(ನಾಲ್ಕನೆಯ ಕಂತು)
ಅದು ೧೯೯೪ ರ ನಂತರದ ದಿನಗಳು. ಆಗ ಡಾ.ಕೆ.ಕಸ್ತೂರಿರಂಗನ್ ಇಸ್ರೊ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ದೂರಸಂವೇದಿ ಉಪಗ್ರಹಗಳ ಚಿತ್ರಗಳನ್ನ ಆಧರಿಸಿ ಭಾರತದ ೧೩ ವಿವಿಧ ನಮೂನೆಯ ಪಾಳುನೆಲಗಳ ನಕಾಶೆಯನ್ನು (Wasteland Mapping) ತಯಾರಿಸಿದ್ದರು. ನಿವೃತ್ತಿ ಹೊಂದಿದರೂ ಬಾಹ್ಯಾಕಾಶ ಆಯೋಗದ(Space Commission) ಸದಸ್ಯರಾಗಿದ್ದ ಪ್ರೊ.ಸತೀಶ್ ಧವನ್ ಅವರಿಗೆ, ಇದನ್ನು ತುಂಬಾ ಹೆಮ್ಮೆಯಿಂದ ತೋರಿಸಿದ್ದರು. ಇದನ್ನು ಗಮನಿಸಿದ ಪ್ರೊ.ಸತೀಶ್ – ” ಪ್ರಿಯ ರಂಗನ್, ನೀವು ಮಾಡಿರುವ ಕೆಲಸ ಉತ್ತಮವಾದದ್ದು ನಿಜ. ಆದರೆ ನೀವು ರೂಪಿಸಿರುವ ನಕಾಶೆಯಡಿ ಬರುವ ನೆಲ ನಿಜಕ್ಕೂ ಪಾಳುನೆಲವೇ? ಅದನ್ನು ಹಲವು ಗಿರಿಜನರು ಅಥವಾ ಇತರೆ ಸ್ಥಳೀಯ ಜನರು ಬಳಸುತ್ತಿರಬಹುದು. ಅಲ್ಲಿನ ಸಾಮಾಜಿಕ ಬದುಕಿನಲ್ಲಿ ಅದಕ್ಕೆ ಸ್ಥಾನವಿರುತ್ತದೆ. ನೀವು ಅದನ್ನು ಪಾಳು ಭೂಮಿ ಎಂದುಬಿಟ್ಟರೆ, ಅಲ್ಲಿಗೆ ನೀರಾವರಿ, ಕೈಗಾರಿಕೆ ಮುಂತಾದ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸುವ ಇರಾದೆ ಹೆಚ್ಚುತ್ತದೆ. ಆ ಭೂಮಿಯನ್ನು ತಮ್ಮ ತೆಕ್ಕೆಗೆ ಕೊಳ್ಳಲು ಬೇರೆ ಬೇರೆ ಶಕ್ತಿಗಳು ಕೆಲಸ ಮಾಡುತ್ತವೆ. ಹಾಗಾಗಿ ಅದು ನಿಜಕ್ಕೂ ಉಪಯೋಗವಿಲ್ಲದ ಪಾಳು ಭೂಮಿಯೇ? ಈ ದಿಕ್ಕಿನಲ್ಲಿ ನೀವು ಯೋಚಿಸಿದ್ದೀರಾ?” ಎಂದೆಲ್ಲಾ ಪ್ರಶ್ನೆ ಹಾಕಿದರು. ತಮ್ಮ ಕೆಲಸಕ್ಕೆ ಪ್ರೋತ್ಸಾಹಕರ ಅಭಿನಂದನಾ ಮಾತುಗಳ ನಿರೀಕ್ಷೆಯಲ್ಲಿದ್ದ ಡಾ.ಕೆ.ಕಸ್ತೂರಿರಂಗನ್ ಅವರಿಗೆ, ಸತೀಶ್ ಅವರ ಮಾತುಗಳು ಸೌಲಭ್ಯವಂಚಿತ ಸಮುದಾಯಗಳ ಬಗ್ಗೆ ಮಿಡಿಯುವಂತೆ ಪ್ರೇರೇಪಿಸಿದ್ದವು.
ಹೌದು ಬಾಹ್ಯಾಕಾಶ ವಿಜ್ಞಾನ ಆಧಾರಿತ ಇಸ್ರೊ ಯೋಜನೆಗಳು,ಮನುಕುಲದ ಒಳಿತಿಗೆ ಹಾಗೂ ಶಾಂತಿಯುತ ಬಳಕೆಗೆಂದೇ ರೂಪಿತವಾಗಬೇಕೆಂದು ಸಂಸ್ಥಾಪಕರಾದ ಡಾ.ವಿಕ್ರಂ ಸಾರಾಭಾಯ್ ಅವರ ಕನಸಾಗಿತ್ತು. ಹಾಗೆಯೇ ಇಸ್ರೊ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪ್ರೊ. ಸತೀಶ್ ಧವನ್ ಅವರ ಒಲವಾಗಿತ್ತು ಕೂಡ. ಅದನ್ನು ಮುಂದಿನ ತಲೆಮಾರಿಗೆ ದಾಟಿಸುತ್ತಿದ್ದ ಅವರ ಬದ್ಧತೆಗೆ ಸಾಕ್ಷಿಯಾಗಿ ಮೇಲಿನ ಪ್ರಸಂಗವನ್ನು ಉದಾಹರಿಸಬಹುದು.
