You are currently viewing ಕಾಣಬೇಕಾದ್ದನ್ನು ಮುಚ್ಚಿ, ಕಾಣದಿರುವುದನ್ನು ತೆರೆದುಕೊಂಡ ಆಲ, ಅತ್ತಿ, ಅರಳಿಯ ಸಂಕುಲ

ಕಾಣಬೇಕಾದ್ದನ್ನು ಮುಚ್ಚಿ, ಕಾಣದಿರುವುದನ್ನು ತೆರೆದುಕೊಂಡ ಆಲ, ಅತ್ತಿ, ಅರಳಿಯ ಸಂಕುಲ

ಹೂವುಗಳನ್ನು ಬಿಡುವ ಸಸ್ಯಗಳು ಚೆಂದವಾದ ಬಣ್ಣ ಬಣ್ಣದ ಹೂಗಳನ್ನು ಕಾಣುವಂತೆ ತೆರೆದಿಟ್ಟಿರುತ್ತವೆ. ಸಹಜವಾಗಿ ಎಲ್ಲಾ ಗಿಡ-ಮರಗಳ ಬೇರುಗಳೂ ನೆಲದೊಳಗೆ ಅವಿತು ಕಾಣದಂತಿರುತ್ತವೆ. ಬೇರುಗಳನ್ನು ಕಾಣದ ಅರ್ಧದೇಹ ಎಂದೇ ಬೇರುಗಳ ಅಧ್ಯಯನದ ತಜ್ಞರು ಕರೆಯುವುದುಂಟು. ಇಂತಹದರಲ್ಲಿ ಸೊಗಸಾಗಿ ಕಾಣಬೇಕಿದ್ದ ಹೂವುಗಳನ್ನು ಮುಚ್ಚಿಟ್ಟು, ಕಾಣದಿರುವ ಬೇರುಗಳನ್ನು ಗಾಳಿಯಲ್ಲಿ ತೇಲಿ ಬಿಟ್ಟು ಕಾಣುವಂತೆ ವಿಕಾಸಗೊಂಡಿದೆ ಆಲ, ಅತ್ತಿ, ಅರಳಿ ಮುಂತಾದ ನೂರಾರು ಪ್ರಭೇದಗಳನ್ನೊಳಗೊಂಡ ಸಂಕುಲ. ಫೈಕಸ್ (Ficus)ಎಂಬ ಹೆಸರಿನಿಂದ ಗುರುತಿಸಲಾಗುವ ಇವೆಲ್ಲಾ ಗಿಡ-ಮರಗಳನ್ನೂ ಸಾಮಾನ್ಯವಾಗಿ ಫಿಗ್-ಗಳು (Figs) ಎಂದು ಕರೆಯಲಾಗುತ್ತದೆ. ಆಲ (Ficus benghalensis),  ಅತ್ತಿ (Ficus racemosa), ಅರಳಿ (Ficus religiosa),  ಅಂಜೂರ (Ficus carica), ಬಸರಿ (Ficus amplissima), ಗೋಣಿ (Ficus drupacea), ಇಂಡಿಯನ್ ರಬ್ಬರ್ ಮರ (Ficus elastica) ಮುಂತಾದ ಸಸ್ಯಗಳು ಬಹು ಜನಪ್ರಿಯವಾದವು. ಇವೆಲ್ಲವೂ ಮೋರೆಸಿಯೆ(Moraceae) ಎಂಬ ಸಸ್ಯ ಕುಟುಂಬದವು. ಇದೇ ಕುಟುಂಬಕ್ಕೆ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಬಳಸುವ ಹಿಪ್ಪುನೇರಳೆಯೂ ಸೇರಿದೆ. ಸಾವಿರಾರು ಜೀವಿಗಳನ್ನು ಲಕ್ಷಾಂತರ ವರ್ಷಗಳಿಂದಲೂ ಸಾಕುತ್ತಿರುವ ಈ ಸಸ್ಯಸಂಕುಲವು ಮಾನವಕುಲಕ್ಕೆ ಪರಿಚಯಗೊಂಡು ಒಗ್ಗಿದ ಅಪೂರ್ವ ಕಥನವನ್ನು ಒಂದೊಂದು ಪ್ರಭೇದವೂ ಕಟ್ಟಿವೆ.  

                ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ,  ಜಾಲಿಯ ಮರವು ನೆರಳಲ್ಲ . . . . .  ಎಂಬ ಒಂದು ಜಾನಪದ  ಹಾಡನ್ನು ಕೇಳಿರಬಹುದು. ಆಲಕ್ಕೆ ಹೂವು ಇಲ್ಲ, ಎಂದೇನೂ ಅಲ್ಲ. ಆದರೆ ಅವು ಕಾಣುವುದಿಲ್ಲ ಅಷ್ಟೆ! ಈ ಫೈಕಸ್ (Ficus) ಗಿಡ-ಮರಗಳಲ್ಲಿ ಕಾಯಿಗಳು ಎನ್ನಲಾಗುವ ಭಾಗಗಳು ನಿಜಕ್ಕೂ ಹೂಗಳ ಗೊಂಚಲನ್ನು ಹೊಂದಿರುವ ಪುಟ್ಟ ಪುಟ್ಟ ಚೀಲಗಳು. ಸೂಕ್ಷ್ಮವಾಗಿ ಗಮನಿಸಿದರೆ, ಪ್ರತೀ ಹಣ್ಣಿನ ಬುಡದಲ್ಲೂ ಒಂದು ಸಣ್ಣ ರಂದ್ರವಿರುತ್ತದೆ. ಮರದಲ್ಲೇ ಇದ್ದಾಗ ಗಮನಿಸಿದರೆ ಆ ರಂದ್ರಗಳ ಮೂಲಕ ಪುಟ್ಟ-ಪುಟ್ಟ ಕೀಟಗಳು ಹೊರ ಬರುವುದನ್ನೋ ಅಥವಾ ಒಳಗೆ ಹೋಗುವುದನ್ನೋ ಕಾಣಬಹುದು. ಇದನ್ನು ಗಮನವಿಟ್ಟು ನೋಡಲು ಸಾಕಷ್ಟು ಸೂಕ್ಷ್ಮವಾದ ಹುಡುಕಾಟ ಮಾಡಬೇಕಾಗುತ್ತದೆ. ಗಿಡ-ಮರದ ಕಾಂಡಕ್ಕೆ ನೇರವಾಗಿ ಅಂಟಿಕೊಂಡಂತಿರುವ ಆ ಹಣ್ಣು/ಕಾಯಿ ಎನ್ನುವ  ಸಸ್ಯದ ಭಾಗವನ್ನು ಕಿತ್ತು ಕೈಯಲ್ಲಿ ಹಿಡಿದು ತೆರೆದು ಬಿಡಿಸಿದರೆ, ಒಳಗೆ ಹುಳು/ಕೀಟಗಳಿರುವುದು ತಿಳಿಯುತ್ತದೆ. ಅತ್ತಿ ಹಣ್ಣು, ಅಂಜೂರದ ಹಣ್ಣು -ಇವುಗಳಲ್ಲಿ   ಹುಳುಗಳಿರುವ ಹಣ್ಣುಗಳನ್ನು ತಿನ್ನುವುದು ಹೇಗಪ್ಪ, ಅಂತಲೋ ಅಥವಾ ಹುಳು ಇರುವುದರಿಂದ ತಿನ್ನದಂತೆಯೂ ಇರುತ್ತೀರಿ. ಈ ಸಂಕುಲದ ಸಸ್ಯಗಳು ಹೂವುಗಳನ್ನು ಬಿಡುವ ಇತರೇ ಸಸ್ಯಗಳಂತೆ ಬಯಲಿಗೆ ತೆರೆದು ಕಾಣುವಂತೆ ಅರಳಿಸುವುದಿಲ್ಲ. ಬದಲಿಗೆ ಹೂಗೊಂಚಲನ್ನೇ ಸೈಕೊನಿಯಂ (Syconium) ಎಂದು ಕರೆಯಲಾಗುವ ಸಂಗ್ರಾಹಕದಲ್ಲಿಟ್ಟಿರುತ್ತದೆ. ಇದನ್ನೇ ನಾವು ಹಣ್ಣು ಅಥವಾ ಕಾಯಿ ಎಂದು ಕರೆಯುತ್ತೇವೆ. ಅವುಗಳ ಪರಾಗಸ್ಪರ್ಶಕ್ಕೆ ಕೀಟಗಳ ಭೇಟಿಯ ಸಂಗತಿ, ಹಣ್ಣು ಯಾವುದು, ಹೂವು ಯಾವುದು, ಎಂಬುದೆಲ್ಲವೂ ದೊಡ್ಡ ಹಾಗೂ ರಮ್ಯವಾದ ಕಥೆ! ಇವನ್ನೆಲ್ಲವನ್ನೂ ಮುಂದೆ ವಿವರವಾಗಿ ನೋಡೋಣ.

