ಕೊವಿಡ್19ರ 20, 21 ರ ತಳಮಳಗಳು ಇನ್ನೇನು ಮೂರೇ ತಿಂಗಳಲ್ಲಿ 22 ತಲುಪಲಿರುವ ಸಮಯದಲ್ಲೂ ಉಳಿದಿವೆಯೇ? ಕೊವಿಡ್-19 ಸೃಸ್ಟಿಸಿರುವ ಹೊಸ ಪ್ರಶ್ನೆಗಳು ಯಾವುವು? ಅವು ಆತಂಕದವೇ, ಸಮಾಧಾನವನ್ನೂ ಒಳಗೊಂಡಿವೆಯಾ? ಜವಾಬ್ದಾರಿಗಳ ಎಚ್ಚರಿಕೆಗಳು ಇವೆಯಾ.. ಹೀಗೆ ವಿಷಯಗಳ ಹರಹು ವಿಸ್ತಾರವಾಗಿದೆ. ಹೆಚ್ಚೂ ಕಡಿಮೆ ಕಳೆದ 18-20 ತಿಂಗಳು ಇಡೀ ಮಾನವ ಕುಲವನ್ನು ಕಾಡಿರುವ ಏಕೈಕ ಜಾಗತಿಕ ದುರಂತವಿದು. ಇಷ್ಟಾಗಿಯೂ ಇನ್ನೂ ಮುಂದೇನು? ಎಂದು ಆತಂಕದ ಜೊತೆಗೆ ಹೊಸ ಪ್ರಶ್ನೆಗಳು ಎಂದಿರುವುದರ ಈ ಚರ್ಚೆಗೆ ನಿಜಕ್ಕೂ ಹೆದರಿಸುವ ಉದ್ದೇಶವಿಲ್ಲ! ಬದಲಿಗೆ ಸಮಾಧಾನದಿಂದ ಇರಲು ಬೇಕಾದ ಮಾರ್ಗೋಪಾಯದ ವಿಚಾರಗಳ ಹುಡುಕಾಟವಿದೆ.
ಹೆಚ್ಚು ಪೀಠಿಕೆಯನ್ನು ವಿಸ್ತರಿಸದೆ, ನೇರ ಪ್ರಶ್ನೆಗಳಿಗೆ ಬರೋಣ. ಮೊದಲನೆಯದಾಗಿ ಮೂರನೆಯ ಅಲೆಯ ಭಯದ್ದು! ನಿಜಕ್ಕೂ ಮೂರನೆಯ ಅಲೆ ಇದೆಯಾ? ಹೌದು! ಮೂರನೆಯ ಅಲೆ ಅನಿವಾರ್ಯ ಹಾಗೆಂದು ಇಂಡಿಯಾದ ಡಾಕ್ಟರುಗಳ ಸಂಘ (Indian Medical Association -IMA)ದ ಅನೇಕ ಹಿರಿಯ ವೈದ್ಯರು ಕಳೆದ ಜುಲೈನಲ್ಲೇ ಹೇಳಿದ್ದರು. ಭಾರತೀಯ ಸಂದರ್ಭಕ್ಕಂತೂ ಮೂರನೆಯ ಅಲೆ ಖಂಡಿತಾ ಅನಿವಾರ್ಯ ಎಂಬ ಅವರ ಸೂಚನೆಯನ್ನು ವಿಖ್ಯಾತ ಸುದ್ದಿ ಸಂಸ್ಥೆ ಬಿಬಿಸಿ (BBC) ವರದಿ ಮಾಡಿತ್ತು. ಹಾಗಾದರೆ ಅದರ ವಿವರಗಳೇನು? ಮತ್ತೆಷ್ಟು ಆತಂಕ? ಇತ್ಯಾದಿಗಳ ತತ್‌ಕ್ಷಣದ ಪ್ರತಿಕ್ರಿಯೆ ಸಹಜ.
