You are currently viewing ಕಾಲ ಕೆಳಗಿನ ಸಸ್ಯ : ಗರಿಕೆ-ಹುಲ್ಲು

ಕಾಲ ಕೆಳಗಿನ ಸಸ್ಯ : ಗರಿಕೆ-ಹುಲ್ಲು

ಸಸ್ಯಯಾನದಲ್ಲಿ ಆರಂಭದಿಂದಲೂ ಮರಗಳ ಬಗೆಗೆ ತಿಳಿಯುತ್ತಿರುವ ಗೆಳೆಯರು ಮುಂದೆ ಯಾವ ಮರ ಹತ್ತಿಸುತ್ತೀಯಾ ಎಂದರೆ, ಗೆಳತಿಯರು ಯಾವ ಮರ ಸುತ್ತಿಸುತ್ತಿಯಾ ಎನ್ನುತ್ತಿರುತ್ತಾರೆ. ಗೆಳೆಯ-ಗೆಳತಿಯರಿಬ್ಬರಿಗೂ ಮರ ಯಾವುದೆಂದು ಮೇಲೆ ನೋಡುವುದನ್ನು ತಪ್ಪಿಸಿ, ಇಂದು ಕಾಲ ಕೆಳಗಿನ ಗರಿಕೆಯ ಬಗೆಗೆ ತಿಳಿಸುತ್ತಾ ನಿರಾಸೆ ಮೂಡಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಗರಿಕೆಯ ಹುಲ್ಲೇನೂ ಸಾಮಾನ್ಯ ಸಸ್ಯವೇನಲ್ಲ. ಮನುಕುಲದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖವಾಗೇ ಇದೆ.  ಒಂದು ಕಾಲಕ್ಕೆ ಚಾಣಕ್ಯನನ್ನೇ ನಿಲ್ಲಿಸಿತ್ತಂತೆ. ಬೆರಳಿಗೆ ಸಿಕ್ಕಿಕೊಂಡ ಗರಿಕೆಯನ್ನು ಅಮೂಲಾಗ್ರವಾಗಿ ಕಿತ್ತೇ ಮುಂದೆ ಚಾಣಕ್ಯ ಪಯಣಿಸಿದರೆಂದು ಆತನ ಪರವಕಾಲತ್ತು ವಹಿಸಿದ ಸಂಗತಿಗಳು ಹೇಳುತ್ತವೆ. ಪಾಪ ಹುಲ್ಲು-ಗರಿಕೆಯ ಬಗ್ಗೆ ವಕಾಲತ್ತು ವಹಿಸುವರು ಇರಬೇಕಿತ್ತಲ್ಲವೇ? ಮುಂದಿನ ವಿವರ ನೋಡಿ, ಚಾಣಕ್ಯನಿಗೆ ಖಂಡಿತಾ ಬೇರು ಸಮೇತ ಕೀಳಲಾಗಿಲ್ಲ ಎಂಬುದು ಮನವರಿಕೆಯಾಗುತ್ತದೆ.

