You are currently viewing ಹುಳಿಯ ಜೊತೆಗೆ ಪರಿಮಳವನ್ನೂ ಬೆರೆಸುವ ನಿಂಬೆ : Citrus limon

ಹುಳಿಯ ಜೊತೆಗೆ ಪರಿಮಳವನ್ನೂ ಬೆರೆಸುವ ನಿಂಬೆ : Citrus limon

Nothing deals with the scorching heat better than a glass of Lemon Water   ಬೆವರಿಳಿಸುವ ಬಿಸಿಲಿನಲ್ಲಿ ಒಂದು ಗ್ಲಾಸ್‌ ನಿಂಬೆಯ ಹಣ್ಣಿನ ಶರಬತ್ತಿಗೆ ಯಾವುದೂ ಸಾಟಿಯಲ್ಲ.

ತುಂಬಾ ಸುಲಭವಾಗಿಯೂ ತಯಾರಿಸಲಾಗುವ ಜ್ಯೂಸ್‌ ಎಂದರೆ ನಿಂಬೆಯ ಹಣ್ಣಿನ ಶರಬತ್ತು ಅಥವಾ ಲಿಂಬು ಪಾನಕ! ಹಾಗೆನೇ ಇಂದು ಇಡೀ ಜಗತ್ತು ಆರೋಗ್ಯ ಭಯದಿಂದ ಪರಿತಪಿಸುತ್ತಿರುವ ಹೊತ್ತಿನಲ್ಲಿ ಚರ್ಚಿಸುತ್ತಿರುವ, “ಇಮ್ಯುನಿಟಿ”, “ವಿಟಮಿನ್‌ ಸಿ” ಹಾಗೂ “ಕ್ಲಿನಿಕಲ್‌ ಟ್ರಯಲ್ಸ್‌”ಗಳಿಗೂ ನಿಂಬೆಯು ಮೂಲ ಕಾರಣವನ್ನು ತನ್ನೊಳಗಿರಿಸಿಕೊಂಡಿದೆ. ಅಲ್ಲದೆ ವ್ಯವಹಾರ, ಉದ್ಯಮಗಳ ಜೊತೆಗೆ ಸಾಂಸ್ಕೃತಿಕವಾಗಿಯೂ ಜಗತ್ತನ್ನು ಆವರಿಸಿ ದಿನವೂ ಒಂದಲ್ಲ ಒಂದು ಬಗೆಯಲ್ಲಿ ಮಾನವನ ಸಂಗಾತಿಯಾಗಿದೆ.

