You are currently viewing ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

(ಎರಡನೆಯ ಕಂತು)

೧೯೪೫ ರಲ್ಲಿ, ಎರಡನೇ ಮಹಾಯುದ್ಧ ಮುಗಿದ ನಂತರ, ‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರನ್ನು ಹೊತ್ತ ಹಡಗು ಮುಂಬೈನಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ಸತೀಶ್‌ ಅವರ ಜೊತೆ ಇತರೆ ಭಾರತೀಯ ವಿದ್ಯಾರ್ಥಿಗಳೂ ಇದ್ದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು, ಅಲ್ಲಿಂದ ಹಿಂದಿರುಗಿ ದೇಶ ಕಟ್ಟುವ ಕಾಯಕದಲ್ಲಿ ಕೈಜೋಡಿಸಬೇಕೆಂಬ ಷರತ್ತಿನೊಂದಿಗೆ ಆಗಿನ ಸರ್ಕಾರ ಈ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿತ್ತು.  ಹೀಗೆ ೧೯೪೫ ರಲ್ಲಿ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳುತ್ತಿದ್ದ ಹಡಗಿನಲ್ಲಿ ಸತೀಶ್‌ ಅವರಿಗೆ ಪರಿಚಯವಾಗಿ ಹಲವು ದಶಕಗಳ ಕಾಲ ಮುಂದುವರೆದ ಸ್ನೇಹ, ಒಡನಾಟಕ್ಕೆ ಸಾಕ್ಷಿಯಾಗಿ ನಂತರ ಅವರ ಸಹೋದ್ಯೋಗಿಯಾದ ಪ್ರೊ.ಬ್ರಹ್ಮಪ್ರಕಾಶ್‌ ಇದ್ದರು. ಜೊತೆಗೆ ಭಾಕ್ರಾನಂಗಲ್‌ ಅಣೆಕಟ್ಟೆಯ ನಿರ್ಮಿತಿಯಲ್ಲಿ ದುಡಿದ, ತಮ್ಮದೇ ಪಂಜಾಬ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಇಂದರ್‌ ಕಪಿಲಾ ಸಹಪಯಣಿಗರಾಗಿದ್ದರು.  ಸ್ವಾತಂತ್ರ ಹೋರಾಟದ ದಿನಗಳಲ್ಲಿ ಬೆಳೆದ ಈ ವಿದ್ಯಾರ್ಥಿಗಳೆಲ್ಲರಿಗೂ ದೇಶಕ್ಕೇನಾದರೂ ಕೊಡುಗೆ ನೀಡಬೇಕೆನ್ನುವ ಒಲವು ಅಂತರ್ಗತವಾಗಿತ್ತು. ಆ ಆಶಯಗಳ ಹೂವುಗಳು ಅರಳಿದ್ದು ನಂತರದ ದಿನಗಳಲ್ಲಿ ನಿಚ್ಚಳವಾಗಿ ಕಂಡಿವೆ. ಸತೀಶ್‌ ಅವರೇ ಅದಕ್ಕೆ ಒಂದು ಅತ್ಯುತ್ತಮ ಉದಾಹರಣೆ.

ಮೊದಲೇ ತಿಳಿಸಿದಂತೆ ಬೆಂಗಳೂರಿನಲ್ಲಿ ಸರಿ ಸುಮಾರು ಒಂದೂವರೆ ವರ್ಷ ತರಬೇತಿಗೆಂದು ಇದ್ದ ವೇಳೆಗಾಗಲೇ ಸತೀಶ್‌ ಅವರಿಗೆ ವೈಮಾನಿಕ ಕ್ಷೇತ್ರದ ಬಗ್ಗೆ ಆಸಕ್ತಿ ಇಮ್ಮಡಿಯಾಗಿತ್ತು. ಹಾಗಾಗಿ ಅಮೆರಿಕದ ಕ್ಯಾಲ್ಟೆಕ್‌ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್‌ ವಿಭಾಗದಲ್ಲಿ ಉನ್ನತ ವ್ಯಾಸಂಗ ಪಡೆಯಬೇಕೆಂಬ ಹಂಬಲವಿತ್ತು. ಆದರೆ ಎರಡನೇ ಮಹಾಯುದ್ಧದ ನಂತರ ದಿನಗಳಾದ್ದರಿಂದ, ಸತೀಶ್‌ ಅಮೆರಿಕ ತಲುಪಿದರೂ,  ಆ ವಿಶ್ವವಿದ್ಯಾಲಯ ಇನ್ನೂ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭ ಮಾಡಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಕ್ಯಾಲ್ಟೆಕ್‌ ನಲ್ಲಿ ಕಲಿಯುವ ಆಸೆಯನ್ನು ಮುಂದೂಡಬೇಕಾಯಿತು. ಬದಲಾಗಿ ಅವರಿಗೆ ಮಿನಿಸೋಟಾ ವಿಶ್ವವಿದ್ಯಾಲಯದಲ್ಲಿ ಕಲಿಯುವ ಅವಕಾಶ ನೀಡಿದ್ದರಿಂದ ಅಲ್ಲಿ ಅವರು ಏರೋನಾಟಿಕ್ಸ್(Aeronautics- ವಾಯುಯಾನವಿಜ್ಞಾನ) ವಿಷಯದಲ್ಲಿ ಎಂ.ಎಸ್.‌ ಪದವಿಯನ್ನು ಪಡೆದರು. ಈ ಅವಧಿಯಲ್ಲಿ ಮಿನಿಯಾಪುಲಸ್‌(Minneapolis) ನಗರದ ಸೆಕೆಂಡ್‌ಹ್ಯಾಂಡ್ ಪುಸಕ್ತ ಮಳಿಗೆಯನ್ನು ತಡಕಾಡುವುದು ಅವರ ಮೆಚ್ಚಿನ ಹವ್ಯಾಸವಾಗಿತ್ತು. ಅಲ್ಲಿ ಶುರುವಾದ ಈ ನಂಟು ಬೆಂಗಳೂರಿನ ಸೆಲೆಕ್ಟ್‌ ಬುಕ್‌ ಶಾಪ್‌ ಜೊತೆಗೂ ಮುಂದುವರೆದಿತ್ತು!!