          ಸಾಮಾನ್ಯವಾಗಿ ನಮಗೆ ನೆಲದ ಮೇಲೆ ಕಾಣುವ ಗರಿಕೆಯು ನವಿರಾಗಿದ್ದು, ಕೋಮಲವೂ ಆಗಿದ್ದು ಹೆಚ್ಚೆಂದರೆ ಒಂದು ಸೆಂಟಿಮೀಟರ್ ದಪ್ಪನಾದ ಕಾಂಡವನ್ನು ಹೊಂದಿರುತ್ತದೆ. ಆದರೆ ಬೇರು ಕಾಂಡಕ್ಕಿಂತಾ ನಾಲ್ಕು ಪಟ್ಟಾದರೂ ದಪ್ಪನಾಗಿರುತ್ತದೆ. ನೆಲದಾಳಕ್ಕಿಳಿದು, ವರ್ಷಾನುಗಟ್ಟಲೆ ಜೀವ ಹಿಡಿದುಕೊಂಡೇ ಇರುತ್ತದೆ. ಅಷ್ಟು ಸುಲಭಕ್ಕೆ ಖಂಡಿತಾ ಹೋಗುವುದಿಲ್ಲ. ಸಾಲದಕ್ಕೆ ಗರಿಕೆಯು ತೀರಾ-ಆಕ್ರಮಣಕಾರಿ ಸಸ್ಯಗಳಲ್ಲಿ ಒಂದು. ಗರಿಕೆಯನ್ನು ಬೇರು ಸಮೇತ ಕಿತ್ತು ಹಾಕುವುದು ಅಂತೂ ನಿಜಕ್ಕೂ ಸಾಹಸ ಮಾತೇ ಸರಿ! ಅದರ ಬೇರಿಗೆ ಕೈಹಾಕಿದಾಗಲೇ ಅದರ ಶಕ್ತಿ ಅರ್ಥವಾಗುವುದು. ನೆಲದ ಮೇಲೆ ಕಾಣುವ ಗರಿಕೆಗಿಂತಾ ಸಾಕಷ್ಟು ಪಟ್ಟು ದಪ್ಪವಾಗಿದ್ದು, ಆಳಕ್ಕಿಳಿದು ಹರಡಿಕೊಂಡಿರುವ ಬೇರನ್ನು ಹುಡುಕುವುದೇ ದೊಡ್ಡ ಸಾಹಸ. ಗರಿಕೆಯಿಂದ ನಿರಂತವಾಗಿ ತೊಂದರೆಯನ್ನು ಅನುಭವಿಸಿದ ರೈತರು, ಅಂತಹಾ ನೆಲದಲ್ಲಿ ಸುಡು ಬೇಸಿಗೆಯಲ್ಲಿ ಗುದ್ದಲಿ-ಪಿಕಾಸಿಗಳಿಂದ ಅಗೆಯುತ್ತಾರೆ. ಅದನ್ನು “ನಟ್ ಕಡಿಯುವುದು” ಎಂದು ಕೆಲವು ಕಡೆಗಳಲ್ಲಿ ಹೇಳುತ್ತಾರೆ. ಅಂದರೆ ಅದು ಉಳುಮೆಯಲ್ಲ, ನೆಲವನ್ನು ಗುದ್ದಲಿಯಿಂದ ಅಗೆದು, ದೊಡ್ಡ-ದೊಡ್ಡ ಮಣ್ಣಿನ ಉಂಡೆಗಳನ್ನು ಕಿತ್ತು ನೆಲವನ್ನು ಸಡಿಲಿಸುತ್ತಾ, ಒಳಮೈಯನ್ನು ಬಿಸಿಲಿಗೆ ತೆರೆದುಕೊಳ್ಳುವಂತೆ ಮಾಡುವುದು. ಆಗ ಹೊರಗಿನ ಬಿಸಿಲಿಗೆ ಬೇರುಗಳು ಒಣಗಲಿ ಎಂಬುದು ಅಲ್ಲಿನ ಆಶಯ. ಅದೆಂತಹಾ ತಾಪತ್ರಯವೆಂದರೆ, ಗರಿಕೆಯ ಬೇರು ಸಮೇತ ತೆಗೆಯುವುವ ಈ ಸಾಹಸಗಳಲ್ಲಿ ರೈತರಲ್ಲಿ ದೊಡ್ಡ ದೊಡ್ಡ ತಯಾರಿಗಳೇ ಇರುತ್ತವೆ. ಈಗೇನೋ ಕಳೆನಾಶಕಗಳ ರಸಾಯನಿಕ ಜಗತ್ತಿನಲ್ಲಿ ತೆಗೆಯುವುದು ಸುಲಭವಿದ್ದೀತು. ಆದರೆ 70-80ರ ದಶಕಗಳಿಗೂ ಮೊದಲಂತೂ ಬೇಸಿಗೆಯಲ್ಲಿ ನೆಲ ಅಗಿಯುವ ಸಾಹಸವೇ ಉತ್ತರವಾಗಿತ್ತು! ವಸ್ತು ಸ್ಥಿತಿ ಹೀಗಿರುವಾಗ, ಚಾಣಕ್ಯ ಅದೂ ಆ ಕಾಲದಲ್ಲಿ, ತನ್ನ ಕಾಲಿಗೆ ಸಿಕ್ಕ ಗರಿಕೆಯನ್ನು ಬೇರು ಸಮೇತ ಕೀಳುವುದೆಂದರೇನು? ಕಾಲಿಗೆ ಸಿಗುವ ಕಾರಣಕ್ಕೆ ಗರಿಕೆಯನ್ನು ಹಾಗೆಲ್ಲ ಹೀಗೆಳೆಯಲಾಗದು. ಅದರಲ್ಲೂ ಚಾಣಕ್ಯನ ಶರೀರ ಪ್ರಕೃತಿಯಂತೂ ನೆಲಕ್ಕೆ ಕೈ ಹಾಕಲು ಖಂಡಿತಾ ಪ್ರಚೋದಿಸಿರಲಾರದು. 

