You are currently viewing ವೈರಸ್, ಲಸಿಕೆ ಮತ್ತು ಮಾನವ ಸಮಾಜದ ನಿರಂತರ ಚದುರಂಗದಾಟದಲ್ಲಿ ಕೋವಿಡ್- 19ನ ಹೊಸ ನಡಿಗೆ

ವೈರಸ್, ಲಸಿಕೆ ಮತ್ತು ಮಾನವ ಸಮಾಜದ ನಿರಂತರ ಚದುರಂಗದಾಟದಲ್ಲಿ ಕೋವಿಡ್- 19ನ ಹೊಸ ನಡಿಗೆ

ವೈರಸ್‌ ಗಳು ಮಾನವ ಸಮುದಾಯವನ್ನು ಕಾಡುತ್ತಲೇ ಬಂದಿವೆ. ಸದ್ಯದ ಕೋವಿಡ್-‌ 19 ವಿಪತ್ತು ಮತ್ತು ಅದರ ಲಸಿಕೆಯ ಹುಡುಕಾಟದಲ್ಲಿ, ವೈರಸ್‌ ಗಳ ವಿಕಾಸ ಮತ್ತು ಮಾನವ ಸಮುದಾಯದ ಅವಿರತ ಪರಿಶ್ರಮದ ಒಂದೊಂದು ಅಧ್ಯಾಯಗಳ ಚರಿತ್ರೆ ಕೂಡ ತೆರೆದುಕೊಳ್ಳುತ್ತದೆ. ಒಂದು ಅಂದಾಜಿನ ಪ್ರಕಾರ 20 ನೇ ಶತಮಾನದಲ್ಲೇ ಸಿಡುಬು ರೋಗವು ಸುಮಾರು ೫೦ ಕೋಟಿಯಷ್ಟು ಮಂದಿಗೆ ಸೋಂಕಿದ್ದ ಉದಾಹರಣೆಯಿದೆ. ಅಲ್ಲದೇ ಈ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳಲ್ಲಿ ಮರಣ ಹೊಂದಿದ ಜನರಿಗಿಂತ ಹೆಚ್ಚು ಜನ ವೈರಸ್‌ ಗಳ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂದು ಕೂಡ ಅಂದಾಜಿಸಲಾಗಿದೆ. ನಮ್ಮ ಮತ್ತು ವೈರಸ್‌ ಗಳ ನಡುವಿನ ಹಾವು-ಏಣಿ ಆಟಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ.ಸಿಡುಬು, ಪೋಲಿಯೋ, ರೇಬಿಸ್‌ ಮುಂತಾದ ಖಾಯಿಲೆಗಳು ಮಾನವ ಸಮುದಾಯದಲ್ಲಿ ಬಿಟ್ಟು ಬಿಡದೇ ಕಾಣಿಸಿಕೊಳ್ಳುತ್ತಲೇ ಇದ್ದವು. ಪೋಲಿಯೋ ಪೀಡಿತ ವ್ಯಕ್ತಿಯನ್ನು ಬಿಂಬಿಸುವ ಸುಮಾರು ಮೂರೂವರೆ ಸಾವಿರ ವರ್ಷಗಳ ಹಿಂದಿನ ಕ್ರಿ.ಪೂ.15-13 ನೇ ಶತಮಾನದ ಈಜಿಪ್ಟ್‌ ನ ಸ್ಟೀಲಾ(Stela) ಅಂದರೆ ಮರ ಅಥವಾ ಕಲ್ಲು ಪಟ್ಟಿಯ ಈ ಚಿತ್ರವು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.

ಜೀವಿಕೋಶಗಳು ಎಲ್ಲಾ ಜೀವಿಗಳ ಮೂಲಭೂತ ಘಟಕ. ಇದರ ಮತ್ತು ಇತರೆ ಜೀವಿಕೋಶದ ಮೆಟಬಾಲಿಕ್‌ ಪ್ರಕ್ರಿಯೆಗಳ ಆಧಾರದ ಮೇಲೆ ಜೀವಿಗಳ ಜಗತ್ತನ್ನು ಮೂರು ಮುಖ್ಯ ಡೊಮೇನ್‌ ಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಬ್ಯಾಕ್ಟೀರಿಯಾ(Bacteria), ಆರ್ಕಿಯಾ(Archaea) ಮತ್ತು ಯೂಕೇರಿಯಾ(Eukarya). ನ್ಯೂಕ್ಲಿಯಸ್‌ ಹೊಂದಿರುವ ಜೀವಿಕೋಶವುಳ್ಳ ಸಸ್ಯ ಮತ್ತು ಪ್ರಾಣಿಗಳೆಲ್ಲಾ ಯೂಕೇರಿಯಾ ಡೊಮೇನ್‌ ಗೆ ಸೇರುತ್ತದೆ. ಆದರೆ ಮೇಲಿನ ಯಾವ ಗುಂಪಿಗೂ ಸೇರದ ವೈರಸ್‌ ಗಳು ತಮ್ಮ ವಿಕಾಸ ಮತ್ತು ಅಸ್ತಿತ್ವದಲ್ಲೇ ಹಲವು ಪ್ರಶ್ನೆಗಳನ್ನು ಹೊಂದಿರುವ ವಸ್ತುಗಳು. ಸ್ವಂತಕ್ಕೆ ತಮ್ಮ ಸಂಖ್ಯಾಭಿವೃದ್ಧಿ ಮಾಡಲಾಗದ ಹಾಗೂ ಇನ್ನೊಂದು ಜೀವಿಯ ಆತಿಥ್ಯವನ್ನು ಬೇಡುವ ಅದರ ಗುಣಲಕ್ಷಣಗಳು, ಅವುಗಳ ಮೂಲದ ಬಗ್ಗೆ ಬಗೆ ಹರಿಯದ ಪ್ರಶ್ನೆಗಳನ್ನು ಎಬ್ಬಿಸಿವೆ. ಅದರ ಮೂಲವನ್ನು ವಿವರಿಸಲು ಪ್ರಯತ್ನಿಸುವ ಮೂರು ವಾದಗಳಲ್ಲಿ ಯಾವುವೂ ಅಂತಿಮ ಸತ್ಯಗಳಾಗಿಲ್ಲ. ಪ್ರತಿಯೊಂದೂ ಹೈಪಾಥಿಸಿಸ್‌ ತನ್ನ ಒಡಲಲ್ಲಿ ಸಮಸ್ಯೆಗಳನ್ನು ಇಟ್ಟುಕೊಂಡೇ ಇವೆ.

