You are currently viewing ಕೋವಿಡ್‌ ವ್ಯಾಕ್ಸೀನ್‌ಗಳೇಕೆ ಈ ವರ್ಷ ವಿಜ್ಞಾನದ ನೊಬೆಲ್‌ ಪ್ರಶಸ್ತಿ ಪಡೆಯಲಿಲ್ಲ?

ಕೋವಿಡ್‌ ವ್ಯಾಕ್ಸೀನ್‌ಗಳೇಕೆ ಈ ವರ್ಷ ವಿಜ್ಞಾನದ ನೊಬೆಲ್‌ ಪ್ರಶಸ್ತಿ ಪಡೆಯಲಿಲ್ಲ?

ಅರ್ಥವಿಜ್ಞಾನವನ್ನು ಹೊರತು ಪಡಿಸಿ ಈ ವರ್ಷದ ಎಲ್ಲಾ ನೊಬೆಲ್‌ ಪ್ರಶಸ್ತಿಗಳು ಪ್ರಕಟವಾಗಿವೆ. ಇಂದು ಸಂಜೆಯ (11 October, 2021) ವೇಳೆಗೆ ಅರ್ಥವಿಜ್ಞಾನದ ಪ್ರಶಸ್ತಿಯೂ ಪ್ರಕಟವಾಗಲಿದೆ. ಆದರೆ ಯಾವುದೇ ವಿಜ್ಞಾನದ ಪ್ರಶಸ್ತಿಗಳಲ್ಲಿ ಕೋಟ್ಯಾಂತರ ಜನರ ಜೀವವನ್ನು ಉಳಿಸಿದ ಕೋವಿಡ್‌ ವ್ಯಾಕ್ಸೀನ್‌ ಸ್ಥಾನವನ್ನೇಕೆ  ಪಡೆಯಲಿಲ್ಲ? ಇದು ಅನೇಕ ಜನರನ್ನು ಕಾಡುತ್ತಿರುವ ಪ್ರಶ್ನೆ! ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಕೇಳಿ ಬಂದದ್ದಲ್ಲ! ಜಗತ್ತಿನಾದ್ಯಂತ ಅನೇಕ ಪ್ರಮುಖ ವಿಜ್ಞಾನ ಸಂಸ್ಥೆಗಳು, ವಿಜ್ಞಾನಿಗಳೂ ಜೊತೆಗೆ ಅನೇಕ ಸಾರ್ವಜನಿಕರೂ ಮಾತನಾಡಿಕೊಳ್ಳುತ್ತಿರುವ ಸಂಗತಿ. ಇದೇ ಅಕ್ಟೋಬರ್‌ 1 ರಂದು ನೊಬೆಲ್‌ ಪ್ರಶಸ್ತಿಗಳಿನ್ನೂ ಪ್ರಕಟವಾಗುವುದಕ್ಕೂ ಮೊದಲು  CPUS  ಮಣಿಪಾಲದ ರೋಟರಿ ಕ್ಲಬ್‌ ಜೊತೆ ನೊಬೆಲ್‌ ಪ್ರಶಸ್ತಿಗಳ ಪರಂಪರೆಯ ಕುರಿತು ವೆಬಿನಾರ್‌ ಏರ್ಪಡಿಸಿತ್ತು. ಅದರಲ್ಲೂ ಸೂಕ್ಷ್ಮವಾಗಿ ಇದರ ಪ್ರಸ್ತಾಪ ಬಂದಿತ್ತು. (ಲಿಂಕ್‌ ನೋಡಬಹುದು https://youtu.be/4MHI-LTv1W4 ). ಹಾಗೇನೇ ಕೋವಿಡ್‌ ವ್ಯಾಕ್ಸೀನು ಅನುಶೋಧವು ಪಡೆಯಲಾರದೆಂದೂ ಹೇಳಲಾಗಿತ್ತು ಅಂತಹ ವಿಚಾರಗಳ ಕೆಲವೊಂದು ಸಂಗತಿಗಳನ್ನಿಲ್ಲಿ ನೋಡೋಣ.

