ಜಾಗತಿಕವಾಗಿ ಅಮೆರಿಕಾದ ನೆಲ ಬಹುದೊಡ್ಡ ಕನಸನ್ನು ಹುಟ್ಟು ಹಾಕಿದೆ. ಇಲ್ಲಿನ ನೆಲೆಯ ವಿಕಾಸವೇ ಹಾಗೆ ಆಗಿದೆ. ಮೇಲುನೋಟಕ್ಕೆ ಸಂಭ್ರಮವನ್ನು, ಅದರ ಒಡಲೊಳಗೆ ಬಲು ದೊಡ್ಡ ಸಾಹಸವನ್ನು, ಅದಕ್ಕಿಂತಲೂ ಮಿಗಿಲಾದ- ಸಾಕಷ್ಟು ಸಂಕಟಗಳನ್ನೂ ಇಟ್ಟುಕೊಂಡೇ ಬೆಳೆದಿದೆ. ಇದು ಆದಿಯಿಂದಲೂ, ಅಂದರೆ ಪೂರ್ವದ ನೆಲದ ಜನಕ್ಕೆ ಪರಿಚಯವಾದಂದಿನಿಂದಲೂ ಹಾಗೇಯೇ ಇದೆ. ಒಂದು… ದೂರದ ನೆಲ, ಅರಿಯದ… ನೆಲ, ಸಾಕಷ್ಟೇ ಹಣವನ್ನೂ ಬೇಡುವ ನೆಲವೂ ಹೌದು. ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಓದುವ ಅಪೇಕ್ಷೆಯಂತೂ ಭಾರತೀಯ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಕನಸು. ಅದು ನನಸಾದರಂತೂ ಸ್ವರ್ಗಕ್ಕೆ ಮೂರೇ ಗೇಣು! ಇನ್ನೂ ಒಂದು ಹೆಜ್ಜೆ ಮುಂದೆ ಆಲೋಚಿಸಿ, ಅಲ್ಲಿಯೇ ನೆಲೆಯದರೆ -ಅರ್ಥಾತ್ ಅಲ್ಲಿನ ನೆಲ-ನೆಲೆಯಾಗುವುದಾದರೆ! ಮಗದೊಂದು ಸಂತಸ ಸಂಭ್ರಮದ ಜೊತೆಗೆ ಸಾಕಷ್ಟು ಸವಾಲುಗಳ ಅನುಭವಕ್ಕೆ ತೆರೆದುಕೊಳ್ಳುತ್ತದೆ. ಆಫ್ರಿಕಾ, ಏಶಿಯಾ ಮತ್ತು ಯುರೋಪ್ನ ಹಳೆಯ ಜಗತ್ತಿನವರಿಗೆ ಇಲ್ಲಿನ ನೆಲ -ನೆಲೆಯಾಗಲು ಹಲವು ಹಂತಗಳಲ್ಲಿ ಸಾಹಸದ ಸವಾಲನ್ನು ಹಾಕಿದೆ. ಇದರ ಹಾದಿಯಲ್ಲಿ, ಎಲ್ಲಾ ವಸಾಹತೀಕರಣದ ಜಾಡಿನಂತೆ ಸದಾ ಸ್ಥಳೀಯರನ್ನು, ನಿಜವಾದ ಶ್ರಮಿಕರನ್ನು ಕಡೆಗಾಣಿಸಿದೆ. ಅವರನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡಿದೆ.
ಅಲಬಾಮಾದ ಮಾಂಟ್ಗೊಮರಿಗೆ ಮಗ ಬಂದು ನೆಲೆಯಾಗುವ ಮೊದಲ ಮೆಟ್ಟಿಲನ್ನು ಇಟ್ಟಿದ್ದಾನೆ. ಆತನ ಕನಸುಗಳ ಸವಾಲುಗಳಿಗೆ ಕೇವಲ ಬೆಂಬಲವಾಗುವಂತೆ ಒಂದಷ್ಟು ದಿನ ಕಳೆಯಲು ಬಂದ ನನಗೆ ಇಡೀ ನೆಲದ ಆಶಯದಲ್ಲಿನ ನೆಲೆಯಾಗಿಸಿದ ಚರಿತ್ರೆಯ ನೆನಪುಗಳು ಎದುರಾದವು. ಒಂದಷ್ಟು ಗ್ರಹಿಕೆಗೆ ಒಗ್ಗಿಸುವ ಹುಡುಕಾಟಗಳೂ ಕೂಡ! ಕಳೆದ 1950ರ ದಶಕದಲ್ಲಿ ಭಾರತೀಯ ಕೃಷಿ ವಿಶ್ವವಿದ್ಯಾಲಯಗಳನ್ನು ಅಮೆರಿಕದ ಲ್ಯಾಂಡ್ ಗ್ರಾಂಟ್ ಮಾದರಿಯ ವಿಶ್ವವಿದ್ಯಾಲಯಗಳಂತೆ ರೂಪಿಸಲು ಆರಂಭಿಸಿತ್ತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು 60ರ ದಶಕದಲ್ಲಿ ಆರಂಭವಾಗಲು ಅಮೆರಿಕೆಯ ಟೆನೆಸ್ಸಿ ವಿಶ್ವವಿದ್ಯಾಲಯಕ್ಕೆ ಸಹಯೋಗ ಪಡೆದಿತ್ತು. ಕೃಷಿ ವಿದ್ಯಾರ್ಥಿಯಾದ ನನಗೆ 80ರ ದಶಕದಲ್ಲಿ ನಮ್ಮ ಅನೇಕ ಪ್ರಾಧ್ಯಾಪಕರು ಟೆನೆಸ್ಸಿ ವಿಶ್ವವಿದ್ಯಾಲಯದಲ್ಲಿ ಹೈಯರ್ ಎಜುಕೇಶನ್ ಮಾಡಿದವರಿದ್ದರು. ಪದವಿ ಶಿಕ್ಷಣದ ಆರಂಭದಲ್ಲೇ ತಿಳಿದ ನನಗಿದು, ಆಗಲೇ ಅಮೆರಿಕೆಯ ಕನಸನ್ನು ಬಿತ್ತಿದ್ದರೂ, ನನಗೆ ಸಾಧ್ಯವಾಗದ್ದು ಮಗನಿಗಾದರೂ ಸಾಧ್ಯವಾಗಲೆಂಬ ಪುಟ್ಟ ಹಿನ್ನೆಲೆಯನ್ನು ಒಳಗೊಂಡಿದೆ. ಹೈಸ್ಕೂಲಿನಲ್ಲಿ ವಿವೇಕಾನಂದರು ಚಿಕಾಗೋಗೆ ಹೋಗಿ ಮಾಡಿದ್ದ ಭಾಷಣದ ಪಠ್ಯದ ನೆನಪು, ಮಗನು ಚಿಕಾಗೋದ ಇಲಿನಾಯ್ ವಿಶ್ವವಿದ್ಯಾಲಯಕ್ಕೆ ಬಂದು ಕಲಿಯುವುದರಲ್ಲಿ ಸಾಕಾರವಾಯ್ತು. ಆ ನೆಲವೇ ಭವಿಷ್ಯದ ನೆಲೆಯ ಮುಂದೆ ತನ್ನ ಕನಸನ್ನು, ಪಕ್ಕದ ರಾಜ್ಯ ಅಲಬಾಮಾದ ರಾಜಧಾನಿ ಮಾಂಟ್ಗೊಮರಿಯಲ್ಲಿ ಕಾಣಲು ಆರಂಭಿಸಿದ. ನಾನೀಗ ಅಲಬಾಮಾದ ನೆಲದಲ್ಲಿ ಅಮೆರಿಕೆಯ ನೆಲೆಯ ಹುಡುಕಾಟದ ನನ್ನ ಆಲೋಚನೆಗಳಿಗೆ ತೊಡಗಲು, ಮಗ ಇಲ್ಲಿ ಬಂದಿರುವ ಕಾರಣವೇ ದೊಡ್ಡದು.
