You are currently viewing Oh It’s “Family” Matter Please! -ಸಸ್ಯ”ಕುಟುಂಬ”ಗಳ ಸಂಕಥನ

Oh It’s “Family” Matter Please! -ಸಸ್ಯ”ಕುಟುಂಬ”ಗಳ ಸಂಕಥನ

ನಮ್ಮ ಸುತ್ತ-ಮುತ್ತಲಿನ ಸಸ್ಯ ಜಗತ್ತಿನಲ್ಲಿ ಕಾಣುವ ಗಿಡ-ಮರಗಳಲ್ಲಿ ಕೆಲವು ನೆಲಕ್ಕೆ ಆತುಕೊಂಡು ಹಬ್ಬುವಂತಹವು, ಕೆಲವು ತುಸು ಮೇಲಕ್ಕೆದ್ದ ಗಿಡಗಳು, ಮತ್ತೆ ಕೆಲವು ಆಳೆತ್ತರದ ದೊಡ್ಡ ಗಿಡಗಳು, ಕೆಲವು ಪೊದೆಗಳು, ಹಾಗೇನೆ ಮರಗಳು, ಅವುಗಳಲ್ಲದೆ ಹೆಮ್ಮರಗಳು ಹಲವು! ಹೀಗೆ ವಿವಿಧತೆಯಲ್ಲಿ ಅಗಾಧತೆಯನ್ನೂ ವಿಕಾಸಗೊಳಿಸಿಕೊಂಡ ಜೀವಿಗಳ ಲೋಕ ಸಸ್ಯಜಗತ್ತಿನದು. ನಮ್ಮ ಸಾಧಾರಣ ಅವಲೋಕನಕ್ಕೆ ಬಹುಪಾಲು ಗಿಡ-ಮರಗಳು ಹೂವುಗಳನ್ನು ಬಿಡುವಂತಹವೇ! ಆದರೆ, ಕೆಲವು ಹೂವುಗಳನ್ನೇ ಬಿಡದಂತಹವೂ ಇವೆ. ಕೆಲವಂತೂ ಹೂವು ಬಿಟ್ಟೂ ಕಾಯಿಗಳಲ್ಲಿ ಬೀಜವಿರುವ ಭಾಗಗಳ ವಿನ್ಯಾಸದಲ್ಲಿ ಭಿನ್ನತೆಯನ್ನು ಹೊಂದಿರುವಂತಹವು ಇವೆ. ಮೂಲತಃ ಎಲ್ಲಾ ಸಸ್ಯಸಂಕುಲಗಳು ನೆಲವನ್ನೇ ನಂಬಿ ಮೊಳೆತಲ್ಲೇ ಮಣ್ಣಿಗೆ ತಳ ಊರಿ ಬೇರು ಬಿಟ್ಟು, ಅದೇ ತಾವನ್ನೇ ನಂಬಿ ಬದುಕನ್ನು ಸವೆಸುತ್ತವೆ. ಬೇಕಾದುದನ್ನು ನೆಲದಿಂದ ಪಡೆಯುತ್ತಾ, ನೆಲಕ್ಕೂ ಕೊಡುತ್ತಲೇ ಇತಿಹಾಸವನ್ನು ಸೃಜಿಸುತ್ತಲೇ ಬೆಳೆದಿವೆ. ಅವುಗಳಲ್ಲೂ ಸಾಮ್ಯತೆ, ಹೊಂದಾಣಿಕೆ, ಅನ್ಯೋನ್ಯತೆ, ಮುಂತಾದವುಗಳ ವಿಕಾಸದಿಂದ ನಮ್ಮ ಅರಿವಿಗೆ ಬಂದಿವೆ. ಇವೆಲ್ಲವನ್ನೂ ಅಧ್ಯಯನಿಸಿ, ತರ್ಕಿಸಿ, ಅವುಗಳ ಕುರಿತ ನಮ್ಮ ತಿಳಿವನ್ನು ಹೆಚ್ಚಿಸಲು ನೂರಾರು ದಾರ್ಶನಿಕರ, ವಿಜ್ಞಾನಿಗಳ ಶ್ರಮ ನೆರವಾಗಿದೆ. ಜೊತೆಗೆ ಯಾವ ಹೆಸರನ್ನೂ ಉಳಿಸದೆಯೆ ನಿಭಾಯಿಸಿದ ಅಪಾರ ಮಾನವ ಸಮುದಾಯ ಕೂಡ ಅದರೊಟ್ಟಿಗಿದೆ.