                ಸಸ್ಯವೈಜ್ಞಾನಿಕ ಅರ್ಥದಲ್ಲಿ ಈ ಫೈಕಸ್‍ ಗಳಿಗೆ ಅಥವಾ ಆಲ ಅತ್ತಿ ಅರಳಿಗಳಿಗೆ ಹೂವು, ಹಣ್ಣುಗಳನ್ನು ನಾವು ಅಂದುಕೊಂಡದ್ದರಲ್ಲಿ ಕಾಣಲಾಗದು. ಹಣ್ಣು ಎಂದುಕೊಂಡದ್ದೂ ಹಣ್ಣಲ್ಲ, ನಾವು ತಿನ್ನಬಹುದಾದದ್ದು ಹೂಗೊಂಚಲಿನ ತಳದ ಪುಷ್ಪಪಾತ್ರೆಯ ರಸಭರಿತ ಭಾಗ.  ಪುಟ್ಟ ತೊಟ್ಟಿನಿಂದ ಇಳಿಬಿದ್ದ ಅಂತಹದ್ದನ್ನು ಕಾಣಬಹುದು. ಸಾಮಾನ್ಯವಾದ ಅಂಜೂರವನ್ನು ಕೈಯಲ್ಲಿ ಹಿಡಿದು ಬಿಡಿಸಿ ತೆರೆದಾಗ ಅದರ ರಸಭರಿತ ಭಾಗದ ಮೇಲೆ ಹೂವಿನ ಭಾಗಗಳಿರುವುದನ್ನು ನೋಡಬಹುದು. ಅದರ ಮಧ್ಯೆ ಕೆಲವು ಮೊಟ್ಟೆಗಳೋ ಅಥವಾ ಹುಳುಗಳೋ ಕಂಡಾವು. ಅಂಜೂರದ ತಳದಲ್ಲಿ ಕಾಣುವ ರಂಧ್ರದಿಂದ ಈ ಕೀಟಗಳು ಒಳಹೊಕ್ಕಿರುತ್ತವೆ. ಅವುಗಳು ನಿಜಕ್ಕೂ ತಮ್ಮ ಸಂತಾನೋತ್ಪತ್ತಿಗಾಗಿ ಹುಡುಕಿಗೊಂಡ ಹೆರಿಗೆಮನೆ -ಅಂಜೂರದ (ಫೈಕಸ್) ಹಣ್ಣು! ಸೈಕೊನಿಯಂನ ಒಳಗಿನ ಹೂವುಗಳಲ್ಲಿನ ಗಂಡು-ಹೆಣ್ಣು ಭಾಗಗಳು ಒಂದನ್ನೊಂದು ಸಮಾಗಮವಾಗದಂತೆ ವಿಕಾಸಗೊಂಡಿವೆ. ಹಾಗಾಗಿ ಅದರೊಳಗಿನ ಹೆಣ್ಣು ಭಾಗ ಫಲವಂತವಾಗಲು ಬೇರೊಂದು ಹೂವಿನ ಪರಾಗವೇ ಬೇಕು. ಮೊಟ್ಟೆ ಇಡಲು ಬಂದ ಕಣಜವು (Wasp) ಮತ್ತೊಂದು ಅದೇ ಜಾತಿಯ ಹೂವಿಂದ ತಂದ ಪರಾಗವನ್ನು ಕೊಡುತ್ತದೆ. ಇಡೀ ಹೂವುಗಳನ್ನೆಲ್ಲಾ ಪುಟ್ಟ ಚೀಲದಂತಹಾ ಭಾಗದಲ್ಲಿ ಮುಚ್ಚಿಟ್ಟೂ, ಬೇರೊಂದು ಪರಾಗವನ್ನು ಬಯಸುವ ಸಸ್ಯದ ಕೌತುಕವನ್ನು ಹೇಗೆ ವರ್ಣಿಸುವುದು? ಇಂತಹಾ ಸಾಧ್ಯತೆಯನ್ನೂ ಒಂದೇ ಒಂದು ಗೊತ್ತಾದ ಪ್ರಭೇದದ ಕಣಜದ ಮೂಲಕ ವಿಕಾಸಗೊಳಿಸಿರುವ ನಿಸರ್ಗದ ಜಾಣತನವನ್ನು ಏನನ್ನುವುದು? ಇದೇ ನೋಡಿ ಪ್ರತೀ ಫೈಕಸ್ ಅನ್ನು ಫಲವಂತ ಮಾಡಲೆಂದೇ ಒಂದೊಂದು ಕಣಜವನ್ನು (ವ್ಯಾಸ್ಪ್) ನಿಸರ್ಗವು ಗುರುತಿಸಿದೆ. ಕೆಲವೊಮ್ಮೆ ಮಾತ್ರ ಎರಡು ಬಗೆಯ ಕಣಜಗಳು ಈ ಕ್ರಿಯೆಯಲ್ಲಿ ಭಾಗವಹಿಸುತ್ತವೆ. ಇಲ್ಲವಾದಲ್ಲಿ ಹೆಚ್ಚೂ ಕಡಿಮೆ ಇರುವ 850 ಪ್ರಭೇದಗಳ  ಫೈಕಸ್‍ ಗಳಿಗೆ ಹೆಚ್ಚು ಕಡಿಮೆ ಅಷ್ಟೇ ಬಗೆಯ ಕಣಜಗಳಿವೆ ಎಂದಾಯಿತು. ಈ ಹೂವು-ಹಣ್ಣು-ಬೀಜಗಳ ಮರ್ಮವು ಅರ್ಥವಾಗಲು ಸಾವಿರಾರು ವರ್ಷಗಳೇ ಬೇಕಾಯಿತು. ಅಷ್ಟಕ್ಕೂ ಕೀಟ ಮತ್ತು ಸಸ್ಯಗಳ ನಡುವೆ ಒಂದು ರೀತಿಯ ಒಪ್ಪಂದ ಕೂಡ ಇದ್ದುದರಿಂದ ಇಂತಹ ಸಖ್ಯ ಸಾಧ್ಯವಾಗಿದೆ.

