ಮೇ-ತಿಂಗಳ ಸಸ್ಯಯಾನದಲ್ಲಿ ಮೇ-ಫ್ಲವರ್ ಜೊತೆಯಾಗದಿದ್ದರೆ ಹೇಗೆ ಅಲ್ಲವೇ? ಮೇ-ಫ್ಲವರ್ ಎಂದೇ ಹೆಸರಾದ ಗುಲ್ ಮೊಹರ್ ಮರದಲ್ಲಿ ಈ ತಿಂಗಳು ಮೈತುಂಬಾ ಹೂ ತುಂಬಿಕೊಂಡ ಸಂಭ್ರಮ. ಬಹುಪಾಲು ಮಕ್ಕಳಿಗೆ ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆಯ ರಜೆಯ ಆಟಕ್ಕೆ ದಕ್ಕುವ ಗುಲ್ ಮೊಹರಿನ ಮೊಗ್ಗುಗಳು, ಹೂವಿನ ಕೇಸರದ ಭಾಗಗಳು ದೊಡ್ಡವರಲ್ಲೂ ಬಾಲ್ಯದ ನೆನಪನ್ನು ತರಬಹುದು. ಭಾರತದ ಉಪಖಂಡದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಗುಲ್ ಮೊಹರಿಗೆ ಹೂವಾಡುವ ಸಂಭ್ರಮ. ಹಾಗಾಗಿ ಇದಕ್ಕೆ ಮೇ-ಫ್ಲವರ್ ಎಂದೇ ಹೆಸರು. ಆದರೆ ವಿಚಿತ್ರವೆಂದರೆ ನಮ್ಮಲ್ಲಿ ಮೇ ತಿಂಗಳ ಆಸುಪಾಸಿನಲ್ಲಿ ಹೂವು ಬಿಡುವ ಈ ಮರ ಜಗತ್ತಿನ ಬೇರೆ ಬೇರೆಯ ಪ್ರದೇಶಗಳಲ್ಲಿ ಬೇರೆ ಬೇರೆ ತಿಂಗಳಲ್ಲಿ ಹೂವನ್ನು ಬಿಡುತ್ತದೆ. ಹಾಗಾಗಿ ವರ್ಷದ ಎಲ್ಲಾ ಹನ್ನೆರಡೂ ತಿಂಗಳಲ್ಲಿ ಒಂದಲ್ಲಾ ಒಂದು ದೇಶದಲ್ಲಿ ಗುಲ್ ಮೊಹರ್ ಹೂವುಗಳು ಇರುತ್ತವೆ. ಉದಾಹರಣೆಗೆ ಪೆರುವಿನಲ್ಲಿ ಜನವರಿಯಿಂದ ಮಾರ್ಚ್ ವರೆಗೆ ಹೂವನ್ನು ಬಿಟ್ಟರೆ, ಭಾರತದ ಉಪಖಂಡದಲ್ಲಿ ಏಪ್ರಿಲ್ ನಿಂದ ಜೂನ್ ವರಗೆ ಹೂವನ್ನು ಬಿಡುತ್ತದೆ. ಇಸ್ರೇಲ್, ಬರ್ಮುಡಾ, ಕೆರ್ರಾಬಿಯಾನ್ ಗಳಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೂ ಹೂ ಬಿಡುತ್ತದೆ. ಮಾಲವಿ, ಜಾಂಬಿಯಾ, ಜಿಂಬಾಬ್ವೆ, ಮಾರೀಷಿಯಸ್ ಮತ್ತು ಮಲೇಶಿಯಾಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಹೂ ಬಿಡುತ್ತದೆ. ಬ್ರೆಜಿಲ್, ಆಸ್ಟ್ರೇಲಿಯಾಗಳಲ್ಲಿ ನವೆಂಬರ್ ನಿಂದ ಫೆಬ್ರವರಿವರೆಗೂ ಹೂಗಳು ಇರುತ್ತವೆ. ಹೀಗೆ ಒಂದಲ್ಲಾ ಒಂದು ಕಡೆ ಗುಲ್ ಮೊಹರಿನ ಹೂವುಗಳು ವರ್ಷವಿಡಿ ಇದ್ದೇ ಇರುತ್ತವೆ.
