You are currently viewing ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ”  Solanum lycopesicum (ಭಾಗ-1)

ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ದಿನವೂ ಒಂದಲ್ಲಾ ಒಂದು ಆಹಾರದ ಮೂಲಕ ನಮ್ಮ ಊಟದ ತಟ್ಟೆಯನ್ನು ಸೇರಿ ಬಳಕೆ ಆಗುತ್ತಿರುವ ತರಕಾರಿಗಳಲ್ಲಿ ಟೊಮ್ಯಾಟೊಗೆ ಬಹಳ ಪ್ರಮುಖವಾದ ಸ್ಥಾನವಿದೆ. ಇಷ್ಟೊಂದು ಜನಪ್ರಿಯವಾಗಿರುವ ಈ ತರಕಾರಿಯು, ಅದರ ಬಳಕೆಯ ತಿಳಿವಳಿಕೆಯ ನಂತರವೂ ಮಾನವಕುಲದ ಹೊಟ್ಟೆಯನ್ನು ಸೇರಲು ಎರಡು ಶತಮಾನಕ್ಕೂ ಹೆಚ್ಚು ಕಾಲ ಬೇಕಾಯಿತು ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಹಣ್ಣು ಪರಿಚಯಗೊಂಡು ಎರಡು ಶತಮಾನಗಳಿಗೂ ಹೆಚ್ಚು ಕಾಲ ತಿನ್ನಬಾರದ ಹಣ್ಣಾಗಿತ್ತು. ಬರಿ ತಿನ್ನಬಾರದ ಅಷ್ಟೇ ಅಲ್ಲ, ತಿನ್ನಲು ಸಾಕಷ್ಟು ಹೆದರಿಕೆಯನ್ನೂ ಸೃಷ್ಟಿಸಿತ್ತು. ಅದರ ಬಣ್ಣ, ಊದಿಕೊಂಡ ರೂಪ, ಸ್ವಲ್ಪವೇ ಹಿಸುಕಿದರೂ ಹೊರಹೊಮ್ಮುವ ರಸ, ಆ ರಸದ ಹುಳಿಯಾದ ಸ್ವಾದ ಕೂಡ ಭಯವನ್ನು ಹುಟ್ಟಿಸಿತ್ತು. ಒಂದು ವೇಳೆ ತಿಂದರೆ ರಕ್ತವೆಲ್ಲಾ ಹುಳಿಯಾಗುವ ಅಪಾಯವಿದೆ ಎನ್ನುವ ನಂಬಿಕೆಯನ್ನೂ ತಂದಿಟ್ಟಿತ್ತು. ಅದರ ಗಾಢ ಕೆಂಪು ಮಾನವ ಕುಲದ ಲೈಂಗಿಕ ಆಸಕ್ತಿಯನ್ನೂ ಮತ್ತೂ ಹೆಚ್ಚಿಸಿ ಜೀವಕ್ಕೆ ಮೋಸವಾಗಿಸೀತು ಎಂದೂ ಅನ್ನಿಸಿತ್ತು. ಆದರೆ ಇವೆಲ್ಲಾ ಅನುಮಾನಗಳಿಂದ ಹೊರ ಬಂದ ಮೇಲೆ ಅನೇಕ ವಿಶೇಷಗಳನ್ನು ಮಡಿಲಲ್ಲಿಟ್ಟು ಮಾನವಕುಲಕ್ಕೆ ಅತ್ಯಂತ ಆಪ್ತವಾದ ತರಕಾರಿಯಾಗಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲಾ ಕೃಷಿಗೆ ಒಗ್ಗಿಕೊಂಡ ಬೆಳೆಗಳ ಮಾಮೂಲಿ ತಿಳಿವಳಿಕೆಯನ್ನೂ ಬುಡ ಮೇಲು ಮಾಡಿ ತನ್ನ ಯಶಸ್ಸನ್ನು ಕಾಪಾಡಿಕೊಂಡ ವಿಶಿಷ್ಟವಾದ ಬೆಳೆ. ಟೊಮ್ಯಾಟೊ ಇಲ್ಲದೆ ಮನೆಗೆ ತರುವ ತರಕಾರಿಯ ಪಟ್ಟಿಯು ಪೂರ್ಣವಾಗುವುದೇ ಇಲ್ಲ. ಅಷ್ಟೊಂದು ಸಹಜವಾದ ತರಕಾರಿಯಾಗಿದೆ. ಹಾಂ.…! ಅಂದ ಹಾಗೆ ಒಂದು ಹಣ್ಣು, ತರಕಾರಿ ಎಂದು ಗುರುತಿಸಿಕೊಂಡು, ಬೇಯಿಸಿ ತಿನ್ನುವ ಹಣ್ಣಾಗಿ, ತನ್ನ ವಿಶೇಷತೆಯನ್ನು ಬೆಳೆಸಿಕೊಂಡಿದೆ. ವನ್ಯ ಮೂಲದಿಂದ ಮಾನವನ ಅಂಗಳಕ್ಕೆ ಬಂದು ಕೃಷಿಗೊಂಡು, ತನ್ನ ವಿವಿಧತೆಯಲ್ಲಿ ಕಡಿಮೆಯಾಗದೇ ಬದಲಾಗಿ ಹೆಚ್ಚಿಸಿ ಬೆಳೆದ ಕೀರ್ತಿಯೂ ಇದಕ್ಕಿದೆ. ಅದರ ಜೊತೆಗೇ ತನ್ನ ವನ್ಯ ಮೂಲವನ್ನು ಸಂಪೂರ್ಣವಾಗಿ ಪಡೆದಿಲ್ಲ. ಹಾಗಾಗಿ ಕೃಷಿಯಲ್ಲಿ ಒಳಗಾದ ತಳಿಗಳಿಗಿಂತಾ ಮತ್ತೂ ಹೆಚ್ಚಿನ ಆನುವಂಶಿಕ ಸತ್ವವನ್ನು ನಿಸರ್ಗದ ಸಂಪನ್ಮೂಲವನ್ನಾಗಿಯೇ ಕಾಪಾಡಿಕೊಂಡ ವಿಶೇಷ ಭಿನ್ನತೆಯೂ ಈ ಬೆಳೆಗೆ ಇದೆ. ಟೊಮ್ಯಾಟೊವನ್ನು ವಿಶೇಷವಾಗಿಸಿದ ಅವೆಲ್ಲವುಗಳ ವಿವರವೇ ಇಂದಿನ ಸಸ್ಯಯಾನ.

