You are currently viewing ಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ

ಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ

ಇದೇನಿದು, ಮಳೆಯ ಅಥವಾ ಮುಗಿಲು ಹರಿದು ಬೀಳುತ್ತಿರುವ ಅನುಭವವೋ? ಬಹಳಷ್ಟು ಕಡೆಗಳಲ್ಲಿ ಇದು ಅರ್ಥವಾಗುತ್ತಿಲ್ಲ. ಧಾರಾಕಾರ ವರ್ಷಾಧಾರೆಯನ್ನೇ ಕಂಡರಿಯದ ಕಡೆಗಳಲ್ಲೂ ಮಳೆಯ ದಿನಗಳು ಆತಂಕಕಕ್ಕೆ ಹಚ್ಚಿವೆ. ನಮ್ಮದೇ ರಾಜ್ಯದ ನಾಗಮಂಗಲ ತಾಲ್ಲೂಕು ಹೇಳಿಕೇಳಿ ಮಳೆಯನ್ನು ಅಪರೂಪವೆಂಬಂತೆ ಅನುಭವಿಸುತ್ತಿದ್ದ ನೆಲ. ಈ ವರ್ಷವೇ ಅಲ್ಲಿ ಮಳೆ ಅಂದರೆ ಸಾಕು ಸಾಕಾಗಿ ಹೋಗಿರುವ ಪರಿಸ್ಥಿತಿ. ಅದೂ ಅಕಾಲದಲ್ಲಿ ಬೀಳುವ ಮಳೆಯ ದಿನಗಳು ರಾಜ್ಯದಲ್ಲಿ ಮಾತ್ರವೇ ಅಲ್ಲ ದೇಶಾಧ್ಯಂತವೂ ಸೇರಿಕೊಂಡು, ನೆರೆಹೊರೆಯ ದೇಶಗಳಲ್ಲೂ, ಜಾಗತಿಕವಾಗಿಯೂ ಕಂಡು ಬರುತ್ತಿವೆ.

ಅಕಾಲದ ಮಳೆಯೆಂದು ಕರೆಯುವ ಕಾರಣಗಳಿವೆ. ಸದ್ಯದ ಪರಿಸ್ಥಿಯನ್ನೇ ಗಮನಿಸಿ. ಮಳೆಯು ಚಳಿಗಾಲವನ್ನೂ ಆಕ್ರಮಿಸತೊಡಗಿದೆ. ಹಾಗಂದರೇನು? ಸಹಜವಾಗಿ ಈ ಭೂಮಿಯ ಜಾಗತಿಕ ಕಾಲಮಾನಗಳು ಕೇವಲ ಎರಡು! ಒಂದು ಬೇಸಿಗೆಯಾದರೆ ಮತ್ತೊಂದು ಚಳಿಗಾಲ. ಭಾರತ ಉಪಖಂಡವು ಮಾನ್‌ಸೂನ್‌ ಮಾರುತಗಳಿಂದ ಹೆಚ್ಚಾಗಿ ಬೇಸಿಗೆಯಲ್ಲಿ ಮಳೆಯನ್ನು ಪಡೆಯುತ್ತದೆ, ಅದನ್ನೇ ಮಳೆಗಾಲವೆಂದು ಕರೆಯುತ್ತೇವೆ. ಚಳಿಗಾಲದಲ್ಲಿ ಮಳೆಯ ಹರಹು ಮಳೆಗಾಲ ಎನ್ನುವಷ್ಟು ಇರುವುದಿಲ್ಲ. ಹಿಂಗಾರಿನ ಮಳೆಯು ಚಳಿಗಾಲದಲ್ಲಿ ಬಿದ್ದರೂ ಅದರ ಸಾಧ್ರತೆಯಾಗಲಿ, ಹರಹು ಆಗಲಿ ಬೇಸಿಗೆಯ ಮಳೆಯಷ್ಟು ಹೆಚ್ಚಾದದ್ದಲ್ಲ. ಇದರ ವಿವರಗಳಿರಲಿ, ಪ್ರಸ್ತುತ ಅನುಭವಕೊಡುತ್ತಿರುವ ಮಳೆಯ ಸನ್ನಿವೇಶವಂತೂ ಆತಂಕವೆನಿಸುತ್ತಿರುವುದು ನಿಜ. ಇದರ ಆಚೀಚೆಯ ವೈಜ್ಞಾನಿಕ ವಿಚಾರಗಳನ್ನು ಸಂಶೋಧನೆಗಳ ಚರ್ಚೆಗಳಿಂದ ಸಮೀಕರಿಸಿ, ಸಾರ್ವಜನಿಕರ ಜಾಗರೂಕ ಅರಿವಿಗೆ ತರುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.      

