You are currently viewing ಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera   (ಭಾಗ -2)

ಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ತೆಂಗು ತನ್ನೊಳಗೂ ನೀರು ತುಂಬಿಕೊಂಡು, ಜಗತ್ತನ್ನೆಲ್ಲಾ ಆವರಿಸಿದ ಸಾಗರಗಳಾದ ಹಿಂದೂ ಸಾಗರ, ಅಟ್ಲಾಂಟಿಕ್‌ ಹಾಗೂ ಪೆಸಿಫಿಕ್‌ ಸಾಗರಗಳ ನೀರಿನ ಮೂಲಕವೇ ಮಾನವರ ಜೊತೆಗೂ ಹಾಗೂ ಅವರಿಲ್ಲದೆಯೂ ಬಹುಪಾಲು ಮಾನವ ವಸತಿಗಳನ್ನು ತಲುಪಿದೆ. ಮಾನವರ ಜೊತೆಗೆ ಅದೆಷ್ಟು ಒಡನಾಡಿಯಾಗಿದೆ ಎಂದರೆ ತನ್ನ ಅಸ್ಮಿತೆಯನ್ನೇ ಮಾನವ ಕುಲದ ಜೊತೆಗೆ ಸಮೀಕರಿಸಿಕೊಂಡಿದೆ. ಅದರ ಸಂಕುಲದ ಹೆಸರಾದ, “ಕೋಕಸ್”‌ ಪದದ ಅರ್ಥವೇ ಕೋತಿಯ ಮುಖ ಎಂದಿರುವುದಲ್ಲದೆ, ತನ್ನ ಮೂರು ಕಣ್ಣುಗಳ ನೋಟದಿಂದ ಮಾನವ ಮುಖವನ್ನೂ ಹೋಲುವಂತಿದೆ. ಬಹುಶಃ ಇದೇ ಕಾರಣದಿಂದ ಭಾರತೀಯ ಸಂಪ್ರದಾಯದಲ್ಲಿ ಹಿಂದೊಮ್ಮೆ ಜಾರಿಯಲ್ಲಿತ್ತು ಎಂದೇ ನಂಬಲಾದ ನರಬಲಿಯ ಬದಲಾಗಿ ತೆಂಗಿನಕಾಯಿಯನ್ನು ಒಡೆಯುವ ಸಂಪ್ರದಾಯ ಬಂದಿತೆಂದು ವಿವಿಧ ಹಿಂದೂ ಸಂಸ್ಕೃತಿಗಳು ನಂಬುತ್ತವೆ. ಇವೆಲ್ಲವೂ, ಅಂದರೆ ವೈದಿಕ, ಶೈವ, ಇತ್ಯಾದಿಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಪುರಾಣಗಳನ್ನು ಹೆಣೆದಿವೆ. ಹಾಗಾಗಿ ದೇವರಿಗೆ ತೆಂಗಿನ ಕಾಯಿಯ ಬಲಿ ಆರಂಭವಾಯಿತಂತೆ. ಅಚ್ಚರಿ ಎಂದರೆ ಈ ಗಟ್ಟಿಯಾದ ತೆಂಗಿನ ಕಾಯಿಯ ಸಹಜ ಜೊತೆಗಾರನಾಗಿರುವುದು ಮೃದುವಾಗಿದ್ದು, ಸುಲಭವಾಗಿ ಸುಲಿದು ಬಾಯಿಗಿಡಲು ಅನುಕೂಲವಾಗಿರುವ ಬಾಳೆಹಣ್ಣು. ಕಾಯಿಯ ಸಿಪ್ಪಯನ್ನು ಸುಲಿದು ಕೊಬ್ಬರಿಯನ್ನು ತಲುಪಲು ಸಾಹಸ ಮಾಡಬೇಕಾದರೆ, ಅದರ ಪಕ್ಕದಲ್ಲೇ ಇದ್ದು ನೈವೇದ್ಯಗೊಳ್ಳುವ ಬಾಳೆಯಿಂದ ಮಾತ್ರ ಸುಲಭವಾದ ವಿಧಾನ.

ತನ್ನೆ ನೆಲೆಯಿಂದ “ಭಾರತೀಯ” ಹಾಗೂ“ಪೆಸಿಫಿಕ್”‌ ಎಂಬೆರಡು ಬಗೆಗಳಲ್ಲಿ ಮೂಲವೆಂದು ಗುರುತಿಸಿಕೊಂಡಿರುವ ತೆಂಗು, ಹಾಗೇಯೇ ಹಿಂದೂ-ಅಟ್ಲಾಂಟಿಕ್‌ ಎಂಬೊಂದು ನೆಲೆಯಲ್ಲಿಯೂ ವಿಭಾಗಿಸಲ್ಪಡುತ್ತದೆ. ಹಾಗೇಯೆ ತಳಿಯಲ್ಲೂ ಉದ್ದ ತಳಿ, ಗಿಡ್ಡ ತಳಿ ಹಾಗೂ ಎರಡನ್ನೂ ಸಂಕರಗೊಂಡ ತಳಿ ಎಂಬುದಾಗಿಯೂ ಕೃಷಿಗೆ ಒಳಪಟ್ಟಿವೆ. ಮಾನವ ಸಂಕುಲದ ಜೊತೆಗಾರನಾಗಿ ತನಗೇನೂ ಮಾಡಿಕೊಳ್ಳದ ತೆಂಗು ಎನ್ನಲು ಮೂಲ ಕಾರಣವೆಂದರೆ, ತೆಂಗಿನ ಯಾವುದೇ ಭಾಗವನ್ನೂ ಮಾನವನು ಉಪಯೋಗಿಸದೆ ಬಿಟ್ಟಿಲ್ಲ. ನೆಲದೊಳಗಡಗಿದ ಕಾಣದ ಬೇರುಗಳೂ ಸಹಾ ಉಪಯೋಗಕ್ಕೆ ಒಳಗಾಗಿವೆ. ಅಷ್ಟರಮಟ್ಟಿಗೆ ಮಾನವನ ಉಪಯೋಗದಲ್ಲಿ ತನ್ನೆಲ್ಲವನ್ನೂ ತ್ಯಾಗ ಮಾಡಿರುವ ತೆಂಗು ಸಹಜವಾಗಿ “ಕಲ್ಪವೃಕ್ಷ”ವೇ ಆಗಿದೆ. ಉದ್ದ ತಳಿಗಳ ನೂರಾರು ವರ್ಷದ ಆಯಸ್ಸಿನಿಂದ ಹಾಗೂ ಗಿಡ್ಡ ತಳಿಗಳ ‌60-70 ವರ್ಷಗಳ ಸಹಜ ಬದುಕಿನಿಂದಾಗಿ ಸಂತತಿಗಳನ್ನು ಸಲಹುವ ಮರವಾಗಿ ತೆಂಗು ವಿಕಾಸಗೊಂಡು ಮಾನವರ ಒಡನಾಡಿಯಾಗಿದೆ.