         ನಿಂಬೆ ಅಥವಾ ಲಿಂಬೆಯು ಸಿಟ್ರಸ್‌ ಸಂಕುಲದ ಅನೇಕ ಪ್ರಭೇದಗಳಲ್ಲಿ ಬಹುಶಃ ಹೆಚ್ಚು ಮುಖಾಮುಖಿಯಾಗುವ ಸಸ್ಯದ ಉತ್ಪನ್ನ. ಇದನ್ನೂ ಸೇರಿಸಿಕೊಂಡು ಕೃಷಿಗೆ ಒಳಗಾಗಿರುವ ಇದರ ಸಂಬಂಧಿಗಳಲ್ಲಿ ಬಹುಪಾಲು ಸಸ್ಯ ಪ್ರಭೇದಗಳು ಸಂಕರಗೊಳಿಸಲಾದ ಪ್ರಭೇದಗಳು. ಹಾಗಾಗಿ ಬಹುಪಾಲು  ಸಿಟ್ರಸ್‌ಗಳಿಗೆ ನಿಖರವಾದ ವಿಕಾಸವನ್ನು ಹೇಳಲಾಗುತ್ತಿಲ್ಲ. ಇದರ ಕುಲವಾದ ಸಿಟ್ರಸ್‌ನಲ್ಲಿ ನೂರಐವತ್ತಕ್ಕೂ ಹೆಚ್ಚು  ಪ್ರಭೇದಗಳಿವೆ. ಕಿತ್ತಳೆ, ಮೊಸಂಬಿ, ಕಂಚಿ, ಹೇರಳೆ, ಚಕ್ಕೊತ ಗಳು ಭಾರತೀಯರಿಗೆ ಪರಿಚಯಗೊಂಡು ಬಳಕೆಯಲ್ಲಿವೆ. ನಿಂಬೆಯು ಅದರ ನಿಖರವಾದ ವಿಕಾಸದ ತಿಳಿವಿನಿಂದ ತನ್ನ ನೆಲೆಯನ್ನು ಬಿಟ್ಟುಕೊಟ್ಟಿಲ್ಲ. ಆದಾಗ್ಯೂ ಹಿಮಾಲಯದ ತಪ್ಪಲಿನ ಅಸ್ಸಾಂ ರಾಜ್ಯದ ಆಸುಪಾಸಿನ ಪ್ರದೇಶದಲ್ಲಿ ಮೊಟ್ಟ ಮೊದಲು ಕೃಷಿಗೆ ಒಳಗಾಗಿದೆ ಎಂಬದನ್ನು ಜತೆಗೆ ಅಲ್ಲಿ ಹೇರಳವಾಗಿ ವನ್ಯ ತಳಿಗಳೂ ಇರುವ ಬಗೆಗೆ ಹಲವು ಅಧ್ಯಯನಗಳಿಂದ ನಂಬಲಾಗಿದೆ. ಹೆಚ್ಚೂ ಕಡಿಮೆ ಅಲ್ಲಿಂದಲೇ ಜಗತ್ತಿನಾದ್ಯಂತ ಹಬ್ಬಿ ಅನೇಕ ಪ್ರದೇಶಗಳನ್ನು ನೆಲೆಯಾಗಿಸಿಕೊಂಡಿದೆ. ಕ್ರಿ.ಶ. 200 ರಲ್ಲಿಯೇ ಇಟಲಿಯನ್ನು ತಲುಪಿದೆ ಮುಂದೆ 700ರ ವೇಳೆಗೆ ಇರಾನ್‌ ಇರಾಕ್‌ ಈಜಿಪ್ಟ್‌ಗಳಿಗೂ ಪರಿಚಯಗೊಂಡಿದೆ. ಸುಮಾರು ಕ್ರಿ.ಶ. 750 ಮತ್ತು 1000 ದ ನಡುವೆ ಚೀನಾವನ್ನು ಆಕ್ರಮಿಸಿದೆ. ಯೂರೋಪು, ಮೆಡಿಟರೇನಿಯನ್‌ ಪ್ರದೇಶ ಹಾಗೂ ಆಫ್ರಿಕಾಗಳ ಬಹು ಪಾಲು ಪ್ರದೇಶಗಳಿಗೆ ಪರಿಚಯಿಸಿದ್ದು ಅರಬ್ಬರು. ಆ ಕಾಲದ ಅರಬ್ಬರ ಅಲೆದಾಟ ನಿಂಬೆಯನ್ನೂ ಕೊಂಡೊಯ್ದಿದೆ. ಕ್ರಿಸ್ಟೋಫರ್‌ ಕೊಲಂಬಸ್‌ 1493ರಲ್ಲಿ ನಿಂಬೆಯ ಬೀಜಗಳನ್ನು ಉತ್ತರ ಅಮೆರಿಕದ ಕೆರ್ರಾಬಿಯನ್‌ ದ್ವೀಪಗಳ ಸಮೂಹದ ಪ್ರಮುಖ ದ್ವೀಪವಾದ ಹೆಸ್ಪನಿಯೊಲಕ್ಕೆ ಪರಿಚಯಿಸಿದನು. ನಂತರ 1750 ಮತ್ತು 1768ರ ನಡುವೆ ಅಮೆರಿಕದ ಬಹುಪಾಲು ನೆಲದಲ್ಲಿ ನಿಂಬೆಯು ನೆಲೆಗೊಂಡಿತು. ಹೀಗೆ ಹಿಮಾಲಯದ ತಪ್ಪಲಿನ ಪುಟ್ಟ ಹಣ್ಣೊಂದು ಖಂಡಾಂತರವಾಗಿ ಬಗೆ ಬಗೆಯ ಹೆಸರಿನಿಂದ ವಿವಿಧತೆಯನ್ನೂ ಮೆರೆದಿದೆ. ಇಂದು ಪರ್ಷಿಯನ್‌ ಲೈಮ್‌, ಸ್ಪಾನಿಶ್‌ ಲೈಮ್‌, ಆಸ್ಟ್ರೇಲಿಯನ್‌ ಲೈಮ್‌, ಕೀ ಲೈಮ್‌, ಕಾಫಿರ್‌ ಲೈಮ್‌ ಮುಂತಾಗಿ ಕರೆಸಿಕೊಳ್ಳುತ್ತಿದೆ. ಹಾಗಾಗಿ ತಳಿಗಳಲ್ಲೂ ಬಗೆ ಬಗೆಯ ವೈವಿಧ್ಯತೆಯಿಂದ ಜನಪ್ರಿಯವೂ ಆಗಿದೆ. ಹಾಗೆನೇ ಲೈಮ್‌, ಲೆಮನ್‌ಗಳಾಗಿಯೂ ಎರಡು ಬಗೆಯಲ್ಲಿ ಕರೆಯಲಾಗುತ್ತದೆ. ಇದರ ವಿವರಗಳನ್ನು ನೋಡುವ ಮೊದಲು ಗಿಡ, ಹೂವು, ಹಣ್ಣಿನ ವಿಶೇಷತೆಗಳನ್ನು ಪರಿಚಯಿಸಿಕೊಳ್ಳೋಣ.

       ನಿಂಬೆಯು ರೂಟೇಸಿಯೆ (Rutaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದ ನಿತ್ಯ ಹಸಿರಾಗಿರುವ ಸಸ್ಯ. ಬಹುಪಾಲು ನಿಂಬೆಯ ಸಂಬಂದಿಗಳಾದ ಕಿತ್ತಳೆ, ಮೋಸುಂಬಿ ಮುಂತಾದವನ್ನೆಲ್ಲಾ ಸಿಟ್ರಸ್‌ ಹಣ್ಣುಗಳು ಎಂದೇ ಕರೆದು ಸಂಕುಲಕ್ಕೂ ಅದೇ ಹೆಸರನ್ನು ಇಡಲಾಗಿದೆ. ಹಾಗಾಗಿ ಸಿಟ್ರಸ್‌ಗಳೆಲ್ಲವೂ ಸಿಟ್ರಸ್‌ ಸಂಕುಲದವು. ನಿಂಬೆಯನ್ನು ಸಿಟ್ರಸ್‌ ಲಿಮನ್‌ (Citrus limon) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ನಿಂಬೆಯ ಸಸ್ಯವು ಗಿಡವೂ ಅಲ್ಲ ಮರವೂ ಅಲ್ಲ, ಅದೊಂದು ಚಿಕ್ಕ ಮರ ಅಥವಾ ದೊಡ್ಡ ಗಿಡ ಜೊತೆಗೆ ದಟ್ಟವಾಗಿ ಒತ್ತೊತ್ತಾಗಿ ಪೊದರಿನಂತೆ ಬೆಳೆಯುತ್ತದೆ. ಎಲೆಗಳು ದಟ್ಟವಾದ ಹಚ್ಚ ಹಸಿರು. ಹಾಗೆನೇ ದಪ್ಪ ಕೂಡ. ಸಾಕಷ್ಟು ಪರಿಮಳ ಭರಿತವಾದ ಎಲೆಗಳು. ಎಲೆಗಳನ್ನೂ ಚಹಾಕ್ಕೆ, ವಿವಿಧ ತೆರನಾದ ಖಾದ್ಯಗಳಿಗೆ ಪರಿಮಳವನ್ನು ಕೊಡಲು ಬಳಸಬಹುದು. ತಣ್ಣನೆಯ ನೀರಿನಲ್ಲಿ ಸ್ವಚ್ಛಮಾಡಿದ ಎಲೆಗಳನ್ನು ಇಳಿಬಿಟ್ಟು ಪರಿಮಳದ ನೀರನ್ನೂ ಕುಡಿಯಬಹುದು. ಹಿತವಾದ ಅನುಭವವನ್ನು ಕೊಡುತ್ತದೆ.   

