೨೧ ನೇ ನವೆಂಬರ್, ೧೯೬೩ ನೇ ಇಸವಿ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಸಂಭ್ರಮದ ದಿನ. ಅಂದು ಭಾರತೀಯ ನೆಲದಿಂದ ವೈಜ್ಞಾನಿಕ ಪ್ರಯೋಗಕ್ಕಾಗಿ ನೈಕಿ ಅಪಾಚೆ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಅಂದು ಉಡಾವಣೆಗೆ ಬೇಕಿದ್ದ ರಾಕೆಟ್, ರಾಡಾರ್, ಪೇಲೋಡ್, ಹೆಲಿಕಾಪ್ಟರ್, ಕಂಪ್ಯೂಟರ್ ಸೇರಿದಂತೆ ಎಲ್ಲ ಉಪಕರಣಗಳೂ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ದೇಶಗಳ ಕೊಡುಗೆಗಳಾಗಿದ್ದವು. ಶೀತಲ ಸಮರದ ಹೆಸರಿನಲ್ಲಿ ಮುಸುಕಿನ ಗುದ್ದಾಟ ನಡೆಸುತ್ತಿದ್ದ ದೇಶಗಳನ್ನೆಲ್ಲಾ, ಬಾಹ್ಯಾಕಾಶ ವಿಜ್ಞಾನದ ಸಮಾಜಮುಖಿ ಉಪಯೋಗಗಳಿಗಾಗಿ ಒಂದೆಡೆ ಸೇರಿ ಕೆಲಸ ಮಾಡುವಂತೆ ಪ್ರೇರೇಪಿಸಿದ್ಧರು ಪ್ರೊ.ವಿಕ್ರಂ ಸಾರಾಭಾಯ್. ಮುಂದೆ ಇದೇ ನವೆಂಬರ್ ೫ ನೇ ತಾರೀಖು, ೨೦೧೩ ನೇ ಇಸವಿಯಂದು, ಸರಿ ಸುಮಾರು ೫೦ ವರ್ಷಗಳ ಪಯಣದ ನಂತರ ಇಸ್ರೊ ಮೊದಲ ಪ್ರಯತ್ನದಲ್ಲಿ ಮಂಗಳನ ಅಂಗಳಕ್ಕೆ ಪಯಣ ಬೆಳೆಸಬೇಕಾದ ಉಪಗ್ರಹವನ್ನು ಹೊತ್ತ ರಾಕೆಟ್ ಅನ್ನು ಸ್ವತಂತ್ರವಾಗಿ ಉಡಾವಣೆ ಮಾಡಿತು. ಮುಂದೆ ಅದು ೨೦೧೪ ರ ಸೆಪ್ಟಂಬರ್ ನಲ್ಲಿ ಮಂಗಳನ ಕಕ್ಷೆ ತಲುಪಿ ಇತಿಹಾಸ ಬರೆದಿದ್ದು ಗೊತ್ತೇ ಇದೆ.
ಬರೀ ಕನಸಿನೊಂದಿಗೆ ಶುರುವಾದ ಯೋಜನೆಯೊಂದು ಹೀಗೆ ಇಷ್ಟು ಎತ್ತರಕ್ಕೆ ಬೆಳೆದದ್ದು ಹೇಗೆ? ದಾರಿಯನ್ನು ಹಾಕಿಕೊಟ್ಟು ಮುನ್ನಡೆಸಿದ ಧೀಮಂತ ನಾಯಕರು ಯಾರು? ಆ ಪಯಣದ ಹಾದಿಯಲ್ಲಿ ಆದ ಸಿಹಿ-ಕಹಿ ಅನುಭವಗಳೇನು? ಈ ಯಾನದ ಪಯಣಿಗರೇ ಆ ಕಥೆಯನ್ನು ಹೇಳಿ ದಾಖಲಿಸಿದ ಆರು ದಶಕಗಳ ಇಸ್ರೊ ಇತಿಹಾಸದ ಕಥಾನಕವೇ ಈ ದಿನ ನಾನು ಪರಿಚಯಿಸುತ್ತಿರುವ ಪುಸ್ತಕ “From Fishing Hamlet to Red Planet – ಸಮುದ್ರದಂಗಳದಿಂದ ಮಂಗಳನೆಡೆಗೆ”.
