You are currently viewing ವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ

ವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ

ಇನ್ನೇನು ಮುಂದಿನವಾರ, ಅಕ್ಟೋಬರ್‌ ಮೂರರಿಂದ ನೊಬೆಲ್‌ 2022ರ ಆಯ್ಕೆಯ ಸುದ್ಧಿಗಳು ಹೊರಬೀಳಲು ಆರಂಭಿಸುತ್ತವೆ. ನೊಬೆಲ್‌ ಪುರಸ್ಕಾರವು ವಿಜ್ಞಾನದಲ್ಲಿ ಶ್ರೇಷ್ಠತೆಯ ಮಾನದಂಡವೂ ಹೌದು, ಜೊತೆಗೆ ಬಹುಮಾನಿತರ ಸಂಶೋಧನೆಯ ಮಾನವತೆಗೆ ಕೊಡುಗೆಯ ಹೆಗ್ಗುರುತೂ ಹೌದು. ಇದೇ ಕಾರಣದಿಂದ ಅದು, ಶ್ರೇಷ್ಠತೆಯ ಕುತೂಹಲ ಮತ್ತು ಅದರ ಮಾನವತೆಯ ಕೊಡುಗೆಯ ಹಿಂದಿನ ಆಪ್ತತೆಯ ಆನಂದದ ಸರಿಯಾದ ಮಿಶ್ರಣ. ವಿಜ್ಞಾನಿಗಳು ಕಲಾವಿದರ ಹಾಗೆ ಜನಪ್ರಿಯರಾದ ಮೇಲೆ ಬಹುಮಾನ ಪಡೆಯುವುದಿಲ್ಲ. ಬಹುಮಾನಿತರಾದ ಮೇಲೆ ಪ್ರಸಿದ್ಧಿಗೆ ಬರುತ್ತಾರೆ.

ಮಾನವ ಕುಲದಲ್ಲಿ ಜನಪ್ರಿಯತೆಯನ್ನೇ ಮಾನದಂಡವಾಗಿಟ್ಟು ನೋಡಿದರೆ ರಾಜಕಾರಣಿಗಳಿಗೆ, ಸಿನಿಮಾ ನಟರಿಗೆ, ಕವಿ-ಕಲಾವಿದರಿಗೆ ವಿಜ್ಞಾನಿಗಳನ್ನು ಹೋಲಿಸಲು ಸಾಧ್ಯವಾಗದು. ಚುನಾವಣೆಗಳ ಸಂದರ್ಭಗಳಲ್ಲಂತೂ ಯಾವುದೇ ಪತ್ರಿಕೆ, ಟಿವಿ ಚಾನೆಲ್ ಅಷ್ಟೇಕೆ ನಾಲ್ಕು ಜನ ಸೇರಿದ ಕಡೆಯ ಚರ್ಚೆಗಳಲ್ಲೂ ಯಾವ ಯಾವ ಪ್ರದೇಶದಲ್ಲಿ ಯಾರ‍್ಯಾರು ಸ್ಪರ್ಧಿಸುತ್ತಿದ್ದಾರೆ, ಎನ್ನುವ ವಿಚಾರಗಳೇ ಮುಂಚೂಣಿಯಲ್ಲಿ ಇರುತ್ತವೆ. ಗೆದ್ದು ಶಾಸಕರೋ, ಮಂತ್ರಿಗಳೋ, ಅಥವಾ ಯಾವುದೋ ಮಂಡಳಿಯ ಅಧ್ಯಕ್ಷರೋ ಏನಾದರೂ ಆಗುವುದನ್ನು ಸಾಧನೆ ಎನ್ನುವುದಾದರೆ, ಅದಕ್ಕೆ ಅವರ ತಯಾರಿ ಎಂಥಹದ್ದು? ಕಾರಣಗಳ ಹಿಂದೆ ಆಲೋಚಿಸಿದರೆ! ರಾಜಕಾರಣದ ಶ್ರೇಷ್ಠತೆಗೆ ಅಂದರೆ ಅವರ ಆಯ್ಕೆಗೆ ಮೂಲ ಮಾನದಂಡವನ್ನಂತೂ ಚರ್ಚಿಸುವುದೇ ಬೇಡ! ಅಪ್ಪ ಗೆದ್ದ ಕ್ಷೇತ್ರವೋ, ಅಜ್ವನ ಆಯ್ಕೆಯೋ ಏನಿಲ್ಲದಿದ್ದರೂ ಜಾತಿ ಇತ್ಯಾದಿ. ಇದೇನಿದು ವಿಜ್ಞಾನ ಲೋಕದ ಶ್ರೇಷ್ಠತೆಯ ಹಿನ್ನೆಲೆಯ ಚರ್ಚೆಯಲ್ಲಿ ಇದೆಂತಹ ಸಂಗತಿ ಎಂದುಕೊಳ್ಳಬೇಡಿ. 