ಇಂದು ನಮ್ಮ ನಿಮ್ಮೆಲ್ಲರ ಅತ್ಯಂತ ಪ್ರೀತಿಯ ತರಕಾರಿಯಾಗಿರುವ ಟೊಮ್ಯಾಟೊ ಒಂದು ಹಣ್ಣಾಗಿ ಜನಪ್ರಿಯ. ಕಾಯಿಗಳನ್ನು ಬಳಸಿದರೂ ಸಹಾ ಹಣ್ಣೇ ಇದರ ಜನಪ್ರಿಯತೆಯನ್ನು ಹೆಚ್ಚಿಸಿರುವುದು. ಅಲ್ಲೊಮ್ಮೆ ಇಲ್ಲೊಮ್ಮೆ ಕಾಯಿಗಳು ಮಾರಾಟಕ್ಕೆ ಬಂದರೂ ಹಣ್ಣೇ ಹೆಚ್ಚು ಸ್ವಾಭಾವಿಕ. ಇದು ಹಣ್ಣೋ ತರಕಾರಿಯೋ ಎಂಬುದೂ ಕೂಡ ದೊಡ್ಡ ಸುದ್ದಿಯೇ! ಇನ್ನೇನು ರಸ ಉಕ್ಕಿ ಹೊರಹೊಮ್ಮಿಸೀತು ಎನ್ನುವಂತಹಾ ನೋಟವೇ ಅದಕ್ಕೆ ಟೊಮ್ಯಾಟೊ ಎಂಬ ಹೆಸರನ್ನು ಕೊಟ್ಟದ್ದು. ಟೊಮ್ಯಾಟೊ ಎಂಬ ಹೆಸರು ಸ್ಪ್ಯಾನಿಷ್‌ ಪದದಿಂದ ಹುಟ್ಟಿಕೊಂಡಿದೆ. ಇದನ್ನು ಹೆಸರಿಸುವ ಸ್ಪ್ಯಾನಿಷ್‌ ಪದವಾದ “ತೊಮ್ಯಾಟೆ”ಯು ಈ ಸಸ್ಯವು ಸ್ವಾಭಾವಿಕವಾಗಿರುವ ನೆಲಗಳಲ್ಲಿ ಒಂದಾದ ಮೆಕ್ಸಿಕನ್‌ ಮೂಲ ನಿವಾಸಿಗಳ ಭಾಷೆಯಾದ “ನಹೌತಿ”ಯಲ್ಲಿ ಕರೆಯುವ ಹೆಸರಾದ “ತೊಮಟ್ಸ್‌” ನಿಂದ ಹುಟ್ಟಿಕೊಂಡಿದೆ. ಹಾಗಾಗಿ ಮೂಲ ತೊಮಟ್ಸ್‌ ಮುಂದೆ ಸ್ಪಾನಿಷರಲ್ಲಿ ತೊಮ್ಯಾಟೆಯಾಗಿ ಹೊರಜಗತ್ತಿಗೆ “ಟೊಮ್ಯಾಟೊ” ಆಗಿದೆ. ಟೊಮ್ಯಾಟೊ ದಕ್ಷಿಣ ಅಮೆರಿಕಾ ಮೂಲದ್ದು. ಮೂಲದ ತೊಮಟ್ಸ್ ಎನ್ನುವುದು‌ “ತುಂಬಿಕೊಂಡು ರಸ ಉಕ್ಕುವ” ಎನ್ನುವ ಅರ್ಥವುಳ್ಳ ಹೆಸರು. ನಿಜ ತಾನೆ ಸಾಕಷ್ಟು ಮಾಗಿದ ಹಣ್ಣು ಇನ್ನೇನು ರಸವೆಲ್ಲಾ ಹೊರಹೊಮ್ಮುವಂತೆ ತುಂಬಿಕೊಂಡಹಾಗೆ ಕಾಣುವುದಲ್ಲವೇ?

ಟೊಮ್ಯಾಟೊ ಸಸ್ಯವು ಮೆಣಸಿನಕಾಯಿ, ಬದನೆಕಾಯಿ, ಆಲೂಗಡ್ಡೆಯ ಕುಟುಂಬವಾದ ಸೊಲನೇಸಿಯೆಗೆ ಸೇರಿದ ಸಸ್ಯ. ಕಾರ್ಲ್‌ ಲಿನೆಯಾಸ್‌ ಅವರು ಇದನ್ನೂ ಆಲೂ. ಬದನೆಯ ಸಂಕುಲದಲ್ಲೇ ವರ್ಗೀಕರಿಸಿ ಸೊಲನಮ್‌ ಲೈಕೊಪರ್ಸಿಕಂ (Solanum lycopesicum) ಎಂದೇ ಹೆಸರಿಸಿದ್ದರು. ಆದರೆ ಅವರ ಸಮಕಾಲೀನರಾಗಿದ್ದ ಹಾಗೂ ಲಿನೆಯಾಸ್‌ ಅವರ ವರ್ಗೀಕರಣ ಹಾಗೂ ನಾಮಕರಣವನ್ನು ಅಷ್ಟಾಗಿ ಒಪ್ಪದ ಸ್ಕಾಟ್‌ ಲ್ಯಾಂಡಿನ ಫಿಲಿಪ್‌ ಮಿಲ್ಲರ್‌ (Philip Miller) ಎಂಬ ಸಸ್ಯ ವಿಜ್ಞಾನಿಯು ಲೈಕೊಪರ್ಸಿಕನ್‌ ಎಸ್ಕಾಲೆಂಟಂ (Lycopersicon esculentum) ಎಂದು ಹೆಸರಿಸಿದ್ದರು. ಕಾರ್ಲ್‌ ಲಿನೆಯಸ್‌ ಅವರು ಫಿಲಿಪ್ಪರನ್ನೂ ಅದೆಷ್ಟು ಮೆಚ್ಚಿಕೊಂಡಿದ್ದರೆಂದರೆ, ಫಿಲಿಪ್‌ ಮಿಲ್ಲರ್‌ ಅವರ ಪ್ರಮುಖ ಪ್ರಕಟಣೆಯಾಗಿದ್ದ ತೋಟಗಾರಿಕಾ ನಿರ್ವಹಣೆಯ ನಿಘಂಟನ್ನು ತುಂಬಾ ಹೊಗಳುತ್ತಿದ್ದರಂತೆ. ಫಿಲಿಪ್‌ ಅವರು ಲಂಡನ್ನಿನ ಪ್ರಖ್ಯಾತ “ಔಷಧ ವನ”ವಾದ ಚಲ್ಸಿ ಫಿಸಕ್‌ ಗಾರ್ಡನ್‌(Chelsea Physic Garden)ನ ಮುಖ್ಯಾಧಿಕಾರಿಯಾಗಿದ್ದರು. ಇವರು ಟೊಮ್ಯಾಟೊವನ್ನು ಕರೆದಿದ್ದ ಲೈಕೊಪರ್ಸಿಕನ್‌ ಎಸ್ಕಾಲೆಂಟಂ (Lycopersicon esculentum) ಎಷ್ಟು ಜನಪ್ರಿಯವಾಗಿತ್ತು ಎಂದರೆ ಹೆಚ್ಚಿನ ಪಾಲು ಈಗಲೂ ಅದರಲ್ಲೂ ಭಾರತೀಯ ಪ್ರಕಟಣೆಗಳಲ್ಲಿ ಅದೇ ಹೆಸರು ಜನಪ್ರಿಯವಾಗಿದೆ. ಆದರೆ ಮೂಲ ಸೊಲನಮ್‌ ಕುಲದ ಎಲ್ಲಾ ಗುಣಗಳನ್ನು ಮರು ಪರೀಕ್ಷಿಸಿದ ಅಂತರರಾಷ್ಟ್ರೀಯ ಸಸ್ಯ ವರ್ಗೀಕರಣದ ಅನ್ವಯ ಅದನ್ನು ಮತ್ತೆ ಲಿನೆಯಸ್‌ ನಾಮಕರಣ ಮಾಡಿದ್ದ ಹೆಸರಿನಿಂದಲೇ ಕರೆಯಲಾಗುತ್ತಿದೆ. ಹಾಗಾಗಿ ಟೊಮ್ಯಾಟೊ ಮತ್ತೆ ಸೊಲನಮ್‌ ಸಂಕುಲದಲ್ಲೇ ಸ್ಥಾನವನ್ನು ಪಡೆದಿದೆ. ಹಾಗಾದರೆ ಈ ಎರಡೂ ಹೆಸರುಗಳ ವಿವರಗಳು ಟೊಮ್ಯಾಟೊಗೆ ಅದೆಷ್ಟು ಅರ್ಥ ಕೊಡುತ್ತಿವೆ, ನೋಡೋಣ.