ಗಂಭೀರವಾದ ಹಾಗೂ ಕಡುವಾದ ಕೆಂಪು ಬಣ್ಣದ ಹೂಗಳನ್ನು ಮರವು ಮೈಯೆಲ್ಲಾ ಹೊದ್ದುಕೊಂಡು ಸಂಭ್ರಮಿಸುತ್ತಿರುವ ಈ ತಿಂಗಳುಗಳಲ್ಲಿ ಮದುವೆಯ ಮಹೂರ್ತಗಳೂ ಹೆಚ್ಚು. ಹಾಗಾಗಿ ಹಿಂದೆಲ್ಲಾ ಮದುವೆಯ ಚಪ್ಪರಗಳನ್ನು ಅಲಂಕರಿಸಲು ಈ ಹೂವುಗಳ ಬಳಕೆಯು ಹೆಚ್ಚಾಗಿತ್ತು. ಈಗೆಲ್ಲಾ ಮದುವೆಗಳು ಕಲ್ಯಾಣ ಮಂಟಪಗಳ ಗೋಡೆಗಳ ಮಧ್ಯೆ ಸೇರಿಕೊಂಡು ಗುಲ್ ಮೊಹರಿನ ಬಣ್ಣದಿಂದ ವಂಚಿತವಾಗಿವೆ. ಇದನ್ನೆಲ್ಲಾ ನೆನಪಿಸಿಕೊಂಡು ಬರೆಯಲು ಚರ್ಚಿಸುತ್ತಿದ್ದಾಗ ಮೊಮ್ಮಕ್ಕಳನ್ನು ಕಂಡ ಹಿರಿಯ ದಂಪತಿಗಳಿಬ್ಬರು ತಮ್ಮ ಮದುವೆಯಲ್ಲೂ ಚಪ್ಪರವನ್ನು ಸಿಂಗರಿಸಿದ್ದ ಸಂಭ್ರಮವನ್ನು ಹಂಚಿಕೊಂಡರು. ನನ್ನ ಬಾಲ್ಯದಲ್ಲಿ ನನ್ನೂರಿನ ಬಹುತೇಕ ಮದುವೆಗಳು ಮನೆಯ ಮುಂದಿನ ಚಪ್ಪರವನ್ನೇ ಆಶ್ರಯಿಸಿದ್ದರಿಂದ ಊರಾಚೆಗಿನ ಸಾಲು ಮರಗಳ ಗುಲ್ ಮೊಹರ್ ಗಳು ಅದೆಷ್ಟು ಮದುವೆಗಳಿಗೆ ಹೂಬಣ್ಣದ ಸಂಭ್ರವನ್ನು ಜೊತೆಗೂಡಿಸಿದ್ದವು ಎನ್ನುವುದರ ಲೆಕ್ಕವೇ ಸಿಗದು. ಲೆಗ್ಯೂಮ್ ಗುಂಪಿಗೆ ಸೇರಿದ ಗುಲ್ ಮೊಹರ್ ಸಸ್ಯವು ಫ್ಯಾಬೇಸಿಯೆ (Fabaceae) ಕುಟುಂಬದ ಸದಸ್ಯ. ಹಾಗಾಗಿ ಇದರಿಂದಲೂ ನೆಲಕ್ಕೆ ಸಾರಜಕನದ ಲಭ್ಯತೆಯಿದ್ದು, ಮಣ್ಣಿನ ರಕ್ಷಣೆಗೆ ಇದು ಸಹಕಾರಿಯಾಗಿದೆ.