ತನಗೇನೂ ಮಾಡಿಕೊಳ್ಳದ ಎಂಬ ರೂಪಕವೇ ಸಂಪೂರ್ಣವಾಗಿ ಯಾವುದೇ ಅಪೇಕ್ಷೆಯಿಲ್ಲದೆ ಮಾನವರ ಬಳಕೆಗೆ ತೆರೆದುಕೊಂಡ ಸಸ್ಯ ಎಂದು ಅರ್ಥ. ತೆಂಗು ತನ್ನ ಎಲ್ಲಾ ಭಾಗಗಳನ್ನೂ ಒಂದಲ್ಲೊಂದು ಉಪಯೋಗಗಳಿಗೆ ಒದಗಿಸಿ ಆ ಮಾತಿಗೊಂದು ಅರ್ಥವನ್ನು ಕೊಟ್ಟಿದೆ. ಇಡಿ ಸಸ್ಯವು ಇತರೇ ಅನೇಕ ಬೆಳೆಗಳಿಗೆ ನೆರಳಾಗಿ, ಜೊತೆಗೆ ತೋಟಗಳಲ್ಲಿ ಹಾಗೂ ಮನೆಯಂಗಳದ ಅಂದ-ಚಂದಕ್ಕೂ ಬಳಕೆಯಾಗಿದೆ. ಅದರ ಕಾಂಡವನ್ನೂ ಇತರೇ ಮರ-ಮುಟ್ಟುಗಳಂತೆಯೇ ಹಾಗೂ ಕೆಲವು ಕೆತ್ತನೆಗಳಲ್ಲೂ ಸಹಾ ಬಳಸಲಾಗುತ್ತದೆ. ಅದರ ಬೇರುಗಳಿಂದ ಕೆಲವು ಔಷಧಗಳ ತಯಾರಿಯಲ್ಲಿಯೂ, ಕಾಫಿ ಮಾದರಿಯ ಕಷಾಯದಲ್ಲಿಯೂ ಉಪಯೋಗವಾಗುತ್ತದೆ. ಹೆಡೆಮಟ್ಟೆ ಎಂದೂ ಕರೆಯುವ ಎಲೆಗಳ ಮುಖ್ಯ ಹಿಡಿ ಅಥವಾ ಮುಖ್ಯ ದೇಟು ಉರುವಲಿಗೆ ಅನುಕೂಲಕರ. ಎಲೆಗಳ ಗರಿಗಳು, ಮನೆಗಳ ತಾರಸಿಯನ್ನು ನಿರ್ಮಿಸಲು, ಮುಚ್ಚಳಿಕೆಯಾಗಿಸಲು ಹಾಗೂ ಹೆಣೆದು ಬೇಲಿಯನ್ನು ಮಾಡಲು ಬಳಸುತ್ತಾರೆ. ಹೂಗೊಂಚಲಿಂದ ವಿವಿಧ ಪಾನಿಯವನ್ನೂ, ಮತ್ತು ಅದನ್ನು ಬೇರಪಡಿಸಿ ಒಸರುವ ದ್ರವದಿಂದ ನೀರಾವನ್ನೂ ತಯಾರಿಸಲಾಗುತ್ತದೆ. ಹೂವು ಮತ್ತು ಪರಾಗವು ಆಹಾರದ ಮಿಶ್ರಣಗಳಲ್ಲಿ ಬಳಕೆಯಾಗುತ್ತದೆ. ಎಳೆಯ ಕಾಯಿಗಳನ್ನು ಎಳನೀರಿಗಾಗಿ ಬಳಸಿದರೆ, ಬಲಿತ ಕಾಯಿಯ ಕೊಬ್ಬರಿಯು ವೈವಿಧ್ಯಮಯ ಆಹಾರದ ಹಾಗೂ ತೈಲದ ತಯಾರಿಯಲ್ಲಿ ಬಳಕೆಯಾಗಿದೆ. ಕಾಯಿಯ ಸುತ್ತುವರಿದ ನಾರು, ಹಗ್ಗಗಳ ತಯಾರಿಯಲ್ಲಿ ಹಾಗೂ ಅದರಿಂದ ಉದುರಿದ ಪುಡಿಯು ಉತ್ತಮ ಗೊಬ್ಬರವಾಗಿಯೂ ಬಳಕೆಯಾಗುತ್ತದೆ.

ಕರಟದಿಂದ ಬಗೆ ಬಗೆಯ ಮನೆ ಬಳಕೆಯ ಚಮಚ, ಹಾಗೂ ಡಬ್ಬಿಗಳು ತಯಾರಾಗುತ್ತವೆ. ಒಳಗಿನ ಕೊಬ್ಬರಿಯು ತಾಜಾ ಆಗಿ ಬಳಕೆಯಾದರೆ, ತುರಿದ ಕೊಬ್ಬರಿಯಿಂದ “ಹಾಲು” ಉತ್ಪನ್ನವಾಗುತ್ತದೆ. ಒಣಗಿಸಿ ಕಾಂಡಿಮೆಂಟ್‌ ಆಗಿ ಬಳಸುವರು. ಸಂಪೂರ್ಣ ಒಣಕೊಬ್ಬರಿಯಿಂದ ತೆಂಗಿನೆಣ್ಣೆಯನ್ನು ಪಡೆದು ಉಳಿದದನ್ನು ದನಕರುಗಳ ಹಿಂಡಿಯನ್ನಾಗಿ ಬಳಸುತ್ತಾರೆ. ಹೀಗೆ ಪ್ರತಿಯೊಂದು ಭಾಗವೂ ಮಾನವ ಹಿತದಲ್ಲಿ ಬಳಕೆಯಾಗಿ ತನ್ನ ಬಳಕೆಯನ್ನೇ ಮಾನವ ಹಿತವೆಂದು ಮರವು ಭಾವಿಸಿದೆ ಎನ್ನಲಾಗುತ್ತದೆ. ಇದೇ ಕಾರಣದಿಂದಾಗಿ ತೆಂಗು ಮಾನವ ಕುಲಕ್ಕೆ ಬಹು ದೊಡ್ಡ ಬದುಕನ್ನು ಕಟ್ಟಿ ಕೊಡುವ ಸಹಜೀವಿಯಾಗಿದೆ. ಮನೆಗೆರಡು ಮರವಿದ್ದರೂ ಸಾಕು, ಕಾಯಿಗಳೇ ಜೀವನ ಕಟ್ಟಿಕೊಡುತ್ತವೆ ಎಂಬ ಮಾತುಗಳೂ ನಮ್ಮ ಹಲವು ಸಮುದಾಯಗಳಲ್ಲಿ ಕೇಳಿ ಬರುವುದುಂಟು. ಸಾಕಷ್ಟು ಕೆಲಸಗಳನ್ನೂ ಸೃಜಿಸಿ ಮಾನವ ಬದುಕನ್ನು ರೂಪಿಸುವಲ್ಲಿ ತೆಂಗಿನದು ಬಹು ದೊಡ್ಡ ಪಾತ್ರ. ಮರದ ಆರೈಕೆಯಿಂದ ಆರಂಭಗೊಂಡು, ಕಾಯಿ ಕೀಳುವ, ಎಳೆಯ ಕಾಯಿಗಳನ್ನೇ ಬಳಕೆಗೆ ಒದಗಿಸುವ, ಒಣಗಿಸುವ, ಸಿಪ್ಪೆಯನ್ನು ಸುಲಿಯುವ, ಕೊಬ್ಬರಿಯನ್ನು ಪಡೆಯುವ, ಎಣ್ಣೆಯನ್ನು ತೆಗೆಯುವ ಇತ್ಯಾದಿಗಳು ಹಲವು ದಶಕಗಳ ಕಾಲ ತೆಂಗು ಕಟ್ಟಿಕೊಡುತ್ತಲೇ ಮಾನವರ ಸಾಹಚರ್ಯದಲ್ಲಿದೆ.

