ವಿಜ್ಞಾನದ ಅನ್ವೇಷಣೆಗಳು ನಮ್ಮ ಊಹೆಗಳನ್ನೂ ಮೀರಿ ರೂಪಿಸಬಹುದಾದ ಸಾಧ್ಯತೆಗಳನ್ನು, ರಚನೆಗಳನ್ನು, ಉತ್ಪನ್ನಗಳನ್ನು ಕೊಡುತ್ತಿರುವುದನ್ನು ನೊಬೆಲ್ ಪುರಸ್ಕೃತರ ಸಂಶೋಧನೆಗಳು ಸಾಭೀತು ಪಡಿಸುತ್ತಲೇ ಬಂದಿವೆ. ಕಾಣುವ ಜಗತ್ತಿನ ನಿರ್ಮಿತಿಗಳನ್ನು ಊಹಿಸುವುದೂ ಸುಲಭ ಮತ್ತು ಅವುಗಳ ರಚನೆಗಳನ್ನು ಅರ್ಥೈಸುವುದೂ ಸುಲಭ. ಆದರೆ ಊಹಾತ್ಮಕ ಅಥವಾ ನಮಗೆ ಬೇಕಾದ ಹಾಗೆ ಇರಬಹುದಾದ ನಿರ್ಮಿತಿಗಳ ಸಂರಚನೆಗಳನ್ನು ಸಾಧ್ಯಗೊಳಿಸುವುದನ್ನು ಈ ಹೊಸ ಶತಮಾನದ ಆವಿಷ್ಕಾರಗಳು ನಿರಂತರವಾಗಿ ಒಂದರ ಹಿಂದೆ ಒಂದರಂತೆ ಕೊಡುತ್ತಲೇ ಬಂದಿವೆ.
ಕಳೆದ ಎರಡು-ಮೂರು ದಶಕಗಳಲ್ಲಿ ನಮ್ಮ ಸಮಾಜವೂ ಸಹಾ ಮನೆಗಳನ್ನು ಕಟ್ಟುವ ನಿರಂತರತೆಯಲ್ಲಿ ಸಾಗಿದೆ. ಒಂದೇ ಮನೆಯ ಕುಟುಂಬದವರು ಈಗ ಒಬ್ಬೊಬ್ಬ ಮಕ್ಕಳೂ ಒಂದೊಂದರಂತೆ ಮನೆಗಳ ನಿರ್ಮಿತಿಯಲ್ಲಿ ತೊಡಗಿರುವುದು ಕಾಣುತ್ತಿದ್ದೇವೆ. ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಗಳೂ ಒಂದೇ ತೆರನಾಗಿದ್ದರೂ ಕಟ್ಟುವ ಮನೆಗಳ ಒಳಾಂಗಣವು ಬಗೆ ಬಗೆಯ ಅನುಕೂಲಗಳನ್ನು ಪೂರೈಸುವಲ್ಲಿ ನಾವೀನ್ಯತೆಯ ಕಡೆಗೆ ಸಾಗಿವೆ. ಮನೆ ಕಟ್ಟುವಾಗ ಮೊದಲು ಊಹಿಸುವ ಕಲ್ಪನೆಯನ್ನು ಒಂದು ಫ್ರೇಮ್ವರ್ಕ್ ಅಥವಾ ಚೌಕಟ್ಟುಗಳಲ್ಲಿ ತಯಾರಿಸುವಂತೆ ರಾಸಾಯನಿಕಗಳನ್ನು ಕಟ್ಟುವ ವೈಜ್ಞಾನಿಕ ಉತ್ಪನ್ನಗಳನ್ನು ನೀಡುವಲ್ಲಿ ರಸಾಯನ ವಿಜ್ಞಾನವು ಕ್ರಾಂತಿಕಾರಕ ಹೆಜ್ಕೆಯನ್ನು ಇಟ್ಟಿದೆ. ಅದರಿಂದಲೇ ಸ್ಮಾರ್ಟ್ ಮಟೆರಿಯಲ್ಗಳು ನಮ್ಮ ಮುಂದಿನ ಜಗತ್ತನ್ನು ಆಳಲಿವೆ.
