You are currently viewing ಒಂದೂವರೆ ಶತಮಾನಗಳ ಶ್ರೇಷ್ಠತೆಯ ಹಿರಿಮೆ  “ನೇಚರ್‌” ಪತ್ರಿಕೆ

ಒಂದೂವರೆ ಶತಮಾನಗಳ ಶ್ರೇಷ್ಠತೆಯ ಹಿರಿಮೆ “ನೇಚರ್‌” ಪತ್ರಿಕೆ

ಕಳೆದವಾರ ‌2021ರ ವಿಜ್ಞಾನವನ್ನು ರೂಪಿಸಿದವರೆಂದು “ನೇಚರ್‌” ಪತ್ರಿಕೆ ಆಯ್ಕೆ ಮಾಡಿದ್ದ ಹತ್ತು ಮಂದಿ ವಿಜ್ಞಾನಿಗಳ ಪರಿಚಯವನ್ನು ಮಾಡಲಾಗಿತ್ತು. ಕೆಲವು ಗೆಳೆಯ-ಗೆಳತಿಯರು ನೇಚರ್‌ ಪತ್ರಿಕೆಯ ವಿಶೇಷತೆಯ ಬಗ್ಗೆ ಪ್ರಶ್ನಿಸಿದ್ದರು. ಅವರ ಕುತೂಹಲವನ್ನು ತಣಿಸಲು ಹಾಗೂ CPUS ನ ವಿಜ್ಞಾನ ಸಮಾಜೀಕರಣದ ಆಶಯದಲ್ಲಿ 150 ವರ್ಷಗಳಿಗೂ ಹೆಚ್ಚು ಕಾಲ ವಿಜ್ಞಾನವನ್ನು ಪ್ರಸರಣ ಮಾಡುತ್ತಾ ಶ್ರೇಷ್ಠ ವಿಜ್ಞಾನದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ ಮಹತ್ವದ ನೇಚರ್‌ ಪತ್ರಿಕೆ ಬಗ್ಗೆ ಹೇಳಲೇಬೇಕಿದೆ.

ಈ ವಾರದ “ನೇಚರ್‌” ಪತ್ರಿಕೆಯ ಮುಖ ಪುಟ

       ಇಲ್ಲಿಗೆ 153 ವರ್ಷಗಳ ಹಿಂದೆ 1869ರ ನವೆಂಬರ್ ತಿಂಗಳ ನಾಲ್ಕನೆಯ ತಾರೀಖು “ನೇಚರ್” ವಿಜ್ಞಾನ ಪತ್ರಿಕೆಯಾಗಿ ಇಂಗ್ಲಂಡ್‌ನಿಂದ ಪ್ರಕಟವಾಗಿತ್ತು. 1869ರಲ್ಲಿ ಆರಂಭವಾದ ಈ ಪತ್ರಿಕೆಯು ಇಂದಿನವರೆಗೂ ಪ್ರತೀ ವಾರ ಪ್ರಕಟವಾಗುವುದಲ್ಲದೆ, ಇಡೀ 150 ವರ್ಷಗಳ ವಿಜ್ಞಾನದ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಕಳೆದ ಒಂದೂವರೆ ಶತಮಾನವೂ ಸಹ ವಿಜ್ಞಾನದ ಅನೇಕ ಬಹು ಮುಖ್ಯವಾದ ಘಟನೆಗಳಿಗೆ ಕಾರಣವಾಗಿದ್ದು, ಅವುಗಳಲ್ಲಿ ಹಲವಾರು ಈ ಪತ್ರಿಕೆಯ ಸಹಯೋಗವನ್ನು ಹೊಂದಿರುವುದು ವಿಶೇಷ ಸಂಗತಿ. ಅಂತಹ ಘಟನೆಗಳನ್ನು ಕಾಲದಿಂದ ಕಾಲಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಅವುಗಳನ್ನು ಮುಂದುವರೆಸುವಲ್ಲಿ “ನೇಚರ್” ಪತ್ರಿಕೆಯ ಪಾತ್ರ ದೊಡ್ಡದು.