       ನಿಂಬೆಯ ಹೂವುಗಳು ಅಪ್ಪಟ ಬಿಳಿಯ ಬಣ್ಣದವು ಅಂಚಿನಲ್ಲಿ ತುಸು ನೇರಳೆ ಛಾಯೆಯನ್ನು ಹೊಂದಿರುತ್ತವೆ. ದಳಗಳ ಕೆಳಭಾಗವೂ ತುಸು ನೇರಳೆಯ ಛಾಯೆಯನ್ನು ಹೊಂದಿದಂತೆ ಕಾಣುತ್ತವೆ. ಆಕರ್ಷಕ ರೂಪ ಹಾಗೂ ಆಹ್ಲಾದಕರ ಸುವಾಸನೆಯನ್ನು ಹೊಂದಿವೆ. ಸ್ವಕೀಯ ಪರಾಗಸ್ಪರ್ಶದಿಂದ ಕಾಯಿಗಳನ್ನು ಬಿಡುವ ನಿಂಬೆಯು ಕೆಲವೊಮ್ಮೆ ಕಾಯಿ ಕಟ್ಟುವುದು, ಇನ್ನೂ ಕೆಲವೊಮ್ಮೆ ಹೂವನ್ನೇ ಬಿಡದಿರುವುದೂ ಉಂಟು. ಅದರಲ್ಲೂ ಹಿತ್ತಲಲ್ಲೋ, ಕೈತೋಟದ ಅಂಗಳದಲ್ಲೋ ಬಹಳ ಪ್ರೀತಿಯಿಂದ ಸಾಕಿದ ಒಂದೇ ಗಿಡ ಮರವಾದರೂ ಹೂ, ಬಿಡದೆ ಸತಾಯಿಸುವುದುಂಟು. ಹೂವೇ ಬಿಡದ, ಹೂ ಬಿಟ್ಟರೂ ಕಾಯಿ ಬಿಡದ ನಿಂಬೆಯ ಗಿಡಗಳ ಬಗೆಗೆ ಸಾಕಷ್ಟು ಕಥೆಗಳು ಆಯಾ ಪ್ರದೇಶಗಳ ಮೇಲೆ ಹಬ್ಬಿವೆ. ಅವುಗಳೇನೇ ಇರಲಿ. ಹೂ ಬಿಡದಿರುವುದಕ್ಕೆ ಮುಖ್ಯ ಕಾರಣ ಸಾಕಿದವರ ಬಹುವಾದ ಆರೈಕೆಯೂ ಕಾರಣ! ಅಷ್ಟೆಲ್ಲಾ ಇಷ್ಟ ಪಟ್ಟು ಮಾನವ ಕುಲವು ಹೈಬಿಡ್‌ ಆಗಿಸಿ ಹಿತ್ತಲಿಗೆ ತಂದಿದ್ದರೂ ನಿಂಬೆಯು ತನ್ನ ವನ್ಯಗುಣವನ್ನು ಇಟ್ಟುಕೊಂಡಿದೆ. ಚೆನ್ನಾಗಿ ಬೆಳೆದು ಸಾಕಷ್ಟು ಕಾಯಿಗಳನ್ನು ಬಿಡುವ ಮರಗಳಲ್ಲಿ ಈ ಗುಣವನ್ನು ಖಂಡಿತಾ ಕಾಣಬಹುದು. ಚೆನ್ನಾಗಿ ಬೆಳೆದು ಸೊಂಪಾಗಿರಲಿ ಎಂದು ಧಾರಾಳಿಗಳಾಗಿ ನೀರು ಬಳಸುವುದು, ಹಾಗೆಯೇ ಅತಿಯಾದ ಗೊಬ್ಬರ ಕೊಡುವುದೂ ಕೂಡ ಹೂವು ಬಿಡದಿರಲು ಕಾರಣವಾಗಬಹುದು. ಹೂ ಬಿಟ್ಟೂ ಕಾಯಾಗದಿರಲು ಪರಾಗಸ್ಪರ್ಶದ ತೊಂದರೆ ಅಂತಹಾ ಸಂದರ್ಭದಲ್ಲಿ ಕೈಯಿಂದ ಅದೇ ಗಿಡದ ಪರಾಗವನ್ನು ಬಳಸಿ ಕಾಯಾಗಲು, ಮೃದುವಾಗಿ ಮುಟ್ಟಿದರೆ ಸಾಕಾಗಬಹುದು. ಇವುಗಳಲ್ಲದೆಯೂ ಮತ್ತಾವುದೋ ಸ್ಥಳೀಯ ಸಮಸ್ಯೆಯೂ ಇದ್ದೀತು. 

