ನಮ್ಮ ದಿನ ನಿತ್ಯದ ಊಟೋಪಚಾರದಲ್ಲಿ ಒಗ್ಗರಣೆಗೆ ಎರಡು ಬಗೆಯ ಮಹತ್ವವಿದೆ. “ಏನು…ಒಗ್ಗರಣೆಗಷ್ಟೇ..ಎಷ್ಟು ಬೇಕು..ಸ್ವಲ್ಪ ತಾನೆ…..” ಎನ್ನುವುದರಲ್ಲಿ ಅಷ್ಟೇನೂ ಮಹತ್ವವಿಲ್ಲದ ಅರ್ಥ ಬರಬಹುದು. “ಆಹಾ….ರುಚಿ ಇರೋದೇ…, ಕೊನೆಗೊಂದು ಒಗ್ಗರಣೆ ಕೊಡೋದ್ರಲ್ಲಿ….. ಅದಕ್ಕೆ ಬೇಕಾದ್ದೆಲ್ಲಾ ಸರಿಯಾಗಿ ಇರಬೇಕಲ್ಲವಾ” ಹೀಗನ್ನುವುದರಲ್ಲಿ ಒಗ್ಗರಣೆಯ ಮಹತ್ವ ಹಿಗ್ಗಿರುವುದು ಕಂಡೀತಲ್ಲವೇ? ಹೌದು, ಒಗ್ಗರಣೆಯ ಖಾಯಂ ಪಾತ್ರಧಾರಿ ಕರಿಬೇವು ಕೂಡ ಈ ಎರಡೂ ಬಗೆಯ ವಿಚಿತ್ರಗಳಲ್ಲೇ, ತನ್ನ ಬದುಕು ಮತ್ತು ಹೆಸರನ್ನು ಉಳಿಸಿ, ಬೆಳೆಸಿಕೊಂಡಿದೆ. ಕರಿಬೇವಿಲ್ಲದಿದ್ದರೆ ಆಗೋದೆ ಇಲ್ಲ ಎನ್ನುವವರೂ, ಕರಿಬೇವು ಇಲ್ಲದಿದ್ರೂ ಒಂದೊಂದುಸಲ ಪರವಾಗಿಲ್ಲ ಎನ್ನುವವರೂ ಇದ್ದೇ ಇರುತ್ತಾರೆ. ಈ ಬೇಕು ಬೇಡಗಳೆರಡನ್ನೂ ತನ್ನೆಲ್ಲಾ ಪ್ರಾತಿನಿಧ್ಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕರಿಬೇವು, ನಮ್ಮ ಊಟದಲ್ಲಿ, ತಿಂಡಿತಿನಿಸುಗಳಲ್ಲಿ, ಸಾಲದಕ್ಕೆ ಕೆಲವೊಮ್ಮೆ ಔಷಧವಾಗಿಯೂ ನಿರಂತರವಾಗಿ ಒಡನಾಡಿದೆ. ಒಗ್ಗರಣೆಯು ಹೇಗೆ ಬೇಕು-ಬೇಡಗಳ ರೂಪಕವೋ ಹಾಗೆಯೇ ಕರಿಬೇವಿನ ಕಥನ ಕೂಡ ಸಾಕಷ್ಟು ಎರಡೂ ಕೊನೆಯಂಚಿನ ಸ್ಥಾನಮಾನಗಳನ್ನು ಪಡೆದುಕೊಂಡಿದೆ. ಈ ಎರಡೂ ವಿವಿಧತೆಯ ಸವಿಯನ್ನು ಕರಿಬೇವಿನ ರುಚಿಯಷ್ಟೇ ಹಿತವಾದ ವಿವರಗಳಿಂದ ನೋಡೋಣ. ಬಾಲ್ಯದಲ್ಲಿ ಒಗ್ಗರಣೆಯ ತಿಂಡಿ ಮಾಡುವಾಗ, ಅಥವಾ ಮತ್ತಾವುದೋ ಘಳಿಗೆಯಲ್ಲಿ ನೆನಪಾದಾಗ ನನ್ನ ಅಜ್ಜಿ, ಕರಿಬೇವನ್ನು ತಂದುಕೊಡಲು ಕೇಳುತ್ತಿದ್ದಳು. ಆಗ ಕೂಡು ಹಿತ್ತಿಲುಗಳ ಮನೆಗಳಿದ್ದ ಊರಾದ್ದರಿಂದ ಪಕ್ಕದ ಮನೆಯ ಹಿತ್ತಿಲಿಗೆ ಹೋಗಿ ಕೇಳಿ ಕಿತ್ತು ತರಬೇಕಿತ್ತು. ಆಗ ಈಗಿನಷ್ಟು ಕರಿಬೇವು ಮಾರಾಟದ ವಸ್ತ್ತುವಾಗಿರಲಿಲ್ಲ. ಈಗಲೂ ಸಣ್ಣ ಹಳ್ಳಿಗಳಲ್ಲಿ ಅಕ್ಕ-ಪಕ್ಕದ ಮನೆಗಳವರು ಕರಿಬೇವನ್ನು ಹಂಚಿಕೊಂಡು ಖುಷಿಯಾಗಿಯೇ ಇದ್ದಾರೆ.
