ಇಂದು ಆಲ್ಬರ್ಟ್ ಐನ್ಸ್ಟೈನ್ ಅವರ ಜನ್ಮ ದಿನ. 1879ರ ಮಾರ್ಚ್ 14ರಂದು, ಜರ್ಮನಿಯ ಉಲ್ಮ್ ಎಂಬಲ್ಲಿ ಜನಿಸಿದ ಅವರು ನಿಜಕ್ಕೂ ಅತ್ಯಂತ ಜನಪ್ರಿಯ ವಿಜ್ಞಾನಿ. ಅವರ ಬಗೆಗಿನ ತಿಳಿವು ಏನೇ ಇಲ್ಲದಿದ್ದರೂ ಸಿನಿಮಾ ತಾರೆಯರ ಹಾಗೆ ಯಾವುದಾದರೂ ವಿಜ್ಞಾನಿ ಪರಿಚಯ ಇದ್ದಾರೆಂದರೆ ಅದು ಐನ್ಸ್ಟೈನ್. ಸಿದ್ದಾಂತ ಮತ್ತು ಸಮೀಕರಣದಿಂದ ಅವರು ವಿಜ್ಞಾನ ಜಗತ್ತಿನಲ್ಲಿ ನಿರಂತರ ನೆನಪು. ಸಾಮಾನ್ಯವಾಗಿ ವಿಜ್ಞಾನಿಗಳನ್ನು ನೆನಪಿಸಿಕೊಳ್ಳಲು ಜನ್ಮ ದಿನ, ತೀರಿಕೊಂಡ ದಿನ ಅಂತೇನೂ ಬೇಕಿಲ್ಲ. ವಿಜ್ಞಾನಿಗಳ ಪ್ರಭಾವ ಅವರ ಕೊಡುಗೆಯ ವಿಜ್ಞಾನದಿಂದ ಪ್ರಭಾವಿಸುತ್ತಲೇ ಇರುವ ಎಂದೆಂದಿಗೂ ಆರದ ದೀಪ. ಜನ್ಮ ದಿನದ ನೆಪದಲ್ಲಿ ಒಂದಷ್ಟು….
ವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ ಅವರನ್ನು ಗುರುತಿಸುವುದೇ ಅವರ ಸಾಪೇಕ್ಷ ಸಿದ್ಧಾಂತದಿಂದ. ಕಳೆದ ಶತಮಾನದ ಅತ್ಯಂತ ಜನಪ್ರಿಯ ಸಿದ್ಧಾಂತವಾಗಿ ವಿಜ್ಞಾನವನ್ನು ಸಾಮಾನ್ಯರ ಬಳಿಗೂ ಕೊಂಡೊಯ್ದ ಕೀರ್ತಿ ಇದಕ್ಕಿದೆ. ಅಂದರೆ ಅದರ ವಿವರಗಳೇನೂ ತಿಳಿವಿಗೆ ಬರದಿದ್ದರೂ ಸಾಪೇಕ್ಷ ಸಿದ್ಧಾಂತ ಎಂಬದು ಒಂದು ಇದೆ! ಎನ್ನುವಷ್ಟರಮಟ್ಟಿಗೆ ಅದು ಜನಪ್ರಿಯ. ಇಂದು ಹೆಚ್ಚು ಹೆಚ್ಚು ಅರ್ಥವಾಗುತ್ತಿರುವ ಸ್ಪೇಸ್ ಅಥವಾ ಆಕಾಶ ಮತ್ತು ಕಾಲದ ವಿವರಗಳಿಂದ ಸಾಪೇಕ್ಷತೆಯು ಇನ್ನಷ್ಟು ಸಾಮಾನ್ಯರ ತಿಳಿವಳಿಕೆಗೆ ಬರಲು ಸಾಧ್ಯವಿದೆ. ಆಕಾಶ ಮತ್ತು ಕಾಲವು ಭೌತ ವಿಜ್ಞಾನದ ನಿಯಮಗಳಾಗಿ ಜಗತ್ತಿನ ವೈವಿಧ್ಯಮಯ ಚಟುವಟಿಕೆಗಳನ್ನು ಅರ್ಥೈಸಲು ಸಾಧ್ಯವಾಗಿದ್ದೇ ಸಾಪೇಕ್ಷ ಸಿದ್ಧಾಂತದಿಂದ. ನಮ್ಮ ಮೊಬೈಲು ಫೋನು, ವಾಹನಗಳಗಳಲ್ಲಿ ಅಳವಡಿಸಿಕೊಂಡಿರುವ ಜಿಪಿಎಸ್(GPS)ಗಳಿಂದ ಮೊದಲ್ಗೊಂಡು ಆಗಸದಲ್ಲೆಲ್ಲೋ ಸಂಭವಿಸುವ ಕೃಷ್ಣರಂದ್ರಗಳವರೆಗೂ ಸಾಪೇಕ್ಷತೆಯ ಅರಿವು ಹರಡಿದೆ.