ಮೊಟ್ಟ ಮೊದಲ ಪತ್ರಿಕೆಯ ಮುಖ ಪುಟ

ವಿಜ್ಞಾನ ಮತ್ತು ಸಮಾಜದ ನಡುವಣ ಸಂಬಂಧವನ್ನು ಬೌದ್ಧಿಕ ಮತ್ತು ಭಾವನಾತ್ಮಕವಾದ ತಿಳಿವಿನಲ್ಲಿ ತರುವಂತೆ ಮಾಡುವ ಬ್ರಿಟಿಷ್ ಪ್ರಯೋಗಗಳು ಅನನ್ಯವಾದವು. ಇದೇ ನವೆಂಬರ್ ತಿಂಗಳಲ್ಲೇ ಸುಮಾರು 358 ವರ್ಷಗಳ ಹಿಂದೆ ಪ್ರಾರಂಭವಾದ ಬ್ರಿಟನ್ನಿನ ರಾಯಲ್ ಸೊಸೈಟಿಯು ವಿಜ್ಞಾನದ ಸಾರ್ವಜನಿಕ ಭಾಷಣಗಳನ್ನು ಏರ್ಪಡಿಸುವ ಮೂಲಕ ಇಂತಹ ಸಾಧ್ಯತೆಗಳಿಗೆ ಅಡಿಪಾಯ ಹಾಕಿಕೊಟ್ಟಿದೆ. ಅಲ್ಲಿಯೇ “ನೇಚರ್” ಪತ್ರಿಕೆಯ ಆರಂಭಕ್ಕೂ ಇಂತಹ ಸಾಮುದಾಯಿಕ ಆಸಕ್ತಿಯು ಕಾರಣವಾಗಿದೆ. ಬ್ರಿಟನ್ನಿನ ಖ್ಯಾತ ಕವಿ ವಿಲಿಯಂ ವರ್ಡ್ಸ್‌ ವರ್ತ್‌ ಅವರ ಕವಿತೆಯ ಸಾಲು “To the solid ground of NATURE trusts the Mind that builds for aye” ಪತ್ರಿಕೆ ಹೆಸರನ್ನು “ನೇಚರ್” ಎಂದು ಕರೆಯಲು ಕಾರಣವಾಗಿದೆ. “ನಿಸರ್ಗದ ಅಡಿಪಾಯದ ಭದ್ರತೆಯು ಅದನ್ನು ಕಟ್ಟುವ ಮನಸ್ಸನ್ನು ಸದಾ ನಂಬಿದೆ” ಎನ್ನುವ ಅರ್ಥದ ಈ ಸಾಲು ಪತ್ರಿಕೆಯ ಉದ್ದೇಶವನ್ನು ಸಮರ್ಥಿಸಲು ಯುಕ್ತವಾಗಿದೆ. ನಿಸರ್ಗವನ್ನು ಅರ್ಥಮಾಡಿಕೊಳ್ಳುವ ಹುಡುಕಾಟವಾಗಿರುವ ವಿಜ್ಞಾನದ ಹಾದಿಯು ಸುಗಮವಾಗಿರಲು ಗಟ್ಟಿಯಾದ ಮನಸ್ಸುಗಳು ಬೇಕು. ಅದನ್ನೇ ಪತ್ರಿಕೆಯ ಧೋರಣೆಯೆಂಬಂತೆ ಪತ್ರಿಕೆಯ ಟ್ಯಾಗ್‍ಲೈನ್ ಆಗಿ ನಿರಂತರವಾಗಿ 75 ವರ್ಷಗಳ ಕಾಲ ಈ ಸಾಲು ಮುಖಪುಟದಲ್ಲಿ ಅಚ್ಚಾಗುತ್ತಿತ್ತು.

“ನೇಚರ್” ಒಂದು “ಇಲ್ಲಸ್ಟ್ರೇಟೆಡ್ ವೀಕ್ಲಿ ವಿಜ್ಞಾನ ಪತ್ರಿಕೆ”ಯಾಗಿ ಆರಂಭವಾಯಿತು. ಅಂದರೆ ಒಂದು ಸಚಿತ್ರ ಪತ್ರಿಕೆಯಾಗಿ ಜನತೆಗೆ ವಿಜ್ಞಾನವನ್ನು ಹಂಚುವ ಆತ್ಯಂತಿಕ ಉದ್ದೇಶವುಳ್ಳದ್ದಾಗಿತ್ತು. ಹಾಗಾಗಿ ಅದರ ಮುಖಪುಟಗಳಿಂದ ಅದರ ಆಕರ್ಷಣೆ ಆರಂಭವಾಗುತ್ತಿತ್ತು. ಯಾವುದಾದರೂ ವಿಜ್ಞಾನದ ವಿಶೇಷತೆಯನ್ನು ಹೊತ್ತೇ ಮುಖಪುಟ ಅಚ್ಚಾಗುತ್ತಿತ್ತು. ಅದರ ಶ್ರೇಷ್ಠತೆಯು ಹೇಗೆ ಬೆಳೆಯಿತೆಂದರೆ ಅದರಲ್ಲಿ ಪ್ರಕಟಿಸುವುದೇ ಹೆಮ್ಮೆಯ ಸಂಗತಿ ಎಂದು ವಿಜ್ಞಾನಿಗಳೂ ಭಾವಿಸತೊಡಗಿ ಅದೊಂದು ಪ್ರಬುದ್ಧ ವಿಜ್ಞಾನ ಸಂಶೋಧನಾ ಪತ್ರಿಕೆಯಾಗಿ ಹೊರಹೊಮ್ಮಿತು. ಇಂದಿಗೂ ಒಂದೂವರೆ ಶತಮಾನಗಳ ಕಾಲದ ನಂತರವೂ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಲ್ಲೊಂದಾಗಿದೆ. ಇಂದಿಗೂ ವಿಜ್ಞಾನಿಗಳಿಗೆ ಅದರಲ್ಲಿ ಪ್ರಕಟಿಸುವುದೇ ಹೆಮ್ಮೆಯ ಸಂಗತಿಯಾಗಿದೆ.  

