You are currently viewing ಮಾನವ ಕುಲದ ಆಧುನಿಕತೆಯ ಎಳೆಗಳನ್ನು ಹೆಣೆದ ಹತ್ತಿ: Gossypium Spp.

ಮಾನವ ಕುಲದ ಆಧುನಿಕತೆಯ ಎಳೆಗಳನ್ನು ಹೆಣೆದ ಹತ್ತಿ: Gossypium Spp.

ಕಳೆದ ಆರು ಸಹಸ್ರಮಾನಗಳಿಂದ ಮಾನವನ ಚರಿತ್ರೆಯನ್ನು ಹೆಣೆಯಲು, ಹಿಂಜಿಕೊಂಡು ಎಳೆ-ಎಳೆಯಾಗಿ, ಹಾಸು-ಹೊಕ್ಕಾದ ಹತ್ತಿಯು ತನ್ನ ಮೃದು ಸ್ಪರ್ಶದಿಂದ ಮಾನವ ಕುಲದ ಮೈ-ಮುಚ್ಚಿ ನಿರಂತರವಾಗಿ ಚಲನಶೀಲವಾಗಿದೆ.  ವಿಜ್ಞಾನ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಹತ್ತಿಯು ತನ್ನ ಮೈಗೇ ವಿಷ ತುಂಬಿಕೊಂಡು “ಬಿಟಿ-ಹತ್ತಿ” ಆಗುವವರೆಗೂ ಮಾನವ ಕುಲದ ಆಸೆಗಳಲ್ಲಿ ಒಂದಾಗಿದೆ. “ಬಿಟಿ”ಯಾಗಿ ಬಿಟ್ಟಿಯಾದ ಪ್ರಚಾರದಿಂದ ಗಮನ ಸೆಳೆದಿದ್ದು ತೀರ ಇತ್ತೀಚೆಗಷ್ಟೇ! ಕೇವಲ ದಶಕಗಳ ಇತಿಹಾಸವಷ್ಟೇ ಇದರ ಸುದ್ದಿಯಾದರೂ, ರೈತರ ಆತ್ಮಹತ್ಯೆಯಂತಹಾ ಸಂಗತಿಗಳನ್ನೂ ಒಳಗೊಂಡ ದಾರುಣ ಕಥಾನಕವನ್ನೂ ಒಳಗೊಂಡಿದೆ. ಇದರ ಹಿಂದಿನ ಒಟ್ಟಾರೆ ಮನುಕುಲದ ಮೈ ಮುಚ್ಚುವ ಎಳೆಯಾಗಿ ಸಹಸ್ರಾರು ವರ್ಷಗಳ ಸಂತೈಸಿದ ಹತ್ತಿಯ ವೈಜ್ಞಾನಿಕತೆಯ ಸಹಸ್ರಾರು ವರ್ಷಗಳಿಂದ ವಿಕಾಸಗೊಂಡಿದ್ದು ಬಿಟಿ ಹತ್ತಿಯು ಅಬ್ಬರದಲ್ಲಿ ಮರೆತು ಆಧುನಿಕತೆಯ ದೌಡಿನಲ್ಲಿದೆ. ಮೃದು ಸ್ಪರ್ಶ ಎಂಬರ್ಥದ ಅರಾಬಿಕ್‌ ಪದ “ಗಾಜ್‌(Goz)ದಿಂದಲೇ, ತನ್ನ ಸಂಕುಲದ ಹೆಸರಾದ ಗಾಸಿಪಿಯಂ(Gossypium) ಕೂಡ ಚಾಲ್ತಿಗೆ ಬಂದದ್ದು. ಈ ಗಾಸಿಪಿಯಂನ ನಾಲ್ಕು ಪ್ರಭೇದಗಳು, ನಾಲ್ಕು ವಿವಿದ ನೆಲೆಗಳಿಂದ ಮಾನವನ ಆಧುನಿಕತೆಯ ವಿಕಾಸವನ್ನು ನಿರ್ಮಿಸಿವೆ. ಅದೊಂದು ಅಖಂಡವಾದ, ಅದ್ಭುತವಾದ ಬೇರಾವ ಸಸ್ಯ ಸಂಕುಲದಲ್ಲೂ ಕಾಣದ ಬೃಹತ್‌ ಇತಿಹಾಸವಾಗಿದೆ. ಅದರ ಅಖಂಡತೆಯ ತಿರುಳಿನ ಸಾರವನ್ನಾದರೂ ಹಂಚುವ ಉತ್ಸಾಹ ಇಲ್ಲಿದೆ.

       ಹತ್ತಿಯನ್ನು ಇಂಗ್ಲೀಶ್‌ ಭಾಷೆಯಲ್ಲಿ ಹೆಸರಿಸಿರುವ ಕಾಟನ್‌ ಪದವು ಹೆಚ್ಚು ಬಳಕೆಯಲ್ಲಿರುವ ಪದ. ಸಹಜವಾಗಿ “ಕಾಟನ್‌ ಬಟ್ಟೆ” “ಪ್ಯೂರ್‌ ಕಾಟನ್‌” ಇತ್ಯಾದಿಯಲ್ಲದೆ, ಹತ್ತಿ ಬೆಳೆಯುವ ನೆಲವೂ “ಬ್ಲಾಕ್‌ ಕಾಟನ್‌ ಸಾಯಿಲ್‌”  ಎಂದು ಜನಪ್ರಿಯವಾಗಿದೆ. ಈ ಕಾಟನ್‌ ಪದವು ಅರಬ್‌ ಮೂಲದ್ದು! ಮೂಲ ಅರಾಬಿಕ್‌ ಪದವಾದ Qutn ಅಥವಾ Qutan ದಿಂದ ರೋಮನ್‌ ಭಾಷೆಯ ಮೂಲಕ 12-14 ಶತಮಾನದಲ್ಲಿ ಬಳಕೆಗೆ ಬಂದಿದೆ. ಬಟ್ಟೆಯನ್ನು ನೇಯಲು ಬಳಸುವ ಹತ್ತಿಯ ಸಂಕುಲವು ಮಾಲ್ವೆಸಿಯೇ (Malvaceae) ಸಸ್ಯಕುಟುಂಬಕ್ಕೆ ಸೇರಿದೆ. ನಮ್ಮ ಜನಪ್ರಿಯ ತರಕಾರಿ ಬೆಂಡೆಯೂ ಕೂಡ ಇದೇ ಕುಟುಂಬದ ಗಿಡ. ಆಕರ್ಷಕವಾದ ರಚನೆಯನ್ನು ಒಳಗೊಂಡ ಈ ಕುಟುಂಬದ ಹೂವುಗಳು ಮತ್ತು ಎಲೆಗಳು ಕುಟುಂಬವನ್ನು ಗುರುತಿಸಲು ಬಳಸುವ ಮೂಲ ಚಿನ್ಹೆಗಳಾಗಿವೆ. ಮೊಗಲ್‌ ಚಕ್ರವರ್ತಿ ಒಮ್ಮೆ ಬೀರ್‌ಬಲ್‌ನನ್ನು ಸುಂದರವಾದ ಹೂವು ಯಾವುದು ಎಂದು ಪ್ರಶ್ನಿಸಿದ್ದನಂತೆ. ಅದಕ್ಕೆ ಬೀರ್‌ಬಲ್‌ ಹತ್ತಿಯ ಹೂವು ಎಂದುತ್ತರಿಸಿದ್ದ ಎಂದು ಬೀರ್‌ಬಲ್‌ ಕತೆಗಳಲ್ಲಿ ಕೇಳಿರಬಹುದು. ನಮ್ಮ ಮೈ-ಮುಚ್ಚಿ ಕಾಪಾಡಲೆಂದೇ ಅರಳಿರುವ ಹೂವಿನ ಸೌಂದರ್ಯಕ್ಕಿಂತಾ ಹೆಚ್ಚಿನದೇನಿದೆ, ಎಂದೂ ಬೀರ್‌ಬಲ್‌ ವ್ಯಾಖ್ಯಾನಿಸಿದ್ದನಂತೆ.