ನಾವು ಊಹಿಸಲೂ ಆಗದಂತಹಾ ಉತ್ಪನ್ನಗಳಿಗೆ ರಸಾಯನ ವಿಜ್ಞಾನವು ಅವಕಾಶ ಕೊಟ್ಟಿದೆ. ಮರುಭೂಮಿಯಲ್ಲಿ ಗಾಳಿಯಲ್ಲಿನ ತೇವಾಂಶವನ್ನು ಹಿಡಿದು ಕುಡಿಯುವ ನೀರಿನ ಬಾಟಲಿಯನ್ನು ತುಂಬುವ ಕಾಲವೂ, ಹಾನಿಕಾರಕ ರಾಸಾಯನಿಕಗಳನ್ನು ಹಿಡಿದು ಚೀಲದೊಳಗೆ ತುಂಬಿಕೊಂಡು ಬರುವಂತೆ, ರಾಸಾಯನಿಕ ಮಾಲೆಕ್ಯುಲ್ಗಳನ್ನು ತಯಾರಿಸುವ ಕಾಲ ಮುಂದಿನದಾಗಲಿದೆ. ಇದು ಅಚ್ಚರಿಯ ಅಥವಾ ಅತೀ ಕುತೂಹಲದ ಸಾಧ್ಯತೆಯಾದರೂ ಇಂತಹವಕ್ಕೆ ಅವಕಾಶ ಇದೆ ಎಂಬುದನ್ನು ಈ ವರ್ಷದ ರಸಾಯನಿಕ ವಿಜ್ಞಾನದ ನೊಬೆಲ್ ಪುರಸ್ಕೃತ ಸಂಶೋಧನೆಗಳು ಸಾಬೀತು ಪಡಿಸಿವೆ. ಇದರ ಅಭಿವೃದ್ಧಿಯ ಕಥನವು ಹಲವು ದಶಕಗಳ ಕುತೂಹಲದ ಅನ್ವೇಷಣೆಯ ಪ್ರಯೋಗಗಳನ್ನು ದಾಟಿ ಉತ್ಪನ್ನಗಳತ್ತ ನಡೆದಿದೆ. ಇವೆಲ್ಲವೂ ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ಎಂಬ ಹೆಸರಿನಲ್ಲಿ ಕರೆಯಲಾಗಿದೆ ಹೆಸರೇನೋ ಎರಡೇ ಪದಗಳ ಚೌಕಟ್ಟು ಸರಿ, ಅದರ ಸಾಧ್ಯತೆಯ ರಸಾಯನಿಕ ಪ್ರಯೋಗಗಳ ಪಯಣ ಮಾತ್ರ ನಾಲ್ಕು ದಶಕಗಳನ್ನು ಸವೆಸಿದೆ. ಎಲ್ಲವನ್ನೂ ಮುಂದಿನ ವಿವರಗಳಲ್ಲಿ ನೋಡೋಣ.
ಈ ವರ್ಷ 2025 ರ ರಸಾಯನ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ಎಂಬ ವಿಶೇಷ ರಸಾಯನಿಕ ಸಂರಚನೆಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ನೀಡಲಾಗಿದೆ. ಮೆಟಲ್-ಆರ್ಗಾನಿಕ್ ಫ್ರೇಂವರ್ಕ್ ಗಳನ್ನು ರಾಸಾಯನಿಕಗಳಲ್ಲಿ ಅಭಿವೃದ್ಧಿ ಪಡಿಸಿದ್ದಕ್ಕಾಗಿ ರಿಚರ್ಡ್ ರಾಬ್ಸನ್ (Richard Robson) ಸಸುಮು ಕಿಟಗವಾ (Susumu Kitagawa) ಒಮರ್ ಯಾಗಿ (Omar Yaghi) ಎಂಬ ಮೂವರು ವಿಜ್ಞಾನಿಗಳಿಗೆ ಈ ವರ್ಷದ ಬಹುಮಾನವನ್ನು ಹಂಚಲಾಗಿದೆ.
2025 ರ ರಸಾಯನ ವಿಜ್ಞಾನದ ನೊಬೆಲ್ ಪ್ರಶಸ್ತಿ ಪುರಸ್ಕೃತರು ಅನಿಲಗಳು ಮತ್ತು ಇತರ ರಾಸಾಯನಿಕಗಳು ಹರಿಯಬಹುದಾದ ಖಾಲಿ ಜಾಗಗಳನ್ನು ಹೊಂದಿರುವ ಆಣ್ವಿಕ (ಮಾಲೆಕ್ಯುಲಾರ್) ರಚನೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ರಚನೆಗಳು, ಲೋಹ-ಸಾವಯವ ಚೌಕಟ್ಟುಗಳು. ಈ ಸಂರಚನೆಯನ್ನು ಹೊಂದಿರುವ ರಾಸಯನಿಕಗಳು ತಮ್ಮ ಅಣುಗಳ ನಡುವೆ ಒದಗಿಸುವ ಸ್ಥಳಗಳನ್ನು ಇತರೇ ಅಯಾನುಗಳ ಅಥವಾ ಅಣುಗಳನ್ನು ಸೆರೆಹಿಡಿಯುವಂತೆ ಬಳಸಬಹುದು. ಅಥವಾ ಸಾಂಪ್ರದಾಯಿಕ ರಸಾಯನ ವೈಜ್ಞಾನಿಕ ನಿಯಮಗಳಂತೆ ಈ ಜಾಗಗಳನ್ನು ಅಯಾನುಗಳ ವಿನಿಮಯಕ್ಕೆ ಅಥವಾ ಮರುಭೂಮಿಯ ಗಾಳಿಯಿಂದ ನೀರನ್ನು ಕೊಯ್ಲು ಮಾಡಲು, ಇಂಗಾಲದ ಡೈಆಕ್ಸೈಡ್ ಅನ್ನು ಸೆರೆಹಿಡಿಯಲು, ವಿಷಕಾರಿ ಅನಿಲಗಳನ್ನು ಸಂಗ್ರಹಿಸಲು ಅಥವಾ ರಾಸಾಯನಿಕ ಪ್ರತಿಕ್ರಿಯೆಗಳನ್ನು ವೇಗಗೊಳಿಸಲು ಬಳಸಬಹುದು. ಇದೊಂದು ಕ್ರಾಂತಿಕಾರಕ ಅನ್ವೇಷಣೆಯಾಗಿದ್ದು ರಸಾಯನ ವಿಜ್ಞಾನದಲ್ಲಿ ಹೊಸ ಸಂರಚನೆಯ ವಸ್ತುಗಳ ಆವಿಷ್ಕಾರಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಒಟ್ಟಾರೆಯ ವಿವರಗಳನ್ನು ಅರಿಯಲು ಲೋಹ-ಸಾವಯವ ಚೌಕಟ್ಟುಗಳು ಎಂದರೇನು? ಅವುಗಳನ್ನು ರೂಪಿಸುವುದಾದರೂ ಹೇಗೆ? ಜೊತೆಗೆ ಅವುಗಳ ಪರಿಕಲ್ಪನೆಯು ಸಾಂಪ್ರದಾಯಿಕ ರಸಾಯನಿಕಗಳಿಗಿಂತಾ ಭಿನ್ನ ಹೇಗೆ? ಇತ್ಯಾದಿಗಳ ಒಟ್ಟಾರೆಯ ತಿಳಿವಳಿಕೆಯಲ್ಲಿ ಈ ವರ್ಷದ ನೊಬೆಲ್ ಪುರಸ್ಕಾರದ ಸಂಶೋಧನೆಗಳು ಅನಾವರಣವಾಗುತ್ತವೆ.
ಒಂದೇ ಮಾತಿನಲ್ಲಿ ಚಿಕ್ಕದಾಗಿ ಆರಂಭಿಸಬೇಕು ಅಂದರೆ, ಬೇಕಾದ ಹಾಗೆ ಒಳಾಂಗಣ ಕೋಣೆಗಳ ಮನೆ ಕಟ್ಟಿಸುವಂತೆ ರಾಸಾಯನಿಕ ರಚನೆಗಳನ್ನು ಅಣುಗಳಿಂದ ಕಟ್ಟಿ , ಮಧ್ಯೆ ಕೋಣೆಗಳಂತಿರುವ ಜಾಗಗಳನ್ನು ನಮಗಿಷ್ಟವಾದ ಅಣುಗಳ ರಾಸಾಯನಿಕ ಸಂಯುಕ್ತಗಳಿಗೆ ಬಳಸಿಕೊಳ್ಳುವುದು. ಅವು ಗೆಸ್ಟ್ ತರಹ! ಒಳಗೆ ಬರಬಹುದು-ಹೊರಗೆ ಹೋಗಬಹುದು. ಇದರ ಪರಿಕಲ್ಪನೆಯ ಕಥನದ ಹುಟ್ಟು 70ರ ದಶಕಕ್ಕೆ ಕರೆದೊಯ್ಯುತ್ತದೆ.
ರಿಚರ್ಡ್ ರಾಬ್ಸನ್ ಮೆಲ್ಬೊರ್ನ್ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನವನ್ನು ಪಾಠ ಮಾಡುವಾಗ, ಮಕ್ಕಳಿಗೆ ರಸಾಯನಿಕ ರಚನೆಗಳನ್ನು ಕಲಿಸಲು ಅಣುಗಳ ಅಯಾನುಗಳ ಮಾದರಿಗಳನ್ನು ಜೋಡಿಸಲು ಆರಂಭಿಸಿದರಂತೆ. ಮರದ ಗೋಲಿ ಅಥವಾ ಚೆಂಡಿನಂತಹಾ ಅಣುಗಳ/ಪರಮಾಣುಗಳ ಮಾದರಿಗಳನ್ನು ಬಂಧಗಳಿಂದ ಜೋಡಿಸಲು ಗೊತ್ತಾದ ಜಾಗದಲ್ಲಿ ರಂದ್ರ ಮಾಡುವಾಗ ಸಾಕಷ್ಟು ಶ್ರಮ-ಆಲೋಚನೆಗಳನ್ನು ವ್ಯಯಿಸಿದರಂತೆ! ಉದಾಹರಣೆಗೆ ಇಂಗಾಲ ಜಲಜನಕ, ಸಾರಜನಕ ಹೀಗೆ ಇವನ್ನೆಲ್ಲಾ ಹೇಗೆ ಬೇಕೋ ಜೋಡಿಸಿ ಸಂಯುಕ್ತಗಳನ್ನು ಪಡೆಯಲು ಸರಿಯಾದ ಮಾರ್ಗವನ್ನು ಅನುಸರಿಸಬೇಕಲ್ಲವೇ? ಜೊತೆಗೆ ಪ್ರತೀ ವರ್ಷವೂ ಹೊಸ ಹೊಸ ವಿಧ್ಯಾರ್ಥಿಗಳಿಗೆ ಹೊಸ ರೀತಿಯ ಉತ್ಪನ್ನಗಳನ್ನೂ ಹೊಸ ಕುತೂಹಲಗಳಿಗೆ ಕಾರಣಗಳನ್ನು ಕೊಡಬೇಕಿತ್ತು.

