ಭಾರತೀಯ ವಿಜ್ಞಾನದ ಇತಿಹಾಸದಲ್ಲಿ Prof AKN Reddy ಎಂದೇ ಪರಿಚಿತರಾದ ಪ್ರೊಫೆಸರ್ ಅಮೂಲ್ಯ ಕುಮಾರ್ ಎನ್. ರೆಡ್ಡಿಯವರು ಹೆಸರಿಗೆ ತಕ್ಕ ಹಾಗೇ “ಅಮೂಲ್ಯ”ರಾದ ವಿಜ್ಞಾನಿಯೇ! ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ ಸಮಾಜದ ನಡುವೆ ಕೊಂಡೊಯ್ದ ಪ್ರಮುಖರಲ್ಲಿ ನಿಜಕ್ಕೂ “ಅಮೂಲ್ಯ”ರಾದ ಜೀನಿಯಸ್. ಸಮಾಜದ ಜೊತೆಗೆ ವಿಜ್ಞಾನವನ್ನೂ ಕೊಂಡೊಯ್ದ ಜಾಗತಿಕ ಪ್ರಮುಖರಲ್ಲಿ ಒಬ್ಬರಾದ ಪ್ರೊ. ಅಮೂಲ್ಯ ಕುಮಾರ್ ಅವರೇನೂ ಸಮಾಜವಿಜ್ಞಾನಿಯಲ್ಲ! ಅಪ್ಪಟ ರಸಾಯನ ವಿಜ್ಞಾನಿ. ರಸಾಯನಿಕ ಪ್ರಕ್ರಿಯೆಗಳ ಸಮೀಕರಣಗಳಂತೆ ವಿಜ್ಞಾನವನ್ನು ಸಮಾಜದ ಜೊತೆ ಸಮೀಕರಿಸಿ ಬಂಧವನ್ನು ಉಂಟುಮಾಡುವಲ್ಲಿ ಪ್ರೊ AKN ಅವರದ್ದು ಬಹು ದೊಡ್ಡ ಕಾಣಿಕೆ. ವಿಜ್ಞಾನದ ಜೊತೆಗೆ ಗ್ರಾಮೀಣ ಅಭಿವೃದ್ಧಿ, ಇಕಾಲಜಿ, ಪರಿಸರ, ಶಕ್ತಿಮೂಲಗಳು, ಪರ್ಯಾಯ ಶಕ್ತಿ ಇತ್ಯಾದಿಗಳ ಸಾಧ್ಯತೆಗಳು ಸಂಸ್ಥೆಗಳಾಗಿ ಇರುವಲ್ಲಿಯೂ ಪ್ರೊ AKN ಅವರ ಪಾಲು ಹಿರಿದಾಗಿದೆ.
ನಾನು ನನ್ನ ಸಂಶೋಧನಾ ವೃತ್ತಿಯನ್ನು ಅವರೇ ಆರಂಭಿಸಿದ ಸಂಸ್ಥೆಯಲ್ಲಿ ತೊಡಗಿದ್ದು ನಿಜಕ್ಕೂ ನನ್ನ ಸೌಭಾಗ್ಯ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ KSCST ಯಲ್ಲಿ ನಾನಿದ್ದ ಸುಮಾರು ಒಂದೂವರೆ ದಶಕಗಳ ಕಾಲ ಅವರನ್ನು ಹತ್ತಿರದಿಂದ ನೋಡಿದ್ದೆ, ಅವರ ಹಲವಾರು ಭಾಷಣಗಳನ್ನೂ, ಒಟ್ಟಾಗಿ ಕುಳಿತು ಚರ್ಚಿಸಿದ ವಿಜ್ಞಾನದ ಅನುಸಂಧಾನವನ್ನೂ ಅನುಭವಿಸಿದ್ದು ನನಗೆ ನಿಜಕ್ಕೂ ಹೆಮ್ಮೆಯ ಸಂಗತಿ. KSCSTಯನ್ನೂ ಒಳಗೊಂಡು ಹತ್ತಾರು ವಿಜ್ಞಾನ ಸಂಸ್ಥೆಗಳಿಗೆ ಹಾಗೂ ದೇಶಾದ್ಯಂತ ಅನೇಕ ಬದಲಾವಣೆಗಳಿಗೆ ಕಾರಣ ಪ್ರೊ. ಅಮೂಲ್ಯ ಕುಮಾರ್ ರೆಡ್ಡಿ. ಅವರ ಪರಿಚಯ ಭಾರತೀಯರೆಲ್ಲರಿಗೆ, ವಿಶೇಷವಾಗಿ ಕನ್ನಡಿಗರಿಗೆ, ಜನಸಮಾನ್ಯರನ್ನೂ ಒಳಗೊಂಡು ವಿದ್ಯಾರ್ಥಿಗಳಿಗಂತೂ ಇರಲೇಬೇಕು.
