ಕಳೆದ ಸಂಚಿಕೆಯಲ್ಲಿ ತಿಳಿಸಿದಂತೆ ಕೋವಿಡ್-19 ಖಾಯಿಲೆಗೆ ಔಷಧ ಮತ್ತು ಲಸಿಕೆಗಳ ಬಗ್ಗೆ ಕೆಲವು ಸಂಗತಿಗಳಿಲ್ಲಿವೆ. ಜಗತ್ತಿನ ಹಲವಾರು ವೈರಾಲಜಿಸ್ಟ್ ಗಳು ಮತ್ತು ಎಪಿಡೀಮಿಯಾಲಜಿಸ್ಟ್ ಗಳು (ಸೋಂಕುವಿಜ್ಞಾನ ಪರಿಣಿತರು) ಕರೋನ ದಂತಹ ವೈರಸ್ ಗಳು ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ಹಿಂದೆಯೇ ಎಚ್ಚರಿಸಿದ್ದರು. ಕೊಲಂಬಿಯಾ ವಿವಿ ಯ ಜೀವಿವಿಜ್ಞಾನ ತಜ್ಞರಾದ ಡಾ.ಪೀಟರ್ ದಜ್ಜಾಕ್ ಅವರಂತಹ ಇನ್ನೂ ಕೆಲವರು,ಜಗತ್ತಿಗೆ ಹಬ್ಬಬಲ್ಲ ಇಂತಹ ವೈರಸ್ ಅನ್ನು ತಡೆಯಲು “ಒನ್ ಹೆಲ್ತ್ (One Health)” ಎಂಬ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಚರ್ಚಿಸಿದ್ದರು. ಆ ಮೂಲಕ, ನಮ್ಮ ಕಾಡುಗಳು, ವನ್ಯಜೀವಿಗಳು,ಜೀವಿ ವೈವಿಧ್ಯತೆ,ಸಾಕು ಪ್ರಾಣಿಗಳು ಮತ್ತು ಮಾನವರು, ಹೀಗೆ ಎಲ್ಲರ ಹಿತ ಕಾಪಾಡುವ ಸೂತ್ರವನ್ನು ಮುಂದಿಟ್ಟಿದ್ದರು. ಈ ಸೂತ್ರದ ನೆರವಿಗೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಜಾಗತಿಕ ಸಹಕಾರದ ಅಗತ್ಯವನ್ನೂ ತಿಳಿ ಹೇಳಿದ್ದರು. ಆದರೆ ಅವೆಲ್ಲವೂ ನಮ್ಮ ಅರಿವಿನ ಭಾಗವಾಗಲೇ ಇಲ್ಲ ಮತ್ತು ಈ ಮರೆವಿನ ಸಮಯದಲ್ಲೇ ಕೋವಿಡ್-19 ನಮ್ಮೆಲ್ಲರ ಜೀವನದ ಮತ್ತು ಅನುಭವದ ಭಾಗವಾಗಿಬಿಟ್ಟಿದೆ.
ಈ ತಜ್ಞರು ಇನ್ನೂ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ನಿರಂತರ ಅರಣ್ಯನಾಶ, ಅರಣ್ಯಗಳಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಗಳು, ವನ್ಯಜೀವಿಗಳ ಸಾಕಣೆ- ಕಳ್ಳಸಾಕಣೆ ಮತ್ತು ಮಾರಾಟ, ಬೃಹತ್ ಪಶು ಸಂಗೋಪನಾ ಮಾದರಿಗಳು, ಹೆಚ್ಚುತ್ತಿರುವ ನಗರೀಕರಣ ಹೀಗೆ ಹಲವಾರು ವಿಚಾರಗಳು ತಂದೊಡ್ಡಬಹುದಾದ ಸಂಕಷ್ಟವನ್ನು ವಿವರಿಸಿದ್ದರು. ಜೊತೆಗೆ ಹೆಚ್ಚು