ನಾನು ಕೆಲಸ ಮಾಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಸಂಸ್ಥೆಯ ಹುಟ್ಟು-ಬೆಳವಣಿಗೆ-ವತ೯ಮಾನ ಮತ್ತು ಭವಿಷ್ಯವನ್ನು ಒಳಗೊಂಡ ಪಯಣದ ಕಥಾನಕ. ನಮ್ಮ ಸಂಸ್ಥೆಯ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ.ವಿ.ಮನೊರಂಜನ್ ರಾವ್ ಅವರ ಮುಖ್ಯ ಸಂಪಾದಕತ್ವದಲ್ಲಿ ಹಾಗೂ ಶ್ರೀ ಬಿ.ಎನ್.ಸುರೇಶ್ ಮತ್ತು ವಿ.ಪಿ.ಬಾಲಗಂಗಾಧರನ್ ಅವರ ಸಹ ಸಂಪಾದಕತ್ವದಲ್ಲಿ 2015 ರಲ್ಲಿ ಪ್ರಕಟವಾದ ಕೃತಿ. ಇಸ್ರೊ ಸಂಸ್ಥೆಯಲ್ಲಿ ದುಡಿದ ಮತ್ತು ದುಡಿಯುತ್ತಿರುವ ಹಲವಾರು ವಿಜ್ಞಾನಿಗಳು ಮತ್ತು ತಂತ್ರಜ್ಞರು ತಮ್ಮ ಅನುಭವಗಳು ಮತ್ತು ಬಾಹ್ಯಾಕಾಶ ಸಂಬಂಧಿ ತಾಂತ್ರಿಕ ವಿಚಾರಗಳ ಬಗ್ಗೆ ಬರೆದಿರುವ ಲೇಖನಗಳ ಸಂಕಲಿತ ಪುಸ್ತಕ.
ಇತ್ತೀಚಿನ ದಿನಮಾನಗಳಲ್ಲಿ ಇಸ್ರೊ ಬಗ್ಗೆ ಸುದ್ದಿಗಳನ್ನು ಓದುತ್ತಲೇ ಅಥವಾ ನೋಡುತ್ತಲೇ ಇರುತ್ತೀರಿ. ನಮ್ಮ ಸಂಸ್ಥೆ ಗಳಿಸಿರುವ ಪ್ರಸಿದ್ಧಿ, ಕೆಲವು ವಿಫಲತೆಗಳು ಹಾಗೂ ಆಗಾಗ ನಮ್ಮ ಮೇಲೆ ಎದುರಾಗುವ ಟೀಕೆಗಳನ್ನು ಕಂಡಿರುತ್ತೀರಿ. ಕನ್ನಡದ ಪ್ರಸಿದ್ಧ ಬರಹಗಾರ ಪಿ.ಲಂಕೇಶ್ ತಮ್ಮ ಟೀಕೆ-ಟಿಪ್ಪಣಿಗಳಲ್ಲಿ ನಮ್ಮ ಇಸ್ರೊ ವಿಜ್ಞಾನಿಗಳ ಬಗ್ಗೆ ಅತ್ಯಂತ ಹಗುರವಾಗಿ (ಎ.ಎಸ್.ಎಲ್.ವಿ(ASLV) ರಾಕೆಟ್ ಉಡಾವಣೆಯ ಸರಣಿ ಸೋಲುಗಳ ಹಿನ್ನಲೆಯಲ್ಲಿ) ಬರೆದ ದಾಖಲಿಯಿದೆ. ಹೀಗೆ ಟೀಕೆ ಮತ್ತು ಅಪನಂಬಿಕೆಗಳನ್ನು ಎದುರಿಸಿ ಮೇಲೆದ್ದು ಪ್ರಸಿದ್ಧಿ ಪಡೆದ, ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆನ್ನುವ ಗುರಿವುಳ್ಳ ಆಶಯದ ಕಥನವೇ ““From Fishing Hamlet to Red Planet”. ಇಸ್ರೊ ಸಂಸ್ಥೆಯ ಅಧಿಕೃತ ಇತಿಹಾಸ ತಿಳಿಸುವ ಕೃತಿ.