ಕರಿಬೇವು – ತನ್ನ ಹೆಸರನ್ನು ಪಡೆದುಕೊಂಡ ಕಥನಗಳ ವಿವರಗಳಿಂದಲೇ ವಿವಿಧತೆಗಳ ಆನಂದಿಸೋಣ. ಕರಿಬೇವಿಗೂ ಸಾಮಾನ್ಯವಾದ ಬೇವಿಗೂ ಹೆಸರಿನ ಹೊರತಾಗಿ ಯಾವ ಸಂಬಂಧವೂ ಇಲ್ಲ. ಮರದ ಆಕಾರದಲ್ಲೂ ಭಿನ್ನವೇ, ಏನೋ ಸ್ವಲ್ಪ ಮಟ್ಟಿಗೆ ಎಲೆಗಳು ಹೋಲಬಹುದು. ಅಷ್ಟಕ್ಕೂ ಕರಿಬೇವು ನಿಂಬೆ ಜಾತಿಯ ಸಣ್ಣ ಮರ. ರೂಟೆಸಿಯೇ (Rutaceae) ಸಸ್ಯ ಕುಟುಂಬಕ್ಕೆ ಸೇರಿದೆ. ಬೇವು ಎನ್ನುವುದೇ ಕಹಿ ಎನ್ನುವುದನ್ನು ಹೆಸರಿಸಲು. ಹಾಗಾಗಿ ಕರಿಬೇವಿಗೆ ಸಿಹಿ ಬೇವು ಎಂಬ ಹೆಸರೂ ಇದೆ. ನಿಜಕ್ಕೂ ದಟ್ಟ ಹಸಿರಿನಿಂದ ಸ್ವಲ್ಪಮಟ್ಟಿಗಿನ ಕಪ್ಪು ಛಾಯೆಯು ಸೇರಿಕೊಂಡು ಮರದ ನಿಲುವು ಕಾಣುವುದು ಸಹಜ. ಕಹಿಬೇವಾದರೋ ನಳನಳಿಸುವ ಹಸಿರು ಬಣ್ಣದ ಎಲೆಗಳ ಛಾವಣೆಯಿಂದ ತೀರಾ ದೊಡ್ಡದಾದ ಮರವಾಗಿದ್ದು ಮಿಲಿಯೆಸಿಯೇ ಕುಟುಂಬಕ್ಕೆ ಸೇರಿದೆ. ಮುಖ್ಯವಾದ ವಿಷಯ ಇದಲ್ಲ! ಅದರ ವೈಜ್ಞಾನಿಕ ಹೆಸರಿನದು. ಮೂಲ ನಮ್ಮ ದೇಶದವೇ ಆದ ಬೇವನ್ನೂ ಸೇರಿಕೊಂಡ, ಹಲವಾರು ಗಿಡಮರಗಳು, “ಇಂಡಿಕಾ” ಎಂಬ ಪ್ರಭೇದದ ಹೆಸರನ್ನು ಹೊತ್ತಿವೆ. ಆದರೆ ಹುಟ್ಟು, ತವರು, ತಿನ್ನುವ ಬಯಕೆ, ಬೆಳೆಯುವ ನೆಲ, ಮನುಕುಲದ ಅಡಿಗೆಮನೆಯ ಸದಸ್ಯತ್ವ, ಹೀಗೆ ಎಲ್ಲದರಲ್ಲೂ ಅಪ್ಪಟ ಭಾರತೀಯ ಮರವೇ ಆಗಿರುವ “ಕರಿಬೇವು” ಮಾತ್ರ ತನ್ನ ಸಂಕುಲ ಹಾಗೂ ಪ್ರಭೇದದ ಹೆಸರುಗಳೆರಡನ್ನೂ “ಪರಂಗಿ”ಯಾಗಿಸಿಕೊಂಡಿದೆ. ಐರೋಪ್ಯ ಹೆಸರುಗಳಿಂದ ನಾಮಕರಣಗೊಂಡಿದೆ. ಕರಿಬೇವಿನ ವೈಜ್ಞಾನಿಕ ನಾಮಧೇಯ ಮರ್ರಯಾ ಕೊಯ್ನಿಗೈ (Murraya koenigii) ಈ Murraya ಮತ್ತು koenigii ಎರಡೂ ಹೆಸರುಗಳನ್ನು ಇಬ್ಬರು ಐರೋಪ್ಯ ಸಸ್ಯವಿಜ್ಞಾನಿಗಳಿಂದ ಪಡೆದುಕೊಂಡಿದೆ. ಮೂಲ ಹೆಸರನ್ನಿಟ್ಟ ಕಾರ್ಲ್ ಲಿನೆಯಾಸ್ ಹೆಸರಿಸಲು ತನ್ನ ಇಬ್ಬರು ಪಕ್ಕಾ ಶಿಷ್ಯರ ಹೆಸರನ್ನು ಬಳಸಿದ್ದು ವಿಶೇಷವಾಗಿದೆ. ಗುರುವೊಬ್ಬ ತಾನು ಹೆಸರಿಸಿದ ಗಿಡವೊಂದಕ್ಕೆ ತನ್ನ ವಿದ್ಯಾರ್ಥಿಗಳ ಹೆಸರು ಬಳಸಿ ಅವರನ್ನು ಅಮರರನ್ನಾಗಿಸಿ ಅವರ ಸೇವೆಯನ್ನು ಕೊಂಡಾಡಿದ ಸಾಕ್ಷಿಯಾಗಿ ಕರಿಬೇವು ನಮ್ಮ ಹಿತ್ತಿಲು, ಅಡಿಗೆಮನೆ, ಒಗ್ಗರಣೆಗಳಲ್ಲಿ ಪರ್ಮನೆಂಟಾದ ನೆಂಟನಾಗಿದೆ.