ಅರಣ್ಯ, ಜೀವವೈವಿಧ್ಯತೆ ಮತ್ತು ಮಾನವ ಸಾಂದ್ರತೆ ಇರುವ ದೇಶಗಳಾದ ಚೀನಾ, ಬ್ರೆಜಿಲ್, ಭಾರತ ಮುಂತಾದ ದೇಶಗಳು ಪ್ಯಾಂಡೆಮಿಕ್ ಖಾಯಿಲೆಯನ್ನು ಸೃಷ್ಟಿಸುವ “ಸೂಕ್ಷ್ಮ ಪ್ರದೇಶ”ಗಳು ಎಂದು ಹೆಸರಿಸಿದ್ದರು. ಈಗ ಚೀನಾವನ್ನು ಮಾತ್ರವೇ ವಿಲನ್ ಮಾದರಿಯಲ್ಲಿ ಬಿಂಬಿಸುತ್ತಿರುವ ಹೊತ್ತಲ್ಲಿ, ಹೆಚ್.ಐ.ವಿ., ಎಬೋಲಾ, ಜೈಕಾ, ನಿಫಾ ಮುಂತಾದ ವೈರಸ್ ಗಳ ತವರನ್ನು ನೆನಪಿಸಿಕೊಳ್ಳಿ. ಅಷ್ಡೇ ಏಕೆ, ನಮ್ಮ ಕರ್ನಾಟಕದ್ದೇ “ಮಂಗನ ಖಾಯಿಲೆ” ಸೃಷ್ಡಿಸುವ ಕ್ಯಾಸನೂರು ಫಾರೆಸ್ಟ್ ಡಿಸೀಸ್(KFD) ವೈರಸ್ ಅನ್ನು ಉದಾಹರಣೆ ತೆಗೆದುಕೊಳ್ಳಿ. ಈ ವೈರಸ್‌ಗಳು ಜಾಗತಿಕವಾಗಿ SARS COV 2 ವೈರಸ್ ಸೃಷ್ಟಿಸಿರುವ ಕೋಲಾಹಲವನ್ನು ಉಂಟು ಮಾಡಿಲ್ಲ ನಿಜ. ಹಾಗಾದರೆ SARS COV 2 ವೈರಸ್ ಈ ರೀತಿ ಪ್ಯಾಂಡೆಮಿಕ್ ಆಗಿದ್ದು ಏಕಿರಬಹುದು? ಈ ಪ್ರಶ್ನೆಗೆ ಮತ್ತು ಮದ್ದಿನ ವಿಚಾರ ತಿಳಿದುಕೊಳ್ಳಬೇಕಾದರೆ ನಮಗೆ ಅವುಗಳ ಮಾಲೆಕ್ಯುಲಾರ್ ಮತ್ತು ಜೀನೋಮಿಕ್ ಸಂಗತಿಗಳು ತಿಳಿಯಬೇಕು.
ವೈರಸ್ ಗಳ ವರ್ಗೀಕರಣದಲ್ಲಿ “ಬಾಲ್ಟಿಮೋರ್” ವರ್ಗೀಕರಣ ಎಂಬ ಒಂದು ಪದ್ಧತಿಯಿದೆ. ವೈರಸ್ ನ ಆನುವಂಶಿಕ ಮಾಹಿತಿಗಳನ್ನು ಒದಗಿಸುವ ನ್ಯೂಕ್ಲಿಕ್ ಆಮ್ಲಗಳ(ಡಿ.ಎನ್.ಎ ಅಥವಾ ಆರ್.ಎನ್.ಎ) ಆಧಾರದ ಮೇಲೆ ಇದು ವರ್ಗೀಕರಿಸುತ್ತದೆ. SARS COV 2 ವೈರಸ್, ಒಂದು ಎಳೆಯ ಆರ್. ಎನ್. ಎ.(ssRNA -Single strand RNA) ಗಳನ್ನು ಹೊಂದಿರುವ ವೈರಸ್‌ಗಳ ವಿಭಾಗಕ್ಕೆ ಸೇರಿದ್ದು, ತನ್ನ ಸಂಖ್ಯೆ ವೃದ್ಧಿಸಿಕೊಳ್ಳಲು, ಈ ಆರ್. ಎನ್. ಎ ಗಳನ್ನು ಪ್ರತಿ ಮಾಡುತ್ತಾ ಹೋಗುತ್ತವೆ. ಆದರೆ ಪ್ರತಿಗಳನ್ನು ಮಾಡುವ ಸಂದರ್ಭದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಲು, ಡಿ.ಎನ್.