ಗುಲ್ ಮೊಹರ್ ಪರ್ಷಿಯನ್ ಮೂಲದ ಹೆಸರು. ಗುಲ್ ಎಂದರೆ ಗುಲಾಬಿ ಹೂ ಎಂದೂ, ಮೊಹರ್ ಎಂದರೆ ಗುರುತು ಅಥವಾ ಛಾಪ. ಹಾಗಾಗಿ ಗುಲಾಬಿಯ ಗುರುತನ್ನು ಹೊಂದಿರುವ ಎಂಬುದಾಗಿದೆ. ಈ ಸಸ್ಯವನ್ನು Delonix regia ಎಂಬ ವೈಜ್ಞಾನಿಕ ಹೆಸರಿಂದ ಕರೆಯಲಾಗುತ್ತದೆ. ಗುಲ್ ಮೊಹರ್ ಮರವನ್ನು ಡೆಲೊನೆಕ್ಸ್ ರೆಜಿಯಾ ಎನ್ನುವ ವೈಜ್ಞಾನಿಕ ಹೆಸರಿನಿಂದ ಕರೆಯುವ ಕಾರಣಗಳು ಹೀಗಿವೆ. ಡೆಲೊನೆಕ್ಸ್ ಪದವು ಡೆಲೊಸ್ (Delos) ಮತ್ತು ಒನೆಕ್ಸ್ (Onyx) ಎಂಬ ಗ್ರೀಕ್ ಪದಗಳಿಂದಾದದ್ದು. ಡೆಲೊಸ್ (Delos) ಎಂದರೆ ನೋಟಕ್ಕೆ ಸಿಗುವ, ಕಣ್ಸಳೆಯುವ ಎಂದಾದರೆ ಒನೆಕ್ಸ್ (Onyx) ಪದದ ಅರ್ಥವು ಕೈ ಅಥವಾ ಉಗುರಿನಂತಹಾ ವಿವರಣೆಯನ್ನು ಹೊಂದಿದೆ. ಗುಲ್ ಮೊಹರಿನ ಹೂವಿನಲ್ಲಿ ಅದರ ದಳಗಳು ಉದ್ದವಾಗಿದ್ದು ಕೈಬೆರಳಂತಿದ್ದು ಆಕರ್ಷಣೀಯವಾಗಿದ್ದು ಕಣ್ಸಳೆಯುವುದನ್ನು ವಿವರಿಸುವುದಾಗಿದೆ. ಇನ್ನು ರೆಜಿಯಾ ಪದವು ಲ್ಯಾಟಿನ್ ಮೂಲದ್ದು. Regis ಅಂದರೆ ರಾಜ ಗಾಂಭೀರ್ಯದ ಎನ್ನುವ ಅರ್ಥ ಉಳ್ಳದ್ದು. ಒಟ್ಟಾರೆ ಕಣ್ಸಳೆಯುವ ರಾಜ ಗಾಂಭೀರ್ಯದ ಹೂಗಳುಳ್ಳ ಮರ ಎನ್ನಬಹುದು.
ಈ ಮರದ ಸೊಗಸು ಇರುವುದೇ ಅದರ ಹೂವುಗಳಲ್ಲಿ ಹಾಗೂ ನಂತರ ಬಿಡುವ ಅರ್ಧ ಮೀಟರ್ ಗಿಂತಲೂ ಉದ್ದವಾದ ಕಾಯಿಗಳಲ್ಲಿ! ಸುಮಾರು 60 ಸೆಂಟಿಮೀಟರ್ ಉದ್ದವಾದ ಹಾಗೂ 5-6 ಸೆ.ಮೀ ಅಗಲವಾದ ಕಾಯಿಗಳು ಕತ್ತಿ ಅಥವಾ ಖಡ್ಗವನ್ನು ಹೋಲುತ್ತವೆ. ಆದ್ದರಿಂದಲೇ ಇದನ್ನು ಕತ್ತಿಕಾಯಿ ಮರ ಎಂದೂ ಕೆಲವಡೆಗಳಲ್ಲಿ ಕರೆಯುತ್ತಾರೆ. ಆದರೆ ಅದರೊಳಗಿನ ಬೀಜಗಳು ಮಾತ್ರ ಚಿಕ್ಕವು. ಅರ್ಧ ಗ್ರಾಂಗಿಂತಲೂ ಕಡಿಮೆ ತೂಕದವು. ಈಗ ತಮ್ಮೆಲ್ಲರಿಗೂ ಮರಗಳು ಕಂಡಲ್ಲಿ ಖಂಡಿತಾ ಮೈಗೆ ಹೂಮುಡಿದ ಚೆಲುವು ಕಾಣುತ್ತದೆ. ಹೂವುಗಳೂ ಸಹಾ ವಿಶೇಷವಾದ ರಚನೆಯನ್ನೇ ಹೊಂದಿವೆ. ಮೊಗ್ಗಾಗಿದ್ದಾಗ ಹಸಿರು ಬಣ್ಣದ ಪುಟ್ಟ-ಪುಟ್ಟ ಕಾಯಿಗಳಂತೆ ಕಂಡರೂ ಅರಳಿದಾಗ ಅದರೊಳಗಿನ ದಟ್ಟ ಕೆಂಪು ಬಣ್ಣದ ದಳಗಳು, ಕೇಸರದ ಭಾಗಗಳು ಹೊರ ಬೀಳುತ್ತವೆ. ಇನ್ನೇನು ಅರಳುತ್ತವೆ ಎನ್ನುವ ಮೊಗ್ಗುಗಳ ತೆರೆದು ಅದರೊಳಗಿನ ಕೇಸರಗಳ ಬಿಡಿಸಿ ಅದರ ತುದಿಯಲ್ಲಿನ ಟೋಪಿಯಂತಹಾ ಭಾಗವನ್ನು ಬಿಡಿಸುವ ಆಟವಾಡಿದ್ದೂ ಯಾರಿಗಿದಾರೂ ಬಾಲ್ಯದ ನೆನಪಿದ್ದೀತು. ಎಳೆಯ ದಳಗಳನ್ನು ತಿಂದು ನೋಡಿದ್ದೂ ಕೂಡ ನೆನಪಿಗೆ ಬಂದರೆ ಅಚ್ಚರಿ ಏನಿಲ್ಲ.