ಸಾಪೇಕ್ಷ ಸಿದ್ಧಾಂತವು ಅದೆಷ್ಟು ಜನಪ್ರಿಯವೋ ಅಷ್ಟೇ ಸಂಕೀರ್ಣ. ನಮ್ಮ ಸುತ್ತಲಿನ ಜಗತ್ತಿನ ಎಲ್ಲಾ ವಸ್ತುಗಳ ವರ್ತನೆಯನ್ನೂ ಸಾಪೇಕ್ಷ ನಿಯಮಗಳಿಗೆ ಒಳಪಡಿಸುವಂತೆ ಆದರೆ ನಮಗೆ ಕಂಡಹಾಗೆ ಜಗತ್ತು ಇಲ್ಲ ಎನ್ನುವುದನ್ನು ನಂಬುವುದಾದರೂ ಹೇಗೇ? ಮುಖ್ಯವಾಗಿ ಜಗತ್ತಿನಲ್ಲಿ ಯಾವುದೂ ನಿರಪೇಕ್ಷವಲ್ಲ. ಇದು ಹೀಗೆ ಮಾತ್ರವೇ ಅಲ್ಲ. ಅದು ಹೀಗಿರಲು ಅದರ ಜತೆಯಲ್ಲಿ ಮತ್ತೊಂದನ್ನು ನಾವು ಹೋಲಿಸುವುದರಿಂದ ಅದು ಹಾಗಿದೆ ಅಷ್ಟೆ. ಆದ್ದರಿಂದ ಅದು ಹೀಗೆ. ಇಲ್ಲದಿದ್ದರೆ ಅದು ಬೇರೆಯೇ ಆಗಿ ಕಾಣುತ್ತಿತ್ತು ಎನ್ನುವುದರಲ್ಲಿ ಸಾಪೇಕ್ಷತೆಯ ವಿವರಗಳಿವೆ. ಅಂದರೆ ನಮ್ಮ ಅನುಭವವು ನಾವು ಹೋಲಿಸುವ ಅನುಭವಕ್ಕೆ ಸೀಮಿತವಾಗಿದೆ. ಎರಡನೆಯ ಪ್ರಮುಖ ಅಂಶವು ಬೆಳಕಿನ ವೇಗವನ್ನು ಕುರಿತದ್ದು. ಅಂದರೆ ಬೆಳಕಿನ ವೇಗ ಸ್ಥಿರವಾದದ್ದು. ಅದನ್ನು ಯಾರು ಅಳೆದರೂ ಹೇಗೇ ಅಳೆದರು ಅದು ಹೆಚ್ಚು ಕಡಿಮೆಯಾಗದು. ಅದು ಮಾತ್ರವೇ ನಿರಪೇಕ್ಷ. ಅದನ್ನು ಹೊಂದಿಕೊಂಡಂತೆ ಇತರೇ ಅನೇಕ ಸಂಗತಿಗಳು ಸಾಪೇಕ್ಷವಾಗಿವೆ. ಮತ್ತೂ ಒಂದು ಗಮನಾರ್ಹ ವಿಚಾರವೆಂದರೆ ಬೆಳಕಿಗಿಂತ ವೇಗವಾಗಿ ಚಲಿಸಲು ಸಾಧ್ಯವೇ ಇಲ್ಲ ಎಂಬುದೂ ಕೂಡ ಮುಖ್ಯವಾಗಿದೆ. ಇದೂ ಕೂಡ ಸಾಪೇಕ್ಷತೆಯನ್ನು ನಿರ್ಧರಿಸುವ ಮತ್ತೊಂದು ಅಂಶವಾಗಿದೆ. ವಿಶೇಷವೆಂದರೆ ಇದನ್ನು ಹಿಮ್ಮೆಟ್ಟಿಸಲು ಮತ್ತೆ ಮತ್ತೆ ನಡೆಸಲಾದ ಪ್ರಯತ್ನಗಳು ಸೋತಿವೆ. ಅಥವಾ ಸುಮ್ಮನೆ ಊಹಾಪೋಹಗಳೇ ಹಬ್ಬಿವೆ.
ಭೂಮಿಯಿಂದ ಆಗಸದಾಚೆಗೆ ಹಾರಿದ ವ್ಯೋಮಯಾನಿಗಳು ಅತ್ಯಂತ ವೇಗದಲ್ಲಿ ಚಲಿಸುತ್ತಾರೆ ಎಂದುಕೊಳ್ಳೋಣ. ಅಂದರೆ ಭೂಮಿಯಲ್ಲಿ ಅನುಭವಿಸುವುದಕ್ಕಿಂತಾ ಭಿನ್ನ ವೇಳೆಯನ್ನು ಅವರು ಅನುಭವಿಸುತ್ತಾರೆ. ಆಗ ಅವರಿಗೆ ಅನುಭವಕ್ಕೆ ಭೂಮಿಯ ಮೇಲಿನ ಕಾಲದ ಪರಿವೆ ಅರಿವಾಗುವುದಿಲ್ಲ. ಒಂದರ್ಥದಲ್ಲಿ ಕಾಲದಲ್ಲಿ ಕಳೆದುಹೋದಂತೆ, ಕಾಲವೇ ಇಲ್ಲವಾದಂತೆ. ಅದೇ ರೀತಿ ಬೆಳಕಿನ ವೇಗವನ್ನು ಸಮೀಸಿದರೆ ಕಾಲವೇ ನಿಂತು ಹೋಗುವಂತಾಗುತ್ತದೆ. ಅಂದರೆ ಕಾಲದ ಅಳತೆಯು ಬೆಳಕಿನ ವೇಗ ಮತ್ತು ಘಟಿಸುವ ಸಂದರ್ಭವನ್ನು ಸಮೀಕರಿಸುತ್ತದೆ. ಅಂದಂತೆ ನಿಜಕ್ಕೂ ಸಾಪೇಕ್ಷತೆಯನ್ನು ಅರ್ಥೈಸಿಕೊಳ್ಳಲು ಹೆಚ್ಚಿನ ವೇಗದಲ್ಲಿ ವ್ಯೋಮಕ್ಕೆ ಸಾಗಬೇಕಿಲ್ಲ. ಹಲವಾರು ನಮ್ಮ ಸುತ್ತಲಿನ ಘಟನೆಗಳು ಅದನ್ನು ಸಾಕ್ಷಿಕರಿಸುತ್ತವೆ. ಸಾಮಾನ್ಯ ಅರಿವಿಗೆ ಅವುಗಳ ಒಂದಷ್ಟು ಪರಿಚಯದ ಪ್ರಯತ್ನ ಇಲ್ಲಿಯದು. ಇಲ್ಲಿನ ಕೆಲ ಉದಾಹರಣೆಗಳು ಸಾಪೇಕ್ಷತೆಯನ್ನು ಸಾಮಾನ್ಯ ತಿಳಿಗೆ ತರಲು ಸಹಾಯವಾಗಲಿವೆ.

ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ (GPS) ಎಂಬುದೊಂದು ಇತ್ತಿಚೆಗಿನ ಜನಪ್ರಿಯ ತಿಳಿವಳಿಕೆ. ನಾವು ಈ ಭೂಮಿಯ ಮೇಲಿರುವ ಒಂದು ನಿಖರವಾದ ಗುರುತು ಅದು. ಅದನ್ನು ಇತ್ತೀಚೆಗೆ ಕಾರಿಗೆ ಅಳವಡಿಸಿ ಎಲ್ಲಿಗೆ ಹೋಗಬೇಕೆಂಬ ದಾರಿಯನ್ನೂ ಗುರುತಿಸಿಕೊಳ್ಳಲು, ಅಥವಾ ಇಂಟರ್ನೆಟ್ನಲ್ಲಿ ಎಲ್ಲಿಂದ ಎಲ್ಲಿಗೆ ಹೇಗೆ ಹತ್ತಿರದ ದಾರಿಯಲ್ಲಿ ಹೋಗಬೇಕೆಂನುದನ್ನೂ ನಾವು ನೋಡುತ್ತೇವಲ್ಲವೇ? ಇದು ಸಾಧ್ಯವಾದದ್ದು ಸಾಪೇಕ್ಷತೆಯ ಅನ್ವಯದಿಂದ. ಇದರಲ್ಲಿ ಹೆಚ್ಚಿನ ವೇಗದ ಚಲನೆಗಾಗಿ ಆಗಸದಲ್ಲಿ ಹಾರಿ ಬಿಟ್ಟ ಉಪಗ್ರಹ ಅಥವಾ ಸ್ಯಾಟಲೈಟ್ಗಳನ್ನು ಬಳಸಿಕೊಳ್ಳುತ್ತೇವೆ. ಸಾಮಾನ್ಯವಾಗಿ ಉಪಗ್ರಹಗಳು ಬೆಳಕಿನ ವೇಗಕ್ಕೆ ಹತ್ತಿರವಲ್ಲದಿದ್ದರೂ ನಮ್ಮ ಭೂಮಿಯಲ್ಲಿ ಅನುಭವಿಸುವ ಚಲನೆಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುತ್ತವೆ. ಆಕಾಶ ಮತ್ತು ಕಾಲದ ಸಾಪೇಕ್ಷತೆಯ ಅರಿವಿನಿಂದ ಇದು ಸಾಧ್ಯವಾಗಿದೆ.
ಹಾಗೆಯೇ ವಿದ್ಯುತ್ ಆಯಸ್ಕಾಂತಗಳು ಸಾಪೇಕ್ಷತೆಯ ಸಾಮಾನ್ಯ ಅರಿವಿಗೆ ಮತ್ತೊಂದು ಉದಾಹರಣೆ. ವಿದ್ಯುತ್ತನ್ನು ನಾವು ಬಳಸುತ್ತಿದ್ದೇವೆ ಎಂದರೆ ವಿದ್ಯುತ್ ಉತ್ಪಾದಕಗಳು ಕೆಲಸ ನಿರ್ವಹಿಸುತ್ತಿವೆ ಎಂದರ್ಥವಲ್ಲವೇ? ಹಾಗೆಯೇ ಒಂದು ವಿದ್ಯುತ್ ವಾಹಕವಾಗಬಲ್ಲ ತಂತಿಯನ್ನು ಆಯಸ್ಕಾಂತೀಯ ವಲಯದಲ್ಲಿ ತಂದಾಗ ಅದರಲ್ಲಿ ವಿದ್ಯುತ್ ಪ್ರವಹಿಸುತ್ತದೆ. ಹಾಗೇಯೇ ವಿರುದ್ದವಾಗಿಯೂ ಸಹ. ಅಂದರೆ ವಿದ್ಯುತ್ತನ್ನು ಬಳಸಿಯೂ ಆಯಸ್ಕಾಂತಗಳನ್ನು ಮಾಡಲಾಗುತ್ತದೆ. ಇವೆರಡೂ ಸಾಪೇಕ್ಷ ನಿಯಮದಿಂದ ಉಂಟಾದ ಕ್ರಿಯೆಗಳು. ಅಂದರೆ ಇದರಿಂದ ಮಾತ್ರವೇ ಅದು ಅಥವಾ ಅದರಿಂದ ಮಾತ್ರವೇ ಇದು ಎಂಬಂತೆ! ವಿದ್ಯುತ್ ಬಲ ಮತ್ತು ಆಯಸ್ಕಾಂತೀಯ ವಲಯ ಎರಡೂ ಅನೇಕ ಬಗೆಯಲ್ಲಿ ಸಾಪೇಕ್ಷವಾದ ಸಂಬಂಧವನ್ನು ಹೊಂದಿವೆ. ಅದರಿಂದಾಗಿಯೇ ವಿದ್ಯುತ್ ಮತ್ತು ಆಯಸ್ಕಾಂತ ಎರಡೂ ಸಂಬಂಧಗಳನ್ನು ಹೊಂದಿರುತ್ತವೆ.