ವೈಯಕ್ತಿಕವಾಗಿ ನನಗೆ ವಿಜ್ಞಾನ ಮತ್ತು ಸಮಾಜ, ಈ ಎರಡರ ಸಮೀಕರಣದಲ್ಲಿ ನನ್ನ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನವು ಅಡಿಪಾಯ ಒದಗಿಸಿದ್ದರೆ, ಅದರ ಆತ್ಯಂತಿಕ ವೈಜ್ಞಾನಿಕ ಜವಾಬ್ದಾರಿಯನ್ನು ಕಲಿಸಿದ್ದು ನನ್ನ ವೃತ್ತಿ ಜೀವನದ ಆರಂಭದ ದಿನಗಳ ಪ್ರೊ. ಅವರು ಕಟ್ಟಿದ ಸಂಸ್ಥೆ ಮತ್ತು ಆ ದಿನಗಳಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಆವರಣದ ವೈಜ್ಞಾನಿಕ ಪರಿಸರ.
ಆಂಧ್ರ ಮೂಲದವರಾದರೂ ಪ್ರೊ. ಎ.ಕೆ.ಎನ್. ಅವರು ಹುಟ್ಟಿನಿಂದ ಕರ್ನಾಟಕದವರೇ! ಬೆಂಗಳೂರಿನಲ್ಲೇ ಅಕ್ಟೋಬರ್ 21, 1930ರಲ್ಲಿ ಜನಿಸಿದರು. ಅವರ ತಂದೆಯವರು ನಾರಾಯಣ ರೆಡ್ಡಿಯವರು ಆಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಲ್ಲಿ ಹಿರಿಯ ಅಧಿಕಾರಿಗಳಾಗಿದ್ದರು. ವಿದ್ಯಾರ್ಥಿ ದಿನಗಳಲ್ಲಿಯೇ ಸ್ವಾತಂತ್ರ್ಯದ ಆರಂಭಿಕ ದಿನಗಳ ವೈಜ್ಞಾನಿಕ ಹಿನ್ನೆಲೆಯನ್ನು ಆತ್ಮೀಯವಾಗಿ ಅನುಭವಿಸಿದವರು. ಮೂಲತಃ ಭೌತ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿಯೇ ಪಡೆದರು. ಮುಂದೆ ಇಲೆಕ್ಟ್ರೋಕೆಮಿಸ್ಟ್ರಿ (Electrochemistry) ಯಲ್ಲಿ ಪಿ.ಎಚ್.ಡಿ. ಪದವಿಯನ್ನು ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಪಡೆದರು. ಭಾರತಕ್ಕೆ ಹಿಂದಿರುಗಿದ 1958ರ ಸಮಯದಲ್ಲಿ ಮೊದಲು ಕೇಂದ್ರೀಯ ಇಲೆಕ್ಟ್ರೋಕೆಮಿಕಲ್ ಸಂಶೋಧನಾ ಸಂಸ್ಥೆ(Central Electrochemical Research Institute) ಕಾರೈಕುಡಿಯಲ್ಲಿ ವಿಜ್ಞಾನಿಗಳಾಗಿ ವೃತ್ತಿಯನ್ನು ಆರಂಭಿಸಿದರು. ಆದರೆ ಬಹು ಬೇಗ ಅಲ್ಲಿನ ಕಾರ್ಯವೈಖರಿಯಲ್ಲಿ ಬೇಸತ್ತು ಮೂರೇ ವರ್ಷಗಳಲ್ಲಿ ಕೆಲಸವನ್ನು ತೊರೆದರು.
