ನಾನ್ಸಿ ಗ್ರೇಸ್ ರೋಮನ್ ಸ್ಪೇಸ್ ಟೆಲಿಸ್ಕೋಪ್ ಎಂಬ ಖಗೋಳ ವೀಕ್ಷಣಾಲಯ

ವಿಶ್ವದ ಉಗಮ ಮತ್ತು ವಿಕಸನವು ಇಂದಿಗೂ ನಿಗೂಢತೆಯನ್ನು ಕಾಪಾಡಿಕೊಂಡಿದೆ, 14 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದೆ ಎನ್ನಲಾದ ಮಹಾಸ್ಪೋಟ(Big Bang)ದಿಂದ ವಿಶ್ವ ಉಗಮವಾಯಿತು ಎನ್ನುವುದು ಸಹ ಇನ್ನೂ ನಿಗೂಢವಾಗಿದೆ. ಅದರ ಜೊತೆಗೆ ಇಡೀ ವಿಶ್ವವನ್ನು ನಡೆಸುತ್ತಿದೆ ಎಂದು ಭಾವಿಸಲಾಗಿರುವ ಕಡುಶಕ್ತಿ((Dark Energy) ) ಮತ್ತು ಕಪ್ಪು ದ್ರವ್ಯ(Dark Matter)ದ ಪ್ರಾಮುಖ್ಯತೆಯು ಸಹ ಬಿಡಿಸಲಾರದ ಕಗ್ಗಂಟಾಗಿದೆ. ಒಂದು ಅಂದಾಜಿನಂತೆ ವಿಶ್ವವು ಶೇ. 68 ರಷ್ಟು ಕಡು ಶಕ್ತಿಯಿಂದ ತುಂಬಿದೆ. ವಿಜ್ಞಾನ ತಂತ್ರಜ್ಞಾನವು ಮುಂದುವರೆದಂತೆ ಈ ನಿಗೂಢತೆಯ ಹಿಂದೆ ಬಿದ್ದು ಉತ್ತರ ಹುಡುಕುವ ಕುತೂಹಲ ಸಹಜವಾಗಿದೆ. ನಮ್ಮ ಈ ಕುತೂಹಲವನ್ನು ತಣಿಸಲು ಅಮೆರಿಕದ ನಾಸಾ ಸಂಸ್ಥೆಯು ಮತ್ತೊಂದು ಮಹತ್ತರವಾದ ಬಾಹ್ಯಾಕಾಶ ದೂರದರ್ಶಕ “ನಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ಟೆಲಿಸ್ಕೋಪ್ (Nancy Grace Roman Space Telescope)” ಅನ್ನು ಇಂದು ಭಾನುವಾರ 2026ರ ಆಗಸ್ಟ್ 30ರಂದು ಉಡಾವಣೆ ಮಾಡುತ್ತಿದೆ. ಇದು ಭಾರತದ ಕಾಲಮಾನ ಸಂಜೆ 4.56ಕ್ಕೆ ಉಡಾವಣೆಯಾಗಲಿದೆ.
“ನಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕ” ಸಂಕ್ಷಿಪ್ತವಾಗಿ ಹೇಳುವುದಾದರೆ “ರೋಮನ್ ಬಾಹ್ಯಾಕಾಶ ದೂರದರ್ಶಕ” ವು ಪ್ರಮುಖ ಖಗೋಳ ವೀಕ್ಷಣಾಲಯವಾಗಿದ್ದು, ಡಾರ್ಕ್ ಎನರ್ಜಿ, ಎಕ್ಸೋಪ್ಲಾನೆಟ್‌ಗಳು ಮತ್ತು ಅತಿಗೆಂಪು ಖಭೌತವಿಜ್ಞಾನವನ್ನು ಅಧ್ಯಯನ ಮಾಡುವ ಧ್ಯೇಯವನ್ನು ಹೊಂದಿದೆ. ಈಗಾಗಲೇ ಬಾಹ್ಯಾಕಾಶದಲ್ಲಿ ಸಕ್ರಿಯವಾಗಿರುವ ಹಬಲ್(Hubble) ದೂರದರ್ಶಕ ಮತ್ತು ಜೇಮ್ಸ್ ವೆಬ್ (James Webb) ದೂರದರ್ಶಕಗಳ ಜೊತೆಗೆ ಇದು ಮತ್ತೊಂದು ಮಹತ್ತರವಾದ ದೂರದರ್ಶಕ. ಒಮ್ಮೆ ಕಾರ್ಯಾರಂಭಮಾಡಿದ ನಂತರ, ‘ರೋಮನ್’ ದೂರದರ್ಶಕವು ಖ್ಯಾತ ‘ಹಬಲ್’ ಮತ್ತು ‘ಜೇಮ್ಸ್ ವೆಬ್’ ದೂರದರ್ಶಕಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, ನಮ್ಮ ವೀಕ್ಷಣೆಗಳಲ್ಲಿನ ಪ್ರಮುಖ ಕೊರತೆಯನ್ನು ನೀಗಿಸಲಿದೆ. ಇವುಗಳ ಪ್ರಮುಖ ವ್ಯತ್ಯಾಸಗಳೇನೆಂದರೆ, ಮೊದಲನೆಯದು ಅತಿ ಶಕ್ತಿಯುತ ವೀಕ್ಷಣಾ ಕ್ಷೇತ್ರ (Super Power Field of View): ರೋಮನ್, ಹಬಲ್‌ನಂತೆಯೇ ದರ್ಪಣ/ಕನ್ನಡಿ ವ್ಯಾಸವನ್ನು ಹಂಚಿಕೊಂಡರೂ, ಅದರ 300-ಮೆಗಾಪಿಕ್ಸೆಲ್ ವೈಡ್ ಫೀಲ್ಡ್ ಇನ್ಸ್ಟ್ರುಮೆಂಟ್ ಒಂದೇ ಎಕ್ಸ್‌ಪೋಸರ್‌ನಲ್ಲಿ 100 ಪಟ್ಟು ದೊಡ್ಡದಾದ ಆಗಸದ ಪರಿಧಿಯನ್ನು ಸೆರೆಹಿಡಿಯುತ್ತದೆ. ಹಬಲ್ 100 ಪ್ರತ್ಯೇಕ ಬಿಂದುಗಳನ್ನು ಗುರುತಿಸಿ ನಕ್ಷೆ ಮಾಡಿದರೆ, ರೋಮನ್ ಒಂದೇ ಶಾಟ್‌ನಲ್ಲಿ ಸೆರೆಹಿಡಿಯಬಹುದು. ಎರಡನೆಯ ವ್ಯತ್ಯಾಸವೇನೆಂದರೆ, ವೀಕ್ಷಣೆಯ ವೇಗ: ಈ ಪನೋರಮಿಕ್ ಲೆನ್ಸ್‌ನಿಂದಾಗಿ, ‘ರೋಮನ್’ ದೂರದರ್ಶಕ ಹಬಲ್‌ಗಿಂತ 1,000 ಪಟ್ಟು ವೇಗವಾಗಿ ಆಕಾಶವನ್ನು ವೀಕ್ಷಿಸಬಲ್ಲದು. ತನ್ನ 5 ವರ್ಷಗಳ ಪ್ರಮುಖ ಕಾರ್ಯಾಚರಣೆಯ ಅವಧಿಯಲ್ಲಿ, ಇದು ಎರಡು ಶತಕೋಟಿಗೂ ಹೆಚ್ಚು ನಕ್ಷತ್ರಪುಂಜಗಳ ನಕ್ಷೆಯನ್ನು ರೂಪಿಸುವ ಮತ್ತು 20 ಪೆಟಾಬೈಟ್‌ಗಳಷ್ಟು ದತ್ತಾಂಶವನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಇದೇ ಕಾರ್ಯಕ್ಕೆ ಇತರ ದೂರದರ್ಶಕಗಳು ಶತಮಾನಗಳ ಸಮಯವನ್ನು ತೆಗೆದುಕೊಳ್ಳಬಹುದು. ಮೂರನೆಯ ವ್ಯತ್ಯಾಸವೇನೆಂದರೆ, ಬಾಹ್ಯಾಕಾಶದಲ್ಲಿ ಜಂಟಿ ಕಾರ್ಯಾಚರಣೆ: ಹಬಲ್ ಭೂಮಿಗೆ ಬಹಳ ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ‘ರೋಮನ್’ ದೂರದರ್ಶಕವು ಭೂಮಿಯಿಂದ ಸುಮಾರು 1 ದಶಲಕ್ಷ ಮೈಲುಗಳಷ್ಟು ದೂರ ಪ್ರಯಾಣಿಸಿ, ‘ಜೇಮ್ಸ್ ವೆಬ್’ ಇರುವ L2 ಬಿಂದುವಿನ ಬಳಿ ಕಕ್ಷೆಯನ್ನು ಸೇರಲಿದೆ. ಇದು ಅತ್ಯುತ್ತಮ ಸಹಯೋಗಕ್ಕೆ ಅವಕಾಶ ನೀಡುತ್ತದೆ: ರೋಮನ್ ಆಕಾಶದ ವಿಶಾಲ ಪ್ರದೇಶಗಳನ್ನು ಪರಿಶೀಲಿಸಿ ಅಪರೂಪದ ಅಥವಾ ವಿಚಿತ್ರವಾದ ಖಗೋಳ ವಿದ್ಯಮಾನಗಳನ್ನು ಪತ್ತೆಹಚ್ಚುತ್ತದೆ; ನಂತರ ವೆಬ್ ತನ್ನ ಅತೀ-ಆಳವಾದ ಅತಿಗೆಂಪು (infrared) ದೃಷ್ಟಿಯ ಮೂಲಕ ಅವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತದೆ. ಇಲ್ಲಿ ನೆನಪಿಡಬೇಕಾದ ವಿಷಯವೇನೆಂದರೆ: ಹಬಲ್ ನಮಗೆ ಸೂಕ್ಷ್ಮ ವಿವರಗಳನ್ನು ನೀಡುತ್ತದೆ, ವೆಬ್ ನಮಗೆ ಆಳವಾದ ದೃಶ್ಯಗಳನ್ನು ತೋರಿಸುತ್ತದೆ ಮತ್ತು ರೋಮನ್ ನಮಗೆ ವಿಶಾಲವಾದ ಚಿತ್ರಣವನ್ನು ಒದಗಿಸುತ್ತದೆ