ಕಳೆದ ನೂರೈವತ್ತು ವರ್ಷಗಳೂ ಸಹ ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದವು. ನಮ್ಮ ಬಹುಪಾಲು ವೈಜ್ಞಾನಿಕ ತಿಳಿವುಗಳು ಮಹತ್ತರವಾದ ತಿರುವುಗಳನ್ನು ಪಡೆದದ್ದೇ ಈ ಕಾಲದಲ್ಲಿ. ನಮ್ಮನ್ನು ಕುರಿತಂತೆಯೇ ಬದಲಾದ ತಿಳಿವಿನ ಶೋಧಗಳನ್ನು ಉದಾಹರಣೆಯಾಗಿ ನೋಡೋಣ. ಇದೇ ಪತ್ರಿಕೆಯಲ್ಲಿ 1925ರ ಫೆಬ್ರವರಿಯಲ್ಲಿ ಮಾನವ ಮತ್ತು ವಾನರ ಸಂತತಿಯ ಸಂಬಂಧಗಳ ಪಳೆಯುಳಿಕೆಗಳ ಪತ್ತೆಯ ಶೋಧವೊಂದನ್ನು ಪ್ರಕಟಿಸಿತು. ಇದು ಮಾನವ ಕುಲವು ಆಫ್ರಿಕಾದ ವಾನರ ಸಂತತಿಯೊಂದರಿಂದ ವಿಕಾಸಗೊಂಡ ಸಂಗತಿಗೆ ಉದಾಹರಣೆಗಳಿಂದ ವಿವರಿಸಿತ್ತು. ಅದು ಆಗಿನ ತಿಳಿವಳಿಕೆಗೆ ಬಲವಾದ ತಿರುವು ಕೊಟ್ಟದ್ದಲ್ಲದೆ, ಡಾರ್ವಿನ್ನರ ವಿಕಾಸವಾದದ ಊಹೆಯ ಆಫ್ರಿಕಾದ ನೆಲೆಗೆ ಪುಷ್ಠಿಕೊಟ್ಟಿತ್ತು. ಮುಂದೆ 80 ವರ್ಷಗಳ ತರುವಾಯ ಇದೇ ಪತ್ರಿಕೆಯು 2005ರಲ್ಲಿ ಮಾನವ ಸಂಕುಲವಾದ “ಹೋಮೊ”ವಿನಲ್ಲಿ ಹಲವು ವೈವಿಧ್ಯತೆಗಳಿರುವ ಕುರುಹುಗಳ ಶೋಧವನ್ನು ಪ್ರಕಟಿಸಿ ನಮ್ಮ ವಿಕಾಸದ ತಿಳಿವಳಿಕೆಯನ್ನು ಮುಂದುವರೆಸಿತ್ತು. ಅದಾದಕೂಡಲೇ ಅಂತಹ ತಿಳಿವಳಿಕೆಯ ಮಾನವನ ಇತಿಹಾಸ ಪೂರ್ವ ಸಾಕ್ಷ್ಯಗಳನ್ನು ಹುಡುಕಲು ಸಾಧ್ಯವಾಯಿತು. ಅದರಿಂದಾಗಿ ಕೇವಲ 30,000 ದಿಂದ 60,000 ವರ್ಷಗಳ ಹಿಂದಿನವರೆಗೂ ಮಾನವ ಸಂಕುಲದ ವಿವಿಧ ಪ್ರಭೇದಗಳು ಸಾಹಚರ್ಯ ನಡೆಸಿದ್ದ ಕುರುಹುಗಳು ದೊರೆತವು. ಅಂದರೆ ಆಧುನಿಕ ಮಾನವನು ನಿಯಾಂಡರ್‍ತಲ್ ಮಾನವರೊಡನಾಟವಿದ್ದ ಸಾಕ್ಷ್ಯಗಳು ಸಿಕ್ಕವು. ಹೀಗೆ ಅಂತಹ ಬಹುಮುಖ್ಯವಾದ ಐತಿಹಾಸಿಕ ವೈಜ್ಞಾನಿಕ ಶೋಧಗಳನ್ನು ಪತ್ರಿಕೆ ಪ್ರಕಟಿಸಿ ನಮ್ಮ ತಿಳಿವಳಿಕೆಯನ್ನು ಗಟ್ಟಿ ಮಾಡಿದೆ.