ಸಾಂಕ್ರಾಮಿಕತೆಯ ವೈದ್ಯ ವಿಜ್ಞಾನದಲ್ಲಿ ನಿಜಕ್ಕೂ ಅಲೆಯ ಬಗೆಗೆ ವಿಶ್ವಾಸರ್ಹವಾದ ವಿವರಗಳಿಲ್ಲ! ಅದೇನಿದ್ದರೂ ಏರಿಳಿತಗಳಿಗೆ ಸಾರ್ವತ್ರಿಕವಾಗಿ ಕರೆಯುವ ಮಾತು ಅಷ್ಟೆ! ವೈರಸ್ಸುಗಳ ಬದುಕಿನ ಸ್ಟ್ರಾಟಜಿಗಳ ಅರ್ಥೈಸುವ ಪ್ರಕ್ರಿಯೆಯಲ್ಲಂತೂ ಅಲೆಗಳು, ಅಗೋಚರ ಅನಂತತೆಯ ಅಮೂರ್ತ ರೂಪ. ವೈರಸ್ಸುಗಳನ್ನು ಬದುಕಿನ ಜಾಣ್ಮೆಯ ಏರಿಳಿತಗಳು ನಿಜಕ್ಕೂ ಮೂರಲ್ಲ, ಆರೂ ಹೌದು, ನೂರು ಹೌದು, ಸಾವಿರಕ್ಕೂ ಮಿಕ್ಕಿ ಲೆಕ್ಕ ಬದ್ಧ ಅರ್ಥವತ್ತಾದ ವಿವರಗಳನ್ನು ಉದಾಹರಿಸಲು ಅಶಕ್ತವಾದ ಸಂಗತಿಯೇ ಸರಿ. ಏಕೆಂದರೆ ಇಡೀ ವೈರಸ್ಸುಗಳನ್ನು ಅರ್ಥ ಮಾಡಿಕೊಂಡ ಹಿನ್ನೆಲೆಯನ್ನೇ ಆಮೂಲಾಗ್ರವಾಗಿ ಬಗೆದು ನೋಡಿದರೆ ಅದರ ಸ್ವರೂಪ ತುಸುವಾದರೂ ಸಿಕ್ಕೀತು.
ಜೀವಿ ವಿಕಾಸದ ಸಿದ್ಧಾಂತಗಳ ಆರಂಭಿಕ ಚರ್ಚೆಗಳಿಂದಲೂ ಸಮೃದ್ಧಗೊಂಡ ನ್ಯುಕ್ಲಿಯೆಕ್ ಆಮ್ಲದ ಪ್ರಸ್ತುತತೆಯು ವೈರಸ್ಸುಗಳಿಗೆ ಕೊಡಬೇಕಾದ ಪ್ರಾಮುಖ್ಯತೆಯನ್ನು ಕೊಟ್ಟಿರಲಿಲ್ಲ. ಹೇಳಿ-ಕೇಳಿ ವೈರಸ್ಸು ಪ್ರೊಟೀನನ್ನು ಹೊದ್ದ ನ್ಯುಕ್ಲಿಯೆಕ್ ಆಮ್ಲವಷ್ಟೇ! ನ್ಯುಕ್ಲಿಯೆಕ್ ಧಾತುವೇ ಸಂಕೀರ್ಣ ವಿಧಾನಗಳಿಂದ ಪುನರಾವರ್ತನೆಯ ಗುಣವನ್ನೂ ಪ್ರದರ್ಶಿಸುವ ವಿಶಿಷ್ಟ ರಸಾಯನಿಕ. ಜೀವಿಗಳ ಮೂಲ ಧಾತು. ಆರಂಭಿಕ ವಿಕಾಸದಿಂದ ಕೋಟ್ಯಾಂತರ ವರ್ಷಗಳ ವಿಕಾಸದ ಹಾದಿಯಲ್ಲಿ ಸಂಚರಿಸಿರುವ ಈ ರಸಾಯನಿಕವು ನಿಜಕ್ಕೂ ಅವತರಿಸಿರುವ ರೂಪಗಳು ಅಕ್ಷರಶಃ ಅನಂತವಾದವು. ಹಾಗೆಂದೇ ವೈರಸ್ಸುಗಳ ಇಂತಹಾ ಆಟದ ಗಣಿತವನ್ನು ಲೆಕ್ಕಬದ್ಧವಾಗಿ ಅರಿಯುವ ತರ್ಕಗಳು ಮಾತ್ರವೇ ಇದ್ದವು. ಇದೀಗ ಕಂಪ್ಯೂಟೇಶನ್‌ಗಳ ಸಹಾಯದಿಂದ ಒಂದಷ್ಟು ಅಳತೆಗೂ ದಕ್ಕಿವೆ. ಅವುಗಳೂ ಕೂಡ ಅಪೂರ್ಣ ವಷ್ತುನಿಷ್ಠ ವಿವರಗಳಿಂದ. ಹೀಗಿರುವಾಗ ಆವರ್ತಗಳ ಜಾಡನ್ನು ಹಿಡಿಯುವುದು ಸುಲಭವಾದ ಸಂಗತಿಯೇನಲ್ಲ. ಆದಾಗ್ಯೂ ಸಾರ್ವಜನಿಕ ತೆರವುಗಳಿಂದ, ಅರೆ ತಿಳಿವಳಿಕೆಯ ನಿರ್ಧಾರಗಳಿಂದ -ಈಗಾಗಲೇ ಅರ್ಥವಾಗಿರುವ ವೈರಸ್ಸು ಹರಡುವಿಕೆಯ ತಿಳಿವಿನಿಂದ- ಜಾಗ್ರತೆಗಾಗಿ ಅಲೆಗಳ ಲೆಕ್ಕದಲ್ಲಿ ಮಾತುಗಳಾಗುತ್ತಿವೆ.