ವಧೂ-ವರರ ಕೈಗಳನ್ನು ಹಿಡಿಸುವ ತೆಂಗು

ತೆಂಗು ಮಾನವ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ, ಜೈನ ಹಾಗೂ ಬೌದ್ಧರಲ್ಲಿ ಅನೇಕ ವಿಧಗಳಲ್ಲಿ ಬೆರೆತು ತನ್ನ ಪ್ರಾಮುಖ್ಯತೆಯನ್ನು ಮೆರೆದಿದೆ. ಹಿಂದೂಗಳ ಅನೇಕ ಶುಭ ಸಮಾರಂಭಗಳು ತೆಂಗಿನಕಾಯಿಯಿಲ್ಲದೆ ನಡೆಯುವುದೇ ಇಲ್ಲ. ಮದುವೆಯಲ್ಲಿ ಗಂಡು ಮತ್ತು ಹೆಣ್ಣನ್ನು ಒಂದುಗೂಡಿಸುವ ಪ್ರಮುಖ ಸಂಪ್ರದಾಯದ ಮೂಲ ಪಾತ್ರಧಾರಿಯಾಗಿ ತೆಂಗಿನಕಾಯಿಯು ಭಾಗವಹಿಸುತ್ತದೆ. ವಿವಾಹದ “ಕೈ ಹಿಡಿಯುವ” ಎಂಬ ರೂಪಕದ ಆಚರಣೆಯು ವಧೂ-ವರರ ಕೈಗಳಲ್ಲಿ ತೆಂಗನ್ನು ಹಿಡಿಸಿ ಜೋಡಿಸಿ ಹಿರಿಯರ, ಬಂಧು-ಭಾಂದವರ ಹಾರೈಕೆಗಳನ್ನೂ ಕೊಡುವುದೂ ಚಾಲ್ತಿಯಲ್ಲಿದೆ. ಯಾವುದೇ ದೇವಾಲಯದ ಪ್ರವೇಶವು ತೆಂಗಿನಕಾಯಿಗಳಿಲ್ಲದೆ ನೋಟವನ್ನು ಕಾಣಲಾಗದು. ಮದುವೆಯ ಸಮಾರಂಭವೂ ಸೇರಿದಂತೆ ಯಾವುದೇ ಶುಭಹಾರೈಕೆಯ ಕುರುಹಾಗಿ ತೆಂಗಿನಕಾಯಿಯನ್ನು ಕೊಡುವ ಮೂಲಕ ಹರಸಲಾಗುತ್ತದೆ. ಇದು ಭಾರತೀಯ ಸಂಪ್ರದಾಯದಲ್ಲಿ ಹೆಚ್ಚೂ ಕಡಿಮೆ ಮನೆ ಮನೆಯಲ್ಲೂ ಇರುವ ರೂಢಿಯಾಗಿದೆ. ಹಾಗಾಗಿ ತೆಂಗಿನ ಕಾಯಿಯು ಒಳಿತಿನ ಹಾರೈಕೆಯ ಬಹು ದೊಡ್ಡ ಕುರುಹಾಗಿ ವಿಕಾಸಗೊಂಡಿದೆ.

ತೆಂಗಿನ ಹೂವಿನ ಗೊಂಚಲನ್ನು ಹೊಂಬಾಳೆ ಎಂದು ಕರೆಯುತ್ತಾರೆ. ಹೂವಿನ ಹೊಂಬಾಳೆಯು ಅಲಂಕಾರಗಳಲ್ಲೂ ಹಾಗೂ ದೈವತ್ವದ ಪ್ರತಿರೂಪವಾಗಿಯೂ ನಾನಾ ಸಂಸ್ಕೃತಿಗಳಲ್ಲಿ ಕಾಣಬರುತ್ತದೆ. ಅದರಲ್ಲಿರುವ ಕಲಾತ್ಮಕ ಸೊಗಸನ್ನು ವಿವಿಧ ಸಂಸ್ಕೃತಿಗಳು ಬಹಳ ಆಸಕ್ತಿಯಿಂದ ಬಳಸಿವೆ. ಜೈನ, ಬೌದ್ಧ, ಹಿಂದೂ ಕೆಲವೊಮ್ಮೆ ನಮ್ಮ ದೇಶದೊಳಗಿನ ಕ್ರಿಶ್ಚಿಯನ್‌ ಧರ್ಮದವರೂ ಸಹಾ ಧಾರ್ಮಿಕ ಆಚರಣೆಗಳಲ್ಲಿ ಹಾಗೂ ಸೌಂದರ್ಯಕ್ಕಾಗಿ ಬಳಸುತ್ತವೆ. ತಿಳಿ ಹಳದಿ, ಕೆಲವೊಮ್ಮೆ ತಿಳಿಯಾದ ಹಸಿರು ಮಿಶ್ರತ ಹಳದಿಯ ಹೊಂಬಾಳೆಯು ಅತ್ಯಂತ ಆಕರ್ಷಕವಾದುದು. ತೆಂಗು ಬೆಳೆವ ಪ್ರದೇಶಗಳ ಬಹುಪಾಲು ಧಾರ್ಮಿಕ ಆಚರಣೆಗಳು ಹೊಂಬಾಳೆಯಿಲ್ಲದೆ ಇರಲಾರವು. ಹೊಂಬಾಳೆಯು ಆಕರ್ಷಕ ಮಾತ್ರವೇ ಅಲ್ಲ, ಉತ್ತಮ ಆಹಾರಾಂಶಗಳನ್ನೂ ಒಳಗೊಂಡಿದ್ದು, ಕೆಲವು ತಿನಿಸುಗಳನ್ನೂ ತಯಾರಿಸಲು ಬಳಸಲಾಗುತ್ತದೆ. ಹೊಂಬಾಳೆಯ ಪಾಯಸ ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ತೆಂಗು ಗಂಡು-ಹೆಣ್ಣು ಹೂವುಗಳನ್ನು ಒಂದೇ ಹೂಗೊಂಚಲಲ್ಲಿ ಆದರೆ ಬೇರೆ ಬೇರೆಯಾಗಿ ಬಿಡುತ್ತದೆ. ಕೆಲವೊಮ್ಮೆ ಕೆಲವು ಹೂವುಗಳು ಗಂಡು-ಹೆಣ್ಣುಗಳೆರಡ ಭಾಗವನ್ನೂ ಹೊಂದಿರುವುದುಂಟು. ಆದರೆ ಅಪರೂಪ. ಹೆಣ್ಣು ಹೂವುಗಳು ಗಾತ್ರದಲ್ಲಿ ದೊಡ್ಡವು, ಸಂಖ್ಯೆಯಲ್ಲಿ ಚಿಕ್ಕವು. ಆದರೆ ಗಂಡು ಹೂವುಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಸಂಖ್ಯೆಯಲ್ಲಿ ಹೆಚ್ಚಿರುತ್ತವೆ. ಹೆಚ್ಚಿನ ಉದ್ದನೆಯ ತಳಿಗಳೆಲ್ಲವೂ ಪರಕೀಯ ಪರಾಗಸ್ಪರ್ಶಕ್ಕೆ ಒಳಗಾಗಿ ಕಾಯಿಯನ್ನು ಬಿಟ್ಟರೆ, ಗಿಡ್ಡ ತಳಿಗಳು ಸ್ವಕೀಯ ಪರಾಗಸ್ಪರ್ಶಕ್ಕೆ ಒಳಗಾಗುತ್ತವೆ.

ತೆಂಗಿನಲ್ಲಿ ಅದರ ಉದ್ದನೆಯ ತಳಿಯ ವೈಭವವೇ ಮುಖ್ಯವಾದುದು. ಬಹುಪಾಲು ತೆಂಗಿನ ಕುಟುಂಬದ ಸಸ್ಯಗಳು ಒಂದು ರೀತಿಯಲ್ಲಿ ಉಷ್ಣವಲಯದಲ್ಲಿ ಸಂಕೇತವಾಗಿರುವ ಜೀವಿಗಳು. ತೆಂಗು ಹೆಚ್ಚು ಕಾಲ ಮಾನವರ ಒಡನಾಡಿಯಾಗಿರುವ ಮರ. ಸಂತತಿಗಳನ್ನು ಕಾಪಾಡುವ ಹೊಣೆ ಹೊತ್ತ ಜೀವಿಗಳು. ನೀಳ ನೋಟದಲ್ಲಿ ಕಾರಣವಾಗಿರುವ ತೆಂಗಿನ ಕಾಂಡವು ವಿಶಿಷ್ಟವಾದುದು. ಕಾಂಡದ ಕೋಶಗಳೂ ಸಹಾ ಇತರೇ ಸಸ್ಯಗಳ ಕಾಂಡಗಳಿಗೆ ಹೋಲಿಸಿದಲ್ಲಿ ಭಿನ್ನವಾದವು. ಅವುಗಳು ನಿರಂತರವಾಗಿ ಚಟುವಟಿಕೆಯಲ್ಲಿದ್ದು ಜೀವಮಾನವಿಡೀ ಕಾರ್ಯತತ್ಪರವಾಗಿದ್ದು ಬೆಳವಣಿಗೆಯ ನಿಯಂತ್ರಣವನ್ನು ನಿಭಾಯಿಸುತ್ತವೆ. ತೆಂಗಿನಲ್ಲಿ ಬೇರು ಹಾಗೂ ಕಾಂಡ ಎರಡೂ ಅತ್ಯಂತ ಚಟುವಟಿಕೆಯನ್ನು ಹಾಗೂ ವಿಚಿತ್ರವಾದ ನೋಟವನ್ನು ಕೊಡುವ ಭಾಗಗಳು.

ತಳಿಗಳಲ್ಲಿ ಉದ್ದನೆಯ ತಳಿಗಳು ಹೆಚ್ಚಿದ್ದರೂ ಸಹಾ, ಗಿಡ್ಡನೆಯ ತಳಿಗಳೂ ಸಹಾ ಜನಪ್ರಿಯವಾಗಿವೆ. ಆದರೆ ಜಾಗತಿಕವಾದ ಒಟ್ಟಾರೆಯ ಹರಹಿನಲ್ಲಿ ಗಿಡ್ಡ ತಳಿಗಳು ಕಡಿಮೆ ಕೃಷಿಗೆ ಒಳಗಾಗಿವೆ. ಎಳನೀರಿನ ಬಳಕೆಯಲ್ಲಿ ಗಿಡ್ಡ ತಳಿಗಳು ಜನಪ್ರಿಯವಾದರೆ ಕೊಬ್ಬರಿ ಮತ್ತು ತೈಲದ ಕಾರಣಕ್ಕೆ ಉದ್ದನೆಯ ತಳಿಗಳು ಹೆಸರುವಾಸಿ. ವೆಸ್ಟ್‌ ಕೋಸ್ಟ್‌ ಟಾಲ್‌. ಅತ್ಯಂತ ಜನಪ್ರಿಯವಾದ ಉದ್ದನೆಯ ತಳಿ. ಹಾಗೆಯೇ ಗಿಡ್ಡನೆಯ ಆರೆಂಜ್‌ ತಳಿಯೂ ಸಾಕಷ್ಟು ಬಳಕೆಯಲ್ಲಿದೆ. ಕೆಲವೊಂದು ಉದ್ದ-ಹಾಗೂ ಗಿಡ್ಡ ತಳಿಗಳ ಸಂಕರದವು ಇವೆ.