ಪ್ರೊ. ಸತೀಶ್ ಧವನ್ ಇಸ್ರೊ ಅಧ್ಯಕ್ಷರಾಗಿ ಆಯ್ಕೆಯಾದ ಮತ್ತು ಅಧಿಕಾರ ವಹಿಸಿಕೊಂಡ ಕೆಲವು ವಿವರಗಳನ್ನು ಮೊದಲ ಕಂತಿನಲ್ಲಿ ಓದಿದ ನೆನಪು ನಿಮಗಿರಬಹುದು. ಡಾ.ವಿಕ್ರಂ ಸಾರಾಭಾಯ್ ಅವರ ಅಕಾಲಿಕ ಸಾವಿನಿಂದ ತೆರವಾದ ಸ್ಥಾನಕ್ಕೆ, ದೇಶದ ವೈಜ್ಞಾನಿಕ ಸಮುದಾಯ ಸೂಚಿಸಿದ್ದು ಪ್ರೊ. ಸತೀಶ್ ಅವರ ಹೆಸರನ್ನೇ. ಅದರಲ್ಲಿ ೧೯೭೨ ರಲ್ಲಿ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ(TIFR) ನಿರ್ದೇಶಕರಾಗಿದ್ದ ಹಾಗೂ ಸತೀಶ್ ಅವರ ಗೆಳೆಯರಾಗಿದ್ದ ಪ್ರೊ.ಎಂ.ಜಿ.ಕೆ.ಮೆನನ್ ಪ್ರಮುಖರು. ಈ ಹಿಂದೆ ಕೆಲವು ಬಾರಿ ಶ್ರೀಮತಿ ಇಂದಿರಾ ಗಾಂಧಿಯವರು, ಪ್ರೊ.ಸತೀಶ್ ಅವರನ್ನು ದೇಶದ ಕೆಲವು ಪ್ರಮುಖ ವೈಜ್ಞಾನಿಕ ಸಂಸ್ಥೆಗಳ ಜವಾಬ್ದಾರಿಯುತ ಹುದ್ದೆಗಳನ್ನು ವಹಿಸಿಕೊಳ್ಳಲು ಕೇಳಿದ್ದಾಗ, ಸತೀಶ್ ಅವುಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಹಾಗಾಗಿ ಪ್ರಧಾನಿ ಇಂದಿರಾ ಗಾಂಧಿಯವರು, ಸತೀಶ್ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ಪ್ರಧಾನಿಯವರೇ ಸಂಪರ್ಕಿಸಿ ಖುದ್ದಾಗಿ ಸತೀಶ್ ಅವರ ಮನವೊಲಿಸುವಂತೆ ಕೇಳಿಕೊಂಡಿದ್ದರು ಪ್ರೊ.ಮೆನನ್!!
ಆಗ ಸತೀಶ್ ಅವರು ಅಮೆರಿಕದ ಕ್ಯಾಲ್‌ಟೆಕ್ ನಲ್ಲಿ ಇದ್ದರು. ಅಲ್ಲಿನ ಸಬ್ಬತು ಅವಧಿ ಮುಗಿಸಿ ಇಸ್ರೊ ಜವಾಬ್ಧಾರಿ ಬಗ್ಗೆ ನಿರ್ಧರಿಸುವುದಾಗಿ ಪ್ರಧಾನಿಯವರಿಗೆ ತಿಳಿಸಿದ್ದರು. ಅದರಂತೆ ಅಲ್ಲಿಂದ ಬಂದ ಸತೀಶ್, ಐ.ಐ.ಎಸ್‌ಸಿ ಯ ನಿರ್ದೇಶಕ ಸ್ಥಾನದ ಜೊತೆಗೆ ಹೆಚ್ಚುವರಿಯಾಗಿ ಇಸ್ರೊ ಸಂಸ್ಥೆಯ ಚುಕ್ಕಾಣಿ ಹಿಡಿದರು. ಇಸ್ರೊ ಮುಖ್ಯ ಕಾರ್ಯಾಲಯ ಬೆಂಗಳೂರಿನಲ್ಲಿ ನೆಲೆಯಾಗಲು ಕಾರಣರಾದರು. ಅದೂ ಕೇವಲ ೧ ರೂಪಾಯಿ ಸಂಬಳ ಪಡೆಯುವ ನಿರ್ಧಾರದ ಜೊತೆಗೆ!! ಡಾ.ವಿಕ್ರಂ ಸಾರಾಭಾಯ್ ಅವರ ಸಾವಿನ ನಂತರ, ಸತೀಶ್ ಅವರು ಆಧಿಕಾರ ವಹಿಸಿಕೊಳ್ಳುವ ತನಕದ ಅಲ್ಪ ಅವಧಿಗೆ ಪ್ರೊ.ಎಂ.ಜಿ.ಕೆ.ಮೆನನ್ ಅವರೇ ಇಸ್ರೊ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉಪಗ್ರಹ ನಿರ್ಮಾಣ ಯೋಜನೆ ಬೆಂಗಳೂರಿನ ಪೀಣ್ಯದ ಷೆಡ್ಡುಗಳಲ್ಲಿ ಪ್ರಾರಂಭವಾಗುವುದಕ್ಕೆ ಪ್ರೊ.ಮೆನನ್ ಅವರೇ ಕಾರಣರು. ಹಾಗೆಯೇ ತಿರುವನಂತಪುರದಲ್ಲಿ ವಿಕ್ರಂ ಸಾರಾಭಾಯ್ ಅವರ ಹೆಸರಿನಲ್ಲಿ ಬಾಹ್ಯಾಕಾಶ ಕೇಂದ್ರ ರೂಪುಗೊಳ್ಳಲು ಮತ್ತು ಆ ಕೇಂದ್ರಕ್ಕೆ ಮೊದಲ ನಿರ್ದೇಶಕರಾಗಿ ಡಾ.ಬ್ರಹ್ಮಪ್ರಕಾಶ್ ಅವರು ನೇಮಕಗೊಳ್ಳುವಲ್ಲಿ ಪ್ರೊ.ಮೆನನ್ ಅವರ ಪಾತ್ರ ಹಿರಿದು. ಇದಲ್ಲದೇ ನಂತರದ ದಿನಗಳಲ್ಲಿ ಬಾಹ್ಯಾಕಾಶ ಆಯೋಗದ ಸದಸ್ಯರಾಗಿ, ಇಸ್ರೊ ಉನ್ನತಿಗೆ ವಿವಿಧ ರೀತಿಯ ನೆರವು ನೀಡಿದ್ದರು ಪ್ರೊ.ಮೆನನ್. ಪ್ರೊ. ಸತೀಶ್ ಧವನ್, ಪ್ರೊ.ಮೆನನ್ ಹಾಗೂ ಡಾ.ಬ್ರಹ್ಮಪ್ರಕಾಶ್ ಅವರೊಡಗೂಡಿ ಇಸ್ರೊ ಸಂಸ್ಥೆಯನ್ನು ಸಶಕ್ತವಾಗಿ ಹೇಗೆ ಕಟ್ಟಿ ಬೆಳೆಸಿದರು ಎಂಬುದನ್ನು ಮುಂದೆ ತಿಳಿಯೋಣ.
