You are currently viewing ರೆಂಬೆ-ಕೊಂಬೆಯ ತುಂಬಾ ಕಾಯಿ ಹೊತ್ತ “ಬಾಗೆ” ಮರ

ರೆಂಬೆ-ಕೊಂಬೆಯ ತುಂಬಾ ಕಾಯಿ ಹೊತ್ತ “ಬಾಗೆ” ಮರ

ಬೇಸಿಗೆಯ ಆರಂಭದ ಈ ದಿನಗಳಲ್ಲಿ ಎಲ್ಲಾ ಎಲೆಗಳನ್ನೆಲ್ಲಾ ಉದುರಿಸಿ, ಮರದ ತುಂಬೆಲ್ಲಾ ಬರೀ ಬಂಗಾರದ ಬಣ್ಣದ ಕಾಯಿಗಳನ್ನು ತುಂಬಿ ನಿಂತಿರುವ ಮರವನ್ನು ನೀವು ಕಂಡಿರಬಹುದು. ಸಾಲುಮರಗಳಲ್ಲಿ, ಎಲ್ಲೋ ಹೊಲಗಳ ಬದುಗಳಲ್ಲಿ, ಪಟ್ಟಣಗಳ ಕೆಲವು ವಸತಿ ಪ್ರದೇಶಗಳ ಪಾರ್ಕುಗಳ ಅಂಚುಗಳಲ್ಲಿ, ಹಳ್ಳಿಗಳಲ್ಲಿ  ಅಳಿದುಳಿದ ಗೋಮಾಳಗಳಲ್ಲಿ ಹೀಗೆ….. ಚಳಿಗಾಲ ಕಳೆಯುತ್ತಿದ್ದಂತೆ ಆರಂಭವಾಗುತ್ತಿರುವ   ಈ ಬೇಸಿಗೆಯ ದಿನಗಳಲ್ಲಿ ಇಡೀ ಮರ ಬರೀ ಕಾಯಿಗಳನ್ನು ಹೊತ್ತು ಒಂಟಿಯಾಗಿ ನಿಂತ ಮರದ ಚೆಲುವು ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.  ಬಂಗಾರದ ಬಣ್ಣದ ಒಂದೂವರೆ-ಎರಡು ಬೆರಳಿನಷ್ಟು ಅಗಲವಾದ ಕಾಯಿಗಳು, ಅದರೊಳಗೆ ಎಂಟು-ಹತ್ತು-ಹನ್ನೆರಡು ಬೀಜಗಳು, ಬೀಸುವ ಗಾಳಿಗೆ ಮರದ ಕೆಳಗೆ ಗಿಲ, ಗಿಲ ಸದ್ದು. ಕಾಯಿ ತುಂಬಿಕೊಂಡ ಈ ದಿನಗಳಲ್ಲಂತೂ ನಿಂತ ತೇರಿನಂತೆ ಸದ್ದು ಮಾಡುತ್ತಾ, ಮಳೆಗಾಲದ ತಯಾರಿಯಲ್ಲಿದ್ದ ನಿಸರ್ಗಕ್ಕೆ, ನನ್ನಲ್ಲಿ ಸಾಕಷ್ಟು ಬೀಜಗಳಿವೆ ಎಂದು ಹೇಳುತ್ತಿರುವಂತಿರುತ್ತದೆ.