ಹಾಗಾದಲ್ಲಿ ವೈದ್ಯರೇನನ್ನುತ್ತಾರೆ. ವೈದ್ಯರಷ್ಟೇ ಅಲ್ಲ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯರಾಘವನ್ ಅವರೂ ಸಹಾ ಮೂರನೆಯ ಅಲೆಯ ಅನಿವಾರ್ಯತೆಯ ಎಚ್ಚರಿಕೆಯನ್ನು ಕುರಿತು ಮಾತಾಡಿದ್ದಾರೆ. ಭಾರತೀಯ ವೈದ್ಯಕೀಯ ಸಂಘವಂತೂ ಭಾರತೀಯ ಮನಸ್ಸುಗಳ ಸ್ವೇಚ್ಛಾಚಾರವನ್ನು ತಮ್ಮ ಇಡೀ ವೃತ್ತಿ ನಿಭಾಯಿಸುವಲ್ಲಿ ಸಾಂಕ್ರಾಮಿಕತೆಯ ತೀರ ಹತ್ತಿರದಿಂದ ಕಂಡದ್ದರಿಂದ ವ್ಯಾಕ್ಸೀನುಗಳ ಭದ್ರತೆಯಲ್ಲೂ ಏರಿಳಿತಗಳ ಹಾಗೂ ಹೊಸ ವೈರಸ್ಸಿನ ವಿಕಾಸದ ಸಾಧ್ಯತೆಗಳ ಸನ್ನಿವೇಶವು ಸಂದಿಗ್ಧ ಎಂದಿದೆ. ಎರಡೂ ಡೋಸು ವ್ಯಾಕ್ಸೀನ್ ಅನ್ನು ತೆಗೆದುಕೊಂಡವರೂ ಕೂಡ ಸುಮಾರು ಪ್ರತಿಶತ 6ರಷ್ಟು ಸೋಂಕುಂಟಾಗುವ ಬಗ್ಗೆ ಆತಂಕದ ಮಾತನ್ನಾಡಿದೆ. ಒಂದು ಡೋಸು ವ್ಯಾಕ್ಸೀನು ಪಡೆದವರಂತೂ ಪ್ರತಿಶತ 25ಕ್ಕೂ ತುಸು ಹೆಚ್ಚೇ ಸೋಂಕು ಉಂಟಾಗುವ ಎಚ್ಚರಿಕೆಯನ್ನು ಈಗ್ಗೆ ಎರಡು ತಿಂಗಳಷ್ಟು ಮೊದಲೇ ಎಚ್ಚರಿಸಿದೆ. ಇಂತಹಾ ಆತಂಕಕ್ಕೆ ಐಎಂಎ ಕೊಡುವ ಕಾರಣ ಸರಳವಾದುದಾಗಿದೆ. ಏನೋ ತೃಪ್ತಿದಾಯಕ ಸಂದರ್ಭಗಳಲ್ಲೂ ವೈರಸ್ಸುಗಳನ್ನು ನೆಚ್ಚಿಕೊಳ್ಳಲು ಆಗದು. ಆ ಕಾರಣದಿಂದ ಎಷ್ಟೇ ಹುಷಾರಾಗಿದ್ದರೂ ಸಾಲದೆಂಬ ಜಾಗ್ರತೆಯನ್ನು ಹೇಳಿದೆ.
