ಸಾಮಾನ್ಯವಾಗಿ ಜ್ಞಾನದ ಮೂಲದ ಹುಡುಕಾಟವನ್ನು ಗ್ರೀಕ್ ನೆಲೆಯಿಂದ ಆರಂಭಿಸುತ್ತೇವೆ. ಪಾಶ್ಚಾತ್ಯ ದರ್ಶನಗಳ ತವರು ಎಂದೇ ಬಿಂಬಿತವಾದ ‘ಅಥೆನ್ಸ್’ ನಲ್ಲಿನ ಮೊದಲ ಕುರುಹುಗಳನ್ನು ವಿವರಿಸುತ್ತೇವೆ. ಸಾಂಪ್ರದಾಯಿಕ ನಾಗರಿಕತೆಯ ಜ್ಞಾನದ ಮೂಲವು ಅಲ್ಲಿಂದಲೇ ವಿಕಾಸವಾಗಿದೆ ಎಂಬುದಾಗಿಯೂ ವಿವರಿಸಲಾಗುತ್ತದೆ. ಆದರೆ ಅದು ಹಾಗಲ್ಲ, ಗ್ರೀಕ್ ಕೂಡ ಈಜಿಪ್ಟಿನ ನಾಗರಿಕತೆಯಿಂದ, ಜೊತೆಗೆ ಏಶಿಯಾ ಮೂಲಗಳಿಂದಲೂ ಎರವಲು ಪಡೆದಿದೆ. ಆದರೆ ಇದು ಪಾಶ್ಚಾತ್ಯ ಬೌದ್ಧಿಕ ಅಹಮ್ಮಿನಲ್ಲಿ ಕೊಚ್ಚಿಹೋಗಿದೆ! ಹಾಗೆಂದವರು ಮಾರ್ಟಿನ್ ಗಾರ್ಡನರ್ ಬರ್ನಾಲ್. ಮಾರ್ಟಿನ್ ಬರ್ನಾಲ್ ಕನ್ನಡಿಗರಿಗೆ ಪರಿಚಯವಾದವರಲ್ಲ. ಆದರೆ ಅವರ ತಂದೆ ಭಾರತಕ್ಕೆ ಚಿರಪರಿಚಿತರು. ಮಾರ್ಟಿನ್‌ರ ತಂದೆ ಜೆ.ಡಿ ಬರ್ನಾಲ್ ತಮ್ಮ ಇತಿಹಾಸದಲ್ಲಿ ವಿಜ್ಞಾನ ಸಂಪುಟಗಳಿಂದ ಹೆಸರುಮಾಡಿದ ವಿಜ್ಞಾನಿ. ಜಾನ್ ಡೆಸ್ಮಂಡ್ ಬರ್ನಾಲ್‌ರನ್ನು ವಿಜ್ಞಾನ ಸಂತರೆಂದೇ ವ್ಯಾಖ್ಯಾನಿಸಲಾಗುತ್ತದೆ. ತಾಯಿ ಮಾರ್ಗರೇಟ್ ಗಾಡರ್ನರ್ ಬರ್ನಾಲ್ ಕೂಡ ಬರಹಗಾರರೇ.