ಕೇರಳದ “ತುಂಬಾ” ಎಂಬ ಮೀನುಗಾರರ ಹಳ್ಳಿಯಲ್ಲಿ ಒಂದು ಚರ್ಚಿನ ಕಟ್ಟಡದಲ್ಲಿ ಸೌಂಡಿಂಗ್ ರಾಕೆಟ್ ಗಳ ಉಡಾವಣೆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಚಟುವಟಿಕೆಗಳು ಶುರುವಾದವು. ಭಾರತೀಯ ಪರಮಾಣು ಇಲಾಖೆಯ ಒಂದು ಭಾಗವಾಗಿ ಶುರುವಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಚಟುವಟಿಕಗಳು, ತನ್ನದೇ ಸ್ವತಂತ್ರ ಇಲಾಖೆ ಹಾಗೂ ಸಂಶೋಧನೆ ಸಂಸ್ಥೆಯಾಗಿ ಬೆಳೆದದ್ದು 1960-70 ರ ದಶಕದಲ್ಲಿ. ಈ ಕಾಲದ ಬೆಳವಣಿಗೆಯ ರೂವಾರಿಗಳಾದ ಶ್ರೀ ವಿಕ್ರಂ ಸಾರಾಭಾಯ್, ಫ್ರೊ. ಎಂ.ಜಿ.ಕೆ.ಮೆನನ್, ಫ್ರೊ.ಸತೀಶ್ ಧವನ್, ಫ್ರೊ.ಯಶಪಾಲ್ ಅವರುಗಳು ಆ ದಿನಗಳ ತಮ್ಮ ಕಾಯ೯ಗಳನ್ನು ಈ ಕೃತಿಯಲ್ಲಿ ನೆನೆದಿದ್ದಾರೆ. ರಾಕೆಟ್, ಉಪಗ್ರಹಗಳು ಮತ್ತು ಅವುಗಳ ಪ್ರಯೋಜನ ತಲುಪಿಸುವ ಇತರೆ ಯೋಜನೆಗಳು ಹೇಗೆ ಒಂದೊಂದಾಗಿ ಕಾಯ೯ರೂಪಕ್ಕಿಳಿದವು ಎಂಬುದನ್ನು ಆಯಾ ಯೋಜನೆಗಳ ಹೊಣೆ ಹೊತ್ತ ಮತ್ತು ಯೋಜನೆಗಳಲ್ಲಿ ದುಡಿದ ತಜ್ಞರೇ ಇಲ್ಲಿ ಬರೆದಿದ್ದಾರೆ. ಅಲ್ಲಲ್ಲಿ ತಾಂತ್ರಿಕ ವಿವರಣೆಗಳಿದ್ದರೂ ಹೆಚ್ಚಿನ ಪಾಲು ಸಾಮಾನ್ಯರ ಓದಿಗೂ ದಕ್ಕುವಂತ ಬರಹಗಳೇ ಇಲ್ಲಿನ ವಿಶೇಷ. ಇಸ್ರೊ ವಿಜ್ಞಾನಿಗಳಲ್ಲದೇ ಫ್ರೆಂಚ್ ವಿಜ್ಞಾನಿ ಶ್ರೀ ಜಾಕ್ ಬ್ಲಮಾಂಟ್ ಹಾಗೂ ಭಾರತೀಯ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಬರಹಗಳೂ ಇವೆ.