ಅಯ್ಯೋ ನಾವು ವ್ಯಾಕ್ಸೀನ್ ಹಾಕಿಸಿಕೊಂಡಿದ್ದೇವೆ…ನಾವು ಹೇಗಾದರೂ ಓಡಾಡಿಕೊಂಡು ಇರಬಹುದು. ಎಂಬ ತೀರ್ಮಾನವಂತೂ ಸದ್ಯಕ್ಕಂತೂ ಸಾಧುವಲ್ಲ! ವೈರಸ್ಸುಗಳ ಸಂಪೂರ್ಣ ನಿಯಂತ್ರಣದಲ್ಲಿ ಅನೇಕ ಪದರಗಳ ತಡೆಯಿದ್ದರೆ ಮಾತ್ರವೇ ಸಾಧ್ಯ! ಎಂಬುದಾಗಿ ಆಸ್ಟ್ರೇಲಿಯಾದ ವೈರಾಣು ತಜ್ಞ ಪ್ರೊ. ಐಯಾನ್ ಮ್ಯಾಕೇ (Prof. Ian M. Mackay) ಹೇಳುತ್ತಾರೆ. ಪ್ರೊ. ಐಯಾನ್, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಪ್ರೊಫೆಸರ್. ವೈರಸ್ಸಿನ ನಿಯಂತ್ರಣದಲ್ಲಿ ಅವರ ಅನುಶೋಧವಾದ ವಿವಿಧ ಪದರಗಳ-ಸ್ವಿಸ್ ಚೀಜ್(Swiss Cheese Model) ನಿಯಂತ್ರಣ ಮಾತ್ರವೇ ಸಂಪೂರ್ಣ ಸುರಕ್ಷತೆಯನ್ನು ಕೊಡಲು ಸಾಧ್ಯ ಎಂಬದನ್ನು ಒತ್ತಾಯದಿಂದ ಪ್ರತಿಪಾದಿಸುತ್ತಿದ್ದಾರೆ.
ಭಾರತೀಯ ವೈದ್ಯಕೀಯ ಸಂಘಕ್ಕೆ ಇದೇ ಆತಂಕ. ನೀವೂ ಗಮನಿಸಿರುತ್ತೀರಿ. ಈಗಾಗಲೇ ಜನ-ಸಂಚಾರ, ಸಂತೆ -ಮಾರುಕಟ್ಟೆಗಳ ಜಂಗುಳಿ, ಧಾರ್ಮಿಕ ಗುಂಪುಗಾರಿಕೆ, ಎಲ್ಲವೂ ತೆರೆದುಕೊಂಡಿವೆ. ಯಾರ ಮುಖವೂ ಸರಿಯಾಗಿ ಕವಚವನ್ನು ಧರಿಸಿಲ್ಲ. ಇಡೀ ಬಸ್ಸಿನಲ್ಲಿ ಒಬ್ಬರೋ ಇಬ್ಬರು ಹಾಕಿದ್ದರೂ ಹೆಚ್ಚು. ಹಾಗಾಗಿ ವೈರಸ್ಸು ನಿಯಂತ್ರಣವಾದರೂ ಹೇಗಾದೀತು? ಜೊತೆಗೆ ಬಗೆ-ಬಗೆಯ ವ್ಯಾಕ್ಸೀನುಗಳ ಜೊತೆಗೆ ಸೆಣಸಾಡಿ ತನ್ನದೇ ಬದಕನ್ನು ಕಟ್ಟಿಕೊಳ್ಳುವ ಛಲದ ಫಲದ ಹೊಸ ವೈರಣುಗಳೂ ಹರಿದಾಡುತ್ತಿವೆ. ಜೊತೆಗೆ ವ್ಯಾಕ್ಸೀನು ತೆಗೆದುಕೊಂಡಿರದವರ ಸಂಖ್ಯೆಯೇನೂ ಕಡಿಮೆಯಿಲ್ಲ. ವೈದ್ಯಕೀಯ ವಿಜ್ಞಾನದ ಅಧ್ಯಯನದ ಮಕ್ಕಳ ಮನೆಯಲ್ಲೂ ವ್ಯಾಕ್ಸೀನು ಒಲ್ಲೆಯೆನ್ನುವ ಮಂದಿಯೂ ಇದ್ದಾರೆ. ವ್ಯಾಕ್ಸೀನು ಏನಿದ್ದರೂ ಮಕ್ಕಳಿದ್ದಾಗ ಹಾಕಿಸಬೇಕೇ ವಿನಾಃ ದೊಡ್ಡವರಾದ ಮೇಲಲ್ಲ ಎಂಬು ಸಂಶಯದ ಸಿದ್ಧಾಂತಗಳೂ, ಅವುಗಳಿಗೆ ಬೆಂಬಲಕೊಡುವ ಫೇಕು ವಿಜ್ಞಾನಿಗಳ ಚಿತ್ರಗಳ ಜಾಹಿರಾತುಗಳೂ ಸುಲಭವಾಗಿ ಹಂಚಿಕೆಯಾಗುತ್ತಿವೆ. ಒಟ್ಟಿನಲ್ಲಿ ಸಾಂಕ್ರಾಮಿಕ ಮನಸ್ಸುಗಳ ಬಹುದೊಡ್ಡ ಜಾಲವೂ ಸೃಷ್ಟಿಯಾಗಿದೆ. ಇದರ ಜೊತೆಗೆ ಸರ್ಕಾರಗಳೂ, ಸಾರ್ವಜನಿಕ ಸಮೂಹವೂ ಸರಿಯಾದ ನಿರ್ವಹಣಾ ಕ್ರಮಗಳನ್ನೇ ಪಾಲಿಸಿದ ನೂರಾರು ಉದಾಹರಣೆಗಳು ಸಿಗುತ್ತವೆ. ಅದಕ್ಕೇ ಐಎಂಎ ಆತಂಕದ ಮಾತನ್ನು ಹಿಂದೆಯೇ ಹೇಳಿದ್ದು.
ಇದಕ್ಕೆ ಕಾರಣಗಳು ಇಲ್ಲದಿಲ್ಲ. ಹಿಂದೆಲ್ಲಾ ವೈರಸ್ಸುಗಳಿಗೆ, ಅದರಲ್ಲೂ ಸಾಮಾನ್ಯ ಶೀತ-ನೆಗಡಿಗಾಗಲಿ, ಜ್ವರ-ಕೆಮ್ಮಿಗಾಗಲಿ ಯಾರೂ ಹೆದರಿದ್ದಿಲ್ಲ. ಇದೀಗ ಹಬ್ಬಿರುವ ಭಯದಲ್ಲಿ ಮುಚ್ಚಿಟ್ಟುಕೊಂಡು ಹೇಳದಿರುವವರೂ ಇಲ್ಲದಿಲ್ಲ. ಜೊತೆಗೆ ಸಮೂಹದಲ್ಲಿ ಅನಂತ ಸಂಖ್ಯೆಯ ಸದಸ್ಯರಿದ್ದೂ, ಅವರ ಬದುಕಿನಾಸೆಯ ವೈಯಕ್ತಿಕ ತೀವ್ರತೆಯೂ ವಿಚಿತ್ರ ಧೈರ್ಯವನ್ನೂ ಕೊಡಬಲ್ಲದು. ಯಾವ ಆಡಳಿತವೂ, ಯಾವ ವೈಜ್ಞಾನಿಕ ಚರ್ಚೆಯೂ ಕೊಡದ ಧೈರ್ಯವನ್ನು ರೈಲುಗಾಡಿಗಳ ಪ್ರಯಾಣಿಕರೂ, ಬಸ್ಸುಗಳ ಜಂಗುಳಿಯ ಪ್ರವಾಸಿಗರೂ ಕೊಡಬಲ್ಲರು. ಆದರೆ ಎಚ್ಚರಿಕೆಯೇನೆಂದರೆ ವೈರಸ್ಸುಗಳನ್ನು ಹಿಂದೆಂದೂ ಜೀವಗಳೇ ಎಂದು ನಂಬಿರದಿದ್ದ ವ್ಯಾಖ್ಯಾನಗಳೂ ಇದೀಗ ಹೊಸತೊಂದು ಬಗೆಯ ವಿವಾದಾಸ್ಪದ ವಿವರಗಳನ್ನು ತೆರೆದಿಟ್ಟಿವೆ. ಅದೇ ವೈರಸ್ಸುಗಳ ಬದುಕೇ ಸೋಂಕನ್ನು ಹಂಚುವುದು. ಜೀವಿ ಜಗತ್ತಿನ ಮೂಲ ಸರಕನ್ನು ಒದಗಿಸಿದ ವೈರಸ್ಸುಗಳೇ ಎಂದಿಗೂ ಸಂಪೂರ್ಣವಾಗಿ ಇಲ್ಲವಾಗವು. ವೈರಸ್ಸುಗಳ ವಿಕಾಸವೂ, ಮಾನವರ ವಿಕಾಸದ ಜೊತೆ-ಜೊತೆಗೇ ಸಮಾನಾಂತರವಾಗಿ ನಡೆಯುತ್ತಿವೆ ಎಂಬ ಸುಳಿವನ್ನು ಜೀವಿವಿಕಾಸ ಆರಂಭಿಕ ಸಿದ್ಧಾಂತಗಳ ಹರಿಕಾರರೂ ಎಚ್ಚರಿಸಿದ್ದಾರೆ.