ಮುಂದೆ 1961ರಲ್ಲಿ ಫಿಲಿಡೆಲ್ಫಿಯಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಪೋಸ್ಟ್ ಡಾಕ್ಟೊರಲ್ ಅಧ್ಯಯನಕ್ಕೆಂದು ಬಂದದ್ದು ಇಲೆಕ್ಟ್ರೋಕೆಮಿಸ್ಟ್ರಿ ವಿಧ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿತು. ಅಲ್ಲಿ ಅವರು 1961 ರಿಂದ 1966ರ ವರೆಗೂ ಅಲ್ಲಿನ ಪ್ರೊ. ಬೊಕ್ರಿಸ್ (J.O’M. Bockris) ಅವರ ಪ್ರಯೋಗಾಲಯದಲ್ಲಿ ಅವರ ಸಾಹಚರ್ಯದಲ್ಲಿ ಕೆಲಸ ಮಾಡಿ ಅಪೂರ್ವವಾದ ಸಂಶೋಧನಾ ಪ್ರಕಟಣೆಗಳನ್ನು ಮಾಡಿದರು. ಅವರ ಜೊತೆಯಾಗಿ ಪ್ರಕಟಿಸಿದ ಪುಸ್ತಕ ಮಾಡರ್ನ್ ಇಲೆಕ್ಟ್ರೋಕೆಮಿಸ್ಟ್ರಿ (Modern Electrochemistry) ಪುಸ್ತಕದ ಎರಡು ಸಂಪುಟಗಳು ಪ್ರಮುಖವಾದವು. ಸುಮಾರು 1400 ಪುಟಗಳ ಈ ಎರಡೂ ಸಂಪುಟಗಳು ಇಲೆಕ್ಟ್ರೋಕೆಮಿಸ್ಟ್ರಿಯ ಇತಿಹಾಸದಲ್ಲಿ ಬೈಬಲ್ ಎಂದೇ ಪ್ರಸಿದ್ದವಾಗಿವೆ. ಇದು ಅವರನ್ನು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸಿತು. ಜೊತೆಗೆ ಅಪಾರವಾದ ವೈಜ್ಞಾನಿಕ ಬರಹಗಳನ್ನೂ ಅವರಿಂದ ಹೊಮ್ಮುವಂತೆ ಮಾಡುವಲ್ಲಿಯೂ ಜೊತೆಗೆ ಭಾರತಕ್ಕೆ ಮರಳಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ರಸಾಯನ ವಿಜ್ಞಾನ ವಿಭಾಗಕ್ಕೆ ನೆಲೆಗೊಳಿಸುವಂತೆ ಮಾಡಿ, ಮುಂದೆ ಅಪಾರವಾದ ಭಾರತೀಯ ವೈಜ್ಞಾನಿಕ ಪ್ರಪಂಚವನ್ನು ರೂಪಿಸುವಂತಾಗಲು ಕಾರಣವಾಯಿತು.
ಇಂದು ಭಾರತ ಸರ್ಕಾರ ಹಾಗೂ ದೇಶದ ಹೆಚ್ಚೂ-ಕಡಿಮೆ ಎಲ್ಲಾ ರಾಜ್ಯಗಳೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳನ್ನು ಹೊಂದಿವೆ. ಇದಕ್ಕೆಲ್ಲಾ ಆರಂಭಿಕ ಚರ್ಚೆಗಳಲ್ಲಿ ಭಾಗವಹಿಸಿದವರಲ್ಲಿ ಪ್ರೊ. ಅಮೂಲ್ಯ ಕುಮಾರ್ ಕೂಡ ಒಬ್ಬರು. ಕರ್ನಾಟಕವು ವಿಜ್ಞಾನ ಇಲಾಖೆಯನ್ನು ಆರಂಭಿಸಿದ ಮೊದಲ ರಾಜ್ಯವಾಗುವಲ್ಲಿಯೂ ಪ್ರೊ. ಎ.ಕೆ.ಎನ್. ಕೊಡುಗೆ ಇದೆ. ಅನೇಕರಿಗೆ ಅಸ್ತ್ರ ಒಲೆಗಳ (Astra Stove)ಗಳ ಪರಿಚಯ ಇದ್ದೇ ಇದೆ. ಬಹುಶಃ ರಾಜ್ಯದ ಬಹು ಪಾಲು ಹಳ್ಳಿಗಳನ್ನು ತಲುಪಿದ ತಂತ್ರಜ್ಞಾನದಲ್ಲಿ ಅಸ್ತ್ರ ಒಲೆಗಳ ಪಾತ್ರ ಹಿರಿದು. ಸ್ವಾತಂತ್ರ್ಯೋತ್ತರ ತಂತ್ರಜ್ಞಾನಗಳಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಮುಂಚೂಣಿಗೆ ಬಂದ ಬಹು ಮುಖ್ಯವಾದ ಪ್ರಾಡಕ್ಟ್. ಇದೆಲ್ಲಕ್ಕೂ ಆಸಕ್ತಿಕರವಾದ ಹಿನ್ನೆಲೆಯಿದೆ.