                ಪ್ರಮುಖವಾಗಿ ನೆಲವನ್ನೇ ನಂಬಿ ಬೆಳೆವ ಬದುಕು ಸಸ್ಯಗಳದ್ದಾದ್ದರಿಂದ, ನೆಲದಿಂದ ಜೀವನ ಪಡೆಯುವ ಅನುಕೂಲಕ್ಕಾಗಿ ವಿಕಾಸಗೊಳಿಸಿಕೊಂಡ ಹೀರುಗೊಳವೆಗಳಿರುವ ಹಾಗೂ ಹೀರುಗೊಳವೆಗಳು ಇಲ್ಲದಿರುವ ಬಗೆಗಳೆಂದು ವಿಂಗಡಿಸಲಾಗಿದೆ. ಹೀರುಗೊಳವೆಗಳಿರುವ ಸಸ್ಯಗಳಲ್ಲಿ ಹೂವುಗಳನ್ನು ಬಿಡುವ-ಬಿಡದಿರುವ ಎಂಬೆರಡು ಬಗೆಗಳು. ಹೀರುಗೊಳವೆಗಳಿಲ್ಲದಿರುವ ಸಸ್ಯಗಳು ಬದುಕಿನ ಅವಶ್ಯಕತೆಗಳಿಗೆ ತಮ್ಮೆಲ್ಲಾ ಜೀವಿ-ಕೋಶಗಳನ್ನೇ ಇಡಿಯಾಗಿ ಬಳಸಿಕೊಂಡು ಜೀವನ ನಡೆಸುವಂತಹವು. ಹೀರುಗೊಳವೆಗಳಿದ್ದೂ ಹೂವುಗಳನ್ನು ಬಿಡದ ಫರ್ನ್‍-ಗಳಂತಹಾ ಸಸ್ಯಗಳ ವಂಶಾಭಿವೃದ್ಧಿಯು ಅಲೈಂಗಿಕವಾದುದು. ಹೂವನ್ನು ಬಿಟ್ಟೂ ಬೀಜಗಳಿಗೆ ಹೊದಿಕೆಗಳನ್ನು ಕಾಯಿಗಳಲ್ಲಿ ಕೊಡುವ ಹಾಗೂ ಕೊಡದಿರುವ ಎರಡು ಬಗೆಗಳೂ ಇವೆ. ಆವೃತ ಬೀಜ ಸಸ್ಯಗಳು (ಆಂಜಿಯೊಸ್ಪರ್ಮ್‍) ಮತ್ತು ಅನಾವೃತ ಬೀಜ (ಜಿಮ್ನೊಸ್ಪರ್ಮ್‍) ಸಸ್ಯಗಳು ಎಂದು ಹೆಸರಿಸುವ ಅವುಗಳು ಸಸ್ಯಪ್ರಪಂಚದ ಅತಿದೊಡ್ಡ ಸಂಖ್ಯೆಯಲ್ಲಿವೆ. ಅದರಲ್ಲೂ ನಮ್ಮ ಕಣ್ಣೆದುರಿನ ಹೂಬಿಡುವ-ಬೀಜಗಟ್ಟುವ ಸಸ್ಯಸಾಮ್ರಾಜ್ಯವು ಸುಮಾರು ಮೂರುವರೆ ಲಕ್ಷ ಪ್ರಭೇದಗಳನ್ನು ಒಳಗೊಂಡಿದೆ ಎಂಬ ಅಂದಾಜಿದೆ. ಇಡೀ ಭೂಮಿಯ ಹಸಿರಿನ ಹೊದಿಕೆಯ ಗಿಡ-ಮರಗಳ ಪ್ರತಿಶತ 80ರಷ್ಟನ್ನು ಈ ಹೂವು ಬಿಡುವ ಗುಂಪಿನ ಸಸ್ಯಜಗತ್ತೇ ಒಳಗೊಂಡಿದೆ. ನಮಗೆ ಹೆಚ್ಚು ಪರಿಚಿತವಾಗಿರುವ ಈ ಹೂವುಗಳನ್ನು ಬಿಡುವ ಸಸ್ಯಜಗತ್ತಿನ ಸಂಬಂಧಗಳ ಒಳಗೊಂಡ ಗುಂಪುಗಳ ಸಂಕಥನ ಇಲ್ಲಿದೆ.

                ನಮ್ಮಲ್ಲೆಲ್ಲಾ ಹೇಗೆ, ಸಂಬಂಧಿಗಳು, ಬಂಧು-ಭಾಂದವರು, ಮನೆಯವರು, ಒಂದೇ ಕುಟುಂಬದವರು ಅಂತೆಲ್ಲಾ ಅಂದುಕೊಳ್ಳುತ್ತೇವೋ ಹಾಗೇಯೇ, ಸಸ್ಯಲೋಕದಲ್ಲೂ ಒಂದಕ್ಕೊಂದು ಸಂಬಂಧವುಳ್ಳ ಸಸ್ಯಗಳಿವೆ. ಅವುಗಳನ್ನೂ ಕುಟುಂಬಗಳಾಗಿ ವಿಂಗಡಿಸಿ ಸಂಬಂಧಗಳನ್ನು ಅರಿಯುವ ಇತಿಹಾಸ ಶತಮಾನಗಳ ಕಾಲ ನಡೆದಿದೆ. ಸಾಕಷ್ಟು ಹಳೆಯ ಕಥನಗಳಲ್ಲಿ ಸಸ್ಯ ಜಗತ್ತಿನ ಸಂಬಂಧಿಕರ ಸಮೀಕರಿಸಿ ಅರಿಯುವ ಹಾಗೂ ಅವುಗಳ ಸಂಕರಗಳಲ್ಲಿ ಸಂಬಂಧಗಳ ತಿಳಿಯುವ ಮಹತ್ವಗಳಿವೆ. ಎಲ್ಲಾ ಬಗೆಯ ಸಸ್ಯಗಳನ್ನೂ ಸೇರಿಸಿ ಇಂತಹಾ ಒಟ್ಟು 620 ಕುಟುಂಬಗಳಾಗಿ ಇಡೀ ಸಸ್ಯಜಗತ್ತನ್ನು ವರ್ಗೀಕರಿಸಲಾಗಿದೆ. ಇವೆಲ್ಲವೂ ಸುಮಾರು 16,167 ಸಂಕುಲ(ಜೆನೆರಾ)ಗಳಾಗಿ ಹೆಸರಿಸಲಾಗಿದೆ. ಅದರಲ್ಲಿ ಹೂವುಗಳನ್ನು ಬಿಡುವ ಸಸ್ಯಗಳ ಕುಟುಂಬಗಳ ಸಂಖ್ಯೆಯು 406 ಇದ್ದು ಅವುಗಳಲ್ಲಿ 14,038 ಸಂಕುಲಗಳಿವೆ.  ಹೂವುಗಳನ್ನು ಬಿಡುವ ಸಸ್ಯಗಳ ಒಟ್ಟು ಪಟ್ಟಿಯಲ್ಲಿ ಸುಮಾರು 10ಲಕ್ಷವನ್ನು ಮೀರಿ ಹೆಸರುಗಳಿವೆ. ಆದರೆ ಅವುಗಳಲ್ಲಿ ಬಹುಪಾಲು ಹೆಸರುಗಳು ಮರುಕಳಿಕೆಯಾಗಿವೆ, ಹಲವಕ್ಕೆ ಮತ್ತೆ ಮತ್ತೆ ಹೆಸರುಗಳನ್ನಿಟ್ಟು ಕರೆಯಲಾಗಿದೆ. ಅಂತೂ ಒಪ್ಪಿಕೊಂಡ ಪಟ್ಟಿಯಲ್ಲಿ ಏನಿಲ್ಲವೆಂದರೂ 2.75 ಲಕ್ಷ ದ್ವಿನಾಮದ ವಿವರಗಳಿವೆ. ಪ್ರತಿ ಜೀವಿಯನ್ನೂ ಸಂಕುಲ/ಜಾತಿ ಮತ್ತು ಪ್ರಭೇದಗಳಿಂದ ಗುರುತಿಸುವ ರೂಢಿಯಿದ್ದು ಎರಡು ಹೆಸರುಗಳನ್ನು ಹೊತ್ತಿವೆ.