ನಮಗೆಲ್ಲಾ ಶಾಲೆಯ ಓದಿನಲ್ಲಿ ಅಮೆರಿಕಾ ಕಂಡುಹಿಡಿದ ಕೊಲಂಬಸ್ಸನ ಸಾಹಸ ಯಾತ್ರೆಯ ಪ್ರಶ್ನೆಗಳು ಸಹಜವಾದವು. ಆದರೆ ಭಾರತವನ್ನು ಹುಡುಕುತ್ತಾ ಬಂದವನಿಗೇ ಅಚ್ಚರಿಯಾಗುವಂತೆ ಅಲ್ಲಿ ನೆಲೆಸಿದ್ದವರು ಮೂಲ ಅಮೆರಿಕನ್ನರು! ಅಲ್ಲಿ ನೆಲೆಸಿದವರನ್ನು ಇಂಡಿಯನ್ನರೆಂದು ಗ್ರಹಿಸಿದ್ದ ಕಾರಣಕ್ಕೆ ಆ ಮೂಲ ಅಮೆರಿಕಾ ನಿವಾಸಿಗಳು ರೆಡ್ ಇಂಡಿಯನ್ನರಾದರು. ಇವರು ಅಮೆರಿಕಾ ತಲುಪಿ ಮೊದಲು ಅಲ್ಲಿನ ನೆಲವನ್ನು ನೆಲೆಯಾಗಿಸಿದ್ದಾದರೂ ಹೇಗೆ? ಕೊಲಂಬಸ್ಸನಂತೂ ಅಟ್ಲಾಂಟಿಕ್ ದಾಟಲು ಹಡಗನ್ನೇರಿ ಸಾಗಿದ್ದ. ಈ ರೆಡ್ ಇಂಡಿಯನ್ನರು? ಕೆಳಗಿನ ಮೂಲ ಆದಿ ಮಾನವರ ವಲಸೆಯ ನಕ್ಷೆಯನ್ನು ನೋಡಿ, ಅವರು ಇಡೀ ಏಶಿಯಾದ ನೆಲವನ್ನು ಹಾದು ರಶಿಯಾದ ಪೂರ್ವದ ತುದಿಯಿಂದ ಅಲಾಸ್ಕವನ್ನು ಹೊಕ್ಕಿದ್ದಾರೆ. ಮುಂದೆ ದಕ್ಷಿಣಕ್ಕೆ ಸಾಗುತ್ತಾ ಕೆನಡಾ, ಅಮೆರಿಕಾ ಮೆಕ್ಸಿಕೊ, ದಕ್ಷಿಣ ಅಮೆರಿಕಾದೆಡೆಗೆ ನಡೆದಿದ್ದಾರೆ. ಮಾನವ ವಲಸೆಯ ಬಹು ದೀರ್ಘ ನಡಿಗೆಯಾದ ಇದು ಸಹಸ್ರಾರು ವರ್ಷಗಳನ್ನು ಸವೆಸಿ ಹೊಸ ಜಗತ್ತನ್ನು ನೆಲೆಯಾಗಿಸಿದೆ.

ಆಗ ರಶಿಯಾದ ಪೂರ್ವದ ತುದಿಯ ನೆಲ ಮತ್ತು ಅಲಸ್ಕಾ ನೆಲದ ನಡುವೆ ನೆಲಸೇತುವೆಯು ಇತ್ತು. ಇದನ್ನು ಬೇರಿಂಗ್ ಲ್ಯಾಂಡ್ ಬ್ರಿಜ್ -ಬೇರಿಂಗ್ ನೆಲಸೇತುವೆ (Bering Land Bridge) ಎಂದು ಹೆಸರಿಸಲಾಗಿದೆ. ಆದರೆ ಈ ಸೇತುವೆಯು ಸರಿ ಸುಮಾರು ಇಂದಿನಿಂದ 13,000 ದಿಂದ 15,000 ವರ್ಷಗಳ ಹಿಂದಿನವರೆಗೂ ಇತ್ತು. ಅಲ್ಲಿನ ಪ್ರಾಚ್ಯ ಸಂಶೋಧನೆಗಳಲ್ಲಿ ದೊರಕಿದ ಮಾನವ ಮೂಳೆಗಳಲ್ಲಿನ ಕಾಲಮಾನದ ಅರಿವು ಇದನ್ನು ಸಾಕ್ಷೀಕರಿಸಿದೆ. ಮುಂದೆ ಹಿಮವಾತಾವರಣದ (Ice Age) ಕಾಲ ಮುಗಿದಾಗ ಕರಗಿದ ನೀರಲ್ಲಿ ಮುಳುಗಿ ಹೋಯ್ತು. ಆ ಜಾಗವಾದ ಬೇರಿಂಗಿಯಾ (Beringia)-ಈಗಲೂ ಆರ್ಕ್ಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರದ ಖಾರಿಗಳು ಸಂಧಿಸುವ ಸ್ಥಳವಾಗಿದೆ. ಇಲ್ಲಿನ ಭೌಗೋಳಿಕ/ಪ್ರಾಚ್ಯ ಸಂಶೋಧನೆಗಳ ವಸ್ತುಗಳನ್ನು ರಾಷ್ಟ್ರೀಯ ಸಂರಕ್ಷಣೆ (The Bering Land Bridge National Preserve) ಎಂದು ಸಂಗ್ರಹಿಸಿ ಅಲಸ್ಕಾದ ವಾಯುವ್ಯ ಭಾಗದಲ್ಲಿ ಇಡಲಾಗಿದೆ. ಇದು ಅಲ್ಲಿನ ಆಗಿನ ಸಸ್ಯ-ಪ್ರಾಣಿಗಳ ಕುರಿತು, ಮಾನವ ವಸತಿಯ ಕುರಿತೂ ಪಳೆಯುಳಿಕೆಗಳ ಸಾಕಷ್ಟೇ ದಾಖಲೆಗಳನ್ನು ಒದಗಿಸುತ್ತದೆ.

