ನಾವೆಲ್ಲರೂ ಉಣ್ಣುವ ಆಹಾರಕ್ಕೆ ಪರಿಮಳ ಮತ್ತು ಬಣ್ಣವನ್ನು ಕೊಡುವುದರ ಜೊತೆಗೆ ಆರೋಗ್ಯದ ರಕ್ಷಣೆಯಲ್ಲೂ ಒಂದಷ್ಟು ಪಾಲನ್ನು ಹೊತ್ತಿರುವ ಅರಿಸಿನ ಅಪ್ಪಟ ಭಾರತೀಯ ಸಸ್ಯ. ಸರಿ ಸುಮಾರು 4೦೦೦ ವರ್ಷಗಳಿಗೂ ಹೆಚ್ಚು ಬಳಕೆಯ ಇತಿಹಾಸವುಳ್ಳ ಅರಿಸಿನ ನಮ್ಮದೆಂದು ಅಂತರರಾಷ್ಟ್ರೀಯ ಕಟಕಟೆಯಲ್ಲಿ ಸಾಬೀತು ಮಾಡಲು ನಮ್ಮವರೇ ಮಾಡಿದ ಎಡವಟ್ಟುಗಳು ಕಾರಣವಾಗಿದ್ದು ಮಾತ್ರ ನಾಚಿಕೆಗೇಡಿನ ಸಂಗತಿ. ಅರಿಸಿನದ ಔಷಧೀಯ ಗುಣಗಳು ಭಾರತೀಯ ಸಂಸ್ಕೃತಿಯಲ್ಲಿ ಹಾಸು-ಹೊಕ್ಕಾಗಿದ್ದು ಅದನ್ನೇ ಅಮೆರಿಕೆಯಲ್ಲಿ ಪೇಟೆಂಟ್ ಪಡೆದ ವಿಚಿತ್ರ ಬೆಳವಣೆಗೆಯ ಕಥೆಯದು. ಇದೆಲ್ಲವನ್ನೂ ಗೆದ್ದುದರ ಜೊತೆಗೆ ಒಂದು ಗಿಡವಾಗಿ ಅರಿಸಿನದ ಹಾಗೂ ಅದರ ಸಂಕುಲದ ಹಲವಾರು ಮಹತ್ವದ ವಿಷಯಗಳು ಆಕರ್ಷಕವಾಗಿವೆ. ಅರಿಸಿನವು ಬಳಕೆಯ ಹಿನ್ನೆಲೆಯಿಂದ ಸಾಂಸ್ಕೃತಿಕವಾಗಿದ್ದು, ಸಾವಿರಾರು ವರ್ಷಗಳ ಹಿಂದಿನ ತಿಳಿವಿನಿಂದ ಮೊದಲ್ಗೊಂಡು ಇತ್ತೀಚೆಗಿನ ಅತ್ಯಾಧುನಿಕ ಸಂಶೋಧನೆಗಳ ಫಲಿತಾಂಶಗಳವರೆಗೂ ಅದರ ಮಹತ್ವಗಳು ಜನಜನಿತವಾಗಿವೆ. ಇವೆಲ್ಲಾ ಸಂಗತಿಗಳ ಒಳಹೊಕ್ಕು ಅರಿಯುವ ಹಿತದ ಬೆರಗಿನ ಬಣ್ಣವನ್ನು ಆನಂದಿಸಲು ಕಾರಣಗಳನ್ನು ಕೊಡಬೇಕಾಗಿಲ್ಲ.
ಅರಿಸಿನದ ಸಸ್ಯವನ್ನು ವೈಜ್ಞಾನಿಕವಾಗಿ ಕರ್ಕುಮಾ ಲೊಂಗ (Curcuma longa) ಎಂದು ಕರೆಯಲಾಗುತ್ತದೆ. ಇದೊಂದು ಬಹುವಾರ್ಷಿಕ ಸಸ್ಯ. ಇದರ ಹೂವೂ ಕೂಡ ಹಳದಿಯಿಂದ ಗುಲಾಬಿ ಬಣ್ಣಕ್ಕೆ ತಿರುಗಿ ಆಕರ್ಷಕವಾಗಿರುತ್ತದೆ. ಇದು ಜಿಂಜಿಬರೆಸಿಯೆ (Zingiberaceae) ಎಂಬ ಕುಟುಂಬದ ಸಸ್ಯ. ನಮ್ಮ ಆಹಾರ ಮತ್ತು ಔಷಧದ ಪರಂಪರೆಯಲ್ಲಿ ಮತ್ತೊಂದು ಮಹತ್ವದ ಸಸ್ಯವಾದ ಶುಂಠಿಯೂ ಸಹಾ ಇದೇ ಕುಟುಂಬಕ್ಕೆ ಸೇರಿದೆ. ಅರಿಸಿನವು ಆಯುರ್ವೇದ, ಸಿದ್ಧ, ಯುನಾನಿ ಮತ್ತು ಚೀನಿ ವೈದ್ಯ ಪದ್ಧತಿಗಳಲ್ಲಿ ಸಾಕಷ್ಟು ವರ್ಷಗಳಿಂದ ಬಳಕೆಯಲ್ಲಿದೆ. ಮುಂದೆ ಈಜಿಪ್ಟರ ವೈದ್ಯ ಪದ್ಧತಿಯನ್ನೂ ತಲುಪಿದೆ. ಅಚ್ಚರಿಯ ಸಂಗತಿಯೆಂದರೆ ಭಾರತದ ಸಂಪರ್ಕಕ್ಕೆ ಬಂದಂತಹಾ ಯಾವುದೇ ಕುರುಹುಗಳನ್ನೂ ಹೊಂದಿಲ್ಲದ ಕೆಲವು ಪೆಸಿಫಿಕ್ ಸಾಗರದ ದ್ವೀಪಗಳ ಸಮೂಹಗಳಲ್ಲಿಯೂ ಅರಿಸಿನದ ಬಳಕೆಯನ್ನು ಅಲ್ಲಿನ ಬುಡಕಟ್ಟುಗಳಲ್ಲಿ ಕಾಣಬಹುದಾಗಿದೆ. ಈ ದ್ವೀಪಗಳ ಸಮುಹಗಳು ನ್ಯೂಜಿಲೆಂಡಿನ ಉತ್ತರ ಹಾಗೂ ಈಶಾನ್ಯಕ್ಕೆ ಕಾಣಬರುವ ಚಿಕ್ಕ-ಪುಟ್ಟ ದ್ವೀಪಗಳಾಗಿವೆ. ಇಲ್ಲೆಲ್ಲಾ ಬಹಳ ಹಿಂದಿನಿಂದಲೇ ಅರಿಸಿನದ ಬಳಕೆಯು ಇರುವುದು ಕುತೂಹಲಕರ ಸಂಗತಿ. ಇಂತಹ ಅಚ್ಚರಿಯ ಬಳಕೆಯನ್ನು ಕುರಿತ ಕಾರಣಗಳಿಗೆ ಅರಿಸಿನದ ಸಂಕುಲದಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು ಹಲವಾರು ವಿಶೇಷ ಸಂಗತಿಗಳಿಂದ ಕೂಡಿರುವ ಅವುಗಳ ಬಳಕೆಯ ವಿವರಗಳಲ್ಲಿ ಕೆಲವು ಉತ್ತರಗಳಿವೆ.