          ಗರಿಕೆಯನ್ನು ವೈಜ್ಞಾನಿಕವಾಗಿ ಸೈನೊಡಾನ್ ಡಾಕ್ಟೆಲಾನ್ (Cynodon dactylon) ಎಂದು ಕರೆಯಲಾಗುತ್ತದೆ. ಹೆಸರುವಾಸಿಯಾದ ದೊಡ್ಡ ಕುಟುಂಬವಾದ ಪೊಯೇಸಿಯೇ ಎಂಬ ಹುಲ್ಲಿನ ಕುಟುಂಬಕ್ಕೆ ಸೇರಿದ ಈ ಕಳೆ-ಸಸ್ಯ.  ತನ್ನ ಕುಟುಂಬದ ಸುಮಾರು 12,000 ಪ್ರಭೇದಗಳಲ್ಲಿ ಒಂದಾದ ಇದು, ಬಹುವಾರ್ಷಿಕ ಹುಲ್ಲು. ಮನುಕುಲವನ್ನೆಲ್ಲಾ ಸಾಕಿರುವ ಇತಿಹಾಸದಲ್ಲೇನಾದರೂ ಒಂದು ಸಸ್ಯ ಕುಟುಂಬದ ಗೌರವಕ್ಕೆ ಪಾತ್ರರಾಗುವುದು ಎಂದಿದ್ದರೆ, ಅದು ಗರಿಕೆಯ ಕುಟುಂಬವೇ ಸರಿ! ಗರಿಕೆಯ ಕೌಟುಂಬಿಕತೆಯ ಹೆಚ್ಚುಗಾರಿಕೆಯ ಸಂಗತಿಗಳನ್ನು ನಂತರದಲ್ಲಿ ನೋಡೋಣವಂತೆ. ಸದ್ಯಕ್ಕೀಗ ಮತ್ತದೆ ಕಾಲ ಬೆರಳಲ್ಲಿನ ಹುಲ್ಲಿನ ಕಥಾನಕಕ್ಕೆ ಬರೋಣ.

          ಗರಿಕೆಯು ಆಫ್ರಿಕಾದ ನೆಲದಲ್ಲಿ ಸರಿ ಸುಮಾರು 70 ದಶಲಕ್ಷ ವರ್ಷಗಳ ಹಿಂದೆಯೇ ವಿಕಾಸಗೊಂಡಿರುವ ಬಗೆಗೆ ನಂಬಲಾಗಿದೆ. ಸದ್ಯಕ್ಕದರ ವ್ಯಾಪ್ತಿಯಂತೂ ಪ್ರಪಂಚದ ಎಲ್ಲಾ ನೆಲವನ್ನೂ ಆವರಿಸಿದೆ. ಅದರಲ್ಲೂ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದ ಪ್ರದೇಶಗಳಲ್ಲಂತೂ ಧಾರಾಳವಾಗಿ ಕಂಡುಬರುತ್ತದೆ. ಕೇವಲ ಅಪಾರ ಚಳಿ ಹಾಗೂ ತುಂಬಾ ದಿನಗಳ ಮಂಜಿನ ವಾತಾವರಣಕ್ಕೆ ಸ್ವಲ್ಪ ಮಟ್ಟಿಗಿನ ಹಿಂಜರಿಕೆಯನ್ನು ತೋರುವುದು. ಬಹಳ ಮುಖ್ಯವಾಗಿ ಅದು ಒಂದು ಕಳೆಯಾಗಿ ದೊಡ್ಡ ಸುದ್ದಿಯನ್ನೇ ಉಂಟುಮಾಡಿದೆ. ಹೆಚ್ಚೂ-ಕಡಿಮೆ ಎಲ್ಲಾ ಬೆಳೆಗಳನ್ನೂ ಕಾಡುವ ಸಾಮರ್ಥ್ಯವನ್ನೂ ಪಡೆದುಕೊಂಡಿದೆ. ಸಾಲದಕ್ಕೆ ಎಲ್ಲಾ ಪರಿಸರದಲ್ಲೂ ತನ್ನ ಇರುವನ್ನು ಸಾಧ್ಯಗೊಳಿಸಿದೆ. ಜೊತೆಗೆ ನಗರಗಳಲ್ಲಿ ನೆಲಹಾಸಿನ ಹುಲ್ಲುಗಳಲ್ಲಿಯೂ ತನ್ನ ಸ್ಥಾನವನ್ನು ಗಟ್ಟಿಯಾಗಿಯೇ ನೆಲೆಗೊಳಿಸಿಕೊಂಡಿದೆ. 