ಬೇರಿಂಗ್ ಲ್ಯಾಂಡ್ ಬ್ರಿಜ್ -ಬೇರಿಂಗ್ ನೆಲಸೇತುವೆಯ ಜಾಗದಲ್ಲೇ ಅಂತರರಾಷ್ಟ್ರೀಯ ದಿನ ರೇಖೆಯನ್ನು (International Dateline) ಇದನ್ನು ಹಾಯ್ದಂತೆಯೇ ಗುರುತಿಸಲಾಗಿದೆ. ಹಾಗಾಗಿ ಆಫ್ರಿಕಾದಿಂದ ಹೊಮೋ ಸೇಪಿಯನ್ನರ ವಿಕಾಸವಾಗುತ್ತಲೇ ಸಾಗಿದ ದೀರ್ಘವಲಸೆಯಲ್ಲಿ ಮೊದಲ ನೆಲೆಯನ್ನು ಒದಗಿಸಲು 12,000 ವರ್ಷಗಳ ಇತಿಹಾಸವನ್ನು ಹೊಂದಿದೆ. ಆಗ ಅಮೆರಿಕಾ ಖಂಡಗಳ ನೆಲವನ್ನು ಹೊಕ್ಕವರ ಹಿಂದೆಯೇ ದಾಟಿಸಿದ್ದ ನೆಲವು ಮುಳುಗಡೆಯಾಗಿ ಶಾಶ್ವತವಾಗಿ ಏಶಿಯಾದ ನೆಲದ ಸಂಪರ್ಕವನ್ನು ತಪ್ಪಿಸಿಕೊಂಡಿದೆ. ಮುಂದೆ ಮತ್ತೆ ಸಂಪರ್ಕ ಬರಲು 11,500 – 12,000 ವರ್ಷಗಳ ನಂತರದ ಹಡಗುಯಾನದ ಸಾಹಸದಿಂದ ಮಾತ್ರವೇ ಕಾರಣವಾಯಿತು.
ನಿಜಕ್ಕೂ ಕೊಲಂಬಸ್ಸನಿಗಿಂತಾ ಮೊದಲೇ ಲೀಫ್ ಎರಿಕ್ಸನ್ ಎಂಬಾತ ಅಮೆರಿಕಾ ತಲುಪಿದ್ದ ಮೊದಲ ಐರೋಪ್ಯ ಎಂದು ನಂತರದಲ್ಲಿ ಗುರುತಿಸಲಾಗಿದೆ. ಈತ ಐಸ್ಲ್ಯಾಡ್ ದೇಶದವನು. ಐಸ್ಲ್ಯಾಂಡ್ ನಾರ್ವೆ ಮತ್ತು ಗ್ರೀನ್ಲ್ಯಾಂಡ್ ನಡುವೆ ಇರುವ ದ್ವೀಪ ದೇಶ. ಈತ ಗ್ರೀನ್ ಲ್ಯಾಂಡ್ ತೀರದ ಮೂಲಕ ಹಾದು ಅಮೆರಿಕಾದ ಉತ್ತರ-ಪೂರ್ವದ ತೀರಗಳ ಗುಂಟಾ ಸಾಗಿ ಕೊಲಂಬಸ್ಸನಿಗಿಂತಾ ಸುಮಾರು 500 ವರ್ಷಗಳ ಮೊದಲೇ ಅಮೆರಿಕಾ ತಲುಪಿದ್ದವನೆಂದು ನಂಬಲಾಗಿದೆ. ಹಾಗಾಗಿ ಈಗ ಅಕ್ಟೋಬರ್ 12ರಂದು ಕೊಲಂಬಸ್ ದಿನಾಚರಣೆಗೂ ಮುನ್ನಾ ಅಕ್ಟೋಬರ್ 9ರಂದೇ ಲೀಫ್ ಎರಿಕ್ಸನ್ ದಿನಾಚರಣೆಯನ್ನು ಅಮೆರಿಕಾದಲ್ಲೂ ಮತ್ತೆ ಕೆಲವು ಐರೋಪ್ಯ ದೇಶಗಳಲ್ಲೂ ಆಚರಿಸಲಾಗುತ್ತಿದೆ.
ಇದೆಲ್ಲಾ ಒಟ್ಟಾರೆ ನೆಲವನ್ನು ತಲುಪಿದವರ ಬಗ್ಗೆಯ ಸಂಗತಿಗಳಷ್ಟೇ! ಆದರೆ ತಲುಪಿ ಅಮೆರಿಕವನ್ನು ನೆಲೆಯಾಗಿಸಿದ ಸಂಭ್ರಮಗಳ ಹಿಂದೆ ಜನಾಂಗ ಹಿಂಸೆ ಕ್ರೌರ್ಯ ಮುಂತಾದವೇ ಅಲ್ಲದೆ ಎಲ್ಲವನ್ನೂ ಮೆಟ್ಟಿ ಮಾನವತೆಯ ಹೋರಾಟದ ಸಂಗತಿಗಳು ಮತ್ತವುಗಳನ್ನು ಸಾಧ್ಯ ಮಾಡಿದ ಸಾಹಸದ ಕಥನವಿದೆ. ಒಟ್ಟಾರೆಯಾಗಿ ಅವುಗಳನ್ನು ಈ ಮುಂದಿನಂತೆ ವಿಭಾಗಿಸಿ ಅರಿಯಬಹುದಾಗಿದೆ.
1. ಅಮೆರಿಕಾದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರ ಆರಂಭಿಕ ನೆಲೆಯ ಸಾಹಸ
2. ಭಾರತದ ನೆಲದ ಹಾದಿಯ ಹುಡುಕಾಟದಲ್ಲಿ ಅಮೆರಿಕಾ ತಲುಪಿ ಯೂರೋಪಿಯನ್ನರ ವಸಾಹತೀಕರಣ ಆಚೀಚೆ
3. ಐರೋಪ್ಯರ ವಸಾಹತೀಕರಣದಲ್ಲಿ ಅಂತರ್ಯುದ್ಧಗಳು ಮತ್ತು ಅಮೆರಿಕಾ ಒಕ್ಕೂಟದ ಸ್ಥಾಪನೆಯ ಸಾಹಸ
4. ಮಾನವ ಹಕ್ಕುಗಳ ಹೋರಾಟದ ಮೂಲಕ ಸಮಾನತೆ ಸಾಧಿಸಲು ಹೋರಾಡಿದ ಸಾಹಸ.
5. ಅಖಂಡ 50 ರಾಜ್ಯಗಳಲ್ಲಿಯೂ ಆಯಾ ಸಮುದಾಯಗಳ ಹಿತವನ್ನು ಕಾಯುತ್ತಾ ಒಕ್ಕೂಟ ನಡೆಸುವ ಸಾಹಸ.