ಟರ್ಮರಿಕ್(Turmeric) ಪದವು ಮಧ್ಯಕಾಲದ ಇಂಗ್ಲೀಶಿನ ಟರ್ಮರೈಟ್ (Turmeryte) ಪದದಿಂದ ವಿಕಾಸಗೊಂಡಿದೆ. ಟರ್ಮರೈಟ್ ಪದವು ಮೂಲತಃ ಲ್ಯಾಟಿನ್ ಭಾಷೆಯ ಟೆರ್ರಾ ಮೆರಿಟಾ ಅಂದರೆ ನೆಲದ ಬಣ್ಣದ್ದು (Terra Merita -“meritorious earth”). ಎಂಬ ಪದಗಳಿಂದ ವಿಕಾಸವಾಗಿದೆ. ಅರಿಸಿನಕ್ಕೆ ಸಂಸ್ಕೃತ ಭಾಷೆಯಲ್ಲಿಯೇ 53ಕ್ಕೂ ಹೆಚ್ಚು ಪರ್ಯಾಯ ಪದಗಳಿವೆ. ಅದರ ಸಂಕುಲದ ಹೆಸರಾದ ಕರ್ಕುಮಾ ಪದವು ಸಂಸ್ಕೃತದ ಕುಂಕುಮದಿಂದ ವಿಕಾಸಗೊಂಡಿದೆ. ಕರ್ಕುಮಾ ಸಂಕುಲದಲ್ಲಿ 134 ಪ್ರಭೇದಗಳಿದ್ದು ಇವೆಲ್ಲದರ ಗಡ್ಡೆಗಳೂ ಒಂದಲ್ಲಾ ಒಂದು ಬಣ್ಣದವುಗಳಾಗಿವೆ. ಭಾರತ ದೇಶದಲ್ಲೇ 40ಕ್ಕೂ ಹೆಚ್ಚು ಪ್ರಭೇದಗಳ ವೈವಿಧ್ಯತೆಯಿದೆ. ಹಲವು ಪ್ರಭೇದಗಳು ಹಳದಿ ಅಥವಾ ಬಳಸುವ ಅರಿಸಿನದಂತೆಯೆ ಇರುವುದರಿಂದ ಹಲವು ಸಮುದಾಯಗಳಲ್ಲಿ ಬಳಕೆಯಲ್ಲಿರುವ ಪ್ರಭೇದಗಳ ಕುರಿತು ಇನ್ನೂ ಸರಿಯಾದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಅರಿಸಿನವೆಂದು ನಮ್ಮ ಬಳಕೆಯಲ್ಲಿ ಇರುವುದನ್ನು “ಲೊಂಗ” ಪ್ರಭೇದವೆಂದು ಗುರುತಿಸುತ್ತಿದ್ದರೂ ಬೇರೆಡೆ ಇದೇ ಬಳಕೆಯ ಮತ್ತೊಂದು ಪ್ರಭೇದವಾಗಿದ್ದರೂ ಅಚ್ಚರಿಯಲ್ಲ. ಹಾಗಾಗಿ ಬಳಕೆಯಲ್ಲಿರುವ ಪ್ರಭೇದಗಳ ಕುರಿತ ಅಂತಿಮ ತೀರ್ಮಾನವಿನ್ನೂ ಚರ್ಚೆಯಲ್ಲೇ ಇದೆ. ಅದೇನೆ ಇರಲಿ ಎಲ್ಲಾ 134 ಪ್ರಭೇದಗಳ ಕಾಂಡವು ರೂಪಾಂತರಗೊಂಡು ನೆಲದೊಳಗೆ ಸಮಾನಾಂತರವಾಗಿ ಬೆಳೆಯುವ ಗಡ್ಡೆಯಾಗಿರುವುದನ್ನೇ ಆಹಾರ ಅಥವಾ ಔಷಧಗಳ ಬಳಕೆಯಲ್ಲಿ ಕಾಣುತ್ತೇವೆ. ಇವುಗಳ ವಿಶೇಷವೆಂದರೆ ಕೆಲವೊಂದು ಕಂದು ಬಣ್ಣದವು, ಕೆಲವು ನೀಲಿ, ಕೆಲವು ಮಿಶ್ರಬಣ್ಣದವೂ ಇವೆ. ಹಾಗಾಗಿ ಇಡೀ ಸಂಕುಲವು ವಿಶೇಷವಾದ ಗಡ್ಡೆಗಳನ್ನು ಒಳಗೊಂಡಿದೆ. ಹಲವಾರು ಅರಿಸಿನದಂತಯೇ ಹಳದಿ ಬಣ್ಣದವೂ ಆಗಿವೆ. ಆದ್ದರಿಂದ ವಿವಿಧ ದೇಶಗಳ ವಿವಿಧ ಪ್ರದೇಶಗಳ ಸಮುದಾಯಗಳಲ್ಲಿ ಬಳಸಲಾಗುತ್ತಿರುವ ಪ್ರಭೇದದ ಬಗೆಗೆ ಇನ್ನೂ ಹೆಚ್ಚಿನ ತಿಳಿವಿನ ಅನಿವಾರ್ಯತೆಯಿದೆ.