ಅರಳಿದ ಹೂವಿನಲ್ಲಿ ನಾಲ್ಕು ಮುಖ್ಯವಾದ ದಳಗಳು ಸಾಕಷ್ಟು ಅಗಲವಾಗಿದ್ದು ಕೆಂಪು ಬಣ್ಣದವು. ಸುಮಾರು 6-8 ಸೆಂಟಿಮೀಟರ್ ಉದ್ದವಾಗಿರುತ್ತವೆ. ಅವುಗಳ ಮೇಲೆ ವಿಶೇಷ ಸ್ಥಾನದಲ್ಲಿ ಒಂದು ಐದನೆಯ ಹಾಗೂ ಎಲ್ಲಕ್ಕಿಂತಲೂ ದೊಡ್ಡದಾದ ದಳವಿರುತ್ತದೆ. ಇದರ ವಿಶೇಷವೇ ಮಹತ್ವವಾದದ್ದು. ಇದು ಕೆಂಪಾಗಿದ್ದರೂ ಅದರೊಳಗೆ ಬಿಳಿಯ ಹಾಗೂ ಹಳದಿ ಬಣ್ಣದ ಚುಕ್ಕೆಗಳು ಹರಡಿಕೊಂಡಿರುತ್ತವೆ. ಹೂವುಗಳ ಗೊಂಚಲುಗಳು ಮೇಲುಕಾಂಡದ ತುದಿಯಲ್ಲಿ ಹರಡಿಕೊಂಡು ಸಮಗುಚ್ಚದಂತಿದ್ದು ಕೆಂಪು ಬಣ್ಣದ ಕೊಡೆಯಂತೆ ಮರವು ಗೋಚರಿಸುತ್ತದೆ. ಚೆಲುವೆಲ್ಲಾ ಕೆಂಪು ರಾಶಿಯನ್ನು ಆವರಿಸಿಕೊಂಡಿರುತ್ತದೆ. ಹೂವಾಡುವ ಮುನ್ನ, ಚಿಗೆರೆಲೆಗಳು ನವಿರಾಗಿದ್ದು ಹಸಿರು ತುಂಬಿದ ಚೆಲುವು ಕೊಟ್ಟರೆ, ಹೂವಾಡುತ್ತಿದ್ದಂತೆ ಅಲ್ಲಲ್ಲಿ ಕೆಂಪು ಬಣ್ಣದ ಚೆಲುವು ಸೇರಿಕೊಳ್ಳುತ್ತಲೂ ಪೂರ್ಣ ಆವರಿಸಿಕೊಂಡು ಭವ್ಯವಾದ ನೋಟವನ್ನು ಬೇಸಿಗೆಯ ಬಿರು ಬಿಸಿಲಲ್ಲೂ ಕೊಡುತ್ತದೆ. ಎಲೆಯ ವಿನ್ಯಾಸವು ಎದುರು-ಬದುರಾದ ಚಿಕ್ಕ-ಚಿಕ್ಕ ಎಲೆಗಳ ಗುಂಪನ್ನು ಹೊಂದಿದ್ದು 20 ರಿಂದ 50 ಜೊತೆಗಳಾಗಿ ಅಂಟಿಕೊಂಡಿರುತ್ತವೆ. ಈ ಜೋಡಣೆಯ ಎಲೆಗುಚ್ಚದ ಒಟ್ಟು ಉದ್ದವು 30ರಿಂದ50 ಸೆ.