ಇಸ್ರೊ ಅಧ್ಯಕ್ಷ (೧೯೭೨ – ೧೯೮೪)
ಪ್ರೊ.ಸತೀಶ್ ಅಧಿಕಾರ ವಹಿಸಿಕೊಳ್ಳುವ ಮುನ್ನ ಇಸ್ರೊ ಸಂಸ್ಥೆ ಆಗಿನ ಅಣುಶಕ್ತಿ ಇಲಾಖೆ ಮತ್ತು ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿ(PRL) ಸುಪರ್ದಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಹಲವು ವಿಭಿನ್ನ ವಿಭಾಗಗಳು ಅಹಮದಾಬಾದ್, ತಿರುವನಂತಪುರ ಮತ್ತು ಶ್ರೀಹರಿಕೋಟಾದಲ್ಲಿ ಕೆಲಸ ಮಾಡುತ್ತಿದ್ದವು. ವಿಕ್ರಂ ಸಾರಾಭಾಯ್ ಅವರೇ ಅಣುಶಕ್ತಿ ಇಲಾಖೆಯ ಜವಾಬ್ಧಾರಿಯನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಈ ಎಲ್ಲಾ ದೆಸೆಯಿಂದ ಇಸ್ರೊ ಸಂಸ್ಥೆಗೆ ಒಂದು ವ್ಯವಸ್ಥಿತ ಆಡಳಿತ ರಚನೆ ಇರಲಿಲ್ಲ. ಇದನ್ನು ಮನಗಂಡ ಸತೀಶ್ ಅವರು ಒಂದು ಮಹತ್ತರ ಸಾಂಸ್ಥಿಕ ರಚನೆಗೆ ಮುಂದಾದರು. ನೂತನವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ “ಬಾಹ್ಯಾಕಾಶ ಇಲಾಖೆ”, ತಂತ್ರಜ್ಞರು, ವಿಜ್ಞಾನಿಗಳು ಮತ್ತು ಆಡಳಿತಗಾರರು ಸದಸ್ಯರಾಗಿರುವ “ಬಾಹ್ಯಾಕಾಶ ಆಯೋಗ” ಹಾಗೂ ಈ ಹಿಂದೆ ಇದ್ದ ಇಸ್ರೊ ಸಂಸ್ಥೆ ಈ ಮೂರು ಸಂಸ್ಥೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಯೋಜಿಸಿದರು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ, ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಹಾಗೂ ಇಸ್ರೊ ಅಧ್ಯಕ್ಷರಾಗಿ, ಈ ಮೂರೂ ವಿವಿಧ ಜವಾಬ್ಧಾರಿಗಳನ್ನು ತಾವೊಬ್ಬರೇ ಹೊತ್ತರು. ಬಾಹ್ಯಾಕಾಶ ಆಯೋಗ ದೇಶಕ್ಕೆ ಬೇಕಾದ ದೀರ್ಘಕಾಲಿಕ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸುವ ಸಲುವಾಗಿ ಇದ್ದರೆ, ಬಾಹ್ಯಾಕಾಶ ಇಲಾಖೆ ಸರ್ಕಾರದ ಜೊತೆ ಸೇತುವಾಗಿ ಈ ಯೋಜನೆಗಳಿಗೆ ಬೇಕಾದ ಅಗತ್ಯ ಹಣಕಾಸು ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಹೊಣೆಗಾರಿಕೆ ಹೊಂದಿತ್ತು. ಇತ್ತ ಇಸ್ರೊ ಈ ಎರಡರ ಸಹಕಾರದಿಂದ ಬಾಹ್ಯಾಕಾಶ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ಹೊಂದಿತ್ತು. ಹೀಗೆ ಯೋಜನೆಯೊಂದು ರೂಪುಗೊಳ್ಳುವ ಹಂತದಿಂದ ಅದು ಕೈಗೂಡುವವರೆಗೆ ಬೇಕಾದ ಎಲ್ಲ ಸಮನ್ವಯತೆ ಸಾಧಿಸುವ ಆಧಿಕಾರ ಮತ್ತು ಹೊಣೆ ಏಕ ವ್ಯಕ್ತಿಯ ಮೇಲಿತ್ತು. ಪ್ರೊ.ಸತೀಶ್ ಅವರು ರೂಪಿಸಿದ ಈ ವ್ಯವಸ್ಥೆ ಇಂದಿಗೂ ಚಾಲ್ತಿಯಲ್ಲಿದೆ. ಇಸ್ರೊ ಯಶಸ್ಸಿನ ಹಿಂದೆ ಈ ಜಾಣ್ಮೆಯ ವ್ಯವಸ್ಥೆಯ ಪಾತ್ರ ಕೂಡ ದೊಡ್ಡದಿದೆ.
ವಿ.ಎಸ್.ಎಸ್.ಸಿ ಮತ್ತು ಎಸ್.ಎಲ್.ವಿ-೩
ವಿಕ್ರಂ ಸಾರಾಭಾಯ್ ಇಸ್ರೊದ ಸ್ವಂತ ರಾಕೆಟ್ ಮತ್ತು ಉಪಗ್ರಹ ಅಭಿವೃದ್ಧಿ ಯೋಜನೆಗಗೆ ಚಾಲನೆ ನೀಡಿದ್ದರು. ಆದರಂತೆ ತಿರುವನಂತಪುರದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ(SSTC) ಎಂಬಲ್ಲಿ ಎಸ್.ಎಲ್.ವಿ ರಾಕೆಟ್ ಯೋಜನೆಗಾಗಿ ವಿವಿಧ ವಿಭಾಗಗಳು ಕೆಲಸ ಮಾಡುತ್ತಿದ್ದವು. ಈ ವಿಭಾಗಗಳಲ್ಲಿ ಕೆಲವೊಮ್ಮೆ ಸಮನ್ವಯತೆಯ ಕೊರತೆ ಇದ್ದವು. ಇದನ್ನು ಅರಿತಿದ್ದ ಸತೀಶ್ ಅವರು, ಈ ಕೇಂದ್ರವನ್ನು ವಿಕ್ರಂ ಸಾರಾಭಾಯ್ ಅವರ ಹೆಸರಲ್ಲಿ ಮರು-ನಾಮಕರಣ ಮಾಡಿದ್ದ ಪ್ರೊ.ಮೆನನ್ ಅವರ ಸಹಕಾರದಿಂದ, ಡಾ.ಬ್ರಹ್ಮಪ್ರಕಾಶ್ ಈ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುವಂತೆ ಅವರನ್ನು ಒಪ್ಪಿಸಿದರು. ಅದಾಗಲೇ ಹಲವು ಪರಿಣಿತರ ಮುಂದಾಳತ್ವದಲ್ಲಿ ಕೆಲಸ ಮಾಡುತ್ತಿದ್ದ ವಿಭಾಗಗಳನ್ನು ಕೂಡಿಸಿದ್ದ ಈ ಕೇಂದ್ರವನ್ನು ಮುನ್ನಡೆಸಲು ಶಿಖರಪ್ರಾಯ ವಿದ್ವತ್ ಉಳ್ಳ ವ್ಯಕ್ತಿಯ ಅವಶ್ಯಕತೆ ಇತ್ತು. ಇದನ್ನು ಮನಗಂಡೇ ಡಾ.ಬ್ರಹ್ಮಪ್ರಕಾಶ್ ಅವರಂತಹ ಮೇರುವ್ಯಕ್ತಿಯನ್ನು ಈ ಹುದ್ದೆಗೆ ಆರಿಸಲಾಯಿತು.