ಆದರೂ ತೆಂಗು ಎಂದರೆ ಉದ್ದನೆಯ ಮರವೆಂದೇ ಹೆಸರುವಾಸಿ. ಹಾಗಾಗಿ ಅದರ ಕಾಯಿಗಳನ್ನು ಮರವೇರಿ ಕೀಳುವುದೂ ಒಂದು ಜಾಣತನದ ಕಲೆಯಾಗಿದೆ. ಕೆಲವು ಮರಗಳ ಎತ್ತರ ಹಾಗೂ ಅವುಗಳಿರುವ ಪ್ರದೇಶಗಳು ಅತ್ಯಂತ ಅಪಾಯಕಾರಿಯಾಗಿರುತ್ತವೆ. ಪೆಸಿಫಿಕ್‌ ವಲಯಗಳಾದ ಇಂಡೋನೇಶಿಯಾ, ಮಲೇಷಿಯಾಗಳಲ್ಲಿ ಹಂದಿ ಬಾಲದ ಕೋತಿ (Pig Tailed Macaque)ಎಂದು ಗುರುತಿಸಲಾಗುವ ಕೋತಿಗಳನ್ನು ತರಬೇತುಗೊಳಿಸಲಾಗುತ್ತದೆ. ಮಕಾಕ ನೆಮೆಸ್ಟ್ರೈನಾ(Macaca nemestrina) ಎಂದು ವೈಜ್ಞಾನಿಕ ಹೆಸರಿಸಲಾಗಿರುವ ಆ ಭಾಗದ ಕೊತಿಗಳಿಗೆ ಕಾಯಿ ಕೀಳುವ ತರಬೇತಿಗೆಂದೇ ಶಾಲೆಗಳನ್ನೇ ನಡೆಸಲಾಗುತ್ತಿದೆ. ಅಲ್ಲಿ ತರಬೇತುಗೊಂಡ ಕೋತಿಗಳು ತೆಂಗಿನ ಕೊಯಿಲಿನಲ್ಲಿ ಸಹಾಯ ಮಾಡುತ್ತವೆ. ವಾನರವೂ ಸಹಾ ಮಾನವ ಸಂಬಂಧಿಯೇ ಅಲ್ಲವೆ? ತೆಂಗಿನ ಕೊಯಿಲಿಗೆ ಸುಲಭವಾಗುವ ಈ ನಂಟಿಗೆ “ಮಾನವ ಕುಲ”ದ ಸಾಹಚರ್ಯ ಅನಿವಾರ್ಯವಾಗಿದೆ.

ತರಬೇತಿಯಲ್ಲಿ ಕೋತಿ
ತರಬೇತಿಯ ನಂತರ ಕೆಲಸಗಳಲ್ಲಿ ಕೋತಿ

ಈ ಸಂಕುಲದ ಕೋತಿಗಳನ್ನು ವನ್ಯ ಮೂಲದಿಂದ ತೀರಾ ಎಳೆಯ ವಯಸ್ಸಿನಲ್ಲಿಯೇ ಹಿಡಿದು ತರಲಾಗುತ್ತದೆ. ಅವುಗಳ ವಯಸ್ಸು 1 ಅಥವಾ 2 ವರ್ಷವಿದ್ದಾಗ ಹಿಡಿದು ತಂದು ಮೊದಲು ಕಾಯಿಗಳನ್ನು ತಿರುಗಿಸಿ ಬೀಳಿಸುವುದನ್ನು ಕಲಿಸಲಾಗುತ್ತದೆ. ನಂತರದ ಹಂತದಲ್ಲಿ ತೆಂಗಿನ ಮರವನ್ನು ಕಾಯಿ ಕೀಳಲೆಂದೇ ಹತ್ತಲು ಕಲಿಸಲಾಗುತ್ತದೆ. ಕೊನೆಯ ಹಂತದಲ್ಲಿ ಬಲಿತ ಕಾಯಿಗಳ ಆಯ್ಕೆಯನ್ನು ಕಲಿಸಲಾಗುತ್ತದೆ. ಹೀಗೆ ತರಬೇತಿಗೊಂಡ ಕೋತಿಯೊಂದು ದಿನಕ್ಕೆ 800ರಿಂದ 1000 ಕಾಯಿಗಳನ್ನು ಕೀಳುವ ಕೆಲಸವನ್ನು ಮಾಡುತ್ತದೆ. ಅಷ್ಟೇ ಅಲ್ಲದೆ, ಥೈಲಾಂಡ್‌ನಲ್ಲಿ ಅವುಗಳು ಕಾಯಿಗಳನ್ನು ಆರಿಸಿ, ಗುಂಪು ಮಾಡಿ, ಸಾಗಿಸುವ ಕೆಲಸದಲ್ಲೂ ಕೂಡ ತರಬೇತಿಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಗಂಡು ಮಂಗಗಳನ್ನು ಹಿಡಿದು ತಂದು ತರಬೇತಿ ಕೊಡಲಾಗುತ್ತದೆ. ಎರಡರಿಂದ ಮೂರನೆ ವರ್ಷದ ಮಂಗಗಳು ಕಲಿಯಲು ಅತ್ಯಂತ ಜಾಣತನ ತೋರುತ್ತವೆಯಂತೆ. ಕಲಿತ ಮೇಲೆ ಜೀವನವಿಡೀ ತೆಂಗಿನ ತೋಟದ ರೈತನ ಜೊತೆಯ ಒಡನಾಟ.