ಕೆಲವೊಂದು ವಿಶೇಷತೆಯ ಕರ್ಕುಮಾ ಪ್ರಭೇದಗಳು ಈ ಕೆಳಗಿನಂತಿವೆ.
೧. Curcuma aeruginosa(Pink and Blue Ginger)– ಕರ್ಕುಮಾ ಎರುಜಿನೊಸಾ (ಪಿಂಕ್ ಮತ್ತು ನೀಲಿ ಅರಿಸಿನ)
2. Curcuma amada (Mango Ginger) – ಕರ್ಕುಮಾ ಅಮಾದಾ (ಮಾವಿನ ಶುಂಠಿ) ಇದಕ್ಕೆ ಮಲೆನಾಡಿನಲ್ಲಿ ಅಂಬೆ ಹಳದಿ, ಹುಳಿ ಅರಿಸಿನ ಎಂತಲೂ ಕರೆಯುತ್ತಾರೆ. ಇದನ್ನು ಉಪ್ಪಿನಕಾಯಿ ಹಾಕಿಕೊಂಡು ಸವಿಯಬಹುದು.
3. Curcuma australasica (Cape York Turmeric) – ಕರ್ಕುಮಾ ಆಸ್ಟ್ರೆಲೆಸಿಕ (ಯಾರ್ಕ್ ಅರಿಸಿನ)
4. Curcuma cordata (Jewel of Thailand) – ಕರ್ಕುಮಾ ಕಾರ್ಡಾಟಾ (ಥೈಲ್ಯಾಂಡಿನ ರತ್ನ)
5. Curcuma flaviflora (Red Fireball Ginger) – ಕರ್ಕುಮಾ ಫ್ಲವಿಫೊರಾ (ಕೆಂಪು ಬೆಂಕಿನುಂಡೆಯ ಶುಂಠಿ)
6. Curcuma gracillima (Chocolate Zebra) – ಕರ್ಕುಮಾ ಗ್ರಸಿಲ್ಲಿಮಾ (ಚಾಕೊಲೆಟ್ ಜಿಬ್ರಾ)
7. Curcuma inodora (Pink Ginger) – ಕರ್ಕುಮಾ ಇನೊಡೊರಾ (ಪಿಂಕ್ ಶುಂಠಿ)
8. Curcuma oligantha (White Turmeric)ಕರ್ಕುಮಾ ಒಲಿಗಾಂತ (ಬಿಳಿ ಅರಿಸಿನ)
9. Curcuma rubescens (Wine Red Plume)ಕರ್ಕುಮಾ ರುಬಿಸೆನ್ಸ್ (ವೈನ್ ರೆಡ್ ಅರಿಸಿನ)
10. Curcuma thorelii (Chiang Mai Snow) – ಕರ್ಕುಮಾ ತೊರೆಲಿ (ಹಿಮದಂತಹಾ ಅರಿಸಿನ)
ನಾವು ಬಳಸುವ ಅರಿಸಿನದ “ಕೊಂಬು” ಅಥವಾ “ಗಡ್ಡೆ” ಎನ್ನುವುದು ಸಸ್ಯದ ರೂಪಾಂತರಗೊಂಡ ಕಾಂಡ. ಅರಿಸಿನದ ಗಿಡವೆಂದು ನೆಲದಿಂದ ಮೇಲೆ ಕಾಣುವುದು ಕೇವಲ ಎಲೆಗಳ ಸಮೂಹ ಮಾತ್ರ. ಗಿಡದ ಕಾಂಡವು ನೆಲದೊಳಗೆ ಸಮಾನಾಂತರವಾಗಿ ಹಬ್ಬಿಕೊಂಡಿದ್ದು, ರೈಜೊಮ್ ಎಂದು ಕರೆಯಲಾಗುವ ಅದುವೇ ಅರಿಸಿನ ಗಡ್ಡೆ. ರೈಜೊಮ್ ಅನ್ನು ಆಹಾರ ಅಥವಾ ಔಷಧವಾಗಿ ಜೊತೆಗೆ ವಂಶಾಭಿವೃದ್ಧಿಯಲ್ಲಿ ಕೂಡ ಬಳಸಲಾಗುತ್ತದೆ. ಈ ರೈಜೊಮ್ ಅನ್ನು ಹಸಿಯಾಗಿಯೂ ಅಲ್ಲದೆ ಬೇಯಿಸಿ ಒಣಗಿಸಿಯೂ ಬಳಸಲಾಗುತ್ತದೆ. ಅರಿಸಿನದ ಪುಡಿಯು ಬೇಯಿಸಿ ಒಣಗಿಸಿದ ರೈಜೊಮಿನಿಂದ ತಯಾರಾದದ್ದು.