ಕರಿಬೇವು ಆಂಗ್ಲರ ಬಾಯಲ್ಲಿ curry tree (ಸಂಬಾರು ಚಟ್ಣಿಗಳ ಬಳಕೆಯ ಮರ)ಯಾಗಿದೆ. ಜೊತೆಗೆ ಸ್ವಿಟ್ ನೀಮ್ ಕೂಡ ಎಂಬುದನ್ನು ಹಿಂದೆಯೇ ಹೇಳಿದೆ. Johan Anders Murray ಎಂಬುವರು ಸ್ವೀಡನ್ ನಲ್ಲಿ ನೆಲೆಸಿದ ಜರ್ಮನಿಯ ಕುಟುಂಬದಲ್ಲಿ ಜನಿಸಿದ ಸಸ್ಯ ವಿಜ್ಞಾನಿ. ಈತ ವೈದ್ಯಕೀಯ ಹಾಗೂ ಸಸ್ಯವಿಜ್ಞಾನದ ವಿದ್ಯಾರ್ಥಿ. ಸ್ವೀಡನ್ನಿನ ಉಪ್ಸಲಾದಲ್ಲಿ 1756 ಮತ್ತು 1759ರ ನಡುವೆ ಕಾರ್ಲ್ ಲಿನೆಯಾಸ್ ಅವರ ಪ್ರೀತಿಯ ಶಿಷ್ಯ. ಮುಂದೆ ಜರ್ಮನಿಗೆ ತೆರಳಿ ಅಲ್ಲಿನ ಗೊಟಿಂಗೆನ್ ನಲ್ಲಿ ಸಸ್ಯೋದ್ಯಾನದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾದವರು. ಮರ್ರೆ ಸಸ್ಯಗಳಿಂದ ಔಷಧ ತಯಾರಿಯ ಬಗೆಗೆ ವಿಶೇಷ ಆಸಕ್ತಿ ಮತ್ತು ಸಂಶೋಧನೆಗಳಲ್ಲಿ ನಿರತರಾದವರು. ಇವರ ಹೆಸರಿನಿಂದ ಸಂಕುಲದ ಹೆಸರಾದ Murraya ಬಂದಿದೆ.
ಇನ್ನು ಪ್ರಭೇದದ ಹೆಸರಾದ koenigii (ಕೊಯ್ನಿಗೈ) ಪದವು ಬ್ರಿಟನ್ನಿನ Johann Gerhard König ಅವರ ನೆನಪಿನಲ್ಲಿ ಕರೆಯಲಾಗಿದೆ. ಇವರೂ ಕೂಡ ಲಿನೆಯಾಸ್ ಅವರ ವಿದ್ಯಾರ್ಥಿ. ಈತ ಕಾರ್ಲ್ ಲಿನಿಯಾಸ್ ಅವರ ಖಾಸಗಿ ವಿದ್ಯಾರ್ಥಿ. ನೇರವಾಗಿ ವಿಶ್ವವಿದ್ಯಾಲಯದಲ್ಲಿ ಅವರಿಂದ ಕಲಿತವರಲ್ಲ. ಆದರೆ ಆಸಕ್ತಿ ಮತ್ತು ಸಸ್ಯಗಳ ಪ್ರೀತಿಗಾಗಿ ಸಸ್ಯವಿಜ್ಞಾನವನ್ನು ಲಿನೆಯಾಸ್ ಅವರಿಂದ ಕಲಿತರು. ಎಲ್ಲದಕ್ಕಿಂತಾ ಹೆಚ್ಚಾಗಿ ಈತ ಭಾರತದಲ್ಲಿ ತಮಿಳುನಾಡಿನ ಆರ್ಕಾಟ್ ನವಾಬನ ಆಸ್ಥಾನದಲ್ಲಿ ಸಸ್ಯವಿಜ್ಞಾನಿ ಹಾಗೂ ನಿಸರ್ಗ ತಜ್ಞರಾಗಿದ್ದರು. ಲಿನೆಯಸ್ ಪ್ರಪಂಚಾದ್ಯಂತ ತನ್ನ ಶಿಷ್ಯರನ್ನು ಅವರವರ ಪ್ರೀತಿ-ಆಸಕ್ತಿಗನುಗುಣವಾಗಿ ಸಸ್ಯಗಳ ಸಂಗ್ರಹಕ್ಕೆ ಕಳಿಸಿದ್ದವರಲ್ಲಿ ಗೆರ್ಹಾರ್ಡ್ ಕೊಯ್ನಿಗ್ ಅವರೂ ಒಬ್ಬರಾಗಿದ್ದರೆನ್ನುವುದು ಮುಖ್ಯ. ಈತ ಭಾರತದಲ್ಲಿದ್ದು ವಿಲಿಯಂ ರಾಕ್ಸ್ ಬರ್ಗ್ ಅವರ ಜೊತೆಗೂಡಿ ಕಾರ್ಯನಿರ್ವಹಿಸಿದ್ದರು. ಗೆರ್ಹಾರ್ಡ್‍ಕೊಯ್ನಿಗ್ ತಮಿಳುನಾಡು ಹಾಗೂ ಶ್ರೀಲಂಕಾದ ಸಸ್ಯಗಳ ಸಂಗ್ರಹ ಅಧ್ಯಯನಗಳಲ್ಲಿ ತೀವ್ರ ಆಸಕ್ತಿಯಿಂದ ತೊಡಗಿಸಿಕೊಂಡವರು. ಇವರ ನೆಲೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ “ತುರಂಗಂಬಾಡಿ” ಆಗಿತ್ತು. ತಮಿಳುನಾಡು ಸಾಂಬಾರಿನ ಸಾಂಸ್ಕೃತಿಕ ವಿಕಾಸದ ನೆಲ ಮೂಲ ತಂಜಾವೂರಿನ ನೆರೆಯ ಜಿಲ್ಲೆಯ ರೇವು ಪಟ್ಟಣ ತುರಂಗಂಬಾಡಿ. ಕರಿಬೇವು-ಕರ್ರಿ-ಸಾಂಬಾರಿನ ಬೇವಾಗಿ ಪರಿಚಯಗೊಂಡು ಲಿನೆಯಸ್ ತಲುಪಿಸಿದ್ದು, ಗೆರ್ಹಾರ್ಡ್ ಕೊಯ್ನಿಗ್. ಲಿನೆಯಸ್ ತನ್ನ ಇಬ್ಬರು ವಿದ್ಯಾರ್ಥಿಗಳ ನೆನಪಿಗಾಗಿ ಇಂತಹ ವಿಶ್ವಾಸದ ರುಚಿಮೂಲದ ಸಸ್ಯಕ್ಕೆ ಮರ್ರಯಾ ಕೊಯ್ನಿಗೈ (Murraya koenigii ) ಎಂದು ನಾಮಕರಣ ಮಾಡಿದರು.