ದಶಕಗಳನ್ನು ಸವೆಸಿದ ರಿಚರ್ಡ್ ಇದನ್ನೇ ನಾವೀನ್ಯ ರಾಸಾಯನಿಕಗಳಿಗೆ ಬಳಸಬಹುದೇ ಎಂಬಂತೆ ಆಲೋಚಿಸಿ, ಪಿರಮಿಡ್ ಆಕಾರದ ರಚನೆಯ ಡೈಮಂಡ್-ವಜ್ರವನ್ನು ಆಧರಿಸಿ ಹೊಸ ರಾಸಾಯನಿಕಗಳಿಗೆ ಆಲೋಚಿಸಲು ಪ್ರಾರಂಭಿಸಿದರು. ಹೊಸ ರಾಸಯನಿಕವು ತಾಮ್ರ ಮತ್ತು ನೈಟ್ರೈಟುಗಳ ಬಳಕೆಯ ನಿರ್ಮಿತಿಯಾಗಿತ್ತು. ಇದೇ ಹೊಸ ಕ್ರಾಂತಿಕಾರಿ ಅನ್ವೇಷಣೆಗೆ ದಾರಿಯನ್ನು ಕೊಟ್ಟ ಮೊಟ್ಟ ಮೊದಲ ನಿರ್ಮಿತಿ. ಡೈಮಂಡಿನಲ್ಲಾದರೆ ನಾಲ್ಕು ಇಂಗಾಲದ ಪರಮಾಣುಗಳು ಮಧ್ಯ ಏನೂ ಜಾಗವನ್ನು ಬಿಡದೆ ಪಿರಮಿಡ್ಡಿನಂತೆ ಕುಳಿತಿದ್ದವು. ತಾಮ್ರ-ನೈಟ್ರೈಟಿನಲ್ಲಿ ಮಧ್ಯೆ ಜಾಗ (Cavity) ಅಥವಾ ರಂದ್ರವುಳ ರಸಾಯನಿಕವು ದೊರೆತಿತ್ತು. ಇದೇ ಜಾಡನ್ನು ಹಿಡಿದ ರಿಚರ್ಡ್ 1989ರಲ್ಲಿ ಅಮೆರಿಕನ್ ರಾಸಾಯನಿಕ ಸೊಸೈಟಿಯ ಪತ್ರಿಕೆಯಲ್ಲಿ (Journal of the American Chemical Society) ನವೀನ ರಾಸಾಯನಿಕ ಸೃಷ್ಟಿ (Innovative Chemical Creation)ಯ ಕುರಿತು ಸಂಶೋಧನಾತ್ಮಕ ಪ್ರಬಂಧವನ್ನು ಪ್ರಕಟಿಸಿದರು. ಸಾಲದಕ್ಕೆ ಇದೊಂದು ಹೊಸ ಹೊಸ ಸೃಷ್ಟಿಗೆ ಕಾರಣವಾಗಬಲ್ಲದೆಂದೂ ಆ ಹೊಸ ಸೃಷ್ಟಿಗಳು ಹಿಂದೆಂದೂ ಕಂಡರಿಯದ ಉಪಯೋಗಗಳನ್ನು ತರಬಹುದೆಂಬ ಭವಿಷ್ಯದ ಸಾಧ್ಯತೆಗಳನ್ನು ಪ್ರಸ್ತಾಪಿಸಿದ್ದರು. ಮರು ವರ್ಷವೇ ರಿಚರ್ಡ್ ರಾಬ್ಸನ್ ಹೊಸ ಹೊಸ ವಿಚಿತ್ರ ರಾಸಾಯನಿಕಗಳನ್ನು ರಚನೆಗಳ ವಿಶೇಷಗಳೊಂದಿಗೆ ಪ್ರಕಟಿಸಲು ಆರಂಭಿಸಿದರು.