       ಕಾಯಿ-ಹಣ್ಣುಗಳು ವಿಶೇಷವಾದ ರೂಪದವು. ಕೆಲವು ದುಂಡಗಿದ್ದರೆ ಕೆಲವು ಅಂಡಾಕಾರದವು. ಎರಡರಲ್ಲೂ ಕಾಯಿಗೆ ದಪ್ಪನಾದ ಸಿಪ್ಪೆಯನ್ನು ಸುತ್ತಿ, ಒಳಗೆ ರಸಭರಿತವಾದ ಮೃದುವಾದ ಕುಸುಮಗಳನ್ನೂ ತೊಳೆಗಳಾಗಿಸಿ ಸುತ್ತಲೂ ಜೋಡಿಸಿಟ್ಟಿರುತ್ತದೆ. ಅದೂ ಸಹಾ ಫರ್ಫೆಕ್ಟ್ ‌ ಆದ ಜೋಡಣೆಯು ಸಮರೂಪತೆ(Symmetry) ಯನ್ನು ಹೊಂದಿ ಸುಂದರವಾಗಿರುತ್ತದೆ. ಸಿಪ್ಪೆಯೂ ಆಹ್ಲಾದಕರ ಪರಿಮಳವನ್ನೂ ಬಣ್ಣವನ್ನೂ ಹೊಂದಿರುತ್ತದೆ. ಸಿಪ್ಪೆಯಿಂದ ಎಣ್ಣೆಯನ್ನೂ ತೆಗೆಯಬಹುದು. ಜೊತೆಗೆ ಸಿಪ್ಪೆಯಲ್ಲಿ ಪೆಕ್ಟಿನ್‌ (Pectin) ಎಂಬ ಕಾರ್ಬೋಹೈಡ್ರೇಟು ಇದ್ದು, ಅದನ್ನು ಹಲವು ಆಹಾರಗಳಲ್ಲಿ ಜೆಲ್‌ ಅಥವಾ ಹೊಂದುಗೊಳ್ಳುವ ಗುಣವನ್ನು ಬೆರೆಸಲು ಬಳಸಬಹುದು. ಹಾಗೆಯೇ ಸಿಪ್ಪೆಯನ್ನೂ ಪರಿಮಳವನ್ನು ಕೊಡಲೂ ಬಳಸಬಹುದು.‌

       ನಿಂಬೆ ಹಣ್ಣಿನ ಬಣ್ಣವನ್ನು ನಿಂಬೆ ಹಳದಿ ಎಂದೇ ಕರೆಯಲಾಗುತ್ತದೆ. ನಸು ಹಳದಿ ಎಂದರೂ ಆದೀತು. ಹಳದಿಯೇ ಆದರೆ ಅದರೊಳಗೆ ಹಸಿರು ಛಾಯೆ! ಕೆಲವು ತಳಿಗಳು ದಟ್ಟ ಹಸಿರಾಗಿದ್ದೇ ಬಲಿತಿರುತ್ತವೆ. ಅದರೊಳಗೆ ಹಳದಿಯ ಛಾಯೆ ಇದ್ದಿರಬಹುದು. ಮಾಗುವಿಕೆ ಹಾಗೂ ಬಲಿಯುವ ಹಂತಗಳು ಹಳದಿ ಮತ್ತು ಹಸಿರು ಬಣ್ಣವನ್ನು ವಿವಿಧ ಅನುಪಾತದಲ್ಲಿ ಬೆರೆತಂತೆ ಅನ್ನಿಸಬಹುದು. ಸಾಮಾನ್ಯವಾಗಿ ಹಳದಿಯನ್ನು ಹೆಚ್ಚು ಹೊತ್ತವುಗಳು ತುಸು ಮೃದುವಾದರೆ ಹಸಿರನ್ನೇ ಹೆಚ್ಚು ಹೊತ್ತವುಗಳು ಗಡಸು. ಹಳದಿಯ ಸಿಪ್ಪೆಯಳ್ಳವನ್ನು ಸುಲಭವಾಗಿ ಹಿಂಡಿ ರಸ ತೆಗೆಯಬಹುದಾದರೆ, ಹಸಿರಲ್ಲಿ ಸ್ವಲ್ಪ ಕಷ್ಟ ಪಡಬೇಕು. ಕಾಯಿಯ ಆಕಾರ ಹಾಗೂ ಬಣ್ಣ ಎರಡನ್ನೂ ಬಳಸಿ ಲೈಮ್‌(Lime) ಅಥವಾ ಲೆಮನ್‌(Lemon)ಎಂಬ ಬಗೆಗಳಾಗಿಸುವುದುಂಟು. ದುಂಡನೆಯವನ್ನು ಅದರಲ್ಲೂ ಬಲಿತರೂ ಇನ್ನೂ ಹಸಿರನ್ನೇ ಹೆಚ್ಚು ಹೊತ್ತವನ್ನು ಲೈಮ್‌ ಎಂದೂ, ಮಾಗಿದಾಗ ಹಳದಿಯಾಗುವ ಅಂಡಾಕಾರದವನ್ನು ಲೆಮನ್‌ ಎಂದೂ ಕರೆದರೂ ಜನಸಾಮನ್ಯರ ಬಳಕೆಯಲ್ಲಿ ಎರಡೂ ಹೆಸರನ್ನೂ ಎರಡೂ ಬಗೆಯ ಹಣ್ಣು-ಕಾಯಿಗಳಿಗೂ ಕರೆಯುತ್ತಿದ್ದರೂ ಆಚ್ಚರಿಯೇನಿಲ್ಲ.  ಲೈಮ್‌ ಆಗಲಿ ಲೆಮನ್‌ ಆಗಲಿ ಎರಡೂ ಒಟ್ಟಾರೆಯಾಗಿ ಜಗತ್ತಿನಾದ್ಯಂತ ವಾರ್ಷಿಕ ಸುಮಾರು 20 ದಶಲಕ್ಷ ಟನ್ನುಗಳಷ್ಟು ಉತ್ಪಾದನೆಯಾಗುತ್ತವೆ. ಅದರಲ್ಲಿ ಭಾರತ ಒಂದೇ ಸುಮಾರು ನಾಲ್ಕು ದಶಲಕ್ಷ ಟನ್ನುಗಳ ನಿಂಬೆಯ ಹಣ್ಣುಗಳು ಉತ್ಪಾದಿಸುತ್ತದೆ.