Energy for Sustainable World ಮತ್ತು ಗ್ಯಾಂಗ್ ಆಫ್ ಫೋರ್ (Gang of Four)
ಇಂಧನ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಬಹಳ ಆಪ್ತವಾಗಿ ಗ್ರಹಿಸಿದವರಲ್ಲಿ ಪ್ರೊ. ಎ.ಕೆ.ಎನ್. ಪ್ರಮುಖರು. ಶಕ್ತಿಯು ಸುಸ್ಥಿರವಾದ ಜಗತ್ತಿಗೆ ಅಗತ್ಯವಾದದ್ದು ಎಂದು ಮನಗಂಡ ವಿಜ್ಞಾನಿಗಳಲ್ಲಿ ಅಮೂಲ್ಯ ಕುಮಾರ್ ಅವರು ಅಗ್ರಗಣ್ಯರು. ಅವರನ್ನೂ ಅವರ ಮೂವರು ವಿಜ್ಞಾನಿ ಮಿತ್ರರನ್ನೂ ಜಾಗತಿಕ ಸಂಪನ್ಮೂಲ ಸಂಸ್ಥೆಯು ಶಕ್ತಿ ಮೂಲಗಳ ಕುರಿತು ಸಂಶೋಧನೆಗೆ ಆಹ್ವಾನಿಸಿ ತೊಡಗಿಸಿತ್ತು. ಬ್ರೆಜಿಲ್ ನ ಜೊಸ್ ಗೊಲ್ಡೆಂಬರ್ಗ್ (Jose Goldemberg) ಸ್ವೀಡನ್‌ನ ಥಾಮಸ್ ಯೋಹಾನ್‌ಸನ್ (Thomas B. Johansson) ಮತ್ತು ಅಮೆರಿಕದ ರಾಬರ್ಟ್ ವಿಲಿಯಮ್ಸ್ (Robert H. Williams) ಆ ಇತರೇ ಮೂವರು. ಈ ನಾಲ್ಕೂ ಜನ ವಿಜ್ಞಾನಿಗಳನ್ನು ಜಗತ್ತಿನ ಶಕ್ತಿ ಮೂಲಗಳ ಅಧ್ಯಯನದ ಗ್ಯಾಂಗ್ ಆಫ್ ಫೋರ್ (Gang of Four) ಎಂದೇ ಪ್ರೀತಿಯಿಂದ ವಿಜ್ಞಾನದ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. ಈ ನಾಲ್ಕೂ ಜನರ ಸುಸ್ಥಿರ ಜಗತ್ತಿಗೆ ಶಕ್ತಿ (Energy for Sustainable World) ಪ್ರಕಟಣೆಯು ಇಂದಿಗೂ ಜಗತ್ತಿನಲ್ಲೇ ಅತ್ಯಂತ ಪ್ರಮುಖವಾದ ವೈಜ್ಞಾನಿಕ ದಾಖಲೆ. ಇದು ಇಂಧನ ಮತ್ತು ಮಾನವ ಮಿತಿಗಳನ್ನೂ ಎಲ್ಲಾ ಭೌಗೋಳಿಕ ಹಿನ್ನೆಲೆಯಲ್ಲಿ ಆತ್ಯಂತಿಕವಾಗಿ ಚರ್ಚಿಸುತ್ತದೆ. ಇದು ಶಕ್ತಿ ಮತ್ತು ಬಳಕೆಯ ಸಂಗತಿಗಳನ್ನು ಅಮೂಲಾಗ್ರವಾಗಿ ಚರ್ಚಿಸಿದ್ದಲ್ಲದೆ, ಬಹು ಮುಖ್ಯವಾದ ಪ್ರಸ್ತುತ ಅನುಭವಿಸುತ್ತಿರುವ ಕ್ಲೈಮೇಟ್ ಚೇಂಜ್ ನಂತಹಾ ಸಂಗತಿಗಳ ಮುಂದಾಲೋಚನೆಯನ್ನೂ ಮಾಡಿದ್ದು ವಿಶೇಷ.
ಗ್ರಾಮೀಣ ಅಷ್ಟೇಕೆ ಎಲ್ಲಾ ಭೌಗೋಳಿಕ ಹಿನ್ನೆಲೆಯಿಂದಲೂ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಾಜೀಕರಿಸುವಲ್ಲಿ ಪ್ರೊ. ಎ.ಕೆ.ಎನ್. ಅವರದ್ದು ಅತ್ಯಂತ ವೈಜ್ಞಾನಿಕವಾದ ವಿಧಾನ. ಈ ಹಿನ್ನೆಲೆಯಲ್ಲಿಯೇ ಬಹುಶಃ ಇಂದಿನ ಬಹುಪಾಲು ಆಧುನಿಕ ವಿಜ್ಞಾನ ಸಂಗತಿಗಳು ಸಂಸತ್ತು ಮತ್ತು ವಿಧಾನ ಸಭೆಗಳನ್ನೂ ಹೊಕ್ಕು ಚರ್ಚೆಗಳಾಗಿ ಸಾರ್ವಜನಿಕ ಸಂಸ್ಥೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಗ್ರಾಮೀಣ ಸಂದರ್ಭಗಳಿಗೆ ವಿಸ್ತರಿಸುವ ಸಂಸ್ಥೆಯೊಂದನ್ನು (Application of Science and Technology for Rural Areas – ASTRA) ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ಭಾಗವಾಗಿ ಹುಟ್ಟಿಹಾಕಿದ್ದು ಅವರ ಹೆಗ್ಗಳಿಕೆ. ಇದರ ಫಲವಾಗಿಯೇ ಅಸ್ತ್ರ ಒಲೆಗಳು ಬಂದದ್ದು. ಹಾಗೂ ಸಮಗ್ರ ಗ್ರಾಮೀಣ ಶಕ್ತಿ ಮೂಲಗಳ ಯೋಜನೆಯು (Integrated Rural Energy Programme -IREP) ಜಾರಿಗೆ ಬರುವಲ್ಲಿ ಪ್ರೊ. ಎ.ಕೆ.ಎನ್. ಕಾರಣರು.