ಬಿಳಿಯ ಬಣ್ಣವು ಗೋಡೆಗಳಿಗೆ ಚೆಂದ, ಬಟ್ಟೆಗಳಿಗೂ ಸರಿಯೇ! ಆದರೆ ಮೈಬಣ್ಣ ಬಿಳಿಯಾಗಿದ್ದೂ ಮನಸ್ಸು ಮಾಸಿ, ಚರ್ಮದ ಬಣ್ಣವನ್ನು ಜನಾಂಗೀಯ ದೋರಣೆಗಳಾಗಿ ಬೌದ್ಧಿಕ ಚಮತ್ಕಾರಗಳನ್ನು ಬಳಸಿದ ಬಗ್ಗೆ ಓರ್ವ ಬಿಳಿಯನಾಗೇ ಮಾತಾಡಿದ್ದಲ್ಲದೆ ಅತ್ಯಂತ ಚರ್ಚೆಗೆ ಒಳಗಾದ ಕೃತಿ “ಬ್ಲಾಕ್ ಅತೀನ” ಎಂಬದನ್ನು ಬೃಹತ್ ಸಂಪುಟಗಳಲ್ಲಿ ದಾಖಲು ಮಾಡಿದವರು, ಮಾರ್ಟಿನ್ ಗಾರ್ಡನರ್ ಬರ್ನಾಲ್. ಜಗತ್ತಿನ ಬೌದ್ಧಿಕ ಮೂಲಗಳ ಹುಡುಕಾಟದಲ್ಲಿ ಅದರಲ್ಲೂ ಪಾಶ್ಚಾತ್ಯ ಪ್ರಭಾವಗಳಲ್ಲಿ ಗ್ರೀಕ್ ಮೂಲದಿಂದ ಅಥೆನ್ಸಿನ ಬೆಳವಣಿಗೆಗಳಿಂದ ಆರಂಭಿಸುವುದು ಸಹಜ! ಇದಕ್ಕೊಂದು ತಿರುವು ಕೊಟ್ಟು, ಜಗತ್ತಿನ ನಾಗರಿಕತೆ ಮತ್ತು ಅರಿವಿನ ಮೂಲಗಳನ್ನು ಆಫ್ರಿಕಾ-ಏಷಿಯಾದ ಬೇರುಗಳಲ್ಲಿ ಹುಡುಕಾಟ ನಡೆಸಿ ಭಾಷಾವಿಜ್ಞಾನದ ಹಾಗೂ ಪ್ರಾಚ್ಯ ಸಾಕ್ಷಿಗಳಿಂದ ದಾಖಲಿಸಿದವರು. ಮಾತ್ರವಲ್ಲ, ಅದಕ್ಕೆದ್ದ ಟೀಕೆಗಳಿಗೂ ಉತ್ತರವಾಗಿ ಬ್ಲಾಕ್ ಅಥೀನ ರೈಟ್ಸ್ ಬ್ಯಾಕ್ ಎಂಬ ಸಂಪುಟವನ್ನೂ ಹೊರ ತಂದವರು. ಜಗತ್ತಿನ ಯಾವ ಸ್ಥಳದಲ್ಲಿ ಅವರು ಕಾಲಿಟ್ಟರೋ ಅಲ್ಲಿನ ಭಾಷೆಯನ್ನು ಕಲಿತೇ ಅಲ್ಲಿನ ಸಂಸ್ಕೃತಿಯನ್ನು ತಿಳಿದವ ಮಹಾ ಮೇಧಾವಿ.
ಮಾರ್ಟಿನ್ ಅವರು ಲಂಡನ್ನಿನಲ್ಲಿ 1937ರ ಮಾರ್ಚ್ 10ರಂದು ಜನಿಸಿದರು. ಕೇಂಬ್ರಿಡ್ಜ್ ನ ಕಿಂಗ್ಸ್ ಕಾಲೇಜಿನಲ್ಲಿ 1957ರಲ್ಲಿ ಪದವಿ ಪಡೆದು ಮುಂದೆ ಪೀಕಿಂಗ್ ವಿಶ್ವವಿದ್ಯಾಲದಲ್ಲಿ ಚೈನೀಸ್ ಭಾಷೆಯಲ್ಲಿ ಡಿಪ್ಲೊಮೋ ಪಡೆದವರು. ಮುಂದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ಮತ್ತು ಹಾರ್ವರ್ಡ್‌ನಲ್ಲಿಯೂ ಸಂಶೋಧನೆಯನ್ನು ಮುಂದುವರೆಸಿ, ನಂತರದ ಕೇಬ್ರಿಜ್ ನಲ್ಲಿ ಪೂರ್ವದೇಶಗಳ ಅಧ್ಯಯನದಲ್ಲಿ ಡಾಕ್ಟೋರೇಟ್ ಪಡೆದವರು. ಅಲ್ಲಿಯೇ ಫೆಲೋ ಆಗಿ ಸಂಶೋಧನೆಯಲ್ಲಿ ತೊಡಗಿದ್ದಾಗಲೇ ಕಾರ್ನಲ್ ವಿಶ್ವವಿದ್ಯಾಲಯದಿಂದ ಬಂದ ಕರೆಯ ಮೇರೆಗೆ ಅಮೆರಿಕೆಗೆ ಬಂದು ನೆಲೆಯಾದವರು. ಕಾರ್ನಲ್ ವಿಶವವಿದ್ಯಾಲಯದ ಸ್ವತಂತ್ರವಾದ ಶೈಕ್ಷಣಿಕ ವಾತಾವರಣವು ಅವರ ವೃತ್ತಿಯ ಶಿಸ್ತಿನಿಂದ ಬೇರೊಂದು ಶಿಸ್ತಿನ ಸಂಶೋಧನೆಗೆ ಸಹಾಯವಾಗುತ್ತದೆ. ಅದರಿಂದಾಗಿ ಅವರ ಜ್ಞಾನ ಮೂಲದ ಹುಡುಕಾಟದ ಕುರಿತಂತೆ ಭಾಷೆಗಳ ಆಯಾ ನೆದ ಸಂಸ್ಕೃತಿಕ ಹಿನ್ನೆಲೆಗಳ ಅರಿವಿನ ದರ್ಶನಕ್ಕೆ ಹೊಸ ಆಯಾಮ ದಕ್ಕುತ್ತದೆ. ಅವರ ಪೂರ್ವ ದೇಶಗಳ ಸಂಸ್ಕೃತಿ ಮತ್ತು ಭಾಷಾ ಜ್ಞಾನವು ಆ ನೆಲವು ಕೊಟ್ಟ ಕೊಡುಗೆಗಳ ವಿವರದ “ಬ್ಲಾಕ್ ಅತೀನ” ಕಥೆಯ ವಿಕಾಸಕ್ಕೆ ನೆರವಾಗುತ್ತದೆ.
“ಬ್ಲಾಕ್ ಅತೀನ” – ಕಪ್ಪು ದೇವತೆಯ ಕಥೆ!
ಅತೀನ ಗ್ರೀಕ್‌ನ ಬುದ್ದಿಮತ್ತೆಯ ದೇವತೆ. ನಮ್ಮಲ್ಲಿಯ ಸರಸ್ವತಿಯ ಹಾಗೆ! ಪಾಶ್ಚಾತ್ಯಳಾದ ಈ ದೇವತೆ ಸಹಜವಾಗಿ ಬಿಳಿಯಳೇ! ಆಕೆಯ ‘ಕಪ್ಪು’ ಬಣ್ಣದ ಬ್ಲಾಕ್ ಅತೀನ ಕಥೆಯು ತುಂಬಾ ಉದ್ದವಾದದ್ದು ಹಾಗೂ ಸಂಕೀರ್ಣವಾದದ್ದು. ಅರಿವಿನ ಸಮಾಜಶಾಸ್ತ್ರೀಯ ಅಧ್ಯಯನವಾಗಿ ಇದೊಂದು ಅದ್ಭುತ! ದಶಕಗಳ ಕಾಲದ ಸಂಶೋಧನೆ ಮತ್ತು ಅಪಾರ ಅಧ್ಯಯನದ ಫಲ! ಚೀನಿ ಭಾಷಾ ಅಧ್ಯಯನಗಳಲ್ಲಿ ತರಬೇತಿ ಪಡೆದು, ಅದನ್ನೇ ಕಲಿಸುತ್ತಾ, ಸಂಶೋಧನೆಯಲ್ಲಿಯೂ ತೊಡಗಿದ್ದ ಮಾರ್ಟಿನ್ ಬರ್ನಾಲ್ ಅವರು 60ರ ದಶಕದಲ್ಲಿ ಚೀನಾ ಮತ್ತು ಪಾಶ್ಚಾತ್ಯ ಸಂಬಂಧಗಳ ಆಳಕ್ಕೆ ಹೊರಳಿದ್ದೇ ಒಂದು ಆಕಸ್ಮಿಕ! ಭಾರತ ಮತ್ತು ಚೀನಾದ ಯುದ್ದದ ನಂತರದಲ್ಲಿ ಪಾಶ್ಚತ್ಯರಲ್ಲಿ ಕಂಡು ಬಂದ ಚೀನಿ ಸಂಸ್ಕೃತಿಯ ಕುರಿತ ಅಸಡ್ಡೆಯು ಇವರನ್ನು ಅದರ ಓದಿಗೆ ಹಚ್ಚಿತು. ತುಂಬಾ ಆಕರ್ಷಕವಾದ ನಾಗರಿಕತೆಯೊಂದನ್ನು ಜ್ಞಾನ ಮೂಲಗಳಿಂದ ಅರಿಯುವ ಮಹತ್ತರವಾದ ಆಶಯವನ್ನು ಅವರ ಅಧ್ಯಯನಕ್ಕೆ ಹುಡುಕಿಕೊಟ್ಟಿತು. ಹತ್ತು