ಭೌತವಿಜ್ಞಾನದ ಬಹುಮುಖ್ಯ ಕೊಡುಗೆಗಳಲ್ಲೂ ಪತ್ರಿಕೆಯು ಪಾತ್ರವಹಿಸಿದೆ. 1932ರಲ್ಲೇ ಪರಮಾಣುವಿನ ಹೊಸ ಕಣ “ನ್ಯೂಟ್ರಾನ್”ಅನ್ನು ಪತ್ತೆ ಹಚ್ಚಿದ ಶೋಧವನ್ನು ಪತ್ರಿಕೆಯು ಪ್ರಕಟಿಸಿತ್ತು. ಆ ವೇಳೆಗಾಗಲೇ ತಿಳಿದಿದ್ದ “ಪ್ರೋಟಾನು” ಮತ್ತು “ಇಲೆಕ್ಟ್ರಾನ್”ಗಳ ಜೊತೆಗೆ ಪರಮಾಣುವಿಗೆ ಹೊಸ ಸಂಗಾತಿ ಇರುವುದು ಗೊತ್ತಾಗಿತ್ತು. ಮುಂದೆ ಪತ್ರಿಕೆಯು ಕಣಭೌತವೈಜ್ಞಾನಿಕ ಸಂಗತಿಗಳ ಶೋಧಗಳ ತಿಳಿವನ್ನು ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಇಂದು ಮೂಲಭೂತ ಕಣಗಳ ಕುರಿತ ಅರಿವು ಹೆಚ್ಚಿದೆ. ಇಂತಹ ಶೋಧಗಳ ತಿಳಿವಿನ ಹರವು ಭೂಮಿಯಾಚೆಗೂ ಪಸರಿಸಿ ಭೂಮಿಯಂತಹ ಅನ್ಯಗ್ರಹಗಳ ಮೊಟ್ಟಮೊದಲ ಅರಿವನ್ನೂ 1995ರಲ್ಲಿ ಪತ್ರಿಕೆಯು ಹೊರತಂದಿತ್ತು. ಬೇರೊಂದು ಗೆಲಾಕ್ಸಿಯಲ್ಲಿರುವ ಸೂರ್ಯನಂತಹದೇ ನಕ್ಷತ್ರವನ್ನು ಸುತ್ತುತ್ತಿರುವ ಗ್ರಹದ ಪತ್ತೆಯಾಗಿತ್ತು. ಆ ಶೋಧಕ್ಕೆ ಇದೇ ವರ್ಷ 2019ರ ನೊಬೆಲ್ ಪುರಸ್ಕಾರವೂ ದೊರೆತಿದೆ.

ನೇಚರ್ ಪತ್ರಿಕೆಯ ಅತ್ಯಂತ ನೆನಪಲ್ಲಿ ಉಳಿಯುವಂತಹ ಪ್ರಕಟಣೆ ಎಂದರೆ “ಡಿ.ಎನ್.ಎ.” ರಚನೆಯ ಕುರಿತ 1953 ರ ಪ್ರಕಟಣೆಗಳು. ನೊಬೆಲ್ ಬಹುಮಾನವನ್ನು ತಂದುಕೊಟ್ಟ ಆ ಪ್ರಕಟಣೆ ಇಂದಿಗೂ ನೇಚರ್ ಪತ್ರಿಕೆಯ ಬಹು ಚರ್ಚಿತ ವೈಜ್ಞಾನಿಕ ಪ್ರಬಂಧ. ಇದು ಜೀವಿವಿಜ್ಞಾನದ ತಿಳಿವನ್ನೇ ಬದಲಿಸಿತಲ್ಲದೆ, ಆ ಮುಂದಿನ ಜೀವಿವಿಜ್ಞಾನದ ಶೋಧನೆಯ ದಿಕ್ಕನ್ನೂ ಬದಲಿಸಿತು. ಅದರಂತೆ ಅತ್ಯಂತ ಹೆಮ್ಮೆಯ ಮಾನವ ತಳಿಯ ಮೊದಲ ಡ್ರಾಫ್ಟ್ ಸಹ ಇದೇ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದರಿಂದಾಗಿ ಈಗೆಲ್ಲಾ ಕೃಷಿ, ವೈದ್ಯಕೀಯ, ಆನುವಂಶಿಕ ತಿಳಿವು, ಅಪರಾಧ ಪತ್ತೆದಾರಿಕೆಯ ನ್ಯಾಯ ಮುಂತಾದವೆಲ್ಲಾ ಇಂದು ಭಿನ್ನವಾಗಿ ಚರ್ಚಿಸಲು ಸಾಧ್ಯವಾಗಿದೆ.