ಮೀ ಇರುವುದುಂಟು. ಇದೇ ಗುಲ್ ಮೊಹರಿನಲ್ಲಿ ಅಪರೂಪದ ಫ್ಲಾವಿಡಾ ಹೆಸರಿನ ತಳಿಯೊಂದು ಇದ್ದು ಅದರ ಹೂಗಳ ಚೆಲುವು ಹಳದಿಯಿಂದ ಕೂಡಿರುತ್ತದೆ. ಈ ಮರವು ಹೆಚ್ಚಾಗಿ ನಗರವಾಸಿಯಾಗಿದ್ದು, ಹೆಚ್ಚೆಂದರೆ ಊರಾಚೆಗಿನ ಬಯಲಲ್ಲಿ, ಊರು ಹತ್ತಿರದ ಹೆದ್ದಾರಿಗಳಲ್ಲಿ, ಪಾರ್ಕುಗಳಲ್ಲಿ ಕಂಡು ಬರುವುದರಿಂದ ಈಗ ಮರದ ಚೆಲುವನ್ನು ತಪ್ಪಿಸಿಕೊಳ್ಳುವ ಕಣ್ಣುಗಳು ಕಡಿಮೆ.
ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಈ ಗುಲ್ ಮೊಹರಿಗೆ ಕಾಲ್ವರಿಪ್ಪವ್ (Kaalvarippoo) ಎಂದು ಕರೆಯುತ್ತಾರೆ. ಅಂದರೆ ಗೋಲ್ಗೊಥಾದ ಅಥವಾ ಕಲ್ವರಿಯ ಹೂವು (The Flower of Calvary) ಎಂದರ್ಥ. ಇದಕ್ಕೆ ಕಾರಣವಾದ ಜನಪ್ರಿಯವಾದ ನಂಬಿಕೆಯೊಂದು ಕೇರಳದ ಸಿರಿಯನ್ ಕ್ರಿಶ್ಚಿಯನ್ನರಲ್ಲಿದೆ. ಗೋಲ್ಗೊಥಾ ಬೆಟ್ಟದಲ್ಲಿ ಕ್ರಿಸ್ತನನ್ನು ಶಿಲೆಬೆಗೆ ಏರಿಸಿದ ಸಂದರ್ಭದಲ್ಲಿ ಶಿಲುಬೆಯ ಹತ್ತಿರ ಈ ಮರವಿತ್ತಂತೆ. ಹಾಗಾಗಿ ಕ್ರಿಸ್ತನ ರಕ್ತವು ಮರಕ್ಕೆ ಚಿಮ್ಮಿದುದರ ಪರಿಣಾಮವಾಗಿ ಹೂಗಳು ದಟ್ಟ ಕೆಂಬಣ್ಣವನ್ನು ಪಡೆದಿವೆಯಂತೆ. ಇದೇ ಕಾರಣದಿಂದ ಕಾಲ್ವರಿಪ್ಪವ್ ಆಗಿದೆ.