ಮುದುವರೆಸಿದ ವಿಶ್ಲೇಷಕರೂ ಇದೀಗ ಹೊಸತಾಗಿ ಕಾಣುವಂತಹಾ ಆದರೂ ಈಗಾಗಲೇ ಅನುಭವಕ್ಕೂ ಬಂದಿರುವ ಅಂತಹಾ ಪ್ರಶ್ನೆಗಳು ಜಾಗತಿಕವಾಗಿ ಚರ್ಚೆಯಲ್ಲಿವೆ. ಮುಖ್ಯವಾಗಿ ಆರಂಭದಲ್ಲಿ ಪ್ರಸ್ತಾಪಿಸಿದ ನ್ಯುಕ್ಲಿಯೆಕ್ ಆಮ್ಲಕ್ಕೆ ಸಂಬಧಿಸಿದ್ದು. ಒಮ್ಮೆ ದೇಹವನ್ನು ಹೊಕ್ಕ ಈ ಆಮ್ಲವು ನಮ್ಮೊಳಗಿನ ನ್ಯುಕ್ಲಿಯಿಕ್ ಆಮ್ಲದ ಭಾಗವಾಗುವ ಅನುಮಾನ! ಮತ್ತೊಂದು ನಮ್ಮ ಕ್ರೊಮೊಸೋಮುಗಳನ್ನೂ ಆವರಿಸುವ ಸೈದ್ಧಾಂತಿಕ ಚರ್ಚೆ! ಇದನ್ನು ಜಿನೆಟಿಕಲಿ ಇಂಜನಿಯರ್‌ಗೊಳಿಸಿದ ಮಾನವ ಜೀವಿಕೋಶಗಳಲ್ಲಿ ಸಾಬೀತಾದ್ದನ್ನು ಕಂಡುಕೊಂಡು ಚರ್ಚೆಯನ್ನು ಮುಂದಿಟ್ಟಿದ್ದಾರೆ. ವೈರಸ್ಸಿನ RNA ಯು ನಮ್ಮ ದೇಹದ ಜೀವಿಕೋಶಗಳ DNA ಯಲ್ಲಿ ಶಾಶ್ವತ ಸ್ಥಾನ ಪಡೆಯುವ ವಿಷಯ ಇದೀಗ ವಿಜ್ಞಾನದಲ್ಲಿ ಸಾರ್ವತ್ರಿಕವಾಗಿದೆ. ಅಂದರೆ ವೈರಸ್ಸೇನೂ ಸಂಪೂರ್ಣವಾಗಿ ಹೋಗುವುದಿಲ್ಲ. ತಾನು ಮರೆಯಾದರೂ ನಮ್ಮ ಜೀವಿಕೋಶದಲ್ಲಿ ಪರ್ಯಾಯಸಾನಗೊಂಡಿರುತ್ತದೆ.