                ಹಲವು ಸಂಕುಲಗಳನ್ನು ಒಂದು ಮಾಡಿ ಕುಟುಂಬಗಳೆಂದು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಸುಮಾರು 8 ಸ್ತರಗಳ ವರ್ಗೀಕರಣದ ಗುಂಪುಗಳಲ್ಲಿ ಕುಟುಂಬವು ಕೆಳಗಿನಿಂದ ಮೂರನೆಯದು ಹೆಚ್ಚೂ ಕಡಿಮೆ ಮಧ್ಯದ್ದು, ಹಾಗೇಯೆ ತುಂಬಾ ಪ್ರಮುಖವಾದದ್ದು ಕೂಡ!. ವರ್ಗೀಕರಣ ವಿಜ್ಞಾನದಲ್ಲಿ ಕುಟುಂಬಕ್ಕೆ ಪ್ರಮುಖ ಸ್ಥಾನ. ಅನೇಕ ಸಸ್ಯಗಳನ್ನು ಒಂದಕ್ಕೊಂದು ಸಮೀಕರಿಸುತ್ತಾ ಸಂಬಂಧಗಳ ಅರಿವಿನಿಂದ ಅವುಗಳನ್ನು ಆಪ್ತವಲಯಕ್ಕೆ ತಂದುಕೊಳ್ಳುವುದು ಮಾನವ ಕುಲದ ಬೌದ್ಧಿಕ ಚರ್ಚೆಗಳ ಸಂಗತಿಗಳಲ್ಲೊಂದು. ಹಾಗಾಗಿ ಬಹುಪಾಲು ಕುಟುಂಬಗಳನ್ನು ಒಂದು ಗೊತ್ತಾದ ಅಥವಾ ಕೆಲವು ಸಹಜವಾದ ಪ್ರಭೇದಗಳಿಂದ ಗುರುತಿಸುತ್ತಾರೆ. ಉದಾಹರಣೆಗೆ “ಮಾಲ್ವೇಸಿಯೆ” ಕುಟುಂಬವನ್ನು ಹತ್ತಿಯ ಕುಟುಂಬವೆಂದು, “ಸೊಲನೇಸಿಯೆ” ಕುಟುಂಬವನ್ನು ಆಲೂ ಅಥವಾ ಟೊಮ್ಯಾಟೊ ಕುಟುಂಬವೆಂದು ಕರೆಯುವುದುಂಟು. “ಅಸ್ಟಿರೇಸಿಯೆ” ಕುಟುಂಬವನ್ನು ಸೂರ್ಯಕಾಂತಿಯ ಅಥವಾ ಸೇವಂತಿಗೆಯ ಕುಟುಂಬವೆಂದೂ, “ರೂಟೇಸಿಯೆ” ಗೆ ಸಿಟ್ರಸ್ ಅಥವಾ ಕಿತ್ತಳೆಯ ಕುಂಟುಂಬವೆಂದು ಕರೆಯುತ್ತಾರೆ. ಎಲ್ಲಾ ಹುಲ್ಲಿನ ಜಾತಿಯ ಭತ್ತ, ಜೋಳ, ಗೋಧಿ ಮುಂತಾದವನ್ನು “ಪೊಯೇಸಿಯೆ” ಕುಟುಂಬದಡಿ ವರ್ಗೀಕರಿಸಲಾಗಿದೆ. ಲೆಗ್ಯೂಮ್ ಜಾತಿಯ ಗಿಡ-ಮರಗಳನ್ನೆಲ್ಲಾ ಫ್ಯಾಬೇಸಿಯೆ” ಕುಟುಂಬವಾಗಿ ವಿಂಗಡಿಸಿದ್ದಾರೆ. ಕೆಲವು ಗೊತ್ತಾದ ಗುಣ-ಲಕ್ಷಣವನ್ನು ನೆನಪಿಟ್ಟು ಗುರುತಿಸುವ ಅನುಕೂಲಕ್ಕಾಗಿ.  ಹೀಗೆ ಒಂದೊಂದು ಗಿಡ-ಮರದಿಂದ ಗುರುತಿಸಲಾಗುತ್ತದೆ. 

                ಹೂವುಗಳನ್ನು ಬಿಡುವ ಒಟ್ಟು 406 ಸಸ್ಯ ಕುಟುಂಬಗಳ ಸುಮಾರು 3 ಲಕ್ಷ ಪ್ರಭೇದಗಳಿದ್ದು, ಅವುಗಳಲ್ಲಿ ಸುಮಾರು ಅರ್ಧದಷ್ಟು ಸಸ್ಯಗಳು ಕೇವಲ 15 ಕುಟುಂಬಗಳಲ್ಲಿವೆ. ಅದರಲ್ಲೂ ಮೂರು ಸಸ್ಯಕುಟುಂಬಗಳು ಸುಮಾರು ಕಾಲು ಭಾಗ ಪ್ರಭೇದಗಳನ್ನು ಒಳಗೊಂಡಿವೆ. ಆ ಕುಟುಂಬಗಳೆಂದರೆ ಅತಿ ದೊಡ್ಡ ಕುಟುಂಬವಾದ “ಅಸ್ಟೆರೇಸಿಯೆ”, ಆರ್ಕಿಡ್ಗಳನ್ನು ಒಳಗೊಂಡ ಕುಟುಂಬ “ಆರ್ಕಿಡೇಸಿಯೆ” ಹಾಗೂ ಲೆಗ್ಯೂಮ್ ಕುಟುಂಬವಾದ “ಫ್ಯಾಬೇಸಿಯೆ”. ಇವು ಮೂರೂ ಅನುಕ್ರಮವಾಗಿ ಪ್ರತಿಶತ 9, 8 ಮತ್ತು 6ರಷ್ಟು ಸಂಖ್ಯೆಯ ಪ್ರಭೇದಗಳನ್ನು ಹೊಂದಿವೆ. 