ಜಾಗತಿಕವಾಗಿ ಪ್ರತಿ ವರ್ಷ ಬೀಳುತ್ತಿರುವ ಒಟ್ಟು ಮಳೆಯಲ್ಲಿ ಸರಾಸರಿ ಅರ್ಧದಷ್ಟು ಕೇವಲ 12 ದಿನದಲ್ಲಿ ಬೀಳುತ್ತಿದೆಯಂತೆ. ಜಗತ್ತಿನಾದ್ಯಂತ 1999 ಮತ್ತು 2014ರ ನಡುವೆ ನಡೆಸಿದ ಮಳೆಯ ಸಮೀಕ್ಷೆ ತಿಳಿಸಿದೆ. 2018ರ Geophysical Research Letters  ಎಂಬ ವಿಜ್ಞಾನ ಪತ್ರಿಕೆಯಲ್ಲಿ ವರದಿಯಾಗಿರುವ ಈ ಸಂಶೋಧನೆಯು ಜಾಗತಿಕ ಹವಾಮಾನ ಬದಲಾವಣೆಯ ವೈಪರೀತ್ಯಕ್ಕೆ ಹೊಸ ವಿವರಣೆಗಳನ್ನು ಕೊಟ್ಟಿದೆ. ಸದ್ಯಕ್ಕಂತೂ ವರ್ಷದಲ್ಲಿ ಬರದ ದಿನಗಳ ಹರಹು ಹೆಚ್ಚಾಗುತ್ತಿರುವ ಬಗ್ಗೆ ಸಮೀಕ್ಷೆಯು ಆತಂಕ ಹುಟ್ಟಿಸಿದೆ. ಮಳೆಯ ಏರುಪೇರುಗಳ ಬಗೆಗೆ ತೀರಾ ಇತ್ತೀಚೆಗಿನ ಸಮೀಕ್ಷೆಯು ಇದಾಗಿದ್ದು ಜಾಗತಿಕ ಹವಾಮಾನ ಇತಿಹಾಸದಲ್ಲಿ ಇದು ಆತಂಕಕಾರಿಯಾದ ವಿವರವಾಗಿದೆ. ಒಟ್ಟಾರೆ ಮಳೆಯ ಬದಲಾವಣೆಯಲ್ಲಿ 20% ಕೇವಲ 2 ದಿನಗಳ ಅತಿಮಳೆಯಲ್ಲಿಯೂ, ಹಾಗೂ ಅರ್ಧದಷ್ಟು ಅತಿ ಮಳೆಯ ದಿನಗಳು ಕೇವಲ 8.6 ದಿನಗಳಲ್ಲಿಯೂ ಹಾಗೂ 70% ಅತೀತೇವದ ವಾರಗಳು ಕೇವಲ 2 ವಾರಗಳಲ್ಲಿಯೂ ಹರಡಿಕೊಂಡಿವೆ. ಅಂದರೆ ಜಾಗತಿವಾಗಿ ಮಳೆಯ ದಿನಗಳ ಒಟ್ಟಾರೆಯ ಬದಲಾವಣೆಗಳಲ್ಲಿ ಸರಾಸರಿ 20 ರಷ್ಟು ಬದಲಾವಣೆಯು ಅಥವಾ ಏರುಪೇರು ಕೇವಲ ಎರಡೇ ದಿನಗಳಲ್ಲಿ ನಮ್ಮ ಅನುಭವಕ್ಕೆ ಬರುತ್ತಿದೆ. ಸುಮಾರು ಪ್ರತಿಶತ 70 ರಷ್ಟು ಬದಲಾವಣೆಯನ್ನು 8-9 ದಿನಗಳು ಅನುಭವಕ್ಕೆ ತರುತ್ತಿವೆಯಂತೆ! ಹಾಗಾಗಿ ಬದಲಾವಣೆಯು ಮಳೆ ಬೀಳುವ ದಿನಗಳಲ್ಲಿ ಅಪಾರ ವ್ಯತ್ಯಾಸಗಳನ್ನು ಕಂಡಿದೆ. ಆದ್ದರಿಂದಲೇ ಇದೇನಿದು ಇದ್ದಕ್ಕಿದ್ದಂತೆ ಇಂತಹಾ ಮಳೆ ಎನಿಸುತ್ತದೆ. ಮಳೆಯ ಇತಿಹಾಸದ ದಾಖಲಾದ ಇತಿಹಾಸದಲ್ಲಿ ಇಂತಹ ಪರಿಸ್ಥಿತಿಯು ಕಳೆದ 20ನೆಯ ಶತಮಾನದ ಜಾಗತಿಕ ಹವಾಮಾನ ಬದಲಾವಣೆಗಳ ಪ್ರಮುಖ ಕೊಡುಗೆ ಎಂದೇ ವ್ಯಾಖ್ಯಾನಿಸಲಾಗಿದೆ. ಮತ್ತೊಂದು ಆತಂಕದ ಸಂಗತಿಯೆಂದರೆ, ಮುಂದಿನ ದಿನಗಳು ಇನ್ನೂ ಲೆಕ್ಕ ತಪ್ಪಿದ ಮಳೆಯ ದಿನಗಳನ್ನು ಹೊಂದಿವೆಯೆಂದೂ ಎಚ್ಚರಿಸಲಾಗಿದೆ. ಇದು ಮೇಲು ನೋಟಕ್ಕೆ ಮಳೆಯು ಇನ್ನು ಮುಂದೆ ಹೆಚ್ಚಾಗುತ್ತಾ ಎಂಬ ಅರ್ಥದ ವ್ಯಾಖ್ಯಾನ ಅನ್ನಿಸೀತು, ಆದರೆ ಮಳೆಯೇ ಇಲ್ಲದ ದಿನಗಳೂ ಹೆಚ್ಚು ಇನ್ನೊಂದು ಮಗ್ಗುಲನ್ನೂ ಇದೇ ವ್ಯಾಖ್ಯಾನ ಮಡಿಲಲ್ಲಿ ಇಟ್ಟುಕೊಂಡಿದೆ. ಈ ಎಚ್ಚರಿಕೆಯೂ ಅರ್ಥವಾಗಬೇಕು ಅಲ್ಲವೇ?