1. ವೈರಸ್‌ ಮೊದಲು ಹೈಪಾಥಿಸಿಸ್‌ (Virus First Hypothesis):‌ ಈ ವಾದದ ಅನ್ವಯ ವೈರಸ್‌ ಗಳು ಬೇರೆಲ್ಲಾ ಜೀವಿಗಳಿಗಿಂತ ಮೊದಲು ಅಥವಾ ಅವುಗಳ ಜೊತೆಯಲ್ಲೇ ಬೆಳೆದವು ಎಂಬುದು.

2. ಎಸ್ಕೇಪ್ ಹೈಪಾಥಿಸಿಸ್‌(Escape Hypothesis): ಜೀವಿಕೋಶಗಳಲ್ಲಿರುವ ಕೆಲವು ಭಾಗಗಳು, ಜೀನೋಮ್‌ ನ ಸಮೇತ ಬಿಡುಗಡೆ ಹೊಂದಿ ವೈರಸ್‌ ಗಳ ಬೆಳವಣಿಗೆಗೆ ಕಾರಣವಾಗಿವೆ

3.ರಿಗ್ರೆಸ್ಸಿವ್‌ ಹೈಪಾಥಿಸಿಸ್‌(Regressive Hypothesis): ಈ ವಾದದ ಪ್ರಕಾರ, ವೈರಸ್‌ ಗಳು ಒಂದೊಮ್ಮೆ ಜೀವಿಕೋಶವುಳ್ಳ ಜೀವಿಗಳಾಗಿ, ನಂತರ ಯಾವುದೋ ಕಾರಣಕ್ಕಾಗಿ ಕೇವಲ ಜೀನೋಮ್‌ ಮತ್ತು ಹೊರಪದರವನ್ನು ಮಾತ್ರ ಉಳಿಸಿಕೊಂಡು ಅತಂತ್ರ ರೂಪದಲ್ಲಿ ಬೆಳವಣಿಗೆ ಹೊಂದಿವೆ.

ಇದೇನೋ ವೈರಸ್‌ ಗಳ ವಿಕಾಸದ ಬಗೆಹರಿಯದ ಸಮಸ್ಯೆಯಾಯಿತು. ಆದರೆ ವೈರಸ್‌ ಗಳು ತಂದೊಡುತ್ತಿದ್ದ ಖಾಯಿಲೆಗಳನ್ನು ಮಾನವ ಸಮುದಾಯ ಎದುರಿಸಬೇಕಿತ್ತಲ್ಲ ಮತ್ತು ಪರಿಹಾರ ಕಂಡುಕೊಳ್ಳಬೇಕಿತ್ತಲ್ಲಾ? ಈ ನಿಟ್ಟಿನಲ್ಲಿ ಮೊದಲ ಪ್ರಯತ್ನಗಳು ಸಿಡುಬಿನ ವಿರುದ್ಧವಾಗಿ ಚೀನಾದಲ್ಲಿ ಶುರುವಾಯಿತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಸಿಡುಬು ರೋಗದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯ ಮಾಯುತ್ತಿರುವ ಗಾಯದ ಮೇಲೆ ಕಟ್ಟುವ ಹಕ್ಕಳೆಗಳನ್ನು (Scab) ಬಳಸಿಕೊಂಡು, ಅವುಗಳನ್ನು ಪುಡಿಮಾಡಿ, ಸೋಂಕು ಇಲ್ಲದ ವ್ಯಕ್ತಿಗೆ ನುಂಗುವುದರ ಮೂಲಕ ಅಥವಾ ಹಚ್ಚೆಯಂತೆ ಚುಚ್ಚುವ ಮೂಲಕ ನೀಡುತ್ತಿದ್ದರಂತೆ. ಈ ವಿಧಾನಕ್ಕೆ ವೇರಿಯೊಲೇಷನ್(Variolation)‌ ಎಂದು ಕರೆಯುತ್ತಾರೆ. ಇದು ಸಂಪೂರ್ಣ ಸುರಕ್ಷಿತವಿಲ್ಲದಿದ್ದರೂ, ಸೋಂಕು ಮತ್ತು ಮರಣ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿದ್ದವು.