ವರ್ಷಗಳಿಗೂ ಹೆಚ್ಚಿನ ಸುಧೀರ್ಘವಾದ ಸಂಶೋಧನೆ ಮತ್ತು ಅಧ್ಯಯದ ಫಲ ಹಾಗೂ ಅದಕ್ಕೂ ಹೆಚ್ಚಾಗಿ ಮಾರ್ಟಿನ್ ಅವರ ನಿರಂತರ ಓಡಾಟಗಳ, ವೈವಿಧ್ಯಮಯ ಸಾಂಸ್ಕೃತಿಕ ಅನುಸಂಧಾನಗಳಿಂದ ಪಡೆದ ಅರಿವಿನ ಹೊಳಹಾಗಿ ಹುಟ್ಟಿದ ಅದ್ಭುತ ವ್ಯಾಖ್ಯಾನ- “ಬ್ಲಾಕ್ ಅತೀನ”
ಅಮೆರಿಕಾದ ಕಾರ್ನಲ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ 1972ರಿಂದ 2001 ರಲ್ಲಿ ನಿವೃತ್ತಿ ಹೊಂದುವವರೆಗೂ ಇದ್ದವರು. ನಮ್ಮ ಸಾಂಪ್ರದಾಯಿಕ ನಾಗರೀಕತೆಯು ಬಹು ಪಾಲು ಚರ್ಚಿತವಾಗುತ್ತಿರುವಂತೆ ಗ್ರೀಕ್‌ನಲ್ಲಿ ಹುಟ್ಟಿರದೆ, ಈಜಿಪ್ಟ್ ಎಂದು ಬರ್ನಾಲ್ ತಮ್ಮ “ಬ್ಲಾಕ್ ಅತೀನ” ಪುಸ್ತಕದಲ್ಲಿ ವಾದಿಸುತ್ತಾರೆ. 1987ರಲ್ಲೇ ಹೊರಬಂದ ಮೊದಲ ಸಂಪುಟವು ಪ್ರಾಚೀನ ಗ್ರೀಕ್ ದರ್ಶನಗಳ ಉಗಮ ಬಗ್ಗೆ ಚರ್ಚಿಸುತ್ತದೆ. ಮುಂದೆ ಸಂಪುಟ ಎರಡು ಇನ್ನೂ ಹೆಚ್ಚಿನ ಸಂಶೋಧನೆಯೊಂದಿಗೆ 1991ರಲ್ಲಿ ಪ್ರಕಟವಾಯಿತು. ಇದರಲ್ಲಿ ಪ್ರಾಚ್ಯವಸ್ತು ವಿವರದ ದಾಖಲೆಗಳ ಮೂಲಕ ತಮ್ಮ ಸಂಶೋಧನೆಯನ್ನು ಪುಷ್ಟೀಕರಿಸುತ್ತಾರೆ. ಮತ್ತೆ ಅದೇ ಸಿದ್ದಾಂತಕ್ಕೆ ಬೆಂಬಲಿಸುವ ಅಧ್ಯಯನಗಳೊಂದಿಗೆ 2006ರಲ್ಲಿ ಭಾಷಾ ವೈಜ್ಞಾನಿಕ ಉದಾಹರಣೆಗಳಿಂದ ಬರೆಯುತ್ತಾರೆ. ಈ ಮಧ್ಯೆ ತನ್ನ ಕಡು ಟೀಕಾಕಾರರಿಗೆ ಉತ್ತರವೆಂಬಂತೆ ಬ್ಲಾಕ್ ಅತೀನ ಮತ್ತೆ ಬರೆಯುತ್ತಾಳೆ (Black Athena Writes Back ಎಂಬ ಪುಸ್ತಕವನ್ನು 2001 ರಲ್ಲಿ ಪ್ರಕಟಿಸುವುದರ ಮೂಲಕ ಟೀಕೆಗಳಿಗೆ ಉತ್ತರವನ್ನು ಕೊಡುತ್ತಾರೆ. ಈ ಮೂರೂ ಸಂಪುಟಗಳೂ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಚರ್ಚೆ-ಸೆಮಿನಾರುಗಳ ಸಂಗತಿಗಳಾಗಿವೆ. ಅದರಲ್ಲೂ ಮೊದಲ ಕೃತಿಯಂತೂ ಹೆಚ್ಚು ವಿವಾದವನ್ನೂ ಚರ್ಚೆಯನ್ನೂ ಹುಟ್ಟಿ ಹಾಕಿದೆ.