ನಮ್ಮದಲ್ಲದ ಹುಣಸೆಗೆ ಟ್ಯಾಮರಿಂಡಸ್ “ಇಂಡಿಕಾ” ಎಂದೂ ನಮ್ಮದೇ ಬೇವಿಗೆ ಅಜಾರ್ಡಿರಕ್ಟಾ “ಇಂಡಿಕಾ” ಎಂದು ಕರೆದು ಕೇವಲ ಭಾರತೀಯರ ನಾಲಿಗೆಯಲ್ಲಿ ಮಾತ್ರವೇ ಸದಾ ನೆಲೆಯಾದ ಕರಿಬೇವಿಗೆ ಐರೋಪ್ಯ ಹೆಸರು ಬಂದಿದೇ ವಿಚಿತ್ರ ಅಲ್ಲವೇ? ಇಂದಿಗೂ ದಕ್ಷಿಣ ಭಾರತೀಯರಲ್ಲಿ ಹೆಚ್ಚು ಬಳಕೆ ಹಾಗೂ ಪ್ರಚಲಿತವಿರುವ ಕರಿಬೇವು, ಭಾರತದಾಚೆಗೆ ಭಾರತೀಯರಿಂದಾಗಿ ಅವರ ಅಡುಗೆಯ ಹಿತದಿಂದ ಪ್ರಯಾಣ ಬೆಳೆಸಿದೆ. ಈಗಲು ಅಮೆರಿಕಾದ ಭಾರತೀಯರ ಮನೆಗಳ ಕುಂಡಗಳಲ್ಲಿ ಹಿತ್ತಿಲಲ್ಲಿ ಅರಳಿರುವ ಕರಿಬೇವು, ರುಚಿ-ಸೌಂದರ್ಯ ಎರಡರಲ್ಲೂ ಭಾರತೀಯ ಸಸ್ಯ ಮಾತ್ರ. ಬೇರಾವ ಊಟೋಪಚಾರಗಳಲ್ಲೂ ನೆಲೆಗಾಣದ ಕರಿಬೇವು ನಮ್ಮ ಶಾಶ್ವತ ನೆಂಟ.
ಇನ್ನು ತನ್ನ ಬೆಳೆ-ಬದುಕಿನ ಸಂಗತಿಯಲ್ಲಿನ ಎರಡು ತೀವ್ರ ತುದಿಯಂಚಿನ ವಿವರಗಳನ್ನು ನೋಡೋಣ. ಕರಿಬೇವನ್ನು ಬೆಳೆಸಿದ ಅನುಭವಗಳನ್ನು ಕೇಳಿ ನೋಡಿ. ಅವುಗಳಲ್ಲಿ ಈ ಮುಂದಿನ ಎರಡು ವಿವರಗಳೇ ಶಾಶ್ವತವಾದ ಸಂಗತಿಗಳು. “ನಮ್ಮ ಮನೆಯ ಹಿತ್ತಿಲಲ್ಲಿ ಸೊಗಸಾಗಿ ಬಂದಿದೆ” ಎನ್ನುವವರಿರಬಹುದು. “ಅಯ್ಯೋ ಅದೆಷ್ಟು ಪ್ರಯತ್ನ ಮಾಡಿದರೂ ಬರ್ತಾನೆ ಇಲ್ಲ” ಎನ್ನುವ ಮಾತು ಕೇಳುತ್ತೀರಿ. ನಿಜ. ಕರಿಬೇವು ತುಂಬಾ ಚೆನ್ನಾಗಿ ಬೆಳೆದ ಉದಾಹರಣೆಗಳಂತೆ, ಕಷ್ಟ ಪಟ್ಟು ಸುಸ್ತಾದ ಉದಾಹರಣೆಗಳು ಸಾಕಷ್ಟಿವೆ.