       ಇಂದಿನ ಕಾಟನ್‌ ಅಥವಾ ಹತ್ತಿಯ ಬಟ್ಟೆಗಳ ತಯಾರಿಯಲ್ಲಿ ಮುಂದೆ ತುಸು ವಿವರವಾಗಿ ತಿಳಿಯಲಿರುವ ನಾಲ್ಕು ಪ್ರದೇಶಗಳಿಂದ ವಿಕಾಸಗೊಂಡು, ಕೃಷಿಗೊಳಗಾದ ಬೆಳೆಯಲ್ಲಿ ನಾಲ್ಕೂ ಸಂಕರವಿದೆ. ನೇಯಲು ಅನುಕೂಲವಾಗುವ ಉದ್ದವಾದ ಎಳೆಗಳ ಆರಿಸಲೆಂದು, ಹಾಗೇ ಮೈಯ ಸ್ಪರ್ಶಕ್ಕೆ ಮೃದುವಾಗಿರಲೆಂದು ಆ ಗುಣದ ಬೆರೆಕೆಗೆ, ಜೊತೆಗೆ ಎಲ್ಲರಿಗೂ ಹೊಟ್ಟೆಯ ಹಸಿವಿನ ನಂತರದ ಬಯಕೆಯಾದ ಮೈ-ಮುಚ್ಚುವ ಕಾರಣವನ್ನು ತನ್ನಲ್ಲಿಟ್ಟುಕೊಂಡು ಬಹು ಮುಖ್ಯವಾದ ಆರ್ಥಿಕ ಜವಾಬ್ದಾರಿಯನ್ನು ಹೊತ್ತು ವಿಶೇಷ ತಳಿಗಳ ಹುಡುಕಾಟ ಅನಿವಾರ್ಯವಾಯಿತು. ಇನ್ನೂ ಭೌಗೋಳಿಕ ತಿಳಿವು ಇಲ್ಲದ ಕಾಲದಿಂದಲೂ ಹತ್ತಿಯು ಸ್ವತಂತ್ರವಾಗಿ ಅಭಿವೃದ್ಧಿಯ ನೆಲೆಯ ಹುಡುಕಾಟವನ್ನು ಹುಟ್ಟಿಹಾಕಿತ್ತು. ನಂತರದಲ್ಲಂತೂ ಸಹಜವಾದ ಸಂಕರದ (Hybridization) ಹಿಂದೆ ಹೋಯಿತು. ಅವುಗಳಿಗೆಲ್ಲಾ ಅವಕಾಶವನ್ನು ಸೃಜಿಸಿದ್ದು ಭಾರತೀಯ ಉಪಖಂಡದ ಮರಹತ್ತಿ ಎಂದೂ ಹೆಸರಾದ ಗಾಸಿಪಿಯಂ ಅರ್ಬೊರಿಯಂ (Gossypium arboreum), ಆಫ್ರಿಕಾ-ಹಾಗೂ ಸಬ್‌ ಸಹರಾ ಅಲ್ಲದೆ ಅರಬ್‌ನ (Gossypium herbaceum)  ಈಜಿಪ್ಶಿಯನ್‌ ಕಾಟನ್‌ ಎಂದೂ ಹೆಸರಾದ ಅತ್ಯಂತ ಮೊದಲೂ ಕೃಷಿಯಲ್ಲೊಳಗಾದ ಉದ್ದ ಎಳೆಗಳ ಪೆರುವಿನ ಮೂಲದ  ಗಾಸಿಪಿಯಂ ಬರ್ಬಾಡೆನ್ಸ್‌ (Gossypium barbadense), ಅಲ್ಲದೆ ಮೆಕ್ಸಿಕನ್‌ ಪ್ರದೇಶದ ಗಾಸಿಪಿಯಂ ಹಿರ್ಸುಟಂ (Gossypium hirsutum) ಎಂಬ ನಾಲ್ಕು ಪ್ರಭೇದಗಳು. ಇವುಗಳಲ್ಲಿ ಎರಡು ಹಳೆಯ ಜಗತ್ತಿನವು ಮತ್ತೆರಡು ಹೊಸ ಜಗತ್ತಿನವು. ಹಳೆಯ ಜಗತ್ತಿನ ಎರಡು ಪ್ರಭೇದಗಳು ಡಿಪ್ಲಾಯ್ಡ್‌ ((2n = 26) ಆದರೆ, ಹೊಸ ಜಗತ್ತಿನ ಎರಡು ಪ್ರಭೇದಗಳೂ ಟೆಟ್ರಾಪ್ಲಾಯ್ಡ್‌ (2n = 52). ತಂದೆ-ತಾಯಿಯರಿಂದ ಒಂದಾದ ನಂತರ ಕೋಶವಿಭಜನೆಯಲ್ಲಿ  ಒಂದೇ ಜೊತೆ (2n) ಉಳಿದರೆ ಡಿಪ್ಲಾಯ್ಡ್‌ ಎಂದೂ, ಅದೇ ಮತ್ತೊಮ್ಮೆ ಪುನರಾವರ್ತಿತಗೊಂಡು ಮತ್ತೊಂದು ಜೊತೆಯಾಗಿ (2X2n) ಆದರೆ ಟೆಟ್ರಾಪ್ಲಾಯ್ಡ್‌ ಎಂದೂ ಕರೆಯಲಾಗುತ್ತದೆ. ಇದರ ಸಂಗತಿಗಳೇ ತುಂಬಾ ಹರವಾದವು. ಅದೇನೇ ಇರಲಿ! ಆ ಎರಡೂ ಒಂದೇ ಸಂಕುಲದ ಪರಸ್ಪರ ಸಂಬಂಧದ ಪ್ರಭೇದಗಳಲ್ಲಿ ಇರುವುದಲ್ಲದೆ, ಅವೂ ಸಂಕರಗೊಂಡು ಇಡೀ ಮಾನವ ಕುಲವನ್ನು ಭೌಗೋಳಿಕವಾಗಿ, ಬೆಸದು ಇಂತಹಾ ಚರಿತ್ರೆಯನ್ನು ನಿರ್ಮಿಸಿದ ಹೆಗ್ಗಳಿಕೆ ಹತ್ತಿಯದು. ಕೆಲವನ್ನಾದರೂ ವಿವರಗಳನ್ನು ಅರ್ಥೈಸಿಕೊಂಡು ಮುಂದೆ ನೋಡೋಣ.  (ಎಲ್ಲಾ ಪ್ರಭೇದಗಳ ವಿವರಗಳೂ ಮತ್ತೀಗ ಬೆಳೆಯ ಆನುವಂಶಿಕ ಹಿತವೂ ಮುಂದಿನ ವಾರದ ಲೇಖನದಲ್ಲಿ ಓದಬಹುದು)