ವೈರಸ್ಸಿನ ಕಾಯಿಲೆಯಾದ ಸಿಡುಬನ್ನು ನಿವಾರಿಸಲು ಸಿಡುಬನ್ನೇ ಸೇರಿಸುವ ಮೂಲಕ, ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನದಂತಿರುವ ವೇರಿಯೊಲೇಷನ್‌ ಅಂದರೆ ವೇರಿಯೊಲ (Variola) -ಸಿಡುಬನ್ನೇ ಸೇರಿಸುವುದು. ಅದಕ್ಕೆ ಇದನ್ನು ಇನಾಕ್ಯುಲೇಷನ್‌ ಎಂದೂ ಕರೆಯಲಾಗುತ್ತದೆ. ಅಂದರೆ ಸೇರಿಸುವುದು ಎಂದೇ ಅರ್ಥ. ಈ ಹಂತದಲ್ಲಿ ಕಾಯಿಲೆ ತರುವ ವಸ್ತುವನ್ನೇ ದೇಹಕ್ಕೆ ಸೇರಿಸಿದಾಗ, ದೇಹವು ಅದಕ್ಕೆ ಸಹಜವಾಗಿ ಪ್ರತಿರೋಧವನ್ನು ಒಡ್ಡುತ್ತದೆ. ಈ ಪ್ರತಿರೋಧವು ಒಡ್ಡುವಷ್ಟು ಮಾತ್ರವೇ ದೇಹಕ್ಕೆ ಸೋಂಕು ಉಂಟಾದಲ್ಲಿ ದೇಹವು ರಕ್ಷಣೆಗೆ ತಯಾರಾಗುತ್ತದೆ. ಒಂದು ವೇಳೆ ಸೋಂಕು ಹೆಚ್ಚಾದಲ್ಲಿ ದೇಹವು ಬಾಧೆಗೆ ಒಳಗಾಗುತ್ತದೆ. ಹೀಗೆ ಸೇರಿಸುವ ಪ್ರಕ್ರಿಯೆಯಲ್ಲಿ, ಅದೆಷ್ಟು ಸೋಂಕು ಸೇರಿದರೆ ರಕ್ಷಣೆ ಸಿಗುತ್ತದೆ ಎನ್ನುವುದನ್ನು ತೀರ್ಮಾನಿಸುವುದೇ ದೊಡ್ಡ ಸಾಹಸ! ಸ್ವಲ್ಪವೇ ಹೆಚ್ಚಾದರೂ ಆರೋಗ್ಯವಂತ ದೇಹವೂ ಕೂಡ ರೋಗಕ್ಕೆ ತುತ್ತಾಗುತ್ತದೆ. ಅದೃಷ್ಟವಶಾತ್‌ ಈಗೀಗ ಈ ಸಮಸ್ಯೆಗಳು ಬಗೆಹರಿದಿದ್ದರೂ ಚಿಕಿತ್ಸೆಯ ಸಂದರ್ಭದಲ್ಲಿ ಹೀಗೆಯೇ ಆಗುವುದೆಂಬ ಬಗೆಗೆ ತಕರಾರುಗಳೂ ಚರ್ಚೆಗಳೂ ಇದ್ದೇ ಇವೆ.    

ದಾಖಲೆಗಳ ಪ್ರಕಾರ ಸುಮಾರು ೧೫ ನೇ ಶತಮಾನದಿಂದೀಚೆಗೆ ಚೀನಾ, ಭಾರತ, ಅರಬ್‌ ದೇಶಗಳಲ್ಲಿ ವೇರಿಯೊಲೇಷನ್‌ ವಿಧಾನ ಚಾಲ್ತಿಯಲ್ಲಿತ್ತು ಎಂದು ತಿಳಿಯಲಾಗಿದೆ. ನಂತರ ಇದು ಯೂರೋಪ್‌ ದೇಶಗಳಿಗೂ ಹಬ್ಬಿತು ಎಂದು ನಂಬಲಾಗಿದೆ. ಮುಂದೆ ಇದು 18 ನೇ ಶತಮಾನದ ಬ್ರಿಟನ್‌ ನ ವೈದ್ಯ ಎಡ್ವರ್ಡ್‌ ಜೆನ್ನರ್‌ ಮತ್ತು 19 ನೇ ಶತಮಾನದ ಫ್ರಾನ್ಸ್‌ ನ ಲೂಯಿ ಪಾಶ್ಚರ್‌ ಅವರ ಪ್ರಯತ್ನಗಳ ಕಾರಣವಾಗಿ ಲಸಿಕೆಗಳ ಉಗಮಕ್ಕೆ ಕಾರಣವಾಗಿದ್ದು ರೋಚಕ ಕಥೆ.