ಪ್ರೊ. ಬ್ಯಾರಿ ಬ್ಯಾರಿಶ್

      ವಿಜ್ಞಾನದಲ್ಲೂ ಆಯ್ಕೆಯು ಹೀಗೆ ಆಗಿದ್ದರೆ ಗತಿ ಏನು? ಅನ್ನುವ ಸ್ವಾಭಾವಿಕ ಅನಿಸಿಕೆ ಕ್ಷಣ ಕಾಡಿದ್ದು ನಿಜ. ಈ ಆಯ್ಕೆಯಲ್ಲಿ ಅಥವಾ ವಿಜ್ಞಾನಿಗಳ ಶ್ರೇಷ್ಠತೆಯ ಕೊಡುಗೆಗಳಲ್ಲಿ ಜನಪ್ರಿಯತೆಯ ಪ್ರಭಾವವೇ ಇರುವುದಿಲ್ಲ. ಅದೇನಿದ್ದರೂ ಸತ್ಯದ ಹುಡುಕಾಟ ಹಾಗೂ ಅದನ್ನು ಒರೆಹಚ್ಚಿ ನೋಡುವ ಕುತೂಹಲದ ಮನಸ್ಸು ಮಾತ್ರ! ಹಲವು ಅಪರೂಪದ ಹೆಚ್ಚೇನೂ ಪರಿಚಯವಿರದ ಆದರೂ ಮಹತ್ವದ ಕೊಡುಗೆಗಳಿಂದ ಮಾನವಕುಲದ ಏಳಿಗೆ ಹಾಗೂ ಸತ್ಯದ ದರ್ಶನದಲ್ಲಿ ಪ್ರಭಾವಿತವಾದ ವಿಜ್ಞಾನಿಗಳ ಅನಾವರಣವಾದ ನೊಬೆಲ್‌ ಪುರಸ್ಕಾರಗಳ ಹಿನ್ನೆಲೆಯಲ್ಲಿ ವಿಜ್ಞಾನ ಲೋಕದ ಆಯ್ಕೆಯ ಕೆಲವು ಸಂಗತಿಗಳನ್ನು ಚರ್ಚಿಸುವ ಮನಸ್ಸಾಯಿತು. ವಿಶ್ವದ ಅರಿವಿನ ಹುಡುಕಾಟದಲ್ಲಿರುವ ವಿಜ್ಞಾನ ಲೋಕದಲ್ಲಿ ಸತ್ಯದ ಮತ್ತು ಸತ್ಯವು ಮನುಕುಲವನ್ನು ಕುತೂಹಲದಿಂದ ಅಥವಾ ನೇರ ಅನ್ವಯಗಳಿಂದ ಪ್ರಭಾವಿಸುತ್ತಿರುವ ವಿಚಾರಗಳಲ್ಲಿರುವವರ ಶ್ರೇಷ್ಠತೆಯ ಆಯ್ಕೆಗಳ ನೆನಪಾಯಿತು. ಕಳೆದ 2017ರ ಭೌತವಿಜ್ಞಾನದ ನೊಬೆಲ್ ಪುರಸ್ಕೃತರು ಮೂವರು. ಆ ಮೂವರಲ್ಲಿ ಒಬ್ಬರು ಬ್ಯಾರಿ ಬ್ಯಾರಿಶ್. ಪೋಲೆಂಡಿನ ಯಹೂದಿ ಕುಟುಂಬದವರಾದ ಬ್ಯಾರಿಶ್‌ರ ಅಜ್ಜ ಅಮೆರಿಕಾಗೆ ವಲಸೆ ಬಂದವರು. ಕಾಲೇಜು ಮೆಟ್ಟಲನ್ನೇ ಹತ್ತದ ಕುಟುಂಬ, ಜೀವನೋಪಾಯ ಮತ್ತು ಬದುಕಿನ ಸಂಘರ್ಷಗಳ ನಡುವೆ ಮಾತ್ರವಷ್ಟೇ ಆಸಕ್ತಿಯಿದ್ದವರು. ಅಂತಹ ಕುಟುಂಬದ ಬ್ಯಾರಿಶ್ ವಿಶ್ವವಿಖ್ಯಾತ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್ ಆದರು. ಅಷ್ಟೇ ಅಲ್ಲ ೮೦ವರ್ಷ ದಾಟಿದ ಅವರನ್ನು ಇತ್ತೀಚೆಗಿನವರೆಗೂ ಅನೇಕ ಅಂತರರಾಷ್ಟ್ರೀಯ ವಿಜ್ಞಾನ ಚಟುವಟಿಕೆಗಳ ಮುಂದಾಳಾಗಿ ವಿಜ್ಞಾನ ಲೋಕವು ಗುರುತಿಸಿತ್ತು. ವಿಜ್ಞಾನವನ್ನು ಸ್ಥಳೀಯವಾಗಿ ಸೀಮಿತಗೊಳಿಸದೆ ಜಾಗತಿನ ಅನುಸಂಧಾನದ ಚಟುವಟಿಕೆಗಳಾಗಿ ನಿಭಾಯಿಸಲು ಬ್ಯಾರಿಶ್ ಹೆಸರುವಾಸಿ. ಅವರ ನೇತೃತ್ವದಲ್ಲೇ ಗುರುತ್ವದ ಅಲೆಗಳ ವಿಕ್ಷಣಾಲಯಗಳನ್ನು ಕಟ್ಟಿದ್ದು!   