ಹತ್ತಿಯ ಚರಿತ್ರೆಯು, ಅಮೆರಿಕ ಖಂಡಗಳನ್ನು ಹೊರತು ಪಡಿಸಿದ ಹಳೆಯ ಜಗತ್ತು ಮತ್ತು ಅಮೆರಿಕ ಖಂಡಗಳನ್ನೂ ಒಳಗೊಂಡ ಹೊಸಗಜಗತ್ತನ್ನೂ ಸ್ವತಂತ್ರವಾಗಿ ಒಳಗೊಂಡ ಸಂಗತಿಗಳನ್ನು ಹೊಂದಿದೆ. ಎರಡೂ ಜಗತ್ತಿನ ವಿಶೇಷಗಳ ಆರಂಭಿಕ ಇತಿಹಾಸವು ಮೊದಲ ಭಾಗ. ಇದರಲ್ಲಿ ಭಾರತದ ಉಪಖಂಡ ಮತ್ತು ಅಮೆರಿಕ ಖಂಡಗಳು ಭೌಗೋಳಿಕ ಪಾತ್ರದಾರಿಗಳು. ನಂತರದ ಮಧ್ಯ ಕಾಲೀನ ಚರಿತ್ರೆಯು ಇಂಡಿಯಾ-ಚೀನಾಗಳನ್ನೊಳಗೊಂಡ ಪೂರ್ವ ಪ್ರದೇಶ ಹಾಗೂ ಈಜಿಪ್ಟ್‌, ಕೇಂದ್ರಿತ ಆಫ್ರಿಕಾದ ದೇಶಗಳು, ಇಟಲಿ ಗಳನ್ನೊಳಗೊಂಡ ಪಶ್ಚಿಮ ಪ್ರದೇಶವು ಭೌಗೊಳಿಕ ನೆಲೆಗಳು. ಮುಂದಿನದು ಆಧುನಿಕ ಚರಿತ್ರೆಯಲ್ಲಿಯೂ ಪೂರ್ವ-ಪಶ್ಚಿಮದ ನೆಲೆಗಳು. ಕಡೆಯದಾಗಿ ರಾಜಕೀಯ ಸ್ಥಿತ್ಯಂತರಗಳನ್ನೊಳಂಡ ಬ್ರಿಟೀಷ್‌ ವಸಾಹತುಶಾಹಿ ಹಾಗೂ ಅಮೆರಿಕದ ಅಂತರ್ಯುದ್ಧದ ನೆಲಗಳನ್ನು ಒಳಗೊಂಡಿದೆ. ಈ ನಾಲ್ಕೂ ಚಾರಿತ್ರಿಕ ನೆಲೆಗಳಿಂದ ಗಾಸಿಪಿಯಂ ಎಂಬ ಒಂದೇ ಸಂಕುಲದ ನಾಲ್ಕು ಪ್ರಮುಖ ಪ್ರಭೇದಗಳು ಖಂಡಾಂತರಗೊಂಡು, ಸಂಕರಗೊಂಡು, ಮಾನವ ಕುಲದ ಹಿತದಲ್ಲಿ ಎಳೆಗಳನ್ನು ಹೆಣೆದಿವೆ. ಈ ನಾಲ್ಕೂ ಪ್ರಭೇದಗಳು ಒಟ್ಟಾರೆಯ ಮಾನವ-ಹತ್ತಿಯ ಮುಖಾಮುಖಿಯ ಇತಿಹಾಸವನ್ನು ಮೃದುವಾದ ಸ್ಪರ್ಶದ ಹಿತದಲ್ಲಿ ನಿರ್ಮಿಸುತ್ತಾ ಬಂದಿವೆ. ಇವುಗಳೆಲ್ಲದರ ಜೊತೆಯಲ್ಲಿಯೇ ಪರಿಸರದ ತಿಳಿವಳಿಕೆಯ ಜ್ಞಾನದ ಚಲನಶೀಲತೆಯ ಏರಿಳಿತಗಳನ್ನೂ ಕಟ್ಟಿವೆ. ಹತ್ತಿ ಬೆಳೆಯ ಪರಿಸರದ ಪಾಠಗಳಂತೂ ಅದ್ಭುತಗಳ ಸಂಗಮ. ಇವೆಲ್ಲವನ್ನೂ ಒಂದೊಂದಾಗಿ ವಿವರವಾಗಿಯಲ್ಲಿದ್ದರೂ ಒಟ್ಟಾರೆಯಾಗಿ ತುಸು ಸೂಕ್ಷ್ಮವಾಗಿಯಾದರೂ ನೋಡೋಣ.