       ಆದರೆ ಕಳೆದ ಎರಡು ವರ್ಷದಲ್ಲಿ Covid -19 ಮಾನವರಿಂದ ಮಾನವರಿಗೆ ಸೋಂಕಿನ ಭಾರಿ ತೀವ್ರತೆಯಿಂದ ಸುಮಾರು 200 ರಾಷ್ಟ್ರಗಳಲ್ಲಿ 240 ದಶಲಕ್ಷ ಜನರನ್ನು ಆವರಿಸಿದ್ದಲ್ಲದೆ 48.5 ಲಕ್ಷ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ಇಡೀ ಆ ಸಮಯದಲ್ಲಿ ಕೊರೊನಾ ವೈರಸ್ಸುಗಳ ಅರಿವಿನ ಮೈಲುಗಲ್ಲುಗಳ ಮಹಾಪೂರವೇ ಸಾವಿರಾರು ಸಂಶೋಧನಾ ಪ್ರಬಂಧಗಳ ಮೂಲಕ ಸಾಬೀತಾಗಿದ್ದು. ಕಡೆಗೂ ವ್ಯಾಕ್ಸೀನುಗಳಲ್ಲೂ ವಿವಿಧತೆಯ ಸಾಕ್ಷಿಯನ್ನೂ ಕಳೆದ ವರ್ಷದ ವಿಜ್ಞಾನವು ಪ್ರಸ್ತುತ ಪಡಿಸಿದೆ.  ಜಗತ್ತಿನ ಅನೇಕ ಜನರು ಕೋವಿಡ್‌ ವ್ಯಾಕ್ಸೀನು ವಿಜ್ಞಾನದಲ್ಲೊಂದು ನೊಬೆಲ್‌ ಪ್ರಶಸ್ತಿಯನ್ನು ಪಡೆಯಬಹುದೆಂಬ ವಿಶ್ವಾಸವನ್ನು ಹೊಂದಿದ್ದರು. ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಜೀವದಿಂದ ಉಳಿದಿರಲು, ಅದಕ್ಕಿಂತಲೂ ಹೆಚ್ಚಾಗಿ ಬದುಕಿನ ವಿಶ್ವಾಸವನ್ನು ಕೊಡಿಸಿದ ವ್ಯಾಕ್ಸೀನ್‌ ಸಂಶೋಧನೆಯು ನೊಬೆಲ್‌ ಪುರಸ್ಕಾರಕ್ಕೆ ಸೂಕ್ತ ಎಂದೇ ಹಲವರ ವಾದ. ಇಡೀ ಶತಮಾನದ ಸಾಂಕ್ರಾಮಿಕತೆಯಲ್ಲಿ ಕೋವಿಡ್‌ ತೀವ್ರವಾಗಿ ಕಾಡಿದ, ಭಯಾನಕ ಸನ್ನಿವೇಶವನ್ನು ತಂದಿಟ್ಟ ರೋಗ. ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಲು ನಡೆಸಿದ ವೈಜ್ಞಾನಿಕ ಪ್ರಯತ್ನಗಳಿಗೆ ಗೌರವವನ್ನು ಕೊಡಬೇಕಿತ್ತು ಎಂದೇ ಅನೇಕ ವಿಜ್ಞಾನಿಗಳೂ ಪ್ರತಿಕ್ರಿಯಿಸಿದ್ದಾರೆ. ಹಲವು ವಿಜ್ಞಾನಿಗಳು ತಮ್ಮ ಟ್ವಿಟರ್‌ಗಳಲ್ಲಿ ಅಸಮಧಾನವನ್ನೂ ವ್ಯಕ್ತಪಡಿಸಿದ್ದಾರೆ. ಕೆಲವರು ಇನ್ನೂ ಮುಂದೆ ಹೋಗಿ ನೊಬೆಲ್‌ ಪ್ರಶಸ್ತಿಗಳ ಹುಡುಕಾಟದಲ್ಲಿ ಆಯ್ಕೆ ಹಾಗೂ ಶ್ರೇಷ್ಠತೆಗಳ ನಡುವಿನ ಗ್ಯಾಪ್‌ ಹೆಚ್ಚಾಗುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ. ಅದರ ಜೊತೆಗೆ ಮೆಸೆಂಜರ್‌ ಆರ್‌.ಎನ್‌.ಎ. ತಂತ್ರಜ್ಞಾನ (Messenger RNA Technology)ದ ಬಗ್ಗೆಯಾದರೂ ಗಮನಿಸಬೇಕಿತ್ತು ಎಂದು ಹಲವರು ಹೇಳಿದ್ದಾರೆ. ಏಕೆಂದರೆ ಈ m-RNA ವಿಧಾನದಿಂದ ತಯಾರಾದ ವ್ಯಾಕ್ಸೀನು ಈವರೆಗಿನ ವ್ಯಾಕ್ಸೀನುಗಳಲ್ಲೇ ವಿಶಿಷ್ಟವಾದದ್ದು. (ವಿವರಗಳನ್ನು ಮುಂದೆ ನೋಡೋಣ). ಹಾಗಿದ್ದರೆ ನೊಬೆಲ್‌ ಸಮಿತಿಯಾದರೂ ಏನು ಹೇಳಿದೆ? ಯಾವ ಕಾರಣಗಳಲ್ಲಿ ಇದು ಅಸಾಧ್ಯವಾಗಿರಬಹುದು.

       ನೊಬೆಲ್‌ ಸಮಿತಿಯೇ ನೇರವಾಗಿ ಯಾವ ಪುರಸ್ಕಾರವನ್ನೂ ಆರಿಸುವುದಿಲ್ಲ. ಬದಲಾಗಿ ಹೆಸರನ್ನು ಪ್ರಸ್ತಾಪ ಮಾಡುವಂತೆ ಹೆಸರನ್ನು ಪ್ರಸ್ತಾಪಿಸಲು ಯೋಗ್ಯರಾದ ವಿಜ್ಞಾನಿಗಳಲ್ಲಿ ಕೇಳಿಕೊಳ್ಳುತ್ತದೆ. ಅವರ ಕಳಿಸಿಕೊಟ್ಟ ಪ್ರಸ್ತಾವನೆಗಳ ಆಧಾರವಾಗಿ ಪ್ರಸ್ತಾಪಿತ ಹೆಸರುಗಳ/ವಿಜ್ಞಾನಿಗಳ ವಿಶೇಷತೆಗಳನ್ನು ತುಲನೆ ಮಾಡಿ ಆಯ್ಕೆ ಮಾಡಲಾಗುತ್ತದೆ. ಆದರೆ ಹೆಸರನ್ನು ಪ್ರಸ್ತಾವನೆಗೆ ಕಳಿಸಕೊಡಲೂ ಫೆಬ್ರವರಿ 1ರಂದು ಸಾಮಾನ್ಯವಾಗಿ ಕಡೆದ ದಿನವಾಗಿರುತ್ತದೆ. ಅಷ್ಟರೊಳಗೇ ಎಲ್ಲಾ ರೀತಿಯ ಪ್ರಯೋಗಗಳೆಲ್ಲಾ ಮುಗಿಯುವ ಮುಂತಾದ ತೊಡಕುಗಳು ಆಗಿರಬಹುದೆಂದೂ ಮತ್ತೊಂದೆಡೆ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ m-RNA ತಂತ್ರಜ್ಞಾನದ ವ್ಯಾಕ್ಸೀನು ಕೋವಿಡ್‌ ಗೆ ಮಾತ್ರವೇ ಸೀಮಿತವಾದದ್ದೂ ಅಲ್ಲ! ಅದರ ತಯಾರಿಯು ಇನ್ನೂ ಮೊದಲೇ ಆರಂಭವಾಗಿದ್ದು m-RNA ವ್ಯಾಕ್ಸೀನಿನ ವೈಜ್ಞಾನಿಕತೆಯೂ ಹಳೆಯದೂ ಹಾಗೇ ವಿಶಿಷ್ಟವೂ ಕೂಡ. ಅದಕ್ಕೆಂದೇ ರಾಯಲ್‌ ಸ್ವೀಡಿಶ್‌ ಅಕಾಡೆಮಿಯ (ನೊಬೆಲ್‌ ಸಮಿತಿ) ಜನರಲ್‌ ಸೆಕ್ರೆಟರಿ ಗೊರಾನ್‌ ಹ್ಯಾನ್‌ಸನ್‌ m-RNA  ವ್ಯಾಕ್ಸೀನ್‌ ತಾಂತ್ತಿಕತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಆಡಿದ್ದಾರೆ. ಈ ವ್ಯಾಕ್ಸೀನಿನ ಶೋಧದ ಹಿಂದಿನ ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ ಕೂಡ. ಅಲ್ಲದೆ ಅದಕ್ಕೆಲ್ಲಾ ಸಾಕಷ್ಟು ಕಾಲ ಬೇಕಾಗಬಹುದೆಂಬ ವಿಶ್ವಾಸನೀಯವಾದ ಮಾತುಗಳನ್ನೂ ಆಡಿದ್ದಾರೆ.