ಇಂಧನ ಮತ್ತು ಶಕ್ತಿ ಮೂಲಗಳ ಸುಧಾರಿತ ಬಳಕೆಯ ಹಿನ್ನೆಲೆಯಲ್ಲಿಯೇ ಮಣ್ಣಿನ ಒತ್ತಿಟ್ಟೆಗೆಗಳೂ (Mud Block Bricks) ನಮ್ಮಲ್ಲಿ ತಯಾರಾಗುವಂತಾದವು. ಇದನ್ನು ಆಮೂಲಾಗ್ರವಾಗಿ ಸಂಶೋಧಿಸಿ ರಾಜ್ಯಾಧ್ಯಂತ ಅಷ್ಟೇಕೆ ರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸುವಂತೆ ಶ್ರಮಿಸಿದವರು ಪ್ರೊ. ಕೆ.ಎಸ್. ಜಗದೀಶ್. ಇವರಿಗೆ ಇಂತಹದ್ದೊಂದನ್ನು ಪ್ರೊ. AKN ಅವರು ಪರಿಚಯಿಸಿದ ಹಿನ್ನೆಲೆಯಲ್ಲಿ ಜಗದೀಶ್ ಅವರ ಒಂದು ಮಾತು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಇತ್ತು. ಏನೆಂದರೆ ಜಗದೀಶ್ ಅವರಿಗೆ ಪ್ರೊ. ಎ.ಕೆ.ಎನ್. ಅವರು ಇಂತಹ ಇಟ್ಟಿಗೆಯನ್ನು ಪರಿಚಯಿಸಿ ಅದನ್ನು ಸ್ಥಳೀಯ ಹೊಂದಾಣಿಕೆಯ ಕುರಿತು ಸಂಶೋಧಿಸಲು ಸಲಹೆ ಇತ್ತರಂತೆ, ಆ ಇಟ್ಟಿಗೆಯು ಅವರ ಕೈಯನ್ನು ಬ್ರಹ್ಮ ಕಪಾಲದ ರೀತಿಯಲ್ಲಿ ಹಿಡಿಯಿತಂತೆ! ಮುಂದೆಯೂ ಅದನ್ನೆಂದೂ ಬಿಡದಂತೆ, ಕಡೆಯವರೆಗೂ ಸುಸ್ಥಿರವಾದ ಕಟ್ಟಡ ನಿರ್ಮಾಣಗಳ ಕುರಿತ ಸಂಶೋಧನೆಯಲ್ಲಿಯೇ ತೊಡಗಿದ್ದವರು ಪ್ರೊ. ಜಗದೀಶ್. ಸಿವಿಲ್ ಇಂಜನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದವರು. ಇದೇ ಪ್ರೊ. ಜಗದೀಶ್ ನನ್ನನ್ನೂ ಅವರ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇರಿ ಅದರ ಭಾಗವಾಗಲು ಇಂಟರ್‌ವ್ಯೂ ಮಾಡಿದವರು.