ಇಸ್ರೊ ಸಂಸ್ಥೆಯನ್ನು ಮುನ್ನಡೆಸಿದ ಮೊದಲ ತಲೆಮಾರಿನ ಅನೇಕ ನಾಯಕರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದವರಾಗಿದ್ದರೂ, ಇಸ್ರೊ ಸಂಸ್ಥೆಯ ಬಹುಪಾಲು ಉದ್ಯೋಗಿಗಳು ಹಾಗೂ ನಂತರ ಬೆಳೆದ ನಾಯಕರೆಲ್ಲರೂ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರೇ. ಆದರೆ ಅವರೆಲ್ಲರಿಗೂ ಆತ್ಮವಿಶ್ವಾಸವನ್ನು ತುಂಬಿ ಸಾಧನೆಗೆ ಹಚ್ಚಿದ ಪ್ರೇರಕ ಶಕ್ತಿಗಳೆಂದರೆ ಪ್ರೊ. ವಿಕ್ರಂ ಸಾರಾಭಾಯ್ ಮತ್ತು ಆ ನಂತರ ಇಸ್ರೊ ಅಧ್ಯಕ್ಷರಾಗಿದ್ದ ಪ್ರೊ. ಸತೀಶ್ ಧವನ್. ಇಂದು ಇಸ್ರೊ ಸಂಸ್ಕೃತಿ ಎಂದು ಹೆಸರಾಗಿರುವ, ಇಸ್ರೊ ಯೋಜನಾ ಪರಿಶೀಲನೆ ಮತ್ತು ನಿರ್ವಹಣೆ ವಿಧಾನ ಹಾಗೂ ಇಸ್ರೊ ಗೆ ಒಂದು ಸಾಂಸ್ಥಿಕ ಚೌಕಟ್ಟನ್ನು ಒದಗಿಸಿದವರು ಪ್ರೊ.ಸತೀಶ್ ಧವನ್. ಇಸ್ರೊ ಸಂಸ್ಥೆ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯಗಳ ಸಹಯೋಗದೊಂದಿಗೆ ಬಾಹ್ಯಾಕಾಶ ಯೋಜನೆಗಳನ್ನು ಕಾರ್ಯಗತಗೊಳಿಸುವ ಮಾರ್ಗವನ್ನು ತೋರಿಸಿಕೊಟ್ಟವರು ಪ್ರೊ.ಸತೀಶ್ ಧವನ್. ಅವರು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸ್ವಾರಸ್ಯಕರ ವಿವರಗಳನ್ನು ಪ್ರೊ.ಎಂ.ಜಿ.ಕೆ. ಮೆನನ್ ಅವರ ಬರಹದಲ್ಲಿ ಓದಬಹುದು.
ಈ ಪುಸ್ತಕದಲ್ಲಿ ಎಂಟು ವಿಭಾಗಳಿವೆ ಮೊದಲನೆಯ ವಿಭಾಗ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಹುಟ್ಟು ಮತ್ತು ಬಾಲ್ಯವನ್ನು ವಿವರಿಸುತ್ತದೆ. ಪ್ರೊ. ವಿಕ್ರಂ ಸಾರಾಭಾಯ್ ಅವರು ಮೊದಲು ಬೇರೆ ಬೇರೆ ದೇಶಗಳ ಸಹಾಯದಿಂದ ಉಪಗ್ರಹ ಹಾಗೂ ರಾಕೆಟ್ ವ್ಯವಸ್ಥೆಯನ್ನು ಪಡೆದುಕೊಂಡು ಭಾರತದಲ್ಲಿ ಉಪಗ್ರಹ ಆಧಾರಿತ ಸೇವೆಯನ್ನು ಒದಗಿಸುವ ಯೋಜನೆಯನ್ನು ರೂಪಿಸಿದ್ದರು. ಆದರೆ ಕ್ರಮೇಣ ಭಾರತದಲ್ಲೇ ಈ ಎಲ್ಲಾ ತಂತ್ರಜ್ಞಾನಗಳ ಅಭಿವೃದ್ಧಿ ಸಾಧ್ಯವಾಗಬೇಕೆಂದು ಆಶಿಸಿ ಅದಕ್ಕೆ ತಕ್ಕ ರೂಪುರೇಷೆಯನ್ನು ಒದಗಿಸಿದ್ದರು. ಉಪಗ್ರಹಗಳು, ರಾಕೆಟ್ ಗಳು ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗಗಳು ಈ ಮೂರು ಸ್ತರಗಳಲ್ಲೂ ಭಾರತ ಸ್ವಾವಲಂಬಿಯಾಗಬೇಕೆಂದು ಕಾರ್ಯಕ್ರಮ ರೂಪಿಸಿದರು
ಎರಡನೆಯ ವಿಭಾಗ ಸೌಂಡಿಂಗ್ ರಾಕೆಟ್ ಗಳಿಂದ ಹಿಡಿದು ಇಂದಿನ ಜಿ.ಎಸ್.ಎಲ್.ವಿ.-ಮಾಕ್೯-3 ರಾಕೆಟ್ ಗಳ ವಿಕಾಸ ಕುರಿತದ್ದು. ಇದರಲ್ಲಿ ರಾಕೆಟ್ ಗಳ ಘನ, ದ್ರವ ಹಾಗೂ ಕ್ರಯೋಜನಿಕ್ ನೋದನ(Propulsion) ವ್ಯವಸ್ಥೆಗಳನ್ನು ಹೇಗೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಯಿತು ಎಂಬುದನ್ನು ವಿವರಿಸಲಾಗಿದೆ. ಆ ಕಾಲದ ಚಾರಿತ್ರಿಕ ಮತ್ತು ರಾಜಕೀಯ ವಿಚಾರಗಳೂ ಮಿಳಿತವಾಗಿರುವ ರಾಕೆಟ್ ಚರಿತ್ರೆ ಇಲ್ಲಿದೆ.