“ಇಂಗು-ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ”. ಎಂಬ ತಮಾಷೆಯ ಮಾತಿದೆ. ತೆಂಗಿನ ಬಳಕೆಯಿಂದಾಗುವ ರುಚಿಕರವಾದ ಅಡುಗೆಯನ್ನು ಹೊಗಳಲೆಂದೇ ಈ ಮಾತು ಸೃಷ್ಟಿಯಾಗಿರಬಹುದು. ತೆಂಗಿನ ಅಡುಗೆಗಳ ವಿಚಾರಕ್ಕೆ ಕೇರಳ ರಾಜ್ಯಕ್ಕೆ ಸಾಟಿಯಾದ ನೆಲವೊಂದಿಲ್ಲ. ಅಂದ ಹಾಗೆ “ಕೇರಳ” ಎಂಬ ಪದದ ಅರ್ಥವೇ ಕೇರಾ (Kera – ಎಂದರೆ ತೆಂಗಿನ ಮರ ಹಾಗೂ ಆಲಂ (Alam) .. ಎಂದರೆ ನೆಲ ಎಂದರ್ಥ. ತೆಂಗಿನ ನಾಡು ಎನ್ನುವ ಸೂಕ್ತವಾದ ಅರ್ಥದ ಹೆಸರಿನ ರಾಜ್ಯದಂತೆ ತೆಂಗಿನ ಬಳಕೆಯನ್ನು ಸಮೀಕರಿಸುವ ನೆಲ ಮತ್ತೊಂದಿಲ್ಲ. ಸಾವಿರಾರು ವರ್ಷಗಳಿಂದ ತೆಂಗಿನ ಎಣ್ಣೆಯನ್ನೇ ಅಡಗೆಗೂ ಬಳಸುತ್ತಿರುವ ನಾಡು ಅದು. ಜಗತ್ತಿನ ಅಡುಗೆಯ ಎಣ್ಣೆಯ ಬಳಕೆಯಲ್ಲಿ ತೆಂಗಿನದು 9ನೆಯ ಸ್ಥಾನ. ಪ್ರತಿಶತ 2ರಷ್ಟು ತೆಂಗಿನ ಎಣ್ಣೆಯ ಬಳಕೆಯು ಮಾನವ ಸಮುದಾಯದಲ್ಲಿದೆ. ತೆಂಗಿನ ಎಣ್ಣೆಯ ಬಳಕೆಯ ಕುರಿತ ಆರೋಗ್ಯದ ವಿವಿಧ ಚರ್ಚೆಗಳನ್ನೂ ಮೀರಿ, ಅದರ ಬಳಕೆಯು ನಿರಂತರವಾಗಿದೆ. ಹಿಂದಿನಿಂದಲೂ ತೆಂಗಿನ ಎಣ್ಣೆಯ ಕುರಿತು ವೈಜ್ಞಾನಿಕ ಅನುಶೋಧಗಳಾಗಿವೆ. ಕೊಬ್ಬರಿ ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಪರಿಮಾಣ ಪ್ರತಿಶತ 82ರಷ್ಟು ಇದ್ದು, ತೈಲವನ್ನೇನೂ ಸಂಸ್ಕರಿಸಿರುವುದಿಲ್ಲ (Unrefined). ಅದನ್ನು ತಾಜಾ ಆಗಿಯೇ ಬಳಸುವುದರಿಂದ ಹಲವಾರು ಲಾಭಗಳಿವೆ ಎಂಬ ತೀರ್ಮಾನಕ್ಕೂ ಬರಲಾಗಿದೆ. ಅದರಲ್ಲೂ ತೈಲದಲ್ಲಿರುವ ಗಣನೀಯ ಪ್ರಮಾಣದ ಲಾರಿಕ್‌ ಆಮ್ಲ (Lauric acid)ವು ಲಾಭದಾಯಕ ಅಂಶಗಳನ್ನು ಬಳಕೆಯಲ್ಲಿ ಒದಗಿಸುತ್ತದೆ ಎಂದೂ ವಿವರಿಸಿದ ಅಧ್ಯಯನಗಳಿವೆ. ಈ ಲಾರಿಕ್‌ ಆಮ್ಲಕ್ಕೆ ಕೆಲವೊಂದು ವೈರಸ್ಸುಗಳ, ಬ್ಯಾಕ್ಟಿರಿಯಾ ಹಾಗೂ ಫಂಗೈಗಳ ಪ್ರತಿರೋಧಿಸುವ ಗುಣವೂ ಇರುವುದನ್ನು ಅರಿಯಲಾಗಿದೆ. ಮಿಚಿಗನ್‌ ವಿಶ್ವವಿದ್ಯಾಲಯದ ಅಧ್ಯಯನ ವರದಿಗಳು ಲಾರಿಕ್‌ ಆಮ್ಲದ ಉಪಕಾರಿಗುಣಗಳನ್ನು ಕೊಂಡಾಡಿ ತೆಂಗಿನ ಬಳಕೆಯನ್ನು ಪ್ರೋತ್ಸಾಹಿಸುವ ಬಗ್ಗೆ ತಿಳಿಸುತ್ತವೆ. ಅಷ್ಟೇ ಅಲ್ಲದೆ ತೆಂಗಿನ ಎಣ್ಣೆಯನ್ನು ಒಂದು ಬಗೆಯ ತಾಳೆಯ ಎಣ್ಣೆಯ ಜೊತೆಗೆ ಮಿಶ್ರಣವಾಗಿಸಿ ಲಂಡನ್‌ನಿಂದ ಅಮಸ್ಟರ್‌ಡಾಂವರೆಗೆ ಬೋಯಿಂಗ್‌ ವಿಮಾನದ ಉರುವಲು ತೈಲವಾಗಿಯೂ ಬಳಸಲಾಗಿದ್ದು ಅದರ ವಿಶೇಷತೆಗೆ ಹಿಡಿದ ಕನ್ನಡಿಯಾಗಿದೆ.

ತೆಂಗು ಬೆಳೆಯುವ ರಾಜ್ಯಗಳು

ಜನಪ್ರಿಯ ಕೃಷಿಯ ಹಿತದಲ್ಲಿ ಕೇರಳವನ್ನೂ ಜೊತೆಗೆ ತಮಿಳುನಾಡು, ಕರ್ನಾಟಕ ಆಂಧ್ರಪ್ರದೇಶದ ದಕ್ಷಿಣ ಪ್ರಾಂತ್ಯವು ಭಾರತೀಯ ತೆಂಗಿನ ನೆಲೆಯಾಗಿದೆ. ಒಡಿಸ್ಸಾ, ಬಂಗಾಳ, ಅಸ್ಸಾಂಗೂ ಚಾಚಿ ಸಾಕಷ್ಟು ವಿಸ್ತರಣೆಯನ್ನೂ ಮಾಡಿಕೊಂಡಿದೆ. ಬಳಕೆಯಲ್ಲಿ ತೆಂಗು ದಕ್ಷಿಣವನ್ನೂ ದಾಟಿ ದೇಶಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೊಬ್ಬರಿಯ ಚಟ್ನಿ, ಕಾಯಿ ತುರಿಯ ಬಳಕೆ, ಕೊಬ್ಬರಿಯ ಹಾಲು ಮುಂತಾದವು ಸಿಹಿ ಪದಾರ್ಥಗಳನ್ನೇ ಅಲ್ಲದೆ ಖಾರದ ಖಾದ್ಯಗಳನ್ನೂ ರುಚಿಯಾಗಿಸಿವೆ. ಮಾಂಸಾಹಾರಿ ಅಡುಗೆಗಳೂ ಕೊಬ್ಬರಿಯ ಬಳಕೆಯನ್ನು ಹಿತವಾಗಿಸಿವೆ. ಆದ್ದರಿಂದ ತೆಂಗಿನ ಆಹಾರದ ಬಳಕೆಯು ಹಿತವು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ನಮ್ಮದೇ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನ ಎಳನೀರಿನ ಬಗ್ಗೆ ಹೇಳದೆ ಇದ್ದರೆ, ತೆಂಗಿನ ಸಂಗತಿಗಳಿಗೆ ಶೋಭೆಯೇ ಇರುವುದಿಲ್ಲ. ಕಳೆದ 2012ರಲ್ಲಿ ಮದ್ದೂರನ್ನು ಭಾರತದ ಎಳನೀರು ತೆಂಗಿನ ರಾಜಧಾನಿ ಎಂದು ಘೋಷಿಸಲಾಗಿದೆ. ಜಗತ್ತಿನಲ್ಲಿ ಖ್ಯಾತವಾದ ಎಳನೀರು ಮಾರುಕಟ್ಟೆಯಲ್ಲಿ ನಮ್ಮ ಮದ್ದೂರು ಕೂಡ ಒಂದು. ಇಲ್ಲಿ ಪ್ರತಿದಿನ 40-45 ಲಕ್ಷ ಎಳನೀರಿನ ವಹಿವಾಟು ನಡೆಯುತ್ತದೆ. ಎಳನೀರು ಅತ್ಯಂತ ಸುರಕ್ಷಿತವಾದ ಹಾಗೂ ನಿಸರ್ಗದತ್ತವಾದ ಪಾನೀಯ ಎಂದೇ ಹೆಸರಾಗಿದ್ದು, ಕಾಯಿಲೆಯಿಂದ ನರಳುವವರಿಗೂ ನೇರವಾಗಿ ಬಳಸಬಹುದಾದಷ್ಟು! ತೆಂಗಿನ ಎಳನೀರು ಕಾಯಿಯ ಒಳಗಿನ, ಇನ್ನೂ ಬಲಿಯ ಬೇಕಿರುವ ಭಾಗ. ಎಳನೀರು ಪ್ರತೀ ನೂರು ಮಿ.ಮೀಗೆ ಸುಮಾರು 19 ಕಿಲೋಕ್ಯಾಲೊರಿ ಶಕ್ತಿಯ ಜೊತೆಗೆ, ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಪೊಟ್ಯಾಸಿಯಂ, ಸತು, ಸೋಡಿಯಂ ಮುಂತಾದ ಖನಿಜಾಂಶಗಳನ್ನು ಒದಗಿಸುತ್ತದೆ. ತೆಂಗಿನ ವಿನೆಗಾರ್‌ ಅನ್ನೂ ತಯಾರಿಸಲೂ ಕೂಡ ಇದು ಉಪಯುಕ್ತ ಜೊತೆಗೆ ಕೆಲವೊಂದು ವಿಶೇಷ ಅಡುಗೆಗಳಲ್ಲಿಯೂ ಇದು ಬಳಕೆಯಾಗುತ್ತದೆ. ಯಾವುದೇ ಸೋಂಕು ಇಲ್ಲದ ಅತ್ಯಂತ ಮುಖ್ಯವಾದ ನೈಸರ್ಗಿಕ ಪಾನೀಯವಾಗಿದೆ.