ಯಾವುದೇ ಪತ್ರಿಕೆಯು ತನ್ನ ಉದ್ದೇಶಿತ ಗುರಿಯಲ್ಲಿ ಜವಾಬ್ದಾರಿಯುತ ಸನ್ನಿವೇಶವನ್ನು ಕಾಪಾಡಿಕೊಳ್ಳುವುದೂ ಮುಖ್ಯ. ಕಳೆದ ಶತಮಾನದ ಅನ್ವೇಷಣೆಗಳು ಹಲವು ಅತ್ಯಂತ ಉಪಯುಕ್ತ ತಂತ್ರಜ್ಞಾನಗಳನ್ನು ಕೊಟ್ಟಿದೆ. ಅದರ ಜೊತೆಯಲ್ಲೇ ಪರಿಸರವನ್ನು ವಿನಾಶದತ್ತ ಕೊಂಡೊಯ್ಯುವ ದಿಶೆಯಲ್ಲೂ ಅಪಾಯಕಾರಿ ಅನುಶೋಧಗಳೂ ನಡೆದಿವೆ. ಪತ್ರಿಕೆಯು 1974ರಲ್ಲೇ ಮೊದಲ ಬಾರಿಗೆ ಕ್ಲೋರೊಫ್ಲುರೋಕಾರ್ಬನ್‍ಗಳಿಂದ ಬಿಡುಗಡೆಯಾಗುವ ಕ್ಲೋರಿನ್ ಆಗಸದಾಚೆಗಿನ ಓಝೋನ್ ಪದರವನ್ನು ನಾಶಗೊಳಿಸುವ ಬಗೆಗೆ ಪ್ರಕಟಿಸಿತ್ತು. ಅದಾದ ಒಂದು ದಶಕದಲ್ಲಿ ಮೊಟ್ಟಮೊದಲ ಓಝೋನ್ ವಿನಾಶದ ತಿಳಿವಿನ ಸಾಕ್ಷಿಯು ಅಂಟಾರ್ಟಿಕಾದ ಮೇಲುಗಡೆ ಪತ್ತೆಯಾಗಿತ್ತು. ಇದರಿಂದಾಗಿ ಮುಂದೆ 1989ರಲ್ಲಿ ಓಝೋನ್ ನಾಶಪಡಿಸುವ ಹೊರಸೂಸುಗಳನ್ನು ಕಡಿಮೆಗೊಳಿಸುವ ಅಂತರರಾಷ್ಟ್ರೀಯ ಒಪ್ಪಂದ “ಮಾಂಟ್ರಿಯಲ್ ಪ್ರೊಟೊಕಾಲ್” ಜಾರಿ ಬರಲು ಕಾರಣವಾಯಿತು.

ಸರ್‌ ಜೋಸೆಫ್‌ ನಾರ್‌ಮನ್‌ ಲಾಕ್ಯೆರ್‌ (Sir Joseph Norman Lockyer (17 May 1836 – 16 August 1920) ನೇಚರ್‌ ಪತ್ರಿಕೆಯ ಸ್ಥಾಪಕ ಸಂಪಾದಕರು.  ನಾರ್‌ಮನ್‌ ಲಾಕ್ಯೆರ್‌ ಬಾಹ್ಯಾಕಾಶ ವಿಜ್ಞಾನಿ, ಇವರು ಫ್ರೆಂಚ್‌ ವಿಜ್ಞಾನಿ ಪಿಯೆರಿ ಜಾನಸೆನ್‌ (Pierre Janssen) ಅವರೊಂದಿಗೆ “ಹೀಲಿಯಂ” ಅನಿಲವನ್ನು ಕಂಡುಹಿಡಿದವರೆಂದೇ ಗುರುತಿಸಲಾಗುತ್ತದೆ. ಹತ್ತೊಂಭತ್ತನೆಯ ಶತಮಾನದಲ್ಲಿ ನೇಚರ್‌ ಅಂತಹಾ ವಿಜ್ಞಾನ ಪತ್ರಿಕೆಯನ್ನು ಪ್ರಕಟವಾಗುವಂತೆ ಮುಂದಾಳತ್ವ ವಹಿಸಿ, ಅದರ ವಿಶಿಷ್ಟತೆಯನ್ನು ಹುಟ್ಟು ಹಾಕಿದ ವಿಜ್ಞಾನಿ. ಇಂಗ್ಲಂಡ್‌ ನ ವಾರ್‌ವಿಕ್‌ ಶೈರ್‌ನ ರಗ್ಬೀ ಇವರ ಹುಟ್ಟೂರು. ಲಂಡನ್ನಿನ ಇಂಪೀರಿಯಲ್‌ ಕಾಲೇಜಿನ ವಿದ್ಯಾರ್ಥಿ. ಇವರು 1868 ರಲ್ಲಿ ಇಲೆಕ್ಟ್ರೋ ಮಾಗ್ನಟಿಕ್‌ ಸ್ಪೆಕ್ಟ್ರೊಸ್ಕೊಪಿ ಅಧ್ಯಯನದಲ್ಲಿ ಸೂರ್ಯನ ರೋಹಿತವನ್ನು ಸಂಶೋಧಿಸುತ್ತಾ ಅದರಲ್ಲಿ ವಿಶೇಷತೆಯನ್ನು ಗುರುತಿಸಿದ್ದರು. ಅದಕ್ಕೆ ಕಾರಣವಾದ ಅನಿಲವೆಂದು ಅದನ್ನು ಸೂರ್ಯ ಎಂಬರ್ಥದ “ಹೀಲಿಯಂ” ಎಂದೇ ಕರೆದಿದ್ದರು. ಮುಂದೆ 27 ವರ್ಷಗಳ ತರುವಾಯ ವಿಲಿಯಂ ರಾಮ್ಸೆ ಭೂಮಿಯ ಮೇಲೆ ಮೊಟ್ಟ ಮೊದಲ ಬಾರಿಗೆ ಹೀಲಿಯಂ ಅನ್ನು ಕಂಡುಹಿಡಿದಿದ್ದರು. ಇಂತಹ ವಿಶಿಷ್ಟ ವಿಜ್ಞಾನದ ಕುತೂಹಲದ ಹಿನ್ನೆಲೆಯ ನಾರ್‌ಮನ್‌ ಲಾಕ್ಯೆರ್‌ ಅದೇ ಸಂದರ್ಭದಲ್ಲೇ ಈ ಪತ್ರಿಕೆಯ ಮುಂದಾಳತ್ವವನ್ನು ವಹಿಸಿ, ಇದರ ಹುಟ್ಟಿಗೂ ಕಾರಣರಾದರು.