ಸುಮಾರು 6000 ವರ್ಷಗಳ ಹಿಂದಿನಿಂದಲೇ ಮಾನವನ ಬಳಕೆಯಲ್ಲಿ ಹತ್ತಿಯು ಬಂದ ಬಗ್ಗೆ ವೈಜ್ಞಾನಿಕ ಚರಿತ್ರಕಾರರು ಒಪ್ಪಿದ್ದಾರೆ. ಅಂದಿನಿಂದ ಇಂದಿನವರೆಗೂ ಹತ್ತಿಯ ಎಳೆಗಳು ಸುದ್ದಿಯಿಂದ ಹಿಂದೆ ಸರಿದಿಲ್ಲ. ಇಂದಿಗೂ ಜಗತ್ತಿನ ಆರ್ಥಿಕತೆಯನ್ನು ನಿರ್ಧರಿಸುವ ಐದು ಬೆಳೆಗಳಲ್ಲಿ ಹತ್ತಿಯೂ ಒಂದು. (ಉಳಿದ ನಾಲ್ಕು ಈಗಾಗಲೇ ಸಸ್ಯಯಾನದಲ್ಲಿ ಓದಿರುವ ಚಹಾ, ಮುಂದೆ ಓದಲಿರುವ ಹೊಗೆಸೊಪ್ಪು, ಆಲೂಗಡ್ಡೆ ಮತ್ತು ಕಬ್ಬು) ಜಗತ್ತಿನಲ್ಲಿ ಅತೀ ಹೆಚ್ಚು ವಿಷಪೂರಿತ ರಸಾಯನಿಕಗಳ ಬಳಕೆಯನ್ನು ಹತ್ತಿಯ ರಕ್ಷಣೆಯಲ್ಲಿಯೇ ಮಾಡಲಾಗುತ್ತಿದೆ. ಹತ್ತಿ ಅಪಾರ ಸಾಧ್ಯತೆಯ ಬೆಳೆಯಾಗಿ ಒಟ್ಟಾರೆ ಕೃಷಿ ಪರಿಸರವನ್ನೂ ನಿರ್ವಹಿಸುತ್ತಿದೆ. ನಮ್ಮ ಮೈಮುಚ್ಚುವ ಕೆಲಸದಲ್ಲಿ ಮಾನವ ನಿರ್ಮಿತ ಕೃತಕ ಎಳೆಗಳು ಮೊದಲ ಮಹಾ ಯುದ್ದದ ನಂತರವಷ್ಟೇ ತಂತ್ರಜ್ಞಾನದ ಫಲವಾಗಿ ಸೃಷ್ಟಿಯಾದವು. ಆದರೆ ಹತ್ತಿಯ ಎಳೆಗಳು ಸಹಸ್ರಾರು ವರ್ಷಗಳ ಹಿಂದಿನಿಂದಲೂ ಮನುಕುಲಕ್ಕೆ ಬೆಂಗಾವಲಾಗಿ ಹೆಣೆದಿವೆ. ಜಾಗತಿಕ ವಸಾಹತೀಕರಣದಲ್ಲಿ ಅದರಲ್ಲೂ ಬ್ರಿಟೀಷರ ಭೌಗೋಳಿಕ ಹಿತಾಸಕ್ತಿಯಲ್ಲಿ ಹತ್ತಿಯದು ಪ್ರಮುಖ ಪಾತ್ರ. ಭಾರತದಿಂದ ಅವರನ್ನು ಹೊರಗೋಡಿಸುವ ಗಾಂಧಿಯ ಸತ್ಯಾಗ್ರಹದ ಹೋರಾಟದ ಖಾದಿಯಲ್ಲೂ ಹತ್ತಿಯದು ವಿಶೇಷವಾದ ಪಾತ್ರ. ಬ್ರಿಟನ್ನಿನ ಹತ್ತಿಯ ಗಿರಣಿಗಳ ಕಾರ್ಮಿಕರ ಶೋಷಣೆ, ಆರ್ಥಿಕತೆ ಮುಂತಾದ ಹೋರಾಟಗಳ ಸೈದ್ಧಾಂತಿಕ ಬೆಂಬಲವಾಗಿ ಕಾರ್ಲ್‌ ಮಾರ್ಕ್ಸ್‌ ಚಿಂತನೆಗಳಲ್ಲೂ ಹತ್ತಿಯ ಎಳೆಗಳು ಹರಿದಾಡಿವೆ.

ಇಟಲಿಯನ್ನು ಹೊರತು ಪಡಿಸಿ, ಇಂಗ್ಲಂಡ್‌ ಮುಂತಾದ ಯೂರೋಪಿನ ದೇಶಗಳಿಗೆ ಹತ್ತಿಯು ಅಷ್ಟೊಂದು ಪರಿಚಿತವಿರಲಿಲ್ಲ.  15 ನೇ ಶತಮಾನದ ಮೊದಲು ಬಹಳ ಕಡಿಮೆ ಹತ್ತಿ ಬಟ್ಟೆಯನ್ನು ಇಂಗ್ಲೆಂಡ್‌ಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅನಂತರದ ಅಮೆರಿಕದ ನೆಲದ ಪರಿಚಯದಲ್ಲಿ 1600 ರ ದಶಕದಲ್ಲಿ, ಯುರೋಪಿಯನ್ ಪರಿಶೋಧಕರು ಅಲ್ಲಿ ಬೆಳೆದ ಮತ್ತು ಬಳಸಿದ ಹತ್ತಿ ಸಸ್ಯಗಳನ್ನು ಕಂಡುಕೊಂಡರು. ಹೊಸದಾಗಿ ಕಂಡುಹಿಡಿದ ಈ ಪ್ರಭೇದಗಳನ್ನು 18 ನೇ ಶತಮಾನದಲ್ಲಿ ಆಫ್ರಿಕಾಕ್ಕೆ ಪರಿಚಯಿಸಲಾಯಿತು ಮತ್ತು ನಂತರ ಭಾರತಕ್ಕೆ ಹರಡಿತು. ಈಸ್ಟ್ ಇಂಡಿಯಾ ಕಂಪನಿ ಭಾರತದಿಂದ ಅಪರೂಪದ ಬಟ್ಟೆಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದಾಗ 17 ನೇ ಶತಮಾನದ ವೇಳೆಗೆ ಹತ್ತಿಯ ಮೇಲಿನ ಬ್ರಿಟಿಷ್ ಬಯಕೆ ಬದಲಾಯಿತು. ಅದಕ್ಕಿಂತಾ ಮುಖ್ಯವಾಗಿ 1793ರಲ್ಲಿ ಹತ್ತಿಯನ್ನು ಬೀಜಗಳಿಂದ ಬೇರ್ಪಡಿಸುವ ಜಿನ್ ಯಂತ್ರದ ಆವಿಷ್ಕಾರವಾದದ್ದು ಕೈಗಾರಿಕಾ ಕ್ರಾಂತಿಗೂ ಕಾರಣವಾಯಿತು.  ಜಾಗತಿಕವಾಗಿ ಹೊಸತೊಂದು ಲೋಕವು ತೆರೆಯಿತು.