ಟೊಮ್ಯಾಟೊ ಹೆಸರಿನಲ್ಲಿನ ಪ್ರಮುಖ ಪದವಾದ ಲೈಕೊಪರ್ಸಿಕನ್‌ (Lycopersicon) ಎಂದರೆ ಅರ್ಥ “ತೋಳದ ಪೀಚ್‌ (Wolf Peach)” ಮುಂದೆ ವಿವರಿಸುವ ಅದರ ವನ್ಯಮೂಲದಿಂದ ಕೃಷಿಗೆ ಬಂದ ಹಿನ್ನೆಲೆಯ ತಿನ್ನಬಾರದ ಹಣ್ಣಿನ ಕಾರಣದ ನೆನಪಿಗಾಗಿ ಹಾಗೆ ಕರೆಯಲಾಗಿದೆ. ಆದರೆ ಕಾರ್ಲ್‌ ಲಿನೆಯಾಸ್‌ ಅವರು ಸರಿಯಾಗಿಯೇ ಊಹಿಸಿ ಸೊಲನಮ್‌ ಅಂದರೆ ರಾತ್ರಿಯ ನೆರಳಿನ (ನೈಟ್‌ ಶೇಡ್ಸ್‌) ಕುಟುಂಬದ ಪ್ರಮುಖ ಸಂಕುಲದಲ್ಲಿರಿಸಿದ್ದರು. ಬದನೆ, ಮೆಣಸಿನಕಾಯಿ ಆಲೂ ಮುಂತಾದವನ್ನು ಅದೇಕೋ ಹೊಂದೊಮ್ಮೆ ಸ್ವಲ್ಪ ಭಯದ ಹಿನ್ನೆಲೆಯಲ್ಲಿ ನೋಡುತ್ತಿದ್ದ ವಾತಾವರಣವಿತ್ತೆಂದು ತೋರುತ್ತದೆ. ಹಾಗಾಗಿ ಸೊಲನಮ್‌ ಎಂಬ ಹೆಸರು ಉಳಿದುಕೊಂಡಿದೆ. ಈಗ ಎಲ್ಲಾ ಚರ್ಚೆಗಳ ತೀರ್ಮಾನದಂತೆ ಸೊಲನಮ್‌ ಲೈಕೊಪರ್ಸಿಕಂ (Solanum lycopesicum) ಎಂದೇ ಕರೆಯಬೇಕಿದೆ.

ಇಷ್ಟೆಲ್ಲಾ ಸಂಗತಿಗಳಿರುವ ಟೊಮ್ಯಾಟೊ ಅಷ್ಟು ಸುಲಭವಾಗಿ ಮಾನವ ಕುಲದ ಆಹಾರವಾಗಿಲ್ಲ. ಆಹಾರವಾದ ಮೇಲೂ ವಾದ ವಿವಾದಗಳನ್ನು ನಿಲ್ಲಿಸಿಲ್ಲ. ವಾದ-ಪ್ರತಿವಾದಗಳ ನಡುವೆಯೂ ತಿಳಿವಳಿಕೆಯಿಲ್ಲದ ಬಹು ದೀರ್ಘ ಚರ್ಚೆಗಳನ್ನೂ ಮುಂದುವರೆಸಿಯೇ ಇದೆ. ಇಷ್ಟೆಲ್ಲವುಗಳ ನಡುವೆ ತನ್ನತನವನ್ನು ಕಾಪಾಡಿಕೊಂಡು, ಉಳಿಸಿ, ಬೆಳೆಸಿಕೊಂಡು ಹೋಗುತ್ತಿದೆ. ಅವುಗಳನ್ನು ಒಳಗೊಂಡ ವಿವರಗಳು ಈ ಮುಂದಿವೆ. ಯಾವ ಸಸ್ಯವೂ ಸಹಾ ಅಷ್ಟು ಸುಲಭದಲ್ಲಿ ನೇರವಾಗಿ ನಮ್ಮ ಆಹಾರದ ಭಾಗವಾಗಿಲ್ಲ ನಿಜ. ಆದರೂ ಟೊಮ್ಯಾಟೊ ಬಹು ದೀರ್ಘವಾದ ಚರ್ಚೆಗಳ ನಡುವೆ ನಮ್ಮ ಆಹಾರದ ಭಾಗವಾಗಿದ್ದಂತೂ ವಿಶೇಷವಾಗಿದೆ. ನಮ್ಮ ನಿಮ್ಮೆಲ್ಲರ ಊಟದ ತಾಟಿನ ತರಕಾರಿಯಾಗಿರುವ “ಆಧುನಿಕ ಟೊಮ್ಯಾಟೊ” ವನ್ಯದಲ್ಲಿ ಇರುವಂತಹಾ ತಳಿಯಲ್ಲ. ವನ್ಯ ತಳಿಯು ಸಣ್ಣ ಮಿ.ಮೀ. ಗಾತ್ರದ ಪುಟ್ಟ ಹಣ್ಣು. ತುಂಬಾ ರಸಭರಿತವಾದ ಹಾಗೂ ಬಹಳ ಗಾಢವಾದ ಹುಳಿಯುಳ್ಳದ್ದು. ಮೂಲ ನೆಲೆಯಾದ ದಕ್ಷಿಣ ಅಮೆರಿಕಾ ಹಾಗೂ ಮಧ್ಯ ಅಮೆರಿಕಾದಲ್ಲಿ ಮಾತ್ರವೇ ಅದೂ ಕೇವಲ ವನ್ಯ ಸ್ಥಳಗಳಲ್ಲಿ ಇತ್ತು. ನಮ್ಮಲ್ಲಿಯೂ ಅಲ್ಲಲ್ಲಿ ಕಾಣಬಹುದಾದರೂ, ತುಂಬಾ ಕಡಿಮೆ. ಅದನ್ನು ಯಾರಾದರೂ ತಿನ್ನುವ ಮಾತಿರಲಿ, ನೋಡಿದರೂ ಹೆದರುತ್ತಿದ್ದರು. ಕಾರಣ ಅದರ ಬಣ್ಣಕ್ಕೆ ಆಕರ್ಷಿತರಾಗಿ ಮಕ್ಕಳೇನಾದರೂ ಬಾಯಿಗಿಟ್ಟರೆ ಅಂತಾ! ಇಂತಹದೇ ಹೆದರಿಕೆಯಿಂದ ಸುಮ್ಮನಿರದ ಮಗುವೊಂದು ಕುತೂಹಲಗೊಂಡು ಬಾಯಿಗಿಟ್ಟದ್ದೇ ಬಹು ದೊಡ್ಡ ಮಾತಾಗಿ ಅತ್ಯಂತ ಜನಪ್ರಿಯ ತರಕಾರಿಯಾಯಿತು. ಆ ಮಗುವೇ ತನ್ನ ಕುತೂಹಲವನ್ನು ತುಂಬಾ ನಾಜೂಕಾಗಿ ಪಳಗಿಸಿದ್ದಲ್ಲದೆ “ಮೊಟ್ಟ ಮೊದಲ ಆಧುನಿಕ ಟೊಮ್ಯಾಟೊ”ಗಳಿಗೆ ಕಾರಣವಾಯಿತು. ಆ ಮಗುವನ್ನೇ ಮುಂದೆ “ಆಧುನಿಕ ಟೊಮ್ಯಾಟೊ ತಳಿಗಳ ಪಿತಾಮಹಾ” ಎಂದೂ ಕೂಡ ಗುರುತಿಸುವಂತಾಯಿತು.