6. ವೈಜ್ಞಾನಿಕ ಹಿತವನ್ನು ಅರಸಿ ಬಂದು ನೆಲೆಯಾದವರ ಸಾರ್ಥಕ ಸಂಗತಿಗಳು.
ಇವೆಲ್ಲವುಗಳನ್ನೂ ದಾಟುತ್ತಾ ಹೆಚ್ಚೂ-ಕಡಿಮೆ ದೊಡ್ಡಣ್ಣ- ನಂ 1- ಶ್ರೀಮಂತ ರಾಷ್ಟ್ರ- ವೈಜ್ಞಾನಿಕವಾಗಿ ಬಲಶಾಲಿ ದೇಶ- ಇತ್ಯಾದಿಗಳ ನೆಲೆಯಾಗಿಸುವ ಹಿನ್ನೆಲೆ ಇದೆ. ಇಷ್ಟೆಲ್ಲಾ ನೋಡುವಾಗ ಅಮೆರಿಕಾ ನೆಲೆಯ ಹಿಂದಿನ ಚರಿತ್ರೆಯಲ್ಲಿ ಬಹಳ ಸಂಕೀರ್ಣವಾದ ಮಾನವ ಕಥನವಿದೆ. ಅಲಬಾಮಾದ ಒಳಹೊಕ್ಕು ನೆಲವನ್ನು ನೆಲೆಯಾಗಿಸಿದವರ ಮೂಲಕ ಇವುಗಳನ್ನು ಒಂದೊಂದಾಗಿಯೇ ಅರ್ಥ ಮಾಡಿಕೊಳ್ಳಲು ಇಲ್ಲಿನ ಟಿಪ್ಪಣಿಗಳು ಪ್ರಯತ್ನಿಸಿವೆ.
ಮೂಲತಃ, ನನ್ನ ಮಗನ ಜೊತೆ ಒಂದಷ್ಟು ದಿನಗಳಿರಲು ಬಂದ ನನಗೆ, ನನ್ನ ಗ್ರಹಿಕೆಗೆ ಸವಾಲೊಡ್ಡಿದ ಸಂಗತಿಗಳನ್ನು CPUSನ ಓದುಗರ ನಡುವೆ ಹಂಚುತ್ತಾ, ನನ್ನನ್ನು ನಾನು ಒರೆ ಹಚ್ಚಿ -ತಿದ್ದಿ ಕಲಿಯುವ ಉತ್ಸಾಹ ಉಳಿಸಿಕೊಳ್ಳುವ ಪ್ರಯತ್ನವಷ್ಟೇ ಇಲ್ಲಿದೆ. ಇದೇನು ಅಮೆರಿಕದ ನೆಲದ ಚರಿತ್ರೆಯ ಪರಿಪೂರ್ಣ ವಿವರಗಳೇನೂ ಅಲ್ಲ. ಒಂದಷ್ಟು ಅಪೂರ್ಣ ಅವಲೋಕನ ಮಾತ್ರ!
1. ಅಮೆರಿಕಾದ ಮೂಲ ನಿವಾಸಿ ರೆಡ್ ಇಂಡಿಯನ್ನರ ಆರಂಭಿಕ ನೆಲೆಯ ಸಾಹಸ
ಅಮೆರಿಕಾ ಚರಿತ್ರೆಯನ್ನು ಕೊಲಂಬಸ್ಸಿನಿಂದ ಆರಂಭಿಸುವುದು ಸರಿಯಲ್ಲವಷ್ಟೇ! ಆತನಿಗೂ ಮುಂಚೆ ಸಹಸ್ರಾರು ವರ್ಷಗಳ ಹಿಂದೆಯೇ ಸಂತತಿಗಳ ಕಾಲದ ನಡಿಗೆಯ ಮೂಲಕ ಅಮೆರಿಕಾ ತಲುಪಿದವರು ಆದಿ ಮಾನವರು. ಭಾರತದಿಂದ ಸಾಂಬಾರು ಪದಾರ್ಥಗಳಿಗೂ ಮತ್ತು ಐರೋಪ್ಯರ ಉತ್ಪನ್ನಗಳಿಗೂ ಕೊಡುಕೊಳ್ಳುವಿಕೆಯ ಐತಿಹಾಸಿಕ ಮಾರ್ಗದಲ್ಲಿ ಹೊಸ ದಾರಿಯ ಹುಡುಕಾಟವು ಕೊಲಂಬಸ್ಸನನ್ನು ಅಮೆರಿಕಾ ತಲುಪಿಸಿ ಅಲ್ಲಿದ್ದ ಮೂಲನಿವಾಸಿಗಳನ್ನೇ ಇಂಡಿಯನ್ನರೆಂದು ತಪ್ಪಾಗಿ ಕರೆದ ಕಾರಣಕ್ಕೆ ಮೂಲ ಅಮೆರಿಕನ್ನರು ರೆಡ್ ಇಂಡಿಯನ್ನರಾದರು. ನಿಜವಾದ ಭಾರತೀಯರಾದ ನಾವು ಗೋಧಿ (Wheatish) ಬಣ್ಣದವರಾದರೆ ಕೆಂಪಾಗಿದ್ದ ಅವರು ರೆಡ್ಇಂಡಿಯನ್ನರಾದವರು.
ಅವರು ಆಫ್ರಿಕಾದ ಮೂಲ ವಲಸಿಗರಾದ ಹೊಮೋ ಸೇಪಿಯನ್ನರು ತಡವಾಗಿ ತಲುಪಿದವರು. ಮೂಲ ಭಾರತೀಯರಾದ ನಾವು ಸರಿ ಸುಮಾರು 70,000 ವರ್ಷಗಳ ಹಿಂದೆ ಬಂದವರು ತಾನೇ! ಆದರೆ ಅಲ್ಲಿನವರು ತೀರಾ ಇತ್ತೀಚೆಗಿನವರು. ಕೇವಲ 12,000ವರ್ಷಗಳ ಹಿಂದಷ್ಟೇ ಹೋದವರು. ಹೊಮೋ ನಿಯಾಂಡರ್ತಲೆನ್ಸಿಸ್ (Homo nianderthalensis), ಹೊಮೋ ಎರೆಕ್ಟಸ್ (Homo erectus) ಮತ್ತು ಇತ್ತೀಚೆಗಿನ ಅನ್ವೇಷಣೆಯಾದ ಹೊಮೋ ಡೆನಿಸೋವನ್ಗಳು (Homo denisovans) ವಿಕಾಸವಾಗುತ್ತಾ ಹೊಮೋ ಸೇಪಿಯನ್ನ (Homo sapiens)ರಾದವರು. ಇದೆಲ್ಲವೂ ಯಾವ ಯಾವ ಪ್ರಭೇದಗಳು ಎಲ್ಲೆಲ್ಲಿ ಹೆಚ್ಚು ಪ್ರಭಾವಿಸಿದ್ದಾರೋ ಅದರಂತೆ ವಿವಿಧ ಮಾನವ ತಳಿ ವಿವಿಧತೆಗಳು ವಿಕಾಸಗೊಂಡಿವೆ. ಇದರ ಚರಿತ್ರೆಯ ವಿವರಗಳು 30-50 ಸಾವಿರ ವರ್ಷದ ವಿವರಗಳನ್ನು ಹೊಂದಿದವು!