ಹತ್ತಿ ಜಿನ್ ಯಂತ್ರದ ಆವಿಷ್ಕಾರದ ನಂತರ 1800 ರ ನಂತರ ಅಮೆರಿಕದ ಹತ್ತಿಯ ಇಳುವರಿ ದ್ವಿಗುಣಗೊಂಡಿತು. ಹಾಗೆಯೇ ಕೈಗಾರಿಕಾ ಕ್ರಾಂತಿಯ ಇತರ ಆವಿಷ್ಕಾರಗಳಿಂದ ಹತ್ತಿಗೆ ಬೇಡಿಕೆಯು ಹೆಚ್ಚಾಯಿತು. ಜೊತೆಗೆ ನೇಯ್ಗೆಯಲ್ಲೂ ಯಾಂತ್ರೀಕರಣವಾಗಿ, ಸಂಚಾರ ಮುಂತಾದ ಸಂಪರ್ಕಗಳ ಪರಂಪರೆಯು ಹತ್ತಿಯಿಂದ ಹೆಚ್ಚಿತು. ಆರಂಭದಲ್ಲಿ ಬ್ರಿಟನ್‌ ಅಮೆರಿಕಾದಿಂದ ಹೆಚ್ಚು ಆಮದು ಮಾಡಿಕೊಂಡರೂ ಮುಂದೆ ಅಂತರ್ಯುದ್ಧದ ಕಾರಣದಿಂದ ಬೇಡಿಕೆಯನ್ನು ಪೂರ್ವದ ಇಂಡಿಯಾ ಕಡೆಗೆ ಬದಲಿಸಿಕೊಂಡಿತು ಕಚ್ಚಾ ಸಾಮಗ್ರಿಗಳಿಗೆ ಪರ್ಯಾಯ ಮೂಲವಾಗಿ ಬ್ರಿಟನ್ ಭಾರತ, ಬ್ರೆಜಿಲ್, ಟರ್ಕಿ ಮತ್ತು ಈಜಿಪ್ಟ್‌ನಂತಹ ಇತರ ದೇಶಗಳನ್ನು ಅವಲಂಬಿಸಿತು. ಬ್ರಿಟನ್‌ ಹತ್ತಿ ಖರೀದಿಸಿ ಬಟ್ಟೆಯನ್ನು ಮಾರಾಟ ಮಾಡುತ್ತಾ ವಸಾಹತು ನೆಲೆಗಳನ್ನು ವಿಸ್ತರಿಸುತ್ತಾ ಲಾಭಕ್ಕೆ ಮೊದಲಾಯಿತು. ಸ್ವಂತ ಉತ್ಪಾದನೆಯನ್ನು ಯಾಂತ್ರಿಕಗೊಳಿಸದ ಮತ್ತು ವಿಭಿನ್ನವಾದ, ಆಗಾಗ್ಗೆ ಬದಲಾಗುತ್ತಿರುವ ಕಾರ್ಮಿಕ ಬಲವನ್ನು ಅವಲಂಬಿಸಿರುವ ಭಾರತವು ಸ್ಪರ್ಧಿಸಲು ಹೆಣಗಿತು, ಮತ್ತು ದೊಡ್ಡ ಪ್ರಮಾಣದ ಸಿದ್ಧಪಡಿಸಿದ ಹತ್ತಿ ವಸ್ತುಗಳನ್ನು ರಫ್ತು ಮಾಡುವ ಬದಲು, ಇದು ಬ್ರಿಟಿಷ್ ಹತ್ತಿ ಜವಳಿಗಳ ಅತಿದೊಡ್ಡ ಆಮದುದಾರವಾಗವಂತಹಾ ಪರಿಸ್ಥಿತಿ ಎದುರಾಯಿತು. ಇದೇ ಭಾರತದ ಸ್ವಾತಂತ್ರ್ಯದ ಚಳುವಳಿಗೂ ಕಾರಣವಾಯಿತು.

ಮಹಾತ್ಮ ಗಾಂಧಿಯವರು ಕೈಯಿಂದ ಬಿಡಿಸಿ, ನೇಯ್ದ ಖಾದಿಯನ್ನು ಜೊತೆಗೆ ಸತ್ಯಾಗ್ರಹವನ್ನೂ ಮುಂದಿಟ್ಟುಕೊಂಡು ಸ್ವತಂತ್ರ ಭಾರತದ ಚಳುವಳಿಗೆ ಮುಂದಾದರು. ಭಾರತದಲ್ಲಿ, ಅವರು ತಮ್ಮ ಸ್ವಾವಲಂಬನೆಯ ತತ್ವದ ಸಂಕೇತವಾಗಿ ಚರಕಾ ಅಥವಾ ನೂಲುವ ಚಕ್ರವನ್ನು ಅಳವಡಿಸಿಕೊಳ್ಳಲೂ ಹತ್ತಿಯು ಕಾರಣವಾಯಿತು. ಭಾರತದಲ್ಲಿ ಬೆಳೆದ ಹತ್ತಿಯನ್ನು  ಮಾರಾಟಕ್ಕೆ ಪ್ರಚೋದಿಸಿ ಗಿರಣಿ ಮಾಡುವ ವಸಾಹತುಶಾಹಿ ಪದ್ಧತಿಯನ್ನು ವಿರೋಧಿಸಿ, ಬದಲಾಗಿ ಅದನ್ನು ಗಾಂಧಿಯವರು ತಮ್ಮ ಕೈಮಗ್ಗಕ್ಕೆ ತೆಗೆದುಕೊಂಡು ತಮ್ಮ ಬಟ್ಟೆಗಳನ್ನು ನೇಯ್ದರು, ಇತರರು ಇದನ್ನು ಅನುಸರಿಸಬೇಕೆಂದು ಒತ್ತಾಯಿಸಿದರು. ಶೀಘ್ರದಲ್ಲೇ ಭಾರತದಾದ್ಯಂತದ ಗ್ರಾಮಸ್ಥರು ರಾಜಕೀಯ ಹೇಳಿಕೆಯಾಗಿ ತಮ್ಮದೇ ಆದ ಬಟ್ಟೆಯನ್ನು ತಯಾರಿಸಲು ಆರಂಭಿಸಿದರು.. ಈ ‘ಕಾಟೇಜ್’ ಉದ್ಯಮವು ದೇಶದ ಗ್ರಾಮೀಣ ಆರ್ಥಿಕತೆಯ ಪ್ರಧಾನ ಭಾಗವಾಯಿತು. ಖಾದಿ ಸ್ವಾತಂತ್ರ್ಯ ಹೋರಾಟದ ಬಟ್ಟೆಯಾಯಿತು. ಮನೆ ಕಾರ್ಯಾಗಾರಗಳು ಮತ್ತು ಸಣ್ಣ-ಪ್ರಮಾಣದ ಕಾರ್ಖಾನೆಗಳಲ್ಲಿ ಮಾಡಿದ ಖಾದಿ ಜನರು ಹೊಲಗಳಲ್ಲಿ ಶ್ರಮಿಸುತ್ತಾ ಗಳಿಸಿದ ಸಣ್ಣ ಆದಾಯಕ್ಕೆ ಪೂರಕವಾಗುವ ವಾತಾವರಣದ ನಿರ್ಮಿತಿಗೆ ಮುಂದೆಯೂ ಕಾರಣವಾಗುವಂತಾಯಿತು. ಹತ್ತಿಯು ಇಂಡೋ-ಬ್ರಿಟಿಷ್ ಯುದ್ಧವನ್ನು ಸಂಕೇತಿಸುವುದರ ಜೊತೆಗೆ ಆಧುನಿಕ ಭಾರತೀಯ ಗುರುತಿನ ಬೆಳೆಯಾ ಆಯಿತು.