ಪ್ರೊ. ಫ್ರೆಡ್ರಿಕ್ ಸ್ಯಾಂಗರ್

      ಫ್ರೆಡ್ರಿಕ್ ಸ್ಯಾಂಗರ್ ರಸಾಯನವಿಜ್ಞಾನದಲ್ಲಿ ಎರಡು ಬಾರಿ ನೊಬೆಲ್ ಪುರಸ್ಕೃತರು. ಮೊದಲ ಸಲ 1958ರಲ್ಲಿ ಇನ್‌ಸುಲಿನ್ ಕುರಿತ ಶೋಧಕ್ಕೆ ನಂತರ ೨೨ ವರ್ಷಗಳ ಕಳೆದೂ ಅದೇ ಶ್ರೇಷ್ಠತೆಯನ್ನು ಉಳಿಸಿಕೊಂಡು 1980ರಲ್ಲಿ ಮತ್ತೊಮ್ಮೆ ನೊಬೆಲ್!  “ನ್ಯೂಕ್ಲಿಯಿಕ್ ಆಮ್ಲಗಳ ಅನುಕ್ರಮಣಿಕೆಯ ರಚನೆ”ಯ ಶೋಧಕ್ಕೆ. ಸಹಜವಾಗಿ ಒಂದು ಸಾಧನೆಗೆ ಜೀವನ ಪೂರ್ತಿ ಬೀಗುವ ನಮ್ಮಂತಹವರಿಗೆ ದಶಕಗಳ ಕಾಲ ಶ್ರೇಷ್ಠತೆಯನ್ನು ಉಳಿಸಿ, ಬೆಳೆಸಿ ಮತ್ತೊಂದು ಜಾಗತಿಕ ಸಾಧನೆ ಮಾಡಲು ತಯಾರಿ ಎಂಥಹದ್ದಿರಬೇಕು. ಅದು ಬಿಡಿ ಸ್ಯಾಂಗರ್‌ರ ಸಂಶೋಧನಾ ಮಾರ್ಗದರ್ಶನದಲ್ಲಿ ಕಲಿತ ಇಬ್ಬರು ವಿದ್ಯಾರ್ಥಿಗಳೂ ವೈದ್ಯಕೀಯ/ಶರೀರಕ್ರಿಯಾವಿಜ್ಞಾನದಲ್ಲಿ ನೊಬೆಲ್ ಪಡೆದಿದ್ದಾರೆ. ವಿಜ್ಞಾನದ ಸತ್ಯದ ಶೋಧದ ಆಸಕ್ತಿಯನ್ನು ದಶಕಗಟ್ಟಲೇ ಕಾಪಾಡಿಕೊಂಡ ಮನಸ್ಸುಗಳು.