ಅಲೆಕಾಂಡರ್‌ ಲವಿಂಗ್‌ಸ್ಟನ್‌ (Alexander W. Livingston) ಆ ಕೂತೂಹಲಕ್ಕೆ ಕೈ- ಮತ್ತು ಬಾಯಿ ಹಾಕಿದ್ದ ಮಗು! ಜೊತೆಗೆ ಮುಂದೆ ಆಧುನಿಕ ಟೊಮ್ಯಾಟೊಗಳ ಜನಕ ಎನಿಸಿಕೊಂಡದ್ದೂ ಕೂಡಾ. ವನ್ಯ ಮೂಲದ “ವಿಷಯುಕ್ತ”ವೆಂದು ಕರೆಯಿಸಿಕೊಂಡ ಪ್ರಭೇದವು ಸೊಲನಮ್‌ ಪಿಂಪಿನೆಲ್ಲಿಫೋಲಿಯಂ (Solanum pimpinellifolium). ಸಾಧಾರಣ ಮಾತಿನಲ್ಲಿ ಪಿಂಪಿ ಹಣ್ಣು (Pimpi Fruit) ಲಿವಿಂಗ್‌ಸ್ಟನ್‌ ಮಗುವಾಗಿದ್ದಾಗ ಆತನ ತಾಯಿ ಆ ಹಣ್ಣುಗಳನ್ನು ತಿನ್ನದಂತೆ ಮಗು ಅಲೆಕ್ಸಾಂಡರಿನಿಗೆ ಹೆದರಿಸಿ, ತಾಕೀತು ಮಾಡಿದ್ದಳು. ಆದರೆ ಅಲೆಕ್ಸಾಂಡರ್‌ ಲಿವಿಂಗ್‌ಸ್ಟನ್‌ ಎಲ್ಲಾ ಮಕ್ಕಳಂತೆ ಕೇವಲ ಅಮ್ಮನ ಮಾತನ್ನು ಮೀರಿ ತನ್ನೊಳಗೆ ಮಾತ್ರವೇ ಆನಂದಿಸಲಿಲ್ಲ. ಜೊತೆಗೆ ಕೇವಲ ಬರಿ ಗೆಳೆಯರಿಗೆ ಅಷ್ಟೇ ಹೇಳಿ ಕುಣಿದು ಕುಪ್ಪಳಿಸಲಿಲ್ಲ. ಅಮ್ಮನಿಗೂ ಹೇಳಿ, ಗೆಳೆಯರಿಗೂ ಹೇಳಿ, ಜಗತ್ತಿಗೆ ತೆರೆದುಕೊಳ್ಳುವಂತೆ ಮೊಟ್ಟ ಮೊದಲ “ಲಿವಿಂಗ್‌ಸ್ಟನ್‌ ಸಸ್ಯ ತಳಿ ಕಂಪನಿ“ಯನ್ನೂ 1850ರ ಸುಮಾರಿಗೆ ಆರಂಭಿಸಿದರು.