1774 ರ ಸುಮಾರಿನಲ್ಲಿ ಇಂಗ್ಲೆಂಡಿನ ರೈತರೊಬ್ಬರು ತನ್ನ ಕುಟುಂಬವನ್ನು ಸಿಡುಬಿನಿಂದ ರಕ್ಷಿಸಲು “ಕವ್‌ ಪಾಕ್ಸ್(Cow Pox)” ಖಾಯಿಲೆಯಿಂದಾದ ಗಾಯವನ್ನು ಬಳಸಿಕೊಳ್ಳುತ್ತಿದ್ದರು. ಜೊತಗೆ ಹಲವು ಹಾಲು ಮಾರುವ ಹೆಂಗಸರು ಹಸುಗಳ ಮೂಲಕ  “ಕವ್‌ ಪಾಕ್ಸ್” ಖಾಯಿಲೆಗೆ ತುತ್ತಾಗುತ್ತಿದ್ದು, ಅಂತಹವರಿಗೆ ಸಿಡುಬು ಬರುತ್ತಿದ್ದದ್ದು ಕಡಿಮೆ ಎಂದು ಹಲವು ವೈದ್ಯರು ಗುರುತಿಸಿದ್ದರು. ಹಾಗಾಗಿ 1796 ರಲ್ಲಿ ಅಲ್ಲಿನ ವೈದ್ಯ ಎಡ್ವರ್ಡ್‌ ಜೆನ್ನರ್‌ ಇದನ್ನು ಗಮನಿಸಿ, ಈ ವಿಧಾನವನ್ನು ಪರೀಕ್ಷಿಸಲು ಮುಂದಾದರು. ಕವ್‌ ಪಾಕ್ಸ್ ಖಾಯಿಲೆ ಪೀಡಿತ ಮಹಿಳೆಯೊಬ್ಬರಿಂದ ಗಾಯದ ದ್ರವವನ್ನು ಪಡೆದು, ಅದನ್ನು ಒಬ್ಬ ಬಾಲಕನಿಗೆ ಚುಚ್ಚುಮದ್ದಿನ ಮೂಲಕ ನೀಡಿದರು. ನಂತರ ಈ ಹುಡುಗನನ್ನು ಸಿಡುಬು ಪೀಡಿತರೊಂದಿಗೆ ಬಿಟ್ಟಾಗ, ಆತ ಸೋಂಕಿನಿಂದ ರಕ್ಷಣೆ ಪಡೆದುಕೊಂಡಿರುವುದು ಗೊತ್ತಾಯಿತು. ಮುಂದೆ ಹಲವು ಜನರಲ್ಲಿ ಈ ಪರೀಕ್ಷೆಯನ್ನು ಜೆನ್ನರ್‌ ಅವರು ಮುಂದುವರೆಸಿ ಯಶಸ್ವಿಯಾದರು. ವ್ಯಾಕ್ಸೀನ್‌(Vaccine) ಎಂಬ ಪದದ ಮೂಲ ಲ್ಯಾಟಿನ್‌ ಪದ “ವ್ಯಾಕ(Vacca)” ಮತ್ತು ಇದರ ಅರ್ಥವೇ ಹಸು ಎಂದು.

ಮುಂದೆ 1885 ರಲ್ಲಿ, ಕೆಮಿಸ್ಟ್‌ ಆಗಿದ್ದ ಲೂಯಿ ಪಾಶ್ಚರ್‌ ಅವರು ರೇಬಿಸ್‌ ಖಾಯಿಲೆಗೆ ಲಸಿಕೆಯನ್ನು ಕಂಡುಹಿಡಿದಿದ್ದು, ಲಸಿಕೆಗಳ ಬೆಳವಣಿಗೆಯಲ್ಲಿ ಎರಡನೇ ಮಹತ್ವದ ಹೆಜ್ಜೆ. ಲೂಯಿ ಪಾಶ್ಚರ್‌ ಮತ್ತು ಅವರ ಸಹವರ್ತಿಗಳು, ರೇಬಿಸ್‌ ಸೋಂಕಿತ ನಾಯಿಯ ಬೆನ್ನು ಹುರಿ ಅಥವಾ ಮಿದುಳಿನ ಅಂಗಾಂಶಗಳನ್ನು ಬಳಸಿಕೊಂಡು, ಮತ್ತೊಂದು ಆರೋಗ್ಯವಂತ ನಾಯಿಗೆ ರೇಬಿಸ್‌ ಹರಡಿಸಬಹುದು ಎಂದು ಕಂಡುಕೊಂಡಿದ್ದರು. ಜೊತೆಗೆ ಆ ಅಂಗಾಂಶವನ್ನು ಮೊಲಗಳಿಗೆ ನೀಡಿ, ಅವುಗಳ ಬೆನ್ನುಹುರಿ ಅಂಗಾಂಶಗಳನ್ನು ಪಡೆದುಕೊಂಡು, ಒಣಗಿಸಿ ನಾಯಿಗಳಿಗೆ ನೀಡಬಹುದಾದ ಲಸಿಕೆಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದರು. ಒಮ್ಮೆ 9 ವರ್ಷದ ಬಾಲಕೊಬ್ಬನಿಗೆ ರೇಬಿಸ್‌ ಪೀಡಿತ ನಾಯಿ ಕಚ್ಚಿದ್ದರಿಂದ, ಮುಂದಾಗಬಹುದಾದ ಅನಾಹುತವನ್ನು ಊಹಿಸಿ, ಸ್ವತಃ ತಾನು ವೈದ್ಯನಲ್ಲದಿದ್ದರೂ ವೈದ್ಯರಿಗೆ ಅರ್ಥ ಮಾಡಿಸಿ ತಾನು ಅಭಿವೃದ್ಧಿಪಡಿಸಿದ್ದ ಲಸಿಕೆಯನ್ನು ಆ ಬಾಲಕನಿಗೆ ಕೊಡಿಸಿದರು. ಆ ಬಾಲಕ ಚೇತರಿಸಿಕೊಂಡು ಗೆಲುವಾಗಿದ್ದಲ್ಲದೇ, ಅದೇ ವರ್ಷದಲ್ಲಿ ಸುಮಾರು 350 ಜನರನ್ನು ಲೂಯಿ ಪಾಶ್ಚರ್‌ ಅವರ ಲಸಿಕೆ ಉಳಿಸಿತು. ಜೆನ್ನರ್‌ ಮತ್ತು ಲೂಯಿ ಪಾಶ್ಚರ್‌ ಅವರ ಈ ಸಾಧನೆಗಳು ಮುಂದೆ ಮಹತ್ವದ ಸಂಶೋಧನೆಗಳಿಗೆ ನಾಂದಿ ಹಾಡಿತು.