ಮೂರನೆಯ ಭಾಗ ಆಯ೯ಭಟ, ಆಪಲ್ ಎಂಬ ಶುರುವಿನ ಯೋಜನೆಗಳಿಂದ ಹಿಡಿದು ಇಂದು ಕಾಯ೯ಗತವಾಗಿರುವ ಇಸ್ರೊದ ಸಂಪಕ೯ ಮತ್ತು ದೂರಸಂವೇದಿ ಉಪಗ್ರಹಗಳ ಅಭಿವೃದ್ಧಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಮೂಲತಃ ತಿರುವನಂತಪುರದಲ್ಲಿ ಶುರುವಾಗಿ ನಂತರ ಬೆಂಗಳೂರಿಗೆ ವರ್ಗವಾದ ಉಪಗ್ರಹ ನಿರ್ಮಾಣ ಕಾರ್ಯ, ಪೀಣ್ಯ ಕೈಗಾರಿಕಾ ವಲಯದ ಷೆಡ್ಡುಗಳಲ್ಲಿ ಹೇಗೆ ಮುಂದುವರೆಯಿತು ಎಂಬುದನ್ನು ನಮ್ಮ ನಾಡಿನ ಹೆಸರಾಂತ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರು ತಿಳಿಸಿದ್ದಾರೆ.
ನಾಲ್ಕನೆಯ ಹಾಗೂ ಐದನೆಯ ವಿಭಾಗ ಉಪಗ್ರಹಗಳ ನಿಯಂತ್ರಣ ಮತ್ತು ಉಪಗ್ರಹಗಳಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತದೆ. ಆರು ಹಾಗೂ ಏಳನೆಯ ವಿಭಾಗ ಇಸ್ರೊ-ಇತರೆ ಕೈಗಾರಿಕೆಗಳೊಂದಿಗಿರುವ ಸಂಬಂಧ ಮತ್ತು ಇಸ್ರೊದ ಅಂತರ್ರಾಷ್ಟ್ರೀಯ ಸಹಕಾರಗಳ ಬಗ್ಗೆ ವಿವರಿಸುತ್ತದೆ. ಕೊನೆಯ ವಿಭಾಗ ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಶ್ರೀ ವಿಕ್ರಮ್ ಸಾರಾಭಾಯ್ ಅವರು ಹಾಕಿಕೊಟ್ಟ ಮಾಗ೯ದ ನಂತರದ ಯೋಜನೆಗಳು ಹಾಗೂ ಭವಿಷ್ಯದ ಕನಸುಗಳ ಬಗ್ಗೆ ಓದುಗರಿಗೆ ಪರಿಚಯಿಸುತ್ತದೆ.