ಮೊದಲು ಅಲಸ್ಕಾದಲ್ಲಿ ನಂತರ ಅಮೆರಿಕಾದಲ್ಲಿ ನೆಲೆಯಾದ ರೆಡ್ ಇಂಡಿಯನ್ನರು ವಿಪರೀತ ಚಳಿಯಿಂದ ಬೆಚ್ಚನೆಯ ವಾತಾವರಣವನ್ನು ಅರಸಿ ದಕ್ಷಿಣದತ್ತ ಸಾಗಿದ್ದಾರೆ. (ಅಲಸ್ಕಾವನ್ನು 1867ರ ಮಾರ್ಚ್ನಲ್ಲಿ ರಶಿಯಾದಿಂದ ಕೇವಲ 2 ಸೆಂಟುಗಳಿಗೆ ಒಂದು ಎಕರೆಯಂತೆ ಸುಮಾರು 7.2 ದಶಲಕ್ಷ ಡಾಲರ್ಗಳ ಮೊತ್ತಕ್ಕೆ ಅಮೆರಿಕಾ ಖರೀದಿಸಿದೆ). ಈಗಲೂ ಅಲಸ್ಕಾದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಮೂಲ ನಿವಾಸಿಗಳು ಇರುವುದು. ದಕ್ಷಿಣಕ್ಕೆ ಹೋದಂತೆ ಇವರ ಸಂಖ್ಯೆಯು ಕಡಿಮೆಯಾಗುತ್ತಾ ಸಾಗಿದ್ದಲ್ಲದೆ ಕೆಲವೊಂದು ರಾಜ್ಯಗಳಲ್ಲಿ ಗುರುತಿಸುವಷ್ಟು ಇದ್ದಾರೆ. ಕೆಲವು ಕಡೆ 1% ಗಿಂತಲೂ ಅತೀ ಕಡಿಮೆ! ದಕ್ಷಿಣದಲ್ಲಿ ಇವರ ಒಟ್ಟಾರೆಯ ಜನಸಂಖ್ಯೆಯ ಇಳುಮುಖಕ್ಕೆ ಬಲವಾದ ಕಾರಣ 1492ರ ನಂತರ ಐರೋಪ್ಯರ ಪ್ರವೇಶದಿಂದಾಗಿ ಬಂದೊದಗಿದ ಹೊಸ ಹೊಸ ರೋಗ ರುಜಿನಗಳು ಮತ್ತು ನಡುವಣ ಯುದ್ಧಗಳು! ಯೂರೋಪಿಯನ್ನರು ಮೂಲ ನಿವಾಸಿಗಳಿಗೆ ಕಾಯಿಲೆಯ ಸೋಂಕನ್ನು ಹಚ್ಚಿದ್ದಲ್ಲದೆ, ಅವರೊಡನೆ ಸಂಘರ್ಷಕ್ಕೂ ಇಳಿದರು. ಇದರಲ್ಲಿ ಸಹಸ್ರಾರು ಮೂಲ ನಿವಾಸಿಗಳು ಕಣ್ಮರೆಯಾದರು. ಶತಮಾನಗಳ ಕಾಲ ನಡೆದ ಯೂರೋಪಿನ್ನರು ಮತ್ತು ಮೂಲ ಅಮೆರಿಕನ್ನರ ಸಂಘರ್ಷವು ಯುದ್ಧಗಳು, ಕಾಯಿಲೆಗಳು ಸಣ್ಣ-ಪುಟ್ಟ ಸಂಘರ್ಷಗಳಲ್ಲಿ ಮೂಲ ಅಮೆರಿಕನ್ನರ 150 ದಶಲಕ್ಷ ಜನಸಂಖ್ಯೆಯಿಂದ ಹೆಚ್ಚೂ ಕಡಿಮೆ 8-15 ದಶಲಕ್ಷಕ್ಕೆ ಇಳಿಯಿತು. 15ರಿಂದ 17ನೆಯ ಶತಮಾನದ ಮಧ್ಯೆ ಪ್ರತಿಶತ 90ರಷ್ಟು ಮೂಲ ನಿವಾಸಿ ಅಮೆರಿಕನ್ನರು ಯೂರೋಪ್ಯರ ವಸಾಹತುಕರಣದಿಂದಾಗಿ ಶಾಶ್ವತವಾಗಿ ಇನ್ನಿಲ್ಲವಾದರು. ಇದು ಅಮೆರಿಕಾದ ಇತಿಹಾಸದ ಒಡಲೊಳಗಿರುವ ಬಲು ದೊಡ್ಡ ಸಂತತಿಯ ಸರ್ವನಾಶ. ಮುಂದೆ ಇನ್ನೂ ಕಡಿಮೆಯಾಗುತ್ತಲೇ ಹೋದರು
ಮಾನವರ ಚರಿತ್ರೆಯಲ್ಲಿ ಬಹು ದೊಡ್ಡ ನರಮೇಧ ನಡೆದು ಇಡೀ ಸ್ಥಳೀಯತೆಗೆ ಮಾರಕವಾಯಿತು. ಆರಂಭದ ಮೂಲ ಅಮೆರಿಕನ್ನರ ಇತಿಹಾಸದಲ್ಲಿ ಅಂದಾಜಿನಂತೆ ಸುಮಾರು 150 ದಶಲಕ್ಷವಿದ್ದವರು 21ನೆಯ ಶತಮಾನದ ಕಾಲು ಭಾಗ ಕಳೆಯುವಷ್ಟರಲ್ಲಿ ಕೇವಲ 3 ದಶಲಕ್ಷಕ್ಕೆ ಇಳಿದಿದ್ದಾರೆ. ಇಂದು ಅಲಸ್ಕಾ, ಕ್ಯಾಲಿಫೋರ್ನಿಯಾ, ಒಕ್ಲಹಾಮಾ, ನ್ಯೂ ಮೆಕ್ಸಿಕೊ ಮುಂತಾದೆಡೆಗಳಲ್ಲಿ ಹೊರತು ಪಡಿಸಿದರೆ ಸ್ಥಳೀಯ ಅಮೆರಿಕನ್ನರ ಜನಸಂಖ್ಯೆ ತುಂಬಾ ಕಡಿಮೆ. ಇಡೀ ಅಮೆರಿಕದಲ್ಲೀಗ ಒಟ್ಟಾರೆ ಜನಸಂಖ್ಯೆಯ ಕೇವಲ ಪ್ರತಿಶತ 1.3ರಷ್ಟು ಮಾತ್ರವೇ ಇವರಿದ್ದಾರೆ.