ದೇಶ ವಿಭಜನೆಯ ದುರಂತ

೧೯೪೭ ರ ಹೊತ್ತಿಗೆ ಸತೀಶ್‌ ಅವರಿಗೆ ಕ್ಯಾಲ್ಟೆಕ್‌ ನ ಗ್ಯಾಲ್ಸಿಟ್‌(GALCIT) ಕೇಂದ್ರದಲ್ಲಿ ಅವಕಾಶ ದೊರೆತು ಡಾಕ್ಟರೇಟ್‌ ಅಧ್ಯಯನ ಶುರು ಮಾಡಿದ್ದರು. ಇತ್ತ ಭಾರತಕ್ಕೆ ಸ್ವಾತಂತ್ರ್ಯ ಬಂದ ಆ ಸಮಯದಲ್ಲಿ ಸತೀಶ್‌  ಅವರ ತಂದೆತಾಯಿ ದೇಶ ವಿಭಜನೆಯ ಕೆಲವೇ ವಾರಗಳಿಗೆ ಮೊದಲು ತಮ್ಮ ನೆಲೆಯಾದ ಲಾಹೋರ್‌ ಅನ್ನು ಬಿಟ್ಟು ಫಿರೋಜ಼್ ಪುರದಲಿದ್ದ ತಮ್ಮ ಹಿರಿಯ ಮಗಳು ವಿಮಲಾ ಅವರ ಮನೆಗೆ ಬಂದಿದ್ದರು. ಎರಡನೆಯ ಮಗಳು ಪ್ರಿಮಲಾ ಕೂಡ ಅಲ್ಲೇ ಇದ್ದರು.ಇನ್ನಿಬ್ಬರು ಮಕ್ಕಳಾದ ಶುಕ್ಲ ಮತ್ತು ರಂಜಿತ್‌  ಅವರನ್ನು ಶಿಮ್ಲಾದಲ್ಲಿ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಹೀಗೆ ಸತೀಶ್‌ ದೂರದ ದೇಶದಲ್ಲಿದ್ದರೆ, ಅವರ ಪೋಷಕರು ಮತ್ತು ಒಡಹುಟ್ಟಿದವರು ತಮ್ಮ ದೇಶದಲ್ಲಿದ್ದುಕೊಂಡೇ ಅವರ ತವರಿನಿಂದ ದೂರವಾಗಿದ್ದರು. ಲಾಹೋರಿನ ಗೆಳೆಯರು ದೇವಿದಯಾಳರಿಗೆ ಹಲವು ಬಾರಿ ಸಲಹೆ ಕೊಟ್ಟರೂ, ಲಾಹೋರನ್ನು ತೊರೆಯುವ ಯೋಚನೆ ಅವರಿಗೆ ಬಂದಿರಲಿಲ್ಲ. ಆದರೂ ದಿನದಿನಕ್ಕೂ ನಡೆಯುತ್ತಿದ್ದ ವಿದ್ಯಮಾನಗಳನ್ನು ಕಂಡು ಕೊನೆಗೆ ಕೆಲವೇ ದಿನಕ್ಕಾಗುವಷ್ಟು ವಸ್ತುಗಳನ್ನು ತೆಗೆದುಕೊಂಡು ಮಗಳ ಮನೆಗೆ ಬಂದಿದ್ದರು. ದೇಶ ವಿಭಜನೆಯ ನಂತರದ ಹಿಂಸೆ ಮತ್ತು ನೋವನ್ನು ಕಂಡು, ತಮ್ಮ ಆ ತೀರ್ಮಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ದೇವಿದಯಾಳರಿಗೆ ಲಾಹೋರಿನ ಜೈಲ್‌ ರೋಡಿನಲ್ಲಿದ್ದ ಅವರ ಮನೆಯಿಂದ ತಮ್ಮ ನಂಬಿಕಸ್ಥ ಮನೆಗೆಲಸದವರೊಬ್ಬರಿಂದ ಬೆಲೆಬಾಳುವ ವಸ್ತುಗಳು ಮತ್ತು ಕಾರ್ಪೆಟ್‌ಗಳು ತುಂಬಿದ್ದ ಎರಡು ಪೆಟ್ಟಿಗೆ ಮಾತ್ರ ಮತ್ತೆ ಸಿಕ್ಕಿದವು. ದೇಶ ವಿಭಜನೆಯಿಂದಾದ ನಿರಾಶ್ರಿತರಿಗೆ ಆಸರೆಯಾಗಿ ಅವರ ಪುನರ್ವಸತಿಗಾಗಿ ದುಡಿದವರು ಶ್ರೀ ದೇವಿದಯಾಳರು. ಈ ದುರಂತದ ನಡುವೆಯೂ ಕುಟುಂಬದ ಎಲ್ಲರೂ ಸುರಕ್ಷಿತವಾಗಿ ಇದ್ದದ್ದು ಅಮೆರಿಕೆಯಲ್ಲಿದ್ದ ಸತೀಶರಿಗೆ ಸಮಾಧಾನ ತಂದಿದ್ದರೂ, ಯುದ್ಧ, ದೇಶ ವಿಭಜನೆ, ಅಭಿವೃದ್ಧಿ ಚಟುವಟಿಕೆ ಮುಂತಾದ ಕಾರಣಗಳಿಗೆ ತಮ್ಮ ನೆಲವನ್ನು ತೊರೆದು ನಿರಾಶ್ರಿತರಾಗುವ ಜನರ ಬಗ್ಗೆ ಅವರಿಗೆ ಬದುಕಿನುದ್ದಕ್ಕೂ ಅನುಕಂಪವಿತ್ತು.

ಕ್ಯಾಲ್ಟೆಕ್‌ ನ ದಿನಗಳು

ಕೃಪೆ: ವಿಕಿಪೀಡಿಯಾ

ಫ್ಲೂ-ಇಡ್ ಮೆಕ್ಯಾನಿಕ್ಸ್(Fluid Mechanics), ಭೌತವಿಜ್ಞಾನದ ಒಂದು ಪ್ರಮುಖ ಅಧ್ಯಯನ ಶಾಖೆ. ಗಣಿತ ಮತ್ತು ಇಂಜಿನಿಯರಿಂಗ್‌ ಜ್ಞಾನಗಳ ಅನ್ವಯ ಹೊಂದಿರುವ ವಿಭಾಗ. ಇದು ವಾತಾವರಣ ವಿಜ್ಞಾನ, ಜೀವಿವಿಜ್ಞಾನ, ಖಭೌತ ವಿಜ್ಞಾನ,ಏರೋಸ್ಪೇಸ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಳಕೆಯಲ್ಲಿದೆ. ಏರೋನಾಟಿಕ್ಸ್‌  ವಿಭಾಗದ ಸಂಶೋಧನೆಗಳಲ್ಲಿ ಫ್ಲೂ-ಇಡ್ ಡೈನಮಿಕ್ಸ್(Fluid Dynamics) ಅದರಲ್ಲೂ ಮುಖ್ಯವಾಗಿ ಏರೋಡೈನಮಿಕ್ಸ್‌(Aerodynamics-ವಾಯುಬಲವಿಜ್ಞಾನ) ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ೧೯೨೬ ರಲ್ಲಿ  ಡೇನಿಯಲ್‌  ಗಗ್ಗನ್‌ಹೀಮ್ ಎಂಬ  ಗಣಿಗಾರಿಕೆ ಉದ್ಯಮಿ ಮತ್ತು ಲೋಕೋಪಕಾರಿ ನೀಡಿದ ದೇಣಿಗೆಯ ದೆಸೆಯಿಂದ ಕ್ಯಾಲ್ಟೆಕ್‌ ವಿಶ್ವವಿದ್ಯಾಲಯದಲ್ಲಿ  ಏರೋಸ್ಪೇಸ್‌ ವಿಭಾಗ  ಗ್ಯಾಲ್ಸಿಟ್‌ (GALCIT – Guggenheim Aeronautical Laboratory at the California Institute of Technology) ಪ್ರಾರಂಭವಾಯಿತು.  ೧೯೩೦ ರಲ್ಲಿ ಅದರ ಮೊದಲ ನಿರ್ದೇಶಕರಾಗಿ ಆ ಸಂಸ್ಥೆಯಲ್ಲಿ ಅದಾಗಲೇ ದುಡಿಯುತ್ತಿದ್ದ ಥಿಯೋಡಾರ್‌ ವಾನ್‌ ಕಾರ್ಮಾನ್ ನೇಮಕಗೊಂಡರು. ಅವರು ವಾಯುಬಲ ವಿಜ್ಞಾನದ ಪಿತಾಮಹ ಎಂದು ಪ್ರಸಿದ್ಧರಾದ ಜರ್ಮನಿಯ ಪ್ರೊ. ಲುಡ್‌ವಿಗ್ ಪ್ರಾಂಟ್ಲ್  ಅವರ ನೇರ ಶಿಷ್ಯ. ನಮ್ಮ  ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ಘರಾಣ ಪರಂಪರೆಗಳು ಇರುವಂತೆ, ಏರೋಸ್ಪೇಸ್‌ ಸಂಶೋಧನೆಯಲ್ಲಿ ಆಗ ಜರ್ಮನಿ ಮತ್ತು ಅಮೆರಿಕ ಬಹುಮುಖ್ಯ ಹೆಸರು ಪಡೆದಿದ್ದವು. ಹೀಗೆ ಆ ಎರಡೂ ಪರಂಪರೆಯ ಕೊಂಡಿಯಂತಿದ್ದ ಪ್ರೊ. ಕಾರ್ಮಾನ್‌ ರ ಶಿಷ್ಯ ಪ್ರೊ. ಹ್ಯಾನ್ಸ್‌ ಲೀಪ್‌ಮನ್ ರ ಬಳಿಯೇ ಸತೀಶ್‌ ಧವನ್‌ ತಮ್ಮ ಡಾಕ್ಟರೇಟ್‌ ಸಂಬಂಧ ಅಧ್ಯಯನ ನಡೆಸಿದ್ದಲ್ಲದೇ ತಾವೂ ಆ ಪರಂಪರೆಯ ಭಾಗವಾದರು. ೧೯೬೧ ರ ನಂತರ ಗ್ಯಾಲ್ಸಿಟ್‌ ಅನ್ನು Graduate Aeronautical Laboratories at the California Institute of Technology ಎಂದು ಮರು-ಹೆಸರಿಸಲಾಗಿದೆ.

ಸತೀಶ್‌ ಅವರ ಗುರು ಪ್ರೊ. ಹ್ಯಾನ್ಸ್‌ ಲೀಪ್‌ಮನ್ ಜರ್ಮನಿಯಲ್ಲಿ ಹುಟ್ಟಿ, ಬೆಳೆದು ಹಾಗೂ ಅಲ್ಲೇ ಅಧ್ಯಯನ ಮಾಡಿದ್ದರೂ, ಅಲ್ಲಿಯ ಬದಲಾದ ರಾಜಕೀಯ ಬೆಳವಣಿಗೆಯ ಸಲುವಾಗಿ ಇಸ್ತಾನ್‌ಬೂಲ್ ನಲ್ಲಿ ಸ್ವಲ್ಪ ಕಾಲ ಇದ್ದು ಮುಂದೆ ಅಮೆರಿಕದಲ್ಲಿ ನೆಲೆಸಿದ್ದರು. ಸತೀಶ್‌ ರ ಗೆಳೆಯ ಮತ್ತು ಹ್ಯಾನ್ಸ್‌ಮನ್ ರ ಇನ್ನೊಬ್ಬ ಶಿಷ್ಯ ಅನಟೋಲ್‌ ರಾಶ್ಕೋ ಕೂಡ ಮುಲತಃ ಉಕ್ರೇನ್‌ ದೇಶದವರಾಗಿದ್ದರೂ, ಚಿಕ್ಕ ವಯಸ್ಸಿನಲ್ಲೇ ಕೆನಡಾ ದೇಶಕ್ಕೆ ಹೋಗಿ ನೆಲೆಸಿ ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಞಣಕ್ಕೆಂದು ಅಮೆರಿಕಕ್ಕೆ ಬಂದಿದ್ದರು. ಇತ್ತ ಸತೀಶ್‌ ಕೂಡ ತಮ್ಮ ನೆಲವನ್ನು ಬಿಟ್ಟು, ಅದು ಅನ್ಯ ದೇಶದ ಪಾಲಾದ ಸಮಯದಲ್ಲಿ ಅಮೆರಿಕದಲ್ಲಿ ಇದ್ದರು. ಹೀಗೆ ತಮ್ಮ ತವರು ತೊರೆದಿದ್ದ ಈ ಮೂರು ಜನ ಕ್ಯಾಲ್ಟೆಕ್‌ ನಲ್ಲಿ ಒಂದಾಗಿ ಸೇರಿದ್ದರು ಹಾಗೂ ಈ ಮೂವರ ನಡುವಿನ ಸ್ನೇಹ ಮತ್ತು ವಿಶ್ವಾಸ ಅಲ್ಲಿಂದ ಶುರುವಾಗಿ ಸುಮಾರು ೫೦ ವರ್ಷಗಳಿಗೆ ಹೆಚ್ಚು ಕಾಲ ಅಭಾದಿತವಾಗಿ ಮುಂದುವರೆಯಿತು.