ವಿವರವಾಗಿ ಹೇಳಬೇಕಾದರೆ, ನ್ಯಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕವು ನಾಸಾದ ಒಂದು ಅತಿಗೆಂಪು (ಇನ್ಫ್ರಾರೆಡ್) ಬಾಹ್ಯಾಕಾಶ ದೂರದರ್ಶಕವಾಗಿದೆ, ಖಗೋಳವಿಜ್ಞಾನದ ಮುಂದಿನ ದಶಕಕ್ಕೆ ಅತ್ಯಂತ ಆದ್ಯತೆಯ ಯೋಜನೆಯಾಗಿ, 2010ರಲ್ಲಿ ಅಮೆರಿಕದ ರಾಷ್ಟ್ರೀಯ ಸಂಶೋಧನಾ ಮಂಡಳಿಯ ‘ಡೆಕಾಡಲ್ ಸಮೀಕ್ಷೆ’ ಸಮಿತಿ(United States National Research Council Decadal Survey committee )ಯು ‘ರೋಮನ್’ ಅನ್ನು ಶಿಫಾರಸು ಮಾಡಿತ್ತು. ಇದರ ಅಭಿವೃದ್ಧಿ ಮತ್ತು ಉಡಾವಣೆಗೆ 2016ರ ಫೆಬ್ರವರಿ 17ರಂದು ಅನುಮೋದನೆ ನೀಡಲಾಯಿತು. ಇದರ ವಿನ್ಯಾಸವು, ನಾಸಾ (NASA) ಮತ್ತು ಇಂಧನ ಇಲಾಖೆ (Department of Energy DOE) ನಡುವಿನ ‘ಜಾಯಿಂಟ್ ಡಾರ್ಕ್ ಎನರ್ಜಿ ಮಿಷನ್’ (JDEM) ಗಾಗಿ ಪ್ರಸ್ತಾಪಿಸಲಾದ ವಿವಿಧ ವಿನ್ಯಾಸಗಳ ಪರಂಪರೆಯನ್ನು ಹೊಂದಿದೆ. ಇದರ ನಿರ್ಮಾಣವು 25 ನವೆಂಬರ್ 2025 ರಂದು ಪೂರ್ಣಗೊಂಡಿದ್ದು, ಇದನ್ನು ಇಂದು ಭಾನುವಾರ 30 ಆಗಸ್ಟ್ 2026 ರಂದು ಸೂರ್ಯ ಮತ್ತು ಭೂಮಿ ನಡುವೆ ಇರುವ ಲಾಗ್ರಂಜೆ ಕಕ್ಷೆಗೆ ಉಡಾವಣೆ ಮಾಡಲು ನಿಗದಿಪಡಿಸಲಾಗಿದೆ. ಭೂಮಿಯಿಂದ ಸುಮಾರು 9,30,000 ಮೈಲಿಗಳ (1.5 ದಶಲಕ್ಷ ಕಿಲೋಮೀಟರ್‌ಗಳು) ದೂರದಲ್ಲಿರುವ ಸೂರ್ಯ-ಭೂಮಿ ಲ್ಯಾಗ್ರೇಂಜ್ ಪಾಯಿಂಟ್ 2 (L2) ನಲ್ಲಿ ಕಾರ್ಯನಿರ್ವಹಿಸಲಿದೆ.
ಇದು ಹಬಲ್‌ನಷ್ಟೇ ಗಾತ್ರದ (2.4 ಮೀಟರ್) ಪ್ರಾಥಮಿಕ ದರ್ಪಣ(ಕನ್ನಡಿ)ವನ್ನು ಹೊಂದಿದ್ದರೂ, ಇದರ ‘ವೈಡ್ ಫೀಲ್ಡ್ ಇನ್‌ಸ್ಟ್ರುಮೆಂಟ್’ (Wide Field Instrument) ಹಬಲ್‌ನ ಅತಿಗೆಂಪು (ಇನ್‌ಫ್ರಾರೆಡ್) ವೀಕ್ಷಣಾ ಕ್ಷೇತ್ರಕ್ಕಿಂತ 100 ಪಟ್ಟು ದೊಡ್ಡ ಪ್ರದೇಶವನ್ನು ಒಂದೇ ಬಾರಿಗೆ ಸೆರೆಹಿಡಿಯುತ್ತದೆ. ಇದಕ್ಕೆ ನಾಸಾದ ಖಗೋಳಶಾಸ್ತ್ರ ವಿಭಾಗದ ಮೊದಲ ಮುಖ್ಯಸ್ಥರಾದ ಹಾಗೂ “ಹಬಲ್ ಬಾಹ್ಯಾಕಾಶ ದೂರದರ್ಶಕದ ತಾಯಿ” ಎಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಡಾ. ನ್ಯಾನ್ಸಿ ಗ್ರೇಸ್ ರೋಮನ್ ಅವರ ಹೆಸರನ್ನು ಇಡಲಾಗಿದೆ.