““From Fishing Hamlet to Red Planet” ನ ಇ-ಪುಸ್ತಕ ಓದುಗರಿಗೆ ಮುಕ್ತವಾಗಿ ಲಭ್ಯವಿದೆ. ಅದನ್ನು ಈ ಕೊಂಡಿ ಬಳಸಿ ಡೌನಲೋಡ್ ಮಾಡಿಕೊಳ್ಳಬಹುದು (https://www.isro.gov.in/pslv-c25-mars-orbiter-mission/fishing-hamlet-to-red-planet-download-e-book). ಪುಸ್ತಕದ ಎರಡನೇ ಭಾಗವಾಗಿ ಸಚಿತ್ರವಾದ ಸಂಪುಟ “Ever Upwards: ISRO in Images “ವನ್ನು ಇದೇ ಸಂಪಾದಕೀಯ ಬಳಗ ೨೦೧೯ ರಲ್ಲಿ ಹೊರತಂದಿದ್ದಾರೆ. ವಿಶಾಲ ಅಥ೯ದ “ಕಟ್ಟುವಿಕೆ” ಅತ್ಯಂತ ಜರೂರಾದ ಈ ದಿನಗಳಲ್ಲಿ, ದೇಶ ಕಟ್ಟಲು ವಿಜ್ಞಾನದ ಮಾಗ೯ ಆರಿಸಿದ ಭಾರತೀಯ ಮನಸ್ಸುಗಳ ಕೆಲಸವನ್ನು ನಿರೂಪಿಸಿರುವ ಈ ಕೃತಿ ಅತ್ಯಂತ ಪ್ರಮುಖವಾದುದು. ಇದು ಭಾರತೀಯ ಭಾಷೆಗಳಲ್ಲೂ ಲಭ್ಯವಾಗಿ ಎಲ್ಲರಿಗೂ ಇನ್ನಷ್ಡು ಪ್ರಯೋಜನವಾಗಲಿ ಎಂದೂ ಆಶಿಸೋಣ.
ಇಂದು ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲು ಇಚ್ಚಿಸಿ ಸರ್ಕಾರ ನಿಯಮಗಳನ್ನು ರೂಪಿಸುತ್ತಿದೆ. ಈ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಮತ್ತು ತಂತ್ರಜ್ಷಾನ ಅಭಿವೃದ್ಧಿಗಾಘಿ ಹೊಸ ಮಾರ್ಗಗಳನ್ನು ನೀತಿಯನ್ನು ಜಾರಿ ಮಾಡಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇಸ್ರೊ ಸಂಸ್ಥೆ ಕೂಡ ತನ್ನ ಹೊರಳು ದಾರಿಯಲ್ಲಿದೆ. ಈ ಸಂಧಿಕಾಲದಲ್ಲಿ ಜನಸಾಮಾನ್ಯರ ಒಳಿತಿಗಾಗೇ ಶುರುವಾದ ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಈ ಇತಿಹಾಸ ಕಥನ ಒಂದು ಸ್ಪೂರ್ತಿದಾಯಕ ಉದಾಹರಣೆ.
ನಮಸ್ಕಾರ,
ಆಕಾಶ್ ಬಾಲಕೃಷ್ಣ
ಹೆಚ್ಚಿನ ವಿವರಗಳಿಗೆ ನೋಡಿ:
1. ಶ್ರೀ ಬಿ,ಎನ್.ಸುರೇಶ್ ಅವರು ಇಸ್ರೊದ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಯ ಬಗ್ಗೆ ನೀಡಿರುವ ಉಪನ್ಯಾಸ – https://www.youtube.com/watch?v=Fg9yNygomQE