ಇದೆಲ್ಲದರ ಜೊತೆಗೆ ಮತ್ತಿಬ್ಬರು ವಿಜ್ಞಾನಿಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ನಮ್ಮ ಕುಟುಂಬದಲ್ಲೋ ಅಥವಾ ಮಿತ್ರವರ್ಗದಲ್ಲೋ ಪೋಲಿಯೋ ಪೀಡಿತರನ್ನು ನೋಡಿರುತ್ತೇವೆ. ಪಲ್ಸ್‌ ಪೋಲಿಯೋ ಅಭಿಯಾನದ ಬಗ್ಗೆ ಕೇಳಿಯೇ ಇರುತ್ತೇವೆ. ಮುಂದುವರೆದ ದೇಶಗಳೂ ಸೇರಿದಂತೆ ಬಹುತೇಕ ಎಲ್ಲ ದೇಶದವರನ್ನು ಕಾಡಿದ್ದ ಪೋಲಿಯೋ ಖಾಯಿಲೆಗೆ ಮೊದಲು ಲಸಿಕೆ ಕಂಡು ಹಿಡಿದವರು ಡಾ. ಜೋನಾಸ್‌ ಸಾಕ್‌.  ನಂತರ ಇನ್ನೊಂದು ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಮತ್ತೋರ್ವ ವಿಜ್ಞಾನಿ ಆಲ್ಬರ್ಟ್‌ ಸ್ಯಾಬಿನ್. ಎಷ್ಟೋ ಮಕ್ಕಳ ಸಾವು ಮತ್ತು ಶಾಶ್ವತ ಅಂಗವೈಕಲ್ಯತೆಗೆ ದಾರಿಯಾಗಿದ್ದ ಪೋಲಿಯೋ ಈ ವಿಜ್ಞಾನಿಗಳ ಪರಿಶ್ರಮ ಮತ್ತು ಮಾನವೀಯತೆಯ ಕಾರಣದಿಂದ ಇಂದು ಜಗತ್ತಿನಿಂದ ಬಹುತೇಕ ನಿರ್ಮೂಲನೆಯಾಗಿದೆ. ಡಾ.ಜೋನಾಸ್‌ ಸಾಕ್‌ ಅವರಂತೂ ತಾವೂ ಕಂಡುಹಿಡಿದ ಚುಚ್ಚುಮದ್ದಿನ ಮೂಲಕ ನೀಡುವ ಲಸಿಕೆಗೆ “ಪೇಟೆಂಟ್”‌ ಪಡೆಯದೇ ಜಗತ್ತಿಗೆ ಉಚಿತವಾಗಿ ಹಂಚಲು ಭದ್ರ ಬುನಾದಿ ಹಾಕಿದವರು. “ಭೂಮಿಯನ್ನು ಸಲಹುತ್ತಿರುವ ಸೂರ್ಯನಿಗೆ ಪೇಟೆಂಟ್‌ ಪಡೆಯಲು ಸಾಧ್ಯವೇ?” ಎಂದು ಕೇಳಿದ್ದ ಮಹಾನ್‌ ಮಾನವತಾವಾದಿ ಅವರು. ನಂತರ ಅವರದೇ ದಾರಿಯಲ್ಲಿ ಸ್ಯಾಬಿನ್‌ ಕೂಡ ನಡೆದರು. ಇಂದು ಭಾರತದಲ್ಲಿ ಮಕ್ಕಳಿಗೆ ಬಾಯಿ ಮೂಲಕ ನೀಡುವ ಪೋಲಿಯೋ ಹನಿಗಳು ಸ್ಯಾಬಿನ್‌ ಅವರ ಪರಿಶ್ರಮದ ಫಲ.