ಮಗ್ಡಲಿನಾ ಸ್ಕಿಪರ್‌ (Magdalena Skipper)

ಮಗ್ಡಲಿನಾ ಸ್ಕಿಪರ್‌ (Magdalena Skipper) ಪ್ರಸ್ತುತ ನೇಚರ್‌ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿದ್ದಾರೆ. ಕೇಂಬ್ರಿಜ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿಯನ್ನು ಜೀವಿವಿಜ್ಞಾನದಲ್ಲಿ ಪಡೆದ ಸ್ಕಿಪ್ಪರ್‌  ಮೂಲತಃ ಆನುವಂಶಿಯ ವಿಜ್ಞಾನದ ಸಂಶೋಧಕಿ. ಕ್ಯಾನ್ಸರ್‌ ಕುರಿತ ಜೀವಿವೈಜ್ಞಾನಿಕ ಸಂಶೋಧನೆಯ ಹಿನ್ನೆಲೆಯವ ವಿಜ್ಞಾನಿ. ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಖ್ಯಾತ ಮಲೆಕ್ಯುಲಾರ್‌ ಬಯಾಲಜಿ ಪ್ರಯೋಗಾಲಯದಲ್ಲಿ ವಿಜ್ಞಾನಿಯಾಗಿದ್ದವರು. ಸ್ಕಿಪ್ಪರ್‌ 2001ರಲ್ಲಿ ನೇಚರ್‌ ಗ್ರೂಪ್‌ ಅನ್ನು ಸಹ ಸಂಪಾದಕಿಯಾಗಿ ಸೇರಿದರು. ಮುಂದೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನೇಚರ್‌ ಪತ್ರಿಕೆಯ 150 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 2018ರ ಮೇ ನಲ್ಲಿ ನೇಚರ್‌ ಪತ್ರಿಕೆಯ ಮಹಿಳಾ ಸಂಪಾದಕಿಯಾಗಿ ವಹಿಸಿಕೊಂಡರು.

ನೇಚರ್‌ ಪತ್ರಿಕೆಯನ್ನು ಶ್ರೇಷ್ಠ ಪರಾಮರ್ಶನವನ್ನು ಹೊಂದಿರುವ ವಿಜ್ಞಾನದ ಪತ್ರಿಕೋಧ್ಯಮವನ್ನಾಗಿ ರೂಪುಗೊಳಿಸುವಲ್ಲಿ ಜಾನ್‌ ಮಡೆಕ್ಸ್‌ (John Moddex 1925-2009) ಅವರ ಕೊಡುಗೆ ಅಪಾರ. ಜಾನ್‌ ಸುಮಾರು ನಾಲ್ಕು ದಶಕಗಳ ಕಾಲ ನೇಚರ್‌ ಪತ್ರಿಕೆಯ ಒಡನಾಟವನ್ನು ಹೊಂದಿದ್ದರು. ಅದರಲ್ಲಿ ಎರಡು ಬಾರಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಒಮ್ಮೆ 1866 ಮತ್ತು 1973 ರ ನಡುವೆ ಹಾಗೂ ಮತ್ತೊಮ್ಮೆ 1980 -1995ರ ನಡುವೆ ಒಟ್ಟು 22 ವರ್ಷಗಳ ಕಾಲ ಪತ್ರಿಕೆಯನ್ನು ಮುನ್ನಡೆಸಿದ್ದರು. ಜಾನ್‌ ಮಡೆಕ್ಸ್‌ 2009ರಲ್ಲಿ ತೀರಿಕೊಂಡಾಗ ನೇಚರ್‌ ಪತ್ರಿಕೆಯು ಅವರನ್ನು ಕುರಿತು ವಿಶೇಷ ಸಂಪುಟವನ್ನು ಹೊರತಂದಿತ್ತು.