ಕೃಪೆ: ವಿಕಿಪೀಡಿಯಾ ಮತ್ತು ಡಾ.ಜ್ಯೋತ್ಸ್ನಾ ಧವನ್

ಸತೀಶ್‌ ಅವರ ಡಾಕ್ಟೊರಲ್‌ ಸಮಯದ ಸಂಶೋಧನೆಗಳು ಮುಖ್ಯವಾಗಿ ಎರಡು ವಿಚಾರಗಳ ಕುರಿತಾಗಿ ಇತ್ತು. ಅವುಗಳನ್ನು ತಿಳಿಯಲು ಫ್ಲೂ-ಇಡ್ ಡೈನಮಿಕ್ಸ್ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವು ಮೂಲಭೂತ ವಿಚಾರಗಳನ್ನು ತಿಳಿಯೋಣ,

ಗಾಳಿ, ನೀರು ಅಥವಾ ಪ್ಲಾಸ್ಮಾ ಮುಂತಾದ ಫ್ಲೂ-ಇಡ್ ಗಳ ಚಲನೆ ಮತ್ತು ಅವುಗಳ ಮೇಲೆ ಪರಿಣಾಮ ಬೀರುವ ಬಲಗಳ ಅಧ್ಯಯನವನ್ನು ಫ್ಲೂ-ಇಡ್ ಡೈನಮಿಕ್ಸ್‌ ಎನ್ನುತ್ತೇವೆ. ಫ್ಲೂ-ಇಡ್ ಗಳ ಮಾಧ್ಯಮದಲ್ಲಿರುವ ಒಂದು ವಸ್ತು ಚಲನೆಯಲ್ಲಿದ್ದರೆ ಅಥವಾ ಸ್ವತಃ ಫ್ಲೂ-ಇಡ್ ಗಳೇ ಚಲನೆಯಲ್ಲಿದ್ದರೆ, ಘರ್ಷಣೆಯ ಕಾರಣದಿಂದ ಕೆಲವು ಫ್ಲೂ-ಇಡ್‌ ಕಣಗಳು ಆ ವಸ್ತುವಿನ ಸುತ್ತ ಅಂಟಿಕೊಂಡು ಒಂದು ಎಲ್ಲೆಪದರ(Boundary Layer) ನಿರ್ಮಾಣವಾಗುತ್ತದೆ. ಫ್ಲೂ-ಇಡ್‌ ಹರಿವುಗಳನ್ನು ಮಾಕ್‌ ಸಂಖ್ಯೆ(Mach Number) ಯ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.  ಒಂದು ವಸ್ತುವಿನ ವೇಗವನ್ನು, ಶಬ್ಧದ ವೇಗಕ್ಕೆ ಹೋಲಿಸಿ ನೋಡಿದಾಗ ಆಗುವ ಅನುಪಾತದಿಂದ ಸಿಗುವ ಸಂಖ್ಯೆಯೇ ಮಾಕ್‌ ಸಂಖ್ಯೆ. ಅದು ಸುಮಾರು ೧ ರಿಂದ ೫ ರ ವರೆಗೆ ಇದ್ದರೆ, ಆ ಹರಿವನ್ನು ಸೂಪರ್‌ಸಾನಿಕ್(Supersonic) ಹರಿವು ಎಂದು ಕರೆಯುತ್ತಾರೆ. ಈ ಸೂಪರ್‌ಸಾನಿಕ್ ಹರಿವಿನ ಕಾರಣವಾಗಿ, ಫ್ಲೂ-ಇಡ್‌ ಮಾಧ್ಯಮಗಳಲ್ಲಿ ಆಘಾತ ಅಲೆಗಳು(Shock waves) ಉಂಟಾಗುತ್ತವೆ,  ಜೊತೆಗೆ ಫ್ಲೂ-ಇಡ್‌ ಹರಿವು ಎರಡು ರೀತಿಯಾಗಿದ್ದು, ಅವನ್ನು ಹಾಳೆ ಹರಿವು(Laminar Flow) ಮತ್ತು ಪ್ರಕ್ಷುಬ್ಧ ಹರಿವು(Turbulent Flow) ಎಂದು ಪ್ರತ್ಯೇಕಿಸುತ್ತಾರೆ. ಈ ಎರಡೂ ಹರಿವಿನ ನಡುವಿನ ಸ್ಥಿತಿಯನ್ನು ಸಂಕ್ರಮಣ(Transition) ಸ್ಥಿತಿ ಎಂದು ಕರೆಯುತ್ತೇವೆ. ನಿಮ್ಮ ಅಡುಗೆಮನೆಯ ಸಿಂಕಿನ ನಲ್ಲಿಯನ್ನು ಸ್ವಲ್ಪವೇ ತಿರುಗಿಸಿದಾಗ ಹೊರಬರುವ ನೀರು ಹಾಳೆ ಹರಿವಾದರೆ, ಹೆಚ್ಚು ತಿರುಗಿಸಿದಾಗ ವೇಗವಾಗಿ ಬರುವ ನೀರು ಹಾಗೂ ಸಿಂಕಿನ ಮೇಲ್ಮೈಗೆ ಬಡಿದು ಚೆಲ್ಲಾಪಿಲ್ಲಿ ಆಗುವ ಹರಿವು, ಹಾಳೆ ಹರಿವಿನಿಂದ ಪ್ರಕ್ಷುಬ್ಧ ಹರಿವಾಗಿ ಬದಲಾಗುತ್ತದೆ. ಈ ಎರಡು ಭಿನ್ನ ಹರಿವುಗಳನ್ನು ಗುರುತಿಸಲು ರೆನಾಲ್ಡ್ಸ್ ಸಂಖ್ಯೆ‌(Reynolds Number) ಯನ್ನು ಬಳಸುತ್ತಾರೆ. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಚಿತ್ರ ನೋಡಿ.