ಒಂದು ರಾಸಾಯನಿಕ ಸಂರಚನೆಯು ಬಾಡಿಗೆ ಮನೆ/ಹೊಟೆಲಿನಂತೆ ವಿವಿಧ ಅಯಾನುಗಳ ವರ್ಗೀಕರಣಕ್ಕೂ ಬಳಸುವ ಅಥವಾ ವಿವಿಧ ಅಯಾನುಗಳನ್ನು ಅತಿಥಿಗಳಂತೆ ಜಾಗ ಕೊಡುವ ಉತ್ಪನ್ನಗಳನ್ನು ತಯಾರಿಕಾ ಮಾದರಿಗಳನ್ನು ಕೊಟ್ಟರು. ಈ ಮಾದರಿಗಳನ್ನು ಒಂದು ಪರ್ಫೆಕ್ಟ್ ಚೌಕಟ್ಟಾಗಿ ರೂಪಿಸಿ ಅವುಗಳನ್ನು ತಡೆದುಕೊಳ್ಳುವಂತೆಯೂ ನೋಡಿಕೊಂಡರೆ ಆಗಬಹುದಾದ ಲಾಭಗಳ ಬಗೆಗೆ ರಸಾಯನ ವಿಜ್ಞಾನವು ನೋಡಿತು. ರಾಬ್ಸನ್ ಮಾದರಿಯನ್ನು ಕೊಟ್ಟಿದ್ದರು, ಅದಕ್ಕೆ ಶಾಶ್ವತತೆಯ ಭದ್ರತೆಯನ್ನು ಕೊಡಲು ಸಸುಮು ಕಿಟಗವಾ ಮತ್ತು ಒಮರ್ ಯಾಗಿ (Susumu Kitagawa and Omar Yaghi) ಅವರ ಸಂಶೋಧನೆಗಳು ನೆರವಾಗಿ ಮುಂದುವರೆಸಿದವು. ಈ ಇಬ್ಬರೂ ವಿಜ್ಞಾನಿಗಳು ಮುಂದೆ 1992 ಮತ್ತು 2003ರ ನಡುವೆ ಹಲವಾರು ಪ್ರಯೋಗಗಳನ್ನು ನಡೆಸಿ ಅದ್ಭುತ ಅವಿಷ್ಕಾರಗಳನ್ನು (Ground-breaking Discoveries) ಮಾಡಿದರು.
ಸುಸುಮು ಕಿಟಗಾವಾ ಅವರ ನಿಷ್ಪ್ರಯೋಜಕವನ್ನೂ ಪ್ರಯೋಜಕವನ್ನಾಗಿಸಿದ ಶೋಧಗಳು

ಕಿಟಗವಾ ಅವರ ಸಂಶೋಧನಾ ಪ್ರಯತ್ನಗಳೆಲ್ಲವೂ ನಿಷ್ಪ್ರಯೋಜಕ ವಸ್ತುಗಳನ್ನು ಪ್ರಯೋಜನವಾಗುವತ್ತ ಪಡೆಯುವ ರಾಸಾಯನಿಕ ಪ್ರಯತ್ನಗಳೇ ಆಗಿದ್ದವು. ಇವರು ರಂದ್ರ ಮಯವಾದ ರಾಸಾಯನಿಕ ವಸ್ತುಗಳನ್ನು ಪಡೆಯುವತ್ತ ಸಂಶೋಧಿಸಿ ಪ್ರಕಟಿಸಿದರು. ಇವರೂ ಸಹಾ ರಾಬ್ಸನ್ ಅವರಂತೆ ತಾಮ್ರದ ಲೋಹವನ್ನೇ ಇತರೇ ಆಣ್ವಿಕ ರಚನೆಗಳ ಚೌಕಟ್ಟುಗಳಾಗಿ ನಿರ್ಮಿಸಲು ಬಳಸಿದರು. ವಿವಿಧ ಆಯಾಮಗಳ ತಯಾರಿಯನ್ನು ಉಪಯೋಗವನ್ನೂ ಆಲೋಚಿಸದೇ ದೊಡ್ಡ ದೊಡ್ಡ ಆಣ್ವಿಕ ರಚನೆಗಳತ್ತ ಸಂಶೋಧಿಸಿದರು. ಆರಂಭದಲ್ಲಿ ರಚನೆಗಳ ಶಾಶ್ವತತೆಯ ಬಗ್ಗೆ ತಕರಾರುಗಳಿದ್ದವು. ಮುಂದೆ 1998ರ ವೇಳೆಗೆ ಕೊಬಾಲ್ಟ್ ಲೋಹವನ್ನು ಸಾವಯವ ಸಂರಚನೆಗಳಲ್ಲಿ ಬಳಸಿ ರಚನೆಗಳ ಭದ್ರತೆಗೆ ಹೊಸ ದಾರಿಯನ್ನು ಕಂಡುಕೊಂಡರು. ಜಪಾನಿನ ರಸಾಯನಿಕ ಸೊಸೈಟಿಯ ಪತ್ರಿಕೆಯಲ್ಲಿ (Bulletin of the Chemical Society of Japan.) ಅವರ ಪ್ರಕಟಣೆಯು ಶಾಶ್ವತ ರಚನೆಗಳ ಉತ್ತರಗಳಿಂದ ರಾಸಾಯನಿಕ ನಾವಿನ್ಯತೆಗೆ ಶಾಶ್ವತವಾದ ನೆಮ್ಮದಿಯ ಪರಿಹಾರವನ್ನು ನೀಡಿತ್ತು. ಜೊತೆಗೆ ಈ ರಚನೆಗಳ ವಿವಿಧ ಉಪಯೋಗಗಳ ಬಗೆಗೂ ಮಾರ್ಗಗಳನ್ನು ತೆರೆದಿತ್ತು.
