ಜಗತ್ತಿನಲ್ಲಿ ನೊಬೆಲ್ ಪ್ರಶಸ್ತಿ ಎಂದರೆ, ರೋಮಾಂಚನದ ಸಂಗತಿ. ನೊಬೆಲ್ ಪುರಸ್ಕಾರ ಸುದ್ದಿ ಮಾಡಿದ ಹಾಗೆ ಮತ್ತಾವ ಪ್ರಶಸ್ತಿಯೂ ಸುದ್ದಿ ಮಾಡಲಾರವು. ನಿನ್ನೆಯ ದಿನ ಮತ್ತೊಂದು ಜಾಗತಿಕ ಪ್ರಶಸ್ತಿ “ಅಬೆಲ್ ಪುರಸ್ಕಾರ” ಓರ್ವ ಮಹಿಳೆಗೆ ಕೊಡುವ ಮೂಲಕ ವಿಶೇಷ ಸುದ್ದಿಯಾಗಿಸಿತ್ತು. ಇದೇನು..”ನೊಬೆಲ್- ಅಬೆಲ್” ಎರಡೂ ಪದಗಳು ಒಂದೇ ಬಗೆಯ ಸದ್ದು ಮಾಡುತ್ತಿವೆಲ್ಲಾ ಅನ್ನಿಸುತ್ತಲ್ಲವೇ? ನಿಜ. ಸದ್ದು ಒಂದೇ…ಸುದ್ದಿಗಳೂ ಒಂದು ಬಗೆಯಲ್ಲಿ ಒಂದೇ! ಅವೆರಡೂ ಒಂದೇ ಮಾದರಿಯ ಪುರಸ್ಕಾರಗಳು, ಒಮ್ಮೆಲೇ ಜಾರಿಯಾಗ ಬೇಕಾಗಿದ್ದರೂ ಒಂದಕ್ಕೊಂದು ಶತಮಾನಗಳ ಅಂತರ….! ಹೌದು ಅದೇ ಕಾರಣಕ್ಕೇ “ಅಬೆಲ್..” ಅಷ್ಟಾಗಿ ಜನಪ್ರಿಯವಾದುದಲ್ಲ. ನೊಬೆಲ್ ಕಳೆದ ಶತಮಾನದ ಆದಿಯಿಂದಲೂ ಎಲ್ಲಾ ಬಗೆಯ ವಿಜ್ಞಾನಗಳಿಗೂ, ಜತೆಗೆ ಸಾಹಿತ್ಯ, ಶಾಂತಿ ಹಾಗೂ ಕಾಲಾಂತರದಲ್ಲಿ ಅರ್ಥವಿಜ್ಞಾನಕ್ಕೂ ಕೊಡಲಾರಂಭಿಸಲಾಗಿದೆ. “ನೊಬೆಲ್” ಪುರಸ್ಕಾರದ ಸ್ಥಾಪಕ ಸ್ವೀಡನ್ನಿನ ಅನ್ವೇಷಕ-ರಸಾಯನ ವಿಜ್ಞಾನಿ ಆಲ್ಫ್ರೆಡ್ ನೊಬೆಲ್. ಆದರೆ “ಅಬೆಲ್” ಪುರಸ್ಕಾರವನ್ನು “ನೀಲ್ಸ್ ಹೆನ್ರಿಕ್ ಅಬೆಲ್” ಹೆಸರಿನಲ್ಲಿ ನಾರ್ವೆ ಸರ್ಕಾರವು ಕೊಡುತ್ತಿದೆ. ಈ ನಾರ್ವೆ-ಸ್ವೀಡನ್ ದೇಶಗಳು ಅಕ್ಕ-ಪಕ್ಕದವು! ಹೆಚ್ಚೂ-ಕಡಿಮೆ, ಇಂಡಿಯಾ-ಪಾಕಿಸ್ಥಾನದ ತರಹ….! ಹಾಂ…ನಿಮ್ಮ ಅನುಮಾನ ನಿಜ..ನಮ್ಮ ಹಾಗೇಯೇ ಒಂದೇ ಸಂಸ್ಕೃತಿಯಿಂದ ಬೇರೆಯಾದ, ಸದಾ ವಿರೋಧ ಇಟ್ಟುಕೊಂಡ ದೇಶಗಳು. ಇದೆಲ್ಲವೂ ತುಂಬಾ ಹಳೆಯ ಕಥೆ! ಶತಮಾನಗಳಷ್ಟು ಹಿಂದಿನದು. ಅದೇನು ನೊಬೆಲ್ ಅಲ್ಲಿ ಇಲ್ಲದಿದ್ದರೂ ಗಣಿತಕ್ಕೆ “ಫೀಲ್ಡ್ಸ್ ಮೆಡಲ್” ಇತ್ತಲ್ಲ ಅನ್ನಿಸಿದರೆ, ಅದನ್ನು “ನೊಬೆಲ್-ಅಬೆಲ್” ಗಳ ಪರಿಹರಿಸಿ ನೋಡೋಣ..
