ನೊಬೆಲ್ ಪ್ರಶಸ್ತಿಯನ್ನು ಪಡೆದವರೆಂದರೇನೇ ಒಂದು ಬಗೆಯ ಶ್ರೇಷ್ಠತೆಯ ಹೆಮ್ಮೆ, ಅಭಿಮಾನ! ಆದರೆ ಒಂದೇ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಜೋಡಿಯಾದ ನೊಬೆಲ್ ಪುರಸ್ಕೃತರೂ ಇದ್ದಾರೆಂದರೆ ಮತ್ತೂ ವಿಶೇಷವೇ! ಅವರಲ್ಲಿ ಗಂಡ-ಹೆಂಡತಿಯರು, ಅಪ್ಪ-ಮಗ, ಅಮ್ಮ-ಮಗಳು, ಅಣ್ಣ-ತಮ್ಮ ಪುರಸ್ಕೃತರಾಗಿದ್ದಾರೆ. ಅವರಲ್ಲಿ ಒಟ್ಟು 28 ಜನರು ಸುಮಾರು 23 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದು ಇಂದಿನ ನೊಬೆಲ್ ನಿರೀಕ್ಷೆಯ ತಯಾರಿಯ ಓದು.
ಒಂದೇ ಕುಟುಂಬದವರೆಂದರೆ ಕ್ಯೂರಿ ಕುಟುಂಬದವರದ್ದು ಬಹು ದೊಡ್ಡ ಪಾಲು. ಗಂಡ-ಹೆಂಡತಿ, ಮಗಳು ಮತ್ತು ಅಳಿಯ, ಎಲ್ಲರೂ ಸೇರಿ ಒಟ್ಟು 3 ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೇರಿ ಕ್ಯೂರಿ ಮತ್ತು ಅವರ ಗಂಡ ಪಿಯರಿ ಕ್ಯೂರಿ ಜೊತೆಯಾಗಿ 1903ರಲ್ಲಿ ಭೌತವಿಜ್ಞಾನದಲ್ಲಿ ಜೊತೆಯಾಗಿ ಪಡೆದು, ಮೇರಿ ಕ್ಯೂರಿ ಎರಡನೆಯ ಪ್ರಶಸ್ತಿಯನ್ನು 1911 ರಲ್ಲಿ ರಸಯಾನ ವಿಜ್ಞಾನಕ್ಕೆ ಪಡೆದಿದ್ದಾರೆ. ಈ ದಂಪತಿಗಳ ಹಿರಿಯ ಮಗಳು ಐರಿನ್ ಜುಲಿಯಟ್ ಕ್ಯೂರಿ (Irene Joliot Curie) ಮತ್ತು ಆಕೆಯ ಗಂಡ ಫ್ರೆಡೆರಿಕ್ ಜುಲಿಯಟ್ (Frederic Joliot) 1935 ರಲ್ಲಿ ಜೊತೆಯಾಗಿಯೇ ರಸಾಯನ ವಿಜ್ಞಾನಕ್ಕೆ ನೊಬೆಲ್ ಪಡೆದಿದ್ದಾರೆ.