Karnataka State Council for Science & Technology-KSCST (ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ) ದೇಶದಲ್ಲಿಯೇ ಮೊಟ್ಟ ಮೊದಲ State Council of S&T. ಇದನ್ನು 1975ರಲ್ಲಿ ಆರಂಭಿಸಿದ್ದೇ ಪ್ರೊ. ಎ.ಕೆ.ಎನ್. ನಂತರ ಎಲ್ಲಾ ರಾಜ್ಯಗಳಲ್ಲೂ ಇದನ್ನೇ ಮಾರ್ಗದರ್ಶಿಯಾಗಿ ಬಳಸಿಕೊಂಡು ಆಯಾ ರಾಜ್ಯದ ವಿಜ್ಞಾನ ಕೌನ್ಸಿಲ್‌ಗಳು ಆರಂಭಿಸಲಾಗಿದೆ. ಈ ಸ್ಟೇಟ್ ಕೌನ್ಸಿಲ್‌ನ ಅನೇಕ ಸೆಮಿನಾರುಗಳಲ್ಲಿ ಚರ್ಚೆಯಾಗಿ ಜಾರಿಗೊಂಡ ವಿವಿಧ ಯೋಜನೆಗಳು ವಿಧ ವಿಧವಾಗಿ ರೂಪುಗೊಂಡು ಹಲವಾರು ಸಂಸ್ಥೆಗಳಾಗಿ ಉದಯವಾಗಿವೆ. ಅವುಗಳಲ್ಲಿ ಇವತ್ತಿನ ಮಹಾತ್ಮ ಗಾಂಧಿ ಗ್ರಾಮೀಣ ಶಕ್ತಿ ಮತ್ತು ಅಭಿವೃದ್ಧಿ ಸಂಸ್ಥೆ (Mahatma Gandhi Institute of Rural Energy and Development). ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (Karnataka State Natural Disaster Monitoring Centre – KSNDMC) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ (Karnataka Rajya Vignana Parishat – KRVP) ಇವೇ ಮುಂತಾದವು. ಹೀಗೆ ಪ್ರೊ. ಎ.ಕೆ.ಎನ್. ಅವರ ವೈಜ್ಞಾನಿಕ ದೂರ ದೃಷ್ಟಿ ತುಂಬಾ ಸೂಕ್ಷ್ಮ ಹಾಗೂ ವಿಸ್ತಾರವಾದದ್ದೂ ಕೂಡ. ಹಾಗಾಗಿ ಇಂದು ದೇಶ ಹಾಗೂ ನಮ್ಮ ರಾಜ್ಯ ವೈಜ್ಞಾನಿಕ ನೀತಿ ನಿಯಮಗಳನ್ನು ಹೊಂದಿದೆ ಎಂದರೆ ಅದಕ್ಕೆ ಪ್ರೊ. ಎ.ಕೆ.ಎನ್. ಅವರು ಕಾರಣರೇ! ವಿಜ್ಞಾನದ ಪಾಲಿಸಿಗಳನ್ನು ಈ ದೇಶವು ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಕ್ರಂ ಸಾರಭಾಯ್, ಹೋಮಿಭಾಭಾ, ಪ್ರೊ. ಸತೀಶ್ ಧವನ್ ಮುಂತಾದವರ ಸಮಕಾಲೀನ ವಿಜ್ಞಾನಿಯಾಗಿದ್ದು ಪ್ರಮುಖವಾಗಿ ಕರ್ನಾಟಕದ ವೈಜ್ಞಾನಿಕ ಜಗತ್ತನ್ನು ರೂಪಿಸಿದ ಕೀರ್ತಿ ಪ್ರೊ. ಎ.ಕೆ.ಎನ್. ಅವರದ್ದು. ಪ್ರೊ. ಸತೀಶ್ ಧವನ್ ಅವರ ಜೊತೆಗೆ ತೀರಾ ನಿಕಟವರ್ತಿಗಳಾಗಿದ್ದು ಬೆಂಗಳೂರಿನ ವೈಜ್ಞಾನಿಕ ಸಮಾಜವನ್ನೂ ಕಟ್ಟುವಲ್ಲಿಯೂ ಪ್ರೊ. ಎ.ಕೆ.ಎನ್. ಅವರದ್ದು ವಿಶೇಷ ಸೇವೆ.
ನಾನು ನನ್ನ ವಿಜ್ಞಾನದ ವೃತ್ತಿಯನ್ನು ಆರಂಭಿಸಿ ಸುಮಾರು ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ನಿಭಾಯಿಸಿದ ಕೆ.ಎಸ್.ಸಿ.ಎಸ್.ಟಿ.ಯಲ್ಲಿ ಪ್ರೊ. ಎ.ಕೆ.ಎನ್. ಅವರನ್ನು ಹಲವಾರು ಭಾರಿ ಹತ್ತಿರದಿಂದ ಕಾಣುವ ಅವರ ಮಾತುಗಳನ್ನು ಕೇಳುವ ಸಂದರ್ಭಗಳು ಸಾಕಷ್ಟು ಇದ್ದವು. ಇಡೀ 90ರ ದಶಕದ ವೈಜ್ಞಾನಿಕ ಚರಿತ್ರೆಯನ್ನು ಅವರ ನೇತೃತ್ವದಲ್ಲಿ ರೂಪಿಸಿದ ಸಂಸ್ಥೆಯಲ್ಲಿ ನಾನೂ ಒಬ್ಬನಾಗಿದ್ದು ನನ್ನ ಸೌಭಾಗ್ಯ. ಎಲ್ಲದಕ್ಕಿಂತಾ ಹೆಚ್ಚಾಗಿ ವಿಜ್ಞಾನ ವೈಧಾನಿಕ ಸಂಗತಿಗಳನ್ನು ವಿಶೇಷವಾಗಿ ರೂಪಿಸಿದ ಅವರ ನಡೆಗಳನ್ನು ಕಂಡು ಆನಂದ ಪಟ್ಟು ಸ್ವಲ್ಪವಾದರೂ ಕಲಿತಿದ್ದೇನೆ. ಅದರ ಆನಂದವನ್ನು ಅನುಭವಿಸುತ್ತಿದ್ದೇನೆ.