ಮತ್ತೊಂದು ಸರಳ ಉದಾಹರಣೆ ಎಂದರೆ ನಾವು ಆಭರಣಗಳಿಗಾಗಿ ಬಳಸುವ ಚಿನ್ನದ ಮೆರುಗು ಮತ್ತು ಅದರ ವರ್ತನೆಯೂ ಸಹಾ ಸಾಪೇಕ್ಷತೆಯ ಸಾಧ್ಯತೆಗಳಿಂದಾಗಿದೆ. ಚಿನ್ನವು ಒಂದು ಭಾರವಾದ ಮತ್ತು ಅತ್ಯಂತ ಬೆರಗಿನ ಬಣ್ಣವುಳ್ಳ ಲೋಹ. ಮನುಷ್ಯರನ್ನು ಅದರಷ್ಟು ಮೋಹಕ್ಕೆ ಒಗ್ಗಿಸಿಕೊಂಡ ವಸ್ತು ಬೇರೊಂದು ಇರಲಾರದು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಚಿನ್ನ ಅದೆಷ್ಟು ಹಳೆಯದಾದರೂ ಅದರ ಮೆರುಗು ಕಡಿಮೆಯಾಗದು. ಅದರ ಭಾರ ಮತ್ತು ಮೆರುಗನ್ನು ಸದಾ ಉಳಿಸಿಕೊಳ್ಳುವ ಬಗೆಯೂ ಸಾಪೇಕ್ಷವೇ! ಅಯ್ಯೊ ಇದೇನು ಇಲ್ಲಿಗೂ ಐನ್ಸ್ಟೈನ್ರ ಸೈದ್ಧಾಂತಿಕ ಅಳವಡಿಕೆಯಾ ಅನ್ನಿಸಿತು. ಆದರೆ ನಿಜ. ಒಂದು ಭಾರದ ಲೋಹವಾಗಿ ಚಿನ್ನವು ತನ್ನ ಪರಮಾಣು ರಚನೆಯಲ್ಲಿನ ಒಳಸುತ್ತಿನ ಇಲೆಕ್ಟ್ರಾನುಗಳು ಅತ್ಯಂತ ವೇಗದಲ್ಲಿ ಸುತ್ತುತ್ತಿರುತ್ತವೆ. ಆಗ ಅವುಗಳ ಸಾಪೇಕ್ಷ ದ್ರವ್ಯರಾಶಿ ಮತ್ತು ಉದ್ದದ ಉಡುಗುವಿಕೆಯು ಸಾಪೇಕ್ಷವಾಗುತ್ತದೆ. ಇದು ಅದರ ಮೇಲ್ಮೈಯ ಬೆಳಕಿನ ಪ್ರತಿಫಲನದ ಮೇಲೆ ಪ್ರಭಾವಿಸುತ್ತದೆ. ಹೆಚ್ಚಿನ ತರಂಗ ದೂರದ ಬೆಳಕನ್ನು ಮಾತ್ರವೇ ಪ್ರತಿಫಲಿಸಿ ನಮ್ಮ ಕಣ್ಣುಗಳಿಗೆ ಮೆರುಗನ್ನು ಕೊಡುವ ಬಣ್ಣವಾಗಿ ಹೊಮ್ಮುತ್ತದೆ. ನಮ್ಮ ಮೋಹಕ್ಕೆ ಒಳಪಡಿಸುವ ಬಣ್ಣವೂ ಸಾಪೇಕ್ಷ ಎಂದ ಮೇಲೆ ಆಸೆಯನ್ನು ಹೇಗೆ ಇಟ್ಟುಕೊಳ್ಳುವುದು? ಏನಿಲ್ಲ ಅದರ ಸತ್ಯದ ಅರಿವಿನಿಂದ ಹೆಚ್ಚಿನ ಆಸೆ ಚಿಗುರೀತು.
ಅದಿರಲಿ ಅದರ ಮೆರುಗೂ ಹಾಳಾಗದಂತಿರಲು ಸಾಪೇಕ್ಷವೆ ಕಾರಣ! ಒಂದು ಕ್ಷಣ ಪರಮಾಣು ರಚನೆಯನ್ನು ಊಹಿಸಿಕೊಂಡರೆ ನ್ಯೂಕ್ಲಿಯಸ್ಸಿನ ಸುತ್ತ ಸುತ್ತುವ ಇಲೆಕ್ಟ್ರಾನುಗಳು ಮನಸ್ಸಿಗೆ ಬರುತ್ತವೆ. ವಿವಿಧ ಪಥಗಳನ್ನು ಹೊಂದಿ ಇಲೆಕ್ಟಾçನುಗಳು ಸುತ್ತುತ್ತಿರುತ್ತವೆ. ಇದರಲ್ಲಿ ಸಾಮಾನ್ಯವಾಗಿ ಹೊರ ಸುತ್ತಿನಲ್ಲಿರುವ ಇಲೆಕ್ಟ್ರಾನು ಅದರ ಕ್ರಿಯಾಶೀಲ ವರ್ತನೆಯನ್ನು ನಿರ್ಧರಿಸುತ್ತದೆ. ಕ್ಯಾಲ್ಸಿಯಂ, ಲಿಥಿಯಂಗಳಲ್ಲಿ ಕೊನೆಯ ಸುತ್ತಿನಲ್ಲಿ ಒಂದೇ ಇಲೆಕ್ಟ್ರಾನು ಇದ್ದು ಅತ್ಯಂತ ಕ್ರಿಯಾಶೀಲವಾಗಿರುತ್ತದೆ. ಅಂದರೆ ಬೇಗನೆ ಆಮ್ಲಜನಕದೊಡಗೂಡಿ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತದೆ. ಆದರೆ ಚಿನ್ನ ಮಾತ್ರ ಇದಕ್ಕೆ ಅಪವಾದ. ಒಂದೇ ಇಲೆಕ್ಟ್ರಾನು ಹೊಂದಿಯೂ ಕೂಡ ಅದು ಬೇಗನೆ ವರ್ತಿಸುವ ಪರಮಾಣುವಾಗಿಲ್ಲ! ಇದು ಬೇಗ ವರ್ತಿಸದು. ಆಕ್ಸೈಡ್ ಆಗದು. ಹಾಗಾಗಿ ಬೇಗ ಹಾಳಾಗದೆ ಮೆರಗು ಕಡಿಮೆಯಾಗುವುದಿಲ್ಲ. ಇದೂ ಕೂಡ ಅದರ ಸಾಪೇಕ್ಷ ಗುಣದ ಫಲವೇ. ಅಂದರೆ ಹೆಚ್ಚಿನ ಭಾರದಿಂದ ಇದರ ಇಲೆಕ್ಟ್ರಾನು ಅದರ ನ್ಯೂಕ್ಲಿಯಸ್ಸಿಗೆ ಹೆಚ್ಚು ಆಕರ್ಷಿಸುತ್ತಾ ಅದರ ವರ್ತನೆಯನ್ನು ಹಿಡಿತದಲ್ಲಿ ಇಡುತ್ತದೆ.