ಕೋವಿಡ್-‌19‌ ಲಸಿಕೆಯ ವಿಚಾರ

ಈಗ ಮತ್ತೆ ಸದ್ಯದ ವಿಪತ್ತಿಗೆ ಬರೋಣ. ಏಪ್ರಿಲ್‌ ೧೧ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿರುವ ಪಟ್ಟಿಯ ಪ್ರಕಾರ ಕೋವಿಡ್-‌19‌ ವಿರುದ್ಧ ಸುಮಾರು ೭೦ ಲಸಿಕೆಗಳು ತಯಾರಿಯಲ್ಲಿವೆ. ಅದರಲ್ಲಿ ೩ ಲಸಿಕೆಗಳು ಕ್ಲಿನಿಕಲ್‌ ಟ್ರಯಲ್‌ ಹಂತದಲ್ಲಿ ಇವೆ. ಸಂಭಾವ್ಯ ಲಸಿಕೆಗಳ ಪಟ್ಟಿ ಇಲ್ಲಿದೆ ನೋಡಿ.

ಲಸಿಕೆಯ ಅಭಿವೃದ್ಧಿ ಹಲವು ಹಂತಗಳಲ್ಲಿ ನಡೆಯಬೇಕಿದ್ದು, ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ. ಅತೀ ಕಡಿಮೆ ಅಂದರೆ ಸುಮಾರು ೧೨ ರಿಂದ ೧೮ ತಿಂಗಳುಗಳು ಬೇಕಾಗಬಹುದು ಎಂದು ನ್ಯೂಯಾರ್ಕ್‌ ಕೊಲಂಬಿಯಾ ವಿವಿಯ ಖ್ಯಾತ ವೈದ್ಯ ಮತ್ತು ಲೇಖಕ ಡಾ.ಸಿದ್ದಾರ್ಥ ಮುಖರ್ಜಿ ಅಭಿಪ್ರಾಯ ಪಟ್ಟಿದ್ದಾರೆ. ಈ ವರ್ಷದೊಳಗೆ ಸಂಪೂರ್ಣ ಪರೀಕ್ಚೆಗೆ ಒಳಪಟ್ಟು, ಮಾನವರಲ್ಲಿ ಬಳಸಬಹುದಾದ ಲಸಿಕೆಗಳು ಬರಬಹುದು ಹಾಗೂ ಸದ್ಯದ ಜೈವಿಕ ತಂತ್ರಜ್ಞಾನವನ್ನು ಬಳಸಿ ಜಗತ್ತಿನಾದ್ಯಂತ ಹಲವು ಪ್ರಯೋಗಾಲಯಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಲಸಿಕೆಗಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ಕೆಳಗಿನ ಚಿತ್ರ ಲಸಿಕೆ ಅಭಿವೃದ್ಧಿಯ ವಿವಿಧ ಹಂತಗಳನ್ನು ತಿಳಿಸಿಕೊಡುತ್ತವೆ