ಇಷ್ಟೆಲ್ಲದರ ನಡುವೆಯೂ ಮೂಲ ನಿವಾಸಿಗಳು ಅಮೆರಿಕವನ್ನು ನೆಲೆಯಾಗಿಸಲು ಸಹಸ್ರಾರು ವರ್ಷಗಳ ಶ್ರಮದಿಂದ ಜೀವನವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಚಳಿಯನ್ನು ಸಹಿಸುತ್ತಾ ಬಿಸಿಯನ್ನು ಅರಸುತ್ತಾ ಏರು-ಪೇರುಗಳ ನಡುವೆ ಬದುಕನ್ನು ಕಟ್ಟಿಕೊಂಡು ಉಳಿದಿದ್ದಾರೆ. ಅದರಲ್ಲಿ ಬಹು ಮುಖ್ಯವಾಗಿ ಕೃಷಿಯ ವಿಕಾಸ ಮತ್ತು ಸರಿ ಸುಮಾರು 18 ಬೆಳೆಗಳನ್ನು ಪ್ರಮುಖವಾಗಿ ಕೃಷಿಗೆ ಒಳಪಡಿಸಿದ್ದು, ಆ ಮೂಲಕ ನೆಲವನ್ನು -ನೆಲೆಯಾಗಿಸಿದ್ದು ವಿಶೆಷವಾದದ್ದು. ಇದೆಲ್ಲವೂ 12-14ನೆಯ ಶತಮಾನದ ಒಳಗೆ ನಡೆದುಹೋದ ಸಂಗತಿಗಳು.
ಮೂಲ ಅಮೆರಿಕನ್ನರು -ಮೂವರು ಸಹೋದರಿಯರು – Three Sisters- ಎಂದು ಕರೆಯಲಾಗುತ್ತಿರುವ ಮೆಕ್ಕೆ ಜೋಳ, ಬೀನ್ಸ್ ಮತ್ತು ಕುಂಬಳ/ಸೌತೆ ಜಾತಿಯ ಬೆಳೆಗಳನ್ನು ಜೊತೆ ಜೊತೆಯಾಗಿ ಅಂತರಬೆಳೆಗಳಂತೆ ಕೃಷಿ ಮಾಡಿದ್ದರು. ಮೆಕ್ಕೆ ಜೋಳ ನೇರವಾಗಿ ಬೆಳೆದು, ಬೀನ್ಸ್ ಹಬ್ಬಿ ಬೆಳೆಯಲು ಸಹಾಯಕವಾದರೆ, ಕುಂಬಳಗಳು ನೆಲದ ಮೇಲೆ ಹರಡುವ ಬೆಳೆಗಳಾಗಿರುತ್ತಿದ್ದವು. ಅವಕಾಡೊ (ಬೆಣ್ಣೆ ಹಣ್ಣು) (Avocados) ಗಳನ್ನೂ ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾ ನೆಲದಲ್ಲಿ ಸ್ವತಂತ್ರವಾಗಿ, ಕ್ರಿ.ಪೂ 4000-2800 ರ ನಡುವೆಯೇ ಬೆಳೆದಿರಬಹುದೆಂದು ಅಂದಾಜಿಸಲಾಗಿದೆ. ಏಕೆಂದರೆ ಮಾಯನ್ ಸಂಸ್ಕೃತಿಯಲ್ಲಿ ಅವಕಾಡೊಗಳು ತುಂಬಾ ಪ್ರಾಮುಖ್ಯತೆಯನ್ನು ಪಡೆದುದನ್ನೂ ಅಧ್ಯಯನಗಳು ತಿಳಿಸುತ್ತವೆ. ಹಾಗೇನೇ ಕೋಕೋ. ಕೊಕೋ ಬೆಳೆಯು ಈಗಲೂ ಅಮೆರಿಕಾದ ಸಂಸ್ಕೃತಿಯಲ್ಲಿ ಅನನ್ಯತೆಯನ್ನು ಪಡೆದಿರವ ಪ್ರಮುಖ ಕಾರಣ ಕನಿಷ್ಠ 1500ವರ್ಷಗಳ ಹಿಂದಿನಿಂದಲೂ ದಕ್ಷಿಣ ಅಮೆರಿಕಾವಂತೂ ಅತ್ಯಂತ ಪ್ರಮುಖ ಬೆಳೆಯಾಗಿ ವಿಕಾಸಗೊಳಿಸಿದೆ. ಹರಿವೆ ಸೊಪ್ಪಿನ ಜಾತಿಯ ಅಮರಾಂತ್ಗಳು ಸುಮಾರು 6000 ವರ್ಷಗಳಿಂದಲೂ ಬೆಳೆಯಾಗಿಯೆ ಇವೆ. ಅಷ್ಟೇಕೆ ಇತ್ತೀಚೆಗೆ ತುಂಬಾ ಜನಪ್ರಿಯವಾಗುತ್ತಿರುವ ಚಿಯಾ.. ಮೂಲ ಅಮೆರಿಕನ್ನರ ಅನ್ವೇಷಣೆ! ಸಹಸ್ರಾರು ವರ್ಷಗಳಿಂದಲೂ ಅಲ್ಲಿ ಜನಪ್ರಿಯವಾಗಿ ಹರಡಿದೆ. ಮೆಕ್ಕೆಜೋಳವಂತೂ 10,000 ವರ್ಷಗಳಿಗೂ ಹಿಂದಿನಿಂದಲೂ ಇಲ್ಲಿನ ನೆಲವನ್ನು ಮಾನವ ವಾಸದ ನೆಲೆಯಾಗಿಸಲು ಸಹಾಯಕವಾಗಿದೆ. ಹಾಗೆ ನೋಡಿದರೆ ದಕ್ಷಿಣ ಮತ್ತು ಮಧ್ಯ ಅಮೆರಿಕಾದ ಉಷ್ಣ ವಲಯದ ನೆಲದ ಹವಾಮಾನವು ಹಲವಾರು ಬೆಳೆಗಳ ವಿಕಾಸಕ್ಕೆ ಕಾರಣವಾಗಿದೆ. ಆಲೂಗಡ್ಡೆ, ಟಮೇಟೊ ಮೆಣಸಿನಕಾಯಿ, ಹೀಗೆ!
