಗಂಟೆಗಳ ಮೊದಲು ಪೊಲೆಂಡಿನ ವಾರ್ಸಾ ನಗರದಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದರಲ್ಲಿ ಜ್ಯಾಮಿತಿಯ ಸಮಸ್ಯೆಯೊಂದನ್ನು ಬಿಡಿಸಿದ್ದರು. ಮುಂದೊಮ್ಮೆ ಗಣಿತದ ಸಮಾಜೀಕರಣ ಸಂಗತಿಗಳಲ್ಲಿ ಕೇವಲ ಅವರನ್ನು ಹಿನ್ನೆಲೆಯಾಗಿಸಿಕೊಂಡೇ ಪೂರ್ಣ ಪ್ರಮಾಣದ ಟಿಪ್ಪಣಿಯನ್ನು ವಿಜ್ಞಾನ ಸಮಾಜೀಕರಣದ ಕಲಿಕೆಯಾಗಿಸೋಣ.
ಖ್ಯಾತ ಗಣಿತಜ್ಞ ಹಾಗೂ ದಾರ್ಶನಿಕರಾದ ಬರ್ಟಂಡ್ ರಸೆಲ್ ಅವರು “ಗಣಿತವು ಕೇವಲ ಸತ್ಯ ಮಾತ್ರವಲ್ಲ, ಅದ್ವಿತೀಯ ಸೌಂದರ್ಯವುಳ್ಳದ್ದು – ಈ ಸೌಂದರ್ಯವು ಶಾಂತ ಹಾಗೂ ಗಂಭೀರ ಸ್ವಭಾವದ್ದು ಎನ್ನುತ್ತಾರೆ. ಒಂದು ಬಗೆಯಲ್ಲಿ ಶಿಲ್ಪದಂತೆ! ಅದನ್ನು ಆಸ್ವಾದಿಸುವ ಮನಸ್ಸಿರದಿದ್ದರೆ ಅದೊಂದು ಖುಷಿಕೊಡದ ಸಂಗೀತದಂತೆ, ಕಲೆಯಂತೆ” ಎನ್ನುತ್ತಾರೆ. “ಇದನ್ನು ಆಘ್ರಾಣಿಸಲು ನಾವು ಕೇವಲ ಮಾನವರಾಗಿದ್ದರಷ್ಟೇ ಸಾಲದು! ನಮ್ಮೊಳಗಿನ ಹೃದಯ ಮತ್ತು ಆನಂದಿಸುವ ವಿಶಾಲ ಮನಸ್ಸನ್ನು ತೆರೆದಿಟ್ಟಿರಬೇಕು. ಗಣಿತವಂತೂ ನಿಜಕ್ಕೂ ಅತ್ಯದ್ಭುತ ಕಾವ್ಯ” ಎಂದು ಹೇಳುತ್ತಾರೆ.