          ತನ್ನ ಬಹು ಪಾಲು ಸಂಬಂಧಿಗಳಾದ ಇತರೇ ಹುಲ್ಲುಗಳಂತೆ ಇದರ ಹೂಗೊಂಚಲೂ ವಿಶೇಷವಾದ ಸಂರಚನೆಯನ್ನು ಹೊಂದಿದೆ. ಹೆಚ್ಚಿನ ಹುಲ್ಲಿನ ಸಸಿಗಳು ಹೂಗೊಂಚಲಲ್ಲಿ ಹೂವುಗಳು ಒಂದರ ಪಕ್ಕದಲ್ಲೇ ಮತ್ತೊಂದರಂತೆ ಮಾಲೆ ಕಟ್ಟಿದಂತಹ ಮಾದರಿಯಲ್ಲಿದ್ದು ಕಾಳು ಕಟ್ಟಿದಾಗ ಕಾಂಡದಷ್ಟೇ ಉದ್ದದ ಅಥವಾ ಕನಿಷ್ಟ ಅರ್ಧದಷ್ಟಾದರೂ ಉದ್ದವಾದ ತೆನೆಗಳಾಗಿರುತ್ತವೆ. ಇದೇ ಹುಲ್ಲುಗಳ ಸಾಮ್ರಾಜ್ಯವನ್ನು ಆಹಾರ ಜಗತ್ತಿನಲ್ಲಿ ಆಗಸದೆತ್ತರಕ್ಕೆ ನಿಲ್ಲಿಸಿದೆ. ಹೆಚ್ಚೂ ಕಡಿಮೆ ಮೈತುಂಬಾ ಕಾಳುಕಟ್ಟಿಸಿಕೊಂಡು ಮನುಕುಲದ ಸರ್ವಶಕ್ತಿಯ ಆಗರವಾಗಿವೆ. ಹುಲ್ಲುಗಳ ಈ ವಿಶೇಷ ಆಹಾರ ತಯಾರಿಸುವ ಗುಣವು ಅದರ ದ್ಯುತಿ-ಸಂಶ್ಲೇಷಣಾ ಕ್ರಿಯೆಯ ವಿಶೇಷತೆಯಿಂದ ಬಂದಿದ್ದು ಅದನ್ನು ನಾಲ್ಕು-ಇಂಗಾಲದ ಚಕ್ರಗಳ ಮೂಲಕ ಸಾಧ್ಯವಾಗಿಸುತ್ತವೆ. ಹಾಗಾಗಿ ಹುಲ್ಲುಗಳ ಶಕ್ತಿಯು ಅತ್ಯಧಿಕವಾದ ಆಹಾರ ಸಂಪನ್ಮೂಲವಾಗಿದೆ. ನಮ್ಮ ಆಹಾರದ ಮೂಲದ ಅಕ್ಕಿ, ಗೋಧಿ, ಜೋಳ, ರಾಗಿ, ಎಲ್ಲಾ ಮಿಲೆಟ್‍ ಗಳು, ಅಷ್ಟೇಕೆ ಕಬ್ಬೂ ಕೂಡ, ಬಿದಿರು ಸಹಿತ ಎಲ್ಲವೂ ಈ ಗರಿಕೆ ಕುಟುಂಬವನ್ನೇ ಸೇರಿದವು. ನಾವು ನಿಜಕ್ಕೂ ಹುಲ್ಲು ತಿಂದೇ ಬದುಕು ನೀಗಿಸುತ್ತಿದ್ದರೆ ಅಚ್ಚರಿಯೇನಲ್ಲ.