ಗಂಡ-ಹೆಂಡತಿಯರಲ್ಲಿ ೬ ಜೋಡಿಗಳು ಅಂದರೆ 12 ಜನರು ಒಟ್ಟು 8 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೆಲವನ್ನು ಜೊತೆಯಾಗಿಯೇ ಪಡೆದಿದ್ದಾರೆ. ಹಾಗೆಯೇ ಅಪ್ಪ-ಮಕ್ಕಳಲ್ಲಿ 14 ಜನರು ಒಟ್ಟು 13ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಮ್ಮ-ಮಗಳು 2 ಪ್ರಶಸ್ತಿಯನ್ನು ಪಡೆದಿದ್ದಾರೆ. ಅಣ್ಣ-ತಮ್ಮಂದಿರಿಬ್ಬರು ಎರಡು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನೊಬೆಲ್ ಅನ್ನು ಪಡೆದ ಗಂಡ ಹೆಂಡತಿಯರಲ್ಲಿ ಕ್ಯೂರಿ ಮನೆಯವರೇ 2 ಜೋಡಿಗಳು. ಉಳಿದ 4 ಜೋಡಿಗಳಲ್ಲಿ ಮೂರು ಜೋಡಿಗಳು ಒಟ್ಟಾಗಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ 5 ಜೋಡಿ ಗಂಡ-ಹೆಂಡತಿಯರು ಪ್ರಶಸ್ತಿಯನ್ನು ಹಂಚಿಕೊಂಡಿದ್ದರೆ, ಒಂದು ಜೋಡಿ ಮಾತ್ರ ವಿಭಿನ್ನ ಕ್ಷೇತ್ರದಲ್ಲಿ ಬೇರೆ ಬೇರೆ ನೊಬೆಲ್ ಅನ್ನು ಪಡೆದಿದ್ದಾರೆ. ಗನ್ನಾರ್ ಮೈರ್ಡಲ್ (Gunnar Myrdal) 1974ರಲ್ಲಿ ಅರ್ಥವಿಜ್ಞಾನಕ್ಕೆ ಮತ್ತು ಅವರ ಹೆಂಡತಿ ಆಲ್ವಾ ಮೈರ್ಡಲ್ (Alva Myrdal ) 1982ರಲ್ಲಿ ಶಾಂತಿ ಪುರಸ್ಕಾರವನ್ನು ಪಡೆದಿದ್ದಾರೆ. ಉಳಿದಂತೆ 1947 ಮತ್ತು 2014 ರ ವೈದ್ಯಕೀಯ ಪ್ರಶಸ್ತಿಯನ್ನು ಎರಡು ಜೋಡಿಗಳು ಒಟ್ಟಿಗೇ ಪಡೆದಿದ್ದಾರೆ. ಅರ್ಥವಿಜ್ಞಾನದ 2019ರ ಪ್ರಶಸ್ತಿಯನ್ನು ಭಾರತೀಯ ಸಂಜಾತ ಅಭಿಜಿತ್ ಬ್ಯಾನರ್ಜಿ ತಮ್ಮ ಪತ್ನಿ ಏಸ್ತರ್ ಜೊತೆಯಾಗಿ ಪಡೆದಿದ್ದಾರೆ.
ಅಪ್ಪ-ಮಗ ಜೊತೆಯಾಗಿ ಪಡೆದವರಲ್ಲಿ 1915 ರ ಭೌತವಿಜ್ಞಾನ ಪ್ರಶಸ್ತಿಯನ್ನು ವಿಲಿಯಂ ಹೆನ್ರಿ ಬ್ರಾಗ್ (Willium Henry Bragg) ಮತ್ತು ಅವರ ಮಗ ಲಾರೆನ್ಸ್ ಬ್ರಾಗ್ (Willium Lawrence Bragg) ಇದ್ದಾರೆ. ಇನ್ನುಳಿದ 12 ಜನರಲ್ಲಿ ಅಪ್ಪ-ಮಗ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಥವಾ ವಿಭಿನ್ನ ಸಮಯದಲ್ಲಿ ಒಟ್ಟು 12 ಪ್ರಶಸ್ತಿಯನ್ನು ಪಡೆದಿದ್ದಾರೆ.
ಒಂದೇ ಕುಟುಂಬದ ಅಣ್ಣ-ತಮ್ಮಂದಿರಾದ ಜಾನ್ ಟಿನ್ಬರ್ಗೇನ್ ಮತ್ತು ನಿಕೊಲಾಸ್ ಟಿನ್ಬರ್ಗೇನ್ ಕ್ರಮವಾಗಿ 1969ರಲ್ಲಿ ಅರ್ಥವಿಜ್ಞಾನ ಹಾಗೂ 1973ರ ವೈದ್ಯಕೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೀಗೆ ಒಂದೇ ಕುಟುಂಬದ ಕೆಲವು ಜೋಡಿಗಳು ನೊಬೆಲ್ ಪುರಸ್ಕೃತರಾಗಿ ತಮ್ಮ ವಿಶೇಷತೆಯನ್ನು ಮೆರೆದಿದ್ದಾರೆ.
ನಾಳೆ ಮತ್ತೊಂದು ನೊಬೆಲ್ ಸಂಗತಿಯ ವಿಶೇಷ!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್