ಭಾರತದಲ್ಲಿ ಇಷ್ಟೆಲ್ಲಾ ಆಗುವುದರ ಪೂರ್ವದಲ್ಲಿ ಅಮೆರಿಕದ ಹತ್ತಿಯ ಬೆಳೆಯು ಬಹು ದೊಡ್ಡ ಪಾಠವನ್ನೇ ಅಲ್ಲಿನ ಕೃಷಿಕರಿಗೆ ಕಲಿಸಿತು. ತೀವ್ರ ಕುತೂಹಲದ ಕಾರಣದಿಂದ ಈಗಲೇ ಪ್ರಸ್ತಾಪಿಸಿ ಹತ್ತಿ ಕಥಾನಕದ ವಿಭಿನ್ನವಾದ ಭವ್ಯತೆಯನ್ನು ಆನಂದಿಸಲು ಅಪೇಕ್ಷಿಸುತ್ತೇನೆ. ಹತ್ತಿಯ ಪೀಡೆಯೊಂದರ ಸ್ಮಾರಕವನ್ನು ರೂಪಿಸಿದ ಮೊಟ್ಟ ಮೊದಲ ಕೀರ್ತಿಯು ಇದರ ಭಾಗವಾಗಿದೆ. ಹತ್ತಿಯ ಕೃಷಿಯು 19ನೆಯ ಶತಮಾನದಲ್ಲಿ ತುಂಬಾ ಪ್ರಭಾವಿಸಿ ಹೆಚ್ಚು ಕೃಷಿಗೆ ಒಳಗಾಗಿತ್ತು. ಹಾಗಾಗಿ ಕೀಟಗಳೂ ಪ್ರಮುಖವಾಗಿ, ಕಾಯಿ ಕೊರೆಯುವ ಜೀರುಂಡೆಯೊಂದು ಬಹು ದೊಡ್ಡ ಸಮಸ್ಯೆಯಾಗಿ, ಕೃಷಿಕರು ಹತ್ತಿಗೆ ಬದಲಾಗಿ, ನೆಲಗಡಲೆ(ಶೇಂಗಾ)ವನ್ನು ಪ್ರಮುಖ ಆರ್ಥಿಕ ಬೆಳೆಯಾಗಿಸಿ ಲಾಭವನ್ನು ಹೆಚ್ಚಿಸಿಕೊಂಡರು (ಹಿಂದೊಮ್ಮೆ  ಸಸ್ಯಯಾನದಲ್ಲಿ ಅಮೆರಿಕದ ಇತಿಹಾಸ ನಿರ್ಮಿಸಿದ ನೆಲಗಡಲೆ ಬಗ್ಗೆ ಓದಿರುತ್ತೀರಿ). ನೆಲಗಡಲೆಯ ಜೊತೆಗ ವಿವಿಧತೆಯ ಬೆಳೆಗಳು ಹಣ್ಣು-ಹಂಪಲುಗಳ ತೋಟಗಳೂ ನಿರ್ಮಾಣಗೊಂಡವು. ಹೀಗೆ ಪಾಠ ಕಲಿಸಿದ ಹತ್ತಿಯ ಕಾಯಿ ಕೊರೆಯವ ಜೀರುಂಡೆಗೆ (Cotton Boll Weevil) ಅಲಬಾಮಾ ರಾಜ್ಯದ, ಎಂಟರ್‌ಪ್ರೈಜ್‌ ನಗರದಲ್ಲಿ ಒಂದು ಸ್ಮಾರಕವನ್ನು 1919ರಲ್ಲೇ ನಿರ್ಮಿಸಿದ್ದರು. ಇಟಲಿಯ ಕಲಾವಿದರಿಂದ ತಯಾರಿಸಿ ತಂದ ಹೆಣ್ಣುಮಗಳ ಕೈಯಲ್ಲಿ ಜೀರುಂಡೆಯ ಪ್ರತಿಕೃತಿಯೂ ಅಲ್ಲಿನ ಕಾಲೇಜು ರಸ್ತೆಯು ಮುಖ್ಯ ರಸ್ತೆಯೊಂದಕ್ಕೆ ಸಂಪರ್ಕಿಸುವಲ್ಲಿ ಆ ಕಾಲಕ್ಕೆ ಸಾವಿರಾರು ಡಾಲರ್‌ಗಳ ವೆಚ್ಚದಲ್ಲಿ ಸ್ಥಾಪನೆಯಾಗಿತ್ತು.