ಕೃಪೆ: ವಿಕಿಪೀಡಿಯಾ

ಈ ಹಿನ್ನೆಲೆಯಲ್ಲಿ ಸತೀಶ್‌ ಅವರ ಮೊದಲನೆಯ ಕೊಡುಗೆಯನ್ನು ಗಮನಿಸೋಣ. ಕ್ಯಾಲ್ಟೆಕ್‌ ನಲ್ಲಿ ಸತೀಶ್‌, ರಾಶ್ಕೋ ಮತ್ತು ಲೀಪ್‌ಮನ್ ಈ ಮೂವರು, ಮಾಕ್‌ ಸಂಖ್ಯೆ ೧.೨-೧.೫ ರ ನಡುವಿನ ಹಾಗೂ ರೆನಾಲ್ಡ್ಸ್ ಸಂಖ್ಯೆ‌ ೦.೯ x ೧೦(0.9×106) ಉಳ್ಳ, ಸೂಪರ್‌ಸಾನಿಕ್‌ ಹರಿವಿನಲ್ಲಿ, ಎಲ್ಲೆಪದರ ಮತ್ತು ಆಘಾತ ಅಲೆಗಳ ನಡುವಿನ ಪ್ರತಿಕ್ರಿಯೆ ಕುರಿತಾಗಿ ಕೆಲಸ ಮಾಡಿದ್ದರು. ಸಪಾಟಾದ ಅಥವಾ ಚಪ್ಪಟೆಯಾಕಾರಾದ ಮೇಲ್ಮೈನಲ್ಲಿ ಉಂಟಾಗುವ ಆಘಾತ ಅಲೆಗಳ ಪ್ರತಿಫಲನ ಲಕ್ಷಣಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಹಾಳೆ ಹರಿವು ಮತ್ತು ಪ್ರಕ್ಷುಬ್ಧ ಹರಿವಿನ ಎಲ್ಲೆಪದರಗಳೆರೆಡರಲ್ಲೂ ಈ ವಿದ್ಯಮಾನದ ಲಕ್ಷಣಗಳನ್ನು ಅಳೆದಿದ್ದರು. ಈ ಆಘಾತ ಅಲೆಗಳ ಮೇಲ್ಮುಖ ಚಲನೆ, ಎಲ್ಲೆಪದರಗಳಲ್ಲಿ ಉಂಟುಮಾಡುವ ಪ್ರಭಾವವನ್ನು ಗುರುತಿಸಿ, ಇವುಗಳ ಮಂದತೆಯನ್ನು(Thickness) ಅಳೆದಿದ್ದರು. ಜೊತೆಗೆ ಎಲ್ಲೆಪದರಗಳ ಬೇರ್ಪಡುವಿಕೆ(Separation) ಸಾಮಾನ್ಯವಾಗಿ ಹಾಳೆ-ಎಲ್ಲೆಪದರಗಳಲ್ಲಿ ಸುಲಭವಾಗಿ ಜರುಗುವುದೆಂದು ಆದರೆ ಪ್ರಕ್ಷುಬ್ಧ ಎಲ್ಲೆಪದರಗಳು ಗಟ್ಟಿಯಾಗಿದ್ದು ಬೇರ್ಪಡಲು ಹೆಚ್ಚು ಶಕ್ತಿಶಾಲಿ ಆಘಾತ ಬೇಕೆಂದು ತೋರಿಸಿಕೊಟ್ಟರು. ಈ ಸಂಶೋಧನೆ ಬಹಳ ಬೇಗ ಶೈಕ್ಷಣಿಕ ವಲಯದಲ್ಲಿ ಹೆಸರು ಮಾಡಿದ್ದಲ್ಲದೇ ಇಂದಿಗೂ ಉಲ್ಲೇಖಗೊಳ್ಳುತ್ತಿರುತ್ತದೆ.‌

ಸತೀಶ್‌ ರ ಎರಡನೆಯ ಕೊಡುಗೆಯೇ ಅವರ ಡಾಕ್ಟರೇಟ್‌ ಪದವಿಯ ಥೀಸಿಸ್‌ ಅಂದರೆ ಸಂಶೋಧನಾ ವರದಿ. ಇದರ ಕುರಿತು ಒಂದು ತಮಾಷೆ ಇದೆ. ೧೯೫೧ ರಲ್ಲಿ ಭಾರತ ಸರ್ಕಾರದ ನಿಯಮಾನುಸಾರ ಸತೀಶ್‌ ಭಾರತಕ್ಕೆ ವಾಪಾಸ್ಸಾದರಿಂದ, ಅವರ ಥೀಸಿಸ್‌ ಅನ್ನು ಅವರ ಮಾರ್ಗದರ್ಶಕ ಲೀಪ್‌ಮನ್‌ ಅವರೇ ಬರೆಯಬೇಕಾಯಿತಂತೆ!! ಹಾಗೆ ಬರೆದ ಪ್ರಬಂಧದ ಮೊದಲ ಭಾಗದಲ್ಲಿ ತಮಗೆ ನೆರವಾದವರನ್ನು ನೆನೆಯುವುದು, ಕೃತಜ್ಞತೆ ಸಲ್ಲಿಸುವುದು ವಾಡಿಕೆ. ತಾವೇ ಬರೆದದ್ದರಿಂದ ತಮ್ಮ ಹೆಸರನ್ನು ಹಾಕಲು ಮರೆತಿದ್ದರಂತೆ. ಆಗ ಆ ಥೀಸಿಸ್‌ ನ ಪರೀಕ್ಷಕರು ಲೀಪ್‌ಮನ್ ಅವರ ಹೆಸರೇ ಇಲ್ಲವೆಂದು ಆಕ್ಷೇಪಿಸಿದಾಗ , ಹೆಸರು ಹಾಕಿಕೊಂಡರಂತೆ!! ಸತೀಶ್‌ ತಮ್ಮ ಡಾಕ್ಟರೇಟ್‌ ಪ್ರಬಂಧದ ಸಲುವಾಗಿ ಕೆಲಸ ಮಾಡಿದ್ದು ಮೇಲ್ಮೈ ಘರ್ಷಣೆ(Surface Friction) ಅಳೆಯುವ ಸಾಧನ ಮತ್ತು ವಿಧಾನದ ಮೇಲೆ. ಸತೀಶ್ ಅವರು ಅಲ್ಲಿದ್ದ ಹೊತ್ತಿಗೆ, ಎಲ್ಲೆಪದರಗಳ ಬಗ್ಗೆ ಸಿದ್ಧಾಂತಗಳು ರೂಪಿತವಾಗಿದ್ದವು. ಆದರೆ ಈ ಎಲ್ಲೆಪದರಗಳ ಅಂಚಿನ ಘರ್ಷಣೆಯನ್ನು ನೇರವಾಗಿ(Direct) ಅಳೆಯಲಾಗಿರಲಿಲ್ಲ. ಸತೀಶ್‌ ಆ ಕಾಲದಲ್ಲಿ ಸವಾಲಾಗಿದ್ದ ಸೂಪರ್‌ಸಾನಿಕ್‌ ಎಲ್ಲೆಪದರಗಳ ಬಗ್ಗೆ ಕೆಲಸ ಮಾಡಲು ತಯಾರಾಗಿದ್ದರು. ಹಾಗಾಗಿ ಈ ಸಂಬಂಧ ಅದಾಗಲೇ ಬಳಕೆಯಲ್ಲಿದ್ದ ಎಲ್ಲಾ ಪರೋಕ್ಷ(Indirect) ವಿಧಾನಗಳನ್ನು ಅಭ್ಯಾಸ ಮಾಡಿ, ಈ ವಿಧಾನಗಳಲ್ಲಿ ಇದ್ದ ಹಲವಾರು ದೋಷಗಳನ್ನು ಮನಗಂಡರು. ಮುಂದೆ ತಾವೇ ಖುದ್ದು ಒಂದು ಸಾಧನವನ್ನು ಅಭಿವೃದ್ಧಿ ಪಡಿಸಿ, ಸಪಾಟಾದ ಪಟ್ಟಿಯ ಮೇಲೆ ಬೇಕಾದಂತೆ ಅತ್ತಿತ್ತ ಚಲಿಸುವ ಒಂದು ಸಣ್ಣ ಭಾಗವನ್ನು ಜೋಡಿಸಿ ಆ ಭಾಗದಲ್ಲಿ ಉಂಟಾದ ಬಲಪ್ರಯೋಗವನ್ನು ಅಳೆದು ಆ ಮೂಲಕ ಮೇಲ್ಮೈ ಘರ್ಷಣೆ ನಿರ್ಧಾರ ಮಾಡುವ ವಿಧಾನವನ್ನು ಕಂಡುಹಿಡಿದರು. ಕಡಿಮೆ ವೇಗದ ಹರಿವುಗಳು, ಹಾಳೆ ಹರಿವಿನಿಂದ ಮೊದಲ್ಗೊಂಡು ಸಂಕ್ರಮಣ(Transition) ಸ್ಥಿತಿ ತಲುಪಿ ಮುಂದೆ ಪ್ರಕ್ಷುಬ್ಧ ಹರಿವು ಆಗುವವರೆಗೆ ಅವರು ಅಳೆದ ಮೇಲ್ಮೈ ಘರ್ಷಣೆಯ ವಿವರಗಳು ಬಹುಬೇಗನೇ ಪಠ್ಯಪುಸ್ತಕದಲ್ಲಿ ಕೂಡ ಸೇರಿದವು. ಮುಂದೆ ಅವರು ಈ ವಿಧಾನವನ್ನು ಅತಿ ವೇಗದ ಹರಿವುಗಳಿಗೂ ವಿಸ್ತರಿಸಿದರು.