          ಗರಿಕೆಯ ಮಹತ್ವ ಇಷ್ಟಕ್ಕೇ ಮಾತ್ರ ಸೀಮಿತವಾಗಿಲ್ಲ. ಮಹಾನ್ ಆಕ್ರಮಣಕಾರಿ ಸಸ್ಯ ಎಂದೇ ಪ್ರಸ್ತಾಪವಿದೆಯಲ್ಲವೇ? ಈರುಳ್ಳಿ, ಬೆಳ್ಳುಳ್ಳಿಯಂತಹಾ ಬೆಳೆಗಳಲ್ಲಿ ಅಂತೂ ಇದು ತೀರಾ ಉಪದ್ರವಿಯಾಗಿದೆ. ಈರುಳ್ಳಿಯನ್ನು ಮೇಲೆ ಏಳಲೂ ಬಿಡದಂತೆ ತಡೆಹಿಡಿಯುವ ಶಕ್ತಿ ಗರಿಕೆಗೆ ಇದೆ. ಹೀಗೆ ತನಗಿಂತಾ ಶಕ್ತಿಶಾಲಿಯಾದ ಬೃಹತ್  ದೇಹವನ್ನೂ ಹೊಂದಿದ ಗಿಡ-ಮರಗಳನ್ನು ತಡೆಯುವ ಕಾರಣಕ್ಕೇನೋ ಗರಿಕೆಯ ಹುಲ್ಲನ್ನು ಧಾರ್ಮಿಕವಾಗಿ ವಿಘ್ನ ನಿವಾರಕವೆಂದು ಮೊದಲ ಪೂಜೆಯ ಸ್ಥಾನವನ್ನೂ ಕೊಟ್ಟಿದ್ದಾರೆ. ವಾಸ್ತವವಾಗಿ ಅದರ ಬೇರುಗಳು ಆನೆಯ ಸೊಂಡಿಲಂತೆಯೇ ಇರುವ, ಹಾಗೂ ಸಶಕ್ತವಾಗಿ ನೆಲವನ್ನು ಹಿಡಿದಿರುವ ಕಾರಣವನ್ನೂ ಅಲ್ಲಗಳೆಯುವಂತಿಲ್ಲ. ಅಂತೂ ದೈವಿಕ ಶಕ್ತಿಯನ್ನೂ ದಯಪಾಲಿಸಿಕೊಂಡ ಅಸಾಮಾನ್ಯ ಸಸ್ಯವೂ ಹೌದು.    

          ಸರಿ ಸುಮಾರು 70 ದಶಲಕ್ಷ ವರ್ಷಗಳ ಹಿಂದೆಯೇ ವಿಕಾಸ ಗೊಂಡಿರಬಹುದಾದ ಹುಲ್ಲಿನ ಸಾಮ್ಯಾಜ್ಯವು, ತೀರಾ ನಿಕೃಷ್ಟ ಪರಿಸರವನ್ನೂ ತಡೆದುಕೊಳ್ಳುವ ಗುಣವನ್ನು ಪಡೆದುಕೊಂಡಿದೆ.  ಕುಟುಂಬದ ಬಹುಪಾಲು ಸದಸ್ಯ ಸಸ್ಯಗಳ  ಎಲೆಯ ಅಲಗು ಬ್ಲೇಡಿನಂತೆ ಹರಿತವಾಗಿರುವುದುಂಟು. ಇದಕ್ಕಾಗಿ ಎಲೆಯ ಅಂಚುಗಳ ಜೀವಿಕೋಶಗಳು, ಸಿಲಿಕಾನ್ ಮೂಲವಸ್ತುವಿನಿಂದ ಮಿಳಿತವಾಗಿ ಗಟ್ಟಿಯಾಗಿರುತ್ತದೆ. ಇತ್ತೀಚೆಗಿನವರೆವಿಗೂ ಸಿಲಿಕಾನ್ ಅನ್ನು ಸಸ್ಯವು ಹೀರಿಕೊಂಡು ತನ್ನೊಳಗೆ ಯಾವುದೇ ಶರೀರಕ್ರಿಯೆಯಲ್ಲೂ ಬಳಸದೆ, ಕೇವಲ ಜೀವಿಕೋಶಗಳ ಹಿಡಿತಕ್ಕೆ ಬಳಸುವ ಕಾರಣಗಳ  ವೈಜ್ಞಾನಿಕ ಸುಳಿಹುಗಳಿನ್ನೂ ಸಿಕ್ಕಿಲ್ಲ.