ಇದಾಗಿ ಸುಮಾರು ಮುಕ್ಕಾಲು ಶತಮಾನ ನಂತರ ಬಿಟಿ ಹತ್ತಿಯು ಕೃಷಿಕರ ಹೊಲಕ್ಕೆ ಬಂದಿತು. ಹತ್ತಿಯ ಬೆಳೆಯ ಏರಿಳಿತಗಳು ಈ ಮಧ್ಯದ ಒಂದು ಶತಮಾನದಲ್ಲಿ ಆನುವಂಶಿಕವಾಗಿಯೂ, ಆರ್ಥಿಕ-ಸಾಮಾಜಿಕವಾಗಿಯೂ ಬಹುದೊಡ್ಡ ಬದಲಾವಣೆಗಳನ್ನು ತಂದವು. ನಾಲ್ಕೂ ಪ್ರಭೇದಗಳೂ ಒಂದಾಗಿ ಜಗತ್ತನ್ನು ವಿಶೇಷವಾಗಿ ಪ್ರಭಾವಿಸಿವೆ. ಈ ಒಂದು ಶತಮಾನದ ನಡುವಿನ ಇತಿಹಾಸವು ಅದರ ಹಿಂದಿನ ಸಾವಿರಾರು ವರ್ಷಗಳ ಚರಿತ್ರೆಗಿಂತಾ ತುಂಬಾ ಭಿನ್ನವಾದುದು. ಅದರಲ್ಲಿನ ರೋಚಕ ಸಂಗತಿಗಳು ನಮ್ಮ ದೇಶದಲ್ಲೂ, ನಮ್ಮ ರಾಜ್ಯದಲ್ಲೂ ಘಟಿಸಿದ ಸಂಗತಿಗಳಾಗಿವೆ. ಧಾರವಾಡದ ನೆಲವು ಪ್ರಪಥಮ ಅಂತರ ಪ್ರಭೇದ ಸಂಕರದ ಹತ್ತಿಯನ್ನೂ ಕೊಟ್ಟಿದೆ. ಅದರ ತಳಿ ವಿಜ್ಞಾನಿ ಡಾ. ಬಿ.ಎಚ್. ಕಾತರಕಿ ಯವರು ಕನ್ನಡಗರೇ ಆಗಿದ್ದಾರೆ.‌ ಅದರ ಜೊತೆಗೆ ಹತ್ತಿಯ ಬಳಕೆಯು ಅದೇಷ್ಟೇ ಯಾಂತ್ರೀಕರಣವಾದರೂ ಸ್ಥಳಿಯತೆಗಳ ಖಾದಿಯಿಂದ ಇಂದಿಗೂ ಸುದ್ದಿಯಲ್ಲಿವೆ. ಶುದ್ಧ ಹತ್ತಿ ಬಟ್ಟೆ, ಸೀರೆಗಳಿಗೆ, ಪಂಚೆಗಳಿಗೆ ಅವುಗಳದ್ದೇ ಆದ ಕಥನಗಳನ್ನು ಸೃಜಿಸಿವೆ. ಎಲ್ಲವೂ ಬಂಗಾಳ, ತಮಿಳುನಾಡು, ರಾಜಸ್ತಾನ, ಮುಂತಾದ ನೆಲೆಗಳ ವಿವಿಧತೆಯ ಸಂಕೃತಿಗಳನ್ನು ಒಳಗೊಂಡಿವೆ. ಉಡುಪಿಯ ಸೀರೆಗಳು, ಈರೋಡಿನ ಪಂಚೆಗಳು, ಮೇಲುಕೋಟೆಯ ಪಂಚೆ/ಉತ್ತರೀಯಗಳು, ಗರಗದ ಬಾವುಟದ ಬಟ್ಟೆ ಹೀಗೆ….

ಈಗಾಗಲೇ ತಿಳಿದಂತೆ ಹತ್ತಿಯ ತಳಿಯ ಇತಿಹಾಸವು ನಾಲ್ಕು ಪ್ರದೇಶಗಳಿಂದ ವಿಕಾಸಗೊಂಡು, ನಾಲ್ಕೂ ಸಂಸ್ಕೃತಿಗಳ ಸಂಗಮವಾಗಿ ವಿಶೇಷವಾಗಿ ರೂಪುಗೊಂಡಿದೆ. ಪ್ರತಿ ಸಂಸ್ಕೃತಿಯೂ ವನ್ಯತಳಿಯನ್ನು ಮುಖ್ಯವಾಹಿನಿಗೆ ತಂದು ಬೆಳೆಯಾಗಿಸುವಲ್ಲಿ ಶ್ರಮಿಸಿವೆ. ಅವೆಲ್ಲವೂ ಸಾಮನ್ಯ ನೋಟದ ಬಹುವಾರ್ಷಿಕ ತಳಿಗಳಿಂದ ವರ್ಷಕೊಮ್ಮೆ ಹೂ-ಬಿಟ್ಟು ಕಾಯಾಗುವ ತಳಿಗಳಲ್ಲಿ ವಿಕಾಸಗೊಂಡಿವೆ. ಇವೆಲ್ಲವೂ ಹಲವು ಸಂಸ್ಕೃತಿಗಳ ಜೊತೆ ಹಲವು ಆಶಯಗಳ ಹೊತ್ತ, ಉದ್ದವಾದ, ಗಟ್ಟಿಯಾದ ನಯವಾದ ಮತ್ತು ಶುಭ್ರವಾದ ಎಳೆಗಳ ಹುಡುಕಾಟದ ಫಲವಾಗಿ ಇಂದು ನಮ್ಮ ಮುಂದಿವೆ. ಹೀಗೆ ಬಹು ಸುಮುದಾಯದ, ಬಹು ಆಶಯದ ಜೊತೆಗೆ ಸಹಸ್ರಾರು ವರ್ಷ ಮತ್ತು ಸಹಸ್ರಾರು ಮೈಲುಗಳ ಪಯಣದ ಫಲವಾಗಿ ಅಪಾರ ಸಾಧ್ಯತೆಯ ವೈವಿಧ್ಯತೆಯನ್ನು ಸಾಧಿಸಿದ್ದ ಹತ್ತಿಯು ಜೀನು ಬದಲಾವಣೆಯಲ್ಲಿ ಬಂದು ನಿಂತಿದೆ. 

ಹತ್ತಿಗೆ ವಿಜ್ಞಾನಕ್ಕೆ ಆಧುನಿಕತೆಯ ಲೇಪ ಬಂದು ಕೆಲವೇ ದಶಕಗಳಾಗಿವೆ. ಅದಕ್ಕಿದ್ದ ಮಾನವತೆಯ ಜವಾಬ್ದಾರಿ ಅದರ ನ್ಯುಕ್ಲಿಯಸ್ಸಿನಲ್ಲಿ ಅಖಂಡವಾಗಿದೆ. ಆದರೆ ಅದನ್ನು ಕಾಣುವ ಮತ್ತು ಅದನ್ನೇ ಮುಂದುವರೆಸುವ ಮನಸ್ಸುಗಳು ಅಪರೂಪವಾಗುತ್ತಿವೆ. ಅದಕ್ಕೇ ಏರುಪೇರುಗಳು ಎಲ್ಲವನ್ನೂ ಒಂದೇ ಉತ್ತರದಡಿ ಹುಡುಕುತ್ತಾ ನಿಸರ್ಗದಿಂದ ಭಿನ್ನವಾಗಿವೆ. ಹತ್ತಿಯ ಎಳೆಗಳ ವಿಕಾಸವನ್ನು ಅದರ ವಿಶಾಲ ಮಾರ್ಗದ ಪಯಣದಿಂದ ಅರಿತು ಮುನ್ನೆಡೆಸಬೇಕಿದೆ. 18-20 ಸಾವಿರ ಕೋಟಿ ರುಪಾಯಿಗಳಷ್ಟು ರಾಸಾಯನಿಕಗಳ ವಹಿವಟು ಹತ್ತಿ ಬೆಳೆ ಒಂದರಲ್ಲೇ ನಡೆಯುತ್ತದೆ.  ಜಗತ್ತಿನ ಒಟ್ಟು ಹತ್ತಿ ಬೆಳೆಗಾರರಲ್ಲಿ ಮೂರನೆ ಒಂದರಷ್ಟು ಭಾರತೀಯರು.  ಹತ್ತಿಯಲ್ಲಿ ನಾವು ಬಳಸುವ ಒಟ್ಟು ರಸಾಯನಿಕಗಳು ಜಗತ್ತಿನ ಒಟ್ಟೂ ಬಳಕೆಯ ಅರ್ಧಕ್ಕಿಂತ ಹೆಚ್ಚು. ಜಗತ್ತಿನಲ್ಲಿ ಅತಿಹೆಚ್ಚು ನೋವನ್ನುಂಡ ರೈತ ಸಮುದಾಯದಲ್ಲಿ ಭಾರತೀಯ ಹತ್ತಿ ಬೆಳೆಗಾರರೇ ಮುಂದು.