                ಅಂಜೂರದಂತಹಾ ಹಣ್ಣು (ಸೈಕೊನಿಯಂ)ಗಳಲ್ಲಿ ಹೀಗೆ ಕೀಟಗಳು ಒಳಗೆ ಹೋಗಿ-ಬರುವ ತಮಾಷೆಯನ್ನು ಮೊಟ್ಟ ಮೊದಲು ಗುರುತಿಸಿದ್ದು ದಾರ್ಶನಿಕ ಥಿಯೊಪ್ರಾಸ್ಟಸ್ ಎಂಬ ಸಸ್ಯವಿಜ್ಞಾನಿ. ಆತನನ್ನು ಸಸ್ಯವಿಜ್ಞಾನದ ಪಿತಾಮಹ ಎನ್ನಲಾಗುತ್ತದೆ. ಆತ ಗ್ರೀಕ್ ದೇಶದವರು. ಐರೋಪ್ಯರಿಗೆ ಈ ಫೈಕಸ್ಗಳು ಪರಿಚಯವಾಗಿದ್ದು ಮೆಸಿಡೋನಿಯಾದ ದೊರೆ ಅಲೆಕ್ಸಾಂಡರ್ನಿಂದ. ಗ್ರೀಕಿನವನಾದ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಕ್ರಿ.ಪೂ. 326ರಲ್ಲಿ ಬಂದಾಗ ಗುಜರಾತಿನಲ್ಲಿ ಮೊಟ್ಟ ಮೊದಲು ಅಪಾರ ಛಾವಣೆಯುಳ್ಳ ಆಳದ ಮರವನ್ನು ನೋಡಿ ಆ ಮಾಹಿತಿಯನ್ನು ಯೂರೋಪಿಗೆ ತಲುಪಿಸಿದ. ಹಾಗಾಗಿ ಮೊದಲು ಫೈಕಸ್ ಜಾತಿಯ ಮರವನ್ನು ಕಂಡ ಯೂರೋಪಿಯನ್ ಎಂದರೆ ಅಲೆಕ್ಸಾಂಡರ್. ಮುಂದೆ ಥಿಯೋಪ್ರಾಸ್ಟಸ್ ಸಸ್ಯಕುತೂಹಲದ ಹಿಂದೆ ಹೋಗಿ ಪ್ರಾಥಮಿಕ ಸಂಗತಿಗಳ ಹರಿಕಾರರಾದರು. ಆದರೂ ಅದೆಲ್ಲವೂ ವಿಜ್ಞಾನದಲ್ಲಿ ಚರ್ಚೆಗೆ ಒಳಗಾಗುತ್ತಲೆ ಸಾವಿರಾರು ವರ್ಷಗಳನ್ನು ಸವೆಸಿದವು. ಏಕೆಂದರೆ ನೋಡಲು ಮುಚ್ಚಿಕೊಂಡಂತ್ತಿದ್ದರೂ ಅದು ಹೇಗೆ ಇಷ್ಟೊಂದು ಹುಳುಗಳು? ಅಷ್ಟೆಲ್ಲಾ ಹುಳುಗಳಿದ್ದರೂ ಹಣ್ಣೂ ಕೂಡ ತಿನ್ನಲು ಬರುವಂತೆ ಉಳಿದ್ದಾದರೂ ಹೇಗೆ? ಇದೊಂದು ಮಾಯಾಲೋಕವೇ ಆಗಿತ್ತು. ಅದೆಲ್ಲವನ್ನೂ ಒಂದೊಂದಾಗಿ ಬಿಡಿಸಿ ಕೊನೆ ಮುಟ್ಟಿಸಲು ಕರ್ನಾಟಕದ ನೆಲದ ಮರಗಳೂ ಸೇರಿದಂತೆ ಹಲಾವರು ಮರಗಳು ಪಾಲ್ಗೊಂಡಿವೆ.  ನಮ್ಮ ರಾಜ್ಯದವರೇ ಆದ ಪ್ರೊ. ಕೆ.ಎನ್. ಗಣೇಶಯ್ಯನವರು ಸಹಾ ಇದರ ಕುತೂಹಲದ ಕೆಲವು ನಿಗೂಢಗಳನ್ನು ಬಿಚ್ಚಿಟ್ಟ ವಿಜ್ಞಾನಿ. ಅದೆಲ್ಲವೂ ನಿಜಕ್ಕೂ ರಮ್ಯವಾದ, ಬೃಹತ್ತಾದ ಕಥನವೇ! ಅಂತೂ ಕಣಜ-ಫೈಕಸ್ ಎರಡೂ ಸಾಹಚರ್ಯದಿಂದ ಜೀವನ ಸಂಬಾಳಿಸಿ 80 ದಶಲಕ್ಷ ವರ್ಷಗಳನ್ನು ಸವೆಸಿವೆ. ಯಾವುದೇ ಒಂದು ಸ್ವಜಾತಿ ಪಕ್ಷಪಾತಿಯಾಗಿದ್ದಲ್ಲಿ ಎರಡೂ ಇರುತ್ತಿರಲಿಲ್ಲ. ಇದೆಲ್ಲವೂ ಮಾನವ ಕುಲದ ತಿಳಿವಳಿಕೆಯಲ್ಲಿ ಬರಲು ಸಾಕಷ್ಟು ಬೌದ್ಧಿಕ ಕಸರತ್ತು ನಡೆದಿದೆ. ಜೀವ-ಜೀವಗಳ ನಡುವೆ ಸಂಘರ್ಷ ರಹಿತವಾಗಿ ಹೊಂದಾಣಿಕೆಗೆ ಅಪೂರ್ವ ಸಾಕ್ಷಿಯಾಗಿವೆ. ಎರಡೂ ಬಾಳಿ ಬದುಕ ಬೇಕೆಂದರೆ ವರ್ಷ ಪೂರ್ತಿ ಒಂದಲ್ಲಾ ಒಂದು ಮರ ಹಣ್ಣು ಬಿಡಬೇಕು, ಕಣಜಗಳೂ ಮರಕ್ಕೆ ಬರುತ್ತಿರಬೇಕು. ಹಾಗಾಗಿ ಫಿಗ್‍ ಗಳು ವನ್ಯ-ಜೀವಿ ಸಂಕುಲವನ್ನು ಇತರೇ ಯಾವುದೇ ಗಿಡ-ಮರಗಳಿಗಿಂತಲೂ ಹೆಚ್ಚಾಗಿ ಸಾಕುತ್ತಿವೆ.