      ಭೌತವಿಜ್ಞಾನದಲ್ಲಿ ಜಾನ್ ಬರ್ಡೀನ್ ಕೂಡ ಎರಡು ಬಾರಿ ನೊಬೆಲ್ ಪಡೆದವರು. ಮೊದಲ ಬಾರಿ 1956ರಲ್ಲಿ ವಿದ್ಯುನ್ಮಾನ ಬಳಕೆಯ ಕ್ರಾಂತಿಯನ್ನು ತಂದ “ಟ್ರಾನ್ಸಿಸ್ಟರ್” ಶೋಧಕ್ಕೆ, ಎರಡನೆಯ ಬಾರಿ 1979ರಲ್ಲಿ ಸೂಪರ್ ಕಂಡಕ್ಟಿವಿಟಿಯ ಸಿದ್ಧಾಂತಗಳ ಶೋಧಕ್ಕೆ. ಬರ್ಡೀನ್ ತಮ್ಮ ನೊಬೆಲ್ ಬಹುಮಾನದ ಹೆಚ್ಚಿನ ಪಾಲನ್ನು ಸೂಪರ್‌ಕಂಡಕ್ಟಿವಿಟಿಯ ವಸ್ತುಗಳಲ್ಲಿ ವಿದ್ಯುತ್ ಕಾಂತೀಯ ಗುಣಗಳ ಮೂಲ ಶೋಧವನ್ನು ಮಾಡಿದ್ದ ಫ್ರಿಡ್ಜ್ ಲಂಡನ್ ಅವರ ಹೆಸರಿನಲ್ಲಿ ಉಪನ್ಯಾಸವನ್ನು ಆರಂಭಿಸಲು ಡ್ಯೂಕ್ ವಿಶ್ವವಿದ್ಯಾಲಯಕ್ಕೆ ದೇಣಿಗೆ ಕೊಟ್ಟರು. ಬರ್ಡೀನ್ ಮೊದಲ ಬಾರಿ ನೊಬೆಲ್ ಪಡೆದಾಗ ಮೂವರು ಮಕ್ಕಳಲ್ಲಿ ಒಬ್ಬರನ್ನು ಮಾತ್ರವೇ ಕರೆದುಕೊಂಡು ಹೋಗಿದ್ದರು. ಪುರಸ್ಕಾರ ಸಂದರ್ಭದಲ್ಲಿ ಸ್ವೀಡನ್ ರಾಜ ಕೇಳಿದ್ದಕ್ಕೆ ಮುಂದಿನ ಬಾರಿ ಎಲ್ಲರನ್ನೂ ಕರೆತರುವ ಮಾತಾಡಿದ್ದರು. ನಿಜಕ್ಕೂ ಎರಡನೆಯ ಬಾರಿ ಪುರಸ್ಕೃತರಾದ ಅವರು ಮಾತು ಉಳಿಸಿಕೊಂಡರು. 

      ಜಾನ್ ಬರ್ಡೀನ್‌ರಿಗೆ ಇಬ್ಬರು ಗಂಡು ಮಕ್ಕಳು ಇಬ್ಬರೂ ಭೌತವಿಜ್ಞಾನಿಗಳು. ಜೇಮ್ಸ್ ಮತ್ತು ವಿಲಿಯಂ- ಇವರಲ್ಲಿ ಜೇಮ್ಸ್ ವಿಖ್ಯಾತ ಭೌತವಿಜ್ಞಾನಿ ರಿಚರ್ಡ್ ಫೈನ್‌ಮನ್‌ರ ವಿದ್ಯಾರ್ಥಿ. ಒಬ್ಬಳು ಮಗಳು-ಎಲಿಜೆಬತ್, ಅಳಿಯ ಕೂಡ ಭೌತವಿಜ್ಞಾನಿ. ಅಪ್ಪ ಎರಡು ಬಾರಿ ನೊಬೆಲ್ ಪಡೆದು, ಮಗ ಮತ್ತೋರ್ವ ನೊಬೆಲ್ ಪುರಸ್ಕೃತ, ಭೌತವಿಜ್ಞಾನದ ಮಾಂತ್ರಿಕ ಫೈನ್‌ಮನ್‌ರ ಬಳಿ ಕಲಿಯಬೇಕೆಂದರೆ ಶ್ರೇಷ್ಠತೆಯ ಆಯ್ಕೆಯನ್ನು ಸಂಬಂಧಗಳ ಕಾರಣಕ್ಕೆ ಮಾಡಲಾಗದು. ಜಾನ್ ಬರ್ಡೀನ್‌ರ “ಟ್ರಾನ್ಸಿಸ್ಟರ್” ಆಗಲಿ ಅಥವಾ ಅವರ ಇನ್ನೊಂದು ಶೋಧದಿಂದ ಹುಟ್ಟಿದ ಎಂಆರ್‌ಐ-ಸ್ಕ್ಯಾನ್‌ ಉಪಕರಣವಾಗಲಿ ಇಂದು ಮನುಕುಲದ ಸೇವೆಯನ್ನು ನಿರ್ವಹಿಸುವ ಬಗೆಗೆ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ವಿಜ್ಞಾನ ಲೋಕದ ಶ್ರೇಷ್ಠತೆಯ ಆಯ್ಕೆಯು ತೀರಾ ವೈಯಕ್ತಿಕ ಸತ್ವವನ್ನು ಅವಲಂಬಿಸಿರಲೇ ಬೇಕು. ರಾಜಕೀಯ ಕಾರಣಗಳಂತೆ ಬೆಂಬಲಿಕ್ಕಿಲ್ಲಿ ಅವಕಾಶವೇ ಇಲ್ಲ.  