Exploratory ಹಂತದಲ್ಲಿ ಈಗಾಗಲೇ ಲಭ್ಯವಿರುವ ಲಸಿಕೆಗಳನ್ನು ಹೊಸ ಖಾಯಿಲೆಗೆ ಮರುರೂಪಿಸಲಾಗುತ್ತದೆ ಅಥವಾ ಸಂಪೂರ್ಣ ಹೊಸ ಲಸಿಕೆಗಳನ್ನು ರೂಪಿಸಲಾಗುತ್ತದೆ. ನಂತರದ Pre-clinical ಹಂತದಲ್ಲಿ ಈ ಲಸಿಕೆಗಳನ್ನು ಸೆಲ್‌ ಕಲ್ಚರ್‌ ಮತ್ತು ಪ್ರಾಣಿಗಳಲ್ಲಿ ಪ್ರಯೋಗಿಸಿ ಪರೀಕ್ಷಿಸಲಾಗುತ್ತದೆ. ಇಲ್ಲಿ ಉತ್ತಮ ಫಲಿತಾಂಶಗಳು ದೊರೆತ ನಂತರ ಮುಂದೆ ಕ್ಲಿನಿಕಲ್‌ ಟ್ರಯಲ್‌ ಹಂತಕ್ಕೆ ಬರುತ್ತದೆ. ಇದು ಮೂರು ಅಥವಾ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಮೊದಲು ಕಡಿಮೆ ಜನರನ್ನು ಬಳಸಿ, ನಂತರ ಆ ಸಂಖ್ಯೆಗಳನ್ನು ಹೆಚ್ಚಿಸಿ ಪರೀಕ್ಷಿಸಲಾಗುತ್ತದೆ. ಮುಂದೆ ಆಯಾಯ ದೇಶದಲ್ಲಿರುವ ರೆಗ್ಯೂಲೇಷನ್‌ ಸಂಸ್ಥೆಗಳನುಸಾರ, ಲಸಿಕೆಯ ಕಾರ್ಯಸಾಮರ್ಥ್ಯ ಮತ್ತು ಸುರಕ್ಷತೆ ಆಧಾರಿಸಿ ಅವುಗಳ ತಯಾರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಸದ್ಯ ನಾವೆಲ್ಲರೂ ಕಾಯುತ್ತಿರುವ ಲಸಿಕೆಯ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ, ಇತ್ತೀಚಿನ ದಿನಗಳಲ್ಲಿ ಲಸಿಕೆಗಳ ವಿರುದ್ಧ ಹಲವು ಅಭಿಯಾನಗಳು ನಡೆಯುತ್ತಿವೆ. ಅವುಗಳಿಂದಾಗಿರುವ ಪ್ರಯೋಜನಗಳ ಬಗ್ಗೆ ಅವಶ್ಯವಾಗಿ ಇರುವ ಅಂಕಿಸಂಖ್ಯೆಗಳನ್ನು ಕಡೆಗಣಿಸಿ, ಲಸಿಕೆ ವಿರೋಧಿ ನಡೆಗಳನ್ನು ನೋಡುತ್ತಿದ್ದೇವೆ. ಸದ್ಯ ವ್ಯಾಪಾರೀಕರಣಗೊಂಡಿರುವ ಆರೋಗ್ಯ ವ್ಯವಸ್ಥೆಯಲ್ಲಿ ಅನುಮಾನಗಳು ಸಹಜ. ಆದರೆ ಲಸಿಕೆಯ ಸಾಮರ್ಥ್ಯದ ಬಗ್ಗೆ ಬಲವಾದ ವೈಜ್ಞಾನಿಕ ಪುರಾವೆಗಳು ಇದ್ದಾಗ್ಯೂ ಅದನ್ನು ವಿರೋಧಿಸುವುದು ಎಲ್ಲರ ಹಿತದಲ್ಲಿ ಅನಾಹುತಕಾರಿಯಾಗಿ ಪರಿಣಮಿಸುತ್ತಿದೆ. Vaccine Hesitancy ಎಂದು ಕರೆಯಲಾಗುವ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯಕ್ಕೆ ಇರುವ ಮೊದಲ ಹತ್ತು ಅಪಾಯಗಳಲ್ಲಿ ಬಹುಮುಖ್ಯವಾದದು ಎಂದು ಅಭಿಪ್ರಾಯಪಟ್ಟಿದೆ. ಹಾಗಾಗಿ ಸದ್ಯ ಲಸಿಕೆವಿರೋಧದಿಂದಾಗಿ ದಡಾರದಂಥ ರೋಗಗಳು ಅಮೆರಿಕದಲ್ಲಿ ಹೆಚ್ಚುಕಾಣಿಸಿಕೊಳ್ಳುತ್ತಿರುವುದು ವರದಿಯಾಗಿದೆ

ಈ ಎಲ್ಲಾ ಅನುಭವಗಳ ಹಿನ್ನೆಲೆಯಲ್ಲಿ, ಎಬೋಲಾ, ಇನ್‌ಫ್ಲೂಯೆನ್ಜಾ, ಸಾರ್ಸ್‌ ಮುಂತಾದ ವೈರಸ್‌ ಗಳ ಸಂಗತಿಗಳೊಂದಿಗೆ ಒಂದು ವೆಬ್‌ ಸರಣಿ ಈ ವರ್ಷದ ಜನವರಿಯಲ್ಲಿ ನೆಟ್‌ ಫ್ಲಿಕ್ಸ್‌ ನಲ್ಲಿ ಬಿಡುಗೊಂಡಿತ್ತು. ಆಗಿನ್ನೂ ಕೋವಿಡ್-‌19‌ ಭಾರತಕ್ಕೆ ಕಾಲಿಟ್ಟಿರಲಿಲ್ಲ. ಪ್ಯಾಂಡೆಮಿಕ್‌ ವೈರಸ್‌ ಗಳ ಬಗ್ಗೆ, ಯೂನಿವರ್ಸಲ್‌ ಲಸಿಕೆಗಳ ಬಗ್ಗೆ, ಎಲ್ಲಾ ಸಮಾಜಗಳ ಹಿತದಲ್ಲಿ ಮತ್ತು ಇಡೀ ವಿಶ್ವದ ಆರೋಗ್ಯದ ಕಾಳಜಿಯಲ್ಲಿ ತಯಾರಿಸಿರುವ, ಆರು ಕಂತುಗಳ ವೆಬ್‌ ಸರಣಿ “ಪ್ಯಾಂಡೆಮಿಕ್”‌

ಉಪಸಂಹಾರ

ವೈರಸ್‌, ಲಸಿಕೆ ಮತ್ತು ಮಾನವ ಸಮಾಜದ ಸಂಬಂಧಗಳ ಸುದೀರ್ಘ ಕಥೆಯನ್ನು ಓದಿದಿರಿ. ಮುಂದಿನ ದಿನಗಳು ಇನ್ನೂ ಅನಿಶ್ಚಿತವಾಗೇ ಇವೆ. ಸೋಂಕುಪ್ರಸರಣ ತಜ್ಞರು ಸಮುದಾಯ ರೋಗ ನಿರೋಧಕತೆ ಬಗ್ಗೆ (Herd Immunity) ಮಾತನಾಡುತ್ತಿದ್ದಾರೆ. ವಯಸ್ಸಾದವರು, ಮಕ್ಕಳು ಮತ್ತು ಹಲವು ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಹೊಂದಿರುವವರನ್ನು ಬೇರ್ಪಡಿಸಿ, ಯುವ ಜನಾಂಗವನ್ನು ಅವಲಂಬಿಸಿ ಹಂತ ಹಂತವಾಗಿ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯ ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದ್ದಾರೆ.