ನೇಚರ್‌ ಪತ್ರಿಕೆಯ ಆ ವಿಶೇಷ (14 April 2009) ಸಂಪುಟವು ಅವರನ್ನು ಕುರಿತು ಅವರ ನಂತರ ನೇಚರ್‌ ಪತ್ರಿಕೆಯನ್ನು ವಹಿಸಿಕೊಂಡ ಡಾ. ಫಿಲಿಪ್‌ ಕಾಂಪ್‌ಬೆಲ್‌ (Philip Campbell) ಸೇರಿದಂತೆ ಹಲವು ಬರಹಗಳನ್ನು ಹೊಂದಿತ್ತು. ಅದೇ ಸಂಪುಟದಲ್ಲಿ ಜಾನ್‌ ಮಡೆಕ್ಸ್‌ ಅವರ ಕೆಲವು ಆಯ್ದ ಬರಹಗಳನ್ನೂ ಪ್ರಕಟಿಸಿಲಾಗಿತ್ತು. ಹಾಗೆ ಪ್ರಕಟಿಸಲಾದ ಜಾನ್‌ ಅವರ ಬರಹಗಳಲ್ಲಿ 1984ರ ನವೆಂಬರ್‌ ಅಲ್ಲಿ ಬರೆದ ಅಂದಿನ ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರ ಶ್ರದ್ಧಾಂಜಲಿಯೂ ಸೇರಿದೆ. ಸೂಕ್ಷ್ಮಮತಿಯ ಜನನಾಯಕಿ (A Sharp-Witted Democrat) ಎಂಬ ಶೀರ್ಷಿಕೆಯ ಬರಹದಲ್ಲಿ ಇಂದಿರಾ ಅವರನ್ನು ತಾವು ಭೇಟಿ ಮಾಡಿದಾಗಿನ ಅನುಭವಗಳನ್ನು ಬರೆದಿದಾರೆ. ಆಗ ಅವರು ಗುರುತಿಸಿದ್ದ ಇಂದಿರಾ ಗಾಂಧಿಯ ಚುರುಕುತನದ ಬಗ್ಗೆ ವಿಶೇಷವಾಗಿ ದಾಖಲಿಸಿದ್ದಾರೆ (Mrs Gandhi’s demeanour throughout this conversation was in my experience extraordinary) ಹಾಗೂ ಆಕೆಯ ವೈಜ್ಞಾನಿಕ ಆಸಕ್ತಿಯನ್ನೂ (Mrs Gandhi was astoundingly knowledgeable about the vast programme of
research her government mounted
) ಸಹಾ.

ಹೀಗೆ ವಿಜ್ಞಾನದ ಒಂದೂವರೆ ಶತಮಾನದ ಏರಿಳಿತಗಳ ಶೋಧಗಳ ತಿಳಿವು, ಚರ್ಚೆ, ಮತ್ತಿತರ ಮಹತ್ವದ ಸಂಗತಿಗಳಿಗೆ ಸಾಕ್ಷಿಯಾದ “ನೇಚರ್” ಭವಿಷ್ಯದ ವಿಜ್ಞಾನದ ಹಾದಿಯನ್ನೂ ಪ್ರಮುಖವಾಗಿ ಪರಿಗಣಿಸಿದೆ. ಇದರ ಹಿನ್ನೆಲೆಯಲ್ಲಿ 2019ರಲ್ಲಿ  18 ರಿಂದ 25 ವಯೋಮಾನದವರಿಗಾಗಿ ಅಂತರರಾಷ್ಟ್ರೀಯ ವಿಜ್ಞಾನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ 68 ದೇಶಗಳ 661 ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಮೊದಲ ಬಹುಮಾನ ಪಡೆದ ಇಂಗ್ಲಂಡ್‌ನ ನಾಟಿಂಗ್‍ಹ್ಯಾಂ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪಿಎಚ್.ಡಿ ವಿದ್ಯಾರ್ಥಿನಿ ಯಾಸ್ಮಿನ್ ಅಲಿ ಎಂಬ ಹೆಣ್ಣುಮಗಳು ಬರೆದ “ಬೀಥೊವೆನ್ಸ್ ಡ್ರೀಮ್ (Beethoven’s dream)” ಪ್ರಬಂಧವನ್ನು ಕುರಿತು ಕೆಲವು ಸಂಗತಿಗಳನ್ನು ಹೇಳಿ ನೇಚರ್‌ ಪತ್ರಿಕೆಯ ಸ್ವಾರಸ್ಯವಾದ ಸಂಗತಿಗಳನ್ನು ಮುಗಿಸುತ್ತೇನೆ.