ಚಿನ್ನದಂತೆಯೇ ಪಾದರಸವೂ ಕೂಡ ಭಾರವಾದ ಲೋಹವೇ. ಇದರಲ್ಲೂ ಅದರ ಇಲೆಕ್ಟಾçನುಗಳು ನ್ಯೂಕ್ಲಿಯಸ್ಸಿಗೆ ಹತ್ತಿಕೊಂಡಂತೆಯೇ ಅತ್ಯಂತ ವೇಗದಲ್ಲಿ ಸುತ್ತುತ್ತವೆ. ಅದರಿಂದ ಹೆಚ್ಚಿನ ಸಾಪೇಕ್ಷ ದ್ರವ್ಯರಾಶಿಯನ್ನು ಪಡೆದಿರುತ್ತವೆ. ಆದರೆ ಇದರಲ್ಲಿ ಅದರ ಪರಮಾಣುಗಳ ನಡುವಣ ಬಂಧಗಳು ಸಡಿಲವಾಗಿರುತ್ತವೆ. ಅದರಿಂದ ನಾವದನ್ನು ದ್ರವವಾಗಿ ನೋಡಲು ಸಾಧ್ಯವಾಗಿದೆ. ಹೊಳೆಯುವಂತಿದ್ದೂ ಲೋಹವಾಗಿಯೂ ದ್ರವವಾಗಿ ನಾವದನ್ನು ಕಾಣಲು ಸಾಧ್ಯವಾಗಿದ್ದು ಸಾಪೇಕ್ಷತೆಯ ಸಾಧ್ಯತೆಯಿಂದ.
ಮತ್ತೊಂದು ಉದಾಹರಣೆಯನ್ನು ನಮ್ಮ ಹಳೆಯ ಟಿವಿಗಳಿಂದ ನೋಡಬಹುದು. ಈ ಹಿಂದೆಲ್ಲಾ ನಮ್ಮ ಮನೆಗಳಲ್ಲಿನ ಟೆಲಿವಿಷನ್ಗಳು ದೊಡ್ಡ ದೊಡ್ಡ ಬಾಕ್ಸ್ಗಳಂತೆ ಇರುತ್ತಿದ್ದವಲ್ಲವೇ? ಒಂದು ದಪ್ಪನೆಯ ಗಾಜಿನ ಬುರುಡೆಯಂತೆ ಕಾಣುವುದನ್ನು ಬಾಕ್ಸ್ನೊಳಗೆ ಕೂರಿಸಿದಂತೆ ಇರುತ್ತಿದ್ದವು. ಈಗಲೂ ಕೆಲವು ಮನೆಗಳಲ್ಲಿ ಹಳೆಯ ಟೆಲಿವಿಷನ್ಗಳು ಇದ್ದಿರಬಹುದು. ಆ ಗಾಜಿನ ಬುರುಡೆಗಳು ಕ್ಯಾಥೋಡ್ ಕಿರಣದ ಟ್ಯೂಬ್ಗಳು. ಆಗೆಲ್ಲಾ ಅದೇ ಟಿವಿಯ ಬಹು ಮುಖ್ಯ ಭಾಗವೆಂದು ಕರೆಯುತ್ತಿದ್ದೆವು. ಅದರೊಳಗಿನಿಂದ ಬೆಳಕು ಪ್ರತಿಫಲಿಸಿ ಚಿತ್ರಗಳು ಮೂಡುತ್ತಿದ್ದವು. ಈಗ ಹಾಗಲ್ಲ. ತೆಳ್ಳನೆಯ ಎಲ್ಇಡಿ ತೆರೆ ಬೆಳಕು ಅದರಂತೆ ಪ್ರತಿಫಲಿಸದು. ಹಳೆಯ ಟಿವಿಗಳಲ್ಲಿ ಗಾಜಿನ ಬುರುಡೆಯಂತಹಾ ಕ್ಯಾಥೋಡ್ನೊಳ ಗೋಡೆಗೆ ಪ್ರತಿಫಲನವನ್ನು ಉಂಟು ಮಾಡುವ ರಸಾಯನಿಕವನ್ನು ಲೇಪಿಸಿರುತ್ತಿದ್ದರು. ಅದು ಬೆಳಕನ್ನು ಪ್ರತಿಫಲಿಸಿ ಚಿತ್ರಗಳನ್ನು ಮೂಡಿಸುತ್ತಿತ್ತು. ಆ ಮೂಡಿಸುವ ಕ್ರಿಯೆಯು ಇಲೆಕ್ಟ್ರಾನುಗಳ ಬೆಳಕಿನ ವೇಗದ ಹತ್ತಿರಕ್ಕೆ ಕಳಿಹಿಸಿ ಸಾಪೇಕ್ಷತೆಯಿಂದ ಗಳಿಸಿದ ಚಿತ್ರವಾಗಿರುತ್ತಿತ್ತು. ಬೆಳಕಿನ ಪ್ರತಿಫಲನದಿಂದ ಉಂಟಾದ ಚಿತ್ರಗಳಿಂದ ನಾವು ನೋಡಲು ಸಾಧ್ಯವಾಗುತ್ತಿತ್ತು.
ಸಾಪೇಕ್ಷತೆಯು ಆಲ್ಬರ್ಟ್ ಐನ್ಸ್ಟೈನ್ ಅವರ ಪ್ರಕೃತಿ ಮತ್ತು ಸತ್ಯದ ಕುರಿತ ಅಗಾಧ ವಿಸ್ಮಯದ ಫಲ. ಸದಾ ಒಂದಿಲ್ಲೊಂದು ಅಲೋಚನೆಗಳತ್ತಲೇ ಇರುವಂತೆ ಕಾಣುತ್ತಿದ್ದ ಅವರು ಸರಳ ಜೀವನ ಶೈಲಿಯ ಮೂಲಕ ಹಾಗೂ ವಿಸ್ಮಯದ ತಿಳಿವಿನ ಮೂಲಕ ಜಗತ್ತನ್ನು ಚಿಕಿತಗೊಳಿಸಿದ್ದರು. ಕಳೆದ ಶತಮಾನದಲ್ಲೇ ಪ್ರತಿಪಾದಿಸಿದ್ದ ಅವರ ಸಾಪೇಕ್ಷ ಸಿದ್ಧಾಂತವು ಶತಮಾನ ದಾಟಿ ಒಂದು ದಶಕವೂ ಕಳೆದರೂ ಹೊಳಪು ಕಳೆದುಕೊಂಡಿಲ್ಲ!
ಜಗತ್ತಿನ ಅತ್ಯಂತ ಜನಪ್ರಿಯ ಸಮೀಕರಣ
ಜೀವವಿಜ್ಞಾನದ ಕ್ಲಾಸಿನಲ್ಲಿ ಪಾಠದ ಮಧ್ಯೆ ಬೋರ್ಡಿನ ಮೇಲೆ ಸಮೀಕರಣವನ್ನೋ ಗ್ರಾಫನ್ನೋ ಹಾಕಿದಾಗ ವಿದ್ಯಾರ್ಥಿಗಳು ಸ್ವಲ್ಪ ಕಸಿವಿಸಿಮಾಡಿಕೊಂಡು ನೋಡುತ್ತಾರೆ. ಎಂತಹದ್ದೋ ಕಷ್ಟನೋ ಏನೋ ಅನ್ನುವಂತೆ. ವಿಜ್ಞಾನವನ್ನು ಗಣೀತೀಯ ಮಾಧ್ಯಮದ ಸಂವಹನದಲ್ಲಿ ಬಳಸುವ ಗ್ರಾಫ್ ಆಗಲಿ ಸಮೀಕರಣವಾಗಲಿ ಇಲ್ಲದೆ ವಿಜ್ಞಾನದಲ್ಲಿ ವಿವರಣೆಗಳು ಮುಗಿಯವು. ಅಷ್ಟರ ಮಟ್ಟಿಗೆ ಸಮೀಕರಣಗಳು ವಿಜ್ಞಾನದಲ್ಲಿ ಜನಪ್ರಿಯ. ಒಂದನ್ನೊಂದು ಸಮೀಕರಿಸದೆ ವಿಜ್ಞಾನದಲ್ಲಿ ವಿಚಾರಗಳು ಚಾಲ್ತಿಯಲ್ಲಿರವು. ಎಲ್ಲೋ ಪಾರ್ಕಿನಲ್ಲೋ, ತೋಟದಲ್ಲೋ, ಆಟದ ಬಯಲಿನಲ್ಲೋ ನಡೆವಾಗ ಅಡ್ಡ ದಾರಿಯ ಕಾಲುದಾರಿ ಕಂಡರೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ನಿಮಗೆ ಪೈಥಾಗೊರಸ್ ನೆನಪಾಗದೆ ಇರುವುದಿಲ್ಲ. ಶಾಲಾದಿನಗಳಲ್ಲಿ ಮೊದಲು ಪರಿಚಯವಾಗುವ ಪೈಥಾಗೊರಸ್, ಶತಮಾನಗಳಷ್ಟು ದೀರ್ಘಕಾಲದ ದೂರ ಸವೆಸಿ ಬಂದು ತ್ರಿಕೋನದ ಕರ್ಣದ ದೂರದ ಸಂಬಂಧವನ್ನು ಈ ಅಡ್ಡದಾರಿಗಳಲ್ಲಿ ಹಾಯುವಾಗ ಕಂಡಂತೆ ಭಾಸವಾಗುವು ಖಂಡಿತ. ಪೈಥಾಗೊರಸ್ ಪ್ರಮೇಯದ ಸಮೀಕರಣವು ತ್ರಿಕೋನದ ಬಾಹುಗಳ ಸಂಬಂಧವನ್ನು ಕರ್ಣದ ಅಳತೆಯಲ್ಲಿ ಸಮೀಕರಿಸುತ್ತದೆ. ಅದರ ಪ್ರಾಯೋಗಿಕ ಬಳಕೆಯೇ ನಮ್ಮ ಅಡ್ಡದಾರಿಯ ಓಡಾಟ. ಪೈಥಾಗೊರಸ್ನ ಸಮೀಕರಣದ ಬಳಕೆಯಿಂದಂಲೇ ಜ್ಯಾಮಿತಿಯ, ಜತೆಗೆ ತ್ರಿಕೋನಮಿತಿಯ ವಿಕಾಸವಾಗಿದೆ. ಇಂದಿನ ಜಿ.ಪಿ.ಎಸ್ ಕೂಡ ಈ ಸಮೀಕರಣವನ್ನು ಬಳಸಿಕೊಂಡಿದೆ.
ಈ ಸಮೀಕರಣಗಳು ಸಾಮಾನ್ಯ ವಹಿವಾಟಿನಲ್ಲಿ ಪಠ್ಯದ ವಿವರವನ್ನು ಮಧ್ಯೆ ನಿಲ್ಲಿಸಿದಂತೆ ಕಂಡರೂ ಪುಟಗಟ್ಟಲೇ ಪಠ್ಯದ ವಿವರವನ್ನು ಮಿತಿಗೊಳಿಸುವ ಸಾಧನಗಳು. ಉದ್ದವಾದ ವಿವರಣೆಯನ್ನು ಚಿಕ್ಕದಾಗಿ ಅಷ್ಟೇ ನಿಖರವಾಗಿ ಹೇಳಲು ಸಮೀಕರಣಗಳಿಗೆ ಮಾತ್ರವೇ ಸಾಧ್ಯ! ನಮ್ಮ ಬದುಕೂ ಸಹಾ ಸಮೀಕರಣಗಳ ಸಂಕೀರ್ಣ ಸಂಗತಿಗಳನ್ನೇ ಆವರಿಸಿವೆ. ಅದಕ್ಕೆಂದೇ ನಾವು ಅನೇಕ ಸಂಗತಿಗಳನ್ನು ಸಮೀಕರಿಸುತ್ತಲೇ ಚಲನಶೀಲವಾಗಿರುತ್ತೇವೆ. ಈ ಜಗತ್ತು ನಡೆಯುತ್ತಿರುವುದೇ ಈ ಸಮೀಕರಣವಾದಾಗ ಮಾತ್ರ. ಇಡೀ ವಿಶ್ವದ ಎಲ್ಲ ಕ್ರಿಯೆಗಳೂ ತರ್ಕ ಬದ್ದ ನಿಯಮ ಹಾಗೂ ಸಮತೂಕದ ಆಧಾರಗಳಿಂದ ನಡೆಯುತ್ತಿರುತ್ತವೆ. ನಮ್ಮ ಗೋಚರಕ್ಕೆ ಎಷ್ಟೊಂದು ಕಲಸಮೇಲೋಗರದಂತೆ ಕಾಣುವ ಜಗತ್ತಿನ ಆಗು ಹೋಗುಗಳು ಈ ತರ್ಕಬದ್ದವಾದ ಮತ್ತು ಸರಿ ತೂಗಿಸುವ ಸಂಯಮವನ್ನು ಒಳಗೊಂಡಿವೆ. ಅದಕ್ಕೆ ರಸಾಯನ ವಿಜ್ಞಾನದಲ್ಲಂತೂ ಈ ಸಮೀಕರಣಗಳ ಸರಿತೂಗಿಸುವ ಸಂದರ್ಭಗಳು ಕಲಿಕೆಯ ಮಾರ್ಗದಲ್ಲಿ ಸದಾ ಕಾಣುವ ಸಂಗತಿಗಳು.