ವಿಜ್ಞಾನದಲ್ಲಿ ಆಪ್ತತೆಯ ಪ್ರಶ್ನೆಗಳು

      ವಿಜ್ಞಾನವು ಆಪ್ತತೆಯಿಂದ ದೂರವಾದುದು. ಅದರ ನಿಗಧಿತವಾದ ವಸ್ತುನಿಷ್ಠ ವಿವರಗಳ ಹಂಬಲವು ಸೌಂದರ್ಯದ ಅಂದಗೆಡಿಸುತ್ತದೆ, ಎನ್ನುವ ಅನೇಕ ಬಗೆಯ ಆರೋಪಗಳನ್ನು ಕೇಳಿರಬಹುದು. ಈ ಆಪ್ತತೆಯ ಕುರಿತಂತಹಾ ಮಾತುಗಳು ಸಾಹಿತ್ಯಿಕ ಸಂದರ್ಭದ ಚರ್ಚೆಯವು. ಭಾವ ಪರವಶವಾದ ಹಿನ್ನೆಲೆಯವು. ಇವುಗಳೇನೂ ಇಂದು, ನಿನ್ನೆಯವಲ್ಲ! ಸರ್‌ ಐಸ್ಯಾಕ್‌ ನ್ಯೂಟನ್ ಕಾಮನಬಿಲ್ಲಿನ ವಿವರಗಳ ವೈಜ್ಞಾನಿಕಥೆಯನ್ನು ಬಿಡಿಸಿ ಅದರ ಸೌಂದರ್ಯವನ್ನು ಹಾಳು ಮಾಡಿದ ಎಂಬುದಾಗಿ ಕವಿ ಜಾನ್ ಕೀಟ್ಸ್ ದೂರಿದ್ದರು. ಹಾಗಾಗಿ ಈ ವಿಜ್ಞಾನದ ಬಗೆಗಿನ ಆಪ್ತತೆಯ ಆರೋಪಗಳು ಕನ್ನಡ ಇಲ್ಲವೆ ಇಂಗ್ಲೀಶ್ ಅಧ್ಯಾಪಕರ ಭಾಷಾ ಆಸಕ್ತಿಯಲ್ಲಿನವು. ನಿಜಕ್ಕೂ ವಿಜ್ಞಾನವು ಸೌಂದರ್ಯವನ್ನು ಹಾಳು ಮಾಡಿ ಅನುಭವಿಸುವ ಗುಣವನ್ನು ಕಲಿಸುತ್ತದೆಯೇ? ಅಥವಾ ಒಳಹೊಕ್ಕು ಅನುಭವಿಸುವ ರುಚಿಯನ್ನು ಅರಿಯದ ಸಾಹಿತ್ಯಿಕ ಗ್ರಹಿಕೆಗಳು ಹಾಗಿವೆಯೇ? ಇವು ಸಾಮಾನ್ಯರಿಗೆ ಕಾಡಬಹುದಾದ ಪ್ರಶ್ನೆಗಳು.