                ಯಾವುದೇ ಸಸ್ಯವನ್ನು ವರ್ಗೀಕರಣ ಮಾಡುವಾಗ ಸಹಜವಾಗಿ ಅದು ಇಂತಹಾ ಕುಟುಂಬದ ಗಿಡ-ಮರ ಎಂದೇ ಹೇಳಲಾಗುತ್ತದೆ. ಈ ಹಿಂದೆ ಹೇಳಿದಂತೆ “ಆಸ್ಟಿರೇಸಿಯೆ” ಅನ್ನು ಸೂರ್ಯಕಾಂತಿಯ ಕುಟುಂಬ ಎನ್ನುತ್ತೇವೆ. ಹೆಚ್ಚೂ ಕಡಿಮೆ ಸೂರ್ಯಕಾಂತಿಯ ಹೂವನ್ನು ನೆನಪಿನಲ್ಲಿಟ್ಟುಕೊಂಡರೆ, ಈ ಕುಟುಂಬದ ಬಹುಪಾಲು ಸಸ್ಯಗಳ ಹೂವನ್ನು ನೋಡಿ ಸಸ್ಯವನ್ನು ಇದೇ ಕುಟುಂಬಕ್ಕೆ ಸೇರಿದ್ದು ಎನ್ನಬಹುದು. ಅದರಂತೆಯೇ ಹೋಲಿಕೆಯಿದ್ದು, ಆದರೆ ವಿಭಿನ್ನ ಗಾತ್ರದ ಹೂವುಗಳನ್ನು ಈ ಕುಟುಂಬದ ಇತರೆ ಪ್ರಭೇದಗಳು ಹೊಂದಿವೆ. ಈ ಕುಟುಂಬದಲ್ಲಿ ಒಟ್ಟು 32,913 ಪ್ರಭೇದಗಳಿವೆ. ಇವುಗಳಲ್ಲಿ ಸೇವಂತಿಗೆ, ಚೆಂಡು ಹೂ, ಹುಚ್ಚೆಳ್ಳು ಅಥವಾ ಕುರಶಣಿ, ಮುಂತಾದವೂ ಸೇರಿವೆ. ನಮ್ಮ ಆಹಾರದ ಬಹುಪಾಲು ಭಾಗವನ್ನು ಹಾಗೂ ನಮ್ಮ ಆರ್ಥಿಕತೆಯ ಜವಾಬ್ದಾರಿಯನ್ನೂ ಹೊತ್ತಿರುವ ಪ್ರಮುಖ ಸಸ್ಯ ಕುಟುಂಬವಾದ “ಸೊಲನೇಸಿಯೆ” ಅನ್ನು ಕೆಲವು ವಿವರಗಳಿಂದ ತಿಳಿಯೋಣ.

ಅಪಾರ ವೈವಿಧ್ಯ ಉಪಕಾರಗಳ ಸಸ್ಯ ಕುಟುಂಬಸೊಲನೇಸಿಯೆ

                ನಮ್ಮ ಅಡುಗೆ ಮನೆಯ ಖಾಯಂ ಸದಸ್ಯರಾದ ಮೆಣಸಿನಕಾಯಿ, ಟೊಮ್ಯಾಟೊ, ಆಲೂಗಡ್ಡೆ, ಬದನೆ, ಅಷ್ಟೇಕೆ ನಮ್ಮ ತಲುಬಿನ ತಂಬಾಕು ಇವೆಲ್ಲವೂ ಸಂಬಂಧಿಗಳಾದ ಸಸ್ಯಗಳು, ಒಂದೇ ಕುಟುಂಬದವು ಎಂದರೆ ಅಚ್ಚರಿಯಾಗುವುದಲ್ಲವೇ? ನಿಜ, ನಮ್ಮ ಆಹಾರದ ಹಲವು ಪ್ರಮುಖ ಸಸ್ಯಗಳನ್ನು ಒಳಗೊಂಡಿರುವ ಈ ಕುಟುಂಬವು ಮಾನವಕುಲದ ಬಹುತೇಕ ಆರ್ಥಿಕ ಬೆಳೆಗಳನ್ನು ಒಳಗೊಂಡಿದೆ. ಈ ಕುಟುಂಬದ ಸಸ್ಯಗಳಲ್ಲಿ ಗಿಡಗಳಿವೆ, ಮರಗಳಿವೆ, ಬಳ್ಳಿಗಳಿವೆ, ಮರ-ಬಳ್ಳಿಯೂ ಇದೆ. ವೈವಿಧ್ಯಮಯ ಇಕಾಲಜಿಯನ್ನು ಆವರಿಸಿರುವ ಈ ಕುಟುಂಬದ ಸಸ್ಯಗಳು ಉತ್ತರದ ಅಂಟಾಟಿ೯ಕವನ್ನು ಹೊರತುಪಡಿಸಿ ಜಗತ್ತಿನ ಎಲ್ಲಾ ನೆಲವನ್ನೂ ಆಕ್ರಮಿಸಿವೆ. ಬಹು-ಪಾಲು ವೈವಿಧ್ಯತೆಯು ದಕ್ಷಿಣ ಅಮೆರಿಕಾ ಹಾಗೂ ಮಧ್ಯ ಅಮೆರಿಕಾದ ಪ್ರದೇಶಗಳನ್ನು ಒಳಗೊಂಡಿವೆ. ಹಾಗಾಗಿಯೇ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ ಎಂದು ಬಿ.ಜಿ.ಎಲ್. ಸ್ವಾಮಿಯವರು ಕರೆಯಲು ಈ ಕುಟುಂಬದ ಪಾಲು ಬಹಳ ದೊಡ್ಡದಿದೆ.