       ಹಾಗೇನೆ m-RNA ತಂತ್ರಜ್ಞಾನದ ಬಗ್ಗೆ ಕೆಲವೊಮ್ಮೆ ಸಾಕಷ್ಟು ಕಾಲ ತೆಗೆದುಕೊಂಡು ನೊಬೆಲ್‌ ಪುರಸ್ಕಾರಕ್ಕೆ ಪಡೆದಂತಹಾ ಗುರುತ್ವ ಅಲೆಗಳ ಜೊತೆಗೆ ಸಮೀಕರಿಸಿ ಮಾತನಾಡಿದ್ದಾರೆ. ಇಂಡಿಯಾನ ನೆಟ್‌ವರ್ಕ್‌ ಸೈನ್ಸ್‌ ಇನ್ಸ್‌ಸ್ಟಿಟ್ಯೂಟ್‌ (Indiana University Network Science Institute in Bloomington) ನ ನಿರ್ದೇಶಕ ಹಾಗೂ ಭೌತವಿಜ್ಞಾನಿ ಸಂಟೊ ಪಾರ್ಚುನಾಟೊ ಅಂತಹಾ ಕಾಲದ ಗ್ಯಾಪ್‌ ಬಗ್ಗೆ ವಿವರಿಸಿದ್ದಾರೆ. 1915ರಲ್ಲೇ ಆಲ್ಬರ್ಟ್‌ ಐನ್‌ಸ್ಟೈನ್‌ ಊಹಿಸಿದ್ದ ಗುರುತ್ವದ ಅಲೆಗಳ ವಿವರಗಳ ಸಾಬೀತು ಸಿಗಲು ಹೆಚ್ಚೂ ಕಡಿಮೆ ಶತಮಾನವೇ ಬೇಕಾಯಿತು ಮುಂದೆ 2017ರಲ್ಲಿ ನೊಬೆಲ್‌ ಅದನ್ನು ಗೌರವಿಸಿ ಬಹುಮಾನಿಸಿತು. ಹಾಗೇಯೇ m-RNA ವ್ಯಾಕ್ಸೀನ್‌ ಕೂಡ ಮುಂದೊಂದು ದಿನ ಅತ್ಯಂತ ಮಾನವತೆಯ ಸಂಶೋಧನೆಯಾಗಿ ಹೊರ ಹೊಮ್ಮೀತು ಎಂದಿದ್ದಾರೆ. ಏಕೆಂದರೆ m-RNA ವ್ಯಾಕ್ಸೀನ್‌ ಕೇವಲ ಕೋವಿಡ್‌ ಅಷ್ಟೇ ಅಲ್ಲ, ಒಟ್ಟಾರೆ ವ್ಯಾಕ್ಸೀನುಗಳ, ನಮ್ಮ ದೇಹದ ಇಮ್ಯುನಿಟಿಯ ಆಂತರಿಕ ವಿವರಗಳ ತಿಳಿವಿನಿಂದ ವಿಶೇಷವಾದ್ದನ್ನು ಗಟ್ಟಿಗೊಳಿಸಲಿದೆ. ನೇರವಾಗಿ ವ್ಯಾಕ್ಸೀನ್‌ ಅನ್ನೇ ಗೌರವಿಸಲು ಆದರ ವೈಜ್ಞಾನಿಕತೆಯ ಹಿಂದೆ ಸಾಕಷ್ಟು ವಿವಿಧತೆಯ ಅಂಶಗಳಿರುವ ಬಗ್ಗೆಯೂ, ಸಾಲದಕ್ಕೇ ನೊಬೆಲ್‌ ಪೂರ್ವದ ಪಾಶ್ಚರ್‌ನ ಕಾಲದಿಂದಲೂ ವ್ಯಾಕ್ಸೀನು ವಿಜ್ಞಾನದ ಬೆಳವಣಿಗೆಯ ಆರಂಭ ಹಾಗೂ ಯಶಸ್ಸು ಇರುವ ಸಂಗತಿಗಳು ಮುಖ್ಯವಾಗುತ್ತವೆ. ಹಾಗಾಗಿ ಕೋವಿಡ್‌ ವ್ಯಾಕ್ಸೀನ್‌ ಮೂಲ ವಿಜ್ಞಾನದ ಆಶಯದಲ್ಲಿ ಆಲ್ಫ್ರಡ್‌ ನೊಬೆಲ್‌ ಅವರ ಸೂಕ್ಷ್ಮಗಳನ್ನು ಒಳಗೊಳ್ಳಲು ಕಷ್ಟ ಪಡಬೇಕಾಗುತ್ತದೆ. ಆದರೆ ಅಂತಹಾ ಸೂಕ್ಷ್ಮ ವಿಜ್ಞಾನದ ವಿಷಯಗಳಿಗೆ m-RNA ವ್ಯಾಕ್ಸೀನಿನ ಬೆಳವಣಿಗೆಗಳು ಹೊಂದಿಕೆಯಾಗುವ ಲಕ್ಷಣಗಳಿವೆ. ಆದರೆ ಅವೆಲ್ಲವಿನ್ನೂ ಸುಧಾರಿಸಬೇಕಾದ ಹಂತದಲ್ಲಿವೆ. ಇದನ್ನೆಲ್ಲಾ ವಿವರವಾಗಿ ತಿಳಿಯಲು m-RNA ವ್ಯಾಕ್ಸೀನಿನ ಕುರಿತು ಸಂಪೂರ್ಣವಾಗಿ ಅರಿಯಬೇಕಾಗುತ್ತದೆ.