ಅವರದ್ದು ತೀರಾ ವಿಶಿಷ್ಟವಾದ ಮಾತುಗಾರಿಕೆ ಪ್ರೊ. ಎ.ಕೆ.ಎನ್. ತಮ್ಮೆಲ್ಲಾ ಭಾಷಣಗಳನ್ನು ಅತ್ಯಂತ ಜಾಗರೂಕರಾಗಿ ತಯಾರಿಸಿ ಪ್ರಸ್ತುತ ಪಡಿಸುತ್ತಿದ್ದರು. ಹದಿನೈದು ವರ್ಷಗಳ ಸುಧೀರ್ಘ ಸಮಯದಲ್ಲಿ ನೂರಾರು ಮಾತುಗಳನ್ನು/ಭಾಷಣಗಳನ್ನೂ ಕೇಳಿದ್ದೇನೆ ಎಂದೊಂದೂ ಭಿನ್ನವಾದ ಹಾಗೂ ವಿಶಿಷ್ಟವಾದವು. ಆಗಿನ್ನೂ ನಾನು ಪಿ.ಎಚ್.ಡಿ. ವಿದ್ಯಾರ್ಥಿಯಾಗಿದ್ದು, ಸೆಮಿನಾರುಗಳನ್ನು ಕೊಡಬೇಕಿದ್ದರಿಂದ ಅವರನ್ನು ಅವರ ಕ್ರಮಗಳನ್ನು ಅನುಸರಿಸುವ ಖುಷಿಯೂ ನನ್ನದಾಗಿತ್ತು. ಅಂತಹ ಅಪ್ರತಿಮ ಮಾತುಗಾರಿಕೆ. ವಿಜ್ಞಾನವನ್ನು ಸಮಾಜಕ್ಕೆ ತಲುಪಿಸುವಲ್ಲಿ ಅವರ ಪ್ರವಚನಗಳು ಯಾವುದೇ ಸಾಧು-ಸಂತರನ್ನೂ -ಕವಿಗಳನ್ನೂ-ಸಾಹಿತಿಗಳನ್ನೂ ಮೀರಿದ್ದವಾಗಿದ್ದವು. ಪ್ರತೀ ಬಾರಿಯೂ ತಮ್ಮ ಮಾತುಗಾರಿಕೆಯನ್ನು ಪ್ರಯೋಗಕ್ಕೆ ಒಳಪಡಿಸಿ ಪ್ರಸ್ತುತ ಪಡಿಸುತ್ತಿದ್ದರು. ಮಾತ್ರವಲ್ಲ ಡಯಾಸ್ ಇಳಿದು ಬಂದ ಮೇಲೆ “ಪರವಾಗಿಲ್ವಾ” ಎಂದು ವಿನಯದಿಂದ ಕೇಳುತ್ತಿದ್ದುದು ಮಾತ್ರ ಮತ್ತೂ ವಿಶೇಷ. ದುರಾದೃಷ್ಟವೆಂದರೆ ಬಹುಶಃ ಅವರ ಅಂತಹಾ ಭಾಷಣಗಳು ದಾಖಲಾಗಿಲ್ಲ.
ಅವರ ಜೀವನದ ಕೊನೆಯ ದಶಕದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ವಿರೋಧವು ಒಂದು ಪ್ರಮುಖ ಕಾಳಜಿಯಾಗಿತ್ತು. ಪೋಖ್ರಾನ್ II ರ ವಿರುದ್ಧ ಬಲವಾಗಿ ಮಾತನಾಡಿದ ಕೆಲವರಲ್ಲಿ ಅವರು ಒಬ್ಬರು. ನವೆಂಬರ್ 1999 ರಲ್ಲಿ, ಅವರು ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧದ ಜನರ ಸಮಾವೇಶದಲ್ಲಿ ಭಾಗವಹಿಸಿದರು. ಮೇ 7ರಂದು 2006 ರಲ್ಲಿ ಅವರ ಮರಣದ ಮೊದಲು ಅವರ ಕೊನೆಯ ಲೇಖನವೊಂದರಲ್ಲಿ, ಪರಮಾಣು ಶಕ್ತಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ನಡುವಿನ ಸಂಪರ್ಕವನ್ನು ಮಾಡುವ ಭಾರತ-ಯುಎಸ್ ಒಪ್ಪಂದದ ವಿರುದ್ಧ ಅವರು ಬರೆದಿದ್ದಾರೆ, ಇದನ್ನು ಅನೇಕರು ಮಾಡಲು ಬಯಸಲಿಲ್ಲ, ಆದರೂ ಅಂತಹದ್ದೊಂದನ್ನು ಮಾಡುವ ಧೈರ್ಯವಹಿಸಿದ್ದರು.