ನ್ಯಾನ್ಸಿ ಗ್ರೇಸ್ ರೋಮನ್ (ಮೇ 16, 1925 – ಡಿಸೆಂಬರ್ 25, 2018) ಅವರು ನಕ್ಷತ್ರಗಳ ವರ್ಗೀಕರಣ ಮತ್ತು ನಕ್ಷತ್ರಗಳ ಚಲನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ಅಮೆರಿಕನ್ ಖಗೋಳವಿಜ್ಞಾನಿಯಾಗಿದ್ದರು. ನಾಸಾದಲ್ಲಿ (NASA) ಮೊದಲ ಮಹಿಳಾ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ರೋಮನ್, 1960 ಮತ್ತು 1970ರ ದಶಕಗಳಲ್ಲಿ ನಾಸಾದ ಮೊದಲ ‘ಖಗೋಳ ವಿಜ್ಞಾನ ವಿಭಾಗದ ಮುಖ್ಯಸ್ಥೆ’ಯಾಗಿ ಸೇವೆ ಸಲ್ಲಿಸಿದರು; ಈ ಮೂಲಕ ಅವರು “ಅಮೆರಿಕದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮದ ದೂರದೃಷ್ಟಿಯುಳ್ಳ ಸ್ಥಾಪಕರಲ್ಲಿ ಒಬ್ಬರು” ಎಂದು ಗುರುತಿಸಲ್ಪಟ್ಟರು. ರೋಮನ್ ಅವರು ನಾಸಾದ (NASA) ಬಾಹ್ಯಾಕಾಶ ಖಗೋಳವಿಜ್ಞಾನ ಕಾರ್ಯಕ್ರಮವನ್ನು ರೂಪಿಸಿದರು; ಹಬಲ್ ಬಾಹ್ಯಾಕಾಶ ದೂರದರ್ಶಕದ (Hubble Space Telescope) ಯೋಜನೆಯಲ್ಲಿ ವಹಿಸಿದ ಮೂಲಭೂತ ಪಾತ್ರಕ್ಕಾಗಿ ಅವರು ಅನೇಕರಿಗೆ “ಹಬಲ್‌ನ ತಾಯಿ” (Mother of Hubble) ಎಂದು ಪರಿಚಿತರಾಗಿದ್ದಾರೆ. ತಮ್ಮ ವೃತ್ತಿಜೀವನದ ಉದ್ದಕ್ಕೂ, ರೋಮನ್ ಸಕ್ರಿಯ ಸಾರ್ವಜನಿಕ ಭಾಷಣಕಾರರಾಗಿ ಹಾಗೂ ಶಿಕ್ಷಣತಜ್ಞರಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದವರಾಗಿದ್ದರು. ಇವರು ಖಗೋಳ ವಿಜ್ಞಾನಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಮೇ 2020 ರಲ್ಲಿ, NASA ಆಡಳಿತಾಧಿಕಾರಿ ಜಿಮ್ ಬ್ರಿಡೆನ್ಸ್ಟೈನ್ ಅವರು ವೈಡ್ ಫೀಲ್ಡ್ ಇನ್ಫ್ರಾರೆಡ್ ಸಮೀಕ್ಷಾ ದೂರದರ್ಶಕ (Wide Field Infrared Survey Telescope – WFIST)ವನ್ನು ನ್ಯಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕ (Nancy Grace Roman Space Telescope)ಎಂದು ಹೆಸರಿಸಲಾಗುವುದು ಎಂದು ಘೋಷಿಸಿದರು.
ಈ ರೋಮನ್ ದೂರದರ್ಶಕದ ಪ್ರಮುಖ ವೈಜ್ಞಾನಿಕ ಉದ್ದೇಶಗಳು ಎರಡು: ಮೊದಲನೆಯದುಕಡು ಶಕ್ತಿ ಮತ್ತು ಕಪ್ಪು ದ್ರವ್ಯ (Dark Energy and Dark Matter) ಗಳ ಅಧ್ಯಯನ: ಇಲ್ಲಿ ವಿಶ್ವವು ಹೇಗೆ ವಿಸ್ತರಿಸುತ್ತದೆ ಮತ್ತು ವಿಕಸನಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಶತಕೋಟಿ ನಕ್ಷತ್ರಪುಂಜಗಳ ನಕ್ಷೆಯನ್ನು ರೂಪಿಸುವುದು. ಎರಡನೆಯದು ಬಾಹ್ಯ ಗ್ರಹಗಳ (Exoplanets )ಅನ್ವೇಷಣೆ: ಗುರುತ್ವಾಕರ್ಷಣೆಯ ಮೈಕ್ರೋಲೆನ್ಸಿಂಗ್ ಹಾಗೂ ನಕ್ಷತ್ರ ಬೆಳಕನ್ನು ನಿರ್ಬಂಧಿಸಲು ಮತ್ತು ಮಸುಕಾದ ಗ್ರಹಗಳನ್ನು ನೇರವಾಗಿ ಚಿತ್ರಿಸಲು ವಿಶೇಷವಾದ ಕರೋನಾಗ್ರಾಫ್ ಉಪಕರಣವನ್ನು ಬಳಸಿಕೊಂಡು ನಮ್ಮ ಸೌರವ್ಯೂಹದ ಆಚೆಗಿನ ಗ್ರಹಗಳ ಸಮಗ್ರ ಸಮೀಕ್ಷೆ/ ಗಣತಿಯನ್ನು ನಡೆಸುವುದು.

ಮೊದಲನೆಯದಾದ ಕಡು ಶಕ್ತಿ ಮತ್ತು ಕಪ್ಪು ದ್ರವ್ಯಗಳ ಅಧ್ಯಯನವು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA)ಯ ಯೂಕ್ಲಿಡ್ ಮಿಷನ್‌ಗೆ ಪೂರಕವಾಗಿರುವ ಡಾರ್ಕ್ ಎನರ್ಜಿಯ ಕುರಿತಾದ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದಾಗಿದೆ. “ಕಾಸ್ಮಿಕ್ ವೇಗವರ್ಧನೆಯು ಹೊಸ ಶಕ್ತಿಯ ಅಂಶದಿಂದ ಉಂಟಾಗುತ್ತದೆಯೇ ಅಥವಾ ಕಾಸ್ಮಾಲಾಜಿಕಲ್ ಮಾಪಕಗಳಲ್ಲಿ ಸಾಮಾನ್ಯ ಸಾಪೇಕ್ಷತೆಯ ಸ್ಥಗಿತದಿಂದ ಉಂಟಾಗುತ್ತದೆಯೇ? ಕಾರಣವು ಹೊಸ ಶಕ್ತಿಯ ಅಂಶವಾಗಿದ್ದರೆ, ಅದರ ಶಕ್ತಿಯ ಸಾಂದ್ರತೆಯು ಸ್ಥಳ ಮತ್ತು ಸಮಯದಲ್ಲಿ ಸ್ಥಿರವಾಗಿದೆಯೇ ಅಥವಾ ಅದು ಬ್ರಹ್ಮಾಂಡದ ಇತಿಹಾಸದೊಂದಿಗೆ ವಿಕಸನಗೊಂಡಿದೆಯೇ?” ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅಧ್ಯಯನವಾಗಿದೆ. ಈ ಡಾರ್ಕ್ ಎನರ್ಜಿಯನ್ನು ತನಿಖೆ ಮಾಡಲು ರೋಮನ್ ದೂರದರ್ಶಕವು ಮೂರು ಸ್ವತಂತ್ರ ತಂತ್ರಗಳನ್ನು ಬಳಸುತ್ತದೆ. ಅವು ಬ್ಯಾರಿಯನ್ ಅಕೌಸ್ಟಿಕ್ ಆಂದೋಲನ, ದೂರದ ಸೂಪರ್ನೋವಾಗಳ ಅವಲೋಕನ ಮತ್ತು ದುರ್ಬಲ ಗುರುತ್ವಾಕರ್ಷಣೆಯ ಮಸೂರ( baryon acoustic oscillations, observations of distant supernovae, and weak gravitational lensing). ರೋಮನ್ ಬಾಹ್ಯಾಕಾಶ ದೂರದರ್ಶಕವು ಅಸ್ತಿತ್ವದಲ್ಲಿರುವ 2.4-ಮೀಟರ್ (7.9-ಅಡಿ) ವಿಶಾಲವಾದ ವೀಕ್ಷಣಾ ಕ್ಷೇತ್ರವನ್ನು ಒಳಗೊಂಡಿರುವ ಪ್ರಾಥಮಿಕ ಕನ್ನಡಿಯನ್ನು ಆಧರಿಸಿದೆ, ಇದನ್ನು ರಾಷ್ಟ್ರೀಯ ವಿಚಕ್ಷಣಾ ಕಚೇರಿಯು(National Reconnaissance Office ) ದಾನ ಮಾಡಿದೆ. ಇದು ಎರಡು ವೈಜ್ಞಾನಿಕ ಉಪಕರಣಗಳನ್ನು ಹೊಂದಿರುತ್ತದೆ. ಮೊದಲನೆಯದು ವೈಡ್-ಫೀಲ್ಡ್ ಇನ್ಸ್ಟ್ರುಮೆಂಟ್ (WFI). ಇದು 300.8-ಮೆಗಾಪಿಕ್ಸೆಲ್ ಮಲ್ಟಿ-ಬ್ಯಾಂಡ್ ಗೋಚರ ಮತ್ತು ನಿಯರ್-ಇನ್ಫ್ರಾರೆಡ್ ಕ್ಯಾಮೆರಾವಾಗಿದ್ದು, ಹಬಲ್ ಬಾಹ್ಯಾಕಾಶ ದೂರದರ್ಶಕವು 0.28-ಚದರ-ಡಿಗ್ರಿ ವೀಕ್ಷಣಾ ಕ್ಷೇತ್ರದಲ್ಲಿ ಸಾಧಿಸಿದ ಚಿತ್ರಗಳಿಗೆ ಹೋಲಿಸಿದರೆ ಇದು ಹಬಲ್‌ನಲ್ಲಿರುವ ಇಮೇಜಿಂಗ್ ಕ್ಯಾಮೆರಾಗಳಿಗಿಂತ 100 ಪಟ್ಟು ಹೆಚ್ಚಿನ ಚಿತ್ರಗಳ ತೀಕ್ಷ್ಣತೆಯನ್ನು ಒದಗಿಸುತ್ತದೆ.