ಒಂದು ಕಡೆ ವೈರಸ್‌ ನ ಆರ್ಭಟ ಮತ್ತು ಇನ್ನೊಂದೆಡೆ ಲಾಕ್‌ಡೌನ್ ನ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ನಡುವೆ ನಮ್ಮದು ಹಗ್ಗದ ಮೇಲಿನ ನಡಿಗೆಯಂತಾಗಿದೆ. ಜೊತೆಗೆ ಭಯ, ಆತಂಕ, ದ್ವೇಷ ಹುಟ್ಟಿಸುವ ಸುದ್ದಿಗಳು ಮತ್ತು ಅವನ್ನು ಪೋಷಿಸುವ ಮಾಧ್ಯಮಗಳು. ಇಂತಹ ಸಮಯದಲ್ಲಿ ಮಾನವ ಸಮುದಾಯ ಒಟ್ಟಾಗಿ ಈ ಪರಿಸ್ಥಿಯನ್ನು ಎದುರಿಸಬೇಕಾಗಿದೆ. ವೈಜ್ಞಾನಿಕತೆ ಮತ್ತು ವಿಚಾರವಾದದ ನೆರಳಲ್ಲಿ ಅರಳಿದ ಪ್ರಸಿದ್ಧ ಗಣಿತಜ್ಞ, ತತ್ವಜ್ಞಾನಿ ಮತ್ತು ಮನುಕುಲದ ಒಳಿತನ್ನು ಬಯಸುತ್ತಿದ್ದ ಶ್ರೀ ಬರ್ಟ್ರಂಡ್‌ ರಸೆಲ್‌ ಅವರ ಈ ಕೆಳಗಿನ ಮಾತುಗಳು ನಮಗೆ ಮುಂದಿನ ದಿನಗಳನ್ನು ಎದುರಿಸಲು ಸಹಾಯವಾಗಬಹುದೆಂದು ನಾನು ಭಾವಿಸುತ್ತೇನೆ.

“Three passions, simple but overwhelmingly strong have governed my life: the longing for love, the search for knowledge, and unbearable pity for the suffering of mankind.”
― Bertrand Russell

– ಆಕಾಶ್‌ ಬಾಲಕೃಷ್ಣ

ನೆರವು: ಡಾ.ಟಿ.ಎಸ್.ಚನ್ನೇಶ್

ಕೋವಿಡ್-‌19‌ ತಂದೊಡ್ಡಿರುವ ಈ ಸಂಕಟದ ಸಂದರ್ಭದಲ್ಲಿ, ಸರಿಯಾದ ಮಾಹಿತಿ ಮತ್ತು ವಿವರಗಳನ್ನು ಪಡೆಯುವುದು ಅತ್ಯವಶ್ಯಕ. ಹಾಗಾಗಿ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಾದ “ಸೈನ್ಸ್”‌, “ನೇಚರ್”‌, “ಸೈಂಟಿಫಿಕ್‌ ಅಮೆರಿಕನ್”‌, “ಲ್ಯಾನ್ಸೆಟ್”‌, “ಸೆಲ್”‌, “ದಿ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್” ಮುಂತಾದ ಪತ್ರಿಕೆಗಳು ನಿಖರವಾದ ಮತ್ತು ವೈಜ್ಞಾನಿಕವಾದ ವಿವರಗಳನ್ನು ಪ್ರಕಟಿಸುತ್ತಿವೆ. ಮನುಕುಲದ ಒಳಿತಿಗಾಗಿ ಸಂಶೋಧನಾ ಲೇಖನಗಳನ್ನು ಮತ್ತು ವರದಿಗಳನ್ನು ಮುಕ್ತ ಆಕರವಾಗಿ ಒದಗಿಸಿಕೊಡುತ್ತಿವೆ. ಭಾರತದಲ್ಲಿ “ದಿ ಹಿಂದೂ” ಪತ್ರಿಕೆ ಕೂಡ ಮೌಲಿಕವಾದ ಬರಹಗಳನ್ನು ಪ್ರಕಟಿಸುತ್ತಿದೆ. ಹಾಗಾಗಿ ಓದುಗರು ಸುಳ್ಳು ಸುದ್ದಿಗಳು, ಅಪೂರ್ಣ ಸುದ್ದಿಗಳ ಮೊರೆ ಹೋಗದೇ ಇಂತಹ ಪತ್ರಿಕೆಗಳನ್ನು ನೋಡಬಹುದಾಗಿದೆ.

Leave a Reply