ಎ ವೈರಸ್ ಗಳಲ್ಲಿ ಇರುವಂತೆ ಯಾವುದೇ ವ್ಯವಸ್ಥೆಯಿಲ್ಲದ ಕಾರಣ, ಇದರ ಜೀನ್ ಗಳು ರೂಪಾಂತರ (Mutation) ಹೊಂದುತ್ತವೆ. ವೈರಸ್ ಗಳಲ್ಲಿ ವಿಕಾಸದ ಚಕ್ರ ಬಹಳ ವೇಗವಾಗಿ ತಿರುಗುವುದರಿಂದ, ಇಂತಹ ಹಲವು ತಪ್ಪುಗಳು ಆಗುತ್ತಿರುತ್ತವೆ. ಈ ಕಾರಣದಿಂದಲೇ ಅವೇ ಗುಂಪಿನ ಹೊಸ ಹೊಸ ವೈರಸ್ ಗಳು ಸೃಷ್ಟಿಯಾಗುತ್ತವೆ. (ಕೆಲವೊಮ್ಮೆ ಬೇರೆ ಬೇರೆ ಪ್ರಭೇಧಗಳ ನ್ಯೂಕ್ಲಿಕ್ ಆಮ್ಲಗಳ Recombination ಮೂಲಕವೂ ಹೊಸ ಹೊಸ ವೈರಸ್ ಗಳು ಹುಟ್ಟುತ್ತವೆ. ) ಆ ಮೂಲಕ ತಮ್ಮ ಆತಿಥೇಯ ಜೀವಿಕೋಶಗಳ ರೋಗ ನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಬೇಕಾದ ಬಲವನ್ನು ಪಡೆಯುತ್ತವೆ. ಹೀಗೆ ಖಾಯಿಲೆಯನ್ನು ಸೃಷ್ಟಿಸುವ ಈ ವೈರಸ್ ಗಳು, ವೈರಸ್ ನ ತವರಾದ ಮೂಲದ ಪ್ರಾಣಿಯಿಂದ -ಮಧ್ಯಂತರ ಪ್ರಾಣಿ- ನಂತರ ಮಾನವ ಮಾನವರೊಡನೇ ಸೋಂಕು ಹರಡುತ್ತಲೇ ನಿರಂತರ ರೂಪಾಂತರಕ್ಕೆ ಒಳಗಾಗುತ್ತಾ ವಿಕಾಸಗೊಳ್ಳುತ್ತಲೇ ಇರುತ್ತವೆ. ಈ ಕೆಳಗಿನ ಚಿತ್ರ ನೋಡಿ.

ಹಾಗಾಗಿ ಚೀನಾದ “ಬ್ಯಾಟ್ ವುಮೆನ್” ಡಾ. ಶೀ ಜೆಂಗ್‌ಲಿ ಅವರು, ಕೋವಿಡ್-19 ರೋಗ ಡಿಸೆಂಬರ್ ನಲ್ಲಿ ಪತ್ತೆಯಾದ ನಂತರದ ದಿನಗಳಲ್ಲಿ, ಅದಕ್ಕೆ ಕಾರಣವಾದ ವೈರಸ್ ನ ಜೀನೋಮಿಕ್ ವಿವರಗಳನ್ನು ತಮ್ಮ ತಂಡದೊಂದಿಗೆ ಕಲೆಹಾಕಿ ಜಗತ್ತಿನ ವಿಜ್ಞಾನ ಸಮೂಹಕ್ಕೆ ಹಂಚಿದರು. ಜೊತೆಗೆ ಇದು ಈ ಹಿಂದೆ ಸಂಭವಿಸಿದ್ದ SARS ಕಾಯಿಲೆಗೆ ಕಾರಣವಾಗಿದ್ದ SARS COV ವೈರಸ್ ಗೆ ಶೇ ೮೦ ಪ್ರತಿಶತ ಸಾಮ್ಯವಿರುವುದನ್ನು ಪತ್ತೆ ಹಚ್ಚಿ, ನೇಚರ್ ಪತ್ರಿಕೆಗೆ ತಮ್ಮ ಸಂಶೋಧನಾ ಪ್ರಬಂಧವನ್ನು ಕಳುಹಿಸಿದ್ದರು. ಆ ಪ್ರಕಟವಾದ ಪ್ರಬಂಧ ಇಲ್ಲಿದೆ ನೋಡಿ. ಆದರೆ ಆಕೆಯ ಮೇಲೂ ನಂತರದ ದಿನಗಳಲ್ಲಿ, ಅವರ ಪ್ರಯೋಗಾಲಯದಲ್ಲೇ ಈ ವೈರಸ್ ಗಳು ಸೃಷ್ಟಿಯಾಗಿರುವುದು ಎಂಬ ಸುಳ್ಳು ಆಪಾದನೆಗಳು ಬಂದವು. ಆದರೆ ಜಾಗತಿಕ ವಿಜ್ಞಾನಿಗಳ ಸಮುದಾಯ ಅವರ ಬೆಂಬಲಕ್ಕೆ ನಿಂತವು. ಈ ಜೀನೋಮಿಕ್ ವಿವರಗಳು ಬಹು ಮುಖ್ಯ ಏಕೆಂದರೆ, ಇವುಗಳ ಮುಖಾಂತರ ವೈರಸ್ ಯಾವ ಗುಂಪಿಗೆ ಸೇರುತ್ತದೆ, ಅದರ ಮೂಲ, ವಿಕಾಸ ಮತ್ತು ರಚನೆ ತಿಳಿಯುತ್ತದೆ. ಜೊತೆಗೆ ಇದು ತನ್ನ ಗುಂಪಿನ ಇನ್ನಿತರೆ ವೈರಸ್ ಗಳಿಗೆ ಎಷ್ಟು ಹತ್ತಿರವಿದೆ ಎಂದು ತಿಳಿಯಲು ಸಹಾಯ ಮಾಡುತ್ತದೆ. ಕಳೆದ ಸಂಚಿಕೆಯಲ್ಲಿ ಉಲ್ಲೇಖಿಸಿದ ಅವರ ಪರಾಮರ್ಶನ ಪ್ರಬಂಧದಲ್ಲಿ ತಿಳಿಸಿರುವಂತೆ, ಬ್ರಾಡ್ ಸ್ಪೆಕ್ಟ್ರಂ (Broad Spectrum) ಲಸಿಕೆ ಮತ್ತು ಔಷಧಿಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಬ್ರಾಡ್ ಸ್ಪೆಕ್ಟ್ರಂ ಔಷಧಿಗಳೆಂದರೆ, ಒಂದೇ ಕುಲದ ಹಲವು ವೈರಸ್ ಗಳಲ್ಲಿರುವ ಸಾಮಾನ್ಯ ಅಂಶಗಳನ್ನು ಗುರುತಿಸಿ, ಆ ಅಂಶಗಳನ್ನು ಗುರಿಯಾಗಿಸಿಕೊಂಡು ತಯಾರಿಸಿದ ಔಷಧಿಗಳು. ಇದು ಲಭ್ಯವಿದ್ದರೆ, ಅತ್ಯಂತ ವೇಗವಾಗಿ ಹರಡಬಲ್ಲ ಸೋಂಕನ್ನು ಪ್ಯಾಂಡೆಮಿಕ್ ಆಗದಂತೆ ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿಯೇ ವೈರಸ್ ನ ಜೀನೋಮಿಕ್ ವಿವರ ತಿಳಿಯುವುದು ಅತ್ಯವಶ್ಯ.

ಮೇಲಿನ ಚಿತ್ರವನ್ನು ವಿವರವಾಗಿ ಗಮನಿಸಿ. ಇಲ್ಲಿ SARS COV 2 ವೈರಸ್ ಸೇರಿದಂತೆ SARS COV ಮತ್ತು MERS COV, ಈ ಮೂರು ವೈರಸ್ ಗಳ ಜೀನೋಮಿಕ್ ಸರಣಿಯ ತುಲನಾತ್ಮಕ ವಿವರಣೆಯಿದೆ. ಕರೋನಾ ವೈರಸ್ ಗಳ ರಚನೆ ಮತ್ತು ಕೆಲಸಗಳಿಗೆ ಬೇಕಾದ ಪ್ರೋಟೀನ್ ಗಳನ್ನು ತಯಾರಿಸಲು ಬೇಕಾದ ಹಲವು ಜೀನುಗಳ ವಿಭಾಗಗಳಿವೆ. ನೀವೇ ಗಮನಿಸಬಹುದಾದಂತೆ, ಮೂರರಲ್ಲೂ ಸಾಕಷ್ಟು ಸಾಮ್ಯತೆ ಇದೆ. ಆದರೆ SARS COV 2 ಮತ್ತು SARS COV ವೈರಸ್ ನಡುವೆ “ಸಹಾಯಕ ಆಕ್ಸೆಸ್ಸರಿ ಜೀನು”ಗಳಲ್ಲಿರುವಇರುವ ವ್ಯತ್ಯಾಸವನ್ನು ಚುಕ್ಕಿಯುಳ್ಳ ಕೆಂಪು ಗೆರೆಯ ಮೂಲಕ ಗುರುತು ಹಾಕಲಾಗಿದೆ.