ಹಾಗಾದರೆ ಸಹಜವಾದ ಪ್ರಶ್ನೆ ಎಂದರೆ, ಹಾಗಾದರೆ ಮಳೆಯು ಒಂದು ಲೆಕ್ಕಬದ್ಧವಾದ ಕ್ರಿಯೆ ಆಗಿತ್ತಾ, ಎನ್ನುವುದು! ಜಾಗತಿಕವಾಗಿ ಅನೇಕ ಸಂಸ್ಕೃತಿಗಳು ಮಳೆಯನ್ನು ತಮ್ಮ ಸಾಂಸ್ಕೃತಿಕ ಭಾಗವಾಗಿ ಅರ್ಥೈಸಿಕೊಂಡು ವಿವರಿಸಿದ ಹಲವಾರು ವಿವರಗಳು ಸಿಗುತ್ತವೆ. ಭಾರತ ಉಪಖಂಡವನ್ನೂ ಸೇರಿಕೊಂಡು, ಆಫ್ರಿಕಾ, ದಕ್ಷಿಣ ಅಮೆರಿಕಾ ಹಾಗೂ ಏಶಿಯಾದ ಹಲವು ಬುಡಕಟ್ಟುಗಳ ಮಾನವಿಕ ಅಧ್ಯಯನಗಳಲ್ಲಿ ಇವುಗಳನ್ನು ಕಾಣಬಹುದು. ಇಂತಹಾ ತಿಳಿವುಗಳು ಸಾಕಷ್ಟೇ ಹಿಂದಿನವು ಎಂಬುದು ಗಮನಾರ್ಹ. ಕಳೆದ 20ನೆಯ ಶತಮಾನದ ಬದಲಾವಣೆಗಳು ನಾಗರಿಕ ಬದುಕಿನಲ್ಲಿ ಬಹು ದೊಡ್ಡವು ಹಾಗೂ ಎಂದೂ ಕಾಣದವು ಎಂಬುದು ಈಗಾಗಲೆ ಸಾರ್ವಜನಿಕ ತಿಳಿವಿನಲ್ಲಿವೆ. ಹೆಚ್ಚುತ್ತಿರುವ ಜನಸಂಖ್ಯೆಯ ಹಸಿವಿನ ನಿವಾರಣೆಯೇ ಅಂದಿನಿಂದಲೂ ಇಂದಿಗೂ ಜಾಗತಿಕವಾಗಿ ಬಹು ಚರ್ಚಿತ ಸಂಗತಿ. ಪ್ರಸ್ತುತ ಮಳೆಯ ವಿಚಾರವನ್ನು ನಂತರದಲ್ಲಿ ನೋಡೋಣ. ಮೊದಲು ಮಳೆಯ ಲೆಕ್ಕಾಚಾರದಲ್ಲಿ ಅಂದಾಜುಗಳಲ್ಲಿ ಏನಾದರೂ ಹಿಡಿತವಿತ್ತಾ ನೋಡೋಣ.       

ಭಾರತೀಯ ಮಳೆಯ ಕಾಲಮಾನವನ್ನು ವರ್ಷವಿಡೀ 27 ನಕ್ಷತ್ರಗಳ ಹೆಸರಿನಲ್ಲಿ ವಿಭಾಗಿಸಿ ನೋಡಲಾಗಿದೆ. ವರ್ಷದ 12 ತಿಂಗಳಲ್ಲಿ 27 ಕಾಲಮಾನದ ವಿಭಾಗಗಳಿವೆ. ಅಂದಾಜಿನಂತೆ ಪ್ರತಿ ತಿಂಗಳಲ್ಲಿ ಎರಡು ಇದ್ದು, ಮೂರು ತಿಂಗಳುಗಳು ಮೂರು ಮಳೆಯ ನಕ್ಷತ್ರಗಳ ಕಾಲದವು. ಅಂದಾಜಿನಂತೆ, 12ರಿಂದ 14 ದಿನದ ಹರಹನ್ನು ಮಳೆಯ ವಿಭಾಗದಲ್ಲಿ ಕಾಣಬಹುದು. ಪ್ರತೀ ಮಳೆಯ ಹರಹೂ ಒಂದೊಂದು ನಕ್ಷತ್ರದ ಹೆಸರಲ್ಲಿದ್ದು, ಅವುಗಳ ಬಗೆಗಿನ ಜನಪದ ತಿಳಿವೂ ಸಾಕಷ್ಟು ಇದೆ. ಅವೆಲ್ಲವನ್ನೂ ಮಳೆಯ ಗಾದೆಗಳೆಂದು ಕರೆಯುತ್ತೇವೆ. ಈ ಗಾದೆಗಳಲ್ಲಿ ಕೆಲವು ಆಯಾ ನೆಲದ ತಿಳಿವಿನಂತೆ ಬದಲಾಗಬಹುದು, ಆದರೂ ಕನಿಷ್ಟ ಆ ಕಾಲದ ಮಳೆಯ ವರ್ತನೆಯನ್ನು, ಮಳೆಯ ಬೀಳುವ ಹರಹನ್ನೂ, ಮಳೆಯ ಲಕ್ಷಣವನ್ನೂ ಈ ಗಾದೆಗಳು ವಿವರಿಸುತ್ತವೆ. ಉದಾಹರಣೆಗೆ ಕಳೆದ ಆಗಸ್ಟ್‌ ತಿಂಗಳಿನ ಮಳೆಯ ಹರಹಿನ ವಿವರಗಳನ್ನು ಗಮನಿಸೋಣ.

ಆಗಸ್ಟ್‌ ತಿಂಗಳಿನ ಮಳೆಯ ದಿನಗಳನ್ನು ಆಶ್ಲೇಷ ಮತ್ತು ಮಘ  ಮಳೆಗಳೆಂದು ಕರೆಯತ್ತೇವೆ. ಇದರಲ್ಲಿ ಆಶ್ಲೇಷ ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ ಹಂಚಿಕೊಂಡಿದ್ದರೆ, ಮಘ ಮಳೆಯ ದಿನಗಳು ಆಗಸ್ಟ್‌ 16ರಿಂದ 29ರವರೆಗೆ ಹಂಚಿವೆ. ಸಾಮಾನ್ಯವಾದ ನಮ್ಮ ನಿಮ್ಮೆಲ್ಲರ ಅನುಭವವನ್ನು ಈ ಮಳೆಗಳ ಜನಪದರ ಲೆಕ್ಕಾಚಾರದ ಅನುಭವಗಳಲ್ಲಿ ನೋಡೋಣ. ನಾವೂ ಈ ದಿನಗಳನ್ನು ಸಾಕಷ್ಟೇ ತೇವದ ದಿನಗಳನ್ನು ಅನುಭವಿಸಿದ್ದೇವೆ ಅಲ್ಲವೆ? ಹಾಗದ್ದಿರೆ ಜನಪದ ನಂಬಿಕೆ/ತಿಳಿವುಗಳೇನು? ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ ಹಂಚಿಕೊಳ್ಳುವ ಆಶ್ಲೇಷ ಮಳೆಯನ್ನು, ರೂಢಿ ಮಾತಿನಲ್ಲಿ ಅಸಲೆ, ಆಶ್ಲೆ ಮಳೆ ಎನ್ನುತ್ತಾರೆ. ಈ ಮಳೆಯ ದಿನಗಳ ಕುರಿತ ಗಾದೆ ಮಾತುಗಳು ಹೀಗಿವೆ.

 1. ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ,

 2. ಅಸಲೆ ಮಳೆ ಕೈತುಂಬಾ ಬೆಳೆ.

 3. ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು

ತುಂಬಾ ಹೆಚ್ಚಾಗಿಯೇ ಬೀಳುವ ಮಳೆಯನ್ನು ಗಾದೆಗಳಲ್ಲಿ ಈ ಬಗೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಕೇಳುವ ಮಾತುಗಳಿವು. ಮೂರೂ ಹೆಚ್ಚು ಮಳೆಯ ರೂಪಕಗಳು. ಮೂರನೆಯ ಗಾದೆಯಂತೂ ಆಶ್ಲೇಷ ಮಳೆಯ ರಭಸಕ್ಕೆ ಮೀನುಗಳೂ ಹೆದರಿ ಬೆಟ್ಟವನ್ನು ಏರುತ್ತವೆ ಎಂಬ ಮಾತುಗಳನ್ನು ದಾಖಲಿಸಿದೆ.

ಆಗಸ್ಟ್ 16 ರಿಂದ ಆಗಸ್ಟ್ 29ರವರೆಗಿನ ಮಳೆಯ ದಿನಗಳನ್ನು ಮಘ ಎಂದು ವಿಭಾಗಿಸಿರುವ ಜನಪದರು ಅದನ್ನು ಈ ಕೆಳಗಿನಂತೆ ಗಾದೆಗಳಾಗಿಸಿದ್ದಾರೆ. ಅಂದರೆ ಮಘ ಮಳೆಯ ಆಗಸ್ಟ್‌ ಕಡೆಯ ಅರ್ಧ ತಿಂಗಳಿನ ದಿನಗಳನ್ನು ಅನಿರ್ಧಿಷ್ಟತೆಗೂ ಅಲ್ಲದೆ ನಿರ್ಧಿಷ್ಟವಾಗಿ ಬಂದರೂ ಒಳ್ಳೆಯದೂ ಎಂಬಂತೆ ರೂಪಕದಿಂದ ಗುರುತಿಸಿದ್ದಾರೆ.