                ಮಾನವ ಕುಲದ ಆರ್ಥಿಕತೆಯನ್ನು ಬದಲಿಸಿರುವ ಬೆಳೆಗಳಲ್ಲಿ ಐದು ಪ್ರಮುಖವಾದ ಬೆಳೆಗಳಿವೆ. ಅವುಗಳೆಂದರೆ, ಆಲೂಗಡ್ಡೆ, ತಂಬಾಕು, ಕಬ್ಬು, ಹತ್ತಿ ಹಾಗೂ ಚಹಾ. ಇವುಗಳಲ್ಲಿ ಎರಡು ಸೊಲನೇಸಿಯೆ ಕುಟುಂಬದಲ್ಲೇ ಇವೆ. ಆಲೂ ಮತ್ತು ತಂಬಾಕು. ಆಲೂ ಆಪ್ತವಾದ ಆಹಾರದ ಬೆಳೆ. ತಂಬಾಕು ಮೈಯೆಲ್ಲಾ ಅಮಲನ್ನು ತುಂಬಿಕೊಂಡ ತಲುಬಿನ ಬೆಳೆ. ಇವೆರಡೂ ಸಂಬಂಧಿಗಳಾ? ಹೌದು! ಎರಡೂ ಒಂದೇ ಕುಟುಂಬದ ಸಸ್ಯಗಳೇ!. ಈ ಕುಟುಂಬದ ಸಸ್ಯಗಳಲ್ಲಿ ಅನೇಕ ಸದಸ್ಯರು ಕೃಷಿಗೆ ಒಳಗಾಗಿವೆ. ಹತ್ತಾರು ಔಷಧಿ ಸಸ್ಯಗಳಿವೆ, ಸಂಬಾರು ಬೆಳೆಗಳಿವೆ. ಅಲಂಕಾರಿಕ ಸಸ್ಯಗಳಿವೆ, ಕಳೆಗಳಿವೆ, ಹಲವಾರು ಸಸ್ಯಗಳ ಮೈಯಲ್ಲಿ ಅಲ್ಕಾಲಾಯ್ಡುಗಳು ತುಂಬಿಕೊಂಡಿವೆ. ಕೆಲವಂತೂ ವಿಷಕಾರಿಯಾಗಿವೆ. ಹೀಗೆ ಇಷ್ಟೊಂದು ವೈವಿಧ್ಯಮಯ ಸಸ್ಯ ಕುಟುಂಬ ಅಪರೂಪದ್ದು. ಹಾಗಾಗಿ ಮಾನವ ಕುಲವನ್ನು ನಿಭಾಯಿಸುವಲ್ಲಿ ಸೊಲನೇಸಿಯೆ ಕುಟುಂಬದ ಪಾತ್ರವಂತೂ ಬಹಳ ದೊಡ್ಡದಿದೆ. ಈ ಕುಟುಂಬದಲ್ಲಿ 98 ಸಂಕುಲಗಳಾಗಿ ವಿಭಾಗಿಸಿದ 2700ಕ್ಕೂ ಹೆಚ್ಚು ಪ್ರಭೇದಗಳಿವೆ. ನಮ್ಮ ದೇಶದಲ್ಲಿ 21 ಸಂಕುಲಗಳ 70 ಪ್ರಭೇದಗಳಿವೆ. 

                ಬಳಕೆಯ ದೃಷ್ಟಿಯಿಂದ ಸಿಹಿ-ಕಹಿ, ಖಾರ-ಪರಿಮಳ, ಹುಳಿ-ಕಹಿಯ ರುಚಿಗಳನ್ನೆಲ್ಲಾ ಒಳಗೊಂಡ ಕುಟುಂಬವಿದು. ವಿಷವನ್ನೂ ತನ್ನೊಳಗಿರಿಸಿಕೊಂಡ ದತ್ತೂರ ಸಹಾ ಇದೇ ಕುಟುಂಬದ ಸಸ್ಯ. ಆಲೂಗಡ್ಡೆಯಲ್ಲಿ ಸಿಹಿಯ ಪಿಷ್ಠವಿದ್ದರೆ, ಮೆಣಸಿನಕಾಯಿಗಳಲ್ಲಿ ಖಾರ ತುಂಬಿಕೊಂಡಿದೆ. ಟೊಮ್ಯಾಟೊಗಳಲ್ಲಿ ಹುಳಿ-ಸಿಹಿಯ ಮಿಶ್ರಣವು ಮನೆ ಮಾಡಿದೆ. ಎಲ್ಲವನ್ನೂ ಮೆದ್ದಾದ ಮೇಲಿನ ಅಮಲಿಗೆ ಸೇರಿಕೊಳ್ಳುವ ತಂಬಾಕು ಕೂಡ ಇದೇ ಕುಟುಂಬದಲ್ಲಿದೆ. ಭಾರತೀಯ ತರಕಾರಿಗಳಲ್ಲಿ ದೇಶದ ಉದ್ದಗಲಕ್ಕೂ ಹಬ್ಬಿಕೊಂಡ ಬದನೆ, ಇಂಡಿಯನ್ ಜಿನ್-ಸೆಂಗ್ ಎಂದೇ ಹೆಸರಾದ “ಅಶ್ವಗಂಧ” ಔಷಧ ಸಸ್ಯವೂ ಇದೇ ಕುಟುಂಬದ ಸಸ್ಯಗಳೇ! ಈ ಕುಟುಂಬದಲ್ಲಿನ ಅಗಾಧ ಪ್ರಭೇದಗಳಲ್ಲಿ ಹೆಚ್ಚೂ-ಕಡಿಮೆ ಅರ್ಧದಷ್ಟು ‘ಸೊಲಾನಮ್’ ಎಂಬ ಒಂದೇ ಸಂಕುಲಕ್ಕೆ ಸೇರಿಸಲಾಗಿದೆ. ನಮ್ಮ ತಾಟಿನ ಬಹುಭಾಗದ ತರಕಾರಿಗಳು ಇದೇ ಸಂಕುಲದವು. ಬದನೆ, ಆಲೂಗಡ್ಡೆ, ಟೊಮ್ಯಾಟೊ ಎಲ್ಲವೂ ಇದೇ ಸಂಕುಲದವು. ವಿಷ ತುಂಬಿದ ದತ್ತೂರ ಕೂಡ ಇದೇ ಕುಟುಂಬದ್ದು. ದತ್ತೂರ ಸಂಕುಲದಲ್ಲಿ 9 ಸಸ್ಯಗಳಿದ್ದು, ಅವುಗಳೆಲ್ಲವೂ ವಿಷವನ್ನು ಹೊಂದಿವೆ. ಈ ಸಸ್ಯಗಳ ಎಲ್ಲಾ ಭಾಗಗಳೂ ವಿಷವನ್ನು ಒಳಗೊಂಡಿದ್ದು, ಗೊತ್ತಾದ ಪ್ರಮಾಣದಲ್ಲಿ ಔಷಧವಾಗಿಯೂ ಬಳಕೆಯಾಗುತ್ತವೆ. ಅದರಲ್ಲೂ ಬೀಜಗಳು ತುಂಬಾ ವಿಷಕಾರಿ. ಹೂವುಗಳು ಸುಂದರವಾಗಿದ್ದು ಸಂಜೆಯಲ್ಲಿ ಆಕರ್ಷಕವಾಗಿ ಕಾಣುತ್ತಿದ್ದು. ಬೆಳದಿಂಗಳಲ್ಲಿ ಮೋಹಕವಾಗಿ ಕಾಣುವ ಆದರೆ ವಿಷವುಳ್ಳದ್ದರಿಂದ “ರಾತ್ರಿ-ಪರಿಮಳ”ದ ಪುಷ್ಪವೆನ್ನುತ್ತಾರೆ. ಕೆಲವೊಂದು ಸಮುದಾಯಗಳು ಮುಳ್ಳಿನ ಸೇಬು ಎಂದೂ ಕರೆಯುತ್ತಾರೆ. ಬೆಳದಿಂಗಳಿನ ರಾತ್ರಿಯ ಮಾಸಲು ಕತ್ತಲಿನಲ್ಲಿ ಹೊಳೆಯುವ ಬೆರಗಿಗೆ ಮೋಹಿನಿಯ ಹೆಸರಿಟ್ಟು ಭಯದ ರೂಪಕಗಳಿವೆಯಲ್ಲಾ ಅವು ಇದಕ್ಕೆ ಅನ್ವರ್ಥವಾಗಿದೆ. 