ಮೇಲೆ ಚಿತ್ರದಲ್ಲಿ ತೋರಿಸಿರುವಂತೆ, SARS COV 2 ವೈರಸ್ ಸುಮಾರು ೩೦ ಸಾವಿರ ಬೇಸ್ ಗಳುಳ್ಳ ಜೀನೋಮ್ ಅನ್ನು ಹೊಂದಿದೆ. ಕಳೆದ ಸಂಚಿಕೆಯಲ್ಲಿ ವಿವರಿಸಿದಂತೆ ಅದರ ರಚನೆಗೆ ಅವಶ್ಯವಾದ ಪ್ರೋಟೀನ್ ಗಳನ್ನು ಮತ್ತು ನ್ಯೂಕ್ಲಿಕ್ ಆಮ್ಲಗಳನ್ನು ತಯಾರು ಮಾಡಲು ಬೇಕಾದ ಜೀನುಗಳಾದ ORF1a/b, E, M, N ಮತ್ತು ಸಂಖ್ಯಾ ರೂಪದಲ್ಲಿ ಸೂಚಿಸಿರುವ ಸಹಾಯಕ ಆಕ್ಸೆಸ್ಸರಿ ಜೀನುಗಳು ಇವೆ ನೋಡಿ. ಸದ್ಯ ಈ ವೈರಸ್ ನ ಸ್ಪೈಕ್ ಮತ್ತು ಆಕ್ಸೆಸ್ಸರಿ ಜೀನುಗಳಲ್ಲಿ ರೂಪಾಂತರಗಳಾಗಿ, ಬೇಗ ಹರಡಲು ಬೇಕಾದ ಹೆಚ್ಚು ಸಾಂಕ್ರಾಮಿಕತೆಯನ್ನು ಪಡೆದುಕೊಂಡಿವೆ ಎಂದು ವಿಜ್ಞಾನಿಗಳು ವಿಚಾರ ಮಂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಸ್ಪಷ್ಟಗೊಳ್ಳಲಿದೆ.
ರೋಗ ನಿರೋಧಕ ವ್ಯವಸ್ಥೆ ಹಾಗೂ ಔಷಧ ಮತ್ತು ಲಸಿಕೆಗಳು
ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯಲ್ಲಿ ಎರಡು ಪ್ರಮುಖ ವಿಭಾಗಗಳಿವೆ. ಅವುಗಳೆಂದರೆ ಸಹಜ (Innate Immunity System) ಮತ್ತು ಅನುವರ್ತನ (Adaptive Immunity System) ರೋಗ ನಿರೋಧಕ (ರೋ.ನಿ.) ವ್ಯವಸ್ಥೆ. ಯಾವುದೇ ಸೋಂಕನ್ನು ಮೊದಲು ಸಹಜ ರೋ.ನಿ ವ್ಯವಸ್ಥೆ ಗಮನಿಸಿ ಹೋರಾಡುತ್ತಾ, ನಂತರ ಅನುವರ್ತನ ರೋ.ನಿ ವ್ಯವಸ್ಥೆ ಜಾಗೃತವಾಗುವಂತೆ ನೋಡಿಕೊಳ್ಳುತ್ತದೆ. ಅನುವರ್ತನ ರೋ.ನಿ ವ್ಯವಸ್ಥೆ ಸೋಂಕು ಸಂಪೂರ್ಣ ನಿವಾರಣೆಯಾಗಲು ಸಹಾಯ ಮಾಡುತ್ತದೆ ಮತ್ತು ಮುಂದೆ ಇನ್ನೊಮ್ಮೆ ಇಂತಹ ಸೋಂಕು ಉಂಟಾದಲ್ಲಿ ಹೋರಾಡಲು ಬೇಕಾದ ರೋಗ ನಿರೋಧಕ “ಮೆಮೊರಿ ಜೀವಿಕೋಶಗಳನ್ನು” ಕಾಪಿಡುತ್ತದೆ. ಸೋಂಕು ಉಂಟಾದಲ್ಲಿ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಹೋರಾಟದ ರೂಪರೇಖೆಯನ್ನು ಕೆಳಗಿನ ಚಿತ್ರ ತೋರಿಸುತ್ತದೆ.