ಡಾ.ಬ್ರಹ್ಮಪ್ರಕಾಶ್ ಸತೀಶ್ ಅವರ ಹಿರಿಯ ಸಮಕಾಲೀನರು. ಪಂಜಾಬ್ ವಿವಿಯ ಹಳೆ ವಿದ್ಯಾರ್ಥಿ. ರಸಾಯನವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಗಳಿಸಿ ಪ್ರೊ.ಶಾಂತಿಸ್ವರೂಪ್ ಭಟ್ನಾಗರ್ ಅವರ ಜೊತೆ ಅಧ್ಯಯನ ನಡೆಸಿದ್ದವರು. ಮುಂದೆ ೧೯೪೫ ರಲ್ಲಿ ಸತೀಶ್ ಅವರೊಡನೆ ಅಮೆರಿಕಕ್ಕೆ ತೆರಳಿ ತಮ್ಮ ಎರಡನೇ ಡಾಕ್ಟರೇಟ್ ಪದವಿಯನ್ನು ಪ್ರತಿಷ್ಟಿತ “ಎಂ.ಐ.ಟಿ(MIT)” ಯಲ್ಲಿ ಲೋಹವಿಜ್ಞಾನ(Metallurgy) ವಿಷಯದಲ್ಲಿ ಪಡೆದವರು. ಅಲ್ಲಿಂದ ಹಿಂದಿರುಗಿ ಐ.ಐ.ಎಸ್‌ಸಿ. ಯ ಮೆಟಲರ್ಜಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ಅಣುಶಕ್ತಿ ಇಲಾಖೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿ ೧೯೭೨ ರಲ್ಲಿ ನಿವೃತ್ತಿ ಹೊಂದಿದ್ದರು. ಇವರು ವಿ.ಎಸ್.ಎಸ್.ಸಿ ಕೇಂದ್ರದ ನಿರ್ದೇಶಕರಾಗಿದ್ದು ರಾಕೆಟ್ ಅಭಿವೃದ್ಧಿ ಯೋಜನೆಗಳಿಗೆ ರಾಕೆಟ್ ವೇಗ ಮತ್ತು ಬಲ ಬಂದಂತಾಗಿತ್ತು!!ಎಸ್.ಎಲ್.ವಿ-೩ ಯೋಜನೆಯನ್ನು ಮುನ್ನಡೆಸಲು ಸತೀಶ್ ಅವರು ಮಾಡಿದ ಇಂಥದೇ ಇನ್ನೊಂದು ಆಯ್ಕೆ ಅಬ್ದುಲ್ ಕಲಾಂ ಅವರದ್ದು!! ಕಲಾಂ ಅವರನ್ನು ಅವರ ಇಂಜಿನಿಯರಿಂಗ್ ಪದವಿಯ ದಿನಗಳಿಂದಲೂ ಕಂಡಿದ್ದ ಪ್ರೊ. ಸತೀಶ್, ಅವರ ಕಾಯಕಪ್ರೀತಿ ಮತ್ತು ಎಲ್ಲರನ್ನೂ ಸೇರಿಸಿಕೊಂಡು ಮುಂದೆ ನಡೆಯುವ ನಾಯಕತ್ವ ಗುಣದ ಆಧಾರದ ಮೇಲೆ, ಹಲವು ಹಿರಿಯರಿದ್ದರೂ ಕೂಡ ಕಲಾಂ ಅವರಿಗೆ ಈ ಗುರುತರ ಜವಾಬ್ಧಾರಿಯನ್ನು ವಹಿಸಿದ್ದರು.ಮುಂದೆ ನಡೆದದ್ದು ಇತಿಹಾಸ. ಆ ಅನುಭವಗಳನ್ನು ಕಲಾಂ ಅವರ ಜೀವನಚರಿತ್ರೆಯಲ್ಲಿ ಓದಿರುತ್ತೀರಿ ಅಥವಾ ಅವರ ಮಾತುಗಳನ್ನು ಕೇಳಿರುತ್ತೀರಿ. ಇಲ್ಲದಿದ್ದರೆ ಇಲ್ಲಿ ಕೇಳಿ https://www.youtube.com/watch?v=66IJVhzbzBg
ಇಸ್ರೊ ಕೇಂದ್ರಗಳ ಸ್ಥಾಪನೆ
ಪ್ರೊ. ಸತೀಶ್ ಅವರ ಮತ್ತೊಂದು ಕೊಡುಗೆಯೆಂದರೆ, ಉಪಗ್ರಹ, ರಾಕೆಟ್ ಹಾಗೂ ಅವುಗಳ ಬಳಕೆಯನ್ನು ಆಧರಿಸಿ ವಿವಿಧ ಕೇಂದ್ರಗಳನ್ನು ರೂಪಿಸಿದ್ದು ಮತ್ತು ಅವುಗಳನ್ನು ಮುನ್ನಡೆಸಲು ಯೋಗ್ಯ ವ್ಯಕ್ತಿಗಳಿಗೆ ಅವಕಾಶ ನೀಡಿದ್ದು. ಅವುಗಳ ಪಟ್ಟಿ ಇಲ್ಲಿದೆ.
- ಡಾ.ಯು.ಆರ್.ರಾವ್ ಅವರ ನೇತೃತ್ವದಲ್ಲಿ ಇಸ್ರೊದ ಮೊದಲ ಉಪಗ್ರಹ ಯೋಜನೆ “ಆರ್ಯಭಟ” ಕ್ಕೆ ರಷ್ಯಾ ದೇಶದೊಂದಿಗೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲದೇ, ಬೆಂಗಳೂರಿನಲ್ಲಿ ಇಸ್ರೊ ಉಪಗ್ರಹ ಕೇಂದ್ರ ನಿರ್ಮಾಣಕ್ಕೆ ಕಾರಣರಾದರು. ಇಂದು ಈ ಕೇಂದ್ರವನ್ನು ಯು.ಆರ್.ರಾವ್ ಉಪಗ್ರಹ ಕೇಂದ್ರ ಎಂದು ಹೆಸರಿಸಲಾಗಿದೆ.