ವೆಸ್ಟ್ ಇಂಡೀಸ್ ದ್ವೀಪಗಳ ಸೆಂಟ್ ಕ್ರಿಸ್ಟೋಪರ್ ಮತ್ತು ನೆವಿಸ್ ಗಣರಾಜ್ಯದ ರಾಷ್ಟ್ರೀಯ ಪುಷ್ಪವಾಗಿರುವ ಗುಲ್ ಮೊಹರ್, ಭಾರತವೂ ಸೇರಿದಂತೆ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲೆಲ್ಲಾ ತುಂಬಾ ಪರಿಚಿತವಾದ ಮರ. ಇದರ ಚೆಲುವಿನಿಂದಾಗಿ, ಜೊತೆಗೆ ದಟ್ಟವಾದ ಹಸಿಲರೆಲೆಗಳ ಛಾವಣೆ ಇರುವುದರಿಂದ ಅದ್ಭುತವಾದ ನೆರಳೂ ಸಿಗುವುದರಿಂದ ಜೊತೆಗೆ ಮರದ ವಿನ್ಯಾಸವೂ ಆಕರ್ಷಕವಾಗಿಯೇ ಇರುವುದರಿಂದ ನಗರ-ಪಟ್ಟಣ ವಾಸಿಯಾಗಿ ಹೆಸರು ಮಾಡಿದೆ. ಜನವಸತಿ ಪ್ರದೇಶಗಳೇ ಅಲ್ಲದೆ ಪಾರ್ಕುಗಳು, ಶಾಲಾ ಆವರಣಗಳನ್ನೂ ಅಲಂಕರಿಸಿದೆ. ಜೊತೆಗೆ ಬೀಜಗಳಿಂದ ಸಸಿಗಳನ್ನು ಪಡೆಯುವುದೂ ಸುಲಭವಾಗಿರುತ್ತದೆ. ಆದರೆ ಬಲಿತ ಬೀಜಗಳನ್ನು ಬಿಸಿ ನೀರಿನಲ್ಲಿ 24 ಗಂಟೆಗಳ ಕಾಲ ನೆನೆಸಿ ಬಿತ್ತಬೇಕಷ್ಟೆ! ಅದೂ ಅಲ್ಲದೆ ನಾಟಿ ಮಾಡಿದ ಮೇಲೆ ಸಸ್ಯಗಳ ಬೆಳವಣಿಗೆ, ಹೊಂದಿಕೊಳ್ಳುವ ಗುಣ ಎಲ್ಲವೂ ಅದು ಪರಿಚಯಗೊಂಡ ಪ್ರದೇಶದಲ್ಲೆಲ್ಲಾ ಬೆಳೆಯಲು ಅನುಕೂಲವಾಗಿದೆ. ಹೊಸ-ಹೊಸ ಸ್ಥಳಗಳಿಗೆ ಹೊಂದಿಕೊಂಡರೂ ತನ್ನ ತವರೂರಾದ ಮಡಗಾಸ್ಕರಿನ ಮೂಲ ವನ್ಯ-ಸ್ಥಳದಲ್ಲಿ ಆತಂಕವನ್ನು ಎದುರಿಸುತ್ತಿದೆ. ತನ್ನ ನೆಲೆಯಲ್ಲಿ ಅಪಾಯವನ್ನು ಎದುರಿಸುತ್ತಿರುವ ಪ್ರಭೇದಗಳ ಪಟ್ಟಿಯಲ್ಲಿ ಗುಲ್ ಮೊಹರ್ ಮರವೂ ಇದೆ. ತನ್ನೂರಿನಲ್ಲಿ ತೊಂದರೆಯಲ್ಲಿದ್ದೂ ಹೋದ ನೆಲೆಯಲ್ಲೆಲ್ಲಾ ಆಕ್ರಮಿಸಿ ವಸಹತುಶಾಹಿ ಗುಣವನ್ನು ಹೊಂದಿರುವ ವಿಚಿತ್ರ ಸಸ್ಯ ಪ್ರಭೇದವಾಗಿದೆ.
ಜಗತ್ತಿನಾದ್ಯಂತ ಹಲವಾರು ಸಮುದಾಯಗಳು ಇದರ ಹೂದಳಗಳು, ಎಲೆ ಹಾಗೂ ಮರದ ತೊಗಟೆಗಳನ್ನು ಬಳಸಿ ಕಷಾಯ ತಯಾರಿಕೆಗೆ ಬಳಸುತ್ತವೆ. ಅತಿಭೇದಿಗಾಗಿ, ಬ್ಯಾಕ್ಟಿರಿಯಾಗಳ ಸೋಂಕು ನಿವಾರಣೆಗೆ ಹಾಗೂ ಉರಿಯೂತ ನಿವಾರಣೆಯನ್ನೂ ಗುಲ್ ಮೊಹರ್ ಮರದ ಭಾಗಗಳಿಂದ ಪಡೆಯಲಾಗುತ್ತದೆ. ಕೆಲವು ಭಾರತೀಯ ಔಷಧ ವಿಜ್ಞಾನದ ಅಧ್ಯಯನಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವ ಗುಣವನ್ನೂ ದಾಖಲು ಮಾಡಿವೆ. ಹಾಗಾಗಿ ಗುಲ್ ಮೊಹರ್ ಚೆಲುವಿನ ಜೊತೆಗೆ ತನ್ನೊಡಲಲ್ಲಿ ಔಷಧೋಪಚಾರದ ಅನುಕೂಲಗಳನ್ನೂ ಹೊತ್ತಿದೆ.