ಇವೆಲ್ಲವನ್ನೂ ಮತ್ತಷ್ಟು ವಿವರಗಳಿಂದ ಮುಂದಿನ ವಾರ ನೋಡೋಣ. ನಮಗೆಲ್ಲ ಶುದ್ದ ಹತ್ತಿ ಎಂದರೆ ತುಂಬಾ ಪ್ರೀತಿಯಲ್ಲಿವೇ?

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್‌.

This Post Has 3 Comments

  1. ಶ್ರೀಹರಿ ಸಾಗರ ಕೊಚ್ಚಿ

    ಹತ್ತಿಯ ಹೂವು ಅತೀ ಸುಂದರ ಹೂವೆಂದು ಬೀರಬಲ್ ವ್ಯಾಖ್ಯಾನಿಸಿದ್ದು.. ಸುಂದರವಾದ ಹೂವು ಬಟ್ಟೆಯಾಗಿ ಮೈ ಮುಚ್ಚುವುದೆಂದು ವಾಹ್..ವ್ಯಾಖ್ಯಾನ ಒಪ್ಪದಿರಲು ಸಾಧ್ಯವಿಲ್ಲ.

    ನೀವಂದ ಹಾಗೆ ಹತ್ತಿಯ ಬವಣೆ ಕೇಳುವವರ್ಯಾರು.. ಅದು ಕೀಟಗಳಿಗೂ ಅತ್ಯಂತ ಪ್ರಿಯ. ಇದನ್ನ ನಂಬಿಕೊಂಡೇ ಕೀಟನಾಶಕಗಳು ಸಮೃದ್ಧ ವಾಗಿ ಬದಲಾಗಿವೆ. ವಾತಾವರಣ ವಿಷಮಯವಾಗಿಸಿವೆ.. ಅದೊಂದೇ ಏಕೆ ಎಲ್ಲವೂ ನಿಗೂಢ ವಾಗಿ ಹಣ್ಣಾಗಿಸಲು ಕಾಯಾಗಿಸಲು ಹಸಿರಾಗಿಸಲು ಪ್ರತಿಯೊಂದಕ್ಕೂ ವಿಷಗಳು ಅಭಿವೃದ್ಧಿ ಯಾಗಿವೆ.

    ಮೊನ್ನೆಯಷ್ಟೇ ಒಂದು ವಿಡಿಯೋ ದಲ್ಲಿ ಹಪ್ಪಳದ ಪಪ್ಪಡ್ ಖಾರದ ಬದಲು ರಾಸಾಯನಿಕ ಬಳಕೆಯಿದೆ ಅಲ್ಲಿಗೆ ಹಪ್ಪಳ ಬಿಡಿ ಏನನ್ನೂ ಬಳಸುವ ಮೊದಲು ಆಲೋಚಿಸುವ ಸ್ಥಿತಿ ಇದೆ. ನಿಮ್ಮ ಓದಿಸುವ ಲೇಖನಗಳು ಮುಂದುವರಿಯಲಿ…

  2. ಶ್ರೀಹರಿ ಸಾಗರ, ಕೊಚ್ಚಿ

    ಹತ್ತಿಯ ಹೂವು ಅತೀ ಸುಂದರ ಹೂವೆಂದು ಬೀರಬಲ್ ವ್ಯಾಖ್ಯಾನಿಸಿದ್ದು.. ಸುಂದರವಾದ ಹೂವು ಬಟ್ಟೆಯಾಗಿ ಮೈ ಮುಚ್ಚುವುದೆಂದು ವಾಹ್..ವ್ಯಾಖ್ಯಾನ ಒಪ್ಪದಿರಲು ಸಾಧ್ಯವಿಲ್ಲ.

    ನೀವಂದ ಹಾಗೆ ಹತ್ತಿಯ ಬವಣೆ ಕೇಳುವವರ್ಯಾರು.. ಅದು ಕೀಟಗಳಿಗೂ ಅತ್ಯಂತ ಪ್ರಿಯ. ಇದನ್ನ ನಂಬಿಕೊಂಡೇ ಕೀಟನಾಶಕಗಳು ಸಮೃದ್ಧ ವಾಗಿ ಬದಲಾಗಿವೆ. ವಾತಾವರಣ ವಿಷಮಯವಾಗಿಸಿವೆ.. ಅದೊಂದೇ ಏಕೆ ಎಲ್ಲವೂ ನಿಗೂಢ ವಾಗಿ ಹಣ್ಣಾಗಿಸಲು ಕಾಯಾಗಿಸಲು ಹಸಿರಾಗಿಸಲು ಪ್ರತಿಯೊಂದಕ್ಕೂ ವಿಷಗಳು ಅಭಿವೃದ್ಧಿ ಯಾಗಿವೆ.

    ಮೊನ್ನೆಯಷ್ಟೇ ಒಂದು ವಿಡಿಯೋ ದಲ್ಲಿ ಹಪ್ಪಳದ ಪಪ್ಪಡ್ ಖಾರದ ಬದಲು ರಾಸಾಯನಿಕ ಬಳಕೆಯಿದೆ ಅಲ್ಲಿಗೆ ಹಪ್ಪಳ ಬಿಡಿ ಏನನ್ನೂ ಬಳಸುವ ಮೊದಲು ಆಲೋಚಿಸುವ ಸ್ಥಿತಿ ಇದೆ. ನಿಮ್ಮ ಓದಿಸುವ ಲೇಖನಗಳು ಮುಂದುವರಿಯಲಿ…

  3. Krupa Ramdev

    Amazing writing sir, Truly Brilliant article.
    Superior in your thought process literally … as always .. The efforts that you have put into writing this is visible.
    Thank you so much for sharing this.

Leave a Reply to ಶ್ರೀಹರಿ ಸಾಗರ, ಕೊಚ್ಚಿ Cancel reply