ಲಸಿಕೆಗಳು ಕೆಲಸ ಮಾಡುವುದೇ ಮಾನವ ದೇಹದ ರೋಗ ನಿರೋಧಕ ವ್ಯವಸ್ಥೆಯ ಆಧಾರದಿಂದ. ಅವು ಮಾನವ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಎಚ್ಚರಿಸುವ ಹಲವು ವಿಧಾನಗಳ ಮೂಲಕ ಸಹಾಯಕ್ಕೆ ಬರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನಂತೆ ಸದ್ಯ ೪೦ ಕ್ಕೂ ಹೆಚ್ಚಿರುವ ವಿಧವಿಧವಾದ ಕೋವಿಡ್-19 ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಅದರ ಪಟ್ಟಿ ಇಲ್ಲಿದೆ ನೋಡಿ. ಬಹಳಷ್ಷು ಲಸಿಕೆಗಳನ್ನು SARS COV 2 ವೈರಸ್ ನ ನ್ಯೂಕ್ಲಿಕ್ ಆಮ್ಲ ಮತ್ತು ಸ್ಪೈಕ್ ಪ್ರೋಟೀನ್ ಗಳನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಈ ವೈರಸ್ ಗಳನ್ನೇ ಸಜೀವವಾಗಿ ಬಲ ಕುಂದಿಸಿ ಅಥವಾ ನಿಷ್ಕ್ರಿಯಗೊಳಿಸಿ ಕೂಡ ಲಸಿಕೆ ತಯಾರಿಸುತ್ತಾರೆ. ಇವುಗಳನ್ನು ಕ್ರಮವಾಗಿ ಲೈವ್ ಅಟಿನ್ಯೂಯೇಟೆಡ್ ವೈರಸ್ ವ್ಯಾಕ್ಸೀನ್ (Live Attenuated Virus Vaccine) ಮತ್ತು ಇನ್ಯಾಕ್ಟಿವೇಟೆಡ್ ವೈರಸ್ ವ್ಯಾಕ್ಸೀನ್ (Inactivated Virus Vaccine) ಎಂದು ಕರೆಯುತ್ತಾರೆ. ಜೊತೆಗೆ ಇತರೆ ಕೆಲವು ವಿಧಾಗಳೂ ಇವೆ. ಒಟ್ಟಾರೆ ಮೇಲೆ ತಿಳಿಸಿದ ಎಲ್ಲಾ ಲಸಿಕೆಗಳು ಸದ್ಯ ಅಭಿವೃದ್ಧಿ ಮತ್ತು ಪರೀಕ್ಷಾ ಹಂತದಲ್ಲಿವೆ.
ಇನ್ನು SARS COV 2 ಔಷಧಗಳ ವಿಚಾರಕ್ಕೆ ಬಂದರೆ ಅಲ್ಲೂ ಕೂಡ, ಕಳೆದ ಸಂಚಿಕೆಯಲ್ಲಿ ವಿವರಿಸಿದ “ವೈರಸ್ ರೆಪ್ಲಿಕೇಶನ್ ಚಕ್ರ”ದ ವಿವಿಧ ಹಂತಗಳಲ್ಲಿ ಬಳಕೆಯಾಗುವ ವಿವಿಧ ಜೈವಿಕ ಮಾಲಿಕ್ಯೂಲ್ ಗಳನ್ನು ಗುರಿಯಾಗಿಸಿಕೊಂಡು ಸಂಶೋಧನೆ ಮಾಡಲಾಗುತ್ತಿದೆ. ಇವೆಲ್ಲವನ್ನು ಮುಂದೊಮ್ಮೆ ವಿವರವಾಗಿ ಅರಿಯೋಣ.