      ವಿಜ್ಞಾನವು ಸತ್ಯದ ಸಂಪೂರ್ಣ ಹುಡುಕಾಟದ ಅರಿವನ್ನು ಹಂಬಲಿಸುತ್ತದೆ. ಹಾಗಂತ ನಿರ್ಲಿಪ್ತ ದೃಶ್ಯವೊಂದರ ಗ್ರಹಿಕೆಯನ್ನೇನೂ ಅದು ದ್ವೇಷಿಸುವುದಿಲ್ಲ. ಇವುಗಳ ಹಿನ್ನೆಲೆಯಲ್ಲಿ ಆಪ್ತತೆಯನ್ನು ನೋಡಬೇಕಾಗುತ್ತದೆ. ಆಪ್ತತೆಯನ್ನು ಎರಡು ಬಗೆಯಲ್ಲಿ ನೋಡಬಹುದು. ಮೊದಲನೆಯದಾಗಿ ಅದು ಸಂಬಂಧಗಳ ಮೂಲಕ ದಕ್ಕುವ ಬಗೆಯದು. ಎರಡನೆಯದು ಅದರ ಸಾಪೇಕ್ಷವಾದ ಸಂಕೀರ್ಣತೆಯದು! ಸಂಬಂಧದ ಹಿನ್ನೆಲೆಯಲ್ಲಿ ಅದೆಷ್ಟು ಹತ್ತಿರದ ಸಂಗತಿಗಳು, ವ್ಯಕ್ತಿಗಳು, ವಿವರಗಳು ಎನ್ನುವುದರ ಮೇಲೆ ಆಪ್ತತೆಯ ಗ್ರಹಿಕೆಯಾಗುತ್ತದೆ. ಒಂದು ಬಗೆಯ ಸಂಬಂಧದಲ್ಲಿ ಆಪ್ತತೆಯು ಹೆಚ್ಚಿರುತ್ತದೆ. ಸಂಬಂಧವಿರದ ಸಂದರ್ಭದಲ್ಲಿ ಆಪ್ತತೆಯು ಕಾಣದು. ಹಾಗೇಯೆ ಅದು ಎಷ್ಟು ಆಪ್ತ? ಎಲ್ಲರೂ ಒಂದೇ ಬಗೆಯ ಆಪ್ತರೇ? ಕೆಲವರು ಕೆಲವರಿಗೆ ಆಪ್ತರಿರಬಹುದು. ಕೆಲವರು ಹೆಚ್ಚು ಆಪ್ತ, ಕೆಲವರು ಕಡಿಮೆ ಆಪ್ತರೂ ಇದ್ದಾರು. ಹಾಗಾಗಿ ಅದು ಸಾಪೇಕ್ಷವೂ ಹೌದು. ಈ ಸಾಪೇಕ್ಷವು ಸಂಕೀರ್ಣವೂ ಕೂಡ ಆಗಿದ್ದಿರಲು ಸಾಧ್ಯತೆಗಳಿವೆ.    

      ಜೀವಿವಿಜ್ಞಾನವನ್ನು ಕೇವಲ ಹೈಸ್ಕೂಲಿನಲ್ಲಿ ಮಾತ್ರವೇ ಓದಿದ, ಈಗ ಕಂಪ್ಯೂಟರ್ ಇಂಜನಿಯರಿಂಗ್‌ ಕೊನೆಯ ಹಂತದ ಕಲಿಕೆಯ ವಿದ್ಯಾರ್ಥಿಯ ಜೊತೆ ಒಮ್ಮೆ ಹೀಗೇ ಮಾತಾಡುತ್ತಿದ್ದೆ. ಬೇಸಿಗೆಯ ಹಿತವಾದ ವಾತಾವರಣಕ್ಕೆ ಸೊಳ್ಳೆಗಳೂ ಹೆಚ್ಚಿದ್ದವು. ಗುಯ್‌ಗುಟ್ಟುತ್ತಾ ಮೈಮೇಲೆ ಕುಳಿತ ಕ್ಷಣಗಳಿಗೇನೂ ಕಡಿಮೆ ಇರಲಿಲ್ಲ. ಹಾಗಾದಾಗ ಸಹಜವಾಗಿ ಕುಳಿತ ಸೊಳ್ಳೆಯು ಇರಬಹುದಾದ ಮೈ-ಕೈಯ ಮೇಲೆ ಹೊಡೆದು ಅದರ ಸಾವಿನಲ್ಲಿ ನಮ್ಮ ಆನಂದವನ್ನು ಅನುಭವಿಸುತ್ತೇವೆ. ಹಾಗೇ ಮಾಡುವುದನ್ನು ಅವನು ಆಕ್ಷೇಪಿಸಿ ವಿವರಿಸಿದ. ಇಲ್ಲಿ ಆಸಿಡ್ ನೊಣಗಳೆಂಬ ಕೀಟಗಳಿವೆ ಅವೂ ಹಾರುತ್ತಾ ಹೀಗೆ ಕೂರುತ್ತವೆ. ಕೂತು ಅವೇನೂ ಕಚ್ಚದಿದ್ದರೂ ಕಚಗುಳಿಯಂತಹಾ ಅನುಭವಕ್ಕೆ ಹೊಡೆದು, ಕೈಗೆ ಸಿಕ್ಕ ಕೀಟವನ್ನು ಉಜ್ಜುತ್ತೇವೆ. ಆಗ ಕೀಟ ಅಪ್ಪಚ್ಚಿಯಾಗಿ ಮೈಯ ಮೇಲೆ ಕೈಗೂ ಒಂದಷ್ಟು ರಸವನ್ನು ಹಚ್ಚುತ್ತದೆ. ಆ ರಸದಲ್ಲಿ ಪೆಡಿರಿನ್ ಅನ್ನುವ ಒಂದು ಬಗೆಯ ಪ್ರೊಟೀನು ಇದೆ. ಈ ಪ್ರೊಟೀನು ನಮ್ಮ ಚರ್ಮಕ್ಕೆ ಅಲರ್ಜಿಯನ್ನು ಉಂಟುಮಾಡುತ್ತದೆ ಎಂದೂ ಹೇಳಿದ.