                ಹೂವು ಕಾಣುವುದಿಲ್ಲ ನಿಜ! ಆದರೆ, ಬೇರುಗಳನ್ನು ತೆರೆದಿಡುವುದೆಂದರೇನು? ಹೌದು, ಈ ಸಂಕುಲದ ಬಹುಪಾಲು ಸಸ್ಯಗಳು ಬೇರುಗಳನ್ನು ಗಾಳಿಯಲ್ಲಿ ತೇಲಿಬಿಡುತ್ತವೆ. ಕೆಲವು ಪ್ರಭೇದಗಳಲ್ಲಿ ಹತ್ತಾರು ವರ್ಷ, ಹಾಗೆಯೆ ತೆರೆದೇ ಇದ್ದು, ಮುಂದೊಮ್ಮೆ ನೆಲಕ್ಕೆ ಆತುಕೊಂಡು, ಅವುಗಳೇ ಮೂಲ ಕಾಂಡವೆಂಬಂತೆ ಕಾಣುತ್ತವೆ. ಅಲ್ಲದೆ ವಿವಿಧ ಬೇರುಗಳ ಬಗೆಗಳೂ ವಿಚಿತ್ರವೇ. ಅವುಗಳ ಕಥನಗಳು ಅಷ್ಟೇ. ಅನೇಕರಿಗೆ ತಮ್ಮ ಬಾಲ್ಯದಲ್ಲಿ ಇಳಿ ಬಿದ್ದ ಬೇರುಗಳಿಗೆ ಜೋಕಾಲಿ ಆಡಿದ್ದು ನೆನಪಾಗಬಹುದು. ಅಷ್ಟೇಕೆ ಮಕ್ಕಳಿಗೆ ಹಾಗೂ ಯಾರಿಗಾದರೂ ಜೋಕಾಲಿ ಆಡಲೂ ಮನಸಾದೀತು. ಸಸ್ಯಸಂಗತಿಗಳ ಆಸಕ್ತರಿಗೆ ಬೇರುಗಳ ಬಗೆಗೆ ಅವು ಮೂಲತಃ ನೀರು ಹೀರಿಕೊಳ್ಳುವ ಭಾಗಗಳೆಂಬುದು ಚೆನ್ನಾಗಿ ಗೊತ್ತು. ಹಾಗಿದ್ದಾಗ ಹೀಗೆ ಗಾಳಿಗೆ ಇಳಿಬಿದ್ದ ಬೇರಿನ ಕೆಲಸವೇನು ಎಂಬ ಕುತೂಹಲವಿರಬಹುದು. ಈ ಕುತೂಹಲಕ್ಕೆ ತಮ್ಮದೇ ಸಮಾಧಾನದ ಉತ್ತರಗಳನ್ನೂ ಕಂಡುಕೊಂಡಿರುತ್ತೀರಿ. ನಮ್ಮ ದೇಸಿ ದಾಖಲೆಗಳಂತೂ ಅದೇ ಕೆಲಸವನ್ನೇ ಮಾಡಿವೆ. ಹೆಚ್ಚಿನ ವೈಜ್ಞಾನಿಕ ಉತ್ತರಗಳು ಅಪರೂಪ. ಬೇರಿರುವ ಕಡೆ ನೀರಿರುವ ಅನುಮಾನವನ್ನೇ ಸಹಜವಾಗಿಸಿ, ಇಂತಹ ಬೇರುಗಳ ಸುತ್ತಲಿನ ವಾತಾವರಣದಲ್ಲಿ ಹೆಚ್ಚು ತೇವಾಂಶ ಇರಬಹುದಾದ ವಿಚಾರವನ್ನು ನಂಬಿಕೊಂಡವರೇ ಹೆಚ್ಚು. ಇವನ್ನೆಲ್ಲಾ ವೈಜ್ಞಾನಿಕವಾಗಿ ಪತ್ತೆ ಹಚ್ಚುವ ಕೆಲಸಗಳೂ ಆಗಿವೆ.

                ಬೇರಿನ ಮೂಲ ಕೆಲಸ, ಬುಡವನ್ನು ಭದ್ರವಾಗಿಸಿ ಗಿಡಕ್ಕೊಂದು ಅಡಿಪಾಯ ಹಾಕಿಕೊಡುವುದು. ಜತೆಯಲ್ಲಿ ಸಸ್ಯ ಬೆಳವಣಿಗೆಗೆ ಬೇಕಾದ ನೀರು, ಖನಿಜಾಂಶಗಳ ಹೀರಿಕೊಂಡು ಕಾಂಡಕ್ಕೆ ವರ್ಗಾಯಿಸುವುದು. ಇದನ್ನೇ ಆಧಾರವಾಗಿಟ್ಟು ಫೈಕಸ್‍ ಗಳ ಇಳಿಬಿದ್ದ ಬೇರುಗಳನ್ನು ಒರೆಹಚ್ಚಿ ನೋಡಲಾಗಿದೆ. ಈ ಬೇರುಗಳೂ ಕೂಡ ತಮ್ಮ ದ್ರವ್ಯರಾಶಿಯನ್ನು ಹೆಚ್ಚಿಸಿಕೊಳ್ಳಲೂ ಕೂಡ ನೆಲಕ್ಕೆ ಆತುಕೊಂಡ ಬೇರಿನಿಂದಲೇ ಹೀರಿದ ನೀರನ್ನು ಬಳಸುತ್ತವೆ. ಕೆಲವೊಮ್ಮೆ ಈ ಬೇರುಗಳು ಹಸಿರಾಗಿ ಇರುವುದನ್ನೂ ಗಮನಿಸಿರಬಹುದು. ನಿಜ, ಅವೂ ಕೂಡ ಕೆಲವೊಮ್ಮೆ ಎಲೆಗಳ ಕೆಲಸವನ್ನೂ ಮಾಡುತ್ತವೆ. ಅಂದರೆ ಆಹಾರ ತಯಾರಿಯಲ್ಲಿ ಭಾಗವಹಿಸುತ್ತವೆ. ಆಗ ಬೇಕಾದ ನೀರನ್ನೂ ನೆಲದ ಬೇರಿನಿಂದಲೇ ಪಡೆಯುತ್ತವೆ. ಆದರೂ ಕೆಲವೊಮ್ಮೆ ಇಂತಹಾ ಬೇರಿನ ಸುತ್ತಲಿನ ವಾತಾವರಣದ ಗಾಳಿಯಲ್ಲಿ ಒಂದಷ್ಟು ತೇವಾಂಶವು ಹೆಚ್ಚಿರುವುದನ್ನು ಕೆಲವು ಅಧ್ಯಯನಗಳು ಸಾಬೀತು ಮಾಡಿವೆ. ಯಾರಿಗಾದರೂ ಆಲ ಅಥವಾ ಅರಳಿಯ ಮರದ ನೆರಳಿನ ಸುಖದ ಅನುಭವ ಇದ್ದರೆ, ಅದರ ಪರಿಚಯವಿದ್ದೇ ಇರುತ್ತದೆ.       