ಭಾಷಾ ಗೊಂದಲಗಳಿಗೆ ಮಾರ್ಟಿನ್ ಅವರ ಬದುಕಿನ ಉತ್ತರ
ನೆಲದ ಮಣ್ಣಿನ ನಿಜವಾದ ಮಣ್ಣಿನ ವಾಸನೆಯು ಅಲ್ಲಿನ ನಿವಾಸಿಗಳಾಡುವ ಮಾತಿನ ಭಾಷೆಯಲ್ಲಿದೆ ಎಂಬುದು ಮಾರ್ಟಿನ್ ಅವರ ದೃಢವಾದ ನಿಲುವು. ಅದಕ್ಕೆಂದೇ ತಾವು ಕಾಲಿಟ್ಟ ದೇಶಗಳಲ್ಲಿ ಅವರಾಡುವ ಭಾಷೆಗಳ ಕಲಿತು ಅಲ್ಲಿನ ಸಾಂಸ್ಕೃತಿಕ ಇತಿಹಾಸದ ಅಧ್ಯಯನವನ್ನು ಓರೆ ಹಚ್ಚಿ ನೋಡಿದರು. ಇಂಗ್ಲೆಂಡಿನಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದವರಾರೂ, ಮ್ಯಾಂಡರೀನ್ ಚೈನೀಸ್, ಫ್ರೆಂಚ್, ಗ್ರೀಕ್, ಹೀಬ್ರೂ, ವಿಯಟ್ನಾಮೀಸ್, ಜಪಾನೀಸ್, ಸ್ಪಾನೀಷ್, ಜರ್ಮನ್, ಚಿಚೆವಾ(ಒಂದು ಬಂಟೂ ಭಾಷೆ) ಜತೆಗೆ ಈಜಿಪ್ಟಿನ ವಿವಿಧ ಭಾಷೆಗಳನ್ನು ಕಲಿತು ಅಲ್ಲಿನ ಸಂಸ್ಕೃತಿಯ ಅರಿವಿನ ವಿದ್ವಾಂಸರಾಗಿ -ಅದೂ ಸಾಧ್ಯ ಎಂಬುದನ್ನು ಜಗತ್ತಿಗೇ ತೋರಿದವರು. ಭಾಷೆಯ ಕಲಿಕೆಯನ್ನು ಅಪೂರ್ವವಾಗಿ ಪ್ರೀತಿಸುತ್ತಿದ್ದರು. ಮಗುವೊಂದು ಕ್ಯಾಂಡಿ ಅಂಗಡಿಯಲ್ಲಿದ್ದ ಹಾಗೆ ತಾವು ಭಾಷಾ ಪ್ರಯೋಗಾಲದಲ್ಲಿದ್ದಂತೆ ಎಂದು ಹೋಲಿಸಿಕೊಳ್ಳುತ್ತಿದ್ದರು.