       ಹೌದು m-RNA ವ್ಯಾಕ್ಸೀನ್‌ ವಿವರಗಳಲ್ಲಿ ಪ್ರಮುಖವಾಗಿ ಬೇಡವಲ್ಲದ ಇಮ್ಯೂನ್‌ ಪ್ರತಿಕ್ರಿಯೆಯನ್ನು ಸುಮ್ಮನಾಗಿಸಬಲ್ಲ ಗುಣವನ್ನೂ ಹೊಂದಿಸಿಕೊಂಡು ವರ್ತಿಸಬೇಕಾದ ವಿಧಾನಗಳನ್ನು ಸಂಶೋಧಿಸಿದ ಸಂಗತಿಗಳಿವೆ. ಅಂತಹದ್ದಕ್ಕೆ ಈಗಾಗಲೆ ಬ್ರೆಕ್‌ಥ್ರೂ(Breakthrough) ಪ್ರಶಸ್ತಿ ಹಾಗೂ ಲಸ್ಕರ್‌ ಪ್ರತಿಷ್ಠಾನದ ಪ್ರಶಸ್ತಿಗಳು ಬಂದಿವೆ. ಏಕೆಂದರೆ ಈ ವಿಧಾನದಿಂದಲೇ ಮಾಡೆರ್ನಾ ಮತ್ತು ಫೈಜರ್‌-ಬಯೊಎನ್‌ಟೆಕ್‌ (Moderna and Pfizer–BioNTech vaccines)ವ್ಯಾಕ್ಸೀನುಗಳು ತಯಾರಾಗಿದ್ದು ಯಶಸ್ಸಿನಲ್ಲೂ ಹಿರಿಮೆಯನ್ನು ಸಾಧಿಸಿವೆ. ಇದನ್ನು CPUS ತನ್ನ ಓದುಗರಿಗೆ ಸದ್ಯದಲ್ಲೇ ಮುಂದೊಂದು ದಿನ ವಿವರವಾಗಿ m-RNA ವ್ಯಾಕ್ಸೀನ್‌ ಹಿಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಇದೇ ವೆಬ್‌ ಪುಟದಲ್ಲಿ ಪ್ರಕಟಿಸಿಲಿದೆ.