ಅದಿರಲಿ ಮತ್ತೇಕೆ ಈಗ ಈ “ನೊಬೆಲ್-ಅಬೆಲ್” ನಡುವಣ ಕಿತ್ತಾಟ. ಹೌದು.. ಸ್ವೀಡನ್ನಿನ ನೊಬೆಲ್ ಎಲ್ಲಾ ಬಗೆಯ ವಿಜ್ಞಾನಗಳಿಗೂ ಪ್ರತೀ ವರ್ಷ ಪುರಸ್ಕಾರ ಕೊಡುವಂತೆ “ವಿಲ್” ಬರೆದಿಟ್ಟರು, ಅದರಂತೆ ವಿಜ್ಞಾನದ ಪುರಸ್ಕಾರಗಳಲ್ಲಿ “ಗಣಿತ”ವನ್ನು ಹೊರಗಿಟ್ಟರು. ನಾರ್ವೆಯಲ್ಲಿ ಆ ಕಾಲಕ್ಕಾಗಲೇ ಜಗದ್ವಿಖ್ಯಾತ ಗಣಿತಜ್ಞರು ಇದ್ದರು. ಅವರಲ್ಲಿ ಖ್ಯಾತರಾದ ಮರೀಯಸ್ ಸೋಫಸ್ ಲೀ ಎಂಬ ಗಣಿತಜ್ಞರು ತಮ್ಮ ಕಾಲಕ್ಕಾಗಲೇ ಸರ್ವಶ್ರೇಷ್ಠರೆಂದು ತಿಳಿದಿದ್ದ ನಾರ್ವೆಯವರೇ ಆದ ಗಣಿತಜ್ಞ “ನೀಲ್ಸ್ ಹೆನ್ರಿಕ್ ಅಬೆಲ್” ಅವರ ಹೆಸರಿನಲ್ಲಿ “ಅಬೆಲ್” ಪುರಸ್ಕಾರವನ್ನು “ನೊಬೆಲ್” ಮಾದರಿಯಲ್ಲಿಯೇ ಕೊಡಲು ಪ್ರಸ್ತಾಪಿಸಿದರು. ಅದೂ ಕೂಡ ನೊಬೆಲ್ ಆರಂಭವಾದಾಗಲೇ ಆರಂಭವಾಗಬೇಕಿತ್ತು. ಅದಕ್ಕೆ ನಾರ್ವೆ ಸರ್ಕಾರ ಧನಸಹಾಯ ಮಾಡಲು, ಅಲ್ಲಿನ ದೊರೆಯು ಸಂಪೂರ್ಣ ಒಪ್ಪಿಗೆ ಕೊಟ್ಟಿದ್ದರು. ಈಗಾಗಲೇ ಹೇಳಿದೆನಲ್ಲವೇ, “ನಾರ್ವೆ- ಸ್ವೀಡನ್”-ಗಳ ಸಂಬಂಧ ನಮ್ಮ ಹಾಗೇ ಅಂತಾ. ಒಂದಕ್ಕೊಂದು ನಿರಂತರವಾಗಿ ಯುದ್ಧಕಾರುವ ಮನೋಭಾವದವು. ಅವರನ್ನಿವರು-ಇವರನ್ನವರು ಆಕ್ರಮಿಸುವ ಕ್ಷಣಗಳಿಗೆ ಕಾಯುತ್ತಿದ್ದರು. ಈ ಬಹುಮಾನಗಳ ಒಪ್ಪಂದಕ್ಕಾಗಿ ಕರಾರು