ಇದೆಲ್ಲಾ ಒಟ್ಟಾರೆಯ ಮೂಲ ನಿವಾಸಿಗಳ ಅಮೆರಿಕಾ ನೆಲದ -ನೆಲೆಯಾಗುವ ಚರಿತ್ರೆಯ ಭಾಗವಾದರೆ, ಅಲಬಾಮಾದ ನೆಲವು ಹೆಚ್ಚೂ ಕಡಿಮೆ ಸುಮಾರು ಕ್ರಿ. ಶ. 700-1600 ರ ಮಧ್ಯೆಯ -ಮಿಸಿಸಿಪ್ಪಿಯನ್ ಸಂಸ್ಕೃತಿ ಎನ್ನುವ ಕಾಲಕ್ಕೆ ಮೆಕ್ಕೆ ಜೋಳ, ಬೀನ್ಸ್ ಕುಂಬಳಗಳು ಸಾಮಾನ್ಯವಾಗಿಯೇ ಬೆಳೆಯುವ ಬೆಳೆಗಳಾಗಿದ್ದವು. ಇದರ ಜೊತೆಗೆ ಸೂರ್ಯಕಾಂತಿ, ತಂಬಾಕು ಮುಂತಾದವುಗಳ ಜೊತೆ ಹಲವು ವನ್ಯ ಮೂಲದ ಹಣ್ಣು-ಕಾಯಿಗಳೂ ಸೇರಿಕೊಂಡಿದ್ದವು.
ಒಟ್ಟಾರೆಯಾಗಿ ಅಲಬಾಮಾವನ್ನೂ ಒಳಗೊಂಡಂತೆ ಅಮೆರಿಕಾದ ದಕ್ಷಿಣ-ಪೂರ್ವ (ಆಗ್ನೇಯ) ಭಾಗದ ಒಳನಾಡು ಕೃಷಿಗೆ ನೆರವಾಗಿದ್ದು ಅಲ್ಲಿನ ಫಲವತ್ತಾದ ನೆಲ/ಮಣ್ಣಿನ ಪ್ರಭಾವ ಎಂಬುದರಲ್ಲಿ ಎರಡು ಮಾತಿಲ್ಲ.ಮೂಲ ನಿವಾಸಿಗಳು ಇಡೀ ಅಮೆರಿಕಾ ನೆಲದ ವಿವಿಧತೆಯನ್ನು ಮತ್ತು ಅದು ಪ್ರಭಾವಿಸಿದ ಜೈವಿಕ ಪರಿಸ್ಥಿತಿಯ ಇಕಾಲಜಿಯನ್ನು ಅನುಭವದ ತಿಳಿವಳಿಕೆಯ ತೆಕ್ಕೆಗೆ ತಂದುಕೊಂಡಿದ್ದರು. ಆ ಕಾರಣಕ್ಕೇ ನಿಸರ್ಗ ಪ್ರಿಯರಾಗಿದ್ದ ಮೂಲ ನಿವಾಸಿಗಳು ಹೊರಜಗತ್ತಿನ ಆಕ್ರಮಣಗಳಿಗೆ ಬಲಿಯಾದರು. ಇಂದು ಇರುವ ಕೇವಲ 1.3% ಅಮೆರಿಕನ್ನರು ಮಾತ್ರವೇ ಸ್ಥಳೀಯರು! ಮೂಲ ನಿವಾಸಿಗಳು. ಉಳಿದ ಪ್ರತಿಶತ 98.7 ಜನರು ಹೊರಗಿನವರೇ! ಅದು ಅಮೆರಿಕ ಒಕ್ಕೂಟದ ವಿಚಿತ್ರವೇ!
ಇಷ್ಟೆಲ್ಲಾ ವಿಚಿತ್ರಗಳ ನಡುವೆಯೂ ಸಮುದಾಯಿಕ ಐಡೆಂಟಿಟಿಯಲ್ಲಿ ಮುಂಚೂಣಿಯಲ್ಲಿ ವಾದಿಸುವ ಅಮೆರಿಕಾವು ನಿಜಕ್ಕೂ ಸ್ಥಳೀಯರಿಗೇನು ಮಾಡಿದೆ ಎಂಬುದೇ ಪ್ರಶ್ನಾರ್ಹವಾದುದು. ಇವುಗಳ ಸಣ್ಣ ಚಿತ್ರಣ ಕೊಟ್ಟು. ಸ್ಥಳೀಯ ಮೂಲ ನಿವಾಸಿಗಳ ಸಾಧನೆಯನ್ನು ಶಾಶ್ವತವಾಗಿಸುವ ಮೂವರ ಉದಾಹರಣೆಯೊಂದಿಗೆ ಈ ಟಿಪ್ಪಣಿಗಳನ್ನು ಮುಗಿಸುತ್ತೇನೆ.
ಮೂಲ ಅಮೆರಿಕನ್ನರ ಸುಮಾರು 524 ಪಂಗಡ (Tribes) ಗಳನ್ನು ಅಮೆರಿಕಾದ ಫೆಡರೆಲ್ ಸರ್ಕಾರವು ಗುರುತಿಸಿದೆ. ಇನ್ನೂ ಗುರುತಿಸಬೇಕಾದ ಸುಮಾರು 400 ಪಂಗಡಗಳು ಕಾರಣಾಂತರಗಳಿಂದ ಗುರುತಿಸದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅವರು ಸುಮಾರು 200 ವಿಭಿನ್ನ ಸ್ಥಳೀಯ ಭಾಷೆಗಳನ್ನು ಮಾತನಾಡುತ್ತಾರೆ, ಇದು ಸಂಸ್ಕೃತಿ ಮತ್ತು ಜೀವನ ವಿಧಾನದಲ್ಲಿ ನಂಬಲಾಗದ ವೈವಿಧ್ಯತೆಗೆ ಕಾರಣವಾಗಿದೆ. ದುರದೃಷ್ಟವಶಾತ್, ಜನಪ್ರಿಯ ಸಂಸ್ಕೃತಿಯಲ್ಲಿ ಸ್ಥಳೀಯ ಅಮೆರಿಕನ್ ಪ್ರಾತಿನಿಧ್ಯವು ಬಹಳ ಹಿಂದಿನಿಂದಲೂ ಆಕ್ರಮಣಕಾರಿ ಸ್ಟೀರಿಯೊಟೈಪ್ ಚಿತ್ರಣಗಳು, ವ್ಯಂಗ್ಯಚಿತ್ರಗಳು ಮತ್ತಿತರೇ ರೂಪಕಗಳಿಂದ ತುಂಬಿದೆ. ಸ್ಥಳೀಯ ಅಮೆರಿಕನ್ ಜೀವನ ಮತ್ತು ಸಂಸ್ಕೃತಿಯ ಚಿತ್ರಣಗಳು ಹೆಚ್ಚಾಗಿ ಅದನ್ನು ಏಕರೂಪಗೊಳಿಸಿವೆ. ಆದರೆ ವಾಸ್ತವವಾಗಿ ಹಾಗಿಲ್ಲ!