          ಬರ್ಮುಡಾ ಹುಲ್ಲು ಎಂಬುದಾಗಿಯೂ ಸಾಮಾನ್ಯವಾಗಿ ಕರೆಯಲಾಗುವ ಗರಿಕೆಯು ತನ್ನ ಕುಟುಂಬದಲ್ಲೇ ಅಸಾಧಾರಣ ಹುಲ್ಲು. ಇಡೀ ಕುಟುಂಬದ ಆಧುನಿಕ ವೈಜ್ಞಾನಿಕತೆಯನ್ನು ಮನುಕುಲದ ತಿಳಿವಳಿಕೆಯಾಗಿಸಲು ಅಪಾರ ನೆರವು ನೀಡಿದೆ. ಕಾರಣ ಇದೇ ಕುಟುಂಬದ ಹತ್ತೆಂಟು ಪ್ರಭೇದಗಳು ಮುಕ್ಕಾಲು ಪಾಲು ಜನರನ್ನು ಹಸಿವಿನಿಂದ ಮುಕ್ತವಾಗಿಸಿವೆ.  ಗರಿಕೆಯಿಂದ ಸಂಶೋಧಿಸಿದ ಹಸಿರಿನ ಹಾಗೂ ಆಹಾರ ತಯಾರಿಯ ಮೂಲಭಾಗವಾದ ಕ್ಲೊರೋಪ್ಲಾಸ್ಟ್ ನ  ಜೀನ್‍ ಗಳ ಸಂಯೋಜನೆಯು ಹೆಚ್ಚಿನ ಆಹಾರಧಾನ್ಯಗಳ ಜೊತೆ ಸಮೀಕರಿಸಬಹುದಾಗಿದ್ದು ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿವೆ. ಎಲೆಗಳ ಅಲಗುಗಳಲ್ಲಿ ಮಿಳಿತಗೊಂಡ ಸಿಲಿಕಾನ್ ತಿಳಿವಳಿಕೆಯೂ ಕೂಡ ಗರಿಕೆಯ ಒಳಗಣ ಪ್ರತಿಫಲನವಾಗಿದೆ. ಮಾನವ ಸಂಸ್ಕೃತಿಯೊಂದಿಗೆ ಅತ್ಯಂತ ದೀರ್ಘಕಾಲ ಸಹಯೋಗವನ್ನು ಹೊಂದಿರುವ ಈ ಹುಲ್ಲು ತೀರಾ ಇತ್ತೀಚೆಗಿನ ಅನುಶೋಧಗಳಲ್ಲೂ ತನ್ನ ಮಹತ್ವವನ್ನು ಕಡಿಮೆಮಾಡಿಕೊಂಡಿಲ್ಲ, ಎಂದರೆ ಅಚ್ಚರಿಯಾದೀತು.  

