You are currently viewing ಅಮೃತ ಬಳ್ಳಿಯ ಅಮೃತಗಾಥೆ

ಅಮೃತ ಬಳ್ಳಿಯ ಅಮೃತಗಾಥೆ

ವೈದ್ಯರೊಬ್ಬರ ಮನೆಯ ಪಕ್ಕದಲ್ಲೇ ಎಲ್ಲರೂ ಮನೆಯ ಮಾಡಿ, ರೋಗ-ರುಜಿನಗಳಿಂದ ಭಯ ನಿವಾರಿಸಿಕೊಳ್ಳುವ ಕೆಲಸವನ್ನು ಮಾಡಲಾಗದು. ಆದರೆ ಮನೆಯ ಹಿತ್ತಿಲಲ್ಲೊ, ಮುಂದಿನ ನೆಲಹಾಸಿನ ಜಾಗದಲ್ಲೋ, ಕಡೆಗೆ ಸ್ಥಳವಿಲ್ಲದಿದ್ದರೆ, ಒಂದು ಕುಂಡದೊಳಗೆ ಔಷಧಭರಿತವಾದ ಸಸ್ಯವೊಂದನ್ನು ಬೆಳಸಿ, ಮನೆಯಲ್ಲೇ “ಅಮೃತ”ವನ್ನು ಪಡೆಯಲಂತೂ ಸಾಧ್ಯವಿದೆ. ಹೌದು, ಹಾಗೆ ಸುಲಭವಾಗಿ ಬೆಳೆಸಬಹುದಾದ, ಮೈಯಲ್ಲಾ ಔಷಧಗಳನ್ನೇ ತುಂಬಿಕೊಂಡ ಸಸ್ಯ – “ಅಮೃತ ಬಳ್ಳಿ”. ಔಷಧಗಳೆಂದರೆ ಸಹಜವಾದ ಸುಮಾರು ಹತ್ತಾರು ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡಬಲ್ಲ ಬಳ್ಳಿಯಾದ ಕಾರಣದಿಂದಲೆ ಇದನ್ನು ಅಮೃತ ಸಮಾನವಾಗಿಸಿ, ಅಮೃತ ಬಳ್ಳಿ ಎಂದೇ ಕರೆದಿದ್ದಾರೆ.

“ಅಮೃತ ಬಳ್ಳಿ” ಯನ್ನು Tinospora cordifolia ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. Menispermaceae ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಈ ಬಳ್ಳಿಯು ಭಾರತೀಯ ನೆಲ ಮೂಲದ್ದು. ಸಹಸ್ರಾರು ವರ್ಷಗಳಿಂದಲೂ ನಮ್ಮ ಸಾಂಸ್ಕೃತಿಕ ಪ್ರಪಂಚದಲ್ಲಿ ಬೆರೆತ ಈ ಬಳ್ಳಿ ಸುಂದರವೂ, ಉಪಕಾರಿಯೂ, ಸುಲಭವಾಗಿ ನಮ್ಮೆಲ್ಲಾ ಪರಿಸರಕ್ಕೂ ಒಗ್ಗುವ ಜಾಯಮಾನದ್ದು. ಬೆಳೆಯಲು, ಕೇವಲ ಆಸಕ್ತಿ ಮತ್ತು ಒಂದಷ್ಟು ನೆಲ ಮಾತ್ರ ಬಯಸುವ ತೀರಾ ಸಹಜವಾಗಿ ಬೆಳೆಯುವ ಸಸ್ಯ, “ಅಮೃತ ಬಳ್ಳಿ”. ಇದರ ಎಲೆಗಳಂತೂ ನೋಡುವುದಕ್ಕೆ ವೀಳ್ಯೆಯದೆಲೆಗಳನ್ನೇ ಹೋಲುತ್ತವೆ. ಕಾಂಡವು ಅಂದರೆ ಇದರಲ್ಲಿ ಇಡೀ ಬಳ್ಳಿಯು ಹಸಿರಾಗಿದ್ದು, ಅದರ ಮೇಲೆ ಮಾಸಲು-ಬಿಳಿ ಬಣ್ಣದ ಪೊರೆಯಂತಹಾ ತೆಳು ಹೊದಿಕೆಯನ್ನು ಹೊಂದಿರುತ್ತದೆ. ಗೊತ್ತಿಲ್ಲದೆ ಯಾವುದಾದರೂ ಬಳ್ಳಿಗೆ ಕೈ ಹಾಕಿ ನೀವೇನಾದರೂ ಎಳೆದುಕೊಂಡಿದ್ದರೆ, ಕೈಗೆ ಬಳ್ಳಿಯು ಬರದೆ, ಬರೀ ಹೊದಿಕೆಯಾದ ಪೊರೆ ಜಾರುತ್ತಾ ಬಂದು ಹಚ್ಚ-ಹಸಿರಾದ ಹೊಳಪಾದ ಬಳ್ಳಿ ಹಿಂದೆ ಉಳಿದಿದ್ದರೆ ಅದು ಖಂಡಿತಾ ಅಮೃತ ಬಳ್ಳಿಯೇ! ಮೈಯಲ್ಲಾ -ಬಳ್ಳಿಯೆಲ್ಲಾ- ಹಸಿರಾಗಿದ್ದು ಆಹಾರೋತ್ಪಾದನೆಯಲ್ಲಿ ತೊಡಗಿಕೊಂಡದ್ದಲ್ಲದೆ, ಅದರೊಳಗೂ ಔಷಧಗಳ ತುಂಬಿಕೊಂಡ ಸಸ್ಯ. ಸಾಮಾನ್ಯವಾಗಿ ಯಾವುದೇ ಕಾಯಿಲೆಯಲ್ಲೂ ಅದರಲ್ಲೂ ಹಲವಾರು ಸೋಂಕುಗಳಲ್ಲಿ ಜ್ವರ ಸಹಜವಾಗಿ ಕಾಡುತ್ತದೆ. ಈ ಬಳ್ಳಿ ಜ್ವರಕ್ಕೆ ಒಳ್ಳೆಯ ಉಪಶಮನಕಾರಿ. ಹಾಗಾಗಿ ಹಲವಾರು ಕಾಯಿಲೆಗಳ ಮೂಲ ಸ್ವಭಾವವಾದ ಜ್ವರವನ್ನು ನಿವಾರಿಸುವುದರಿಂದ ಇದನ್ನು ಹಲವು ಪರಿಹಾರಗಳ ಮೂಲವಾಗಿ ನಮ್ಮ ಹಿರಿಯರು ಕಂಡುಕೊಂಡಿದ್ದಾರೆ. ಆಧುನಿಕ ಔಷಧ ಜಗತ್ತೂ ಇಂತಹದ್ದೇ ಹುಡುಕಾಟಗಳನ್ನು ಬಳ್ಳಿಯನ್ನು ಕುರಿತ ಅನುಶೋಧಗಳ ನಡೆಸಿದೆ.