ವಿಜ್ಞಾನವನ್ನು ದಾರ್ಶನಿಕತೆಯ ಹಿನ್ನೆಲೆಯಲ್ಲಿ ನೋಡುವ ಕ್ರಮದಿಂದಂತೂ ಹತ್ತು ಹಲವು ವೈಚಿತ್ರಗಳು ಇತಿಹಾಸದ ಉದ್ದಕ್ಕೂ ಜರುಗಿವೆ. ವಿಜ್ಞಾನವನ್ನು ಸೌಂದರ್ಯವನ್ನರಿಯದ ಒಣ ತಾತ್ಸಾರಗಳ ಪ್ರತಿಮೆಗಳಾಗಿಸಿ ಹಂಗಿಸುವವರಿದ್ದಾರೆ. ಅದನ್ನು ಹಟಮಾರಿ ಎನ್ನುವವರೂ ಇದ್ದಾರೆ. ಅದನ್ನು ಪ್ರತಿಷ್ಠೆಗಳ ಪರಾಕಾಷ್ಠೆ ಎಂದೂ ಪಕ್ಕಕ್ಕೆ ತಳ್ಳುವವರಿದ್ದಾರೆ. ಇಂತಹ ಮಾತುಗಳನ್ನು ತುಂಬಾ ಹಿಂದಿನ ವಿವೇಚನಾಶೀಲ ಮನಸ್ಸುಗಳಿಂದಲೂ ಕೇಳಿರುವ, ದಾಖಲಿಸಿರುವ ಉದಾರಹಣೆಗಳಿಗೇನೂ ಕಡಿಮೆ ಇಲ್ಲ. “Poetry is about feeling, science is about facts. They’re nothing to do with each other!” ಇದು ರೂಢಿಗೆ ಬಂದದ್ದು ಖ್ಯಾತ ಕವಿ ಜಾನ್ ಕೀಟ್ಸ್ ಅವರಿಂದ! ಆತ ಮುಂದುವರೆದು “ವಿಜ್ಞಾನವು ನಿಗೂಢತೆಗಳನ್ನು ಒಡೆಯುವ ಕುತಂತ್ರವುಳ್ಳದೆಂದೂ, ಒಂದು ಬಗೆಯಲ್ಲಿ ಸೌಂದರ್ಯವನ್ನು ಹಾಳುಗೆಡಹಲು ದೇವತೆಯ ರೆಕ್ಕೆಗಳನ್ನು ಕತ್ತರಿಸುವ ಕೆಲಸ ಮಾಡುತ್ತದೆ” ಎಂದೂ ವಿವರಿಸಿದ್ದರು. ನ್ಯೂಟನ್ ಮಳೆಬಿಲ್ಲಿನ ವಿವರಗಳ ಪತ್ತೆ ಹಚ್ಚಿ ಕವಿಗಳಿಗೆ ನಿರಾಸೆ ಮಾಡಿದರೆಂದೇ ಕೀಟ್ಸ್ ಹಳಹಳಿಸುತ್ತಾರೆ. ಮಳೆಬಿಲ್ಲಿನ ವೈಜ್ಞಾನಿಕತೆಯ ರಸವತ್ತತೆಯನ್ನು ಬಿಡಿಸಿ ಬಣ್ಣಗಳಾಗಿಸುವ ಸೌಂದರ್ಯವನ್ನು ಕೀಟ್ಸ್ ಆಸ್ವಾದಿಸಲು ಸಾಧ್ಯವಾಗಿದ್ದು ಆತನ ಹಟಮಾರಿತನವೋ ಏನೋ, ಸದ್ಯಕ್ಕೆ ಇದನ್ನಿಲ್ಲಿಗೇ ಬಿಡೋಣ.
ವಿಜ್ಞಾನವಾಗಲಿ ಅಥವಾ ಕಾವ್ಯವಾಗಲಿ ಅವುಗಳೆರಡರ ಆಳದಲ್ಲಿ ಹುಡುಕಾಟದ ಬೆರಗೊಂದಿದೆ. ಎರಡೂ ತಮ್ಮ ವಿಕಾಸದಲ್ಲಿ ಉತ್ತೇಜಿಸುವ, ಉನ್ಮಾದ ತರುವ ಲಕ್ಷಣಗಳನ್ನು ಹೊತ್ತಿವೆ. ಕ್ರಿಸ್ತಪೂರ್ವ 6 ಹಾಗೂ 5ನೆಯ ಶತಮಾನದಲ್ಲೇ ಅಂದರೆ ಸಾಕ್ರಟೀಸ್, ಥೇಲ್ಸ್ ಮುಂತಾದವರ ಬದುಕಿನ ಮೊದಲ ದಿನಗಳಲ್ಲೇ ಸತ್ಯದ ಹುಡುಕಾಟಕ್ಕೆ ರೂಪಕಗಳ, ವೈವಿಧ್ಯಮಯ ಉದಾಹರಣೆಗಳ ಮೊರೆಹೊಕ್ಕಿರುವುದನ್ನು ಕಾಣುತ್ತೇವೆ. ತಮಗರಿವಿಲ್ಲದಂತೆ ಭೌತವೈಜ್ಞಾನಿಕ, ರಸಾಯನಿಕತೆಗಳ, ಭೂಮಿ ಕುರಿತ ಕೌತುಕಗಳ, ಅಷ್ಟೇಕೆ ಜಗತ್ತಿನ ಎಲ್ಲಾ ಆಗು ಹೋಗುಗಳ ಊಹೆಗಳನ್ನೂ ಸೃಜಿಸಿ ಆನಂದಿಸಿದರು. ಕಾವ್ಯಗಳ ಮೂಲಕ ವಿಜ್ಞಾನದ ಸೃಷ್ಟಿಗೆ ಅಡಿಪಾಯವನ್ನು ಹಾಕಿದರು. ಇದನ್ನು ಅದರ ಆಳದ ಪ್ರೀತಿಯಿಂದ ಅರಿಯದೆ ಕೀಟ್ಸ್ ಅಲ್ಲದೆ ವಿನ್ಸಂಟ್ ಚರ್ಚಿಲ್ ಅಂತಹವರೂ ಮುಂದುವರೆಸಿ ವಿಜ್ಞಾನವನ್ನು “ವಿಲನ್” ಆಗಿಸುವ ಚಟಕ್ಕೆ ಕಾರಣರಾದರು. 18ನೆಯ ಶತಮಾನದ ಎರಾಸ್ ಮಸ್ ಡಾರ್ವಿನ್ ಅವರಂತಹಾ ಚಿಂತಕರು “ನಿಸರ್ಗದ ದೇವಾಲಯ” ಎನ್ನುವಂತಹಾ ಪದ್ಯಗಳನ್ನೂ ಬರೆದರು. ಇದರಲ್ಲಿ ನಿಸರ್ಗದ ವಿಕಾಸದಂತಹಾ ವೈಜ್ಞಾನಿಕ ಸತ್ಯವನ್ನೂ ಕಾವ್ಯದ ರೂಪಕಗಳಲ್ಲಿ, ಹಿಡಿದಿಟ್ಟಿದ್ದಾರೆ. ಕಾಣದ ಸೂಕ್ಷ್ಮ ಜೀವಿಯಿಂದ, ಮಾನವನವರೆಗೂ ವಿಕಾಸದ ಹಾದಿಯ ಸೌಂದರ್ಯವನ್ನು ಕಂಡಿದ್ದಾರೆ. ಆಧುನಿಕ ಜಗತ್ತಿನ ಮನುಕುಲವು ಜ್ಞಾನದ ಹುಡುಕಾಟವನ್ನು ಭೌತವಿಜ್ಞಾನ, ರಸಾಯನಿಕ ವಿಜ್ಞಾನ ಜೀವಿವಿಜ್ಞಾನ, ಭೂವಿಜ್ಞಾನ, ಮುಂತಾದ ದಾರಿಗಳ ವಿವಿಧತೆಯನ್ನು ನಿರ್ಮಿಸಿ ಹಲವು ಮಾರ್ಗೋಪಾಯಗಳನ್ನು ಹೇಳಿಕೊಟ್ಟಿದೆ. ಅಂತಿಮವಾಗಿ ಎಲ್ಲವೂ ಒಂದೇ ಗುರಿಯನ್ನು ಹೊಂದಿವೆ, ವಿವಿಧ ದಾರಿಗಳ ಸೌಂದರ್ಯವನ್ನು ವಿಕಾಸಗೊಳಿಸಿವೆ. ಸದ್ಯಕ್ಕೆ 2017ರ ರಸಾಯನಿಕ ವಿಜ್ಞಾನದ ನೊಬೆಲ್ ಪುರಸ್ಕೃತ ವಿಜ್ಞಾನಿ ಜಾಕೂಸ್ ದುಬೊಶೆಟ್ ಅವರ ಮಾತಿನಿಂದ ನಿಲ್ಲಿಸುತ್ತೇನೆ.
“Science is unity and physics, biology, chemistry are all different intertwined ways of understanding the same reality.” – Jacques Duboche (Nobel Laureate in Chemistry, 2017)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್