ಎರಡನೆಯದಾದ ಬಾಹ್ಯಗ್ರಹಗಳ ಅನ್ವೇಷಣೆಯು ವಿಶ್ವದಲ್ಲಿ ಜೀವದ ಸಾಮರ್ಥ್ಯದ ಕುರಿತು ಹೊಸ ಪ್ರಶ್ನೆಗಳಿಗೆ ಉತ್ತರಿಸಲು ಬಾಹ್ಯ ಗ್ರಹಗಳ ಗಣತಿಯನ್ನು ಪೂರ್ಣಗೊಳಿಸುವುದು; ನಮ್ಮ ಸ್ವಂತ ಸೌರವ್ಯೂಹದಂತೆ ಇತರ ಸೌರವ್ಯೂಹಗಳು ಎಷ್ಟು ಸಾಮಾನ್ಯವಾಗಿವೆ? ಗ್ರಹ ವ್ಯವಸ್ಥೆಗಳ ಶೀತ, ಹೊರ ಪ್ರದೇಶಗಳಲ್ಲಿ ಯಾವ ರೀತಿಯ ಗ್ರಹಗಳು ಅಸ್ತಿತ್ವದಲ್ಲಿವೆ? ಭೂಮಿಯಂತಹ ಪ್ರಪಂಚಗಳ ವಾಸಯೋಗ್ಯತೆಯನ್ನು ಯಾವುದು ನಿರ್ಧರಿಸುತ್ತದೆ? ಎಂಬ ಅಂಶಗಳನ್ನು ಗಮನದಲ್ಲಿರಿಸಿ ಅಧ್ಯಯನ ಮಾಡುವುದಾಗಿದೆ. ಈ ಗಣತಿಯು ಚಂದ್ರನ ದ್ರವ್ಯರಾಶಿಗಿಂತ ಕೆಲವೇ ಪಟ್ಟು ಹೆಚ್ಚು ದ್ರವ್ಯರಾಶಿಯಿರುವ ಬಾಹ್ಯ ಗ್ರಹಗಳನ್ನು ಕಂಡುಹಿಡಿಯಬಹುದಾದ ಗುರುತ್ವಾಕರ್ಷಣೆಯ ಮೈಕ್ರೋಲೆನ್ಸಿಂಗ್ ತಂತ್ರವನ್ನು ಬಳಸುತ್ತದೆ. ಈ ಗಣತಿಯು ಮಂಗಳ ಗ್ರಹದ ದ್ರವ್ಯರಾಶಿಯವರೆಗೆ ದ್ರವ್ಯರಾಶಿಗಳನ್ನು ಹೊಂದಿರುವ ಮುಕ್ತ-ತೇಲುವ ಗ್ರಹಗಳ ಮಾದರಿಯನ್ನು ಸಹ ಒಳಗೊಂಡಿರುತ್ತದೆ. ಇದು ಬಾಹ್ಯ ಗ್ರಹಗಳ (exoplanets) ನೇರ ಚಿತ್ರಣಕ್ಕಾಗಿ ‘ಕೊರೊನಾಗ್ರಾಫ್’ (coronagraph) ಅನ್ನು ಒದಗಿಸುವುದಾಗಿದೆ; ಇದು ನಮ್ಮ ಸೌರವ್ಯೂಹದ ಬೃಹತ್ ಗ್ರಹಗಳನ್ನು ಹೋಲುವ, ನಮ್ಮ ನೆರೆಯ ನಕ್ಷತ್ರಗಳ ಸುತ್ತಲಿರುವ ಗ್ರಹಗಳ ಮೊದಲ ನೇರ ಚಿತ್ರಗಳು ಮತ್ತು ವರ್ಣಪಟಲಗಳನ್ನು (spectra) ಒದಗಿಸುವುದಾಗಿರುತ್ತದೆ. ಎರಡನೆಯ ಉಪಕರಣ ಕೊರೊನಾಗ್ರಾಫ್ ಇನ್ಸ್ಟ್ರುಮೆಂಟ್ (CGI) ಒಂದು ಉನ್ನತ-ವ್ಯತಿರಿಕ್ತ(High Contrast), ಸಣ್ಣ-ಕ್ಷೇತ್ರ-ವೀಕ್ಷಣಾ(Small Field of View) ಕ್ಯಾಮೆರಾ ಮತ್ತು ಸ್ಪೆಕ್ಟ್ರೋಮೀಟರ್ ಆಗಿದ್ದು, ಇದು ನಕ್ಷತ್ರಗಳ ಬೆಳಕಿನ ನಿಗ್ರಹದಂತಹ ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ಗೋಚರ ಮತ್ತು ನಿಯರ್-ಇನ್ಫ್ರಾರೆಡ್ ತರಂಗಾಂತರಗಳನ್ನು ಸೆರೆಹಿಡಿಯುತ್ತದೆ. ಇದರ ನಿರ್ದಿಷ್ಟ ಉದ್ದೇಶಗಳಲ್ಲಿ ಗುರುತ್ವಾಕರ್ಷಣಾ ಮೈಕ್ರೋಲೆನ್ಸಿಂಗ್ (gravitational microlensing) ಬಳಸಿ ಸೌರಮಂಡಲದ ಹೊರಗಿನ ಗ್ರಹಗಳ ಹುಡುಕಾಟ ಹಾಗೂ ವಿಶ್ವದ ಕಾಲಾನುಕ್ರಮ ಮತ್ತು ವಿಶ್ವದ ರಚನೆಗಳ ಬೆಳವಣಿಗೆಯ ಅಧ್ಯಯನಗಳು ಸೇರಿವೆ; ಇದರ ಅಂತಿಮ ಗುರಿಯು ಕಡು ಶಕ್ತಿಯ (darkenergy) ಪರಿಣಾಮಗಳು, ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಸ್ಥಿರತೆ ಮತ್ತು ದೇಶ-ಕಾಲದ ವಕ್ರತೆ(curvature of spacetime) ಯನ್ನು ಅಳೆಯುವುದಾಗಿದೆ.