ಮೂಲತಃ ಅರಿಸಿನವು ನೂರಕ್ಕೂ ಹೆಚ್ಚು ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡಿದೆ. ಬೇರಿನಲ್ಲಿ ಬಹಳ ಮುಖ್ಯವಾದ ರಾಸಾಯನಿಕ ಸಂಯುಕ್ತವೆಂದರೆ ಅರಿಸಿನದ ತೈಲ. ಇದು ಸಾಧಾರಣವಾಗಿ ಬಹು ಬೇಗ ಆವಿಯಾಗುವಂತಹದ್ದು. ಟರ್ಮೆರೊನ್ ಎನ್ನುವ ರಾಸಾಯನಿಕವನ್ನು ಇದು ಒಳಗೊಂಡಿದೆ. ಮತ್ತೊಂದು ಪ್ರಮುಖವಾದ ಬಣ್ಣವನ್ನು ಒದಗಿಸಿದ ರಾಸಾಯನಿಕಗಳನ್ನು ಕರ್ಕುಮಿನಾಯ್ಡ್ ಗಳೆಂಬ ಗುಂಪಿನವಾಗಿ ವಿಭಾಗಿಸಲಾಗಿದೆ. ಇವುಗಳೆ ಔಷಧಿಯ ಗುಣವನ್ನು ಒದಗಿಸಿರುವ ಬಹು ಮುಖ್ಯವಾದ ರಾಸಾಯನಿಕಗಳು. ಆಧುನಿಕ ವೈದ್ಯ ಪದ್ದತಿಯಲ್ಲಿ ಕರ್ಕುಮಿನ್ ಎಂದು ಸಂಶ್ಲೇಷಿಸಿ ಹಲವಾರು ಅಧ್ಯಯನಗಳನ್ನೂ ಮಾಡಲಾಗಿದೆ. ಈ ಗುಂಪಿನ ರಾಸಾಯನಿಕಗಳು ಪ್ರತಿ ಉತ್ಕರ್ಷಣವನ್ನು (ಆಂಟಿ-ಆಕ್ಸಿಡೆಂಟ್) ಉಂಟುಮಾಡುವ, ಉರಿಯೂತವನ್ನು ಹಾಗೂ ಕೆಲವು ಸೂಕ್ಷ್ಮಾಣುಗಳನ್ನೂ ನಿಯಂತ್ರಿಸುವ ಗುಣವನ್ನು ಹೊಂದಿವೆ. ಇಡಿಯಾಗಿ ಅರಿಸಿನವನ್ನು ರಾಸಾಯನಿಕವಾಗಿ ವಿವಿಧ ಸಂಯುಕ್ತಗಳಿಂದ ಅರಿಯುವ ಪ್ರಯತ್ನವನ್ನು ಮಾಡಲಾಗಿದೆ. ಅವುಗಳೆಲ್ಲವುಗಳ ಹರಹು ಸಾಕಷ್ಟಿದೆ. ಪರಿಮಳವನ್ನು ಕೊಡುವ ರಾಸಾಯನಿಕವೆಂದರೆ ಟರ್ಮೆರೊನ್ ಮತ್ತು ಜಿಂಜಿಬರೆನ್‌ಗಳಾಗಿವೆ. ಇವು ಮೂಲತಃ ತೈಲದೊಳಗಿನ ಸಂಯುಕ್ತಗಳು. ಆಹಾರ ಪೋಷಕಾಂಶವಾಗಿ ಅರಿಸಿನವು ಹಲವು ಉಪಯುಕ್ತ ರಾಸಾಯನಿಕ ವಿಶೇಷಗಳನ್ನು ಒಳಗೊಂಡಿದೆ. ಇದರಲ್ಲಿನ ಕೊಬ್ಬು, ಜೊತೆಗೆ ಕೆಲವು ಖನಿಜಾಂಶಗಳ ಮಿಶ್ರಣಗಳು ಆಹಾರವಾಗಿ ಮಾನವ ಕುಲವನ್ನು ಬೆಂಬಲಿಸಿವೆ.
ಈ ಹಲವಾರು ಕಾರಣಗಳಿಂದ ಆಹಾರ ಮತ್ತು ಆರೋಗ್ಯದ ಹಿತದಲ್ಲಿ ಅರಿಸಿನವು ಮಹತ್ವದ ಪಾತ್ರವನ್ನು ವಹಿಸುತ್ತಲೇ ಸಹಸ್ರಾರು ವರ್ಷಗಳ ಸಂಗಾತಿಯಾಗಿದೆ. ಭಾರತೀಯ ಪರಂಪರೆಯಲ್ಲಿ ವಿವಿಧ ಆಹಾರಗಳಲ್ಲಿ ಸಾಂಬಾರು ಪದಾರ್ಥದ ಅತ್ಯಂತ ಪ್ರಮುಖವಾದ ವಸ್ತು ಅರಿಸಿನ. ಬೆಣ್ಣೆ, ತುಪ್ಪ ಅಲ್ಲದೆ ನೂರಾರು ತಿನ್ನುವ ಪದಾರ್ಥಗಳ ಬಣ್ಣವನ್ನು ಕೊಡುವ ವಸ್ತುವು ಇದಾಗಿದೆ. ಸಾಂಬಾರು, ವಿವಿಧ ಪಲ್ಯೆಗಳು, ತರೆಹೇವಾರಿ ಉಪ್ಪಿನಕಾಯಿಗಳು, ವಿವಿಧ ಚಟ್ನಿಗಳು ಮುಂತಾದವುಗಳಲ್ಲಿ ಅರಿಸಿನದ ಉಪಯೋಗ ಸಾಮಾನ್ಯವಾದ ತಿಳಿವು.