          ನನ್ನ ಬಾಲ್ಯದ ದಿನಗಳಲ್ಲಿ ಹೆಸರೇನು ಎಂದು ಗೊತ್ತಿಲ್ಲದಿದ್ದರೂ, ಈ ಮರವನ್ನು ಎಲ್ಲಾದರೂ ಕಂಡು “ಹಾ” ಅದೇ ಮರ ಎನ್ನುತ್ತಿದ್ದೆ. ನನ್ನ ಊರು ನ್ಯಾಮತಿಯ ಊರಾಚೆ ವರ್ಷದಲ್ಲಿ ಕೆಲವು ತಿಂಗಳಷ್ಟೇ ಹರಿಯುವ ಹಳ್ಳದ ಹತ್ತಿರದ ಹೊಲವೊಂದರ ಬದುವಿನ ಮೇಲೆ ಈ ಮರ ಇತ್ತು. ಕಳೆದ ಕನಿಷ್ಟ 25-30 ವರ್ಷಗಳ ಕಾಲ ನಿರಂತರವಾಗಿ ನಾನದನ್ನು ನೋಡಿದ್ದೇನೆ. ಲಕ್ಷಾಂತರ ಬೀಜಗಳನ್ನು ತುಂಬಿಕೊಂಡು ಮಳೆಗಾಲಕ್ಕೆ ಹಂಚಲು ಅಣಿಯಾಗಿರುತ್ತಿದೆ. ಸುತ್ತೆಲ್ಲಾ ಕೃಷಿ ನೆಲಗಳು, ಉತ್ತಿ ಬಿತ್ತುವ ಹೊಲಗಳು, ಹಾಗಾಗಿ ಬಿದ್ದ ಬೀಜಗಳಲ್ಲಿ ಒಂದೂ ಹುಟ್ಟಿದ್ದು ಕಾಣದ ನೋಟ. ಪ್ರತೀ ವರ್ಷವೂ ಸಾವಿರಾರು ಕಾಯಿ ತುಂಬಿಕೊಂಡು ಮತ್ತೆ ಅಣಿಯಾಗಿರುತ್ತದೆ. ಮಳೆಗಾಲ ಕಳೆದ ಮೇಲೆ ಒಂದೂ ಬೀಜ ಹುಟ್ಟದ್ದನ್ನು ಕಂಡು, ಮಕ್ಕಳೊಂದೂ ಬದುಕದ ದುಃಖತಪ್ತ ತಾಯಿಯಂತೆ ನಿಂತಂತೆ ಅನ್ನಿಸುತ್ತದೆ. ಆದರೂ ಮುಂದಿನ ವರ್ಷವೇ ಮತ್ತದೇ ಚಿಗುರು, ಪರಿಮಳ ಭರಿತ ಹೂವು ಬಿಟ್ಟು ಕಾಯಿಯಾಗಿಸಲು ಅಣಿಯಾಗುತ್ತದೆ ಅದೇ ಶ್ರದ್ಧೆ ಮತ್ತು ಬದುಕಿನ ಪ್ರೀತಿ ತುಂಬಿಕೊಂಡು, ಎಲ್ಲವನ್ನೂ ಅಷ್ಟೂ ಕಾಯಿಗಳಲ್ಲಿ ತುಂಬಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಂಡು ಕಾಯುತ್ತದೆ.  ಕಾಯಿ ತುಂಬಿಕೊಂಡ ಒಂಟಿ ಮರದ ಕೆಳಗೆ ಅದೇ ಸದ್ದು. ಅದೇ ಗಲ-ಗಲ.