ಇದಕ್ಕೆಲ್ಲಾ ಕುತೂಹಲಕಾರಿಯಾದ ಕಾರಣವೆಂದರೆ ಕರಿಬೇವು ಒಂದು ಗೂಢಚಾರ ಗಿಡ. ಈ ಕ್ಷಣ ಹುಬ್ಬೇರಿಸುವಂತಾಯಿತೇ? ಹಲವು ಸಸ್ಯಗಳನ್ನು ಗೂಢಚಾರ ಗಿಡಗಳನ್ನಾಗಿ ಖನಿಜಗಳ ಹುಡುಕಾಟಗಳಲ್ಲಿ ಬಳಸಿಕೊಳ್ಳಲಾಗಿದೆ. ಅಂದರೆ ಗಿಡ-ಮರ-ಬಳ್ಳಿ ಏನಾದರೂ ಬೆಳದ ರೀತಿ-ವೈಭವವನ್ನು ನೋಡಿ ಅದು ಆತುಕೊಂಡ ನೆಲದ ಮಹಿಮೆಯನ್ನು ಅರಿಯುವ ಬಗೆ. ಹಲವಾರು ಸಸ್ಯಗಳು ತಾವು ಬೆಳೆವ ನೆಲದಲ್ಲಿ ಇರಬಹುದಾದ ಹೆಚ್ಚಿನ ಖನಿಜಗಳ ಅಥವಾ ಕೊರತೆಯಾದ ಖನಿಜಗಳ ಬಗೆಗೆ ಸುಳಿವು ಕೊಡುತ್ತವೆ. ಹಾಗೆ ಕರಿಬೇವು “ಮ್ಯಾಂಗನೀಸ್” ಪತ್ತೆಗೆ ಸಹಕಾರಿಯಾಗಬಲ್ಲ ಸಸ್ಯ. ಅಂದರೆ ಅದು ಸಾಕಷ್ಟು ಹುಲುಸಾಗಿ ಬೆಳೆದ ನೆಲದಲ್ಲಿ ಮಾಂಗನೀಸ್ ದೊರಕುವ ಸಾಧ್ಯತೆ ಇರುತ್ತದೆ. ಅಂತಹಾ ಮಣ್ಣಿನಲ್ಲಿ ಮ್ಯಾಂಗನೀಸ್ ಹೆಚ್ಚಿದ್ದು, ಅಂತಹ ಪರಿಸರವನ್ನು ಕರಿಬೇವು ಬಯಸುತ್ತದೆ. ಇಂತಹ ಸಂಶೋಧನೆಗಳನ್ನು ಆರಂಭಿಸಿ ನಿರ್ವಹಿಸಿದವರಲ್ಲಿ ರಷಿಯಾದ ವಿಜ್ಞಾನಿಗಳದ್ದು ದೊಡ್ಡ ಪಾಲು. ಇರಲಿ ಕರಿಬೇವಿನ ಸಸ್ಯಪರಿಚಯ, ಬೆಳೆವ ಬದುಕನ್ನು ನನ್ನ ವೈಯಕ್ತಿಕ ಬದುಕಲ್ಲೂ ತಂದುಕೊಂಡ ವಿವರಗಳಿಂದ ಮುಂದೆ ನೋಡೋಣ. ಆಗದರ ವಿಶೇಷತೆಯು ಹೆಚ್ಚು ಆಪ್ತವಾಗುವುದು ಖಂಡಿತ.
ನಾನು ನನ್ನ ಸ್ನಾತಕೋತ್ತರ ಅಧ್ಯಯನದ ಸಂಶೋಧನೆಯ ಸಂದರ್ಭದಲ್ಲಿ ಗೂಢಚಾರಿ ಗಿಡಗಳ ಕುರಿತು ಮೊದಲು ಅರಿತದ್ದು. ಗಣಿ ನೆಲದ ಇಕಾಲಜಿಯ ಹಾಗೂ ಮಣ್ಣಿನ ಸಮೀಕರಣದ ಸಂಗತಿಗಳ ತಿಳಿವಿಗಾಗಿ ರಾಜ್ಯದ ವಿವಿಧ ಗಣಿ ನೆಲಗಳ ಸುತ್ತಾಟದಲ್ಲಿ ತೊಡಗಿದ್ದ ಕಾಲ. ಅಲ್ಲಿಯವರೆಗೂ ನಮ್ಮ ಮನೆಯಲ್ಲಿ ನಮ್ಮ ಅಜ್ಜಿ, ಮುಂದೆ ನಮ್ಮ ತಾಯಿ ಕರಿಬೇವನ್ನು ಬೆಳೆಸಲು ಹೆಣಗಾಡಿ ಸೋತಿದ್ದವರೇ! ನಮ್ಮ ಅಮ್ಮನಂತೂ ನಮ್ಮ ಮನೆಯ ಹಿತ್ತಿಲಲ್ಲಿ ಕರಿಬೇವು ಬೆಳೆಯಲು ಸಾಧ್ಯವೇ ಇಲ್ಲ, ಎಂದು ತೀರ್ಮಾನಿಸಿದ್ದರು. ಅದೇ ಕೆಲವು ನೂರಾರು ಅಡಿಗಳ ದೂರದ ಹಿತ್ತಿಲಲ್ಲಿ ಸೊಗಸಾದ ಮರವೂ ಇತ್ತು. ಆರಂಭದಲ್ಲಿ ಹೇಳಿದ ಹಿತ್ತಿಲ ಮರವೇ ಅದು. ಈ ಎರಡೂ ವೈರುಧ್ಯಗಳ ನಡುವೆಯೇ ನನ್ನ ಬಾಲ್ಯವೂ ಕಳೆದದ್ದು. ಮಣ್ಣಿನ ಇಕಾಲಜಿಯ ಅಪೂರ್ಣ ಪಾಠಗಳ ಕಲಿತ ನನಗೆ ಇದು ದೊಡ್ಡ ಕುತೂಹಲವನ್ನೇ ಎದುರಲ್ಲಿಟ್ಟಿತ್ತು. ಗಣಿಗಾರಿಕೆ ನೆಲದ ಸುತ್ತ-ಮುತ್ತಲಿನ ಮಣ್ಣುಗಳ ಗಿಡ-ಗಂಟೆಗಳ ಅರಿಯುವ ತಿರುಗಾಟದಲ್ಲಿ ಒಮ್ಮೆ ಪಶ್ಚಿಮಘಟ್ಟಗಳ ಪರಿಸರದಲ್ಲಿ ಸುತ್ತಾಟದಲ್ಲಿದ್ದೆ. ಅಲ್ಲೆಲ್ಲಾ ಕಾಡುಗಳಲ್ಲಿ ಬೇವಿನ ಮರದ ಹಾಗೆ ಬೆಳೆದ ಕರಿಬೇವು. ಮಾತ್ರವಲ್ಲ, ಮ್ಯಾಂಗನೀಸ್ ಗಣಿಗಾರಿಕೆಯ ನೆಲದಲ್ಲಿ ಅಡ್ಡಾಡುತ್ತಿದ್ದಾಗ ಅದೇ ದೃಶ್ಯ. ಓದಿನ ಅನುಮಾನಗಳಿಂದ ಪ್ರಭಾವಿತನಾಗಿದ್ದ ನನಗೆ, ಮನೆಯ ಹಿತ್ತಲಿನ ಅಮ್ಮನ ಕೊರಗೂ ನೆನಪಾಗಿ ಅಲ್ಲಿನ ಗಣಿ-ಮಣ್ಣನ್ನು ನಾಲ್ಕೈದು ಕಿಲೋಗ್ರಾಮಿನಷ್ಟು ಹೊತ್ತು ತಂದೆ. ಅಮ್ಮ ಪ್ರಯತ್ನಿಸುತ್ತಿದ್ದ, ವರ್ಷಾನುಗಟ್ಟಲೆ ಕಳೆದ ವಯಸ್ಸಿನ ಗಿಡದ ಬುಡಕ್ಕೆ ಮ್ಯಾಂಗನೀಸ್ ಗಣಿ-ಮಣ್ಣನ್ನು ಹಾಕಿದೆ. ಸುತ್ತಲೂ ನೀರು ಹನಿಸಿತ್ತಾ ಅಮ್ಮ ಮುಂದೆ ಆರೆಂಟು ತಿಂಗಳಲ್ಲಿ ಐದಾರು ಅಡಿ ಎತ್ತರಕ್ಕೆ ಬೆಳದ ಕರಿಬೇವು ಕಂಡು, “ನೀನು ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿದ್ದು ಸಾರ್ಥಕವಾಯ್ತು ಬಿಡಪ್ಪ” ಎಂಬ ಬಹು ದೊಡ್ಡ ಬಹುಮಾನ ಕೊಟ್ಟಳು. ಅದೇ ಸಂದರ್ಭದಲ್ಲಿ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿಜ್ಞಾನ ಮಂಡಳಿಗೆ ಸೇರುವ ಮೊದಲು ಕರೆದ ಸಂದರ್ಶನದಲ್ಲಿ ಕರಿಬೇವಿನ ಕಥನವನ್ನು ಹೇಳಿದ್ದೆ. ಕೊನೆಯಲ್ಲಿ ಅವರು ಕೇಳಿದ ಪ್ರಶ್ನೆ, How do you qualify yourself for scientist position? ಉತ್ತರವಾಗಿ ಅಮ್ಮನ ಬಹುಮಾನದ ಖುಷಿಯೇ ಸಾಧನ ಎಂದಿದ್ದೆ! Believe me, I got into the position.
ಮುಂದೆ ಇದೇ ಹಾದಿಯಲ್ಲಿ ಮ್ಯಾಂಗನೀಸ್ ದೊರಕುವಿಕೆಯ ಅರಿವಿನಿಂದ ನೆಲದ ಮಣ್ಣನ್ನು ಮಾರ್ಪಡಿಸುವ ಮೂಲಕ ಹತ್ತಾರು ಕಡೆಗಳಲ್ಲಿ ಕರಿಬೇವು ಬೆಳೆದಿದೆ. ಅದರ ಪ್ರತ್ಯಕ್ಷ ವಿವರಗಳು ಸಾಕಷ್ಟು ಉದ್ದವಾದ ಕಥನಗಳೇ. ಅಂತೂ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಮೂರು-ನಾಲ್ಕು ಪ್ರೊಫೆಸರ್ ಗಳಿಗೂ ನಾನು ಗಿಡ ಬೆಳೆಸುವ ಪತ್ತೆದಾರಿಕೆಗೆ ಈ ಕರಿಬೇವು ಹಚ್ಚಿದ್ದು ಸುಳ್ಳಲ್ಲ. ಈಗ ನಾನು ನನ್ನೂರಿನ ಹಿತ್ತಿಲಲ್ಲಿ ನನ್ನಮ್ಮನಿಗಾಗಿ ಬೆಳೆಸಿದ ಗಿಡವೂ ಇಲ್ಲ, ನನ್ನ ಅಮ್ಮನೂ ಇಲ್ಲ. ನಾಳಿನ ಮಾರ್ಚ್ 14ಕ್ಕೆ ಅಮ್ಮ ತೀರಿಕೊಂಡು 3 ವರ್ಷಗಳಾದವು. ಕೆಲವೇ ಪದಗಳ ಈ ಪುಟ್ಟ ಬರಹದಲ್ಲಿ ಆಕೆಯ ನೆರಳು ಕರಿಬೇವಿನ ಕಥನದ ಪ್ರತಿ ಪದದಲ್ಲೂ ನನಗೆ ಕಂಡಿದ್ದರಲ್ಲಿ ಅನುಮಾನವಿಲ್ಲ. ಇಂದಿಗೂ ನನ್ನ ಪ್ರೀತಿಯ ಹವ್ಯಾಸವಾದ ಅಡಿಗೆ ಮಾಡುವಾಗ ಒಗ್ಗರಣೆಯ ಸಿಡಿತದಲ್ಲಿ ಮಿಂದೇಳುವ ಕರಿಬೇವಿನೆಲೆಗಳಲ್ಲಿ ಅಥವಾ ನನ್ನ ತಟ್ಟೆಯ ಬಂದ ಒಂದೆರಡು ಎಲೆಗಳಲ್ಲಿ ಆಕೆಯು ಕಾಣುತ್ತಾಳೆ. ಇಡೀ ಬಾಲ್ಯದಲ್ಲಿ ಬೆಳೆಯಲಾರದ ಗಿಡವೊಂದು ನನ್ನ ಯೌವನನ ಹೊತ್ತಿಗೆ ಮರವಾಗಿದ್ದು, ಅಮ್ಮ ಕಂಡು ಖುಷಿಗೊಂಡ, ನೆನಪು ಒಮ್ಮೊಮ್ಮೆ ಕಣ್ಣಿರ ಹನಿಗಳಲ್ಲಿ ಒದ್ದೆಯಾಗಿ, ಮನಸ್ಸನ್ನು ಭಾರವಾಗಿಸುತ್ತದೆ.
ಕರಿಬೇವು, ನಿಂಬೆಯ ಜಾತಿಯ ಗಿಡವಾದರೂ ತನ್ನ ಗುಟ್ಟನ್ನು ಅದರ ಜೊತೆಗೆ ಸಮೀಕರಿಸದ ಗಿಡವಾಗಿರುವುದು ಇನ್ನೊಂದು ವಿಶೇಷವೇ! ನಿಂಬೆಯ ಗಿಡದ ರೂಪ-ಲಾವಣ್ಯವಾವೂ ಇಲ್ಲದ ದಟ್ಟ ನೆರಳಿನ ಹಸಿರಿನ್ನೇ ಎಲೆಗಳಲ್ಲಿಟ್ಟು, ಅದರ ಜೊತೆಗೆ ಹಿತವಾದ ಸುವಾಸನೆಯನ್ನಿಟ್ಟ ಸಸ್ಯ ಕರಿಬೇವು. ಕರ್ನಾಟಕ ರಾಜ್ಯದಲ್ಲಿ ಬೆಳೆಯಲೆಂದೇ ಬಿಡುಗಡೆಗೊಂಡ ಸಾಕಷ್ಟು ಪರಿಮಳ ಇರುವ ತಳಿಯ ಹೆಸರೂ “ಸುವಾಸಿನಿ” ಎಂದೇ ಇದೆ. ಇದರ ಪರಿಮಳಕ್ಕೆ ಮೂಲ ಕಾರಣ ಸಿನ್ನೆಮಾಲ್ಡಿಹೈಡ್ ಎಂಬ ರಾಸಾಯನಿಕ. ಇದರ ಜೊತೆಗೆ ಕೆಲವು ಅಲ್ಕಲಾಯ್ಡ್ಗಳೂ ಮತ್ತೆ ಕೆಲವು ಗಿರಿನಿಂಬಿನ್, ಮಹಾನಿನ್ ಎಂಬಂತಹಾ ರಾಸಾಯನಿಕಗಳಿವೆ. ಸಿನ್ನೆಮಾಲ್ಡಿಹೈಡ್ ಮಾತ್ರ ಇದರ ಇದನ್ನು ಸುವಾಸನಾ ಸಸ್ಯವನ್ನಾಗಿಸಲು ಮುಖ್ಯ ಕಾರಣವಾಗಿದೆ.
ಗಿಡದಿಂದ ಸುವಾಸನೆಯುಳ್ಳ ಬಿಳಿಯ ಹೂವುಗಳು ಬಿಡುತ್ತವೆ. ಸ್ವಕೀಯ ಪರಾಗಸ್ಪರ್ಶದಿಂದ ಬೀಜಗಟ್ಟುವ ಇವುಗಳಿಂದ ಒಂದು ಬೀಜವುಳ್ಳ ಕಾಯಿಗಳು ಬಿಡುತ್ತವೆ. ಕಾಯಿಯು ಹಣ್ಣಾದಾಗ ತಿರುಳನ್ನು ಸವಿಯಲು ಔಷಧಯುಕ್ತ ಹಣ್ಣಿನ ಸವಿಯು ಮುದಕೊಡುತ್ತದೆ. ಬೀಜಗಳನ್ನು ಬಳಸಿಯೂ ಹಾಗೂ ಗಿಡದ ಕಾಂಡದಿಂದ ಕತ್ತರಿಸಿದ ಕೊಂಬೆಗಳಿಂದಲೂ ಸಸಿ ಕಟ್ಟಿ, ನಾಟಿ ಮಾಡಿ ಬೆಳೆಸಬಹುದು. ಆದರೆ ಸೊಗಸಾಗಿ ಬರಲಾರದ ನೆಲದಲ್ಲಿ ಮ್ಯಾಂಗನೀಸ್ ದೊರಕುವಿಕೆಯನ್ನು ಖಾತ್ರಿಗೊಳಿಸಿ ಖಂಡಿತವಾಗಿಯೂ ಬೆಳೆಯಬಹುದು. ಕೃತಕವಾಗಿ ರಾಸಾಯನಿಕದ ಮೂಲಕ ಮಾಡಬಹುದಾದ ಇಂತಹಾ ಪ್ರಯೋಗದಲ್ಲಿ ಜಾಗರೂಕತೆ ಬೇಕು. ಹುಳಿ ಮಜ್ಜಿಗೆ, ಹುಳಿಯಾದ ಸಾರು-ಸಾಂಬಾರು ಹಾಕುವ ಉದ್ದೇಶಗಳಲ್ಲೂ ಇದೇ ಹಿತವಿದೆ. ಹುಳಿ ಮಣ್ನಿನಲ್ಲಿ ಮ್ಯಾಂಗನೀಸು ದೊರಕುವಿಕೆಯನ್ನು ಹೆಚ್ಚಿಸಬಹುದು.