ವೈರಸ್ಸುಗಳ ಉಳಿಕೆಯು ಇಂದಲ್ಲ ಹಿಂದಿನಿಂದಲೂ ತಿಳಿದ ಸಂಗತಿಯೇ ಆಗಿದೆ. ಆದ್ದರಿಂದ ನಾವು ವೈರಸ್ಸುಗಳ ಸಂಬಂಧಿಕರೇ ಆಗಿದ್ದೇವೆ. ಮಾನವರ ಒಟ್ಟು ಜೀನೋಮಿನಲ್ಲಿ ಪ್ರತಿಶತ 8 ರಷ್ಟು ಅಂತರ್ವರ್ಧಕ (ಎಂಡೊಜೀನಸ್) ರೆಟ್ರೊವೈರಸ್ಸುಗಳ (Endogenous Retroviruses -ERVs) ಜೀನ್‌ಗಳ ಅನುಕ್ರಮತೆಯನ್ನು(Gene Sequences) ಹೊಂದಿದೆ. ಎಂಡೊಜೀನಸ್ (Endogenous) ಅಂದರೆ ಅಂತರ್ವರ್ಧಕತೆ -ಒಳಗೇ ವರ್ಧಿಸುವ-ಜೀವಿಗಳೊಳಗೇ ವೃದ್ಧಿಯಾಗುವ- ಎಂದರ್ಥ. ಇನ್ನು ರೆಟ್ರೊ-ವೈರಸ್ ಎಂದರೆ ತನ್ನ ಜೀನೋಮಿನಲ್ಲಿ ಆರ್.ಎನ್.ಎ. (RNA) ಹೊಂದಿದ್ದು, ಅದನ್ನೇ ಜೀವಿಯೊಳಗೆ ಕಳುಹಿಸಿಯೂ ನೆಲೆಯನ್ನು ಕೊಟ್ಟ ಆ ಜೀವಿಯ ಡಿ.ಎನ್.ಎ.(DNA)ಯ ಮೇಲೆ ಆಕ್ರಮಣ ಮಾಡುವ ವೈರಸ್ಸು. ಅಂದಂತೆ ಈ ಹಿಂದೆಲ್ಲಾ – ಮಾನವನ ವಿಕಾಸದ ಉದ್ದಕ್ಕೂ ಆಕ್ರಮಣ ಮಾಡುತ್ತಾ ಬಂದು ನಮ್ಮೊಳಗೇ ಒಂದಾಗಿ ನಮ್ಮವೇ ಆಗಿರುವ ಭಾಗವೇ ಪ್ರತಿಶತ 8 ಭಾಗದ ಜೀನೊಮ್. ಆಕ್ರಮಣ ಮಾಡಿಯೂ ನಮ್ಮೊಳಗೆ ಉಳಿಕೆಗಳನ್ನು ಬಿಡುವ, ಹಾಗೇ ಬಿಟ್ಟೂ ಕೆಲವೊಂದು ಮಹತ್ವದ ಸಹಾಯವನ್ನೂ ಮಾಡುವ ನಿಸರ್ಗದ ವಿಚಿತ್ರದಿಂದಾಗಿಯೇ ನಾವೂ ವೈರಸ್ಸುಗಳ ಸಂಬಂಧಿಕರು.
ಒಂದು ಕಾಲದಲ್ಲಿ ವೈರಸ್ಸನ್ನು -ಜೈವಿಕವಾದ ಅಥವಾ ಬಯೋಲಾಜಿಕಲ್ ವೈರಸ್ ಎಂದೇ ಕರೆಯದ ದಿನಗಳಿದ್ದವು. ಇದೀಗ ವೈರಸ್ಸುಗಳ ಸ್ವತಂತ್ರವಾದ ಸಂಕೇತವನ್ನು, ಸುಪ್ತವಾಗಿದ್ದೂ, ಸಾಂಕೇತಿಕ ಆಲೋಚನೆಯಂತೆ, ಒಂದು ಮಾಹಿತಿ ಸಂಗ್ರಹದಂತೆ. ಒಂದು ಅತಿಥಿಯನ್ನು ಸಿಕ್ಕ ಮೇಲೆಯೆ ವೃದ್ಧಿಯಾಗುವ ಜೊತೆಗೇ ಒಂದಾಗುವ ವಿಶೇಷಣಗಳನ್ನೂ ಕಂಡು, ಅವಕ್ಕೂ ಜೈವಿಕ ಮಾನ್ಯತೆಯನ್ನು ಕೊಡಲನುವಾಗಿದ್ದಾರೆ.