          ಹೌದು, ಬಾಗೆ ಮರದ ಬದುಕೇ ಹಾಗೆ. ಈ ದಿನಗಳಲ್ಲಿ ಕಾಯಿ ತುಂಬಿದ ನೋಟ ತೀರಾ ಸಹಜ. ಒಣ ಮರದ ಕ್ಯಾನೊಪಿಯೆಲ್ಲಾ ಕಾಯಿಗಳದ್ದೇ ಮೋಜು. ಅದೇ ಕಾರಣದಿಂದಲೇ ಅದಕ್ಕೆ ವೈಜ್ಞಾನಿಕ ನಾಮಕರಣವೂ ಆಗಿರುವುದೆಂದರೆ ಅಚ್ಚರಿಯಾಗಬಹುದು. Albizia lebbeck  ಎಂಬುದು ಇದರ ವೈಜ್ಞಾನಿಕ ಹೆಸರು. ಈ ಎರಡೂ ಪದಗಳಲ್ಲಿನ ಪ್ರಭೇದದ ಹೆಸರಾದ lebbeck  ಎಂಬುದು ಅರೆಬಿಕ್ ಪದವಾದ ‘laebach’ ನಿಂದ ಬಂದಿದೆ. ಅದರ ಅರ್ಥ “ಹೆಂಗಸಿನ ನಾಲಿಗೆ”. ಈ ಮರಕ್ಕೆ ಪಾಶ್ಚಾತ್ಯರ ಸಾಮಾನ್ಯ ಹೆಸರು “ಹೆಂಗಸಿನ ನಾಲಿಗೆ ಮರ (‘woman’s tongue’ Tree)”. ತುಂಬಿದ ದಿನಗಳಲ್ಲಿ ಬೀಸುವ ಗಾಳಿಗೆ ನಿರಂತರವಾದ ಸದ್ದು ಮಾಡುವ ಮರಕ್ಕೆ ಮಾತಾಡುತ್ತಲೆ ಇರುವ ಹೆಂಗಸರಿಗೆ ಹೋಲಿಸಿ ಹಾಗೆ ಕರೆದಿದ್ದಾರೆ. ಕಾರ್ಲ್ಸ್‍  ಲಿನೆಯಾಸ್ ಈ ಮರಕ್ಕೆ ಮೊದಲು ನಾಮಕರಣ ಮಾಡಿದ್ದು Mimosa  lebbeck ಎಂಬುದಾಗಿತ್ತು. ಮುಟ್ಟಿದರೆ ಮುನಿ ಸಸ್ಯವನ್ನೂ Mimosa ಜಾತಿಯಲ್ಲೇ ಹೆಸರಿಸುತ್ತೇವೆ. ಇದೂ ಕೂಡ ಅದೇ ಜಾತಿಯ ಲಕ್ಷಣಗಳನ್ನು ಕಂಡು ಹಾಗೆ ಕರೆದಿದ್ದರು. ಮುಂದೆ ಜಾರ್ಜ್‍  ಬೆಂಥಮ್ ಅವರು ಈಗಿರುವ ಜಾತಿಯಾದ Albizia ಗುರುತಿಸಿ ಅದಕ್ಕೆ ಸೇರಿಸಿದರು. Albizia  ಕೂಡ ಒಂದು ದೊಡ್ಡ ಮನೆತನದ ಹೆಸರು. ಇಟಲಿಯವರಾದ ಫಿಲಿಪೊ ಅಲ್ಬಿಜಿ ಎಂಬುವರು 1749ರಲ್ಲಿ ಬಾಗೆ ಮರವನ್ನು ನೆಟ್ಟು ಬೆಳೆಯಲು ಯೂರೋಪ್ ದೇಶಗಳಿಗೆ ಪರಿಚಯಿಸಿದ ಕಾರಣಕ್ಕಾಗಿ ಮರದ ಹೆಸರನ್ನು Albizia lebbeck  ಎಂದು ಕರೆಯಲಾಯಿತು. ಈ Albizia ಗಳಲ್ಲಿ ಮೂರು ತುಂಬಾ  ಹೆಸರು ಮಾಡಿದ ಮರಗಳಿವೆ. ಎಲೆಗಳು, ತೊಗಟೆ, ಹೂ ಮುಂತಾದವುಗಳ ಲಕ್ಷಣಗಳಲ್ಲಿ ಒಂದಕ್ಕೊಂದು ಸಂಬಂಧಗಳನ್ನು ಸುಲಭವಾಗಿ ಗುರುತಿಸಬಹುದು. ಅವುಗಳೆಂದರೆ ಬಿಲ್ವಾರ (Albizia odoratissima) ಮತ್ತು ಚಿಗರೆ ಅಥವಾ ಚುಜ್ಜುಲು (Albizia amara) ಸದ್ಯಕ್ಕೆ ಇವುಗಳ ಸಂಗತಿಗಳನ್ನು ಬಿಟ್ಟು ಮತ್ತೆ ಬಾಗೆ ಮರಕ್ಕೆ ಬರೋಣ. 

