You are currently viewing ಕ್ಯಾನನ್ ಬಾಲ್-ಪಿರಂಗಿ ಗುಂಡಿನ- ಮರ: ನಾಗಲಿಂಗ ಪುಷ್ಪ

ಕ್ಯಾನನ್ ಬಾಲ್-ಪಿರಂಗಿ ಗುಂಡಿನ- ಮರ: ನಾಗಲಿಂಗ ಪುಷ್ಪ

ಪುರಾಣದಿಂದಲೂ ಪಾರಿಜಾತ ಗಿಡವು ಜಗಳ ತಂದಿರುವಾಗ ಮಾತು-ಕತೆಗಳನ್ನು ಬೆಳಸದೇ ಇರುತ್ತದೆಯೇ? ಅದಕ್ಕಾಗಿ ಅಣಿಯಾಗಿಯೇ ಇದ್ದೇನೆ, ನನ್ನ ನೆರವಿಗೆ ಬರುವ ಗಿಡವನ್ನು ಊಹಿಸಿ, ಒಂದು ದಿನ ಬಿಟ್ಟು ಬರೆಯುವೆ ಎಂದಿದ್ದೆ. ಆದರೆ ಅದೇ ಗೆಳತಿ ಮತ್ತೆ ಕರೆಮಾಡಿ, ಯಾಕೆ, ನಮಗೇನು ಹೇಳಲು ಅಷ್ಟು ಕಷ್ಟ ಅಂತಾ Warning? ಅಂದವಳು, ಬರೆಯಲಿರುವ ಮರದ ಹೆಸರನ್ನೂ ಹೇಳಿ ಅಚ್ಚರಿಗೊಳಿಸಿದಳು. ಅಷ್ಟೊತ್ತಿಗಾಗಲೇ ಇತರೇ ಗೆಳತಿಯರ ಮಾತನ್ನು ತಡೆಯಲಾಗಿರಲಿಲ್ಲ, ಅವರ ಫೋನು, ವಾಟ್ಸಾಪಿನ ಜಗಳವನ್ನು ತಡೆಯುವುದು ಹೇಗಪ್ಪಾ ಅಂತಿದ್ದೆ! ಅದಕ್ಕಿಂತಾ ನನ್ನ ನೆರವಿಗೆ ಬರಲಿರುವ ಪಿರಂಗಿ ಗುಂಡಿನ ಮರದ ಬಗ್ಗೆ ಬರೆಯುವುದೇ ವಾಸಿ ಅಂದುಕೊಂಡೆ. ಹೌದು ಅದು, ಕ್ಯಾನನ್ ಬಾಲ್ ಮರ- ನಾಗಲಿಂಗ ಪುಷ್ಟ! ಕೊಂಬೆಗಳ ಎದೆಯಲ್ಲೇ ಗುಂಡು ತುಂಬಿಕೊಂಡು, ಬೇತಾಳನಂತೆ ಎತ್ತರವಾದ ಮರವನ್ನು ಎದುರಿಸಲು ಧೈರ್ಯ ಬೇಕು ಅನ್ನಿಸಲಿ ಎಂದುಕೊಂಡಿದ್ದೆ.

ನಾಗಲಿಂಗ ಪುಷ್ಪ – – cannon ball tree ಯ ವೈಜ್ಞಾನಿಕ ಹೆಸರು Couroupita guianensis, ಅದರ ಸುಂದರವಾದ, ಪರಿಮಳಭರಿತವಾದ ಹೂವುಗಳಿಗೆ ಹೆಸರುವಾಸಿ. ಅಷ್ಟೇ ಅಲ್ಲ. ನಾಗರ ಹೆಡೆಯಲ್ಲಿ ಲಿಂಗದ ರೂಪವನ್ನು ಕಂಡು ಭಕ್ತಿ ಪರವಶರಾಗುವವರಿಗೂ ಕಡಿಮೆಯೇನಿಲ್ಲ. ಹಾಗಾಗಿ ಶೈವರು ತಮ್ಮ ಹಿತ್ತಲಿನ ಮರವೇ ಇದು ಅಂದುಕೊಂಡಿದ್ದಾರೆ. ಆದರೆ ಅಚ್ಚರಿ ಎಂದರೆ ಇದರ ತವರೂರು ದಕ್ಷಿಣ ಅಮೆರಿಕಾ. ಬ್ರೆಜಿಲ್ ಕಾಯಿ (Brazil nut) ಗಳ ಕುಟುಂಬಕ್ಕೆ ಸೇರಿದ ಅತ್ಯಂತ ಸುಂದರವಾದ ಮರ. ಅಲ್ಲಿನ ದಟ್ಟವಾದ ಅಮೆಜಾನ್ ಕಾಡುಗಳಿಂದ ಜಗತ್ತಿನಾದ್ಯಂತ ಪ್ರಸರಿಸಲು ಅದರ ಸೌಂದರ್ಯವೇ ಕಾರಣ. ಹಾಗಾಗಿ ಜಗತ್ತಿನ ಎಲ್ಲಾ ಸಸ್ಯೋಧ್ಯಾನಗಳಲ್ಲೂ ಶಾಶ್ವತವಾಗಿ ಸ್ಥಾನ ಪಡೆದಿದೆ. ಭಾರತ ಶ್ರೀಲಂಕಾ ಮತ್ತೆ ಕೆಲವು ಈಶಾನ್ಯ ಏಶಿಯಾ ದೇಶಗಳಲ್ಲಿ ದೈವಸ್ವರೂಪದ ಮರ. ನಾಗರ ಹೆಡೆಯ ಕೆಳಗೆ ಲಿಂಗದ ರೂಪದ ಹೂವಿನಾಕಾರಕ್ಕೆಂದೇ ಈ ದೈವತ್ವ! ಆದರೇನು ಹೂವಿನ ಲಿಂಗವೇ ವಿಚಿತ್ರವಾಗಿದ್ದು ಸೌಂದರ್ಯವನ್ನು ತಂದುಕೊಡಲು ಕಾರಣವಾಗಿದೆ. ಅದನ್ನು ಮುಂದೆ ನೋಡೋಣ.