ಇವರ ಬದುಕೂ ಸಹಾ ವೈವಿಧ್ಯಮಯವೇ. ಅಟ್ಲಾಂಟಿಕ್ ನ ಅತ್ತ ಇತ್ತ ಓಡಾಡುತ್ತಾ ಬುದುಕು ಕಳೆದ ಮಹತ್ವದ ವಿದ್ವಾಂಸ, ಬ್ರಿಟನ್ನಿನ ಕೇಂಬ್ರಿಜ್ ನಲ್ಲೂ ಅತ್ತ ಅಮೆರಿಕೆದ ಕಾರ್ನಲ್ ನಲ್ಲೂ ಅಲೆಯುತ್ತಲೇ ಜಗತ್ತಿನ ಬಹುಭಾಗವನ್ನು ಸುತ್ತಿ ಸಂಶೋಧನೆಗೆ ಒಡ್ಡಿಕೊಂಡವರು. ಅಪಾರ ಸುತ್ತಾಟದ ಬದುಕನ್ನು ಅನುಭವಿಸಿದ ಮಾರ್ಟಿನ್ ಅವರು ತಮ್ಮ ನೆನಪುಗಳನ್ನು ಆಯಾ ಭೌಗೋಳಿಕ ಕಥಾನಕವಾಗಿ ತಮ್ಮ ಜೀವನದ ಕಥನವನ್ನು ಬರೆದುಕೊಂಡಿದ್ದಾರೆ. ಅದನ್ನು ಬದುಕಿನ ಭೂಗೋಳ (Geography of a Life) ಎಂದೇ ಕರೆದಿದ್ದಾರೆ. ಅಟ್ಲಾಂಟಿಕ್‌ನ ಎರಡೂ ಕಡೆಗಳಲ್ಲೂ ಓರ್ವ ಸಂಶೋಧಕರಾಗಿ ಜನ ಮನ್ನಣೆ ಪಡೆದ ವ್ಯಕ್ತಿ. ಜತೆಗೆ ಅಷ್ಟೇ ಟೀಕೆಗಳನ್ನೂ ಎದುರಿಸಿದವರು. ಇಡೀ ಪಾಶ್ಚತ್ಯ ಒಲವಿನ ಗ್ರೀಕ್ ಕೇಂದ್ರಿತ ಚಿಂತನೆಗಳನ್ನೇ ಈಜಿಪ್ಟಿನ ಬಳುವಳಿಗಳು ಎಂದ ಮೇಲೆ ಅಲ್ಲಿನ ಸ್ಥಳೀಯ ಚಿಂತನೆಗಳಿಗೆ ಉತ್ತರವನ್ನು ಕೊಡುವುದಾದರೂ ಹೇಗೆ?
ಮಾರ್ಟಿನ್ ಅವರ ಮೊದಲ ಒಲವು ಚೀನಾದ ಕಡೆಗಿತ್ತು. ಅವರ ಅಧ್ಯಯನಗಳು, ಅಲ್ಲಿನ ಸಮಾಜಿಕತೆಯ ಹಿನ್ನೆಲೆಯನ್ನೇ ಒಳಗೊಂಡಿದ್ದವು. ಆದರೆ 1970ರ ದಶಕದ ಮದ್ಯಂತರದಲ್ಲಿ ಅವರ ಆಸಕ್ತಿಯು ಮೆಡಿಟರೇನಿಯನ್ ಕಡೆಗೆ ಹೊರಳಿತು. ಅದರ ಫಲವಾಗಿಯೇ ಮೂಲಾವಸ್ಥೆಯ ಹಾಗೂ ವಿವಾದಾಸ್ಪದವಾದ ಅಧ್ಯಯನಗಳ ಬ್ಲಾಕ್ ಅತೀನ ವಿಕಾಸವಾಯಿತು. ಮೊದಲ ಸಂಪುಟದಲ್ಲಿ ಆಫ್ರಿಕಾ-ಏಶಿಯಾಗಳ ಮೂಲದಿಂದ ನಾಗರಿಕತೆಯ ವಿಕಾಸವನ್ನು ಅನಾವರಣಗೊಳಿಸಿದರು. ಗ್ರೀಕ್ ನಾಗರಿಕತೆಯು ಮೂಲ ವಿಕಾಸವಾಗಿರದೆ ಅದೊಂದು, ಈಜಿಪ್ಟಿನ್ನಿನ ಪ್ರಭಾವಗಳಿಂದ ಹುಟ್ಟಿದ ಉತ್ಪನ್ನವೆಂದೂ ಪ್ರತಿಪಾದಿಸಿದರು. ಅದರ ಬೆನ್ನಲ್ಲೇ ಬಂದ ಇನ್ನರಡು ಸಂಪುಟಗಳೂ ಅದೇ ನಿಲುವನ್ನೇ ಬೆಂಬಲಕ್ಕೆ ಭಾಷಾವೈಜ್ಞಾನಿಕ ಹಾಗೂ ಪ್ರಾಚ್ಯಶಾಸ್ತ್ರೀಯ ಹುಡುಕಾಟಗಳಿಂದ ಸಮರ್ಥಿಸಿದರು. ಗ್ರೀಕ್ ಮೂಲದ ಆಶಯಗಳನ್ನು ಬಿಂಬಿಸುವಂತೆ ಮಾಡುತ್ತಲೇ ಮುಂದೆ ಜನಾಂಗೀಯ ಮೇಲು ಕೀಳುತ್ನಕ್ಕೆ ಕಾರಣವಾಗುವಂತೆ ಬೌದ್ಧಿಕ ದರ್ಶನಗಳ ಬಳಕೆಯಾಯಿತೆಂದು ಪ್ರಬುದ್ದವಾಗಿ ವಾದಿಸಿದರು. ಪ್ರಸ್ತುತ ವಿಚಾರವು ಅದೆಷ್ಟು ಚರ್ಚೆಗಳನ್ನು ಹುಟ್ಟಿಹಾಕಿದವೆಂದರೆ ಅನೇಕ ಅಂತಾರಾಷ್ಟ್ರೀಯ ಸೆಮಿನಾರುಗಳ, ಭಾಷಣಗಳ ಹಾಗೂ ಚಲನ ಚಿತ್ರಗಳ ವಸ್ತುಗಳಾಗಿ ಮಂಥನಗೊಂಡವು. ಮಹಾದೃಢನಿಲುವಿನ ವ್ಯಕ್ತಿತ್ವಹೊಂದಿದ್ದ ಮಾರ್ಟಿನ್ ಅಪಾರ ಧೈರ್ಯವಂತರಾಗಿದ್ದರು ಜತೆಗೆ ಅಷ್ಟೇ ಹಟವಾದಿಯೂ ಆಗಿದ್ದರು. ಅದಕ್ಕೆಂದೇ ಅವರ ಬರಹಗಳು ಇಷ್ಟೊಂದು ಚರ್ಚೆಯನ್ನು ಎದುರಿಸಬೇಕಾಯಿತು. (ಇಂತಹಾ ಪ್ರಮುಖ ವಸ್ತು ನಿಷ್ಠ ಚರ್ಚೆಯ ಸುಮಾರು ಒಟ್ಟು 30 ನಿಮಿಷಗಳ ಎರಡು ಭಾಗಗಳನ್ನು ಈ ಎರಡು ಲಿಂಕ್ ಗಳಿಂದ ನೋಡಬಹುದು. https://www.youtube.com/watch?v=fCd66Tb0yF8 ಮತ್ತು https://www.youtube.com/watch?v=o0M6aiJ6I3E )
ಇಂತಹ ಅಪಾರ ವಿದ್ವತ್ ಪೂರ್ಣವಾಗಿದ್ದು ಜಗತ್ತಿನ ಜ್ಞಾನ ವಿಕಾಸ ಕುರಿತ ಚಿಂತನಾ ಕ್ರಮವನ್ನೇ ಬದಲು ಮಾಡಿನೋಡುವಂತೆ ಪ್ರೇರೇಪಿಸಿದ ಕೃತಿ “ಬ್ಲಾಕ್ ಅತೀನ” ಸ್ವಭಾವತ ಗಾಂಭಿರ್ಯ ಹಾಗು ಶಿಸ್ತಿನವರಾಗಿದ್ದರೂ ಅಪಾರ ಹಾಸ್ಯದ ಹಾಗೂ ಒಳಗೊಳ್ಳುವ ಸ್ನೇಹ ಪರತೆಯನ್ನೂ ಮೈಗೂಡಿಸಿಕೊಂಡಿದ್ದರು. ಕೆಲವೊಮ್ಮೆ ಅವರ ಮಕ್ಕಳಿಗೇ ಮುಜುಗರವಾಗುವಂತೆ ಹಾಡು ಸಂಗೀತ ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಗೀತವನ್ನು