1. ಮಘ ಬಂದರೆ ಮಗೆ ಹೋದರೆ ಹೊಗೆ,

2. ಮಘ ಬಂದರೆ ಮಘೆ ಇಲ್ಲದಿದ್ದರೆ ಧಗೆ,

3. ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

      ಈ ಮಳೆ ಬಂದರೆ ಸಾಕಷ್ಟೇ ಬರುತ್ತೆ, ಇಲ್ಲವಾದರೆ ಹೊಗೆ ತರಹ ಹೋಗುತ್ತದೆ. ಜತೆಗೆ ಬಂದಷ್ಟೂ ಒಳ್ಳೆಯದು ಎಂದೂ ವಿವರಿಸಿದೆ. ಇದರಲ್ಲಿ ಒಂದು ಅರ್ಥವಾಗಬಲ್ಲದು, ಈ ಮಳೆಯ ದಿನಗಳನ್ನು ಹಿಂದಿನ ಅನುಭವಗಳಿಂದ ಹೇಳಲು ಕಾರಣ, ಮಳೆಯು ಒಂದು ರೀತಿ ಲೆಕ್ಕಾಚಾರದಲ್ಲಿ ಇತ್ತು. ಆದರೆ ಈಗ ಲೆಕ್ಕ ತಪ್ಪುತ್ತಿದೆಯಾ?  ಆರಂಭದಲ್ಲಿ ಅಂತರರಾಷ್ಟ್ರೀಯ ಅಧ್ಯಯನದ ಉದಾಹರಣೆಯಿಂದ ಪ್ರಸ್ತಾಪಿಸಿದಂತೆ ಲೆಕ್ಕ ತಪ್ಪುತ್ತಿರುವುದು, ಈ ಶತಮಾನದಲ್ಲಂತೂ ಕಾಣಬರುತ್ತಿದೆ. ಕಳೆದ ಮೂರು ತಿಂಗಳಿಂದ ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಮಳೆಯ ದಿನಗಳು ಹೆಚ್ಚಿನ ಮಳೆಯನ್ನು ದಾಖಲು ಮಾಡಿರುವುದು, ಹವಮಾನ ಇಲಾಖೆಯ ದಾಖಲೆಗಳಿಂದ, ಜೊತೆಗೆ ನಮ್ಮೆಲ್ಲರ ಅನುಭವದಿಂದಲೂ ತಿಳಿದಿದೆ. ಈ ಮುಂದಿನ ಮಳೆಯ ನಕ್ಷೆಯಿಂದ ಅದು ಸ್ಪಷ್ಟವಾಗುತ್ತದೆ.

     ರಾಜಸ್ತಾನವನ್ನೂ ಸೇರಿಕೊಂಡು ಅನೇಕ ರಾಜ್ಯಗಳಲ್ಲಿ ಕಳೆದ ಮೂರು ತಿಂಗಳು ಹೆಚ್ಚಿನ ಮಳೆಯಾಗಿದೆ.  ಹೀಗೆ ಅತಿ ಮಳೆಯ ಲಕ್ಷಣಗಳು ಜಾಗತಿಕ ತಾಪಮಾನದ ಹೆಚ್ಚಳದ ಸ್ಪಷ್ಟ ಸೂಚನೆಯಂತೂ ನಿಜ. ಇದಕ್ಕೆ ನಾಗರಿಕ ಸಮಾಜವು ಈ ನೆಲದ ನಿರ್ವಹಣೆಯನ್ನು ಅದೆಷ್ಟು ಜಾಣತನದಿಂದ ಮಾಡಿದೆ ಎಂಬುದನ್ನು ಗಮನಿಸಬೇಕಿದೆ.  ಕಾರಣ ಒಮ್ಮೆ ಅತೀ ವೃಷ್ಟಿಯಾದರೆ ಮುಂದೊಂದು ದಿನ ಅಥವಾ ಇದೇ ದಿನಗಳಲ್ಲಿ ಬೇರೆಲ್ಲೋ ಅನಾವೃಷ್ಟಿ ಖಂಡಿತಾ. ನೆಲ-ಜಲವನ್ನು ಸಮಸ್ಥಿತಿಯಲ್ಲಿ ನೋಡದ ಈ ಪರಿಸ್ಥಿತಿಯಲ್ಲಿ ಜಾಗರುಕತೆಯು ಬಹಳ ಮುಖ್ಯವಾಗಿದೆ. ಇದರಲ್ಲಿ ಒಂದು ಮಿತಿಯೂ ಇದೆ. ನಾವು ನೆಲದ ಮೇಲೆ ಬೀಳುವ ಮಳೆಯ ಅಂದಾಜನ್ನು ಮಾತ್ರವೇ ದಾಖಲಿಸಿ, ಅನುಭವಿಸಿ, ವ್ಯಾಖ್ಯಾನಿಸುತ್ತಿದ್ದೇವೆ. ನೆಲದ ಮೂರರಷ್ಟು ಇರುವ ಸಮುದ್ರದ ಉದ್ದಗಲಕ್ಕೂ ಬೀಳುವ ಮಳೆಯನ್ನು ಅರ್ಥಮಾಡಿಕೊಂಡು ವ್ಯಾಖ್ಯಾನಿಸಬೇಕಿದೆ. ಸದ್ಯಕ್ಕೆ ನೆಲದ ಮೇಲಿನ ಹರಹನ್ನು ಆಧರಿಸಿದ್ದಾದರಿಂದ ನೆಲದ ಮೇಲ್ಮೈಯನ್ನೇ ಹಿನ್ನೆಲೆಯಾಗಿಟ್ಟು ನೋಡೋಣ.