(ಕೃಪೆ: ಕ್ಯಾಲ್ಟೆಕ್‌ ಆರ್ಕೈವ್ಸ್)

 ಇವಿಷ್ಟೂ ಅವರ ಸಂಶೋಧನಾ ವಿವರಗಳಾಗಿದ್ದರೆ, ಅವರ ಇತರೆ ಆಸಕ್ತಿಯ ವಿಷಯಗಳು ಇನ್ನೂ ಸ್ವಾರಸ್ಯವಾಗಿವೆ. ಕ್ಯಾಲ್ಟೆಕ್‌ ನಲ್ಲಿ ಇದ್ದ ಅಷ್ಟೂ ದಿನಗಳು, ಸತೀಶ್‌ ಗ್ಯಾಲ್ಸಿಟ್‌ ನ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನವರಾಗಿದ್ದರಂತೆ. ಎಷ್ಟೆಂದರೆ ಸತೀಶ್‌ ಅಲ್ಲಿಂದ ಹೊರಡುವಾಗ ಅಲ್ಲಿನ ಬೋರ್ಡ್‌ ಒಂದರಲ್ಲಿ ಬರೆದಿದ್ದ ಅವರ ವಿದಾಯದ ನುಡಿಯನ್ನು ಅಳಿಸದೇ ಹಾಗೇ ಉಳಿಸಿದ್ದರಂತೆ ಅಲ್ಲಿನ ಪ್ರಯೋಗಾಲಯದ ಸಿಬ್ಬಂದಿ!! ಐದಾರು ವರ್ಷಗಳ ನಂತರ ಅಲ್ಲಿಗೆ ಹೋದ ಸತೀಶ್‌ ಅವರ ಶಿಷ್ಯ ಪ್ರೊ.ರೊದ್ದಂ ನರಸಿಂಹ ಅವರಲ್ಲಿ ಕೂಡ ಅಲ್ಲಿನ ಸಿಬ್ಬಂದಿ ಸತೀಶ್‌ ಬಗ್ಗೆ ನೆನಪಿಸಿಕೊಳ್ಳುತ್ತಿದ್ದರಂತೆ.

ಇನ್ನೂ ಹ್ಯಾನ್ಸ್‌ ಲೀಪ್‌ಮನ್ ಅವರ ವಿಷಯದಲ್ಲಂತೂ, ಸತೀಶ್‌ ರಿಗೆ ವಿಶೇಷ ಸ್ಥಾನ. ಗುರುವಾಗಿ ನಂತರ ಗೆಳೆಯನಾಗಿ ಸುಮಾರು ಐವತ್ತು ವರ್ಷಗಳಿಗೂ ಮೀರಿದ ಅವರ ಸ್ನೇಹ ಬಲು ಅಪರೂಪ. ಆ ಸ್ನೇಹದ ಒತ್ತಾಸೆಯಾಗಿ, ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಒಂದು ವರ್ಷದ ಅವಧಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಬಂದು ಪಾಠ ಮಾಡಿದ್ದರು. ಜೊತೆಗೆ ಕ್ಯಾಲ್ಟೆಕ್‌ ಬಿಟ್ಟರೆ ಬೆಂಗಳೂರೇ ನನ್ನ ಇನ್ನೊಂದು ಮನೆ ಎಂದು ಹೇಳುತ್ತಿದ್ದರು. ಸತೀಶ್‌ ಅವರಿಗೆ ಮುಂಚೆ ಇವರಲ್ಲಿ ಅಧ್ಯಯನಕ್ಕೆ ಬಂದ ಇಬ್ಬರು ಭಾರತೀಯ ವಿದ್ಯಾರ್ಥಿಗಳಲ್ಲಿ ಕೌಶಲ್ಯಯುತ ಕೆಲಸ ಮಾಡಲು ಇದ್ದ ಅಸಡ್ಡೆ ಕಂಡು ಇವರಿಗೆ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನಿರಾಸಕ್ತಿ ಇತ್ತಂತೆ!! ಆದರೆ ಕೌಶಲ್ಯ ಬೇಡುವ ಪ್ರಾಯೋಗಿಕ ಅಧ್ಯಯನಕ್ಕೆ ಸತೀಶ್‌ ಅವರಿಗಿದ್ದ ಒಲವು ಕಂಡು ಖುಷಿ ಪಟ್ಟಿದ್ದರು. ವಿರಾಮದ ವೇಳೆಯಲ್ಲಿ ಪಿಂಗ್‌ಪಾಂಗ್ ಆಟ ಆಡುವಾಗಲೆಲ್ಲ ಸತೀಶ್‌ ಗೆದ್ದು “See, I am a crafty Asiatic”  ಎಂದು ಇವರಿಗೆ ಕಿಚಾಯಿಸುತ್ತಿದ್ದರಂತೆ. ಸತೀಶ್‌ ಅವರಂತಹ ಹತ್ತು ಜನ ಇದ್ದರೆ ಭಾರತದ ಹಲವಾರು ಸಮಸ್ಯೆಗಳು ಬೇಗ ಬಗೆ ಹರಿಯುತ್ತವೆ ಎಂದು ಭಾರತವನ್ನು ಕಂಡು ಅವರು ಹೇಳುತ್ತಿದ್ದರು. ಸತೀಶ್‌ ನಿಧನರಾದಾಗ ಅವರ ಬಗ್ಗೆ ಬರೆದ ಶ್ರದ್ಧಾಂಜಲಿಯಲ್ಲಿ ಲೀಪ್‌ಮನ್ ಹೀಗೆ ಬರೆಯುತ್ತಾರೆ;