ಮದ್ದೂರಿನ ಸುತ್ತ ಮುತ್ತಲಿನ ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಹಾಸನ ಜಿಲ್ಲೆಗಳಿಂದ ಎಳೆಯ ಕಾಯಿಗಳು ಇಲ್ಲಿಗೆ ಮಾರಾಟಕ್ಕೆ ಬರುತ್ತವೆ. ಇಲ್ಲಿನ ಒಟ್ಟಾರೆ ವಹಿವಾಟಿನ ಪ್ರತಿಶತ 60ರಷ್ಟು ಹೊರ ರಾಜ್ಯಗಳಿಗೆ ನೂರಾರು ಲಾರಿಗಳಲ್ಲಿ ಪ್ರತೀ ದಿನವೂ ಸಾಗಣೆಯಾಗುತ್ತವೆ. ಉಳಿದಂತೆ ರಾಜ್ಯಾದ್ಯಂತ ಇತರೇ ಜಿಲ್ಲೆಗಳಿಗೂ ಸಾಗುತ್ತವೆ. ಹಾಗಾಗಿ ದೂರದ ರಾಯಚೂರು ಅಥವಾ ಗುಲಬರ್ಗ ಜಿಲ್ಲೆಯಲ್ಲೂ ಎಳನೀರು ಮಾರುವವರು ಮದ್ದೂರಿನ ಕಾಯಿ ಎಂದು ಹೇಳುವುದನ್ನು ಕೇಳಿರಬಹುದು. ಹಾಗಾಗಿ ಕೊಲ್ಕತ್ತಾ, ದೆಹಲಿ, ಮುಂಬೈಗಳಲ್ಲೂ ಮದ್ದೂರಿನ ಎಳನೀರು ಪ್ರಸಿದ್ಧವಾಗಿದೆ.

ಸಸ್ಯಯಾನದ ಗೆಳೆಯ-ಗೆಳತಿಯರು ಸಸ್ಯಗಳ ರೋಗ-ಕೀಟ ನಿರ್ವಹಣೆ ಇತ್ಯಾದಿಗಳ ಬಗೆಗೆ ಆಗಾಗ್ಗೆ ಕೇಳುವುದುಂಟು. ತೆಂಗೂ ಸಹಾ ಕಳೆದ ಕೆಲವು ದಶಕಗಳಿಂದ ನುಸಿ ಪೀಡೆಯಲ್ಲಿ, ಜೀರುಂಡೆಯ ಕಾಟದಿಂದ ನರಳಿದೆ. ನರಳುತ್ತಲೇ ಇದೆ. ಇದಕ್ಕೆ ರಸಾಯನಿಕ ಔಷಧೋಪಚಾರಗಳ ಬಳಕೆಯ ಬಗ್ಗೆ ಅಥವಾ ರಸಾಯನಿಕಗಳಲ್ಲದೆಯ ನಿರ್ವಹಣೆಗಳ ಬಗೆಗೆ ಪರ-ವಿರೋಧದ ಚರ್ಚೆಗಳನ್ನು ಅಕ್ಕ-ಪಕ್ಕದ ಪ್ರಯೋಗಾಲಯಗಳಲ್ಲಿ ನಡೆಸುತ್ತಲೇ ಇರಲು ನಮ್ಮ ರಾಜ್ಯದಲ್ಲೇ ಒಂದಲ್ಲ ಐದು ವಿಶ್ವವಿದ್ಯಾಲಯಗಳಿವೆ. ತಮಿಳುನಾಡಿನ ರೈತ ಸಮುದಾಯದಲ್ಲಿ ಗಾದೆಯ ಮಾತೊಂದಿದೆ. “ಒರು ಕುರುಂಬಾಯೈ ಕೊಲ್ಲರದು, ಒಂಪತು ತೆನೈ ನಾಟ್ಟಿತಿರ್ಕುಕಮಂ” ಅಂದರೆ ಅರ್ಥ “ತೆಂಗಿನ ಹೂವಿಗೆ ಕಾಡುವ ಒಂದು ಕೀಟವನ್ನು ಕೊಲ್ಲುವುದು, ಒಂಭತ್ತು ತೆಂಗಿನ ಸಸಿಯನ್ನು ನಾಟಿ ಮಾಡುವುದಕ್ಕೆ ಸಮ”. ಹಾಗಾಗಿ ಈ ಜನಪದ ಮಾತು ಕೀಟ ನಿರ್ವಹಣೆಯ ಕಷ್ಟವನ್ನು ತಿಳಿಸಬಹುದೇನೋ. ಹಾಗಾಗಿ ಯಾವುದೇ ಗಿಡ-ಮರಗಳಿಗೆ ಯಾವಾಗ ನೀರು ಹಾಕಬೇಕು, ಯಾವಾಗ ಗೊಬ್ಬರ ಹಾಕಬೇಕು, ಕಳೆ ಕೀಳಬೇಕಾ-ಬೇಡವಾ, ಔಷಧಿ ಯಾವಾಗ ಏನು ಸಿಂಪಡಿಸಬೇಕು ಎನ್ನುವುದನ್ನು ಹೇಳಲು ರಾಜ್ಯದಲ್ಲಿ “ಒಂದಲ್ಲ ಐದು”ಕೃಷಿ-ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಗಳಿವೆ. ಅವೆಲ್ಲವುಗಳ ಜೊತೆಗೆ ತೆಂಗಿನ ಸಂದರ್ಭದಲ್ಲಂತೂ ರೈತ ಚಳುವಳಿಯ ಭಾಗವಾಗಿದ್ದ, “ನೀರಾ ಚಳುವಳಿ” ಕೂಡ ಅದರ ಸುತ್ತ-ಮುತ್ತ ಸಾಕಷ್ಟು ಚರ್ಚೆ ಹಾಗೂ ಸಾಧ್ಯತೆಗಳನ್ನೂ ನಿರ್ಮಿಸಿದೆ. ಅದಾಗಿ ಇವುಗಳೆಲ್ಲವೂ ತೀರಾ ಉದ್ದವಾದವು. ಚರ್ಚೆಗಳಿಗೆ ಸಮಯವನ್ನು ಬೇಡುವಂತಹವೂ ಕೂಡ. ಹಾಗಾಗಿ ಅಂತಹಾ ಸಹಜವಾದ ನಿರ್ವಹಣಾ ಸಂಗತಿಗಳನ್ನು ಹೆಚ್ಚು ಉದಾಹರಿಸಲಾಗದಕ್ಕೆ ಕ್ಷಮೆ ಇರಲಿ.