ಯಾಸ್ಮಿನ್ ಅವಳಿ ಹೆಣ್ಣುಮಗಳು. ಆಕೆಯ ಜೊತೆಯಲ್ಲೇ ಹುಟ್ಟಿದ ಸಹೋದರನ ಕಿವುಡುತನ (Sensorineural hearing loss) ನಿಧಾನವಾಗಿ ಆವರಿಸಿದ್ದು, ಅದು ಖ್ಯಾತ ಸಂಗೀತಗಾರ ಬೀಥೊವೆನ್ ಅನುಭವಿಸಿದ ಕಾಯಿಲೆಯೇ ಆಗಿತ್ತು. ತನ್ನ ಪಿಎಚ್.ಡಿ ಸಂಶೋಧನೆಯಲ್ಲೂ ಮನೋವೈಜ್ಞಾನಿಕ ವಿಚಾರಗಳನ್ನು ಕಲಿತ ಆಕೆ ತನ್ನ ಸಹೋದರನು ಅನುಭವಿಸುತ್ತಿರುವ ಹಾಗೂ ಬೀಥೊವೆನ್ ಅನುಭವಿಸಿದ ಶ್ರವಣ ನಷ್ಟ ಇಂದು ಗುಣಪಡಿಸುವತ್ತ ವೈಜ್ಞಾನಿಕ ಶೋಧವಾಗುವ ಸಾಧ್ಯತೆಯನ್ನು ಆಶಿಸುತ್ತಾಳೆ. ನಾಳಿನ ಜಗತ್ತನ್ನು ಇಂದಿನ ದಿನಕ್ಕಿಂತ ಉತ್ತಮಪಡಿಸುವ ವಿಜ್ಞಾನದ ಸಂಶೋಧನೆಯ ಕುರಿತು ಮುಂದೊಂದು ದಿನ “ಸ್ವರ್ಗದಲ್ಲಿ ನಾನು ಕೇಳಬಹುದು” ಎಂಬ ಬೀಥೊವನ್ ಆಶಯದೊಂದಿಗೆ ಮುಕ್ತಾಯವಾಗುತ್ತದೆ. ಒಟ್ಟಾರೆ ಪ್ರಬಂಧವು ಶ್ರವಣ ನಷ್ಟದ ವೈಜ್ಞಾನಿಕ ಸಂಗತಿಯನ್ನು ಸಂಗೀತದಂತೆ ಲಯಬದ್ಧವಾಗಿಸಿ ಅದರ ನರಮಂಡಲದ ಜೀವಿಕೋಶಗಳ ಪುನರುತ್ಪಾದನೆಯ ಸಾಧ್ಯತೆಯನ್ನು ಆಶಿಸುವ ಪ್ರಬಂಧವು ವಿಜ್ಞಾನದ ಹುಡುಕಾಟಕ್ಕೆ ಕೊಟ್ಟಿರುವ ರೂಪಕವಾಗಿದೆ. ಅದ್ಭುತವಾದ ಬರಹವಾದ ಈ ಪ್ರಬಂಧವನ್ನು ಈ ಲಿಂಕ್‌ ( https://www.nature.com/articles/d41586-019-03358-x ) ನಲ್ಲಿ ಓದಬಹುದು.

ಇಂತಹ ಅದ್ಭುತಗಳ ಸಾಕ್ಷಿಯಾದ “ನೇಚರ್” ಒಂದು ವಿಜ್ಞಾನ ಪತ್ರಿಕೆಯಾಗಿ ಮಾತ್ರವಲ್ಲ, ಒಂದು ಪತ್ರಿಕೋದ್ಯಮಕ್ಕೆ ಮಾದರಿಯಾಗಲ್ಲದು. ಇಂದು ನೇಚರ್ ವಿಸ್ತಾರಗೊಂಡು ಹಲವು ವಿಭಾಗಗಳಾಗಿ ಪ್ರಕಟವಾಗುತ್ತಿದೆ. ಪ್ರತಿಯೊಂದೂ ತನ್ನ ಶ್ರೇಷ್ಠತೆಯನ್ನು ಬಿಟ್ಟುಕೊಡದೆ ಜಗದ್ವಿಖ್ಯಾತ ಪತ್ರಿಕೆಯಾಗಿಯೇ ಮುಂದುವರೆದಿದೆ. ಶತಮಾನಗಳ ಸತ್ಯದ ಹುಡುಕಾಟಗಳನ್ನು ಮತ್ತಷ್ಟು ಸ್ಪಷ್ಟವಾಗಿಸುವ ಯಶಸ್ಸಿಗೆ “ನೇಚರ್” ಪತ್ರಿಕೆಗೆ ಶುಭಾಶಯಗಳನ್ನು ಹೇಳೋಣ. ಅದರ ಶ್ರೇಷ್ಠತೆಯ ನಿರಂತರತೆಯು ವಿಜ್ಞಾನದ ಹಿತಾಶಯಕ್ಕೆ ಸದಾ ಬೆಂಗಾವಲಾಗಿರಲೆಂದೂ ಆಶಿಸೋಣ.  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has One Comment

  1. Bhuvaneswari

    An exemplary write up for an exemplary journal ‘Nature’….. Thank you Sir for informing many interesting facts about the Journal…

Leave a Reply