                ಸೊಲಾನೇಸಿಯೆ ಪದವು ಗ್ರೀಕ್ ಮೂಲದ ಎರವಲು. ಅಲ್ಲಿ ಇದರ ಅರ್ಥ “ನೈಟ್ ಶೇಡ್” ಅಥವಾ “ರಾತ್ರಿಯ ನೆರಳು”. ಇದು ಹೇಗೆ ಬಂದಿತು? – ಎಂಬುದಕ್ಕೆ ವಿವರಗಳಿಲ್ಲ.  ಏಕೆಂದರೆ ರಾತ್ರಿಯ ನೆನಪುಗಳಲ್ಲಿ ಅದರಲ್ಲೂ ಕತ್ತಲಿನ ನೆರಳಿನಲ್ಲಿ ಮಾಯಾವಿಗಳ, ಮಾಂತ್ರಿಕ ಗುರುತುಗಳಿವೆ. ಆದರೆ ಈ ಕುಟುಂಬದಲ್ಲಿ ಆಪ್ತತೆಯ ಸುಳುಹುಗಳೇ ಹೆಚ್ಚಾಗಿವೆ. ಈ ದೃಷ್ಟಿಯಲ್ಲಿ “ರಾತ್ರಿಯ ನೆರಳಿ”ನ ಹೆಸರು ಯಾವುದೇ ಸಂಬಂಧವಿಲ್ಲದ ಮತ್ತು  ಅದಕ್ಕೆ ವಿರುದ್ಧವಾದ ಸಂಗತಿಗಳು ಇದರ ಸಸ್ಯಗಳಲ್ಲಿ ತುಂಬಿಕೊಂಡಿವೆ. ಈ ಕುಟುಂಬದ ಸಸ್ಯಗಳು ಸೌಂದರ್ಯವನ್ನು ತುಂಬಿಕೊಂಡ ಸಸ್ಯಗಳು. ಅದರಲ್ಲೂ ಹೂವುಗಳಂತೂ ಪರ್ಫೆಕ್ಟ್ ಆಕಾರದವು. ಟೊಮ್ಯಾಟೊ, ಬದನೆಯ ಹೂವುಗಳನ್ನು ನೋಡಿರುವವರಿಗೆ ಪರಿಚಯವಿದ್ದೇ ಇರುತ್ತದೆ. ಹೂವುಗಳ ಸಿಮೆಟ್ರಿ ಪರ್ಫೆಕ್ಟ್. ಒಳ್ಳೆ ಸ್ಟಾರ್ ಆಕಾರದ ಹೂವುಗಳು. ಕುಟುಂಬದ ಗಿಡ-ಮರಗಳ ಸಾಮಿಪ್ಯ ಸಿಕ್ಕಂತವರಿಗೆ ಹೂವುಗಳ ಸೌಂದರ್ಯದ ಪರಿಚಯವಿದ್ದೇ ಇರುತ್ತದೆ. ಅಪ್ಪಟ ನಕ್ಷತ್ರಗಳಾಕಾರದ ಹೂವುಗಳು. ಐದು ದಳ, ಐದು ಪುಷ್ಟ ಪಾತ್ರೆಯ ಎಸಳುಗಳು ಇಡೀ ಕುಟುಂಬದ ಸಿಗ್ನೇಚರ್! ಸೌಂದರ್ಯದ ಕಾರಣವಾಗಿ ತುಂಬಾ ಸಮನಾಗಿ 2-4 ಭಾಗಗಳಾಗಿಸಬಹುದು. ಹೀಗೆ ವಿಭಾಗಿಸಿದ ಹೂವಿನ ಪ್ರತೀ ಭಾಗವೂ ಮತ್ತೊಂದರ ಪ್ರತಿ ರೂಪ-ಮಿರರ್ ಇಮೇಜ್! ಇದರ ಸಸ್ಯಗಳ ಎಲ್ಲಾ ಕಾಯಿಗಳಲ್ಲೂ ಪುಷ್ಪಪಾತ್ರೆ (ಕ್ಯಾಲಿಕ್ಸ್) ಅಂಟಿಕೊಂಡಿರುತ್ತದೆ. ಬದನೆಯಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು. ಬದನೆ ಕಾಯಿಯ ತೊಟ್ಟಿನಿಂದ ಐದು ಬೆರಳಿನಂತಹಾ ಹೊದಿಕೆಯೊಂದು ಕಾಯಿಯ ಮೇಲು ಭಾಗವನ್ನು ಅಂಟಿಕೊಂಡಿರುವುದಲ್ಲಾ ಹಾಗೆ! ಸಾಮಾನ್ಯವಾಗಿ ಈ ಕುಟುಂಬದ ಹೂವುಗಳಲ್ಲಿ ಐದು ದಳಗಳು, ಐದು ಎಸಳುಗಳ ಪುಷ್ಪಪಾತ್ರೆ ಇರುತ್ತದೆ. ಗುರುತಿಸುವುದು ಸುಲಭ.