          ಬಾಗೆ ಮರ ನಮ್ಮೂರಿನ ಹೆಮ್ಮೆಯೆ! ಭಾರತವೂ ಸೇರಿದಂತೆ ಮಲಯ ಆಸ್ಟ್ರೇಲಿಯಾದ ಕಾಡುಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಈ ಮೂರೂ ದೇಶಗಳ ನೆಲೆಯನ್ನು ಬಾಗೆಯ ತವರು ದೇಶಗಳಾಗಿವೆ.  ಇತರೇ ಆಲ್ಬಿಜಿಯಾಗಳಿಗಿಂತಾ ಜಗತ್ತಿನಾದ್ಯಂತ ಪರಿಚಿತವಾದ ಮರ ಬಾಗೆ (Albizia lebbeck) ಹಾಗೂ ಹೆಚ್ಚು ಸಂಖ್ಯೆಯಲ್ಲೂ ಇರುವ ಮರವೇ! ಇತರೆಯವೂ ಹೆಸರಾದವೂ ಆದ ಬಿಲ್ವಾರ ಹಾಗೂ ಚುಜ್ಜುಲು ಮರಗಳು ಬಾಗೆಗೆ ಹೋಲಿಸಿದರೆ ಕಡಿಮೆ. ಇವುಗಳಲ್ಲೆಲ್ಲಾ ಬಾಗೆ ದೊಡ್ಡ ಮರ. ಈ ಹಿಂದೆಯೇ ಹೇಳಿದಂತೆ ಎಲೆಗಳು ಒಂದೆ ತರಹ, ಎದುರು ಬದುರಾದ ಜೋಡಿ ಪತ್ರಗಳು. ಬಾಗೆಯವು ದೊಡ್ಡ ಎಲೆಗಳು. ಜೊತೆಗೆ ಉದ್ದವಾದವೂ ಕೂಡ. ಬಾಗೆ ಮರವು ಏನಿಲ್ಲವೆಂದರೂ 18-30 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಮರದ ಬುಡದ ಮುಖ್ಯ ಕಾಂಡ 50 ಸೆಂ.ಮೀ ನಿಂದ 100 ಸೆಂ.ಮೀ ಗಳಷ್ಟು ದಪ್ಪವಾಗಿರುತ್ತದೆ.  ಬಿಳಿಯ ಬಣ್ಣದ ಹೂವುಗಳು ಪರಿಮಳದಿಂದ ಕೂಡಿದ್ದು ಪುಂಕೇಸರಗಳು ದಳಗಳಿಗಿಂತಾ ಉದ್ದವಾಗಿದ್ದು ಆಕರ್ಷಕವಾಗಿರುತ್ತವೆ. ಹೂವಾಡುವ ಸಮಯದಲ್ಲಿ ಸುವಾಸನೆಯು ಮರದ ಸುತ್ತೆಲ್ಲಾ ಬಾಗೆಯ ಇರುವನ್ನು ಸಾರುವಂತಿರುತ್ತದೆ. ಮರದ ಸೌಂದರ್ಯವು ಹೂವಾಡುವಾಗಲೂ ಇದ್ದಂತೆ ಕಾಯಿ ಬಿಟ್ಟಾಗಲೂ ಸದ್ದಿನಿಂದ ಸಂಗೀತ ಬೆರೆತು ನಾದಮಯವಾಗಿರುತ್ತದೆ. ಕಾಯಿಯ ತುಂಬಾ 6-12 ಬೀಜಗಳು, 15-30 ಸೆಂ.ಮೀ ಕಾಯಿಗಳಲ್ಲಿ ಪ್ಯಾಕ್ ಆಗಿರುತ್ತವೆ. ಎರಡರಿಂದ ಐದು ಸೆಂ.ಮೀ ವರೆಗೂ ಅಗಲವಿರುವ ಕಾಯಿಗಳು ಮರವನ್ನು ಮುಚ್ಚಿಕೊಂಡಂತೆ ಕಾಣುವುದು ಅಪರೂಪವೇನಲ್ಲ.