2. ಇಸ್ರೊ ಮಾಜಿ ಅಧ್ಯಕ್ಷರಾದ ಶ್ರೀ ಎ,ಎಸ್.ಕಿರಣ ಕುಮಾರ್ ಅವರು ಭಾರತೀಯ ಬಾಹ್ಯಾಕಾಶ ಯೋಜನೆಗಳ ಬಗ್ಗೆ ನೀಡಿರುವ ಉಪನ್ಯಾಸ – https://www.youtube.com/watch?v=IYNAeM3Hasg
ಆಕಾಶ್ ಅವರು ತಮ್ಮ ಲೇಖನದಲ್ಲಿ “ಪಿ.ಲಂಕೇಶ್ ತಮ್ಮ ಟೀಕೆ-ಟಿಪ್ಪಣಿಗಳಲ್ಲಿ, ಎ.ಎಸ್.ಎಲ್.ವಿ(ASLV) ರಾಕೆಟ್ ಉಡಾವಣೆಯ ಸರಣಿ ಸೋಲುಗಳಿಂದಾಗಿ, ಇಸ್ರೊ ವಿಜ್ಞಾನಿಗಳ ಬಗ್ಗೆ ಅತ್ಯಂತ ಹಗುರವಾಗಿ ಬರೆದದ್ದನ್ನು ಉಲ್ಲೇಖಿಸಿದ್ದಾರೆ. ಹೌದು, ಮಾನವರೇ ಸೃಸ್ಟಿಸಿಕೊಂಡ ಜಾತಿಯನ್ನು ಮೀರುವ ಕಷ್ಟವನ್ನೇ ಅರಿಯಲು ಲಂಕೇಶರಾದಿಯಾಗಿ ಇಡೀ ಸಾಹಿತ್ಯಲೋಕವು ಸೋತಿರುವಾಗ, ನಿಸರ್ಗ ಸೃಷ್ಟಿಯ “ಗುರುತ್ವ(Gravity)ವನ್ನು ಮೀರುವ ವಿಜ್ಞಾನದ ಕಷ್ಟವನ್ನು ಅರಿಯಲು ಸೋತಿರುವುದು ಸಹಜವೇ! ಲಂಕೇಶರು ಈಗಿಲ್ಲ, ಆದರೂ ಈಗಿನ್ನೂ ಇರುವ “ಕವಿ” ಮಹಾಶಯರೊಬ್ಬರು ಅದೇ ಲಂಕೇಶ್ ಪತ್ರಿಕೆಯಲ್ಲಿ ದೇಶದ ಎಲ್ಲಾ ನದಿಗಳ ಜೋಡಣೆಯು ಭಾರತಾಂಬೆಗೆ ಹೂವಿನ ಮಾಲೆಯಂತಾಗುವ ಅರ್ಥದಲ್ಲಿ ಕಾವ್ಯಾತ್ಮಕವಾಗಿ ಬರೆದಿದ್ದರು. ಮತ್ತೊಬ್ಬ ಲೇಖಕರು ಕಾಫಿಯನ್ನು ಈ ದರಿದ್ರ ಕಾಫಿ ಬೋರ್ಡಿಗೆ ಮಾತ್ರವೇ ಮಾರುವುದರಿಂದ ರೈತರು ಬದುಕೋದು ಹೇಗೆ ಎಂದೂ ಬರೆದು ಛೀಮಾರಿ ಹಾಕಿದ್ದರು. ಈಗ ಕಾಫಿ ಮುಕ್ತವಾಗಿ ರೈತರು ಎಲ್ಲಿದ್ದಾರೆ ಎಂಬುದು ತಿಳಿದೇ ಇದೆ. ನದಿ ಜೋಡಣೆಯ ಇಕಾಲಜಿಯನ್ನಾಗಲಿ, ಮುಕ್ತ ಮಾರುಕಟ್ಟೆಯ ಹುನ್ನಾರವನ್ನಾಗಲಿ ಯೋಚಿಸದೆ ತಮಗೆ ಹೊಳೆದದ್ದೆ ಸರಿ ಎಂದೇ ಬರೆದಿದ್ದರು. ಹೀಗೆ ತಮ್ಮ ಅನಿಸಿಕೆಗಳ ಆಧಾರಿತ ಜ್ಞಾನ ಸಂವಹನವನ್ನು ಕೇವಲ ಭಾಷೆಯನ್ನೇ ಬಂಡವಾಳವಾಗಿ ಇರಿಸಿಕೊಂಡವರಿಂದ ಹೊರತಾಗಿ ಇನ್ನೇನು ನೀರೀಕ್ಷಿಸಲಾದೀತು.
ಆಕಾಶ್ ನಿಮ್ಮ ಪುಸ್ತಕ ಪರಿಚಯ ರೀತಿ ಸುಂದರವಾಗಿದೆ.ನಿಮ್ಮ ಈ ಪ್ರಯತ್ನ ಪುಸ್ತಕ ಓದಲು ಹುರಿದುಂಬಿಸುತ್ತದೆ.ಶುಭಾಶಯಗಳು