ಈ ಕೆಳಗಿನ 25 ಕುಟುಂಬಗಳನ್ನು ಮಾನವಕುಲದ ಆರ್ಥಿಕತೆ, ಭದ್ರತೆ ಹಾಗೂ ಅವಶ್ಯಕತೆಗಳ ಆಧಾರದಿಂದ “ಟಾಪ್ 25” ಕುಟುಂಬಗಳೆಂದು ಪಟ್ಟಿ ಮಾಡಲಾಗಿದೆ. (ಪಟ್ಟಿಯು (Alphabetic) ಅಕಾರಾದಿಯಾಗಿದ್ದು ರ‍್ಯಾಂಕ್ ಅನ್ನು ಸೂಚಿಸುವುದಿಲ್ಲ)

1) Anacardiaceae – (ಗೋಡಂಬಿ ಮತ್ತು ಮಾವಿನ ಕುಟುಂಬ),  

2) Apiaceae (Umbelliferae)-  ಜೀರಿಗೆ-ಕೊತ್ತಂಬರಿಯ ಕುಟುಂಬ ,

3)  Areaceae (Palmae)  – ತಾಳೆ, ಅಡಿಕೆ ಮತ್ತು ತೆಂಗಿನ ಕುಟುಂಬ

4) Brassicaceae (Cruciferae) –  ಕೋಸು-ಸಾಸಿವೆಯ ಕುಟುಂಬ, 

5) ) Convolvulaceae-   ಸಿಹಿ ಗೆಣಸು  ಹಾಗೂ ಕಸ್ಕ್ಯೂಟಾ ಮುಂತಾದ ಬಳ್ಳಿಗಳ ಕುಟುಂಬ               

6) Cucurbitaceae   – ಸೌತೆ, ಕಲ್ಲಂಗಡಿ, ಮೆಲಾನ್ ಹಾಗೂ ಕುಂಬಳಗಳ  ಕುಟುಂಬ,

7) Dioscoreaceae –    ಯಾಮ್ ಮುಂತಾದ ಗೆಡ್ಡೆಗಳ  ಕುಟುಂಬ  

8) Euphorbiaceae  – ಕ್ರೊಟಾನ್, ಜಟ್ರೋಪಾ ಹಾಗೂ ಹರಳುಗಳನ್ನೊಳಗೊಂಡ ಕುಟುಂಬ 

9) Fabaceae (Leguminosae)  – ಬೀನ್ಸ್ ಕುಟುಂಬ (ಬೇಳೆ-ಕಾಳುಗಳು) 