ಐನ್ಸ್ಟೈನ್ರ E=mc2 ಸಮೀಕರಣವು ಅತ್ಯಂತ ಹೆಚ್ಚು ಜನಪ್ರಿಯವಾದ ಸಮೀಕರಣ. ಇದು ದ್ರವ್ಯರಾಶಿ ಮತ್ತು ಶಕ್ತಿಯ ಸಮಾನತೆಯ ಸಮೀಕರಣ. ಇದು ಶಕ್ತಿ (E) ದ್ರವ್ಯರಾಶಿ (m) ಅನ್ನು ಬೆಳಕಿನ ವೇಗದ (c2) ವರ್ಗದಿಂದ ಗುಣಿಸಿದಾಗ ಸಿಗುವ ಮೌಲ್ಯ. ದ್ರವ್ಯರಾಶಿ ಮತ್ತು ಶಕ್ತಿಯು ಒಂದೇ ವಸ್ತುವಿನ ಪರಸ್ಪರ ಬದಲಾಯಿಸಬಹುದಾದ ರೂಪಗಳಾಗಿವೆ ಎಂದೂ ತಿಳಿಸುವ ಸೂತ್ರ. ಜೊತೆಗೆ ವಸ್ತುವಿನೊಳಗೆ ಒಳಗೊಂಡಿರುವ ಅಪಾರ ಶಕ್ತಿಯನ್ನು ಹೊಂದಿರುವುದನ್ನೂ ತಿಳಿಸಿವ ಸೂತ್ರ. ಇದು ಪರಮಾಣು ಭೌತವಿಜ್ಞಾನ (Nuclear Physics) ಮತ್ತು ನಕ್ಷತ್ರಗಳನ್ನು ಅರ್ಥಮಾಡಿಕೊಳ್ಳಲು ಬೇಕಾದ ಮೂಲಭೂತವಾದ ಪರಿಕಲ್ಪನೆಯನ್ನೂ ಒದಗಿಸಿದೆ.
ಇದೇ E=mc2 ಹೆಸರಿನಲ್ಲಿ ಒಂದು ಚಲನಚಿತ್ರ ಕೂಡ ತಯಾರಾಗಿದೆ. ಅದು ಶಕ್ತಿ ಮತ್ತು ದ್ರವ್ಯರಾಶಿಯ ನಡುವಣ ಸಂಕೀರ್ಣ ಸಂಬಂಧದ ಸಮೀಕರಣದ ಕಥೆಯನ್ನೇ ವಸ್ತವಾಗುಳ್ಳ ಚಿತ್ರ. ಅದರ ಇಡೀ ಕಥೆಯನ್ನು ಹೇಳುತ್ತದೆ. ಆ ಚಿತ್ರವನ್ನು https://www.youtube.com/watch?v=BeaWfkgrf8I&t=721s ಈ ಲಿಂಕ್ ಬಳಸಿ ನೋಡಬಹುದು. (ಹೇಗೂ ಇಂದು ಶನಿವಾರ ನಾಳೆ ರಜೆ, 1 ಗಂಟೆ 45 ನಿಮಿಷದ ಈ ಚಿತ್ರವನ್ನು ಇಂದೇ ನಿಮ್ಮ ಮನೆಯವರ ಹಾಗೂ ಮಕ್ಕಳ ಜೊತೆಗೆ ಕುಳಿತು ನೋಡಿ) ಇದರಲ್ಲಿ ಹಿಂದಿನಿಂದಲೂ ಅರಿವಿದ್ದ ಶಕ್ತಿಯನ್ನು ವಸ್ತುಗಳ ದ್ರವ್ಯರಾಶಿ ಮತ್ತು ಬೆಳಕಿನ ವೇಗದೊಂದಿಗೆ ಸಮೀಕರಿಸುವ ಸುಮಾರು ಶತಮಾನಗಳ ಕಾಳದ ವಿಜ್ಞಾನದ ಹುಡುಕಾಟದ ತಿಳಿವನ್ನು ಅರ್ಥೈಸಿಕೊಳ್ಳಿ. ಏಕೆಂದರೆ ಸ್ವತಃ ಐನ್ಸ್ಟೈನ್ ಇದನ್ನು ಕೇವಲ ಊಹಿಸಿದ್ದಷ್ಟೇ… ಅದರ ವಿವರಗಳು ನಂತರವಷ್ಟೇ ತಿಳಿದದ್ದು. ಅದೊಂದು ಮಹಾನ್ ಕಥನ! ನೋಡಿ..