       ನಿಂಬೆಯು ಬಗೆ ಬಗೆಯ ವೈದ್ಯಕೀಯ ಉಪಯೋಗಗಳನ್ನು ಸಾಬೀತು ಮಾಡಿದೆ. ಆದ್ದರಿಂದಲೇ ಲೈಮ್‌-ಚಹಾವೂ ಸೇರಿ ನಿಂಬೆಯ ಪರಿಮಳದ ಅನೇಕ ಪಾನೀಯಗಳೂ, ಪರಿಮಳ ದ್ರವ್ಯಗಳೂ, ಅಲಂಕಾರಿಕ ಪದಾರ್ಥಗಳೂ, ವಾಶಿಂಗ್‌ ರಾಸಾಯನಿಕಗಳೂ ಸಾಕಷ್ಟು ಬಳಕೆಯಲ್ಲಿವೆ. ಎಷ್ಟೋ ಜನರ ಮುಂಜಾವು ಆರಂಭವಾಗುವುದೇ ಬಿಸಿ ನೀರಿಗೆ ಒಂದಷ್ಟು ನಿಂಬೆಯ ರಸವನ್ನು ಹಿಂಡಿ ಕುಡಿಯುವುದರಿಂದ! ಇವೆಲ್ಲವುದರ ಆಸಕ್ತಿಯ ಹಿಂದಿರುವ ನಿಂಬೆಯು ಒದಗಿಸುವ “ಸಿಟ್ರಿಕ್‌ ಆಮ್ಲ” ಹಾಗೂ “ವಿಟಮಿನ್‌ ಸಿ”ಗಳ ಸಂಗತಿಗಳು ತುಂಬಾ ವಿಶೇಷವಾದವು.  

       ನಿಂಬೆಯ ಹಣ್ಣನ್ನು ಹಿಂಡಿ ರಸವನ್ನು ತೆಗೆಯುವುದೂ ಸುಲಭ ಹಾಗಾಗಿ ಬಳಕೆಯಲ್ಲಿ ಸುಲಭವಾಗಿ ಶತಮಾನಗಳಿಂದ ಒಗ್ಗಿಹೋಗಿದೆ. ಅದರಲ್ಲೂ ತತ್‌ ಕ್ಷಣದ ಪಾನೀಯ ತಯಾರಿಯಲ್ಲಿ ಅದಕ್ಕೆ ಸಾಟಿಯಾದುದಿಲ್ಲ. ರಸವು ಸಿಟ್ರಿಕ್‌ ಆಮ್ಲವನ್ನೂ ವಿಟಮಿನ್‌ “ಸಿ”ಯನ್ನೂ ಹೊಂದಿದ್ದು ಅದರ ಜನಪ್ರಿಯತೆಯನ್ನು ವಿಸ್ತರಿಸಿದೆ. ಅದರಲ್ಲಿರುವ ವಿಟಮಿನ್‌ “ಸಿ”ಯನ್ನು ಇನ್ನೂ ಗುರುತಿಸುವ ಮೊದಲೇ ಅದರ ಲಾಭವನ್ನು ಆರೋಗ್ಯದ ಹಿತದಲ್ಲಿ ಬಳಸಿದ್ದಲ್ಲದೇ, ಕ್ಲಿನಿಕಲ್‌ ಚಿಕಿತ್ಸೆಯಲ್ಲಿ ಮೊಟ್ಟ ಮೊದಲು ಬಳಸಿ ರೂಪಿಸಿದ ಕೀರ್ತಿಯನ್ನು ಹೊಂದಿದೆ. ಜೇಮ್ಸ್‌ ಲಿಂಡ್‌(1716 –1794) ಎಂಬ ಸ್ಕಾಟ್‌ಲ್ಯಾಂಡಿನ ವೈದ್ಯ ವಿಜ್ಞಾನಿ ನಿಂಬೆಯ ರಸವನ್ನು ಬಳಸಿ ಅಂತಹಾ ಪ್ರಯೋಗಗಳನ್ನು ನಡೆಸಿದವರು.      