10) Lamiaceae (Labiatae),   –   ತುಳಸಿ-ಮಿಂಟ್ ಗಳ ಕುಟುಂಬ

11) Lauraceae,  -ದಾಲ್ಚಿನ್ನಿ, ಪಾಲಾವ್ ಎಲೆಗಳ ಕುಟುಂಬ

12) Malvaceae  –  ಬೆಂಡೆ ಹಾಗೂ ಹತ್ತಿಯ ಕುಟುಂಬ,

13) Meliaceae –  ಬೇವಿನ ಕುಟುಂಬ,

14) Moraceae – ಹಿಪ್ಪುನೇರಳೆ  ಹಾಗೂ ಆಲ-ಅತ್ತಿ-ಅರಳಿಯ ಕುಟುಂಬ  ,

15) Musaceae –  ಬಾಳೆಯ ಕುಟುಂಬ 

16) Myrtaceae   – ಪೇರಳೆ ಹಾಗೂ ನೀಲಗಿರಿಯ ಕುಟುಂಬ ,

17) Oleaceae – -ಆಲೀವ್ ಹಾಗೂ ಮಲ್ಲಿಗೆಯ ಕುಟುಂಬ

18) Pinaceae –  ಪೈನ್ ಕೋನಿಫರ್ ಸಸ್ಯಗಳ ಕುಟುಂಬ,

19) Piperaceae,   – ಮೆಣಸಿನಕಾಳು-ವೀಳ್ಯೆಯದೆಲೆಯ ಕುಟುಂಬ

20) Poaceae –  ಅಕ್ಕಿ, ಗೋಧಿ, ರಾಗಿ-ಜೋಳಗಳ ಕುಟುಂಬ,

21) Rosaceae – ಗುಲಾಬಿ,  ಸ್ಟ್ರಾ ಬೆರ್ರಿ, ಪ್ಲಮ್, ಪೀಚ್, ಬಾದಾಮಿ, ಸೇಬುಗಳ  ಕುಟುಂಬ, 

22)  Rubiaceae –  ಕಾಫಿಯ ಕುಟುಂಬ

 24) Solanaceae  – ಆಲೂ- ಟೊಮ್ಯಾಟೊಗಳ ಕುಟುಂಬ

23) Rutaceae -ನಿಂಬೆ, ಕಿತ್ತಳೆಯ ಕುಟುಂಬ                 

25) Vitaceae –  ದ್ರಾಕ್ಷಿಯ  ಕುಟುಂಬ

                ಅಯ್ಯೋ ಇದೆಲ್ಲಾ ಫ್ಯಾಮಿಲಿ ಕಥೆ ಅಲ್ವಾ! ಎಷ್ಟು ಹೇಳಿದ್ರೂ ಮುಗಿಯುವುದೇ ಇಲ್ಲ. ಅದು ಸಸ್ಯಗಳ ವಿಚಾರದಲ್ಲೂ ಹಾಗೆಯೇ! ಎಷ್ಟೇ ಹೇಳಿ, ಮತ್ತಾವುದೋ ಸಂಗತಿಗಳು ಉಳಿದೆ ಇರುತ್ತವೆ. ಆದರೂ ಕೆಲವು ಕಡೆ ಕೆಲವು ಕುಟುಂಬದ ಸಸ್ಯಗಳು ಹೆಚ್ಚು, ಕೆಲವೆಡೆ ಕಡಿಮೆ ಇತ್ಯಾದಿಗಳ ಕುತೂಹಲವಂತೂ ಬೇರೆ ಬೇರೆ ಆಯಾಮಗಳಿಂದ ಆಗಾಗ್ಗೆ ಸಂಶೋಧನೆ ಹಾಗೂ ಅಧ್ಯಯನಗಳಿಗೆ ವಸ್ತುವಾಗುತ್ತಲೇ ಇದೆ. ಪಳೆಯುಳಿಕೆಗಳ ಆಧಾರದಿಂದ ಒಂದಷ್ಟು ಅಧ್ಯಯನಗಳು ನಡೆದಿದ್ದರೂ ಅವುಗಳ ನಿಖರತೆಯಲ್ಲಿ ಅನುಮಾನಗಳು ಸಾಕಷ್ಟಿವೆ. ಸಸ್ಯ ಸಮೃದ್ಧತೆ ಹಾಗೂ ವರ್ಗೀಕರಣ ಅಧ್ಯಯನಕಾರರು ನಿರಂತರವಾಗಿ ಹಲವಾರು ಆಯಾಮಗಳನ್ನು ಇಟ್ಟುಕೊಂಡು ಕೆಲವೇ ಕುಟುಂಬಗಳ ಪ್ರಭೇದಗಳು ಭೌಗೋಳಿಕವಾಗಿ ಹಬ್ಬಿರುವ ಕುತೂಹಲಕ್ಕೆ ಮನಸೋಲುತ್ತಲೇ ಇದ್ದಾರೆ. ಪ್ರಮುಖವಾಗಿ ಪರಾಗಸ್ಪರ್ಶ, ಬೀಜ ಪ್ರಸಾರ, ಸಸ್ಯಗಳ ಬೆಳವಣಿಗೆಯ ವಿವಿಧತೆ ಹಾಗೂ ಭೌಗೋಳಿಕ ಹರವು ಇವು ಸದಾ ಸಂಶೋಧಕರನ್ನು ಕಾಡುತ್ತಿರುವ ಸಂಗತಿಗಳು. ಇವುಗಳ ಆಧಾರದಿಂದ ಸಸ್ಯ ಸಂಕುಲಗಳ ಪ್ರಭೇದಗಳು ಹೆಚ್ಚೂ ಅಥವಾ ಕಡಿಮೆ ಸಂಖ್ಯೆಯನ್ನು ಹೊಂದಿರುವ ಬಗ್ಗೆ ಕೆಲವು ನಿರ್ಧಾರಗಳನ್ನು ಊಹೆಗಳನ್ನು ಮಾಡುವ ಪ್ರಯತ್ನಗಳಂತೂ  ನಡೆದಿವೆ. ನಡೆಯುತ್ತಲೇ ಇವೆ.

                ಸೊಲನೇಸಿಯೆದಂತಹಾ ಕಾಸ್ಮೊಪಾಲಿಟಿನ್ ಕುಟುಂಬಗಳ ಪ್ರಭೇದಗಳು ಇತರೆ ಕುಟುಂಬದ ಪ್ರಭೇದಗಳಿಗಿಂತಾ 5-6 ಪಟ್ಟು ಅಥವಾ 30-40 ಪಟ್ಟು ಹೆಚ್ಚು ಹಬ್ಬಿರುವ ಸಾಧ್ಯತೆಗಳನ್ನು ಗುರುತಿಸಲಾಗಿದೆ. ಪರಾಗಸ್ಪರ್ಶದ ಶ್ರೀಮಂತಿಕೆ, ಬೀಜ ಪ್ರಸಾರದ ವೈವಿಧ್ಯತೆ, ನೆಲದ ಹರಹಿನ ದೊರಕುವಿಕೆ ಇವೇ ಮುಂತಾದವುಗಳ ಆಧಾರದಿಂದ ಏಕೆ ನಮ್ಮಲ್ಲಿ ಅಥವಾ ಕೆಲವಡೆ ಕೆಲವು ಕುಟುಂಬಗಳ ಪ್ರಭೇದಗಳೆ ಹೆಚ್ಚಿವೆ ಅಥವಾ ಕಡಿಮೆ ಎಂಬುದನ್ನಂತೂ ಒಂದಷ್ಟು ಮಟ್ಟಿಗಾದರೂ ಊಹಿಸಬಹುದಾಗಿದೆ. ಇರಲಿ ಬಿಡಿ, ಎಷ್ಟಾದರೂ ಕುಟುಂಬಗಳ ಸಂಗತಿಗಳಲ್ಲವೇ? ಎಂದಿಗೂ ಮುಗಿಯದ ಪುರಾಣಗಳು… ಒಂದೊಂದು ಪ್ರಭೇದಕ್ಕೂ ಸಾಕಷ್ಟೇ ಉದ್ದವಾದ ಕಥನವಿರುವಾಗ, ಸಹಸ್ರಾರು ಪ್ರಭೇದಗಳ ಗುಂಪುಗಳಿಗೆ… ! ಮುಗಿಯುವುದೇ ಇಲ್ಲ, . . ., ಮುಗಿಸಬೇಕಷ್ಟೇ !

Oh, It’s all a “Family” Matter  ದಯವಿಟ್ಟು…, ಕ್ಷಮಿಸಿ !           

       ನಮಸ್ಕಾರ,   – ಚನ್ನೇಶ್

This Post Has 2 Comments

  1. Banuprakash

    Oh…Very nice ….Sir

  2. B H Upendra

    ತುಂಬಾ ಚೆನ್ನಾಗಿದೆ!
    ನೀವು ಯಾಕೆ ಬಿ.ಜಿ.ಎಲ್‌. ಥರಾ ಇನ್ನೊಂದು ಪುಸ್ತಕಾ ಬರೀಬಾರ್ದು?
    ಅಥವಾ ಇದು ಅಂಥ ಪುಸ್ತಕದ ಭಾಗವೇ?

Leave a Reply