ನಾಗಲಿಂಗ ಹೂವಿನ ಮರವು ನೂರು ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ. ತನ್ನ ಮೂಲ ಕಾಂಡದಿಂದಲೇ ಹೂ-ಹಣ್ಣುಗಳನ್ನು ಬಿಡುತ್ತದೆ. ಹಣ್ಣುಗಳೋ ಪಿರಂಗಿ ಗುಂಡುಗಳಂತೆ ದಪ್ಪ -ದಪ್ಪನಾಗಿದ್ದು ಎದೆಯ ಎದುರಿನಲ್ಲೇ ಕಟ್ಟಿಕೊಂಡಂತೆ ಕಾಣುತ್ತದೆ. ಇಡೀ ಕಾಂಡವೆಲ್ಲಾ ಸುಮಾರು ಒಂದು ಅಡಿಯಷ್ಟು ಹೂಗೊಂಚಲನ್ನು ಬಿಟ್ಟು ಅಂದವಾಗಿ ಕಾಣುತ್ತದೆ. ಎಲೆಗಳು ಮಾತ್ರ ರೆಂಬೆ-ಕೊಂಬೆಗಳ ತುದಿಗಳಲ್ಲಿ ಗುಂಪು-ಗುಂಪಾಗಿರುತ್ತವೆ. ಒಂದೊಂದು ಮರವೂ ಸಾವಿರಾರು ಹೂಗಳನ್ನು ಬಿಡುತ್ತದೆ. ಪ್ರತೀ ಹೂವೂ ನಾಗರ ಹಾವಿನ ಹೆಡೆಯ ಅಡಿಯ ಪೀಠದಲ್ಲಿ ಲಿಂಗವನ್ನಿರಿಸಿದಂತೆ ಕಾಣುತ್ತದೆ. ಆದ್ದರಿಂದ ಶೈವರು ಇದನ್ನು ತಮ್ಮೂರಿನ ಮರವೇ ಇದು, ಎಂದುಕೊಂಡದ್ದರಲ್ಲಿ ಅಚ್ಚರಿ ಇಲ್ಲ. ಹೂ ಬಿಟ್ಟಾಗ ರಾತ್ರಿಯಿಡಿ ಹಾಗೂ ಮುಂಜಾನೆಯಲ್ಲಿ ಹೂವಿನ ಪರಿಮಳ ಸುತ್ತೆಲ್ಲಾ ಹರಡಿರುತ್ತದೆ. ಪ್ರತೀ ಹೂವೂ 5-6 ಸೆಂಟಿಮೀಟರ್ ವ್ಯಾಸವಿದ್ದು, ಆರು ದಳಗಳನ್ನು ಹೊಂದಿರುತ್ತವೆ. ಪೀಠದ ಲಿಂಗ ಹಾಗೂ ಹಾವಿನ ಹೆಡೆಯ ಭಾಗಗಳು ಹೂವಿನ ಸಂತಾನಾಭಿವೃದ್ಧಿಯ ಅಂಗಗಳೇ!