ಜೈವಿಕ ಕ್ರಿಯೆಗಳಲ್ಲಿ ಭಾಗವಹಿಸಬಲ್ಲ ಹಲವು ರಾಸಾಯನಿಕಗಳನ್ನು ಎಲೆ, ಕಾಂಡ ಹೂ-ಹಣ್ಣುಗಳಲ್ಲಿ ತುಂಬಿಕೊಂಡಿದೆ. ಅಲ್ಕಲಾಯ್ಡ್‍ ಗಳು, ಗ್ಲೈಕೊಸೈಡ್‍ ಗಳು ಸ್ಟಿರಾಯ್ಡ್‍ ಗಳು, ಫಿನಾಲಿಕ್ ಸಂಯುಕ್ತಗಳು, ಅಲ್ಲದೆ ಲ್ಯಾಕ್ಟೋನ್‍ ಗಳೂ ಅಮೃತಬಳ್ಳಿಯಲ್ಲಿ ತುಂಬಿಕೊಂಡಿವೆ. ಬಳ್ಳಿಯ ಕಷಾಯವನ್ನು ಹಲವಾರು ಸಸ್ಯಮೂಲ ಔಷಧಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಜ್ವರ ನಿವಾರಣೆಯಲ್ಲಿ, ಹೊಟ್ಟೆ ನೋವು ನಿವಾರಣೆಗೆ, ಕೆಲವು ಸೂಕ್ಷ್ಮಜೀವಿಗಳ ಸೋಂಕು ನಿವಾರಣೆಗೆ, ಉರಿಯೂತ ನಿವಾರಣೆಗೆ, ಕೀಲು-ನೋವು ನಿವಾರಣೆಗೆ, ಅಲರ್ಜಿಯ ನಿವಾರಣೆಗೆ ಹಾಗೂ ಮಧುಮೇಹ ನಿಯಂತ್ರಣದಲ್ಲೂ ಅಮೃತಬಳ್ಳಿಯ ಔಷಧಗುಣಗಳು ತಿಳಿದಿವೆ. ಇಷ್ಟೆಲ್ಲಾ ನಿವಾರಣೋಪಾಯಗಳ ಸಹಾಯವನ್ನು ಮೈಗೂಡಿಸಿಕೊಂಡ ಬಳ್ಳಿಗೆ “ಅಮೃತ” ಸಮಾನವಾದ ಹೆಗ್ಗಳಿಕೆಯಿಂದ “ಅಮೃತ ಬಳ್ಳಿ” ಎಂದು ಕರೆದಿರುವುದು ಸಹಜವೇ ಆಗಿದೆ.