- ಉಪಗ್ರಹ ಆಧಾರಿತ ಸೇವೆಗಳನ್ನು ನಿರ್ವಹಿಸುತ್ತಿದ್ದ ಅಹಮದಾಬಾದ್ ವಿಭಾಗಗಳನ್ನು ಒಗ್ಗೂಡಿಸಿ, ಅಲ್ಲಿ ಬಾಹ್ಯಾಕಾಶ ಉಪಯೋಗ ಕೇಂದ್ರ(SAC) ಸ್ಥಾಪಿಸಿ, ಪ್ರೊ.ಯಶ್‌ಪಾಲ್ ಅವರನ್ನು ಸ್ಥಾಪಕ ನಿರ್ದೇಶಕರನ್ನಾಗಿ ಮಾಡಿದರು.
ಶ್ರೀಹರಿಕೋಟಾದಲ್ಲಿ ವ್ಯವಸ್ಥಿತ ರಾಕೆಟ್ ಉಡಾವಣಾ ಕೇಂದ್ರವನ್ನು ಅಭಿವೃದ್ಧಿ ಪಡಿಸಿದರು. ಇಂದು ಈ ಕೇಂದ್ರಕ್ಕೆ ಸತೀಶ್ ಅವರ ಹೆಸರನ್ನೇ ಇಡಲಾಗಿದೆ. ಈ ಕೇಂದ್ರ ಅಭಿವೃದ್ಧಿ ಹೊಂದುವ ಹಂತದಲ್ಲಿ ಅಲ್ಲಿನ ಪ್ರಕೃತಿಯನ್ನು ಕಾಪಾಡಿಕೊಂಡು, ಮೂಲನಿವಾಸಿಗಳಾದ “ಯಾನಾಡಿ” ಬುಡಕಟ್ಟುಗಳನ್ನು ಅವರು ನಡೆಸಿಕೊಂಡ ರೀತಿ ಬಗ್ಗೆ ಮುಂದಿನ ಕಂತಿನಲ್ಲಿ ಬರೆಯುವೆ.
ಸಹೋದ್ಯೋಗಿಗಳ ಸಂಗದಲ್ಲಿ
ಪ್ರೊ. ಸತೀಶ್ ತಮ್ಮ ಸಹೋದ್ಯೋಗಿಗಳನ್ನು ಸಮಾನವಾಗಿ ಕಾಣುತ್ತಿದ್ದರು ಮತ್ತು ಮುಕ್ತವಾಗಿ ಅವರೊಡನೆ ಬೆರೆಯುತ್ತಿದ್ದರು. ಒಮ್ಮೆ ಭಾಸ್ಕರ-೧ ಉಪಗ್ರಹದ ಕ್ಯಾಮೆರಾ ಒಂದು ತಾಂತ್ರಿಕ ಕಾರಣಗಳಿಗಾಗಿ ಕೆಲಸ ಮಾಡುತ್ತಿರಲಿಲ್ಲ. ಅದನ್ನು ವಿಶ್ಲೇಷಿಸಿದ ವಿನ್ಯಾಸಕರು, ಇದು ೫-೬ ತಿಂಗಳ ಬಳಿಕ ಖಂಡಿತಾ ಪುನಃ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು. ಆಗ ಪ್ರೊ.ಸತೀಶ್ ತಮ್ಮ ಕಿರಿಯ ಸಹೋದ್ಯೋಗಿಯೊಬ್ಬರೊಂದಿಗೆ, ಕ್ಯಾಮೆರಾ ಕೆಲಸ ಮಾಡಿದರೆ ತಮ್ಮ ಒಂದು ತಿಂಗಳ ಸಂಬಳವನ್ನು ಕೊಡುವುದಾಗಿ ಬಾಜಿ ಕಟ್ಟುತ್ತಾರೆ. ನಿರೀಕ್ಷೆಯಂತೆ ಕ್ಯಾಮೆರಾ ಪುನಃ ಕೆಲಸ ಮಾಡುತ್ತದೆ. ಪ್ರೊ. ಸತೀಶ್ ನಿಷ್ಟೆಯಿಂದ ತಮ್ಮ ಒಂದು ತಿಂಗಳ ಸಂಬಳವಾದ ಒಂದು ರೂಪಾಯಿಯನ್ನು ಆ ಕಿರಿಯ ಉದ್ಯೋಗಿಗೆ ತಲುಪಿಸುತ್ತಾರೆ!! ಪಾಪ ಅವರ ಸಂಬಳ ೧ ರೂಪಾಯಿ ಎಂದು ಆ ಉದ್ಯೋಗಿಗೆ ತಿಳಿದಿರಲಿಲ್ಲ!! ಪ್ರೊ. ಸತೀಶ್ ಉದ್ಯೋಗಿಗಳ ಶ್ರೇಯೋಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದವರು. ಮೊದಲಿಗೆ ಇಸ್ರೊ ಸೇರಬಯಸುವವರಿಗೆ ಯು.ಪಿ.ಎಸ್.ಸಿ ಯ ಹೊರತಾಗಿ ಸ್ವತಃ ಇಸ್ರೊ ಸಂಸ್ಥೆ ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆ ತಂದರು. ಅಲ್ಲದೇ ತಾಂತ್ರಿಕ ಸಿಬ್ಬಂದಿಗಳಿಗೆ ನಿಗದಿತವಾಗಿ ಪದೋನ್ನತಿ ನೀಡುವ ವ್ಯವಸ್ಥೆಯಾದ ಡಿ.ಪಿ.ಸಿ (DPC-Departmental Promotion committee) ಅನ್ನು ರೂಪಿಸಿದರು. ಪ್ರತಿ ಪ್ರಮೋಷನ್ ಗಾಗಿ ಉದ್ಯೋಗಿಗಳು ಸಂದರ್ಶನವನ್ನು ಎದುರಿಸುವ ಮತ್ತು ಇದರ ಸಲುವಾಗಿ ಇಸ್ರೊ ಹಿರಿಯ ವಿಜ್ಞಾನಿಗಳಲ್ಲದೇ ಇತರೆ ಸಂಸ್ಥೆಗಳ ತಜ್ಞರು ಆ ಸಮಿತಿಗಳಲ್ಲಿ ಇರುವ ವ್ಯವಸ್ಥೆ ಜಾರಿ ಮಾಡಿದರು. ಈ ಪ್ರಮೋಷನ್ ಗಳು ಖಾಲಿ ಇರುವ ಹುದ್ದೆಗಳ ಆಧಾರದ ಮೇಲೆ ನಡೆಯದೆ, ನಿಗದಿತವಾಗಿ ನಡೆಯುವ ವ್ಯವಸ್ಥೆಯಾಗಿತ್ತು. ಪ್ರಮೋಷನ್ ಪಡೆದ ಉದ್ಯೋಗಿಗೆ ಹೊಸ ಹುದ್ದೆ ಸೃಷ್ಟಿಯಾಗುತ್ತಿತ್ತು. ತಿರುವನಂತಪುರ ಮತ್ತು ಅಹಮದಾಬಾದ್ ನಲ್ಲಿ ನಡೆದ ಕೆಲವು ಕಾರ್ಮಿಕ ಹೋರಾಟಗಳನ್ನು ಕಂಡು, ಉದ್ಯೋಗಿಗಳ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲೆಂದೇ ಪ್ರತ್ಯೇಕ ಒಂದು ವ್ಯವಸ್ಥೆ ರೂಪಿಸಿದರು. ಇಸ್ರೊ ಆಡಳಿತ ಮಂಡಳಿ ಮತ್ತು ಉದ್ಯೋಗಿ ಪ್ರತಿನಿಧಿಗಳು ಇರುವ ಹಾಗೂ ಇಸ್ರೊ ಅಧ್ಯಕ್ಷರೇ ಛೇರ್ಮನ್ ಆಗಿರುವ ಇದನ್ನು ಜೆ.ಸಿ.ಎಂ.(JCM-Joint Consultative Machinary) ಎಂದು ಕರೆದರು. ಈ ಎಲ್ಲಾ ಹೊಸಬಗೆಯ ಆಡಳಿತ ವೈಖರಿ ರೂಪುಗೊಳ್ಳಲು ಅವರಿಗೆ ಬೆನ್ನೆಲುಬಾಗಿ ಕೆಲಸ ಮಾಡಿದ್ದು ಅಂದು ಬಾಹ್ಯಾಕಾಶ ಇಲಾಖೆಯ ಜಂಟಿ-ಕಾರ್ಯದರ್ಶಿಯಾಗಿದ್ದ ಶ್ರೀ.ಟಿ.ಎನ್.ಶೇಷನ್. ಮುಂದೆ ಅವರು ಭಾರತದ ಚುನಾವಣಾ ಆಯೋಗದ ಅಧ್ಯಕ್ಞರಾಗಿ ಮಾಡಿದ ಸಾಧನೆ ನಿಮಗೆಲ್ಲಾ ತಿಳಿದೇ ಇದೆ!!
ಇಸ್ರೊ ಕಲ್ಚರ್/ಸಂಸ್ಕೃತಿ
ಇಸ್ರೊ ಸಾಧನೆ ಮತ್ತು ಯಶಸ್ಸಿನ ಮೂಲಮಂತ್ರ ಏನು ಎಂಬ ಪ್ರಶ್ನೆ ಬಂದಾಗಲೆಲ್ಲಾ, ಇಸ್ರೊ ಕಲ್ಚರ್/ಸಂಸ್ಕೃತಿ ಇದಕ್ಕೆ ಕಾರಣ ಎಂಬ ಉತ್ತರಗಳು ಬರುತ್ತವೆ. ಹಾಗಾದರೆ ಏನಿದು ? ಪ್ರೊ. ಸತಿಶ್ ಇಸ್ರೊ ಯೋಜನೆಗಳಿಗೆ ಒಂದು ಭದ್ರ ವ್ಯವಸ್ಥೆ ತಂದರು ಎಂದು ತಿಳಿಸಿದ್ದೆವಲ್ಲ ಅದರ ಮುಂದುವರೆದ ಭಾಗವೇ ಇದು. ಇದಕ್ಕೆ ಮತ್ತೆ ನಾವು ಕಲಾಂ ಮತ್ತು ಎಸ್.ಎಲ್.ವಿ-೩ ಯೋಜನೆಯ ಇತಿಹಾಸಕ್ಕೆ ಹೋಗಬೇಕು.
ಪ್ರೊ.ಸತೀಶ್ ಎಸ್.ಎಲ್.ವಿ-೩ ಯೋಜನೆಗೆ ಕಲಾಂ ಅವರನ್ನು ಆಯ್ಕೆ ಮಾಡಿದ ನಂತರ ನಿಗದಿತವಾಗಿ ಯೋಜನೆಯ ಪರೀಶೀಲನೆಯನ್ನು ನಡೆಸುತ್ತಿದ್ದರು. ಅವರ ಜೊತೆಗೆ ಡಾ.ಬ್ರಹ್ಮಪ್ರಕಾಶ್ ಅವರೂ ಇರುತ್ತಿದ್ದರು. ಈ ಪರಿಶೀಲನಾ ಸಭೆಗಳಿಗೆ ಯೋಜನೆಯ ಭಾಗವಾಗಿರುವ ಪ್ರತಿಯೊಬ್ಬ ತಂತ್ರಜ್ಞನೂ(ಹಿರಿಯರಿರಲಿ ಅಥವಾ ಕಿರಿಯರೇ ಇರಲಿ) ಪಾಲ್ಗೊಳ್ಳಬಹುದಿತ್ತು ಹಾಗೂ ಪ್ರಶ್ನೆಗಳನ್ನು ಕೇಳಬಹುದಿತ್ತು. ಒಮ್ಮೆ ಇಂತಹ ಸಭೆಯಲ್ಲಿ ಯಾರೋ ಒಬ್ಬ ತಂತ್ರಜ್ಞರು ಕೇಳಿದ ಪ್ರಶ್ನೆಗೆ ಕಲಾಂ, ಪ್ರಶ್ನೆ ಸರಿಯಾಗಿ ಕೇಳದ್ದಕ್ಕೋ ಎನೋ ಸಮಂಜಸವಾದ ಉತ್ತರವನ್ನು ನೀಡದೇ ಇದ್ದಾಗ, ಪ್ರೊ.ಸತೀಶ್ ಅವರನ್ನು ತಡೆದು, ಕಲಾಂ ನೀವು ಆ ವ್ಯಕ್ತಿಯ ಪ್ರಶ್ನೆಗೆ ಸರಿಯಾಗಿ ಉತ್ತರಿಸಲೇಬೇಕು ಎಂದು ತಾಕೀತು ಮಾಡಿದ್ದರಂತೆ. ಅದರಂತೆ ಕಲಾಂ ಉತ್ತರಿಸಿದರಂತೆ ಕೂಡ. ಮುಂದೆ ಇದೇ ರೂಢಿ ಇಸ್ರೊ ಸಂಸ್ಥೆಯ ಯೋಜನಾ ನಿರ್ವಹಣೆ ಮತ್ತು ಪರಿಶೀಲನೆಯ ಕೇಂದ್ರ ಭಾಗವೇ ಆಯಿತು. ಇಂತಹ ಸಭೆಗಳು ನಡೆಯುತ್ತಿದ್ದುದೇ ದೊಡ್ಡ ಸಭಾಂಗಣಗಳಲ್ಲಿ. ಅಂತಹ ಒಂದು ಚಿತ್ರ ಇಲ್ಲಿದೆ ನೋಡಿ.