ನಾಗಲಿಂಗ ಹೂಗಳಲ್ಲಿ ಮಕರಂದವೇ ಇಲ್ಲ! ಆದರೂ ಪರಾಗಸ್ಪರ್ಶವು ಜೇನು ಹುಳುಗಳಿಂದಲೇ ನಡೆಯುತ್ತದೆ. ಮಕರಂದವಿಲ್ಲದ ಹೂಗಳಿಗೆ ಬರಲು ಜೇನಿಗೇನು ಆಸಕ್ತಿ ಎನ್ನಿಸೀತು. ಹೌದು, ಅದೇ ಈ ಹೂಗಳ ವಿಶೇಷ. ಮಕರಂದವಿಲ್ಲದಿದ್ದರೂ, ಪರಾಗಗಳಿಂದ ತುಂಬಿಕೊಂಡು ಪರಿಮಳಭರಿತವಾಗಿರುತ್ತದೆ. ಒಂದು ಬಗೆಯ ಪರಾಗವಲ್ಲ! ಎರಡು ರೀತಿಯ ಪರಗಗಳನ್ನು ಹೂವು ಹೊಂದಿದೆ. ಪೀಠದಂತೆ ಇರುವ ಲಿಂಗದ ಸುತ್ತಲೂ ಆವರಿಸಿರುವ ಪುಂಕೇಸರಗಳು ಫಲವನ್ನೀವ ಪರಾಗವನ್ನು ಹೊಂದಿರುತ್ತದೆ. ಅವುಗಳಲ್ಲಿ ಒಂದು ಭಾಗದಿಂದ ಹೆಡೆಯಂತೆ ಎದ್ದಿರುವುದೂ ಗಂಡುಭಾಗವೇ! ಇದು ಫಲವನ್ನೀಯದ ಪುಂಕೇಸರಗಳನ್ನು ಹೊಂದಿರುತ್ತದೆ. ಸ್ಟೆಮಿನಾಯ್ಡ್ಗಳೆಂದು ಕರೆಯಲಾಗುವ ಇದರ ಪರಾಗಗಳು ಮೊಳೆಯುವುದೇ ಇಲ್ಲ! ಆದರೆ ವಿಶೇಷವಾದ ಪರಿಮಳಯುಕ್ತವಾದ ಪರಾಗದಿಂದ ತುಂಬಿಕೊಂಡಿರುತ್ತವೆ. ಅವುಗಳನ್ನು ಹುಡುಕಿಕೊಂಡೇ ಜೇನು ಹೂವಿಗೆ ಬರುತ್ತದೆ, ಪರಾಗಸ್ಪರ್ಶಕ್ಕೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಬೇರೊಂದು ಮರದ ಪರಾಗದಿಂದ ಕಾಯಿ ಕಚ್ಚುವುದೇ ಹೆಚ್ಚು. ಆದರೂ ಅದೇ ಮರದ ಹೂಗಳಿಂದಲೂ, ಅಥವಾ ಅದೇ ಹೂವಿಂದಲೂ ಫಲವಂತವಾಗಲೂ ಸಾಧ್ಯವಿದೆ. ಸಣ್ಣ ಹಣ್ಣುಗಳಲ್ಲಿ 50-60 ಹಾಗೂ ದೊಡ್ಡ-ದೊಡ್ಡ ಹಣ್ಣುಗಳಲ್ಲಿ 500-600 ಬೀಜಗಳವರೆಗೂ ಇರುವುದುಂಟು. ಒಂದೊಂದು ಮರದಲ್ಲೂ ನೂರಾರು ಹಣ್ಣುಗಳೂ ಸಹಜವಾಗಿರುತ್ತವೆ.