ಕನಸುಗಳಿಗೆ ದಾರಿ ತೋರಿದ “ಒಮರ್ ಯಾಗಿ” ಅವರ ರಾಸಾಯನಿಕ ಅಧ್ಯಯನಗಳು
ಮೆಟಲ್-ಆರ್ಗಾನಿಕ್ , ಲೋಹ- ಸಾವಯವ ಸಾಂಗತ್ಯದ ರಿಲೇಯ ಬ್ಯಾಟನ್ (ಕೋಲು) 1999ರ ನಂತರ ಯಾಗಿಯವರ ಸಂಶೋಧನೆಯ ಕನಸುಗಳಿಗೆ ವರ್ಗಾವಣೆಯಾಗಿತ್ತು. ಜೊರ್ಡಾನ್ನ ಇಲೆಕ್ಟ್ರಿಸಿಟಿ, ನೀರೂ ಇಲ್ಲದ ಹಳ್ಳಿಯಲ್ಲಿ ಬೆಳೆದ ಹುಡುಗ ಒಮರ್ ಯಾಗಿ. ಕಣ್ಣುಗಳ ತುಂಬಾ ಕೇವಲ ಕನಸುಗಳೇ ತುಂಬಿದ್ದ ಹುಡುಗನಿಗೆ ಲೈಬ್ರರಿಯಲ್ಲಿನ ರಸಾಯನಿಕ ರಚನೆಗಳ ಚಿತ್ರಗಳು ಸೆಳೆದದ್ದೇ ಕೆಮಿಸ್ಟ್ರಿಗೆ ಮಾರುಹೋದವನು ನೊಬೆಲ್ ಪುರಸ್ಕಾರಕ್ಕೂ ಮಾನ್ಯವಾಗುವ ಕನಸುಗಳ ರೆಕ್ಕೆಗಳನ್ನು ಆಣ್ವಿಕ ರಾಸಾಯನಿಕ ರಚನೆಗಳಿಗೆ ಕಟ್ಟಿದರು.
ಕನಸುಗಳ ಹೊತ್ತು ಅಮೆರಿಕೆಗೆ ಬಂದವರಿಗೆ ಹಾರಲು ಸಾಕಷ್ಟೇ ಸುಂದರ ಜಾಗಗಳಿದ್ದವು. ಕೆಮಿಸ್ಟ್ರಿಯ ಪ್ರೀತಿಯಲ್ಲಿ ಆಕರ್ಷಿತನಾದವರಿಗೆ, ಹೊಸ ಹೊಸ ವಸ್ತುಗಳ ಡಿಸೈನ್ ಮಾಡುವ ಕಲೆಗಾರಿಕೆಯ ರಾಸಾನಿಕ ವಿನ್ಯಾಸಗಳ ಹುಡುಕಾಟದ ಸಾರಥ್ಯವನ್ನು ಅರಿಜೋನಾ ವಿಶ್ವವಿದ್ಯಾಲಯ ಒದಗಿಸಿತು. 1995ರಲ್ಲಿ ಯಾಗಿ ಎರಡು ಆಯಾಮಗಳ ನವೀನ ರಾಸಯನಿಕ ಮಾದರಿಯ ಎರಡು ಬಗೆಗಳನ್ನು ಪ್ರದರ್ಶಿಸಿದರು. ಇವು ತಾಮ್ರ ಮತ್ತು ಕೊಬಾಲ್ಟ್ ಅನ್ನು ಹಿಡಿದಿಟ್ಟ ಜಾಲಗಳಂತೆ ಇದ್ದವು. ಇವುಗಳ ರಚನೆಯಲ್ಲಿ ಒಳಾಗಣದ ವಿನ್ಯಾಸದಲ್ಲಿ ಅವಕಾಶಗಳಿದ್ದವಲ್ಲದೆ, ಸುಮಾರು 350 ಡಿಗ್ರಿ ಸೆಂ ಉಷ್ಣತೆಯನ್ನೂ ತಾಳಿಕೊಳ್ಳುವ ಸಹಿಷ್ಣತೆಯನ್ನು ಹೊಂದಿದ್ದವು. ಅಷ್ಟಾದರೂ ಆ ರಚನೆಗಳು ಮುರಿದು ಬೀಳುತ್ತಿರಲಿಲ್ಲ. ಕೆಮಿಸ್ಟ್ರಿಯ ಕನಸುಗಾರ ಒಮರ್ ಯಾಗಿ ವಿಖ್ಯಾತ “ನೇಚರ್” ಪತ್ರಿಕೆಯಲ್ಲಿ ತಮ್ಮ ಸಂಶೋಧನೆಗಳನ್ನು ವಿಸ್ತ್ರುತವಾಗಿ ವಿವರಿಸಿ ಆ ಬಂಧಗಳ ರಚನೆಗಳಿಗೆ “ಮೆಟಲ್-ಆರ್ಗಾನಿಕ್ ಫ್ರೇಮ್ ವರ್ಕ್” ಎಂದು ನಾಮಕರಣ ಮಾಡಿದರು. ಇವುಗಳು ವಿಶೇಷವಾಗಿ ತಮ್ಮೊಳಗೆ ಜಾಗಗಳನ್ನು (Cavity) ಹೊಂದಿದ ಲೋಹಗಳ ಮತ್ತು ಇಂಗಾಲಾಧಾರಿತ (ಸಾವಯವ) ಬಂಧಗಳ ಆಣ್ವಿಕ ರಚನೆಗಳಾಗಿದ್ದವು.