ಒಗ್ಗರಣೆಯ ಎರಡೆಸಳು ಮಾತ್ರವಲ್ಲ, ಔಷಧೋಪಚಾರಗಳಲ್ಲೂ ಕರಿಬೇವು ತನ್ನ ಇರುವನ್ನು ನೆಲೆಗೊಳಿಸಿದೆ. ಆಯುರ್ವೇದವು ಹತ್ತಾರು ಔಷಧ ಗುಣಗಳನ್ನು ದಾಖಲು ಮಾಡಿದೆ. ನೇರವಾಗಿ 3-4 ಎಲೆಗಳ ತಿನ್ನುವುದನ್ನು ರಕ್ತ ಶುದ್ಧಿಕರಣ, ಸಕ್ಕರೆ ನಿರ್ವಹಣೆ ಮುಂತಾಗಿ ಶಿಫಾರಸ್ಸು ಮಾಡುತ್ತಾರೆ. ನಮ್ಮ ದೇಹದ ತೂಕದ ನಿರ್ವಹಣೆಯಲ್ಲೂ ಕರಿಬೇವಿನ ಪಾತ್ರವನ್ನು ಗುರುತಿಸಲಾಗಿದೆ. ಹಲವು ಆಂಟಾಕ್ಸಿಡೆಂಟುಗಳಿರುವುದನ್ನೂ ಶೋಧಗಳು ತಿಳಿಸಿವೆ. ತಲೆಗೂದಲಿನ ಸೌಂದರ್ಯದಲ್ಲೂ ಕರಿಬೇವು ಪಾತ್ರವಹಿಸುತ್ತದೆ. ಹಾಗೆಂದು ಕರಿಬೇವಿನ ಚಿಕಿತ್ಸೆಯನ್ನು ಕೂದಲಿಗೆ ಮಾಡುವ ನಿದರ್ಶನಗಳೂ ಇವೆ. ಎಲೆಗಳಲ್ಲಿರುವ “ವಿಟಮಿನ್ ಎ” ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ಹಾಂ..ನಮ್ಮ ನೆನಪನ್ನು ಚುರುಕುಗೊಳಿಸಲೂ ಕರಿಬೇವು ನೆರವಾಗುತ್ತದೆ. ಎಣ್ಣೆಯಲ್ಲಿ ಮಿಂದೆದ್ದ ಮೇಲೆ ಲಾಭ ಕಡಿಮೆ, ವಿಟಮಿನ್ನು ಎಣ್ಣೆಯಲ್ಲಿ ಕರಗಿ ಆಹಾರದಲ್ಲಿ ಬೆರೆತಿರುತ್ತದೆ ಎಂದು ತಟ್ಟೆಯಲ್ಲಿ ಕಂಡೆರಡು ಎಲೆಗಳನ್ನು ಎತ್ತಿ ಹೊರಹಾಕುವುದೇ ಹೆಚ್ಚು. ಆದರೆ ಸರಿಯಾಗಿ ಕರಿದ ಕರಿಬೇವಿನ ಎಲೆಗಳ ರುಚಿಯಂತೂ ವಿಶೇಷವಾಗಿರುತ್ತದೆ. ಜೊತೆಗೆ ಮ್ಯಾಂಗನೀಸ್ ನಮ್ಮ ದೇಹಕ್ಕೆ ಅಗತ್ಯವಾದ ಖನಿಜ. ಅದನ್ನು ಪಡೆಯಲು ಎಲೆಗಳ ಸೇವನೆಯು ಸಂಪೂರ್ಣ ಅಗತ್ಯ. ಅದಕ್ಕೆ ತಟ್ಟೆಯಿಂದ ಹೊರ ಹಾಕುವ ಮುನ್ನ ಸ್ವಲ್ಪ ಯೋಚಿಸಿ.
ಒಗ್ಗರಣೆಯಂತೆ ಬೇಕು-ಬೇಡಗಳನ್ನು ಜೊತೆಯಲ್ಲೇ ಇಟ್ಟುಕೊಂಡ ಗಿಡ. ಬೆಳೆಸುವವರ ಆಸಕ್ತಿಯಲ್ಲಿ ರಾಜೋಪಚಾರವನ್ನು ಪಡೆಯುತ್ತದೆ. ಹಿತ್ತಿಲಲ್ಲೋ, ಅಂಗಳದಲ್ಲೋ ಗಿಡವೊಂದಿದ್ದರೆ ಒಗ್ಗರಣೆಗೆ ಎಣ್ಣೆಯನಿಟ್ಟೂ, ಫ್ರೆಶ್ ಆದ ಎಲೆಗಳನ್ನೇ ಪಡೆದು ಅಡುಗೆಯ ರುಚಿಗೆ ತಾಜಾತನ ಕೊಡಬಹುದು. ಅಪ್ಪಟ ಭಾರತೀಯವಾದ ಗಿಡ, ಅದರಲ್ಲೂ ದಕ್ಷಿಣ-ಭಾರತದ ಕರ್ರೀ-ಎಲೆಯಾಗಿ ರುಚಿ-ಔಷಧಗಳೆರಡರ ಹಿತವನ್ನೂ ಪರಿಮಳದಲ್ಲಿಟ್ಟು ವೈಜ್ಞಾನಿಕವಾಗಿ ಪಾಶ್ಚಿಮಾತ್ಯರ ಪದಗಳ ಹೊತ್ತು ನಮ್ಮ ನಾಲಿಗೆಯ ಮೇಲೆ ತನ್ನ ಇರುವನ್ನು ಸಾಧಿಸಿದೆ.
ನಮಸ್ಕಾರ – ಚನ್ನೇಶ್
ನಾ ಬಹಳ ಮೆಚ್ಚಿದ ಲೇಖನ. ಅಮ್ಮನ ಶಿಪಾರಸ್ಸು ಪ್ರಕರಣ ಭೇಷ್.
ಸುವಾಸಿನಿ ತಳಿ ಎಲ್ಲಿ ಸಿಗುತ್ತದೆ?