ನೆಲದ ಮೇಲ್ಮೈಯ ಅಸಹಜವಾದ ನಿರ್ವಹಣೆ

ಭೂಗೋಳವನ್ನು ಅದರ ಮೇಲ್ಮೈಯಲ್ಲಿ ಉಂಟಾದ ನೈಸರ್ಗಿಕವಾದ ಬದಲಾವಣೆಗಳಿಂದ ತಿಳಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಭೂಮಿಯನ್ನು ಆವರಿಸುವುದು ಕೇವಲ ಎರಡೇ! ನೆಲ ಮತ್ತು ಜಲ!  ಈ ಎರಡೂ ಒಂದನ್ನೊಂದು ಸ್ಪಷ್ಟ ಸಂಬಂಧಗಳಿಂದ ನಿಭಾಯಿಸಿತ್ತಿರುವ ಬಗ್ಗೆ ಅರಿಯುವುದು ಅತ್ಯಂತ ಅಗತ್ಯವಾದದ್ದು. ಆದರೆ ಆಧುನಿಕ ಜಗತ್ತು ಬದಲಾವಣೆಗಳಿಗೆ ಅನುಕೂಲವಾಗುವಂತಹಾ ಅದೆಷ್ಟು ತರ್ಕ, ತಾಂತ್ರಿಕತೆ, ರಾಜಕೀಯ ತೀರ್ಮಾನಗಳನ್ನು ಮಾಡಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ನಮ್ಮ ಅಭಿವೃದ್ಧಿಯ ಎಲ್ಲ ಬದಲಾವಣೆಗಳೂ ಮೇಲ್ಮೈಯನ್ನು ಪರಿವರ್ತಿಸುವ ದೊಡ್ಡ ಕಾರ್ಯಯೋಜನೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆಂದೇ ಭೂಸ್ವಾದೀನ ವಿಭಾಗವನ್ನೇ ಸರ್ಕಾರ ನಿರ್ಮಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ ಅರಿವಿಗೆ ತೇಪೆ ಹಾಕುವ ಕ್ಷಣಿಕವಾದ ಅನೂಕೂಲಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಉದಾಹರಣೆಗೆ ಇಡೀ ರಾಜ್ಯದಲ್ಲಿ ಸಹಸ್ರಾರು ಕೆರೆಗಳು ಕೇವಲ ಕಳೆದ ದಶಕಗಳಲ್ಲಿ ಕಣ್ಮರೆಯಾಗಿವೆ. ಅಳಿದುಳಿದ ಕೆರೆಗಳಿಗೂ ನೀರು ಬರುತ್ತಿಲ್ಲವೆಂಬ ಕಾರಣಕ್ಕೆ ಅಣೆಕಟ್ಟುಗಳಿಂದ ನೀರು ತುಂಬಿಸುವ ತೇಪೆದಾರಿಕೆ ಕೆಲಸ ನಡೆಯುತ್ತಿದೆ. ಹಿಂದೆ ಇವೆಲ್ಲವೂ ಸ್ವಾಭಾವಿಕವಾಗಿಯೇ ನೀರು ತುಂಬಿಸಿಕೊಳ್ಳುತ್ತಿದ್ದ ತಾಣಗಳು. ಈಗ ಅವುಗಳ ಜಲಾನಯನ ಪ್ರದೇಶಗಳಲ್ಲಿ ಒತ್ತುವರಿಯಿಂದ ಹರಿವ ನೆಲವೆಲ್ಲಾ ಬದಲಾವಣೆಯಾಗಿ ಸ್ವಾಭಾವಿಕವಾದ ನೀರಿನ ಹರಿವಿಗೆ ಅಡೆ-ತಡೆಗಳಾಗಿವೆ.  ಇದರಿಂದ ನೀರು ಎಲ್ಲೆಂದರಲ್ಲಿ ನುಗ್ಗುವುದು ಸಹಜವೇ ಆಗಿದೆ. ಒತ್ತುವರಿಗಳ ಕಾರಣಗಳು ರಾಜಕೀಯ ಪ್ರೇರಿತವಾಗಿದ್ದು ನಿಸರ್ಗದ ಹಿತಕ್ಕೆ ಮತ್ತಷ್ಟು ದಕ್ಕೆಯಾಗಿದೆ. ಮೇಲ್ಮೈಯ ಅರಿವಿನಿಂದ ಮಣ್ಣನ್ನು ನಿಭಾಯಿಸುವ ಬಗ್ಗೆ ಆಧುನಿಕ ವಿಜ್ಞಾನದ ಕಲಿಕೆಯಲ್ಲೂ ಅಘಾತಕಾರಿಯಾದ ಸಂಗತಿಗಳನ್ನು ಹಲವು ಅಧ್ಯಯನಗಳು ಗುರುತಿಸಿದ್ದು, ಮತ್ತೀಗ ಪಾರಂಪರಿಕ ಮಣ್ಣು ನಿರ್ವಹಣಾ ತಿಳಿವನ್ನು ಪುನರ್ ಭೇಟಿಯಿಂದ ಅಳವಡಿಸುವ ಪ್ರಯತ್ನಗಳನ್ನು ಪಾಶ್ಚಾತ್ಯ ಅಧ್ಯಯನಗಳು ಗುರುತಿಸಿವೆ. ಮಣ್ಣನ್ನು ಸಾಂಸ್ಕೃತಿಕ ಹಿತದಿಂದ ತಿಳಿವಾಗಿಸಲು ಭಾರತೀಯ ಮಣ್ಣು ವಿಜ್ಞಾನದ ಕಲಿಕೆಯನ್ನು ಪುನರ್ ವಿಮರ್ಶೀಸುವ ಅಗತ್ಯದ ಪ್ರಯತ್ನಗಳನ್ನು ನಾನೇ ಖುದ್ದಾಗಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಜೊತೆಯಲ್ಲಿ ಮಾಡಿ ಸೋಲುಂಡಿದ್ದೇನೆ. ನೆಲದ ನಿರ್ವಹಣೆಯಲ್ಲಿ ಅರ್ಥವಿಜ್ಞಾನದ ತಿಳಿವುಗಳೇ ಭಾರತೀಯ ನೆಲದ ಅಧ್ಯಯನಗಳಲ್ಲಿ ಇಲ್ಲ. ಆಧುನಿಕ ನೆಲದ ನಿರ್ವಹಣೆಯ ಯಾವ ಮಾತುಗಳೂ ಕೃಷಿ ವಿಜ್ಞಾನದ ಮಣ್ಣುವಿಜ್ಞಾನದ ಕಲಿಕೆಯಲ್ಲಿ ಶೈಕ್ಷಣಿಕವಾಗಿ ಚರ್ಚಿತವಾಗುವುದಿಲ್ಲ. ನಮ್ಮ ಯಾವುದೇ ಕೃಷಿವಿಶ್ವವಿದ್ಯಾಲಯಗಳೂ ನೆಲದ ಬದಲಾವಣೆಯ ಆಧುನಿಕ ಕಾಲದ ಹಿನ್ನೆಲೆಯ ಅರಿವನ್ನು ಹೊಂದಿಲ್ಲ.