ಇದಲ್ಲದೇ ಇಸ್ರೊ ಯೋಜನೆಗಳಲ್ಲಿ ಮೊದಲಿನಿಂದಲೂ ಅಕೆಡೆಮಿಕ್ ತಜ್ಞರನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಕೈಗಾರಿಕೆಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದವರು ಪ್ರೊ.ಸತೀಶ್. ಮೊದಲು ಮೊದಲು ಈ ರೀತಿನೀತಿಗೆ ಒಗ್ಗಿಕೊಳ್ಳದ ಇಸ್ರೊ ಉದ್ಯೋಗಿಗಳು, ಕ್ರಮೇಣ ಇದರ ಲಾಭವನ್ನು ಅರಿತು ಕೆಲಸ ಮಾಡಲು ತೊಡಗಿದರಂತೆ. ಈ ವ್ಯವಸ್ಥೆ ಇಂದಿಗೂ ಜಾರಿಯಲ್ಲಿರುವುದನ್ನು ಕಾಣಬಹುದು. ಜೊತೆಗೆ ಅಕೆಡೆಮಿಕ್ ವಲಯದ ಸಹಯೋಗ ಹೆಚ್ಚಿರಲಿ ಎಂದು ರೆಸ್ಪಾಂಡ್ ಎಂಬ ಕಾರ್ಯಕ್ರಮ ರೂಪಿಸಿದರು ಮತ್ತು ದೇಶದ ಪ್ರತಿಷ್ಟಿತ ತಾಂತ್ರಿಕ ಸಂಸ್ಥೆಗಳಲ್ಲಿ ಇಸ್ರೊ ಉದ್ಯೋಗಿಗಳಿಗೆ ಉನ್ನತ ಶಿಕ್ಷಣ ದೊರೆಯುವ ಅನುಕೂಲ ಮಾಡಿಕೊಟ್ಟರು. ಅದಕ್ಕೆ ಅವರ ಇಸ್ರೊ ಸಹೋದ್ಯೋಗಿಗಳು ಹೇಳುತ್ತಿದ್ದ ಮಾತು “We could always see Professor in our Chairman” !!
ಜೊತೆಗೆ ಪ್ರೊ.ಸತೀಶ್ ಮೊದಲ ಉಪಗ್ರಹ “ಆರ್ಯಭಟ” ಯೋಜನಾ ನಿರ್ವಣಾ ಸಮಿತಿಯ ಅಧ್ಯಕ್ಷರಾಗಿದ್ದು ಬಿಟ್ಟರೆ, ಬೇರೆ ಯಾವುದೇ ರಾಕೆಟ್ ಅಥವಾ ಉಪಗ್ರಹ ನಿರ್ವಹಣಾ ಸಮಿತಿಗಳ ಅಧ್ಯಕ್ಷರಾಗಿರಲಿಲ್ಲ. ಆ ಜಾಗದಲ್ಲಿ ಸೂಕ್ತ ವ್ಯಕ್ತಿಯನ್ನು ನೇಮಿಸುತ್ತಿದ್ದರು. ಯೋಜನಾ ಪರಿಶೀಲನಾ ಸಭೆಗಳಲ್ಲಿ ಬೇರೆ ಬೇರೆ ಆಯಾಮಗಳು ಮತ್ತು ಆಯ್ಕೆಗಳು ಬಂದಾಗ, ಅವನ್ನೆಲ್ಲಾ ವಿಮರ್ಶಿಸಿ ಕೊನೆಗೂ ತೀರ್ಮಾನವನ್ನು ಆಯಾ ಯೋಜನೆ ನಿರ್ದೇಶಕರುಗಳಿಗೆ ವಹಿಸಿಬಿಡುತ್ತಿದ್ದರು. ಹಾಗಾಗಿ ನಾಯಕತ್ವ ಮತ್ತು ಸಂಸ್ಥೆಯನ್ನು ಮುನ್ನಡೆಸುವ ಒಂದು ವ್ಯವಸ್ಥೆ, ವ್ಯಕ್ತಿಕೇಂದ್ರಿತವಾಗಿ ಇರದೆ ಇಸ್ರೊ ಬೆಳೆಯಲು ಅಡಿಗಲ್ಲು ಹಾಕಿದರು.
ಮತ್ತೆರಡು ಅವರ ಕಾಲದಲ್ಲಿ ಆದ ಮುಖ್ಯ ಯೋಜನೆಗಳೆಂದರೆ, ಭಾರತೀಯ ಸಂಪರ್ಕ ಉಪಗ್ರಹ ವ್ಯವಸ್ಥೆ ಇನ್ಸ್ಯಾಟ್(INSAT) ಮತ್ತು ದೂರಸಂವೇದಿ ಉಪಗ್ರಹ ವ್ಯವಸ್ಥೆ (IRS). ಈ ಎರಡೂ ಯೋಜನೆಗಳಿಗೆ ಪ್ರತ್ಯೇಕ ರಾಷ್ಟ್ರೀಯ ಮಟ್ಟದ ಸಮಿತಿ ಮಾಡಿ, ಅದರಲ್ಲಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು, ಆಡಳಿತಗಾರರು ಮತ್ತು ತಂತ್ರಜ್ಞರು ಇರುವಂತೆ ನೋಡಿಕೊಂಡು, ಆ ಯೋಜನೆಗಳು ರೂಪುಗೊಳ್ಳುವ ಹಂತದಿಂದ ಬಳಕೆಗೆ ಬರುವವರೆಗೆ ಪ್ರತಿ ಹಂತದಲ್ಲೂ ಸಮನ್ವಯತೆ ಸಾಧಿಸಿದರು. ಹಾಗಾಗಿ ಉಪಗ್ರಹ ಉಡಾವನೆ ನಂತರ ಅದರ ಬಳಕೆದಾರರನ್ನು ಹುಡುಕಬೇಕಾದ ಅವಶ್ಯಕತೆಯಿರಲಿಲ್ಲ ಹಾಗೂ ಬಳಕೆದಾರ ಅವಶ್ಯಕತೆಗಳು ಯೋಜನೆಗಳು ಸಿದ್ಧಗೊಳ್ಳುವ ಹಂತದಲ್ಲೇ ಸ್ಪಷ್ಟವಾಗಿ ಮುನ್ನೆಲೆಗೆ ಬರುತ್ತಿದ್ದವು.