ಒಮರ್ ಯಾಗಿ ಲೋಹಗಳು ಮತ್ತು ಇಂಗಾಲಾಧಾರಿತ ಮಾಲೆಕ್ಯುಲ್ಗಳ ಸಂರಚನೆಗಳಿಗೆ ಹೊಸ ಮೈಲುಗಲ್ಲನ್ನು ಒದಗಿಸಿ ಜಗತ್ತಿಗೆ ತಿಳಿವಳಿಕೆಯಾಗುವಂತೆ ಮಾಡಿದ್ದರು. ಬಹಳ ಮುಖ್ಯವಾಗಿ ಯಾಗಿ ಅನುಶೋಧಿತ ರಚನೆಯು ಸುಲಭವಾಗಿ ಸುಮಾರು 300 ಡಿಗ್ರಿ ಸೆಂ ಉಷ್ಣತೆಯನ್ನು ತಡೆದುಕೊಂಡು ರಚನೆಯಲ್ಲೇನೂ ಭಿನ್ನವಾಗದಂತೆ ಶಾಶ್ವತವಾಗಿದ್ದಿತು. ರಸಾಯನಿಕ ಜಗತ್ತು ಕಣ್ಣರಳಿಸಿ ಹುಬ್ಬೇರಿಸಿ ನೋಡುವಂತೆ ಪ್ರಾಯೋಗಿಕ ಉತ್ತರಗಳು ಸಿಕ್ಕಿದ್ದವು. ಬಹಳ ಮುಖ್ಯ ಕಾರಣವೇನೆಂದರೆ ಒಳಾಂಗಣದಲ್ಲಿ ಸಿಕ್ಕ ಜಾಗವು ಸಾಕಷ್ಟು ವಿಸ್ತೀರ್ಣದ್ದಾಗಿತ್ತು.

ಮರುಭೂಮಿಯಲ್ಲಿ ನೀರು ಹಿಡಿಯುವ ಕನಸಿಗೆ ನನಸಾದ ರಾಸಾಯನಿಕ ಮಾರ್ಗ
ಒಮರ್ ಯಾಗಿ ಕಡೆಯಲ್ಲಿ ಮೆಟಲ್-ಆರ್ಗಾನಿಕ್ ಚೌಕಟ್ಟಿನಿಂದ ಮರುಭೂಮಿಯಲ್ಲಿ ನೀರು ಹಿಡಿಯುವ ಕನಸುಗಳ ಸಾಕಾರಕ್ಕೆ ದಾರಿ ತೋರಿತು. ಲೋಹಗಳ ಮತ್ತು ಇಂಗಾಲಾಧಾರಿತ ಹೊಸ ವಿನ್ಯಾಸಗಳ ಒಳಾಂಗಣದಲ್ಲಿ ಮಾರ್ಪಡಿಸುವ ಮಾರ್ಗಗಳನ್ನು ಕೂಡ ಅದು ಒಳಗೊಂಡಿತ್ತು. 2002 ಮತ್ತು 2003ರಲ್ಲಿ ವಿಶ್ವ ವಿಖ್ಯಾತ ವಿಜ್ಞಾನ ಪತ್ರಿಕೆಗಳಾದ “ಸೈನ್ಸ್” ಮತ್ತು “ನೇಚರ್” ಎರಡರಲ್ಲೂ ಎರಡು ಪ್ರಬಂಧಗಳನ್ನು ಯಾಗಿ ಪ್ರಕಟಿಸಿದರು. ಕ್ಯಾವಿಟಿಯಲ್ಲಿ ಸ್ಥಳಾವಕಾಶವನ್ನು ಹಿಗ್ಗಿಸಿ ಅದರೊಳಗೆ ವಾತಾವರಣದ ತೇವಾಂಶವನ್ನೂ ಅಥವಾ ಮೀಥೇನನ್ನೂ ಹಿಡಿದು ಸಾಗಿಸಬಲ್ಲ ಆಣ್ವಿಕಗಳಂತೆ ಬಳಸುಲು ಕೃತಕ ಬುದ್ದಿಮತ್ತೆಯ ವಿಸ್ತರಣದಲ್ಲಿ ತೋರಿಸಿದ್ದರು. ಅರಿಜೋನಾ ಮರುಭೂಮಿಯಲ್ಲಿ ನೀರು ಹಿಡಿಯುವ ಪ್ರಯತ್ನವನ್ನು ಸಾಧಿಸಿ ತೋರಿಸಿದ್ದರು. ರಾತ್ರಿ ಈ ಆಣ್ವಿಕ ಮಾದರಿಗಳು ವಾತಾವರಣದ ತೇವಾಂಶವನ್ನು ಹೀರಿಕೊಂಡು ಮುಂಜಾವಿಗೆ ಸೂರ್ಯನ ಆಗಮನದಲ್ಲಿ ಬಿಸಿಲಿಗೆ ಅದೇ ನೀರನ್ನು ಹೊರಸೂಸಿ ಅಚ್ಚರಿಯನ್ನು ಮೆರೆದವು.