ಮಾಡಿಕೊಂಡಿದ್ದರು. ಆದರೂ “ಅಬೆಲ್” ಪುರಸ್ಕಾರವನ್ನು ಕೊಡಲು ಒಪ್ಪಂದಕ್ಕೆ ಬರಲಾಗಲೇ ಇಲ್ಲ. 1899ರಲ್ಲೇ, ಅಂದರೇ ನೊಬೆಲ್ ಆರಂಭದ ಕಾಲದಲ್ಲೇ ಈ ಕುರಿತು ಚರ್ಚಿಸಿ ಒಪ್ಪಂದಕ್ಕೆ ಬರದೇ ಮುರಿದು ಬಿದ್ದಿತ್ತು. ಮತ್ತೆ ಇದು ಆರಂಭವಾಗಿ ಸಾಧುವಾಗಲು ಒಂದು ಶತಮಾನಕ್ಕೂ ಹೆಚ್ಚು ಕಾಲ ಬೇಕಾಯಿತು. ಕಳೆದ ಕೇವಲ 16 ವರ್ಷಗಳ ಹಿಂದೆಯಷ್ಟೆ 2003ರಿಂದ ಅಬೆಲ್ ಪುರಸ್ಕಾರವನ್ನು ಜಗತ್ತಿನ ಶ್ರೇಷ್ಠ ಗಣಿತದ ಅನ್ವೇಷಣೆಗಳಿಗೆ ಕೊಡಲು ಆರಂಭಿಸಲಾಯಿತು.
ಯಾರೀ ಅಬೆಲ್ ಅಷ್ಟೊಂದು ಹೆಸರಾಂತ ಗಣಿತಜ್ಞ? ನೀಲ್ಸ್ ಹೆನ್ರಿಕ್ ಅಬೆಲ್ ನಾರ್ವೆ ದೇಶದಲ್ಲಿಯೇ 1802ರಲ್ಲಿ ಜನಿಸಿದ್ದ ಅತ್ಯಂತ ಪ್ರತಿಭಾವಂತ ಗಣಿತಜ್ಞ. ಎಲ್ಲಾ ನಮ್ಮ ಶ್ರೀನಿವಾಸ ರಾಮಾನುಜನ್ ತರಹವೇ? ಅಂದರೆ ರಾಮಾನುಜನ್ ರೀತಿಯ ಬದುಕೇ, ತುಂಬಾ ಬಡತನ, ಎಳೆಯ ವಯಸ್ಸು, ಅದೇ ಕ್ಷಯ ರೋಗ… ರಾಮಾನುಜನ್ ಆದರೂ 32 ವರ್ಷ ಬದುಕಿದ್ದರು. ಪಾಪ..! ಹೆನ್ರಿಕ್ ಅಬೆಲ್ 26 ವರ್ಷ 8 ತಿಂಗಳು ಮಾತ್ರವೇ ಬದುಕಿದ್ದರು. ಕೇವಲ 26ರ ಹರೆಯದಲ್ಲೇ ಆ ಕಾಲಕ್ಕೇ ಜಗತ್ತಿನಲ್ಲೇ ಹೆಸರು ಪಡೆದ ಗಣಿತಜ್ಞ. ಎಂತಹಾ ಹೆಸರು ಅಂದರೆ, “ಅಬೆಲ್ ದ್ವಿನಾಮ ಪ್ರಮೇಯ” “ಅಬೆಲ್ ಫಂಕ್ಷನ್ಸ್” “ಅಬೆಲ್ ಸಮೀಕರಣ” ಹೀಗೆ 25ರಲ್ಲಿ ಗಣಿತದ ಸಂಗತಿಗಳಲ್ಲಿ ಆತನ ಹೆಸರಿತ್ತು. 