” Satish did join my research group, and it soon became evident that we had acquired an  outstanding new member. From his previous scholastic records, we expected excellence in scholarship and class work, but there was so much more. Satish was immediately accepted and respected by this highly competent and proud group of young scientists. He showed an unusual maturity in judging both scientific and human problems, a characteristic that today is called ‘leadership quality’.”

ಲೀಪ್‌ಮನ್, ಸತೀಶ್‌ ಮತ್ತು ರಾಶ್ಕೋ ಈ ಮೂವರು ಗೆಳೆಯರು ತಮ್ಮ ವೃತ್ತಿ ಬದುಕಿನಲ್ಲಿ ಮಹತ್ವವಾದದ್ದನ್ನು ಸಾಧಿಸಿದರೂ ಆ ಬಗ್ಗೆ ಅವರೆಲ್ಲರಿಗೂ ದಿವ್ಯ ನಿರ್ಲಕ್ಷ್ಯವಿತ್ತು. ಆ ಬಗ್ಗೆ ಅವರೇ ತಮಾಷೆ ಮಾಡಿಕೊಳ್ಳುತ್ತಿದ್ದರು. ಆದಾಗ್ಯೂ ಲೀಪ್‌ಮನ್ ಮತ್ತು ಸತೀಶ್‌ ಅವರನ್ನು ಗ್ಯಾಲ್ಸಿಟ್‌ ಲೆಜೆಂಡ್ಸ್‌ ಎಂದು ಗೌರವಿಸಲಾಗಿದೆ. ಪ್ರೊ.ಅನಟೋಲ್‌ ರಾಶ್ಕೋ ಕೂಡ ಅದೇ ಸಂಸ್ಥೆಯಲ್ಲಿ ಪ್ರೊ.ಥಿಯೋಡಾರ್‌ ವಾನ್‌ ಕಾರ್ಮಾನ್ ಪ್ರೊಫೆಸರ್‌ ಆಗಿ ನಿವೃತ್ತಿ ಹೊಂದಿದವರು. ಈಗ ಈ ಮೂವರು ಸ್ನೇಹಿತರೂ ಇಲ್ಲ. ಆದರೆ ಸತೀಶ್‌ ಅವರ ಬಗ್ಗೆ ನೆನಪಿಸಿಕೊಂಡಾಗಲೆಲ್ಲಾ ಕ್ಯಾಲ್ಟೆಕ್‌ ಮತ್ತು ಈ ಇಬ್ಬರನ್ನೂ ನೆನಪಿಸಿಕೊಳ್ಳದೇ ಅವರ ನೆನಪಿನ ಪಯಣ ಮುಂದೆ ಸಾಗುವಂತಿಲ್ಲ.

ಗ್ಯಾಲ್ಸಿಟ್‌ ಸಂಸ್ಥೆಯ ವೆಬ್‌ಪುಟದಲ್ಲಿ “ಲೆಜೆಂಡ್ಸ್‌ ಆಫ್‌ ಗ್ಯಾಲ್ಸಿಟ್” ಎಂಬ ಗೌರವ ಪಡೆದಿರುವ ಲೀಪ್ಮನ್ ಮತ್ತು ಸತೀಶ್
(ಕೃಪೆ: ಗ್ಯಾಲ್ಸಿಟ್‌ ಅಂತರ್ಜಾಲ ತಾಣ)

ಮುಂದಿನ ಕಂತಿನಲ್ಲಿ ಅವರ ಇನ್ನೊಂದು ಜೀವನದ ಬಹುಮುಖ್ಯ ತಿರುವಾದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ದೊರಕಿದ ಉಪನ್ಯಾಸಕ ಹುದ್ದೆ, ಅವರ ಮದುವೆ, ನಿರ್ದೇಶಕನ ಜವಾಬ್ದಾರಿ ಇವೆಲ್ಲ ಸ್ವಾರಸ್ಯ ವಿಚಾರಗಳ ಬಗ್ಗೆ ತಿಳಿಯೋಣ.

(ಈ ಲೇಖನವನ್ನು ಇಡಿಯಾಗಿ ಓದಿ, ಅತ್ಯಮೂಲ್ಯ ಸಲಹೆ ನೀಡಿ ಲೇಖನದ ಮೌಲ್ಯವನ್ನು ಹೆಚ್ಚು ಮಾಡಿದ ಪ್ರೊ. ಸತೀಶ್‌ ಅವರ ಶಿಷ್ಯ ಮತ್ತು ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ (NAL-ಎನ್.ಎ.ಎಲ್.)‌ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ.ಟಿ.ಎಸ್.ಪ್ರಹ್ಲಾದ್‌ ಅವರಿಗೆ ವಿಶೇಷ ವಂದನೆಗಳು)

ನಮಸ್ಕಾರಗಳು.

ಆಕಾಶ್‌ ಬಾಲಕೃಷ್ಣ.