ಅನೇಕ ವಿಧಗಳಲ್ಲಿ, ವೈರಸ್‌ಗಳು ಒಂದು ಬಗೆಯ ಅರ್ಥವಾಗದ ಪುಸ್ತಕವೊಂದರ ಪದಗಳಂತೆ ಪ್ರಾಚೀನ ಮಾಂತ್ರಿಕ ಕಲ್ಪನೆಯನ್ನು ನೆನಪಿಸುತ್ತವೆ. ಅನೇಕ ವಿಜ್ಞಾನಿಗಳು ಮತ್ತು ದಾರ್ಶನಿಕರು ವೈರಸ್‌ಗಳನ್ನು ಜೀವಿಗಳಾಗಿ ಸ್ವೀಕರಿಸಲು ಕಷ್ಟಪಡುತ್ತಾರೆ. ಆದರೇನಂತೆ ವೈರಸ್‌ಗಳನ್ನು ಜೀವಂತ ಘಟಕಗಳೆಂದು ವರ್ಗೀಕರಿಸುತ್ತೀವೋ ಇಲ್ಲವೋ, ಅವುಗಳಲ್ಲಿರುವ -ಜೀವಿಗಳು ಮತ್ತು ಶುದ್ಧ ಮಾಹಿತಿಯ ನಡುವಿನ ರೇಖೆಯು- ಮಾತ್ರ ನಾವು ಆಗಾಗ್ಗೆ ಯೋಚಿಸುವುದಕ್ಕಿಂತ ಹೆಚ್ಚು-ಹೆಚ್ಚು ಸಾಕಷ್ಟು ಸ್ಪಷ್ಟವಾಗಲಿದೆ. ಹಾಗಿಗಿಯೇ ಇದೀಗ ವೈರಸ್ಸುಗಳ ಜೀವಿವೈಜ್ಞಾನಿಕ ಪರಾಮರ್ಶನಗಳು ನಡೆದಿವೆ. ಇದೀಗ ಎದ್ದಿರುವ ಈ ಹೊಸ ಚರ್ಚೆಗಳ ಪ್ರಶ್ನೆಗಳಿಗೆ ವಿವರಗಳನ್ನು ಮುಂದಿನ ವಾರ ವೈರಸ್ಸಿನ ಜೀವಿ ವೈಜ್ಞಾನಿಕ ಸಂವಾದದ ಮೂಲಕ ನೋಡೋಣ. ಸಂಕೀರ್ಣವಾದರೂ ಬದುಕಿನ ಆಶಯವನ್ನು ತುಂಬಿಕೊಡುತ್ತಿರುವ ವೈರಸ್ಸಿನ ಜೈವಿಕ ಹಾದಿಯನ್ನು ಕೊರೊನ ವೈರಸ್ಸಿನ ನೆಪದಲ್ಲಿ ಅರಿಯುವ ಪ್ರಯತ್ನ ಮಾಡೋಣ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ಹೆಚ್ಚಿನ ಓದಿಗೆ:
Liguo Zhang, Alexsia Richards, M. Inmaculada Barrasa, Stephen H. Hughes, Richard A. Young, and Rudolf Jaenisch., Reverse-transcribed SARS-CoV-2 RNA can integrate into the genome of cultured human cells and can be expressed in patient-derived tissues. PNAS May 25, 2021. 118 (21) e2105968118. https://doi.org/10.1073/pnas.2105968118
Very apt and timely information presented in a vivid and easily understandable language. Hearty congratulations for this great job
Very apt and timely information presented in a vivid and easily understandable language. Hearty congratulations for this great job
ನಿಮ್ಮ ಕನ್ನಡದ ವೈಜ್ಞಾನಿಕ ಬರಹಗಳನ್ನು ಓದುವುದೇ ಕಲಿಕೆಯ ,ತಿಳಿವಳಿಕೆಯ ,ಶೋಧನ ವಿವರಗಳನ್ನು ಗ್ರಹಿಸುವ ಸಾಮರ್ಥ್ಯ ವನ್ನು ಹೆಚ್ಚಿಸುವ ಚಟುವಟಿಕೆ… ಅಗಣಿತ ಅಭಿಮಾನ ನಮನಗಳು ಸರ್