ಹೂಗಳು ಆಕರ್ಷಕ ಪರಿಮಳಯುಕ್ತವಾಗಿದ್ದರೆ, ಹಣ್ಣುಗಳು ಗಬ್ಬು ವಾಸನೆಯಿಂದ ಕೂಡಿರುತ್ತವೆ. ಆಕಾರ ಮತ್ತು ಗಾತ್ರ ಎರಡರಲ್ಲೂ ಪಿರಂಗಿ ಗುಂಡನ್ನು ಹೋಲುವುದರಿಂದ ಆ ಹೆಸರು, ಹಾಗೂ ಒಂದು ಬಗೆಯ ಆಕರ್ಷಣೆಯು ಮರಕ್ಕೆ ಬಂದಿದ್ದು, ಸಸ್ಯೋದಾನಗಳಲ್ಲಿ ವಿಶೇಷ ಸ್ಥಾನ ಪಡೆದಿವೆ. ಹೂವಿಂದ ಹಣ್ಣಾಗಲು ಒಂದು ವರ್ಷವನ್ನಾದರೂ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಒಂದೂವರೆ ವರ್ಷವಾದರೂ ಆಗುತ್ತದೆ. ಪಿರಂಗಿ ಗುಂಡಿನಂತಹಾ ಹಣ್ಣುಗಳು ಮಾಗಿದ ಮೇಲೆ ದೊಪ್ಪನೆ ನೆಲಕ್ಕೆ ಬೀಳುತ್ತವೆ. ಆಗ ಅದರಿಂದ ತಿರುಳು ಹೊರಬಂದು, ಅದು ಉತ್ಕರ್ಷಣಗೊಂಡು ವಾಸನೆಯನ್ನು ಬೀರುತ್ತದೆ. ಹಣ್ಣುಗಳನ್ನು ತಿನ್ನಬಹುದಾದರೂ ವಾಸನೆಯ ಕಾರಣದಿಂದ ತಿನ್ನಲಾಗದು. ಸಾಮಾನ್ಯವಾಗಿ ಕಾಡುಗಳಲ್ಲಿ ನೆಲಕ್ಕೆ ಬಿದ್ದ ಹಣ್ಣುಗಳ ತಿರುಳನ್ನು ಕಾಡುಹಂದಿಗಳು ಖುಷಿಯಿಂದ ಸವಿಯುತ್ತವೆ. ಬಿದ್ದರೂ ಒಡೆಯದ ಹಣ್ಣುಗಳನ್ನು ಒಡೆಯುವುದೇ ಹಂದಿಗಳು! ಒಡೆದು ತಿರಳನ್ನು ತಿನ್ನುವ ಹಂದಿಗಳ ಹೊಟ್ಟೆಗೆ ಬೀಜಗಳೂ ಸೇರುತ್ತವೆ. ಆದರೇನಂತೆ ಬೀಜಗಳ ಮೇಲಿನ ಕೂದಲೆಳೆಯಂತಹಾ ಹೊದಿಕೆ ಇದ್ದು ಜೀರ್ಣರಸಗಳಿಂದ ತಪ್ಪಿಸಿಕೊಂಡು, ಹೊಟ್ಟೆಯಿಂದ ಜಾರಿಕೊಂಡು ಮಲದೊಡನೆ ಹೊರಬರಲು ಸಹಾಯ ಮಾಡುತ್ತದೆ. ಹೊರ ಬಂದು ಮೊಳಕೆಯೊಡೆದು ಸಸಿಯಾಗುತ್ತವೆ.

ನಾಗಲಿಂಗ ಪುಷ್ಪದ ಮರದಲ್ಲಿ ವಿಶೇಷ ಆಸಕ್ತಿಯನ್ನಿರಿಕೊಂಡು, ಅದರ ಕುಟುಂಬವಾದ ಲೆಸಿತಿಡೇಸಿಯೇ ಕುರಿತ ದೀರ್ಘ ಅದ್ಯಯನದಲ್ಲಿ ತೊಡಗಿಕೊಂಡ ಸಸ್ಯೊದ್ಯಾನದ ವಿಜ್ಞಾನಿಯೊಬ್ಬರಿದ್ದಾರೆ. ನ್ಯೂಯಾರ್ಕ್ ಬಟಾನಿಕಲ್ ಗಾರ್ಡನ್ನಲ್ಲಿ ಕ್ಯುರೇಟರ್ ಆಗಿದ್ದು ನಿವೃತ್ತರಾಗಿರುವ ಡಾ. ಸ್ಕಾಟ್ ಮೊರ್ ದಟ್ಟ ಕಾಡುಗಳಲ್ಲಿ ನೂರು ಅಡಿ ಎತ್ತರದ ಮರದ ಮುಖ್ಯ ಕಾಂಡದ ತುಂಬಾ ಹೂಹೊದ್ದುಕೊಂಡ ಅಪರೂಪದ ಸೌಂದರ್ಯವುಳ್ಳ ಮರ ನಾಗಲಿಂಗ ಪುಷ್ಟದ ಮರ ಎನ್ನುತ್ತಾರೆ. ಉಷ್ಣವಲಯ ಕಾಡುಗಳಲ್ಲಿ ಹತ್ತಾರು ವರ್ಷ ಸಸ್ಯಸಂಕುಲಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಸ್ಯೋಧ್ಯಾನದಲ್ಲಿ 40 ವರ್ಷಗಳ ಕಾಲ ಸೇವೆಸಲ್ಲಿಸಿ ವಿಶೇಷತೆಯನ್ನು ಪಡೆದವರು. ಈ ನಾಗಲಿಂಗದ ಹೂವಿನ ಸಂಬಂಧಿಗಳ ಎಲ್ಲಾ ವಿವರಗಳನ್ನೂ ಸಂಶೋಧಿಸಿ, ಅವುಗಳ ಬಗೆಗೆ ಅಧಿಕಾರಯುತವಾಗಿ ಮಾತಾಡಬಲ್ಲವರಾಗಿದ್ದಾರೆ.

— ಡಾ.ಟಿ.ಎಸ್.ಚನ್ನೇಶ್

Leave a Reply