ಮೇಲೆ ಹೇಳಿದ ಎಲ್ಲಾ ಅಂಶಗಳ ಸಮ್ಮಿಶ್ರಣವೇ ಇಸ್ರೊ ಕಲ್ಚರ್. ಇದು ಕೂಡ ಪ್ರೊ. ಸತೀಶ್ ಅವರ ಕೊಡುಗೆಯೇ!!
ಉಪಸಂಹಾರ
ಇಸ್ರೊ ಬೆಳೆಸುವಲ್ಲಿ ಪ್ರೊ.ಸತೀಶ್ ಅವರ ಪಾತ್ರ ಅತ್ಯಂತ ಹಿರಿದು. ಅದರ ಎಲ್ಲ ವಿವರಗಳನ್ನು ಪುಟ್ಟ ಲೇಖನದಲ್ಲಿ ನೀಡುವುದು ಕಷ್ಟ. ಅವರು ತಾವು ಬದುಕಿರುವವರೆಗೂ ಬಾಹ್ಯಾಕಾಶ ಆಯೋಗದ ಸದಸ್ಯರಾಗಿ ಇಸ್ರೊ ಮುಖ್ಯಾಲಯದ ಒಂದು ಪುಟ್ಟ ಕೋಣೆಯಲ್ಲಿ ಕೆಲಸ ಮಾಡಿದವರು. ಇಂದು ಇಸ್ರೊ ಸಂಸ್ಥೆಯ ಕಾಯಕ ಕುದುರೆ ಎಂದೆನೆಸಿಕೊಂಡಿರುವ ಪಿ.ಎಸ್.ಎಲ್.ವಿ ರಾಕೆಟ್ ನ ವಿನ್ಯಾಸವನ್ನು ಅಂತಿಮಗೊಳಿಸಿದವರು ಅವರೇ. ಇಸ್ರೊ ಉದ್ಯೋಗಿಗಳೆಲ್ಲರೂ ವಿದೇಶದಲ್ಲಿ ಕಲಿತು ಬಂದವರಲ್ಲ. ಹೆಚ್ಚಿನವರು ನಮ್ಮ ದೇಶದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದವರೇ. ಆದರೆ ಅವರಿಗೆಲ್ಲಾ ಆತ್ಮವಿಶ್ವಾಸ ತುಂಬಿ ಉತ್ಸಾಹದಿಂದ ಕೆಲಸ ಮಾಡಿ ತಾವೂ ಬೆಳೆದು ಸಂಸ್ಥೆಯನ್ನು ಬೆಳೆಸುವ ಶಕ್ತಿಯಾಗಿ ರೂಪಿಸಿದ್ದು ಪ್ರೊ. ಸತಿಶ್ ಧವನ್. ಇಷ್ಡಿದ್ದರೂ ಅವರೆ೦ದೂ ಇದು ನನ್ನ ಸಾಧನೆ ಎಂದು ಬಿಂಬಿಸುತ್ತಿರಲಿಲ್ಲ. ಅವರು ಹೇಳುತ್ತಿದ್ದ ಮಾತು – “It was Vikram’s dream. I only executed it”!! “ವಿಕ್ರಮ” ಸಾಧನೆಯ ಹಿಂದೆ ಸೌಜನ್ಯದ ಸಾಕಾರಮೂರ್ತಿ ಪ್ರೊ. ಸತೀಶ್ ಧವನ್ ಇದ್ದರು ಎಂಬುದಕ್ಕೆ ಮೇಲಿನ ವಾಕ್ಯ ಮತ್ತು ಈ ಕೆಳಗಿನ ಚಿತ್ರ ರೂಪಕದಂತಿದೆ.
ಮುಂದಿನ ಮತ್ತು ಕೊನೆಯ ಕಂತಿನಲ್ಲಿ ಅವರ ಆಸಕ್ತಿ, ಕೊಡುಗೆ ಮತ್ತು ಕುಟುಂಬದ ಬಗ್ಗೆ ಇನ್ನಷ್ಡು ತಿಳಿಯೋಣ.
(ವಿ.ಸೂ.: ಪ್ರೊ.ಸತೀಶ್ ಧವನ್ ಜನ್ಮಶತಮಾನೋತ್ಸವ ಸಂಭ್ರಮದ ಸಲುವಾಗಿ ಸಿ.ಪಿ.ಯು.ಎಸ್. ಅವರ ನೆನಪಿನ ವೆಬಿನಾರ್ ಅನ್ನು ೨೧, ಆಗಸ್ಟ್ ಶನಿವಾರದಂದು ಆಯೋಜಿಸಿದೆ. ಅಂದು ಅವರ ಮಗಳಾದ ವಿಜ್ಞಾನಿ ಡಾ. ಜ್ಯೋತ್ಸ್ನಾ ಧವನ್ ಮತ್ತು ಐ.ಐ.ಎಸ್ ಸಿ ಯ ಸಂಶೋಧನಾ ವಿದ್ಯಾರ್ಥಿ ಶ್ರೀ ಶ್ರೀನಿವಾಸ್ ಕೀರ್ತಿ ಮಾತನಾಡಲಿದ್ದಾರೆ. ಅದರ ವಿವರಗಳನ್ನು ಆದಷ್ಟು ಶೀಘ್ರದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ನೀವು ಬಿಡುವು ಮಾಡಿಕೊಳ್ಳಿ)
ನಮಸ್ಕಾರಗಳು.
ಆಕಾಶ್ ಬಾಲಕೃಷ್ಣ, ಇಸ್ಟ್ರ್ಯಾಕ್/ಇಸ್ರೊ, ಬೆಂಗಳೂರು.
ಹೆಚ್ಚಿನ ಓದಿಗೆ:
- K Kasturirangan, About Prof. Satish Dhawan, Resonance, Indian Academy of Sciences, October 2003.
- P.V.Manoranjan Rao, From Fishing Hamlet to Red Planet: India’s Space Journey, ISRO & Harper Collins, 1st Edition, 2015.
- R Aravamudan with Gita Aravamudan, ISRO: A Personal History, HarperCollins; 1st edition (14 February 2017).
- Special Section: Satish Dhawan Birth Centenary, Current Science, Vol 119, No.9, 10 NOVEMBER 2020.
- ಸಿ.ಆರ್.ಸತ್ಯ, ಪ್ರೊ.ಸತೀಶ್ ಧವನ್: ಒಂದು ಸ್ಮರಣೆ, ವಿಜ್ಞಾನ ಲೋಕ ದ್ವೈಮಾಸಿಕ , ಸಂಪುಟ-೧೪, ಸಂಚಿಕೆ-೫, ಜನವರಿ-ಫೆಬ್ರವರಿ ೨೦೨೧
wow…thank you for the finer details of an outstanding leader in scientific community. Thank u CPUS for the post…