ಅಷ್ಟೆಲ್ಲದರ ಜೊತೆಗೆ ತನಗೆ ಗುಲ್ ಮೊಹರ್ ಎಂದು ಕರೆಯಿಸಿಕೊಂಡ ಮರ ಚೆಲುವನ್ನು ಆ ಹೆಸರಲ್ಲಿಯೂ ಇಟ್ಟು ಅದೇ ಹೆಸರಿನ ಅನೇಕ ಬಳಕೆಗಳನ್ನು ನಿರ್ದೇಶಿಸಿದೆ. ಎಂಬತ್ತರ ದಶಕದಲ್ಲಿ ಕೃಷಿ ಕಾಲೇಜಿನಲ್ಲಿ ನಾನಿನ್ನೂ ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿಗಳ ಪ್ರಾತಿನಿಧಿಕ ಕವನಸಂಕಲನವೊಂದಕ್ಕೆ ಇದೇ ಮರದ ಮೊಹರನ್ನು ಅಕ್ಷರಗಳಾಗಿಸಿ ಶೀರ್ಷಿಕೆಯಾಗಿಸಿದ್ದೆವು. “ಗುಲ್ ಮೊಹರ್ ಅಕ್ಷರಗಳಾದಾಗ” ಎಂಬ ಸಂಕಲನವು ಕೃಷಿ ಕಾಲೇಜಿನ 80ರ ದಶಕದ ವಿದ್ಯಾರ್ಥಿಗಳಿಗೆ ಚಿರಪರಿಚಿತ. ಸೃಜನಶೀಲತೆಯನ್ನು ಕಣ್ಸಳೆಯುವಲ್ಲೂ ಅದರ ಗುರುತನ್ನು ಮೂಡಿಸಿತ್ತು. ಈಗಂತೂ ಅಪಾರ್ಟ್ ಮೆಂಟುಗಳಿಂದ ಮೊದಲ್ಗೊಂಡು ಸಣ್ಣ-ಪುಟ್ಟ ರಸ್ತೆಗಳು. ಎನ್‍ಕ್ಲೇವ್‍ಗಳೂ ಪಾರ್ಕುಗಳು, ಕೆಲವೆಡೆ ಬಡಾವಣೆಗಳೂ ಗುಲ್ ಮೊಹರಿನಿಂದ ಗುರುತಿಸಿಕೊಳ್ಳುತ್ತಿವೆ. ಅಷ್ಟರಮಟ್ಟಿಗೆ ಮಾನವಕುಲದ ಜೊತೆಗಾರನಾಗಿರುವ “ಗುಲ್ ಮೊಹರ್” ಈಗಂತೂ ಕಣ್ತುಂಬಿಕೊಳ್ಳಲು ಆಕರ್ಷಣೀಯವಾಗಿ ಎಲ್ಲೆಡೆ ಕಾಣುತ್ತಿದೆ.
ನಮಸ್ಕಾರ,
ಚನ್ನೇಶ್
ಚೆನ್ನಾಗಿ ಮೂಡಿ ಬಂದಿದೆ ಸರ್. ಹಳೆಯ ನೆನಪುಗಳನ್ನು ಮೆಲುಕು ಹಾಕಿದಂತಾಯಿತು. ನಾವು ಅದರ ಪಕಳೆಗಳನ್ನು ತಿನ್ನುತ್ತಿದ್ದೆವು ಕೂಡ.
very interesting and beautifull flowe gulmohar. in our side we call this as basavana huuuvu. because in the time of basava jayanthi we use this flower to decorate basavana temple and bull. thanks for such a nice and informative article. once again thanks and congratulation sir.
very interesting and beautifull flowe gulmohar. in our side we call this as basavana huuuvu. because in the time of basava jayanthi we use this flower to decorate basavana temple and bull. thanks for such a nice and informative article. once again thanks and congratulation sir.
Very beautiful and interesting article with scientific information. Distribution and phenological variations make the article more interesting ?