ಉಷ್ಣವಲಯದಲ್ಲೆಲ್ಲಾ ತುಂಬಾ ಸೊಗಸಾಗಿ ಬೆಳೆಯುವ ಈ ಬಳ್ಳಿಯನ್ನು ಹಲವಾರು ಔಷಧಗಳ ತಯಾರಿಯಲ್ಲಿ ಬಳಸುತ್ತಿರುವುದರಿಂದ ಇದರ ಬೇಡಿಕೆಯು ಹೆಚ್ಚಾಗಿದೆ. ಇದರಿಂದ ಹಲವಾರು ರಾಸಾಯನಿಕಗಳನ್ನು ಪಡೆದು ಔಷಧಗಳಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಇದರ ವಾಣಿಜ್ಯ ಅವಕಾಶಗಳನ್ನೂ ಕಾಣಬಹುದಾಗಿದೆ. ನಮ್ಮ ಜನಪ್ರಿಯವಾದ ಔಷಧಗಳಾದ ಲಿವ್-52, ಗುಡಾಚಿ ತೈಲ ಮುಂತಾದವುಗಳಲ್ಲಿ ಇದು ಸಾಮಾನ್ಯವಾದ ಭಾಗವಾಗಿದೆ. ಕೈತೋಟದ ಬೇಲಿಯಲ್ಲಿ ಒಂದಷ್ಟು ಜಾಗ ಕೊಟ್ಟರೆ ಸೊಗಸಾಗಿ ಬೆಳೆಯುತ್ತದೆ. ಅಲಂಕಾರಿಕ ಬಳ್ಳಿಯಾಗಿಯೂ ಬೆಳಸಬಹುದು. ಗೆಳೆಯರೊಬ್ಬರು ಇದನ್ನು ಬೆಳೆಸುವ ಉದ್ದೇಶದಿಂದ ಹೇಳಿದಾಗ, ನಾನು ಒಂದೆರಡು ಪುಟ್ಟ ತುಂಡುಗಳನ್ನು ಪ್ಯಾಂಟಿನ ಜೇಬಿನಲ್ಲಿಟ್ಟು ತೆಗೆದುಕೊಂದು ಹೋಗಿ ಕೊಟ್ಟೆ. ಅವರ ಕೈತೋಟದ ಕೆಲಸಗಾರ, 3-4 ಅಂಗುಲದ ಎರಡು ತುಂಡನ್ನು ಕಂಡು, ಅದೂ ಅದರ ಹೊರಮೈ ಮಾಸಲು ಬಿಳಿಯಾದ್ದರಿಂದ ಒಣಗಿದಂತೆ ಕಾಣುತ್ತಿತ್ತು. ಅದನ್ನು ನೆಲಕ್ಕೆ ಹಾಕಲು ಅನುಮಾನಿಸುತ್ತಿದ್ದ. ಕಡೆಗೆ ನಾನೇ ಎರಡು ಕಡೆಗಳಲ್ಲಿ ಅದನ್ನು ನೆಟ್ಟು ಮಾಮೂಲಿಯಾಗಿ ನೀರೆರೆದೆ. ಮುಂದೆ 2-3 ತಿಂಗಳಲ್ಲಿ ಬಳ್ಳಿ ಹಬ್ಬಿದ್ದಲ್ಲದೆ, ನಂತರದ ಎರಡೇ ವರ್ಷದಲ್ಲಿ ಅವರ ಮನೆಯ ಮುಂದಿನ ಕಾಂಪೌಂಡಿನ್ನಲ್ಲಾ ಆವರಿಸಿ, ಅಕ್ಕ ಪಕ್ಕದ ಮನೆಗೂ ದಾಳಿ ಇಟ್ಟಿತ್ತು. ಈಗಲೂ ಅವರ ಮನೆಯ ತೋಟಿಗ “ಅಯ್ಯೋ…ಏನು ಬಳ್ಳಿ ಸ್ವಾಮಿ..ಇದು…” ಎನ್ನುತ್ತಾ ಅಚ್ಚರಿಯನ್ನು ವ್ಯಕ್ತ ಪಡಿಸುತ್ತಲೇ ಇರುತ್ತಾನೆ.