       ಯುನೈಟೆಡ್‌ ಕಿಂಗಡಂನ ರಾಯಲ್‌ ನೌಕಾ ಪಡೆಯಲ್ಲಿ ವೈದ್ಯರಾಗಿದ್ದ ಜೇಮ್ಸ್‌ ಲಿಂಡ್‌, ವೈದ್ಯಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 1747ರಲ್ಲಿಯೇ “ಕ್ಲಿನಿಕಲ್‌ ಟ್ರಯಲ್ಸ್‌” ಚಿಕಿತ್ಸೆಗಳ ಪ್ರಯೋಗವನ್ನು ನಡೆಸಿದವರು. ಜೊತೆಗೆ ಸ್ಚಚ್ಛತೆಯ ವಿಷಯದಲ್ಲೂ ದೈಹಿಕ ಸ್ವಚ್ಛತೆಯನ್ನು ದೇಹದ ಆಂತರಿಕ ಹಾಗೂ ಬಹಿರಂಗಗಳೆರಡರ ವಿಷಯವನ್ನೂ ಪ್ರಸ್ತಾಪಿಸಿದವರು. ಇದೇ ಹಿನ್ನೆಲೆಯಲ್ಲಿಯೇ ತಿಂಗಳುಗಟ್ಟಲೇ ನೌಕೆಯಲ್ಲಿದ್ದು ಸಮುದ್ರಯಾನದಲ್ಲಿರುವಾಗ ಮಾನವ ದೇಹದ ಹೊರಮೈಯ ಸ್ವಚ್ಛತೆ ಹಾಗೂ ದೇಹದೊಳಗೂ ಆಹಾರದ ಸಂಪೂರ್ಣತೆ ಜೀರ್ಣತೆ ಇತ್ಯಾದಿಯ ಕುರಿತೂ ಆಲೋಚಿಸಿ ಆಗ ನೌಕಾ ಸೈನ್ಯವು ಬಳಲುತ್ತಿದ್ದ “ಸ್ಕರ್ವಿ” ರೋಗಕ್ಕೆ ನಿಂಬೆಯ ರಸವನ್ನು ಬಳಸಲು ಪ್ರೇರೇಪಿಸಿದರು.  ಅಷ್ಟೇ ಅಲ್ಲದೆ ನೌಕಾ ಸೈನ್ಯವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ವಿವಿಧ ಪ್ರಮಾಣದ ನಿಂಬೆಯ ರಸವನ್ನು ಬಳಸಿ ಪ್ರಯೋಗಗಳನ್ನು ನಡೆಸಿದರು. ಆಗಿನ್ನೂ “ವಿಟಮಿನ್‌ ಸಿ” ಎಂದಾಗಲಿ ಅದರ ರಸಾಯನಿಕ ವಿನ್ಯಾಸ, ಹೆಸರು, ಇತ್ಯಾದಿಗಳೇನೂ ತಿಳಿಯದು. ನಿಂಬೆಯಲ್ಲಿರುವ ಆಮ್ಲವು ದೇಹದ ಆಂತರಿಕ ಸ್ವಚ್ಛತೆಗೆ, ಅದರಲ್ಲೂ ಆಹಾರವು ಜೀರ್ಣಾಂಗವ್ಯೂಹದಲ್ಲಿ ಒಳಗೆ ಎಲ್ಲಾದರೂ ಹಾಗೇ ಉಳಿದರೆ  ಕೊಳೆಯದಂತೆ ಸಹಾಯ ಮಾಡತ್ತದೆ ಎಂಬಂತಹಾ ಸರಳ ಸಂಗತಿಗಳಿಂದ ಈ ಪ್ರಯೋಗಗಳನ್ನು ಮಾಡಿದ್ದರು. ಆಗ ಅದಕ್ಕೆ ಮತ್ತು ಅವರಿಗೆ ಅಷ್ಟು ಮಹತ್ವವೇನೂ ಸಿಗದಿದ್ದರೂ ಮುಂದೆ ಕ್ಯಾಪ್ಟನ್‌ ಕುಕ್‌ ನಿಂಬೆಯ ರಸವನ್ನು ತನ್ನ ನೌಕೆಯಲ್ಲಿನ ಜನಗಳ ಆಹಾರದಲ್ಲಿ ಬಳಸುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ ಆಗಿನ್ನೂ ಇಮ್ಯುನಿಟಿ, ವಿಟಮಿನ್‌ “ಸಿ” ಅಥವಾ ಕ್ಲಿನಿಕಲ್‌ ಟ್ರಯಲ್‌ ಎಂಬ ಯಾವ ಪದಗಳನ್ನೂ ಬಳಸದೆ ಅಂತಹಾ ವಿಚಾರಗಳಿಗೆ ಬುನಾದಿ ಹಾಕಿದ್ದು ಜೇಮ್ಸ್‌ ಲಿಂಡ್‌ ಹಾಗೂ ನಿಂಬೆಯ ರಸ!    

       ಸಿಟ್ರಸ್‌ ಹಣ್ಣುಗಳೆಂದಲೇ ಹೆಸರಾದ ಆಮ್ಲ “ಸಿಟ್ರಿಕ್‌ ಆಮ್ಲ” ಸಿಟ್ರಸ್‌ ಹಣ್ಣುಗಳಲ್ಲಿ ಸುಮಾರು ಪ್ರತಿಶತ 8ರಷ್ಟರವರೆಗೂ ಇರುವ ರಾಸಾಯನಿಕ ಇದು. ಅಲ್ಲದೆ ಆಮ್ಲಜನಕವನ್ನು ಬಳಸಿ ಜೀವಿಸುವ ಎಲ್ಲಾ ಜೀವಿಗಳ ಚಯಾಪಚಯ (Metabolism) ಕ್ರಿಯೆಗಳಲ್ಲಿ ಮಧ್ಯಂತರವಾಗಿ ಉತ್ಪನ್ನವಾಗುವ ಒಂದು ರಾಸಾಯನಿಕ ಕೂಡ. ನಿಂಬೆ ಉಪ್ಪು ಎಂದೂ ಇದನ್ನು ಕರೆಯುತ್ತಾರೆ. ನಿಂಬೆಯ ರಸವನ್ನು ಒಣಗಿಸಿ ಅದರಿಂದ ಹರಳುಗಳಾಗಿ ಇದನ್ನು ಪಡೆಯಬಹುದು. ನಿಂಬೆಯ ಹಣ್ಣಿಗೆ ಬದಲಾಗಿ ಇದೇ ಹರಳುಗಳನ್ನು ನೀರಿನಲ್ಲಿ ಕರಗಿಸಿ ನಿಂಬೆಯ ಶರಬತ್ತನ್ನೂ ತಯಾರಿಸುತ್ತಾರೆ. ಇದು ಇಂಗಾಲದ ರಾಸಾಯನಿಕ ವಸ್ತು. ಜಾಗತಿಕವಾಗಿ ವಾರ್ಷಿಕ 2ಲಕ್ಷ ಟನ್ನುಗಳಿಗೂ ಹೆಚ್ಚು  ಸಿಟ್ರಿಕ್‌ ಆಮ್ಲದ ಉತ್ಪನ್ನವಿದೆ. ಇದರ ಅರ್ಧದಷ್ಟು ಚೀನಾ ಒಂದೇ ದೇಶ ಉತ್ಪಾದಿಸುತ್ತದೆ.     