ಅರಿಸಿನದ ಔಷಧೀಯ ಗುಣಗಳ ಬಳಕೆಯನ್ನು ಮಾನವಕುಲವು ಅರಿತಿರುವುದು ಬಹಳ ಮುಖ್ಯವಾದ ಪಾರಂಪರಿಕ ತಿಳಿವಳಿಕೆಯಾಗಿದೆ. ಸಣ್ಣಪುಟ್ಟ ಚರ್ಮದ ಕಾಯಿಲೆಗಳಿಂದ ಮೊದಲಾಗಿ ಕೆಮ್ಮು, ಗಂಟಲು ಬೇನೆ, ಉರಿಯೂತಗಳ ನಿಯಂತ್ರಣ, ಹಾಗೂ ಕೀಲು ನೋವುಗಳ ನಿವಾರಣೆಗಳಲ್ಲೂ ಮನೆಮದ್ದಿನ ಭಾಗವಾಗಿದೆ. ಅನೇಕ ಆಧುನಿಕ ಸಂಶೋಧನಾ ಅಧ್ಯಯನಗಳು ಅಸ್ತಮಾ, ಕ್ಯಾನ್ಸರ್, ಕಿಬ್ಬೊಟ್ಟೆಯ ನೋವು, ಅಲ್ಸರ್‌ಗಳು, ಕೆಲವೊಂದು ಸೋಂಕುಗಳು, ಉಸಿರಾಟದ ಚಿಕಿತ್ಸೆಗಳು ಹೀಗೆ ಇವೇ ಮುಂತಾದ ಮಾನವ ಕುಲದ ಹಲವು ಸಮಸ್ಯೆಗಳ ಬಗೆಗೆ ನಡೆದಿವೆ.
ತೀರಾ ಇತ್ತೀಚೆಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೃದ್ಧಾಪ್ಯ ವಿಜ್ಞಾನ ಸಂಶೋಧಕರು ಮುಪ್ಪಿನ ಕಾಯಿಲೆಗಳಿಗೆ ಅರಿಸಿನದ ಉಪಯೋಗಗಳ ಕುರಿತು ಸಂಶೋಧನೆಯ ಫಲಿತಗಳನ್ನು ಪ್ರಕಟಿಸಿದ್ದಾರೆ. ಅವರ ತಿಳಿವಳಿಕೆಯಂತೆ ದಿನವೂ ಸ್ವಲ್ಪ ಪ್ರಮಾಣದ ಅರಿಸಿನ ಬಳಕೆಯಿಂದ ಅದರಲ್ಲಿರುವ ಕರ್ಕುಮಿನ್ ರಾಸಾಯನಿಕವು ದೇಹವನ್ನು ಸೇರುತ್ತಿದ್ದು ನಮ್ಮ ಮುಪ್ಪಿನ ನ್ಯೂನ್ಯತೆಗಳನ್ನು ಹದ್ದುಬಸ್ತಿನಲ್ಲಿಡುವ ಬಗ್ಗೆ ವರದಿ ಮಾಡಿದ್ದಾರೆ. ಪಾಶ್ಚಾತ್ಯರಲ್ಲಿ ಅಲ್‌ಜೈಮರ್ ಅಥವಾ ಮುಪ್ಪಿನ ಮರೆಗುಳಿ ಕಾಯಿಲೆಯು ಭಾರತೀಯರಿಗಿಂತಾ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಇದೇ ಅನುಮಾನದಿಂದ ಭಾರತೀಯ ಆಹಾರ ಪದ್ಧತಿಯನ್ನು ತೀವ್ರವಾಗಿ ಗಮನಿಸಿದ ವಿಜ್ಞಾನಿಗಳು ಅರಿಸಿನದ ಪ್ರಭಾವವನ್ನು ಖಚಿತಪಡಿಸಿಕೊಂಡಿದ್ದಾರೆ. ದಿನವೂ ಅರಿಸಿನದಲ್ಲಿರುವ ಕರ್ಕುಮಿನ್ ರಾಸಾಯನಿಕವನ್ನು ಕೊಟ್ಟು ಪ್ರತೀ ತಿಂಗಳೂ ಅವರ ನೆನಪಿನ ಶಕ್ತಿಯ ಅಧ್ಯಯನವನ್ನು ನಡೆಸಲಾಗಿತ್ತು. ಅಂದರೆ ಒಂದು ರೀತಿಯಲ್ಲಿ ದಿನವೂ ನಾವು ಒಗ್ಗರಣೆಯಿಂದ, ಸಾಂಬಾರಿನ ರೂಪದಲ್ಲಿ ಬಳಸುವ ಅರಿಸಿನದಂತೆ ಕೊಟ್ಟು ಪ್ರಯೋಗ ನಡೆಸಲಾಗಿತ್ತು. ಹೇಗೋ ನಾವು ದಿನವೂ ತಿನ್ನುತ್ತೇವಲ್ಲವೇ? ಅದನ್ನೇ ಅವರೀಗ ವಿಶೇಷ ಲಾಭದಂತೆ ನೋಡುವ ಬಗೆಯ ವಿಶ್ಲೇಷಣೆಯನ್ನಾಗಿಸಿ ದೃಢಪಡಿಸಿದ್ದಾರೆ. ಇಷ್ಟಾದರೂ ಕರ್ಕುಮಿನ್ ನಮ್ಮ ಶರೀರದ ಕ್ರಿಯೆಯೊಳಗೆ ಹೇಗೆ ಒಳಗಾಗಿ ನೆನಪನ್ನು ವೃದ್ಧಿಸುತ್ತದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಅರಿಸಿನವನ್ನು ದಿನವೂ ಪಾನಿಯಗಳ ಜೊತೆಗೂ ಬಳಸುವ ಅನುಕೂಲಗಳನ್ನು ಅಧ್ಯಯನಗಳು ತಿಳಿಸಿವೆ. ಇದನ್ನು ಚಿನ್ನದ ಸಾಂಬಾರಿನ ಅರಿಸಿನದ ಹಾಲು (Golden Spiced Turmeric Milk) ಎಂದು ಕರೆಯುತ್ತಾರೆ.