                ಇಂತಹ ಕುತೂಹಲಗಳಿಗೆ ಆಸಕ್ತಿಯನ್ನು ಹುಟ್ಟುಹಾಕಿದ ವಿವರಗಳು 19ನೆಯ ಶತಮಾನದ ಆರಂಭದಲ್ಲೇ ಕಂಡು ಬರುತ್ತವೆ. ಸಸ್ಯಯಾನದಲ್ಲಿ ಹಿಂದೊಮ್ಮೆ ಚಹಾದ ಕಥನವನ್ನು ಓದಿದ್ದರೆ, ನಿಮಗೆ ಚಹಾವನ್ನು ಚೀನಾದಿಂದ ಹೊರಜಗತ್ತಿಗೆ ತೆರೆದುಕೊಟ್ಟ ರಾಬರ್ಟ್‍ ಫಾರ್ಚೂನ್ ಎಂಬ ಸಸ್ಯವಿಜ್ಞಾನಿಯ ಪರಿಚಯವಾಗಿರುತ್ತದೆ.  ಆತ ಚೀನಾದಿಂದ ಹಾಂಗ್ ಕಾಂಗ್ ಮೂಲಕ ಹಾಗೂ ಮತ್ತಿತರ ಹಾದಿಯಿಂದ ದಕ್ಷಿಣದ ಕಡೆಗೆ ಬರುವಾಗ ಕಂಡ ಈ ಸಂಕುಲದ ಮರಗಳ ವರ್ಣನೆಯನ್ನು ಅದರ ನೆರಳ ತಂಪಿನ ಆನಂದವಾಗಿಸಿ ಹಂಚಿದ್ದಾರೆ. ದಟ್ಟ ಬಿಸಿಲನ್ನೇ ನುಂಗಿ ನೆರಳಾಗಿಸಿ ಒಳಗೆಲ್ಲಾ ತಂಪನಿಟ್ಟ ಮರಗಳೆಂದು ಕರೆದಿದ್ದಾರೆ. ಇದನ್ನೇ ಬೆನ್ನು ಹತ್ತಿ ಹುಡುಕಾಟದಲ್ಲಿ ನಿರತರಾದ ಚೀನಿ ಸಂಶೋಧಕರು ಬೇರುಗಳ ಅಂಗರಚನಾ ವಿನ್ಯಾಸವನ್ನು ದಾಖಲು ಮಾಡಿದ್ದಾರೆ.  ನಿಜಕ್ಕೂ ಇಂತಹಾ ಬೇರುಗಳ ವಿಕಾಸದ ಕುರಿತು ಹೆಚ್ಚು ಅಧ್ಯಯನಗಳಾಗಿಲ್ಲ. ಹಾಗಾಗಿ ಬೇರುಗಳ ಕುರಿತಂತೆ ಹೆಚ್ಚಿನ ತಿಳಿವು ದಕ್ಕಿಲ್ಲ.  ಇಂತಹ ಬೇರುಗಳ ಹುಟ್ಟು ಮತ್ತು ಬೆಳವಣಿಗೆಯು ವಾತಾವರಣದ ತೇವಾಂಶವನ್ನು ಅವಲಂಬಿಸಿರುವ ಬಗ್ಗೆ ಕೆಲವೊಂದು ಸಂಗತಿಗಳನ್ನು ಚೀನಿಯರು ಅರಿತು ಹಂಚಿದ್ದಾರೆ. ಗಾಳಿಯಲ್ಲಾಡುವ ಬೇರುಗಳು ಬೆಳವಣಿಗೆಯನ್ನು ಆರಂಭಿಸುವುದು ವಸಂತದ ಜೊತೆಯಲ್ಲಿ! (ಫೆಬ್ರವರಿ ಕೊನೆಯ ಭಾಗದಿಂದ ಅಕ್ಟೋಬರ್ ಮೊದಲ ಭಾಗದವರೆಗೆ) ಆಗ ವಾತಾವರಣದ ಉಷ್ಣತೆಯ ಜೊತೆಗೆ ತೇವಾಂಶವೂ ಏರುತ್ತಾ ಹೋಗಿ ಮುಂದೆ ಚಳಿಗಾಲದ ಸಮಯದಲ್ಲಿ ಒಣ ಹವೆಯಲ್ಲಿ ಕಡಿಮೆಯಾಗಲು ಅನುವಾಗುತ್ತದೆ. ಈ ನಡುವಿನ ಸಮಯದಲ್ಲೇ ಈ ಬೇರುಗಳೂ ಬೆಳೆಯುತ್ತವೆ. ತೇವಾಂಶವು ಕಡಿಮೆಯಾಗಲು ಆರಂಭಿಸಿದಂತೆ ಬೆಳವಣಿಗೆಯೂ ನಿಲ್ಲುತ್ತದೆ. ವಾತಾರವರಣದಿಂದ ನೇರವಾಗಿ ಈ ಬೇರುಗಳು ತೇವಾಂಶ ಹೀರುವ ಬಗೆಗಿನ್ನೂ ದೃಢವಾದ ಸತ್ಯವು ತಿಳಿಯಬೇಕಿದೆ. ಆದರೆ ತೇವಾಂಶ ಹೆಚ್ಚಿದ್ದಾಗಲೇ ಬೆಳೆಯುವುದೂ ಕೂಡ ವಿಜ್ಞಾನಕ್ಕೆ ಕುತೂಹಲವೇ ಆಗಿದೆ. 

                ಈ ಸಂಕುಲದ ಮರಗಳಲ್ಲಿ ಒಂದಾದ ಫೈಕಸ್ ಎಲಾಸ್ಟಿಕಾ -ಇಂಡಿಯನ್ ರಬ್ಬರ್ ಗಿಡ-ದ ಬೇರುಗಳ ಕುರಿತ ಅತ್ಯದ್ಭುತ ಸಂಗತಿಯೊಂದು ಇದೆ. ಈ ಪ್ರಭೇದದ ತೇಲುವ ಬೇರುಗಳನ್ನು ಬಳಸಿ ಮೇಘಾಲಯದಲ್ಲಿ ಖಾಸಿ ಬುಡಕಟ್ಟುಗಳ ಸಮುದಾಯಗಳು ಹಲವಾರು ಜೈವಿಕ ಸೇತುವೆಗಳನ್ನು ನಿರ್ಮಿಸಿವೆ.  ಗಾಳಿಯಲ್ಲಾಡುವ ಬೇರುಗಳನ್ನು ಸುಮಾರು 15ರಿಂದ 30 ವರ್ಷಗಳ ಕಾಲ ಜೋಡಿಸುತ್ತಾ ಬೆಳೆಸಿ 15 ಅಡಿಯಿಂದ 240 ಅಡಿಗಳ ಉದ್ದವಾಗುವಷ್ಟು ಜೈವಿಕ ಸೇತುವೆಗಳನ್ನು ನಿರ್ಮಿಸಿದ್ದಾರೆ. ನದಿಗಳ, ತೊರೆಗಳ ದಾಟಲು ನಿರ್ಮಿಸಿದ ಈ ಜೈವಿಕ ಸೇತುವೆಗಳು ಖಾಸಿ ಬುಡಕಟ್ಟು ನಿಸರ್ಗದೊಂದಿಗೆ ಹೊಂದಿರುವ ಸಾಹಚರ್ಯದ ಕುರುಹಾಗಿದೆ. ಜೊತೆಗೆ ಈ ರಬ್ಬರ್ ಗಿಡವು ಕೊಟ್ಟ ಬಹು ದೊಡ್ಡ ಸಹಾಯವೂ ಅಲ್ಲಿದೆ. ಇವೆಲ್ಲವೂ ದಟ್ಟ ಅರಣ್ಯದ, ಅತೀ ಮಳೆ ಬೀಳುವ ಪ್ರದೇಶಗಳಾಗಿವೆ. ಹತ್ತಾರು ಇಂತಹಾ ಸೇತುವಗೆಳ ಅಧ್ಯಯನ ನಡೆಸಿದ ಸಂಶೋಧನಾ ಲೇಖನವೊಂದು ಕಳೆದ 2015ರ ಸೆಪ್ಟೆಂಬರ್ ನಲ್ಲಿ ಸ್ವಿಜರ್ ಲ್ಯಾಂಡ್ ನಲ್ಲಿ ನಡೆದ ರಾಚನಿಕ ಇಂಜನಿಯರಿಂಗ್ (Structural Engineering)  ನ ಅಂತರರಾಷ್ಟ್ರೀಯ ಸೆಮಿನಾರಿನಲ್ಲಿ ಅಚ್ಚರಿಯ ಚರ್ಚೆಗಳನ್ನು ಉಂಟುಮಾಡಿತ್ತು. ಅತ್ಯಂತ ಪ್ರಬುದ್ಧ ಹಾಗೂ 5-6 ಶತಮಾನಗಳಷ್ಟು ದೀರ್ಘಕಾಲ ಬಾಳಬಲ್ಲ ಸೇತುವೆಗಳೂ ಇವಾಗಿವೆ. ಇಂತಹಾ ಜೈವಿಕ ಸೇತುವೆಗಳನ್ನು ಮೊಟ್ಟ ಮೊದಲು ಬ್ರಿಟೀಷ್ ಸೈನ್ಯಾಧಿಕಾರಿ ಹೆನ್ರಿ ಯೂಲ್ ಅವರು 1844ರಲ್ಲಿ ದಾಖಲಿಸಿದ್ದಾರೆ. ನೂರಾರು ವರ್ಷಗಳ ಕಾಲ ಬಾಳಿಕೆ ಬರುವ ಹಾಗೂ ನಿಸರ್ಗ ಸ್ನೇಹಿಯಾದ ಅದ್ಭುತಗಳಾಗಿವೆ. ಇವುಗಳ ನಿರ್ಮಿತಿಯೂ ಸಂಪೂರ್ಣ ನಿಸರ್ಗ ಸ್ನೇಹಿ. ಕೇವಲ ಕೈಯಿಂದಲೇ, ಯಾವುದೇ ಯಂತ್ರಗಳ-ತಂತ್ರಗಳ ನೆರವಿಲ್ಲದೆ, ಬೇರುಗಳಿನ್ನೂ ಎಳೆಯದಾಗಿದ್ದಾಗಲೆ ತರಬೇತುಗೊಳಿಸಿ ನಿರ್ಮಿಸಲಾಗಿದೆ.

                ನಮಗೆಲ್ಲರಿಗೂ ಆಲದ ಮರದ ಬಿಳಲು-ಬೇರುಗಳು ಮುಂದೆ ಕಾಂಡಗಳಾಗಿ ಮರದ ಹರಹನ್ನು ಹೆಚ್ಚಿಸುತ್ತಾ ಅಪಾರ ಛಾವಣೆ ಸೃಷ್ಟಿಸುವುದು ತಿಳಿದೇ ಇದೆ. ಇಂದಿಗೂ ಛಾವಣೆಯ ಹರಹಿನಿಂದ ಜಗತ್ತಿನ ಅತ್ಯಂತ ದೊಡ್ಡ ಮರ ಎಂದರೆ -ಆಲದ ಮರ. ಸುಮಾರು 20,000 ಜನರನ್ನು ತನ್ನ ನೆರಳಲ್ಲಿ ಆಶ್ರಯ ಕೊಡ ಬಲ್ಲ ಮರವೊಂದು ಆಂಧ್ರ ಪ್ರದೇಶದಲ್ಲಿದೆ. ಅದಕ್ಕೊಂದು ಜಾಗತಿಕ ಮನ್ನಣೆ ಒದಗಿಸಿದ ಹಿರಿಯ ಕನ್ನಡಿಗರ ಕಥನವೂ ಆಲದೊಡನೆ ಬೆರೆತಿದೆ. ಇವೆಲ್ಲವನ್ನೂ ಜೊತೆಗೂಡಿಸಿಕೊಂಡು, ನಿಜಕ್ಕೂ “ಬೃಹತ್ತಾದ” ಆಲದ ಕಥನವನ್ನು ಮುಂದಿನವಾರವೇ ನೋಡೋಣ. 