ಅಮೂಲ್ಯ ರೆಡ್ಡಿ ಅವರು ವಿಭಿನ್ನ ವಿಜ್ಞಾನವನ್ನು ಕಲ್ಪಿಸಿಕೊಳ್ಳಲು ಮತ್ತು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡರು. ಶಿಕ್ಷಣದ ಅಪರೂಪವಾಗಿರುವ ಜನಸಾಮಾನ್ಯರಿಂದ ದೂರ ಸರಿಯುವಿಕೆಯಿಂದ ಹೊರಬಂದು, ಜನರ ಜೀವನವನ್ನು ನೇರವಾಗಿ ಸ್ಪರ್ಶಿಸುವ ಪರಿಹಾರಗಳಲ್ಲಿ ಕೆಲಸ ಮಾಡುವುದು ಅವರು ಮಾಡಿದ ಆಯ್ಕೆಯಾಗಿದೆ. ಅದೊಂದು ವೈಯಕ್ತಿಕ ತ್ಯಾಗವೂ ಆಗಿತ್ತು.
ಅವರದು ವಿಜ್ಞಾನದಲ್ಲಿ ಅಪರೂಪವಾದ ಜೀವನ. ಅವರ ಕುರಿತು ಪ್ರಕಟವಾಗಿರುವ ಪುಸ್ತಕ “ಸಿಟಿಜನ್ ಸೈಂಟಿಸ್ಟ್” ಹೆಸರಿಗೆ ತಕ್ಕ ಸಾಮಾಜಿಕ ಕಳಕಳಿಯುಳ್ಳ ನಾಗರಿಕ ವಿಜ್ಞಾನಿ ಪ್ರೊ. ಎ.ಕೆ.ಎನ್. ರೆಡ್ಡಿಯವರು. ಅವರಿಂದ ಪ್ರಭಾವಿತಗೊಂಡು ಅಥವಾ ನೇರ ಅವರಿಂದಲೇ ರೂಪಿತವಾದ ನೂರಾರು ವಿಜ್ಞಾನ ಸಂಸ್ಥೆಗಳು ಜಗತ್ತಿನಾದ್ಯಂತ ಕಾರ್ಯನಿರತವಾಗಿವೆ. ಹತ್ತಾರು ನಮ್ಮ ಸುತ್ತಲಲ್ಲೇ ಇವೆ. ಅವರಿಂದ ರೂಪುಗೊಂಡ ಅಂತರರಾಷ್ಟ್ರೀಯ ಶಕ್ತಿಯ ಉಪಕ್ರಮ – ಇಂಟರ್ ನ್ಯಾಷನಲ್ ಎನರ್ಜಿ ಇನಿಶಿಯೇಟಿವ್ (International Energy Initiative -IEI) ಅವರ ಗೆಳೆಯರ ಜೊತೆಗೂಡಿದ ಕಲ್ಪನೆಯಲ್ಲಿಯೇ ಅರಳಿದ್ದು
ಇಂದು CPUS ಕೂಡ ನನ್ನ ಮನಸ್ಸಿನಲ್ಲಿ ಹುಟ್ಟಿದೆ ಎಂದರೆ ಪ್ರೊ. AKN ಅವರು ಪರೋಕ್ಷವಾಗಿ ಸ್ಪೂರ್ತಿ ಕೊಟ್ಟಿದ್ದಾರೆ. ಎಲ್ಲಕ್ಕಿಂತಾ ಹೆಚ್ಚಾಗಿ 90ರ ದಶಕದಲ್ಲಿ ನನ್ನ ವಿಜ್ಞಾನ ಆರಂಭಿಕ ದಿನಗಳನ್ನು ಅವರ ಸಂಸ್ಥೆಯ ಒಡನಾಟದಲ್ಲಿ ಕಳೆದು ಕಲಿತಿದ್ದೇನೆ ಎಂಬುದೇ ಬಹಳ ಸಂತೋಷದ ಸಂಗತಿ. ನೂರಾರು ಸಂಸ್ಥೆಗಳಿಗೆ, ನೂರಾರು ಸಂಶೋಧನೆಗಳಿಗೆ ಕಾರಣರಾಗಿರುವ ಅವರ ಬಗೆಗೆ ಒಂದೆರಡು ಪುಟಗಳ ಟಿಪ್ಪಣಿ ಕೇವಲ ನೆನಪಿನ ನೆಪವಷ್ಟೇ!
ನಮಸ್ಕಾರ