       ನಿಂಬೆಯ ರಸದೊಳಗಿರುವ ಸ್ಕರ್ವಿ ರೋಗಕ್ಕೆ ಉಪಶಮನ ಕೊಡುವ ಪದಾರ್ಥವನ್ನು ವಿಟಮಿನ್‌ “ಸಿ” ಎಂದೂ, ಅದನ್ನೇ ಮುಂದೆ ರಸಾಯನಿಕವಾಗಿ “ಆಸ್ಕಾರ್ಬಿಕ್‌ ಆಮ್ಲ” ಎಂದೂ ಹೆಸರಿಸಿ ನಿರ್ಧಾರವಾಗಲು 18ನೆಯ ಶತಮಾನದ ಪೂರ್ವಾರ್ಧದಿಂದ ಎರಡು ಶತಮಾನಗಳ ಕಾಲ ಹಿಡಿಯಿತು. ಸಿಟ್ರಿಕ್‌ ಆಮ್ಲದ ವಿವರಗಳಿಂದ ಮುಂದುವರೆದು “ವಿಟಮಿನ್‌ ಸಿ” ಯು ಆಸ್ಕಾರ್ಬಿಕ್‌ ಆಮ್ಲವೆಂದು ಹೆಸರು ಪಡೆಯಲು ನಡೆದ ವಿವರಗಳೂ ತಮಾಷೆಯೊಂದಿಗೆ ಆಸಕ್ತಿದಾಯಕವಾಗಿವೆ. 

       ಸ್ಕರ್ವಿ ರೋಗಕ್ಕೆ ಉಪಶಮನ ಕೊಡುವುದು ನಿಂಬೆಯ ರಸವೆಂದು ಜೇಮ್ಸ್‌ ಲಿಂಡ್‌ ಪ್ರಯೋಗಗಳಿಂದ ಸಾಬೀತುಪಡಿಸಿದರು. ಆ ರಸದೊಳಗೆ ಇರಬಹುದಾದ ರಾಸಾಯನಿಕವನ್ನು ಜೀವಕ್ಕೆ ಅಗತ್ಯವಾದ ವಸ್ತು(Vital-Amine- Vitamin) ಎಂದು ಪರಿಭಾವಿಸಿದ ಕಸ್ಮೀರ್‌ ಫಂಕ್‌ (Casmir Funk) ಎಂಬ ಪೊಲೆಂಡಿನ ಜೀವಿರಾಸಾಯನ ವಿಜ್ಞಾನಿ 1920ರಲ್ಲಿ ಅದಕ್ಕೆ “ವಿಟಮಿನ್‌ ಸಿ” ಎಂದು ಹೆಸರಿಸಿದರು. ವಿಟಮಿನ್‌ ಎಂಬ ಹೆಸರಿನ ಬಳಕೆ ಹಾಗೂ ಪರಿಕಲ್ಪನೆಯನ್ನು ಕೊಟ್ಟಾತನೇ ಕಸ್ಮೀರ್‌ ಫಂಕ್‌. ಅದನ್ನು ಪರಿಶೋಧಿಸಿ ರಾಸಾಯನಿಕವಾಗಿ ಅದೊಂದು 6 ಇಂಗಾಲದ ಪರಮಾಣುಗಳನ್ನು ಒಳಗೊಂಡ “ಇನ್ನೂ ಗೊತ್ತಿಲ್ಲದ ಕಾರ್ಬೋಹೈಡ್ರೇಟು” ಎಂದು ಅದಕ್ಕೆ “ಇಗ್‌ನೋಸ್‌(Ignose)” ಎಂದು ತಮಾಷೆಗೆ ಹೆಸರಿಸಿ 1963ರಲ್ಲಿ ಅನುಶೋಧದ ಪ್ರಕಟಣೆಯನ್ನು ಪತ್ರಿಕೆಗೆ ಕಳಿಸಿದ್ದು ನೊಬೆಲ್‌ ಪ್ರಶಸ್ತಿ ಪಡೆದ ಅಲ್ಬರ್ಟ್‌ ವಾನ್‌ ಸೆಂಟ್‌ ಗ್ಯೊರ್ಗಿ(Albert von Szent-Györgyi) ಎಂಬ ಹಂಗೆರಿಯ ವಿಜ್ಞಾನಿ. ಆಗ ಪತ್ರಿಕೆ ಸಂಪಾದಕ-ವಿಜ್ಞಾನಿ “ಏಕೆ ದೇವರಿಗೇ ಗೊತ್ತು ಎಂಬರ್ಥದ ಗಾಡ್‌ನೊಸ್‌(Godnose) ಎಂದೇ ಹೆಸರಿಡಿ ಹೇಗೂ ಅದರ ರಾಸಾಯನಿಕ ಪರಮಾಣು ರಚನೆಯು ಇನ್ನೂ ತಿಳಿದಿಲ್ಲವಲ್ಲ!” ಎಂದಿದ್ದರು. ಅಲ್ಲದೆ ಅವರು ಅದಕ್ಕೆ ಹೆಕ್ಸ್‌ಯುರನಿಕ್‌ ಆಮ್ಲ(Hexuronic Acid) ಎಂದು ಸಲಹೆ ಮಾಡಿ ಹೆಸರಿಸಿ ಪ್ರಕಟಿಸಿದ್ದರು. ಮುಂದೆ ಹೆಕ್ಸ್‌ಯುರನಿಕ್‌ ಆಮ್ಲ(Hexuronic Acid)ಗೆ ಪರಮಾಣು ರಚನೆಯನ್ನು  ಕಂಡುಹಿಡಿದು ಅದು ಸ್ಕರ್ವಿಗೂ ಉಪಶಮನದ ಇನ್ನೂ ಹೆಚ್ಚಿನ ಸಂಗತಿಗಳು ಸಹಜವಾದ ನಂತರ ಸೆಂಟ್‌ ಗ್ಯೊರ್ಗಿ ಅವರು ಮತ್ತೋರ್ವ ನೊಬೆಲ್‌ ಪುರಸ್ಕೃತ ವಿಜ್ಞಾನಿ ಸರ್‌ ವಾಲ್ಟೆರ್‌ ನಾರಮನ್‌(Sir Walter Norman)  ಜೊತೆಗೂಡಿ ಅದಕ್ಕೆ ಸ್ಕರ್ವಿ ಉಪಶಮನದ ಎಂಬ ಅರ್ಥಬರುವ ಆಸ್ಕಾರ್ಬಿಕ್‌ ಆಮ್ಲ (Ascorbic Acid)ಎಂದು 1963ರಲ್ಲಿ ಹೆಸರಿಸಿದರು. 