          ಬಾಗೆಯು ತುಂಬಾ ಸಹಜವಾದ ಪರಿಸರದ ಮೌಲ್ಯಗಳನ್ನು ಕಟ್ಟಿಕೊಡುವ ಮರ. ಮುಟ್ಟಿದರೆ ಮುನಿ ಸಸ್ಯದ ಕುಟುಂಬಕ್ಕೇ ಸೇರಿದ, ಸಾರಜನಕವನ್ನು ಸ್ಥಿರೀಕರಿಸುವ, ಮಣ್ಣನ್ನು ಹಿಡಿದಿಟ್ಟುಕೊಂಡು, ನೆಲದ ಫಲವತ್ತತೆಯನ್ನು ಹಿಗ್ಗಿಸಬಲ್ಲ ಮರ. ಬಾಗೆಯ ಮುಖ್ಯ ಬಳಕೆಯ ಸಾಧ್ಯತೆಗಳೆಂದರೆ, ಉರುವಲು, ಔಷಧಗಳಿಗಾಗಿ ಹಾಗೂ ಮೇವಿನ ಉಪಕಾರಗಳಾಗಿವೆ. ಸಾಲುಮರಗಳನ್ನು ನೆರಳಿಗಾಗಿ ಬೆಳೆಸುವುದನ್ನು ಎರಡೂ ಅಮೆರಿಕಾಗಳಲ್ಲೂ ಸಹಜವಾಗಿ ಕಾಣಬಹುದು. ನಮ್ಮ ದೇಶದ ಸಾಲುಮರಗಳಲ್ಲೂ ಇದಕ್ಕೆ ಸ್ಥಾನವಿದ್ದು, ತುಮಕೂರು-ಚಿತ್ರದುರ್ಗದ ಮಧ್ಯೆಯ ಹೆದ್ದಾರಿಯಲ್ಲಿ ಸಾಕಷ್ಟು ಕಾಣಬಹುದು. ಸಾಕಷ್ಟು ಸಾಂದ್ರವುಳ್ಳ ಬಾಗೆಯನ್ನು  ಭಾರತ ಹಾಗೂ ಪಾಕಿಸ್ಥಾನಗಳೆರಡರಲ್ಲೂ ಮರಮುಟ್ಟುಗಳಾಗಿಯೂ ಬಳಸಲಾಗುತ್ತಿದೆ.

          ಬಾಗೆಯಲ್ಲಿ ನಮ್ಮ ದೇಹದ ಅಂಗಾಂಶಗಳನ್ನು ಉಡುಗಿಸಬಲ್ಲ ರಸಾಯನಿಕಗಳು ಇವೆ. ಕೆಲವು ಸಂಸ್ಕೃತಿಗಳಲ್ಲಿ ಉರಿವ ಗಾಯವನ್ನು ಮಾಯಿಸಲು ಔಷಧಗಳನ್ನೂ ತಯಾರಿಸುತ್ತಾರೆ. ಕೆಮ್ಮು, ಶೀತ-ಜ್ವರ, ಹಾಗೂ ಉಸಿರಾಟದ ಸಮಸ್ಯೆಗಳ ಶ್ವಾಸಕೋಶ ಸಂಬಂಧೀ ಚಿಕಿತ್ಸೆಗಳಲ್ಲೂ ಬಳಸುವ ಔಷಧಗಳನ್ನು ಬಾಗೆ ಮರದ ವಿವಿಧ ಭಾಗಗಳಿಂದ ತಯಾರಿಸುತ್ತಾರೆ.  ತೊಗಟೆಯನ್ನು ಉರಿಯೂತವನ್ನು ಶಮನಗೊಳಿಸಲು ಬಳಸುವುದು ತುಂಬಾ ಸಾಮಾನ್ಯವಾದುದು. ಮನಸ್ಸನ್ನು ಆಹ್ಲಾದಗೊಳಿಸಬಲ್ಲ ರಸಾಯನಿಕಗಳನ್ನು ಬಾಗೆಯ ಹೊಂದಿದೆ.  ತುಂಬು ಹಸಿರಾದ ಎಲೆಗಳ ಮಧ್ಯೆದ ಬಿಳಿಯ ಪರಿಮಳಯುಕ್ತ ನೋಟದಲ್ಲೇ ಆಹ್ಲಾದಕತೆಯು ತುಂಬಿರುವುದು, ರಸಾಯನಿಕತೆಯನ್ನು ಒಳಹೋಗದೆ ಅನುಭವಕ್ಕೆ ದಕ್ಕಬಲ್ಲದು.