ಸಾಂಸ್ಕೃತಿಕವಾಗಿ ಶಾಸ್ತ್ರಗಳೊಡನೆ ಕುಂಕುಮದ ಸಂಗಾತಿ
ಕರ್ಕುಮಿನ್ ಪದವು ಕುಂಕುಮದಿಂದಲೇ ವಿಕಾಸವಾಗಿದ್ದರೂ, ಅಪ್ಪಟ ಕುಂಕುಮವನ್ನು ಅರಿಸಿನದಿಂದಲೇ ಸುಣ್ಣವನ್ನು ಬೆರೆಸಿ ತಯಾರಿಸಲಾಗುತ್ತದೆ. ಅರಿಸಿನ ಮತ್ತು ಕುಂಕುಮಗಳೆರಡೂ ಸಾಂಸ್ಕೃತಿಕ ಸಂಗಾತಿಗಳು. ಬರೀ ಬಣ್ಣಗಳಾಗಿ ಮಾತ್ರವಲ್ಲ. ಅಲಂಕಾರಿಕ ಗುರುತುಗಳಿಗೆ, ಸಾಂಸ್ಕೃತಿಕ ಮುದ್ರೆಗಳಾಗಿ, ನಂಬಿಕೆಗಳ ಆಧಾರದಂತೆ ಪೂಜೆ ಪುನಸ್ಕಾರಗಳಿಗೆ, ಅಷ್ಟೇಕೆ ಹಿಂದೂ ಧರ್ಮದ ಮದುವೆಗಳ ಶಾಶ್ವತ ಸಂಗಾತಿ. ಗಂಡು-ಹೆಣ್ಣುಗಳಿಬ್ಬರು ಶಾಶ್ವತ ಜೊತೆಗಾರರಾಗಿ ಸಂಗಾತಿಗಳಾಗುವ ತಯಾರಿಯನ್ನು ಅರಿಸಿನದ ಬಣ್ಣದಿಂದಲೇ ಆರಂಭಿಸಲಾಗುತ್ತದೆ. ಅರಿಸಿನದ ಸ್ನಾನದಿಂದ ಒಂದು ರೀತಿಯಲ್ಲಿ ಮೈ-ಕೈಗಳಿಗೆ ಚಂದದೋಕುಳಿ. ಸ್ವಲ್ಪಮಟ್ಟಿಗಿನ ಪಾರಂಪರಿಕ ಮೇಕಪ್ಪು. ಈ ಕುರಿತು ಸಾಕಷ್ಟು ಕಾವ್ಯಗಳು, ಹಾಡುಗಳು ಮನೆ ಮಾತಾಗಿವೆ. ಅರಿಸಿನ-ಕುಂಕುಮಗಳಿಲ್ಲದೆ ಯಾವುದೇ ಶಾಸ್ತ್ರಸಮ್ಮತ ಕಾರ್ಯಗಳೂ ಹಿಂದೂ ಪರಂಪರೆಯಲ್ಲಿ ಜರುಗುವುದೇ ಇಲ್ಲ.
ಅರಿಸಿನವನ್ನು “ಹರಿದ್ರಾ” ಎಂದೇ ಕರೆಯಲಾಗಿದ್ದು ಸಾಂಸ್ಕೃತಿಕವಾಗಿ ಹರಿದ್ರಾ ಪದವು ವಿಶೇಷಣವಾಗಿದೆ. ಮದುವೆಗೆ ಅಣಿಗೊಂಡ ಕನ್ಯೆಯನ್ನು ಹೆಸರಿನ ಪೂರ್ವ ಪ್ರತ್ಯಯವಾಗಿ ಚಿ.ಸೌ.ಹ.ಕುಂ.ಶೋ (ಚಿರಂಜೀವಿ- ಸೌಭಾಗ್ಯವತಿ-ಹರಿದ್ರಾ-ಕುಂಕುಮ-ಶೋಭಿತೆ) ಬಳಸುತ್ತೇವಲ್ಲವೆ? ಆದರೆ ಇತ್ತೀಚೆಗೆ ಚಿ.ಸೌ. ಮಾತ್ರವೇ ಹೆಚ್ಚಾಗಿ ಬಳಸಲಾಗುತ್ತಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ “ಜೆಜುರಿ” ಎಂಬ ಪಟ್ಟಣದ “ಖಂಡೋಬಾ” ದೇವಾಲಯದಲ್ಲಿ ಮತ್ತು ನಮ್ಮ ರಾಜ್ಯದ “ಮೈಲಾರಲಿಂಗ” ದೇವಾಲಯದಲ್ಲಿ ಕೂಡ ಅರಿಸಿನದ ಸಿಂಪರಣೆ ಮತ್ತು ಬಳಕೆಯ ಸಂಪ್ರದಾಯವಿದೆ. ಸಹಸ್ರಾರು ಜನರ ನಡುವೆ ಅರಿಸಿನದ ಎರೆಚಾಟ ವಿಶೇಷ ಬಣ್ಣದ ಮೆರುಗನ್ನು ಕೊಡುತ್ತದೆ.