ಜೊತೆಗೆ ಆದಿಮ ಕಪ್ಪು ಕುಳಿಗಳ ಪತ್ತೆಕಾರ್ಯವನ್ನು ಈ ರೋಮನ್ ದೂರದರ್ಶಕವು ಕೈಗೊಳ್ಳಲಿದೆ. ವಿಶ್ವವಿಜ್ಞಾನದಲ್ಲಿ, ‘ಆದಿಮ ಕಪ್ಪು ಕುಳಿಗಳು’ (Primordial Black Holes) ಎಂಬುದು ಮಹಾಸ್ಫೋಟದ (Big Bang) ತಕ್ಷಣವೇ ರೂಪುಗೊಂಡಿರಬಹುದಾದ ಕಲ್ಪಿತ ಕಪ್ಪು ಕುಳಿಗಳಾಗಿವೆ. ವಿಶ್ವದ ವಿಸ್ತರಣಾ ಹಂತದಲ್ಲಿ (inflationary era) ಮತ್ತು ವಿಕಿರಣದ ಪ್ರಾಬಲ್ಯವಿದ್ದ ಆರಂಭಿಕ ಅವಧಿಯಲ್ಲಿ, ಉಪ-ಪರಮಾಣು ದ್ರವ್ಯದ ಅತ್ಯಂತ ಸಾಂದ್ರವಾದ ಭಾಗಗಳು ಗುರುತ್ವಾಕರ್ಷಣೆಯ ಕುಸಿತಕ್ಕೆ ಒಳಗಾಗುವಷ್ಟು ಮಟ್ಟಿಗೆ ಬಿಗಿಯಾಗಿ ಸಂಕುಚಿತಗೊಂಡಿರಬಹುದು; ಹೀಗೆ, ಇಂದಿನ ಕಪ್ಪು ಕುಳಿಗಳ ರಚನೆಗೆ ಸಾಮಾನ್ಯವಾಗಿ ಅಗತ್ಯವಿರುವ ಸೂಪರ್‌ನೋವಾ ಸಂಕೋಚನ ಪ್ರಕ್ರಿಯೆಯಿಲ್ಲದೆಯೇ ಈ ಆದಿಮ ಕಪ್ಪು ಕುಳಿಗಳು ಸೃಷ್ಟಿಯಾಗಿರಬಹುದು. ಈ ಆದಿಮ ಕಪ್ಪು ಕುಳಿಗಳ ಸೃಷ್ಟಿಯು ಮೊದಲ ತಾರೆಗಳ ಉಗಮಕ್ಕೂ ಮುಂಚೆಯೇ ನಡೆದಿರುವುದರಿಂದ, ಇವು ತಾರಾ ಮೂಲದ ಕಪ್ಪು ಕುಳಿಗಳಿಗೆ (stellar black holes) ಇರುವಂತಹ ನಿರ್ದಿಷ್ಟ ದ್ರವ್ಯರಾಶಿಯ ಮಿತಿಗೆ ಒಳಪಡುವುದಿಲ್ಲ. ರೋಮನ್ ದೂರದರ್ಶಕದಿಂದ ಈ ಆದಿಮ ಕಪ್ಪು ಕುಳಿಗಳ ಪತ್ತೆ ಸಾಧ್ಯವಾದರೆ ವಿಶ್ವಸೃಷ್ಟಿಯ, ವಿಕಸನದ ಸಿದ್ದಾಂತಗಳಿಗೆ ಹೊಸ ಹೊಳಹುಗಳನ್ನುನೀಡಬಹುದು.

ರೋಮನ್ ಯೋಜನೆಯು ನಾಸಾ ಅಲ್ಲದೆ ವಿವಿಧಸಂಸ್ಥೆಗಳ, ಪಾಲುದಾರಿಕೆ ಮತ್ತು ಒಪ್ಪಂದಗಳನ್ನು ಒಳಗೊಂಡಿದೆ. ರೋಮನ್ ಯೋಜನಾ ಕಚೇರಿಯು ಮೇರಿಲ್ಯಾಂಡ್‌ನ ಗ್ರೀನ್‌ಬೆಲ್ಟ್‌ನಲ್ಲಿರುವ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದಲ್ಲಿದೆ (Goddard Space Flight Center -GSFC) ಮತ್ತು ಇದು ಯೋಜನೆಯ ಒಟ್ಟಾರೆ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ವೈಡ್-ಫೀಲ್ಡ್ ಇನ್ಸ್ಟ್ರುಮೆಂಟ್ (Wide-Field Instrument), ಬಾಹ್ಯಾಕಾಶ ನೌಕೆ ಮತ್ತು ದೂರದರ್ಶಕದ ಅಭಿವೃದ್ಧಿಯ ನೇತೃತ್ವವನ್ನೂ GSFC ವಹಿಸಿದೆ. ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ(Jet Propulsion Laboratory -JPL)ಯಲ್ಲಿ ಕೊರೊನಾಗ್ರಾಫ್ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ. ರೋಮನ್ ಯೋಜನೆಗೆ ಪೂರಕವಾದ ವೈಜ್ಞಾನಿಕ ಚಟುವಟಿಕೆಗಳನ್ನು ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಬಾಹ್ಯಾಕಾಶ ದೂರದರ್ಶಕ ವಿಜ್ಞಾನ ಸಂಸ್ಥೆ, ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿರುವ ಅತಿಗೆಂಪು ಸಂಸ್ಕರಣೆ ಮತ್ತು ವಿಶ್ಲೇಷಣಾ ಕೇಂದ್ರ ಮತ್ತು GSFC ನಡುವೆ ಹಂಚಿಕೊಳ್ಳಲಾಗಿದೆ.
ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA), ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA), ಮತ್ತು ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಆಸ್ಟ್ರೋನಮಿ ಎಂಬ ನಾಲ್ಕು ಅಂತರರಾಷ್ಟ್ರೀಯ ಪಾಲುದಾರರು NASA ಜೊತೆ ಸೇರಿ ರೋಮನ್‌ಗೆ ವಿವಿಧ ಘಟಕಗಳು ಮತ್ತು ವೈಜ್ಞಾನಿಕ ಬೆಂಬಲವನ್ನು ಒದಗಿಸಿದ್ದಾರೆ. 2016 ರಿಂದ ಆರಂಭಗೊಂಡು NASA ಬಾಹ್ಯಾಕಾಶ ನೌಕೆ, ಕರೋನಾಗ್ರಾಫ್ ಮತ್ತು ಭೂಕೇಂದ್ರದ ಬೆಂಬಲಕ್ಕೆ ESA ಕೈಜೋಡಿಸಿದೆ. ಕರೋನಾಗ್ರಾಫ್ ಉಪಕರಣಕ್ಕಾಗಿ, ಯುರೋಪ್ ಮತ್ತು ಜಪಾನ್‌ನಿಂದ ಸಹಕಾರವನ್ನು ಪಡೆಯಲಾಗಿದೆ.

ಒಟ್ಟು ೪.೩ ಬಿಲಿಯನ್ ಅಮೆರಿಕನ್ ಡಾಲರ್ ನ ಈ ಯೋಜನೆಯ ಉಡಾವಣಾ ವೆಚ್ಚವು ೨೫೫ ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಸ್ಪೇಸ್ ಎಕ್ಸ್ ರವರ ಫಾಲ್ಕನ್ ಹೆವಿ ರಾಕೆಟ್ ಮೂಲಕ ಫ್ಲೊರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ನಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕವು ಇಂದು ಉಡಾವಣೆ ಆಗಲಿದೆ. ಇದು ಐದು ವರ್ಷ ಪ್ರಮುಖ ವೈಜ್ಞಾನಿಕ ಕಾರ್ಯಾಚರಣೆ ನಡೆಸುವ ಉದ್ದೇಶದಿಂದಿದ್ದು ಅದರಲ್ಲಿರುವ ಇಂಧನದ ಸಾಮಾರ್ಥ್ಯವನ್ನು ಗಮನಿಸಿದರೆ ೧೦ ವರ್ಷಗಳ ಕಾಲ ಕಾರ್ಯನಿರ್ವಹಿಸಬಹುದಾಗಿದೆ. ಈ ಯೋಜನೆಯ ಸಫಲತೆಯು ವಿಶ್ವದ ಉಗಮ ಹಾಗೂ ವಿಕಸನ, ಕಡು ಶಕ್ತಿ, ಕಪ್ಪು ದ್ರವ್ಯಗಳ ನಿಗೂಢತೆಯನ್ನು ಭೇದಿಸುವುದರ ಜೊತೆಗೆ ನಮ್ಮ ಕ್ಷೀರಪಥ ಅಥವಾ ಇತರ ನಕ್ಷತ್ರಪುಂಜಗಳ ಬಾಹ್ಯಾಗ್ರಹಗಳಲ್ಲಿ ವಾಸಯೋಗ್ಯವಾದ ಮತ್ತಷ್ಟು ತಾಣಗಳ ಅನ್ವೇಷಿಸಿ ಹೊಸ ಬೆಸುಗೆಗೆ ನಾಂದಿ ಹಾಡಲಿ ಎಂದು ಆಶಿಸೋಣ.
ಹೆಚ್ಚಿನ ಓದಿಗಾಗಿ:
https://science.nasa.gov/mission/roman-space-telescope/
https://en.wikipedia.org/wiki/Nancy_Grace_Roman_Space_Telescope
ಚಿತ್ರ ಕೃಪೆ: ನಾಸಾ
ನಮಸ್ಕಾರ
ರೂಪದರ್ಶಿ ಜಿ ವೆಂಕಟೇಶ