          ಅಲ್ಬಿಜಿಯಾಗಳು ತಮ್ಮ ಸೊಗಸಾದ ಸೌಂದರ್ಯಕ್ಕೆ ಹೆಸರು ಮಾಡಿದ ಸಸ್ಯಗಳು. ಅದರಲ್ಲೂ ಬಾಗೆ ಮರವು ತನ್ನ ನೀಳ ನೋಟದಿಂದ ಹಸಿರು ತುಂಬಿಕೊಂಡು ಪರಿಮಳದಿಂದ ಮನದಾನಂದಕ್ಕೆ ಕಾರಣವಾಗಬಲ್ಲದು. ನಿಲುವೂ ಅಷ್ಟೇ ಆಕರ್ಷಕ ಕೂಡ. ಬೇಗನೇ ಬೆಳೆಯುವ ಬಾಗೆಯು ಎತ್ತರಕ್ಕೆ ಚಾಚಿ ತೆಳುವಾಗಿ ಎಲೆಗಳನ್ನು ಆಗಸಕ್ಕೆ ಎದುರಾಗಿ ಹರಡಿ ಕೊಡೆಯಂತೆ ಕಾಣುತ್ತದೆ. ಹಳೆಯ ಮರಗಳು ಕೊಂಬೆಗಳನ್ನು ಹರಡಿಕೊಂಡು ಕ್ಯಾನೊಪಿಯನ್ನು ನಿರ್ಮಿಸಿಕೊಂಡಿರುತ್ತದೆ. ಒಣಗಿದ ಮರದ ಕಾಯಿತುಂಬಿದ ನೋಟವಂತೂ ಸಹಸ್ರಾರು ಬೀಜ ತುಂಬಿ ಆಸೆಭರಿತ ಗರ್ಭಿಣಿಯಂತೆ ಕಂಗೊಳಿಸುತ್ತದೆ. ಬೇಸಿಗೆಯು ಆರಂಭವಾಗುವಷ್ಟರಲ್ಲಿ ಕಾಯಿ ತುಂಬಿಕೊಂಡು ಆಗಸಕ್ಕೆ ತೆರೆದ ಗೆಜ್ಜೆ ಕಟ್ಟಿದ ಕೊಡೆಯಂತಹ ದೃಶ್ಯವನ್ನು ರಾಜ್ಯಾಂದ್ಯಂತ ಅಲ್ಲಲ್ಲಿ ನೋಡುವುದನ್ನು ಮರೆಯಬೇಡಿ. ಸಮಯವಿದ್ದರೆ, ಗಾಳಿ ಬೀಸುವ ಹೊತ್ತಿನಲ್ಲಿ ಮರದ ಕೆಳಗೆ ಪಟ-ಪಟನೆ ಬಡಿದಾಡುವ ಕಾಯಿಗೊಂಚಲಿನ ಸಂಗೀತವನ್ನು ಕೇಳುವುದನ್ನೂ ಕೂಡ.

ನಮಸ್ಕಾರ.. ಮತ್ತೆ ಸಿಗೋಣ…. – ಟಿ.ಎಸ್. ಚನ್ನೇಶ್

This Post Has 3 Comments

 1. ನಿರಂಜನ ಪ್ರಭು

  ಸರ್ ಒಂದು ಕಡೆ ೧೦೦ ಮೀಟರ್ ಅಂತ ಇದೆ. ಅದು ೧೦೦ ಸೆಂಟಿ ಮೀಟರ್ ಇರಬಹುದು…

  1. CPUS

   ಧನ್ಯವಾದಗಳು ಪ್ರಭು ಅವರೆ. ಆ ತಪ್ಪನ್ನು ಸರಿ ಮಾಡಲಾಗಿದೆ.

 2. ಗಂಗಾಧರ

  ಇವತ್ತು ಚಿತ್ರದುರ್ಗಕ್ಕೆ ಬಂದು ಸರಕಾರಿ ಐ.ಬಿಯಲ್ಲಿ ಕೆಲಗಂಟೆ ಇದ್ದೆ.ದೊಡ್ಡ ಕಾಂಪೌಂಡಿನಲ್ಲಿ ಸುಂದರ ಹಳೆಯ ಮರ ನೋಡಿದೆ.
  ಅದರ ಕೆಳಗೆ ಕಸ ಸ್ವಚ್ಛಮಾಡುತ್ತಿದ್ದ ಮಾಲಿಗೆ ಇದು ಯಾವ ಮರ ಅಂತ ಕೇಳಿದರೆ,ಬಾಗೆ ಅಂದ.
  ಆ ಬಾಗೆಯ ಮರ ನನ್ನನ್ನ ಈ ಬರಹಕ್ಕೆ ಕರೆತಂದಿತು.
  ಬಹಳ ವಿವರಗಳೊಂದಿಗೆ ಚೆನ್ನಾಗಿ ಬರೆದಿದ್ದೀರ.
  ವಂದನೆಗಳು.

Leave a Reply