26 ವರ್ಷ ವಯಸ್ಸಿಗೆ 25ರಲ್ಲಿ ಹೆಸರು ಎಂದರೆ ಊಹಿಸಬಹುದು. ಆತನ ಬಗ್ಗೆ ಬರೆಯುವಷ್ಟು ಗಣಿತವನ್ನು ನಾನು ತಿಳಿದಿಲ್ಲ. ನಾನು ಗಣಿತದ ವಿದ್ಯಾರ್ಥಿಯೇ ಆಗಿ ಮುಂದುವರೆದವನಲ್ಲ. ನನಗೆ ತಿಳಿದಂತೆ ಈ ಕಾಲಕ್ಕೆ ನ್ಯೂಟನ್ ಕಾಲದಿಂದಲೂ 350 ವರ್ಷ ಕಾಲ ಸಮಸ್ಯೆಯಾಗಿದ್ದ ಬೀಜಗಣಿತದ ಕುರಿತ ಪ್ರಮೇಯವನ್ನು ಬಿಡಿಸಿದ್ದ ಮಹಾನ್ ಮೇಧಾವಿ. ಅಬೆಲ್ ಅವರ ಅತೀ ಮುಖ್ಯ ಈ ಸಾಧನೆ ಎಂದರೆ “ಜನರಲ್ ಕ್ವಿಂಟಿಕ್ ಸಮೀಕರಣ”ವನ್ನು ಬಿಡಿಸಲು ಅಸಾಧ್ಯ ಎಂಬ ಗಣಿತೀಯ ವಿವರಗಳನ್ನು ಸಂಪೂರ್ಣ ವಿವರಗಳೊಂದಿಗೆ ಕೊಟ್ಟದ್ದು. ಹೆಚ್ಚೇನೂ ವಿವರಗಳೇ ಬೇಡ, ಅಷ್ಟು ಪ್ರಮೇಯ ಸಿದ್ಧಾಂತ, ಸಮೀಕರಣಗಳಲ್ಲಿ ತನ್ನ ವಯಸ್ಸಿನ ಸಂಖ್ಯೆಗೂ ಮೀರಿ ಹೊಂದಿದ್ದ ಮಹಾನುಭಾವ. ನಮ್ಮ ಶ್ರೀನಿವಾಸ ರಾಮಾನುಜನ್ ರೀತಿಯಲ್ಲೇ ಕ್ಷಯರೋಗದಿಂದ 1829ರಲ್ಲೇ ತೀರಿಕೊಂಡಿದ್ದರು. ಅವರ ಮೇಧಾವಿತನಕ್ಕೆ ಸಾಕ್ಷಿಯಾಗಿ ಫ್ರಾನ್ಸಿನ ಖ್ಯಾತ ಗಣಿತಜ್ಞ ಅವರ ಮಾತುಗಳು ಹೀಗಿವೆ. “ಅಬೆಲ್ ಬಿಟ್ಟು ಹೋಗಿರುವ ಗಣಿತದ ಸಂಗತಿಗಳು ಉಳಿದ ಗಣಿತಜ್ಞರು 500 ವರ್ಷಗಳ ಕಾಲ ಬ್ಯುಸಿಯಾಗಿರಲು ಸಾಕಾಗುತ್ತದೆ”