       ಹೀಗೆ ನಿಂಬೆಯ ಸಸ್ಯಯಾನದೊಳಗೆ ಬಳಕೆ ಹಾಗೂ ಆರೋಗ್ಯದ ಹಿತಗಳ ಹುಡುಕಾಟದಲ್ಲಿ ಶತಮಾನಗಳ ಇತಿಹಾಸವಿದೆ. ವಿಟಮಿನ್‌ “ಸಿ” ಕುರಿತಶೋಧಗಳಿಗೆ ಇಬ್ಬರು ವಿಜ್ಞಾನಿಗಳು ನೊಬೆಲ್‌ ಬಹುಮಾನಗಳನ್ನು ಸೇರಿ ಒಟ್ಟು 17 ವಿಜ್ಞಾನಿಗಳು ವಿಟಮಿನ್‌ಗಳ ವೈಜ್ಞಾನಿಕ ಸಂಶೋಧನೆಗಳ ಕುರಿತ ಸಂಶೋಧನೆಯನ್ನು ನಡೆಸಿ ನೊಬೆಲ್‌ ಪುರಸ್ಕಾರವನ್ನು ಗಳಿಸಿದ ಬಹುದೊಡ್ಡ ಚರಿತ್ರೆಯೇ ಇದೆ.  ಜೇಮ್ಸ್‌ ಲಿಂಡ್‌ ಅವರ ಸರಳ ನಿಂಬು ರಸದ ಪ್ರಯೋಗಗಳಿಂದ (1747) ವಿವರಗಳ ಒಳಹೊಕ್ಕು ಆರೋಗ್ಯದ ಲಾಭಕೊಡುವ ರಾಸಾಯನಿಕದ ರಚನೆ ಹಾಗೂ ಅರ್ಥಪೂರ್ಣ ನಾಮಕರಣ (1963)ದವರೆಗೂ ವಿಸ್ತಾರವಾಗಿವೆ. ಮಾನವಕುಲದ ಬೆಂಬಲಕ್ಕೆ ಕೇವಲ ನಿಂಬೆಯ ರಸದಿಂದ ಆರಂಭಿಸಿದ ಹುಡುಕಾಟವು ಶತಮಾನಗಳ ಕಾಲ ವಿಸ್ತಾರವಾಗಲು ಕಾರಣರಾದ ಜೇಮ್ಸ್‌ ಲಿಂಡ್‌ ಮಹಾತ್ಮರೇ ಸರಿ. ಏಕೆಂದರೆ ಅವರು ತಮಗೆ ಓಟು ಹಾಕಿ ಎಂದಾಗಲಿ, ಅದರಿಂದ ಲಾಭವನ್ನಾಗಲಿ, ಕೊನೆಗೆ ತಮ್ಮ ಹೆಸರನ್ನು ನೆನಪಿಟ್ಟುಕೊಳ್ಳಿ ಎಂದಾಗಲಿ ನಿರೀಕ್ಷಿಸದವರು. 

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್‌

This Post Has 3 Comments

  1. Rudresh Adarangi

    Very usefull information sir. thanks sir

  2. Dr.N.T.Anil

    ಸಿಟ್ರಿಕ್ ಆಮ್ಲದ ಮಾಹಿತಿ ಉಪಯುಕ್ತವಾಗಿದೆ,ಉಪಯೋಗದ ಬಗ್ಗೆ ಹೆಚ್ಚು ಮಾಹಿತಿ ಇದ್ದರೆ ,ಸಾಧ್ಯವಾದರೆ ಇನ್ನು ಒಂದು ಬಾಗ ಬರೆಯಿರಿ ಸರ್

  3. Kusum Salian

    ಲಿಂಬೆ ಹಣ್ಣಿನ ಬಗೆಗಿನ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು ಸರ್.

Leave a Reply