ಮಾನವಕುಲವನ್ನು ಸ್ವಲ್ಪ ಹೆಚ್ಚೇ ಕಾಡಿಸಿರುವ ವೈರಸ್ಸುಗಳ ವಿಕಾಸ ಹಾಗೂ ನಮ್ಮ ಮತ್ತು ಅವುಗಳ ನಡುವಿನ ಹಾವು-ಏಣಿ ಆಟ, ಒಂದು ಮಹಾಪಯಣವೇ ಸರಿ. ಕ್ಯಾನ್ಸರ್ ಎಂಬ ಮಾರಣಾಂತಿಕ ಖಾಯಿಲೆಯ ಗುಟ್ಟು ಬಿಡಿಸಲಾಗದ ಕಗ್ಗಂಟಾಗಿದ್ದಾಗ, ಅದರ ಮೂಲವನ್ನು ಪತ್ತೆ ಹಚ್ಚಿದ್ದೇ ವೈರಸ್ ಗಳ ಸಂಶೋಧನೆ. ಕೆಲವು ವಿಜ್ಞಾನಿಗಳು ವೈರಸ್ಸಿನಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದರೆ, ಅನುವಂಶೀಯ ಗುಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ಹಾಗೂ ಮಾಲಿನ್ಯಯುಕ್ತ ಪರಿಸರದಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ತಮ್ಮ ತಮ್ಮ ವಾದಸರಣಿಗಳನ್ನು ಮುಂದಿಡುತ್ತಿದ್ದರು. 1970 ರ ದಶಕದಲ್ಲಿ “ಜೀವಿಕೋಶದೊಳಗೆ ಡಿ.ಎನ್.ಎ. ಕಣಗಳಲ್ಲಿರುವ ವಂಶವಾಹಿ(ಜೀನ್) ಗಳ ರೂಪಾಂತರದ (Mutation) ಮೂಲಕವೇ ಕ್ಯಾನ್ಸರ್ ಸಂಭವಿಸುವುದು ಎಂದು ತಿಳಿಯಿತಲ್ಲದೇ ಇಂತಹ ಕ್ಯಾನ್ಸರ್ ಕಾರಕ ಜೀನುಗಳನ್ನು ಆಂಕೋಜೀನ್(Oncogene)” ಎಂದು ಕರೆಯಲಾಯಿತು. ಈ ಆಂಕೋಜೀನ್(Oncogene) ಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದ್ದೇ ವೈರಸ್ ಕುರಿತ ಸಂಶೋಧನೆಗಳು.
ಈಗ ಕೋವಿಡ್-19 ಸರಣಿಯಲ್ಲಿ ಅಲ್ಪ ವಿರಾಮವನ್ನು ತೆಗೆದುಕೊಳ್ಳುವ ಸಮಯ. ಕೋವಿಡ್-19 ವಿಪತ್ತು ಬರೀ ಒಂದು ವಾರದಲ್ಲೇ ಮುಗಿದು ಹೋಗುವ ಸಂಗತಿ ಅಲ್ಲವಾದ್ದರಿಂದ ಈ ವಿರಾಮ. ಮುಂದೆ ವಿವರವಾಗಿ ಲಸಿಕೆಗಳ ವಿವರವನ್ನು ತಿಳಿಯೋಣ. ಇನ್ನು ಸೋಂಕು ವಿಜ್ಞಾನದ ವಿವರಗಳು ಕೂಡ ಅವಶ್ಯ ತಿಳಿಯಬೇಕಾದ ವಿಷಯ. ಇದೆಲ್ಲಕ್ಕಿಂತ ಮಿಗಿಲಾಗಿ “ಕೋವಿಡ್-19”, ಮಾನವ ಚಟುವಟಿಕೆಗಳನ್ನು ನಿಯಂತ್ರಿಸಿರುವ ರೀತಿ, ನಮ್ಮ ಅಗತ್ಯಗಳು ಮತ್ತು ಆದ್ಯತೆಗಳನ್ನು ಮತ್ತೆ ನೆನಪು ಮಾಡಿಕೊಡುತ್ತಿರುವ ಈ ಹೊತ್ತಿನಲ್ಲಿ ಅದನ್ನೊಂದು ತಾತ್ವಿಕ ನೆಲೆಗಟ್ಟಿನಲ್ಲಿ ಚರ್ಚಿಸ ಬೇಕಾದ ಅಗತ್ಯವಿದೆ. ಈ ದಿನಗಳು ಸುಗಮಗೊಳ್ಳಲಿ ಎಂದು ಆಶಿಸೋಣ. ಸ್ವಲ್ಪ ವಿರಾಮದ ನಂತರ ಮತ್ತೆ ಸಿಗೋಣ.
– ಆಕಾಶ್ ಬಾಲಕೃಷ್ಣ
ನೆರವು: ಡಾ.ಟಿ.ಎಸ್.ಚನ್ನೇಶ್.