ಕಚ್ಚದಿದ್ದರೂ ಕೀಟದೇಹದ ರಸದಲ್ಲಿನ ಈ ರಾಸಾಯನಿಕಕ್ಕೆ ಕ್ಷಣ ಬೆಚ್ಚಿದೆ. ಮುಂದುವರೆದು ಹೇಳಿದ ಆ ಕೀಟ ನಮ್ಮ ಕಪ್ಪುಗೊದ್ದದ (ದಪ್ಪ-ಇರುವೆ) ಗಾತ್ರವನ್ನು ಹೊಂದಿದ್ದು, ಅದರ ದೇಹವು ಕಪ್ಪು-ಕೆಂಪು ಮಿಶ್ರಿತ ಕಂದು ಬಣ್ಣದ ಮುತ್ತು ಪೋಣಿಸಿದಂತೆ ಕಾಣುತ್ತದೆ.  ಇರುವೆ ಜಾತಿಯ ಗೊದ್ದ ಹಾರುವುದಿಲ್ಲ. ಇದು ಹಾರುತ್ತದೆ, ಮೈಮೇಲೆ ಕುಳಿತಾಗ ಉಜ್ಜದೆ ಹಾರಿಸುವುದರಿಂದ ಅಲರ್ಜಿ ತಪ್ಪುತ್ತದೆ, ಎಂದು ಕೀಟವೈಜ್ಞಾನಿಕ ವಿವರಗಳ ಜೊತೆ ಅದರ ಮೈರಸದ -ಜೀವಿರಸಾಯನದ ವೈದ್ಯಕೀಯ ಪ್ರಯೋಗಾಲಯದ ವೀಕ್ಞಣಾನುಭವದಂತೆ- ವಿವರಗಳ ಹೆಣೆದಿದ್ದ. ಎರಡು-ಮೂರು ವರ್ಷ ಕೀಟವಿಜ್ಞಾನದ ಓದು ನನ್ನದಾಗಿದ್ದರೂ ಹೊಸ ಅನುಭದ ಪಠ್ಯ ಸಂಜೆಯ ಮಾತಿನಲ್ಲಿ ಚಹಾದ ಮಧ್ಯೆ ಸಿಕ್ಕಿತ್ತು. ಕಂಪ್ಯೂಟರ್ ಇಂಜನಿಯರಿಂಗ್ ವಿದ್ಯಾರ್ಥಿಯಲ್ಲಿ ಕೀಟವಿಜ್ಞಾನದ ಬೆರಗು ಜೀವಿವಿಜ್ಞಾನದ ಆಪ್ತತೆಯ ದರ್ಶನ ಮಾಡಿಸಿತ್ತು.