ಅಮೆರಿಕಾದ ಪೇಟೆಂಟ್ ಎಡವಟ್ಟು
ಅಮೆರಿಕಾವು 1995ರಲ್ಲಿ ಮಿಸಿಸಿಪ್ಪಿ ವಿಶ್ವವಿದ್ಯಾಲಯದ ಇಬ್ಬರು ಭಾರತೀಯ ವಿಜ್ಞಾನಿಗಳಿಗೆ ಅರಿಸಿನದಿಂದ ಗಾಯವನ್ನು ಮಾಯಿಸುವ ಗುಣದ ತಿಳಿವಿನ ಶೋಧಕ್ಕಾಗಿ ಪೇಟೆಂಟನ್ನು ನೀಡಿತ್ತು. ಆ ಇಬ್ಬರು ವಿಜ್ಞಾನಿಗಳೆಂದರೆ ಸುಮನ್ ಕೆ. ದಾಸ್ ಮತ್ತು ಹರಿಹರ ಕೊಹ್ಲಿ. ತಕ್ಷಣವೇ ಕಾರ್ಯಪ್ರವೃತ್ತವಾದ ಭಾರತೀಯ ವೈಜ್ಞಾನಿಕ ಮತ್ತು ಯಾಂತ್ರಿಕ ಪರಿಷತ್ ಅರಿಸಿನವು ಭಾರತೀಯ ಪರಂಪರಾಗತವಾದ ತಿಳಿವಳಿಕೆಯಲ್ಲಿ ಸಹಸ್ರಾರು ವರ್ಷಗಳಿಂದ ಭಾಗವಾಗಿದೆ ಹಾಗಾಗಿ ಇದರಲ್ಲಿ ಹೊಸತಾದ ಜ್ಞಾನದ ಆವಿಷ್ಕಾರವಾಗಿಲ್ಲ. ಬದಲಾಗಿ ಭಾರತೀಯ ಜ್ಞಾನ ಪರಂಪರೆಯನ್ನು ಹೆಚ್ಚೂ-ಕಡಿಮೆ ಕದ್ದು ಶೋಧವೆಂಬಂತೆ ಪ್ರಕಟಿಸಲಾಗಿದೆ, ಎಂಬ ವಾದದೊಡನೆ ಪೇಟೆಂಟಿಗೆ ತಕರಾರು ಹೂಡಿತ್ತು. ಆ ಕಾಲಕ್ಕೆ ಸುಮಾರು ಸಾಕಷ್ಟು ಹಣವನ್ನು ಖರ್ಚು ಮಾಡಿ ಅಲ್ಲಿನ ಕೋರ್ಟುಗಳಿಗೆ ಇದು ನಮ್ಮ ಪರಂಪರೆಯ ತಿಳಿವಳಿಕೆ ಎಂದು ಸಾಬೀತು ಪಡಿಸಬೇಕಾಯಿತು. ಇದಕ್ಕಾಗಿ ಸಂಸ್ಕೃತ, ಹಿಂದಿ ಮರಾಠಿ ಮುಂತಾದ ಭಾರತೀಯ ಭಾಷೆಗಳ ಸುಮಾರು 35 ಪ್ರಕಟಿತ ದಾಖಲೆಗಳನ್ನು ಹಾಜರು ಪಡಿಸಿ ಕೋರ್ಟನ್ನು ಒಪ್ಪಿಸಲಾಯಿತು. ಕೊನೆಗೆ 1997 ರಲ್ಲಿ ಅಮೆರಿಕಾ ಪೇಟೆಂಟನ್ನು ಹಿಂದಕ್ಕೆ ಪಡೆಯಿತು.
ಭಾರತೀಯ ಮನಸ್ಸುಗಳೇ ಇಂತಹ ಎಡವಟ್ಟನ್ನು ಮಾಡಿದ್ದು ಮತ್ತೂ ಸೋಜಿಗ. ಕೊನೆಗೂ ಎರಡು ವರ್ಷಗಳ ನಿರಂತರ ಹೋರಾಟದಿಂದ ವಾದವನ್ನು ಮಂಡಿಸಿ ಪೇಟೆಂಟನ್ನು ಹಿಂದಕ್ಕೆ ಪಡೆಯುವಲ್ಲಿ ಯಶಸ್ಸನ್ನು ಸಾಧಿಸಲಾಯಿತು. ಎರಡು ವರ್ಷಗಳ ಕಾಲ ಅರಿಸಿನದ “ಅಂತರರಾಷ್ಟ್ರೀಯ ಬಣ್ಣದ ಹೋರಾಟ“ದಿಂದ ಮಿಂದೆದ್ದು ಮತ್ತದೇ ಜನಪರ ತಿಳಿವಳಿಕೆಯೆಂದು ಜಗತ್ತಿಗೆ ಸಾರಿ ಹೇಳಲಾಯಿತು. ಇದರ ಜೊತೆಯಲ್ಲೇ ಬೇವು, ಬಾಸುಮತಿ ಅಕ್ಕಿಗೂ ಇದೇ ಬಗೆಯ ಹೋರಾಟ ಮಾಡಿದ್ದೀಗ ಹಳೆಯ ಸುದ್ಧಿ. ಇದರ ನಂತರದ ಬೆಳವಣಿಗೆ ಭಾರತೀಯ ವೈಜ್ಞಾನಿಕ ಇತಿಹಾಸದಲ್ಲಿ ಅತ್ಯುತ್ತಮವಾದುದು. ಇದನ್ನೆಲ್ಲಾ ಜಾಣತನದಿಂದ ನಿಭಾಯಿಸಿದವರು ಆಗ ವೈಜ್ಞಾನಿಕ ಮತ್ತು ಯಾಂತ್ರಿಕ ಸಂಶೋಧನಾ ಪರಿಷತ್ತಿನ ನಿರ್ದೇಶಕರಾಗಿದ್ದ ಡಾ. ರಘುನಾಥ್ (ರಮೇಶ್) ಮಶೇಲ್ಕರ್ ಅವರು. ಈಗ ಭಾರತವು ಇಂತಹ ಯಾವುದೇ ಸಂದರ್ಭದ ದಾಖಲೆಗಳಿಗೆ ಒಂದು ಪೋರ್ಟಲ್ ಅಣಿಗೊಳಿಸಿದೆ. ಪಾರಂಪರಿಕ ತಿಳಿವಳಿಕೆಯ ಲೈಬ್ರರಿ ಇದಾಗಿದ್ದು ಇದನ್ನು Traditional Knowledge Digital Library (TKDL) ಎಂದೇ ಕರೆಯಲಾಗುತ್ತದೆ. ಇದೀಗ ಭಾರತೀಯ ಪರಂಪರೆಯ ಲಕ್ಷಾಂತರ ಜನಪದ ತಿಳಿವಳಿಕೆಯ ಸಂಗತಿಗಳ ವಿವರಗಳನ್ನು ಅದರಲ್ಲಿ ದಾಖಲು ಮಾಡಲಾಗಿದೆ. ಇನ್ನು ಮುಂದೆ ಯಾವುದೇ ದೇಶವು ಯಾವುದೇ ತಿಳಿವನ್ನು ಪೇಟೆಂಟುಗೊಳಿಸುವಾಗ ಈಗಾಗಲೇ ಇರುವ ಜ್ಞಾನಕ್ಕಾಗಿ(Prior Art) ಈ ಲೈಬ್ರರಿಯಲ್ಲಿ ಪರಿಶೀಲಿಸಿ ನೋಡಿಕೊಂಡ ನಂತರವೇ ಪೇಟೆಂಟಿಗೆ ಒಳಪಡಿಸಬೇಕಾಗುತ್ತದೆ. ಇದಕ್ಕೆಲ್ಲಾ ಪ್ರಕಟಿತ ಸಹಸ್ರಾರು ದಾಖಲೆಗಳನ್ನು ಡಿಜಟಲೀಕರಿಸಿ ಸಂಗ್ರಹಿಸಿದ ಲೈಬ್ರರಿಯಾಗಿಸಿದೆ.