ಅಲೆಕ್ಸಾಂಡರ್‌ ಲಿವಿಂಗ್‌ಸ್ಟನ್‌ ಅಮೆರಿಕಾದ ಓಹಯೊ(Ohio) ರಾಜ್ಯದ ರೆನಾಲ್ಡ್‌ಸ್ಬರ್ಗ್‌ (Reynoldsburg) ಹತ್ತಿರದ ವ್ಯವಸಾಯದ ಪ್ರದೇಶದಲ್ಲಿ ಕೃಷಿ ಕುಟುಂಬವೊಂದರ ಮಗುವಾಗಿ 14ನೆಯ ಅಕ್ಟೋಬರ್‌ 1821ರಲ್ಲಿ ಜನಿಸಿದ್ದರು. ಆತ ಹತ್ತು ವರ್ಷದವರಾಗಿದ್ದಾಗ ಆತನ ತಾಯಿ ತಮ್ಮ ಜಮೀನಿನಲ್ಲಿರುವ ವನ್ಯ ಟೊಮ್ಯಾಟೊಗಳನ್ನು ಪರಿಚಯಿಸಿದ್ದಲ್ಲದೆ ಅದರ ಭಯವನ್ನೂ ವಿವರಿಸಿ, ಎಚ್ಚರಿಸಿದ್ದಳು. ಕೊಲಂಬಸ್‌ ಅಮೆರಿಕೆಗೆ ಕಾಲಿಟ್ಟ ನಂತರದ ಬೆಳವಣಿಗೆಗಳಲ್ಲಿ ಬಹು ಮುಖ್ಯವಾದುದು ಎಂದರೆ ಜಗತ್ತಿನಾದ್ಯಂತ ವಸಾಹತುಗಳು ಹುಟ್ಟುಕೊಂಡದ್ದು. ಆಗೆಲ್ಲಾ ವಸಾಹತೀಕರಣದಿಂದ ಎಸ್ಟೇಟುಗಳು, ಕೃಷಿ ಬೆಳವಣಿಗೆಗಳೂ ಜೋರಾಗಿ ಆರಂಭವಾಗಿದ್ದ ಕಾಲ. 1600ರಲ್ಲೇ ಮೂಲ ಟೊಮ್ಯಾಟೊ ಸಸ್ಯವು ತಿಳಿವಳಿಕೆಗೆ ಬಂದಿತ್ತು. ಸುಮಾರು 200 ವರ್ಷಗಳಿಗೂ ಅಧಿಕ ಕಾಲ ಅದರ ತುಂಬಾ ತುಂಬಿಕೊಂಡಿದ್ದ ರುಚಿಯು ಭಯದೊಳಗೆ ಕಾಣದಾಗಿತ್ತು. ಲಿವಿಂಗ್‌ಸ್ಟನ್‌ 10ವರ್ಷದ ಮಗುವಾಗಿದ್ದಾಗ ಕುತೂಹಲಕ್ಕೆ ತಿಂದು ಖುಷಿಗೊಂಡು ಅದರ ರುಚಿಯನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ, ಕೇವಲ ಒಂದಷ್ಟು ಓದು-ಬರಹ ಹಾಗೂ ಸ್ವಲ್ಪವೇ ಗಣಿತವನ್ನು ಕಲಿತಿದ್ದ ಲಿವಿಂಗ್‌ಸ್ಟನ್‌ ಶಾಲೆಗೆ ಹೋಗಿದ್ದಷ್ಟೇ! ಮುಂದೆ ಹೋಗಿದ್ದು ವನ್ಯ ತಳಿ ಟೊಮ್ಯಾಟೊವಿನ ಹಿಂದೆ. ಅದರ ಒಂದೊಂದೆ ಮಗ್ಗುಲನ್ನು ಅರಿಯುತ್ತಾ ಅದರ ಸಸ್ಯ ಸ್ವಭಾವ ಹೂ-ಹಣ್ಣಾಗುವ ಪರಿ ಎಲ್ಲವನ್ನೂ ಬಿಡಿ -ಬಿಡಿಯಾಗಿ ತಿಳಿದು ಸುಮಾರು 30 ಕ್ಕೂ ಹೆಚ್ಚು ಬಗೆಯ ತಳಿಗಳನ್ನು ರೂಪಿಸಿದರು. ಬಡ ಕುಟುಂಬ, ಶಿಕ್ಷಣವೂ ಇಲ್ಲದ ಲಿವಿಂಗ್‌ಸ್ಟನ್ ಒಂದಷ್ಟು ಜಮೀನನ್ನು ಮಾಡಿಕೊಂಡು ಮೂರು ದಶಕಗಳ ಕಾಲ ಹೆಣಗಿದರು. ಹತ್ತು ವರ್ಷದ ಮಗುವೊಂದು ಕುತೂಹಲಕ್ಕಾಗಿ 1831ರಲ್ಲಿ ಜಗತ್ತು ವಿಷವೆಂದು ನಂಬಿದ್ದ ಹಣ್ಣನ್ನು ಬಾಯಿಗಿಡುವ ಧೈರ್ಯ ಮಾಡಿ ವಿಜ್ಞಾನಿಯಾಗಿದ್ದು ಮಾನವ ಕುಲಕ್ಕೆ ವರವಾಯಿತು. ಮುಂದೆ 1898ರಲ್ಲಿ ತಾವು ಸಾಯವವರೆಗೂ ವಿಜ್ಞಾನಿಯಾಗಿಯೇ ಬದುಕು ಸವೆಸಿದರು. ಅದೇ ಕುತೂಹಲ, ಪರೀಕ್ಷೆಗಳ ಎದುರಿಸುವ ಬಗೆ ಎಲ್ಲವೂ ಬಹು ದೊಡ್ಡ ಸೋಲುಗಳ ಆರಂಭದಿಂದ ಬಹು ದೊಡ್ಡ ಗೆಲುವನ್ನು ಸಾಧಿಸಿದರು. ಸುಮಾರು 1850ರಲ್ಲಿ ಆರಂಭಿಸಿದ ಹುಡುಕಾಟದಲ್ಲಿ ಅವರು 1870ರ ವೇಳೆಗೆ ಬಹಳ ದೊಡ್ಡದಾದ ಗೆಲುವನ್ನು ಸಾಧಿಸಿದರು. ಕೇವಲ ಮಿ.ಮೀ ಗಾತ್ರದ ಸಣ್ಣ ಹುಳಿಯ ಹಣ್ಣೊಂದು ಇಂದು ನಾವು ಕಾಣುವ ನೋಟಕ್ಕೆ ಸಿಕ್ಕಿದ್ದು ಲಿವಿಂಗ್‌ಸ್ಟನ್‌ ಪ್ರಯತ್ನಗಳಿಂದ. ಅಷ್ಟೇ ಅಲ್ಲ, ಆವರೆವಿಗೂ ಟೊಮ್ಯಾಟೊ ಕೇವಲ ಅಲಂಕಾರಿಕ ಗಿಡವಾಗಿತ್ತು. ಲಿವಿಂಗ್‌ಸ್ಟನ್‌ ಅವರು ತಮ್ಮ ಆತ್ಮ ಚರಿತ್ರೆಯಂತಿರುವ ದಾಖಲೆಯ ಪುಸ್ತಕವನ್ನು ಬರೆದಿದ್ದಾರೆ. “ಲಿವಿಂಗ್‌ಸ್ಟನ್‌ ಮತ್ತು ಟೊಮ್ಯಾಟೊ” ಎಂಬ ಶೀರ್ಷಿಕೆಯ ಆ ಪುಸ್ತಕ ಟೊಮ್ಯಾಟೊವಿನ ಮಹತ್ವದ ಚರಿತ್ರೆಯ ಅದ್ಭುತ. ಸುಮಾರು 3 ದಶಕಗಳ ಅವರ ನಿರಂತರವಾದ ಪ್ರಯೋಗಗಳು, ಕೇವಲ ತಳಿಗಳನ್ನು ಮಾತ್ರವೇ ಅಲ್ಲದೆ ಅನೇಕ ಬಗೆ ಬಗೆಯ ಟೊಮ್ಯಾಟೊ ತಿಂಡಿಗಳ ವಿವರಗಳಿಂದಲೂ ಆ ಪುಸ್ತಕವು ಟೊಮ್ಯಾಟೊವನ್ನು ಜನಪ್ರಿಯಗೊಳಿಸಿತ್ತು. ಲಿವಿಂಗ್‌ಸ್ಟನ್‌ “ಪ್ಯಾರಗಾನ್‌” ಟೊಮ್ಯಾಟೊ ಎಂದು ಇಂದಿಗೂ ಜನಪ್ರಿಯವಾಗಿರುವ ತಳಿಗಳು ಅಮೆರಿಕಾದಲ್ಲಿ ಬಳಕೆಯಲ್ಲಿವೆ.

ಕೊಲಂಬಸ್‌ನಿಂದಾಗಿ ಮತ್ತು ಮುಂದುವರೆದ ಸಾಗರಯಾನಗಳಿಂದಾಗಿ ಯೂರೋಪನ್ನು ಹೊಕ್ಕ ಅನೇಕ ಸಸ್ಯಗಳಲ್ಲಿ ಟೊಮ್ಯಾಟೊ ಕೂಡ ಒಂದು. ಅನಂತರದ ದಿನಗಳಲ್ಲಿ ಅಲ್ಲಿಂದ ಪೋರ್ಚುಗೀಸರು, ಬ್ರಿಟೀಷರು ಮತ್ತು ಡಚ್ಚರ ಮೂಲಕ ಆ ಬೆಳೆಗಳು ನಮ್ಮಲ್ಲೂ ಬಂದು ಜನಪ್ರಿಯವಾದವು. ಮೆಣಸಿನಕಾಯಿ, ಆಲೂಗಡ್ಡೆ, ಕೋಸು, ಮುಂತಾದವು ಹೀಗೆ ನಮ್ಮ ನೆಲವನ್ನೂ ತಲುಪಿವೆ. ಯೂರೋಪು ಹೊಕ್ಕ ಟೊಮ್ಯಾಟೊ ಅಲ್ಲಿಯೂ ಜನರಿಗೆ ಒಗ್ಗಲು ಸಾಕಷ್ಟು ಕಾಲವೇ ಬೇಕಾಯಿತು. ಯೂರೋಪನ್ನು ಹೊಕ್ಕ ಮೇಲೂ ಅಲ್ಲೂ ಸಹಾ ಎರಡು ಶತಮಾನಗಳ ನಂತರವೇ ಟೊಮ್ಯಾಟೊ ಜನಪ್ರಿಯವಾದದ್ದು. ಅದರಲ್ಲೂ ಟೊಮ್ಯಾಟೊವಿನ ಬಣ್ಣವು ರಕ್ತಕ್ಕೂ, ಮಾನವ ಲೈಂಗಿಕ ಆಸೆಗೂ ಸಮೀಕರಿಸುವ ಕಥನಗಳೇ ಮುಂದುವರೆದಿದ್ದವು. ಆದರೆ ಕ್ರಮೇಣ ಅದರಾಚೆ ಬರುವಲ್ಲಿ ಫ್ರೆಂಚರು ಆಸಕ್ತರಾಗಲು ಅವರ ಕ್ರಾಂತಿಯು ಕಾರಣವಾಯಿತು. ಫ್ರೆಂಚರು ಟೊಮ್ಯಾಟೊವನ್ನು “ಪ್ರೀತಿಯ ಸೇಬು- Love Apple” ಎಂಬ ಅರ್ಥದ “ಪಾಮ್ ದʼಅಮೊರ್‌-Pomme d’amour ಎಂಬ ಅಡ್ಡ ಹೆಸರಿಂದಲೇ ಕರೆಯುತ್ತಿದ್ದರು. ಫ್ರೆಂಚ್‌ ಕ್ರಾಂತಿಯ ಸಮಯದಲ್ಲಿ ಟೊಮ್ಯಾಟೊದ ಕೆಂಪು ಬಣ್ಣವು ಪ್ರೀತಿಯ ರೂಪಕವೂ ಆಗಿದ್ದರಿಂದ ಜನಪ್ರಿಯವಾಗಲು ಕಾರಣವಾಯಿತು. ಅದಕ್ಕೆ ಮತ್ತೊಂದು ಮಹತ್ತರವಾದ ಕಾರಣವೆಂದರೆ ಕ್ರಾಂತಿಯ ಸಮಯದಲ್ಲಿ ರಿಪಬ್ಲಿಕ್‌ ಪಕ್ಷದ ಜನರು ಧರಿಸುತ್ತಿದ್ದ ಟೋಪಿಯ ಬಣ್ಣ “ಕೆಂಪಾ”ಗಿದ್ದು ಅದು ರಾಷ್ಟ್ರೀಯತೆಯನ್ನು ಪ್ರಚೋದಿಸುತ್ತಿದ್ದರಿಂದ ಕೆಂಪು ಬಣ್ಣದ ಟೊಮ್ಯಾಟೊ ಕೂಡ ಆಹಾರದ ಬಳಕೆಯಲ್ಲಿ ಜನಪ್ರಿಯಗೊಂಡು ರಾಷ್ಟ್ರಪ್ರೇಮವನ್ನು ಹಂಚುವಲ್ಲಿ ಪ್ರೇರೇಪಿಸಿತ್ತು.