      ನೀವು ದಾಸವಾಳದ ಹೂವನ್ನು ನೊಡಿಯೇ ಇರುತ್ತೀರಿ. ಅದರ ಬಣ್ಣ, ಗಿಡದಲ್ಲಿ ಇಳಿಬಿದ್ದ ನೀಳನೋಟಕ್ಕೆ ಖುಷಿಗೊಂಡಿರುತ್ತೀರಿ. ಅದರ ಜೊತೆಗೆ ನಿಮಗೆ ಹೂವಿನ ಒಳಹೊಕ್ಕು ಅನುಭವಿಸಲು ಸಾಧ್ಯವಾದರೆ, ಬೇರೊಂದು ಬೆರಗಿನ ರಮ್ಯಲೋಕ ತೆರೆಯುತ್ತದೆ. ಮೊಗ್ಗಿನಿಂದ ಹೂವಿನವರೆಗೂ ಕೈಗೆತ್ತಿಕೊಂಡು ನೋಡಿದರೆ, ಅದರ ಹೂದಳಗಳು ಒಂದರ ಮೇಲೊಂದು ಜೋಡಿಸಿದ ಹಾಗೆ ಇರುವುದು ಕಾಣುತ್ತದೆ. ಪ್ರತೀ ಹೂದಳದ ಒಂದು ಅಂಚು ಕೆಳಗೂ ಮತ್ತೊಂದು ಮೇಲಿರುವಂತಹಾ ಜೋಡಣೆಯೂ, ಹೂವಿನ ಮಧ್ಯೆ ತುದಿಯವರೆಗೂ ಹಾಯ್ದ ನಳಿಕೆಯು ತುದಿಯಲ್ಲಿ ಕಿರೀಟ ಕಟ್ಟಿಕೊಂಡ ಹಾಗೆ ಹೂವಿನ ಗಂಡು-ಹೆಣ್ಣಿನ ಭಾಗಗಳು ಕಾಣುತ್ತವೆ. ಮತ್ತೂ ತಿಳಿಯುವುದಾದರೆ, ಮೇಲಿಂದ ಬಿದ್ದ ಪರಾಗಗಳು ಹೆಣ್ಣುಭಾಗ-ಶಲಾಕಾಗ್ರವನ್ನು ತಲುಪಿ ನಳಿಕೆಯ ಒಳಗೆ ಹಾಯ್ದು ಕಾಯಿಕಟ್ಟುವ ಸಂಗತಿಯೂ ತಿಳಿದೀತು. ಈ ಸಂಬಂಧಗಳ ಅರಿವಿನಲ್ಲಿ ಸುಮ್ಮನೆ ಕಾಣುವ ಆರಾಧನೆಯ ಅಂದಕ್ಕಿಂತಾ ಹೆಚ್ಚಿನ ಸೌಂದರ್ಯವಿದೆಯಲ್ಲವೆ?

      ಇಂಜನಿಯರಿಂಗ್ ವಿದ್ಯಾರ್ಥಿಗೆ ಕಂಪ್ಯೂಟರ್ ಜೊತೆಗೆ ಆಳದ ತಿಳಿವಳಿಕೆಯ ಬೆರಗೇ ಇರದಿದ್ದರೆ  ಕೀಟಗಳ ರಸಾಯನಿಕಥೆಯು ಹೇಗೆ ತಿಳಿದೀತು? ವಿಜ್ಞಾನದಲ್ಲಿ ಸಂರಚನೆಯ ನಿರ್ಮಿತಿಯ ಸಂಬಂಧಗಳೂ, ಅದರ ಆಳದ ಅರಿವಿನಿಂದ ತಿಳಿಯುವ ಬೆರಗೂ ಬೇಕು. ವಿಜ್ಞಾನದಲ್ಲಿ ಆರಾಧನೆಯ ಪ್ರಶ್ನೆಗಳಷ್ಟೇ ಇರುವುದಿಲ್ಲ, ಅನುಭವದ ಉತ್ತರಗಳೂ ಇರುತ್ತವೆ. 

      ಮುಂದಿನವಾರದ ಅಕ್ಟೋಬರ್‌ 3ರಿಂದ 10ನೆಯ ತಾರೀಖಿನವರೆಗೂ ನೊಬೆಲ್‌ ಬಹುಮಾನಗಳ ಪ್ರಕಟಣೆಯಾಗುತ್ತದೆ. ಪ್ರತೀವರ್ಷದಂತೆ ಈ ವರ್ಷವೂ ಆಯಾ ದಿನವೇ ಪ್ರತೀ ಪುರಸ್ಕಾರದ ಶ್ರೇಷ್ಠತೆಯ ವೈಜ್ಞಾನಿಕ ವಿವರಗಳ ಜೊತೆಗೆ ಆಯಾ ಕೊಡುಗೆಯ ಮಾನವತೆಯ ಆಪ್ತತೆಯ ವಿಚಾರಗಳನ್ನು ಇದೇ ಪುಟಗಳಲ್ಲಿ ತಿಳಿಯಬಹುದು.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌  

Leave a Reply