ರಾಯಲ್‌ ಸ್ವೀಡಿಶ್‌ ಅಕಾಡೆಮಿಯ ಡಾ. ಗೊರಾನ್‌ ಹ್ಯಾನ್‌ಸನ್‌

       ಅವೆಷ್ಟು ವಿಶಿಷ್ಟವೆಂದರೆ ಜಾನ್‌ ಹಾಪ್‌ಕಿನ್ಸ್‌ ವೈದ್ಯಕೀಯ ಸಂಸ್ಥೆಯ ಸೂಕ್ಷ್ಮ ಜೀವಿ ವಿಜ್ಞಾನಿ Arturo Casadevall ಈ ವ್ಯಾಕ್ಸೀನುಗಳು  ವಿವಿಧ ವಿಜ್ಞಾನ ಶಾಖೆಗಳಲ್ಲಿನ ತಿಳಿವಿನ ಬೇರುಗಳನ್ನು ಪಡೆದುಕೊಂಡು ಹೊರಬಂದ ವಿಶೇಷ ಉತ್ಪನ್ನಗಳು ಎಂದೇ ವ್ಯಾಖ್ಯಾನಿಸಿದ್ದಾರೆ. ರಾಯಲ್‌ ಸ್ವೀಡಿಶ್‌ ಅಕಾಡೆಮಿಯ ಗೊರಾನ್‌ ಹ್ಯಾನ್‌ಸನ್‌  ಕೂಡ ಒಂದು ಬಗೆಯಲ್ಲಿ ಅನುಮೋದೊಸುತ್ತಾ.. “ಕಾಲವು ಎಲ್ಲದನ್ನೂ ನಿರ್ಮಿಸುತ್ತದೆ, ಕಾಯಬೇಕಷ್ಟೇ! ನಾವೂ ಸಹಾ ಸರಿಯಾದ ಜನರಿಗೆ, ಸರಿಯಾದ ಅನುಶೋಧಕ್ಕೆ ಗೌರವಿಸಲು ಬಯಸುತ್ತೇವೆ (Working all this out takes time, Hansson says. “We want to give credit to the right people. And for the right discovery,” he says. “So stay tuned.”) ಎಂದಿದ್ದಾರೆ.

       ಕಾಲವು ಬಹುಮಾನವನ್ನೂ ಕೊಡಲಿ, ಎಲ್ಲದಕ್ಕಿಂತಾ ಹೆಚ್ಚಾಗಿ ಜಗತ್ತಿನ ಜನತೆಗೆ ಸದ್ಯ “ಶೀತ-ನೆಗಡಿ” ಭಯದ “ಜ್ವರ” ದಿಂದ ಮುಕ್ತಿಕೊಡಿಸಲಿ. ಸಾಂಕ್ರಾಮಿತೆಯು ದೇಹವನ್ನಷ್ಟೇ ರೋಗಕ್ಕೆ ಒಡ್ಡುವುದಲ್ಲ ಮನಸ್ಸುಗಳನ್ನೂ ಇಲ್ಲ-ಸಲ್ಲದ ಸಾಂಕ್ರಾಮಿಕತೆಗೆ ತಂದಿಟ್ಟಿದೆ. ಎಲ್ಲದರ ಮುಕ್ತಿಗೆ ಕಾಲವು ಅನುವು ಮಾಡಿಕೊಡಬೇಕಿದೆ.

       ನಮಸ್ಕಾರ

ಡಾ. ಟಿ.ಎಸ್. ಚನ್ನೇಶ್‌.

Leave a Reply