ಹೆಚ್ಚಿನ ಓದಿಗೆ:

  1.  Liepmann, H.W. 2002. Remembering Satish Dhawan. Engineering & Science (Caltech)65(4), 41–43.
  2. Satish Dhawan by K R Sreenivasan, Bhavana Magazine, Issue 3, July 2020
  3. Satish by Jyotsna Dhawan, Bhavana Magazine, Issue 3, July 2020
  4. “A Real Patriot”: Roddam Narasimha on Satish Dhawan, Bhavana Magazine, Issue 3, July 2020
  5. Special Section: Satish Dhawan Birth Centenary, Current Science, Vol 119, No.9, 10 NOVEMBER 2020

This Post Has 3 Comments

  1. ANSAR PASHA G

    “ಲೆಜೆಂಡ್ಸ್‌ ಆಫ್‌ ಗ್ಯಾಲ್ಸಿಟ್” ಎಂಬ ತ್ರಿಮೂರ್ತಿ ಗಳು ಇಡೀ ಜಗತ್ತನ್ನೇ ಬದಲಾಯಿಸಿ ಹೋಗಿದ್ದಾರೆ.ಅದರಲ್ಲಿ ನಮ್ಮ ಅತ್ಯಮೂಲ್ಯ ರತ್ನ ಪ್ರೊ ಸತೀಶ್ ಧವನ್ .ಇವರಿಂದ ನಾವು ಬಾಹ್ಯಾಕಾಶದ ವಿಜ್ಞಾನದಲ್ಲಿ ಮುಂದುವರಿದಿದ್ದು ಇಡೀ ಜಗತ್ತಿಗೆ ಭಾರತಕ್ಕೆ ತಿಲಕ ವಿಟ್ಟoತೆ ಕಾಣುತ್ತೆ.
    ಲೇಖನ ಚೆನ್ನಾಗಿ ಅರ್ಥವಾಗುವ ರೀತಿ ಅಂದರೆ, Fluid mechanics ಬಗ್ಗೆ ಸಾಧಾರಣ ರೀತಿಯಲ್ಲಿ ವಿವರಣೆ ನೀಡಿ ಅರ್ಥವಾಗುವ ರೀತಿ ಬರೆದಿರುವುದು ಸ್ಲಾಘನೀಯ.

    1. CPUS

      ನೀವು ಓದಿ ಅರ್ಥ ಮಾಡಿಕೊಂಡು ಸಂತಸ ಪಟ್ಟಿದೀರಲ್ಲಾ, ಅದರಲ್ಲಿ ನಮ್ಮ ಖುಷಿ ಮತ್ತು ಸಾರ್ಥಕತೆ ಇದೆ. ಧನ್ಯವಾದಗಳು ಸರ್.

  2. Srinivas Kirthy K

    ಪ್ರಿಯ ಆಕಾಶ್ ರವರೆ,

    ಪ್ರೊ. ಸತೀಶ್ ಧವನ್ ರವರ ಕುರಿತ ನಿಮ್ಮ ಲೇಖನ ಸರಣಿಯು ಅಂದವಾಗಿ ರೂಪುಗೊಳ್ಳುತ್ತಿದೆ. ಸಂಸ್ಥೆಗಳ ನಿರ್ಮಾಣದ ವಿಷಯದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರಿಗೂ, ಧವನ್ ರವರಿಗೂ, ಬಹಳಷ್ಟು ಹೋಲಿಕೆಗಳಿವೆ. ಇಂದಿನ ವಿಜ್ಞಾನಿ / ಇಂಜಿನಿಯರ್ ಗಳಿಗೆ ಅವರ ವ್ಯಕ್ತಿತ್ವ, ಕರ್ತವ್ಯನಿಷ್ಠೆ, ಬಹು ಆಯಾಮಗಳ ಚಿಂತನೆ, ಸಂಶೋಧನೆಯ ವೈಖರಿ – ಇವೆಲ್ಲವೂ ಆದರ್ಶ.

    ಎಲ್ಲೆಪದರದ ಸಂಶೋಧನೆಯ ಕುರಿತಾಗಿ:
    ರಾಕೆಟ್ ಭೂಮಿಯಿಂದ ಗಗನಕ್ಕೆ ಉಡಾವಣೆಯಾದಾಗ, ಅದರ ಎಂಜಿನ್ ಗಳು ನೀಡುವ ನೂಕು ಬಲದಿಂದ ತನ್ನ ವೇಗವನ್ನು ಸತತವಾಗಿ ವರ್ಧಿಸಿಕೊಳ್ಳುತ್ತ, ಶಬ್ದಕ್ಕಿಂತ ವೇಗವಾಗಿ ಸಾಗುತ್ತದೆ. ಹೀಗಾಗುವಾಗ, ರಾಕೆಟ್ ನ ಮೇಲ್ಮೈನ ಮೇಲೆ ಸುತ್ತಲಿನ ಗಾಳಿಯ ಹರಿವಿನಿಂದ ಎಲ್ಲೆ ಪದರವು ಉದ್ಭವವಾಗುತ್ತದೆ. ರಾಕೆಟ್ ಎತ್ತರೆತ್ತರಕ್ಕೆ ಸಾಗಲು, ಅದರ ವೇಗ ಮತ್ತು ಸುತ್ತಲಿನ ಗಾಳಿಯ ತಾಪಮಾನ, ಒತ್ತಡ, ಸಾಂದ್ರತೆ, ಸಂಯೋಜನೆ ಬದಲಾಗುತ್ತದೆ. ಇದರಿಂದ, ಎಲ್ಲೆಪದರದ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ಇದಕ್ಕೆ ಪರಿಣಾಮವಾಗಿ, ರಾಕೆಟ್ ಅನುಭವಿಸುವ ಪ್ರತಿರೋಧ ಬಲವೂ (drag force) ಬದಲಾಗುತ್ತದೆ. ಹಾಗಾಗಿ, ರಾಕೆಟ್ ನ ಚಲನೆಯನ್ನು ನಿಖರವಾಗಿ ನಿಯಂತ್ರಿಸಲು ಎಲ್ಲೆ ಪದರದ ಸಂಶೋಧನೆ ಅಗತ್ಯ. ಇಷ್ಟೇ ಅಲ್ಲದೆ, ದ್ರವದ (ಗಾಳಿ ಅಥವಾ ನೀರು) ವಾತಾವರಣದಲ್ಲಿ ಚಲಿಸುವ ಯಾವುದೇ ವಾಹನದ (ಕಾರು, ವಿಮಾನ, ಹಡಗು, ರೈಲು, ಇತ್ಯಾದಿ) ಮೇಲ್ಮೈ ಮೇಲೆ ಎಲ್ಲೆಪದರದ ಮೂಲಕ ದ್ರವವು ಪ್ರತಿರೋಧ ಬಲವನ್ನು ಒಡ್ಡುತ್ತದೆ. ಇಂತಹ ವಾಹನಗಳ ವಿನ್ಯಾಸದ ಹಂತದಲ್ಲಿ, ಪ್ರತಿರೋಧ ಬಲದ ಪರಿಣಾಮಗಳನ್ನು ನಿಖರವಾಗಿ ತಿಳಿಯಲು ಎಲ್ಲೆಪದರದ ಸೂಕ್ಷ್ಮ ಗುಣಲಕ್ಷಣಗಳನ್ನು ಅದರ ಸಂಶೋಧನೆಯಿಂದ ಇಂಜಿನೀಯರ್ ಗಳು ತಿಳಿಯುತ್ತಾರೆ.

Leave a Reply to Srinivas Kirthy K Cancel reply