          ದಕ್ಷಿಣ ಭಾರತದ ನೆಲ -ಪ್ರಸ್ಥಭೂಮಿ- ಗಟ್ಟಿಯಾಗಿದ್ದು ಭೂಕಂಪನಗಳಿಂದ ಮುಕ್ತವಾದದ್ದು ಎಂಬುದನ್ನು ಅರಿತಿದ್ದೇವೆ. ಅಂದರೆ ಭೂಮಿಯ ಒಳಗಣ ಕಂಪನವು ಮೇಲ್ಮೈ ತಲುಪಲು ಆಗುದಂತೆ ಗಟ್ಟಿಯಾದ ಪದರವನ್ನು ಹೊಂದಿದೆ ಎಂದು ಅರ್ಥ. ನಾವು ಮೂರ್ಖರಾಗಿ ಮೇಲ್ಮೈಯನ್ನೇ ಅಲುಗಾಡಿಸಲು ಆರಂಭಿಸಿದರೆ ಏನಾದೀತು ಎಂದಾದರೂ ಆಲೋಚಿಸಿದ್ದೇವೆಯೇ? ಸಣ್ಣ ಸಲಿಕೆ – ಪಿಕಾಸಿಗಳಿಂದ ನೆಲ ಅಗೆಯುತ್ತಿದ್ದ ಕಾಲ ಹೋಗಿ ದಶಕಗಳಾದವು. ಈಗ “ಅರ್ಥ್ ಮೂವರ್ಸ್” ಜೆಸಿಬಿ ಯಂತ್ರಗಳು ಬಂದಿವೆ. ಕ್ಷಣಮಾತ್ರದಲ್ಲಿ ನೆಲ ಅಗೆದು ಗುಡ್ಡಗಳ ಕಡಿದು, ರಸ್ತೆ, ಜಮೀನು, ನಿಮಗೇನು ಬೇಕೋ ಅದನ್ನು ಮಾಡಲು ನೆರವಾಗುತ್ತವೆ. ನಮಗೆ ಎಂದೂ ಹೊಳೆಯದ ಮತ್ತೊಂದು ಕಾನೂನು ನಮ್ಮ ಈ ನಾಚಿಗೆಗೆಟ್ಟ ಆಸೆಯ ಜೊತೆಗೇ ಇದೆ. ಈ ನೆಲದ ಎಂದೂ ನಮ್ಮದಲ್ಲ. ಅದಕ್ಕಾಗಿಯೇ ನಾವದಕ್ಕೆ ಬಾಡಿಗೆ ರೂಪದಲ್ಲಿ ಕಂದಾಯ ಕಟ್ಟುತ್ತೇವೆ. ಸರ್ಕಾರ ಬಹುದೊಡ್ಡ ಜಮೀನ್ದಾರ. ಅಂದ ಮೇಲೇ ಮುಗಿದೇ ಹೋಯಿತಲ್ಲ. ಎಲ್ಲಾ ರಾಜಕೀಯ ಮುಂಖಂಡರೇ ನಿಜವಾದ ಧಣಿಗಳು. ಅವರಿಚ್ಚೇಯೇ ಬಲು ದೊಡ್ಡ ನಿರ್ವಾಹಕ. ನಮ್ಮ ದೇಶದಲ್ಲಿ ಯಾವ ನೆಲವನ್ನು ಯಾವುದಕ್ಕೆ ಬಳಸಬೇಕು ಎನ್ನುವ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಿದೆ. ಅದರ ವರ್ಗೀಕರಣದಂತೆ ಯಾವ ನೆಲವನ್ನು ಬಳಸಲಾಗುತ್ತಿದೆ ಎಂಬುದನ್ನು ಸರ್ಕಾರವೇ ಹೇಳಬೇಕು. ಸಾವಿರಾರು ಜನರನ್ನು ಒಳಗೊಂಡ ಭೂಬಳಕೆ ಮತ್ತು ಭೂಸರ್ವೇಕ್ಷಣಾ ಬ್ಯೂರೋ ದೇಶಾದ್ಯಂತ ನಾಲ್ಕಾರು ದೊಡ್ಡ-ದೊಡ್ಡ ಕಛೇರಿಗಳನ್ನು ಹೊಂದಿದೆ. ಸಂಸತ್ತು ಅದಕ್ಕೆ ಕೊಟ್ಟ ಅಧಿಕಾರ ಎಷ್ಟು. ಅದರ ತಿಳಿವಳಿಕೆಯನ್ನು ಬಳಸುವ ವಿಧಾನಗಳೆಷ್ಟು? ಯಾವುದಕ್ಕೂ ಉತ್ತರಗಳು ಸುಲಭವಾಗಿ ದೊರಕಲಾರವು. ಹೇಳುವುದಾದರೂ ಯಾರಿಗೆ? 