ಆಹಾರ, ಆರೋಗ್ಯ, ಸಾಂಸ್ಕೃತಿಕ ಹಿರಿಮೆ, ಕಡೆಗೆ ನ್ಯಾಯಾಲದ ಹೋರಾಟವನ್ನೂ ನಿಭಾಯಿಸಿದ ಅರಿಸಿನದ ಮಹಿಮೆಯು ವೈವಿಧ್ಯಮಯ. ಯೌವನದ ಮದುವೆಯ ಶಾಸ್ತ್ರದಲ್ಲಿ ಬಣ್ಣದೋಕುಳಿಗೆ ಕಾರಣವಾಗಿ, ಮುಪ್ಪಿನಲ್ಲೂ ಮೈಯೊಳಗೆ ಆವರಿಸಿ, ಮೆದುಳನ್ನೂ ಹೊಕ್ಕು ಅಲ್ಲಿನ ಜೀವಿಕೋಶಗಳ ಹಿತವನ್ನೂ, ಮನಸ್ಸನ್ನೂ ಕಾಪಾಡುತ್ತಿವುದು ಸೋಜಿಗವಲ್ಲವೇ?
ಇನ್ನೇನು ನವೆಂಬರ್ ತಿಂಗಳು ಆಗಮನವಾಗುತ್ತಿದೆ. ಎಲ್ಲಾ CPUS ಓದುಗರಿಗೂ ಮುಂಗಡವಾಗಿ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ನವೆಂಬರ್ ತಿಂಗಳ ಸಸ್ಯಯಾನದ ಬರಹಗಳು ಕನ್ನಡದ ನೆಲದ ವಿಶೇಷ ಸಸ್ಯಗಳ ಕುರಿತು ಮಾತ್ರವೇ ಇರಲಿವೆ. ಮುಂದಿನ ತಿಂಗಳ ಸಸ್ಯ ಪ್ರೀತಿಯು ನಮ್ಮದೇ ಗಿಡ-ಮರಗಳ ವಿವರಗಳಾಗಿ ನಿಮ್ಮೆಲ್ಲರ ಕುತೂಹಲವನ್ನು ತಣಿಸಲಿವೆ. ಮತ್ತೊಮ್ಮೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳೊಂದಿಗೆ…….
ನಮಸ್ಕಾರ
ಡಾ.ಟಿ.ಎಸ್. ಚನ್ನೇಶ್
ಚನ್ನೇಶರವರೇ ನಿಮ್ಮಈ ಅರಿಶಿನಗಾಥೆ ತುಂಬಾ ಚೆಂದವಾಗಿ ಮೂಡಿಬಂದಿದೆ. ವಿವರಣೆಯೊಂದಿಗೆ ಬರವಣಿಗೆಯೂ ಓದಿಸಿಕೊಂಡು ಹೋಗುತ್ತದೆ . ಅರಿಶಿನ ಕನ್ನಡ ಚಿತ್ರಗೀತೆಗಳೊಂದಿಗೂ ಹಲವಾರು ಬರಿ ಬೆರೆತಿದೆ . ಎಲ್ಲಾದರೊಂದಿಗೆ ಬೆಸೆಯುವ ಈ ಗುಣವೇ ನಕಲು ಪದಾರ್ಥ ಹೊಮ್ಮಲು ಕಾರಣವಾಗಿರಬಹುದು ಅಲ್ಲದೆ ಬೇಡಿಕೆ ಹೆಚ್ಚಾದ ಹಾಗೆ ನಕಲಿನ ಸಂಶೋಧನೆಯೂ ಆಗಿರುವುದಲ್ಲದೇ ಆರೋಗ್ಯಕ್ಕೆ ಮಾರಕವಾಗುತ್ತಿರುವುದೂ ಸುಳ್ಳಲ್ಲ ..ಗೊತ್ತಿಲ್ಲದೆಯೇ . ನಿಮ್ಮ ವಿವರಣೆಯ ಈ ಲೇಖನ ಸೂಪರ್ . .
ಧನ್ಯವಾದಗಳು ಚನ್ನೇಶ್ ಸರ್!! ಮಾಹಿತಿ ಪೂರ್ಣ ಲೇಖನ!!