ಇಂತಹಾ ಮಹಾನ್ ಮೇಧಾವಿಯ ಹೆಸರಲ್ಲಿ ಗಣಿತದ “ಅಬೆಲ್-ಪ್ರಶಸ್ತಿ”ಅನ್ನು ಕೊಡಲಾಗುತ್ತದೆ. ಬಹುಮಾನದ ಒಟ್ಟು ಮೊತ್ತ 7 ಲಕ್ಷ ಅಮೆರಿಕಾದ ಡಾಲರ್. ನೊಬೆಲ್ ಪುರಸ್ಕಾರದ ಮಾದರಿಯಲ್ಲಿಯೇ ಅಬೆಲ್ ಪುರಸ್ಕಾರವನ್ನು ಪ್ರತೀ ವರ್ಷ 2003ರಿಂದ ಒಬ್ಬರು ಅಥವಾ ಇಬ್ಬರಿಗೆ ಕೊಡಲಾಗುತ್ತದೆ. ಇದೇ ಮೊದಲ ಬಾರಿಗೆ ಮಹಿಳೆಯಬ್ಬರಿಗೆ ಕೊಟ್ಟದ್ದು ಗಣಿತದಲ್ಲಿ ದೊಡ್ಡ ಸುದ್ದಿ. ಈ ವರ್ಷ 2019ರ ಅಬೆಲ್ ಪುರಸ್ಕಾರವನ್ನು ಅಮೆರಿಕಾದ ಆಸ್ಟಿನ್ ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಗಣಿತದ ಪ್ರಾಧ್ಯಾಪಕಿ ಕರೇನ್ ಉಹನ್ ಬೆಕ್ ಅವರಿಗೆ ನೀಡಲಾಗಿದೆ. ನಿನ್ನೆಯಷ್ಟೇ ಸುದ್ದಿ ನಾರ್ವೆ ದೇಶದಿಂದ ಹೊರ ಬಿದ್ದಿದೆ. ಪ್ರೊ. ಕರೇನ್ ಭೌತವಿಜ್ಞಾನ ಹಾಗೂ ಗಣಿತವನ್ನು ಸಮೀಕರಿಸುವ ಸಿದ್ಧಾಂತಗಳಲ್ಲಿ ಪ್ರಸಿದ್ಧರು. ಅವರು Partial Differential ಸಮೀಕರಣದಲ್ಲಿ ಹೆಸರುವಾಸಿ. ಅವರು ಈ ಎರಡೂ ಜ್ಞಾನಶಿಸ್ತುಗಳ ಏಳಿಗೆಗೆ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಈ ವರ್ಷದ “ಅಬೆಲ್-ಪ್ರಶಸ್ತಿ”ಯನ್ನು ಕೊಡಲಾಗಿದೆ. ಮುಂದಿನ ಮೇ ತಿಂಗಳಲ್ಲಿ ಅದನ್ನು ಅವರಿಗೆ ವಿತರಿಸಲಾಗುವುದು.