ಅದೇ ವೇಳೆಗೆ ಅತ್ತ ಅಮೆರಿಕಾದಲ್ಲೂ ಆಗಷ್ಟೆ ತಿನ್ನಬಹುದಾದ ಹಣ್ಣಾಗಿದ್ದು ಲಿವಿಂಗ್‌ಸ್ಟನ್‌ ಅವರ ಕಾರಣದಿಂದ ಕೃಷಿಯ ನೆಲವನ್ನು ಹೊಕ್ಕಿತ್ತು. ಎಲ್ಲರ ತಟ್ಟೆಯನ್ನೂ ಸೇರಲು, ಅದೇ ಕಾಲದಲ್ಲಿನ ನ್ಯುಜರ್ಸಿಯಲ್ಲಿ ಒಂದು ಸಾರ್ವಜನಿಕ ಪ್ರದರ್ಶನವೊಂದು ಬಹು ಮಟ್ಟಿಗೆ ಯಶಸ್ವಿಯಾದ ಪ್ರಕರಣವಾಯಿತು. ಲಿವಿಂಗ್‌ಸ್ಟನ್‌ ಹಣ್ಣಿನ ವೈಜ್ಞಾನಿಕ ಅಭಿವೃದ್ಧಿಯನ್ನೂ ಹಾಗೂ ಕುತೂಹಲಭರಿತ ತಿನ್ನುವ ಆಸೆಯನ್ನು ಪ್ರಚೋಧಿಸಿದ್ದರೆ ಈ ಪ್ರಕರಣದಲ್ಲಿ ವಸಹತು ಬಳಗದ ರಾಬರ್ಟ್‌ ಗಿಬ್ಸನ್‌ ಜಾನ್‌ಸನ್‌ ಎಂಬಾತ ಸುಮಾರು 2000 ಜನರ ಸಮ್ಮುಖದಲ್ಲಿ ಮುಂದೆ ಒಂದು ಬುಟ್ಟಿ ಟೊಮ್ಯಾಟೊವನ್ನು ತಿನ್ನುವ ಪ್ರಾತ್ಯಕ್ಷಿಕೆಯನ್ನು ಮಾಡಿದ್ದನು. ಆಗಷ್ಟೇ ತಿನ್ನಬಹುದು ಎಂಬ ತಿಳಿವಳಿಕೆಯಾಗಿದ್ದರೂ, ತಿಂದು ಹೊಟ್ಟೆಯಲ್ಲಾ “ಅಸಿಡಿಟಿ”ಯಾಗಿ-ಆಮ್ಲತೆಯಲ್ಲಿ ಕೊರೆದು ಹೋಗುತ್ತೆ ಎಂದು ವೈದ್ಯರೂ ಸೇರಿ ಜನರು ಕಾಯ್ದುಕೊಂಡಿದ್ದರು. ರಕ್ತವೆಲ್ಲಾ ಮತ್ತಷ್ಟು ಕೆಂಪಾಗಿ ಬಾಯೆಲ್ಲಾ ಆಮ್ಲದ ರಕ್ತವನ್ನು ಕಾರುತ್ತಾ ರಾಬರ್ಟ್‌ ಸಾಯುತ್ತಾನೆ ಎಂದೇ ಜನರು ಭ್ರಮಿಸಿದ್ದರು. ಆತ ತಿನ್ನುವುದನ್ನು ನೋಡಿ ಓರ್ವ ಮಹಿಳೆಯು ಸೇರಿದಂತೆ, ಒಂದಿಬ್ಬರು ತಲೆತಿರುಗಿ ಬಿದ್ದರೇ ವಿನಾಃ ಆತನಿಗೆ ಏನೂ ಆಗಲಿಲ್ಲ. ಅಂತೂ ಟೊಮ್ಯಟೊ ಬಹು ದೊಡ್ಡ ಜಯವನ್ನೇ ಸಾಧಿಸಿತ್ತು.