          ಇಷ್ಟೆಲ್ಲದರ ನಡುವೆಯೂ ಈ ಸಾಧಾರಣ ಹುಲ್ಲು, ತನ್ನ ಒಡಲೊಳಗೆ ಅಸಾಧಾರಣ ಔಷಧೀಯ ಗುಣಗಳನ್ನೂ ಹೊತ್ತಿರುವುದು ವಿಶೇಷ ಸಂಗತಿ. ಬೆಕ್ಕು-ನಾಯಿಗಳು ಗರಿಕೆಯನ್ನು ತಿನ್ನುವುದನ್ನು ತಾವೆಲ್ಲರೂ ಸಹಜವಾಗಿ ನೋಡಿಯೇ ಇರುತ್ತೀರಿ. ಅವುಗಳೇನೂ ದಿನವೂ ತಿನ್ನುವುದಿಲ್ಲ. ತಮಗೆ ಹೊಟ್ಟೆ ಕೆಟ್ಟಾಗ ಗುಣಮುಖರಾಗಲು ತಿನ್ನುವ ಅಭ್ಯಾಸವಷ್ಟೆ. ಹೌದು! ಗರಿಕೆಯು ಜ್ವರ, ಚರ್ಮ ಸಂಬಂಧಿ ಕಾಯಿಲೆಗಳು ಹಾಗೂ ಕೀಲುಗಳ ನೋವು ನಿವಾರಣೆಗಳಲ್ಲಿಯೂ ಪಾತ್ರ ವಹಿಸಿದೆ. ಇದರ ಜೊತೆಯಲ್ಲಿ ಗಾಯ ಮಾಯಿಸುವ, ಜೀರ್ಣತೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸುವ ಬಗೆಗೂ ಆಧುನಿಕ ಶೋಧಗಳು ನಡೆದಿವೆ.  ಒತ್ತಡಗಳಿಂದಾಗುವ ಸಮಸ್ಯೆಗಳ ಕುರಿತೂ ಗರಿಕೆಯು ಪರಿಣಾಮಗಳನ್ನು ನಿಭಾಯಿಸುವ ಯಶಸ್ಸನ್ನು ಹೊಂದಿದೆ. ಕೋಮಲವಾದ ಗರಿಕೆಯ ಎಸಳುಗಳನ್ನು ಬಳಸಿ ಸರಳವಾದ ಕಷಾಯವನ್ನು ತಯಾರಿಸುವ ಸೇವಿಸುವ ಕ್ರಮಗಳನ್ನು ಆಯುರ್ವೇದವು ಶಿಫಾರಸ್ಸು ಮಾಡುತ್ತದೆ. ಮನುಕುಲದ ಸಾಂಸ್ಕೃತಿಕ ಹಾಗೂ ಪರಿಸರದ ಇತಿಹಾಸ ನಿರ್ಮಿತಿಯಲ್ಲಿ ನಿಜಕ್ಕೂ ಅತ್ಯಂತ ಪ್ರಮುಖ ಸ್ಥಾನಗಳಿಸಿರಿವ ಗರಿಕೆಯ ಸಾಮರ್ಥ್ಯವನ್ನು ಅರಿತು, ಚಾಣಕ್ಯ ಕೂಡ ಅದರ ಬುಡವನ್ನಲ್ಲಾಡಿಸಲು ಸಾಧ್ಯವಾಗಿಲ್ಲ ಎಂದು ತಿಳಿಯಲು ತಮ್ಮ ಸಮೀಪದಲ್ಲೆಲ್ಲಾದರೂ ಗರಿಕೆಯ ನೆಲವನ್ನು ಅಗೆದು ಬೇರುಗಳನ್ನು ಹುಡುಕಿ ನೋಡಿ.

ನಮಸ್ಕಾರ

ಟಿ.ಎಸ್. ಚನ್ನೇಶ್

This Post Has 5 Comments

 1. ನಿರಂಜನ ಪ್ರಭು

  ಲೇಖನ ಚೆನ್ನಾಗಿ ಬರೆದಿದ್ದೀರಿ ಸರ್. ಗರಿಕೆಗೆ ದರ್ಭೆ ಹುಲ್ಲಿನಂತೆ antibacterial ಗುಣಗಳನ್ನು ಹೊಂದಿದೆ.
  ಒಂದೆಡೆ ಸಾಮ್ಯಾಜ್ಯ ಅನ್ನುವುದು ಸಾಮ್ರಾಜ್ಯ ಆಗಬೇಕಿದೆ.

  1. CPUS

   Thank You. Its been corrected.

 2. Dr. M. C. Manohara

  Beautifully written. Short sentences with subtle humour 😊. Apt & sufficient information. Thanks.

  1. CPUS

   Thanks for reading and offering your comments.

 3. ಅನುಪಮಾ ಪ್ರಸಾದ್

  ಗ್ರಾಮೀಣ ಭಾಗಗಳಲ್ಲಿ ಇವತ್ತಿಗೂ ಶಿಶುಗಳ ಆರೈಕೆಯಲ್ಲಿ ಗರಿಕೆ ರಸ ಪ್ರಮುಖವಾಗಿರುತ್ತದೆ.

Leave a Reply