ಈ ಅಬೆಲ್ ಪ್ರಶಸ್ತಿಯನ್ನು 2007ರಲ್ಲಿಯೇ ಜಾನ್ ಅವರಿಗಿಂತಾ ಮೊದಲೇ ಭಾರತೀಯರೊಬ್ಬರಿಗೆ ಕೊಡಲಾಗಿದೆ. ಚೆನ್ನೈನ ಪ್ರೊ. ಶ್ರೀನಿವಾಸ ವರದನ್ ಅವರ Probability ಸಿದ್ಧಾಂತದ ಮೂಲ ತತ್ವಗಳ ವಿಮರ್ಶೆ ಹಾಗೂ ಅನುಶೋಧಗಳಿಗೆ ಕೊಡಲಾಗಿತ್ತು. ವರದನ್ ಅವರು ತಮಿಳುನಾಡಿನವರು. ಅವರ ಪದವಿಗಳನ್ನೆಲ್ಲಾ ಭಾರತದ ಸಂಸ್ಥೆಗಳಲ್ಲೇ ಪಡೆದವರು. ಭಾರತೀಯ ಸಂಖ್ಯಾವಿಜ್ಞಾನ ಸಂಸ್ಥೆಯಲ್ಲಿ ಪಿಎಚ್.ಡಿ ಮಾಡಿ ನಂತರದಲ್ಲಿ ಅಮೆರಿಕಾಗೆ ಹೊಗಿ ನೆಲೆಸಿದ್ದಾರೆ. ಹಾಗಾಗಿ ಶ್ರೀನಿವಾಸ ರಾಮಾನುಜನ್ ಮೂಡಿಸಿದ್ದ ತಮಿಳು ನೆಲದ ಗಣಿತದ ಛಾಪನ್ನು ಎತ್ತಿ ಹಿಡಿದ ಕೀರ್ತಿ ವರದನ್ ಅವರಿಗೆ ಸಲ್ಲುತ್ತದೆ.
ಅಬೆಲ್ ಪ್ರಶಸ್ತಿಯನ್ನು 2015ರಲ್ಲಿ ಪಡೆದ ಜಾನ್ ನ್ಯಾಶ್ ಅದಕ್ಕೂ 20 ವರ್ಷಗಳ ಮೊದಲೆ 1994ರಲ್ಲಿ ಗಣಿತದ ಅರ್ಥವಿಜ್ಞಾನ ಅನ್ವಯದಲ್ಲಿ ನೊಬೆಲ್ ಪುರಸ್ಕಾರವನ್ನು ಪಡೆದಿದ್ದರು. ಗಣಿತ ಹಾಗೂ ಅರ್ಥವಿಜ್ಞಾನದಲ್ಲಿ ದಂತ ಕಥೆಯಾಗಿರುವ ಜಾನ್ ನ್ಯಾಶ್ ಅವರ ಗೇಮ್ ಸಿದ್ಧಾಂತದ ವಿವರಗಳು ಜಾಗತಿಕವಾಗಿ ಜೀವವಿಜ್ಞಾನವನ್ನೂ ಸೇರಿದಂತೆ ಅನೇಕ ಶಿಸ್ತುಗಳಲ್ಲಿ ಬಳಕೆಯಾಗುತ್ತಾ ಹೆಸರು ಮಾಡಿವೆ. ಅವರ ಜೀವನ ಆಧಾರಿತ ಚಲನ ಚಿತ್ರ ಅವರಿನ್ನೂ ಬದುಕಿದ್ದಾಗಲೇ ಹೆಸರು ಮಾಡಿತ್ತು. “ದ ಬ್ಯುಟಿಫುಲ್ ಮೈಂಡ್” ಬಹಳ ಜನರಿಗೆ ಪರಿಚಯವಿರಬಹುದು. ಇಂತಹಾ ಮೇಧಾವಿ ನಾರ್ವೆಯಿಂದ ಅಬೆಲ್ ಪುರಸ್ಕಾರವನ್ನು ಪಡೆದು ಹಿಂದಿರುಗುವಾಗ ಅಮೆರಿಕಾ ತಲುಪಿದ ಮೇಲೆ, ನ್ಯೂಜರ್ಸಿಯಲ್ಲಿ ಅಪಘಾತಕ್ಕೀಡಾದರು. ಅವರ ಜೀವನವನ್ನು ಆರೋಗ್ಯದ ಹಿತದಿಂದ ರೂಪಿಸಿದ್ದ ಭೌತವಿಜ್ಞಾನದ ಪದವೀಧರೆ ಅಲಿಸಿಯಾ ಕೂಡ ಅವರ ಜೊತೆಯಲ್ಲೇ ಅಪಘಾತದಲ್ಲಿ ಮರಣಹೊಂದಿದರು. ನೊಬೆಲ್ ಪಡೆದೂ ಅಬೆಲ್ ಪಡೆದ ನ್ಯಾಶ್ ಅದರೊಟ್ಟಿಗೆ ಮನೆಗೆ ಹಿಂದಿರುಗಲು ವಿಮಾನ ಇಳಿದು ಕಾರು ಹತ್ತಿದ ಮೇಲೆ ಸಾವನ್ನು ಕಂಡರು. ಅವರ ದುರಾದೃಷ್ಟಕ್ಕೆ ಯೌವನಾವಸ್ಥೆಯಿಂದ ಮುಪ್ಪಿನವರೆಗೂ “ಸಿಝೋಪ್ರೇನಿಯಾ” ದಿಂದ ಬಳಲುತ್ತಿದ್ದ ಅವರಿಗೆ ಹುಟ್ಟಿದ ಮಗ ಕೂಡ ಗಣಿತಜ್ಞ ಹಾಗೂ ಅದೇ ಕಾಯಿಲೆಯಿಂದ ನರಳುತ್ತಿರುವವ. ಗಂಡ-ಮಗ ಇಬ್ಬರನ್ನೂ ಸಲಹುವ ಕಾರಣಕ್ಕಾಗಿಯೇ ತನ್ನ ಭೌತವಿಜ್ಞಾನದ ಮುಂದುವರಿಕೆಯನ್ನು ತ್ಯಾಗ ಮಾಡಿದ್ದ ಅಲಿಸಿಯಾ, ಕಾಯಿಲೆಯಿರುವ ಮಗನನ್ನು ಬಿಟ್ಟು ಗಂಡನ ಜೊತೆಗೆ ತೀರಿಕೊಂಡರು. ಗಣಿತದ ಪ್ರತಿಭೆಯಾದ ಮಗ ಈಗ ಅನಾಥ ಹಾಗೂ ಮನೋರೋಗಿ.
ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಗಣಿತದಲ್ಲಿ “ಫೀಲ್ಡ್ಸ್ ಮೆಡಲ್” ಅನ್ನು ಕೊಡಲಾಗುತ್ತದೆ. ಅದನ್ನು ನಾಲ್ಕು ವರ್ಷಕ್ಕೊಮ್ಮೆ ಕೊಡುವುದರಿಂದ ಅದಕ್ಕೆ ನೊಬೆಲ್ ಗಿಂತಲೂ ಹೆಚ್ಚು ಮಾನ್ಯತೆಯನ್ನು ಬಲ್ಲವರು ಕೊಡುತ್ತಾರೆ. ಈ “ಫೀಲ್ಡ್ಸ್ ಮೆಡಲ್” ಅನ್ನೂ ಸಹಾ ಕೇವಲ ಒಮ್ಮೆ ಮಾತ್ರ ಮಹಿಳೆಯೊಬ್ಬರಿಗೆ ಕೊಡಲಾಗಿದೆ. “ಫೀಲ್ಡ್ಸ್ ಮೆಡಲ್” ನ ಹೆಗ್ಗಳಿಕೆಯೆಂದರೆ ಅದನ್ನು 40 ವಯೋಮಿತಿಯೊಳಗಿನ ಸಾಧನೆಗೆ ಮಾತ್ರ ಕೊಡಲಾಗುತ್ತದೆ. ಕೆನಡಾದಲ್ಲಿ ಭಾರತೀಯ ದಂಪತಿಗಳಿಗೆ ಜನಿಸಿದ ಪ್ರೊ. ಮಂಜುಲ್ ಭಾರ್ಗವ್ ಈ ಸಾಧನೆಯನ್ನು ಮಾಡಿದ್ದಾರೆ. ಅವರ ಜೊತೆಯಲ್ಲೇ ಪುರಸ್ಕಾರವನ್ನು ಪಡೆದ ಪ್ರೊ. ಮರಿಯಮ್ ಮಿರ್ಜಾಕಾನಿ ಎಂಬುವರು ಈವರೆಗೂ “ಫೀಲ್ಡ್ಸ್ ಮೆಡಲ್”ಅನ್ನು