ಅಂತೂ ಈಗ ನಾವು ನೀವೆಲ್ಲಾ ತರಕಾರಿಯಾಗಿ ಟೊಮ್ಯಾಟೊದ ಜನಪ್ರಿಯತೆಯನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಇಷ್ಟೆಲ್ಲಾ ಸಂಗತಿಗಳು ಹೌದಾ ಎನ್ನಿಸಿದ್ದರೂ ಇನ್ನೂ ಇದೇ ಎನ್ನಬೇಕಾಗುತ್ತದೆ. ಏಕೆಂದರೆ ಅದು ತರಕಾರಿಯಾ ಅಥವಾ ಹಣ್ಣಾ ಎನ್ನುವುದೂ ಕೂಡ ಕೋರ್ಟು ಮೆಟ್ಟಿಲನ್ನು ಏರಬೇಕಾದ ಸಂಗತಿಯೊಂದು ಇದೆ. ಅಂದ ಹಾಗೆ ಸಸ್ಯವೈಜ್ಞಾನಿಕವಾಗಿ ಟೊಮ್ಯಾಟೊ ಒಂದು ಪರಿಪೂರ್ಣ ಹಣ್ಣು ಎಂಬುದರಲ್ಲಿ ಎರಡು ಮಾತಿಲ್ಲ. ಹೂವುಗಳ ಅಂಡಾಶಯವು ಪರಾಗದಿಂದ ಸ್ಪರ್ಶಗೊಂಡು ಫಲಭರಿತವಾಗಿ ಅಂಡಗಳು ಬೀಜವಾಗುವ ಪ್ರಕ್ರಿಯೆಯಿಂದಲೇ ಕಾಯಿ ಕಟ್ಟುತ್ತವೆ. ಆದರೆ ನಾವು ಕಾಯಿಯನ್ನು ತಿಂದರೂ ಹಣ್ಣುಗಳು ಮಾಡಿರುವ ಮೋಡಿಯನ್ನು ಜಗತ್ತಿನಾದ್ಯಂತ ಕಾಯಿಗಳು ಮಾಡಿಲ್ಲ. ಆದರೇನಂತೆ ಟೊಮ್ಯಾಟೊವನ್ನು ಹಣ್ಣುಗಳಂತೆ ತಿನ್ನುವುದಿಲ್ಲ. ಬೇಯಿಸಿ ಖಾರ, ಮಸಾಲೆಯಾಗಿಸಿ ತಿನ್ನುತ್ತೇವೆ. ಆದರೆ ಇದೇ ಕಾರಣದಿಂದ ಅಮೆರಿಕೆಯಲ್ಲಿ ಕೋರ್ಟು ಮೆಟ್ಟಲೇರಿತ್ತು. ಇಲ್ಲಿ ಆದದ್ದು ವ್ಯವಹಾರದ ಕಾನೂನುಗಳ ಸಮಸ್ಯೆಯಿಂದ! ತರಕಾರಿಯಾದರೆ ಒಂದು ಬಗೆಯ ಕಂದಾಯ ಹಾಗೂ ಹಣ್ಣಾದರೆ ಕಂದಾಯ ರಹಿತವಾದ ಮಾರಾಟ ಎಂಬೊಂದು ಕಾನೂನು 19ನೆಯ ಶತಮಾನದ ಕೊನೆಯ ದಶಕದಲ್ಲಿತ್ತು. ಮಾರುವುದು ನಿಜಕ್ಕೂ ಮಾಗಿದ ಹಣ್ಣೆ ಆಗಿದ್ದರೂ, ತಿನ್ನುವುದು ತರಕಾರಿಯಂತೆ! ಜೊತೆಗೆ ಹಾಗೇ ಬಿಟ್ಟರೆ, ದೇಶದ ಕಂದಾಯ ಗಳಿಕೆಗೆ ವಿಪತ್ತು. ಹಾಗಾಗಿ ಅಮೆರಿಕಾದ ಸುಪ್ರಿಂಕೋರ್ಟು ಮಧ್ಯ ಪ್ರವೇಶಿಸಿತು. ನ್ಯೂಯಾರ್ಕಿನ ಬಂದರಿನ ಹಣ್ಣು-ತರಕಾರಿ ಸಂಗ್ರಾಹಕ/ಮಾರಾಟಗಾರರಾಗಿದ್ದ ನಿಕ್ಸ್‌ ಮತ್ತು ಹೇಡೆನ್‌ ಎಂಬೆರಡು ಮನೆತನಗಳ ಹೆಸರಿನಲ್ಲಿ ದಾಖಲಾದ ತೀರ್ಪು ಅದು. ಮೇ ತಿಂಗಳ 10ನೆಯ ತಾರೀಖು 1893ರಂದು ಹೊರಬಿದ್ದ ತೀರ್ಪು “ಟೊಮ್ಯಾಟೊವನ್ನು ತರಕಾರಿ” ಎಂದು ಘೋಷಿಸಿತು. ಕಡೆಯಲ್ಲಿ ಆದರೂ “ಈ ತೀರ್ಪು ಸಸ್ಯವೈಜ್ಞಾನಿಕ ಸಂಗತಿಗಳಿಗೆ ಅನ್ವಯವಾಗುವುದಿಲ್ಲ” ಎಂಬ ಒಂದು ಷರಾ ಬರೆದಿತ್ತು. ಕೇವಲ ಮಾರಾಟದ ಹಿನ್ನೆಲೆಯ ಕಂದಾಯದ ವಸೂಲಿಗೆ ತರಕಾರಿ ಎಂದು ನಿರ್ಣಯಿಸಲು, ಜನರು ಬಳಸುವ ಬಗೆಯನ್ನು ಎತ್ತಿಹಿಡಿದಿತ್ತು.

ಅತ್ಯಂತ ಜನಪ್ರಿಯವಾದ ಬೆಳೆಯಾಗಿರುವ ಟೊಮ್ಯಾಟೊ, ಅತ್ಯಂತ ಪುಟ್ಟ ಹಣ್ಣಾಗಿದ್ದು, ಬಾಯಿ ತುಂಬಲು ಹತ್ತಿಪ್ಪತ್ತು ಹಣ್ಣಾದರೂ ಬೇಕಾಗಿತ್ತು. ಅಂತಹದರಲ್ಲಿ ಇಂದು ಬಾಯಿಯೊಳಗಿಡಲೂ ಆಗದಷ್ಟು ದೊಡ್ಡ ಗಾತ್ರದ, ವಿವಿಧ ರುಚಿಯ, ಬಣ್ಣಗಳ ಮೆರುಗಿನ, ವಿವಿಧ ಸಮಯಗಳಲ್ಲಿ ಮಾಗುವ, ತಳಿಗಳಾಗಿ ಹಲವಾರು ಬಗೆಗಳಲ್ಲಿ ತೆರೆದುಕೊಂಡಿವೆ. ಸಾಮಾನ್ಯ ಚರ್ಚೆಗಳಲ್ಲಿ ಇರುವಂತೆ ಕೃಷಿಯ ತಳಿಗಳ ಅಗಾಧವಾದಷ್ಟೂ ಅವುಗಳ ವಿವಿಧತೆ ಕುಂಠಿತವಾಗುವುದು. ಆದರೆ ಹಾಗಾಗದಂತಿರುವುದು ಟೊಮ್ಯಾಟೊಗೆ ಇರುವ ವಿಶೇಷ. ಇದನ್ನು 1960ರಿಂದ ಇಲ್ಲಿಯವರೆಗೂ ಆರು ದಶಕಗಳ ಕಾಲ ವಿವಿಧ ತಳಿಗಳ ಅಧ್ಯಯನವನ್ನು ವಿಜ್ಞಾನಿಗಳ ತಂಡವೊಂದು ನೆದರ್‌ ಲ್ಯಾಂಡ್‌ ದೇಶದಲ್ಲಿ ನಡೆಸಿದೆ. 1970ರಿಂದ ಸುಮಾರು 8ಪಟ್ಟು ವಿವಿಧತೆಯು ಹೆಚ್ಚಿದೆ ಎನ್ನುತ್ತದೆ ಅಲ್ಲಿನ ಕೃಷಿ ವಿಜ್ಞಾನಿಗಳ ತಂಡ. ಆನುವಂಶಿಕ ವಿವಿಧತೆಯು ಕುಂಠಿತವಾಗುವ ಬದಲು ಹೆಚ್ಚಿರುವುದು ಟೊಮ್ಯಾಟೊ ಸಸ್ಯದ ವಿಶೇಷತೆಯಾಗಲು ಆಧುನಿಕ ಕೃಷಿಯಲ್ಲೂ ಹುಟ್ಟಿಕೊಂಡ ಪರ್ಯಾಯದ ಫಲ ಕೂಡ ಕಾರಣ ಎನ್ನುತ್ತದೆ ಅಧ್ಯಯನ. ಹಾಗಾದರೆ ಮೂಲ ವನ್ಯ ತಳಿಯಿಂದ ಅದೆಷ್ಟು ದೂರ ಸಾಗಿ ಬಂದ ತಳಿಗಳಾಗಿವೆ, ಎಂಬ ಪ್ರಶ್ನೆಗೆ ಮತ್ತೂ ದಿಗಿಲಾಗಿಸುವ ಉತ್ತರವಿದೆ. ವನ್ಯ ಮೂಲದ ತಳಿಯು ಕೇವಲ ಪ್ರತಿಶತ 10ರಷ್ಟು ಮಾತ್ರವೇ ಆನುವಂಶಿಕತೆಯಯನ್ನು ದಾಟಿಸಿರಬಹುದು, ಹಾಗಾಗಿ ಇನ್ನೂ 90 ಪ್ರತಿಶತ ಆನುವಂಶಿಕ ಸಂಗತಿಗಳನ್ನು ಕೇವಲ ತನ್ನೊಳಗೆ ಇರಿಸಿಕೊಂಡಿದೆ, ಎನ್ನುವ ಮಹತ್ವದ ವಿವರಗಳೂ ಕೂಡ ಅಧ್ಯಯನಗಳಲ್ಲಿ ವರದಿಯಾಗಿವೆ.