ಸುಶ್ರುತನ ವೈದ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ವಿವರಗಳು ಸಿಗುತ್ತವೆ. ಸುಶ್ರುತನ ವೈದ್ಯಶಾಸ್ತ್ರದ ಆಧಾರದಂತೆ ಇದರ ಎಲೆಗಳು ಕುಷ್ಠವನ್ನೂ, ಜ್ವರವನ್ನೂ ನಿವಾರಿಸಬಲ್ಲ ಗುಣವನ್ನು ಹೊಂದಿವೆ. ಸಾಮಾನ್ಯವಾಗಿ ಹಸಿರು ಕಾಂಡವು ಹೆಚ್ಚು ಉಪಕಾರಿ. ಕಾಂಡದಿಂದ ತಯಾರಿಸಿದ ಕಷಾಯ ಅಥವಾ ಟಾನಿಕ್ ಗೆ ಮೂತ್ರವರ್ಧಕ, ಕಫನಿವಾರಕ, ಭೇದಿ ನಿವಾರಕ ಗುಣಗಳಿವೆ. ಮೂಲವ್ಯಾದಿಗೂ ಉಪಶಮನಕಾರಿ. ಈ ಬಳ್ಳಿಗೆ ವಾಂತಿಯನ್ನು ತರಿಸಬಲ್ಲ ಗುಣವೂ ಇದೆ. ಜೊತೆಗೆ ನಂಜು ನಿವಾರಣೆಯಲ್ಲೂ ಇದನ್ನು ಬಳಸಲಾಗುತ್ತದೆ. ಕಾಂಡವನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಸುಲಭವಾಗಿ ಜ್ವರಹಾರಿಯಾಗಿ ಬಳಸಬಹುದು. ಬೇವಿನ ಮರಕ್ಕೆ ಹಬ್ಬಿದ ಬಳ್ಳಿಗೆ ಹೆಚ್ಚು ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಇಂತಹಾ ಬಳ್ಳಿಯನ್ನು “ನೀಮ್ ಗುಡಾಚಿ” ಎನ್ನುತ್ತಾರೆ. ಗುಡಾಚಿ ಎಂಬುದು ಸಂಸ್ಕೃತದ ಹೆಸರು. ಹಿಂದಿಯಲ್ಲೂ ಹಾಗೇ ಕರೆಯುತ್ತಾರೆ. ನನ್ನ ಗೆಳೆಯರಲ್ಲಿ ಕೆಲವು ಸೂಕ್ಷ್ಮ ಮನಸ್ಸಿನವರು ಇದರ ಎಲೆಗಳಲ್ಲಿ ವಿವಿಧ ಕಾಲಗಳಲ್ಲಿ ವಿವಿಧ ರುಚಿಗಳನ್ನು ಕಂಡುಕೊಂಡಿದ್ದಾರೆ. ಹಣ್ಣುಗಳಂತೂ ಕೆಂಪು ರಂಗಿನಿಂದ ಕಂಗೊಳಿಸುತ್ತವೆ. ಹಸಿರಿನ ಬಳ್ಳಿಯಲ್ಲಿ ಕೆಂಪು ಹಣ್ಣುಗಳ ಚಿತ್ರವೇ ಮನಸ್ಸಿಗೆ ಮುದಕೊಡುತ್ತದೆ.

ಬೆಳೆಸುವುದು ಸುಲಭ ಎಂದೆನಲ್ಲವೇ? ಗೆಳೆಯರೊಬ್ಬರ ಮನೆಯಲ್ಲಿ ಹೀಗಾಯಿತು. ಹಿತ್ತಿಲ ಕೈತೋಟವನ್ನು ಸ್ವಚ್ಛ ಮಾಡಲೆಂದು ಕಳೆಯನ್ನೆಲ್ಲಾ ಕೀಳುತ್ತಿದ್ದರು. ಯಾವುದೋ ಬಳ್ಳಿ ಬೆಳೆದಿದೆ, ಎಂದುಕೊಂಡು ಕಿತ್ತು, ತುಂಡು-ತುಂಡು ಮಾಡಿ ಮತ್ತವರದೇ ಬೇಲಿಗೆ ಎಸೆದರು. ನಂತರ ಅಯ್ಯೋ…. ಅದು ಅಮೃತಬಳ್ಳಿಯಂತೆ ಅಂದುಕೊಂಡು ಪಶ್ಚಾತ್ತಾಪಪಟ್ಟರು. ಹತ್ತು-ಹನ್ನೆರಡು ದಿನ ಬಿಟ್ಟು ನೋಡಿದರೆ, ಕಿತ್ತು ತುಂಡು ಮಾಡಿ ಎಸೆದ ತುಂಡುಗಳೆಲ್ಲಾ ನೆಲಕ್ಕೆ ಆತುಕೊಂಡು ಗಿಡವಾಗಿ ಬೆಳೆಯಲಾರಂಭಿಸಿದ್ದವು. ಹೀಗೆ ತುಂಬಾ ಸುಲಭ.

ನಮಸ್ಕಾರ

ಚನ್ನೇಶ್

This Post Has 2 Comments

  1. Sreepathi

    Our nighber has this AMRUT balli. It always grows over our Jasmine plant. Once in a while I cut this!

  2. ಬನು

    ಮಾಹಿತಿ ಪೂರ್ಣ ಆಪ್ತ ಲೇಖನ

Leave a Reply