ಪಡೆದ ಏಕೈಕ ಮಹಿಳೆ. ಪ್ರೊ ಮರಿಯಮ್ ಮೂಲತಃ ಇರಾನಿನವರು. ಟೆಹರಾನ್ ನಲ್ಲಿ ಜನಿಸಿದ್ದರು. ಮುಂದೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಬಂದು ಕೊನೆಗೆ ಸ್ಟ್ಯಾನ್ ಫೊರ್ಡ್ ವಿಶ್ವವಿದ್ಯಾಲಯದಲ್ಲಿ ತೀರಾ ವಿಶೇಷವಾದ ಸೈದ್ಧಾಂತಿಕ ಗಣಿತದಲ್ಲಿ ಸಿದ್ದಹಸ್ತರು. ತುಂಬಾ ಸಂಕೀರ್ಣವಾದ ಜ್ಯಾಮಿತಿಯ ಸಮಸ್ಯೆಗಳ ಕುರಿತಂತೆ ಅವರ ವಿವರಗಳು ಹೆಸರುವಾಸಿ. ನಮ್ಮ ಮಂಜುಲ್ ಜೊತೆಗೆ 2014ರಲ್ಲಿ ಫೀಲ್ಡ್ಸ್ ಪುರಸ್ಕಾರ ಪಡೆದ ಮರಿಯಮ್ ಕಳೆದ 2017ರಲ್ಲಿ ತನ್ನ 40ನೆಯ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ನಿಂದ ಕೊನೆಯ ಉಸಿರೆಳೆದರು.
ಮಾರ್ಚ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ತಿಂಗಳು. ಇಂದು ಮಾರ್ಚ್ ನಲ್ಲೇ ಮಹಿಳೆಯೊಬ್ಬರು ಗಣಿತದ ಕೀರ್ತಿಶಿಖರವನ್ನು ಎತ್ತಿಹಿಡಿದಿದ್ದಾರೆ. ಹಾಗೆ ನೋಡಿದರೆ ಕಳೆದ ನೊಬೆಲ್ ಪುರಸ್ಕಾರದಿಂದಲೇ ಮಹಿಳೆಯರು ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಹಲವು ದಶಕಗಳ ಬಳಿಕ ಭೌತವಿಜ್ಞಾನದಲ್ಲಿ ನೊಬೆಲ್ ಗಳಿಸಿದ್ದರು. ಜೊತೆಗೆ ರಸಾಯನ ವಿಜ್ಞಾನದಲ್ಲೂ, ಶಾಂತಿ ಪಾರಿತೋಷಕದಲ್ಲೂ ಸ್ಥಾನ ಪಡೆದಿದ್ದರು. ಅದರ ಮುಂದುವರಿಕೆಯಂತೆ ಇದೀಗ ಪ್ರೊ. ಕರೇನ್ ಸಾಧನೆಯನ್ನು ಮಾಡಿದ್ದಾರೆ. ಮಹಿಳೆಯರ ಸ್ಥಾನಗಳು ಹೀಗೆ ಮುಂದುವರೆಯಲಿ ಎಲ್ಲದರಲ್ಲೂ ಸಮಪಾಲು ಪಡೆಯುವ ಅವರ ಹುಮ್ಮಸ್ಸಿಗೆ ಯಶಸ್ಸನ್ನು ಹಾರೈಸಲು ಪ್ರೊ. ಕರೇನ್ ಅವರನ್ನು ಅಭಿನಂದಿಸಲು ಬಳಸಿಕೊಳ್ಳೋಣ.
– ನಮಸ್ಕಾರ. ಚನ್ನೇಶ್