ಇಂತಹಾ ಹಿನ್ನೆಲೆಯನ್ನು ನಮ್ಮದಾಗಿಸಿಕೊಂಡು ಅತೀವೃಷ್ಟಿ -ಅನಾವೃಷ್ಟಿ ಎರಡರಲ್ಲೂ ಮಾನವನ ಕೊಡುಗೆಯನ್ನು ಒಂದೆರಡು ಮಾತುಗಳಲ್ಲಿ ಹೇಳುವುದು ಕಷ್ಟ. ಒಂದಂತೂ ನಿಜ. ಈ ಹಿನ್ನೆಲೆಯಲ್ಲಿ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವಿನ್ನೂ ಇರಬೇಕಾದಷ್ಟು ಚತುರರಲ್ಲ. ಇಡೀ ವಿಜ್ಞಾನದ ಇತಿಹಾಸವು ಕೇವಲ 400 ವರ್ಷಗಳಷ್ಟು ಹಳೆಯದು. ಆದರೆ ಇಳೆಯ ಮಳೆಯ ಇತಿಹಾಸ ಲಕ್ಷಾಂತರ ವರ್ಷದಷ್ಟು ಹಳೆಯದು. ಹಾಗಾಗಿ ನಿಸರ್ಗದೊಡನೆ ಮಾನವನ ತಿಳಿವಳಿಕೆಯ ಮುಖಾಮುಖಿ ಮಳೆಯ ಅಳತೆಯನ್ನು ಐತಿಹಾಸಿಕವಾಗಿ ಕಟ್ಟಲು ಕಷ್ಟ. ಕೆಲವೇ ದಶಕಗಳಿಂದ ಉಂಟಾದ ಒತ್ತಡಗಳ ಬೆಳವಣಿಗೆಗಳು ಅಸಾದಾರಣ ಬದಲಾವಣೆಗಳನ್ನು ತಂದಿಟ್ಟಿವೆ. ಹಾಗಾಗಿಯೇ ಇವೆಲ್ಲವೂ ಜಾಗತಿಕವಾಗಿ ಚರ್ಚಿಸುತ್ತಿರುವ ಸಂಗತಿಗಳಾಗಿವೆ.  

ಇಂತಹಾ ಬಾಲಿಶವಾದ ಆಸೆಗಳ ಹಿನ್ನೆಲೆಯಲ್ಲಿ ನಿರ್ವಹಿಸುತ್ತಿರುವ ಭೂಮಿಯನ್ನು ಅಸಹಜತೆಯೆಡೆಗೆ ಕೊಂಡೊಯ್ಯುತ್ತಿರುವದು ಕಾಣುವ ಸತ್ಯ. ಒಂದಂತೂ ಅರ್ಥವಾಗುತ್ತಿದೆ. ನಮ್ಮ ಹವಮಾನದ ದಿನಗಳ ತಿಳಿವಳಿಕಗೆ ಸಹಾಯವಾಗುವ ಸಾಧನಗಳು ಬೆಳೆದಷ್ಟೂ ನೆಲದ ಅರವಿನ ಜಾಣತನದ ನಿರ್ವಹಣೆಯು ಕುಂಟಿತವಾಗುತ್ತಿದೆ. ಬೆಳೆಯುತ್ತಿರುವ ನಗರಗಳೇ ಇದಕ್ಕೆ ಸಾಕ್ಷಿ. ನೆಲದ ಅರಿವಿನ ಕೊರತೆಯು ಹೆಚ್ಚಾದಷ್ಟೂ ನೆಲದ ಮೇಲಿನ ಬದುಕನ್ನು ಕಟ್ಟುವ ಹವಾಮಾನದ ಆತಂಕಗಳು ಹೆಚ್ಚಾಗುವುದು ನಿಜ. ಎಲ್ಲಾ ನಾಗರಿಕತೆಗಳೂ ನೆಲದ ಅರಿವನ್ನು ನಿಭಾಯಿಸುವ ಪಾಠಗಳ ಕೊರತೆಯಿಂದಲೇ ಅಳಿದವು ಎಂಬುದನ್ನು ಜಾಗತಿಕವಾಗಿ ಅರಿವಿನ ಮುಂಚೂಣಿಯ ನಾಗರಿಕ ಸಮುದಾಯಗಳು ತಿಳಿಯಬೇಕಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 4 Comments

  1. ಶಾಂತಕುಮಾರಿ ಸಿ ಆರ್ ಪಿ ಆನಂದಪುರಂ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ

    Very realyti information sir

    1. CPUS

      ಧನ್ಯವಾದಗಳು

  2. ಲಿಂಗರಾಜು

    ಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ ಲೇಖನ ಮಾಹಿತಿ ಪೂರ್ಣ .

  3. Dr Rudresh

    ನಿಖರ ಕಾರಣ ತಿಳಿದು ಬಂದಿಲ್ಲ

Leave a Reply