ಇದೀಗ ಕೃಷಿಯಲ್ಲಿ ಎರಡು ಮುಖ್ಯವಾದ ಬಗೆಯ ಟೊಮ್ಯಾಟೊ ಸಸ್ಯಗಳು ಬಳಕೆಯಲ್ಲಿವೆ. ಒಂದು ಅನಿರ್ದಿಷ್ಟ (Indeterminate) ಬೆಳವಣಿಗೆಯನ್ನು ಹೊಂದಿದ್ದರೆ, ಮತ್ತೊಂದು ನಿರ್ದಿಷ್ಟ ಅಥವಾ ಪರಿಮಿತವಾದ (Determinate) ಬೆಳವಣಿಗೆಯನ್ನು ಹೊಂದಿರುವುದು. ಅನಿರ್ಧಿಷ್ಟವಾದ ಬಗೆಯು ಬೆಳೆಯುತ್ತಲೇ 8-10 ಅಡಿ ಎತ್ತರಕ್ಕೂ ಬೆಳೆಯುತ್ತದೆ. ಮುಂದೆ ಚಳಿಗೆ ತುತ್ತಾಗಿ ಬೆಳವಣಿಗೆಯ ಕೊನೆಯನ್ನು ತಲುಪುತ್ತದೆ. ಪರಿಮಿತ ಬೆಳವಣಿಗೆಯ ಬಗೆಯು 3-4 ಅಡಿಯಷ್ಟೇ ಇದ್ದು ಪೊದೆಗಳಂತೆ ಗುಂಪು ಗೂಡುತ್ತವೆ. ಇವೆರಡೂ ಗುಣಗಳನ್ನೂ ಒಳಗೊಂಡು ತೀರಾ ಸಣ್ಣ ಕಾಯಿಗಳಿಂದ, ರಸಭರಿತವಾದ ಗುಣಗಳನ್ನೂ ಇರಿಸಿಕೊಂಡು, ಅವುಗಳೊಳಗೆ ಆಹಾರಾಂಶಗಳನ್ನೂ ಉಳಿಸಿಕೊಂಡು ಹೆಚ್ಚಿನ ಇಳುವರಿಗೆ ಮಾಡಿದ ಮುಂದುವರೆದ ಒಂದು ಶತಮಾನದ ಕಥನವಿನ್ನೂ ಬಾಕಿಯಿದೆ. ಹದಿನಾರರಿಂದ ಹದಿನೆಂಟನೆಯ ಶತಮಾನವು ಟೊಮ್ಯಾಟೊವನ್ನು ಬಾಯಿಗೆ ಬರದಂತೆ ನೋಡಿಕೊಂಡರೆ, 19ನೆಯ ಶತಮಾನವು ಬಾಯಿಗೆ ತಂದು- ಆ ಮೂಲಕ ತಾಟಿಗೆ ತರುವ ಪ್ರಯತ್ನಗಳನ್ನು ಮಾಡಿದೆ. ದಕ್ಷಿಣ ಅಮೆರಿಕಾ, ಹಾಗೂ ಮಧ್ಯ ಅಮೆರಿಕಾದ ಮೂಲೆಯಲ್ಲೆಲ್ಲೋ ಇದ್ದ ಮಿ. ಮೀ. ಗಾತ್ರದ ಕಾಯಿ ಅಟ್ಲಾಂಟಿಕ್‌, ಹಿಂದೂ ಸಾಗರಗಳನ್ನು ಅನೇಕ ವಸಾಹತು ಆಡಳಿತವನ್ನೂ ಮೀರಿ, ಫೆಸಿಪಿಕ್‌ ದ್ವೀಪಗಳ ಮೂಲಕ ಚೀನಾವನ್ನು ತೀರಾ ತಡವಾಗಿ ಪ್ರವೇಶಿಸಿದೆ. ಆದರೂ ಇಂದು ಜಗತ್ತಿನ ಮೂರನೆಯ ಒಂದು ಭಾಗ ಚೀನಾ ಒಂದೆ ಉತ್ಪಾದಿಸುತ್ತಿದೆ. ನೂರಾರು ಕೋಟಿ ಜನರನ್ನು ಪ್ರತಿ ದಿನವೂ ತಲುಪಲು ರೂಪಾಂತರಗೊಳ್ಳಲು ಗಿಡವೊಂದರಲ್ಲಿ ತನ್ನ ಕಾಯಿ-ಹಣ್ಣುಗಳಲ್ಲಿ ಕಟ್ಟಿಕೊಡುವ ಜೀವ-ಬಯಕೆಯ ಅನುಕೂಲಗಳಿಂದ ವಿಕಾಸಗಳಾಗಿವೆ. ಅವೆಲ್ಲವೂ 20ನೆಯ ಶತಮಾನದಲ್ಲಿ ನಡೆದಿದ್ದು ಬಹುಶಃ ಇನ್ನೂ ಉದ್ದವಾದ ಸಂಗತಿಗಳಾಗಿವೆ. ಚುಟುಕಾಗಿ ಅರಿತರೆ ಅದರ ಒಟ್ಟಾರೆಯ ಸ್ವಾದವು ತಲುಪುವುದಿಲ್ಲ. ಏನಿದ್ದರೂ ಸಂಪೂರ್ಣ ಭೋಜನವೇ ಸರಿ. ಹಾಗಾಗಿ “ಫುಲ್‌ ಮೀಲ್ಸ್‌” ಮುಂದಿನ‌ ಭಾಗ-2ರಲ್ಲಿ.

ನಮಸ್ಕಾರ.

ಡಾ. ಟಿ.ಎಸ್.‌ ಚನ್ನೇಶ್.‌

This Post Has 3 Comments

 1. Puttaraju P Prabhuswamy

  Excellent piece of poetic article Sir.
  Style of narrative mesmerizing one. Thanks 😊

 2. ಶ್ರೀಹರಿ ಸಾಗರ, ಕೊಚ್ಚಿ

  ಹೌದು ಟೊಮ್ಯಾಟೋ ಕಾಯಿಯ ವಿಷಯವೇ ಬೇರೆ.. ಅದರಿಂದ ತಯಾರಾದ ಪದಾರ್ಥಗಳ ಸವಿ ವಿಶೇಷವೇ. ಆದಾಗ್ಯೂ ಕಾಯಿ ಮಾರುಕಟ್ಟೆಯಲ್ಲಿ ಹುಡುಕಬೇಕು. ನಿಮ್ಮ ಲೇಖನ ಚೆನ್ನಾಗಿದೆ..

 3. Rudresh Adarangi

  very nice article sir. very informative about tomato

Leave a Reply