ಕೋವಿಡ್-19 ತಂದೊಡ್ಡಿರುವ ಈ ಸಂಕಟದ ಸಂದರ್ಭದಲ್ಲಿ, ಸರಿಯಾದ ಮಾಹಿತಿ ಮತ್ತು ವಿವರಗಳನ್ನು ಪಡೆಯುವುದು ಅತ್ಯವಶ್ಯಕ. ಹಾಗಾಗಿ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಾದ “ಸೈನ್ಸ್”, “ನೇಚರ್”, “ಸೈಂಟಿಫಿಕ್ ಅಮೆರಿಕನ್”, “ಲ್ಯಾನ್ಸೆಟ್”, “ಸೆಲ್”, “ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್” ಮುಂತಾದ ಪತ್ರಿಕೆಗಳು ನಿಖರವಾದ ಮತ್ತು ವೈಜ್ಞಾನಿಕವಾದ ವಿವರಗಳನ್ನು ಪ್ರಕಟಿಸುತ್ತಿವೆ. ಮನುಕುಲದ ಒಳಿತಿಗಾಗಿ ಸಂಶೋಧನಾ ಲೇಖನಗಳನ್ನು ಮತ್ತು ವರದಿಗಳನ್ನು ಮುಕ್ತ ಆಕರವಾಗಿ ಒದಗಿಸಿಕೊಡುತ್ತಿವೆ. ಭಾರತದಲ್ಲಿ “ದಿ ಹಿಂದೂ” ಪತ್ರಿಕೆ ಕೂಡ ಮೌಲಿಕವಾದ ಬರಹಗಳನ್ನು ಪ್ರಕಟಿಸುತ್ತಿದೆ. ಹಾಗಾಗಿ ಓದುಗರು ಸುಳ್ಳು ಸುದ್ದಿಗಳು, ಅಪೂರ್ಣ ಸುದ್ದಿಗಳ ಮೊರೆ ಹೋಗದೇ ಇಂತಹ ಪತ್ರಿಕೆಗಳನ್ನು ನೋಡಬಹುದಾಗಿದೆ.
ಪ್ರಿಯ ಆಕಾಶ್
ನಿಮ್ಮ ಕೋವಿಡ್ ಸರಣಿಯ ಬರಹಗಳು ಅರ್ಥಪೂರ್ಣವಾಗಿ, ಸರಳವಾಗಿ ಮನ ಮುಟ್ಟುವಂತೆ ಇವೆ. ಮುಂದಿನ ಬರಹಕ್ಕಾಗಿ ಎದುರು ನೋಡುತ್ತಾ
ವೈಜ್ನಾನಿಕ ಹಾಗೂ ನಿಖರವಾದ ಮಾಹಿತಿಗೆ ಧನ್ಯವಾದಗಳು.
Super fantastic informative details. Please be posted on this subject
Useful information
All the best for next part
ಪ್ರಿಯ ಆಕಾಶ್, ಕೋವಿಡ್ ಕುರಿತ ನಿಮ್ಮ ಲೇಖನಗಳನ್ನು ಓದಿದೆ. ಅಭಿನಂದನೆಗಳು. ವೈಜ್ಞಾನಿಕ ವಿವರಗಳನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಕಡಿಮೆಯಿರುವ ಈ ಸಂದರ್ಭದಲ್ಲಿ ನಿಮ್ಮ ಪ್ರಯತ್ನ ಮೆಚ್ಚುವಂತಾದ್ದು. ಸಾಮಾನ್ಯ ಕಥಾ ಸಾಹಿತ್ಯಕ್ಕಿರುವಷ್ಟು ಓದುಗರು ಇಂತಹವುಗಳಿಗೆ ಇಲ್ಲದಿರುವುದು ಸತ್ಯ. ಆದ್ದರಿಂದ ಪ್ರತಿಕ್ರಿಯೆ, ಮೆಚ್ಚುಗೆ, ಟೀಕೆಗಳನ್ನು ಆದರಿಸಿ ನಿಮ್ಮ ಬರಹದ ಉಪಯುಕ್ತತೆಯನ್ನು ನಿರ್ಧರಿಸದೆ ನಿಮ್ಮ ಕಾಯಕ ಮುಂದುವರಿಸಿ. ಶುಭಾಶಯಗಳು
ಕೊರೋನ ಬಗ್ಗೆ ನಿಮ್ಮ ಲೇಖನ ಎಳೆ ಎಳೆಯಾಗಿ ಬಿಡಿಸಿಟ್ಟಿದೆಯಲ್ಲದೆ ವಯ್ ರಸ್ ಗಳ ವಿಕಸನದ ಬೇರೆ ಬೇರೆ ಮಜಲುಗಳನ್ನು ತೆರೆದಿಟ್ಟಿದೆ ಸಾರ್..ತಮ್ಮ ಲೇಖನವನ್ನು ನಾನು ಹನ್ನ್ಚಿಕೊನ್ಡಿದ್ದೇನೆ. ತಮಗೆ ಹಾಗೂ ನೆರವು ನೀಡಿರುವ ಡಾ. ಚನ್ನೇಶ್ ರವರಿಗೆ ಧನ್ಯವಾದಗಳು ಸರ್..
Informative information..