ಅದೇನೋ ಸರಿಯೇ ಈ ವಿಜ್ಞಾನದಲ್ಲಿ ಸಮೀಕರಣಗಳಿಗೆ ಲೆಕ್ಕವೇ ಇಲ್ಲ. ಅಷ್ಟೊಂದು ಸಂಖ್ಯೆಯಲ್ಲಿ ವಿಜ್ಞಾನದ ಸಂವಹನವನ್ನು ಸರಳಗೊಳಿಸುವಲ್ಲಿ ನಿರತವಾಗಿವೆ. ನೂರಾರು ಸಮೀಕರಣಗಳು ಹಲವಾರು ವಿಜ್ಞಾನಿಗಳ ಹೆಸರಿಂದಲೇ ಕರೆಯಲ್ಪಡುತ್ತಿವೆ. ಥರ್ಮೋಡೈನಮಿಕ್ಸ್ ಕುರಿತ ಮಾಕ್ಸ್ ಪ್ಲಾಂಕ್ ಸಮೀಕರಣ. ಬರ್ನೋಲಿಯ ಸಮೀಕರಣ, ಲ್ಯಾಪ್ಲೇಸ್ ಸಮೀಕರಣ ಹೀಗೆ. ವಿಜ್ಞಾನ ಜಗತ್ತು ಸಮೀಕರಣಗಳಿಂದ ಸಮೃದ್ಧವಾಗಿದೆ. ವಿಜ್ಞಾನಕ್ಕೆ ಅಂತಹದ್ದೊಂದು ಸಮಸ್ಥಿತಿ ಸಾಧ್ಯವಾಗದೆ ಇದ್ದರೆ ಅದರ ವಿವರಣೆಯೇ ಸಂಪೂರ್ಣಗೊಳ್ಳುವುದಿಲ್ಲ. ಇಡೀ ಜಗತ್ತಿನ ಅನೇಕ ಪ್ರಕ್ರಿಯೆಗಳೂ ಸಹಾ ಕ್ರಿಯೆಯಾಗಿ ಪೂರ್ಣಗೊಳ್ಳುವುದೇ ಆಯಾ ವಸ್ತುಗಳ ನಡುವಣ ಸಮಸ್ಥಿತಿ ಸಾಧ್ಯವಾದಾಗ ಮಾತ್ರ. ಅದನ್ನೇ ಸಮೀಕರಣದ ಸಾಧ್ಯತೆಯು ಬಳಸಿಕೊಂಡಿದೆ. ಅದನ್ನೇ ವಿಜ್ಞಾನದ ಸಂವಹನದಲ್ಲಿ ಗಣೀತೀಯ ಭಾಷೆಯಲ್ಲಿ ನಿರೂಪಗೊಳಿಸಿದೆ.
ಸಮೀಕರಣವು ಸಮಸ್ಥಿತಿಯನ್ನು ಹುಡುಕುವ ಜತೆಗೆ ತನ್ನದೇ ಸಮಸ್ಥಿತಿಯನ್ನೂ ಕಾಪಾಡಿಕೊಳ್ಳಬೇಕಿದೆ. ವಸ್ತುಗಳ ಮೂಲ ಸ್ಥಿತಿಯ ಪರಮಾಣುಗಳ ರಚನೆಯೂ ಸಮಸ್ಥಿತಿಯಲ್ಲಿಲ್ಲದಿದ್ದರೆ ಅದರ ಪ್ರಕ್ರಿಯೆಯೂ ಪೂರ್ಣವಾಗದು. ಹಾಗಾಗಿ ಸಮೀಕರಣದ ಸಾದ್ಯತೆಯೆಂದರೆ ನೈಸರ್ಗಿಕ ಚಲನಾಶೀಲಸ್ಥಿತಿ. ಇದನ್ನೂ ಕೂಡ ಸಮೀಕರಣಗಳ ಮೂಲಕವೇ ಪ್ರಸ್ಥುತಿ ಸಾಧ್ಯವಿದೆ. ಮೂಲ ವಸ್ತುಗಳ ಸಂಯೋಗದಿಂದ ಉಂಟಾಗಿರುವ ಈ ಅನಂತ ಸಂಖ್ಯೆಯೆ ಸಂಕೀರ್ಣ ಸಂಯುಕ್ತಗಳ ಜಗತ್ತು ಸಮಸ್ಥಿತಿಯ ಸಮೀಕರಣದಿಂದಲೇ ಉಂಟಾಗಿದೆ. ನಮಗೂ ಅದೆಷ್ಟೇ ಬಾರಿ, “ಅಯ್ಯೋ ಅವನಿಗೂ/ಅವಳಿಗೂ ನನಗೂ ಈಕ್ವೇಶನ್ ಸರಿ ಹೋಗಲ್ಲ ಅಂತಾನೋ ಅಥವಾ ತುಂಬಾ ಒಳ್ಳೆಯ ಈಕ್ವೇಶನ್ ಅಂತಾನೋ” ಅನಿಸಿರಬೇಕಲ್ಲವೇ? ಈ ಸಮೀಕರಣ ಸಮದೂಗಿದಾಗಲೇ ಪ್ರಕ್ರಿಯೆಯು ಸಂಪೂರ್ಣವಾಗುವುದು. ಜಗತ್ತಿನ ಎಲ್ಲಾ ಚಟುವಟಿಕೆಗಳೂ ಸಮಸ್ಥಿಯಲ್ಲಿದ್ದರೆ ಆಗ ಸಮೀಕರಣ ಬ್ಯಾಲೆನ್ಸ್ ಆಗಿರಲೇಬೇಕು. ಈ ಬ್ಯಾಲೆನ್ಸ್ಗಾಗಿಯೇ ನಿಸರ್ಗದ ಹಾಗೂ ಬದುಕಿನ ಎಲ್ಲಾ ಪ್ರಕ್ರಿಯೆಗಳ ಹೋರಾಟ. ವಿಜ್ಞಾನವಂತೂ ಸಮೀಕರಣಗಳಿಂದಲೇ ಅನೇಕ ವಿವರಗಳ ಸಾಧ್ಯತೆಯನ್ನು ನೀಡಿದೆ.
ಆಲ್ಬರ್ಟ್ ಐನ್ಸ್ಟೈನ್ ಜನ್ಮ ದಿನದ ಶುಭಾಶಯಗಳೊಂದಿಗೆ.. ಅವರ ನೆನಪಿಗೆ ತುಸುವಾದರೂ ಹೇಳುವ ನೆಪ ಅಷ್ಟೇ.. ಈ ದಿನವೇ ಚಿತ್ರವನ್ನು ನೋಡಲು ಮರೆಯಬೇಡಿ. 1955 ರ ಏಪ್ರಿಲ್ 18ರಂದು ಐನ್ಸ್ಟೈನ್ ತೀರಿಕೊಂಡಾಗ ವೈಜ್ಞಾನಿಕ ಪ್ರಪಂಚದಲ್ಲಷ್ಟೇ ಅಲ್ಲದೆ, ಸಾರ್ವಜನಿಕ ಜಗತ್ತಿನಲ್ಲಿಯೂ ಕೂಡ ಅವರು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