                ಆಲ, ಅತ್ತಿ, ಅರಳಿ, ಗೋಣಿ, ಅಂಜೂರ….. ಇವೆಲ್ಲವುಗಳ ಜೊತೆಗೆ ಸರಿ ಸುಮಾರು 850 ಪ್ರಭೇದಗಳಿರುವ ಈ ಸಂಕುಲವು ಮಾನವ ಕುಲದ ಇತಿಹಾಸದ ನಿರ್ಮಿತಿಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತಲೇ ಬಂದಿದೆ. ಒಂದೊಂದರಲ್ಲೂ ಬೇರುಗಳ, ಹೂವುಗಳ ಹಾಗೂ ಅವುಗಳಲ್ಲಿಯೇ ಹುಟ್ಟಿ ಹೊರಬರುವ ಕಣಜಗಳ ಕುರಿತ ಕಥನಗಳಿವೆ. ನೂರಾರು ಮರಗಳು, ಗಿಡಗಳು, ಬಳ್ಳಿಗಳೂ ಇರುವ ಈ ಸಂಕುಲವು ಅತ್ಯಂತ ಜೀವಿಪರ ಅನುಸಂಧಾನವನ್ನು ಲಕ್ಷಾಂತರ ವರ್ಷಗಳ ಕಾಲವೂ ಉಳಿಸಿಕೊಂಡು ಬಂದಿದೆ. ಅದೆಲ್ಲವೂ ಅತ್ಯದ್ಭುತ ಕಥನ. ಈ ಸಂಕುಲದ ಸಸ್ಯಗಳೊಡನೆ ಸಾಹಚರ್ಯ, ಸಂಘರ್ಷ, ಕೊಲೆ, ಸುಲುಗೆ, ಆತ್ಮಹತ್ಯೆಗಳೇ ಅಲ್ಲದೆ, ಸಮಾರಂಭಗಳ, ವಹಿವಾಟುಗಳ, ಆದರ್ಶ ಅನುಭೂತಿಯ ದಾರ್ಶನಿಕ ವಿಕಾಸವೂ ಸೇರಿದಂತೆ, ಸಹಸ್ರಾರು ಜೀವಿಗಳ ಬದುಕಿನ ಚಿತ್ರಗಳಿವೆ. ಭಾರತ ಉಪಖಂಡವೂ ಸೇರಿದಂತೆ ದಕ್ಷಿಣ ಏಶಿಯಾದ ತವರಿನಲ್ಲಿ ವಿಕಾಸಗೊಂಡ ಈ ಫೈಕಸ್ಗಳು ಉಷ್ಣವಲಯ ದಾಟಿ, ಸಮಶೀತೋಷ್ಣವಲಯದಲ್ಲೂ ನೆಲೆಯಾಗಿ ಬೆರಗಿನ ಜೈವಿಕತೆಗಳನ್ನು ಹರಡಿವೆ. ಇರುವ ನೂರಾರು ಪ್ರಭೇದಗಳೂ ಹತ್ತಾರು ಬಗೆಯ ಜೈವಿಕ ವರ್ತನೆಗಳನ್ನು ಒಂದೇ ಬಗೆಯಲ್ಲಿ ನಿರ್ವಹಿಸುತ್ತಿರುವುದಲ್ಲದೇ, ಬಗೆ ಬಗೆಯ ವಿವಿಧತೆಯನ್ನೂ ವಿಕಾಸಗೊಳಿಸಿವೆ. ಈ ಕುಲದ ಗಿಡ-ಮರಗಳು ತಮ್ಮ ಭಾಗಗಳಲ್ಲಿ ಕೆಲವನ್ನು ತೆರೆದಿಟ್ಟು- ಕೆಲವನ್ನು-ಬಚ್ಚಿಟ್ಟರೂ ಆ ಮೂಲಕ ಮಾನವರೂ ಸೇರಿದಂತೆ ಇತರೇ ಜೀವಿಗಳೊಡನಾಟವನ್ನು ಬಚ್ಚಿಟ್ಟಿಲ್ಲ, ವಿಕಾಸಗೊಳಿಸಿ, ಉಳಿಸಿ, ಬೆಳೆಸುತ್ತಲೇ ಇವೆ. ಕೆಲವೊಂದು ಸಸ್ಯಗಳ ಕಥನಗಳನ್ನು ಈ ಸಸ್ಯಯಾನದಲ್ಲಿ  ಅನುಸಂಧಾನಿಸಿ ಮುಂದೆ ಆನಂದಿಸೋಣ. ಹಾಗೆಯೇ ನಮ್ಮ-ನಿಮ್ಮೆಲ್ಲರ ಮೂಲಕ ಹಂಚೋಣ. ಜೀವಪರ ಸಹಯಾನದ ಸಾಕ್ಷಿಯಾಗಿರುವ ಅವುಗಳಿಂದ ಸಾಧ್ಯವಾದರೆ ಒಂದಷ್ಟು ಕಲಿಯೋಣ.

ನಮಸ್ಕಾರ. .  ಚನ್ನೇಶ್..

This Post Has 2 Comments

  1. ಡಾ. ನರಸಿಂಹಮೂರ್ತಿ. ಆರ್

    ಮಾಹಿತಿಪೂರ್ಣ, ಉಪಯುಕ್ತ ಹಾಗೂ ಆಕರ್ಷಕ ಲೇಖನಗಳು. ಸಾಮಾನ್ಯರಿಗೂ ಅರ್ಥವಾಗಬಲ್ಲ ರೋಚಕ ಶೈಲಿ. ಅರಿವನ್ನು ಹೆಚ್ಚಿಸುವ ಬರವಣಿಗೆಗಾಗಿ ಲೇಖಕರಿಗೆ ಧನ್ಯವಾದಗಳು. -ನರಸಿಂಹಮೂರ್ತಿ. ಆರ್

  2. ಶಶಿರಾಜ ಆಚಾರ್ಯ

    ಅದ್ಭುತ ಬರಹ

Leave a Reply