ಆಳವಾಗಿ ಅಭ್ಯಾಸಿಸಿದ್ದರು. ಸುಮಾರು ಲೆಕ್ಕವಿಲ್ಲದಷ್ಟು ಪದ್ಯಗಳನ್ನು ಹೇಳುತ್ತಿದ್ದರು. ಐರಿಶ್, ಸ್ಕಾಟಿಶ್, ಇಂಗ್ಲೀಶ್, ಅಲ್ಲದೆ ಅಮೆರಿಕಾದ ಹಲವಾರು ಜನಪದ ಹಾಡುಗಳನ್ನು ಹಾಡುತ್ತಿದ್ದರು. ಜನಪದ ಸಂಗೀತ ಅವರ ಆತ್ಯಂತಿಕ ಆಸಕ್ತಿ ಕ್ಷೇತ್ರಗಳಲ್ಲೊಂದು. ಹಾಡುವ ಅವರ ಕಾತುರತೆ ಎಷ್ಟೆಂದರೆ ಮಕ್ಕಳನ್ನೂ ನಾಚುವಂತೆ ಮಾಡುವಷ್ಟು. ಹೀಗಿರುವುದರ ಜತೆಗೆ ಆಧುನಿಕ ರಾಜಕೀಯದಲ್ಲಿ ಅಪರಮಿತ ಆಸಕ್ತಿಯನ್ನು ಹೊಂದಿದ್ದರು. ಸತಂತ್ರ ಆಲೋಚನೆಗಳ ಲಿಬರಲ್ ಒಳನೋಟಗಳ ಬಗೆಗಿನ ವಿಚಾರಗಳಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದರು.
ಮಾರ್ಟಿನ್ ಅವರು ಯುದ್ದ ವಿರೋಧಿ ನಿಲುವನ್ನೂ ಹೊಂದಿದ್ದ ಚಿಂತಕರಲ್ಲಿ ಒಬ್ಬರು. ಅಂತಹಾ ಚಳುವಳಿಗಳಲ್ಲಿಯೂ ಕೂಡ ಭಾಗವಹಿಸುತ್ತಿದ್ದರು. ಅವರ ಅನೇಕ ಸ್ನೇಹಿತರು ಇವರನ್ನು ಅತ್ಯಂತ ಮೇಧಾವಿ, ಚಾರ್ಮಿಂಗ್ ಲೈವ್ಲೀ, ಊಹಿಸಲಾಗದ ವ್ಯಕ್ತಿತ್ವವುಳ್ಳವರೆಂದೂ ಹೇಳುತ್ತಿದ್ದರು. ಎಲ್ಲದಕ್ಕೂ ಹೆಚ್ಚಾಗಿ ಮಾರ್ಟಿನ್ ಅವರು ಪ್ರೀತಿ ಪೂರ್ಣವಾದ ಮಾನವತಾವಾದಿಯಾಗಿದ್ದರು. ಮಾರ್ಟಿನ್ ಬರ್ನಾಲ್ ಕಳೆದ, 2013 ರ ಜೂನ್ 9 ರಂದು ಕೇಂಬಿಜ್ ನಲ್ಲಿ ಈ ಜಗತ್ತಿನ ಬದುಕನ್ನು ಮುಗಿಸಿದರು. ಅವರ ಕೃತಿ “ಬ್ಲಾಕ್ ಅತೀನ” ಮಹತ್ವ ಪೂರ್ಣವಾದ ಇತಿಹಾಸವನ್ನು ನಿರ್ಮಿಸಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಜೆಡಿ ಬರ್ನಲ್ ಅವರ ಪುತನ ಬಗ್ಗೆ ಮತ್ತು ಅವರ ಬೌದ್ಧಿಕ ಕೊಡುಗೆ ಲೇಖನ ಚೆನ್ನಾಗಿದೆ.
ಧನ್ಯವಾದ.
ಉತ್ತಮ ಕೃತಿಗಳ ಬಗೆಗೆ ಗಮನ ಸೆಳೆದಿರಿ. ಧನ್ಯವಾದಗಳು.