ಕನಸುಗಳಿಗೆ ರೆಕ್ಕೆ ಕಟ್ಟುವ ಸಾಧ್ಯತೆಗಳಿಗೆ ರಾಸಾಯನಿಕ ಮಾದರಿಗಳು ದಾರಿ ತೋರಿದ್ದವು. ಈ ಲೋಹಗಳು ಮತ್ತು ಸಾವಯವ ಬಂಧಗಳ ರಚನೆಗಳು ಇಂಗಾಲದ ಡೈ ಆಕ್ಸೈಡ್ ಮುಂತಾದ ವಿಷಕಾರಿ ಮಾಲಿನ್ಯಗಳನ್ನೂ ಹಿಡಿದಿಟ್ಟು ಸಾಗಿಸುವ ವೆಹಿಕಲ್ಗಳಾಗಬಲ್ಲವು ಎಂದು ವ್ಯಾಖ್ಯಾನಿಸಲಾಗಿದೆ. ಒಟ್ಟಾರೆಯ ಸಂಶೋಧನಾ ವಿಚಾರಗಳು ರಸಾಯನಿಕ ವಿಜ್ಞಾನದಲ್ಲಿ ಎಂದಿಲ್ಲದ ಕನಸುಗಳಿಗೆ ಬಗೆ ಬಗೆಯ ಉತ್ಪನ್ನಗಳ ನನಸುಗಳನ್ನು ನೀಡಿ ಆಲ್ಫ್ರೆಡ್ ನೊಬೆಲ್ ಅವರ ಕನಸಿನಂತೆ ಮಾನವತೆ ವಿಜ್ಞಾನದ ಬೆಂಬಲವನ್ನು ಶಾಶ್ವತಗೊಳಿಸಲಿವೆ. ನೊಬೆಲ್ ಗೆಲುವಿಗೆ ಅಚ್ಚರಿಯೇನೂ ಅಲ್ಲವೆಂಬಂತೆ ರಾಸಾಯನಿಕ ಬಂಧವನ್ನು ಗಟ್ಟಿಗೊಳಿಸಿದ್ದಲ್ಲದೆ, ತಮ್ಮೊಳಗಿನ ಜಾಗವನ್ನು ಹಿರಿದಾಗಿಸಿವೆ.
(MOFs (Metal-Organic Frameworks) ಎಂದರೆ ಲೋಹ ಕಣಗಳು (metal ions) ಮತ್ತು ಜೈವಿಕ ಅಥವಾ ಇಂಗಾಲಾಧಾರಿತ ಅಣುಗಳ (organic molecules) ಜೋಡಿಸಿ ಮಾಡಿದ ರಂದ್ರಮಯ ಚೌಕಟ್ಟಿನ ರಚನೆಗಳು (ಸೂಕ್ಷ್ಮ ಜಾಲಗಳು). ಒಳಗಿನ ರಂದ್ರಗಳು ವಸತಿ ಕೋಣೆಗಳಂತೆ, ನೀರು. ಅನಿಲ, ಔಷಧ, ಶುದ್ಧಿಕರಣ ಸಾಧನ, ಇಂಧನ ಹೀಗೆ ಏನೇನೋ ಹಿಡಿಯುವ ಮತ್ತು ಬಿಡುವ ಸಾಮರ್ಥ್ಯ ಉಳ್ಳವು).

ರಿಚರ್ಡ್ ರಾಬ್ಸನ್ 1937ರಲ್ಲಿ ಯು.ಕೆ. ಯಲ್ಲಿ ಜನಿಸಿ 1962ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪಡೆದವರು. ಪ್ರಸ್ತುತ ಆಸ್ಟ್ರೇಲಿಯಾದ ಮೆಲ್ಬೊರ್ನ್ ವಿವಿಯಲ್ಲಿ ಪ್ರಾಧ್ಯಾಪಕರು.
ಸುಸುಮು ಕಿಟಗಾವಾ ಜಪಾನಿನಲ್ಲಿ 1951ರಲ್ಲಿ ಕ್ಯೊಟೊದಲ್ಲಿ ಜನಿಸಿದರು. ಕ್ಯೊಟೊ ವಿಶ್ವವಿದ್ಯಾಲಯದಲ್ಲೇ ಪಿ.ಎಚ್.ಡಿ. ಪಡೆದು ಅಲ್ಲಿಯೇ ಪ್ರಾಧ್ಯಾಪಕರಾಗಿದ್ದಾರೆ.
ಒಮರ್ ಎಂ ಯಾಗಿ 1965ರಲ್ಲಿ ಜೋರ್ಡಾನ್ ಅಮ್ಮಾನ್ ಅಲ್ಲಿ ಜನಿಸಿದರು. ಅರ್ಬನಾ ಶಾಂಪೈನ್ನ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಸದ್ಯ ಬರ್ಕ್ಲೀಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್

ಅತ್ಯುತ್ತಮ ಲೇಖನ ಸರ್. ಅಭಿನಂದನೆಗಳು