ತೆಂಗಿನ ಕಥಾನಕವನ್ನು ಆರಂಭಿಸುವುದು ಎಷ್ಟು ಕಷ್ಟವೋ ಮುಗಿಸುವುದೂ ಅಷ್ಟೇ. ಹೀಗೆ-ಹಾಗೆ ಎಂದೆಲ್ಲಾ ಹೇಳಿ ಆರಂಭಿಸಿ-ಮುಗಿಸಿದರೂ ಮಾನವ ಕುಲದ ಉದ್ದಕ್ಕೂ ಜೀವನ ಕಟ್ಟಿಕೊಂಡು ವಿಕಾಸಗೊಂಡಿರುವ ಅತ್ಯದ್ಭುತ ಸಸ್ಯದ ಬಗ್ಗೆ ಆದಿ-ಅಂತ್ಯಗಳನ್ನು ಪುಟ್ಟ ಪ್ರಬಂಧದಲ್ಲಿ ಹೇಳಲು ಖಂಡಿತಾ ಸಾಧ್ಯವಿಲ್ಲ. ಅದೆಷ್ಟು ಅಗಾಧ ಹಾಗೂ ಉದ್ದವಾದುದೆಂದರೆ ಮಾನವ ನೆಲೆಗಳ ಇತಿಹಾಸವನ್ನೂ ತೆಂಗು ತನ್ನೊಳಗೆ ಅಡಸಿಕೊಂಡಿದೆ. ಸಾಲದಕ್ಕೆ ಮಾನವ ಕುಲಕ್ಕೆ ಅತ್ಯಂತ ಉಪಕಾರಿಯಾಗಿ, ಅದಕ್ಕೆಂದೆ ತನ್ನೊಳಗಿನ ಅಗತ್ಯಗಳನ್ನು ಹೊಂದಿಸಿಕೊಂಡು ನಮ್ಮ-ನಿಮ್ಮೆಲ್ಲರ ಒಡನಾಡಿಯಾಗಿದೆ. ಅತೀ ಹೆಚ್ಚು ಮಳೆ ಬೀಳುವ ಅಂದರೆ 2500 ಮಿ.ಮೀ ನೆಲೆಗಳಿಂದ ಅತ್ಯಂತ ಕಡಿಮೆ ಮಳೆ ಬೀಳುವ ಕೇವಲ 250 ಮಿ.ಮೀ ನೆಲಗಳಲ್ಲೂ ತೆಂಗು ಆವಾಸವನ್ನು ಮಾಡಿಕೊಂಡಿದೆ. ನೆಲ ಉಪ್ಪಿನಿಂದ ಕೂಡಿದ್ದರೂ ಸರಿಯೇ…ಮರಳು ನೆಲವಾದರೂ ಅಡ್ಡಿಯಿಲ್ಲ, ಒಂದಷ್ಟು ಒಣ ವಾತಾವರಣವಿದ್ದು ತೇವಾಂಶವಿದ್ದರೆ ಸಾಕು. ಉಷ್ಣತೆಯೂ ಅಷ್ಟೇ 38°C ಯಾದರೂ ಸರಿಯೇ, 4 ರಿಂದ 12°C ಇದ್ದರೂ ಸರಿಯೇ ಒಗ್ಗಿಕೊಂಡು ಕಾಯಿ ಬಿಡುತ್ತದೆ. ಆದರೆ ತೀರಾ ಶೀತವಾದರೆ ತಡೆದುಕೊಳ್ಳಲಾರದು ಅಷ್ಟೇ! ಒಂದಷ್ಟು ಮಳೆ ಹಾಗೂ ವಾತಾವರಣದ ಉಷ್ಣತೆಯು ಮಾತ್ರವೇ ಅದರ ಗರಿಗಳ ಚಾವಣೆಯ ಹರಹನ್ನು ಮತ್ತು ಆ ಮೂಲಕ ಒಟ್ಟು ಕಾಯಿಗಳನ್ನು ಬಿಡುವ ಬಗೆಯನ್ನು ನಿರ್ಧರಿಸುತ್ತದೆ. ಯಾವುದೇ ವಿಶೇಷ ನಿರ್ವಹಣೆಯನ್ನೇ ಬಯಸದೆ ದಶಕಗಳ ಕಾಲ ಕಾಯಿ ಬಿಡುವುದನ್ನೇ ಕಾಯಕ ಮಾಡಿಕೊಂಡಿರುಲು ತೆಂಗು ಬೇಡುವುದು ಇಷ್ಟೇ! ವರ್ಷ ಪೂರ್ತಿ ದಿನಗಳ ಒಟ್ಟು ಸರಾಸರಿ ತಾಪಮಾನ 10-12°C. ಸುಮಾರು 800-1000 ಮಿ.ಮೀನಷ್ಟು ಮಳೆ. ತೆರೆದುಕೊಂಡ ಗರಿಗಳಿಗೆ ಧಾರಾಳವಾದ ಬಿಸಿಲು. ಬೇರೇನೂ ಬಯಸದೆ, ನಮ್ಮ ಬಯಕೆಗಳನ್ನು ಮಾತ್ರ ತೀರಿಸುವುದರಿಂದಲೇ ಅದು ನಮಗೆ “ಕಲ್ಪವೃಕ್ಷ”ವಾಗಿದೆ

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has One Comment

  1. Aswathanarayana

    The writeup is just wonderful. The glory of the narrative transcends genetic details and brings out how coconut has been historically central to many religious faiths, particularly in the vicissitudes of Hindu ways of life. Congratulations sir.

Leave a Reply