ಈ 524 ಪಂಗಡಗಳಿಗೆ ನೆಲದ ಮೇಲಿನ (Through Land Grant) ಅಧಿಕಾರದ ಮೀಸಲಾತಿಯನ್ನು ನೀಡಿದೆ. ಇದು ಒಟ್ಟಾರೆ 56,200,000 ಎಕರೆಗಳಷ್ಟು ವಿಸ್ತಾರದ ಅಥವಾ ಅಮೆರಿಕಾ ನೆಲದ ಒಟ್ಟು 2.3% ವಿಸ್ತೀರ್ಣವನ್ನು ಮೂಲನಿವಾಸಿಗಳಿಗೆಂದು ನೀಡಿದೆ. ಇವೆಲ್ಲವೂ ಅಮೆರಿಕಾದ ಅನೇಕ ರಾಜ್ಯಗಳಲ್ಲಿ ಅವರ ಜನಸಂಖ್ಯೆಯ ಆಧಾರದ ಮೇಲೆ ಹಂಚಿಕೆಯಾಗಿವೆ. ಈಗಿರುವ ಅಮೆರಿಕಾದ ಒಟ್ಟೂ ಜನಸಂಖ್ಯೆಯ ಸರಿ ಸುಮಾರು ಅರ್ಧದಷ್ಟನ್ನು ಶತಮಾನಗಳ ಕಾಲ ನರಮೇಧ ನಡೆಸಿದ ಐರೋಪ್ಯರು ಇದರಿಂದ ಸಮಾಧಾನಕರ ಬೆಂಬಲವನ್ನು ನೀಡಿದ್ದಾರೆಯೇ ಎಂಬುದಕ್ಕೆ ಉತ್ತರವಿಲ್ಲ. ಕಾರಣ ಶಾಶ್ವತವಾಗಿ ಸಂಸ್ಕೃತಿಯೊಂದು ಅಳಿದು ಹೋದರೆ ಮಾನವತೆಗಾಗುವ ನಷ್ಟದ ಅಂದಾಜು ಮಾಡಲು ಸಾಧ್ಯವೇ ಆಗದು.
ಒಟ್ಟಾರೆಯ ನ್ಯಾಯಯುತ ಮನ್ನಣೆಯ ಕೊರತೆಯ ಹೊರತಾಗಿಯೂ, ಪ್ರಸಿದ್ಧ ಸ್ಥಳೀಯ ಅಮೆರಿಕನ್ನರು ವಿಜ್ಞಾನ, ರಾಜಕೀಯ, ಅಡುಗೆ, ಕ್ರೀಡೆ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಭಾಗಿಯಾಗಿ ನೆಲದ ಪ್ರೀತಿಯನ್ನು ಮುಂದುವರೆಸಿದ್ದಾರೆ. ಮೂಲ ನಿವಾಸಿಗಳಲ್ಲಿ ಕೆಲವರು ಇಂದು ಸಾಕಷ್ಟೇ ಮುಂದುವರೆದು ಅಮೆರಿಕಾದ ಚರಿತ್ರೆಯ ಭಾಗವಾಗಿದ್ದಾರೆ. ಕಾದಂಬರಿಕಾರರಿದ್ದಾರೆ, ಕವಿಗಳಿದ್ದಾರೆ, ಕಲಾವಿದರಿದ್ದಾರೆ, ಆಸ್ಕರ್ ಪಡೆದ ನಟ-ನಟಿಯರಿದ್ದಾರೆ, ಸಂಗೀತಕಾರರಿದ್ದಾರೆ, ಸ್ಥಳೀಯ ಆಹಾರವನ್ನು ಜಾಗತಿಕವಾಗಿ ಪರಿಚಯಿಸಿರುವ ಬಾಣಸಿಗರಿದ್ದಾರೆ, ವ್ಯೋಮಯಾನಿಗಳಿದ್ದಾರೆ, ಕ್ಯಾಬಿನೆಟ್ ಸೆಕ್ರೆಟರಿಗಳಾಗಿದ್ದಾರೆ.. ಹೀಗೆ ಮಾದರಿ ಅಮೆರಿಕಾದ ಚರಿತ್ರೆಯನ್ನು ಕಟ್ಟುವಲ್ಲಿ ಮೂಲ ನಿವಾಸಿಗಳೂ ಭಾಗಿಗಳಾಗಿದ್ದಾರೆ.

ಜಾನ್ ಹೆರಿಂಗ್ಟನ್ (John Herrington) ಎಂಬಾತ 2002ರಲ್ಲಿ ಗಗನಯಾನಿಯಾಗಿ ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ ನಲ್ಲಿ ಕಳೆದು ಬಂದಿದ್ದಾರೆ. ವೆಸ್ ಸ್ಟಡಿ (Wes Studi )ಎಂಬ ನಟ ಹಾಗೂ ಚಿತ್ರ ನಿರ್ಮಾಪಕ 2019ರಲ್ಲಿ ಮೊಟ್ಟ ಮೊದಲ ಆಸ್ಕರ್ ಬಹುಮಾನವನ್ನು ಪಡೆದ ಅಮೆರಿಕನ್ ಮೂಲ ನಿವಾಸಿಯಾಗಿದ್ದಾರೆ. ಹಾಗೆಯೇ ಅವರನ್ನು New York Times ಪತ್ರಿಕೆಯು 21ನೆಯ ಶತಮಾನದ 25 ಪ್ರಮುಖ ನಟರಲ್ಲಿ ಒಬ್ಬರೆಂದೂ ಗುರುತಿಸಿದೆ. ಜಾಯ್ ಹಾರ್ಜೊ (Joy Harjo) ಎಂಬಾಕೆಯು ಅಮೆರಿಕದ 23ನೆಯ ಕವಿ ಪ್ರಶಸ್ತಿ (Poet Laureate) ಯ ಪುರಸ್ಕೃತರಾಗಿದ್ದಾರೆ. Poet Laureate ಎಂಬುದು ರಾಷ್ಟ್ರ ಕವಿ ಇದ್ದ ಹಾಗೆ! ಗೌರವದ ಪುರಸ್ಕಾರ.
ಈ ಜಾಯ್ ಹಾರ್ಜೊ ಅವರ ಒಂದು ಅತ್ಯಂತ ಪ್ರಮುಖವಾದ ಕವಿತೆ “ಒಂದು ಅಮೆರಿಕನ್ ಸನ್ರೈಸ್ (An American Sunrise)” ಯು ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಥಳೀಯತೆಯ ಗುರುತಿಗೆ (Indigenous identity) ಇರುವ ಸಂಘರ್ಷದ ಪರಿಸ್ಥಿತಿಯನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸುತ್ತದೆ. ಸ್ಥಳೀಯತೆಯ ಗುರುತನ್ನು ಸ್ಥಾಪಿಸುವ ಹೋರಾಟಗಳಿಗೆ ಅತಿ ದೊಡ್ಡ ರೂಪಕವಾಗಿಯೂ ಜೊತೆಗೆ ವಾಸ್ತವದ ಚಿತ್ರಣವನ್ನೂ ನೀಡುವ ಈ ಕವಿತೆಯನ್ನು ನಿಮ್ಮ ಓದಿಗೆ ತೆರೆದು ಮುಗಿಸುತ್ತೇನೆ.

ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
(ಮುಂದಿನ ಭಾಗಗಳನ್ನು ನಿರೀಕ್ಷಿಸಿ)